ಕರ್ಣಾಟಕ ಮಾತೆಯ ಸುಪುತ್ರರೂ ಮಹಾಪಂಡಿತೋತ್ತಮರೂ ಎನಿಸಿದ್ದ ದಿ. ಡಿ.ಎಲ್.ಎನ್ ಈಗ ನಮ್ಮಿಂದ ಬಹುದೂರ ಹೋಗಿದ್ದಾರೆ. ಈಗ ಅವರು ತಮ್ಮ ಭೌತಿಕ ದೇಹದಿಂದ ಮರೆಯಾಗಿದ್ದಾರೆ. ಭಗವಂತನ ಸನ್ನಿಧಿಯಲ್ಲಿ ಕರ್ಣಾಟಕ ಮತ್ತು ಕನ್ನಡದ ಹಿತಚಿಂತನೆಯನ್ನು ಕುರಿತು ಆಲೋಚಿಸುತ್ತಿದ್ದಾರೆ. ತಮ್ಮ ನಚ್ಚಿನ ಬಂಧುಮಿತ್ರರಿಗೆ ಯೋಗಮಾರ್ಗದಿಂದ ತಮ್ಮ ಶುಭ ಸಂದೇಶಗಳನ್ನು ಬೀರುತ್ತಿದ್ದಾರೆ. ಅವರ ವಿಯೋಗದಿಂದ ಬರಿದಾದ ಸ್ಥಳದಲ್ಲಿ ಬೇರೊಬ್ಬರನ್ನು ಭರ್ತಿ ಮಾಡುವುದು ಸಾಧ್ಯವಿಲ್ಲವೆಂದು ಕನ್ನಡ ಜನರು ಚಿಂತಿಸುತ್ತಿದ್ದಾರೆ. ಅವರ ಒಲವಿನ ವಿಷಯಗಳಾದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಅಭಿವೃದ್ಧಿಪಡಿಸುವುದು, ಅವರು ಕೈಕೊಂಡ ಕನ್ನಡ ಕೋಶವನ್ನು ಆದಷ್ಟು ಬೇಗ ಮುಗಿಸಿ ಅವರ ಪವಿತ್ರಾತ್ಮನಿಗೆ ಶಾಂತಿಯನ್ನುಂಟು ಮಾಡುವುದು ಇವುಗಳೇ ನಮ್ಮ ಕರ್ತವ್ಯವೆಂದು ಕನ್ನಡ ಜನರು ತಿಳಿದುಕೊಂಡಿದ್ದಾರೆ.

ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಉದ್ದಾಮ ಪಂಡಿತರು ಅಗಾಧ ಜ್ಞಾಪಕ ಶಕ್ತಿಯುಳ್ಳವರು. ಕನ್ನಡ, ಪ್ರಾಕೃತ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಿಗಿಲಾದ ಪರಿಚಯ ಮತ್ತು ಪಾಂಡಿತ್ಯವುಳ್ಳವರು. ಸಂಶೋಧನೆ ಮತ್ತು ವಿಮರ್ಶೆಗಳಿಗೆ ಅವರು ಎತ್ತಿದ ಕೈ. ಅವರು ಸ್ವಂತವಾಗಿ ಬರೆದ ಗ್ರಂಥಗಳು ‘ಗ್ರಂಥ ಸಂಪಾದನೆ’ ಮತ್ತು ‘ಶಬ್ದವಿಹಾರ’ ಎಂಬ ಎರಡು ಮಾತ್ರ. ಅವರು ಸಂಪಾದಿಸಿ ಪ್ರಕಟಿಸಿದ ಗ್ರಂಥಗಳು ಅಪಾರ. ೧. ಸಿದ್ಧರಾಮ ಚಾರಿತ್ರ, ೨. ಪಂಪ ರಾಮಾಯಣ ಸಂಗ್ರಹ ೩. ಶಬ್ದಮಣಿದರ್ಪಣ ೪. ಗೋವಿನಹಾಡು ೫. ಸುಕುಮಾರ ಚರಿತಂ ೬. ಸಕಲ ವೈದ್ಯ ಸಂಹಿತಾ ಸಾರಾರ್ಣವ ೭. ವಡ್ಡಾರಾಧನೆ ೮. ಸಿದ್ಧರಾಮ ಚಾರಿತ್ರ ಸಂಗ್ರಹ ಈ ಗ್ರಂಥಗಳ ಪೀಠಿಕೆಗಳಲ್ಲಿ ಅವರ ಅಗಾಧ ಪಾಂಡಿತ್ಯ ಮತ್ತು ಪ್ರತಿಭೆಗಳನ್ನು ನಾವು ಕಾಣಬಹುದು. ಅವರು ಬರೆದಿರುವ ನೂರಾರು ಸಂಶೋಧನಾತ್ಮಕ ಲೇಖನಗಳಲ್ಲಿ ಅವರ ಪಾಂಡಿತ್ಯದ ವಿರಾಡ್ರೂಪವನ್ನು ನಾವು ಕಾಣಬಹುದು. ಈ ಲೇಖನಗಳನ್ನೆಲ್ಲಾ ಸಂಗ್ರಹಿಸಿದರೆ ಅದೊಂದು ಹೆಬ್ಬೊತ್ತಗೆಯಾಗುತ್ತದೆ. ಅಲ್ಲಲ್ಲಿ ಚೆದುರಿ ಹೋಗಿರುವ ಲೇಖನ ಮತ್ತು ಪೀಠಿಕೆಗಳನ್ನು ಸಂಗ್ರಹಿಸಿ ಒತ್ತಟ್ಟಿಗೆ ಪ್ರಕಟಿಸುವ ಕಾರ್ಯ ಈಗ ನಡೆದಿರುವುದು ಸ್ವಾಗತಾರ್ಹ.

ಕರ್ಣಾಟಕದ ವಿದ್ವಾಂಸರು ಅವರ ಘನತೆ ಗಾಂಭೀರ್ಯಗಳಿಗೆ ಅನುಗುಣವಾದ ‘ಉಪಾಯನ’ ಎಂಬ ಸಂಭವನಾ ಗ್ರಂಥವನ್ನು ೧೯೬೭ರಲ್ಲಿ ಅವರಿಗೆ ಸಮರ್ಪಿಸಿದ್ದಾರೆ. ಆ ಗ್ರಂಥದಲ್ಲಿ ಅವರ ವಿಷಯವಾದ ಸಂಪೂರ್ಣ ವಿವರಗಳಿವೆ. ಅಲ್ಲದೆ, ನಾಡಿನ ಗಣ್ಯ ವಿದ್ವಾಂಸರಿಂದ ವಿವಿಧ ವಿಷಯಗಳನ್ನು ಕುರಿತು ಬರೆದ ೬೦ ಗಂಭೀರ ಲೇಖನಗಳಿವೆ. ೧೯೬೦ರಲ್ಲಿ ಅವರ ನಚ್ಚಿನ ವಿದ್ಯಾರ್ಥಿಗಳು ಡಿ.ಎಲ್.ಎನ್ ರವರಿಗೆ ಒಪ್ಪಿಸಿರುವ ‘ಜ್ಞಾನೋಪಾಸಕ’ ಎಂಬ ಕಿರಿಯ ಹೊತ್ತಗೆಯು ೧೮ ವಿಚಾರಪೂರ್ಣ ಲೇಖನಗಳಿಂದ ಕೂಡಿದ್ದು ದಿ. ನರಸಿಂಹಾಚಾರ್ಯರು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಉಂಟು ಮಾಡಿದ ಪ್ರಭಾವಮುದ್ರೆ ಎಂತಹದು ಎಂಬುದನ್ನು ನಿರೂಪಿಸುತ್ತದೆ.

ಉದಾರ ಚಿತ್ತರಾದ ಡಿ.ಎಲ್.ಎನ್ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರೀತಿಸುವಂತೆಯೇ ‘ಶರಣ ಸಾಹಿತ್ಯ’ ಕಾರ್ಯಾಲಯವನ್ನೂ ಪ್ರೀತಿಸುತ್ತಿದ್ದರು. ‘ತರುಗಾಹಿ ರಾಮಣ್ಣನ ವಚನಗಳು’ ಎಂಬ ಒಂದು ವಚನ ಗ್ರಂಥವನ್ನು ‘ಶರಣ ಸಾಹಿತ್ಯ’ದಲ್ಲಿ ಪ್ರಕಟಿಸಲು ಅನುಕೂಲ ಮಾಡಿಕೊಟ್ಟರು. ‘ದೇವಗಂಗೆ’ ಎಂಬ ನಮ್ಮ ಪ್ರಶಸ್ತಿ ಗ್ರಂಥಕ್ಕೆ “ತಕ್ಕೂರ್ಮೆ-ಅರ್ಥ ವಿಚಾರ ಮತ್ತು ನಿಷ್ಪತ್ತಿ” ಎಂಬ ವಿಷಯವಾಗಿ ವಿದ್ವತ್ಪೂರ್ಣವಾದ ಲೇಖನವನ್ನು ಬರೆದು ಕೊಟ್ಟರು. ‘ವೀರಶೈವ ಧರ್ಮ ಮತ್ತು ಸಂಸ್ಕೃತಿ’ ಎಂಬ ಗ್ರಂಥಕ್ಕೆ ಅಭಿಮಾನ ಪೂರ್ಣವಾದ ಮುನ್ನುಡಿಯನ್ನು ಬರೆದುಕೊಟ್ಟರು. ಇದೆಲ್ಲವೂ ಅವರಿಗೆ ಶರಣ ಸಾಹಿತ್ಯದ ಮೇಲಿದ್ದ ಪ್ರೀತಿ ಗೌರವಕ್ಕೆ ನಿದರ್ಶನವೆನ್ನಬಹುದು.

ಕೀರ್ತಿಶೇಷ ಡಿ.ಎಲ್.ಎನ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೩೦ ವರ್ಷಗಳ ಕಾಲ ಕನ್ನಡದ ಪ್ರಾಧ್ಯಾಪಕರಾಗಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ಪಾನ ಮಾಡಿಸಿದರು. ತರುಣರಲ್ಲಿ ಕನ್ನಡದ ಕೆಚ್ಚು ಮತ್ತು ಮೆಚ್ಚುಗಳನ್ನು ಪ್ರಚೋದನೆಗೊಳಿಸಿದರು. ಕೀರ್ತಿಶೇಷರಾದ ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎನ್. ಶ್ರೀಕಂಠಯ್ಯ, ದೇವುಡು ಶಾಸ್ತ್ರಿಗಳು ಮೊದಲಾದವರ ಗುಂಪಿಗೆ ಸೇರಲು ಅರ್ಹರಾದವರು. ಡಿ.ಎಲ್.ಎನ್ ಸಂಶೋಧನಾರಂಗದಲ್ಲಿ ಪೂಜ್ಯರಾದ ಆರ್. ನರಸಿಂಹಾಚಾರ್ಯ, ಎಂ. ಶಾಮರಾಯರು, ಡಾ. ಶ್ಯಾಮಶಾಸ್ತ್ರಿ, ಎಂ. ಗೋವಿಂದ ಪೈ, ಆಲೂರು ವೆಂಕಟರಾಯರು ಇವರುಗಳ ಗುಂಪಿಗೆ ಸೇರತಕ್ಕವರು ಸನ್ಮಾನ್ಯ ಡಿ.ಎಲ್.ಎನ್. ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವವರು ಇವರಿಗಾಗಿ ಒಂದು ಪ್ರತ್ಯೇಕವಾದ ಅಧ್ಯಾಯವನ್ನು ಬರೆಯುವಷ್ಟು ಮಹತ್ಕಾರ್ಯವನ್ನು ಇವರು ನೆರವೇರಿಸುತ್ತಾರೆ.

ಪ್ರೊ. ಡಿ.ಎಲ್. ನರಸಿಂಹಾಚಾರ್ಯರು, ಮೈಸೂರು ವಿಶ್ವವಿದ್ಯಾನಿಲಯದಿಂದ ‘ಡಾಕ್ಟರೇಟ್’ ಪದವಿಯನ್ನು ಗಳಿಸಿದ್ದಾರೆ. ಮೈಸೂರು ಅಕಾಡೆಮಿಯಿಂದ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೀದರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಸಂಪಾದಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅವರಿಗೆ ಸನ್ಮಾನ ಪ್ರಶಸ್ತಿ ಎಂದೋ ಬರಬೇಕಾಗಿತ್ತು. ಅಲ್ಲಿರುವ ಯಾವುದೋ ದೋಷದಿಂದ ಅವರಿಗೆ ಪ್ರಶಸ್ತಿ ಬರಲಿಲ್ಲವೆಂದು ನಾವು ಹೇಳಿದರೆ ಯಾರೂ ಅನ್ಯಥಾ ಭಾವಿಸಬಾರದು. ಅವರು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಸಂಪಾದಕರಾಗಿ ಕೆಲಸ ಮಾಡಿದುದೂ, ಅದರ ಒಂದು ಸಂಪುಟವನ್ನು ಪ್ರಕಟಿಸಿದುದೂ ಅವರ ಅಗಾಧ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಅಶೋಕನ ಶಾಸನಗಳಲ್ಲಿರುವ ‘ಇಸಿಲ’ ಎಂಬ ಶಬ್ದವು ಕನ್ನಡ ಭಾಷೆಗೆ ಸೇರಿದುಡು ಎಂದು ಮೊದಲು ಹೇಳಿದವರು ಪ್ರೊ. ಡಿ.ಎಲ್. ನರಸಿಂಹಾಚಾರ್ಯರು. ಕಲ್ಯಾಣ ಸೋಮೇಶ್ವರನ ‘ಮಾನಸೋಲ್ಲಾಸಃ’ ಎಂಬ ಸಂಸ್ಕೃತ ವಿಶ್ವಕೋಶದಲ್ಲಿ ಕನ್ನಡದ ಛಂದಸ್ಸು ಉಂಟೆಂದು ಪ್ರತಿಪಾದಿಸದವರು ಡಾ. ಡಿ.ಎಲ್.ಎನ್. ಇದೆಲ್ಲವೂ ಅವರ ಅಗಾಧವಾದ ಸಂಶೋಧನಾ ಶಕ್ತಿಗೆ ನಿದರ್ಶನವಾಗಿದೆ.

ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಪಾಂಡಿತ್ಯದಂತೆಯೇ ಸದ್ಗುಣಗಳಿಗೂ ಹೆಸರಾದವರು. ವಿನಯಶೀಲತೆ, ಸ್ನೇಹಪರತೆ, ನಿಷ್ಪಕ್ಷ ಪಾತತೆ, ದೈವಭಕ್ತಿ, ದೇಶಭಕ್ತಿ, ಉದಾರ ಮನಸ್ಸು, ಕೃತಜ್ಞತೆ ಮೊದಲಾದ ಸದ್ಗುಣಗಳಿಗೆ ಅವರು ಹೆಸರಾದವರು. ಅವರ ಮಾನವೀಯತೆಯು ಅವರು ದೇವತಾವರ್ಗದ ಮನುಷ್ಯರು ಎಂಬುದನ್ನು ದೃಢಪಡಿಸುವಂತಿತ್ತು. ಅವರು ಕರ್ಣಾಟಕ ಏಕೀಕರಣದ ಹಿರಿಯ ಅಭಿಮಾನಿಗಳಾಗಿದ್ದರು. ಕನ್ನಡದ ಗಡಿಗಳು ಬೇಗನೆ ವಿಶಾಲ ಮೈಸೂರು ರಾಜ್ಯಕ್ಕೆ ಸೇರುವಂತಾಗಲಿ ಎಂದು ಅವರು ಸದಾ ದೇವರನ್ನು ಪ್ರಾರ್ಥಿಸುತ್ತಿದ್ದರು. ಒಟ್ಟಿನಲ್ಲಿ ಪ್ರೊ. ಡಿ.ಎಲ್.ಎನ್ ರವರು ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದ ಮಹಾಪುರುಷರಲ್ಲಿ ಅಗ್ರಗಣ್ಯರಾಗಿ ಮೆರೆಯಲು ಅರ್ಹರಾದವರು. ಅವರು ಎಂದೂ ಮರೆಯಲಾರದ ಸನ್ಮಿತ್ರರು. ಶ್ರೀಗಂಧದ ಕಟ್ಟಿಗೆಯಂತೆ ದೇಹವನ್ನು ದೇಶ ಸೇವೆಗೆ ಸವೆಸಿದ ಮಹನೀಯರು.

೭.೫.೧೯೭೧ರಂದು ಅವರು ಮೈಸೂರಿನಲ್ಲಿ ವಿಧಿವಶರಾದರು. ಆಗ ಅವರಿಗೆ ೬೫ ವರ್ಷ ವಯಸ್ಸು, ಮರಣ ಕಾಲದಲ್ಲಿ ಅವರು ತಮ್ಮ ಧರ್ಮಪತ್ನಿ, ಹೆಣ್ಣುಮಕ್ಕಳು, ಅಳಿಯಂದಿರು, ಅಸಂಖ್ಯಾತ ಬಂಧು ಮಿತ್ರರು, ಇವರನ್ನೆಲ್ಲಾ ದುಃಖದ ಕಡಲಿನಲ್ಲಿ ಮುಳುಗಿಸಿ ಹೋದರು. ದೈವೇಚ್ಛೆಗೆ ಉಪಾಯವಿಲ್ಲ. ನವರಂಧ್ರಮಯವಾದ ‘ಘಟ’ವೆಂಬ ದೇಹದಲ್ಲಿ ‘ಪ್ರಾಣ’ ಎಂಬ ನೀರು ಹಲವು ವರ್ಷಗಳ ಕಾಲ ಇರುವುದು ಆಶ್ಚರ್ಯವೇ ಹೊರತು ಹೋಗುವುದು ಆಶ್ಚರ್ಯವಲ್ಲ ಎಂದು ಒಬ್ಬ ಕವಿ ಹೇಳಿರುವ ಮಾತನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.

* ಕನ್ನಡನುಡಿ (ಸಂ. ೩೪, ಸಂಚಿಕೆ ೧೫.೧೬) ಪು. ೨೩