ಪ್ರೊಫೆಸರ್‌ ದೊಡ್ಡಬೆಲೆ ನರಸಿಂಹಾಚಾರ್‌ ಅವರನ್ನು ನಾನು ಬಲ್ಲೆ ಎಂದು ಯಾರಾದರೂ ಹೇಳಿದರೆ, ನಾನು ಸಮುದ್ರವನ್ನು ನೋಡಿದ್ದೇನೆ ಎಂದು ಹೇಳಿದಷ್ಟೇ ಅರ್ಥ.

ಸಮುದ್ರವನ್ನು ನೋಡಿದವರಿಗೆಲ್ಲ ಅದು ಬಹು ದೊಡ್ಡದು ಎಂಬ ಅರಿವಿರುತ್ತದೆ. ನಿಜ. ವಾಸ್ತವವಾಗಿ ಅದರ ಆಳವನ್ನಾಗಲೀ, ವೈಶಾಲ್ಯವನ್ನಾಗಲೀ ಕಂಡಿರುವುದಿಲ್ಲ. ಕಣ್ಣಿಗೆ ಕಾಣುವಷ್ಟು ದೂರದ ಅದರ ಹರವು, ವಿಸ್ತಾರ; ಕಿವಿಗೆ ಬಂದು ಅಪ್ಪಳಿಸುವ ಅದರ ತೆರೆಗಳ ಆವೇಶದ ಆರ್ಭಟ – ಇವುಗಳಿಂದಲೇ ಅವನಿಗೆ ಸಮುದ್ರದ ಕಲ್ಪನೆ ಬಂದಿರುತ್ತದೆ. ಅದರ ಬಗೆಗೆ ಅವನಿಗಿರುವ ಕಲ್ಪನೆ ಎಂದಿಗೂ ಸುಳ್ಳಾಗದು; ಯಾರೂ ಅಲ್ಲಗಳೆಯಲಾರರು.

ಮೂರು ವರ್ಷ ಹೆಚ್ಚೆಂದರೆ ನಾಲ್ಕು ವರ್ಷ ಅವರ ವಿದ್ಯಾರ್ಥಿಗಳಾಗಿದ್ದು ಕೆಲವಾರು ವರ್ಷ ಅವರ ಸಹದ್ಯೋಗಿಗಳೋ, ಮಿತ್ರರೋ ಆಗಿದ್ದು, ಅವರ ಸಂಪಾದಿಸಿದ ಪುಸ್ತಕಗಳ ಹಾಳೆಗಳನ್ನು ತಿರುವಿ ಹಾಕಿ, ಪತ್ರಿಕೆಗಳಲ್ಲಿ ಹರಡಿ ಹೋದ ಅವರ ಕೆಲವು ಲೇಖನಗಳತ್ತ ಕಣ್ಣು ಹಾಯಿಸಿ, ಅವರ ಭಾಷಣಗಳನ್ನು ಕೇಳಿ ಇಷ್ಟರಿಂದಲೇ ನಾನು ಬಲ್ಲೆ ಎಂದು ಪ್ರೊ. ನರಸಿಂಹಾಚಾರ್‌ಅವರನ್ನು ಕುರಿತು ಅವರಂಥ ವಿದ್ವಾಂಸರನ್ನು ಕುರಿತು ಹೇಳುವುದೂ ಅಷ್ಟೇ. ಅವರು ಕಂಡಿರುವುದು ಒಂದು ಮುಖ; ತಿಳಿದಿರುವುದು ಕೊಂಚ. ಆದರೆ ಊಹಿಸಬಹುದಾದದು ಪರಮ ಸತ್ಯ. ಅದರ ಬಗೆಗೆ ಮತ್ತೊಂದು ಅಭಿಪ್ರಾಯ ಇರಲಾರದು.

ಕೆಲವರು ಸತತವಾದ ಸಾಧನೆ ತಪಸ್ಸುಗಳಿಂದ ಪಾಂಡಿತ್ಯವನ್ನು ಗಳಿಸಿರುತ್ತಾರೆ. ಅವರಿಗೆ ಜೀವದ ಉಸಿರೇ. ಹಲವರಿಗೆ ಸಮಾಜದಲ್ಲಿ ಅವರಿಗಿರುವ ಪ್ರತಿಷ್ಠ, ಪ್ರಭಾವ, ಅಲಂಕರಿಸಿರುವ ಪದವಿ ಇವುಗಳಿಂದಾಗಿ ಪಾಂಡಿತ್ಯ ಹೊರಿಸಲ್ಪಟ್ಟಿರುತ್ತದೆ. ಅಂಥವರಿಗೆ ಅದು ಕಾನ್ವೋಕೇಷನ್ನಿನ ಅಂಗಿ, ಅಷ್ಟೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ದೊಡ್ಡಬೆಲೆ ನರಸಿಂಹಾಚಾರ್ಯರು ಮೊದಲನೆ ಗುಂಪಿಗೆ ಸೇರಿದ ಪಂಡಿತರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರಿಗುಂಟಾ ಜ್ಞಾನತೃಷೆ ಪ್ರಾಧ್ಯಾಪಕರಾದ ಮೇಲೂ ಆರಲಿಲ್ಲ. ಅಂಥವರಲ್ಲಿ ಅದು ಆರುವ ತೃಷೆಯಲ್ಲ. ಪಾಂಡಿತ್ಯ ಇನ್ನು ಯಾವುದೋ ಒಂದಕ್ಕೆ ಸಹಾಯಕವಾಗಿರುವವರೆಗೆ ಒಂದು ಗುರಿಯಿದೆ; ಕೊನೆಯಿದೆ. ಪಾಂಡಿತ್ಯವೇ ಸರ್ವಸ್ವವಾಗಿರುವವರಿಗೆ ಕೊನೆಯಲ್ಲಿ? ಮೊದಲೆಲ್ಲಿ? ಅದೊಂದು ಚಿರಂತನ ಹವ್ಯಾಸ ಅವರ ಪಾಲಿಗೆ.

‘ಜ್ಞಾನದ ವಿಚಾರದಲ್ಲಿ ಅಲ್ಪತೃಪ್ತಿಯನ್ನು ಯಾರೂ ಹೊಂದಬಾರದು ಎಂದು ಹೇಳುವ ನರಸಿಂಹಾಚಾರ್ಯರು ‘ಈ ತೃಷೆ’, ತಮ್ಮ ವಿದ್ಯಾರ್ಥಿಗಳಲ್ಲಿ ವೃದ್ಧಿಯಾಗಬೇಕೆಂಬ ‘ಅಭಿಲಾಷೆ’ ಉಳ್ಳವರಾಗಿದ್ದಾರೆ.

ನಾನು ಯಾವತ್ತು ನರಸಿಂಹಾಚಾರ್ಯರ ವಿದ್ಯಾರ್ಥಿಯೇ. ಹಾಗೆಂದುಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಕೇವಲ ಒಂದೂವರೆ ವರ್ಷಗಳಷ್ಟೇ ತರಗತಿಗಳಲ್ಲಿ ಕುಳಿತು ಅವರ ಪಾಠ ಕೇಳಿದ್ದೇನೆ. ನನ್ನ ಬಾಳಿನ ಹಲವು ಪುಣ್ಯಗಳಲ್ಲಿ ಇದೂ ಒಂದೆಂದು ನನ್ನ ಗ್ರಹಿಕೆ. ಆದರ್ಶ ಅಧ್ಯಾಪಕ ಹೇಗಿರಬೇಕೆಂಬುದನ್ನು, ಅವರನ್ನು ನೋಡಿ ನಾನು ತಿಳಿದಿಕೊಂಡಿದ್ದೇನೆ. ಅವರು ಪಾಠ ಹೇಳುವ ಪೀರಿಯಡ್ಡು ಅರವತ್ತು ನಿಮಿಷಗಳದ್ದು; ಒಂದು ಗಂಟೆಯದಲ್ಲ; ಅದು ಐವತ್ತು ನಿಮಿಷಗಳದ್ದಾಗುವ ಸಂಭವ ಬಂದರೆ ಅವರು ರಜಾ ತೆಗೆದುಕೊಂಡಿದ್ದಾರೆಂದು ಊಹಿಸಬಹುದು.

ಅಧ್ಯಾಪಕ ವೃತ್ತಿಯಲ್ಲಿನ ಅವರ ಈ ಯಶಸ್ಸಿಗೆ ಕಾರಣವೇನೆಂದು ನಾನು ಹಲವು ಬಾರಿ ಯೋಚಿಸಿದ್ದೇನೆ. ಅಧ್ಯಾಪಕ ಪ್ರಾಧ್ಯಾಪಕರಾಗಿದ್ದಾಗಲೂ ಜ್ಞಾನಜಗತ್ತಿನಲ್ಲಿ ತಾವೊಬ್ಬರು ವಿದ್ಯಾರ್ಥಿಯಾಗಿಯೇ ಇದ್ದನೆಂಬುದನ್ನು ಅವರು ಮರೆತಿಲ್ಲ ಎಂಬ ರಹಸ್ಯವನ್ನು ನಾನು ತಿಳಿದುಕೊಂಡಿದ್ದೇನೆ. ಮೊತ್ತಮೊದಲಿಗೆ ನಾನು ಅಧ್ಯಾಪಕನಾಗಿ ನೇಮಕಗೊಂಡಾಗ ನನಗೆ ಯಶಸ್ಸನ್ನು ಕೋರಿ ನರಸಿಂಹಚಾರ್ಯರು ನನಗೆ ಹೀಗೆ ಬರೆದರು;

‘ಅಧ್ಯಾಪಕನ ಕೆಲಸವನ್ನು ಹೀಗೆ ಸಮರ್ಪಕವಾಗಿ ಮಾಡಬೇಕಾದರೆ, ಯಾರೇ ಆಗಲಿ, ಶದ್ಧಾಭಕ್ತಿಯುಕ್ತಾದ ವಿದ್ಯಾರ್ಥಿಯಾದ ಹೊರತು ಸಾಧ್ಯವಾಗುವುದಿಲ್ಲ. ನಿಮಗೆ ಕ್ಲಾಸಿನಲ್ಲಿ ದೊರೆತ ಶಿಕ್ಷಣಕ್ಕಿಂತ ಈಗ ಸ್ವಪ್ರಯತ್ನದಿಂದ ನಿಮಗೆ ದೊರೆಯಲಿರುವ ಶಿಕ್ಷಣ ಹೆಚ್ಚು ಬೆಲೆಯುಳ್ಳದ್ದು.’

ಕಾವ್ಯವನ್ನಾಗಲೀ, ಶಾಸ್ತ್ರವನ್ನಾಗಲೀ ಪಾಠಹೇಳುವ ನರಸಿಂಹಾಚಾರ್ಯರರ ರೀತಿಯನ್ನು ಮೆಚ್ಚಿಕೊಳ್ಳದ ವಿದ್ಯಾರ್ಥಿಯಿಲ್ಲ. ಘಂಟೆಯಾಗಿ ಮತ್ತೊಂದು ಘಂಟೆಗೆ ಸರಿದರೂ ಕಾಲದ ಅರಿವಿರುವುದಿಲ್ಲ. ತರಗತಿಗಳು ಹೀಗೆ ಯಶಸ್ವಿಯಾಗಿ ನಡೆಯಬೇಕಾದರೆ, ಅಧ್ಯಾಪಕ ವಿದ್ಯಾರ್ಥಿಗಳಿಬ್ಬರಿಗೂ ಅದರಿಂದ ಹಿತವಾಗಬೇಕಾದರೆ ಏನು ಕಾರಣ? ಅದರ ಒಳಗುಟ್ಟನ್ನು ನರಸಿಂಹಾಚಾರ್ಯರರೇ ನನಗೆ ಹೇಳಿದ್ದಾರೆ:

……ಸಹೃದಯ ವಿದ್ಯಾರ್ಥಿಗಳು ಸಿಕ್ಕರೆ ನ್ನಂತಹ ಮೇಷ್ಟರಿಗೂ ಸ್ವಲ್ಪ ಸ್ಪೂರ್ತಿ ಉತ್ಸಾಹಗಳು ಮೂಡುತ್ತವೆ. ಅಷ್ಟೇ. ಮಿಗಿಲಾಗಿ ಘನವಾದ ವಸ್ತುವಿನ ಎದುರಿಗೆ ಯಾರಿಗಾದರೂ ಆವೇಶವುಂಟಾಗುತ್ತದೆ. ಪಠ್ಯ ವಿಷಯ, ಸಹೃದಯ ವಿದ್ಯಾರ್ಥಿಗಳು ಆತ್ಮವಂಚನೆಯಿಲ್ಲದ ಉಪಾಧ್ಯಾಯ ಈ ಮೂವರ ಸಂಯೋಗಕ್ಲಾಸಿನಲ್ಲಿ ರಸನಿಷ್ಪತ್ತಿಗೆ ಕಾರಣವಲ್ಲವೇ…..?

‘ಇದು ನನ್ನ ಬಾಳಿನಲ್ಲಿ ಹಲವು ಸಲ ದೊರೆತಿರುವುದು ನನ್ನ ಪುಣ್ಯ’ ಎಂದು ಸಮಾಧಾನ ಪಡುವ ನರಸಿಂಹಾಚಾರ್ಯರಿಗೆ ತಮ್ಮ ವೃತ್ತಿಯಲ್ಲಿ ತುಂಬ ಗೌರವ, ಆದರ. ತಮ್ಮ ವಿದ್ಯಾರ್ಥಿಗಳಲ್ಲಿ ತುಂಬ ಪ್ರೇಮ, ವಿಶ್ವಾಸ. ಅಧ್ಯಾಪಕ ವೃತ್ತಿಯಲ್ಲಿಯೇ ಎಲ್ಲ ಸುಖ ಸಂತೋಷಗಳನ್ನೂ ಕಂಡುಕೊಂಡಿರುವ ನರಸಿಂಹಾಚಾರ್ಯರು, ಬೇರೆ ವೃತ್ತಿಗಳಲ್ಲಿ ಸೋತು ಬಂದವರಲ್ಲ ಎಂಬ ದೃಢವಾದ ನಂಬಿಕೆಯಿದೆ ನನಗೆ.

ಕನ್ನಡ ಸಾಹಿತ್ಯ ಪರಿಷತ್ತಿನವರು ಕೈಗೊಂಡ ಕನ್ನಡ ಕೋಶದ ಸಂಪಾದಕರಾಗಿ ನೇಮಕಗೊಂಡು ನರಸಿಂಹಾಚಾರ್ಯರು ಹೊರಟು ಹೋಗುವ ಮುನ್ನ, ೧೯೫೬ರ ಅಕ್ಟೋಬರ್‌ತಿಂಗಳ ಒಂದು ಸಂಜೆ ಮಹಾರಾಜಾ ಕಾಲೇಜಿನ ಕನ್ನಡ ಸಂಘದವರು ಅವರ ಗೌರವಾರ್ಥವಾಗಿ ಒಂದು ಬೀಳ್ಕೊಡಿಗೆಯ ಸಮಾರಂಭವನ್ನು ಏರ್ಪಡಿಸಿದ್ದರು ಆ ಸಂದರ್ಭದಲ್ಲಿ ಮಾತನಾಡುತ್ತಾ ಅವರು ಹೇಳಿದರು.

‘ನನಗೆ ಕನ್ನಡವೆಂದರೆ ಮೊದಲಿನಿಂದಲೂ ಪ್ರೇಮ. ಲಕ್ಷ್ಮೀಶನೇ ನನ್ನ ಮೊದಲ ಗುರು. ಅವನ ಜೈಮಿನಿ ಭಾರತದಿಂದ ನನ್ನ ಕನ್ನಡ ಕಲಿಕೆ ಮೊದಲಾಯಿತು; ಆದ್ದರಿಂದ ವಿಜ್ಞಾನವನ್ನು ಬಿಟ್ಟು ಕನ್ನಡದ ಅಭ್ಯಾಸಕ್ಕಾಗಿ ಬಂದೆ. ಈ ಕೆಲಸವನ್ನು ಬಿಟ್ಟುಹೋಗಲು ನನಗೆ ವ್ಯಸನವೇ. ನನ್ನ ಜೀವಮಾನದ ಕೆಲವು ರಸನಿಮಿಷಗಳನ್ನು ನಾನು ವಿದ್ಯಾರ್ಥಿಗಳೊಡನೆ ಕಳೆದಿದ್ದೇನೆ….. ನಾನು ಆ ಕಾರ್ಯನಿರ್ವಹಣೆಗೆ ಹೋಗಲೇ ಬೇಕಾಗಿದೆ …. ಇಲ್ಲಿ ಹೃದಯಕ್ಕೆ ಸಂತೋಷ ದೊರಕುತ್ತಿತ್ತು. ಅಲ್ಲಿ ಎದುರಿಸುವ ಪದಗಳ ಮರ್ಮ ನನಗೆ ದೊರಕಿದರೆ ಬುದ್ಧಿಗೆ ಸಂತೋಷ ದೊರಕುತ್ತದೆ…..’

ಬೆಂಗಳೂರಿಗೆ ಹೋದಮೇಲೆಯೂ ವಿದ್ಯಾರ್ಥಿಗಳ ಜತೆಗೆ ತಮಗಿದ್ದ ಬಾಂಧವ್ಯವನ್ನು ನೆನೆಸಿಕೊಂಡು ಅವರೊಮ್ಮೆ ನಿಟ್ಟುಸಿರು ಬಿಟ್ಟು ಬರೆದರು ‘ನಾನು ಈ ಅವಕಾಶದಿಂದ ವಂಚಿತನಾಗಿದ್ಧೇನೆ’. ಅವರ ಶಿಷ್ಯವಾತ್ಸಲ್ಯ ಗಾಢವಾದದ್ದು, ಅವ್ಯಾಜವಾದದ್ದು, ಆಕೃತ್ರಿಮವಾದದ್ದು. ಇವತ್ತು ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಬೆಳೆತಯತ್ತಿರುವ ಸಂಬಂಧವನ್ನು ಕುರಿತು ಅವರು ವಿಷಾದದಿಂದ ಹೇಳುತ್ತಾರೆ: ‘ತೋರಿಕೆಯ ಸೌಹಾರ್ದವೇ ಹೊರತು ನಿಜವಾದ ಸೌಹಾರ್ದ ಉಪಾಧ್ಯಾಯ ವರ್ಗದಲ್ಲಿ ಕಡಿಮೆ ಆಗಿದೆ. ಈಚೆಗೆ ಅವರ ಪರಸ್ಪರ ಸಂಬಂಧ ಕೆಡುತ್ತ ಬಂದಿದೆ.’

ನರಸಿಂಹಾಚಾರ್ಯರ ಅಗಾಧವಾದ ಜ್ಞಾಪಕಶಕ್ತಿಯನ್ನು ಕಂಡು ಯಾರೂ ಬೆರಗಾಗಬೇಕು. ತರಗತಿಗಳಲ್ಲಿ ಪಾಠ ಹೇಳುವಾಗ ಅವರು ಅತ್ಯುತ್ತಮವಾದ ಪದ್ಯಭಾಗಗಳನ್ನು ಮೂರು ನಾಲ್ಕು ಬಾರಿ ಓದುವುದನ್ನು ಗಮನಿಸಿದ್ದೇವೆ. ಸಂಬಂಧಿಸಿದ ಪದ್ಯದ ಪ್ರತಿ ಪದಾರ್ಥಕ್ಕೆ, ತಾತ್ಪರ್ಯಕ್ಕೆ ಭಾವಗ್ರಹಣಕ್ಕೆ, ಹೀಗೆ ಮತ್ತೆ ಮತ್ತೆ ಓದುವುದರಿಂದ ವಿದ್ಯಾರ್ಥಿಗೇನೋ ತುಂಬ ಪ್ರಯೋಜನವಾಗುತ್ತದೆ. ನಿಜ. ಇದರಲ್ಲಿ ನರಸಿಂಹಾಚಾರ್ಯರ ಸ್ವಾರ್ಥವೂ ಕೊಂಚವಿದೆ ಎಂಬುದರಲ್ಲಿ ನನಗೆ ಸಂಶಯವಿಲ್ಲ. ಹೀಗೆ ಒಂದು ಪದ್ಯವನ್ನು ಹಲವು ಬಾರಿ ಓದುವುದರಿಂದ ಅದು ನೆನಪಿನಲ್ಲುಳಿಯುವುದಕ್ಕೆ ನೆರವಾಗುತ್ತದೆ ಜ್ಞಾಪಕಶಕ್ತಿಯೆಂಬುದು ಚಿರಂತನಕೃಷಿಯ ಫಲವಲ್ಲದೆ ಬೇರಲ್ಲ.

ನರಸಿಂಹಾಚಾರ್ಯರು ಮಾತಿನಮಾಲೆ ನೇಯುವ ಭಾಷಣಕಾರರ ಗುಂಪಿಗೆ ಸೇರಿದವರಲ್ಲ. ಶಬ್ದಜಾಲಕ್ಕೆ ಶ್ರಾವಕರನ್ನು ಸಿಕ್ಕಿಸುವ ವಾಗ್ಮಿಗಳಲ್ಲ. ತಾವು ಹೇಳುವ ವಿಷಯದಲ್ಲಿ ಖಚಿತತೆ, ಸ್ಟಷ್ಟತೆಗಳನ್ನು ಮಾತ್ರ ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಕೇಳುತ್ತಿರುವವರನ್ನು ತಮ್ಮ ವಿಚಾರ ಸರಣಿಗೇ ಎಳೆದೊಯ್ಯಬಲ್ಲ ಚತುರತೆ ಅವರ ಪ್ರತಿಪಾದನೆಯಲ್ಲಿರುತ್ತದೆ. ದಿನಕ್ಕೆ ಎರಡು ಮೂರು ಘಂಟೆಯಂತೆ ಒಂದು ವಾರದ ತನಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಭಾಷಣ ಮಾಡುವ ಸಾಮರ್ಥ್ಯ ಅವರಿಗಿದೆ. ಅವರ ಮಾತುಗಾರಿಕೆಗೆ ಕೇಳುವವರಿಗೆ ಮೋಡಿ ಮಾಡದಿದ್ದರೂ, ಅವರು ಮಾತನಾಡುವ ಗತ್ತು ಯಾರನ್ನು ಒಲಿಸೀತು! ಅವರು ಕನ್ನಡದಲ್ಲಿ ಮಾತನಾಡಲಿ, ಇಂಗ್ಲಿಷಿನಲ್ಲಿ ಮಾತನಾಡಲಿ ಮೊನೆಯಾದ ವಿಚಾರ ಧಾರೆ, ಔಚಿತ್ಯವರಿತ ಉದಾಹರಣರಗಳು, ತಿಳಿಯಾದ ಹಾಸ್ಯ ಇವು ಕೇಳುವವರ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ.

ನರಸಿಂಹಾಚಾರ್ಯರು ಬರೆದಿರುವುದನ್ನು ಸ್ವಲ್ಪವೇ. ಅದರೆ ಬರೆದುದೆಲ್ಲವೂ ಚೊಕ್ಕ ಚಿನ್ನವೇ. ಅದರಲ್ಲಿ ಅರಿಸುವುದಕ್ಕೆ ಎಡೆಯಿಲ್ಲ. ಸತತವಾದ ಚಿಂತನೇ, ಅಭ್ಯಾಸಗಳ ಫಲವಾಗಿ ದೀರ್ಘವಾದ ಸಂಶೋಧನೆಯ ಫಲವಾಗಿ ಅವರ ಪ್ರತಿಯೊಂದು ಬರಹಗಳೂ ಹೊರಹೊಮ್ಮಿವೆ. ಅವರು ಇಷ್ಟು ಬರೆದಿರುವುದು ಯಾರಿಗೂ ಸಮಾಧಾನದ ಸಂಗತಿಯಲ್ಲ. ಸ್ವತಃ ನರಸಿಂಹಾಚಾರ್ಯರಿಗೇ ಈ ವಿಷಯದಲ್ಲಿ ಅಸಮಾಧಾನವಿದೆ. ಕನ್ನಡದಲ್ಲಿ ಕೆಲಸ ಮಾಡುವುದರಿಂದ ಕನ್ನಡವನ್ನೇ ಉದ್ಧಾರ ಮಾಡುತ್ತಿದ್ದೇವೆ ಎಂಬ ಭಾವನೆ ಹಲವರಲ್ಲಿದೆ. ಆದರೆ ಅದರಿಂದಲೇ ತಮ್ಮ ಉದ್ಧಾರವಾಗುತ್ತದೆ ಎಂಬುದನ್ನು ಅರಿತ ದೂರದರ್ಶಿಗಳು ವಿರಳ. ನರಸಿಂಹಾಚಾರ್ಯರು ಇಂಥ ವಿರಳರಲ್ಲಿ ಒಬ್ಬರು.

‘ಕನ್ನಡಕ್ಕಾಗಿ ಕೆಲಸ ಮಾಡಬೇಕು ಇದೊಂದೇ ನನ್ನ ಧ್ಯೇಯ. ನನ್ನನ್ನು ಬಹಳ ಕಾಲ ನಡೆಸಿಕೊಂಡು ಬಂದಿದೆ. ಇದರಿಂದ ಕನ್ನಡದ ಉದ್ಧಾರ ಆಗದಿದ್ದರೂ ಅತ್ಮೋದ್ಧಾರವಾಗುತ್ತದೆ. ನನ್ನನ್ನು ಈ ದೃಷ್ಟಿ. ಇದಕ್ಕಾಗಿ ನನ್ನ ಬಾಲ್ಯದಿಂದಲೂ ನನಗೆ ತಿಳಿದಂತೆ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ಬೇಕಾದ ವ್ಯಾಸಂಗವಂತೂ ವಿಪುಲವಾಗಿ ಸಾಗಿದೆ. ಆದರೆ ಬರವಣಿಗೆ ಸಾಗಿಲ್ಲ. ಬರೆದಿರುವದು ತೀರ ಕಡಿಮೆ. ಬರವಣಿಗೆಯ ಚೈತನ್ಯವನ್ನು ದೇವರು ನನಗೆ ಹೆಚ್ಚಾಗಿ ಕರುಣಿಸಿಲ್ಲ. ನನಗೆ ಈ ವಿಷಯದಲ್ಲಿ ಅತೃಪ್ತಿ; ಹೆರವರಿಗೆ ಹೇಗಿರಬೇಕು?’

ಕನ್ನಡ ಸಾಹಿತ್ಯದೇಗುಲವನ್ನು ರಂಗುಕಾರಣೆಯಿಟ್ಟು, ಬಣ್ಣ ಬಣ್ಣದ ಚಿತ್ರಗಳಿಂದ ನರಸಿಂಹಾಚಾರ್ಯರು ಸಿಂಗರಿಸಲಿಲ್ಲ. ಆದರೆ ಅದಕ್ಕೆ ಭದ್ರವಾದ ಅಡಿಪಾಯ ಹಾಕಿದ ಹಿರಿಯರಲ್ಲಿ ಅವರೊಬ್ಬರಾಗಿದ್ದಾರೆ. ಅವರು ಲಲಿತ ಸಾಹಿತ್ಯ ನಿರ್ಮಾಣ ಮಾಡಲಿಲ್ಲ. ಲಾಳ ಕಟ್ಟುವುದು, ಕಣ್ಣೊ ಕುರುಡೋ! ಮುಂತಾದ ಒಂದೆರಡು ಪ್ರಬಂಧಗಳನ್ನು ಬರೆದಿದ್ದಾರೆ. ವಿಶಿಷ್ಟ ಸಂದರ್ಭಗಳಲ್ಲಿ ಅವರು ಕಂದ ವೃತ್ತಗಳನ್ನೂ ಹೆಣೆದಿದ್ದಾರೆ. ಸಾಹಿತ್ಯ ಸಂಶೋಧನೆ, ಸಂಪಾದನೆ, ವಿಮರ್ಶೆಗಳೇ ಅವರ ಹೆದ್ದಾರಿ. ಅವರಲ್ಲಿ ಕವಿಯ ದೃಷ್ಟಿಯಿದೆ; ಕವಿಯ ಹೃದಯವಿದೆ. ಅಗ್ಗಳದೇವನನ್ನು ಕುರಿತು ಬರೆದಂಥ ಲೇಖನಗಳನ್ನಾಗಲಿ, ಪಂಪ ರಾಮಾಯಣದ ಮುನ್ನುಡಿಯನ್ನಾಗಲಿ, ಹರಿಹರನು ಕುರಿತ ಪುಸ್ತಿಕೆಯನ್ನಾಗಲಿ ಓದುತ್ತಿದ್ದಾಗ ಅವರ ಕವಿಜೀವ ಅಂತರ್ಗಾಮಿಯಾಗಿ ಮಿಡಿಯುವುದನ್ನು ಗಮನಿಸಬಹುದು. ವಿಮರ್ಶಕರೊಬ್ಬರು ಹೇಳುತ್ತಾರೆ;

‘ಶ್ರೀ ನರಸಿಂಹಾಚಾರ್ಯರು ನೂರಕ್ಕೆ ನೂರರಷ್ಟು ಕವಿಕರ್ಮ. ಜೊತೆಗೆ ಅದರ ಶೈಲಿಯಲ್ಲಿ ಶ್ರೇಷ್ಠ ಭಾವಗೀತಕಾರನ ನಾದಮಾಧುರ್ಯವೂ, ಶ್ರೇಷ್ಠಕವಿಯ ಕಲ್ಪನಾ ವಿಲಾಸವೂ, ಹಾತಳವಾಗಿ ಬೆರೆತಿರುತ್ತವೆ. ಜೊತೆಗೆ ಕಂಡುದನ್ನು ಕಂಡಂತೆ ಹೇಳುವ ಇತಿಹಾಸಕಾರನ ಮತ್ತು ವಿಜ್ಞಾನಿಯ ಮನೋಧರ್ಮದ ಸಂಸ್ಕಾರವೂ ಸೇರಿರುತ್ತದೆ.

ನರಸಿಂಹಾಚಾರ್ಯರನ್ನು ದೂರದಿಂದ ನೋಡುವವರಿಗೆ ಮೊದಲು ಸ್ವಲ್ಪ ಭಯಮಿಶ್ರಿತ ಗೌರವುಂಟಾಗುತ್ತದೆ. ಅವರ ಹೃದಯದಲ್ಲಿ ಅಪಾರ ಕರುಣೆಯನ್ನೂ, ಅವರ ನವುರಾದ ಹಾಸ್ಯ ಮನೋಧರ್ಮವನ್ನೂ ಬಲ್ಲವರು ಕಡಮೆ. ‘ಅಶ್ವತ್ಥಾಮನ್‌’ ನಾಟಕ ಪಾಠ ಹೇಳುತ್ತಿದ್ದಾಗ ಅವನಿಗೊದಗಿದ ದುರಂತವನ್ನು ವಿವರಿಸುವಾಗ ಅವರು ಗದ್ಗದಿತರಾದುದನ್ನು ನಾನು ಗಮನಿಸಿದ್ದೇನೆ. ‘ರೂಪದರ್ಶಿ’ ಕಾದಂಬರಿ ಹೇಳುವಾಗ ಹಲವು ಘಟ್ಟಗಳಲ್ಲಿ ಅವರ ಕಣ್ಣಂಚಿನಲ್ಲಿ ನೀರಾಡಿದುದನ್ನು ನಾನು ಕಂಡಿದ್ದೇನೆ. ಅಂಥ ಸಂದರ್ಭಗಳಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳ ಹೃದಯದಲ್ಲಿ ಉಂಟಾಗುತ್ತಿದ್ದ ತಳಮಳವನ್ನೂ ನಾನು ಅನುಭವಿಸಿದ್ದೇನೆ.

ಮಹಾರಾಜರವರ ಕಾಲೇಜಿನ ಜೂನಿಯರ್‌ಬಿ.ಎ. ಉಪನ್ಯಾಸ ಮಂದಿರ. ತುಂಬ ವಿದ್ಯಾರ್ಥಿಗಳು, ಅಕ್ಕಪಕ್ಕದ ಕಾಲೇಜಿನವರೂ ಸೇರಿದ್ದಾರೆ. ಪಾಠದ ನಡುವೆ ಒಂದು ಸಂದರ್ಭದಲ್ಲಿ ಚುಂಬನದ ವಿಷಯ ಬಂತು. ಮೇಲುಗಡೆಯ ಗ್ಯಾಲರಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಮುಸುಮುಸು ನಗುತ್ತಿದ್ದುದು ಆಚಾರ್ಯರ ದೃಷ್ಟಿಗೆ ಬಿತ್ತು. ಅವನನ್ನು ಕೇಳಿದರು : ‘I say. Why are you laughing? Have you experienced it?’ ತರಗತಿಯ ಎಲ್ಲೆಡೆಗಳಿಂತಲೂ ತನ್ನಡೆಗೆ ತಿರುಗಿದ ನಗೆ ನೋಟಗಳಿಂದ ನಾಚಿ ಕೆಂಪಾಗ ಅವನು ಉತ್ತರ ಕೊಟ್ಟ :‘No sir’. ಆಚಾರ್ಯರು ಅವನಿಗೆ ಸಮಾಧಾನ ಹೇಳಿದರು: `Then wait for it’

ಇನ್ನೊಂದು ಸಂದರ್ಭದಲ್ಲಿ ತರಗತಿ ಆರಂಭವಾಗಿ ಹದಿನೈದು ಇಪ್ಪತ್ತು ನಿಮಿಷ ವಾಗಿದೆ. ಪಾಠ ನಡೆದಿದೆ. ನಡುವೆ ಒಬ್ಬ ವಿದ್ಯಾರ್ಥಿ ನಿಧಾನವಾಗಿ ಅವರಿಗೆ ಕಾಣದಂತೆಯೇ ಬಂದು ಕುಳಿತುಕೊಳ್ಳಲು ಒಂದು ಜಾಗ ಹುಡುಕುತ್ತಿದ್ದುದು ಆಚಾರ್ಯರ ಗಮನಕ್ಕೆ ಬಂತು. ಕೈಯಲ್ಲಿ ಬಿಚ್ಚಿ ಹಿಡಿದಿದ್ದ ಪುಸ್ತಕದ ಹಾಳೆಗಳ ನಡುವಿನಿಂದ ಈಚೆಗೆ ದೃಷ್ಟಿಯನ್ನು ಹೊರಳಿಸುತ್ತಾ ಅವರು ನಿಧಾನವಾಗಿ ಅವನನ್ನು ಪ್ರಶ್ನಿಸಿದರು: ‘ಇದೇನು ನೂತನ ಆಗಮನವೋ? ಹಳೆಯ ಸ್ಥಾನಪಲ್ಲಟವೋ?’ ಇಡೀ ತರಗತಿಯ ನಗುವೇ ಆ ಪ್ರಶ್ನೆಗೆ ಉತ್ತರವಾಯಿತು. ಇಂಥ ಸಂದರ್ಭಗಳು ಒಂದೇ, ಎರಡೇ? ಆಚಾರ್ಯರ ಶಿಷ್ಯ ಕೋಟಯ ನೆನಪಿನುದ್ಯಾನದಲ್ಲಿ ಇಂಥವು ಹಲವಾರು ನಗೆಯ ಬುಗ್ಗೆಗಳು.

ಈ ಶತಮಾನದ ಕನ್ನಡ ಕಾವ್ಯ, ಸಂಶೋಧನೆ, ವಿಮರ್ಶೆಗಳ ಕ್ಷೇತ್ರದಲ್ಲಿ ನರಸಿಂಹಾಚಾರ್‌ಎಂಬ ಹೆಸರಿನ ಮಹತ್ವವನ್ನು ಕನ್ನಡ ವಿದ್ಯಾರ್ಥಿಗಳು ಬಲ್ಲರು. ಈ ನರಸಿಂಹಾಚಾರ್‌ಪಂಕ್ತಿಯಲ್ಲಿ, ಅಪಾರವಾದ ಪಾಂಡಿತ್ಯ, ಪರಿಶ್ರಮ, ಸಂಶೋಧನೆಗಳಿಂದಾಗಿ ದೊಡ್ಡಬೆಲೆ ಎಂಬ ಹೆಸರು ಅನ್ವರ್ಥವೂ, ಸಾರ್ಥಕವೂ ಆಗಿದೆ.

* ಜ್ಞಾನೋಪಾಸಕ, ಪು.೬೭