ಕನ್ನಡ ಆನರ್ಸ್‌ ಮತ್ತು ಎಂ.ಎ. ವ್ಯಾಸಂಗದ ವರ್ಷಗಳಲ್ಲಿ (೧೯೫೦-೫೪) ಡಿ. ಎಲ್‌. ಎನ್‌. ನನ್ನ ಉಪಾಧ್ಯಾಯರು. ಆನರ್ಸ್‌ ತರಗತಿಗಳಲ್ಲಿ ಅವರು ಕಲಿಸುತ್ತಿದ್ದ ಪಾಠ ಕನ್ನಡ ಸಾಹಿತ್ಯ ಚರಿತ್ರೆ. ಕಲಿಸುತ್ತಿದ್ದರು ಎನ್ನುವುದಕ್ಕಿಂತ ಬರಸುತ್ತಿದ್ದರು ಎನ್ನುವುದೇ ಹೆಚ್ಚು ಸರಿ. ಆ ದಿನಗಳಲ್ಲಿ ಈ ವಿಷಯದ ಮೇಲೆ ತಕ್ಕ ವಿಸ್ತಾರದ ಯಾವ ಪುಸ್ತಕವೂ ಇರಲಿಲ್ಲ. ಮುದ್ರಿತಗ್ರಂಥಗಳನ್ನು ಮಾತ್ರವೇ ಅಲ್ಲದೆ ಹಸ್ತಪ್ರತಿಗಳನ್ನು ಸಹ ಸ್ವತಃ ಓದಿಕೊಂಡು ಸಾಕಷ್ಟು ವಿವರವಾದ ಟಿಪ್ಪಣಿ-ಪುಸ್ತಕಗಳನ್ನು ಸಿದ್ಧಮಾಡಿ ಅವರು ತಮ್ಮಲ್ಲಿ ಇರಿಸಿಕೊಂಡಿದ್ದರು. ಕವಿಚರಿತೆಗೆ ಸಂಬಂಧಿಸಿದ ಹಾಗೆ ಆರ್‌. ನರಸಿಂಹಾಚಾರ್‌ ಮುಂತಾದವರ ಪುಸ್ತಕಗಳು, ಲೇಖನಗಳ ಸಾರವೂ ಆ ಟಿಪ್ಪಣಿಗಳಲ್ಲಿ ಸೇರಿರುತ್ತಿತ್ತು. ವಿಮರ್ಶೆ ಬಲುಮಟ್ಟಿಗೆ ಅವರದೇ ಆಗಿರುತ್ತಿತ್ತು. ನಡುನಡುವೆ ಹೊಸದಾಗಿ ತಿಳಿದ ಸಂಗತಿಗಳನ್ನು ಹಾಗೆಯೇ ತಿಳಿಸುತ್ತ ಇದ್ದರು. ವಿದ್ಯಾರ್ಥಿಗಳಲ್ಲಿ ಇವನ್ನೆಲ್ಲ ತಿಳಿಯುವ ಆಸಕ್ತಿ ಕುತೂಹಲಗಳು ಅಷ್ಟೇನೂ ಇರಲಿಲ್ಲವಾದರೂ, ತಮ್ಮ ಕರ್ತವ್ಯ ಭಾಗವನ್ನು ಅವರು ಸಾಂಗವಾಗಿ ಪೂರೈಸುತ್ತಿದ್ದರು.

ಅವರಿಗೆ ಸುಮಾರಾಗಿ ನಶ್ಯದ ಚಟವಿತ್ತು. ಆದರೆ ‘‘ನಶ್ಯದ ಡಬ್ಬಿ’’ ಎನ್ನುವ ಮಟ್ಟಿಗೆ ತಮ್ಮ ಮೂಗನ್ನು ಕೆಡಿಸಿಕೊಂಡಿರಲಿಲ್ಲ. ನಶ್ಯ ಹಾಕುವುದರಲ್ಲೂ ಅವರು ತುಂಬ ಅಚ್ಚುಕಟ್ಟು. ಆದ್ದರಿಂದ ಅಕ್ಷರಗಳ ಉಚ್ಛಾರಣೆ ಸ್ಫುಟವಾಗಿತ್ತು. ಅಲ್ಲದೆ ನಮಗೆ ಅವರ ಮಾತಿನ ರೀತಿ ಅಭ್ಯಾಸವೂ ಆಗಿತ್ತು. ಒಂದು ಸಲ, ಅವರ ಮನೆಯಿರುವ ಸರಸ್ವತೀಪುರದ ಬಸ್‌ಸ್ಟಾಪ್‌ ಹತ್ತಿರ ಒಂದು ಅಂಗಡಿಯಿಂದ ಅವರು ನಶ್ಯ ಕೊಳ್ಳಲು ನಿಂತದ್ದು ಈಗಲೂ ನನಗೆ ನೆನಪಿದೆ. ಅದು ಈಚಿನ ವರ್ಷಗಳಲ್ಲಿ. ಆಗ ಏನನ್ನಿಸಿತೋ ಏನೋ, “ನನ್ನ ಕೆಲಸವೆಲ್ಲ Snuffing and sneezingನಲ್ಲೇ ಮುಗಿದು ಹೋಯಿತಯ್ಯ” ಎಂದು ವಿಷಾದದ ನಗೆಯೊಂದಿಗೆ ಹೇಳಿದರು. ಇನ್ನೊಂದು ಸಲ ಬೆಂಗಳೂರಿನ ಚಾಮರಾಜಪೇಟೆ ಸರ್ಕಲ್ಲಿನಲ್ಲಿ ನಾವು ಜೊತೆಯಾಗಿ ಹೋಗುತ್ತಿದ್ದಾಗ, ಅಲ್ಲಿಯೇ ನಶ್ಯಕೊಂಡು, ಒಂದು ಚಿಟಿಕೆ ಏರಿಸಿದ ಮೇಲೆ, ಅದೇ ತಾನೆ ಪ್ರಕಟವಾಗಿದ್ದ ತಮ್ಮ ಕನ್ನಡ ಗ್ರಂಥಸಂಪಾದನೆಯ ಬಗ್ಗೆ ಬಹಳ ಹೊತ್ತು ಮಾತನಾಡಿದರು.

ಆನರ್ಸ್‌ ತರಗತಿಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಹೇಳಿ ಬರಸುತ್ತಿದ್ದರೂ ಕೊನೆಯ ಪಾಠಗಳಲ್ಲಿ, ಕನ್ನಡ ರಗಳೆಸಾಹಿತ್ಯ, ಕನ್ನಡನಾಟಕದ ಚರಿತ್ರೆ ಮುಂತಾದ ವಿಷಯಗಳ ಮೇಲೆ ಸ್ವತಂತ್ರವಾದ ಉಪನ್ಯಾಸಗಳನ್ನು ಅವರು ನೀಡಿದರು. ವಿಷಯಪುಷ್ಟಿ, ವಿಮರ್ಶೆ ಇವುಗಳಿಂದ ಸಮೃದ್ಧವಾದ ಉಪನ್ಯಾಸಗಳು ಇವು. ಕನ್ನಡ ಸಾಹಿತ್ಯದ ಪ್ರಾಚೀನತೆ ಕುರಿತು ಕೆಲವು ಪಾಠಗಳೂ ಉಪನ್ಯಾಸರೂಪವಾಗಿಯೇ ಇದ್ದುವೆನ್ನುವುದು ನನ್ನ ನೆನಪು. ಟಿಪ್ಪಣಿಯಿರಲಿ, ಉಪನ್ಯಾಸವಿರಲಿ, ವಿವರಪುಷ್ಟಿ, ಸರಸತೆ, ನಿರ್ದುಷ್ಟತೆಗಳು, ಅವರ ನಿರೂಪಣೆಯ ಮುಖ್ಯಲಕ್ಷಣಗಳಾಗಿದ್ದವು. ತಮಗೆ ಇನ್ನೂ ಓದಲು ಅವಕಾಶವಾಗಿರದ ಪುಸ್ತಕಗಳ ಬಗ್ಗೆ ಬರಸುವಾಗ, “ಈ ಪುಸ್ತಕವನ್ನು ಇನ್ನೂ ಓದಿಲ್ಲ; ಆದ್ದರಿಂದ ಇಲ್ಲಿ ಏನೂ ಹೇಳುವ ಹಾಗಿಲ್ಲ” ಎಂಬುದಾಗಿಯೇ ತಿಳಿಸುತ್ತಿದ್ದರಲ್ಲದೆ, ಹೇಗೋ ದಾಟಿಸಿಕೊಂಡು ಹೋಗುತ್ತಿರಲಿಲ್ಲ. ಇಂಗ್ಲಿಷಿನ ಒಬ್ಬ ಸಾಹಿತ್ಯಚರಿತ್ರಕಾರ ತಾನು ಸ್ವತಃ ಓದಿಲ್ಲದ ಪುಸ್ತಕಗಳ ಬಗ್ಗೆ ತನ್ನ ಸಾಹಿತ್ಯ ಚರಿತ್ರೆಯಲ್ಲಿ ಏನೂ ಬರೆದಿಲ್ಲ ಎಂಬುದಾಗಿ ಬರೆದುಕೊಂಡಿದ್ದ ಸಂಗತಿಯನ್ನು ಈಚೆಗೆ ಒಂದೆರಡು ಸಲ ಅವರು ನನ್ನೊಂದಿಗೆ ಮಾತನಾಡುತ್ತ ಹೇಳಿದರು. ಇದು ಅವರ ಆದರ್ಶ. ಒಂದು ವರ್ಷ ಅವರು ‘‘ವಡ್ಡಾರಾಧನೆ’’ ಸಹ ಪಾಠ ಮಾಡಿದ್ದರೆಂದು ತೋರುತ್ತದೆ. ಅದರ ಟಿಪ್ಪಣಿಗಳೂ ನನ್ನಲ್ಲಿವೆ.

ಎಂ.ಎ. ತರಗತಿಯಲ್ಲಿ ಡಿ.ಎಲ್‌.ಎನ್‌. ನಮಗೆ ಬೋಧಿಸಿದ್ದು ರುದ್ರನಾಟಕ ಎಂಬ ವಿಶೇಷ ಸಾಹಿತ್ಯ ಪ್ರಕಾರವನ್ನು. ಈ ಬೋಧನೆ ನಮಗೆ ಅದ್ಭುತವಾದೊಂದು ಅನುಭವ. ಗೊತ್ತಾದ ಪಠ್ಯಗಳನ್ನಲ್ಲದೆ ಬೇರೆಯವರನ್ನು ಸಹ ಅವರು ನಮಗೆ ಓದಿ ಹೇಳಿದರು. ಗ್ರೀಕ್‌ ಇಂಗ್ಲಿಷ್‌ ಭಾಷೆಯ ರುದ್ರನಾಟಕಗಳು ಮಾತ್ರವೇ ಅಲ್ಲದೆ, ಜರ್ಮನ್‌ ಫ್ರೆಂಚ್‌ಭಾಷೆಯವೂ ಇತರ ಭಾಷೆಗಳವೂ ಅವುಗಳಲ್ಲಿ ಸೇರಿದ್ದವು. ಇವನ್ನೆಲ್ಲ ಇಂಗ್ಲಿಷ್‌ ಮೂಲಗಳಿಂದಲೇ ಅವರು ಕಲಿಸಿದರು. ಗ್ರೀಕ್‌ ನಾಟಕಗಳಿಗೆ ಲ್ಯೂಯಿ ಕ್ಯಾಂಪ್‌ಬೆಲ್‌, ಗಿಲ್ಬರ್ಟ್‌ ಮರ್ರೆ ಮೊದಲಾದವರ ಉತ್ಕೃಷ್ಟ ಅನುವಾದಗಳನ್ನೇ ಅವರು ಆರಿಸಿಕೊಳ್ಳುತ್ತಿದ್ದರು. ಆಗಿನ್ನೂ ಪೆಂಗ್ವಿನ್‌ ಮಾಲೆಯ ಸರಳ ಅನುವಾದಗಳು ಹೆಚ್ಚು ಪ್ರಚಾರಕ್ಕೆ ಬಂದಿರಲಿಲ್ಲ. ಮೂಲದಿಂದಲೇ ಗ್ರೀಕ್‌, ಜರ್ಮನ್‌ ನಾಟಕಗಳನ್ನು ಕಲಿಸುವುದು ಸಾಧ್ಯವಾಗದ ವಿಷಾದ ಅವರನ್ನು ತುಂಬ ಬಾಧಿಸುತ್ತಿತ್ತು. “ಈ ಜನ್ಮದಲ್ಲಿ ಈ ಭಾಷೆಗಳನ್ನು ಕಲಿಯಲಾಗಲಿಲ್ಲ ಮುಂದಿನ ಜನ್ಮದಲ್ಲಿ ಸಾಧ್ಯವಾಗುವುದೇನೋ ನೋಡಬೇಕು” ಎಂದಿದ್ದರು, ಒಂದು ಸಲ. ನಾಲ್ಕೈದು ನಾಟಕಗಳನ್ನು ಒಂದೂ ಸಾಲು ಬಿಡದೆ ಓದುತ್ತ, ಅನುವಾದಿಸುತ್ತ, ವಿಮರ್ಶಿಸುತ್ತ ಸ್ವಾರಸ್ಯಕರವಾಗಿ ಪಾಠ ಮಾಡಿದರು. ಇವುಗಳಲ್ಲಿ ಈಸ್ಕಿಲಸ್ಸನ ಒರಿಸ್ಟಿಯನ್‌ ಮುಕ್ಕೂಟನಾಟಕ, ಸಾಪೋಕ್ಲಿಸ್ಸಿನ ಥೀಬನ ನಾಟಕಗಳು, ಯೂರಿಪಿಡೀಸನ ಮೀಡಿಯಾ ಮತ್ತು ಹಿಪ್ಪೊಲಿಟಸ್‌, ಷೇಕ್ಸ್‌ಪಿಯರ್‌ನ ಕಿಂಗ್‌ಲಿಯರ್‌ ಇವೆಲ್ಲ ಸೇರಿದ್ದವು. ಜರ್ಮನಿ ಮತ್ತು ರೋಮ್‌ ದೇಶದ, ಫ್ರಾನ್ಸಿನ ಕೆಲವು ನಾಟಕಕಾರರ ನಾಟಕಗಳಲ್ಲಿ ಕೆಲವನ್ನು ಭಾಗಶಃ ಓದಿ ಹೇಳಿದರೆಂದೂ ನನ್ನ ನೆನಪು. ಸಮಯ ಸಾಲದೆ, ಭಾಸನ “ಊರುಭಂಗ’’ ಹಾಗೂ ಶ್ರೀಯವರ ‘‘ಅಶ್ವತ್ಥಾಮನ್’’ ನಾಟಕಗಳನ್ನು ಓದದೆ, ಒಂದೆರಡು ಉಪನ್ಯಾಸಗಳನ್ನು ಮಾತ್ರ ಕೊಟ್ಟು, ಅವನ್ನು ಪರಿಚಯ ಮಾಡಿಸಿದರು.

ಅವರ ಪಾಠದ ವೈಖರಿ ಅಸಾಧಾರಣವಾದುದಾಗಿತ್ತು. ಅವರ ವಿದ್ವತ್ತಿನ ಸಂಸ್ಕಾರ, ಪೂರ್ವಪುಷ್ಕಳ ಸಿದ್ಧತೆ, ಇಂಗ್ಲಿಷ್‌ ಭಾಷಾಜ್ಞಾನ, ವಿಮರ್ಶನಶಕ್ತಿ, ಇವುಗಳಿಗೆ ಸರಿಸಾಟಿಯಾಗಿ ಬೋಧನಾಶಕ್ತಿ ಎಲ್ಲವೂ ಒಟ್ಟಿಗೆ ಒದಗಿ ಬಂದುದರಿಂದ ವಿದ್ಯಾರ್ಥಿಗಳಾದ ನಮ್ಮ ಮೇಲೆ ಅವರ ನಾಟಕದ ಪಾಠಗಳು ಅದ್ಭುತ ಪರಿಣಾಮವನ್ನುಂಟು ಮಾಡಿದವು. ಅವರು ಛಾಂದಸರಾದ ಪಂಡಿತರೆಂದು ತಿಳಿದಿದ್ದ ನಮಗೆ ಈ ಸಂದರ್ಭದಲ್ಲಿ ಸರಸಿಗಳೆಂದೂ ಸಹೃದಯರೆಂದೂ ಒಳ್ಳೆಯ ವಿಮರ್ಶಕರೆಂದೂ ತಿಳಿಯುವಂತಾಯಿತು. ಭಾವಪೂರ್ಣವಾದ ಭಾಗಗಳನ್ನು ಓದುವಾಗ ಅವರು ಗದ್ಗದಿತರಾಗುತ್ತಿದ್ದರು; ತಲೆಯನ್ನು ಮೆಲ್ಲಗೆ ಒಲೆದು, ಭಾರವಾದ ಬಲಗೈಯನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸಿ, ಕಣ್ಣಲ್ಲಿ ಮಿಂಚನ್ನೂ ತುಟಿಯಲ್ಲಿ ಕಿರುನಗೆಯನ್ನೂ ಸೂಸುತ್ತಿದ್ದರು. ಉತ್ಸಾಹ ಹಚ್ಚಿದಾಗ ಇಂಗ್ಲಿಷ ವಾಕ್ಯಗಳಿಗೆ ಕನ್ನಡ ಪದ್ಯಾನುವಾದವನ್ನು ಸಹ ಒಮ್ಮೊಮ್ಮೆ ಸೊಗಸಾಗಿ, ಆಶುವಾಗಿ, ಕೊಡುತ್ತಿದ್ದುದೂ ಉಂಟು. ನಾಟಕಗಳ ನಾಟಕಗಳ ಅಭ್ಯಾಸ ಮುಗಿದ ಮೇಲೆ ವರ್ಷಾಂತ್ಯದಲ್ಲಿ ಅವರು ಕೊಟ್ಟ ಕೆಲವು ಸಾಮಾನ್ಯೋಪನ್ಯಾಸಗಳು ಅವರ ಸರಸತೆ, ವಿಮರ್ಶನಶಕ್ತಿ, ಪಾಂಡಿತ್ಯಗಳಿಗೆ ಕೈಗನ್ನಡಿಗಳೆಂಬಂತಿವೆ. ಹಾಗೆ ಅವರು ನೀಡಿದ ಆರೆಂಟು ಉಪನ್ಯಾಸಗಳನ್ನು ನಾನು ಇದ್ದುದಿದ್ದಂತೆ ಬರೆದಿಟ್ಟುಕೊಂಡು, ಈಚೆಗೆ ೧೦-೧೨ ವರ್ಷಗಳ ಹಿಂದೆ ಪ್ರಬುಧ ಕರ್ಣಾಟಕದಲ್ಲಿ (ಸಂ. ೫೩, ೫೪, ೧೯೭೧-೭೩) ‘ರುದ್ರನಾಟಕೋಪನ್ಯಾಸಗಳು’ ಎಂಬ ಹೆಸರಿನಿಂದ ಕ್ರಮವಾಗಿ ಪ್ರಕಟಿಸಿದ್ದೇನೆ. ಅವನ್ನು ಓದಿದವರು ಸುಲಭವಾಗಿ ತಿಳಿದುಕೊಳ್ಳಬಲ್ಲರು. ಇಂತಹ ಅಧ್ಯಾಪಕರೂ ಇಂತಹ ಪಾಠಪ್ರವಚನಗಳೂ ಈಗ ಬರಿಯ ಕನಸು ಎಂದು ನನಗೆ ತೋರುತ್ತದೆ. ಡಿ. ಎಲ್‌. ಎನ್‌. ತಮ್ಮ ಕಾಲದ ಒಬ್ಬ ಅಧ್ಯಾಪಕ ದಿಗ್ಗಜ ಎಂದೇ ನನ್ನ ನಂಬುಗೆ.

ಕನ್ನಡ ಅಧ್ಯಾಪಕನಾಗಿ ನಾನು ಮಾಡಿದ ಕೆಲಸ ಎಲ್ಲ ಸ್ಥಳಗಳಿಂದಲೂ ನಾನು ಅವರೊಂದಿಗೆ ಪತ್ರವ್ಯವಹಾರ ಇರಿಸಿಕೊಂಡಿದ್ದೆ. ಅವರ ಎಲ್ಲ ಪತ್ರಗಳನ್ನೂ ನನ್ನ ಪತ್ರಭಂಡಾರದಲ್ಲಿ ಕಾಪಾಡಿಕೊಂಡಿದ್ದೇನೆ. ನನ್ನ ವೃತ್ತಿಜೀವನದ ಮೊದಲ ಆತಂಕಕಾರಿ ದಿನಗಳಲ್ಲಿ ಅವರು ನನಗೆ ಕೆಲವು ಸಾಂತ್ವನದ ಮಾತುಗಳನ್ನು ಆಡಿದ್ದಾರೆ, ಬರೆದಿದ್ದಾರೆ. ನನ್ನ ವಿದ್ಯಾರ್ಥಿದೆಸೆ ಮುಗಿದು, ನನ್ನ ಊರಿನಲ್ಲಿ ನಾನು ಶಾಲೆಯ ಅಧ್ಯಾಪಕನಾಗಿದ್ದಾಗ, ಕಾಲೇಜಿನಲ್ಲಿ ಕೆಲಸ ದೊರಕಿಸಲು ಬೆಂಗಳೂರಿನಲ್ಲಿ ಅದೇ ತಾನೆ ಆರಂಭವಾಗಿದ್ದ (೧೯೫೫-೫೬) ಖಾಸಗಿ ಕಾಲೇಜಿನಲ್ಲಿ ಸಂಬಂಧಪಟ್ಟವರನ್ನು ಕಂಡು ಅದು ಸಾಧ್ಯವಾಗುವಂತೆಯೂ ಮಾಡಿದ್ದಾರೆ. ಸ್ವಪ್ರಯತ್ನದಿಂದ ಅಲ್ಲಿಯೇ ಹಳೆಯ ಖಾಸಗಿ ಕಾಲೇಜಿನಲ್ಲಿ ನಾನು ಕೆಲಸ ದೊರಕಿಸಿಕೊಂಡಾಗ, ನನ್ನ ಸಂದಿಗ್ಧ ಸ್ಥಿತಿಯನ್ನು ನಾನು ಅವರಲ್ಲಿ ಅರಿಕೆ ಮಾಡಿಕೊಂಡು ಅವರ ಸಲಹೆ ಬೇಡಿದೆ; ಅವರು ಇದನ್ನೇ ಒಪ್ಪುವಂತೆ ಸೂಚಿಸಿದ್ದು, ಕಾಲಕ್ರಮದಲ್ಲಿ ನನ್ನ ಜೀವನದ ಗತಿಯನ್ನೇ ಬದಲಿಸಿತು. ಒಳ್ಳೆಯದೇ ಆಯಿತು ಎಂದು ತೋರುತ್ತದೆ. ನನ್ನ ವೃತ್ತಿ ಸಂಬಂಧದ ಇನ್ನೂ ಮೊದಲಿನ ನನ್ನ ಪ್ರಯತ್ನಗಳಲ್ಲಿ, ನಾನು ವಿಷಾದ ಅಪಮಾನಗಳಿಂದ ಬೇಸತ್ತು ಸ್ವಸ್ಥಳವನ್ನು ಬಿಟ್ಟು ಹೊರಡಬೇಕಾಗಿ ಬಂದ ಗಳಿಗೆಯಲ್ಲಿ ಅವರು ನನಗೆ ನೀಡಿರುವ ಖಚಿತವಾದ ಸಲಹೆ ನನ್ನನ್ನು ಸರಿದಾರಿಯಲ್ಲಿ ನಡೆಸಿತು. ಇವೆಲ್ಲ ಪತ್ರಮುಖೇನವೇ ನಡೆದ ವ್ಯವಹಾರಗಳು, ಅವರನ್ನು ನಾನು ಕಂಡದ್ದು ಎಲ್ಲೋ ಒಂದೆರಡು ಸಲ ಮಾತ್ರ. ಆಗ ನನಗೆ ಸಲಹೆ ಸಹಾಯಗಳಿಗೆ ಕಾಣುತ್ತಿದ್ದವರು ಡಿ. ಎಲ್‌. ಎನ್‌. ಒಬ್ಬರೇ ಆಗ್ಗೆ ‘ಅವಸ್ತುಭೂತನೆನ್‌’’ ಎಂಬಂತಿದ್ದ ಈ ಶಿಷ್ಯನಲ್ಲಿ ಅವರು ವಹಿಸಿದ ಆಸಕ್ತಿ ಕೇವಲ ನಿರ್ವ್ಯಾಜವಾದುದು, ಮಾನವೀಯವಾದುದು.

ನಾನು ಕೆಲಕಾಲ ಸ್ವಸ್ಥಳದಲ್ಲಿದ್ದಾಗಲೂ ಬೆಂಗಳೂರಿನಲ್ಲಿದ್ದಾಗಲೂ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಯೋಜನೆಯಲ್ಲಿ ಅವರು ಪ್ರಧಾನ ಸಂಪಾದಕರಾಗಿದ್ದರು. ನನ್ನ ಪ್ರಾರ್ಥನೆಯಂತೆ ಶಬ್ದಸಂಗ್ರಹದ ಕೆಲಸದ ಮೂಲಕ, ಒಪ್ಪೊತ್ತಿನ ಕೆಲಸದ ಮೂಲಕ, ದೊಡ್ಡ ಸಂಸಾರದ ನಿರ್ವಹಣೆಯಲ್ಲಿ ನನಗೆ ಸಾಕಷ್ಟು ಹಣಸಹಾಯ ಸಿಗುವಂತೆ ಮಾಡಿದರು. ಎಷ್ಟು ಬೇಗ ಕೈಮೇಲಿನ ಕೆಲಸ ಮುಗಿದರೆ, ಅಷ್ಟು ಬೇಗ ಹೊಸಕೆಲಸ ಹೊಂದಿಸಿಕೊಡುತ್ತಿದ್ದರು. ಮುದ್ದಣ, ಬಿ.ಎಂ.ಶ್ರೀ., ಬೇಂದ್ರೆ, ಸಂಸ, ಗೋವಿಂದ ಪೈ ಇವರ ಸುಮಾರು ಎಲ್ಲ ಪ್ರಕಟಿತ ಗ್ರಂಥಗಳಿಂದಲೂ ನಾನೇ ಶಬ್ದಸಂಗ್ರಹ ಮಾಡಿದನೆಂದು ನನ್ನ ನೆನಪು. ಕುವೆಂಪು ಅವರ ‘‘ಶ್ರೀರಾಮಾಯಣ ದರ್ಶನಂ’’ ಕಾವ್ಯದಿಂದ ಶಬ್ದಸಂಗ್ರಹವಾಗಬೇಕೆಂದು ನಾನೇ ಅವರಿಗೆ ಸೂಚಿಸಿ, ಅದನ್ನೂ ನಾನೇ ಮಾಡಿಕೊಟ್ಟೆ ಈ ಯಾವ ಸಂದರ್ಭದಲ್ಲಿಯೂ ಅವರು ಬೇಸರಿಸಲಿಲ್ಲ, ಗೊಣಗಲಿಲ್ಲ, ನನಗೆ ತಿಳುವಳಿಕೆ ಮಾತು ಹೇಳಲಿಲ್ಲ. ನಾನು ಮಾಡಿಕೊಟ್ಟ ಕೆಲಸವನ್ನು ಪರೀಕ್ಷಿಸಲೂ ಇಲ್ಲ. ಅದು ಅವರ ವಿಶ್ವಾಸ, ಧೈರ್ಯ.

ನಾನು ಹೈದರಾಬಾದಿನಲ್ಲಿದ್ದಾಗ್ಗೆ ಪರೀಕ್ಷೆ ಮೊದಲಾದ ಕೆಲಸಗಳಿಗಾಗಿ ಡಿ.ಎಲ್‌.ಎನ್‌. ಅಲ್ಲಿಗೆ ಬರುತ್ತಿದ್ದು, ತಮ್ಮ ಸಹಪಾಠಿಗಳಾಗಿದ್ದ ಡಿ. ಕೆ. ಭೀಮಸೇನರಾಯರ ಮನೆಯಲ್ಲಿ ಇಳಿದುಕೊಳ್ಳುತ್ತಿದ್ದರು. ನಾನು ಪ್ರತಿಸಲವೂ ಅವರನ್ನು ಕಾಣುತ್ತಿದ್ದೆ. ಕುಶಲಪ್ರಶ್ನೆಯ ಜೊತೆಗೆ, ನನ್ನ ಕಷ್ಟಸುಖ ವಿಚಾರಿಸುತ್ತಿದ್ದರು. ಬಹುಶಃ ೧೯೫೯ರಲ್ಲಿ ಒಂದು ಸಲ, ಪೇಟೆಬೀದಿಯ ಕಡೆಯಿಂದ ಸಮೀಪದ ಡಿ.ಕೆ.ಭೀ. ಅವರ ಮನೆಗೆ ನಾವು ನಡೆದು ಹೋಗುತ್ತಿದ್ದಾಗ, ನಾನು ೨೮ ರೂ. ಬಾಡಿಗೆಗೆ ಹಿಡಿದಿದ್ದ ನನ್ನ ಮನೆ ಮುಂದೆ ಹಾದುಹೋಗುವ ಸಂದರ್ಭ ಬಂತು. ಹತ್ತಿರ ಬಂದಾಗ, ನಾನು “ಇದೇ ಸಾರ್‌, ನಾನಿರುವ ಮನೆ” ಎಂದೆ. ಒಳಕ್ಕೆ ಬರಲು ಅವರು ಸಿದ್ಧರಾಗಿ, ಒಂದು ಕ್ಷಣ ಅಲ್ಲಿಯೇ ತಡೆದು ನಿಂತರು. ಆದರೆ ನಾನು ಅವರನ್ನು “ಒಳಕ್ಕೆ ಹೋಗೋಣ, ಬನ್ನಿ” ಎನ್ನಲ್ಲಿಲ್ಲ. ಒಳಗಿನ ಸಣ್ಣ ಹಜಾರವೇ ಕೊಠಡಿ; ಅದರ ತುಂಬ ಕತ್ತಲು. ನಾನೂ ಏನೂ ಹೇಳದೆ ಸುಮ್ಮನಿದ್ದುದು ನೋಡಿ, ತಾವೇ “ಸರಿ, ಸರಿ” ಎಂದು ಮುಂದೆ ಹೆಜ್ಜೆ ಹಾಕಿದರು. ಆಗಲೋ ಇನ್ನೊಂದು ಬಾರಿಯೋ ಅವರು ತಾವೇ ಬಯಸಿ, ತಮ್ಮ ಶಿಷ್ಯರ ಪಂಕ್ತಿಯಲ್ಲಿ ತೀರ ಮೊದಮೊದಲು ಪಂಕ್ತಿಯವರಾಗಿದ್ದ ಮಾನ್ವಿ ನರಸಿಂಗರಾವ್‌ ಅವರನ್ನು ಭೇಟಿಮಾಡಲು ಅವರ ಮನೆಗೆ ಹೋದ ಸಂದರ್ಭ ನನ್ನ ನೆನಪಿನಲ್ಲಿದೆ. ಶಿಷ್ಯರಲ್ಲಿ ಇವರಿಗೂ ಹಳಬರಾಗಿದ್ದ ಬಿ. ರಾಮಸ್ವಾಮಿಯವರೂ ಜೊತೆಗಿದ್ದರೆಂದು ತೋರುತ್ತದೆ. ಮಾನ್ವಿ ಹೊರಬಯಲಲ್ಲಿ ಆರಾಮಕುರ್ಚಿಯಲ್ಲಿದ್ದವರು, ಸಡಗರಿಸಿ ಮೇಲೆದ್ದು ಗುರುಗಳನ್ನು ಸ್ವಾಗತಿಸಿದರು. “ಶಿಷ್ಯನನ್ನು ಹುಡುಕಿಕೊಂಡು ಬಂದಿರಿ; ಏನು ಮಾಡಿಸೋಣ ಹೇಳಿ, ಓವಲ್ಟೀನ್‌, ಟೀ ಕಾಫಿ?” ಎಂದು ಉತ್ಸಾಹದಿಂದ ಕೇಳಿದರು. ಡಿ.ಎಲ್‌.ಎನ್‌. ಉತ್ತರಿಸಿದರೋ ನೆನಪಿಲ್ಲ. ಮಾನ್ವಿ ಹೇಳಿದ ಒಂದು ಮಾತು ಈಗಲೂ ಕಿವಿಯನ್ನು ತುಂಬಿದಂತಿದೆ. “ತಮಗೆ ಸಾವಿರಾರು ಜನ ಶಿಷ್ಯರು; ನಮಗೆ ತಾವೊಬ್ಬರೇ ಪ್ರಿಯವಾದ ಗುರುಗಳು”.-ಎಂಬ ಆ ಮಾತನ್ನು ಅವರು ತುಂಬ ಸಹಜವಾಗಿ ಆಡಿದ್ದರು. ಆಗ ತಾನೇ ಡಿ.ಎಲ್‌.ಎನ್‌. ಬೀದರ್‌ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜಿತರಾಗಿದ್ದರು. ಅವರ ಭಾವಚಿತ್ರ ಅಂದಿನ ‘‘ಪ್ರಜಾಮತ’’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದು ಒಂದೆರಡು ದಿನಗಳಷ್ಟೇ ಕಳೆದಿದ್ದುವು. ಈ ಬಗ್ಗೆಯೂ ಕೊಂಚ ಸಲ್ಲಾಪಗಳಾದುವು. “ನನಗೆ ಸಾಕಷ್ಟು ಪ್ರಚಾರ ಸಿಕ್ಕಿದೆ ಇನ್ನು ಅಧ್ಯಕ್ಷ ಸ್ಥಾನದ ಆಯ್ಕೆ ವಿಷಯದಲ್ಲಿ ಪರ ವಿರೋಧಗಳು ಏನಾದರೂ ವ್ಯಕ್ತವಾಗಲಿ, ನನಗೇನು?” ಎಂದು ತಮಾಷೆ ಮಾಡಿದರು. ಆ ಸಲದ ಸಮ್ಮೇಳನಕ್ಕೆ ಹೈದರಾಬಾದಿನಿಂದ ಬೀದರ್‌ಗೆ ನನ್ನ ಮಿತ್ರರೊಂದಿಗೆ ನಾನೂ ಹೋಗಿಬಂದೆ. ಆದರೆ ಅಲ್ಲಿ ಅವರಿಗೆ ಸರಿಯಾದ ಆದರಾತಿಥ್ಯಗಳು ದೊರೆತಂತೆ ತೋರಲಿಲ್ಲ. ಹಲವು ವರ್ಷಗಳ ಅನಂತರವೂ ಅವರು ಮನಸ್ಸು ಕಹಿಮಾಡಿಕೊಂಡು ಆ ಸಮ್ಮೇಳನದ ಬಗ್ಗೆ ಮಾತನಾಡುತ್ತಿದ್ದರು. ನನಗೆ ದೊರೆತ ಸುಖವೂ ಅಷ್ಟೆ! ಬಿಡಾರದಲ್ಲಿ ಭಯಂಕರವಾದ ಕಪ್ಪುಚೇಳು ನನ್ನನ್ನು ಕುಟುಕಿತು. ಒಂದು ರಾತ್ರಿ ನೋವು ನರಳಾಟದಲ್ಲಿ ಕಳೆದು, ಹೇಗೋ ಬದುಕಿಕೊಂಡೆ! ಆಗ ನನ್ನ ಮಿತ್ರರಾದ ಡಿ. ಕೆ. ಭೀ. ಅವರ ಅಳಿಯಂದಿರು ಕೆ. ರಾಘವೇಂದ್ರರಾವ್‌ ನನ್ನ ಹತ್ತಿರವೇ ಇದ್ದು, ಉಪಚರಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಡಿ.ಎಲ್‌.ಎನ್‌. ಮಾತಿನಲ್ಲಿ, ವರ್ತನೆಯಲ್ಲಿ ಎಂದೂ ಮುಚ್ಚುಮರೆ ಮಾಡದೆ ನಡೆಯುತ್ತಿದ್ದವರು; ಅವರು ಸ್ವಭಾವತಃ ಮುಗ್ಧರು. ಹೈದರಾಬಾದು ಪೇಟೆಬೀದಿಯಲ್ಲಿ ಅವರು ಮಿತ್ರರೊಂದಿಗೆ ಸುತ್ತಾಡುತ್ತಿದ್ದಾಗ, ಒಂದು ಡಜನ್‌ ಬಾಳೆಯ ಹಣ್ಣಿಗೆ ಮೂರು ಅಣೆ ಎಂದು ವ್ಯಾಪಾರದ ಹುಡುಗ ಸ್ವರವೆತ್ತಿದಾಗ ತಾವು ಆಶ್ಚರ್ಯದಿಂದ “ಕೇಳಯ್ಯ, ಡಜನ್‌ ಹೆಣ್ಣಿಗೆ ಮೂರು ಆಣೆಯಂತೆ” ಎಂದು ಹಿಗ್ಗಿ ಕೂಗಿದರು. ಅದು ಒಳ್ಳೆಯ ಕಾಲ. ಅದೇ ತಾನೇ ಅನಾಬ್‌ಶಾಹಿ ದ್ರಾಕ್ಷಿ ಪೇಟೆಗೆ ಬರತೊಡಗಿತ್ತು ಎಂದು ನನ್ನ ಗ್ರಹಿಕೆ. ಸು. ಎರಡು ರೂ.ಗೆ ಒಂದು ಕೆ. ಜಿ. ಹಣ್ಣು ಸಿಕ್ಕುತ್ತಿತ್ತು. ಹನ್ನೆರಡಾಣೆಗೆ ತರಿಸುತ್ತಿದ್ದ ಅತಿಶ್ರೇಷ್ಠ ದರ್ಜೆಯ ಸಸ್ಯಹಾರಿ ಹೋಟಲಿನ ಕ್ಯಾರಿಯರ್‌ ಊಟವನ್ನು ನಾನೂ ನನ್ನ ಮಿತ್ರರಾದ, ಈಗ ಉಸ್ಮಾನಿಯಾ ವಿ.ವಿ.ದ ಕನ್ನಡ ಶಾಖೆಯ ಮುಖ್ಯರಾದ ಬಿ. ರಾಮಚಂದ್ರರಾಯರೂ ಹೊಟ್ಟೆತುಂಬ ಉಣ್ಣುತ್ತಿದ್ದೆವು. ಎರಡು ಹೊತ್ತೂ ಕ್ಯಾರಿಯರ್‌ ತರುವ ಆಳು ನಮ್ಮಿಂದ ತಿಂಗಳಿಗೆ ಪಡೆಯುತ್ತಿದ್ದುದು, ನಾಲ್ಕು ರೂಪಾಯಿ.

೧೯೫೪ರಿಂದ ೧೯೫೯ರ ವರೆಗೆ, ನಾನು ಪಿಎಚ್‌.ಡಿ. ಮಾಡುವ ವಿಷಯದಲ್ಲಿ ಅವರೊಂದಿಗೆ ಪತ್ರವ್ಯವಹಾರ ನಡೆಸುತ್ತಲೇ ಇದ್ದೆ. ನಾನು ಹೈದರಾಬಾದು ಸೇರಿದ ಮೇಲೆ ನನಗೆ ಸೂಕ್ತವಾದ ವಿಷಯವನ್ನು ಸೂಚಿಸಿ, ಅಧ್ಯಯನಕ್ಕೆ ಮಾರ್ಗದರ್ಶಕರಾಗಿರಲು ಅವರು ಒಪ್ಪಿಗೆ ನೀಡಿದರು. ಈ ಸಂಬಂಧದ ಕೆಲವು ವಿವರಗಳನ್ನು ಈಗ ಪ್ರಕಟವಾಗಿರುವ ನನ್ನ ನಿಬಂಧದ ಅರಿಕೆಯಲ್ಲಿ ನಾನು ನಿವೇದಿಸಿದ್ದೇನೆ. ನಾನು ಮೈಸೂರಿಗೆ ಬಂದ ಮೇಲೆ (೧೯೬೮) ಮೇಲಿಂದ ಮೇಲೆ ಅವರನ್ನು ಕಾಣುವುದು ಸಾಧ್ಯವಾಗಿ ಕೆಲಸವನ್ನು ಮುನ್ನಡೆಸಿ ಹೇಗೋ ಒಂದು ರೀತಿಯಲ್ಲಿ ಕೊನೆಮುಟ್ಟಿಸಿದೆ. ಇನ್ನೇನು ವಿಶ್ವವಿದ್ಯಾನಿಲಯಕ್ಕೆ ನನ್ನ ನಿಬಂಧವನ್ನು ಒಪ್ಪಿಸಬೇಕು ಎನ್ನುವ ಘಟ್ಟದಲ್ಲಿ, ಅವರು ಹಠಾತ್ತಾನೆ ತೀರಿಕೊಂಡರು. ಈ ಸ್ಥಿತಿಯಲ್ಲಿ ಆಗ್ಗೆ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ಹಾ. ಮಾ. ನಾಯಕರು ನನ್ನ ನೆರವಿಗೆ ಬಂದುದನ್ನು ನಾನು ಇಲ್ಲಿ ನೆನೆಯಬೇಕು.

ನಾನು ನನ್ನ ನಿಬಂಧರಚನೆಯನ್ನು ಚುರುಕುಗೊಳಿಸಿದ ಅವಧಿಯಲ್ಲಿಯೇ ಡಿ.ಎಲ್‌.ಎನ್‌. ತಮ್ಮ ಕೆಲವು ದೊಡ್ಡ ಕೆಲಸಗಳಲ್ಲಿ ಮಗ್ನರಾಗಿದ್ದರು. ಉಪೋದ್ಘಾತ ಟಿಪ್ಪಣಿಗಳ ಸಹಿತವಾದ ‘‘ವಡ್ಡಾರಾಧನೆ’’, ‘‘ಪಂಪಭಾರತ ದೀಪಿಕೆ’’ ಇತ್ಯಾದಿಗಳೇ ಅವು. ಇದರಿಂದಾಗಿ ನನಗೆ ಹೆಚ್ಚಿನ ಸಮಯ ಕೊಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಕಾಟ ಹೆಚ್ಚಾಗಿ, ಅವರು ಹೇಳುತ್ತಿದ್ದ ದಿನ ವಾರಗಳನ್ನು ಕಾಯುತ್ತ ನಾನು ಅವರನ್ನು ಭೇಟಿ ಮಾಡುವುದು ಇನ್ನೂ ಹೆಚ್ಚಾಗಿ, ಕೊನೆಗೊಮ್ಮೆ ನಾನು ಬರೆದುದನ್ನು ನನ್ನಿಂದ ಓದಿಸುವುದು, ತಾವು ಕುಳಿತು ಕೇಳುವುದು ಎನ್ನುವ ವ್ಯವಸ್ಥೆಗೆ ಸಿದ್ಧವಾದರು. ಈ ವೇಳೆಗೆ ಬರೆಹ ಮುಗಿದು ಒಂದೆರಡು ವರ್ಷಗಳೇ ಕಳೆದಿದ್ದವು. ನಾನು ತಡೆಯಲಾರದೆ, ಒಮ್ಮೆ ತಾಳ್ಮೆ ತಪ್ಪಿ, “ಸ್ವಲ್ಪ ಬೇಗ ನೋಡಿಕೊಡುವುದು ಸಾಧ್ಯವಾದರೆ, ಲೌಕಿಕವಾಗಿ ನನಗೆ ಏನಾದರೂ ಪ್ರಯೋಜನವಾದೀತು” ಎಂದು ಸಹ ಹೇಳಿಬಿಟ್ಟೆ. ಅವರಿಗೆ ಇದು ವ್ಯಗ್ರತೆಯುಂಟುಮಾಡಿತು. ಕೂಡಲೇ “ನಿನ್ನ ಅಭ್ಯುದಯಕ್ಕೆ ನಾನು ಅಡ್ಡಿಯಾಗಿದ್ದೇನೇನಯ್ಯ” ಎಂದು ಕಠೋರವಾಗಿ ಹೇಳಿಬಿಟ್ಟರು. ನನಗೆ ಬಹಳ ವ್ಯಥೆಯಾಯಿತು. ಈ ದಿವಸಗಳಲ್ಲಿ ನನಗೆ ಅವರೊಂದಿಗೆ ನಿಬಂಧವನ್ನು ಓದುವಾಗ ಕೆಲವು ಸ್ವಾರಸ್ಯಕರವಾದ ಅನುಭವಗಳಾದವು.

ಅವರ ಮಧ್ಯಾಹ್ನದ ನಸುನಿದ್ರೆಯ ಬಳಿಕ ನಮ್ಮ ವಾಚನ ಶ್ರವಣ ಕಾರ್ಯಕ್ರಮ ಸಾಗುತ್ತಿತ್ತು. ಆಗ ಸು. ೨ ಗಂಟೆ. ಒಂದೊಂದು ಸಲ ಅವರು ನಿದ್ರೆಯಿಂದೇಳುವವರೆಗೆ ನಾನು ಕಾಯುತ್ತಿದ್ದ. ಎಚ್ಚರವಾಗಿ ಬಂದ ಮೇಲೆ ತಮ್ಮನ್ನು ಮೊದಲೇ ಏಕೆ ಎಬ್ಬಿಸಲಿಲ್ಲವೆಂದು ಆಕ್ಷೇಪಿಸುತ್ತಿದ್ದರು. ಆಮೇಲೆ ಅವರೇ ಕೈಯ್ಯಾರೆ ಕಾಫಿ ತಂದು ಕೊಡುತ್ತಿದ್ದರು. “ಆಗಿದೆ ಸಾರ್‌” ಎಂದರೆ, “ಹೌದಯ್ಯ, ನೀನು ಕಾಫಿ ಕುಡಿದಿರುವುದು ಗೊತ್ತು; ಇರಲಿ ತೆಗೆದುಕೋ” ಎನ್ನುತ್ತಿದ್ದರು. ಆ ಪ್ರಕರಣ ಮುಗಿದ ಮೇಲೆ, ಅವರು ಎದುರು ಆರಾಮಕುರ್ಚಿಗೆ ಒರಗಿ ಕೂರುತ್ತಿದ್ದರು; ನಾನು ಮುಂದಿನ ಕುರ್ಚಿಯಲ್ಲಿ ಕುಳಿತು ಬರೆದುದನ್ನು ಓದುತ್ತಿದ್ದೆ. ಅವರು ಗಮನವಿಟ್ಟು ಕೇಳುತ್ತಿದ್ದರು. ತಪ್ಪಾದಲ್ಲಿ ತಿದ್ದುತ್ತಿದ್ದರು. ಒಂದು ಸಲ “ಇದೇನು ಬರವಣಿಗೆಯೇ? ಬರಿಯ ತವುಡು” ಎಂದರು; ಇನ್ನೊಂದು ಸಲ “ಇಗೋ, ಹೀಗೋ ಬರೆಯಬೇಕು” ಎನ್ನುತ್ತ ಪ್ರೋತ್ಸಾಹಿಸಿದರು. ಮಂಗರಸನ ಇತಿವೃತ್ತ ಕುರಿತು ಓದುವಾಗ ಒಮ್ಮೆ ಇದ್ದಕ್ಕಿದ್ದಂತೆ ಕೆರಳಿ “ಮೊದಲು ಆರ್‌. ನರಸಿಂಹಾಚಾರ್ಯರ ಹೆಸರು ಹೇಳು; ಆಮೇಲೆ ನಿನ್ನದು ಏನಿದೆಯೋ ಅದನ್ನು ಹೇಳಿಕೋ” ಎಂದು ಗುಡುಗಿಸರು. ನಾನು ಕವಿಯ ಇತಿವೃತವನ್ನು ಆ ಕವಿಯ ಕೃತಿಗಳ ನೇರವಾದ ಹೇಳಿಕೆಗಳಿಂದಲೇ ಸಿದ್ಧಮಾಡಿದ್ದೆನಾದ್ದರಿಂದ ಕವಿಚರಿತೆಕಾರರನ್ನು ಉಲ್ಲೇಖೀಸಿರಲಿಲ್ಲ. ಈ ಕಾರಣವನ್ನು ಆ ಗಳಿಗೆಯಲ್ಲಿ ಅವರಿಗೆ ನಾನು ಬರೆದುಬಿಟ್ಟಿದ್ದೆ. ಅದು ಹೇಗೆ ಪ್ರಮಾದ ಘಟಿಸಿತೋ ಎನೋ. ತಕ್ಷಣವೇ ನನ್ನನ್ನು ತಡೆದು, ‘ನಿನಗೆ ಯಾರಯ್ಯ ಇದನ್ನು ಹೇಳಿದರು?” ಎಂದು ಕೇಳಿದರು. ನಾನು “ಓದಿಯೇ ಬರೆದಿದ್ದೇನೆ, ಸಾರ್‌” ಎಂದೆ. ಆಗ ಶಾಂತವಾಗಿಯೇ “ಹಾಗೋ ಸರಿ: ಇನ್ನೊಂದು ಸಲ ನಿನ್ನ Source ನೋಡು” ಎಂದಷ್ಟೇ ಹೇಳಿದರು. ಅವರ ನೆನಪು ಕೈಕೊಟ್ಟ ಸಂದರ್ಭಗಳೂ ಇವೆ. ಹಾಗೆ ಅನುಮಾನ ಬಂದಾಗ ತಮ್ಮ ಟಿಪ್ಪಣಿ ಪುಸ್ತಕಗಳನ್ನು ಅವರು ತೆಗೆದು ನೋಡಿ ಸಂಗತಿಗಳನ್ನು ಸ್ಥಿರಪಡಿಸಿಕೊಳ್ಳುತ್ತಿದ್ದರು. ಒಂದು ಸಲ ‘ವರಾಂಗನೃಪಚರಿತೆ’ಯ ಕರ್ತೃ ಧರಣಿ ಪಂಡಿತನ ಹೆಸರು ಕೂಡಲೇ ನೆನಪಿಗೆ ಬರದೆ ತುಂಬ ಪೇಚಾಡಿದರು. ಕೊನೆಗೆ ಜ್ಞಾಪಕಕ್ಕೆ ಬಂತು. “ನಾನು ಮುದುಕನಾಗಿ ಬಿಟ್ಟೆ ಸರಿಯಾಗಿ ಜ್ಞಾಪಕವೇ ಇರೋದಿಲ್ಲಪ್ಪ” ಎಂದರು. ಸಾಳ್ವಭಾರತದ ಛಂದಸ್ಸಿನ ವಿಷಯದಲ್ಲಿಯೂ ಇನ್ನೊಮ್ಮೆ ಹೇಗೆಯೇ ಆಯಿತು.

ನಿಬಂಧದ ಓದು ಸುಮಾರು ತಿಂಗಳುಕಾಲ ಸಾಗಿತು. ಆಮೇಲೆ ಸಾಗಲಿಲ್ಲ. ಅವರಿಗೆ ‘ಪರವಾಯಿಲ್ಲ’ ಎಂದು ತೋರಿತೋ ಏನೋ, ಟೈಪು ಮಾಡಿಸು” ಎಂದರು. ಮುಂದಿನ ವಿವರಗಳನ್ನು ನನ್ನ ನಿಬಂಧದ ಅರಿಕೆಯಲ್ಲಿ ಬರೆದಿದ್ದೇನೆ. ಒಮ್ಮೊಮ್ಮೆ ವ್ಯವಹಾರ ಜ್ಞಾನಶೂನ್ಯತೆ ಯೌವನದ ದುಡುಕು ಕಾರಣವಾಗಿ ಡಿ.ಎಲ್‌.ಎನ್‌. ಅವರನ್ನು ನಾನು ಇಕ್ಕಟ್ಟಿನಲ್ಲಿ ಸಿಕ್ಕಿಸಿದ ಸಂದರ್ಭಗಳೂ ಇವೆ. ಆದರೆ ಇಂತಹ ಸಂದರ್ಭಗಳಲ್ಲಿ ಎಂದೂ ಅವರು ನನ್ನ ಮೇಲೆ ಕೆರಳಲಿಲ್ಲ. ಅವರು ಬರೆದ ಎಲ್ಲ ಲೇಖನಗಳನ್ನೂ ಗ್ರಂಥಗಳನ್ನೂ ಸ್ವರುಚಿಯಿಂದ ನಾನು ಓದುತ್ತಿದ್ದೆ. ನನ್ನ ಮನೋಧರ್ಮ ಆಸಕ್ತಿಗಳಿಗೆ ಅವುಗಳ ವಸ್ತು ರೀತಿಗಳು ತುಂಬ ಹಿಡಿಸಿದ್ದವು. “ಬರೆದ ಬರವಣಿಗೆ ಒಂದು ಕಲಾಕೃತಿ ಎನ್ನುವಂತಿರಬೇಕು” ಎಂಬುದಾಗಿ ಅವರೇ ಒಂದೆರಡು ಸಲ ನನ್ನೊಂದಿಗೆ ಹೇಳಿದ ಮಾತಿಗೆ, ಅವರ ಬರವಣಿಗೆಗಳೇ ಸೊಗಸಾಗಿ ಲಕ್ಷ್ಯಗಳಾಗಿದ್ದವು. ನನ್ನ ಮೆಚ್ಚುಗೆಯನ್ನು ಅವರಿಗೆ ಪತ್ರಮುಖೇನ ನಾನು ಬರೆದು ತಿಳಿಸುತ್ತಿದ್ದುದುಂಟು. ಬೇಟಿಯಾಗಿ ಮಾತನಾಡುವಾಗ, ಅವರ ಸಂಶೋಧನಪ್ರಬಂಧಗಳ ಬಗೆಗೆ ಆಗಾಗ ಪ್ರಸ್ತಾಪಿಸುತ್ತಿದ್ದೆ. “ಮಾನಸೋಲ್ಲಾಸದಲ್ಲಿ ಛಂದಸ್ಸು ಎಂಬ ಲೇಖನ ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾದ ಹೊಸದರಲ್ಲಿ ಅದನ್ನು ಓದಿ ಅದ್ಭುತವಾದ ವಿದ್ವತ್‌ ಸಾಹಸ ಮರೆದಿದ್ದೀರಿ; ಕನ್ನಡ ಪದ್ಯಗಳ ಪುನಾರಚನೆ “a challenge to scholarship’’ ಎಂದು ಹೇಳಿದೆ. ಅವರಿಗೆ ಸಂತೋಷವಾಯಿತು. “ಮನೆಗೆ ಬಾ; ಅವನ್ನು ಒಂದೇ sittingನಲ್ಲಿ ಹೇಗೆ ಮಾಡಿ ಮುಗಿಸಿದ್ದೇನೆ ಎನ್ನುವುದನ್ನು ನೋಡುವೆಯಂತೆ” ಎಂದರು. ಆಗ ಅವರು ಉತ್ಸಾಹದ ಬುಗ್ಗೆಯಾಗಿದ್ದರು. ಆದರೆ ಕೆಲವು ಕಾಲದ ಬಳಿಕ, ಅವರ ಅದೇ ಲೇಖನದ ತ್ರಿಪದಿಯ ಪುನಾರಚನೆ ಪೂರ್ತಿ ತೃಪ್ತಿಕರವಾಗಲಿಲ್ಲ ಎಂಬುದಾಗಿ ತಿಳಿಸಿ. ಅದರ ಕೊರತೆಯನ್ನು ಸಕಾರಣವಾಗಿ ತಿಳಿಸಿದೆ. ಅವರು ಅದನ್ನು ನಿರೀಕ್ಷಿಸಿದ್ದರೋ ಇಲ್ಲವೋ? “All right; see if you can improve on that’’ ಎಂದು ಮಾತ್ರ ಹೇಳಿದರು. ಇನ್ನೊಮ್ಮೆ ಪ್ರಬುದ್ಧ ಕರ್ಣಾಟಕದಲ್ಲಿ ಅದೇ ತಾನೇ ಪ್ರಕಟವಾಗಿದ್ದ ಅವರ ‘ಪೞಂಗಾಸು’ ಶಬ್ದಾರ್ಥಲೇಖನದ ಬಗ್ಗೆ ಮಾತನಾಡುತ್ತ, “ಸಾಳ್ವನ ‘ಶಾರದವಿಲಾಸ’ದ ಧ್ವನಿಪ್ರಕರಣದಲ್ಲಿ “ಪೞಗಾಜಿ(ಸಿ)ನ ಪುತ್ತಳಿಯಂತಿರೊಪ್ಪಿದಳ್‌” ಎಂಬ ಒಂದು ಪ್ರಯೋಗವಿದೆಯಲ್ಲ ಸಾರ್‌” ಎಂದೆ. “ನಾನು ಅದನ್ನು ಗಮನಿಸಲಿಲ್ಲ” ಎಂದು ಅವರು ಹೇಳಲಿಲ್ಲ; “ನನಗೆ ಎಷ್ಟು ಸಾಮಗ್ರಿ ಬೇಕೋ ಅಷ್ಟುಮಾತ್ರ ಬಳಸಿದ್ದೇನಯ್ಯಾ” ಎಂದರು. ಈ ಪ್ರಯೋಗ ಅವರ ಕಣ್ಣು ತಪ್ಪಿಸಿದ್ದು ಆಶ್ಚರ್ಯವೇ!

ಒಂದು ಸಲ ಡಿ.ಎಲ್‌.ಎನ್‌. ಅವರೇ ನನ್ನನ್ನು ಇಕ್ಕಟ್ಟಿಮ ಪ್ರಸಂಗದಲ್ಲಿ ಸಿಕ್ಕಿಸಿದರು. ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯಕ್ಕೆ ಕೆಲಮಟ್ಟಿಗೆ ನನ್ನನ್ನು ಗುರಿಮಾಡಿದ ಪ್ರಸಂಗವದು. ಹಾಗೆಂದೇ ಅದನ್ನು ನಾನಿಲ್ಲ ಹೇಳಬೇಕಾಗಿದೆ. ನನ್ನ ‘ಕನ್ನಡ ಛಂದಸ್ಸು’ ಎಂಬ ಲೇಖನಸಂಗ್ರಹಕ್ಕೆ ಅವರಿಂದ ನಾನು ಒಂದು ಮುನ್ನುಡಿ ಬಯಸಿದೆ. ಇದು ನಿಮಿತ್ತವಾಗಿ ಕನ್ನಡ ಛಂದಸ್ಸಿನ ಬಗೆಗೆ ಹೊಸಸಂಗತಿಗಳನ್ನು ಅವರು ಹೊರಗೆಡಹುತ್ತಾರೆ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ನನ್ನ ಒತ್ತಾಯಕ್ಕೆ ಅವರು ಒಪ್ಪಿದರು. ಆ ಗ್ರಂಥದಲ್ಲಿ ರಗಳೆ ಛಂದಸ್ಸಿನ ವಿವೇಚನೆ ತಕ್ಕಮಟ್ಟಿಗೆ ವಿಸ್ತಾರವಾಗಿತ್ತು. ಅದರಲ್ಲಿಯ ಕೆಲವು ಭಾಗ ತಮ್ಮ ತರಗತಿಯ ಟಿಪ್ಪಣಿಗಳನ್ನು ಬಳಸಿ ನಾನು ಬರೆದಿದ್ದೆನೆಂಬುದು ಅವರ ಗ್ರಹಿಕೆಯಾಗಿದ್ದಂತೆ ತೋರುತ್ತದೆ; ವೈಯಕ್ತಿಕವಾಗಿ ಆಕ್ಷೇಪಿಸದಿದ್ದರೂ, ಆ ಧ್ವನಿ ಹೊರಡುವ ಹಾಗೆ ಮುನ್ನುಡಿಯಲ್ಲಿ ಕೆಲವು ಮಾತು ಬರೆದಿದ್ದರು. ನನ್ನ ಮನಸ್ಸಿಗೆ ಇದರಿಂದ ವ್ಯಥೆಯಾಯಿತು. ಪ್ರಕಾಶಕರಿಗೂ ಇದು ಇಷ್ಟವಾಗಲಿಲ್ಲ. “ಅಚ್ಚು ಮಾಡೋಣ, ಪರವಾಯಿಲ್ಲ” ಎಂದ ಅವರಿಗೆ ನಾನು ತಿಳಿಸಿದೆ. ಅವರು ಒಪ್ಪಲಿಲ್ಲ. ಅವರ ಸೂಚನೆಯಂತೆ ನಾನು ಡಿ.ಎಲ್‌.ಎನ್‌. ಅವರನ್ನು ಕಂಡು ಆ ಬಗ್ಗೆ ಪ್ರಸ್ತಾಪ ಮಾಡಿದೆ. ನಾನು ಅವರಿಗೆ ಹೇಳಿದ ಮಾತಿನ ರೀತಿ ಬಲುಮಟ್ಟಿಗೆ ಹೀಗಿತ್ತು; “ತಾವು ನಮಗೆ ಛಂದಸ್ಸಿನ ಪಾಠ ಮಾಡಲಿಲ್ಲ ಮಾಡಿದವರು ಇಂಥವರು. ತಮ್ಮ ಶೋಧನೆಗಳು ಅವರ ಪಾಠದ ಮೂಲಕ ನಮಗೆ ತಲುಪಿರಬಹುದು. ಮುಖ್ಯಾಂಶಗಳಲ್ಲಿ ಇವೆಲ್ಲ ತಾವೇ ಸಂಪಾದಿಸಿರುವ ಸುಕುಮಾರಚರಿತೆಯ ಪೀಠಿಕೆಯಲ್ಲಿ ಬಂದವೇ ಆಗಿವೆ. ಇಲ್ಲಿಯೇ ಅಗತ್ಯವಿದ್ದಡೆ ನಾನು ತಮ್ಮ ಶೋಧನೆಗಳಿಗೆ acknowledge ಮಾಡಿದ್ದೇನೆ. ನನ್ನ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸುವ ಹಾಗಿರುವ ಈ ಕೆಲವು ಮಾತುಗಳನ್ನು ತಾವು ಕೈಬಿಡಬೇಕು.” ಡಿ.ಎಲ್‌.ಎನ್‌. ಕೋಪಿಸಲಿಲ್ಲ. ಅಲ್ಲದೆ ಒಂದೆರಡು ನಿಮಿಷ ಮೌನ ವಾಗಿದ್ದು, “ಅಲ್ಲಿ ಬರೆದಿರುವುದು ನಿನಗೆ ಸಂಬಂಧಿಸಿದ್ದಲ್ಲವಯ್ಯ ನೀನೇನೂ ಯೋಚಿಸ ಬೇಡ, ಅಚ್ಚುಮಾಡಿಸು” ಎಂದರು. ಆ ಸಂದರ್ಭದಲ್ಲಿ ಬೇರೆ ಒಬ್ಬರ ಹೆಸರು ಹೇಳಿದರು; ಅವರು ಹೀಗೆ ಮಾಡಿದ್ದಾರೆ ಎಂದರು. ನಾನು ಸುಮ್ಮನೆ ಹಿಂತಿರುಗಿದೆ ಆದರೆ ಪ್ರಕಾಶಕರು ತಾವೇ ಖುದ್ದಾಗಿ ಡಿ.ಎಲ್‌.ಎನ್‌. ಅವರನ್ನು ಕಂಡು, ಅಗತ್ಯವಾದ ಬದಲಾವಣೆಗೆ ಅವರನ್ನು ಒಪ್ಪಿಸಿದರು. ಅದು ಆಯಿತು. ಮತ್ತೆ ಕೆಲವು ತಿಂಗಳುಗಳೇ ಸಂದುಹೋದುವು, ಈ ಸ್ವಲ್ಪ ಬದಲಾವಣೆಗೆ, ನಾಲ್ಕು ಸಾಲು ಹೊಸವಿಷಯವನ್ನೂ ಈಗ ಸೇರಿಸಿದ್ದರು. ಇದಾದ ಬಳಿಕ, ಕೆಲವು ದಿನಗಳ ಮೇಲೆ ಗಂಗೋತ್ರಿಯ ಬಸ್‌ಸ್ಟಾಪ್‌ಬಳಿ ನನ್ನ, ಅವರ ಭೇಟಿಯಾಯಿತು. ನಾನು ಪ್ರಸ್ತಾಪಿಸದಿದ್ದರೂ ತಾವೇ ಮುನ್ನಡಿಯ ಮಾತೆತ್ತಿ, ನನ್ನ ಬೆನ್ನು ತಟ್ಟಿ, ಸಮಾಧಾನವಾಗಿ ಮಾತನಾಡಿದರು. ಆಗ ಅವರು ತಾವಾಗಿ ಆಡಿದ ಒಂದು ಮಾತನ್ನು ಇಲ್ಲಿ ನಾನು ಬರೆಯಲಾರೆ.

ನಾನು ಕನಕಪುದ ಶಾಲೆಯಲ್ಲಿ ಉಪಾಧ್ಯಾಯನಾಗಿದ್ದಾಗ ಕರ್ಣಾಟಕ ಸಂಘದ ಕಾರ್ಯದರ್ಶಿಯೂ ಆಗಿದ್ದೆ. ಡಿ.ಎಲ್‌.ಎನ್‌. ಅವರಿಂದ ಸಂಘದ ಮೂಲಕ ಒಂದು ಉಪನ್ಯಾಸ ಮಾಡಿಸಬೇಕು ಎಂದು ನಾನು ಬಯಸಿದೆ. ಆಗ್ಗೆ ಅವರು ಕನ್ನಡ ನಿಘಂಟು ಕಛೇರಿಯಲ್ಲಿ ಸಂಪಾದಕರಾಗಿ ಎರವಲು ಸೇವೆಯಲ್ಲಿ ಬೆಂಗಳೂರಿನಲ್ಲೆ ಇದ್ದರು. ಅವರು ನನ್ನ ಆಹ್ವಾನಕ್ಕೆ ಒಪ್ಪಿದರು. “ಕಾರ್ಯಕ್ರಮ ಬೆಳಗ್ಗೆ ಇಟ್ಟುಕೊಂಡರೆ ಬರುತ್ತೇನೆ” ಎಂದರು. ‘ಆಗಲಿ’ ಎಂದೆ. ಬೆಳಿಗ್ಗೆ ಉಪನ್ಯಾಸಕ್ಕೆ ಜನ ಸೇರುವುದು ಕಷ್ಟ ಎನ್ನುವುದು ನಮ್ಮ ಸಂಘದ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆತಂಕವಾಗಿತ್ತು. ನಾನೇ ಸ್ವಪ್ರಯತ್ನದಿಂದ ಜನರನ್ನು ಕಲೆಹಾಕಿದೆ. ತೋರಿದಂತೆ ಅವರ ಪರಿಚಯವನ್ನು ಸಭೆಗೆ ಮಾಡಿಕೊಟ್ಟೆ ಏಕೋ ನನಗೆ ಅದು ತುಂಬ ಪೇಲವ ಎನಿಸಿತು. ಅವರನ್ನೇ “ಸರಿಯಾಗಿತ್ತೇ” ಎಂದು ಕೇಳಿದೆ “ಭೇಷಾಗಿತ್ತು” ಎಂದರು. ಭಾಷಣದ ಆರಂಭದಲ್ಲಿ ಹಾಡಿದ ಕೆಲವು ಕನ್ನಡ ಗೀತೆಗಳು, ನುರಿತ ಗಮಕಿಗಳೇ ಹಾಡಿದ್ದರಿಂದ ನಿಜವಾಗಿ ಚೆನ್ನಾಗಿತ್ತು. ಅವು ಅಡಿಗರ ಕವಿತೆಗಳು. ಆಗ್ಗೆ ಅಡಿಗರು ನನ್ನ ನೆಚ್ಚಿನ ಕವಿಗಳು. ಡಿ.ಎಲ್‌.ಎನ್‌. ಅವರಿಗೆ ಆ ಪದ್ಯಗಳ ಸಂಬೋಧನಪರ ಉತ್ಸಾಹ ಆವೇಶಗಳು ಏಕೋ ಹಿಡಿಸಲಿಲ್ಲ. ಭಾಷಣದ ಮೊದಲಲ್ಲಿ ಅವನ್ನು ಬಲವಾಗಿ ಟೀಕಿಸಿದರು. ನಾನು ಪೆಚ್ಚಾದೆ.

ಬಹುಶಃ ಆಗಲೇ ನಡೆದ ಒಂದು ಸ್ವಾರಸ್ಯ ಹೇಳಬೇಕು. ಅವರು ನಿರೀಕ್ಷಿಸಿದ್ದ ಸಮಯಕ್ಕೆ ಬಸ್‌ನಿಲ್ದಾಣಕ್ಕೆ ಬೆಂಗಳೂರಿನಿಂದ ಪ್ರಯಾಣ ಮಾಡಿಬಂದು ತಲುಪಿದರು. ಅದು ಅಂದಿನ ದಿನಗಳಲ್ಲಿ ಸುಖ ಪ್ರಯಾಣವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಪಾಪ! ನನಗಾಗಿ ಅವರು ಆ ಪ್ರಯಾಣದ ಕಷ್ಟ ತೆಗೆದುಕೊಂಡಿದ್ದರು. ನಾನು ಅವರನ್ನು ಕರೆತರಲು ನಿಲ್ದಾಣಕ್ಕೆ ಐದಾರು ನಿಮಿಷ ತಡವಾಗಿ ಹೋದೆ. ಆವೇಳೆಗೆ ಜನಜಂಗಿಳಿಯ ನಡುವೆ ಸ್ಥಾಣುವಿನ ಹಾಗೆ, ಕಂಕುಳಲ್ಲಿ ಛತ್ರಿ ಇರುಕಿಕೊಂಡು ನಿಂತಿದ್ದರು. ತಡವಾದುದಕ್ಕೆ ನಾನು ಕ್ಷಮೆ ಕೇಳಿದೆನೇ, ನೆನಪಿಲ್ಲ. ಅವರಿಗೆ ಅದು ಹೊದ ಊರು. ನನ್ನ ಬೇಜವಾಬ್ದಾರಿಗೆ. ಬೇರೆ ಯಾರಾದರೂ ಆಗಿದ್ದರೆ, ನನ್ನನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಡಿ.ಎಲ್‌.ಎನ್‌. ಶಾಂತಚಿತ್ತರಾಗಿಯೇ ನನ್ನೊಂದಿಗೆ ಬಿಡಾರಕ್ಕೆ ಹೊರಟುಬಂದರು. ಮಧ್ಯಾಹ್ನದ ವೇಳೆಗೆ ಉಪನ್ಯಾಸ ಮುಗಿದು ನಾವು ಮರಳುವಾಗ “ಬಿಸಿಲಿನ ತಾಪ ಹೆಚ್ಚಾಗಿದೆ; ಛತ್ರಿ ಹಿಡಿದು ಕೊಳ್ಳಿ” ಎಂದು ವಿನಯವಾಗಿ ವಿಜ್ಞಾಪಿಸಿಕೊಂಡೆ. “ಅದಕ್ಕೆ ಕೊಂಚ ರಿಪೇರಿ ಆಗಬೇಕಯ್ಯ” ಎಂದು ಉತ್ತರ ಹೇಳಿದರು. ಬೆಂಗಳೂರಿಗೆ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಹಿಂದಿರುಗುವಾಗಲೂ ಮತ್ತೆ ಛತ್ರಿ ಬಿಚ್ಚಿ ಹಿಡಿದುಕೊಳ್ಳುವ ಹಾಗೆ, ಅದೇ ದಡ್ಡ ಸಲಹೆ ನೀಡಿದೆ. ಆಗ ಸ್ವಲ್ಪ ವ್ಯಗ್ರವಾಗಿ “ಏನಯ್ಯ, ಎಷ್ಟು ಸಲ ನಿನಗೆ ಹೇಳುವುದು? ಛತ್ರಿ ರಿಪೇರಿಯಾಗಬೇಕಾಗಿದೆಯಯ್ಯಾ” ಎಂದು ದಪ್ಪದನಿಯಲ್ಲಿ ನುಡಿದನಿಯಲ್ಲಿ ನುಡಿದರು. ಊರಿಂದ ಹೊರಟ ಮೇಲೆ ಆ ಛತ್ರಿ ಕೆಟ್ಟಿತೋ, ಕೆಟ್ಟಿದ್ದ ಛತ್ರಿಯನ್ನೇ ಭೂಷಣವಾಗಿ, ಅಭ್ಯಾಸಬಲದಿಂದಾಗಿ ಜೊತೆಗೆ ತಂದಿದ್ದರೋ, ತಿಳಿಯದು.

ಒಂದು ಸಲ ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ೨-೩ ಪರಂಗಿ ಹಣ್ಣುಗಳ್ನು ಒಂದು ಚೀಲದಲ್ಲಿ ಹಾಕಿಕೊಂಡು ಹೋಗಿ ಅವನ್ನು ತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದೆ. “ಮನೆಯ ಹಿತ್ತಲಲ್ಲಿ ಬೆಳೆದದ್ದು” ಎಂದೆ. ಡಿ.ಎಲ್‌.ಎನ್‌“ಅಯ್ಯ. ಇವನ್ನು ನಾವು ಬಳಸುವುದಿಲ್ಲ; ವೇದಾಂತ ದೇಶಿಕರು ಬಳಸುವ ಹಾಗೆ ಹೇಳಿಲ್ಲ” ಎಂದು ಖಚಿತವಾಗಿ ಹೇಳಿಬಿಟ್ಟರು. “ಮನೆಯವರಾದರೂ ಬಳಸಬಹುದು” ಎಂದೆ “ಅವರೂ ಅಷ್ಟೇ” ಎಂದರು. ವೇದಾಂತ ದೇಶಿಕರಿಗೂ ಪರಂಗಿಹಣ್ಣುಗಳನ್ನು ತಿನ್ನುವುದರ ನಿಷೇಧಕ್ಕೂ ಏನು ಸಂಬಂಧವಿದೆಯೋ ನಾನು ವಿಚಾರಮಾಡಿಲ್ಲ. ತೆಗೆದುಕೊಂಡು ಹೋಗಿದ್ದ ಹಣ್ಣುಗಳನ್ನು ಹಿಂದಕ್ಕೆ ಹಾಗೆಯೇ ತರಬೇಕಾಯಿತು. ಮನಸ್ಸಿಗೆ ಸ್ವಲ್ಪ ಹಿಂಸೆಯಾಯಿತು. “ನಿಮ್ಮೂರು ಕನಕಪುರ ಬಿಳಿಯ ಬೆಂಡೆಕಾಯಿ ತುಂಬ ರುಚು, ತಿನ್ನಲು ಹಿತ” ಎಂದು ಯಾವಾಗಲೋ ೧-೨ ಸಲ ಹೇಳಿದ್ದರು. ಆದರೆ ಅದನ್ನು ಅವರಿಗೆ ತಂದುಕೊಡಬಹುದೆಂದೂ ಅದರಿಂದ ಅವರಿಗೆ ಸಂತೋಷವಾಗಬಹುದೆಂದೂ ನನ್ನ ದಡ್ಡಬುದ್ಧಿಗೆ ಹೊಳೆಯಲೇ ಇಲ್ಲ. ಇದನ್ನು ನೆನೆದರೆ ಈಗಲೂ ಮನಸ್ಸಿಗೆ ತುಂಬ ಬೇಸರವಾಗುತ್ತದೆ.

ಡಿ.ಎಲ್‌.ಎನ್‌. ಸಂಬಂಧದ ಮಧುರವಾದ ನೆನಪುಗಳು ಇನ್ನೂ ಹಲವು ಇವೆ. ಅವರು ವಾತ್ಸಲ್ಯಪರರು, ಮುಗ್ಧರು, ಮಾತು ಒರಟಾದರೂ ಹೃದಯ ಸ್ನಿಗ್ಧವಾದ್ದು. ನನ್ನ ಪ್ರಿಯಗುರುಗಳು ಅವರು. ನನ್ನ ಓದು ಬರೆಹಗಳಿಗೆ ಅವರೇ ನನ್ನ ಏಕೈಕ ಆದರ್ಶ. ಅವರಲ್ಲಿ ನನಗೆ ಅತ್ಯುತ್ಕೃಷ್ಟವಾದ್ದು, ಮಾದರಿಯಾದ್ದು ಕಂಡಿದೆ. ಅವರಿಗಿಂತ ತಾವು ದೊಡ್ಡವರು ಎಂದು ತೋರಿಸಿಕೊಳ್ಳಲು ಅವರಿದ್ದಾಗ ಸ್ವಲ್ಪವೂ ಮಿಸುಕದೆ ಇದ್ದವರು, ಈಗ ಗುಡುಗಲು ತೊಡಗಿದ್ದಾರೆ. ಇದು ಕಾಲಧರ್ಮ. ಅವರು ಮಾಡಿದ ಕೆಲಸದಲ್ಲಿ ಒಟ್ಟಾಗಿ ಒಂದೋ ಹತ್ತೋ ತಪ್ಪು ಈಗ ನಮಗೆ ಕಾಣಬಹುದು; ಆದರೆ, ನಮ್ಮ ಕೆಲಸದಲ್ಲಿ ಅಂಥವು ನೂರೋ ಸಾವಿರವೋ! ಡಿ.ಎಲ್‌.ಎನ್‌. ಅವರಂಥ ವಿದ್ವಾಂಸರು ಹುಟ್ಟುವುದು ಶತಮಾನಕ್ಕೆ ಎಲ್ಲೋ ಒಂದು ಸಲ. ಇದು ನನ್ನ ನಂಬುಗೆ.

* ಮಾರ್ಗದರ್ಶಕ ಮಹನೀಯರು, ಪು.೩೮೧