ಡಿ.ಎಲ್‌.ಎನ್.‌ ಅವರನ್ನು ನೋಡಿ, ತೀ.ನಂ.ಶ್ರೀ. ಅವರ ಮರಣ ದುಃಖವನ್ನು ಮರೆಯುತ್ತಲಿದ್ದ ಕನ್ನಡ ಸಾಹಿತ್ಯ ಪ್ರಪಂಚ, ಡಿ.ಎಲ್‌.ಎನ್.‌ ಅವರ ನಿಧನವಾರ್ತೆಯಿಂದ ನಿಜಕ್ಕೂ ತತ್ತರಿಸಿಹೋಗಿದೆ. (೮.೫.೧೯೭೧)

ಬಿ.ಎಂ.ಶ್ರೀ, ಟಿ. ಎಸ್‌. ವೆಂಕಣ್ಣಯ್ಯ, ಎ. ಆರ್‌. ಕೃಷ್ಣಶಾಸ್ತ್ರಿಗಳ ಕಮ್ಮಟದಲ್ಲಿ ರೂಪುಗೊಂಡು, ಕುವೆಂಪು, ಡಿ. ಕೆ. ಭೀಮಸನರಾವ್‌, ಕೆ. ವೆಂಕಟರಾಮಪ್ಪ, ಎನ್‌. ಅನಂತರಂಗಾಚಾರ್‌ ಮೊದಲಾದವರ ಜತೆಯಲ್ಲಿ ವಿದ್ಯಾರ್ಥಿ ಜೀವನವನ್ನು ಕಳೆದು, ಸಂಶೋಧನ ವಿದ್ಯಾರ್ಥಿಯೆಂದು, ಓರಿಯೆಂಟಲ್‌ ರೀಸರ್ಚ್‌ ಇನ್‌ಸ್ಟಿಟ್ಯೂಟದ ಕನ್ನಡ ಪಂಡಿತರೆಂದು, ಮೈಸೂರಿನ ಮಹಾರಾಜಾ ಕಾಲೇಜು. ಯುವರಾಜಾ ಕಾಲೇಜು, ಬೆಂಗಳೂರಿನ ಸೆಂಟ್ರಲ್‌ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರೆಂದು, ಪರಿಷತ್ತು ಕೈಗೊಂಡ ನಿಘಂಟುವಿನ ಸಂಪಾದಕರೆಂದು ಬಹುಮುಖವಾಗಿ ದುಡಿದವರು, ಡಿ.ಎಲ್‌.ಎನ್.‌ ತಮ್ಮ ಜೀವನದ ಅವಧಿಯಲ್ಲಿ ಕನ್ನಡ, ಇಂಗ್ಲಿಷ್‌, ಸಂಸ್ಕೃತ, ತಮಿಳು, ತೆಲುಗು, ಪ್ರಾಕೃತ ಮೊದಲಾದ ಭಾಷೆಗಳನ್ನು ಕೈವರ್ತಿಸಿಕೊಂಡು, ಹಲವು ಶಾಸ್ತ್ರ ಹಲವು ಸಾಹಿತ್ಯಗಳ ಪರಿವಾರವನ್ನು ಕಟ್ಟಿಕೊಂಡು, ಕನ್ನಡದ ಕಣದಲ್ಲಿ ಇವರು ಮನದಣಿ ದುಡಿದರು. ಜಾಗತಿಕ ವಿದ್ವಾಂಸರ ಸಾಲಿನಲ್ಲಿ ನಿಲ್ಲಬಹುದಾದ ವಿದ್ವತ್ತನ್ನು ಸಂಪಾದಿಸಿದರು.

ಅಧಿಕಾರದ ಬಲ, ಸ್ವಪಕ್ಷಗಳ ಬೆಂಬಲ, ದುಡ್ಡಿನ ದೌಲತ್ತು, ಮೋಹಕ ಮಾತುಗಾರಿಕೆ ಇವಾವೂ ಇಲ್ಲದೆ ಕೇವಲ ಪಾಂಡಿತ್ಯದ ಸಂಪತ್ತಿನಿಂದ ಜನತೆಯ ಗಮನ, ಗೌರವಗಳನ್ನು ಗಳಿಸಿದವರು ಡಿ.ಎಲ್‌.ಎನ್.‌, “ಡಿ.ಎಲ್‌.ಎನ್.‌ಎಂದರೆ ಪಾಂಡಿತ್ಯ, ಪಾಂಡಿತ್ಯ’ವೆಂದರೆ ಡಿ.ಎಲ್‌.ಎನ್.‌ಹಳಗನ್ನಡ ಭಾಷೆ ಸಾಹಿತ್ಯಗಳ ವಿಷಯಕ್ಕಂತೂ ಹಲವರು ಹೇಳುವಂತೆ, ನಾನೂ ಬಲ್ಲಂತೆ ಅವರೊಂದು ಜಂಗಮ ಬೃಹತ್ಕೋಶ! ಹಳಗನ್ನಡದಲ್ಲಿ ಅವರಿಗಿಂತಲೂ ನಿಷ್ಟಾವಂತರಾದ ವಿದ್ವಾಂಸರನ್ನು ಸಧ್ಯದಲ್ಲಿ ಕಾಣುವುದು ಅವಶ್ಯಕವೆಂದೇ ನನ್ನ ಭಾವನೆ.” ಕನ್ನಡದ ಇನ್ನೊಂದು ದಿಗ್ಗಜ ತೀ.ನಂ.ಶ್ರೀ, ಹೇಳಿದ ಮಾತಿದು. ಇದು ಪ್ರಶಂಸೆಯಲ್ಲ, ಸರಿಯಾದ ವಿಮರ್ಶೆಯೆಂದು ನನ್ನಂತೆ ಎಲ್ಲರ ಅಭಿಪ್ರಾಯ.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಮುಖ್ಯಸ್ಥ ಪೀಠವನ್ನೇರುವ ಭಾಗ್ಯ ಅವರದಾಗದಿದ್ದರೂ, ಪೀಠವೇರಿದವರನ್ನೂ, ಪೀಠ ಏರಬೇಕಾದವರನ್ನೂ ಸಿದ್ಧಗೊಳಿಸಿದವರು; ಮೈಸೂರು ವಿಶ್ವವಿದ್ಯಾಲಯಕ್ಕೆ ಪಾಂಡಿತ್ಯದ ಭದ್ರಬುನಾದಿ ಹಾಕಿದವರು ಡಿ.ಎಲ್‌.ಎನ್‌. ೧೧ ಗ್ರಂಥ, ೭ ಮುನ್ನುಡಿ, ೧೨ ವಿಮರ್ಶಾಲೇಖನ, ೭೦ ಇತರ ಲೇಖನ ಇದು ಡಿ.ಎಲ್‌.ಎನ್‌. ಸಾಹಿತ್ಯಸಂಪತ್ತು. ಅವರ ಈ ಕೃಷಿ ಮೊತ್ತದಲ್ಲಿ ಕಡಿಮೆಯೆಂದು ವಾದಿಸುವವವರು ಸತ್ವದಲ್ಲಿ ಹಿರಿದೆಂದು ಒಪ್ಪಿಕೊಳ್ಳಲೇಬೇಕು. ಇತ್ತೀಚೆಗೆ ಬಂದ ಹತ್ತಿಪತ್ತು ಪುಸ್ತಕಗಳು, ಅವರು ವರ್ಗದಲ್ಲಿ ನೀಡಿದ ಉಪನ್ಯಾಸದ ವಿಸ್ತೃತರೂಪಗಳೆಂದು ಅವರ ಶಿಷ್ಯರೇ ಅಭಿಮಾನಪಟ್ಟು ಹೇಳುವುದರಿಂದ, ಅವರ ಸಾಹಿತ್ಯ ಕೃಷಿಯನ್ನು ಪುಸ್ತಕಸಂಖ್ಯೆಯಲ್ಲಿ ನೋಡದೆ, ಶಿಷ್ಯಸಂಖ್ಯೆಯಲ್ಲಿ ನೋಡುವುದು ನ್ಯಾಯವೆಂದು ತೋರುತ್ತದೆ. ಹಾಗೆ ನೋಡಿದರೆ, ಒಂದು ಇಡೀ ಪುಸ್ತಕದಿಂದ ಸಾಧ್ಯವಾಗದ ಬೆಳಕು ಅವರ ಒಂದು ಲೇಖನ ಒದಗಿಸುವುದರಿಂದ, ಅವರ ಕೃಷಿ ಸಣ್ಣದಲ್ಲವೆಂದೇ ನನ್ನ ಭಾವನೆ.

ಡಿ.ಎಲ್‌.ಎನ್‌. ಅವರ ವ್ಯಕ್ತಿತ್ವ ವಿಶೇಷತೆಯನ್ನು ಸಂಪಾದಕ, ಶಾಸ್ತ್ರಜ್ಞ, ಸಂಶೋಧಕ, ವಿಮರ್ಶಕ, ಪ್ರಾಧ್ಯಾಪಕ ಎಂದು ಬಿಡಿಸಿ ಹೇಳಬಹುದು.

ವಡ್ಡಾರಾಧನೆ ಅವರ ಸಂಪಾದನ ಸಾಮರ್ಥ್ಯಕ್ಕೆ ಒಂದು ಪರಮ ನಿದರ್ಶನ. ಅದರೊಂದಿಗೆ ನಡೆಸಿದ ೪೦ ವರ್ಷಗಳ ಅನುಸಂಧಾನದಿಂದಾಗಿ ಇತ್ತೀಚೆಗೆ ಸುದೀರ್ಘ ಪ್ರಸ್ತಾವನೆ, ಪರಿಪೂರ್ಣ ಪರಿಶಿಷ್ಟಗಳೊಂದಿಗೆ ಅದು ಮೊದಲಿನ ಮೂರುಪಟ್ಟು ಗಾತ್ರ ಪಡೆದು ಹೊರಬಂದಿತು. ಕನ್ನಡಕ್ಕೆ ಒಂದು ಅಪೂರ್ವ ಗದ್ಯಗ್ರಂಥ, ಅಪೂರ್ವಶುದ್ಧಿಯಲ್ಲಿ ಲಭಿಸಿತು. ಈ ದಾರಿಯಲ್ಲಿ ಪಂಪರಾಮಾಯಣ ಸಂಗ್ರಹ, ಸುಕುಮಾರಚರಿತಂ, ಸಿದ್ಧರಾಮಚಾರಿತ್ರ ಮೊದಲಾದ ಗ್ರಂಥಗಳ ಪರಿಷ್ಕರಣ ಹೊಂದಿ, ಪ್ರಕಟಗೊಂಡವು. ಈ ಸಂಸ್ಕರಣ ಪ್ರಸಂಗದಲ್ಲಿ ಅವರ ಬುದ್ಧಿ, ಮನಸ್ಸು ಯಾವ ರೀತಿ ದುಡಿಯುತ್ತಿದೆಯೆಂಬುದಕ್ಕೆ ‘‘‘‘ಮಾನಸೊಲ್ಲಾಸದಲ್ಲಿ ಕನ್ನಡ ಛಂದಸ್ಸು” ಎಂಬ ಲೇಖನವನ್ನು ನೋಡಬೇಕು.

ಎಲ್ಲ ಕ್ಷೇತ್ರಗಳಲ್ಲಿಯೂ ಎದ್ದುಕಾಣುವ ಡಿ.ಎಲ್‌.ಎನ್‌. ಅವರ ಶಾಸ್ತ್ರಮತಿ, “ಕನ್ನಡ ಗ್ರಂಥಸಂಪಾದನೆ” ಎಂಬ ಕೃತಿಯಲ್ಲಿ ಸಂಪೂರ್ಣ ಪ್ರಕಟಗೊಂಡಿದೆ. ಗ್ರಂಥ ಸಂಪಾದನೆಯ ವಿಧಾನಗಳನ್ನು ಕನ್ನಡಕ್ಕೆ ಅನ್ವಯಿಸಿ ಬರೆದ ಈ ಶಾಸ್ತ್ರಕೃತಿ ಕನ್ನಡದಲ್ಲಿ ಪ್ರಥಮ ಸಾಹಸ, ಪ್ರಥಮಸಾಧನೆ. ಅದರ ಪುಟಪುಟಗಳಲ್ಲಿ ಡಿ.ಎಲ್‌.ಎನ್‌. ಅವರ ಪ್ರಕಟಿತ ಅಪ್ರಕಟಿತ ಕೃತಿಗಳ ಅಧ್ಯಯನ ವ್ಯಾಪ್ತಿಯನ್ನು, ಸಾಹಿತ್ಯವ್ಯಾಸಂಗದ ಉದ್ದಗಲಗಳನ್ನು ಅರಿಯಬಹುದು.

ಸಂಶೋಧನೆ ಡಿ.ಎಲ್‌.ಎನ್‌. ಅವರ ಉಸಿರು. ಸಾಹಿತ್ಯ, ಶಾಸ್ತ್ರ. ಇತಿಹಾಸಗಳಲ್ಲೆಲ್ಲ ಇದು ಮಿಂಚಿನಂತೆ ಕಾರ್ಯಮಾಡಿದೆ. ಸಂಪಾದಿತ ಕೃತಿಗಳ ಮುನ್ನುಡಿಗಳೂ, ಪೊನ್ನನ ಭುವನೈಕರಾಮಾಭ್ಯುದಯ, ಕುಮುದೇಂದು ರಾಮಾಯಣ, ಧವಳನೆಂಬ ಹಾಡಿನಸ್ವರೂಪ ಇತ್ಯಾದಿ ಲೇಖನಗಳೂ ಅವರ ಸಾಹಿತ್ಯ ಸಂಶೋಧನೆಯ ಅಮೃತ ಫಲಗಳು. ಪಾಂಡಿತ್ಯಕ್ಕೆ ಸಂಬಂಧಪಟ್ಟ ಅವರ ಸಂಶೋಧನ ಶಕ್ತಿಯ ಉಜ್ವಲ ಉದಾಹರಣೆ ಶಬ್ದವಿಹಾರ ಎಂಬ ಚಿಕ್ಕ ಕೃತಿ. ಒಂದು ಶಬ್ದವನ್ನು ಹಿಡಿದುಕೊಂಡು ರೆಂಬೆ, ಕಾಂಡ ಗುಂಟ ಇಳಿದು, ಹಲವು ಬೇರುಗಳಲ್ಲಿ ಹರಿದಾಡಿ, ಮೂಲಬೇರನ್ನು ಮುಟ್ಟಿಹೇಳುವ ಅವರ ಸಾಹಸ ಇನ್ನೊಬ್ಬರಿಗೆ ಅಸಾಧ್ಯವೆಂಬ ಭಾವನೆಯನ್ನು ಹುಟ್ಟಿಸುತ್ತದೆ. ಒಂದೊಂದು ಶಬ್ದ ಯಾವ ಜಿಲ್ಲೆಯ, ಯಾವ ಊರಿನ , ಯಾವ ಸ್ಥಳದ ಶಾಸನದಲ್ಲಿದೆ ಯಾವ ಕವಿಯ, ಯಾವ ಕಾವ್ಯದ, ಯಾವ ಸಂದರ್ಭದಲ್ಲಿದೆ ಎಂದು ನಾಲಗೆಯ ತುದಿಯಲ್ಲಿ ನೆನಪಿಸಿಕೊಳ್ಳುವ, ಅಗಲಿಹೋದ ಅವುಗಳ ಸಂಬಂಧಿಪದಗಳನ್ನು ಅನ್ಯಭಾಷೆಗಳಿಂದ ಬೆರಳ ತುದಿಯಲ್ಲಿ ಎತ್ತಿ ತರುವ ಅವರ ಕೂರ್ಮಸಾಹಸ, ಒಂದು ಲೀಲೆಯೆಂದೇ ಹೇಳಬೇಕು.

ಡಿ.ಎಲ್‌.ಎನ್‌. ಅವರ ವಿಮರ್ಶೆ ಪಕ್ಷ ಪಂಗಡಗಳ ಘರ್ಷಣೆಯಲ್ಲ, ನ್ಯಾಯಾಧೀಶನ ತೀರ್ಮಾನ ಅವರ ದೃಷ್ಟಿಯಲ್ಲಿ ಪಂಪ, ಹರಿಹರ, ಕುಮಾರವ್ಯಾಸರು ಕನ್ನಡದ ಮಹಾಕವಿಗಳು. ಹರಿಹರ ಅವರ ಮೆಚ್ಚಿನ ಕವಿ. ಪುಷ್ಪದಂತ ಪುರಾಣ, ಅಗ್ಗಳದೇವ, ರುದ್ರಭಟ್ಟ, ಕುಮಾರವ್ಯಾಸನ ಕರ್ಣ ಮೊದಲಾದ ಲೇಖನಗಳು ಅವರ ನ್ಯಾಯದೃಷ್ಟಿಗೆ ನಿದರ್ಶನಗಳು. ಈ ಕಾಲದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸಬಲ್ಲ ಮಹಾಶಿಲ್ಪಿ ಅವರೊಬ್ಬರೇ ಎಂದು ಎಲ್ಲರ ಭಾವನೆಯಾಗಿತ್ತು. ಅವರ ನಿಧನ ಎಲ್ಲರನ್ನೂ ನಿರಾಶೆಗೊಳಿಸಿತು.

ಪಾಂಡಿತ್ಯ, ಸಂಶೋಧನೆಗಳ ಕಾಡಿನಲ್ಲಿ ಆನೆಯಂತೆ ನಡೆದ ಅವರ ಬರವಣಿಗೆ ಶುಷ್ಕವಾಗಿರದೆ ರಸವತ್ತಾಗಿದ್ದಿತು. “ಹಚ್ಚನೆಯ ಹುಲ್ಲುಗಾವಲ ಹರವಿನಲ್ಲಿ ಸ್ವೇಚ್ಛಯಾಗಿ ತಿರುಗಾಡುತ್ತ, ಸೊಂಪಾಗಿ ಕಾಣುವೆಡೆಗಳಲ್ಲಿ ತಂಗಿ, ಹಿಡಿಹುಲ್ಲನ್ನು ಕಬಳಿಸುವ ಹಸುವಿನಂತೆ ಇದೇ, ನನ್ನ ವ್ಯಾಸಂಗದ ಹವ್ಯಾಸ. ನನ್ನ ಕೊಠಡಿಯ ಆರಾಮಕುರ್ಚಿಯ ಮೇಲೆ ಮಲಗಿ, ಕೈಗೆ ಎಟುಕಿದ ಪುಸ್ತಕವನ್ನು ತೆರೆದು, ಓದುತ್ತ ಓದುತ್ತ, ಇಂತಹ ತಾಪತ್ರಯ ದೂರ ಸರಿದಂತೆಲ್ಲ ತನ್ಮಯತೆಯ ಮಡುವಿನಲ್ಲಿ ಮೆಲ್ಲಮೆಲ್ಲನೆ ಮುಳುಗಿ ಬಿಡುತ್ತೇನೆ. ಪಕ್ಕದ ಮೇಜಿನ ಮೇಲೆ ಇರುವ ಗಂಧದ ಕಡ್ಡಿಗಳು ಉಗುಳುವ ಹೊಗೆ, ಸುರುಳುಸುರುಳಿಯಾಗಿ ಅಂಕುಡೊಂಕಾಗಿ ಮೇಲೆ ಹರಡಿ, ಕೊಠಡಿಯ ಪರಿಮಿತಾಕಾಶದಲ್ಲಿ ಕರಗಿಹೋಗುವಂತೆ ನಾನೂ ಬಾರಿಬಾರಿಗೆ ಕರಗಿಹೋಗಬೇಕೆಂಬ ಹಂಬಲ ನನಗೆ ಹಿರಿದಾಗಿದೆ.” ಈ ಬರವಣಿಗೆಯಲ್ಲಿ ಹರಿಹರನ ಗದ್ಯತನವಿದೆ. ಸಾವಿರಾರು ಕೆಟ್ಟ ಪದ್ಯಗಳನ್ನು ಬರೆದವನನ್ನು ಕವಿಯೆನ್ನುವುದಕ್ಕಿಂತ ಇಂಥ ಗದ್ಯ ಬರೆದವನನ್ನು ಕವಿಯೆನ್ನುವುದು ಲೇಸು. ಕೇವಲ ಪದ್ಯಬರೆದ ಮಾತ್ರಕ್ಕೆ ರಾಷ್ಟ್ರಮಟ್ಟದ ಗೌರವ ನೀಡುವಂತೆ, ಇಂಥ ವಿದ್ವತ್‌ಪೂರ್ಣ ವ್ಯವಸಾಯಗೆಯ್ದವರಿಗೂ ನೀಡುವುದು ನ್ಯಾಯ.

ಡಿ.ಎಲ್‌.ಎನ್‌. ಅವರು ಪ್ರಥಮವರ್ಗದ ಪ್ರಾಧ್ಯಾಪಕರೆಂದು ಅವರ ಶಿಷ್ಯಕೋಟಿಯ ಒಮ್ಮತದ ಅಭಿಪ್ರಾಯ. ೬೦ ನಿಮಿಷಕ್ಕೆ ಬದಲು ೫೯ ನಿಮಿಷಕ್ಕೆ ಸಾಲುವಷ್ಟು ಪಾಠಸಾಮಗ್ರಿ ತಮ್ಮ ಹತ್ತಿರ ಇದ್ದರೆ ಅವರು ವರ್ಗ ನಡೆಸುತ್ತಿರಲಿಲ್ಲ. ಉದ್ವೇಗ, ಅಂದಾಜು, ಆತ್ಮವಂಚನೆ, ಅಪ್ರಾಮಾಣಿಕತೆ ಇವು ಒಮ್ಮೆಯೂ ವರ್ಗದಲ್ಲಿ ಸುಳಿಯಲಿಲ್ಲ. ವಿದ್ಯಾರ್ಥಿಗಳಲ್ಲಿ ವ್ಯಾಸಂಗದ ಹವ್ಯಾಸ ಬೆಳಸಿ, ಹಸಿವನ್ನು ಹಿಂಗಿಸುವ ದಾರಿ ತೋರಿಸಿ, ಆ ದಾರಿಯಲ್ಲಿ ಎಡವಿದಾಗ ಎತ್ತಿ ನಿಲ್ಲಿಸಿ ಮುನ್ನಡೆಸಿದರು. ಇದನ್ನು ನೆನಪಿಟ್ಟು ಅವರ ವಿದ್ಯಾರ್ಥಿಗಳು. ಮಿತ್ರರು ‘ಜ್ಞಾನೋಪಾಸಕ’, ‘ಹೊಸಬೆಳಕು’. ‘ಉಪಾಯನ’ ಎಂಬ ಸಂಭಾವನ ಗ್ರಂಥಗಳನ್ನು ಅರ್ಪಿಸಿ, ನಾಡಜನತೆ ಬೀದರ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರೆಂದು ಆರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಒಂದು ಪ್ರಸಂಗ

ಇವುಗಳಿಗಿಂತ ಡಿ.ಎಲ್‌.ಎನ್‌. ಅವರ ದೊಡ್ಡ ಆಸ್ತಿಯೆಂದರೆ ದೊಡ್ಡ ಮನಸ್ಸು ತಮ್ಮ ನಿಲುವಿಗೆ ತಕ್ಕ ಅಧಿಕಾರ ಸಿಗಲಿಲ್ಲವೆಂದು ಒಮ್ಮೆಯೂ ಅವರು ತುಟಿಬಿಚ್ಚಲಿಲ್ಲ, ಮನದಲ್ಲಿ ಆ ಭಾವನೆಯನ್ನು ಮೂಡಿಸಿಕೊಳ್ಳಲಿಲ್ಲ. ಇವರು ಸಂಪಾದಿಸಿದ ‘ಶಬ್ದಮಣಿ ದರ್ಪಣ’ವನ್ನು ವಿಮರ್ಶಿಸುತ್ತ ನಾನು ಬರೆದ ಒಂದೆರಡು ಮಾತುಗಳು ಡಿ.ಎಲ್‌.ಎನ್‌. ಅವರಿಗೆ ನೋವನ್ನುಂಟು ಮಾಡಿದವು ಎಂದು ನನ್ನ ಗೆಳೆಯರಿಂದ ತಿಳಿದಾಗ ನನಗೆ ನೋವಾಯಿತು. ಒಮ್ಮೆ ಮೈಸೂರಿಗೆ ಹೋಗುವ ಪ್ರಸಂಗ ಒದಗಿ ಬಂದಿತು. ಡಿ.ಎಲ್.ಎನ್‌. ಅವರ ಮನೆ ಹುಡುಕಿಕೊಂಡು ಹೋದೆ. “ಅವರ ಆರೋಗ್ಯ ಸರಿ ಇಲ್ಲ, ಬನ್ನಿ” ಎನ್ನುತ್ತ ಅವರ ಮಗಳು ಒಳಕೋಣೆಗೆ ಕರೆದುಕೊಂಡು ಹೋದಳು. ಅವರನ್ನು ನೋಡಿದ್ದು ಇದೇ ಮೊದಲ ಸಲ. ಆಜಾನುಬಾಹು ವ್ಯಕ್ತಿ ಓದುತ್ತ ಮಲಗಿದ್ದರು. ಶರಶಯನ ಮೇಲಿನ ಭೀಷ್ಮರ ನೆನಪಾಯಿತು. ಪರಿಚಯ ಮಾಡಿಕೊಳ್ಳುತ್ತಲೇ “ಏನಯ್ಯಾ, ನೀನು ವಯಸ್ಸಿನಲ್ಲಿ ಸಣ್ಣವನೆಂದು ಕೇಳಿದ್ದೆ. ಇಷ್ಟು ಸಣ್ಣವನೆಂದು ಭಾವಿಸಿರಲಿಲ್ಲ. ದರ್ಪಣದ ಮುಂದಿನ ತಮ್ಮ ಪ್ರಕರಣಗಳ ಬಗ್ಗೆ ಬರೆಯಲೇ ಇಲ್ಲ?’ ಎಂದು ಅವರೇ ಮಾತು ಆರಂಭಿಸಿದರು. “ನನ್ನಿಂದ ನಿಮಗೆ ನೋವಾಗಿದೆ ಎಂದು ಕೇಳಿದೆ. ಮುಂದಿನ ಪ್ರಕರಣಗಳ ಬರೆವಣಿಗೆ ನಿಲ್ಲಿಸಿದೆ… ವೀರಪಟ್ಟ ಸಂದರ್ಭದಲ್ಲಿ ಕಟುವಾಗಿ ಮಾತನಾಡಿದ ಕರ್ಣ, ಶರಶರಯನ ಸಂದರ್ಭದಲ್ಲಿ ಕ್ಷಮೆ ಕೇಳಲು ಬಂದ ಮನಸ್ಥಿತಿ ನನ್ನದಾಗಿದೆ…. ಮರೆವುದು ಮನದ ಉಮ್ಮಚ್ಚರಮಂ…..” ಎಂದು ಅಪರಾಧಿ ಭಾವನೆಯಿಂದ ನುಡಿದೆ. ದೊಡ್ಡದಾಗಿ ನಕ್ಕು “ಹಾಗೇನಿಲ್ಲ, ಸತ್ಯವನ್ನೇ ಬರೆದಿರುವಿ, ಕಟುವಾಗಿ ಬರೆಯಬಾರದಿತ್ತು” ಎಂದು ಮೃದುವಾಗಿಯೇ ನುಡಿದು, ಮಾತು ಬದಲಿಸಿ, ಸಾಹಿತ್ಯ ಅಧ್ಯಯನಗಳ ಬಗ್ಗೆ ಚರ್ಚೆ ಮುಂದುವರಿಸಿದರು.

ಸ್ವಲ್ಪ ಹೊತ್ತಿನ ಬಳಿಕ ಹೆಗಲ ಮೇಲೆ ಕೈಯಿಟ್ಟು, ಬಾಗಿಲವರೆಗೂ ನಡೆದು ಬಂದು ಬೀಳ್ಕೊಡುವಾಗ ದರ್ಪಣದ ಮಿಕ್ಕ ಪ್ರಕರಣಗಳ ಬಗ್ಗೆ ಬರೆದು ಪ್ರಕಟಿಸು, ಮುಂದಿನ ಆವೃತ್ತಿಯಲ್ಲಿ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಲು ಮರೆಯಲಿಲ್ಲ. ಕೆಲವು ದಿನಗಳ ಬಳಿಕ ಈ ವಿಷಯವನ್ನು ನೆನಪಿಸಿ ಕಾಗದವನ್ನೂ ಬರೆದರು. ದೋಷಗಳ ಪಟ್ಟಿ ಸಿದ್ಧಪಡಿಸಿ ನೇರವಾಗಿ ಅವರಿಗೇ ಕಳಿಸಿದೆ.

ಅವರು ತಮ್ಮ ಮುಂದಿನ ಆವೃತ್ತಿಯಲ್ಲಿ ಬರೆದ “ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಪ್ರೊ. ಮಲ್ಲಿನಾಥ, ಕಲಬುರ್ಗಿ ಎಂ.ಎ. ಅವರು ದರ್ಪಣಾವಲೋಕನ ಎಂಬ ಹೆಸರಿನಲ್ಲಿ ರೆಡು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಸೂತ್ರವೃತ್ತಿ ಟೀಕೆಗಳಲ್ಲಿ ಹಂಚಿಹೋಗಿರುವ ಸ್ಖಾಲಿತ್ಯಗಳನ್ನೆಲ್ಲ ಅವರು ತುಂಬ ಶ್ರಮವಹಿಸಿ ಕಂಡುಹಿಡಿದಿದ್ದಾರೆ. ಇಷ್ಟೇ ಅಲ್ಲದೆ ಮುಂದಿನ ಪ್ರಕರಣಗಳಲ್ಲಿ ಅಡಗಿರುವ ತಪ್ಪುಗಳನ್ನು ಹುಸಿ ತಪ್ಪುಗಳನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಿ, ಅವುಗಳನ್ನೆಲ್ಲ ಪಟ್ಟಿಮಾಡಿ ನನಗೆ ಕಳಸಿಕೊಡುವ ಉಪಕಾರವನ್ನು ಮಾಡಿದ್ದಾರೆ. ಇವರ ಲೇಖನಗಳು ಕಾರಣವಾಗಿ ಶಬ್ದಮಣಿದರ್ಪಣದ ಈ ಮುದ್ರಣ ಅದರ ಹಿಂದಿನ ಮುದ್ರಣಕ್ಕಿಂತ ಹೆಚ್ಚು ಸಮರ್ಪಕವಾಗಿದೆಯೆಂದು ಭಾವಿಸುತ್ತೇನೆ” ಎಂಬ ನಿರ್ವಿಕಾರ ಬರವಣಿಗೆಯನ್ನು ಓದಿದಾಗಲಂತೂ ನನ್ನನ್ನೇ ನಾನು ಹಳಿದುಕೊಂಡೆ, ಮನದಲ್ಲಿಯೇ ಮತ್ತೊಮ್ಮೊ ಅವರ ಕ್ಷಮೆ ಕೇಳಿಕೊಂಡೆ.

* ಮಾರ್ಗ, ಸಂ.೧, ಪು.೬೧೩