೧೯೪೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಾಸ್ತಿ ವೆಂಕಟೇಶ ಯ್ಯಂಗಾರರು ಕನ್ನಡ ನಿಘಂಟು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮಾರ್ಗವನ್ನು ದಿವಂಗತ ಎ.ಆರ್. ಕೃಷ್ಣಶಾಸ್ತ್ರಿಗಳಲ್ಲಿ ಪ್ರಸ್ತಾಪಿಸಿ ಅವರನ್ನು ಅಧ್ಯಕ್ಷರಾಗಿರುವಂತೆ ಒತ್ತಾಯದಿಂದ ಒಪ್ಪಿಸಿ ಸಮಿತಿಯ ಸದಸ್ಯರನ್ನು ಗುರುಗಳೇ ನೇಮಿಸಿಕೊಳ್ಳುವಂತೆ ಹೇಳಿದರು. ದೊಡ್ಡ ಸಮಿತಿಯಿಂದ ಕೆಲಸವಾಗುವುದಿಲ್ಲ, ಸದ್ಯಕ್ಕೆ ಸಣ್ಣ ಸಮಿತಿಯೇ ಸಾಕು ಎಂಬ ದೃಷ್ಟಿಯಿಂದ ಅವರು ತಮ್ಮ ಶಿಷ್ಯರಲ್ಲಿ ಮೂವರನ್ನು ಆಯ್ದುಕೊಂಡು ಈ ಮೂವರಿಂದ ಮನಃಪೂರ್ವಕ ಸರ್ವಸಹಕಾರದ ವಾಗ್ದಾನ ಪಡೆದುಕೊಂಡು ಕೆಲಸಕ್ಕೆ ತೊಡಗಿದರು. ಆ ಮೂವರು ಶಿಷ್ಯರೆಂದರೆ ಶ್ರೀ ತೀ.ನಂ.ಶ್ರೀಕಂಠಯ್ಯ, ಶ್ರೀ ದೊ.ಲ. ನರಸಿಂಹಾಚಾರ್ಯ, ಶ್ರೀ ಕ.ವೆಂ.ರಾಘವಾಚಾರ್ಯ, ಸಮಿತಿಯ ಸದಸ್ಯರ ಹೆಸರುಗಳು ಹೊರ ಬಿದ್ದೊಡನೆ ಹಲವರು ಹಲವು ಬಗೆಯಲ್ಲಿ ಟೀಕಿಸಿದರು. ಆ ಟೀಕೆಗಳಲ್ಲಿ ಒಂದು ಬಹು ಸ್ವಾರಸ್ಯವಾಗಿತ್ತು. ನಮ್ಮ ಚಿಣ್ಣಿದಾಂಡು ಗೆಳೆಯರೊಬ್ಬರು “ಏನೋ! ನಿಘಂಟು ತುಮಕೂರಿನವರಿಗೇ ಗುತ್ತಿಗೆಯೋ?” ಎಂದು ಅರ್ಧ ಹೆಮ್ಮೆಯಿಂದ ಅರ್ಧಕೀಟಲೆಗಾಗಿ ನನ್ನನ್ನು ಕೇಳಿದರು. ನನಗೆ ಒಡನೆ ಏನೂ ಹೊಳೆಯದೆ “ನಿನ್ನ ಮಾತು ನನಗೆ ಅರ್ಥವಾಗುವುದಿಲ್ಲ. ಹೇಳಬೇಕಾದ್ದನ್ನು ಬಿಡಿಸಿ ಹೇಳು” ಎಂದೆ. ಅದಕ್ಕೆ ಅವರು “ನನ್ನ ಮಾತು ಅರ್ಥವಾಗದಿದ್ದರೆ ನೀನು ಏನು ನಿಘಂಟು ತಯಾರಿಸುತ್ತಿ? ಹೋಗಲಿ. ಅಧ್ಯಕ್ಷರನ್ನು ಬಿಟ್ಟರೆ ಮಿಕ್ಕ ಮೂವರೂ ತುಮಕೂರಿನವರೇ ಆದಿರಲ್ಲೊ. ಬೇರೆ ಯಾರೂ ಪಂಡಿತರೇ ಇಲ್ಲವೊ” ಎಂದು ಕೆಣಕಿದರು. ನಿಜ ನಾವು ಮೂವರೂ ತುಮಕೂರಿನವರು, ತುಮಕೂರು ಹೈಸ್ಕೂಲಿನಲ್ಲಿ ಓದಿದವರು. ಈ ಸ್ಥಳಾಭಿಮಾನ ಅಥವಾ ವ್ಯಾಮೋಹ ನಿಜವಾಗಿ ದೌರ್ಬಲ್ಯವೇ ಆಗಿದ್ದರೆ ಅದು ಮಾನವ ಸಹಜ ಕ್ಷಮ್ಯ ದೌರ್ಬಲ್ಯಗಳಲ್ಲಿ ಒಂದು ಎಂದುಕೊಳ್ಳಬಹುದು. ನಾನೂ ಹೆಮ್ಮೆಯಿಂದಲೆ “ನನ್ನನ್ನು ಏನು ಕೇಳುತ್ತಿ? ನಮ್ಮ ಗುರುಗಳನ್ನು ಕೇಳು” ಎಂದು ತಪ್ಪಿಸಿಕೊಂಡು ಮಾತನ್ನು ಮುಂದೆ ಬೆಳೆಯಗೊಡಲಿಲ್ಲ. ಈಗ ದುರ್ದೈವದಿಂದ ಪ್ರಾರಂಭದ ಅಧ್ಯಕ್ಷರೂ ಮಿಕ್ಕಿಬ್ಬರು ಗೆಳೆಯರೂ ತೀರಿಕೊಂಡು ಮೂಲಗುತ್ತಿಗೆದಾರರಲ್ಲಿ ನಾನು ಒಬ್ಬಂಟಿಗನಾಗಿ ಉಳಿದುಕೊಂಡಿದ್ದೇನೆ. ಮಿಕ್ಕವರನ್ನು ಅದರ ಹೊಣೆಯಿಂದ ಮೃತ್ಯು ಪಾರುಮಾಡಿತು. ನನ್ನ ಹೊಣೆಯನ್ನು ನಾನೇ ಮತ್ತೊಬ್ಬರಿಗೆ ವಹಿಸಿ ಪಾರಾಗಬೇಕಾಗಿದೆ. ಇಷ್ಟಕ್ಕೂ ಎಲ್ಲವೂ ದೈವಚಿತ್ತ. ಅವನಿಲ್ಲದೆ ಹುಲ್ಲೂ ಅಲುಗುವುದಿಲ್ಲ. ತುಮಕೂರಿನ ಎ.ವಿ. ಸ್ಕೂಲು ಹೈಸ್ಕೂಲುಗಳಲ್ಲಿ ಒಟ್ಟಿಗೆ ಓದಿದರೂ ನರಸಿಂಹಾಚಾರ್ಯರಿಗೂ ನನಗೂ ತುಮಕೂರಿನಲ್ಲಿ ಅಷ್ಟಾಗಿ ಪರಿಚಯ ಬೆಳೆದು ಗೆಳೆತನ ಕುದುರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮರುಳು ತಿದ್ದುವಂದಿನಿಂದ ಒಂದು ಗುಂಪಾಗಿ ಬೆಳೆದಿದ್ದ ನಮ್ಮ ಪಟಾಲಮ್ಮಿಗೆ ಹೊರಗಿನಿಂದ ಬಂದವರನ್ನು ಸುಲಭವಾಗಿ ಸೇರಿಸಿಕೊಳ್ಳದಿದ್ದದ್ದೆ. ನರಸಿಂಹಾಚಾರ್ಯರು ಪಾವಗಡದಿಂದ ತುಮಕೂರಿಗೆ ಬಂದವರು. ಅಷ್ಟೇಕೆ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲೆ ನಾವು ಒಟ್ಟಿಗೆ ಓದಿದರೂ ಅಲ್ಲೂ ಅಷ್ಟಾಗಿ ಸಹವಾಸ ಕೂಡಿಬರಲಿಲ್ಲ. ಅದಕ್ಕೂ ಕಾಣರ ನಾನು ಗಣಿತ ಭೌತಶಾಸ್ತ್ರಗಳನ್ನೂ ಅವರು ಭೌತ ರಸಾಯನ ಶಾಸ್ತ್ರಗಳನ್ನೂ ಅಭ್ಯಾಸ ಮಾಡುತ್ತಿದ್ದದ್ದು ಅಲ್ಲದೆ ಅವರು ಬಳೇಪೇಟೆಯಲ್ಲೂ ನಾನು ಗವೀಪುರದಲ್ಲೂ ವಾಸಿಸುತ್ತಿದ್ದದ್ದು. ನಿಜವಾಗಿ ನಮ್ಮಿಬ್ಬರಲ್ಲಿ ಸಲಿಗೆ, ಅಪ್ತತೆ ಬೆಳೆದು ಬಿಗಿದದ್ದು ಕಾಲೇಜು ವ್ಯಾಸಂಗದ ತರುವಾಯ. ಆಗ ಬೆಸೆದುಬಂದ ಬಾಳ ಕೆಳೆ ಬಿಸಿಲೆನ್ನದೆ ಮಳೆಯೆನ್ನದೆ ಕೊಂಚವೂ ಬಿರಿಯದೆ ಬಿಚ್ಚದೆ ಕೊನೆಯವರೆಗೂ ಬಲಿತು ಬಂತು, ನಿಂತುಬಂತು. ದಾಕ್ಷಿಣ್ಯ ಪ್ರವೃತ್ತಿಗಳಾಗಿ ಬರಿಯ ಔಪಚಾರಿಕ ಮೈತ್ರಿಯಿಂದ ತೃಪ್ತಿಗೊಂಡವರಲ್ಲ ನಾವು. ಬುಡಮುಟ್ಟಿ ಅಳ್ಳಾಡಿಸಿ, ಕೆದಕಿ, ಕೆಣಕಿ, ಮೂದಲಿಸಿ, ನೆರನಿರಿದು ಸರಸವಾಡಿ ಒಲ್ದು ಒಲಿದವರು ನಾವು. ನಮ್ಮ ಸ್ನೇಹದ ಬತ್ತಿ ಅಲುಗದೆ, ಆರದೆ ಕೊನೆಯವರೆಗೆ ಉರಿದು ಬೆಳಗಿದ್ದಕ್ಕೆ ನರಸಿಂಹಾಚಾರ್ಯರ ಸಹನೆ ಸೌಜನ್ಯಗಳೇ ಕಾರಣ. ಅವರು ಅತಿ ಸಾಧು ಪ್ರಾಣಿ. ನನ್ನದು ಯಾವಾಗಲೂ ದುಡುಕಿ ಮೇಲೆ ಬೀಳುವ ಸ್ವಭಾವ. ಮಿತ್ರರು ಮೂದಲಿಸುವಂತೆ ನನ್ನದು ಕೊಂಚಮಟ್ಟಿಗೆ ವ್ಯಾಘ್ರ ಪ್ರೇಮ. ಆದರೆ ನನ್ನನ್ನು ಆತ್ಮೀಯವಾಗಿ ಬಲ್ಲವರು ಇಲ್ಲಿಯವರೆಗೆ ನನ್ನನ್ನು ತಪ್ಪು ತಿಳಿದುಕೊಂಡಿಲ್ಲ. ಅದೇ ನನ್ನ ಭಾಗ್ಯ.

ನಾವಿಬ್ಬರೂ ಒಂದೇ ಊರಿನಲ್ಲಿದ್ದಾಗ ದಿನಕ್ಕೊಮ್ಮೆಯಾದರೂ ಸಂಧಿಸದ ದಿನವಿಲ್ಲ. ಎಷ್ಟೋ ವೇಳೆ ದಿನಕ್ಕೆ ಎರಡು ಮೂರು ಸಲ ಕಲೆಯುತ್ತಿದ್ದೆವು. ಘಂಟೆಗಟ್ಟಲೆ ಮಾತಾಡುತ್ತಿದ್ದ ನಾವು ಕ್ಷೇಮ ಸಮಾಚಾರಕ್ಕಾಗಿ, ಮಿಕ್ಕವರ ಟೀಕೆಗಾಗಿ ಕಳೆಯುತ್ತಿದ್ದದ್ದು ಒಂದೆರಡು ನಿಮಿಷಗಳು ಮಾತ್ರ. ಮಿಕ್ಕ ಕಾಲವೆಲ್ಲ ಯಾವುದೋ ಪ್ರಯೋಗ, ಯಾವುದೋ ಶಬ್ದರೂಪ, ಯಾವುದೋ ಪದದ ಅರ್ಥ ಇವುಗಳ ಚರ್ಚೆಗೆ ಗುಂಪಿನ ಮಿಕ್ಕವರಿಗೆ ಒಮ್ಮೊಮ್ಮೆ ಬೇಸರ ತರುತ್ತಿದ್ದದ್ದೂ ಉಂಟು. ಆದರೆ ನಮ್ಮವಾದದ ಕಾವಿನಿಂದ, ಮಾತಿನ ಬಿಸಿಯಿಂದ ಅವರ ಬೇಸರ ಬೇಗನೆ ಕರಗಿ ಹೋಗುತ್ತಿತ್ತು. ನಮ್ಮ ಮನೆಯಲ್ಲೊ ಅವರ ಮನೆಯಲ್ಲೊ ನಾವು ಯಾವುದಾದರೂ ವಿಷಯವನ್ನು ಚರ್ಚಿಸುತ್ತಿದ್ದಾಗ ಮೊದಮೊದಲು ಮನೆಯವರು ದಿಗಿಲು ಬೀಳುತ್ತಿದ್ದದ್ದುಂಟು. “ಯಾಕೆ ಹೀಗೆ ಆಸ್ತಿಗೆ ಕಚ್ಚಾಡುವ ದಾಯಾದಿಗಳಂತೆ ಕಚ್ಚಾಡುತ್ತಿದ್ದಾರೆ ಇವರು ಏನಿದು? ಮಾರಾಮಾರಿ?” ಎಂದು ಗಾಬರಿಗೊಳ್ಳುತ್ತಿದ್ದದ್ದುಂಟು. ಕ್ರಮೇಣ ನಮ್ಮ ವಾಗ್ವಾದದ ವೈಖರಿ ಅವರಿಗೆ ಪರಿಚಯವಾಗಿ ಅದೂ ಒಂದು ವಿನೋದವಾಗುತ್ತ ಬಂತು ಮನೆಯವರಿಗೆ. ನಮ್ಮ ಮಾತಿನ ಬಿರುಸು ಕಾವುಗಳು ಎಷ್ಟರಮಟ್ಟಿಗೆ ಇರುತ್ತಿತ್ತು ಎಂದರೆ ಎಂದಾದರೂ ತಣ್ಣಗೆ, ತೆಪ್ಪಗೆ ಕುಳಿತಿರುತ್ತಿದ್ದರೆ ಅಂದೆನೋ ಅನಾಹುತವಾಗಿರಬೇಕು ಎಂದು ಶಂಕಿಸುತ್ತಿದ್ದರು ಅವರು. ವಾದದಲ್ಲಿ ಮಾತಿನ ಬಿಸಿ ಬಿರುಸುಗಳೆಲ್ಲ ಸಾಮಾನ್ಯವಾಗಿ ನನ್ನವೇ ಆಗಿರುತ್ತಿದ್ದವು. ಅವರು ನಗುನಗುತ್ತ “ಯಾಕೋ ಕೂಗಿಕೊಳ್ಳುತ್ತೀ? ನಿಧಾನವಾಗಿರೊ. ಮೆತ್ತಗೆ ಮಾತಾಡೊ” ಎಂದು ಹೇಳಿದರೆ, ಅದಕ್ಕೆ ನನ್ನ ಪ್ರತಿಕ್ರಿಯೆ “ನಿನಗೆ ಬುದ್ಧಿಗಿದ್ಧಿ ಇದೆಯೊ ಇಲ್ಲವೊ” ಎಂದು ಮೇಲೆ ಬೀಳುವುದು. “ನನಗೆ ಬುದ್ಧಿ ಇಲ್ಲಪ್ಪಾ! ಕೊಂಚ ನಿಧಾನವಾಗಿ ಯೋಚಿಸೋಣ ತಾಳು” ಎಂದು ಸಮಾಧಾನದಿಂದ ಅವರು ಹೇಳಿದರೆ, “ಏನು ನಿನ್ನ ತಲೆ! ಯೋಚಿಸೋದು? ಕರತಲಾಮಲಕದಂತೆ ಸ್ಪಷ್ಟವಾಗಿದೆ” ಎಂದು ನನ್ನ ಅರ್ಭಟ. ಅದಕ್ಕೆ ಅವರ ಮುಗುಳು ನಗೆಯ ಮರುಮಾತು “ನಿಜ ಕಣೋ. ನನಗೆ ಬೇಗ ಕಾಣಿಸೋದಿಲ್ಲ. ನನ್ನದು ದಪ್ಪ ಕನ್ನಡಕ”, ಇಷ್ಟೆಲ್ಲಾ ಅವಶ್ಯಕ, ಅನಾವಶ್ಯಕ ರಾದ್ಧಾಂತವಾದ ಮೇಲೆ ಉಭಯ ಸಮಂತವಾದ ತೀರ್ಮಾನಕ್ಕೆ ಬಂದು ಒಳಗೊಳಗೇ ನಗುತ್ತಿದ್ದೆವು. ಆ ವಾದ ವೈಖರಿ, ಚರ್ಚೆಯ ಸವಿ, ಸ್ಪರ್ಧಾ ಸ್ಫೂರ್ತಿ, ಸರಸಸಲ್ಲಾಪ ಇನ್ನು ನನ್ನ ಪಾಲಿಗೆ ಇಲ್ಲವಾದದ್ದು ನನಗೊಂದು ಹಿರಿಯ ಕೊರಗು. ಬತ್ತಿತಿನ್ನೆನಗಾ ತವಚಿಲುಮೆ. ಅವರು ಕೊನೆ ಯುಸಿರೆಳುಯುತ್ತಿದ್ದಾಗ ನನ್ನ ಬಿಸಿ ತಲೆಯಲ್ಲಿ ಒಂದು ವಿಚಿತ್ರಭಾವ ಹಾದುಹೋಯಿತು. “ಇನ್ನು ಶಬ್ದರೂಪ, ಶಬ್ದಾರ್ಥ, ಶಬ್ದಪ್ರಯೋಗಗಳನ್ನು ಕುರಿತು ಯಾರೊಡನೆ ಚರ್ಚಿಸುವುದು? ಒಡನೋಡಿ ಒಂದೇ ಒಂದೇ ಗರಡಿಯಲ್ಲಿ ಪಳಗಿ ಸಲಿಗೆಯಿಂದ ಜಗಳ ವಾಡುವುದಕ್ಕೆ ಮತ್ತೊಬ್ಬರಿಲ್ಲವಲ್ಲಾ” ಎಂಬುದೇ ಆ ವಿಚಿತ್ರ ಭಾವನೆ.

ಕೊನೆಯ ಉಭಯ ಸಂಮತವಾದ ತೀರ್ಮಾನಕ್ಕೆ ಬಂದರೂ ಚರ್ಚಾ ಕಾಲದಲ್ಲಿ ಒಬ್ಬರು ಹೇಳಿದ್ದಕ್ಕೆ ಮತ್ತೊಬ್ಬರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ. ಕೂಲಂಕಷ ವಾದ ಮಾಡಿ, ಒಮ್ಮೊಮ್ಮೆ ವಿತಂಡ ವಾದಕ್ಕೂ ಇಳಿದು, ಕೊನೆಗೆ ಸಂತೋಷ ಸಂತೃಪ್ತಿಗಳಿಂದ ಒಂದು ನಿರ್ಣಯಕ್ಕೆ ಬರುತ್ತಿದ್ದೆವು. ಬಹುಪಾಲು ನಾವು ಒಮ್ಮತಕ್ಕೆ ಬಂದರೂ ಕೆಲವೊಮ್ಮೆ ಭಿನ್ನಾಭಿಪ್ರಾಯಕ್ಕೆ ಎಡೆ ಇದೆ ಎಂದು ಒಪ್ಪಿಕೊಂಡ ನಿಲವೂ ಉಂಟು. ತೀರ್ಮಾನವೇನೇ ಇರಲಿ, ನಮ್ಮ ಮಾತಿನ ಸೊಗಸೆ ಸೊಗಸು, ಕೆಣಕೆ ಕೆಣಕು, ಸರಸವೇ ಸರಸ, ಸಲಿಗೆಯೇ ಸಲಿಗೆ, ಇಂಗಿತಾ ಸವಿಯೊರತೆ.

ನಮ್ಮ ಭಿನ್ನಾಭಿಪ್ರಾಯದ ನಿದರ್ಶನವಾಗಿ ಒಂದು ಶಬ್ದದ ಪ್ರಸಂಗವನ್ನು ಉಲ್ಲೇಖಿಸಬಹುದು. ಪಂಪನ ಆದಿಪುರಾಣದ ಎರಡನೆಯ ಆಶ್ವಾಸದ ಹನ್ನೊಂದನೆಯ ಪದ್ಯ ಈ ರೀತಿ ಇದೆ.

ಪುಸಿಯ ವರಾಂಗನಾರತದ ಮಧ್ಯದ ಮಾಂಸದ ಮೆಯ್ಗೊಱಲ್ದ ದುರ್
ವ್ಯಸನಿಯ ಮಾಡಿದೋದೆ ನಿಮಗಾಗಮಮಾಗಿರಸತ್ಯವಾದಂ
ಪೊಸಯಿಸಿ ಜೀವನಿಲ್ಲ ಮೊಱೆಯಿಲ್ಲಱನಿಲ್ಲ ಪರತ್ರೆಯಿಲ್ಲೆನ
ಲ್ಕಸಕಳಿಯಂತು ನಾಲಗೆ ಪೊರಳ್ವದು ರಾಜಸಭಾಂತರ[ರಾಳ?]ದೊಳ್ ||

ಇಲ್ಲಿ ನಾಲ್ಕನೆಯ ಸಾಲಿನ ಕಳಿಯಂತು ಎನ್ನುವುದಕ್ಕೆ “ಕಳಿಂದಂತೆ”, “ಗಳೆಯಂತು” ಎಂದು ಪಾಠಾಂತರಗಳಿವೆ.

ನಿಘಂಟು ಕಾರ್ಯಾಲಯದವರು “ಎನಲ್+ಕಸಕಳಿ+ಅಂತು” ಎಂದು ಪದವಿಭಾಗ ಮಾಡಿ ಕರಡಿನಲ್ಲಿ “ಕಸಕಳಿ” ಶಬ್ದವನ್ನು ಉಲ್ಲೇಖಿಸಿ ಅರ್ಥಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದರು. ನರಸಿಂಹಾಚಾರ್ಯರು ತಮ್ಮ ಕರಡು ಪ್ರತಿಯಲ್ಲಿ ಆ ಶಬ್ದದ ಮುಂದೆ “ಇದು ಮಿಥ್ಯಾಶಬ್ದ ಎನಲ್ಕೆ+ಅಸಕಳಿ ಎಂದು ಸರಿಯಾಗಿ ಬಿಡಿಸದೆ ಎನಲ್+ಕಸಕಳಿ ಎಂದು ತಪ್ಪಾಗಿ ಬಿಡಿಸುವುದರಿಂದ ಬರುವ ಅಪಶಬ್ದ” ಎಂದು ಬರೆದಿದ್ದರು! ನಾನು ನನ್ನ ಆದಿಪುರಾಣ ಪತ್ರಿಯಲ್ಲಿ ನಲವತ್ತೈದೂ ವರ್ಷಕ್ಕೆ ಹಿಂದೆ ಗುರುತು ಮಾಡಿದ್ದ ಕಸಪೊರಕೆ, ಬರಲು ಎಂಬ ಅರ್ಥವನ್ನು ನನ್ನ ಕರಡು ಪ್ರತಿಯಲ್ಲಿ ಸೂಚಿಸಿದ್ದೆ. ನಾವಿಬ್ಬರೂ ಸೇರಿ ಚರ್ಚೆಗೆ ತೊಡಗಿದಾಗ ಎಂದಿಗಿಂತ ಬಿರುಸಾದ ಮಾತೇ ನಡೆಯಿತು. ಅವರು “ಕಸಕಳಿ is impossible, nonserise” ಎಂದಾಗ ನಾನು “You ಅಸಕಳಿ is equally impossible and nonsense” ಎಂದೆ. ಅವರು “ಅಸಕಳಿ” ಶಬ್ದ ನೂರಾರು ಪ್ರಯೋಗಗಳಿವೆ, ಕಸಕಳಿ ಶಬ್ದದ ಇನ್ನೊಂದು ಪ್ರಯೋಗ ತೋರಿಸು ನೀನು” ಎಂದರು. “ಇನ್ನೊಂದು ಪ್ರಯೋಗ ಸಿಕ್ಕಿದ್ದರೆ ಶ್ರಮವೋ ಇರುತ್ತಿರಲಿಲ್ಲ, ವ್ಯಾಜ್ಯವೂ ಇರುತ್ತಿರಲಿಲ್ಲ” ಎಂದು ಹೇಳಿದ್ದಕ್ಕೆ, ಅವರು “ಹೋಗಲಿ, ವ್ಯುತ್ಪತ್ತಿಯೇನು” ಎಂದು ಕೇಳಿದರು. ನಾನು “ಕಸವನ್ನು ಕಳೆಯುವುದು ಕಸಕಳಿ (ಕಸ+ಕಳೆ+ಇ)” ಎಂದಾಗ “ನಾನು ಒಪ್ಪುವುದಿಲ್ಲ” ಎಂದು ಅವರು ಪಟ್ಟು ಹಿಡಿದರು. ಅದಕ್ಕೆ ನಾನು “ನೀನು ಒಪ್ಪು, ಬಿಡು. ಆ ಅರ್ಥವೂ ಸಾಧ್ಯ. ಇರುವುದನ್ನು ಇಲ್ಲ, ಇಲ್ಲದ್ದನ್ನು ಇದೆ ಎಂದು ವಾದ ಮಾಡುವ ನಾಲಗೆ ಕಸಬರಲು ಹೊರಳಾಡುವಂತೆ ಹೊರಳಾಡುತ್ತದೆ ಎಂದು ಕವಿ ರಸವತ್ತಾಗಿ ಚಿತ್ರಿಸಿದ್ದಾನೆ” ಎಂದು ಹೇಳಿ ಸುಮ್ಮನಾದೆ. ಅವರೂ ಸುಮ್ಮನಾದರು. ಐದು ನಿಮಿಷ ಬಿಟ್ಟುಕೊಂಡು ಅವರು “ಸರಿಯೆ! ಈಗೇನು ಮಾಡೋಣ” ಎಂದಾಗ ನಾನು “ನನ್ನನ್ನೇಳು ಕೇಳುತ್ತಿ. ಬೇಕಾದ್ದು ಮಾಡಿಕೊ. ನಿನ್ನದು ಹಟವಾದರೆ ನನ್ನದೂ ಹಟ” ಎಂದು ಮೊಂಡಾಟಕ್ಕೆ ತೊಡಗಿದೆ. ಅವರು ಸಮಾಧಾನಚಿತ್ತರಾಗಿಯೆ “ಏಕೋ ಹೀಗಾಡುತ್ತಿ? ಏನಾದರೂ ಬರೆಯಬೇಕಲ್ಲೊ ಎರಡೂ ಅಭಿಪ್ರಾಯವನ್ನು ಸೂಚಿಸಿ ಬಿಡೋಣ” ಎಂದರು. ಅದಕ್ಕೆ ನಾನೂ ಒಪ್ಪಿ ಕೊನೆಗೆ “ಕಸಕಳಿ” ಮಿಥ್ಯಾ ಶಬ್ದವೆಂದು ಸೂಚಿಸಿ, “ಕಸಕಳಿ ಎನ್ನುವುದು ಕಸ+ಕಳೆ+ಇ ಎಂದು ನಿಷ್ಪತ್ತಿ ಹೇಳಿ ಕಸಪೊರಕೆ, ಬರಲು ಎಂದು ಒಬ್ಬರು ಅರ್ಥೈಸಿದ್ದಾರೆ. ಇದು ಕನ್ನಡದಲ್ಲೆ ಏಕೈಕ ಪ್ರಯೋಗವಾಗಿರುವುದರಿಂದಲೂ ಜ್ಞಾತಿಶಬ್ದಗಳು ಯಾವುದೂ ಕಾಣಿಸದಿರುವುದರಿಂದಲೂ ಅರ್ಥವನ್ನಾಗಲಿ, ನಿಷ್ಪತ್ತಿಯನ್ನಾಗಲಿ ಸಮರ್ಥಿಸುವುದು ಕಷ್ಟ” ಎಂದು ಟಿಪ್ಪಣಿ ಬರೆದದ್ದಾಯಿತು.

ಇನ್ನೊಂದು ಹೆಮ್ಮೆಯ ಪ್ರಸಂಗ : ಪ್ರಸಿದ್ಧ ಯವನ ಗಣಿತಜ್ಞನಾದ ಅರ್ಖಿಮೆದೇಸನ್ನು ಕುರಿತು ಕಥೆಯೊಂದುಂಟು. ಅವನು ಸ್ನಾನದ ತೊಟ್ಟಿಯಲ್ಲಿ ಮಲಗಿ ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಾಪೇಕ್ಷಭಾರ ತತ್ವಕ್ಕೆ ಸಂಬಂಧಿಸಿದ ಅಂಶವೊಂದು ಅನುಭವಕ್ಕೆ ಬಂದು ಆನಂದೋನ್ಮಾದದಿಂದ ತೊಟ್ಟಿಯಿಂದ ಜಿಗಿದು ಬತ್ತಲೆಯಾಗಿಯೇ ಓಡಾಡಿದನಂತೆ. ಅಂಥದೇ ಒಂದು ಪ್ರಸಂಗ ನಮ್ಮಿಬ್ಬರಿಗೂ ಬಂತು. ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯ ಒಂದು ಶಾಸನ, ಚಾಲುಕ್ಯರಾಜ ತ್ರೈಲೋಕ್ಯಮಲ್ಲದೇವನ ಕಾಲದ್ದು (೧೦೫೭ ಕ್ರಿ.ಶ.) (South Indian Inscriptions Vol. IX, Part I, Page, 118, line 42) ಅದರಲ್ಲಿ ಒಂದು ಕಂದಪದ್ಯ ಬರುತ್ತದೆ :

ಕುರುಉರುಳ ಮುಡಿಯಂ ದಂತಮ
ನುರಮಂ ಕುಗೆಯನೂರುವಂ ಬೆಳರಂ ದೇ
ಮರಸಂಗೆ ಕೊಟ್ಟು ಸತಿಯರ್
ವರೆ ಕೆಪ್ಸಂ ಕಚ್ಚಿ ಚಕ್ರವರ್ತಿಯ ಸಭೆಯೊಳು ||

ಇಲ್ಲಿ “ಕುಗೆ” ಶಬ್ದವನ್ನು ಉಲ್ಲೇಖಿಸಿ ಕಾರ್ಯಾಲಯದವರು ಅರ್ಥಕ್ಕೆ ಪ್ರಶ್ನೆ ಚಿಹ್ನೆ ಹಾಕಿದ್ದರು. ನಾನು ಅಂದು ಪೂಜೆ ಮುಗಿಸಿಕೊಂಡು ಕರಡು ನೋಡಲು ಕುಳಿತಾಗ ನನ್ನ ಕಣ್ಣಿಗೆ ಮೊದಲು ಬಿದ್ದ ಶಬ್ದ ಅದು. ಅಂದಿನ ಸ್ತೋತ್ರದ ತಮಿಳು ಪಾಶುರವೊಂದರಲ್ಲಿ “ಕೊಂಗೈ” ಪದ ಬಂದಿದ್ದು ಆ ಸಾಲೆ ನನ್ನ ಕಿವಿಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿತ್ತು. ಆದ್ದರಿಂದ ನಾನು ಒಡನೆಯೆ ಕುಗೆ=ಸ್ತನ ಎಂದು ನನ್ನ ಕರಡಿನಲ್ಲಿ ಗುರುತು ಹಾಕಿದೆ. ನಾವಿಬ್ಬರೂ ಚರ್ಚೆಗೆ ಕುಳಿತಾಗ ನಾನು “ಕುಗೆ ಏನು ಮಾಡಿದೆಯಯ್ಯಾ” ಎಂದು ಕೇಳಿದ್ದಕ್ಕೆ ಅವರು “ಲೇ! ಪದವಿಭಾಗ ತಪ್ಪು” “ಅಂಕುಗೆ ಆಗಬೇಕು” ಎಂದರು. ನಾನು “ಅಂಕು ಅಥವಾ ಅಂಕುಗೆಗೆ ಏನಯ್ಯ ಅರ್ಥ” ಎಂದೆ. “ತಾಳೊ, ನೋಡೋಣ” ಎಂದರು. ನಾನು “ಕುಗೆ ಎಂದರೆ ಸ್ತನ ಎಂದು ಏಕೆ ಅರ್ಥಮಾಡಬಾರದಯ್ಯ? ತಮಿಳಿನಲ್ಲಿ ಕೊಂಗೈ ಇದೆ ನೋಡು. ಈ ಕಂದದಲ್ಲಿ ಮಿಕ್ಕೆಲ್ಲ ಅವಯವಗಳನ್ನೂ ಹೇಳಿ, ಸ್ತನವನ್ನು ಮಾತ್ರ ಬಿಟ್ಟಿದೆ. ಆದ್ದರಿಂದ ಕುಗೆ=ಸ್ತನ? ಎಂದು ಬರೆದು ಪ್ರಶ್ನೆ ಚಿಹ್ನೆ ಹಾಕೋಣ ಎಂದೆ. ಹಾಗೆಯೆ ‘ಕಂದದಲ್ಲಿ ಕೊಂಚ ಛಂದೋ ದೋಷಗಳೂ ಇವೆ. ಅವನ್ನು ಸರಿಪಡಿಸಿ, ಮತ್ತೆ ಅರ್ಥ ನೋಡೋಣ’ ಎಂದು ಹೇಳಿದೆ. ಇಬ್ಬರೂ ಕೂತು ಸರಿಯಾದ ಪಾಠ ಹೀಗಿದ್ದಿರಬೇಕು ಎಂದು ತೀರ್ಮಾನಿಸಿದೆವು.

ಕುರುಳಂ ಮುಡಿಯಂ ದಂತಮ
ನುರಮಂ ಕುಂಗೆಯುಮನೂರುವಂ ಬೆರಳಂ ದೇ
ಮರಸಂಗೆ ಕೊಟ್ಟು ಸತಿಯಾರ್
ವರೆ ಕೆಪ್ಸಂ ಕಚ್ಚಿ ಚಕ್ರವರ್ತಿಯ ಸಭೆಯೊಳ್

ಈ ಶುದ್ಧಪಾಠ ನಿರ್ಣಯದಿಂದ ಸಿದ್ಧವಾದ “ಕುಂಗೆ” ಶಬ್ದ ನಮಗೆ ದೊರೆತೊಡನೆ ನಮಗಾದ ಆನಂದೋದ್ರೇಕ ಅವರ್ಣನೀಯ. ನರಸಿಂಹಾಚಾರ್ಯರು ಆರಾಮ ಕುರ್ಚಿಯಲ್ಲಿ ಪೊಗದಸ್ತಾಗಿ ಮಂಡಿಸಿದ್ದ ತಮ್ಮ ಸ್ಥೂಲ ದೇಹವನ್ನು ಒಮ್ಮೆಲೆ ಜಿಗಿಸಿ “ಲೇ ರಾಘವಾಚಾರಿ! ಒಳ್ಳೆಯ ಭರ್ಜರಿ ಸಂಶೋಧನೆ ಇದು. ನಾವಿಬ್ಬರೂ ನಿಘಂಟು ಸಮಿತಿಯ ಸದಸ್ಯರಾಗಿದ್ದದ್ದು ಸಾರ್ಥಕವಾಯಿತು. ಇನ್ನೇನು ಮಾಡಲಿ ಬಿಡಲಿ, ಕನ್ನಡದ ಒಂದು ಅಜ್ಞಾತ ಗುಪ್ತ ಶಬ್ದವನ್ನು ಗುರುತಿಸಿ ಕೋಶಕ್ಕೆ ಸೇರಿಸಿದ್ದೇವೆ” ಎಂದು ಹೆಮ್ಮೆಯಿಂದ ನಲಿದಾಡಿದರು. ನಮ್ಮ ಭುಜವನ್ನು ನಾವೇ ತಟ್ಟಿಕೊಂಡೆವು.

ವಿಧಿಯ ಕೈವಾಡವನ್ನು ಯಾರೂ ತಡೆಯುವಂತಿಲ್ಲವಾದರೂ ಲೌಕಿಕ ದೃಷ್ಟಿಯಿಂದ ನೋಡಿದರೆ ಒಂದು ರೀತಿಯಲ್ಲಿ ನರಸಿಂಹಾಚಾರ್ಯರ ಅಕಾಲ ಮರಣಕ್ಕೆ ಪರೋಕ್ಷವಾಗಿಯಾದರೂ ನಾನೇ ಕಾರಣವಿದ್ದಿರಬಹುದು ಎಂಬ ಅಳುಕು ನನ್ನನ್ನು ಕಾಡುತ್ತಿದೆ. ಇದೇ ಏಪ್ರಿಲ್ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಲೋಕ ಭವನದಲ್ಲಿ ಸಮಾವೇಶಗೊಂಡ ಕನ್ನಡ ನಿಘಂಟು ಸಮಿತಿಯ ಎಂಟು ದಿನಗಳ ಇಪ್ಪೊತ್ತಿನ ದೀರ್ಘಾಧಿವೇಶನದಲ್ಲಿ ಸಾಗಿದ ಕೆಲಸದ ಮೊತ್ತ ಎಲ್ಲರನ್ನೂ ಅಚ್ಚರಿಗೊಳಿಸಿತು. ಆದರೆ ಆ ಮಹತ್ ಸಾಧನೆ ಒಂದು ಮಹಾಹುತಿಯನ್ನೂ ಕೊಂದಿತು. ಆ ಅಧಿವೇಶನದಲ್ಲಿ ಪರಿಶೀಲಿಸಬೇಕಾಗಿದ್ದ ನಿಘಂಟು ಕರಡುಗಳನ್ನು ಅಧಿವೇಶನಕ್ಕೆ ಮುಂದೆ ಒಂದು ತಿಂಗಳಿಂದ ದಿನವೂ ಬೆಳಗ್ಗೆ ಮಧ್ಯಾಹ್ನ ನಾವಿಬ್ಬರೂ ಒಟ್ಟಿಗೆ ಕುಳಿತು ಚರ್ಚಿಸಿ ನಮ್ಮಿಬ್ಬರಲ್ಲಿ ಒಂದು ತೀರ್ಮಾನಕ್ಕೆ ಬರುತ್ತಿದ್ದೆವು. ಕೊನೆ ಕೊನೆಗೆ ಒಂದು ಮಧ್ಯಾಹ್ನ ಅವರಿಗೆ ಬಹಳ ಸುಸ್ತಾಗಿ ಆರು ಘಂಟೆಯ ಸಮಯದಲ್ಲಿ “ಲೇ! ಇನ್ನು ಕೈಲಾಗೋದಿಲ್ಲ. ಸಾಕು ಇವೊತ್ತು” ಎಂದು ಕರಡನ್ನು ಮೇಜಿನ ಮೇಲೆ ಎಸೆದುಬಿಟ್ಟರು. ನಾನು “ಲೇ! ಇನ್ನೆರಡು ಪುಟ ಮಾಡಿ ಬಿಡೋಣಯ್ಯ, ‘ಒಂದು ಘಟ್ಟಕ್ಕೆ ಬರುತ್ತದೆ’ ಎಂದಾಗ, ವಿಧಿಯಿಲ್ಲದೆ ನನ್ನ ಮೊಂಡಾಟಕ್ಕೆ ಒಪ್ಪಿಕೊಂಡು “ಯಾಕೋ ಸುಮ್ಮನೆ ಸಾಯುತಿ?” ಎಂದು ಗೊಣಗಿದರು. ತರುವಾಯದ ಆಘಾತವನ್ನೂ ದುರಂತವನ್ನೂ ನೆನೆದರೆ “ಯಾಕೋ ಸುಮ್ಮನೆ ಸಾಯಿಸುತ್ತಿ?” ಎಂದಿದ್ದರೆ ಹೆಚ್ಚು ನಿಜವಾಗಿರುತ್ತಿತ್ತೇನೊ? ಆಲೋಕದ ಅಧಿವೇಶನ ಮುಗಿಸಿ ಮನೆಗೆ ಬಂದವರೆ ಮತ್ತೆ ಮನೆ ಬಿಟ್ಟು ಕದಲಲಿಲ್ಲ. ಸುಸ್ತಾಗಿ ಬಿದ್ದು ಆಯಾಸ ಪಡುತ್ತ ಮೇ ಒಂದರ ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಗುರಿಯಾಗಿ ಒಂದುವಾರ ನರಳಿ ಕೊನೆಗೆ ಮೂತ್ರಪಿಂಡ ವ್ಯಾಧಿಗೆ ತುತ್ತಾಗಿ ಮೇ ಏಳರ ರಾತ್ರಿ ಕಣ್ಣುಮುಚ್ಚಿ ತಮ್ಮ ಐಹಿಕಯಾತ್ರೆಯನ್ನು ಪೂರೈಸಿದರು, ನನ್ನಲ್ಲಿ ಕೊಲೆಯಳುಕನ್ನು ಉಳಿಸಿ, ದೈವೇಚ್ಛೆ.

* ಕನ್ನಡನುಡಿ (ಸಂ. ೩೪, ಸಂಚಿಕೆ ೧೫, ೧೬) ಪು. ೧೫