ಆದರ್ಶ ಪ್ರೊಫೆಸರು ಹೇಗಿರಬೇಕು? ಎಂಬ ಪ್ರಶ್ನೆಗೆ ಡಿ.ಎಲ್‌.ಎನ್‌ ಅವರಂತೆ ಎಂಬ ಉದಾಹರಣೆಯೊಂದಿಗೆ ಉತ್ತರ ಕೊಡಬೇಕಾಗುತ್ತಿದೆ. ವಿದ್ಯಾರ್ಥಿಗಳಂತೆ ಪ್ರೊಫೆಸರರ ಸಂಖ್ಯೆಯೂ ಬೆಳೆದು ಮಟ್ಟ ಕೆಳಗಿಳಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ಡಿ.ಎಲ್‌.ಎನ್‌ ಅವರ ವಿದ್ವತ್‌ ಸಾಧನೆ ಒಂದು ದಿಕ್ಸೂಚಿಯಾಗಿ ಉಳಿಯುವಂತಹದಾಗಿದೆ.        

ಪ್ರಾಚೀನ ಕನ್ನಡ ಸಾಹಿತ್ಯದ ವಿದ್ಯಾರ್ಥಿ ಜಪಿಸಬೇಕಾದ ಕಿಟಲ್‌, ರೈಸ್‌, ಆರ್‌. ನರಸಿಂಹಾಚಾರ್ಯ ಈ ಹೆಸರುಗಳೊಂದಿಗೆ ಇನ್ನೊಬ್ಬ ನರಸಿಂಹಾಚಾರ್ಯರ ಹೆಸರೂ ಸೇರುತ್ತಿದೆ.

ಹೊರನೋಟಕ್ಕೆ ಮೊದ್ದು, ಒಳನೋಟಕ್ಕೆ ಮೊನೆ ಈ ಒಂದು ಮಾತಿನಲ್ಲಿ ಡಿ.ಎಲ್‌.ಎನ್‌. ರ ವ್ಯಕ್ತಿತ್ವ ಅಡಕವಾಗುವಂತಿದೆ.

ದೇಹ ಸ್ಥೂಲ; ವೇಷ ಕಣ್ಣಿಗೆ ಕಟ್ಟುವಂತಹದಲ್ಲ; ನಗಲು ಸಾಧ್ಯವಿಲ್ಲವೆಂಬಂತಿರುವ ಗಾಂಭಿರ್ಯ ಬಗೆ ಮೊದ್ದು ಇವು ನನಗೆ ಮೊದಲು ಕಂಡ ಅವರ ಲಕ್ಷಣಗಳು. ‘ಮೊದ್ದು’ ಎಂಬ ಪದವನ್ನು ನಾನು ಸಾರ್ವಜನಿಕವಾಗಿಯೇ ಬಳಸಿದಾಗ ಅವರು ತಮ್ಮ ಮುಗುಳ್ನಗೆಯಿಂದ ಒಪ್ಪಿಗೆ ಸೂಚಿಸಿದ್ದರು. ಅನಂತರ ‘‘ಏನಯ್ಯಾ, ಎಲ್ಲರ ಇದಿರು ನನ್ನನ್ನು ಮೊದ್ದು, ಎಂದು ಕರೆದೆಯಲ್ಲಾ ! ಪರವಾಗಿಲ್ಲ ನೀನೂ’,’ ಎಂದಿದ್ದರು. ಅವರು ಬಳಸುತ್ತಿದ್ದ ಏಕವಚನ ಪ್ರಯೋಗದಲ್ಲಿ ವಾತ್ಸಲ್ಯಭಾವ ತುಂಬಿರುತ್ತಿತ್ತು.

ಸನಿಹದಿಂದ ಅವರನ್ನು ಕಾಣುವ ಅವಕಾಶ ನನಗೆ ದೊರೆತಾಗ ಸೂಕ್ಷ್ಮಗ್ರಾಹಿಯಾದ ಮನಸ್ಸು, ತೋರಿಕೆಯ ಬಗೆಗೆ ದಿವ್ಯ ನಿರ್ಲಕ್ಷ, ಆತ್ಮೀಯತೆಯನ್ನು ಕುದುರಿಸುವ ನಗೆ, ಮುಗ್ಧ ಮಗುವಿನಂತಹ ಬಗೆ, ವಿನೋದ ಪ್ರವೃತ್ತಿ ಇವುಗಳನ್ನು ಡಿ.ಎಲ್‌.ಎನ್‌ ಅವರಲ್ಲಿ ನಾನು ಕಂಡುಕೊಂಡೆ.

ಹಳೆಯ ಮೈಸೂರು ಪ್ರದೇಶದ ಸಾಹಿತಿಗಳ ಸಂಪರ್ಕ ನನಗೆ ೧೯೩೩ ರಿಂದಲೂ ಒದಗಿಬಂದಿತು. ೧೯೪೦ರ ಹೊತ್ತಿಗೆ ಅಂದು ಪ್ರಸಿದ್ಧರಾದ ಅನೇಕರೊಂದಿಗೆ ನಾನು ವಿಪುಲ ಪರಿಚಯ ಪಡೆಯುವಂತಾಯಿತು. ಡಿ.ಎಲ್‌.ಎನ್‌.ರ ಅದ್ಭುತ ಪಾಂಡಿತ್ಯದ ಬಗೆಗು ನನಗೆ ತಿಳಿದಿತ್ತು. ಬೋಧಕ ವೃತ್ತಿಯಲ್ಲಿ ಅವರ ಬರೆಹಗಳ ಪ್ರಯೋಜನವನ್ನು ನಾನು ಪಡೆದುಕೊಳ್ಳುತ್ತಿದ್ದೆ. ಸಭೆ ಸಮ್ಮೇಳನಗಳಲ್ಲಿ ಅವರನ್ನು ನೋಡಿದ್ದೆ. ಬೇರೆ ಸಾಹಿತಿಗಳೊಂದಿಗೆ ಒಮ್ಮೆ ಅವರ ನಮ್ಮ ಮನೆಗೆ ಚಹಾಪಾನಕ್ಕೆಂದು ಬಂದಿದ್ದರು. ಹೀಗಿದ್ದರೂ ನನಗೆ ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಿರಲಿಲ್ಲ. ತಾವಾಗಿಯೇ ಮುಂದುವರಿದು ಲೋಕಾಭಿರಾಮವಾಗಿ ಮಾತನಾಡಿ ಜನಪ್ರಿಯತೆ ಗಳಿಸುವ ಹವ್ಯಾಸ ಅವರದಲ್ಲವೆಂದು ನಾನು ಅರಿತುಕೊಂಡೆ. ಅಂತೆಯೆ ಅವರ ಬಗೆಗೆ ನನ್ನ ಗೌರವಭಾವ ಹೆಚ್ಚಿತು. ಪರಿಚಯ ನಿಕಟವಾದಾಗ ಅವರು ಧಾರಾಳ ಮನಸ್ಸಿನವರೆಂದು, ನಿಷ್ಕಪಟ ಸ್ನೇಹ ಪರರೆಂದು ಕಂಡುಕೊಂಡೆ. ತಮಗೆ ಖಚಿತವಾದುದನ್ನು ದೃಢವಾಗಿ ಹೇಳುತ್ತಿದ್ದರು. ಆದರೆ ಇತರರ ಅಭಿಪ್ರಾಯ ಸರಿಯೆಂದು ಕಂಡುಬಂದಾಗ ಅದನ್ನು ಒಪ್ಪಿಕೊಳ್ಳುವ ಪ್ರಾಂಜಲತೆಯೂ ಅವರದಾಗಿತ್ತು. ತಮ್ಮದೇ ಸರಿಯೆಂಬ ಧಾರ್ಷ್ಟ್ಯವನ್ನು ಅವರು ತೋರುತ್ತಿರಲಿಲ್ಲ. ಕೃತಕ ಸೌಜನ್ಯ, ನಾಟಕೀಯತೆಗಳು ಅವರತ್ತ ಸುಳಿಯುತ್ತಿರಲಿಲ್ಲ. ನೈತಿಕ ಧೈರ್ಯ, ಬೌದ್ಧಿಕ ಪ್ರಾಮಾಣಿಕತೆ, ವಿಶಾಲ ಮನೋಭಾವ ಇವುಗಳಲ್ಲಿ ಅವರನ್ನು ಸರಿಗಟ್ಟುವವರು ವಿರಳವೆಂಬ ಅನುಭವ ನನ್ನದಾಗಿದೆ.

ಹೊರ ಜಗತ್ತಿನಲ್ಲಿ ಗೆಲುವನ್ನು, ಅಧಿಕಾರವನ್ನು ಪಡೆಯಲು ಹಾತೊರೆಯುವವರ ಬಗೆಗೆ ನಾವು ಆಗಾಗ ಮಾತನಾಡುತ್ತಿದ್ದೆವು. ಸ್ವಪ್ರಯೋಜನಕ್ಕೆಂದು ಅವರವರಿಗೆ ಅವರವರಂತೆ ಕಾಣಿಸಿಕೊಳ್ಳುವ ಪ್ರಯತ್ನ ಲಾಭಕ್ಕಾಗಿ ಮೌಲ್ಯಗಳನ್ನು ಕಡೆಗಣಿಸುವ ದೃಷ್ಟಿ. ಆತ್ಮವಂಚನೆ, ಜನರ ದೌರ್ಬಲ್ಯವನ್ನು ಪ್ರೋತ್ಸಾಹಿಸುವ ಮನೋಭಾವಗಳನ್ನು ಅವರು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಿದ್ದರು. ಈ ದಿಸೆಯಲ್ಲಿ ಸ್ವಕೀಯ ಪರಕೀಯ ಎಂಬ ವ್ಯತ್ಯಾಸವನ್ನು ಗಣಿಸುತ್ತಿರಲಿಲ್ಲ. ಮೌಲ್ಯಗಳ ಬಗೆಗೆ ಅವರ ದೃಷ್ಟಿ ವಸ್ತುನಿಷ್ಠವಾದುದಾಗಿತ್ತು. ಅವರ ಒಡನಾಟದಲ್ಲಿ ನಾನು ಡಿ.ಎಲ್‌.ಎನ್‌. ಶ್ರೇಷ್ಠ ಮೌಲ್ಯಾಧಾರರೆಂಬುದನ್ನು ಮನವರಿಕೆ ಮಾಡಿಕೊಂಡೆ.

ಧಾರಾಳವಾದ, ಲೋಕಾಭಿರಾಮವಾದ ಮಾತುಗಳಿಂದ, ಕಣ್ಣು ಕೋರೈಸುವ ವೇಷದಿಂದ, ಸ್ವಯಂಪ್ರತಿಷ್ಠೆ ಸ್ವಯಂಪ್ರಚಾರಗಳಿಂದ ಜನರ ಮೇಲೆ ಪ್ರಭಾವ ‍ಬೀರುವ ಹವ್ಯಾಸ ಕೆಲವರಿಗೆ ಇರುವುದುಂಟು. ತಮಗೆ ತಿಳಿದುದಕ್ಕಿಂತ ಹೆಚ್ಚಾಗಿ ತಿಳಿದಿದೆಯೆಂಬ ಪರಿಣಾಮವನ್ನುಂಟು ಮಾಡುವ ದಿಸೆಯಲ್ಲಿ ಮಾತನಾಡುವವರೂ ಇರುತ್ತಾರೆ. ವಿದ್ಯಾರಂಗದಲ್ಲಿ ಸೇವೆ ಕೈಕೊಂಡಿದ್ದರೂ ಇನ್ನಿತರ ಚಟುವಟಿಕೆಗಳ ಮೂಲಕ ಪ್ರತಿಷ್ಠೆ ಪಡೆಯುವ ಹಂಬಲದವರೂ ಇರುತ್ತಾರೆ. ಮನವೊಂದು ಮಾತೊಂದು, ಎಂಬ ರೀತಿಯನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ವಿದ್ಯಾರಂಗದಲ್ಲಿಯೂ ರಾಜಕೀಯವನ್ನು, ಕೊಳು ಕೊಡೆಯ ವ್ಯವಹಾರವನ್ನು ತರುವವರೂ ಇದ್ದಾರೆ. ಇತರರ ಹೆಸರನ್ನು ತೊಡೆದು ಹಾಕಿ ತಮ್ಮದೊಂದನ್ನೇ ಮೆರೆಯಿಸುವವರನ್ನೂ ಕಾಣಬಹುದು. ಪ್ರೊ.ಡಿ.ಎಲ್‌. ನರಸಿಂಹಾಚಾರ್ಯರು ಈ ಯಾವ ಗುಂಪಿಗೂ ಸೇರಿದವರಾಗಿರಲಿಲ್ಲ. ವಿದ್ಯಾರಂಗದ ಪಾಂಡಿತ್ಯವನ್ನು ಕಾಯ್ದುಕೊಂಡು ಬಂದ ಪ್ರೊಫೆಸರರವರು. ಕೇವಲ ವಿದ್ವತ್‌ ಸಾಧನೆಯಲ್ಲಿ ತೊಡಗಿ ಜನಪ್ರಿಯತೆಯತ್ತ ಗಮನ ಕೊಡದೆ ಬಾಳಿನ ಹಿರಿಯ ಮೌಲ್ಯಗಳ ಆರಾಧಕರಾಗಿ ಉನ್ನತ ವ್ಯಕ್ತಿತ್ವವನ್ನು ಅವರು ಗಳಿಸಿಕೊಂಡರು. ಚಲಿಸುತ್ತಿರುವ ಕೋಶ, ಪಾಂಡಿತ್ಯದ ಪಟ್ಟದಾನೆ, ಆಧುನಿಕ ಶಬ್ದ ಬ್ರಹ್ಮ, ಹಳಗನ್ನಡ ಸಾಹಿತ್ಯಕ್ಕೆ ಪ್ರಮಾಣ ಪುರುಷ ಇತ್ಯಾದಿ ಪ್ರಶಸ್ತಿಗಳಿಗೆ ಪಾತ್ರರಾದವರು. ಡಿ.ಎಲ್‌.ಎನ್‌ ಇಂತಹರ ಅಕಾಲಿಕ ನಿಧನದಿಂದಾಗಿ ಕನ್ನಡ ಭಾಷಾ ಸಾಹಿತ್ಯಕ್ಕೆ, ವಿಶಾಲ ವಿದ್ವತ್‌ ರಂಗಕ್ಕೆ ತುಂಬಬಾರದ ಹಾನಿಯಾಗಿದೆ. ಮನದಂತೆ ಮಾತಿರುವ, ಧಾರಾಳ ಮನೋಭಾವದ, ನಿಷ್ಕಪಟ ವ್ಯವಹಾರದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡು ನಾನು ದಃಖಕ್ಕೆ ಈಡಾಗಿದ್ದೇನೆ.

ಮೈಸೂರಿನ ಒಂದು ಸಭೆಯಲ್ಲಿ ಅವರನ್ನು ಕುರಿತು ಮಾತನಾಡುವಾಗ ನಾನು ಹೇಳಿದ್ದೆ. ‘ನೀವು ಅವರನ್ನು ಡಿ.ಎಲ್‌.ನರಸಿಂಹಾಚಾರ್ಯ ಎಂದು ಕರೆಯುತ್ತೀರಿ, ಅವರು ಧಾರವಾಡ ಪ್ರದೇಶದವರಾಗಿದ್ದರೆ ನಾವು ಅವರನ್ನು ಪ್ರೊ. ದೊಡ್ಡಬೆಲೆ (‘‘ಡಿ’’ ಎಂದು ‘‘ದೊಡ್ಡ ಬೆಲೆ’’ ಎಂಬ ಊರ ಹೆಸರಿನ ಪ್ರಥಮಾಕ್ಷರ) ಎಂದು ಕರೆಯುತ್ತಿದ್ದೆವು.’ ಹೌದು ಪ್ರೊ. ನರಸಿಂಹಾಚಾರ್ಯರು ನಿಜಕ್ಕೂ ‘ದೊಡ್ಡಬೆಲೆ’ ಯವರು. ಅವರ ವಾಙ್ಮಯ ತಪಸ್ಸು ಅಸಾಧಾರಣವಾದುದು. ಹಳಗನ್ನಡದಲ್ಲಿ ಪರಿಣತಿ. ಹಲವಾರು ಭಾಷೆಗಳ ಜ್ಞಾನ, ಉನ್ನತ ಮಟ್ಟದ ಸಂಶೋಧಕ, ಭಾಷಾಶಾಸ್ತ್ರ, ಶಾಸನ ಸಾಹಿತ್ಯ, ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾದನೆ, ರಸವಿಮರ್ಶೆ, ಕ್ಷಿಷ್ಟ ಶಾಸ್ತ್ರ ಇತ್ಯಾದಿಗಳಲ್ಲಿ ಅವರು ಅಧಿಕಾರ ಸಂಪನ್ನರಾಗಿದ್ದರು. ಅವರ ಕೃತಿಗಳ ಪಾತ್ರ ಹಿರಿದು.

ನರಸಿಂಹಾಚಾರ್ಯರ ಹೇಳಿಕೆಯೆಂದರೆ ಎಲ್ಲರೂ ವಿಶ್ವಾಸಾರ್ಹವೆಂದು ಒಪ್ಪಿಕೊಳ್ಳುವ ಸಂದರ್ಭವಿರುತ್ತಿತ್ತು. ದೇಹಾಲಸ್ಯದಿಂದಾಗಿ ಅವರು ಕನ್ನಡ ನಿಘಂಟು ಸಮಿತಿಯ ಸಭೆಗಳಿಗೆ ಈಚೆಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಯಾವುದೇ ಪದದ ಬಗೆಗೆ ನಿರ್ಣಯ ಕೈಕೊಳ್ಳಲು ಸಮಿತಿಗೆ ಸಾಧ್ಯವಿಲ್ಲದಾಗ ನರಸಿಂಹಾಚಾರ್ಯರನ್ನು ಕಂಡು ನಿರ್ಧರಿಸಬೇಕಾಗುತ್ತಿತ್ತು. ದೇಹಾಲಸ್ಯವನ್ನು ಗಮನಿಸದೆ ಅವರು ನಿಘಂಟು ರಚನೆಗಾಗಿ ಅತಿಯಾಗಿ ಶ್ರಮಿಸಿ ಕೊನೆಯುಸಿರು ಎಳೆದರು. ಕೊನೆಯ ದಿನಗಳಲ್ಲಿ ಈ ದಿಸೆಯಲ್ಲಿ ಒತ್ತಾಯ ತಂದ ಹೊಣೆ ತಮ್ಮದೆಂದು ಕರ್ತವ್ಯ ನಿಷ್ಠುರರಾದ ಅವರ ಆತ್ಮೀಯ ಸ್ನೇಹಿತರೊಬ್ಬರು ಹೇಳುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಅಂತು ಪ್ರೊ. ನರಸಿಂಹಾಚಾರ್ಯರು ಕನ್ನಡ ನಿಘಂಟು ರಚನೆಯ ಕಾರ್ಯದಲ್ಲಿ ಹುತಾತ್ಮರಾದರು. ಈ ಸಂಗತಿ ಚರಿತ್ರಾರ್ಹವಾದುದು.

ನರಸಿಂಹಾಚಾರ್ಯರಂತೆ ‘‘ದೊಡ್ಡಬೆಲೆ’’ ಯ ಎತ್ತರಕ್ಕೆ ಬರುವವರನ್ನು ನಾವಿನ್ನು ಕಾಣಬೇಕಾಗಿದೆ. ಇಂದಿನ ಬಾಳಿನ ಸಂಕೀರ್ಣತೆಯಲ್ಲಿ, ಕೃತಜ್ಞತೆಯಲ್ಲಿ ಡಿ.ಎಲ್‌.ಎನ್‌ ರಂತಹ ಸರಳ ಜೀವಿಗಳು ದುರ್ಲಭ. ಸಜ್ಜನರ ಸಂಖ್ಯೆಯು ಕಡಿಮೆಯಾಗುತ್ತಿರುವ, ದೊಡ್ಡಬೆಲೆಗಳ ಅಪಮೌಲ್ಯ ನಡೆದಿರುವ ಈ ಕಾಲದಲ್ಲಿ ನರಸಿಂಹಾಚಾರ್ಯರಂತಹರು ಚಿರಸ್ಮರಣೀಯರು.

ಸಾವಿರಾರು ವಿದ್ಯಾರ್ಥಿಗಳ, ಹಲವಾರು ಆತ್ಮೀಯರ, ಸ್ನೇಹಿತರ ಹೃದಯಮಂದಿರದಲ್ಲಿ ಭದ್ರವಾದ ಸ್ಥಾನ ಪಡೆದ ನರಸಿಂಹಾಚಾರ್ಯರು ಅಮರತ್ವ ಪಡೆದಿದಾರೆ. ಇಂತಹವರ ಆತ್ಮಕ್ಕೆ ಶಾಂತಿಯನ್ನು ನನ್ನಂತಹವರು ಕೋರಬೇಕಾದುದು ಅನಗತ್ಯವೆಂದು ನಾನು ಭಾವಿಸುತ್ತೇನೆ.

ವಿದ್ವತ್‌ ಸಾಧನೆಯಲ್ಲಿಯ ತಪಸ್ಸು, ಮೌಲ್ಯಾರಾಧನೆಯಲ್ಲಿ ಉದಾತ್ತದೃಷ್ಟಿ, ಸರಳ ನಿಷ್ಕಪಟ ಜೀವನ ಈ ದಿಸೆಯಲ್ಲಿ ಡಿ.ಎಲ್‌.ಎನ್‌ ಅವರ ಆದರ್ಶವನ್ನು ನಾವೆಲ್ಲ ರೂಢಿಸಿಕೊಳ್ಳುವ ಕರ್ತವ್ಯ ನಮ್ಮ ಪಾಲಿನದಾದಿಗೆ.

* ಕನ್ನಡ ನುಡಿ (ಸಂ. ೩೪, ಸಂಚಿಕೆ ೧೫.೧೬) ಪು. ೪೪