ಪ್ರೊಫೆಸರ್‌ ಡಿ. ಎಲ್‌. ನರಸಿಂಹಾಚಾರ್ಯರು ನನ್ನ ವಿದ್ಯಾ ಗುರುಗಳು. ೧೯೬೦ ರಿಂದ ೧೯೬೨ ಮೈಸೂರು ಮಹಾರಾಜ ಕಾಲೇಜಿನಲ್ಲೂ ೧೯೬೩ರಲ್ಲಿ ಮಾನಸಗಂಗೋತ್ರಿಯಲ್ಲೂ ನನಗೆ ಪಾಠ ಹೇಳಿದ ಗುರುಗಳು. ನನ್ನ ತಂದೆ ಪ್ರೊಫೆಸರ್‌ಎಚ್‌. ಎಂ. ಶಂಕರನಾರಾಯಣರಾಯರು ಅವರ ಶಿಷ್ಯರಾಗಿದ್ದರಿಂದ ನಾನು ಅವರ ಶಿಷ್ಯನಾಗುವ ಮೊದಲೇ ಅವರ ಮನೆಗೆ ಹೋಗಿಬರುತ್ತಿದ್ದೆ. ಆ ಕಾಲದಲ್ಲಿ ನನ್ನ ತಂದೆಯವರು ಡಿ. ಎಲ್‌. ನರಸಿಂಹಾಚಾರ್ಯರ ವಿದ್ವತ್ಪೂರ್ಣ ಗ್ರಂಥಗಳನ್ನು ಪ್ರಕಟಿಸುತ್ತಿದ್ದರು. ಹಾಗೆ ಪ್ರಕಟವಾದ ಗ್ರಂಥಗಳ ಪೈಕಿ ‘ಶಬ್ದಮಣಿದರ್ಪಣ’ವೂ ಒಂದು. ಮೊದಲ ಬಾರಿಗೆ ಅದು ಅಚ್ಚಾದಾಗ ಸೂತ್ರಗಳು ಉದಾಹರಣೆಗಳಿದ್ದವೇ ಹೊರತು ನಿಟ್ಟೂರು ನಂಜಯ್ಯನ ಟೀಕು ಇರಲಿಲ್ಲ. ಮರುಮುದ್ರಣದಲ್ಲಿ ಟೀಕೆಯನ್ನು ಸೇರಿಸಬೇಕೆಂದು ಗುರುಗಳು ಆದೇಶಿಸಿದ್ದರಿಂದ ನಮ್ಮ ತಂದೆಯವರು ಆ ಟೀಕೆಯನ್ನು ಪ್ರತಿಮಾಡಿ ಅಚ್ಚಿಗೆ ಸಿದ್ಧಪಡಿಸಬೇಕೆಂದು ನನಗೆ ತಿಳಿಸಿದರು. ಆಗ ನನಗೆ ಇಂಥ ಕೆಲಸದಲ್ಲಿ ಪರಿಶ್ರಮವಿರದಿದ್ದರೂ ಕಷ್ಟಪಟ್ಟು ಟೀಕೆಯ ಪ್ರತಿಯನ್ನು ಲಿಪಿ ಮಾಡಿದೆ. ಇದರಿಂದ ಗುರುಗಳಿಗೆ ಸಂತೋಷವಾಯಿತು. ಮುಂದಿನ ದಿನಗಳಲ್ಲಿ ಗುರುಗಳ ‘ವಡ್ಡಾರಾಧನೆ’, ‘ಶಬ್ದವಿಹಾರ’, ‘ಸಿದ್ಧರಾಮಚರಿತ್ರೆಯ ಸಂಗ್ರಹ’, ‘ಕನ್ನಡ ಗ್ರಂಥ ಸಂಪಾದನೆ’ ಗ್ರಂಥಗಳು ನಮ್ಮ ಶಾರದಾ ಮಂದಿರದ ಪ್ರಕಾಶನದಲ್ಲಿ ಪ್ರಕಟವಾದವು.

ಗುರುಗಳು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಸರಸ್ವತಿಪುರದಲ್ಲಿ ಕೋರ್ಟಿನ ಹಿಂಭಾಗದಲ್ಲಿ ಅವರ ಮನೆ ಕೃಷ್ಣಮೂರ್ತಿಪುರದಲ್ಲಿ ನಮ್ಮ ಮನೆಗೂ ಅವರ ಮನೆಗೂ ಸುಮಾರು ಒಂದೂಕಾಲು ಕಿಲೋಮೀಟರ್‌ದೂರ. ಅವರ ಬಹುಮಟ್ಟಿಗೆ ನಡೆದೇ ಬರುತ್ತಿದ್ದರು. ಅವರು ಮನೆಗೆ ಬಂದಾಗ ನಮಗೆಲ್ಲ ಸಂಭ್ರಮ. ಇವರ ಜೊತೆಗೆ ಪ್ರೊ. ಕೆ. ವೆಂಕಟರಾಮಪ್ಪ, ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರೂ ಗುರುಗಳ ಭಾವ ಡಾ. ಪಾರ್ಥಸಾರಥಿಯವರು ಇರುತ್ತಿದ್ದರು. ಇವರ ಗೋಷ್ಠಿಯಲ್ಲಿ ಸದಾ ಹಾಸ್ಯದ ಬುಗ್ಗೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಅಪರೂಪಕ್ಕೊಮ್ಮೆ ಪ್ರೊ. ಎಸ್‌.ವಿ. ರಂಗಣ್ಣನವರೂ ಬರುತ್ತಿದ್ದರು. ಶ್ರೀ ರಂಗಣ್ಣನವರು ಹಿರಿಯರು, ಇವರೆಲ್ಲರಿಗೂ ಗುರುಗಳು. ಹಾಗಾಗಿ ಅವರು ಹಾಜರಿದ್ದ ದಿನ ಹಾಸ್ಯ ಚಟಾಕಿಗಳ ಸದ್ದು ಬಹುವಾಗಿ ಕೇಳುತ್ತಿರಲಿಲ್ಲ.

೧೯೬೩ರಲ್ಲಿ ಗುರುಗಳು ವಿಶ್ರಾಂತ ಜೀವನವನ್ನು ನಡೆಸತೊಡಗಿದರು. ಆ ವೇಳೆಗೆ ಅವರ ಸಮಗ್ರ ಸಾಹಿತ್ಯವನ್ನು ‘ಪೀಠಿಕೆಗಳು ಲೇಖನಗಳು’ ಎಂಬ ಹೆಸರಿನಲ್ಲಿ ಡಿ.ವಿ.ಕೆ. ಮೂರ್ತಿಯವರು ಪ್ರಕಟಿಸುವ ಸನ್ನಾಹದಲ್ಲಿದ್ದರು. ಆ ವೇಳೆಗೆ ಅವರ ಆರೋಗ್ಯ ಆಗಾಗ್ಗೆ ಅಷ್ಟೊಂದು ಸರಿಯಿರುತ್ತಿರಲಿಲ್ಲ. ಆದರೂ ಅವರು ತಮ್ಮ ಸಾಹಿತ್ಯಾಭ್ಯಾಸವನ್ನು ಕೈಬಿಟ್ಟಿರಲಿಲ್ಲ. ಮುಂದೆ ೧೯೬೮-೬೯ರಲ್ಲಿ ಅವರಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನೆರವು ನೀಡಿದ್ದರಿಂದ ಅವರು ‘ಪಂಪಭಾರತ’ಕ್ಕೆ ವಿಸ್ತಾರವಾದ ಟೀಕೆಯನ್ನು ಬರೆದರು. ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ‘ಪಂಪಭಾರತ ದೀಪಿಕೆ’ ಎಂಬ ಹೆಸರಿನಲ್ಲಿ ಅದನ್ನು ಪ್ರಕಟಿಸಿತು. ಆಗ ನಾನು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾಂತರ ವಿಭಾಗದಲ್ಲಿ ಅಧ್ಯಾಪಕನಾಗಿದ್ದೆ ಈ ಗ್ರಂಥದ ಕರಡು ಪ್ರತಿಗಳನ್ನು ತಿದ್ದುವ ಕೆಲಸವನ್ನು ನನಗೆ ವಹಿಸಿದ್ದರಿಂದ ವಾರಕ್ಕೊಮ್ಮೆಯಾದರೂ ಅವರ ಭೇಟಿಯಾಗುತ್ತಿತ್ತು. ಆಗ ವಿಶ್ವವಿದ್ಯಾನಿಲಯದ ಮುದ್ರಣಾಲಯದಲ್ಲಿ ವಿಶ್ವವಿದ್ಯಾನಿಲಯದ ಕೆಲಸಕಾರ್ಯಗಳೇ ಅಧಿಕವಿರುತ್ತಿದ್ದುದರಿಂದ ಈ ಗ್ರಂಥದ ಅಚ್ಚಿನ ಕೆಲಸ ತೆವಳಿಕೊಂಡು ನಡೆಯುತ್ತಿತ್ತು. ಈ ಗ್ರಂಥದ ಮೊಳೆ ಜೋಡಿಸುವ ಕೆಲಸವನ್ನು ಒಬ್ಬನಿಗೆ ವಹಿಸಿಕೊಡಲಾಗಿತ್ತು. ಅವನು ದೂರದ ಹಳ್ಳಿಯಿಂದ ಬರಬೇಕಾದದ್ದರಿಂದ ಎಷ್ಟೋ ದಿನಗಳು ಕೆಲಸಕ್ಕೆ ಹಾಜರಾಗುತ್ತಿರಲಿಲ್ಲ. ಆತನನ್ನು ಅನುನಯದಿಂದ ಒಲಿಸಿಕೊಂಡು, ಕೆಲವು ದಿನಗಳಲ್ಲಿ ಅವನಿಗೆ ತಿಂಡಿ ತೀರ್ಥ ಕೊಡಿಸಿ, ಹೆಚ್ಚಿನ ಕೆಲಸ ಮಾಡಬೇಕೆಂದು ದುಂಬಾಲು ಬೀಲುತ್ತಿದ್ದೆ. ಅಂತೂ ಕೊನೆಗೊಮ್ಮೆ ಈ ಬೃಹತ್‌ಕಾರ್ಯ ಮುಗಿಯಿತು. ಗುರುಗಳ ಮುಖದಲ್ಲಿ ಸಂತೃಪ್ತಿ ಕಂಡಿತು. “ಈ ಗ್ರಂಥ ಅಚ್ಚಾಗುತ್ತಿರುವಾಗ ಅದರ ಕರಡಚ್ಚುಗಳ ಪರಿಶೀಲನೆಯಲ್ಲಿ ನನಗಿಂತ ಹೆಚ್ಚಾಗಿ ದುಡಿದಿರುವವರು ನನ್ನ ಕಿರಿಯ ಸ್ನೇಹಿತರಾಗಿರುವ ಶ್ರೀಮಾನ್‌ಎಚ್‌.ಎಸ್‌. ಹರಿಶಂಕರ್‌, ಎಂ.ಎ. ಅವರು; ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಸಾಲದು. ಅವರ ಆಸಕ್ತಿ ಒತ್ತಾಯಗಳಿಂದ ಅಚ್ಚಿನ ಕೆಲಸ ವೇಗವಾಗಿ ನಡೆಯುವಂತಾಯಿತು. ಮುಖ್ಯವಾಗಿ ಅವರು ನನ್ನ ಶ್ರಮವನ್ನು ಬಲುಮಟ್ಟಿಗೆ ಕಡಿಮೆ ಮಾಡಿದ್ದಾರೆ…….” ಎಂದು ಬರೆದರು. ಗುರುಗಳ ಈ ಮಾತುಗಳಿಗಿಂತ ಬೇರೆ ಯಾವ ಶಿಫಾರಸು ತಾನೇ ಬೇಕು!.

ಮುಂದೆ ಗುರುಗಳ ಆರೋಗ್ಯ ಸ್ವಲ್ಪ ಮಟ್ಟಿಗೆ ಹದಗೆಟ್ಟಿತು. ಅವರಿಗೆ ಲಘು ಹೃದಯಾಘಾತವಾಯಿತು. ಅನಿವಾರ್ಯವಾಗಿ ಕೃಷ್ಣರಾಜೇಂದ್ರ ಆಸ್ಪತ್ರೆಗೆ ದಾಖಲಾದರು. ಈ ಸಂದರ್ಭದಲ್ಲಿ ರಾತ್ರಿ ವೇಳೆ ಅವರನ್ನು ನೋಡಿಕೊಳ್ಳುವ ಸಲುವಾಗಿ ಒಬ್ಬರ ಅವಶ್ಯಕತೆಯಿತ್ತು. ಗುರುಗಳು ಸಂಕೋಚದಿಂದಲೇ ಈ ವಿಷಯವನ್ನು ನಮ್ಮ ತಂದೆಗೆ ತಿಳಿಸಿದಾಗ ಅವರು ‘ನೀವೇನೂ ಯೋಚಿಸಬೇಡಿ. ನನ್ನ ಮಗನನ್ನು ಕಳುಹಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು. ಆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಇಡೀ ರಾತ್ರಿಯನ್ನು ಅವರೊಂದಿಗೆ ಕಳೆದದ್ದು ನನ್ನ ಸೌಭಾಗ್ಯವೆಂದು ನಂಬಿದ್ದೇನೆ. ಆ ಮುಂದಿನ ದಿನಗಳಲ್ಲೂ ವಾರಕ್ಕೊಮ್ಮೆ ಅವರನ್ನು ಕರೆದುಕೊಂಡು ಕೆ. ಆರ್‌. ಆಸ್ಪತ್ರೆಗೆ ಹೋಗುತ್ತಿದ್ದೆ. ಡಾ ಜಾಧವ್‌ಎಂಬ ಪ್ರಸಿದ್ಧ ವೈದ್ಯರು ಇವರನ್ನು ನೋಡಿಕೊಳ್ಳುತ್ತಿದ್ದರು. ಒಮ್ಮೆ ಹೀಗಾಯಿತು, ನಾನು ಗುರುಗಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಹೋಗಲಿಲ್ಲ. ಅವರು ಬೇರೆ ಯಾರದೋ ನೆರವಿನಿಂದ ಹೋದರೆನ್ನಿ. ಮುಂದಿನ ನಾಲ್ಕೈದು ದಿನಗಳು ಅವರನ್ನು ಕಾಣಲು ಹೋಗಲಿಲ್ಲ. ಒಂದು ದಿನ ಬೆಳಿಗ್ಗೆ ನನ್ನ ಹೆಸರಿಗೊಂದು ಕಾರ್ಡು ಬಂತು. ಅದರಲ್ಲಿ ಇಂಗ್ಲಿಷಿನಲ್ಲಿ ಬರೆದ ನಾಲ್ಕೈದು ಸಾಲುಗಳು. ಮೊದಲ ಸಾಲನ್ನು ಓದುತ್ತಿದ್ದಂತೆಯೇ ನನಗೆ ನನ್ನ ತಪ್ಪಿನ ಅರಿವಾಯಿತು. ‘My dear Hari Shankar How HHis that you have forgotten me’ ಎಂಬ ಮೊದಲ ವಾಕ್ಯವೆ ನನ್ನ ಹೃದಯವನ್ನು ಕಲಕಿತ್ತು. ಆಮೇಲೆ ಅವರು ಅಲ್ಲಿಗೆ ಹೋಗುತ್ತಿರುವವರೆಗೂ ನಾನು ಅವರ ಜೊತೆಗಿರುತ್ತಿದ್ದೆ.

ನನ್ನ ಗುರುಗಳು ಪ್ರಸಿದ್ಧ ವಿದ್ವಾಂಸರು. ಸದಾ ನಗುಮುಖ. ಕೋಪ ಮಾಡಿಕೊಳ್ಳುತ್ತಿದ್ದದ್ದೇ ಅಪರೂಪ. ಅವರ ವೈದುಷ್ಯವನ್ನು ಕುರಿತು ಮತ್ತೊಬ್ಬ ಶ್ರೇಷ್ಠ ಗುರುಗಳೂ ವಿಶಾಲ ಹೃದಯರೂ ಆಗಿದ್ದ ಪ್ರೊ. ತೀ.ನಂ.ಶ್ರೀಕಂಠಯ್ಯನವರು ಹೀಗೆ ಹೇಳುತ್ತಿದ್ದರು. ‘ಈ ಶಬ್ದದ ಮುಂದಿರುವ ಪ್ರಶ್ನಾರ್ಥಕ ಚಿಹ್ನೆ ಸದ್ಯಕ್ಕೆ ಹಾಗೆಯೇ ಉಳಿದಿರುತ್ತದೆ’

ಇಂತಹ ಗುರುಗಳು ನೆನಪಿಗೆ ನನ್ನ ಸಾವಿರ ನಮಸ್ಕಾರ.