ಪ್ರೊ. ಡಿ.ಎಲ್‌.ಎನ್‌. ಅವರನ್ನು ಕುರಿತು ಮಾನ್ಯ ತೀ.ನಂ.ಶ್ರೀಕಂಠಯ್ಯನವರು ಒಮ್ಮೆ ಹೇಳಿದರು: “ನೀವು ಹಳಗನ್ನಡ ಕಾವ್ಯವನ್ನು ಓದುವಾಗ ಯಾವುದಾದರೂ ಒಂದು ಶಬ್ದದ ಅರ್ಥದ ಬಗ್ಗೆ ಸಂದೇಹ ಬಂದರೆ ಲಭ್ಯವಿರುವ ಎಲ್ಲ ನಿಘಂಟುಗಳನ್ನೂ ನೋಡಿ. ಯಾವ ನಿಘಂಟಿನಲ್ಲಿಯೂ ಆ ಶಬ್ದಕ್ಕೆ ಅರ್ಥವಿರದಿದ್ದರೆ ನೇರವಾಗಿ ಡಿ.ಎಲ್‌.ಎನ್‌. ಅವರ ಹತ್ತಿರ ಹೋಗಿ. ಅವರು ನಿಮ್ಮ ಸಂದೇಹವನ್ನು ಪರಿಹರಿಸಬಹುದು. ಅವರೂ ‘ಗೊತ್ತಿಲ್ಲ’ ಎಂದರೆ ಸದ್ಯಕ್ಕೆ ಆ ಶಬ್ದಕ್ಕೆ ಅರ್ಥ ಯಾರಿಗೂ ತಿಳಿದಿಲ್ಲವೆಂದೇ ಅರ್ಥ.”

ಇವು ಕೇವಲ ಸ್ನೇಹದ, ಹೊಗಳಿಕೆಯ ಮಾತುಗಳಲ್ಲ; ಡಿ.ಎಲ್‌.ಎನ್‌. ಅವರ ಪಾಂಡಿತ್ಯವನ್ನು ಯಥಾವತ್ತಾಗಿ ಚಿತ್ರಿಸುವ ಶಬ್ದಗಳು. ಒಂದು ಶಬ್ದಕ್ಕೆ ಅರ್ಥ ಕೇಳಲು ಅವರ ಬಳಿ ಹೋದರೆ ಸಾಕು ಆ ಶಬ್ದದ ಇತಿಹಾಸವೇ ನಮ್ಮ ಕಣ್ಣ ಮುಂದೆ ನಿಲ್ಲುತ್ತಿತ್ತು. ಆ ಶಬ್ದವನ್ನು ಯಾವ ಯಾವ ಕವಿಗಳು ಯಾವ ಯಾವ ಸಂದರ್ಭದಲ್ಲಿ ಉಪಯೋಗಿಸುತ್ತಾರೆ, ಶಾಸನಗಳಲ್ಲಿ ಆ ಶಬ್ದ ಎಲ್ಲೆಲ್ಲೆ ಬರುತ್ತದೆ ಎನ್ನುವುದನ್ನು ವಿವರಿಸಿ ಕೊನೆಗೆ ‘ಆ ಶಬ್ದದ ಅರ್ಥ ಹೀಗಿರಬಹುದು’ ಎಂದಾಗ ಯಾವ ಸಂದೇಹವೂ ಉಳಿಯುತ್ತಿರಲಿಲ್ಲ. ಅರ್ಧ ಕಣ್ಣು ಮುಚ್ಚಿ ಒಂದು ಕೈ ಮೇಲೆತ್ತಿ ಒಂದರ ಮೇಲೊಂದು ಪದ್ಯಗಳನ್ನು ಉದ್ಧರಿಸುತ್ತ ಹೋಗುತ್ತಿದ್ದರೆ ಅವರ ಅದ್ಭುತ ಜ್ಞಾಪಕಶಕ್ತಿಗೆ ಎಂತಹವರೂ ಬೆರಗಾಗಬೇಕಿತ್ತು. (ಕೊನೆ ಕೊನೆಗೆ “ನನಗೆ ಜ್ಞಾಪಕಶಕ್ತಿ ಕಡಿಮೆಯಾಗಿದೆ” ಎಂದು ಅವರು ಆಗಾಗ ಹೇಳುತ್ತಿದ್ದರು. ಹಾಗೆ ಅನಿಸುತ್ತಿದ್ದುದು ಅವರಿಗೆ ಮಾತ್ರ. ಪದ್ಯವನ್ನೋ, ಶಾಸನದ ತುಣುಕನ್ನೋ ಪ್ರಾರಂಭಿಸಿದರೆ ಅದಕ್ಕೆ ಕೊನೆ ಮೊದಲೇ ಇರುತ್ತಿರಲಿಲ್ಲ.)

“ವಿದ್ವತ್ತಿಗೆ ಶಾಸ್ತ್ರ ಪ್ರತಿಭೆ ಅವಶ್ಯಕ. ಇದು ಕಾವ್ಯ ಪ್ರತಿಭೆಗೆ ಏನೂ ಕಡಿಮೆಯಾದ ಶಕ್ತಿಯಲ್ಲ. ಆದ್ದರಿಂದ ವಿದ್ವತ್ತಿನ ಸಂಪಾದನೆಗೂ ಪ್ರತಿಭೆ, ವ್ಯವಸಾಯಗಳು ಮುಖ್ಯ ಪದ್ಯ ಬರೆಯುವವರೆಲ್ಲ ಹೇಗೆ ಕವಿಗಳಾಗಲಾರರೋ ಹಾಗೆಯೇ ಓದುವವರೆಲ್ಲ ವಿದ್ವಾಂಸರಾಗಲಾರರು. ವಿದ್ವಾಂಸರಾಗಲು ಬೇಕಾದ ಶಕ್ತಿ ಕವಿಶಕ್ತಿಯಂತೆಯೇ ದೈವದತ್ತವಾದುದು. ಎರಡೂ ವ್ಯಕ್ತಿಯ ಸ್ವಕೀಯ ಸಾಧನೆಯಿಂದ ತಲೆದೋರುವಂಥವು” ಎಂದು ಡಿ.ಎಲ್‌.ಎನ್‌. ಹೇಳಿದ್ದಾರೆ. ಕಾವ್ಯಪ್ರತಿಭೆಗೆ ಸಮಾನಾದ ಶಾಸ್ತ್ರ ಪ್ರತಿಭೆ ಅವರಿಗಿದ್ದುದರಿಂದಲೇ ‘ವಡ್ಡಾರಾಧನೆ’ ‘ಶಬ್ದಮಣಿದರ್ಪಣ’ಗಳಂತಹ ಗ್ರಂಥಗಳನ್ನು ಸಂಪಾದಿಸಲು ಸಾಧ್ಯವಾಯಿತು.

ಡಿ.ಎಲ್‌.ಎನ್‌. ಅವರು ಸಂಪಾದಿಸಿರುವ ‘ಪಂಪರಾಮಾಯಣ ಸಂಗ್ರಹ’, ‘ಭೀಷ್ಮ ಪರ್ವ’, ‘ವಡ್ಡಾರಾಧನೆ’, ‘ಸುಕುಮಾರಚರಿತಂ’, ‘ಶಬ್ದಮಣಿದರ್ಪಣ’, ‘ಸಕಲ ವೈದ್ಯ ಸಂಹಿತ ಸಾರಾರ್ಣವಂ’, ‘ಸಿದ್ಧರಾಮ ಚಾರಿತ್ರ್ಯ’, ‘ಗೋವಿನ ಹಾಡು ಮತ್ತಿತರ ಗ್ರಂಥಗಳನ್ನು ನೋಡಿದಾಗ ಸಂಪಾದನೆಗೆ ಅವರು ಪಟ್ಟಿರುವ ಶ್ರಮ ಅರ್ಥವಾಗುತ್ತದೆ. ಒಂದು ಗ್ರಂಥವನ್ನು ಸಂಪಾದಿಸಬೇಕಾದರೆ ಆ ಗ್ರಂಥದ ಲಭ್ಯವಿರುವ ತಾಳೆಯ ಗರಿ ಮತ್ತು ಕಾಗದದ ಪ್ರತಿಗಳನ್ನಿಟ್ಟುಕೊಂಡು ವಿವಿಧ ಪಾಠಾಂತರಗಳಲ್ಲಿ ಯಾವುದನ್ನು ಇಟ್ಟುಕೊಳ್ಳಬೇಕು ಎನ್ನುವುದನ್ನು ವಿಮರ್ಶಿಸಿ ಶುದ್ಧ ಪ್ರತಿಯನ್ನು ಅವರು ತಯಾರಿಸುತ್ತಿದ್ದ ವಿಧಾನ ಇತರರಿಗೆ ಮೇಲ್ಪಂಕ್ತಿಯಾಗುವಂಥದು. ಪಾಠಾಂತರಗಳಲ್ಲಿ ಶುದ್ಧವಾದುದನ್ನು ಆರಿಸಲು ಅವರು ಅವಸರ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಪಾಠಾಂತರಗಳು ಯಾವುವು ಸರಿಹೊಂದದಿದ್ದಾಗ ಆ ಎಡೆಯಲ್ಲಿ ಮೂಲಶಬ್ದ ಹೀಗಿದ್ದಿರಬಹುದು, ಅದು ಲಿಪಿಕಾರರಿಂದ ಯಾವ ಯಾವ ರೂಪವನ್ನು ಪಡೆದಿರಬಹುದು ಎನ್ನುವುದೆಲ್ಲವನ್ನು ವಿವೇಚಿಸಿ ಅಡಿಟಿಪ್ಪಣಿಗಳಲ್ಲಿ ಸೂಚಿಸಿದ್ದಾರೆ. ಅವರಿಗೂ ತೋಚದ ಸಮಸ್ಯೆಗಳಿಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕಿದ್ದಾರೆ. ಆ ಸಮಸ್ಯೆಗಳನ್ನು ಮುಂದೆ ಯಾರಾದರೂ ಬಗೆಹರಿಸಬಹುದು ಎನ್ನುವ ಆಶಯ ಅವರದು. ಬರೀ ಊಹೆಯ ಮೇಲೆ ಅವರೆಂದೂ ಕೆಲಸ ಮಾಡಿದವರಲ್ಲ. ಎಲ್ಲದಕ್ಕೂ ಖಚಿತವಾದ ಆಧಾರಗಳಿರಬೇಕು.

ಒಂದು ಕಾವ್ಯವನ್ನು ಸಂಗ್ರಹಿಸಬೇಕಾದರೂ ಡಿ.ಎಲ್‌.ಎನ್‌. ತುಂಬ ಶ್ರಮ ತೆಗೆದುಕೊಂಡಿದ್ದಾರೆ. ಸಂಗ್ರಹವೆಂದರೆ ಸಿಕ್ಕಾಪಟ್ಟೆ ಕತ್ತರಿ ಪ್ರಯೋಗವಲ್ಲ. ಕಥೆಯ ಓಟಕ್ಕೆ ಭಂಗ ಬರಕೂಡದು; ಕವಿಯ ಪ್ರತಿಭೆಗೆ ದ್ಯೋತಕವಾದ ಪದ್ಯಗಳನ್ನು ಉಳಿಸಿಕೊಳ್ಳಬೇಕು; ಭಾಷೆಯಲ್ಲಿ, ಛಂದಸ್ಸಿನಲ್ಲಿ ಅವನು ವಹಿಸಿರುವ ಸ್ವಾತಂತ್ರ್ಯ, ವೈಶಿಷ್ಟ್ಯಗಳು ಮಾಯವಾಗಬಾರದು. ಮೂಲಕೃತಿಗೆ ಯಾವ ರೀತಿಯಲ್ಲಿಯೂ ಧಕ್ಕೆಯುಂಟಾಗದಂತೆ ಸಂಗ್ರಹ ಮಾಡುವುದು ಶ್ರಮಸಾಧ್ಯ. ಈ ದೃಷ್ಟಿಯಿಂದ ಅವರ ‘‘ಪಂಪರಾಮಾಯಣ ಸಂಗ್ರಹ’’ ಮತ್ತು ‘‘ಸಿದ್ಧರಾಮ ಚರಿತೆ’’ಯ ಸಂಗ್ರಗಳನ್ನು ನೋಡಿದರೆ ಅವು ಸಂಗ್ರಹಗಳೇ ಎಂದು ಆಶ್ಚರ್ಯವಾಗುತ್ತದೆ. ಸಿದ್ಧರಾಮ ಚರಿತೆಯಲ್ಲಿ ಎರಡು ಪದ್ಯಗಳನ್ನು ಅರ್ಧ ಅರ್ಧ ಕತ್ತರಿಸಿ ಒಂದು ಪದ್ಯವನ್ನಾಗಿ ಪೋಣಿಸಿದ್ದಾರೆ. ಪ್ರಾಸಕ್ಕೆ, ಅರ್ಥಕ್ಕೆ ತೊಂದರೆಯಾಗದಂತೆ ಈ ರೀತಿ ಮಾಡಬೇಕಾದರೆ ಪಾಂಡಿತ್ಯವೊಂದೇ ಸಾಲದು.

ಒಂದು ಕಾವ್ಯಕ್ಕೆ ಅವರು ಮುನ್ನುಡಿ ಬರೆದರೆಂದರೆ ಉಳಿದವರಿಗೆ ಅದರ ಮೇಲೆ ಬರೆಯುವುದಕ್ಕೆ ಬಹುಶಃ ಏನೂ ಉಳಿದಿರಲಾರದು. ಕವಿಯ ಜೀವನ, ಕಾಲ ನಿರ್ಣಯ, ಕಾವ್ಯವಸ್ತುವಿನ ಮೂಲ ಆಕರಗಳು, ಅದರಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಅವುಗಳ ವೈಶಿಷ್ಟ್ಯ, ಭಾಷೆ ಮತ್ತು ಛಂದಸ್ಸಿನಲ್ಲಿ ಕವಿ ವಹಿಸಿರುವ ಸ್ವಾತಂತ್ರ್ಯ ಹೀಗೆ ಎಲ್ಲವನ್ನೂ ಅಮೂಲಾಗ್ರವಾಗಿ ವಿವೇಚಿಸಿದ್ದಾರೆ. ಅನೇಕ ವಚನಕಾರರು ಮತ್ತು ಕವಿಗಳ ಕಾಲದ ಬಗ್ಗೆ ಡಿ.ಎಲ್‌.ಎನ್‌. ಅವರ ನಿರ್ಣಯವೇ ಈಗಲೂ ಉಳಿದುಕೊಂಡಿದೆ. ಆದರೆ ‘‘ಇದಮಿತ್ಥಂ’’ ಎಂದು ಅವರು ಹೇಳಿದವರಲ್ಲ. ವಿದ್ವಾಂಸನಿಗೆ ಅಗತ್ಯವಾಗಿ ಇರಬೇಕಾದ “ನಿಷ್ಪಾಕ್ಷಿಕ ಮನೋಧರ್ಮ, ಸತ್ಯಾನ್ವೇಷಣೆಯ ಆಸಕ್ತಿ, ಸ್ವ-ಪರ ವಂಚನೆಗಳಿಲ್ಲದ ಪ್ರಾಮಾಣಿಕತೆ, ಸ್ವಕೀಯ ಜ್ಞಾನದಲ್ಲಿ ಲೋಪದೋಷಗಳಿರಬಹುದೆಂಬ ಶಂಕೆ, ತಿದ್ದಿಕೊಳ್ಳಲು ಸದಾ ಸಿದ್ದವಾಗಿರುವ ವಿಶಾಲದೃಷ್ಟಿ” ಅವರಿಗಿದ್ದುದರಿಂದ ಅವರ ಬರವಣಿಗೆಯಲ್ಲಿ ಯಾರಾದರೂ ದೋಷಗಳನ್ನು ತೋರಿಸಿದರೆ, ಅದರಲ್ಲಿ ಸತ್ಯವಿದ್ದರೆ ಒಪ್ಪಿಕೊಳ್ಳುತ್ತಿದ್ದರು. ತಾನು ಹೇಳಿದ್ದೇ ಸರಿಯೆಂದು ಸಾಧಿಸಲು ಎಂದೂ ಹೋದವರಲ್ಲ. ಆದರೆ ಆಹಾರ ರಹಿತ ತಿಳಿಗೇಡಿ ಅಭಿಪ್ರಾಯಗಳಿಗೆ ಅವರು ಮಣಿಯುತ್ತಿರಲಿಲ್ಲ.

ಸಿದ್ಧರಾಮ ಚರಿತೆಯ ಸಂಗ್ರಹದ ಮುನ್ನುಡಿಯಲ್ಲಿ ಸಿದ್ಧರಾಮ ಶೈವನೋ, ವೀರಶೈವನೋ ಎನ್ನುವುದನ್ನು ಆಧಾರಗಳ ಸಹಿತ ವಿಶ್ಲೇಷಿಸಿದರು. ಅದನ್ನು ಮತೀಯ ದೃಷ್ಟಿಯಿಂದ ನೋಡಿದ ಅನೇಕರು ಟೀಕಿಸಿದರು. ಆ ಟೀಕೆಗಳಿಗೆ ಉತ್ತರ ನೀಡಿದ ಡಿ. ಎಲ್‌. ಎನ್‌. ‘‘ಸಿದ್ಧರಾಮ’ ಶೈವನೋ, ವೀರಶೈವನೋ ಎಂಬ ಸಮಸ್ಯೆಯನ್ನು ನಾನು ವಿದ್ವಾಂಸನ ದೃಷ್ಟಿಯಿಂದ ನೋಡಿದೆ. ಎರಡಕ್ಕೂ ದೊರೆಯುವ ಆಧಾರಗಳನ್ನು ತಿಳಿದಮಟ್ಟಿಗೆ ತೋರಿಸಿ ತಾತ್ಕಾಲಿಕ ತೀರ್ಮಾನವನ್ನು ಹೇಳಿದೆ. ಇದು ತಪ್ಪೇ ಇರಬಹುದು. ಹಾಗೆಂದು ಸ್ಥಾಪಿಸುವ ಆಧಾರಗಳನ್ನು ಕಂಡುಹಿಡಿದು ಹೇಳಬೇಕಲ್ಲವೆ? ಇವಕ್ಕಾಗಿ ಇನ್ನೂ ಬೆಳಕಿಗೆ ಬಾರದೆ ಅವಿತುಕೊಂಡಿರುವ ಗ್ರಂಥಗಳನ್ನು ಹೊರಕ್ಕೆಳೆಯಲಿ. ಓದಲಿ, ಆಧಾರ ತೋರಿಸಲಿ, ತೀರ್ಮಾನವನ್ನೂ ಕದಲಿಸಲಿ, ಈ ರೀತಿ ಮಾಡಿದರೆ ವಿದ್ವತ್ತು ಬೆಳೆಯುತ್ತದೆ. ಹೊಸ ವಿಷಯ ವಿದ್ವಾಂಸರಿಗೆ ಸಿಕ್ಕಂತಾಗುತ್ತದೆ. ಕೇವಲ ಟೀಕೆ ಮಾಡಿದರೆ ಏನು ಪ್ರಯೋಜನ? ಸಿದ್ಧರಾಮನಂಥ ಮಹಾವ್ಯಕ್ತಿ ಯಾವ ಸಮಾಜಕ್ಕೆ ಸೇರಿದರೂ ಅದಕ್ಕೆ ಘನತೆ ಗೌರವವುಂಟಾಗುತ್ತದೆ. ಇಂಥ ಸಮಾಜಕ್ಕೆ ಸೇರಿದವನು ಅವನು ಎಂಬಷ್ಟರಿಂದಲೇ ವ್ಯಕ್ತಿಗೆ ಮಹತ್ವ ಬರುತ್ತದೆಯೆ? ಆ ಮಹಾತ್ಮ ನಮ್ಮ ಪುಣ್ಯದಿಂದ ತನ್ನ ಸಮಾಧಿಯಿಂದ ಇಂದು ಬಂದರೆ ಅವನ ಪಾದಕ್ಕೆ ತಲೆಯನ್ನು ಚಾಚುವ ಮೊದಲ ಸರದಿ ನನ್ನ ಪಾಲಿಗಿರಲಿ. ಇಷ್ಟು ಭಕ್ತಿ ಗೌರವಗಳು ನನಗೆ ಆತನಲ್ಲುಂಟು. ಮೇಲಿನ ಸಮಸ್ಯೆ ವಿದ್ವತ್ತಿನ ಸಮಸ್ಯೆ, ಅದನ್ನು ವಿದ್ವಾಂಸನ ದೃಷ್ಟಿಯಿಂದ ನೋಡಿ ಎಂದು ವಿನಮ್ರನಾಗಿ ಬೇಡುತ್ತೇನೆ. ಸರಸ್ವತಿಯ ರಾಜ್ಯದಲ್ಲಿ ಜಾತೀಯತೆ, ಮತೀಯತೆಗಳಿಗೆ ಸ್ಥಾನವಿಲ್ಲ. ಅಲ್ಲಮಪ್ರಭು, ನಿಜಗುಣ ಶಿವಯೋಗಿ, ಸಪ್ತಕಾವ್ಯದ ಗುರುಬಸವ-ಈ ಮಹನೀಯರಲ್ಲಿದ್ದ ಉದಾರವೂ, ಸಹನಾಮಯವೂ, ಮಾನವ ಪ್ರೇಮ ಕಂಪಿತವೂ ಆದ ದೃಷ್ಟಿ ಎಲ್ಲರಿಗೂ ಆದರ್ಶವಾಗಿರಲಿ. ಒಟ್ಟಿನಲ್ಲಿ ಕವಿ, ವಿಮರ್ಶಕ, ಜಾತೀಯ-ಈ ವಿಷಯಗಳಿಗೆ ಸಂಬಂಧಿಸಿದ ಮನಃಕಾರ್ಯಗಳು ತೊಲಗಿ ಶುದ್ಧ ದಾಯುಗುಣ ನೆಲೆಗೊಂಡ ಹೊರತು ಕನ್ನಡ ಸಾಹಿತ್ಯ ವಿಮರ್ಶೆ ಬೆಳೆಯಲಾರದು.” (ನಲವತ್ತೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ.)

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಈ ಮಾತುಗಳನ್ನು ಹೇಳಬೇಕಾಗಿಬಂದುದರ ಹಿನ್ನೆಲೆಯನ್ನು ಕುರಿತು ಒಂದು ಮಾತು ಹೇಳಬೇಕಾದುದು ಅಗತ್ಯ. ನಲವತ್ತೊಂದನೆಯ ಸಾಹಿತ್ಯ ಸಮ್ಮೇಳನ ಬಸವಕಲ್ಯಾಣದಲ್ಲಿ ನಡೆಯುವುದೆಂದು ಮೊದಲು ನಿರ್ಧರಿಸಲಾಗಿತ್ತು. ಆ ಸಮ್ಮೇಳನಕ್ಕೆ ಡಿ. ಎಲ್‌. ಎನ್‌. ಅವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ತಕ್ಷಣ ಕೆಲವರು ವಿವಾದವನ್ನೆಬ್ಬಿಸಿ ಸಲ್ಲದ ವಿರೋಧಿ ಎಂದು ಪ್ರಚಾರ ಮಾಡಿದರು. ಈ ಗಲಾಟೆಗಳಿಂದ ಬಸವಕಲ್ಯಾಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿಲ್ಲ. ಬೀದರ್‌ನಲ್ಲಿ ನಡೆಯುವ ವ್ಯವಸ್ಥೆಯಾಯಿತು. ಡಿ. ಎಲ್‌. ಎನ್‌. ಅವರೇ ಅಧ್ಯಕ್ಷರಾದರು. ಈ ಹಿನ್ನೆಲೆಯನ್ನು ಕುರಿತಂತೆ ತಮ್ಮ ಅಧ್ಯಕ್ಷ ಭಾಷಣದಲ್ಲಿ ಮೇಲಿನ ಮಾತುಗಳನ್ನು ಸೇರಿಸಿ ವಿದ್ವತ್ತಿಗೂ ಜಾತೀಯತೆಗೂ ಸಂಬಂಧವಿಲ್ಲ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿಯೇ ಅವರ ಮನೆಯಲ್ಲಿ ನಡೆದೊಂದು ಘಟನೆಯನ್ನು ಹೇಳುವುದು ಸಮಂಜಸ. ಮಾನ್ಯ ಕೆ. ಜಿ. ಕುಂದಣಗಾರರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಮಯ. ಮೂರು ನಾಲ್ಕು ಜನ ವಿದ್ವಾಂಸರು ಡಿ. ಎಲ್‌. ಎನ್‌. ಅವರ ಮನೆಗೆ ಬಂದರು. ಮಾತುಕತೆಯಾಡುತ್ತಿದ್ದಾಗ ಸ್ವಾಭಾವಿಕವಾಗಿಯೇ ಸಾಹಿತ್ಯ ಸಮ್ಮೇಳನದ ಮತ್ತು ಕುಂದಣಗಾರರ ವಿಷಯ ಪ್ರಸ್ತಾಪಕ್ಕೆ ಬಂದಿತು. ಅವರಲ್ಲಿ ಒಬ್ಬರು ತಕ್ಷಣ ‘‘ಸಾರ್‌’, ಕುಂದಣಗಾರರು ಯಾವ ಜಾತಿ’’ ಎಂದು ಡಿ.ಎಲ್‌. ಎನ್‌. ಅವರನ್ನು ಪ್ರಶ್ನಿಸಿದರು. ಸಂತೋಷದಿಂದ ಮಾತನಾಡುತ್ತಿದ್ದ ಡಿ.ಎಲ್‌.ಎನ್‌. ಇದ್ದಕ್ಕಿದ್ದಂತೆ ಒಂದು ಕ್ಷಣ ಸುಮ್ಮನಾದರು. ಕೋಪ ಬಂದರೂ, ಅದನ್ನು ತೋರಿಸಿಕೊಳ್ಳದೆ ‘‘ನೋಡಪ್ಪ ನನಗೆ ಕುಂದಣಗಾರರು ಗೊತ್ತೇ ಹೊರತು. ಅವರ ಜಾತಿ ಯಾವುದು ಎನ್ನುವುದು ಗೊತ್ತಿಲ್ಲ’’ ಎಂದರು. ಅಲ್ಲಿಗೆ ಮಾತು ಸಾಕು ಎನ್ನುವಂತೆ ಮುಂದೆ ಮಾತನಾಡಲಿಲ್ಲ. ಒಂದೆರಡು ನಿಮಿಷ ಯಾರೂ ಮಾತನಾಡಲಿಲ್ಲ. ಬಂದವರು ‘‘ಆ ಪ್ರಶ್ನೆ ನಿಮ್ಮನ್ನು ಕೇಳಬಾರದಿತ್ತು ಕ್ಷಮಿಸಿ’’ ಎಂದು ಹೇಳಿ ಹೊರಟುಹೋದರು. ಈ ಘಟನೆ ಅವರ ಮನೋಧರ್ಮಕ್ಕೆ ಸಾಕ್ಷಿ.

ಪ್ರಬುದ್ಧ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್‌ಪತ್ರಿಕೆ, ಕನ್ನಡ ನುಡಿ, ಜಯಕರ್ನಾಟಕ ಮತ್ತಿತರ ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನೂ, ಅನೇಕ ಗ್ರಂಥಗಳಿಗೆ ಬರೆದ ಮುನ್ನುಡಿಗಳನ್ನೂ ಸೇರಿಸಿ ಡಿ.ವಿ.ಕೆ. ಮೂರ್ತಿಯವರು ‘‘ಪೀಠಿಕೆಗಳು, ಲೇಖನಗಳು’’ ಎನ್ನುವ ಬೃಹತ್‌ಗ್ರಂಥವನ್ನು ಪ್ರಕಟಿಸಿದ್ದಾರೆ. ಡಿ.ಎಲ್‌.ಎನ್‌. ಅವರ ವೈವಿಧ್ಯಮಯ ವೈದುಷ್ಯವನ್ನು ಈ ಗ್ರಂಥ ತೋರಿಸುತ್ತದೆ.

೧೯೬೧ರಲ್ಲಿ ನಾನು ಕೆಲಸವಿಲ್ಲದೆ ಕೆಲವು ಕಾಲ ಮೈಸೂರಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿತ್ತು. ಸುಮ್ಮನೆ ಕಾಲಹರಣ ಮಾಡುವ ಬದಲು ಡಿ. ಎಲ್‌. ಎನ್‌. ಅವರ ಲೇಖನಗಳನ್ನಾದರೂ ಸಂಗ್ರಹಿಸಬಾರದೇಕೆ ಎನ್ನುವ ಯೋಚನೆ ಬಂದಿತು. ಯೋಚನೆಯನ್ನು ಅವರ ಮುಂದಿಟ್ಟೆ. ಒಪ್ಪಿಕೊಂಡರು. ಆದರೆ ಲೇಖನಗಳ ಪ್ರತಿಗಳಾಗಲೀ, ಲೇಖನಗಳು ಪ್ರಕಟವಾದ ಪತ್ರಿಕೆಗಳ ಪ್ರತಿಗಳಾಗಲೀ ಅವರ ಬಳಿ ಇರಲಿಲ್ಲ. ಎಲ್ಲೋ ಕೆಲವು ಮಾತ್ರ ಇದ್ದವು. ಅನಂತರ ಗ್ರಂಥ ಭಂಡಾರಗಳಲ್ಲಿ ಹಿಂದಿನ ಸಂಚಿಕೆಗಳನ್ನು ಹುಡುಕಲು ಪ್ರಾರಂಭಿಸಿದೆ. ಸುಮಾರು ನಾಲ್ಕೈದು ತಿಂಗಳ ಕಾಲದಲ್ಲಿ ಬಹುತೇಕ ಲೇಖನಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ನನಗೆ ದೊರಕದ, ಅವರ ನೆನಪಿನಲ್ಲಿರದ ಲೇಖನಗಳು ಈ ಗ್ರಂಥದಲ್ಲಿ ಸೇರದೆ ಹೋಗಿರುವ ಸಾಧ್ಯತೆಯೂ ಇದೆ. ಆದರೆ ಆ ಸಂಗ್ರಹ ಪ್ರಕಟವಾಗಲು ಹತ್ತು ವರ್ಷಬೇಕಾಯಿತು. ದುರದೃಷ್ಟಕರ ಸಂಗತಿಯೆಂದರೆ ಅವರು ಸಾಯುವ ವೇಳೆಗೆ ಪುಸ್ತಕ ಹೊರಬರಲಿಲ್ಲ. ಎಲ್ಲ ಲೇಖನಗಳ ಅಚ್ಚನ್ನೂ ತಿದ್ದಿದ್ದರು. ಮುನ್ನುಡಿ ಬರೆಯುವುದೊಂದು ಬಾಕಿ ಉಳಿದಿತ್ತು. ಆದರೆ ಅದನ್ನು ಬರೆಯುವುದಕ್ಕೆ ಮುಂಚೆಯೇ ವಿಧಿವಶವಾದರು. ಇದರಲ್ಲಿರುವ ಲೇಖನಗಳು ಡಿ.ಎಲ್‌.ಎನ್‌. ಅವರ ವೈಚಾರಿಕ ನಿಖರತೆಯನ್ನು ತೋರಿಸುತ್ತವೆ. ಅನೇಕ ಕವಿಗಳ ವಿಚಾರವಾಗಿ ಅವರು ಬರೆದಿರುವ ಅಭಿಪ್ರಾಯಗಳು ಬದಲಾಗುವುದು ಕಷ್ಟ. ಈ ಗ್ರಂಥ ಕನ್ನಡ ವಿದ್ವತ್‌ಪ್ರಪಂಚದಲ್ಲಿ ಭದ್ರವಾಗಿ ನಿಲ್ಲುತ್ತದೆ.

ಡಿ.ಎಲ್‌.ಎನ್‌. ಅವರ ಕೊನೆಯ ಕೃತಿ ‘‘ಪಂಪಭಾರತದೀಪಿಕೆ’’, ‘‘ಪಂಪಭಾರತ’’ ಕನ್ನಡದ ಶ್ರೇಷ್ಠ ಕಾವ್ಯಗಳಲ್ಲಿ ಒಂದು. ಆದರೆ ಸಾಮಾನ್ಯರಿಗೂ, ಈ ಕಾವ್ಯಕ್ಕೂ ಭೂಮಿ-ಆಕಾಶಗಳ ಅಂತರ, ಸಾಮಾನ್ಯರಿಗೇಕೆ, ತಕ್ಕಮಟ್ಟಿಗೆ ಹಳಗನ್ನಡದ ಪರಿಚಯವಿದ್ದವರಿಗೂ ಪಂಪಭಾರತವನ್ನು ಅರಗಿಸಿಕೊಳ್ಳುವುದು ಕಷ್ಟವೇ, ಕಾವ್ಯವನ್ನು ಓದುವುದಕ್ಕೆ ಅಡ್ಡಿಯಾಗಿ ನಿಲ್ಲುವ ಶಬ್ದಗಳಿಗೆ ಲೆಕ್ಕವೇ ಇಲ್ಲ. ಇಂಥಹ ಕಾವ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಪಂಪಭಾರತದ ದೀಪಿಕೆ ಸಹಾಯಕವಾಗುತ್ತದೆ. ಕಾವ್ಯಗಳಿಗೆ ಟೀಕುಬರೆಯುವ ಕೆಲಸ ಹೊಸದೇನಲ್ಲ. ಆದರೆ ಬಹುತೇಕ ಟೀಕುಗಳು ಕಾವ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗಲಾರವು. ಆದರೆ ದೀಪಿಕೆಯನ್ನು ಮುಂದಿಟ್ಟುಕೊಂಡು ಪಂಪಭಾರತವನ್ನು ಓದಲು ಪ್ರಾರಂಭಿಸಿದರೆ ಸಮಸ್ಯೆಗಳು ಎದುರಾಗುವುದು ಕಡಿಮೆ. ಆದ್ದರಿಂದಲೇ ಡಿ.ಎಲ್‌.ಎನ್‌. ಅವರ ಕೃತಿ ಒಂದು ಪರಂಪರೆಗೇ ನಾಂದಿಹಾಕಿದೆ. ಇತರ ವಿದ್ವಾಂಸರೂ ಈ ರೀತಿಯ ಟೀಕುಗಳನ್ನು ಬರೆದರೆ ಹಳಗನ್ನಡ ಕಾವ್ಯಗಳೂ ಸಾಮಾನ್ಯ ಜನರಿಗೆ ನಿಲುಕಬಹುದು. (ಡಿ.ಎಲ್‌.ಎನ್‌. ಅವರೇ ಇನ್ನೂ ಒಂದೆರಡು ಗ್ರಂಥಗಳಿಗೆ ‘‘ದೀಪಿಕೆ’’ ಬರೆಯಬೇಕೆಂದಿದ್ದರು.)

‘‘ಪಂಪಭಾರತ’’ ಡಿ. ಎಲ್‌. ಎನ್‌. ಅವರ ಮನಸ್ಸನ್ನು ಸೂರೆಗೊಂಡಿದ್ದ ಕಾವ್ಯ. ಈಗ ಪ್ರಕಟವಾಗಿರುವ ಕಾವ್ಯ ಕೇವಲ ಒಂದೂವರೆ ಪ್ರತಿಗಳ ಆಧಾರದ ಮೇಲೆ ಸಂಪಾದಿಸಿದುದು. ಇನ್ನು ಒಂದೆರಡು ಪ್ರತಿಗಳು ದೊರಕಿದ್ದರೆ ಶುದ್ಧ ಪ್ರತಿಯನ್ನು ಮಾಡಬಹುದು ಎನ್ನುವುದು ಅವರ ಆಸೆಯಾಗಿತ್ತು. ಪಂಪಭಾರತದ ಓಲೆಯ ಪ್ರತಿಗಳು ಇನ್ನೂ ಎಲ್ಲಾದರೂ ದೊರಕಬಹುದೇನೋ ಎನ್ನುವ ಆಸೆಯಿಂದ ತುಂಬಾ ಶ್ರಮಪಟ್ಟರು. ಅವರ ಪ್ರಯತ್ನ ಒಂದು ರೀತಿಯಲ್ಲಿ ಕೈಗೂಡಿತು. ಮತ್ತೊಂದು ರೀತಿಯಲ್ಲಿ ವಿಫಲವಾಯಿತು. ಕೈಗೂಡಿತು ಎಂದರೆ ಒಂದು ಸ್ಥಳದಲ್ಲಿ ಒಂದು ಓಲೆಯ ಪ್ರತಿಯಿರುವುದನ್ನು ಪತ್ತೆ ಹಚ್ಚಿದರು. ಆದರೆ ಅದನ್ನು ಅದರೊಡೆಯರು ಡಿ.ಎಲ್‌. ಎನ್‌. ಅವರಿಗೆ ಕೊಡಲು ಒಪ್ಪಲಿಲ್ಲ. ಕೆಲವು ದಿನಗಳ ಮಟ್ಟಿಗಾದರೂ ಕೊಡಬೇಕೆನ್ನುವ ಕೋರಿಕೆಯನ್ನೂ ಈಡೇರಿಸಲಿಲ್ಲವಂತೆ. ಹೇಗಾದರೂ ಅದನ್ನು ಪಡೆಯಬೇಕೆಂಬುದು ಅವರ ಹಂಬಲವಾಗಿತ್ತು. ಅವರ ಆಸೆ ಈಡೇರಿದ್ದರೆ ಪಂಪಭಾರತದ ಶುದ್ಧಪ್ರತಿ ನಮಗೆ ಲಭ್ಯವಾಗುತ್ತಿತ್ತು.

(ಪಂಪಭಾರತ ದೀಪಿಕೆಯಲ್ಲಿ ಪದ್ಯಗಳನ್ನು ಜೊತೆಯಲ್ಲಿ ಕೊಟ್ಟಿದ್ದರೆ ಓದುಗರಿಗೆ ಅನುಕೂಲವಾಗುತ್ತಿತ್ತು ಎಂದು ನಾನು ಸೂಚಿಸಿದಾಗ, ‘‘ಪಂಪಭಾರತದ ಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಿದ್ದು, ಆದ್ದರಿಂದ ಪದ್ಯಗಳನ್ನು ನಾನು ಹೇಗೆ ಸೇರಿಸಲಿ’’ ಎಂದರು.)

ಹೊಸಗನ್ನಡ ಸಾಹಿತ್ಯದಲ್ಲಿ ಡಿ.ಎಲ್‌.ಎನ್‌. ಏಕೆ ಕೈಯಾಡಿಸಲಿಲ್ಲ ಎಂದು ಅನೇಕರಿಗೆ ಕುತೂಹಲ. ವಾಸ್ತವವಾಗಿ ಅವರು ಹೊಸಗನ್ನಡ ಸಾಹಿತ್ಯಕ್ಕೆ ವಿಮುಖರಲ್ಲ. ಬಿ.ಎಂ.ಶ್ರೀ. ಅವರ ಪ್ರಭಾವ ಎಲ್ಲೆಡೆ ಹಬ್ಬಿದಾಗ, ಅವರು ತೋರಿಸಿದ ಹೊಸ ಹಾದಿಯಲ್ಲಿ ಅನೇಕರು ನಡೆಯತೊಡಗಿದ್ದಾಗ, ಡಿ.ಎಲ್‌.ಎನ್‌. ಕೂಡ ಕವಿತೆಗಳನ್ನು ಬರೆದದ್ದುಂಟು. ೧೯೨೮ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕರ್ನಾಟಕ ಸಂಘದವರು ಪ್ರಕಟಿಸಿದ ‘‘ಕಿರಿಯ ಕಾಣಿಕೆ’’ಯಲ್ಲಿ ಅವರ ಎರಡು ಕವನಗಳಿವೆ. (ಈ ಸಂಗ್ರಹದಲ್ಲಿರುವ ಕವನಗಳನ್ನು ಬರೆದ ಇತರರು ಕುವೆಂಪು, ಪು.ತಿ.ನ., ತೀ.ನಂ.ಶ್ರೀ., ಎಲ್‌. ಗುಂಡಪ್ಪ)

ಕುವೆಂಪು ಮತ್ತು ಪು.ತಿ.ನ ಮುಂದೆಯೂ ಕಾವ್ಯಲೋಕದಲ್ಲಿಯೇ ನಡೆದುಬಂದರು. ವಿದ್ವತ್‌ಪ್ರಪಂಚಕ್ಕೆ ಪ್ರವೇಶಿಸಿದ ತೀ.ನಂ.ಶ್ರೀಯವರು ಆಗಾಗ ಕವನಗಳನ್ನು ಬರೆಯುತ್ತಿದ್ದರು. ಆದರೆ ಡಿ.ಎಲ್‌.ಎನ್‌. ಮಾತ್ರ ಮತ್ತೆ ಕವನ ಬರೆಯುವ ಗೋಜಿಗೆ ಹೋಗಿರಲಿಲ್ಲ. ಅನಂತರ ಕೆಲವು ಪ್ರಬಂಧಗಳನ್ನು (‘‘ಲಾಳ ಕಟ್ಟಿಸಿಕೊಂಡ ಕುದುರೆ’’, ‘‘ಕಣ್ಣೋ ಕುರುಡೋ’’, ‘‘ವ್ಯಾಸಂಗದ ಹವ್ಯಾಸ’’) ಬರೆದುದುಂಟು. ಆ ಹವ್ಯಾಸವೂ ಅಲ್ಲಿಗೇ ಮುಗಿಯಿತು. ಅಪರೂಪಕ್ಕೆ ಕೆಲವು ಇತ್ತೀಚಿನ ಪುಸ್ತಕಗಳ ಮೇಲೆ ವಿಮರ್ಶೆ ಬರೆದಿದ್ದಾರೆ. (ಮುಗಳಿಯವರ ‘‘ಅಕ್ಕಮಹಾದೇವಿ’’, ಶಿವರಾಮ ಕಾರಂತರ ‘‘ಕನ್ಯಾಬಲಿ’’ ಮತ್ತು ‘‘ಮರಳಿ ಮಣ್ಣಿಗೆ’’, ಶ್ರೀರಂಗರ ‘‘ವೈದ್ಯರಾಜ ಮತ್ತಿತರ ಕೃತಿಗಳ’’ ವಿಮರ್ಶೆ.) ಕೆ. ಎಸ್‌. ನರಸಿಂಹಸ್ವಾಮಿಯವರ ‘‘ಶಿಲಾಲತೆ’’ಗೆ ಅವರು ಬರೆದಿರುವ ಮುನ್ನುಡಿ ಅವರು ಎಂತಹ ಸಹೃದಯರು ಎನ್ನುವುದನ್ನು ತೋರಿಸಿದೆ. ನವೋದಯ ಕವಿಗಳ ಕಾವ್ಯವನ್ನು ಚೆನ್ನಾಗಿಯೇ ಅಭ್ಯಾಸ ಮಾಡಿದ್ದರು. ಅನೇಕರ ಕೃತಿಗಳನ್ನು ಅವರು ಹೃತ್ಪೂರ್ವಕವಾಗಿ ಮೆಚ್ಚಿಕೊಂಡಿದ್ದರು. ಆದರೆ ಈ ಕ್ಷೇತ್ರದಲ್ಲಿ ಅವರು ಹೆಚ್ಚು ಕೆಲಸ ಮಾಡಲಿಲ್ಲ. ಇನ್ನೂ ಸಾಕಷ್ಟು ಕೆಲಸ ಮಾಡಬಹುದಿತ್ತು ಅನ್ನಿಸುವುದು ನಿಜ, ಆದರೆ ಅವರ ದೃಷ್ಟಿಯೆಲ್ಲಾ ಕೇಂದ್ರೀಕೃತವಾದದ್ದು ವಿದ್ವತ್‌ಲೋಕದಲ್ಲಿ.

‘‘ನೀವು ಹೊಸಗನ್ನಡದಲ್ಲಿ ಇನ್ನೂ ಕೆಲಸ ಮಾಡಬೇಕು? ಎಂದು ಒಮ್ಮೆ ಹೇಳಿದಾಗ ‘‘ಆ ಕೆಲಸ ಮಾಡುವ ಜನ ಬೇಕಾದಷ್ಟಿದ್ದಾರೆ. ಆದರೆ ಈ ಕೆಲಸ ಮಾಡುವವರು ಎಷ್ಟು ಜನರಿದ್ದಾರೆ?’ ಎಂದು ಕೇಳಿದರು. ಆ ಮಾತು ನಿಜ. ಹಳಗನ್ನಡ ಸಾಹಿತ್ಯದಲ್ಲಿ ಅವರು ಮನಸ್ಸನ್ನು ಕೇಂದ್ರೀಕರಿಸದಿದ್ದರೆ ಅನ್ಯಾಯವಾಗುತ್ತಿದ್ದುದು ನಮಗೇ.

ಡಿ. ಎಲ್‌. ಎನ್‌. ಅವರ ಪೂರ್ಣ ಹೆಸರು ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ. ಇವರ ತಾತ ದೊಡ್ಡಬೆಲೆಯವರು – ಇದು ತುಮಕೂರಿನ ಹತ್ತಿರ ಇದೆ. (ಅವರ ಹೆಸರು ಕೃಷ್ಣಮಾಚಾರ್‌, ‘‘ಕೂಲಿ ಮಠ’’ದ ಮೇಷ್ಟ್ರು). ಆದರೆ ಡಿ.ಎಲ್‌.ಎನ್‌. ಎಂದೂ ದೊಡ್ಡ ಬೆಲೆಯನ್ನು ಕಂಡವರಲ್ಲ. ಹುಟ್ಟಿದ್ದು ಚಿಕ್ಕನಾಯಕನಹಳ್ಳಿಯಲ್ಲಿ (ತಾಯಿಯ ತೌರುಮನೆ). ೧೯೦೬ರ ಅಕ್ಟೋಬರ್‌೨೭ರಂದು ಜನನ. ಮನೆದೇವರು ದೇವರಾಯದುರ್ಗದ ಲಕ್ಷ್ಮೀನರಸಿಂಹಸ್ವಾಮಿಯ ಹೆಸರನ್ನೇ ಮಗುವಿಗಿಟ್ಟರು. ತಂದೆ ಶಾಮ ಐಯ್ಯಂಗಾರ್‌, ಗುಮಾಸ್ತೆ ಹುದ್ದೆಯಲ್ಲಿದ್ದು ಊರೂರು ಅಲೆಯಬೇಕಾಗಿದ್ದರಿಂದ ಇವರ ವಿದ್ಯಾಭ್ಯಾಸ ಪಾವಗಡ, ಸಿರಾ, ತುಮಕೂರುಗಳಲ್ಲಿ ನಡೆಯಿತು. ನರಸಿಂಹಾಚಾರ್ಯರ ತಾತ ಅಣ್ಣಾಸ್ವಾಮಿ ಅಯ್ಯಂಗಾರ್‌(ತಾಯಿಯ ತಂದೆ) ಸೊಗಸಾಗಿ ಭಾರತ ವಾಚನ ಮಾಡುತ್ತಿದ್ದರಂತೆ. ಆ ವಾತಾವರಣದಲ್ಲಿ ಬೆಳೆದ ಮೊಮ್ಮಗ ಹನ್ನೆರಡನೆಯ ವಯಸ್ಸಿನಲ್ಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ. (ಅನಂತರ ಆ ಕಂಠದಲ್ಲಿ ಅಡಗಿಕೊಂಡ ಕಾವ್ಯಗಳು ಹಲವಾರು). ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಡಿ. ಎಲ್‌. ಎನ್‌. ರಾಜಶೇಖರ ವಿಲಾಸ, ಗದಾಯುದ್ಧ ಛಂದೋಬುಧಿಗಳನ್ನು ಓದಿದ್ದರೆಂದರೆ ಕನ್ನಡದ ಮೇಲೆ ಅವರಿಗಿದ್ದ ವ್ಯಾಮೋಹ ಮತ್ತು ಅಭಿರುಚಿ ವ್ಯಕ್ತವಾಗುತ್ತದೆ.

ತುಮಕೂರಿನ ಪ್ರೌಢಶಾಲೆಯಲ್ಲಿ ಎಂಟ್ರೆನ್ಸ್‌ತರಗತಿಯಲ್ಲಿ ಡಿ. ಎಲ್‌. ಎನ್‌. ಓದುತ್ತಿದ್ದಾಗ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ತನಿಖೆಗಾಗಿ ಆ ಶಾಲೆಗೆ ಹೋದರು. ಶ್ರೀ ಅವರ ವಿಷಯವಾಗಿ ಆ ವೇಳೆಗಾಗಲೇ ಸಾಕಷ್ಟು ತಿಳಿದುಕೊಂಡಿದ್ದ ಡಿ. ಎಲ್‌. ಎನ್‌. ಅವರ ಉಪನ್ಯಾಸವನ್ನು ಕೇಳಲು ಶ್ರದ್ಧೆ, ಭಕ್ತಿಗಳಿಂದ ಹೋದರು. ಅವರ ಉಪನ್ಯಾಸಗಳನ್ನು ಕೇಳಿದ ಮೇಲೆ ಶ್ರೀ ಅವರ ಬಗೆಗಿದ್ದ ಗೌರವಾದರಗಳು ಇಮ್ಮಡಿಸಿದುವು. ಮುಂದೆ ಶ್ರೀ ಅವರ ಶಿಷ್ಯರಾಗುವ ಯೋಗ ಲಭಿಸಿತು.

ಶ್ರೀ ಅವರು ಹೆಸರೆತ್ತಿದರೆ ಡಿ. ಎಲ್‌. ಎನ್‌. ಮೈಮರೆಯುತ್ತಿದ್ದರು. ಅವರ ವಿಷಯವಾಗಿ ಹೇಳಲು ಪ್ರಾರಂಭಿಸಿದರೆ ಕೊನೆ ಮೊದಲಿರುತ್ತಿರಲಿಲ್ಲ. ಮೈಸೂರಿನ ಚಾಮರಾಜಪುರಂನಲ್ಲಿ ಶ್ರೀ ಅವರಿದ್ದ ಮನೆಯನ್ನು ತೋರಿಸಿ “ಈ ಮನೆಯ ಮಹಡಿಯ ಮೇಲೆ ನಮ್ಮ ಗುರುಗಳು ಕೇಶಿರಾಜನ ‘ಶಬ್ದಮಣಿದರ್ಪಣ’ ಪಾಠ ಹೇಳುತ್ತಿದ್ದರು. ಅವರು ಪಾಠ ಹೇಳುತ್ತಿದ್ದ ಗತ್ತನ್ನು ನೋಡಬೇಕಯ್ಯ” ಎಂದು ಶಬ್ದಮಣಿದರ್ಪಣವನ್ನು ಅವರು ಹೇಳುತ್ತಿದ್ದ ರೀತಿ, ಶಿಷ್ಯರ ಬಗೆಗೆ ಅವರಿಗಿದ್ದ ವಾತ್ಸಲ್ಯ, ಕನ್ನಡ ಇಂಗ್ಲೀಷುಗಳಲ್ಲಿದ್ದ ಶ್ರೀ ಅವರ ಪಾಂಡಿತ್ಯವನ್ನು ವರ್ಣಿಸಿದರು. ನಾನು ಸುಮ್ಮನಿರಲಾರದೆ ‘ಸಾರ್‌. ನೀವು ಯಾವಾಗಲೂ ಶ್ರೀಕಂಠಯ್ಯನವರ ವಿಷಯವನ್ನೇ ಹೇಳುತ್ತೀರಿ, ಬೇರೆಯವರ ವಿಷಯವೇ ಹೇಳುವುದಿಲ್ಲ’ ಎಂದೆ. ಅದೇ ಗುಂಗಿನಲ್ಲಿದ್ದ ಡಿ.ಎಲ್.ಎನ್‌. ‘ಶ್ರೀಯವರು ಗುರುಗಳು, ಬೇರೆಯವರು ಮೇಷ್ಟ್ರು’ ಎಂದರು. ‘ಗುರುಗಳು’ ಎನ್ನುವ ಒಂದೇ ಶಬ್ದದಲ್ಲಿ ಶ್ರೀ ಅವರ ವ್ಯಕ್ತಿತ್ವವನ್ನೇ ಅಡಗಿಸಿದ್ದರು. ಎಂದರೆ ಅವರಿಗೆ ಇತರ ಅಧ್ಯಾಪಕರ ಮೇಲೆ ಗೌರವವಿರಲಿಲ್ಲವೆಂದಲ್ಲ. ಇತರರಿಗೂ ಶ್ರೀ ಅವರಿಗೂ ಅಪಾರ ಅಂತರ ಎನ್ನುವುದು ಅವರ ಭಾವನೆಯಾಗಿತ್ತು. ಈ ಮೂರು ಜನರೂ ಡಿ.ಎಲ್‌.ಎನ್‌. ಅವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದ್ದವರು.

ಡಿ.ಎಲ್‌.ಎನ್‌. ಪಂಡಿತರಾಗಿ ಮಹಾರಾಜಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ವೆಂಕಣ್ಣಯ್ಯನವರು ಪ್ರಾಧ್ಯಾಪಕರಾಗಿದ್ದರು. ವೆಂಕಣ್ಣಯ್ಯನವರು ತಮಗೆ ತೋಚದಿರುವ ಸಮಸ್ಯೆಗಳನ್ನು ಡಿ.ಎಲ್‌.ಎನ್‌. ಅವರ ಬಳಿ ತರುತ್ತಿದ್ದರಂತೆ (ಶಿಷ್ಯನ ಪಾಂಡಿತ್ಯದಲ್ಲಿ ಅವರಿಗೆ ವಿಪರೀತ ನಂಬಿಕೆ). ಸೆಂಟ್ರಲ್‌ಕಾಲೇಜಿನಲ್ಲಿ ಡಿ.ಎಲ್‌.ಎನ್‌. ಅವರು ವಿದ್ಯಾರ್ಥಿಯಾಗಿದ್ದಾಗ ವೆಂಕಣ್ಣಯ್ಯನವರು ಅಲ್ಲಿ ಅಧ್ಯಾಪಕರಾಗಿದ್ದರು. ಒಮ್ಮೆ ಕಾವ್ಯವಾಚನದ ಸ್ಪರ್ಧೆಯಲ್ಲಿ ಡಿ.ಎಲ್‌.ಎನ್. ಭಾಗವಹಿಸಿದ್ದರಂತೆ (ಡಿ.ಎಲ್‌.ಎನ್‌. ಅವರಿಗೆ ಬಹುಮಾನ ಬರಲಿಲ್ಲ). ವೆಂಕಣ್ಣಯ್ಯನವರು ಎದುರಿಗೆ ಸಿಕ್ಕಾಗ ಆ ವಿಷಯ ಏನೂ ಮಾತನಾಡಲಿಲ್ಲವಂತೆ. ಆದರೆ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗಲೇ ಡಿ.ಎಲ್‌.ಎನ್‌. ಬರೆದ ‘ಕನ್ನಡ ಕಾವ್ಯಗಳಲ್ಲಿ ಪ್ರಕೃತಿಯ ವರ್ಣನೆ’ ಪ್ರಬಂಧವನ್ನು ಓದಿ ಶಿಷ್ಯನ ಬಳಿ ಬಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರಂತೆ, ಚೆನ್ನಾಗಿರುವುದನ್ನು ಕಂಡರೆ ಮೆಚ್ಚಿಗೆಯನ್ನು ವ್ಯಕ್ತಪಡಿಸುವ, ಮನಸ್ಸಿಗೆ ಒಪ್ಪಿಗೆಯಾಗದಿರುವುದರ ಬಗೆಗೆ ಮೌನವಾಗಿರುವ ವೆಂಕಣ್ಣಯ್ಯನವರ ಸ್ವಭಾವವನ್ನು ಡಿ.ಎಲ್‌.ಎನ್‌. ಮೆಚ್ಚಿಕೊಂಡಿದ್ದರು.

ಡಿ.ಎಲ್‌.ಎನ್.‌ಅವರು ಕನ್ನಡ ಎಂ.ಎ. ಮಾಡಿ ಕನ್ನಡ ಅಧ್ಯಾಪಕರಾದದ್ದು ಅನಿರೀಕ್ಷಿತ. ೧೯೨೪ರಲ್ಲಿ ಅವರು ಸೆಂಟ್ರಲ್‌ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡು (ಆಗ ವಿಜ್ಞಾನಕ್ಕೂ ಬಿ.ಎ. ಪದವಿಯನ್ನೇ ನೀಡುತ್ತಿದ್ದರು) ಮುಗಿಸಿದ ಮೇಲೆ ಕೆಲಸಕ್ಕೆ ಸೇರಬೇಕೆಂದುಕೊಂಡಿದ್ದರು. ಆದರೆ ಮೈಸೂರಿಗೆ ಸಂಬಂಧಿಗಳ ಮನೆಗೆ ಹೋಗಿದ್ದಾಗ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ. ಪ್ರಾರಂಭಿಸುವರೆಂದು ತಿಳಿಯಿತು. ಹಿಂದೆ ಮುಂದೆ ನೋಡದೆ ಎಂ.ಎ.ಗೆ ಸೇರಿಕೊಂಡರು. (ಅವರ ಇತರ ಸಹಪಾಠಿಗಳು ಕುವೆಂಪು, ಕೆ. ವೆಂಕಟರಾಮಪ್ಪ ಮತ್ತಿತರರು.)

ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ಡಿ.ಎಲ್‌.ಎನ್.‌ಸ್ವರ್ಣ ಪದಕವನ್ನು ಪಡೆದರು. ಆದರೆ ಒಂದೋ ಎರಡೋ ಕಾಲೇಜುಗಳಿದ್ದ ಆ ಕಾಲದಲ್ಲಿ ಎಂ.ಎ. ಮುಗಿಸಿದ ತಕ್ಷಣ ಅಧ್ಯಾಪಕರಾಗಲು ಅವಕಾಶವೆಲ್ಲಿ? ಇವರ ಅದೃಷ್ಟಕ್ಕೆ ಒಂದು ಸಂಶೋಧನಾವೇತನ ದೊರಕಿತು. ‘ವೀರಶೈವ ಸಾಹಿತ್ಯ ಉಗಮ’ ಪ್ರಬಂಧವನ್ನು ಬರೆದದ್ದು ಆ ಅವಧಿಯಲ್ಲಿಯೇ, ಅನಂತರ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ಸಂಶೋಧಕರಾಗಿ ಕೆಲಸಕ್ಕೆ ಸೇರಿಕೊಂಡರು. ಸಂಬಳ ತಿಂಗಳಿಗೆ ೮೦ ರೂಪಾಯಿ. ಆದರೆ ಓರಿಯೆಂಟಲ್‌ಲೈಬ್ರೆರಿಯಲ್ಲಿ ಕೆಲಸ ಸಿಕ್ಕಿದ್ದು ಅವರಿಗೆ ಬಹಳ ಸಂತೋಷವನ್ನುಂಟು ಮಾಡಿತು. ಓಲೆ ಮತ್ತು ಕಾಗದದ ಪ್ರತಿಗಳೆಲ್ಲವನ್ನು ಅವಲೋಕಿಸಿದರು. ‘ಭೀಷ್ಮಪರ್ವ’ವನ್ನು ಸಂಪಾದಿಸಿದರು.

೧೯೩೨ರಲ್ಲಿ ಕನ್ನಡ ಪಂಡಿತರಾಗಿ ಮಹಾರಾಜ ಕಾಲೇಜಿನಲ್ಲಿ ನೇಮಕರಾದರು. (ಸಂಬಳ ೧೨೦ ರೂ.) ಕನ್ನಡ ಪಂಡಿತ ಹುದ್ದೆಯೆಂದರೆ ಲೆಕ್ಚರರ್‌ ಹುದ್ದೆಗಿಂತ ಕೆಳಗಿನ ದರ್ಜೆ. ಲೆಕ್ಚರರ್‌ ಹುದ್ದೆ ದೊರಕಲು ಅವರು ಏಳು ವರ್ಷ ಕಾಯಬೇಕಾಯಿತು. ಪಂಡಿತ ಹುದ್ದೆಯಲ್ಲಿದ್ದಾಗಲೇ ಪ್ರಾಧ್ಯಾಪಕರು ಮಾಡುವ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡಿದ್ದರು. ಆದರೆ ವಿಶ್ವವಿದ್ಯಾನಿಲಯ ಅವರನ್ನು ಕಡೆಗಣ್ಣಿನಿಂದಲೂ ನೋಡಲಿಲ್ಲ. ಲೆಕ್ಚರರ್‌ ಹುದ್ದೆಯನ್ನು ಕೊಡಿ ಎಂದು ಕೇಳಲು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಕಾಣಲು ಹೋದರು. ಡಿ.ಎಲ್‌.ಎನ್.‌ಅವರ ಮಾತನ್ನು ಕೇಳಿದ ಮೇಲೆ ‘ಮೊದಲು ನೀವು ಆ ಸ್ಥಾನಕ್ಕೆ ಅರ್ಹತೆ ಪಡೆಯಿರಿ. ಆಮೇಲೆ ನೋಡೋಣ’ ಎಂದರಂತೆ. (ಅರ್ಹತೆ ಎಂದರೇನು ಎನ್ನುವುದೇ ಅವರಿಗೆ ತಿಳಿದಿರಲಿಲ್ಲವೇನೋ! ಅವರು ಈ ಮಾತನ್ನು ಹೇಳುವುದಕ್ಕೆ ಮುಂಚೆಯೇ ಪ್ರಾಧ್ಯಾಪಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಡಿ.ಎಲ್‌.ಎನ್.‌ಅವರ ಬಳಿ ಹೋಗುತ್ತಿದ್ದರಂತೆ.) ಆದರೆ ಈ ಮಾತಿನಂತೆ ಡಿ.ಎಲ್‌.ಎನ್.‌ಬೇಸರಪಟ್ಟುಕೊಳ್ಳಲಿಲ್ಲ. ತಮ್ಮ ಸಂಶೋಧನೆಯನ್ನೂ ಬಿಡಲಿಲ್ಲ. ಕೊನೆಗೆ ೧೯೩೯ರಲ್ಲಿ ಲೆಕ್ಚರರ್‌ಕೆಲಸ ದೊರಕಿತು. ಅನಂತರ ಉಪಪ್ರಾಧ್ಯಾಪಕರಾಗಲು ಮತ್ತೆ ಆರು ವರ್ಷ ಕಾಯಬೇಕಾಯಿತು. ೧೯೪೫ರಲ್ಲಿ ಅವರನ್ನು ಉಪಪ್ರಾಧ್ಯಾಪಕರನ್ನಾಗಿ ನೇಮಿಸಿ ಬೆಂಗಳೂರಿನ ಇಂಟರ್‌ಮೀಡಿಯಟ್‌ ಕಾಲೇಜಿಗೆ ವರ್ಗ ಮಾಡಲಾಯಿತು. (ಈ ಹುದ್ದೆಯೂ ಅವರಿಗೆ ಸಿಕ್ಕದಂತೆ ಮಾಡಲು ವಿಶ್ವವಿದ್ಯಾನಿಲಯದ ಗುಮಾಸ್ತನೊಬ್ಬ ಡಿ.ಎಲ್‌.ಎನ್.‌ಅವರ ಲೆಕ್ಚರರ್‌ಕೆಲಸವೇ ಖಾಯಂ ಆಗಿಲ್ಲವೆನ್ನುವ ರೀತಿಯಲ್ಲಿ ಕಾಗದ ಪತ್ರಗಳನ್ನು ತಯಾರಿಸಿದ್ದನಂತೆ.) ಆದರೆ ಆಗ ವಿಶ್ವವಿದ್ಯಾನಿಲಯದ ಯಾವುದೋ ಮಂಡಳಿಯಲ್ಲಿದ್ದ ಬೆಂಗಳೂರಿನ ವಕೀಲರೊಬ್ಬರು ಈ ಎಲ್ಲ ವಿಷಯಗಳನ್ನು ತಿಳಿದುಕೊಂಡು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರಂತೆ. ತಮಗೆ ಪರಿಚಯವೇ ಇಲ್ಲದ ಆ ವಕೀಲರು ತಮಗೆ ಸಹಾಯ ಮಾಡಿದುದನ್ನು ಡಿ.ಎಲ್‌.ಎನ್.‌ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.)

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡ ನಿಘಂಟಿನ ಕೆಲಸವನ್ನು ಪ್ರಾರಂಭಿಸಿದಾಗ ಡಿ.ಎಲ್‌.ಎನ್.‌ಅವರ ಸೇವೆಯನ್ನು ಸಾಹಿತ್ಯ ಪರಿಷತ್ತಿಗೆ ಎರವಲು ನೀಡಲಾಯಿತು. ೧೯೫೫ರ ವರೆಗೆ ನಿಘಂಟಿನ ಸಂಪಾದಕರಾಗಿ ಹಗಲಿರುಳೂ ಶ್ರಮಿಸಿದರು. ೧೯೫೫ರಲ್ಲಿ ಕೆ. ವಿ. ಪುಟ್ಟಪ್ಪನವರು (ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಮೇಲೆ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎರಡು ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿದರು. ವಿಭಾಗದ ಮುಖ್ಯಸ್ಥರ ಸ್ಥಾನಕ್ಕೆ ತೀ.ನಂ. ಶ್ರೀಕಂಠಯ್ಯನವರು ಬಂದರು. (ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿದ್ದ ತೀ.ನಂ. ಶ್ರೀಕಂಠಯ್ಯನವರು ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.) ಮತ್ತೊಂದು ಸ್ಥಾನಕ್ಕೆ ಡಿ.ಎಲ್‌.ಎನ್. ‌ಅವರನ್ನು ನೇಮಕ ಮಾಡಲಾಯಿತು. ತೀ.ನಂ.ಶ್ರೀ. ಡಿ.ಎಲ್‌.ಎನ್.‌ ಅಪೂರ್ವ ಜೋಡಿ. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಗಂಟೆಗಟ್ಟಲೆ ಅವರಿಬ್ಬರೂ ಸಾಹಿತ್ಯ ಸಂಬಂಧ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಅವರಿಬ್ಬರ ಚರ್ಚೆಯಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿದ್ದವು. ಆದರೆ ‘ಅವರು ಬರೆಯಲಿ’ ಎಂದು ಇವರು ‘ಇವರು ಬರೆಯಲಿ’ ಎಂದು ಅವರು ಹೇಳುತ್ತಿದ್ದರಿಂದ ಅನೇಕ ವಿಷಯಗಳು ಲಿಖಿತರೂಪದಲ್ಲಿ ಬರಲೇ ಇಲ್ಲ.

೧೯೬೨ರ ಮಾರ್ಚ್‌ ೩೧ ರಂದು ವಿಶ್ವವಿದ್ಯಾನಿಲಯದ ಕೆಲಸದಿಂದ ನಿವೃತ್ತಿಯಾದ ಮೇಲೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರು ಸಂಶೋಧನೆಗೆ ಧನ ಸಹಾಯ ನೀಡಿದ್ದರಿಂದ ಕೆಲವು ದಿನ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿಯೇ ಕೆಲಸ ಮಾಡಿದರು. ಈ ಮಧ್ಯೆ ತೀ.ನಂ. ಶ್ರೀಯವರು ನಿಧನದರಾದ ಮೇಲೆ, ಕನ್ನಡ-ಕನ್ನಡ ನಿಘಂಟಿನ ಸಂಪಾದಕ ಸಮಿತಿಯ ಅಧ್ಯಕ್ಷರಾದದ್ದರಿಂದ ನಿಘಂಟಿನ ಕೆಲಸ ಸಂಪೂರ್ಣವಾಗಿ ಇವರ ಹೆಗಲ ಮೇಲೆಯೇ ಬಿದ್ದಿತು. (ತೀ.ನಂ.ಶ್ರೀ. ಅಧ್ಯಕ್ಷರಾಗಿದ್ದಾಗ ಇವರು ಸಮಿತಿಯು ಉಪಾಧ್ಯಕ್ಷರಾಗಿದ್ದರು) ತಮ್ಮ ಕೊನೆಯ ದಿನಗಳನ್ನು ಸಂಪೂರ್ಣವಾಗಿ ನಿಘಂಟಿನ ಕೆಲಸಕ್ಕೆ ಮೀಸಲಾಗಿಟ್ಟಿದ್ದರು. ೧೯೬೨ರ ಸುಮಾರಿನಲ್ಲಿ ಕಾಣಿಸಿಕೊಂಡ ಹೃದ್ರೋಗ ಅವರನ್ನು ಅನಾರೋಗ್ಯ ಸ್ಥಿತಿಯಲ್ಲಿಟ್ಟಿದ್ದರೂ ಒಂದೇ ಸಮನೆ ನಿಘಂಟಿನ ಕೆಲಸದಲ್ಲಿ ತಲ್ಲೀನರಾಗಿದ್ದರಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ೧೯೭೧ರ ಮೇ ೮ ರಂದು ರಾತ್ರಿ ನಿಧನರಾದರು.

ನಿಘಂಟಿನ ಕೆಲಸ ಅವರಿಗೆ ತುಂಬ ಪ್ರಿಯವಾಗಿತ್ತು. ತಮ್ಮ ಜೀವಮಾನದಲ್ಲಿ ನಿಘಂಟು ಪೂರ್ಣಗೊಳ್ಳುತ್ತದೆಯೋ ಇಲ್ಲವೋ ಎಂದು ಆಗಾಗ ಅವರು ಸಂದೇಹಪಡುತ್ತಿದ್ದರು. ಕೊನೆಗೂ ಅವರ ಸಂದೇಹವೇ ನಿಜವಾಯಿತು. ಆದರೆ ಅವರು ಬದುಕಿದ್ದಾಗಲೇ ಪ್ರಥಮ ಸಂಪುಟ ಪೂರ್ಣಗೊಂಡದ್ದು ಒಂದು ಸಮಾಧಾನದ ಅಂಶ ಅಷ್ಟೆ.

ಪ್ರೊಫೆಸರ್‌ ಡಿ.ಎಲ್‌.ಎನ್.‌ ಶ್ರೇಷ್ಟ ಅಧ್ಯಾಪಕರು. ಎಲ್ಲ ಕಾವ್ಯಗಳನ್ನೂ, ಶಾಸನಗಳನ್ನೂ ಓದಿ ಅರಗಿಸಿಕೊಂಡಿದ್ದರೂ ತರಗತಿಗೆ ಹೋಗುವಾಗ ಆಯಾ ವಿಷಯದಲ್ಲಿ ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳದೆ ತರಗತಿಗೆ ಕಾಲಿಡುತ್ತಿರಲಿಲ್ಲ. ಕ್ಲಾಸಿಗೆ ಹೋದ ತಕ್ಷಣ ಪಾಠ ಹೇಳಲು ಪ್ರಾರಂಭ. ಗಂಟೆ ಹೊಡೆಯುವವರೆಗೂ ನಿರರ್ಗಳವಾಗಿ ಪಾಠ. ಸಾಮಾನ್ಯವಾಗಿ ಕ್ಲಾಸುಗಳಿಗೆ ಚಕ್ಕರ್‌ಹಾಕುವ ಹುಡುಗರೂ ಅವರ ತರಗತಿಗಳನ್ನು ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ. ಗಂಟೆ ಹೊಡೆಯುವುದನ್ನೇ ಕಾಯುತ್ತಿದ್ದ ನನ್ನಂತಹವರಿಗೆ ಅವರ ಪಾಠ ಕೇಳುತ್ತಾ ಕುಳಿತರೆ ಗಂಟೆ ಹೊಡೆದದ್ದು ಕೇಳಿಸುತ್ತಿರಲಿಲ್ಲ.

೧೯೬೦ರಲ್ಲಿ ತುಮಕೂರಿನ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಡ್ಯೂಟಿಗೆ ಹೋಗುವುದಕ್ಕೆ ಮುಂಚೆ ಅವರಿಂದ ಆಶೀರ್ವಾದ ಪಡೆದು (ಚಾರ್ಜಿಗೆ ದುಡ್ಡಿಲ್ಲದಿದ್ದುದರಿಂದ ಅವರಿಂದಲೇ ಖರ್ಚಿಗೆ ಹಣ ಪಡೆದು) ತುಮಕೂರಿಗೆ ಹೋಗಿ ಕೆಲಸಕ್ಕೆ ಹಾಜರಾಗುವಷ್ಟರಲ್ಲಿ ಮೈಸೂರಿನಿಂದ ಅವರ ಪತ್ರ ಬಂದಿತ್ತು – ‘‘ತರಗತಿಗೆ ಹೋಗುವ ಮುಂಚೆ ಆಯಾ ವಿಷಯಗಳಲ್ಲಿ ಪೂರ್ವಭಾವಿ ಸಿದ್ಧತೆ ಮಾಡಿಕೊಂಡು ಹೋಗು. ಕ್ಲಾಸಿನಲ್ಲಿ ಅನವಶ್ಯಕವಾದ ವಿಚಾರಗಳನ್ನು ಹೇಳಿ ವೇಳೆಯನ್ನು ಹಾಳುಮಾಡಕೂಡದು. ಇಡೀ ಸಮಯವನ್ನು ಆಯಾ ವಿಷಯಕ್ಕೆ ಮಾತ್ರ ವಿನಿಯೋಗಿಸು. ಪಾಠ ಹೇಳುವಾಗ ಏನಾದರೂ ಸಂದೇಹ ಬಂದರೆ ಇಲ್ಲವೇ ವಿದ್ಯಾರ್ಥಿಗಳು ಯಾವುದಾದರೂ ಪ್ರಶ್ನೆ ಕೇಳಿದಾಗ ಉತ್ತರ ಹೊಳೆಯದಿದ್ದರೆ ಬಾಯಿಗೆ ಬಂದದ್ದು ಹೇಳಕೂಡದು. “ನೋಡಿಕೊಂಡು ಬರುತ್ತೇನೆ’ ಎಂದು ಹೇಳಿ ಮತ್ತೆ ಆ ತರಗತಿಗೆ ಹೋಗುವಾಗ ಆ ವಿಷಯವನ್ನು ನೋಡಿಕೊಂಡು ಹೋಗು” ಎಂದು ಬರೆದಿದ್ದರು. ಜೀವನದಲ್ಲಿ ತಾವು ಅನುಸರಿಸಿದ ಸೂತ್ರವನ್ನೇ ತಮ್ಮ ಶಿಷ್ಯರೂ ಅನುಸರಿಸಬೇಕೆನ್ನುವುದು ಅವರ ಆಶಯವಾಗಿತ್ತು.

ಪಾಠ ಹೇಳುವ ವಿಷಯಕ್ಕೆ ಸಂಬಂಧಿಸಿದಂತೆ ಅವರು ಟಿಪ್ಪಣಿ ತಯಾರಿಸಿಕೊಂಡೇ ಬರುತ್ತಿದ್ದರು. ಹೊಸ ವಿಷಯಗಳು ಹೊಳೆದ ತಕ್ಷಣ ಅದಕ್ಕೆ ಸಂಬಂಧಿಸಿದ ನೋಟ್ಸ್‌ತೆರೆದು ಗುರುತು ಮಾಡಿಕೊಳ್ಳುತ್ತಿದ್ದರು. ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಛಂದಃಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅವರು ಸಿದ್ಧಮಾಡಿದ ನೋಟ್ಸುಗಳನ್ನು ಪ್ರಕಟಿಸಿದರೂ ಅವು ಒಳ್ಳೆಯ ಆಕರಗ್ರಂಥಗಳಾಗುತ್ತವೆ. ಸಾಹಿತ್ಯ ಚರಿತ್ರೆಯ ನೋಟ್ಸನ್ನು ಪ್ರಕಟಿಸಬಹುದಲ್ಲಾ ಎಂದು ಒಂದು ಬಾರಿ ಪ್ರಸ್ತಾಪಿಸಿದೆ. “ಹಾಗೆಲ್ಲ ಮಾಡಕೂಡದು. ಸಾಹಿತ್ಯ ಚರಿತ್ರೆ ಒಬ್ಬನು ಬರೆಯುವ ಕೆಲಸವಲ್ಲ. ಅನೇಕ ವಿದ್ವಾಂಸರು ಸೇರಿ ಆ ಕೆಲಸವನ್ನು ಮಾಡಬೇಕು. ಆಗ ಮಾತ್ರ ಅದು ಪರಿಪೂರ್ಣವಾಗಲು ಸಾಧ್ಯ” ಎಂದರು. ಈಗ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಗಳನ್ನು ನೋಡಿದರೆ ಅವರ ಮಾತಿನ ಅರ್ಥ ತಿಳಿಯುತ್ತದೆ. ಆದರೆ ಛಂದಸ್ಸಿನ ಬಗ್ಗೆ ತಾವು ತಯಾರಿಸಿದ್ದ ಟಿಪ್ಪಣಿಗಳ ವಿಷಯದಲ್ಲಿ ಅವರಿಗೆ ಪೂರ್ಣ ವಿಶ್ವಾಸವಿತ್ತು. ಕೆಲಸವನ್ನು ತಿದ್ದಿ ವಿಷಯಗಳನ್ನು ಅನುಕ್ರಮವಾಗಿ ಬರೆದು ಪ್ರಕಟಿಸಬೇಕೆನ್ನುವ ಉದ್ದೇಶ ಅವರಿಗಿತ್ತು. ‘ಪೀಠಿಕೆಗಳು ಲೇಖನಗಳು’ ಗ್ರಂಥ ಪ್ರಕಟವಾದ ತಕ್ಷಣ ಆ ಕೆಲಸವನ್ನು ಮಾಡಬೇಕೆಂದೂ ಇದ್ದರು. ಆದರೆ ಕೆಲಸವನ್ನು ಪ್ರಾರಂಭಿಸುವುದಕ್ಕೆ ಮೊದಲೇ ವಿಧಿವಶರಾದರು.

ತುಂಟ ಹುಡುಗರನ್ನು ಕಂಡರೆ ಡಿ.ಎಲ್‌.ಎನ್.‌ಅವರಿಗೆ ಸ್ವಲ್ಪ ಇಷ್ಟ. ಆದರೆ ಅವರ ಬಳಿ ಯಾವ ಮಂತ್ರವಿತ್ತೋ! ಎಂತಹ ತುಂಟರೂ ಅವರ ಮುಂದೆ ಮಣಿಯುತ್ತಿದ್ದರು. ನನ್ನಂತವರ ವಿರುದ್ಧ ಇತರ ಅಧ್ಯಾಪಕರು ದೂರು ಒಯ್ಯುತ್ತಿದ್ದುದು ಅವರ ಬಳಿಗೇ. ‘ಹಾಗೆಲ್ಲಾ ಮಾಡಬಾರದಯ್ಯ’ ಎಂದು ಹೇಳಿದರೆ ಸಾಕು. ಒಂದೇ ಮಾತಿನ ತೀರ್ಪು. ಧ್ವನಿ ಸ್ವಲ್ಪ ಒರಟಾಗಿರುವಂತೆ ಕಾಣುತ್ತಿದ್ದರೂ ಮಾತು ಮೃದುವಾಗಿರುತ್ತಿತ್ತು.

ನರಸಿಂಹಾಚಾರ್ಯರದು ಆಕರ್ಷಕ ವ್ಯಕ್ತಿತ್ವ. ತುಂಬು ದೇಹ, ದುಂಡು ಮುಖ, ಅಗಲವಾದ ಕಣ್ಣುಗಳು, ಗುಂಗುರು ಕೂದಲು (ಪೇಟವೋ, ಟೋಪಿಯೋ ಅವರ ತಲೆಯ ಮೇಲೆ ಸದಾ ಇರುತ್ತಿತ್ತು. ಅದಿಲ್ಲದಿದ್ದರೆ ಅವರು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದರು.)ನೋಡುವುದಕ್ಕೆ ಅವರು ಉಸ್ತಾದರಂತೆಯೇ ಕಾಣುತ್ತಿದ್ದರು. ಆದರೆ ಅವರ ಸಾಮು ಮಾಡಿದ್ದು ನಾಗವರ್ಮ, ಕೇಶಿರಾಜ, ಭಟ್ಟಾಕಳಂಕರ ಗರಡಿಯಲ್ಲಿ, ಮೊದಮೊದಲು ಸೂಟ್‌ಹಾಕಿ ಟೈ ಕಟ್ಟುತ್ತಿದ್ದರಂತೆ. ಅನಂತರ ಕಚ್ಚೆ ಪಂಚೆ, ಕ್ಲೋಸ್‌ಕಾಲರ್‌, ಕೋಟು ಧರಿಸುತ್ತಿದ್ದರು. ತಲೆಯೆತ್ತಿ ನಡೆಯುವುದು ಅವರ ಸ್ವಭಾವಕ್ಕೆ ವಿರುದ್ಧ, ಸ್ವಲ್ಪ ಬಾಗಿ ನಡೆಯುವುದೇ ಅವರ ಅಭ್ಯಾಸ.

ಕನ್ನಡ ಮಾತ್ರವಲ್ಲ ಸಂಸ್ಕೃತ, ತೆಲುಗು, ತುಳು, ಇಂಗ್ಲಿಷ್‌ಭಾಷೆಗಳಲ್ಲಿ ಅವರಿಗೆ ಅಪಾರ ಪಾಂಡಿತ್ಯ. ಪಂಪಭಾರತ ಅವರಿಗೆ ಎಷ್ಟು ಸಲೀಸೋ ನನ್ನಯ್ಯನ ಭಾರತವೂ ಅಷ್ಟೇ ಸಲೀಸು. ಜರ್ಮನ್‌ಭಾಷೆಯ ಅಲ್ಪಸ್ವಲ್ಪ ಪರಿಚಯವೂ ಇತ್ತು. ಕನ್ನಡಕ್ಕೆ ಸಂಬಂಧಿಸಿದಂತೆ ಜರ್ಮನ್‌ಭಾಷೆಯಲ್ಲಿ ಕೆಲವರು ಬರೆದಿರುವುದಾಗಿಯೂ ಯಾರಾದರೂ ಆ ಭಾಷೆಯಲ್ಲಿ ಪರಿಶ್ರಮ ಪಡೆದು ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂದೂ ಒಮ್ಮೆ ಹೇಳಿದ್ದರು. ಜರ್ಮನ್‌ಭಾಷೆಯ ಪರಿಚಯವಿರುವ ಕನ್ನಡಿಗರು ಇಲ್ಲವೆಂದಲ್ಲ. ಆದರೆ ಇದರಲ್ಲಿ ಆಸಕ್ತಿಯಿರುವವರು ಯಾರಾದರೂ ಆ ಕೆಲಸ ಮಾಡಬೇಕಾಗಿದೆ.

ಆಚಾರ್ಯರು ಕನ್ನಡಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸುವ ದೃಷ್ಟಿಯಿಂದ ಅವರ ಶಿಷ್ಯರು, ಮಿತ್ರರು ಮತ್ತು ಅಭಿಮಾನಿಗಳು ಅವರು ನಿವೃತ್ತರಾದ ಎರಡು ಮೂರು ವರ್ಷಗಳ ನಂತರ ಉಪಾಯನ ಎನ್ನುವ ಬೃಹತ್‌ಸಂಭಾವನಾ ಗ್ರಂಥವನ್ನು ಅರ್ಪಿಸಿದರು. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೧೯೬೦ರಲ್ಲಿ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳೂ, ಅಧ್ಯಾಪಕರೂ ಸನ್ಮಾನ ಮಾಡಿದರು. ಈ ಮೂರು ಸಂದರ್ಭಗಳಲ್ಲಿಯೂ ಅವರು ಮಾತನಾಡಿದ್ದರಲ್ಲಿ ಮುಖ್ಯವಾದ ಅಂಶವೆಂದರೆ ತಮಗೆ ಸಂದ ಶ್ರೇಯಸ್ಸನ್ನು ತಮ್ಮ ಗುರುಗಳಿಗೂ, ವಿದ್ಯೆ ಕಲಿತು ಕಲಿಸಲು ನೆರವಾದ ಮೈಸೂರು ವಿಶ್ವವಿದ್ಯಾನಿಲಯಕ್ಕೂ ಸಮರ್ಪಿಸಿದ್ದು. ಉಪಾಯನ ಅರ್ಪಿಸಿದಾಗ ಶ್ರೇಯಸ್ಸಿನ ಒಂದು ಪಾಲನ್ನು ‘ತಮ್ಮಷ್ಟಕ್ಕೆ ತಾವು ಓದಿ ಬರೆಯಲು ಬಿಟ್ಟುಕೊಟ್ಟ’ ತಮ್ಮ ಶ್ರೀಮತಿಯವರಿಗೂ ಸೇರಬೇಕೆಂದು ತಿಳಿಸಿದರು. ಆಚಾರ್ಯರ ಧರ್ಮಪತ್ನಿ ಶ್ರೀಮತಿ ಮುತ್ತಮ್ಮನವರು ಅದಕ್ಕೆ ಅರ್ಹರಾದ ವ್ಯಕ್ತಿ. ಅವರ ಸಹಕಾರವಿಲ್ಲದಿದ್ದರೆ ಆಚಾರ್ಯರ ಸಂಶೋಧನೆ ಈ ಪ್ರಮಾಣದಲ್ಲಿ ದೊರಕುತ್ತಿತ್ತೋ ಇಲ್ಲವೋ!

ನನ್ನ ಗುರುಗಳ ಆತ್ಮೀಯತೆಯ ಸವಿಯನ್ನು ಅನುಭವಿಸಿದವನು ನಾನು. ಯಾವ ಕಾರಣದಿಂದ ಅವರು ನನ್ನನ್ನು ಹತ್ತಿರಕ್ಕೆ ಸೇರಿಸಿಕೊಂಡರೋ ತಿಳಿಯದು. ಸಾಮಾನ್ಯವಾಗಿ ನಾವು ದೊಡ್ಡವರೆನಿಸಿಕೊಂಡವರ ಹತ್ತಿರ ಹತ್ತಿರ ಹೋದಂತೆ ಅವರ ದೌರ್ಬಲ್ಯಗಳು ಅರ್ಥವಾಗುತ್ತವೆ. ಆದರೆ ಆಚಾರ್ಯರ ಹತ್ತಿರ ಹೋದವರಿಗೆ ಅವರು ಎತ್ತರ ಎತ್ತರವಾಗಿ ಕಾಣುತ್ತಿದ್ದರು. ಒಬ್ಬರ ವಿಷಯವಾಗಿ ಮೂಗು ಮುರಿದವರಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ತಿಳಿದರೆ ಅವರನ್ನು ಪ್ರಶಂಸಿಸಲು ಹಿಂಜರಿದವರಲ್ಲ. ಆದರೆ ವಿದ್ವತ್‌ಲೋಕದಲ್ಲಿ ಚೌರ್ಯ ತಲೆ ಹಾಕಿದರೆ ಒಂದು ಮಾತಿನಲ್ಲಿಯೇ ಖಂಡಿಸುತ್ತಿದ್ದರು.

ಅವರದು ಮಿತವಾದ ಹಾಸ್ಯ ಪ್ರವೃತ್ತಿ. ಎಂ.ಎ. ಓದುತ್ತಿದ್ದಾಗ ನಾವು ಮೂರು ನಾಲ್ಕು ಜನ ಗೆಳೆಯರು ಚಾಮರಾಜಪುರಂನಲ್ಲಿ ರೂಂ ಮಾಡಿಕೊಂಡಿದ್ದೆವು. ನಾವಿದ್ದ ಸ್ಥಳಕ್ಕೂ ಆಚಾರ್ಯರ ಮನೆಗೂ ತೀರ ಹತ್ತಿರ, ಅವರು ನಶ್ಯ ತೆಗೆದುಕೊಳ್ಳಲು ನಮ್ಮ ರೂಂ ಪಕ್ಕದ ಅಂಗಡಿಗೆ ಬರುತ್ತಿದ್ದರು. ಸಾಮಾನ್ಯವಾಗಿ ಅವರು ಅಂಗಡಿಗೆ ಬರುತ್ತಿದ್ದ ವೇಳೆ ಬೆಳಿಗ್ಗೆ ೮ ರಿಂದ ೯ ರೊಳಗೆ. ಆ ಸಮಯದಲ್ಲಿ ಸೀರಿಯಸ್‌ಆಗಿ ಓದುವಂತೆ ನಟಿಸುತ್ತಿದ್ದೆವು. ಒಂದು ದಿನ ಒಂಬತ್ತೂವರೆ ಆಗಿರಬಹುದು. ಅವರು ಇನ್ನು ಬರುವುದಿಲ್ಲ ಎಂದು ನಮಗೆ ಭರವಸೆ. ಮನಸ್ಸಿಗೆ ಬಂದಂತೆ ಹರಟುತ್ತಿದ್ದೆವು. ನಾನು ‘ನೀರಸೇದೋ ಹೆಣ್ಣೆ ನಿಲ್ಲೆಂದು ಕೂಗಿದರೆ, ನಿಂತಾಳು ನನ್ನ ಕಂಡು, ಚೆಂದಮ್ಮ ಬಂದಾಳು ಬಿಂದಿಗೆಯ ತಂದಾಳು ಸೇದಾಳು ಬಾಗಿ ತೂಗಿ’ ಎಂದು ನರಸಿಂಹಸ್ವಾಮಿಯವರ ಕವನವನ್ನು ಹಾಡುತ್ತಿದ್ದೆ. ಇದ್ದಕ್ಕಿದ್ದಂತೆ ಹೊರಗಿನಿಂದ ‘ಮುಗಿಯಿತೋ ಹಾಡು’ ಎನ್ನುವ ಧ್ವನಿ ಕೇಳಿಬಂದಿತು. ನೋಡಿದರೆ ಬಾಗಿಲಲ್ಲಿ ಡಿ.ಎಲ್‌.ಎನ್.‌ನಿಂತಿದ್ದಾರೆ. ಆ ದಿನ ತರಗತಿಯಲ್ಲಿ ನೇಮಿಚಂದ್ರನ ಲೀಲಾವತಿ ಪಾಠ, ಒಂದು ಪದ್ಯ ಅರ್ಥವಾಗಲಿಲ್ಲ. ಅರ್ಥ ಕೇಳಿದೆ. ತಕ್ಷಣ ಅವರು ‘ಇದೆಲ್ಲಾ ನಿನಗೆ ಎಲ್ಲಯ್ಯ ಅರ್ಥವಾಗುತ್ತದೆ ಪ್ರೇಮಗೀತೆಗಳಾದರೆ ಚೆನ್ನಾಗಿ ಅರ್ಥವಾಗುತ್ತೆ’ ಎಂದರು ನಗುತ್ತಾ.

ಡಿ.ಎಲ್‌.ಎನ್.‌ಅವರು ಎಂ.ಎ. ಓದುತ್ತಿದ್ದಾಗ ಅವರಿಗೆ ಕುವೆಂಪು ನಶ್ಯದ ಅಭ್ಯಾಸ ಮಾಡಿಸಿದ್ದರಂತೆ. ಕುವೆಂಪು ಅವರಿಂದ ನಶ್ಯ ದೂರವಾಗಿ ಇವರನ್ನು ಭದ್ರವಾಗಿ ಹಿಡಿದುಕೊಂಡಿತು. ಅದನ್ನು ಬಿಡಲು ಅವರಿಂದ ಸಾಧ್ಯವಾಗಲಿಲ್ಲ. ಒಮ್ಮೆ ಆರೋಗ್ಯ ಕೆಟ್ಟಿದ್ದಾಗ ‘ಸಾರ್‌ನಶ್ಯ ಬಿಡಬಹುದಲ್ಲ’ ಎಂದೆ. ‘ಹೇಳೋದು ಸುಲಭ, ನೀನು ಸಿಗರೇಟ್‌ಸೇದೋದು ಬಿಡ್ತೀಯಾ?’ ಎಂದು ನನ್ನನ್ನೇ ಪ್ರಶ್ನಿಸಿದರು. ನಶ್ಯದ ಸುದ್ದಿ ಎತ್ತಿದ್ದು ತಪ್ಪಾಯಿತೆಂದು ಸುಮ್ಮನಾದೆ.

ಬಹಳ ಹಿಂದೆ ಅವರು ಇಸ್ಪೀಟ್‌ಆಡುತ್ತಿದ್ದರಂತೆ. ಒಂದು ದಿನ ಬೆಳಿಗ್ಗೆ ಬಂದಾಗ ‘ಏನು ರಾತ್ರಿಯೆಲ್ಲಾ ಇಸ್ಪೀಟು ಜೋರಾಗಿತ್ತೋ’ ಎಂದರು. ರಾತ್ರಿಯಿಡೀ ನಾವು ಇಸ್ಪೀಟು ಆಡುವುದನ್ನು ತಿಳಿದುಕೊಂಡಿರಬೇಕು ಎಂದುಕೊಂಡೆ. ಆದ್ದರಿಂದ ಸುಳ್ಳು ಹೇಳುವುದರಲ್ಲಿ ಅರ್ಥವಿಲ್ಲವೆಂದು ನಿಜವನ್ನೇ ಹೇಳಿದೆ. ಯಾವ ಯಾವ ಆಟ ಬರುತ್ತೆ? ಎಂದು ಪ್ರಶ್ನಿಸಿದ್ದರೆ ನಾನು ಒಂದೆರೆಡು ಆಟಗಳ ಹೆಸರೂ ಹೇಳಿದೆ. ‘ನನಗೂ ೨೮ ಬರುತ್ತಯ್ಯಾ, ಆದರೆ ಇತ್ತೀಚೆಗೆ ಯಾರೂ ಆಡೋಕೆ ಸಿಕ್ಕೋಲ್ಲ ಒಂದಿನ ಆಡೋಣ ಬರ್ತೀಯಾ’ ಎಂದರು. ಅವರ ಜೊತೆಯಲ್ಲಿ ಆಡುವ ಧೈರ್ಯವೆಲ್ಲಿ ಬರಬೇಕು? ಮತ್ತೆಂದೂ ಆ ಸುದ್ದಿ ಎತ್ತಲಿಲ್ಲ. (ಆಡುವುದಕ್ಕೆ ಅವರಿಗೆ ವೇಳೆಯೆಲ್ಲಿ?)

ಡಿ.ಎಲ್‌.ಎನ್.‌ ಕಣ್ಣು ಮುಚ್ಚಿದಾಗ ಅವರಿಗೆ ಇನ್ನೂ ಅರವತ್ತೈದು ವರ್ಷ ತುಂಬಿರಲಿಲ್ಲ. ಸುಮಾರು ಒಂಬತ್ತು ವರ್ಷಗಳಿಂದ ಕಾಡುತ್ತಿದ್ದ ಹೃದ್ರೋಗ, ರಕ್ತದ ಒತ್ತಡ ಕೊನೆಗೂ ಅವರನ್ನು ಆಹುತಿ ತೆಗೆದುಕೊಂಡಿತು. ಆದರೆ ನಿವೃತ್ತರಾದ ಮೇಲೆ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರೂ ತೆಗೆದುಕೊಂಡಿದ್ದರೆ ಇನ್ನೂ ನಾಲ್ಕು ಕಾಲ ಇರುತ್ತಿದ್ದರೋ ಏನೋ! ಆದರೆ ನಿಘಂಟಿಗಾಗಿ ವಿಪರೀತ ಕೆಲಸ ಮಾಡುತ್ತಿದ್ದರು. ವಿಶ್ರಾಂತಿಯ ಯೋಚನೆಯೇ ಅವರಿಗೆ ಹೊಳೆಯುತ್ತಿರಲಿಲ್ಲ. ಹೀಗಾಗಿ ಸಾವು ಅವರನ್ನು ಬಹುಬೇಗ ಸಮೀಪಿಸಿತು.