ಶ್ರೀ ನರಸಿಂಹಾಚಾರ್ಯರರು ಭಾಷಣಗಳನ್ನು ಬಿಗಿಯುವ ಹವ್ಯಾಸದವರಲ್ಲ. ಆದರೆ ಒಮ್ಮೆ ಉಪನ್ಯಾಸ ಮಾಡುವ ಪ್ರಸಂಗ ಬಿದ್ದರೆ ಇಂಗ್ಲೀಷನಲ್ಲಿಯಾದರೂ ಸರಿಯೆ, ಕನ್ನಡದಲ್ಲಿಯಾದರೂ ಸರಿಯೆ ಧಾರಾಳವಾಗಿ ಶ್ರೀಯುತರು ಮಾತನಾಡಬಲ್ಲರು. ವಿಷಯಕ್ಕೆ ಅನ್ಯಾಯ ಮಾಡುವುದಿಲ್ಲ. ಶ್ರೋತೃಗಳಿಗೆ ಅಪಚಾರವೆಸಗುವುದಿಲ್ಲ. ವೇದಿಕೆಯ ಮೇಲೆ ನಿಂತು ಮೈಯನ್ನು ಸ್ವಲ್ಪ ಬಗ್ಗಿಸಿ, ಬಲಗೈಯನ್ನು ಮೇಲಕ್ಕೆ ಎತ್ತಿ ಅತ್ತ ಇತ್ತ ಆಡಿಸುತ್ತ ಕಣ್ಣು ಮುಚ್ಚಿಕೊಂಡು, ಸ್ವಲ್ಪ ದಪ್ಪ ದನಿಯಲ್ಲಿ ಸಾವಕಾಶವಾಗಿ ಪದ್ಯಗಳ ಮೇಲೆ ಪದ್ಯಗಳನ್ನು ಉದಾಹರಿಸುತ್ತ ವಿಷಯವನ್ನು ಒಂದು ಗತ್ತಿನಲ್ಲಿ ಸ್ಫುಟೀಕರಿಸುತ್ತ ಉಪನ್ಯಾಸ ಮಾಡುವ ಮೋಡಿಗೆ ಪರವಶನಾಗದ ಸಭಿಕ ತಾನೆ ಯಾರು?

ಶಾಲಾ ಕಾಲೇಜಿನ ದಿನಗಳಲ್ಲಿ ಕ್ರಿಕೆಟ್‌, ಪುಟ್‌ಬಾಲ್‌, ವಾಲಿಬಾಲ್‌ ಮುಂತಾದವುಗಳನ್ನು ಚೆನ್ನಾಗಿ ಆಡುತ್ತಿದ್ದರಂತೆ. ಅಧ್ಯಾಪಕರಾಗಿದ್ದಾಗ ಟೆನ್ನಿಸ್‌ ಆಡುತ್ತಿದ್ದುದ್ದನ್ನು ನಾನೇ ಕಂಡಿದ್ದೇನೆ. ೧೯೩೩-೩೪ರ ಸುಮಾರಿನಲ್ಲಿ ಆಚಾರ್ಯರರು ಸೈಕಲ್ಲು ಸವಾರಿ ಕಲಿತಿದ್ದನ್ನು ನೋಡಿದ್ದೇನೆ. ಈಗ ಖಾಸಗಿ ತರಗತಿಯೊಂದನ್ನು ಏರ್ಪಡಿಸಿಕೊಂಡು ಆಚಾರ್ಯರರು ಜರ್ಮನ್‌ ಕಲಿಯತೊಡಗಿದ್ದಾರೆ. ಆಟಕ್ಕಾಗಲಿ, ಪಾಠಕ್ಕಾಗಲಿ ವಯಸ್ಸಲ್ಲ ಮುಖ್ಯ ಮನೋಧರ್ಮ ಮುಖ್ಯ ಎನ್ನುವುದಕ್ಕೆ ಆಚಾರ್ಯರರು ಉದಾಹರಣೆಯಾಗಿದ್ದಾರೆ.

ಸಹಾನುಭೂತಿ, ಸೌಹಾರ್ದ, ಸೌಜನ್ಯ, ಸರಳತೆ ಸರಸತೆಗಳು ಸಮ್ಮಿಶ್ರಣ ಸ್ವರೂಪದ ಸುಂದರ ಚಿತ್ತಸಂಸ್ಕಾರದಿಂದೊಗಿದ ಮೆರುಗೊಂದರಿಂದ ಇವರ ವ್ಯಕ್ತಿತ್ವ ಕಾಂತಿಯುತ್ತವಾಗಿದೆ ಎನ್ನಬಹುದು. ಮೊದಲ ನೋಟಕ್ಕೆ ಇವರು ಒಮ್ಮೊಮ್ಮೆ ಕಠಿಣ ಮನಸ್ಕರೇನೋ ಎನ್ನಿಸಬಹುದು. ಆದರೆ ಪರಿಚಯ ಬೆಳೆದಂತೆ ಮೊದಲು ಮೂಡಿದ ಅಭಿಪ್ರಾಯ ಭ್ರಾಮಕ ಮಾತ್ರವೆನಿಸದಿರದು. ‘ಅಂಜಲೇಕೊ ಅಳುಕಲೇಕೋ ಲೋಕವಿಗುರ್ಬಣೆಗೆ’ ಎಂಬಂತಹ ರೀತಿಯಲ್ಲಿ ಮಾತು ಒಮ್ಮೊಮ್ಮೆ ಬಿರುಸಾಗಿ ಬರುವುದೂ ಉಂಟು. ಆದರೆ ಅಂತಃಕರಣ ಎಂದೂ ಮೃದುವೇ. ಯಾರನ್ನೂ ನೋಯಿಸದ ಎಲ್ಲರನ್ನೂ ನಗಿಸುವ ಸಾತ್ವಿಕ ಸ್ವಭಾವದ ಹಾಸ್ಯದಲ್ಲಿ ಆಚಾರ್ಯರರು ಆಗಾಗ ಮಗ್ನರಾಗುವುದುಂಟು. ಮಿತವಾದ ಗೋಷ್ಠಿಯಲ್ಲಿ ಅವರನ್ನು ಕಂಡವರಿಗೆ ಅವರ ಸರಸ ಸಲ್ಲಾಪದ ಸವಿ ಎಂತಹುದೆಂಬುದು ಗೊತ್ತುಂಟು. ಮಹಾರಾಜಾ ಕಾಲೇಜಿನ ಅಧ್ಯಾಪಕರ ಕೊಠಡಿಯ ಮೂಲೆಯ ಓವಲ್‌ ಟೇಬಲಿನ ಸುತ್ತ ಅಧ್ಯಾಪಕರು ಸಭೆ ಸೇರಿದಾಗ, ಪ್ರಾಚ್ಯಕೋಶಾಗಾರದ ಎದುರಿನ ಕೌಟಿಲ್ಯ ಸ್ಥಳದಲ್ಲಿ ಸಂಜೆಯ ಹವೆಗೆಂದು ಮಿತ್ರರು ಬೈಠಕ್‌ ನಡೆಸಿದಾಗ, ನೂರಡಿಯ ರಸ್ತೆಯಲ್ಲಿರುವ ಕೃಷ್ಣ ಕಂಪೆನಿಯ ಅಂಗಡಿಯಲ್ಲಿ ಸ್ನೇಹಿತರೊಡನೆ ಮಂಡಿಸಿದಾಗ, ವಿದ್ಯಾರ್ಥಿಗಳು ಏರ್ಪಡಿಸಿದ ಸಂತೋಷ ಕೂಟಗಳಲ್ಲಿ ಭಾಗವಹಿಸಿದಾಗ, ಆಪ್ತೇಷ್ಟರ ಮನೆಗಳಲ್ಲಿ ಲೋಕಾಭಿರಾಮವಾಗಿ ಕುಳಿತು ಮಾತುಕಥೆಯಾಡುವಾಗ ನರಸಿಂಹಾಚಾರ್ಯರರು ಹೇಗೆ ಸರಸವಾಗಿ ಮಾತನಾಡಿ ಗೋಷ್ಠಿಯ ಸಂತಸವನ್ನು ಉಕ್ಕೇರಿಸುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಿ ಅನುಭವಿಸಬೇಕು.

ಇಷ್ಟೆಲ್ಲ ಹೇಳಿದ ಮೇಲೆ ಅವರ ವ್ಯಕ್ತಿತ್ವದ ಬಹುಮುಖ್ಯವಾದ ಇನ್ನೂ ಒಂದೆರಡು ಅಂಶಗಳನ್ನು ಇಲ್ಲಿ ತಿಳಿಸುವುದು ಅಗತ್ಯವಾಗಿದೆ. ‘ಜೀವನ ಸರಳ ಆಲೋಚನೆ ಗಹನ’ ಎಂಬ ಸೂತ್ರಕ್ಕೆ ಆಚಾರ್ಯರರ ಬದುಕು ವ್ಯಾಖ್ಯಾನ ರೂಪದಲ್ಲಿದೆ ಎನ್ನಬಹುದು. ಒಂದು ಕಾಲದಲ್ಲಿ ಆಚಾರ್ಯರರು ಕಚ್ಚೆ ಪಂಚೆ, ಓಪನ್‌ ಕಾಲರ್‌ ಕೋಟು, ನೆಕ್‌ಟೈ, ಜರಿಪೇಟಗಳಿಂದ ಅಲಂಕೃತರಾಗಿ ಕಾಲೇಜಿಗೆ ಬರುತ್ತಿದ್ದರು. ಈಗ ಕಚ್ಚೆಪಂಚೆ, ಕ್ಲೋಷ್‌ ಕಾಲರ್‌ ಕೋಟು, ಟೋಪಿ ಇವುಗಳಿಂದ ಅಲಂಕೃತರಾಗಿ ಬರುತ್ತಾರೆ. ವಯೋಧರ್ಮ ದೇಹಧರ್ಮಗಳ ಫಲವಾಗಿ ಮೈ ಸ್ವಲ್ಪ ಬಗ್ಗಿಸಿ ನಡೆಯುತ್ತಾರೆ. ವಿದ್ಯೆಯ ಭಾರದಿಂದ ಜಗ್ಗಿದ್ದಾರೆ, ವಿನಯದ ನಡೆಯಿಂದ ಬಗ್ಗಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಪ್ರಚಾರ, ಪ್ರವಾಸ, ಹಿತೋಪದೇಶಗಳಲ್ಲಿ ಇವರಿಗೆ ಅಷ್ಟಾಗಿ ನಂಬಿಕೆ ಇಲ್ಲ. ಕೂಗಾಟ ಹಾರಾಟ ಬೊಬ್ಬಾಟಗಳಿದ್ದೆಡೆಯಿಂದ ಇವರು ಹತ್ತು ಮಾರು ಆಚೆ ಇರುತ್ತಾರೆ. ಇವರು ಎಂದೂ ಅಡ್ಡ ಗೋಡೆ ಮೇಲೆ ದೀಪ ಇಟ್ಟವರಲ್ಲ. ಗೊತ್ತಿದ್ದರೆ ಗೊತ್ತಿದೆ, ಇಲ್ಲದಿದ್ದರೆ ಇಲ್ಲ ಎನ್ನುವ ಖಚಿತತೆ ಇವರ ವ್ಯಕ್ತಿತ್ವದ ಒಂದು ಕುರುಹು. ಗೌಜು ಗದ್ದಲಗಳಿಗೆ ಹೋಗದೆ, ಡಬ್ಬು ದಬ್ಬಾಳಿಕಿಗಳಿಂದ ದೂರ ಸರಿದು ಎಲೆ ಮರೆಯ ಕಾಯಿಯಂತೆ ತಾವಾಯಿತು ತಮ್ಮ ಸಂಶೋಧನೆಯಾಯಿತು ಎಂಬ ರೀತಿಯಲ್ಲಿ ಆಚಾರ್ಯರರು ಇದ್ದಿದ್ದಾರೆ.

* ಜ್ಞಾನೋಪಾಸಕ, ಪು. ೨೩