ನಮ್ಮ ಮಿತ್ರಗೋಷ್ಠಿಯಲ್ಲಿ ಪ್ರೊ. ನರಸಿಂಹಾಚಾರ್ಯರರನ್ನು ಡಿ.ಎಲ್‌.ಎನ್‌ ಎಂದು ಕರೆಯುವ ವಾಡಿಕೆ. ಅವರು ನನಗೆ ಆತ್ಮೀಯ ಸ್ನೇಹಿತರು. ಇದೊಂದು ಭಾಗ್ಯವೆಂದು ನಾನು ಭಾವಿಸುತ್ತೇನೆ. ಅವರ ಪಾಂಡಿತ್ಯ ಅಪಾರವಾದದ್ದು. ಅವರ ಜೈನಸಾಹಿತ್ಯದ ಜ್ಞಾನವನ್ನು ಅನೇಕರು ಕೊಂಡಾಡಿದ್ದನ್ನು ಕೇಳಿದ್ದೇನೆ. ಇಷ್ಟು ಆಳವಾದ ಜ್ಞಾನವಿದ್ದರೂ ಸಹ ನಾನಂತೂ ಡಿ.ಎಲ್‌.ಎನ್‌ ಆ ಜ್ಞಾನ ಪ್ರದರ್ಶನ ಮಾಡಲು ಎಂದೂ ಉತ್ಸುಕರಾದದ್ದನ್ನು ಕಂಡಿಲ್ಲ. ನಾವಾಗಿ ಏನಾದರೂ ವಿಷಯವನ್ನು ಕೆಣಕಿ ಅವರಿಂದ ಅವರ ಅಭಿಪ್ರಾಯ ಪಡೆದ ಹೊರತು ತಮ್ಮ ಪಾಂಡಿತ್ಯದ ಪ್ರಭಾವವನ್ನು ಅವರು ತೋರುವುದಿಲ್ಲ. ಇದು ಅವರ ಪಾಂಡಿತ್ಯ ವಿಷಯವಾದ ನಮ್ರತೆಯ ಒಂದು ಲಕ್ಷಣ.

ಮಂಡ್ಯದಲ್ಲಿ ಒಂದು ಸಲ ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸಗಳ ಸಂದರ್ಭದಲ್ಲಿ ‘ಸಾಹಿತ್ಯ ಸ್ವರೂಪವನ್ನು ಕುರಿತ ಒಂದು ಉಪನ್ಯಾಸ ಮಾಡಿದರು. ಅವರ ಆಳವಾದ ಪಾಂಡಿತ್ಯ ಮತ್ತು ಅವರ ಅನ್ಯಾದೃಶವಾದ ಸ್ವಾರಸ್ಯವಾದ ವಿಷಯ ಪ್ರತಿಪಾದನೆ, ಅವರ ನಿಷ್ಕೃಷ್ಟವಾದ ವಿಚಾರ, ಸತ್ಯ ನಿಷ್ಠೆಯನ್ನು ಕಂಡು ಬೆರಗಾದೆ. ಅವರೊಡನೆ ಅನುದಿನದ ಸ್ನೇಹದಿಂದ ಒಡನಾಡಿಯಾಗಿದ್ದ ನನಗೆ ಅವರ ಅಂತರಾಳದ ದರ್ಶನ ಅಚ್ಚರಿಯನ್ನುಂಟು ಮಾಡಿತು. ಅವರ ವಿದ್ಯಾರ್ಥಿಗಳು ಅವರ ಪಾಂಡಿತ್ಯ, ಬೋಧನೆಯ ಸಾಮರ್ಥ್ಯ ಇವುಗಳನ್ನು ಮುಕ್ತಕಂಠದಿಂದ ಹೊಗಳುವುದನ್ನು ಕೇಳಿದ್ದೇನೆ.

ಸಾಹಿತ್ಯ ಸಂಬಂಧವಾದ ವಿಚಾರ ಹಾಗಿರಲಿ, ಇನ್ನೂ ಇತರ ವಿಷಯಗಳು, ಅಂದರೆ ಸಾಮಾನ್ಯವಾಗಿ ಸ್ನೇಹಿತರ ಸಂಭಾಷಣೆಗಳಲ್ಲಿ ಉದ್ಭವವಾಗುವ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಅವರು ಯಾರ ದಾಕ್ಷಿಣ್ಯಕ್ಕೂ ಹೆದರದೆ ತಮ್ಮ ಪ್ರಾಮಾಣಿಕವಾದ ಅಭಿಪ್ರಾಯವನ್ನು ಹೊರಗೆಡಹುವುದನ್ನು ಕಂಡಿದ್ದೇನೆ. ಉಪಚಾರಕ್ಕಾಗಿ ಹೇಳುವ ಅಭಿಪ್ರಾಯಗಳು ಅವರಿಗೆ, ‘‘ಷ್ಯಾಮ್’’ (Sham) ಎನಿಸಿವೆ. ದಾಕ್ಷಿಣ್ಯಕ್ಕಾಗಿ ನಮ್ಮ ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ಮರೆಮಾಡುವ ಬೆಡಗಿನ ಮಾತುಗಳನ್ನು ಅವರೆಂದಿಗೂ ಮೆಚ್ಚುವುದಿಲ್ಲ. ನೇರವಾಗಿ ಕಂಡದ್ದನ್ನು ಕಂಡಂತೆ ಹೇಳುವುದು ಅವರ ಸ್ವಭಾವ. ಅವರು ಹೇಳುವ ಮಾತುಗಳು ಕೆಲವರಿಗೆ ಕಟುವೆನಿಸಿದರೂ ತಕ್ಷಣ ಈ ಕಟುತನ ಅವರು ಒಂದು ಚಿಟಿಕೆ ನಶ್ಯವನ್ನು ಮೂಗಿಗೆ ಏರಿಸಿ ನಕ್ಕುಬಿಟ್ಟಾಗ ತೇಲಿ ಹೋಗುತ್ತದೆ. ಇವರಲ್ಲಿ ನನಗೆ ತುಂಬಾ ಮೆಚ್ಚುಗೆಯಾದ ಅಂಶ ಇವರ ಸಾರಾಸಾರ ವಿವೇಕ ಮತ್ತು ಇವರ ಮತ್ಸರ ರಹಿತ ಸ್ವಭಾವ. ತನ್ನ ಅಧಿಕಾರದ ಅಭ್ಯುದಯವನ್ನು ಕುರಿತು ಒಂದು ಸಲವಾದರೂ ತನಗೆ ಸಲ್ಲಬೇಕಾದದ್ದು ಸಲ್ಲಲಿಲ್ಲ ಅನ್ನುವ ಉದ್ಘಾರವನ್ನಾಗಲಿ ಅಥವಾ ತನ್ನ ಮುಂದಿನ ‘ಪ್ರಾಸ್ಪೆಕ್ಟ್‌’ ಕುರಿತಾಗಲಿ ಪ್ರಸ್ತಾಪ ಮಾಡಿದ್ದನ್ನು ನಾನು ಕೇಳಿಲ್ಲ. ಅದರ ವಿಷಯದಲ್ಲಿ ಮೊದಲಿನಿಂದ ಕೊನೆಯವರೆಗೂ ಅನಾಸಕ್ತರಾಗಿಯೇ ಉಳಿದಿದ್ದಾರೆ. ಇದರ ಚಿಂತೆಯನ್ನು ಅವರೆಂದೂ ಮಾಡಿದ ಹಾಗೆ ತೋರುವುದಿಲ್ಲ. ಇಂದಿನ ವಾತಾವರಣದಲ್ಲಿ ಹೀಗಿರುವವರು ವಿರಳ.

ಇವರು ಸದಾಚಾರನಿಷ್ಠರು. ಅಂದರೆ ಒಳ್ಳೆಯ ಸ್ವಭಾವ ಒಳ್ಳೆಯ ನಡತೆ ಇತರರಲ್ಲಿ ಸೌಜನ್ಯ, ಸೌಶೀಲ್ಯ ಸ್ವಭಾವ. ಆದರೆ ಇವರ ಮತನಿಷ್ಠೆಯಲ್ಲಿ ಎಲ್ಲ ಧರ್ಮಗಳಲ್ಲಿಯೂ ಗೌರವ ತಾಳಿದ್ದಾರೆ. ತಮ್ಮ ಮತವೆಂದು ಶ್ರೀವೈಷ್ಣವ ಧರ್ಮವನ್ನೂ ಅದರ ಶ್ರೇಷ್ಠತೆಯನ್ನೂ ಕುರಿತು ಸಾಂಪ್ರದಾಯಿಕವಾದ ಮಮತೆಯನ್ನು ಅವರೆಂದಿಗೂ ತೋರಿಲ್ಲ. ಆದರೆ ಅವರ ಶ್ರೀ ವೈಷ್ಣವ ಜನ್ಮಸೂಚಕವಾದ ಒಂದೇ ಗುರುತು ಅವರ ಹಣೆಯ ಮೇಲೆ ಅವರಿರುವ ಕೆಂಪು ನಾಮ. ಅವರಿಗೆ ಮತಧರ್ಮದ ವಿಷಯದಲ್ಲಿ ಪಾಷಂಡತನ ಹಿಡಿಸುವದಿಲ್ಲ. ಅವರನ್ನು ಮತೀಯ ಪಕ್ಷಭಾವನೆಯುಳ್ಳವರೆಂದು ಯಾರೂ ಹೇಳಲಾರರು.

ಇತರರನ್ನು ನಾವು ತಿದ್ದುತ್ತೇವೆ ಎನ್ನುವುದು ಬರಿ ಭ್ರಮೆ ಎಂದು ಅವರ ಅಭಿಪ್ರಾಯ. ಸಧ್ಯ ನಮ್ಮನ್ನು ನಾವು ತಿದ್ದಿಕೊಂಡರೆ ಸಾಕು ಎಂದು ಅನೇಕ ಸಲ ಹೇಳಿದ್ದಾರೆ; ನಮಗೊಂದು ಜೀವನದಲ್ಲಿ ಸಲ್ಲಿಸಬೇಕಾದ ‘‘ಮಿಷನ್‌’’ ಇದೆ, ನಮ್ಮ ಕಾಣಿಕೆ ಬಹು ಮುಖ್ಯವಾಗಿ ಸಮಾಜಕ್ಕೆ ಅಗತ್ಯ ಅನ್ನುವ ಭಾವನೆಗಳನ್ನು ಅಹಂಕಾರದ ಬಹುಸೂಕ್ಷ್ಮ ರೂಪವೆಂದು ಡಿ.ಎಲ್‌.ಎನ್‌ ಭಾವಿಸುತ್ತಾರೆ. ನಮಗೆ ಅರಿವಾದಂತೆ, ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಹೆಚ್ಚು ಅಡಂಬರವಿಲ್ಲದೆ ಮೌನವಾಗಿ ಶಾಂತವಾಗಿ ಮಾಡುತ್ತಾ ಹೋಗುವುದಾದರೆ ಅಷ್ಟೇ ಸಾಕು ನಮ್ಮ ಬದುಕಿನ ಸಾರ್ಥಕ್ಯಕ್ಕೆ ಎನ್ನುವುದು ಡಿ.ಎಲ್‌.ಎನ್‌.ರ ‘‘ಫಿಲಾಸಫಿ’,.

ಡಿ.ಎಲ್‌.ಎನ್‌ ಅವರನ್ನು ನೋಡಿದಾಗಲೆಲ್ಲಾ ಈ ಒಂದು ಹಳೆಯ ಶ್ಲೋಕ ನೆನಪಿಗೆ ಬರುತ್ತದೆ

ಅತೀತಮನನುಸ್ಮರನ್‌ ಅಪಿಚ ಭಾವ್ಯಸಂಕಲ್ಪಯನ್‌
ಅತರ್ಕಿತ ಸಮಾಗಮಾನ್‌ ಅನುಭಾವಾಮಿ ಭೋಗಾನ್‌ ಅಹಂ

ಕಳೆದುಹೋದುದಕ್ಕೆ ವ್ಯಥೆಪಡದೆ ಮುಂದಾಗುವದನ್ನು ಕುರಿತು ಚಿಂತಿಸದೆ ಇಂದಿನದನ್ನು ಹೆಚ್ಚು ತರ್ಕಿಸದೆ ಬಾಳಿನ ಸುಖವನ್ನು ಸವಿದೇನು ಎಂದು ಇದರ ತಾತ್ಪರ್ಯ.

ಇದು ನಾನು ಕಂಡ, ನಾನು ಅರಿತ ಡಿ.ಎಲ್‌.ಎನ್‌. ನನ್ನಪ್ರಿಯ ಮಿತ್ರೊಬ್ಬರ ವಿಷಯದಲ್ಲಿ ನನ್ನ ಪ್ರೀತಿಯ ಮತ್ತು ಗೌರವದ ಕಾಣಿಕೆಯಾಗಿ ಈ ಕೆಲವು ಮಾತುಗಳನ್ನು ಹೇಳಲು ನನಗೆ ಒದಗಿದ ಅವಕಾಶಕ್ಕಾಗಿ ನಾನು ಕೃತಜ್ಞ.

* ಜ್ಞಾನೋಪಾಸಕ, ಪು. ೩೪