ನಾನು ತುಮಕೂರಿನ ಕೆಲವು ಮಿತ್ರರೊಂದಿಗೆ ಮೇ ತಿಂಗಳು ೮ನೇ ತಾರೀಖು ತಾಲ್ಲೂಕಿನ ಸಂಪಿಗೆ ಎಂಬಲ್ಲಿಗೆ ರಥೋತ್ಸವವನ್ನು ನೋಡಲು ಹೋಗಿದ್ದೆ. ಆ ದಿನ ಮಧ್ಯಾಹ್ನ ೪ ಗಂಟೆ ಸಮಯದಲ್ಲಿ ಶ್ರೀ ಕೆ.ವಿ. ರಾಘವಾಚಾರ್ಯರ ಬಂಧುಗಳೊಬ್ಬರು ಅಲ್ಲಿ ಸಿಕ್ಕಿದರು. ಹಿಂದಿನ ದಿನ ಎಂದರೇ ೭ನೇ ತಾರೀಖು ನಾನು ಮೈಸೂರಿಗೆ ಹೋಗಿ ಕಾಯಿಲೆಯಿಂದಿದ್ದ ಶ್ರೀ ಡಿ.ಎಲ್‌. ನರಸಿಂಹಾಚಾರ್ಯರನ್ನು ನೋಡಿಕೊಂಡು, ಹಾಗೆಯೇ ರಾಘವಾಚಾರ್ಯರನ್ನು ಕಂಡಿದ್ದ ವಿಷಯವನ್ನು ಅವರಿಗೆ ಹೇಳಲು ಹೋದಾಗ ಅವರು ನರಸಿಂಹಾಚಾರ್ಯರ ನಿಧನವಾರ್ತೆಯನ್ನು ತಿಳಿಸಿದರು. ಇಪ್ಪತ್ತೆಂಟೇ ಗಂಟೆಗಳ ಹಿಂದೆ ನರಸಿಂಹಾಚಾರ್ಯರನ್ನು ಅವರ ಮನೆಯಲ್ಲಿ ನೋಡಿ ಅವರಿಂದ ಆಗಿನ ಮಂಪರು ಸ್ಥಿತಿಯಲ್ಲಿಯೂ ಗುರುತಿಸಲ್ಪಟ್ಟಿದ್ದ ನನಗೆ ಈ ಘೋರ ವಾರ್ತೆಯನ್ನು ನಂಬಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಇದ್ದ “ಪ್ರಜಾವಾಣಿ” ಪತ್ರಿಕೆಯಲ್ಲಿ ಈ ವಿಷಯವನ್ನು ಓದಿದಾಗ ಅನಿರೀಕ್ಷಿತವಾದ ದುಃಖದ ಸಂಗತಿಯನ್ನು ನಂಬಲೇಬೇಕಾಯಿತು.

ಮಾನ್ಯ ಮಿತ್ರ ಡಾ. ನರಸಿಂಹಾಚಾರ್ಯರ ನಿಧನದಿಂದ ನನ್ನ ಬಾಲ್ಯದಾರಭ್ಯ ಒಡನೆಯೆ ಇಷ್ಟು ವರ್ಷಗಳ ಕಾಲವು ಆತ್ಮೀಯತೆಯಿಂದಿದ್ದ ಕೆಲವೇ ಸ್ನೇಹಿತರಲ್ಲಿ ಕಡೆಯವರನ್ನು ಕಳೆದುಕೊಂಡಂತಾಯಿತು. ಇಷ್ಟೇ ಆಪ್ತವಾಗಿದ್ದ ಬೆಂಗಳೂರು ಚಾಮರಾಜ ಪೇಟೆ ಖ್ಯಾತ ವೈದ್ಯರು ಡಾ. ಕೆ. ರಾಮರಾಯರು ಏಪ್ರೀಲ್‌ ತಿಂಗಳು ೧೧ನೇ ತಾರೀಖು ನಿಧನರಾದರು. ಒಂದು ತಿಂಗಳೊಳಗೆ ಈ ಇಬ್ಬರು ಆತ್ಮೀಯ ಮಿತ್ರರನ್ನು ಕಳೆದುಕೊಂಡ ನನ್ನ ದುರ್ದೈವವನ್ನು ಎಷ್ಟು ಹೇಳಿದರೂ ತೀರದು.

ನನ್ನ ಮತ್ತು ನರಸಿಂಹಾಚಾರ್ಯರ ಗೆಳೆತನ ೧೯೧೯ರಲ್ಲಿ ಅವರು ತುಮಕೂರು ಗೌರ್ನಮೆಂಟ್‌ಎ.ಪಿ. ಸ್ಕೂಲಿನಲ್ಲಿ ಕಡೆಯ ವರ್ಷದಲ್ಲೂ, ನಾನೂ ಅದೇ ಊರಿನ ಕೊಲಿಜಿಯೇಟ್‌ ಹೈಸ್ಕೂಲಿನಲ್ಲಿ ಮೊದಲ ವರ್ಷದ ತರಗತಿಯಲ್ಲೂ ಇದ್ದ ಕಾಲದಿಂದ ಎಂದರೆ ಸುಮಾರು ೫೨ ವರ್ಷಗಳ ದೀರ್ಘಕಾಲದ್ದು. ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯಲ್ಲಿ ತಾ. ೨೭.೧೦.೧೯೦೬ರಲ್ಲಿ ಜನಿಸಿದ ಅವರು ಅದೇ ಜಿಲ್ಲೆಯ ಪಾವಗಡ, ಸಿರಾ ಮುಂತಾದ ತಾಲ್ಲೂಕು ಕೇಂದ್ರಗಳ ಶಾಲೆಗಳಲ್ಲಿ ಓದಿ ತುಮಕೂರಿಗೆ ಬಂದಿದ್ದರು. ನಮ್ಮಿಬ್ಬರ ಮನೆಗಳು ತುಮಕೂರಿನ ಆಚಾರ್ಯರ ಬೀದಿಯ ಸಮೀಪದಲ್ಲಿದ್ದವು. ಅವರು ಹೈಸ್ಕೂಲಿಗೆ ಬಂದ ಮೇಲೆ ನಮ್ಮ ಗೆಳೆತನ ಹೆಚ್ಚಿತು. ಒಟ್ಟಿಗೇ ಹೈಸ್ಕೂಲಿಗೆ ಹೋಗುತ್ತಿದ್ದೆವು. ಜೊತೆಯಲ್ಲಿ ಆಟವಾಡುತ್ತಿದ್ದೆವು.

ಶ್ರೀಯುತರು ಹೈಸ್ಕೂಲು ವಿದ್ಯಾಭ್ಯಾಸವನ್ನು ೧೯೨೪ರಲ್ಲಿ ಮುಗಿಸಿಕೊಂಡು ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರು ಸೆಂಟ್ರಲ್‌ ಕಾಲೇಜಿಗೆ ಸೇರಿದರು. ಮೂರು ವರ್ಷಗಳ ಕಾಲ ಸೆಂಟ್ರಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೨೭ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ದ್ವಿತೀಯ ಭಾಷೆಯಾದ ಕನ್ನಡದಲ್ಲಿ ದೇಶಕ್ಕೇ ಮೊದಲಿನವರಾಗಿ ಬಂದು ಸುವರ್ಣ ಪದಕ ಮತ್ತು ಬಹುಮಾನಗಳನ್ನು ಗಳಿಸಿದರು.

ಬಿ.ಎ. ಪರೀಕ್ಷೆಯನ್ನು ತೇರ್ಗಡೆಯಾದ ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅದೇ ವರ್ಷ ಪ್ರಾರಂಭವಾದ ಎಂ.ಎ. ತರಗತಿಗೆ ಸೇರಿ ೧೯೨೯ರಲ್ಲಿ ಎಂ.ಎ. ಪದವೀಧರರಾದರು. ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ವರ್ಗದವರಲ್ಲಿ ಪ್ರಥಮ ಸ್ಥಾನವನ್ನು ನರಸಿಂಹಾಚಾರ್ಯರು ಪಡೆದು ವೈಸ್‌ಛಾನ್ಸೆಲರ್‌ ಪದಕವನ್ನು ಗಳಿಸಿದುದು ಕನ್ನಡ ವಿಭಾಗಕ್ಕೇ ಕೀರ್ತಿ ಬಂದಂತಾಯಿತು.

ನರಸಿಂಹಾಚಾರ್ಯರು ಎಂ.ಎ. ತರಗತಿಯಲ್ಲಿ ಓದುತ್ತಿದ್ದಾಗ ಸ್ವಲ್ಪಕಾಲ ಬಿಟ್ಟು ಹೋಗಿದ್ದ ನಮ್ಮ ಒಡನಾಟ ಮತ್ತೆ ಕೂಡಿ ಬಂತು. ನಾನು ಆಗ ಎಂದರೆ ೧೯೨೮ರಿಂದ ೧೯೩೨ರ ಅವಧಿಯಲ್ಲಿ ಭೂವಿಜ್ಞಾನ ಇಲಾಖೆಯಲ್ಲಿ ಉದ್ಯೋಗದಿಂದಿದ್ದು ಕಡಕೊಳದ ಬಳಿ ಇರುವ ತಳೂರು ಎಂಬಲ್ಲಿ ಕ್ರೊಮೈಟು ಗಣಿಯ ಅಧಿಕಾರಿಯಾಗಿದ್ದೆ. ಗಣಿಯ ಕೆಲಸದ ನಿಮಿತ್ತ ಆಗಾಗ್ಗೆ ಮೈಸೂರಿಗೆ ಹೋಗಿ ಬರಬೇಕಾಗಿತ್ತು. ಹಾಗೆ ಹೋದಾಗಲೆಲ್ಲಾ ನರಸಿಂಹಾಚಾರ್ಯರವರಲ್ಲಾಗಲಿ ಇಲ್ಲವೇ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ತೀ.ನಂ ಶ್ರೀಕಂಠಯ್ಯನವರಲ್ಲಾಗಲೀ ಉಳಿಯುತ್ತಿದ್ದೆ. ಅವರುಗಳೂ ಆಗಾಗ್ಗೆ ತಳೂರಿಗೆ ಬರುತ್ತಿದ್ದರು.

ಎಂ. ಎ. ಪಧವೀಧರರಾದ ಕೂಡಲೇ ನರಸಿಂಹಾಚಾರ್ಯರಿಗೆ ಗೌರ್ನಮೆಂಟ ಓರಿಯೆಂಟಲ್‌ ಲೈಬ್ರರಿಯಲ್ಲಿ ಮೊದಲು ಸಂಶೋಧನಾ ವೇತನದಿಂದಲೂ, ಆಮೇಲೆ ಪಂಡಿತರಾಗಿಯೂ ಉದ್ಯೋಗ ದೊರಕಿತು. ಅನಂತರ ಅವರು ಮಹಾರಾಜ ಕಾಲೇಜಿಗೆ ಪಂಡಿತರಾಗಿ ಮೊದಲು ಬಂದು ಕಾಲಕ್ರಮದಲ್ಲಿ ಅಧ್ಯಾಪಕ, ಉಪಪ್ರಾಧ್ಯಾಪಕರಾಗಿ ಬಡ್ತಿ ಪಡೆದು ಕೊನೆಯಲ್ಲಿ ಆರೇಳು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸಮಾಡಿ ೧೯೬೨ರ ಮಾರ್ಚಿನಲ್ಲಿ ನಿವೃತ್ತರಾದರು. ಅಧಿಕಾರಾವಧಿಯಲ್ಲಿದ್ದಾಗ ಕೆಲವು ಕಾಲ ಸೆಂಟ್ರಲ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿಯೂ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಕನ್ನಡ ಕೋಶದ ಸಂಪಾದಕರಾಗಿಯೂ ಕೆಲಸ ಮಾಡಿದರು. ನಿವೃತ್ತರಾದ ಮೇಲೆ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ನೇತೃತ್ವದಲ್ಲಿ ಪ್ರಾಧ್ಯಾಪಕರಾಗಿ ಸಂಶೋಧನಾ ಕೆಲಸದಲ್ಲಿ ತೊಡಗಿದ್ದರು. ಕನ್ನಡ ಕನ್ನಡ ನಿಘಂಟುವಿನ ಕೆಲಸದಲ್ಲಿ ಮೊದಲಿನಿಂದಲೂ ಸಂಬಂಧದಿಂದಿದ್ದು ೧೯೬೬ರಿಂದ ನಿಘಂಟು ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ನಿಧನರಾಗುವವರೆಗೂ ನಿಘಂಟಿನ ರೂಪ, ರೇಖೆ, ಗುಣಗಳನ್ನು ನಿರ್ದೇಶಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನರಸಿಂಹಾಚಾರ್ಯರು ವಿದ್ಯಾರ್ಥಿಯಾದಾಗಿನಿಂದ ನಿಧನರಾಗುವವರೆಗೂ ಕನ್ನಡ ಭಾಷೆಯ ವ್ಯಾಸಂಗ, ಏಳಿಗೆ ಮತ್ತು ಪ್ರಚಾರ ಕಾರ್ಯಗಳಲ್ಲಿ ಅತಿಯಾಗಿ ಶ್ರಮಿಸಿದರು. ಭಾಷಾಶಾಸ್ತ್ರದ ಮೇಲೆ ಅದ್ಭುತ ಪ್ರಭುತ್ವವನ್ನು ಪಡೆದಿದ್ದರು. ಸೋದರ ಭಾಷೆಗಳಾದ ತಮಿಳು, ತೆಲುಗು, ಸಂಸ್ಕೃತ, ಇಂಗ್ಲಿಷ್‌ಗಳಲ್ಲಿಯೂ ಅವರಿಗೆ ಪೂರ್ಣ ಪರಿಶ್ರಮವಿದ್ದಿತು. ಅವರು ಸಾಧಾರಣವಾಗಿ ನೋಡದಿದ್ದ, ಓದದಿದ್ದ ಕನ್ನಡ ಗ್ರಂಥಗಳೇ ಇಲ್ಲವೆನ್ನಬಹುದು. ಹಲವಾರು ಗ್ರಂಥಗಳನ್ನೂ, ಲೇಖನಗಳನ್ನೂ ಬರೆದಿರುವರಲ್ಲದೆ ನೂರಾರು ಕಡೆ ಉಪನ್ಯಾಸ ಮಾಡಿದ್ದಾರೆ. ಒಟ್ಟಿನಲ್ಲಿ ಅವರ ವಿದ್ವತ್ತು ಸರ್ವತೋಮುಖವಾಗಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶಾಶ್ವತವಾಗಿ ನಿಲ್ಲುವಂತಹ ಕೊಡುಗೆಗಳನ್ನು ನೀಡಿದೆ.

ಜನತೆಯೂ, ದೇಶವೂ ನರಸಿಂಹಾಚಾರ್ಯರನ್ನು ಸೂಕ್ತವಾಗಿ ಗೌರವಿಸಿದೆ. ೧೯೬೦ರಲ್ಲಿ ಬೀದರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅವರ ಗೆಳೆಯರೂ, ವಿದ್ಯಾರ್ಥಿಗಳೂ ಅವರಿಗೆ ಜ್ಞಾನೋಪಾಸಕ ಎಂಬ ಹೊತ್ತಗೆಯನ್ನು ಅರ್ಪಿಸಿದರು. ೧೯೬೭ರಲ್ಲಿ ನರಸಿಂಹಾಚಾರ್ಯರ ಮಿತ್ರರೂ ಶಿಷ್ಯರೂ ಸೇರಿ ಉಪಾಯನ ಎಂಬ ಪ್ರಬಂಧಗಳ ಬೃಹತ್ ಸಂಪುಟವೊಂದನ್ನು ಸಮಾರಂಭವೊಂದರಲ್ಲಿ ಒಪ್ಪಿಸಿದರು. ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದವರು ಅವರಿಗೆ ಗೌರವ ಡಿ.ಲಿಟ್ ಪದವಿಯನ್ನು ಕೊಟ್ಟು ಗೌರವಿಸಿದರು. ಮೈಸೂರು ಸಾಹಿತ್ಯ ಅಕಾಡೆಮಿಯವರು ಕೂಡ ಅವರನ್ನು ಸನ್ಮಾನಿಸಿದ್ದಾರೆ. ಇದಲ್ಲದೆ ಹಲವು ಸಂಘ ಸಂಸ್ಥೆಗಳೂ ಅವರು ಮಡಿದ ಉತ್ತಮವಾದ ಕೆಲಸವನ್ನು ಪ್ರಶಂಸಿಸಿ ಗೌರವ ಸಲ್ಲಿಸಿವೆ.

ನರಸಿಂಹಾಚಾರ್ಯರ ವ್ಯಕ್ತಿತ್ವವನ್ನು ಕುರಿತು ಹೇಳುವದಾದರೆ ಅವರು ಅತಿ ದೊಡ್ಡ ಮನುಷ್ಯರು, ಸ್ನೇಹಪರರು, ಅಷ್ಟು ವಿದ್ಯವಿದ್ದರೂ ಸ್ವಲ್ಪವೂ ಅಹಂಕಾರ, ಆಡಂಬರವಿಲ್ಲದವರಾಗಿದ್ದರು. ಜನರಲ್ಲಿ ಪ್ರೀತಿ ವಿಶ್ವಾಸಗಳನ್ನು ತೋರಿ ಅವರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವ ಅವರಲ್ಲಿತ್ತು. ಹೊರಗೆ ನೋಡಲು ಒಂದೊಂದು ಸಲ ನಿಷ್ಠುರವಾಗಿ ಕಂಡುಬಂದರೂ ಸ್ವಲ್ಪ ಬಳಕೆನಂತರ ಅವರ ಮೃದು ಸ್ವಭಾವ ಗೊತ್ತಾಗುತ್ತಿತ್ತು. ಯಾವಾಗಲೂ ಸ್ನೇಹಪರರು. ಬಿಗು ಸ್ವಭಾವ ಅವರಲ್ಲಿರಲಿಲ್ಲ. ಕೆಲಸದಲ್ಲಿ ನಿಷ್ಠೆ, ನಿರ್ದಾಕ್ಷಿಣ ಪ್ರವೃತ್ತಿ, ಸರಳವಾದ ನಿಯಮಗಳು ಅವರಲ್ಲಿ ರೂಢಮೂಲವಾಗಿದ್ದುವು. ಒಟ್ಟಿನಲ್ಲಿ ನರಸಿಂಹಾಚಾರ್ಯರು ಭೂಮಿತೂಕದ ಮನುಷ್ಯರು. ಅಂತಹವರು ಸಿಗುವುದು ವಿರಳ.

ನರಸಿಂಹಾಚಾರ್ಯರಿಗೆ ಆಟಪಾಟಗಳಲ್ಲಿಯೂ ಆಸಕ್ತಿ ಇತ್ತು. ಚಿಕ್ಕಂದಿನಲ್ಲಿ ಗೋಲಿ ಆಟದಲ್ಲಿ ನಿಸ್ಸೀಮರಾಗಿ ನಮ್ಮನೆಲ್ಲರನ್ನೂ ಸುಲಭವಾಗಿ ಸೋಲಿಸುತ್ತಿದ್ದರು. ಫುಟ್‌ಬಾಲ್‌ನಲ್ಲಿ ಒಳ್ಳೆಯ ಆಟಗಾರರಾಗಿದ್ದು Rightout ಸ್ಥಾನದಲ್ಲಿ ವೇಗವಾಗಿ ಓಡುತ್ತಿದ್ದುದ್ದು ನನಗೆ ಜ್ಞಾಪಕಕ್ಕೆ ಬರುತ್ತಿದೆ. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಟೆನ್ನಿಸ್ ಆಡುತ್ತಿದ್ದರು.

ಗುರುಹಿರಿಯರಲ್ಲಿ ನರಸಿಂಹಾಚಾರ್ಯರಿಗೆ ಬಹಳ ಭಕ್ತಿಗೌರವ ವಿಶ್ವಾಸವಿದ್ದಿತು. ಅವರ ಗುರುಗಳಲ್ಲಿ ಪ್ರಾಧ್ಯಾಪಕರುಗಳಾಗಿದ್ದ ಬಿ.ಎಂ. ಶ್ರೀಕಂಠಯ್ಯನವರು, ಟಿ.ಎಸ್. ವೆಂಕಣ್ಣಯ್ಯನವರು, ಎ.ಆರ್. ಕೃಷ್ಣಾಶಾಸ್ತ್ರಿಗಳವರು ಮತ್ತು ಸಿ. ಶ್ರೀಕಂಠಯ್ಯನವರಲ್ಲಿ ಬಹಳ ಗೌರವ. ಇದಕ್ಕೆ ನಿದರ್ಶನವಾಗಿ ಸಿದ್ಧರಾಮ ಚಾರಿತ್ರ ಪುಸ್ತಕದ ಮುನ್ನುಡಿಯಲ್ಲಿ ಟಿ.ಎಸ್. ವೆಂಕಣ್ಣಯ್ಯನವರ ನಿಧಾನಾನಂತರ ಅವರು (ವೆಂಕಣ್ಣಯ್ಯನವರು) ನಿರ್ದೇಶಿಸಿದ್ದ ಕಾರ್ಯಪೂರೈಕೆ ಬಗ್ಗೆ ನರಸಿಂಹಾಚಾರ್ಯರ ಪ್ರಶಂಸೆಯನ್ನೂ ನೋಡಬಹುದು. “ಅವರ ವೈದುಷ್ಯ, ವಿಮರ್ಶೆ, ರಸಿಕತೆಗಳು ಪಕ್ವವಾಗಿ ಪರಿಮಳಿಸುತ್ತಿದ್ದುವು. ಫಲವನ್ನು ಪಡೆಯುವ ಭಾಗ್ಯ ನಮ್ಮ ನಾಡಿಗಿಲ್ಲವಾಯಿತು” ಎಂದು ಹೇಳಿದ್ದಾರೆ. ವೆಂಕಣ್ಣಯ್ಯನವರ ನಿಧನಕ್ಕೆ “ನಮ್ಮ ಕಣ್ಣುಗಳು ನೀರು ಕರೆದು ಬಾತುವು” ಎಂದು ಹೇಳಿರುವುದು ನರಸಿಂಹಾಚಾರ್ಯರಿಗೆ ಅವರ ಗುರುಗಳಲ್ಲಿದ್ದ ಪ್ರೀತಿ, ಅಭಿಮಾನ ಗೌರವಗಳನ್ನು ವ್ಯಕ್ತಪಡಿಸುತ್ತದೆ.

ಇನ್ನೊಂದು ನಿದರ್ಶನ ಅವರ ಗುರುಗಳು ಪ್ರಾಧ್ಯಾಪಕ ಬಿ.ಎಂ. ಶ್ರೀಕಂಠಯ್ಯನವರು ಆಗ ಕರೆಯಲ್ಪಡುತ್ತಿದ್ದ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಚುನಾಯಿತರಾದರು. ಅವರು ಅಧಿಕಾರವನ್ನು ವಹಿಸಿಕೊಂಡ ಕೆಲವೇ ಕಾಲದಲ್ಲಿ ಪರಿಷತ್ತಿನ ಹೆಸರನ್ನು “ಕರ್ನಾಟಕ ಸಾಹಿತ್ಯ ಪರಿಷತ್ತು” ಎಂಬುದಾಗಿ ಬದಲಾಯಿಸಿದರು. ಈ ಬದಲಾವಣೆಯಿಂದ ಬಹಳ ಗೊಂದಲವೆದ್ದು ಹಳೆಯ ಮತ್ತು ಹೊಸ ಹೆಸರಿನ ಬಗ್ಗೆ ಅನೇಕ ವೇದಿಕೆಗಳಿಂದ ವಾದವಿವಾದಗಳಾದುವು. ಆಗ ನಾನು ಪರಿಷತ್ತಿನ ಸದಸ್ಯನಾಗಿದ್ದೆ. ನನಗೆ “ಕರ್ನಾಟಕ” ಎಂದು ಬದಲಾವಣೆ ಮಾಡಿದುದು ಸೂಕ್ತವಾಗಿ ತೋರಿಬರಲಿಲ್ಲವಾಗಿ ಆ ವರ್ಷ ಬಳ್ಳಾರಿಯಲ್ಲಿ ನಡಯಲಿದ್ದ ಸಾಹಿತ್ಯ ಸಮ್ಮೇಳನದ ಕಾಲದಲ್ಲಿ ಜರುಗುವ ಸದಸ್ಯರ ವಾರ್ಷಿಕಾಧಿವೇಶನದಲ್ಲಿ ಚರ್ಚೆ ನಡೆಯಲೆಂದು ಈ ಸಂಬಂಧವಾದ ಸೂಚನೆಯೊಂದನ್ನು ಕಳುಹಿಸಿದೆ. ಹಳೆಯ ಹೆಸರೇ ಇರಬೇಕೆಂದು ನನ್ನ ಅಭಿಪ್ರಾಯವಾಗಿತ್ತು. ಈ ಸೂಚನೆಯನ್ನು ಮಂಡಿಸಲು ಸಮ್ಮೇಳನಕ್ಕೆ ಹೋದೆ. ನನಗಿಂತ ಬಳ್ಳಾರಿಗೆ ಮುಂದಾಗಿ ಬಂದಿದ್ದ ನರಸಿಂಹಾಚಾರ್ಯರು, ತೀ.ನಂ. ಶ್ರೀಕಂಠಯ್ಯನವರು (ಇತರ ಕೆಲವು ಮಿತ್ರರೂ ಸಹ) ನಾನು ಹೋದ ಕೂಡಲೆ ನನ್ನನ್ನು ತರಾಟೆಗೆ ತಗೆದುಕೊಂಡರು. ಎಂದೂ ಪರಿಷತ್ತಿನ ವಿಷಯದಲ್ಲಿ ಆಸಕ್ತಿ ತೋರದೆ ಇದ್ದ ನಾನು ಅವರೆಲ್ಲರ ಪರಮ ಗುರುಗಳಾದ ಬಿ.ಎಂ. ಶ್ರೀಕಂಠಯ್ಯನವರ ವಿರುದ್ಧ ಸೂಚನೆಯನ್ನು ಕಳುಹಿಸಿದ್ದುದು ಅವರೆಲ್ಲರಿಗೂ ತುಂಬಾ ಅಸಮಾಧಾನವನ್ನುಂಟುಮಾಡಿತು. ರಾತ್ರಿಯೆಲ್ಲಾ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಸಭೆಯಲ್ಲಿ ಪ್ರಾಧ್ಯಾಪಕ ಟಿ.ಎಸ್. ವೆಂಕಣ್ಣಯ್ಯನವರ ಸಲಹೆ ಮೇರೆಗೆ “ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಮಾರ್ಪಾಟಿಗೆ ಸಭೆ ಒಪ್ಪಿಗೆ ಕೊಟ್ಟಿತು.

ನರಸಿಂಹಾಚಾರ್ಯರಿಗೆ ಗುರುಹಿರಿಯರಲ್ಲಿದ್ದಂತೆ ಸ್ನೇಹಿತರಲ್ಲೂ ಅಪಾರ ವಿಶ್ವಾಸವಿತ್ತು. ನನ್ನಲ್ಲೂ, ತೀ.ನಂ. ಶ್ರೀಕಂಠಯ್ಯನವರಲ್ಲೂ ಇದು ಹೆಚ್ಚಾಗಿತ್ತೆಂದೇ ಹೇಳಬೇಕು. ಅವರ ಗಾಢವಾದ ಮೈತ್ರಿ, ಕುಂದದ ವಾತ್ಸಲ್ಯ, ಅಭಿಮಾನ ಕೊನೆಯವರೆಗೆ ನನ್ನದಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಇಲಾಖೆಯ ಹೊರಗಣ ಕೆಲಸ ಸಾಮಾನ್ಯವಾಗಿ ಅವರ ಬೇಸಿಗೆ ರಜ ಕಾಲಕ್ಕೂ ಮತ್ತು ಇತರ ಮಧ್ಯಂತರ ಬಿಡುವಿಗೂ ಹೊಂದಿಕೊಳ್ಳುತ್ತಿತ್ತು. ಆಗ ಅವರು ಇತರ ಮಿತ್ರರೊಂದಿಗೆ ಅನೇಕ ಸ್ಥಳಗಳಿಗೆ ನನ್ನ ಕೋರಿಕೆಯನ್ನು ಮನ್ನಿಸಿ ಬೆಟ್ಟಗುಡ್ಡಗಳ ಸಮೀಪ ಶಿಬಿರಗಳಿಗೆ ಬಂದು ನನ್ನ ಬೇಸರಗಳನ್ನು ಹೋಗಲಾಡಿಸುತ್ತಿದ್ದರು. ಇವುಗಳ ನೆನಪುಗಳೇ ಈಗ ನನಗೆ ಸಂಗಾತಿಯಾಗಿರುವುವು. ಈ ಪ್ರವಾಸಗಳ ಪೈಕಿ ಒಂದೆರಡನ್ನು ಈ ಸಂದರ್ಭದಲ್ಲಿ ತಿಳಿಸುವುದು ಅಪ್ರಕೃತವಾಗಲಾರದು.

ನಾನು ಬೆಳ್ಳಾರ ಚಿನ್ನದ ಗಣಿಯಲ್ಲಿದ್ದಾಗ ನರಸಿಂಹಾಚಾರ್ಯರು, ಶ್ರೀಕಂಠಯ್ಯನವರು ತಮ್ಮ ಕೆಲವು ಸಾಹಿತಿ ಮಿತ್ರರೊಂದಿಗೆ ಬಂದು ೨-೩ ದಿನಗಳು ಒಂದಿಗಿದ್ದರು. ಅವರುಗಳೊಂದಿಗೆ ಬೋರನ ಕಣಿವೆ ಕೆರೆಯ ಏರಿಯ ಮೇಲೆ ಕುಳಿತು ಕವಿವರ್ಯ ಪು.ತಿ. ನರಸಿಂಹಾಚಾರ್ಯರ “ಗೋಕುಲ ನಿರ್ಗಮನ” ಕಾವ್ಯದ ವಾಚನವನ್ನು ಕವಿವರ್ಯರ ವಾಣಿಯಲ್ಲಿಯೇ ಕೇಳಿದ್ದನ್ನು ನನ್ನ ಜೀವನದಲ್ಲಿ ಒಂದು ಸುಯೋಗವೆನ್ನಬೇಕು.

ಒಂದು ಸಲ ನರಸಿಂಹಾಚಾರ್ಯರವರು ಆರ್.ಎಲ್. ನರಸಿಂಹಯ್ಯನವರು, ನಾನು ಸೇರಿ ಮೇಕೆದಾಟಿಗೆ ಹೋಗಿಬಂದೆವು. ಸಂಗಮದಿಂದ ಮೇಕೆದಾಟಿಗೆ ಉರಿಬಿಸಿಲಲ್ಲಿ ಹೋಗಿ ವಾಪಸು ಬರುವಾಗ ಇದ್ದಕ್ಕಿದ್ದ ಹಾಗೆ ನರಸಿಂಹಾಚಾರ್ಯರು ಕುಸಿದರು. ದೇಹದಲ್ಲಿ ವಿಪರೀತ ಬೆವರು ಸುರಿಯಲಾರಂಭಿಸಿತು. ಸ್ವಲ್ಪ ಕಾಲ ನಮಗೆ ಏನೂ ತೋರದೆ ಯಾವ ಪಾತ್ರೆಯೂ ನೀರನ್ನು ಕುಡಿಸಲು ಇಲ್ಲದಿದ್ದ ಪ್ರಯುಕ್ತ ಹೊದ್ದಿದ್ದ ಟವಲು, ಶಲ್ಯಗಳನ್ನು ತೊಟ್ಟಿಡುವಂತೆ ಪಕ್ಕದಲ್ಲಿ ಹರಿಯುತ್ತಿದ್ದ ಕಾವೇರಿ ನದಿ ನೀರಲ್ಲಿ ತೋಯಿಸಿ ತಂದು ಹಿಂಡಿ ನೀರನ್ನು ಕುಡಿಸಿ ತಲೆಗೆ ನೀರು ತಟ್ಟಿದೆವು. ಸ್ವಲ್ಪ ಕಾಲನಂತರ ಅವರು ಚೇತರಿಸಿಕೊಂಡ ಮೇಲೆ ಸಂಗಮಕ್ಕೆ ವಾಪಸು ಬಂದು ಊಟಮಾಡಿಕೊಂಡು ಸಾಯಂಕಾಲ ಬೆಂಗಳೂರಿಗೆ ಹೊರಟು ಬಂದೆವು.

ತಳೂರು ಕ್ರೋಮೈಟ್ ಗಣಿಗೆ ನರಸಿಂಹಾಚಾರ್ಯರು ಬರುತ್ತಿದ್ದ ವಿಷಯವನ್ನು ಹಿಂದೆ ಹೇಳಿದೆ. ಅಲ್ಲಿ ಮೋಸೆಸ್ ಎಂಬ ಮೇಸ್ತಿಯ ಕೆಲಸ ನರಸಿಂಹಾಚಾರ್ಯರಿಗೆ ಕುತೂಹಲಕಾರಿಯಾಗಿ ಆತನಿಂದ ಗಣಿ ಸಂಬಂಧವಾದ ಅನೇಕ ವಿಷಯಗಳ ಮಾಹಿತಿ ಪಡೆದರು. ಕೊನೆಯಲ್ಲಿ ನನಗೆ “ನೀನೇನಾದರೂ ಗಣಿಯ ವಿಷಯದಲ್ಲಿ ಪುಸ್ತಕ ಬರೆದರೆ ಅದನ್ನು ಮೋಸೆಸ್‌ಗೆ ನಿವೇದಿಸಬೇಕು” ಎಂದು ಹೇಳಿದರು. ಅವರಿಗೆ ನಾನು ಭೂಶಾಸ್ತ್ರ, ಗಣಿ ಸಂಬಂಧವಾಗಿ ಪುಸ್ತಕವನ್ನು ಬರೆಯಬೇಕೆಂಬ ಅಭಿಲಾಷೆಯಿದ್ದಿತು. ಕಂಡಾಗಲೆಲ್ಲಾ ಜ್ಞಾಪಿಸುತ್ತಿದ್ದರು. ಆ ಕೆಲಸ ಅನೇಕ ಕಾರಣಗಳಿಂದ ಸಾಧ್ಯವಾಗಲೇ ಇಲ್ಲ.

೧೯೩೩ರ ಮಧ್ಯಭಾಗದಲ್ಲಿ ಮೈಸೂರು ಹೆಗ್ಗಡದೇವನಕೋಟೆ ರಸ್ತೆ ಬಳಿಯಿರುವ ಚಟ್ಟನಹಳ್ಳಿ ಎಂಬಲ್ಲಿ ಗಣಿಕೆಲಸದ ಸಲುವಾಗಿ ಬಿಡಾರ ಮಾಡಿದ್ದೆ. ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದು ವಾಪಸು ಬರುವಾಗ ನರಸಿಂಹಾಚಾರ್ಯ ತೀ.ನಂ. ಶ್ರೀಕಂಠಯ್ಯನವರೊಂದಿಗೆ ಷಾಃಪಸಂದ್ ಗಾಡಿಯಲ್ಲಿ ಮೈಸೂರಿನಿಂದ ಹೊರಟೆವು. ಆ ಗಾಡಿಯ ಚಾಲಕನು ೧ನೆಯ ಯುದ್ಧದಲ್ಲಿ ಮೆಸೊಪೋಟೋಮಿಯಾಕ್ಕೆ ಹೋಗಿ ಭಾಗವಹಿಸಿದ್ದನಂತೆ. ದಾರಿಯುದ್ಧಕ್ಕೂ ಅವನು ಅಲ್ಲಿಯ ಕೆಲವು ಕತೆಗಳನ್ನು ಹೇಳುತ್ತಾ ಹೋದನು. ದಾರಿ ಸವೆದುದು ಗೊತ್ತಾಗಲೇ ಇಲ್ಲ. ಈ ಪ್ರಯಾಣವನ್ನು ಉಭಯ ಮಿತ್ರರೂ ಜ್ಞಾಪಕದಲ್ಲಿಟ್ಟುಕೊಂಡು ಆಗಾಗ ಪ್ರಸ್ತಾಪಿಸುತ್ತಿದ್ದರು. ಈ ಪ್ರವಾಸದ ಸಂಬಂಧವಾಗಿ ನನ್ನಲ್ಲಿ ಒಂದು ಫೋಟೊ ಇದೆ. ಇದರಲ್ಲಿ ಶ್ರೀಕಂಠಯ್ಯನವರ ಜುಟ್ಟು ಮತ್ತು ನರಸಿಂಹಾಚಾರ್ಯರ ಅರ್ಧ ಕ್ರಾಪು ಕಾಣಿಸುತ್ತದೆ.

ಇನ್ನೊಂದು ಸಲ ನರಸಿಂಹಾಚಾರ್ಯರನ್ನೂ ಕೂಡಿದ ೮-೧೦ ಜನರ ಮಿತ್ರ ತಂಡವೊಂದು ಕೋಲಾರದ ಚಿನ್ನದ ಗಣಿ ನೋಡುವ ಸಲುವಾಗಿ ಬಂದಿತ್ತು. ರಾಬರ್ಟ್‌ಸನ್‌ಪೇಟೆ ಬಂಗಲೆಯಲ್ಲಿ ಇಳಿದುಕೊಂಡಿದ್ದೆವು. ಆ ದಿನ ಮಧ್ಯರಾತ್ರಿ ರೈಲಿನಲ್ಲಿ ಎ.ಎನ್. ಮೂರ್ತಿರಾಯರು ಬರುವವರಿದ್ದರು. ಅವರು ಬರುವವರೆಗೂ ಕಾಲಕಳೆಯಲು ಹರಟುತ್ತಾ ಕುಳಿತಿದ್ದೆವು. ನಮ್ಮ ಮಾತುಕತೆಯಲ್ಲಿ ಅಲ್ಲಿ ತಂಗಿದ್ದ ಬೇರೆ ಪ್ರವಾಸಿಗಳಿಗೆ ತೊಂದರೆಯಾಗಿ ಅಕ್ಷೇಪಿಸಿದಾಗ ನಾವು ಸುಮ್ಮನಾಗುವ ಬದಲು ಅವರನ್ನೂ ಒಲಿಸಿಕೊಂಡು ನಮ್ಮೊಂದಿಗೆ ಸೇರಿಸಿಕೊಂಡೆವು. ಮರುದಿನ ಬೆಳಗ್ಗೆ ಗಣಿಯ ಒಳಗಿನ ಭಾಗಗಳನ್ನೂ ಮೇಲಿನ ಚಿನ್ನ ತೆಗೆಯುವ ಕಾರ್ಯಾಗಾರವನ್ನೂ ನೋಡಿಕೊಂಡು ಸಾಯಂಕಾಲ ಎತ್ತಿನ ಗಾಡಿಗಳಲ್ಲಿ ಕುಳಿತು ಅಲ್ಲಿಂದ ೧೦ ಮೈಲಿ ದೂರದಲ್ಲಿದ್ದ ಗಣಾಚಾರಪುರವೆಂಬಲ್ಲಿ ನಾನು ಬಿಡಾರ ಮಾಡಿದ್ದ ಸ್ಥಳಕ್ಕೆ ರಾತ್ರಿ ೧೦ ಗಂಟೆಗೆ ಬಂದೆವು.

ಮಾರನೆಯ ದಿನ ಬೆಳಗ್ಗೆ ಆ ಪ್ರದೇಶದ ಸುತ್ತಲಿನ ಜಾಗಗಳನ್ನು ನೋಡಲು ಹೊರಟು ಬೇಚರಾಕಾದ ಗಣಾಚಾರಪುರದ ನಿವೇಶನದ ಬಳಿ ಬಂದೆವು. ಅಲ್ಲಿ ನರಸಿಂಹಾಚಾರ್ಯರು ಶಿವರಾಮಶಾಸ್ತ್ರಿಗಳು ಸ್ಥಳದ ಸಂಬಂಧವಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು. ನನಗೆ ಹೆಚ್ಚಿನ ಸಂಗತಿಗಳು ಗೊತ್ತಿರಲಿಲ್ಲ. ನರಸಿಂಹಾಚಾರ್ಯರು ನನ್ನನ್ನು ಕುರಿತು ಉಪಾಧ್ಯಾಯರ ಧೋರಣೆಯಿಂದ “ನೀನು ಇರುವುದು ವ್ಯರ್ಥ. ಇಂತಹ ವಿಷಯಗಳಲ್ಲಿ ಆಸಕ್ತಿ ಹೊಂದಿರಬೇಕು” ಎಂದು ಹೇಳಿದರು. ಗ್ರಾಮಾಂತರ ಪ್ರದೇಶದಲ್ಲಿ ಅವರು ಹೋಗುತ್ತಿದ್ದಾಗಲೆಲ್ಲಾ ಹಳ್ಳಿಯ ಜನ ಆಡುವ ಮಾತಿನ ಕಡೆ ಗಮನವಿಟ್ಟು ಕೇಳುತ್ತಿದ್ದರು.

ನರಸಿಂಹಾಚಾರ್ಯರಿಗೆ ಅದ್ಭುತ ಜ್ಞಾಪಕಶಕ್ತಿ ಇದ್ದಿತು. ಹೊಳೆನರಸೀಪುರದ ಕಲ್ನಾರು ಗಣಿಯ ಬಳಿ ಹೋದಾಗ ಆ ಪ್ರದೇಶದಲ್ಲಿದ್ದ ಕಲ್ಲೊಂದನ್ನು ನೋಡಿ “ಇದೇನು Ultrabasic Rock ಓ” ಎಂದು ಕೇಳಿದರು. ೧೦-೧೨ ವರ್ಷಗಳ ಹಿಂದೆ ಇಂತಹ ಕಲ್ಲನ್ನು ತಳೂರು ಗಣಿಯಲ್ಲಿ ನೋಡಿದ್ದು ಅಷ್ಟು ವರ್ಷಗಳ ನಂತರ ಅದನ್ನು ಜ್ಞಾಪಕಕ್ಕೆ ತಂದುಕೊಂಡು ಆ ರೀತಿ ಪ್ರಶ್ನೆ ಮಾಡಿದರು. ಎಲ್ಲಾ ವಿಷಯಗಳಲ್ಲಿಯೂ ಅವರಿಗೆ ಆಸಕ್ತಿ ಕುತೂಹಲವಿರುತ್ತಿದ್ದಿತು.

ತೀ.ನಂ. ಶ್ರೀಕಂಠಯ್ಯನವರಲ್ಲಿ ನರಸಿಂಹಾಚಾರ್ಯರಿಗೆ ಅಪಾರ ಪ್ರೀತಿ, ಗೌರವ ಅವರಿಬ್ಬರೂ ಜೊತೆ ಜೊತೆಯಾಗಿ ಕನ್ನಡಕ್ಕಾಗಿ ಕೆಲಸಮಾಡಿದರು. ಇಬ್ಬರದೂ ಅಪಾರ ವಿದ್ವತ್ತು ಮತ್ತು ಸಾಧನೆ. ಎರಡು ದಿಗ್ಗಜಗಳಂತೆ ಮೆರೆದು ಅವರ ಇರುವು ನಾಡಿಗೆ ಅತ್ಯಗತ್ಯವಾಗಿ ಬೇಕಾಗಿದ್ದಾಗಲೇ ಇಬ್ಬರೂ ದೈವಾಧೀನರಾದರು. ೧೯೬೬ರಲ್ಲಿ ಶ್ರೀಕಂಠಯ್ಯವರು ನಿಧನರಾದರೆ ೫ ವರ್ಷಗಳ ನಂತರ ನರಸಿಂಹಾಚಾರ್ಯರು ಅವರನ್ನು ಹಿಂಬಾಲಿಸಿದರು.

ಮೈಸೂರು ವಿಶ್ವವಿದ್ಯಾಲಯದವರು ನರಸಿಂಹಾಚಾರ್ಯರಿಗೆ ಡಿ.ಲಿಟ್. ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದಾಗ ನಾನು ಅವರಿಗೆ ಅಭಿನಂದನಾ ಪತ್ರವೊಂದನ್ನು ಬರೆದೆ. ಅದಕ್ಕೆ ಉತ್ತರವಾಗಿ ಬಂದ ಕಾಗದದ ಒಂದು ಭಾಗವು ಹೀಗಿದೆ.

“How I wish I had been conferred the degree along with the late T.N.S. That would have been the greatest happiness for me. But destiny has willed it otherwise.”

ಪುನಃ ಇನ್ನೊಂದು ಪತ್ರದಲ್ಲಿ (ಇದು ಘಟಿಕೋತ್ಸವ ಆದ ನಂತರದ್ದು)

“I would have beeen supremely happy if the late T.N.S. and myself had received the degree together” ಎಂದು ಬರೆದಿದ್ದಾರೆ.

ಇದರಿಂದ ನರಸಿಂಹಾಚಾರ್ಯರಿಗೆ ಶ್ರೀಕಂಠಯ್ಯನವರ ವಿಷಯದಲ್ಲಿದ್ದ ಅದರ, ಸ್ನೇಹ, ಗೌರವಗಳನ್ನು ತಿಳಿಯಬಹುದಾಗಿದೆ. ಉಭಯರ ಈ ಸ್ನೇಹ ಅಭಿಮಾನಗಳಿಗೆ ಪೂರಕವಾಗಿ ತೀ.ನಂ. ಶ್ರೀಕಂಠಯ್ಯವರು “ಜ್ಞಾನೋಪಾಸಕ” ಎಂಬ ಹೊತ್ತಗೆಯ ಮುನ್ನುಡಿಯಲ್ಲಿ “ಡಿ.ಎಲ್.ಎನ್. ಎಂದರೆ ಪಾಂಡಿತ್ಯ; ಪಾಂಡಿತ್ಯ ಎಂದರೆ ಡಿ.ಎಲ್.ಎನ್.” ಎಂದು ಹೇಳಿರುವುದು ಇವರಿಬ್ಬರಿಗೂ ಪರಸ್ಪರ ಇದ್ದ ಪ್ರೀತಿ, ಗೌರವ, ಮಮತೆಗಳನ್ನು ತೋರಿಸುವದು.

ಮಕ್ಕಳನ್ನು ಕಂಡರೆ ನರಸಿಂಹಾಚಾರ್ಯರಿಗೆ ಬಹಳ ಪ್ರೀತಿ, ಮಕ್ಕಳಿರುವ ಮನೆಗೆ ಹೋಗುವಾಗ ಅವರು ಯಾವಾಗಲೂ ಸಿಹಿ (ಪೆಪ್ಪರ್ ಮೆಂಟ್)ಯನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಒಂದು ಸಲ ಬೆಂಗಳೂರಿಗೆ ನರಸಿಂಹಾಚಾರ್ಯರು ಬಂದಿದ್ದಾಗ ನಮ್ಮ ಮನೆಗೆ ಬಂದರು. ಆಗ ಮನೆಯಲ್ಲಿ ನನ್ನ ಮಗಳು, ಅವರ ಮಗ ಇದ್ದರು. ನನ್ನ ಮೊಮ್ಮಗನನ್ನು ತೊಡೆ ಮೇಲೆ ಕೂರಿಸಿಕೊಂಡು ನನ್ನ ಮಗಳ ಕಡೆಗೆ ತಿರುಗಿ; “It is this fellow that has made your father grand”, ಎಂದು ಹೇಳಿದ್ದು ನೆನಪಿಗೆ ಬರುತ್ತದೆ. ಕಳೆದ ಫೆಬ್ರವರಿ ೧೭ನೇ ತಾರೀಖು ಅವರಿಂದ ನನಗೆ ಪತ್ರವೊಂದು ಬಂತು. ಅದೇ ಅವರ ಕಡೆಯ ಕಾಗದ. ಅದರಲ್ಲಿ “How is it you are keeping quit without writing to me? Since I met you in Banagalore at the Parishat Sammelan I have not heard from you. How is your health?………….I hope your grandson is coming up nicely…. You must be having a good time with the child. I imagine your foudling it and become delighted there by……. Please write to me for the health of you all” ಎಂತಹ ಅಭಿಮಾನದ ಪತ್ರ. ಮಕ್ಕಳೆಂದರೆ ಎಂತಹ ಮಮತೆ.

ಇನ್ನೂ ಇಂತಹ ಅನೇಕ ವಿಷಯಗಳು ನನ್ನ ಮತ್ತು ನರಸಿಂಹಾಚಾರ್ಯರ ಒಡನಾಟದ ಸಂಬಂಧದಲ್ಲಿ ಜ್ಞಾಪಕಕ್ಕೆ ಬರುತ್ತವೆ. ನನಗೆ ಅವರಿಂದ ಸರ್ವಭಾಗದಲ್ಲಿಯೂ ಆದರ, ಪ್ರೇಮ, ಸಹಾಯ, ಸಹಕಾರಗಳು ದೊರೆತಿವೆ. ಅವರ ನಿಧನದಿಂದ ನನಗಾಗಿರುವ ನಷ್ಟ ಮತ್ತು ವ್ಯಥೆ ಹೇಳತೀರದು. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರು ಅನುಸರಿಸಿ ನಡೆದ ದಾರಿ ನಮಗೆ ಆದರ್ಶಪ್ರಾಯವಾಗಲಿ ಎಂಬುದೇ ದೇವರಲ್ಲಿ ನನ್ನ ನಮ್ರ ಪ್ರಾರ್ಥನೆ.

* ಕನ್ನಡನುಡಿ (ಸಂ. ೩೪, ಸಂ. ೧೫, ೧೬), ಪು. ೧೭