ನನಗೆ ಕಲ್ಪಿಯ ಕಾಣ್ಕೆ – ಕಣ್ಣು ಕೊಟ್ಟ ನೆಚ್ಚಿನ ಓಜ ದೋಲನರವರು ಅರಿವಿನ ಹೊಸ ಬಾಳಿಗೆ ದಾರಿ ತೋರಿದವರು. ಎರಡು ವರ್ಷ ಬಿ.ಎ., ಆನರ್ಸ, ಹಾಗೂ ಒಂದು ವರ್ಷ ಎಂ.ಎ., ವಿದ್ಯಾರ್ಥಿನಿಯಾಗಿ, ಅವರ ವಿದ್ಯಾದಾನದಲ್ಲಿ ಪಾಲ್ಗೊಂಡ ಪುಣ್ಯ ನನ್ನದಾಯಿತು. ತರಗತಿಯಲ್ಲಿ ಅವರ ಮುಂದೆ ಕುಳಿತ ನಮಗೆ ಕ್ಷಣ ಕ್ಷಣಕ್ಕೂ ವಿಸ್ಮಯ ಮೂಡುವ ವಿದ್ಯಾಸಾಗರದ ಮುಂದೆ ಕುಳಿತಂತೆ ಭಾಸವಾಗುತ್ತಿತ್ತು. ಅವರು ತಮ್ಮ ಪಾಂಡಿತ್ಯಸಾಗರದಲ್ಲಿ ನಮ್ಮನ್ನು ಮುಳುಗಿಸಿ, ಹರಹಿನಲ್ಲಿ ತೇಲಿಸಿ ಜ್ಞಾನದ ಬೆಳಕನ್ನು ನೀಡಿದವರು. ನನ್ನ ಬಗ್ಗೆ ಅವರು ಶಿಷ್ಯವಾತ್ಸಲ್ಯಕ್ಕಿಂತಲೂ ಪುತ್ರಿವಾತ್ಸಲ್ಯವನ್ನೇ ಹೆಚ್ಚಾಗಿ ತೋರುತ್ತಿದ್ದರು. ಅವರು ಹೆಣ್ಣು ಮಕ್ಕಳನ್ನು ಕಾಣುತ್ತಿದ್ದ ರೀತಿ ಶಾಲಾ ಕಾಲೇಜಿನಲ್ಲಿ ಕಲಿಸುವವರಿಗೆಲ್ಲಾ ಒಂದು ಮಾದರಿಯಾಗಿತ್ತು.

ನಾನು ಕೆಲಸಕ್ಕೆ ಸೇರಿದ ಮೇಲೆ ಕೂಡಾ ಕಡೆಯಪಕ್ಷ ವರ್ಷಕ್ಕೊಮ್ಮೆಯಾದರೂ ಅವರ ದರ್ಶನ ಪಡೆಯುತ್ತಿದ್ದೆ. ಆಗ ನನಗೆ ಗುರುವನ್ನು ಕಾಣುವ ಸಂತಸ ಒಂದು ಕಡೆ. ಆದರೆ ಎಲ್ಲಿ ಏನನ್ನು ಕೇಳುವರೋ ಎನ್ನುವ ಅಳುಕು ಒಂದು ಕಡೆ. ಏಕೆಂದರೆ ಅವರನ್ನು ಕಾಣುತ್ತಿದ್ದಂತೆಯೇ ‘ಏನು ಮಾಡುತ್ತಿದ್ದೀರಿ?’ ಎನ್ನುವುದೇ ಅವರ ಮೊದಲ ಪ್ರಶ್ನೆ ಯಾಗಿರುತ್ತಿತ್ತು. ಅನಂತರ ಅವರೇ ‘ನಿಮ್ಮ ಲೇಖನ ಓದಿದೆ, ಬರವಣಿಗೆಯನ್ನು ಮುಂದುವರಿಸಿ’ ಎನ್ನುತ್ತಿದ್ದರು. ಆಗ ನನಗೆ ನಿರಾಳವಾಗಿ ಉಸಿರಾಡುವಂತೆ ಆಗುತ್ತಿತ್ತು. ಮಾಡುತ್ತಿದ್ದ ಸ್ವಲ್ಪ ಕೆಲಸವನ್ನು ಅವರ ಮುಂದೆ ಹೇಳಿಕೊಳ್ಳುವ ಧೈರ್ಯ ನನಗಂತೂ ಇರಲಿಲ್ಲ.

ಕಾಲೇಜಿನಲ್ಲಿ ಪಾಠ ಮಾಡುವಾಗ, ಒಮ್ಮೊಮ್ಮೆ ನನಗೆ ಮೂಡುತ್ತಿದ್ದ ಸಂದೇಹಗಳನ್ನು ಅವರ ಮುಂದೆ ಅಳುಕಿನಿಂದಲೇ ಇಡುತ್ತಿದ್ದೆ. ಎಲ್ಲಿ ಗದರಿಸುವರೋ ಎನ್ನುವ ಭೀತಿ ಇದ್ದೇ ಇರುತ್ತಿತ್ತು. ಆದರೆ ಅವರಿಂದ ಬೈಸಿಕೊಳ್ಳುವುದೂ ಒಂದು ಭಾಗ್ಯ ವಿಶೇಷವೆಂದೇ ಭಾವಿಸಿದ್ದೆ ನಾನು. ಆದರೆ ಅವರಾದರೋ ನನ್ನ ಎಲ್ಲಾ ಸಂದೇಹಗಳನ್ನು ಬಹುಮಟ್ಟಿಗೆ ಸಮಾಧಾನ ಚಿತ್ತದಿಂದಲೇ ನಿವಾರಿಸುತ್ತಿದ್ದರು. ಅವರ ಮನೆಗೆ ಹೋಗಿ ಅವರ ದರ್ಶನ ಪಡೆದು ಬಂದ ದಿವಸ ನನಗೆ ನನ್ನ ಇಷ್ಟದೇವರ ದರ್ಶನವಾದಂತೆ ಸಂತಸವಾಗುತ್ತಿತ್ತು. ಮನೆಗೆ ಹೋದ ಹೆಣ್ಣುಮಕ್ಕಳನ್ನು ಅವರು ಅದೆಷ್ಟು ತುಂಬ ಗಾಂಭೀರ್ಯದಿಂದ ಮಾತ ನಾಡಿಸುತ್ತಿದ್ದರು! ತಮ್ಮ ಸ್ವಂತ ಮಗಳಂತೆ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಏಳಂಟರ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ನನಗೆ, ಅವರು ತೀರ್ಥರೂಪರ ನೆನಪನ್ನು ತಂದುಕೊಡುತ್ತಿದ್ದರು.

ಅವರ ಮಡದಿ ಮುತ್ತಮ್ಮನವರು ಮಹಾಸಾಧ್ವಿ. ಮಾತು ಕಡಿಮೆ, ಚೊಕ್ಕ ಬಾಳುವೆ. ಅಯ್ವರು ಹೆಣ್ಣು ಮಕ್ಕಳ ತಾಯಿ. ಗಂಡುಮಕ್ಕಳಿಲ್ಲ ಎಂಬ ಕೊರತೆ ಇದ್ದರೂ ಅದನ್ನೇ ತಲೆಗೆ ಹಚ್ಚಿಕೊಂಡವರಲ್ಲ. ಮನೆ ಬಿಟ್ಟು ಹೊರಗೆ ಹೋದದ್ದು ಕಡಿಮೆ. ಮನೆಯಲ್ಲೂ ಹೆಣ್ಣುಮಕ್ಕಳು ಬಂದಾಗ ಅವರೊಡನೆ ಮಿತವಾದ ಮಾತು ಕತೆ. ಉಳಿದ ವೇಳೆಗಳಲ್ಲಿ ಅವರು ಗುರುಗಳ ಓವರಿಗೆ ಸುಳಿಯುತ್ತಲೇ ಇರಲಿಲ್ಲ. ಪ್ರಜಾಮತ ವಾರಪತ್ರಿಕೆಯಲ್ಲಿ ಆರು ತಿಂಗಳು ಪ್ರತಿವಾರವೂ ತಪ್ಪದಂತೆ, ‘ಪ್ರತಿಭಾನ್ವಿತ ಲೇಖಕರ ಪತ್ನಿಯರು’ ಎಂಬ ಲೇಖನ ಮಾಲೆ ಬರೆದೆ. ಆ ಸಂದರ್ಭದಲ್ಲಿ ಶ್ರೀಮತಿ ಮುತ್ತಮ್ಮ ಡಿ.ಎಲ್‌.ಎನ್‌. ಅವರನ್ನೂ ಕುರಿತು ಬರೆದೆ. ಅದರ ಸಿದ್ಧತೆಗೆ ಮೊದಲು ಒಂದೆರಡು ದಿನ ಒಟ್ಟಿಗೆ ಅವರ ಮನೆಗೆ ಹೋದೆ. ಅವರು ಏನೂ ಬೇಸರಪಟ್ಟುಕೊಳ್ಳಲಿಲ್ಲ. ಬಹುವಾಗಿ ಸಹಕರಿಸಿದರು. ಎಂದಿನ ವಿಶ್ವಾಸದಿಂದಲೇ ಕಂಡರು. ಅವರ ಮಗಳು ರಾಜಲಕ್ಷ್ಮಿ ನನಗೆ ಗೆಳತಿ. ನಾನು ಮಹಾರಾಜಾ ಕಾಲೇಜಿನಲ್ಲಿ ಎಂ.ಎ ಓದುತ್ತಿದ್ದಾಗ ಆಕೆ ಬಿ.ಎಸ್ಸಿ. ಆನರ್ಸ ಓದುತ್ತಿದ್ದರು.

ಈ ಓಜರು, ನನ್ನ ಇನ್ನೊಬ್ಬ ಓಜರಾದ ತ.ಸು. ಶ್ಯಾಮರಾಯರೊಡನೆ ಶಾಂತಿನಾಥ ಕವಿಯ ಸುಕುಮಾರ ಚರಿತೆಯನ್ನು ಸಂಪಾದಿಸಿದ್ದರು. ನಾನು ಆನರ್ಸ ಓದುತ್ತಿದ್ದಾಗ, ಸುಕುಮಾರ ಚರಿತೆಯನ್ನು ಪಾಠ ಹೇಳಿದ ಗುರುಗಳು ದೊ.ಲ.ನ ರವರು ಆ ಕೃತಿಯ ಬಗ್ಗೆ ಒಲವು ಮೂಡಿಸಿದರು. ಆದ್ದರಿಂದ ನನಗೆ ಅವರು ಸಂಗ್ರಹವನ್ನು ಸಿದ್ಧಪಡಿಸುವ ಮನಸ್ಸಾಯಿತು. ಇಬ್ಬರಿಗೂ ಕೋರಿಕೆ ತಿಳಿಸಿದೆ. ಇಬ್ಬರೂ ಸಂತೋಷದಿಂದ ಒಪ್ಪಿಕೊಂಡು ಓಲೆಗಳನ್ನಟ್ಟಿದರು. ಸಂಗ್ರಹ ಸಿದ್ಧವಾದ ಮೇಲೆ ಬೆಂಗಳೂರಿನ ಸಮಾರಂಭ ಒಂದರಲ್ಲಿ ಅವರಿಗೇ ಅದನ್ನು ಅರ್ಪಿಸಿದೆ. ಅವರು ಸಂತೋಷಪಟ್ಟರಲ್ಲದೆ ಒಳ್ಳೆಯ ಮಾತುಗಳನ್ನಾಡಿ ಹರಿಸಿದರು: “ನೀವು ಒಳ್ಳೆಯ ಭಾಷಣಕಾರ್ತಿ. ಸರಿಯೆ, ಆದರೆ ಭಾಷಣ ಬರವಣಿಗೆಯ ಶತ್ರು. ನೀವು ಆ ಕೊರತೆಯನ್ನು ಹೋಗಲಾಡಿಸಬಲ್ಲಿರೆಂದು ತೋರುತ್ತೇ.”

ನಾನು ಸಂಗ್ರಹಿಸಿದ ಸುಕುಮಾರ ಚರಿತೆಯ ಸಂಗ್ರಹ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ.,ಬಿ.ಎಸ್ಸಿ. ತರಗತಿಗಳಿಗೆ ಪಠ್ಯಪುಸ್ತಕವಾಯಿತು. ಅದು ತಿಳಿದು ಅವರು ಆನಂದಿಸಿದರು. ಅವರ ವ್ಯಾಪಕವಾದ ವ್ಯಾಸಂಗ ಕಂಡು ನನಗೆ ಬೆರಗು ಮೂಡುತ್ತಿತ್ತು. ಏಕೆಂದರೆ ಪತ್ರಿಕೆಗಳಲ್ಲಿ ಬರುತ್ತಿದ್ದ ನನ್ನ ಕೆಲವು ಕತೆಗಳನ್ನು ಓದಿ, ಮೆಚ್ಚುಗೆಯ ನುಡಿಗಳನ್ನು ನೀಡಿ ಉತ್ತೇಜಿಸುತ್ತಿದ್ದರು.

೧೯೫೫ನೆಯ ಇಸವಿ, ನಾವು ಮೊದಲ ಆನರ್ಸ ಓದುತ್ತಿದ್ದೆವು. ಆಗ ಡಾ. ಕೆ.ವಿ ಪುಟ್ಟಪ್ಪನವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ನಾವು ಎರಡನೆಯ ಆನರ್ಸ ತರಗತಿಗೆ ಬರುವ ವೇಳೆಗೆ ಅವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದರು. ಆಗ ಪ್ರಾ.ದೊ.ಲ.ನ ರವರು ಬಂದು ನಮ್ಮ ವಿಭಾಗದ ಮುಖ್ಯಸ್ಥರಾದರು. ಕೆಲವು ತಿಂಗಳುಗಳಲ್ಲಿ ಪ್ರಾ. ತೀನಂಶ್ರೀ ಅವರು ಬಂದು ವಿಭಾಗದ ಯಾಜಮಾನ್ಯವನ್ನು ವಹಿಸಿಕೊಂಡರು. ನಾವು ಅವರುಗಳ ನೇತೃತ್ವದಲ್ಲಿ ಓದುತ್ತಾ ಬಂದು ಎಂ.ಎ ತರಗತಿಯ ಅಂತ್ಯವನ್ನು ಮುಟ್ಟಿದೆವು. ಗುರುವರ್ಯ ತೀನಂಶ್ರೀಯವರು ಆಗ ಪ್ರಾಧ್ಯಾಪಕರ ನಿವಾಸದಲ್ಲಿದ್ದರು. ಸರಕಾರಿ ಮುದ್ರಣಾಲಯದ ಎದುರು ಭವನ. ಅವರ ಮನೆಯಲ್ಲಿ ನಮಗೆಲ್ಲಾ ತಿಂಡಿತೀರ್ಥ ಆಯಿತು. ಆಗ ದೊ.ಲ.ನರವರು ನಮ್ಮ ಮನೆ ಚಿಕ್ಕದು, ಹೋಟೆಲಿನಲ್ಲೇ ಏರ್ಪಾಟು ಮಾಡೋಣ ಎಂದರು. ಅದರಂತೆ ದಾಸಪ್ರಕಾಶದಲ್ಲಿ ವ್ಯವಸ್ಥೆಯಾಯಿತು. ನಾವು ಸಂಖ್ಯೆಯಲ್ಲಿ ಕೇವಲ ಇಪ್ಪತ್ತೆರಡು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದೆವು. ಸುಮಾರು ನೂರು ರೂಪಾಯಿ ಬಿಲ್‌ಆಯಿತು. ಎಲ್ಲರ ಸಂಕೋಚ ಸರಿಯುವಂತೆ ಒಂದಾದಮೇಲೆ ಒಂದರಂತೆ ಅವರೇ ತಿಂಡಿ ತರಿಸಿದರು.

ನಾವು ಎಂ.ಎ. ತರಗತಿಯಲ್ಲಿದ್ದಾಗ ಕನ್ನಡ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಾಧ್ಯಾಪಕರು ಕೂಡಿ, ಒಂದು ದಿವಸ ಹಿಮವದ್‌ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದೆವು. ಒಂದು ಬಸ್ಸು ಒಂದು ವ್ಯಾನು. ಅಲ್ಲಿ ದೇವರ ದರ್ಶನವಾಯಿತು. ನಾನೊಂದು ಕೀರ್ತನೆ ಹಾಡಿದೆ. ಅದು ಗುರುಗಳಿಬ್ಬರಿಗೂ ಹಿಡಿಸಿದಂತೆ ಕಂಡಿತು. ಊಟವಾದ ಮೇಲೆ ಮಧ್ಯಾಹ್ನ ಬೆಟ್ಟದ ನೆತ್ತಿಯಲ್ಲಿ ಪ್ರವಾಸಿ ಮಂದಿರದ ಮುಂದೆ ಹರಹಿನಲ್ಲಿ ಮರದ ಕೆಳಗೆ ಕುಳಿತೆವು. ದೊ.ಲ.ನ. ರವರು ಹಳಗನ್ನಡದ ಪದ್ಯಗಳನ್ನು ಹೇಳಲು ಪ್ರಾರಂಭಿಸಿದರು. ಯಾವ ಅಕ್ಷರದಲ್ಲಿ ಒಂದು ಪದ್ಯ ಮುಗಿಯುತ್ತದೆಯೋ, ಅದರಿಂದ ಆರಂಭವಾಗುವ ಪದ್ಯವನ್ನು ಮತ್ತೆ ಹೇಳಬೇಕು. ಯಾರುಬೇಕಾದರೂ ಹೇಳಬಹುದಿತ್ತು. ಆದರೆ ಅನೇಕ ಸಲ ಅವರೇ ಹೇಳಿದರು. ನಾವು ಎಂದೂ ಓದಿರದ, ಕೇಳಿರದ ಅನೇಕ ಪದ್ಯಗಳನ್ನು ಅಂದು ಕೇಳಿದೆವು. ಹಳಗನ್ನಡ ಪದ್ಯಗಳನ್ನು ಹೇಳುವುದರಲ್ಲಿ ಅವರದೇ ಒಂದು ದಾಟಿ, ಅದಕ್ಕೆ ಬೇರಿಲ್ಲ ಸಾಟಿ.

ಪ್ರಾಧ್ಯಾಪಕರು ಸದಾ ತೆರೆದ ಮನಸ್ಸಿನವರಾಗಿದ್ದರು. ಪೂರ್ವಾಭಿಪ್ರಾಯ ಪ್ರೇರಿತ ರಾಗುತ್ತಿರಲಿಲ್ಲ. ಎಲ್ಲ ವಿಷಯದಲ್ಲೂ ಸಮಾನವಾದ ಆಸಕ್ತಿ ತಳೆದಿದ್ದರು. ವಿಸ್ಮಯಕರವಾದ ಸ್ಮರಣಶಕ್ತಿ ಇತ್ತು. ಸತತವಾದ ಅಭ್ಯಾಸ ನಡೆಸುತ್ತಿದ್ದರು. ನಿಷ್ಠೆಯೊಡನೆ ಪ್ರಾಮಾಣಿಕತೆ ಇತ್ತು. ಸಂಶೋಧನೆಗೆ ಅವರು ಸರಿಯಾದ ರೂಪ ತಂದುಕೊಟ್ಟರು ಪಾಂಡಿತ್ಯವೂ ಒಂದು ಪ್ರತಿಭೆಯೆಂಬ ಸ್ಥಾನ ಸಂಪಾದಿಸಿಕೊಟ್ಟರು. ಸೃಜನಾತ್ಮಕ ಸಾಹಿತ್ಯವೇ ಶ್ರೇಷ್ಠ, ಪಾಂಡಿತ್ಯ ಕೇವಲ ಗೌಣ ಎಂಬ ಅಭಿಪ್ರಾಯವನ್ನು ಹೋಗಲಾಡಿಸಿ ಎರಡೂ ಉತ್ಕೃಷ್ಟವೆಂಬುದನ್ನು ತೋರಿಸಿಕೊಟ್ಟರು. ಕೇಶಿರಾಜನನ್ನು ಕಂಡರೆ ಮಮತೆ. ಪಂಪ, ರನ್ನ ಜನ್ನರನ್ನೂ ಅಷ್ಟೇ ಆಳವಾಗಿ ಆತ್ಮೀಯವಾಗಿ ಅಭ್ಯಾಸ ಮಾಡಿದ್ದರು ಸೂಕ್ತಿಸುಧಾರ್ಣವ ಪಾಠ ಮಾಡುವಾಗಲೂ ಅವರ ಅನುಭಾವದ ರಸಗಂಗೆ ಪುಟಿಯುತ್ತಿತ್ತು. ಶಾಸನ ಸಾಹಿತ್ಯವನ್ನು ಚೆನ್ನಾಗಿ ಶೋಧನೆ ಮಾಡಿದ್ದರು. ಕನ್ನಡದಲ್ಲಿ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಭದ್ರವಾದ ಬುನಾದಿ ಹಾಕಿ ಖಚಿತವಾದ ಚೌಕಟ್ಟು ಹಾಕಿಕೊಟ್ಟವರು ಅವರೇ ವಿಶ್ವವಿಖ್ಯಾತ ಪ್ರಕಾಂಡ ಪಂಡಿತ ಡಾ. ಆದಿನಾಥ ನೇಮಿನಾಥ ಉಪಾಧ್ಯ ಅವರು ಒಮ್ಮೆ “ಕನ್ನಡದಲ್ಲಿ ಬರೆದಿರುವ ಗ್ರಂಥ ಸಂಪಾದನೆ ಪುಸ್ತಕ ಅದ್ವಿತೀಯ. ಉಳಿದ ಯಾವ ಭಾರತೀಯ ಭಾಷೆಯಲ್ಲೂ ಇಂಥ ಕೃತಿ ಇಲ್ಲ. ಇದರ ನೆರವಿನಿಂದ ಇನ್ನು ಮುಂದೆ ನೀವು ಹಳಗನ್ನಡ ಗ್ರಂಥಗಳನ್ನು ತಪ್ಪಿಲ್ಲದೆ ಶುದ್ಧವಾಗಿ ಸರಿಯಾಗಿ ಸಂಪಾದನೆ ಮಾಡಬಹುದು” ಎಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹೇಳಿದ್ದು ಇಂದಿಗೂ ನೆನಪಿದೆ. ನನ್ನ ಗುರುಗಳಿಗೆ ಡಾ. ಆ.ನೇ. ಉಪಾಧ್ಯೆಯವರಂತಹವರ ಮಾತಿಗಿಂತ ದೊಡ್ಡ ಪ್ರಶಸ್ತಿ ಯಾವುದು ಬೇಕು? ದೊ.ಲ.ನ ರವರ ಪಾಂಡಿತ್ಯದ ಪುಂಗಿನಾದಕ್ಕೆ ತಲೆದೂಗದವರಾರು? ನನ್ನ ಪಾಲಿಗಂತೂ ವಿದ್ವತ್ತಿನ ದೃಷ್ಟಿಯಿಂದ ಅವರೊಬ್ಬ ಪವಾಡ ಪುರುಷರು.

ದೊ.ಲ.ನ. ರವರು ಖಡಾಖಂಡಿತವಾದ ಅಭಿಪ್ರಾಯಕ್ಕೆ ಎತ್ತಿದ ಕೈ ಆಗಿದ್ದರು. ಒಂದು ನಿದರ್ಶನವನ್ನು ಇಲ್ಲಿ ಉಲ್ಲೇಖಿಸಬಹುದು. ಎರಡು ವರ್ಷಗಳ ಕೆಳಗೆ ರಾಜಾಜಿಯವರು “ಪಾದ್ರಿಗಳು ತಿದ್ದಿದ ತೆಲುಗು ಲಿಪಿಯಲ್ಲಿ ಬರೆದ ತಮಿಳು ಭಾಷೆಯೇ ಕನ್ನಡ” ಎಂದು ಬರೆದಿದ್ದರು. ಅವರ ಹೇಳಿಕೆ ಸಾಕಷ್ಟು ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಕನ್ನಡ ನಾಡಿನ ವಿದ್ವಾಂಸರನೇಕರು ಅವರ ಹೇಳಿಕೆಯನ್ನು ಅಲ್ಲಗೆಳೆದರು. ಮೂವರು ಪ್ರತಿಷ್ಠಿತ ಲೇಖಕರು ಮಾತ್ರ ಅವರ ಹೇಳಿಕಕೆಯನ್ನು, ವೈಯಕ್ತಿಕ ಬಾಂಧವ್ಯದ ಬೆಸುಗೆಯಿಂದ, ಪುಷ್ಠೀಕರಿಸಿದರು, ದೊ.ಲ.ನ. ರವರ ಹತ್ತಿರ ಇದರ ಪ್ರಸ್ತಾಪ ಬಂದಾಗ “ರಾಜಾಜಿ ರಾಜಕಾರಣಿ, ಸಮಯಸಾಧಕ ಗುಳ್ಳೆನರಿ. ಅವನಿಗೇನು ಗೊತ್ತು, ಕನ್ನಡ ಭಾಷೆಯ ವಿಚಾರ” ಎಂದು ಗುಡುಗುಡಿಸಿದರು. ಇಂಥ ಪ್ರಸಂಗಗಳು ಎಷ್ಟೋ.

* ಕನ್ನಡನುಡಿ (ಸಂ. ೩೪, ಸಂ.೧೫,೧೬) ಪು.೪೨