ಡಿ.ಎಲ್.ಎನ್. ಅವರು ನಮ್ಮ ಗುರುಗಳು. ೧೯೫೮-೫೯ರ ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿ ಮೈಸೂರು ಮಹಾರಾಜರವರ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೆ. ಮೊದಲ ವರ್ಷದ ಬಿ.ಎ., ತರಗತಿಯಲ್ಲಿ ಕನ್ನಡವನ್ನು ಪ್ರಧಾನ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಒಂಬತ್ತು ವಿದ್ಯಾರ್ಥಿಗಳಿದ್ದೆವು- ಅವರೆಂದರೆ ಶ್ರೀಮತಿ ಬಿ.ವೈ. ಲಲಿತಾಂಬ, ಸರ್ವಶ್ರೀಗಳಾದ ಕೆ. ಮರುಳಸಿದ್ಧಪ್ಪ, ಜಿ.ಟಿ. ಮರುಳುಸಿದ್ಧಪ್ಪ, ಲಕ್ಕೆಗೌಡ, ಆರ್. ರಾಮಯ್ಯ, ಬಿ. ನರಸಿಂಹಮಯ್ಯ, ಸಿ.ಕೆ. ಪರಶುರಾಮಯ್ಯ, ಕೆ.ಪಿ. ಪ್ರಸನ್ನ ಕುಮಾರ್ ಮತ್ತು ನಾನು. ನನ್ನ ಸಹಪಾಠಿಗಳೆಲ್ಲರು ಮುಂದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿ ಹೆಸರು ಮಾಡಿದ್ದಾರೆ.

ನಾವೆಲ್ಲರೂ ತರಗತಿಯಲ್ಲಿ ಕುಳಿತಿದ್ದೆವು. ವೇಳಾಪಟ್ಟಿಯಲ್ಲಿ ಡಿ.ಎಲ್.ಎನ್. ಅವರು ತರಗತಿಯನ್ನು ತೆಗೆದುಕೊಳ್ಳುವರೆಂದು ನಿಗದಿಯಾಗಿತ್ತು. ನಮ್ಮ ತರಗತಿಗೆ ಕಚ್ಚೆ ಪಂಚೆ, ಕ್ಲೋಸ್ ಕಾಲರ್ ಕೋಟು. ಕನ್ನಡಕ, ಹಾಸನದ ಟೋಪಿ ಧರಿಸಿದ ಒಂಟಿನಾಮದ ಉಪಾಧ್ಯಾಯರು ಬಂದರು. ಸ್ಥೂಲ ಶರೀರಿಯಾದ ಅವರನ್ನು ನೋಡಿ ಅವರೆ ಡಿ.ಎಲ್.ಎನ್. ಎಂದು ಊಹಿಸಿದೆವು. ಅದು ನಿಜವಾಗಿತ್ತು.

ಡಿ.ಎಲ್.ಎನ್ ಅವರು ಹಾಜರಿ ಹಾಕುವಾಗ ಎಲ್ಲರ ಮುಖವನ್ನು ನೋಡಿ ಪರಿಚಯ ಮಾಡಿಕೊಂಡರು. ಆ ತರಗತಿಯಲ್ಲಿ ನಂಜನಗೂಡು ಅನಂತನಾರಾಯಣ ಶಾಸ್ತ್ರಿಗಳು ಅನುವಾದಿಸಿದ ಹರ್ಷನ ನಾಗಾನಂದ ನಾಟಕ ಪಠ್ಯವಾಗಿತ್ತು.

ಡಿ.ಎಲ್.ಎನ್. ಅವರು ಆ ಪುಸ್ತಕವನ್ನು ತೆಗೆದು ಮೊದಲನೆಯ ಪದ್ಯವನ್ನು ಓದುವಂತೆ ತಿಳಿಸಿದರು: ಆ ಪದ್ಯ-

ಧ್ಯಾನವ್ಯಾಜದಿನಾವಳಂ ನೆನೆವೆ ಪೇಳ್ ಪೂಗೋಲ್ಗೆಪಕ್ಕಾಗಿ ಬಂ
ದೀನಮ್ಮಂ ನಸುನೋಡು ಕಣ್ದೆರೆದಿದೇಂ ತಂದೆ ಕಾವಾತಾನೇ ಕಾಯೆಯಾ
ನೀನೆಂತಪ್ಪೆದಯಾಳು ನಿರ್ಘೃಣರದಾರ್ ನಿನ್ನಂದಮೆಂದೀರ್ಪೆಯಿಂ
ದಾನಂಗಾಂಗನೆಯರ್ಕಳಾಡಿದನಘಂ ಕೈಗಾಯ್ಗೆ ಮಾಯಾಸುತಂ ||

ಎಂದು ಬುದ್ಧನನ್ನು ಸುತ್ತಿಸುವಂಥದು. ನಾವು ಯಾರೂ ಅದನ್ನು ಸರಿಯಾಗಿ ಓದಲಿಲ್ಲ. ಡಿ.ಎಲ್.ಎನ್. ಅವರು ನೀವು ಬಿ.ಎ. ವಿದ್ಯಾರ್ಥಿಗಳು ಒಂದು ಪದ್ಯವನ್ನು ಸರಿಯಾಗಿ ಓದಲಾರಿರಿ, ಪದಚ್ಛೇದ, ಅನ್ವಯ, ಅರ್ಥ, ಅದರ ಸ್ವಾರಸ್ಯವನ್ನು ನೀವು ಏನು ತಾನೆ ಬಲ್ಲಿರಿ. ನಾಲ್ಕನೆಯ ತರಗತಿಯಲ್ಲಿದ್ದಾಗಲೆ ನನಗೆ ಜೈಮಿನಿ ಭಾರತ ಪೂರ್ತಿ ಕಂಠಪಾಠವಾಗಿತ್ತು. ಓದು ಎಂದರೆ ಬರಿ ಪಠ್ಯಪುಸ್ತಕ ಓದುವುದಲ್ಲ. ಎಲ್ಲವನ್ನೂ ಓದಬೇಕು. AssReading- ಕತ್ತೆ ಹೇಗೆ ಎಲ್ಲವನ್ನೂ ತಿನ್ನುತ್ತದೆಯೊ ಹಾಗೆ. ಯಾವ ಓದು ಯಾವಾಗ ಪ್ರಯೋಜನಕ್ಕೆ ಬರುತ್ತದೆಯೊ ಬಲ್ಲವರಾರು ಮುಂತಾಗಿ ಹಿತವಚನವನ್ನು ಹೇಳಿದರು.

ನಾಗಾನಂದ ನಾಟಕದ ಅಧ್ಯಯನಕ್ಕೆ ಪೂರ್ವಭಾವಿಯಾಗಿ ಇರಬೇಕಾದ ಸಂಸ್ಕೃತಿ ಸಾಹಿತ್ಯದ ಪರಿಚಯ, ಅಂದಿನ ಸಾಮಾಜಿಕ ಪರಿಸ್ಥಿತಿಯ ಅರಿವು, ನಾಟಕಕಾರನ ರಾಜಕೀಯ ಜೀವನ ಮತ್ತು ಸಾಹಿತ್ಯ ಸಂಸ್ಕೃತಿಗಳ ಒಲವು. ಅಂದು ಪ್ರಧಾನವಾಗಿದ್ದ ಬೌದ್ಧ ಧರ್ಮದ ನೆಲೆ ಬೆಲೆ ಹೀಗೆ ವಿಸ್ತಾರವಾದ ಚೌಕಟ್ಟಿನಲ್ಲಿ ನಾಗಾನಂದ ನಾಟಕವನ್ನು ಅಧ್ಯಯನ ಮಾಡಬೇಕು ಎಂದು ಪ್ರಾರಂಭಿಸಿ ವರ್ಷವಿಡೀ ಆ ನಾಟಕವನ್ನು ಪಾಠ ಮಾಡಿದರು.

ಮೊದಲನೆಯ ವರ್ಷದ ಬಿ.ಎ., ತರಗತಿಗೆ ಪು.ತಿ. ನರಸಿಂಹಾಚಾರ್ ಅವರು ‘ಗಣೇಶ ದರ್ಶನ’ ಪಠ್ಯವಾಗಿತ್ತು. ಪ್ರೊ. ತೀ.ನಂ. ಶ್ರೀಕಂಠಯ್ಯನವರು ಗಣೇಶ ದರ್ಶನ-ನೀಳ್ಗವನ ಮತ್ತು ನೆರಳು ಎನ್ನುವ ಕವಿತೆಯನ್ನು ಬೋಧಿಸಿದರು. ಮಹಾತ್ಮ ಗಾಂಧಿಯ ವ್ಯಕ್ತಿತ್ವ ಅಲ್ಲಿ ಹೇಗೆ ವಿಕಸನಗೊಂಡಿದೆ ಎನ್ನುವುದನ್ನು ತೋರಿಸಿದರು. ಕಾರಣಾಂತರಗಳಿಂದ ಅವರು ಅದನ್ನು ಮುಂದುವರಿಸಲಾಗಲಿಲ್ಲ. ನಾವು ಡಿ.ಎಲ್.ಎನ್. ಅವರ ಬಳಿ ಹೋಗಿ ಪಠ್ಯ ಭಾಗ ಮುಗಿದಿಲ್ಲ- ಪರೀಕ್ಷೆಗೆ ತೊಂದರೆಯಾಗಿದೆ ಎಂದೆವು. ಡಿ.ಎಲ್.ಎನ್. ಅವರು ಉಳಿದ ಪಠ್ಯಭಾಗವನ್ನು ಮುಗಿಸಿದರು. ಈ ಶತಮಾನದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಪು.ತಿ.ನ ಅವರ ಕಾವ್ಯಾಭ್ಯಾಸ ಮಾಡುವ ಸೂಕ್ಷ್ಮಗಳನ್ನು ಈ ಇಬ್ಬರು ಮಹನೀಯರಿಂದ ತಿಳಿಯುವಂತಾಯಿತು.

ಮಹಾರಾಜರವರ ಕಾಲೇಜಿನ ತಿಳಿವಳಿಕೆ ಫಲಕ (Notice Board)ದಲ್ಲಿ ಆ ವರ್ಷದ ಬೋಧನಾ ಶುಲ್ಕ ರಿಯಾಯಿತಿಗೆ ಅರ್ಜಿಯನ್ನು ಕರೆದಿದ್ದರು. ಅದರಂತೆ ನಾನು ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಸಿದ್ದವರನರನು ಸಂದರ್ಶನಕ್ಕಾಗಿ ಕರೆದಿದ್ದರು. ಪ್ರಾಂಶುಪಾಲರಾದ ಸಿ.ಡಿ. ನರಸಿಂಹಯ್ಯನವರು, ಡಿ.ಎಲ್.ಎನ್. ಅವರು ಮತ್ತಿತರರು ಅಲ್ಲಿದ್ದರು. ಅದೇ ಮೊದಲು ಪ್ರಾಂಶುಪಾಲರ ಕೊಠಡಿಗೆ ಪ್ರವೇಶಿಸಿದ ನಾನು ತಬ್ಬಿಬ್ಬಾಗಿ ನಿಂತಿದ್ದೆ. ಸಿ.ಡಿ. ನರಸಿಂಹಯ್ಯನವರು ಕುಳಿತುಕೊಳ್ಳಲು ಹೇಳಿದರು. ಅದರಂತೆ ಕುಳಿತೆ. ಹೆಸರು, ತರಗತಿ, ಊರು ಮುಂತಾದುವನ್ನೆಲ್ಲ ವಿಚಾರಿಸುತ್ತಿದ್ದಂತೆ ಡಿ.ಎಲ್.ಎನ್ ಅವರು What isyour Father ಎಂದರು. ನನಗೆ ಪ್ರಶ್ನೆ ಅರ್ಥವಾಗಲಿಲ್ಲ. ಸುಮ್ಮನೆ ಕುಳಿತಿದ್ದೆ. ಡಿ.ಎಲ್.ಎನ್. ಅವರಿಗೆ ಅರ್ಥವಾಯಿತು. ಇವನಿಗೆ ಇಂಗ್ಲಿಷ್ ಅರ್ಥವಾಗಿಲ್ಲವೆಂದು. ನಿಮ್ಮ ತಂದೆ ಏನ್ ಮಾಡ್ತಾರೆ ಅಂದರು. ನಾನು ಜಮೀನಿದೆ ಅದರ ಆದಾಯದಿಂದ ಬದುಕುತ್ತಿದ್ದೇವೆ ಎಂದೆ. ಆಯಿತು Improve your English ಎಂದರು. ಬೋಧನಾ ಶುಲ್ಕದ ಅರ್ಧದಷ್ಟು ರಿಯಾಯಿತಿ ದೊರೆಯಿತು.

ನಾನು ನನ್ನ ಇಂಗ್ಲಿಷನ್ನು ಅಭಿವೃದ್ಧಿ ಪಡಿಸಿಕೊಳ್ಳಲು ೧೯೮೭ ರಿಂದ ೧೯೯೨ ರವರೆಗೆ ಕಾಯಬೇಕಾಯಿತು. ನನ್ನ ಮಗಳು ಎಂ. ನಾಗರತ್ನ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ಮಹಾರಾಜರವರ ಕಾಲೇಜಿನಲ್ಲಿ ಬಿ.ಎ. ಪದವಿಗೂ ಮಾನಸ ಗಂಗೋತ್ರಿಯಲ್ಲಿ ಎಂ.ಎ., ಪದವಿಗೂ ಓದುವಾಗ ಅವಳ ಪಠ್ಯಪುಸ್ತಕಗಳನ್ನು ಬಿಡದೆ ಓದಿದೆ. ಅದರ ಜೊತೆ ಜೊತೆಗೇ ನಾನು ಓದಿದ್ದ ಇಂಗ್ಲೀಷ್ ಸಾಹಿತ್ಯ, ಭಾಷೆ, ಕಾವ್ಯ ಮೀಮಾಂಸೆ, ವಿಮರ್ಶೆಗಳ ಬಗ್ಗೆ ಹೇಳುತ್ತ ಇದ್ದೆ. ಕನ್ನಡ ಎಂ.ಎ., ಮಾಡಿದ ನಮ್ಮ ಅಪ್ಪ ಇಂಗ್ಲಿಷ್ ಭಾಷೆ, ಸಾಹಿತ್ಯದ ಬಗ್ಗೆ ಇಷ್ಟೆಲ್ಲ ಹೇಳುತ್ತಾರಲ್ಲ ಎಂದು ಅವಳಿಗೆ ಆಶ್ಚರ್ಯ. ಅವಳು ಆ ಬಗ್ಗೆ ನನ್ನನ್ನು ಪ್ರಶ್ನಿಸಿದಾಗ ಡಿ.ಎಲ್.ಎನ್ ಅವರ Ass Reading ಬಗ್ಗೆ ಹೇಳಿದೆ. ಈ ಮಾತು ನಿನಗೂ ಅನ್ವಯಿಸುತ್ತದೆ ಚೆನ್ನಾಗಿ ಓದು ಎಂದೆ. ಅವಳು ಆ ಮಾತನ್ನು ಕಾರ್ಯಗತ ಗೊಳಿಸಿದಳು.

ಮೂರನೆಯ ವರ್ಷದ ಬಿ.ಎ., ತರಗತಿಗೆ ಡಿ.ಎಲ್.ಎನ್ ಅವರು ಪಂಪಭಾರತದ ೧೨ ಮತ್ತು ೧೩ನೆಯ ಆಶ್ವಾಸಗಳನ್ನು ಪಾಠ ಮಾಡಿದರು. ಅವರಿಗೆ ಪ್ರಿಯವಾದ ಕಾವ್ಯ ಮತ್ತು ಕಾವ್ಯಭಾಗ ಅದು. ಪಂಪನ ಕಾವ್ಯದ ಸ್ವಾರಸ್ಯವನ್ನು ಎಳೆ ಎಳೆಯಾಗಿ ಬಿಡಿಸಿದರು. ಪಾತ್ರ ಪರಿಚಯವನ್ನು ಮಾಡಿದರು. ವಸ್ತು ವಿನ್ಯಾಸದ ವೈಶಿಷ್ಟ್ಯವನ್ನು ಹೇಳಿದರು. ಹೀಗೆ ಅವರು ಪಾಠ ಮಾಡುತ್ತಿರುವಾಗ ನಮ್ಮ ಸಹಪಾಠಿಯೊಬ್ಬರು ತರಗತಿಗೆ ತಡವಾಗಿ ಬಂದರು. ಡಿ.ಎಲ್.ಎನ್ ಅವರು ತರಗತಿಗೆ ಸೇರಿಸಲಿಲ್ಲ. ಅವರು ಹೊರಗಡೆ ನಿಂತಿದ್ದರು. ತರಗತಿ ಮುಗಿದ ಮೇಲೆ ಡಿ.ಎಲ್.ಎನ್ ಅವರನ್ನು ಕೊಠಡಿಗೆ ಕರೆದರು ಏಕೆ ತಡವಾಯಿತು ಎಂದರು. ನನ್ನ ಗೆಳೆಯರು ಊಟಕ್ಕೆ ತಾವು ಮಾಡಿಕೊಂಡಿದ್ದ ವಾರದ ಮನೆಯ ವ್ಯವಸ್ಥೆ, ಅಂದು ಆ ಮನೆಯಲ್ಲಿ ಊಟವಾಗುವುದು ತಡವಾದುದರ ಬಗ್ಗೆ ತಿಳಿಸಿದರು. ಡಿ.ಎಲ್.ಎನ್ ಒಂದು ಕ್ಷಣ ಕಸಿವಿಸಿಗೊಂಡರು. ಅನಂತರ ವಾರದ ಎಲ್ಲ ದಿನವೂ ಊಟಕ್ಕೆ ಏರ್ಪಾಟು ಆಗಿದೆಯೇ? ಎಂದರು. ನಮ್ಮ ಗೆಳೆಯರು ನಿರ್ದಿಷ್ಟ ದಿನವೊಂದನ್ನು ಹೆಸರಿಸಿ ಅಂದು ಇಲ್ಲ ಎಂದರು. ಡಿ.ಎಲ್.ಎನ್ ಅವರು ನಮ್ಮ ಗೆಳೆಯರಿಗೆ ಪತ್ರವೊಂದನ್ನು ಕೊಟ್ಟು ಪ್ರೊ. ಸಿ.ಡಿ. ನರಸಿಂಹಯ್ಯನವರು ಏರ್ಪಾಟು ಮಾಡಿದ ಹೆಲ್ತ್ ಕಿಚನ್‌ನಲ್ಲಿ ಊಟದ ವ್ಯವಸ್ಥೆ ಮಾಡಿದರು. ಆ ವೆಚ್ಚವನ್ನು ಅವರು ಭರಿಸಿದರು. ಆ ಘಟನೆ ನಮ್ಮೆಲ್ಲರ ಹೃದಯದಲ್ಲಿ ಇಂದಿಗೂ ಅಚ್ಚೊತ್ತಿದೆ.

೧೯೬೦ನೆಯ ಇಸವಿ ಬೀದರ್ ನಲ್ಲಿ ೪೧ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅದರ ನಿಯೋಜಿತ ಅಧ್ಯಕ್ಷರಾಗಿ ಡಿ.ಎಲ್.ಎನ್ ಅವರು ಆಹ್ವಾನಿತರಾಗಿದ್ದರು. ಆ ಮಾತಿನಿಂದ ಮಹಾರಾಜರವರ ಕಾಲೇಜಿನ ವಿದ್ಯಾರ್ಥಿಗಳು ರೋಮಾಂಚನಗೊಂಡರು. ಕಾಲೇಜಿನ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು. ಬಿ.ಎ. ವೈಕುಂಠರಾಜು ಅವರ ವಿನಂತಿಯ ಮೇರೆಗೆ ಡಿ.ಎಲ್.ಎನ್ ಅವರು ಹಾಸನದ ಟೋಪಿ ಬಿಟ್ಟು ಮೈಸೂರು ಪೇಟವನ್ನು ಧರಿಸಿ ಬಂದಿದ್ದರು. ಉಪಾಧ್ಯಾಯ ವರ್ಗ, ವಿದ್ಯಾರ್ಥಿ ವೃಂದ ಮತ್ತು ಮೈಸೂರಿನ ಸಾಮಾಜಿಕರು ಅಲ್ಲಿ ಸಮಾವೇಶಗೊಂಡಿದ್ದರು. ಒಬ್ಬರಾದ ಮೇಲೆ ಒಬ್ಬರು ಡಿ.ಎಲ್.ಎನ್ ಅವರ ಪಾಂಡಿತ್ಯ, ಪ್ರತಿಭೆ, ವಿದ್ವತ್ತು, ಸೌಜನ್ಯ, ಸೌಶೀಲ್ಯಗಳನ್ನು ಕುರಿತು ಗುಣಗಾನ ಮಾಡಿದರು. ಡಿ.ಎಲ್.ಎನ್ ಅವರು ಆ ಭಾವನೆಗಳನ್ನು ವಿನೀತರಾಗಿ ಸ್ವೀಕರಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.

ಆ ಸಮಾರಂಭದಲ್ಲಿ ಅವರಿಗೆ ಮಾಲಾರ್ಪಣೆ ನಡೆಯಿತು. ಒಂದಾದ ಮೇಲೆ ಒಂದು ಹಾರ ಅವರ ಕೊರಳನ್ನು ಅರ್ಪಿಸಿತು. ಒಬ್ಬ ಮನುಷ್ಯನಿಗೆ ಅಷ್ಟೊಂದು ಹಾರ ಹಾಕಿದುದನ್ನು ನಾನು ನೋಡಿಯೇ ಇರಲಿಲ್ಲ. ಅವರ ಆಗಿನ ಭಾವವನ್ನುಳ್ಳ, ಭಂಗಿಯನ್ನುಳ್ಳ ಭಾವಚಿತ್ರ ಪ್ರಬುದ್ಧ ಕರ್ನಾಟಕದ ವಸ್ತು ಕೋಶದಲ್ಲಿ ಪ್ರಕಟವಾಯಿತು. ಆ ಭಾವಚಿತ್ರಕ್ಕೆ “ಸುಮಭಾರಕೆ ಕುಸಿದಿದೆ ವಿದ್ವತ್ತಿನ ಕೊರಳು” ಎಂದು ಕೊಟ್ಟಿದ್ದ ಶೀರ್ಷಿಕೆ ಅವರ ವಿದ್ಯಾರ್ಥಿಗಳಲ್ಲಿ ಇಂದಿಗೂ ನೆಲೆಗೊಂಡಿದೆ.

ಡಿ.ಎಲ್.ಎನ್ ಅವರು ಒಳ್ಳೆಯ ಟೆನ್ನಿಸ್ ಪಟು. ಮಹಾರಾಜರವರ ಕಾಲೇಜಿನ ಮುಂದಿನ ಬಯಲಿನಲ್ಲಿದ್ದ ಟೆನಿಸ್ ಅಂಕಣದಲ್ಲಿ ಅಂದಿನ ಉಪಾಧ್ಯಾಯ ವೃಂದ ಟೆನ್ನಿಸ್ ಆಡುತ್ತಿದ್ದರು. ಪಂದ್ಯಗಳು ಏರ್ಪಟ್ಟಾಗ ಡಿ.ಎಲ್.ಎನ್ ಅವರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳಲು ಮೇಲಾಟ ಆಗುತ್ತಿತ್ತು. ಡಿ.ಎಲ್.ಎನ್ ಅವರ Serviceಗಳನ್ನು ಎದುರಿಸುವುದೇ ಕಷ್ಟವಾಗುತ್ತಿತ್ತು. ಅವರ ಅನೇಕ ಏಸ್‌ಗಳು ಆಟದ ಗತಿಯನ್ನು ಬದಲಿಸುತ್ತಿದ್ದುವು. ಇದಕ್ಕೆ ಮೊದಲು ಡಿ.ಎಲ್.ಎನ್ ಅವರು ಪುಟ್‌ಬಾಲ್ ಆಟವನ್ನು ಆಡುತ್ತಿದ್ದರು. ವಾಲಿಬಾಲ್‌ನಲ್ಲಿ ಪರಿಣತಿ ಇದ್ದಿತು. ಡಿ.ಎಲ್.ಎನ್ ಅವರ ಟೆನ್ನಿಸ್ ರ್ಯಾಕೆಟ್ ಅನ್ನು ಅವರ ಮೊಮ್ಮಗ ಜಯಸಿಂಹ ಬಳಸಿದುದುಂಟು.

ಎಂ.ಎ., ತರಗತಿಯ ಮೊದಲ ವರ್ಷ ಎಂದರೆ ೧೯೬೧-೬೨ರಲ್ಲಿ ಅವರು ನಮಗೆ ಗ್ರಂಥಸಂಪಾದನೆಯನ್ನು ಪಾಠ ಹೇಳಿದರು. ಅದು ನಮಗೆ ಒಂದು ಹೊಸ ಪ್ರಪಂಚವನ್ನೇ ತೆರೆದು ತೋರಿಸಿತು. ಮಂಗಳದ ಬೆಳೆಗೆ ಇಂಗಳದ ಮಳೆ ಸುರಿದುದೆ ಮಹಾದೇವ, ಚೂತವನ ಚೈತ್ರ, ತೂಲಕಾಲಪವನಂ ಮುಂತಾದ ಪಾಠ ಪರಿಷ್ಕರಣಗಳ ವಿಚಾರ ನಮಗೆ ಹೊಸತು ಹೊಸತು. ಆ ಪಾಠದ ಟಿಪ್ಪಣಿಗಳು ಮುಂದೆ ಗ್ರಂಥಸಂಪಾದನೆ ಎನ್ನುವ ಕೃತಿಯಾಗಿ ಹೊರಬಂದಿತು. ಅದುವರೆಗೆ ರೈಸ್‌ರ ಪಂಪಭಾರತ, ಕಿಟ್ಟಲ್‌ರ ನಾಗವರ್ಮನ ಛಂದೋಬುಧಿ, ಕೇಶಿರಾಜನ ಶಬ್ದ ಮಣಿದರ್ಪಣ, ಬೇಗೂರು ಮಲ್ಲಪ್ಪನವರ ಕರ್ನಾಟಕ ಕಾದಂಬರಿ, ರಾಜಶೇಖರ ವಿಳಾಸ, ಕೆ.ಬಿ. ಪಾಠಕರ ಕವಿರಾಜಮಾರ್ಗ, ಆರ್. ನರಸಿಂಹಾಚಾರ್ಯರ ಕಾವ್ಯಾವಲೋಕನ, ಎಂ.ಎ. ರಾಮಾನುಜ ಅಯ್ಯಂಗಾರ್ ಅವರ ಕಾವ್ಯ ಕಲಾನಿಧಿಯ ಮೂಲಕ ಬಂಧ ಹಳೆಗನ್ನಡ ಗ್ರಂಥಗಳ ಪರಿಷ್ಕರಣೆ ನಡೆದಿತ್ತು. ಸಂಪಾದಕರು ತಾವು ಕಂಡುಕೊಂಡ ಮಾರ್ಗದಲ್ಲಿ ಸಂಪಾದಿಸುತ್ತಿದ್ದರು. ಆ ಎಲ್ಲ ಪರಿಕರಗಳನ್ನು ಬಳಸಿಕೊಂಡು ಕನ್ನಡ ಸಾಹಿತ್ಯಕ್ಕೆ ಒಂದು ಆಯಾಮ ಕಲ್ಪಿಸುವ ಕೆಲಸವನ್ನು ಗ್ರಂಥಸಂಪಾದನೆ ಕೃತಿ ಮಾಡಿತು. ನನ್ನ ವೃತ್ತಿಜೀವನದಲ್ಲಿ ಈ ಪುಸ್ತಕದಿಂದ ಆದ ಪ್ರಭಾವ ಪರಿಣಾಮ ಅಪರಿಮಿತವಾದುದು.

೧೨.೬.೬೪ ರಿಂದ ೧೩.೬.೬೭ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಯೋಜನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತುದು ನನ್ನ ಭಾಗ್ಯ ವಿಶೇಷ. ಅಲ್ಲಿ ಸಹಾಯಕ ಸಂಪಾದಕನಾಗಿ ಸೇರಿ ಬಡ್ತಿ ಪಡೆದು ಉಪಸಂಪಾದಕನಾಗಿ ಕೆಲಸ ಮಾಡಿದೆ. ಪ್ರೊ. ತೀ.ನಂ. ಶ್ರೀಕಂಠಯ್ಯನವರು ಸಂಪಾದಕ ಸಮಿತಿಯ ಅಧ್ಯಕ್ಷರಾಗಿದ್ದರು. ಡಿ.ಎಲ್.ಎನ್ ಅವರು ಉಪಾಧ್ಯಕ್ಷರಾಗಿದ್ದರು. ಪ್ರೊ. ಡಿ. ಜವರೇಗೌಡರು, ಪ್ರೊ. ಮರಿಯಪ್ಪ ಭಟ್ಟರು, ಪ್ರೊ. ಡಿ.ಕೆ. ಭೀಮಸೇನರಾಯರು, ಪ್ರೊ. ಸ.ಸ. ಮಾಳವಾಡರು, ಪ್ರೊ. ರಂ.ಶ್ರೀ ಮುಗಳಿಯವರು, ಪ್ರೊ. ಆರ್.ಸಿ. ಹಿರೇಮಠ ಅವರು, ಶ್ರೀ ಸಿದ್ಧಯ್ಯ ಪುರಾಣಿಕರು, ಶ್ರೀ ಕಾ.ಸ. ಧರಣೀಂದ್ರಯ್ಯನವರು, ಶ್ರೀ ಡಿ.ಸಿ. ಸುಬ್ಬರಾಯಪ್ಪನವರು, ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು.

ಪ್ರತಿತಿಂಗಳು ಎರಡನೆಯ ಶನಿವಾರದಂದು ನಿಘಂಟು ಸಭೆ ಸೇರುತ್ತಿತ್ತು. ಸಂಪಾದಕರಾದ ಶ್ರೀ ಎನ್. ಬಸವರಾಧ್ಯರು ಆ ಸಭೆಗೆ ಬೇಕಾದ ಮಾಹಿತಿಯನ್ನು ಸಿದ್ಧಪಡಿಸುತ್ತಿದ್ದರು. ಕಚೇರಿಯ ಪರವಾಗಿ ಅವರು ಮತ್ತು ಅವರ ಸಿಬ್ಬಂದಿಯಲ್ಲಿ ಯಾರಾದರೂ ಒಬ್ಬರು ಭಾಗವಹಿಸುತ್ತಿದ್ದರು. ಕೆಲವು ಕಾಲಾ ನಂತರ ನನಗೂ ಆ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸುತ್ತಿತ್ತು.

ನಿಘಂಟು ಸಮಿತಿ ಸಬೆಯಲ್ಲಿ ಚರ್ಚೆ ಸೌಹಾರ್ದಪೂರ್ಣ ವಾತಾವರಣದಲ್ಲಿ ನಡೆಯುತ್ತಿತ್ತು. ಪಾಂಡಿತ್ಯ ತನ್ನ ಗರಿಗೆದರುತ್ತಿತ್ತು. ಒಂದು ಶಬ್ದ, ಅದರ ಭಿನ್ನರೂಪಗಳು, ಅರ್ಥ ಪ್ರಾದೇಶಿಕ ಭಿನ್ನತೆಗಳನ್ನು ಗುರುತಿಸುವಲ್ಲಿ, ದಾಖಲಿಸುವಲ್ಲಿ ಉಂಟಾಗುತ್ತಿದ್ದ ಅಭಿಪ್ರಾಯ ಭೇದಗಳು, ಸಮರ್ಥನೆಗಳು ಹೀಗೆ ಸಭೆ ರಂಜನೀಯವಾಗಿರುತ್ತಿತ್ತು. ನಮ್ಮ ಜ್ಞಾನ ವಿಸ್ತರಿಸುತ್ತಿತ್ತು. ಕನ್ನಡ ನಿಘಂಟಿನ ಕರಡು ಪ್ರತಿಯನ್ನು ಸಿದ್ಧಪಡಿಸುವ ಮೊದಲು ಸಲಹೆ ಸೂಚನೆಗಳಿಗೆ, ಸಂದೇಹ ಪರಿಹಾರಕ್ಕೆ ಶ್ರೀ. ಎನ್. ಬಸವರಾಧ್ಯರು ತಿಂಗಳಿಗೊಮ್ಮೆ ಮೈಸೂರಿಗೆ ಬರುತ್ತಿದ್ದರು. ಅವರೊಡನೆ ನಾವು ಯಾರಾದರೊಬ್ಬರು ಇರುತ್ತಿದ್ದೆವು. ಪ್ರೊ. ತೀ.ನಂ. ಶ್ರೀಕಂಠಯ್ಯನವರಲ್ಲಿ ಚರ್ಚಿಸಿದ ಅನಂತರ ಡಿ.ಎಲ್.ಎನ್. ಅವರ ಮನೆಗೆ ಹೋಗಿ ಅವರ ಅಭಿಪ್ರಾಯಗಳನ್ನು ಪಡೆದು ಅಳವಡಿಸುತ್ತಿದ್ದೆವು. ಇಬ್ಬರು ಗುರುಗಳೂ ನಮ್ಮಲ್ಲಿ ಪುತ್ರ ವಾತ್ಸಲ್ಯವನ್ನಿಟ್ಟಿದ್ದರು.

೧೪.೬.೧೯೬೭ರಂದು ನಾನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಪಾದನ ವಿಭಾಗದಲ್ಲಿ ಪ್ರೊ. ಡಿ. ಜವರೇಗೌಡರ ಕೃಪೆಯಿಂದ ಕೆಲಸಕ್ಕೆ ಸೇರಿಕೊಂಡೆ. ಕೆಲವು ದಿವಸದ ಮೇಲೆ ಕನ್ನಡ ನಿಘಂಟು ಕಚೇರಿಗೆ Deputation ಮೇಲೆ ೨ ಕೆಲಸ ಮಾಡಲು ಕರೆಬಂದಿತು. ನನ್ನ ಗೃಹ ಕಾರ್ಯದ ನಿಮಿತ್ತ ಅಲ್ಲಿಗೆ ಹೋಗಲು ಆಗಲಿಲ್ಲ. ಶ್ರೀ ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲ. ಡಿ.ಎಲ್.ಎನ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಅವರಿಗೆ ಸಹಾಯಕನಾಗಿ ಮೈಸೂರಿನಲ್ಲಿ ಕೆಲಸ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು Deputation ಮೇಲೆ ನೇಮಿಸಿಕೊಂಡಿತು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ನಿಘಂಟು ಕಚೇರಿ ತೆರೆಯಲು ಡಾ. ಹಾ.ಮಾ. ನಾಯಕರು ವ್ಯವಸ್ಥೆ ಮಾಡಿದರು. ನಾನು ಪ್ರತಿದಿನ ಬೆಳಿಗ್ಗೆ ೯ ರಿಂದ ೧೨ ಗಂಟೆ, ಮಧ್ಯಾಹ್ನ ೩ ರಿಂದ ೫ ಗಂಟೆ ಡಿ.ಎಲ್.ಎನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ.

ಮೂರು ವರ್ಷಕಾಲ ನಿಘಂಟು ಕಚೇರಿಯಲ್ಲಿ ಕೆಲಸ ಮಾಡಿದ ಅನುಭವ ಸಮಿತಿಯ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಅವಕಾಶ, ಈಗಾಗಲೇ ಪ್ರೊ. ತೀ.ನಂ. ಶ್ರೀ ಮತ್ತು ಪ್ರೊ. ಡಿ.ಎಲ್.ಎನ್. ಅವರೊಡನೆ ಬಸವಾರಾಧ್ಯರೊಡಗೂಡಿ ಕೆಲಸ ಮಾಡಿದುದರಿಂದ ಡಿ.ಎಲ್.ಎನ್ ಅವರ ಜೊತೆ ಕೆಲಸ ಮಾಡುವುದು ಸುಲಭವಾಯಿತು. ಅದಕ್ಕಾಗಿ ಅವರು ಆಗಾಗ್ಗೆ ಭೇಷ್ ಎನ್ನುತ್ತಿದ್ದುದೂ ಉಂಟು.

ಕೆಲಸ ಮಾಡುತ್ತ ಮಧ್ಯದಲ್ಲಿ ಅವರು “ಡೀ” (ತಮಿಳು ಶಬ್ದ –ಕನ್ನಡದ “ಲೇ” ಎಂಬ ಶಬ್ದಕ್ಕೆ ಸಂವಾದಿಯಾದುದು) ಎಂದಾಗ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಶ್ರೀಮತಿ ಪದ್ಮನಿಯವರು ಕಾಫಿ ತಂದು ಕೊಡುತ್ತಿದ್ದರು. ಕಾಫಿ ಕುಡಿದು ಕೆಲಸ ಮುಂದುವರಿಯುತ್ತಿತ್ತು. ದಿನಕ್ಕೆ ೨ ಸಲ ಅವರ ಮನೆಯಲ್ಲಿ ಕಾಫಿ ಆಗುತ್ತಿತ್ತು. ವಿಶೇಷ ದಿನಗಳಲ್ಲಿ ಮಾಡಿದ ಭಕ್ಷ್ಯಗಳನ್ನು ಅವರ ಮನೆಯವರು ನನಗೆ ಕೊಡುತ್ತಿದ್ದರು. ನಾನು ಅದನ್ನು ಒಂದು ಕಡೆ ಇಟ್ಟು ಕೆಲಸ ಮಾಡುತ್ತಿದ್ದಾಗ ಡಿ.ಎಲ್.ಎನ್. ಅವರು ಎದ್ದು ಒಂದು ಕವರನ್ನು ಪತ್ತೆ ಮಾಡಿ ಕೊಟ್ಟು ಆ ತಿಂಡಿಗಳನ್ನು ಅದಕ್ಕೆ ಹಾಕಿ ಮನೆಗೆ ತೆಗೆದುಕೊಂಡು ಹೋಗಲು ತಿಳಿಸುತ್ತಿದ್ದರು. ಅದರಂತೆ ನಾನು ಮನೆಗೆ ತಂದು ಹೆಂಡತಿ ಮಕ್ಕಳೊಡನೆ ತಿನ್ನುತ್ತಿದ್ದೆ.

೧೯೭೦ರ ಮಾವಿನ ಹಣ್ಣಿನ ಕಾಲ. ನಮ್ಮ ಮಾವನವರ ಮನೆಯಲ್ಲಿ ಮಾವಿನ ಹಣ್ಣಿನ ಸುಗ್ಗಿ. ಅದನ್ನು ಅವರು ಅಳಿಯ, ಮಗಳು ಮತ್ತು ಮೊಮ್ಮಕ್ಕಳ ಮೇಲಿನ ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ನಾನು ಅದನ್ನು ಯಥೇಚ್ಛವಾಗಿ ತಿಂದೆ. ಅದರ ಫಲವಾಗಿ ಪ್ರಕೃತಿ ವ್ಯತ್ಯಸ್ತಗೊಂಡಿತು. ನನ್ನ ಪತ್ನಿ ಶ್ರೀಮತಿ ಶಾರದಾ ಅವರು ಡಿ.ಎಲ್.ಎನ್ ಅವರ ಮನೆಗೆ ಹೋಗಿ ನನ್ನ ಅನಾರೋಗ್ಯದ ಬಗ್ಗೆ ತಿಳಿಸಿ ಆವತ್ತು ಕೆಲಸಕ್ಕೆ ಬರುವುದಿಲ್ಲವೆಂದೂ ತಿಳಿಸಿ ಬಂದಳು.

ಕ್ರಮೇಣ ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ಕಳೆತ ನಿಂತಿತು. ನನ್ನ ಮಕ್ಕಳು ಚಿ. ನಾಗರತ್ನ ಮತ್ತು ಚಿ. ಮೀನಾಕ್ಷಿಯರೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದೆ. ಅಷ್ಟರಲ್ಲಿ ಡಿ.ಎಲ್.ಎನ್ ಅವರು ಭಾವಮೈದುನ ಡಾ. ಪಾರ್ಥಸಾರಥಿಯವರೊಡನೆ ನಮ್ಮ ಮನೆಗೆ ಬಂದರು. ಎಲ್ಲವನ್ನೂ ವಿಚಾರಿಸಿದರು. ಬೇಗ ಹುಷಾರಾಗು, ನಿನ್ನ ಆರೋಗ್ಯ ಸುಧಾರಿಸದಿದ್ದರೆ ನಾಳೆಯೂ ಬರಬೇಡ ಎಂದು ತಿಳಿಸಿ ಹೋದರು. ಅವರ ವಾತ್ಸಲ್ಯಕ್ಕೆ ಇದೊಂದು ಉದಾಹರಣೆ ಅಷ್ಟೆ. ನನ್ನಂತಹ ಅದೆಷ್ಟು ಜನರಿಗೆ ಸಾಂತ್ವನ ಹೇಳಿದ್ದಾರೋ ಆ ದೇವರಿಗೇ ಗೊತ್ತು. ಇದೇ ಸಂದರ್ಭದಲ್ಲಿ ಹೇಳಬಹುದಾದ ಮಾತು ಎಂದರೆ ಡಿ.ಎಲ್.ಎನ್. ಮತ್ತು ಪಾರ್ಥಸಾರಥಿಯವರ ಬಾಂಧವ್ಯ ಮಹಾಭಾರತದ ಕೃಷ್ಣ ಮತ್ತು ಅರ್ಜುನರ ಬಾಂಧವ್ಯಕ್ಕಿಂತಲೂ ಮಿಗಿಲಾಗಿತ್ತು ಎಂಬುದು.

ನಿಘಂಟಿನ ಕರಡನ್ನು ಪರಿಶೀಲಿಸುತ್ತಿದ್ದಾಗ ಇಬಿಕೆ ಎನುವ ಶಬ್ದ ಬಂದಿತು. ಹೀಗೆಂದರೆನಯ್ಯ ಎಂದರು. ನಾನು ಅಡ್ಡೇಟಿಗೊಂದು ಗುಡ್ಡೇಟು ಎನ್ನುವಂತೆ ಇಬ್ಯಕಾ ಅಂತ ಅದರ ಸಂಸ್ಕೃತ ರೂಪವನ್ನು ಹೇಳಿದೆ. ಹಾಗೆಂದರೆ ಎಂದರು ಕಾಮಶಾಸ್ತ್ರದ ಹಸ್ತಿನಿ, ಪದ್ಮಿನಿ, ಚಿತ್ತಿನಿ, ಶಂಕಿನಿ ಎನ್ನುವ ಸ್ತ್ರೀ ವಿಭಾಗಗಳಲ್ಲಿ ಒಂದು ಎಂದೆ, ಅದಕ್ಕೆ ಜನವಶ್ಯದಿಂದ ಪ್ರಯೋಗವನ್ನು ಕೊಟ್ಟಿತ್ತು. ಡಿ.ಎಲ್.ಎನ್ ಅವರು ಶ್ರೀ ಕೂಡಲಿ ಚಿದಂಬರಂ ಅವರ ಮನೆಯಲ್ಲಿ ಜನವಶ್ಯದ ಒಂದು ಪ್ರತಿಯಿದೆ ತೆಗೆದುಕೊಂಡು ಬಾ ಎಂದರು. ಅವರಲ್ಲಿ ಹೋಗಿ ಹೇಳಿದಾಗ ಚಿನ್ನದ ಅಂಚು ಕಟ್ಟಿದ ಒಂದು ಬೈಂಡ್ ಪುಸ್ತಕ ಕೊಟ್ಟರು. ಅದನ್ನು ತಂದು ಡಿ.ಎಲ್.ಎನ್ ಅವರಿಗೆ ಕೊಟ್ಟೆ. ಅವರು ನೋಡಿ ಇಬಿಕೆ ಶಬ್ದ ಅರ್ಥವನ್ನು ನಿರ್ಧರಿಸಿದರು.

ಆ ಪುಸ್ತಕದ ಅಂದ ಚೆಂದ ನನ್ನನ್ನು ಆಕರ್ಷಿಸಿತು. ಅದು ಕಲ್ಲರಸನ ಜನವಶ್ಯ ಎನ್ನುವ ಕಾಮಶಾಸ್ತ್ರವನ್ನು ಕುರಿತು ಗ್ರಂಥ. ಮುದ್ದಣ ಮಾಡಿಕೊಂಡಿದ್ದ ಪ್ರತಿ ಅದು. ಶ್ರೀ ಗೋವಿಂದ ಪೈ ಅವರಿಗೆ ಬಂದು ಅವರಿಂದ ಕೂಡಲಿಚಿದಂಬರಂ ಅವರಿಗೆ ಬಂದಿತ್ತು. ಆ ಹೊತ್ತಿಗಾಗಲೇ ಮುದ್ದಣನೂ ಕಾಮಶಾಸ್ತ್ರವೂ ಎನ್ನುವ ಲೇಖನ ಪ್ರಬುದ್ಧ ಕರ್ನಾಟದಲ್ಲಿ ಅಚ್ಚಾಗಿತ್ತು. ಅದನ್ನು ನಾನು ಪೂರ್ತಿ ಓದಿ ಡಿ.ಎಲ್.ಎನ್. ಅವರ ಸೂಚನೆಯಂತೆ ಕೂಡಲಿ ಚಿದಂಬರಂ ಅವರಿಗೆ ಹಿಂದಿರುಗಿಸಿದೆ. ಮುಂದೆ ನಾನು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳನ್ನು ಬಳಸಿಕೊಂಡು ಜನವಶ್ಯವನ್ನು ಸಂಪಾದಿಸಿದೆ. ಆ ವರ್ಷದ ಉತ್ತಮ ಸಂಪಾದನ ಕೃತಿಯೆಂದು ಕರ್ನಾಟಕ ರಾಜ್ಯ ಸರ್ಕಾರ ಎರಡನೆಯ ಬಹುಮಾನ ನೀಡಿತು.

ಒಂದು ದಿವಸ ಡಿ.ಎಲ್.ಎನ್. ಅವರು ನಿಘಂಟಿನ ಕರಡನ್ನು ನೋಡುತ್ತಿದ್ದರು. ಇದಕ್ಕಿದ್ದ ಹಾಗೆ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಗೆ ಬಂದರು. ಕಾಂಪೌಂಡಿನ ಗೇಟನ್ನು ತೆಗೆದು ಮಾಸ್ತಿಯವರು ಒಳ ಅಂಗಳಕ್ಕೆ ಬಂದಿದ್ದರು. ಅಷ್ಟರಲ್ಲಿ ಡಿ.ಎಲ್.ಎನ್. ಓಡಿ ಬಂದು ಸಾಷ್ಟಾಂಗ ನಮಸ್ಕಾರ ಮಾಡಿದರು. ಸ್ಥೂಲ ಶರೀರ ಡಿ.ಎಲ್.ಎನ್. ಏಳುವಾಗ ಎದುಸಿರು ಬಿಡುತ್ತ ಎದ್ದರು. ಮಾಸ್ತಿಯವರು ಹೋದ ಮೇಲೆ ನಾನು ಅವರನ್ನು ಅಷ್ಟು ಕಷ್ಟಪಟ್ಟು ಏಕೆ ನಮಸ್ಕಾರ ಮಾಡಿದಿರಿ. ಕೈಮುಗಿದಿದ್ದರೆ ಸಾಕಾಗುತ್ತಿರಲಿಲ್ಲವೆ ಎಂದೆ. ಮಾಸ್ತಿಯವರಂಥವರ ಪಾದ ಧೂಳು ಸಿಗುವುದಕ್ಕೂ ಪುಣ್ಯಬೇಕು ಕಣಯ್ಯ ಎಂದರು. ಶ್ರೀ ವೈಷ್ಣವ ಧರ್ಮದ ಪ್ರಪತ್ತಿಮಾರ್ಗದ ಮಹತ್ವನ್ನು ತಿಳಿಸಿದರು.

ಡಿ.ಎಲ್.ಎನ್. ಅವರ ಮನೆಯ ಮುಂಭಾಗದ ಬಲಭಾಗದ ಕೊಠಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ಅವರು ಮಂಚದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದರು. ನಾನು ಒಂದು ಕುರ್ಚಿಯ ಮೇಲೆ ಕುಳಿತಿರುತ್ತಿದೆ. ಅವರು ಬಹಿರ್ದೆಶೆಗೆಂದು ಮನೆಯ ಹಿಂಭಾಗಕ್ಕೆ ಹೋಗಿದ್ದರು. ಅವರು ಬರುವಷ್ಟರಲ್ಲಿ ಆ ಕೊಠಡಿಯ ಕಿಟಕಿಯಲ್ಲಿದ್ದ ಒಂದು ಪುಸ್ತಕ ನನ್ನ ಗಮನ ಸೆಳೆಯಿತು. ಅದು ಆ ಕಾಲಕ್ಕೆ ಬಹುಸುಂದರವಾಗಿ ಅಚ್ಚಾಗಿದ್ದ ಕರುಣಾಶ್ರಾವಣ. ಆ ಪುಸ್ತಕದಿಂದ ಆಕರ್ಷಿತನಾಗಿ ನಾನು ಅದನ್ನು ತೆಗೆದು ನೋಡಲು ಕಿಟಕಿಯ ಕಡೆಗೆ ಬಗ್ಗಿದೆ. ನನ್ನ ಬೆನ್ನ ಹಿಂದೆ ಇದ್ದಕ್ಕಿದ್ದಂತೆ ದಢಾರ್ ಎನ್ನುವ ಶಬ್ದ ಆಯಿತು. ಕೊಠಡಿಯೆಲ್ಲ ಧೂಳು ತುಂಬಿಕೊಂಡಿತ್ತು. ನನಗೆ ದಿಕ್ಕು ತೋಚಲಿಲ್ಲ. ಮೇಲೆ ನೋಡಿದರೆ ಮದರಾಸು ತಾರಸಿಯ ಛಾವಣಿ ಕುಸಿದು ಬಿದ್ದಿತ್ತು. ಮೊದಲಿಗೆ ಡಿ.ಎಲ್.ಎನ್. ಅವರ ಪತ್ನಿ ಶ್ರೀಮತಿ ಮುತ್ತಮ್ಮಾಳ್ ಅವರು, ಮಕ್ಕಳು ಅವರ ಹಿಂದೆ ಡಿ.ಎಲ್.ಎನ್. ಓಡಿಬಂದರು. ನನಗೆ ಏನೋ ಆಗಿದೆ ಎನ್ನುವ ಗಾಬರಿ ಅವರ ಮುಖದಲ್ಲಿ ಇದ್ದು ಕಾಣುತ್ತಿತ್ತು. ನಾನು ಕ್ಷೇಮವಾಗಿದ್ದುದನ್ನು ನೋಡಿ ಸಮಾಧಾನಗೊಂಡರು. ನನಗೆ ಧೈರ್ಯಹೇಳಿದರು. ಅಂದು ಅವರು ನನ್ನ ಬಗ್ಗೆ ತೋರಿದ ಮುತುವರ್ಜಿಯನ್ನು ಹೇಗೆ ತಾನೆ ಮರೆಯಲಿ. ಸಿದ್ಧಯ್ಯ ಪುರಾಣಿಕರ ಕವಿತಾ ಸಂಕಲನ ನನಗೆ ಪುನರ್ಜನ್ಮ ನೀಡಿತು. ನನ್ನ ಗುರುಗಳ ಕರುಣಾ ಶ್ರಾವಣವನ್ನೂ ತಂದಿತು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ದೇ. ಜವರೇಗೌಡರು ಕಾರ್ಯನಿರ್ವಹಿಸುತ್ತಿದ್ದ ಕಾಲ. ಅವರು ವಿಶೇಷ ಪದವಿ ಪ್ರಧಾನ ಸಮಾರಂಭ ಏರ್ಪಡಿಸಿ ಶ್ರೀಗಳಾದ ಎಸ್.ವಿ. ರಂಗಣ್ಣನವರು, ಗುಬ್ಬೀ ವೀರಣ್ಣನವರು, ಅ.ನ. ಕೃಷ್ಣರಾಯರು, ಡಿ.ಎಲ್.ಎನ್ ಅವರು ಮತ್ತು ಅಣು ವಿಜ್ಞಾನಿ ಪಿ.ಕೆ. ಅಯ್ಯಂಗಾರ್ ಅವರಿಗೆ ಗೌರವ ಡಿ.ಲಿಟ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. Open air Theatreನಲ್ಲಿ ನಡೆದ ದೈವೀನೋಟವದು. ೧೦ ಸಾವಿರಕ್ಕೂ ಮಿಕ್ಕ ಪ್ರೇಕ್ಷಕರು ನೆರೆದಿದ್ದರು. ಪ್ರತಿಯೊಬ್ಬ ವಿದ್ವಾಂಸರು ಪ್ರಶಸ್ತಿಯನ್ನು ಸ್ವೀಕರಿಸಿದಾಗ ಕಿವಿಗಡಚಿಕ್ಕುವಂತೆ ಕರತಾಡನ ಮಾಡುತ್ತಿದ್ದರು. ಹಷೋದ್ಘಾರ ಮುಗಿಲು ಮುಟ್ಟಿತ್ತು. ಹೆಸರಾಂತ ರಂಗಕಾರ್ಯಕರ್ತ ಗುಬ್ಬಿ ವೀರಣ್ಣನವರು ಮಾತನಾಡಿ ನಾಲ್ಕನೆಯ ತರಗತಿಯನ್ನೂ ಓದದ ನನಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿ ತನ್ನ ಔದಾರ್ಯವನ್ನು ಮೆರೆದಿದೆ ಎಂದರು. ಇದಕ್ಕೆ ಕಾರಣ ಕರ್ತೃರಾದ ಕರ್ನಾಟಕದ ಜನತೆ. ಅವರಿಗೆ ಮತ್ತು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಋಣಿಯಾಗಿದ್ದೇನೆ ಎಂದರು.

ಡಾ. ಡಿ.ಎಲ್. ನರಸಿಂಹಾಚಾರ್ಯ ಅವರು ಉತ್ತರಿಸುತ್ತ ವಿಶ್ವವಿದ್ಯಾನಿಲಯಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು. ಇದುವರೆಗೆ ಮನೆಯ ಮುಂದೆ ನಾನು ಡಿ.ಎಲ್. ನರಸಿಂಹಾಚಾರ್ಯ ಎನ್ನುವ ನಾಮಫಲಕವನ್ನು ಹಾಕಿಲ್ಲ. ಇನ್ನು ಮುಂದೆ ನಾನು ಡಾ. ಡಿ.ಎಲ್. ನರಸಿಂಹಾಚಾರ್ಯ ಎಂದು ಬರೆಸಿ ಹಾಕಿದರೆ ಯಾರಾದರೂ ಅರ್ಧರಾತ್ರಿಯಲ್ಲಿ ಬಂದು ಚಿಕಿತ್ಸೆ ಕೊಡಿ ಎಂದರೆ ನಾನೇನು ಮಾಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಅದುವರೆಗೂ ಪದವಿ ಪ್ರಧಾನ ಸಮಾರಂಭ ಬಿಗುವಿನಲ್ಲಿ ಕುಳಿತಿದ್ದ ಸಭೆ ಗೊಳ್ಳೆಂದು ನಕ್ಕಿತು.

ಪಂಪಭಾರತ ದೀಪಿಕೆ, ಪೀಠಿಕೆಗಳು ಲೇಖನಗಳು ಮತ್ತು ಟಿಪ್ಪಣಿಗಳಿಂದ ಕೂಡಿದ ವಡ್ಡಾರಾಧನೆಯ ನಾಲ್ಕನೆಯ ಆವೃತ್ತಿಗೆ ಅನುಬಂಧಗಳನ್ನು ಸಿದ್ಧಪಡಿಸುವ ಅವಕಾಶವನ್ನು ಡಿ.ಎಲ್.ಎನ್. ಅವರು ನನಗೆ ಕೊಟ್ಟರು. ಕೂಲಂಕುಷವಾಗಿ ಅಭ್ಯಾಸ ಮಾಡಿ ಅವುಗಳನ್ನು ಸಿದ್ಧಪಡಿಸಿದೆ. ಆ ಅವಕಾಶದಿಂದ ನಾನು ಪಡೆದ ಪ್ರಯೋಜನ ದೊಡ್ಡದು. ಪೀಠಿಕೆಗಳು ಲೇಖನಗಳು ಪುಸ್ತಕದಲ್ಲಿ ಅವರ ೯೧ ಲೇಖನಗಳು ಸಂಕಲನಗೊಂಡಿವೆ. ನಾನು ಇನ್ನು ೯ ಲೇಖನಗಳನ್ನು ಬರೆದಿದ್ದರೆ ೧೦೦ ಲೇಖನ ಆಗುತ್ತಿತ್ತು. ಸೆಂಚುರಿ ಬಾರಿಸಿದ ಹಾಗೆ ಎಂದೆ. ನಿನಗೇನಯ್ಯ ಗೊತ್ತು ಒಂದೊಂದು ಲೇಖನದ ಹಿಂದೆಯೂ ಹತ್ತು ವರ್ಷಗಳಿವೆ ಎಂದರು. ಪಂಪಭಾರತ ದೀಪಿಕೆ ಮತ್ತು ವಡ್ಡಾರಾಧನೆಗಳಲ್ಲಿ ನನ್ನ ಹೆಸರು ದಾಖಲಿಸಿ ಅವುಗಳ ಪ್ರತಿಗಳನ್ನು ಆಶೀರ್ವದಿಸಿಕೊಟ್ಟರು. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ. ಪೀಠಿಕೆಗಳು ಲೇಖನಗಳ ಅಚ್ಚಿನ ಕಾರ್ಯ ಮುಗಿದಿದ್ದರೂ ಅದರ ಮುಖ ಪುಟಗಳು ಮತ್ತು ಬೈಡಿಂಗ್ ಕಾರ್ಯಬಾಕಿ ಉಳಿದಿತ್ತು. ಅಷ್ಟರಲ್ಲಿ ಡಿ.ಎಲ್.ಎನ್. ವೆಂಕುಂಠವಾಸಿಗಳಾದರು. ಪ್ರಕಾಶಕರಾದ ಡಿ.ವಿ.ಕೆ. ಮೂರ್ತಿಯವರು ನಾನು ಮಾಡಿದ ಕೆಲಸವನ್ನು ನೆನೆದು ನನಗೆ ಒಂದು ಗೌರವ ಪ್ರತಿಯನ್ನು ಕೊಟ್ಟರು.

೧೪.೧.೧೯೭೧ ಗುಂಡ್ಲುಪೇಟೆಗೆ ಹೋಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲಿದ್ದ ನನ್ನ ತಂದೆ ಶ್ರೀ ಜಿ.ಎನ್. ಗುಂಡಪ್ಪಯ್ಯನವರು ಲವಲವಿಕೆಯಿಂದ ಇದ್ದರು. ೧೫.೧.೧೯೭೧ರ ಸಂಜೆ ಮೈಸೂರಿಗೆ ಹಿಂತಿರುಗಿದ್ದೆ. ೧೬.೧೬.೧೯೭೧ರ ಬೆಳಿಗ್ಗೆ ೯ ಗಂಟೆಗೆ ಡಿ.ಎಲ್.ಎನ್ ಅವರ ಮನೆಗೆ ಹೊರಟಿದ್ದೆ. ಅಷ್ಟರಲ್ಲಿ ನನ್ನ ತಂದೆಯವರ ನಿಧನ ವಾರ್ತೆ ಬಂದಿತು. ನಾನು ಡಿ.ಎಲ್.ಎನ್ ಮನೆಗೆ ಹೋಗಿ ವಿಷಯ ತಿಳಿಸಿದೆ. ಡಿ.ಎಲ್.ಎನ್ ಅವರು ತಮ್ಮ ಅನುಕಂಪವನ್ನು ತೋರಿದರು. ಕರ್ಮಾಂತರದ ಖರ್ಚಿಗೆ ದುಡ್ಡು ಬೇಕೆ ಎಂದರು. ಅಲ್ಲಿ ಕರ್ಮಾಂತರಕ್ಕೆ ಅನುಕೂಲವಿದೆಯೆ? ಬ್ರಾಹ್ಮಣರು ಪುರೋಹಿತರು ಸಿಗುತ್ತಾರೆಯೆ ಎಂದರು. ನಾನು ಎಲ್ಲ ಅನುಕೂಲವೂ ಇದೆ ಎಂದೆ. ಕರ್ಮಾಂತರ ಮುಗಿಸಿ ಕೆಲಸಕ್ಕೆ ಬಾಯೆಂದರು. ಆ ಕ್ಷಣದಲ್ಲಿ ಅವರು ತೋರಿದ ಅನುಕಂಪ, ನೀಡಿದ ಒತ್ತಾಸೆ ದೊಡ್ಡದು. ಪರರ ಕಷ್ಟವನ್ನು ತನ್ನದೆಂದೇ ಭಾವಿಸಿದ ಅವರ ಆತ್ಮ ಎಷ್ಟೊಂದು ವಿಶಾಲವಾದುದು.

ಡಿ.ಎಲ್.ಎನ್ ಅವರಿಗೆ ಐದು ಜನ ಹೆಣ್ಣುಮಕ್ಕಳು. ಗಂಡುಮಕ್ಕಳಿಲ್ಲದ ಕೊರತೆ ಅವರನ್ನು ಕಾಡಲೆ ಇಲ್ಲ. ಶ್ರೀಮತಿಯರಾದ ರಾಜಲಕ್ಷ್ಮಿ, ಪ್ರಭ, ಪದ್ಮಿನಿ, ಜಯಶ್ರೀ, ಮಾಧವಿ ಅವರುಗಳು ವಿದ್ಯಾವತಿಯರಾಗಿ, ಸುಶೀಲೆಯರಾಗಿ ಬೆಳೆದವರು. ರಾಜಲಕ್ಷ್ಮಿಯವರು ತಂದೆ ತಾಯಿಯರ ಯೋಗಕ್ಷೇಮಾಕಾಂಕ್ಷಿಯಾಗಿ ಅವಿವಾಹಿತರಾಗಿ ಉಳಿದರು. ವಯೋವೃದ್ಧ ತಂದೆತಾಯಿರ ಬಯಸುವ ನಿಶ್ಚಿಂತ ಜೀವನ ಲಭಿಸುವಂತೆ ನೋಡಿಕೊಂಡರು. ಪ್ರಭ ಅವರು ಸೀತಾರಾಮ ಅಯ್ಯಂಗಾರ್ ಅವರನ್ನು ವಿವಾಹವಾಗಿದ್ದಾರೆ. ಇಂದು ಡಿ.ಎಲ್.ಎನ್ ಮನೆಯ ದೀಪವನ್ನು ಬೆಳಗುತ್ತಿದ್ದಾರೆ. ಅವರ ಒತ್ತಾಸೆಯಾಗಿ ಸೀತಾರಾಮ ಅಯ್ಯಂಗಾರ್ ಅವರು ನಿಂತಿದ್ದಾರೆ. ತಂದೆ ತಾಯಿಗಳನ್ನು ಕಳೆದುಕೊಂಡು ಹೆಣ್ಣು ಮಕ್ಕಳಿಗೆ ಆ ಭಾವನೆ ಬರದಂತೆ ನೋಡಿಕೊಂಡಿದ್ದಾರೆ. ಡಿ.ಎಲ್.ಎನ್ ಅವರ ಹಿರಿಯ ಮಗನ ಸ್ಥಾನದಲ್ಲಿದ್ದುಕೊಂಡು ಗೃಹ ಕೃತ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಡಿ.ಎಲ್.ಎನ್. ಅವರ ಸಂಸಾರದ ಸುಖ ಸಂತೋಷಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಡಿ.ಎಲ್.ಎನ್. ಮನೆತನದ ಕೀರ್ತಿ ಹಬ್ಬಿ ಹರಡಲು ಇವರ ಪಾತ್ರ ಪ್ರಮುಖವಾದುದು.

ಪದ್ಮಿನಿ ಅವರು ಬ್ಯಾಂಕ್ ಉದ್ಯೋಗಿ ರಾಮನಾರಾಯಣ್ ಅವರನ್ನು ವಿವಾಹವಾಗಿದ್ದರು. ಮುಂಬಯಿಯಲ್ಲಿ ವಾಸವಾಗಿದ್ದರು. ವಿಧಿ ವಿಲಾಸ ಅವರನ್ನು ಬಿಡಲಿಲ್ಲ. ಅಕಾಲಿಕ ಮರಣಕ್ಕೆ ತುತ್ತಾದರು. ರಾಮನಾರಾಯಣ್ ಅವರು ಮೈಸೂರಿಗೆ ಬಂದು ನೆಲೆಸಿದ್ದಾರೆ. ಕುಟುಂಬದ ಸೌಹಾರ್ದವನ್ನು ಕಾಪಾಡಿಕೊಂಡು ಬಂದು ಸ್ನೇಹ ಶೀಲರಾಗಿದ್ದಾರೆ.

ಜಯಶ್ರೀ ಅವರು ಒಂದು ರೀತಿಯಲ್ಲಿ ಸಂಕೋಚದ ಮುದ್ದೆ. ಶೇಷಶಾಯಿ ಅವರನ್ನು ವಿವಾಹವಾಗಿದ್ದಾರೆ. ಮೈಸೂರಿನಲ್ಲಿ ನೆಲೆಸಿರುವ ಅವರು ಡಿ.ಎಲ್.ಎನ್ ಕುಟುಂಬದ ಹೆಣ್ಣು ಮಗಳಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಕಡೆಯ ಮಗಳು ಮಾಧವಿ ಅವರು ಅಮೆರಿಕೆಯಲ್ಲಿ ನೆಲೆಸಿದ್ದಾರೆ. ವಿಜ್ಞಾನಿಯಾಗಿ ಹೆಸರು ಮಾಡಿದ್ದಾರೆ. ಅಮೇರಿಕದಲ್ಲಿದ್ದರೂ ಹೊಕ್ಕಳು ಬಳ್ಳಿಯ ಸಂಬಂಧ ಕಡಿದು ಹೋಗದಂತೆ ನೋಡಿಕೊಂಡಿದ್ದಾರೆ. ಈ ಐದು ಜನ ಹೆಣ್ಣುಮಕ್ಕಳು ನನಗೆ ಅಕ್ಕತಂಗಿಯರಿಲ್ಲದ ಕೊರತೆ ನೀಗಿದ್ದಾರೆ.

ಡಿ.ಎಲ್.ಎನ್ ಅವರ ಜೀವಿತ ಕಾಲದಲ್ಲಿ ಜನಿಸಿದವನು ಜಯಸಿಂಹ. ದುಂಡು ದುಂಡಾಗಿ ಮುದ್ದಾಗಿದ್ದ ಆ ಮಗು ಡಿ.ಎಲ್.ಎನ್ ಅವರ ಕಾಲಿಗೆ ತೊಡಕುತ್ತ ಓಡಾಡುತ್ತಿತ್ತು. ಆಗ ಡಿ.ಎಲ್.ಎನ್ ಹೇಳಿದರು ನೋಡಯ್ಯ ನನ್ನ ಮೊಮ್ಮಗನನ್ನು ನಾನೇ ಎತ್ತಿಕೊಳ್ಳಲಾರೆ. ಡಾಕ್ಟರ್ ಭಾರ ಎತ್ತಬೇಡ ಎಂದಿದ್ದಾರೆ. ನೋಡು ನನ್ನ ಹಣೆಬರಹ ಎಂದರು. ಆಗ ನನಗೂ ಅಳು ಬಂದಿತು.

ಕನ್ನಡ ನಿಘಂಟಿನ ಮೊದಲ ಸಂಪುಟದ ಬಿಡುಗಡೆಯ ದಿನಾಂಕ ನಿಗದಿಯಾಗಿತ್ತು. ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ. ನಾರಾಯಣ ಅವರು ಡಿ.ಎಲ್.ಎನ್ ಅವರಲ್ಲಿ ಒಂದುವಾರ ಕಾಲ ಕನ್ನಡ ನಿಘಂಟು ಸಮಿತಿಯ ಸಭೆ ನಡೆಸಿ ಕೆಲಸ ಮುಗಿಸಿ ಕೊಡಬೇಕೆಂದು ವಿನಂತಿಸಿಕೊಂಡರು. ಡಿ.ಎಲ್.ಎನ್ ಅವರಿಗೂ ಸಂಪಾದಕ ಮಂಡಲಿಗೂ ವಾಹನ ಸೌಕರ್ಯ, ವಸತಿ ಸೌಕರ್ಯ, ಉಟೋಪಚಾರದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಅಖಿಲ ಭಾರತ ಬರಹಗಾರರ ಭವನ ಆಗಿದ್ದ ಆಲೋಕದಲ್ಲಿ ಎರಡು ಹೊತ್ತು ಆ ಸಭೆ ನಡೆಯುತ್ತಿತ್ತು.

ಡಿ.ಎಲ್.ಎನ್ ಅವರು ಬಳಲಿದರು. ಅವರ ಆರೋಗ್ಯ ಉಲ್ಭಣಿಸಿತು. ಅರೆ ಪ್ರಜ್ಞಾವಸ್ಥೆ (Coma stage)ಗೆ ತಲುಪಿದರು. ಅಲ್ಲಿಂದ ಎಚ್ಚರಗೊಳ್ಳಲಿಲ್ಲ. ಕಡೆಯ ನಿಮಿಷದಲ್ಲಿ ಕುಟುಂಬ ವೈದ್ಯ ಕೃಷ್ಣಸ್ವಾಮಿಯವರನ್ನು ಕರೆದುಕೊಂಡು ಬರಲು ಹೋದೆ. ಹಿಂದಿರುಗುವಷ್ಟರಲ್ಲಿ ಡಿ.ಎಲ್.ಎನ್. ವಿಧಿವಶರಾಗಿದ್ದರು. ಮುತ್ತಮ್ಮಾಳ್ ಅವರು ಮತ್ತು ಮಕ್ಕಳ ಸಂಕಟಕ್ಕೆ ಪಾರವೆ ಇರಲಿಲ್ಲ. ಡಿ.ಎಲ್.ಎನ್ ಅವರ ಒಡನಾಡಿಗಳು, ಮಿತ್ರರು, ಶಿಷ್ಯರು ಅನಾಥ ಪ್ರಜ್ಞೆಯನ್ನು ಅನುಭವಿಸಿದರು. ನೃಸಿಂಹ ಜಯಂತಿಯಂದು ವಿಧಿವಶರಾದ ಡಿ.ಎಲ್.ಎನ್ ಅವರ ಭೌತಿಕ ದೇಹ ಇಂದು ಇಲ್ಲ. ಕರ್ನಾಟಕದ ತುಂಬ ಅವರು ಬೀರಿದ ಪ್ರಭಾವ ಪರಿಣಾಮಗಳು ಗಾಢವಾಗಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಶ್ರೀ ಡಿ.ಎಲ್. ನರಸಿಂಹಾಚಾರ್ಯ ಅವರ ಶತಮಾನೋತ್ಸವ ವರ್ಷದ ಆರಂಭವನ್ನು ೨೭.೧೦.೨೦೦೫ರಂದು ಹಮ್ಮಿಕೊಂಡಿರುವುದು ಸ್ತುತ್ಯರ್ಹವಾದ ಕಾರ್ಯ. ಅದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಸಿಬ್ಬಂದಿ ವರ್ಗ ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.