ನಾಲ್ವತ್ತು ವರ್ಷದ ನೆನಪು. ಆಗ ಮೈಸೂರ ಮಹಾರಾಜ ಕಾಲೇಜು ಪಾಂಡಿತ್ಯದ ಗಂಗಾಮೂಲದಂತಿತ್ತು. ಮಹಾರಾಜ ಕಾಲೇಜು ಎಂದರೆ ವಿದ್ಯಾರ್ಥಿಗಳಿಗೆ ಹೆಮ್ಮೆ! ಮೈಸೂರು ಸಂಸ್ಥಾನದಲ್ಲಿ ಸಾಹಿತ್ಯ, ಶಾಸ್ತ್ರ, ಸಂಸ್ಕೃತಿ, ತತ್ತ್ವ, ಇತಿಹಾಸ, ಕಲಾವಿಭಾಗಗಳಲ್ಲಿ ಅಭ್ಯಾಸ ಮಾಡುವವರಿಗೆ ಅದೊಂದೇ ಕಾಲೇಜ್. ಒಂದೊಂದು ವಿಭಾಗದಲ್ಲಿಯೂ ನಿಷ್ಠಾತರಾದ ಪಂಡಿತರೂ, ಉಪಾಧ್ಯಾಯರೂ, ಅಧ್ಯಾಪಕರೂ, ಪ್ರಾಧ್ಯಾಪಕರೂ ಪಾಠ ಹೇಳುತ್ತಿದ್ದರು. ಆ ಗುರು ವರ್ಗ ಇಂದಿಗೂ ಆ ಪೀಳಿಗೆಯ ಜನಮನದಲ್ಲಿ ನೆಲೆಸಿರುತ್ತದೆ. ಆಗ ಆ ಕಾಲೇಜಿನ ಪ್ರಿನ್ಸಿಪಾಲರು ಶ್ರೀ ಜೆ.ಸಿ. ರಾಲೋ ಅವರು. ಅವರು ಇಂಗ್ಲಿಷ್ ಜನಾಂಗದವರು. ಅವರು ಉದ್ಧಾಮ ವಿದ್ವಾಂಸರು. ತತ್ತ್ವಶಾಸ್ತ್ರ ವಿಭಾಗದ ಶ್ರೀ ಎ.ಆರ್. ವಾಡಿಯಾರವರೂ, ಮನಃಶ್ಯಾಸ್ತ್ರ ವಿಭಾಗದ ಡಾ. ಗೋಪಾಲಸ್ವಾಮಿಯವರೂ, ಇತಿಹಾಸ ವಿಭಾಗದ ಪ್ರೊ. ವೆಂಕಟೇಶ್ವರರವರೂ, ಸಂಸ್ಕೃತದಲ್ಲಿ ಶ್ರೀ ಡಿ. ಶ್ರೀನಿವಾಸಾಚಾರ್ಯರೂ, ಕನ್ನಡದಲ್ಲಿ ಶ್ರೀ ಟಿ.ಎಸ್. ವೆಂಕಣ್ಣಯ್ಯನವರೂ, ಕನ್ನಡ ವಿಭಾಗದ ಗೌರವ ಪ್ರಾಧ್ಯಾಪಕರಾಗಿ ಪ್ರೊ.ಬಿ.ಎಂ. ಶ್ರೀಕಂಠಯ್ಯನವರೂ, ತರ್ಕಶಾಸ್ತ್ರದಲ್ಲಿ ಪ್ರೊ. ಡಿಸೋಜಾರವರೂ ಅಷ್ಟದಿಗ್ಗಜಗಳಂತಿದ್ದರು. ಅದೊಂದು ವಿದ್ವತ್ ಪರಿಷತ್; ಸಾಹಿತ್ಯ ವಿಂಧ್ಯಾದ್ರಿ; ಜ್ಞಾನಗಂಗೋತ್ರಿ; ಸಂಸ್ಕೃತಿಯ ಹಿಮಗಿರಿ! ಆಗಿನ್ನೂ ಕನ್ನಡ ಭಾಷಾ ವ್ಯಾಸಂಗಕ್ಕೆ ಸಂಪೂರ್ಣ ಗೌರವಸ್ಥಾನ ಲಭಿಸಿರಲಿಲ್ಲ. ಶ್ರೀ ಬಿ.ಎಂ. ಶ್ರೀಕಂಠಯ್ಯವರ ಸತತ ಪ್ರಯತ್ನದಿಂದ ಆಗತಾನೇ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ. ಆರಂಭವಾಗಿತ್ತು. ಆ ತರುವಾಯ ಕನ್ನಡ ಪ್ರಧಾನ ಬಿ.ಎ. (ಅನರ್ಸ) ತರಗತಿಯೂ ಪ್ರಾರಂಭವಾಗಿತ್ತು. ಈ ಕನ್ನಡ ವಿಭಾಗದಲ್ಲಿ ಶ್ರೀ ಟಿ.ಎನ್. ಸುಬ್ಬರಾಯ ಶಾಸ್ತ್ರಿಗಳೂ, ಶ್ರೀವರದಾಚಾರ್ಯರೂ, ಶ್ರೀ ಎಂ.ಎಸ್. ಬಸವಲಿಂಗಯ್ಯನವರೂ, ಶ್ರೀ ಟಿ.ಎನ್. ಶ್ರೀಕಂಠಯ್ಯವರೂ, ಶ್ರೀ ಡಿ.ಎಲ್. ನರಸಿಂಹಾಚಾರ್ಯರೀ ಸಹಾಯೋಪಾಧ್ಯಾಯರಾಗಿದ್ದರು. ಕನ್ನಡ ಬಿ.ಎ ಆನರ್ಸಗೆ ಸಂಸ್ಕೃತ ಮತ್ತು ತೆಲುಗು ಅವಶ್ಯಕವಾಗಿತ್ತು. ಸಂಸ್ಕೃತದಲ್ಲಿ ಶ್ರೀ ಸಿ.ಆರ್. ನರಸಿಂಹಶಾಸ್ತ್ರಿಗಳೂ, ತೆಲುಗಿನಲ್ಲಿ ಶ್ರೀ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರೂ ಪಾಠ ಹೇಳುತ್ತಿದ್ದರು. ಇಂಥ ಗುರುವ್ಯೂಹ ಕನ್ನಡಕ್ಕೆ ಆಗ ಲಭಿಸಿತ್ತು.

ಶ್ರೀ ಟಿ.ಎನ್. ಶ್ರೀಕಂಠಯ್ಯನವರೂ, ಶ್ರೀ ಡಿ.ಎಲ್. ನರಸಿಂಹಾಚಾರ್ಯರೂ ಆಗತಾನೆ ಅಧ್ಯಾಪಕ ವೃತ್ತಿಗೆ ಬಂದಿದ್ದರು. ಅವರು ತರುಣರು; ವಿದ್ಯಾವಿನಯ ಸಂಪನ್ನರು. ಶ್ರೀ ಡಿ.ಎಲ್. ನರಸಿಂಹಾಚಾರ್ಯರು ಓರಿಯೆಂಟಲ್ ಲೈಬ್ರೆರಿಯಲ್ಲಿ ಪಂಡಿತರಾಗಿದ್ದು ಅಲ್ಲಿಂದ ಕಾಲೇಜಿಗೆ ಉಪಾಧ್ಯಾಯರಾಗಿ ಬಂದಿದ್ದರು. ಅವರು ಕನ್ನಡ ಬಿ.ಎ. (ಆನರ್ಸ) ಮೊದಲನೆಯ ವರ್ಷದ ತರಗತಿಗೆ ವೀರಶೈವ ಸಾಹಿತ್ಯ ಪಾಠ ಹೇಳುತ್ತಿದ್ದರು. ‘ಬಸವಣ್ಣನವರ ವಚನಗಳು’ ನಮಗೆ ಪಠ್ಯ ಪುಸ್ತಕವಾಗಿತ್ತು. ಮೊದಲನೆಯ ದಿನ ತರಗತಿಗೆ ಅವರು ಬಂದಾಗ ನಾನು ಅವರನ್ನು ಕಂಡೆ. ಪಾಠ ಪ್ರಾರಂಭವಾಗುವುದಕ್ಕೆ ಮುಂಚೆ ಅವರಿಗೆ ನನ್ನ ಪರಿಚಯವನ್ನು ನಾನೇ ಹೇಳಿದೆ. ಅವರು ಸಣ್ಣ ಜರತಾರಿಯ ಕಂಬಿ ಪೇಟ ಧರಿಸಿ, ಶುಭ್ರವಾದ ಪಂಚೆ ಉಟ್ಟು, ಎದೆ ಮುಚ್ಚಿದ ಅಂಗಿಯನ್ನು ತೊಟ್ಟಿದ್ದರು. ಸದೃಢವಾದ ಮೈಕಟ್ಟು, ಪ್ರಸನ್ನ ಮುಖ, ಆ ಮುಖದಲ್ಲಿ ಹಣೆಯ ಮೇಲೆ ಒಂದೇ ಕೆಂಪು ನಾಮ – ಅವರ ವ್ಯಕ್ತಿತ್ವವನ್ನು ಬೆಳಗುತ್ತಿದ್ದುವು. ಅವರು ಪಾಠವನ್ನು ಪ್ರಾರಂಭಿಸುತ್ತ – “ವೀರಶೈವ ಸಾಹಿತ್ಯ ಅಪಾರವಾಗಿದೆ. ಆದರೆ ಸಾಕಾದಷ್ಟು ಗ್ರಂಥಗಳು ದೊರೆಯುತ್ತಿಲ್ಲ. ವೀರಶೈವ ಧರ್ಮ ಬಸವಣ್ಣನವರಿಗಿಂತ ಹಿಂದೆ ಇತ್ತೆ? ಇದ್ದರೆ ಎಷ್ಟು ಹಿಂದಿನಿಂದಲೂ ಇದೆ? ಈ ಧರ್ಮದ ಮೂಲಗ್ರಂಥಗಳು ಸಂಸ್ಕೃತದಲ್ಲಿವೆಯೆ? ಸಿದ್ಧಾಂತ ಗ್ರಂಥಗಳು ಯಾವುದು? ಇವೇ ಮೊದಲಾದ ವಿಚಾರಗಳಲ್ಲಿ ನನಗೆ ತುಂಬ ಆಸಕ್ತಿ ಇದೆ” – ಎಂದು ಹೇಳಿದುದು ನನಗೆ ನೆನಪಿದೆ. ನನ್ನಲ್ಲಿ ‘ಬಸವಣ್ಣನವರ ವಚನಗಳು’ ಪುಸ್ತಕ ಇರಲಿಲ್ಲ. ಅದು ಅಚ್ಚಾಗಿದ್ದರೂ ಪ್ರತಿಗಳೇ ದೊರೆಯುತ್ತಿರಲಿಲ್ಲ. ಅವರಲ್ಲಿ ಒಂದು ಪ್ರತಿ ಇತ್ತು. ಅವರು ಅವರ ಪಾಠವಿದ್ದ ದಿನ ಅದರಿಂದ ವಚನಗಳನ್ನು ಓದಿ ವಿವರಿಸುತ್ತಿದ್ದರು. ಮುಖ್ಯವಾದ ವಚನಗಳನ್ನು ಬರೆಯಿಸುತ್ತಿದ್ದರು. ಅವರು ಹೇಳಿ ಬರೆಯಿಸಿದ ಟಿಪ್ಪಣಿ ನನಗೆ ತುಂಬ ಉಪಯೋಗವಾಯಿತು. ಕನ್ನಡ ಬಿ.ಎ., (ಆನರ್ಸ) ಪರೀಕ್ಷೆಗೆ ೧೯೩೩ರಲ್ಲಿ ಕುಳಿತಿದ್ದುದು, ನಾನೇ ಏಕೈಕ ವಿದ್ಯಾರ್ಥಿ ಉತ್ತೀರ್ಣನಾದದ್ದು ನಾನೇ ಅದ್ವಿತೀಯ ವಿದ್ಯಾರ್ಥಿ! ಅವರು ನನ್ನ ವಿಚಾರದಲ್ಲಿ ಅತ್ಯಂತ ಪ್ರೀತಿವಿಶ್ವಾಸದಿಂದಿದ್ದರು.

ಶ್ರೀ ನರಸಿಂಹಾಚಾರ್ಯರು ನನಗೆ ತಿಳಿದಮಟ್ಟಿಗೆ ಮೂರು ವರ್ಷಗಳ ಅವಧಿಯಲ್ಲಿ ವೀರಶೈವ ಸಾಹಿತ್ಯದಲ್ಲಿ ಅಗಾಧವಾದ ಪಾಂಡಿತ್ಯವನ್ನು ಗಳಿಸಿಕೊಳ್ಳುತ್ತಿದ್ದರು. ಇದು ಅವರ ಪಾಠ ಪ್ರವಚನದಲ್ಲಿ ವ್ಯಕ್ತವಾಗುತ್ತಿತು. ಒಂದು ದಿನ ಅವರು –

“ಮೇಲಾಗಲೊಲ್ಲೆನು ಕೀಳಾಗಲಿಲ್ಲದೆ
ಕೀಳಿಂಗಲ್ಲದೆ ಹಯನ ಕಱೆವುದೆ?
ಮೇಲಾಗಿ ನರಕದೊಳೋಲಾಡಲಾಱೆನು
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವಾ

ಎಂಬ ವಚನವನ್ನು ಓದಿ ಅದರ ಅಂತರಾರ್ಥವನ್ನು ಹೇಳುತ್ತಿದ್ದರು. ಅವರು ಒಂದೊಂದು ಮಾತನ್ನೂ ತೂಗಿತೂಗಿ ನುಡಿಯುತ್ತಿದ್ದರು; ಮಾತಿನಲ್ಲಿ ಸತ್ವವಿರುತ್ತಿತ್ತು; ಜಳ್ಳು ಇರುತ್ತಿರಲಿಲ್ಲ; ಸಿಹಿ ಇರುತ್ತಿತ್ತು; ಕಹಿ ಇರುತ್ತಿರಲಿಲ್ಲ. ಈ ವಚನದಲ್ಲಿ ‘ಕೀಳು’ ಎಂಬ ಪದಕ್ಕೆ ತಮಿಳಿನಲ್ಲಿ ಕರು ಎಂಬ ಅರ್ಥವಿದೆಯೆಂದು ತಿಳಿಸಿ ಆ ವಚನದ ಸ್ವರೂಪವನ್ನು ವಿವರಿಸಿದರು. ಅದನ್ನು ಕೇಳಿ ನನಗೆ ಪರಮಾನಂದವಾಯಿತು. ಆ ತಮಿಳು ಪದ ಹಳಗನ್ನಡದ ಮೂಲಕ ನಡುಗನ್ನಡದಲ್ಲಿ ಬಂದಿದೆಯೆಂಬುದುದನ್ನು ಅವರು ಹೇಳಿದ್ದು ಈಗ ನನಗೆ ಅವರ ಪಾಠ ಹೇಳಿದಂತಿದೆ. ಇಂಥ ಶಬ್ದನಿಷ್ಪತ್ತಿಯನ್ನು ಅವರು ಅನೇಕ ಸಂದರ್ಭಗಳಲ್ಲಿ ತಿಳಿಸುತ್ತಿದ್ದರು. ನಾನು ಮನೆಯಲ್ಲಿ ಬರೆದು ತರುತ್ತಿದ್ದ ಪ್ರಬಂಧಗಳನ್ನು ಅವರು ತಿದ್ದಿ ನನ್ನ ವಾಕ್ಯರಚನೆಯನ್ನು ಉತ್ತಮ ಪಡಿಸಿದರು. ಅವರು ವೀರಶೈವ ತಂತ್ರಜ್ಞಾನವನ್ನು ಬಹಳ ಮನೋಜ್ಞವಾಗಿ ಬೋಧಿಸುತ್ತಿದ್ದರು. ಅವರ ಆಳವಾದ ಪಾಂಡಿತ್ಯ, ಉನ್ನತ ಭಾಷಾ ಸಂಪತ್ತು, ಗಂಭೀರವಾದ ವಾಕ್‌ಶ್ರೀ ಇವು ಅವರ ಸಾಹಚರ್ಯದಿಂದ ಗೊತ್ತಾಗಬೇಕೇ ಹೊರತು, ಅವರನ್ನು ನೋಡಿದ ಮಾತ್ರಕ್ಕೆ ಗೊತ್ತಾಗುತ್ತಿರಲಿಲ್ಲ! ಅವರು ಪ್ರಾಚೀನ ಶಾಸ್ತ್ರೀಯ ಪಾಂಡಿತ್ಯಭಾವದಿಂದ ಭೂಮಿ ತೂಕದ ಮನುಷ್ಯರಾಗಿದ್ದರು. ಆಗಾಗ ನಾನು ಕಾಲೇಜಿನಿಂದ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ವೀರಶೈವ ಸಾಹಿತ್ಯದಲ್ಲಿ ಗುರು, ಲಿಂಗ, ಜಂಗಮ, ಶಿವದೀಕ್ಷೆ ಮೊದಲಾದ ತತ್ತ್ವ ಪ್ರಕ್ರಿಯೆಗಳನ್ನು ಕುರಿತು ಮನದಟ್ಟಾಗುವಂತೆ ಹೇಳುತ್ತಿದ್ದರು. ಸಿದ್ಧರಾಮನು ಶೈವನೆ ? ವೀರಶೈವನೆ? ಎಂಬ ವಿಚಾರದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರ ಪಾಂಡಿತ್ಯದ ಆಳ, ಹರವುಗಳಿಗೆ ನಿದರ್ಶನವಾಗಿವೆ. ವೀರಶೈವ ಸಾಹಿತ್ಯವನ್ನು ತಿಳಿದ ವೀರಶೈವ ವಿದ್ವಾಂಸರು ಆ ಕಾಲದಲ್ಲಿ ಬಹಳ ಕಡಿಮೆಯಾಗಿದ್ದರು.

ಕಾಲೇಜಿನಲ್ಲಿ ಪ್ರತಿವರ್ಷವೂ ನಡೆಯುತ್ತಿದ್ದಂತೆ ‘ಯೂನಿಯನ್ ಡೇ’ ಸಮಾರಂಭ ೧೯೩೨ರಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ‘ಆಶು ಭಾಷಣ ಸ್ಪರ್ಧೆ’ ಆಗ ಕನ್ನಡದಲ್ಲಿ ಇತ್ತು. ‘ಯೂನಿಯನ್’ ಪತ್ರಿಕೆಗೆ ಕವಿತೆ, ಲೇಖನ, ಪ್ರಬಂಧ, ಹರಟೆಗಳನ್ನು ವಿದ್ಯಾರ್ಥಿಗಳು ಬರೆದುಕೊಟ್ಟರು. ‘ಯಾರು ಬಲ್ಲರು ಸ್ಪರ್ಧೆಯಲ್ಲಿ ಶ್ರೀ ವೆಂಕಣ್ಣಯ್ಯನವರು ಅಧ್ಯಕ್ಷರು. ಟಿ.ಎನ್. ಶ್ರೀಕಂಠಯ್ಯನವರೂ ಡಿ.ಎಲ್. ನರಸಿಂಹಾಚಾರ್ಯರೂ ತೀರ್ಪುಗಾರರಾಗಿದ್ದರು. “ದೇವರು ಒಂದೇ ಒಂದು ವರ ಕೊಡುತ್ತೇನೆಂದರೆ ನೀವು ಯಾವ ವರವನ್ನು ಕೇಳುತ್ತೀರಿ?” ಎಂಬುದು ಆಶುಭಾಷಣದ ಸ್ಪರ್ಧೆಯ ವಿಷಯ. ಇದನ್ನು ಐದು ನಿಮಿಷ ಮುಂಚೆ ತಿಳಿಸಿದರು. ನಾಲ್ಕಾರು ವಿದ್ಯಾರ್ಥಿಗಳು ಮಾತನಾಡಿದರು. ನಾನೂ ಸ್ಪರ್ಧಿಸಿದ್ದೆ. ನನ್ನ ಸರದಿಯೂ ಬಂತು. ದೇವರು ಒಂದೇ ಒಂದು ವರವನ್ನು ಕೊಡುತ್ತೇನೆಂದು ಕೇಳಿದರೆ, ನಾನು ‘ದೇವರ ಅಳಿಯ’ನಾಗಬೇಕೆಂಬ ವರವನ್ನು ಕೇಳುತ್ತೇನೆಂದು ಹೇಳಿ ಅದನ್ನು ಸಂದರ್ಭೋಚಿತವಾಗಿ ಪ್ರತಿಪಾದನೆ ಮಾಡಿದೆನು. ಆಗ ವೆಂಕಣ್ಣಯ್ಯನವರೂ ಶ್ರೀಕಂಠಯ್ಯನವರೂ ಡಿ.ಎಲ್.ಎನ್. ಅವರೂ ನಗುತ್ತಿದ್ದರು. ನನಗೆ ಬಹುಮಾನವೂ ಬಂತು. ‘ಯೂನಿಯನ್’ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವಿತೆಗೂ ಬಹುಮಾನ ಬಂತು. ಅಲ್ಲಿಂದ ಮುಂದೆ ನನ್ನನ್ನು ಕಂಡಾಗಲೆಲ್ಲಾ ಡಿ.ಎಲ್.ಎನ್. ಅವರು ‘ಏನು ದೇವರ ಅಳಿಯಂದಿರೇ!’ ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಒಂದು ದಿನ ಅವರ ಮನೆಗೆ ಹೋದಾಗ ‘ದೇವರ ಅಳಿಯ ಬಂದಿದ್ದಾನೆ’ ಎಂದು ಶಿಷ್ಯ ವಾತ್ಸಲ್ಯದಿಂದ ಅವರ ಮನೆಯವರಿಗೆ ಅಂದು ನಡೆದ ಸಂಗತಿಯನ್ನು ತಿಳಿಸಿದರು. ಅಂಥ ನಿರ್ಮಾತ್ಸರ್ಯ ಹೃದಯ ಅವರದು. ಅವರು ಕಾಲವಾಗುವುದಕ್ಕೆ ಸುಮಾರು ಎರಡು ತಿಂಗಳ ಹಿಂದೆ ಅವರನ್ನು ಅನಿರೀಕ್ಷಿತವಾಗಿ ಮೈಸೂರು ಬಿ.ಟಿ.ಎಸ್. ಬಸ್‌ಸ್ಟ್ಯಾಂಡಿನಲ್ಲಿ ನೋಡಿದೆನು. ಅವರ ಜೊತೆಯಲ್ಲಿ ಅವರ ಸಮೀಪದ ಬಂಧುವೊಬ್ಬರಿದ್ದರು. ನಾನು ಅವರನ್ನು ಕಂಡ ಕೂಡಲೇ ‘ನಮಸ್ಕಾರ ಸಾರ್, ಈವೊತ್ತು ಸುದಿನ. ತಮ್ಮ ದರ್ಶನವಾಯಿತು’ ಎಂದೆನು. ಅವರು ‘ಓಹೋ! ಅದೇನ್ರಿ ಮಹಾ ಅತಿಶಯ’ ಎಂದು ಪ್ರೀತಿಯಿಂದ ಮಾತನಾಡಿದರು. ‘ಆರೋಗ್ಯವೇ? ಸಾರ್’ ಎಂದೆ. ‘ನೀವು ಕ್ಷೇಮವಾಗಿದ್ದೀರಾ!’ ಎಂದರು. ಬಸ್ ಹೊರಟಿತು. ನಾನು ಅವರನ್ನು ಕಂಡು ಅಲ್ಲಿಗೆ ಸುಮಾರು ಒಂದು ವರ್ಷವಾಗಿತ್ತು. ನನಗೆ ಲಭಿಸಿದ್ದ ಕನ್ನಡ ‘ಗುರುಬಲ’ ಇನ್ನಿಲ್ಲವಾಯಿತು. ಕನ್ನಡ ಸಾರಸ್ವತ ಲೋಕಕ್ಕೂ ಟಿ.ಎಸ್. ವೆಂಕಣ್ಣಯ್ಯ, ಟಿ.ಎನ್. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್ಯ ಇವರು ಗುರುಬಲವಾಗಿದ್ದರು. ಆ ಪೀಳಿಗೆಯ ಗುರು ಬಲ ಈ ವಿದ್ವಾಂಸತ್ರಯವೆಂಬುದನ್ನು ಅವರ ಶಿಷ್ಯಕೋಟಿ ಮರೆಯುವಂತಿಲ್ಲ.

* ಕನ್ನಡ ನುಡಿ (ಸಂ. ೩೪, ಸಂ. ೧೫, ೧೬), ಪು. ೪