“ಶ್ರೀಮಾನ್ ಹಂಪ ನಾಗರಾಜಯ್ಯನವರಲ್ಲಿ ನಮಸ್ಕಾರ ಪೂರ್ವಕವಾದ ಬಿನ್ನಹಗಳು. ನಿಮ್ಮ ಪತ್ರಕ್ಕೆ ನಾನು ಈಗ ಉತ್ತರ ಬರೆಯುತ್ತಿದ್ದೇನೆ. ತಡವಾಯಿತು, ಕ್ಷಮಿಸಿ. ನೀವು ನನ್ನಿಂದ ಬರೆಸಲು ಬಯಸಿರುವ ‘ಪಂಪ ಭಾರತ – ಒಂದು ವಿಶ್ವಕಾವ್ಯ’ ಎಂಬ ವಿಷಯದ ಲೇಖನವನ್ನು ನಾನು ಈಗ ಬರೆಯಲು ಆಗುವುದಿಲ್ಲವೆಂದು ತಿಳಿಸಲು ವಿಷಾದಿಸುತ್ತೇನೆ. ನನಗೆ ದೈಹಿಕ ಆಲಸ್ಯದ ಕಾರಣವಾಗಿ ನಾನು ಹೆಚ್ಚಾಗಿ ಬುದ್ಧಿ ಕೆಲಸವನ್ನು ಮಾಡುವಂತಿಲ್ಲ. ನಿಮ್ಮಲ್ಲಿ ಯಾರಾದರೂ ಅದನ್ನು ಬರೆದರೆ ಲೇಸು. ಪೌರಸ್ತ್ಯ ಪಾಶ್ಚಾತ್ಯ ದೃಷ್ಟಿಗಳಿಂದ ವಿಶ್ವಕಾವ್ಯದ ಲಕ್ಷಣಗಳನ್ನು ಗಮನಿಸಿ ಆ ಲಕ್ಷಣಗಳು ಈ ಕಾವ್ಯದಲ್ಲಿ ಇವೆಯೇ ಎಂಬುದನ್ನು ಸ್ಥಾಪಿಸಿದರೆ ಸಾಕು, ಲೇಖನ ಸಿದ್ಧವಾಗುತ್ತದೆ. ಇಲಿಯಟ್‌ಅವರ What is a classic? ಎಂಬ ಲೇಖನವನ್ನೂ, ನಮ್ಮ ದೇಶದ ಕಾವ್ಯ ಮೀಮಾಂಸೆಯ ತತ್ವಗಳನ್ನೂ ಇಲ್ಲಿ ಪರಿಶೀಲಿಸಿ ಒಂದು ಇನ್ನೊಂದಕ್ಕೆ ಹೇಗೆ ಪರಿಪೋಷಕ ಎಂಬುದನ್ನು ವಿವರಿಸಬಹುದು ಅದಕ್ಕೆ ತಕ್ಕ ನಿದರ್ಶನಗಳನ್ನು ‘ಪಂಪ ಭಾರತ’ದಿಂದ ತೆಗೆದು ತೋರಿಸಬಹುದು. ಇದನ್ನು ನೀವೇ ಬರೆಯಲು ಸಮರ್ಥರು. ಹಾಗೆ ಮಾಡಿರಿ ಎಂದು ಬೇಡುತ್ತೇನೆ. ನೀವೆಲ್ಲ ಆರೋಗ್ಯವೆಂದು ಭಾವಿಸುತ್ತೇನೆ. ನನ್ನ ಶುಭಾಶಯಗಳು ನಿಮ್ಮೆಲ್ಲರಿಗೆ, ಇಂತೀ ನಮಸ್ಕಾರಗಳು” – ಇದು ನನ್ನ ವಿದ್ಯಾಗುರುವರೇಣ್ಯರಲ್ಲೊಬ್ಬರಾದ ದಿವಂಗತ ಡಾ. ಡಿ.ಎಲ್.ಎನ್. ಅವರು ೩೧.೩.೧೯೭೧ರಂದು ಬರೆದ ಕಾಗದದ ಒಕ್ಕಣೆ. ನನಗೆ ಬರೆದ ಹಲವಾರು ಕಾಗದಗಳಲ್ಲಿ ಇದೇ ಎರಡನೆಯದು. ಇದು ಬಂದ ಒಂದು ತಿಂಗಳು ಒಂದು ವಾರಕ್ಕೆ ಸರಿಯಾಗಿ ಅವರು ಇಹಲೋಕವನ್ನೇ ಬಿಟ್ಟು ಹೊರಟರು, ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿ.

ಅವರ ನೆನಪು ಎಂದೆಂದಿಗೂ ಒಂದು ಪುಣ್ಯ ಕಾರ್ಯ. ಮೂರು ವರ್ಷ ಅವರು ನನಗೆ ವಿದ್ಯಾದಾನ ಮಾಡಿದರು, ೧೯೫೬ ರಿಂದ ೫೯ರ ತನಕ. ರನ್ನನ ಅಜಿತ ಪುರಾಣ, ಪಂಪನ ವಿಕ್ರಮಾರ್ಜುನ ವಿಜಯ, ಛಂದಸ್ಸು ಅವರು ಬೋಧಿಸಿದ ಕೆಲವು ವಿಷಯಗಳು. ಅವರ ತರಗತಿಗಳು ಪಾಂಡಿತ್ಯ ಪ್ರಪಂಚದ ಪರ್ಯಟನವಾಗಿರುತ್ತಿದ್ದವು. ಅವರದು ಪೊಗದಸ್ತಾದ ಪಾಂಡಿತ್ಯ. ಆದರೆ ಇರು ಮರುಳೆ ಶುಷ್ಕ ವೈಯಾಕರಣ ಎಂಬ ಜಾತಿಗೆ ಸೇರಿದವರಲ್ಲ. ಪಂಪ ಭಾರತದ ನಾಲ್ಕನೆಯ ಆಶ್ವಾಸವನ್ನು ಸಾಮಾನ್ಯವಾಗಿ ಎಲ್ಲರೂ ಹಾರಿಸಿಬಿಡುತ್ತಾರೆ. ಆದರೆ ಅವರು ಅದನ್ನೂ, ಒಂದು ಪದ್ಯ ಬಿಡದೆ ಬೋಧಿಸಿದ್ದು ಮರೆಯುವಂತಿಲ್ಲ. “ಪಂಪ ಮಹಾಕವಿ ಎಂಬುದನ್ನು ಈ ಭಾಗದಲ್ಲೂ ಚೆನ್ನಾಗಿ ಕಾಣಬಹುದು. ಸೂಳೆಯರ ಬಾಳನ್ನೂ ಆ ಮಹಾಕವಿ ಎಷ್ಟು ಚೆನ್ನಾಗಿ ಕಂಡಿದ್ದಾನೆ ನೋಡಿ. ಇದು ಜೀವಂತವಾದ ಸಾಹಿತ್ಯ” ಎಂದು ಅವರು ಹೇಳುತ್ತಿದ್ದರು.

ನಮ್ಮ ಮಧ್ಯಕಾಲೀನ ಉತ್ತರ ಪತ್ರಿಕೆಗಳನ್ನು ಕೂಡ ಆಮೂಲಾಗ್ರವಾಗಿ ಒಂದು ಸಾಲು ಶಬ್ದ ಬಿಡದೆ ಓದುತ್ತಿದ್ದರು. ಸುಮ್ಮನೆ ಊಹೆ ಮಾಡಿ ಬರೆದಿದ್ದರೆ ‘ಆಧಾರ ಎಲ್ಲಿ?’ ಎಂದೂ ‘ಉಡಾಫೆ’ ‘Gas’ ‘ಗಫ’ ಎಂದೂ ಪಕ್ಕದಲ್ಲಿ ಗುರುತು ಹಾಕಿ ಸೂಚಿಸಿಬಿಡುತ್ತಿದ್ದರು. ಒಮ್ಮೆ ನನ್ನ ಒಡನೋದಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಮಂಕುತಿಮ್ಮನ ಕಗ್ಗ, ಅನುಭಾವದ ಮಗ್ಗ, ಸಗ್ಗಕೇರಲು ಹಗ್ಗ ಎಂದೆಲ್ಲ ಬರೆದಿದ್ದ ಗುರುಗಳು ತರಗತಿಯಲ್ಲಿ ಅದನ್ನು ತಂದು ಓದಿದರು. ಅವರು ಓದಿದ ಧಾಟಿಯಲ್ಲಿ ಮೆಚ್ಚುಗೆಯಿರುವಂತೆ ತೋರುತ್ತಿತ್ತು. ‘ಯಾರಯ್ಯಾ ಇದನ್ನು ಬರೆದದ್ದು?’ ಎಂದರು. ಒಡನೋದಿ ಒಡನೆಯೇ ಪುಟ್ಟಿದೆದ್ದು ‘ನಾನು ಸಾರ್‌’ ಎಂದ. ಓಜರು ಮತ್ತೆ ಅದನ್ನು ಓದಿ ‘ಆ ಹಗ್ಗಕ್ಕೆ ನೇಣು ಹಾಕಿಕೋ! ಅಲ್ಲಯ್ಯಾ ಮಂಕು ತಿಮ್ಮನ ಕಗ್ಗ ಸ್ಫೂರ್ತಿಯಿಂದ ಸಹಜವಾಗಿ ಮೂಡಿಬಂದ ಶುದ್ಧ ಕಾವ್ಯವಲ್ಲ. ಅದನ್ನು ಬೇಕಾದರೆ ನೀತಿ ಕಾವ್ಯ ಎಂದು ಕರೆಯಬಹುದೇನೋ! ವಿಮರ್ಶೆಯಲ್ಲಿ ಎಚ್ಚರವಾಗಿರಬೇಕು’ ಎಂದು ತಿಳಿಸಿದರು.

ನಾನು ಎರಡನೆಯ ವರ್ಷದ ತರಗತಿಗೆ ೧೯೫೬ರಲ್ಲಿ ಹೋದಾಗ ಅವರು ಮಹಾರಾಜಾ ಕಾಲೇಜಿಗೆ ಬೆಂಗಳೂರು ನಿಘಂಟು ಕಚೇರಿಯಿಂದ ಮತ್ತೆ ಹಿಂತಿರುಗಿ ಬಂದರು. ಅವರು ಪಾಠ ಹೇಳಲು ಬಂದ ಮೊಟ್ಟಮೊದಲನೆಯ ತರಗತಿಯೇ ಸ್ವಲ್ಪ ಬಿರುಸಾಯಿತು. ತಲೆ ತಗ್ಗಿಸಿ ಒಂದೇ ಸಮನೆ ರನ್ನನ ಅಜಿತ ಪುರಾಣಕ್ಕೆ ಪೀಠಿಕೆಯಾಗಿ ಜೈನಧರ್ಮ ಮತ್ತು ಜೈನ ಪುರಾಣ ಕುರಿತು ಒಂದು ಗಂಟೆ ಕಾಲ ಹತ್ತಾರು ಉಪಯುಕ್ತ ವಿಚಾರಗಳನ್ನು ನಿರೂಪಿಸಿದರು. ನಾವು ಏನಾದರೂ ಬರೆದುಕೊಂಡು ಬಂದಿದ್ದಾರೇನೋ ಎಂದು ನೋಡಿದರೆ, ಅವರ ಬಳಿ ಅಜಿತ ಪುರಾಣ ಹೊರತು ಮತ್ತೇನೂ ಇರಲಿಲ್ಲ. ಅಂದೇ ಆ ವೇಳೆಗಾಗಲೇ ಕೇಳಿದ್ದ ಅವರ ಜಿಗುಟಾದ ನೆನಪಿನ ಬಲದ ನಿಕಟ ಪರಿಚಯವಾಯಿತು. ಒಂದು ಗಂಟೆ ಕಳೆದದ್ದೇ ತಿಳಿಯಲಿಲ್ಲ. ತರಗತಿ ಮುಗಿದೊಡನೆ ನನ್ನ ಇನ್ನೊಬ್ಬ ಒಡನೋದಿ ‘ಸಾರ್‌, ವಡ್ಡಾರಾಧನೆಗೆ ಮುನ್ನುಡಿ ಪೀಠಿಕೆ ಟಿಪ್ಪಣಿ ಯಾವಾಗ ಬರೆಯುತ್ತೀರಿ ಸಾರ್‌’ ಎಂದು ವಿನಯ ಗೌರವದಿಂದ ಕೇಳಿದ. ಕೂಡಲೇ ಗುರುಗಳು ಕೆರಳಿದರು. ಅದುವರೆಗೂ ಬಗ್ಗಿಸಿದ್ದ ತಲೆಯನ್ನು ಹಾವಿನ ಹೆಡೆಯಂತೆ ಎತ್ತಿ ‘ಇದೇ ತಲೆಹರಟೆ ಎನ್ನುವುದು. `That is none of your business’ ಎಂದು ರೇಗಿದರು. ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತಾಯಿತು. ಗುರುಗಳು ಬಹಳ ಗರಮ್‌ಎಂದು ಅಂದುಕೊಂಡೆವು.

ಆದರೆ ಅದೆಲ್ಲಾ ಕೆಲವು ಕ್ಷಣಗಳವರೆಗೆ ಮಾತ್ರ. ಏಕೆಂದರೆ ತರಗತಿಯಿಂದ ಹೊರಗೆ ಬಂದೊಡನೆಯೇ ಆ ಗೆಳೆಯನನ್ನು ಹತ್ತಿರಕ್ಕೆ ಕರೆದರು. ಬೆನ್ನ ಮೇಲೆ ಕೈ ಹಾಕಿದರು. ‘ನೋಡಪ್ಪಾ, ವಡ್ಡಾರಾಧನೆಗೆ ಪೀಠಿಕೆ ಬರೆಯಲು ನನಗೆ ಹಂಬಲವಿಲ್ಲವೆನ್ನಬೇಡ. ಅದು ಅಷ್ಟು ಸುಲಭದ ಕೆಲಸವಲ್ಲ. ಅನೇಕ ಸಿಕ್ಕುಗಳಿವೆ. ಅವನ್ನೆಲ್ಲಾ ಹೆಕ್ಕಿ ನೋಡುತ್ತಿದ್ದೇನೆ. ಡಾ. ಆ.ನೇ. ಉಪಾಧ್ಯೆಯವರಿಗೂ ನನಗೂ ಕೆಲವು ಭಿನ್ನಾಭಿಪ್ರಾಯಗಳಿವೆ ಸಮಸ್ಯಗೆ ಸಮಾಧಾನ ದೊರೆತಾಗ ಸಂತೋಷದಿಂದ ಬರೆಯುತ್ತೇನೆ’ ಎಂದೆಲ್ಲಾ ಹೇಳಿದರು. ಕೋಪ, ವಾತ್ಸಲ್ಯದ ಕಾವಿಗೆ ಕರಗಿಹೋಯಿತು.

೧೯೫೫ರ ಬೇಸಿಗೆಯಲ್ಲಿ ಮೈಸೂರನಲ್ಲಿ ೩೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ತುಮಕೂರಿನ ಕಾಲೇಜಿನಲ್ಲಿ ಇಂಟರ್‌ಮಿಡಿಯೇಟ್‌ಪರಿಕ್ಷೆಗೆ ಕೂತಿದ್ದೆ ಕನ್ನಡದ ಒಲವು ಮೊದಲಿಂದ. ಮೈಸೂರಿಗೆ ಸಮ್ಮೇಳನ ನೋಡಲು ಹೋಗಿದ್ದೆ. ನನ್ನ ಹಿರಿಯ ಗೆಳೆಯರಲ್ಲೊಬ್ಬರಾದ ಶ್ರೀ ಜಿ. ಬ್ರಹ್ಮಪ್ಪನವರೊಡನೆ ಮಹಾರಾಜಾ ಕಾಲೇಜು ವಿದ್ಯಾರ್ಥಿನಿಲಯದ ಕೊಠಡಿಯೊಂದರಲ್ಲಿ ಕುಳಿತಿದ್ದ. ಆಗ ಅಲ್ಲಿಗೆ ಡಿ.ಎಲ್‌.ಎನ್‌. ಅವರು ಬಂದರು. ಅದೇ ಅವರನ್ನು ಮೊದಲ ಸಲ ಕಂಡದ್ದು. ಶ್ರಿ ಕಾ.ಸ. ಧರಣೇಂದ್ರಯ್ಯ, ‘ಜೀಬ್ರ’ ಮೊದಲಾದವರಿಂದ ಅವರ ಬಗೆಗೆ ಕೇಳಿದ್ದೆ. ಅಜಾನುಬಾಹು, ಪಾಂಡಿತ್ಯದಿಂದೆಂಬಂತೆ ನಸು ಬಾಗಿದ ದೇಹ. ಮುಚ್ಚು ಕೋಟು. ಪೇಟ, ಕೈಯಲ್ಲಿ ಕೊಡೆ, ಆಗತಾನೆ ಹೊರಬಂದಿದ್ದ ಆದಿಪುರಾಣ ಸಂಗ್ರಹ ಹಿಡಿದಿದ್ದೆ. ಕೇಳಿದರು. ಕೋಟ್ಟೆ ಹಾಗೇ ತೆರೆದರು. ಬಂದ ಒಂದು ಪುಟದಿಂದ ಗದ್ಯ ಓದಿದರು. ‘ಅರೇ! ಇದು ಗದ್ಯ ಅಲ್ಲ ಕಣಯ್ಯಾ, ಕಂದ ಪದ್ಯ!’ ಎಂದರು. ಅವರ ಆಳವಾದ ಅಭ್ಯಾಸದ ಪ್ರಥಮ ಪರಿಚಯವದು.

ತೀನಂಶ್ರೀ-ದೋಲನ ಪುಷ್ಕಳವಾದ ಪಾಂಡಿತ್ಯವೃಕ್ಷದ ಎರಡು ಅಮೃತ ಫಲಗಳು. ಅವರಿಬ್ಬರಿಗೂ ಒಟ್ಟಿಗೆ ಬರುವಾಗ ದೂರದಿಂದ ನೋಡಿದರೆ ಅವಳಿ ಜವಳಿಗಳಾಗಿ ಕಾಣುತ್ತಿದ್ದರು. ಅವರಿಬ್ಬರೂ ವಿದ್ಯಾಗುರುಗಳಾಗಿದ್ದರೆಂದು ಹೇಳಿಕೊಳ್ಳುವುದೇ ದೊಡ್ಡ ಹೆಮ್ಮ. ಅದೇ ಹಿರಿಯ ಪದವಿ. ದೊಲನರವರು ತರಗತಿಯಲ್ಲಿ ಕುಳಿತೇ ಪಾಠ ಹೇಳುತ್ತಿದ್ದರು. ಅವರು ಕುರ್ಚಿ ಬಿಟ್ಟು ಏಳುವುದು ಅಪರೂಪ. ಅವರು ಎದ್ದು ಕರಿಹಲಗೆಯ ಬಳಿ ಹೋದರೆಂದರೆ ಸಾಕು ಅಂದು ನಮಗೆ ರಸಗವಳ ಕಾದಿರುತ್ತಿತ್ತು. ಅನೇಕ ಸಂಗತಿಗಳನ್ನು ಕೇವಲ ನೆನಪಿನ ಬಲದಿಂದಲೇ ನಿರವಿಸುತ್ತಿದ್ದರು. ಯಾವುದಾದರೂ ಒಂದು ಅಪೂರ್ವ ಶಬ್ದ ತೆಗೆದುಕೊಂಡರೆ ಅದರ ಜಾತಕದ ರೂಪರೇಖೆಗಳನ್ನೆಲ್ಲ ವಕ್ಕಾಣಿಸುತ್ತಿದ್ದರು.

ಗುರುಗಳಿಗೆ ಗ್ರಂಥ ಸಂಪಾದನಾ ಶಾಸ್ತ್ರ ಕರತಲಾಮಲಕ. ಓಲೆಗರಿಯೆಂದರೆ ಪಂಚ ಪ್ರಾಣ. ಒಮ್ಮೆ, ೧೯೫೯ ರಲ್ಲಿ ಸಾಲಿಗ್ರಾಮದಲ್ಲಿ ಗುಣವರ್ಮನ ಹರಿವಂಶನ ಪ್ರತಿಯಿದೆಯೆಂಬ ವದಂತಿ ಕೇಳಿದರು. ನಾನಾಗ ಮಂಡ್ಯ ಕಾಲೇಜಿನಲ್ಲಿ ಅಧ್ಯಾಪಕ. ಹೇಳಿ ಕಳಿಸಿದರು. ಹೋದೆ. ವಿಷಯ ತಿಳಿಸಿದರು. ‘ಸಾಲಿಗ್ರಾಮಕ್ಕೆ ಹೋಗಿ ಎಲ್ಲ ಜೈನರ ಮನೇನೂ ತಪಾಸಣೆ ಮಾಡಬೇಕು’ ಎಂದರು. ‘ಆಗಲಿ ಸಾರ್‌’ ಎಂದೆ. ‘ಯಾವಾಗ ಹೋಗ್ತಿ?’ ಕೇಳಿದರು. ‘ಯಾವಾಗಾದ್ರೂ ನಿಧಾನವಾಗಿ ಹೋಗಣ ಬಿಡಿ ಸಾರ್‌’ ‘ಅಯ್ಯೋ ನಿನ್ನಾ! ಯಾವಾಗಾದ್ರೂ ಹೋಗೋದಿದ್ರೆ ನಿನಗ್ಯಾಕಯ್ಯ ಹೇಳಿಕರೆಸಬೇಕಿತ್ತು? ಈ ದಿನವೇ ಹೊರಡು’ ಎಂದು ಗಡಸಾಗಿ ಅಂದರು. ಅದರಂತೆ ಹೋಗಿ ಬಂದೆ. ಇದ್ದ ಹರಿವಂಶಗಳೆಲ್ಲ ನೇಮಿಜಿನೇಶ ಸಂಗತಿ (ಮಂಗರಸನದು) ಆಗಿದ್ದುವು.

ಅವರ ಅವ್ಯಾಜ ಅಹೇತುಕ ಶಿಷ್ಯವಾತ್ಸಲ್ಯ ಅಷ್ಟಿಷ್ಟಲ್ಲ. ಮನೆಗೆ ಹೋದಾಗಲೆಲ್ಲ ತಿಂಡಿ ಊಟ ಇಲ್ಲವೇ ಕಡೆಗೆ ಕಾಫಿಯೋ ನೀರು ಮಜ್ಜಿಗೆಯೋ ತೆಗೆದುಕೊಳ್ಳಲೇ ಬೇಕಾಗುತ್ತಿತ್ತು. ಸರಸವಾದ ಸಂಭಾಷಣೆ ನಡೆಸುತ್ತಿದ್ದರು. ಯಾರು ಮನೆಗೆ ಹೋದರೂ ಮೊದಲು ‘ಕುಳಿತುಕೊಳ್ಳಿ’ ಎಂದು ಹೇಳುತ್ತಿದ್ದರು. ‘ಯಾವಾಗ ಬಂದ್ರಿ?’ ‘ಮನೆಯಲ್ಲಿ ಎಲ್ಲ ಚೆನ್ನಾಗಿದಾರೋ?’ ‘ನಿಮ್ಮ ಹುಡುಗ ಹರ್ಷ ಹೇಗಿದಾನಯ್ಯಾ’ ಇತ್ಯಾದಿಯಾಗಿ ಮಾತು ಮುಂದುವರಿಯುತ್ತಿತ್ತು. ನಶ್ಯ ವಿಶೇಷವಾಗಿ ಉಪಯೋಗಿಸುತ್ತಿದ್ದರು. ಅವರ ಕರವಸ್ತ್ರಗಳಿಗೆಲ್ಲ ನಶ್ಯದ ಬಣ್ಣವೇ ಬಂದಿರುತ್ತಿತ್ತು. ಅದರಿಂದ ಶಿಷ್ಯರಾರೂ ಬೇಸರ ಪಟ್ಟುಕೊಂಡದ್ದಲ್ಲ. ಅವರು ಉಸಿರಾಡುತ್ತಿದ್ದೆ ಹಾವಿನ ಬುಸುಗುಟ್ಟುವಿಕೆಯ ಸದ್ದಾಗುತ್ತಿತ್ತು. ಸ್ಥೂಲ ಶರೀರದ ಕಾರಣದಿಂದ ಹಾಗಾಗುತ್ತಿದ್ದಿರಬೇಕು. ಚೆನ್ನಾಗಿ ಗೊರಕೆ ಕೂಡ ಹೊಡೆಯುತ್ತಿದ್ದರು.

ಒಂದು ಸಲ ೧೯೫೮ರಲ್ಲಿ ಅವರನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದೆ ಮೈಸೂರಿನಿಂದ ಪ್ರಥಮದರ್ಜೆ ಬೋಗಿಯಲ್ಲಿ ಅವರು ನಾನು ಎಸ್‌.ವಿ. ರಂಗಣ್ಣನವರು ಕುಳಿತಿದ್ದೇವೆ. ಮಧ್ಯಾಹ್ನ. ಆಗ ತಾನೆ ಊಟಮಾಡಿ ಬಂದಿದ್ದೆವು. ಅವರು ಕೆಲವೇ ನಿಮಿಷಗಳಲ್ಲಿ ತೂಗಡಿಸುತ್ತ ನಿದ್ರಾವಶರಾದರು. ಗೊರಕೆಗೆ ಶುರುಮಾಡಿದರು. ರಂಗಣ್ಣನವರು ನಾನು ಹುಡುಗ ಏನು ಭಾವಿಸುವೆನೊ ಎಂದು ನನ್ನ ಕಡೆ ನೋಡಿದರು. ನಾನು ಕಿಟಕಿಯಾಚೆ ನೋಡಿದೆ. ಪಾಂಡವಪುರಕ್ಕೆ ರೈಲು ಬಂದಾಗ ಗುರುಗಳಿಗೆ ಎಚ್ಚರವಾಯಿತು. ‘ಏನಯ್ಯಾ ಈಗ ಎಲ್ಲಿದ್ದಿವಿ?’ ಎಂದು ಕೇಳಿದರು. ‘ಪಾಂಡವಪುರ ಸಾರ್‌’ ‘ಇಷ್ಟು ಬೇಗ ಇಲ್ಲಿಗೆ ಬಂದಿದೀವೆಯಾ?’ ‘ಹೌದು ಸಾರ್‌, ಆದರೆ ಗೊರಕೆ ಶಬ್ದ ರೈಲು ಶಬ್ದಕ್ಕಿಂತ ಜೋರಾಗಿತ್ತು’ ಎಂದು ಧೈರ್ಯ ಮಾಡಿ ಹೇಳಿದೆ. ಜೋರಾಗಿ ನಕ್ಕು ಬಿಟ್ಟರು! ಅಬ್ಬ! ಅದೆಂಥ ಮಗುವಿನ ನಿಷ್ಕಲ್ಮಶ ನಗೆಯನ್ನು ಚಿಮ್ಮಿಸಿದರು!

ಕ್ರಿಕೆಟ್‌ ಟೆಸ್ಟ್‌ ಪಂದ್ಯಗಳ ಕಾಲದಲ್ಲಿ, ಒಂದೆರಡು ನಿಮಿಷ, ವೀಕ್ಷಕ ವಿವರಣೆ ಕೇಳುತ್ತಾ, ತಡವಾಗಿ ತರಗತಿಗೆ ಹೋದರೆ, ಅದರ ಸುಳಿವು ಹಿಡಿದು ‘ಎಷ್ಟಯ್ಯಾ ಸ್ಕೋರು?’ ಎಂದು ಕೇಳುತ್ತಿದ್ದರು. ಪುಟ್ಪಾಲ್‌, ಟೆನಿಸ್‌ಆಟ ಆಡಿದವರು. ಅಷ್ಟೇ ಆಸಕ್ತಿ ಉಳಿದ ಆಟಗಳಲ್ಲಿ.

ಅವರು ಎಲ್ಲ ದೃಷ್ಟಿಗಳಿಂದಲೂ ಶ್ರೇಷ್ಠ ಗುರುಗಳಾಗಿದ್ದರು. ಅಕ್ಷರ ಮಾತ್ರ ಕಲಿಸಿದವರನ್ನೂ ಗುರುವೆಂದು ಕರೆಯಬೇಕಂತೆ. ಕನ್ನಡದ ಸಿರಿಯನ್ನೇ ತೆರೆದು ತೋರಿದ ಈ ಓಜರನ್ನು ಅದೆಷ್ಟೆಂದು ಮಾನ್ಯ ಮಾಡುವುದೋ ತಿಳಿಯದಾಗಿದೆ. ಈ ಗುರುಗಳನ್ನು ಕಳೆದುಕೊಂಡ ನಾವು, ತಂದೆಯನ್ನು ಕಳೆದುಕೊಂಡ ಮಕ್ಕಳಂತಾಗಿದ್ದೇವೆ. ಅವರ ಸಾವಿನಿಂದ ಪರಿಶುದ್ಧ ಪಾಂಡಿತ್ಯದ ದೊಡ್ಡಬೆಲೆ, ದೊಡ್ಡತಲೆ ಹೋದಂತಾಗಿದೆ.

* ಕನ್ನಡನುಡಿ (ಸಂ.೩೪, ಸಂ.೧೫, ೧೬) ಪು.೮