ಒಂದು ದಿನ ಶ್ರಾವಸ್ತಿಯ ಚೇತವನದಲ್ಲಿ ಬುದ್ಧದೇವನು ತನ್ನ ಶಿಷ್ಯ ಸಂದೋಹಕ್ಕೆ ತತ್ವೋಪದೇಶ ಮಾಡುತ್ತಿದ್ದ ವೇಳೆಯಲ್ಲಿ ಅವನ ಶಿಷ್ಯ ಸಾರಿಪುತ್ತ(ತ್ರ) ಆಗಮಿಸುತ್ತಾನೆ. ಭಿಕ್ಕುಗಳೆಲ್ಲರೂ ಎದ್ದು ನಿಂತು ‘ಗುರುಗಳು ಬಂದರು, ಗುರುಗಳು ಬಂದರು’ ಎಂದು ಒಕ್ಕೊರಲಿನಲ್ಲಿ ಕೂಗಿಕೊಳ್ಳುತ್ತಾರೆ. ಸಾರಿಪುತ್ತನಿಗೆ ತುಸು ಕಸಿವಿಸಿ ಯಾಗುತ್ತದೆ ತಥಾಗತನ. (ಹೇಗೆ ಬಂದನೋ ಹಾಗೆ ಹೋದವನು – ಬುದ್ಧದೇವ) ಕಡೆ ತಿರುಗಿ ‘ಗುರುದೇವ್‌, ಅಪಚಾರವಾಯಿತಲ್ಲವೇ?’ ಎಂದು ಆತಂಕ ವ್ಯಕ್ತಪಡಿಸುತ್ತಾನೆ. ತಥಾಗತ ಹುಸಿನಗೆ ನಕ್ಕು, ‘ಸಾರಿಪುತ್ತ, ಸಮಾಧಾನ’ ಎಂದಷ್ಟೇ ಹೇಳಿ, ಭಿಕ್ಕುಗಳನ್ನು ಕುರಿತು, ‘ಭದಂತೇ, ನೀವು ಸಾರಿಪುತ್ತನನ್ನ ಗುರು ಎಂದು ಸಂಬೋಧೀಸಿದಿರಿ. ಅದು ಸರಿಯಲ್ಲ, ಸಾರಿಪುತ್ತ ಗುರುವಲ್ಲ. ಅವನು ಶಿಕ್ಷಕ ಅಷ್ಟೆ. ಕೇಳಿ, ಗುರುವಿಗೂ ಶಿಕ್ಷಕನಿಗೂ ತುಂಬಾ ಅಂತರವಿದೆ. ಯಾವ ವ್ಯಕ್ತಿ ಸ್ವಪ್ರತಿಭೆಯಿಂದ ಸೃಜನಾತ್ಮಕ ಸಾಮರ್ಥ್ಯ ಪಡೆದು, ಶ್ರೋತೃಗಳ ಭಾವಕಲ್ಪದಲ್ಲಿ ವಿನೂತನ ಚಿಂತನೆಯ ಮಿಂಚು ಸಂಚಲಿಸುವಂತೆಸಗಬಲ್ಲನೋ, ತನ್ಮೂಲಕ ಆಲೋಚನೆಯ ಅಲೆಗಳನ್ನೆಬ್ಬಿಸುವನೊ ಅವನು ಗುರು ಯಾವ ವ್ಯಕ್ತಿ ತಾನು ಗುರುವಿನಿಂದ ಕಲಿತದ್ದನ್ನು ಅನ್ಯರ ಮನಸ್ಸಿಗೆ ಮುಟ್ಟಿಸಲು ಶಕ್ತನೊ ಅವನು ಶಿಕ್ಷಕ. ಗುರು ಎಂಬುವನು ಉತ್ಪಾದಕ, ಹೊಸತನ್ನು ಸೃಷ್ಟಿಸುವವನು. ಶಿಕ್ಷಕ ಕೇವಲ ಓರ್ವ ಸಂವಾಹಕ, ತಾನು ಗಳಿಸಿದ್ದನ್ನು ಹೊತ್ತು ತಂದು ಕೊಡುವವನು. ಈ ಅರ್ಥದಲ್ಲಿ ಸಾರಿಪುತ್ತ ಸಂವಾಹಕ, ಶಿಕ್ಷಕ, ಉತ್ಪಾದಕ ಗುರು ಅಲ್ಲ ಎಂದು ಬಿತ್ತರಿಸುತ್ತಾನೆ.

ಭಗವಾನ್‌ ಬುದ್ಧನು ವಕ್ಖಾಣಿಸಿದ ಸ್ವಯಂ ಪ್ರಭಾವಪೂರ್ಣ ತೇಜಸ್ವಿ ಗುರುಗಳನ್ನು ಕಂಡಿದ್ದೇನೆ, ಸಂವಾಹಕ ಶಕ್ತಿಯುಳ್ಳ ಜನಪ್ರಿಯ ಶಿಕ್ಷಕರನ್ನು ಕಂಡಿದ್ದೇನೆ. ಆದರೆ ಪ್ರಮಾಣದಲ್ಲಿ ಗುರುಗಳ ಸಂಖ್ಯೆ ಕಡಿಮೆ ‘ಶಿಕ್ಷಕರ; ಸಂಖ್ಯೆ ಹೆಚ್ಚು. ನಾನು ಕಂಡ ನಿಜದ ಅರ್ಥದ ಗುರುಗಳೆಂದರೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಕವಿಋಷಿ ಶ್ರೀ ಕುವೆಂಪು, ವಿದ್ವತ್ತಿನ ಮಹಾಮೇರು ಶ್ರೀ ಡಿ.ಎಲ್‌. ನರಸಿಂಹಾಚಾರ್ಯರು, ಶಿಷ್ಯವಾತ್ಸಲ್ಯದ ಅಭಿಮಾನದ ಮೂರ್ತಿ ಶ್ರೀ ತ.ಸು. ಶಾಮರಾಯರು, ಹಾಸ್ಯವತಾರಿಗಳಾದ ಎಸ್‌.ವಿ. ಪರಮೇಶ್ವರಭಟ್ಟರು, ಸದಾ ಸಿಡುಕುತ್ತಿದ್ದರೂ ಸೆಡವಿನ ಬೆರಳುಗಳಲ್ಲೆ ಶಾಸ್ತ್ರ ಸಾಹಿತ್ಯದ ಆಂತರ್ಯವನ್ನು ತೆರೆದುತೋರುತ್ತಿದ್ದ ಕ.ವೆಂ. ರಾಘವಾಚಾರ್ಯರು, ಇತಿಹಾಸತಜ್ಞ ಡಾ. ಎಸ್‌. ಶ್ರೀಕಂಠಶಾಸ್ತ್ರಿಗಳು ಹಾಗೂ ಆತ್ಮೀಯ ಅಣ್ಣನಲ್ಲದೆ ಬೇರೆಯಲ್ಲ ಎಂಬಂತ್ತಿದ್ದ ಗುರುವರ್ಯ ದೇಜಗೌ. ಉಳಿದ ಉಪನ್ಯಾಸಕರೆಲ್ಲರೂ ಶಿಕ್ಷಕರೆಂದೇ ನನ್ನ ಭಾವನೆ.

ಪ್ರಕೃತದಲ್ಲಿ ಮಹಾಗುರು ದೊಡ್ಡಬೆಲೆ ಲಕ್ಷ್ಮೀ ನರಸಿಂಹಾಚಾರ್ಯರ ಬಗೆಗೆ, ಅವರ ಬೋಧನೆಯ ವೈಖರಿಯ ಬಗೆಗೆ ನನ್ನ ಎರಡು ಮಾತು.

ದೊಲನ ನಮ್ಮ ತರಗತಿಗೆ ಅಂದರೆ ಮೊದಲನೇ ಕನ್ನಡ ಆನರ್ಸ್‌ಗೆ ಪಾಠ ತೆಗೆದು ಕೊಳ್ಳುತ್ತಿರಲಿಲ್ಲ. ನಾವೆಲ್ಲರೂ ಅಂದರೆ ಹಾ.ಮಾ.ನಾಯಕ, ಜಿ.ಎಸ್‌. ಸಿದ್ಧಲಿಂಗಯ್ಯ, ಕೆ.ಎಂ. ಸೀತಾರಾಮಯ್ಯ, ಕೆ.ನಾಗೇಂದ್ರಪ್ಪ, ಕೆ.ಎಂ. ಮರಿಯಪ್ಪ, ಸಿದ್ಧಲಿಂಗೇಗೌಡ ಮತ್ತು ನಾನು ಏಳು ಜನರೂ ಪ್ರೊ. ಪುಟ್ಟಪ್ಪನವರನ್ನು ಕೇಳಿ, ಡಿಎಲ್‌ಎನ್‌ರವರು ನಮಗೆ ಪಾಠ ತೆಗೆದುಕೊಳ್ಳುವಂತೆ ಬೇಡಿ, ಯಶಸ್ವಿಯಾದೆವು. ಪೂಜ್ಯರು ಅವರೇ ಸಂಪಾದಿಸಿದ ಶಿವಕೋಟ್ಯಾಚಾರ್ಯ ವಡ್ಡಾರಾಧನೆ ತೆಗೆದುಕೊಂಡರು. ಆಗಿನ್ನೂ ಅವರ ಮೊದಲ ಆವೃತ್ತಿಯಾದ್ದರಿಂದ ಕವಿ, ಕೃತಿ, ಕಾಲ, ದೇಶಗಳ ಬಗೆಗೆ ಯಾವ ವಿವರವೂ ಇರಲಿಲ್ಲ. ಟಿಪ್ಪಣಿ, ಶಬ್ದಕೋಶ, ಅರ್ಥಕೋಶ, ಯಾವುದೂ ಇರದ ಬರಿಯ ಬೋಳು ಪಠ್ಯ ಅದಾಗಿತ್ತು. ಗುರುಗಳು ಗುರುದತ್ತ ಭಟಾರರ ಕಥೆ ಹೇಳುತ್ತಾ, ವಜ್ರದಾಡನೆಂಬ ವಿದ್ಯಾಧರನಿಂದ ಹಿಂದಿನ ಜನ್ಮದಲ್ಲಿ ಕೊಲೆಗೀಡಾಗಿದ್ದ ಉಪಚರ ಮಹಾರಾಜನು ಈ ಜನ್ಮದಲ್ಲಿ ಧರಣೀಂದ್ರನಾಗಿ ಹುಟ್ಟಿ, ವಜ್ರದಾಡನನ್ನು ಕುದಿಯುವ ನೀರಿನಲ್ಲಿ ಅದ್ದಿ ಕೊಲೆಗೈದು ಹಳೆಯ ದ್ವೇಷವನ್ನು ತೀರಿಸಿಕೊಳ್ಳುತ್ತಾನೆಂದು ಹೇಳುವ ಸಂದರ್ಭದಲ್ಲಿ “ಅವನ ಕಳತ್ರ ಸಹಿತಂ ಪುಡುಕುನೀರೞ್ದುತ್ತಂ” ಎಂಬ ಪದದ ಬಳಿ ಗಕ್ಕನೆ ನಿಂತರು. “ಪುಡುಕು ನೀರು ಅದೇನು ಅಂತಾ ಯಾರಿಗಾದರೂ ಗೊತ್ತಾ?’ ಪ್ರಶ್ನಿಸಿದರು. ಕೆ. ನಾಗೇಂದ್ರಪ್ಪ ಚಿತ್ರದುರ್ಗದವರು, ಅವರಿಗೆ ತೆಲಗು ಚೆನ್ನಾಗಿ ಬರುತ್ತಿತ್ತು. ಕೂಡಲೇ ಹೇಳಿದ “ತೆಲುಗಿನಲ್ಲಿ ಸುಡೋ ನೀರಿಗೆ ಹುಡುಕು ನೀಡ್ಳು ಅಂತಾರೆ ಸರ್‌” ಅಂದ. ಗುರುಗಳು “ಹುಡುಕು ನೀಡ್ಳು ಅಂಟಾರಾ?” ಪ್ರಶ್ನಿಸಿದರು. ಮಿತ್ರ ನಾಗೇಂದ್ರಪ್ಪನ ಮೊದಲ ಉತ್ಸಾಹ ಕುಸಿದು, ಸಣ್ಣ ದನಿಯಲ್ಲಿ “ಹುಡುಕು ನೀಡ್ಳು ಅನ್ನೋದು ನಮ್ಮ ಕಡೆ ರೂಢಿ ಸರ್‌” ಅಂದ. ‘ನೀವು ಹೇಳಿದ್ದೂ ಸರಿ’ ಅಂತಾ ತಮ್ಮ ಪುಟ್ಟ ಪುಸ್ತಕದಲ್ಲಿ ಬರೆದುಕೊಂಡು ಪಾಠ ಮುಂದುವರಿಸಿದರು.

ಬೇರೊಂದು ಸಂದರ್ಭ

ಆಗ ಕನ್ನಡ ನಿಘಂಟು ಕಾರ್ಯ ಭರದಿಂದ ಸಾಗಿತ್ತು. ಆದರೆ ಡಿ.ಎಲ್‌.ಎನ್‌. ತಮ್ಮ ಅನಾರೋಗ್ಯ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಆಗುತ್ತಿರಲಿಲ್ಲ. ನಿಘಂಟು ಸಭೆಯನ್ನು ಮೈಸೂರಿನ ಬಳಿ ಇರುವ ಇಲವಾಲ ಗ್ರಾಮದಲ್ಲಿ – ಹಿಂದೆ ಮೈಸೂರರಸರು ತಮ್ಮ ವಿಲಾಸಕ್ಕಾಗಿ ಕಟ್ಟಿಸಿಕೊಂಡಿದ್ದ ಗಂಡಭೇರುಂಡಾಕಾರದ ‘ಆಲೋಕ’ ಎಂಬ ಬೃಹತ್‌ ಕಟ್ಟಡದಲ್ಲಿ ನಡೆಸಲು ಏರ್ಪಾಟಾಗಿತ್ತು. ನಾನು ಸಹ ಆ ಸಭೆಗೆ ಹೋಗಿದ್ದೆ . ಮುಖ್ಯ ವ್ಯವಸ್ಥಾಪಕರಾಗಿದ್ದ ಪೂಜ್ಯ ದೇಜಗೌ ಇದ್ದರು. ಅಲ್ಲಿ ‘ಸೋಲಿಗೆ’ ಶಬ್ದ ಬಂತು. ನಾನು ‘ಸರ್‌, ನನ್ನದು ಚಿಕ್ಕನಾಯಕನಹಳ್ಳಿ …..’ ಅಂತಿದ್ದ ಹಾಗೇ ‘ನಾನೂ ಅದೇ ಊರಿನಲ್ಲಿ ಹುಟ್ಟಿದ್ದು ಹೇಳಯ್ಯ’ ಅಂದರು. ‘ಆ ಪಟ್ಟಣದಲ್ಲಿ ಕುರುಬರು ಬಹು ಸಂಖ್ಯೆಯಲ್ಲಿದ್ದಾರೆ’ ‘ಅದೂ ಗೊತ್ತು, ಮುಂದೆ ಹೇಳು’. “ಅವರು ೨೫ ಕುರಿಗಳಿಗೆ ಒಂದು ಸೊಲಿಗೆ ಅಂತಾರೆ.” ‘ಸಂಖ್ಯೆ ಸರಿಯಾಗಿ ಗೊತ್ತಾ?’ ಆ ಪ್ರಶ್ನೆಯಲ್ಲಿ ಒಂದು ಬಗೆಯ ಗತ್ತು ಇತ್ತು. ಅದು ನಿಖರತೆಯ ಬಗೆಗೆ ಸ್ಪಷ್ಟ ಹಾಗೂ ಸತ್ಯದ ಒತ್ತು ಬಯಸಿತ್ತು. ನನಗೆ ಉಸಿರು ಗಂಟಲಲ್ಲಿ ಸಿಕ್ಕಿಕೊಂಡಿತು. ತೊದಲುತ್ತಾ ’೨೫ ಇರಬೇಕು’ ಅಂದೆ ‘ಸರಿಯಾಗಿ ತಿಳ್ಕೊಂಡು ಬಂದು ಹೇಳು ಉಡಾಫೆ ಹೊಡೀಬೇಡ’ ಅಂದರು. ಆಮೇಲೆ ಊರಿಗೆ ಬಂದಾಗ ತಿಳಿದೆ. ’೨೫ ಅಲ್ಲ ೫೦ ಕುರಿಗಳಿಗೆ ಒಂದು ಸೊಲಿಗೆ’ ಎಂದು ಅದನ್ನು ಎಷ್ಟೋ ದಿವಸಗಳಾದ ಮೇಲೆ ಹೇಳಿದೆ. ಡಿ.ಎಲ್‌.ಎನ್. ‘ನೋಡು, ಸೊಲಿಗೆ ಅನ್ನೋದು ಅಳತೆ, ಪ್ರಮಾಣ ಎಂಬ ಅರ್ಥ ಉಳ್ಳದ್ದು. ಹಾಗೇ ಸಂಖ್ಯೆಗೂ ಆ ಅರ್ಥ ಅನ್ವಯಿಸುತ್ತದೆ. ನನಗೆ ಸೊಲಿಗೆಗೆ ಎಷ್ಟು ಎಂಬ ಸಂಕ್ಯೆ ಸ್ಪಷ್ಟವಾಗಿತ್ತು. ಈಗ ಹೇಳಿದೆಯಲ್ಲಾ ಸರಿ ಬಿಡು’, ಅಂದರು.

ಪೂಜ್ಯ ದೊಲನವರಿಗೆ ಹೊಸ ಪದಗಳು ಅಂದರೆ ಪಂಚಪ್ರಾಣ. ಜಗದ್ವಿಖ್ಯಾತ ವಿಜ್ಞಾನಿ ಚಾರ್ಲ್ಸ್‌ಡಾರ್ವಿನ್‌ ಇದ್ದ ಹಾಗೆ. ಅವನು ದಕ್ಷಿಣ ಅಮೇರಿಕೆಯ ಕಾಡಿನಲ್ಲಿ ಚಿಟ್ಟೆ ಮೊದಲಾದವುಗಳನ್ನು ಹಿಡಿದು ತನ್ನ ಜೇಬಿಗೆ, ಮರೆತು ಬಾಯೊಳಗೆ ಹಾಕಿ ಕೊಂಡದ್ದುಂಟಂತೆ. ನಮ್ಮ ಗುರುಗಳು ಹೊಸ ಶಬ್ದಗಳು ಸಿಕ್ಕರೆ ಸಾಕು, ಚೀಟಿಯಲ್ಲಿ ಬರೆದು ತಮ್ಮ ಕೊರಳು ಮುಚ್ಚೊ ಕೋಟಿನ ಕಿಸೆಗಳಲ್ಲಿ ಸೆರೆ ಹಾಕುತ್ತಿದ್ದರು. ಒಮ್ಮೊಮ್ಮೆ ಒಂದು ಪದ ಸಿಕ್ಕಿತು ಅಂದ್ರೆ ಅರ್ಧ ರಾತ್ರಿ ಆಗಿರಲಿ, ಮುಕ್ಕಾಲುರಾತ್ರಿ ಆಗಿರಲಿ, ತಮ್ಮ ಮನೆಗೆ ಸಮೀಪದಲ್ಲಿದ್ದ ಪ್ರೊ.ಕ.ವೆಂ. ರಾಘವಾಚಾರ್‌ರವರ ಮನೆ ಮುಂದೆ ನಿಂತು ‘ಲೇ. ರಾಘವಾಚಾರಿ, ಇವೊತ್ತು ನನಗೊಂದು ಹೊಸ ಶಬ್ದ ಸಿಕ್ಕಿ ಬಿಡ್ತಯ್ಯಾ’, ಎಂದು ಕೂಗಿ, ಎಬ್ಬಿಸಿ ತಮ್ಮ ಸ್ನೇಹಿತರ ನಿದ್ದೆ ಕೆಡಿಸುತ್ತಿದ್ದುದೂ ಉಂಟು. ಸರಸ್ವತಿಪುರದಲ್ಲಿ ಅವರ ಮನೆಯ ಸಮೀಪದಲ್ಲೇ ರೂಮ್‌ಮಾಡಿಕೊಂಡಿದ್ದ ನಮಗೆ ಆ ಅನುಭವ ಆಗಾಗ ಆಗುತ್ತಿತ್ತೆಂದು ಬೇರೆ ಹೇಳಬೇಕಾಗಿಲ್ಲ. ಒಂದು ಹೊಸ ಶಬ್ದ ಸಿಕ್ಕು, ಅದರ ನಿಷ್ಪತ್ತಿ ಮತ್ತು ಅರ್ಥ ಅಥವಾ ಅರ್ಥಚ್ಛಾಯೆ ಹೊಳೆದಾಗ ಅವರಿಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಆರ್ಕಿಮಿಡೀಸ್‌ನ ‘ಯುರೇಕಾ, ಯುರೇಕಾ!’ ಉದ್ಗಾರವೇ ಹೊರ ಹೊಮ್ಮುತ್ತಿತ್ತು.

ಡಿ.ಎಲ್‌.ಎನ್‌. ಅಧ್ಯಯನದಲ್ಲಷ್ಟೇ ಅಲ್ಲ. ಅಧ್ಯಾಪನದಲ್ಲೂ ಅದ್ವಿತೀಯರು ಮಹಾರಾಜಾ ಕಾಲೇಜಿನಲ್ಲಿ All honours and All Ladiesಗೆ ಸಂಬಂಧಿಸಿದ ಒಂದು ಸೆಕ್ಷನ್‌ಇರುತ್ತಿತ್ತು. General English ಮತ್ತು General Kannada ವಿದ್ಯಾರ್ಥಿಗಳಿಗಾಗಿ ಜೂನಿಯರ್‌ಬಿ.ಎ. ಹಾಲ್‌ನಮ್ಮ ಕ್ಲಾಸ್‌ರೂಮ್‌. ದೊಡ್ಡ ಗ್ಯಾಲರಿ. ಸುಮಾರು ೧೦೦-೧೫೦ ವಿದ್ಯಾರ್ಥಿಗಳು ಕೂರಬಹುದಾದ ವಿಶಾಲವಾದ ಹಾಲ್‌. ಡಿ.ಎಲ್‌.ಎನ್‌. ಆಚಾರ್ಯ ಬಿ.ಎಂ.ಶ್ರೀಯವರ ಅಶ್ವತ್ಥಾಮನ್‌’ ನಾಟಕ ಪಾಠ ಮಾಡೋರು. ಗ್ರೀಕ್‌ಟ್ರಾಜಿಡಿ ಕನ್ನಡದಲ್ಲಿ ಕಲಾತ್ಮಕವಾಗಿ ಮೂಡಿ ಬರುವುದನ್ನು ಬೋಧಿಸುತ್ತಿದ್ದಾಗ ನಾವೆಲ್ಲರೂ ವಿದ್ಯಾರ್ಥಿಗಳು ಮೈಮರೆತು ಕೇಳುತ್ತಿದ್ದೆವು. ಅವರ ಬಾಯಿಂದ ಪಾಠ ಕೇಳಿದ ಮೇಲೆ ನಾವು ಮತ್ತೊಮ್ಮೆ ಪುಸ್ತಕ ತೆರೆದು ಓದುವ ಅಗತ್ಯವೇ ಇರುತ್ತಿರಲಿಲ್ಲ. ಇದು ಉತ್ಪ್ರೇಕ್ಷೆ ಅಲ್ಲ. ಕ್ಲೀಷೆಯೂ ಅಲ್ಲ. ನಮಗಾದ ಅನುಭವ. ಅಂತಹ ಬಹ್ರುಶ್ರುತ ಅಧ್ಯಾಪಕರು ಅಪರೂಪ.

ನಮ್ಮ ಎಂ.ಎ. ಪರೀಕ್ಷೆಗೆ ಪಂಪ ವಿಶೇಷ ಕವಿ, ಟ್ರಾಜಿಡಿ ವಿಶೇಷ ಸಾಹಿತ್ಯ ಪ್ರಕಾರ ನಿಗದಿಗೊಂಡಿದ್ದವು. ಪೂಜ್ಯರಾದ ತ.ಸು. ಶಾಮರಾಯರು ಟ್ರಾಜಿಡಿ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಆ ಬಗ್ಗೆ ವಿಶೆಷೋಪನ್ಯಾಸ ಕೊಡಿಸಲು ಡಿ.ಎಲ್‌.ಎನ್‌. ರವರನ್ನು ತಸುಶಾ, ಆಹ್ವಾನಿಸಿದರು. ಅಂದಿನ ಅವರ ಲೆಕ್ಚರ್‌ಅವಿಸ್ಮರಣೀಯ. ಲೆಕ್ಚರ್‌ಮುಗಿದ ಮೇಲೆ ಚರ್ಚೆ ಆರಂಭವಾಯಿತು. ಅಶ್ವತ್ಥಾಮ ಆತ್ಮಹತ್ಯ ವಿಷಯ ಬಂತು. ತಸುಶಾ ಕೆಲವರ ಆಪಾದನಾ ರೂಪದ ವಿಮರ್ಶೆಗಳನ್ನು ತೆರೆದಿಟ್ಟರು. ಡಿ.ಎಲ್‌.ಎನ್‌. ಅವುಗಳನ್ನು ಕುರಿತು ತುಂಬಾ ಗಂಭೀರವಾಗಿ ಖಂಡಿಸಿ, ಶ್ರೀಯವರನ್ನು ಸಮರ್ಥಿಸಿದರು. ‘ಆತ್ಮಹತ್ಯೆ ಎಂದರೆ ನೇಣು ಹಾಕಿಕೊಂಡು ಸಾಯಲೇಬೇಕೇನು? ದ್ರಾಕ್ಷಾಯಣಿ ಯಜ್ಞ ಕುಂಡದಲ್ಲಿ ಬಿದ್ದು ಭಸ್ಮವಾದದ್ದು ಆತ್ಮಹತ್ಯ ಅಲ್ಲವೇ? ಅಂಬೆಯ ಅಗ್ನಿ ಪ್ರವೇಶ ಆತ್ಮಹತ್ಯ ಅಲ್ಲವೇ? ಸೀತೆ ಮಾಡಿಕೊಂಡದ್ದಾದರೂ ಏನು? ಭವಭೂತಿ ಕೇಳಿ, ಅವನೇ ವಿಮರ್ಶಕರಿಗೆ ಉತ್ತರ ಹೇಳ್ತಾನೆ! ಅಶ್ವತ್ಥಾಮನಿಂದ ಆತ್ಮಹತ್ಯ ಮಾಡಿಸಿದ್ದು ಬಿ.ಎಂ.ಶ್ರೀ ಯವರ ಮಹಾಪರಾಧ, ಮಹಾಪಚಾರ ಆಯ್ತು ಅಲ್ಲವೇ! ಎಲ್ಲರ ಬದುಕೂ ಒಂದರ್ಥದಲ್ಲಿ ಟ್ರಾಜಿಡಿನೇ. ಅದಕ್ಕೆ ಕಲ್ಪನೆಯ ಮುಸುಕು ಹೊದಿಸಿ, ಸುಖಾಂತವನ್ನೇ ಬಯಸೋದು ಬದುಕಿಗೆ ಹೆದರುವ ಅಂಜುಬುರುಕರು!’ ಎಂದರು.

ಅದಕ್ಕೆ ಸಂಬಂಧಿಸಿದಂತೆ ನನ್ನದೊಂದು ಅಭಿಪ್ರಾಯ ಮುಂದಿಟ್ಟ. ‘ಸರ್‌, ಈಸ್ಕೈಲಸ್‌ನ ಒರಿಸ್ಟಿಯಾ ಟ್ರೈಲಜಿಯಲ್ಲಿ, ಮೂರನೇ ನಾಟಕದ ಅಂತ್ಯದಲ್ಲಿ ಕಥಾನಾಯಕ ಒರಿಸ್ಟಸ್‌ಸಾಯುವುದೇ ಇಲ್ಲ. ನ್ಯಾಯ ದೇವತೆ ಅಥೀನೆಯ ಅನುಗ್ರಹಕ್ಕೆ ಪಾತ್ರನಾಗಿ ಬದುಕುತ್ತಾನೆ. ನಮ್ಮಲ್ಲೂ ಅನೇಕ ನಾಟಕಗಳಲ್ಲಿ ಉದಾಹರಣೆಗೆ ಶ್ರೀ ಕುವೆಂಪುರವರ ‘ಬೆರಳ್‌ಗೆ ಕೊರಳ್‌’ ನಾಟಕದಲ್ಲಿ ಕಥಾನಾಯಕ ಏಕಲವ್ಯ ಮಡಿಯುವುದಿಲ್ಲ. ಆದರೂ ಅದು ಟ್ರಾಜಿಡಿ ಅನ್ಸುತ್ತೆ ಅಲ್ಲವೆ ಸರ್‌?’ ಎಂದೆ. ‘ಅಹುದು ಅದು ಬರೀ ಟ್ರಾಜಿಡಿ ಅಲ್ಲ wonderful tragedy! ಅದು ಸರಿ, ಅದು ಯಾರ ಟ್ರಾಜಿಡಿ? ‘ದ್ರೋಣನದು!’, ‘ಹೇಗೆ!’, ದಿವ್ಯಜ್ಞಾನಿ ದ್ರೋಣ ಆಡಿದ ಕಡೆಯ ನುಡಿ, ‘ಏಕಲವ್ಯಾ ನಿನ್ನ ಬೆರಳ್‌ಗೆ ನನ್ನ ಕೊರಳ್‌!’ ಎಂಬಲ್ಲಿ ಅವನ ದುರಂತ ಅಡಗಿದೆ. ಅರಿಸ್ಟಾಟಲನ poetics ಟ್ರಾಜಿಡಿಯನ್ನು ವ್ಯಾಖ್ಯಾನಿಸುತ್ತಾ ಹೇಳುವ ಅಂತಿಮ ಫಲಶ್ರುತಿ, ‘arose through pity and fear the proper purgation (cathosis) ಆಗುವುದು ತಾನೇ? ನಾವು ಮರುಗುವುದನ್ನು ಆನಂದ ತುಂದಿಲನಾದ ಏಕಲವ್ಯನಿಗಾಗಿ ಅಲ್ಲ, ದಿವ್ಯಜ್ಞಾನಿ ದ್ರೋಣ ತನ್ನ ಭವಿಷ್ಯತ್ತಿನ ಅಂತಿಮ ದರ್ಶನ ದರ್ಶಿಸಿ ನರಳುವ ಯಾತನೇ! ಆದ್ದರಿಂದ it is not the trajedy of yekalavya, but it is the tragedy of Drona!’ ಎಂದು ಸಮರ್ಥಿಸಿ ನುಡಿದರು ಗುರುಗಳು.

‘ಅಂತ್ಯದಲ್ಲಿ, ಕೃಷ್ಣ ಪರಮಾತ್ಮ ದ್ರೋಣರಿಗೆ ಸದ್ಗತಿ ದಯಪಾಲಿಸುತ್ತಾನೆ. ಅದನ್ನು ನಾವು tragedy, ಆವಿದ್ದ ದುರಂತ ಅಂತಾ ಕರೀದೆ ‘ದಿವ್ಯಾಂತ’ ಅಂದರೆ ಹೇಗಿರುತ್ತೆ ಸರ್‌?’ ಅಂದೆ. ಗುರುಗಳು ನಗುತ್ತಾ, ‘ಹಾಗೆಲ್ಲಾ ಸಮರ್ಥನೆ ಸಮರ್ಪಕವಾಗಿಲ್ಲದೆ, ಭಾವನಾತ್ಮಕ ನಾಮಕರಣ ಮಾಡಬೇಡ. ಅದು ದಿವ್ಯಾಂತ ಹೋಗಿ ನಿಮ್ಮ ದುರಂತ ಆದೀತು!’ ಅಂದರು. ಎಲ್ಲರೂ ನಕ್ಕರು ನಾನೂ ನಕ್ಕೆ.

ಕ್ಷಣಕಾಲ ಮೌನ. ಅನಂತರ ಗುರುಗಳ ಅಪ್ಪಣೆ ಪಡೆದು ಒಂದು ಮಾತು ಹೇಳಿದೆ. ‘ಸರ್‌, ಏನೇ ಆಗಲಿ, ನಮ್ಮ ಶಿಷ್ಟ ಕಲಿಗಳಿಗಿಂತ ಜಾನಪದರು ಬಹಳ ಧೈರ್ಯಶಾಲಿಗಳು. ರುದ್ರ ವಸ್ತು ವಿನ್ಯಾಸ (tragic slement) ಅನ್ನು ನಿರ್ಭೀತರಾಗಿ ಬಳಸುತ್ತಾರೆ. ಉದಾಹರಣೆಗೆ ‘ಕೆರೆಗೆ ಹಾರ’ ಮೊದಲಾದ ಜಾನಪದ ಕಥನ ಕವನದಲ್ಲಿ, ಕರಿಭಂಟ ಮೊದಲಾದ ಬಯಲಾಟಗಳಲ್ಲಿ ಅಂದೆ. ಅದಕ್ಕೆ ಗುರುಗಳು ‘ನಿನ್ನ ಮಾತು ಅರ್ಧ ಸತ್ಯ ಅಂದರು.

ಈ ಬಗೆಯ ಅಭಿಪ್ರಾಯ ಸ್ಪಷ್ಟತೆ, ನಿಖರತೆ, ಅಷ್ಟೇ ಪ್ರಮಾಣದ ಪ್ರಸನ್ನತೆ ಪೂಜ್ಯರ ಮುಖದಲ್ಲಿ, ಮಾತಿನಲ್ಲಿ,ಭಾವದಲ್ಲಿ ಭಣುತೆಯಲ್ಲಿ ಸ್ಪಷ್ಟ ಗೋಚರವಾಗುತ್ತಿದ್ದುದುಂಟು.

ಬಿ.ಎ. ಆನರ್ಸ್‌ ಮುಗಿಸಿದ ಕೂಡಲೇ ಹಾಮಾನಾ ಮತ್ತು ಸಿದ್ಧಲಿಂಗಯ್ಯ ಅನುಕ್ರಮವಾಗಿ ತುಮಕೂರು ಮತ್ತು ದಾವಣಗೆರೆ ಕಾಲೇಜುಗಳಿಗೆ ಲೆಕ್ಚರ್‌ಗಳಾಗಿ ಹೋದರು. ನಾನು, ಸೀತಾರಾಮಯ್ಯ ಮತ್ತು ಕೆ. ನಾಗೇಂದ್ರಪ್ಪ ಎಂ.ಎ ತರಗತಿಗೆ ಸೇರಿದೆವು. ಆನರ್ಸ್‌ಆದ ಮೇಲೆ ಎಂ.ಎ ಒಂದೇ ವರ್ಷ. ಅದೂ ಮುಗಿಯಿತು. ಅಷ್ಟರಲ್ಲಿ ಪೂಜ್ಯಶ್ರೀ ಪುಟ್ಟಪ್ಪನವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. ನಮ್ಮ ಎಂ.ಎ ವಿದ್ಯಾರ್ಥಿಗಳ ಸಂದರ್ಶನ ಪರೀಕ್ಷೆ ಕುಲಪತಿಗಳ ಚೇಂಬರ್‌ನಲ್ಲಿ ನಡೆಯಿತು. ಅದು ಮುಗಿಯುತ್ತಿದ್ದಂತೆಯೇ ಕುವೆಂಪುರವರು ನಮ್ಮನ್ನು ಮೂವರನ್ನು ಕರೆಸಿ ರಜಿಸ್ಟ್ರಾರ್‌ನರ್ಹೋನ್ನರವರಿಂದ ಅಪಾಯಿಂಟ್‌ಮೆಂಟ್‌ಆರ್ಡರ್‌ಕೊಡಿಸಿದರು. ನಾನು ತುಮಕೂರಿಗೆ, ಸೀತಾರಾಮ ಮೈಸೂರು ಮಹಾರಾಜಾ ಕಾಲೇಜಿಗೆ, ನಾಗೇಂದ್ರಪ್ಪ ಚಿತ್ರದುರ್ಗಕ್ಕೆ. ನಾನು ಆರ್ಡರ್‌ಹಿಡಿದುಕೊಂಡು ನೇರವಾಗಿ ಡಿ.ಎಲ್‌.ಎನ್‌. ಮನೆಗೆ ಹೋದೆ. ಪೂಜ್ಯರು ಆರಾಮ ಕುರ್ಚಿಯ ಮೇಲೆ ಕುಳಿತಿದ್ದರು. ನಮಸ್ಕಾರ ಮಾಡಿ ವಿಷಯ ತಿಳಿಸಿದೆ. ಸಂತೋಷಪಟ್ಟರು. ತಮ್ಮ ಆಶೀರ್ವಾದ ಪಡೆದು ಹೋಗಲು ಬಂದೆ ಅಂದೆ ‘ನನ್ನ ಆಶೀರ್ವಾದ ಏನೂ ಮಾಡೋಲ್ಲ. ನಿನ್ನ ಶ್ರಮದಿಂದ ನೀನು ದೊಡ್ಡವನಾಗಬೇಕು. ಆಗು ಹೋಗು. ಆದರೆ ಒಂದು ಮಾತು ಯಾವತ್ತೂ ಕ್ಲಾಸ್‌ಗೆ ಹೋಗೋಕೆ ಮುಂಚೆ ಚೆನ್ನಾಗಿ ತಯಾರಾಗಿ ಹೋಗು. ಒಂದು ಗಂಟೆ ಪಾಠ ಇದ್ದರೆ, ಕನಿಷ್ಠ ಪಕ್ಷ ಮೂರು ಗಂಟೆ ತಯಾರಿ ಮಾಡ್ಕೊ. ನಿನ್ನಲ್ಲಿ ಹತಾರ ಎಲ್ಲ ಇದೆ ತಾನೆ, ಹತಾರ ಎಂದರೆ ಡಿಕ್ಷನರಿ ಇತ್ಯಾದಿ. ಕನ್ನಡ-ಕನ್ನಡ, ಹಿಂದಿ, ಇಂಗ್ಲಿಷ್‌, ಸಂಸ್ಕೃತ ಡಿಕ್ಷನರಿಗಳಿಟ್ಕೊ. ಒಂದು ಪಕ್ಷ ಸರಿಯಾದ ಅರ್ಥ ತಿಳೀದಿದ್ರೆ, ಆ ನಿಘಂಟುಗಳು ಕೊಡೋ ವಿವರ ನೋಡಿ ಯಾವುದು ಸೂಕ್ತ, ಆ ಅರ್ಥ ತಗೋ. ಇನ್ನೂ ಹೆಚ್ಚು ನಿನ್ನ ಪ್ರತಿಭೆಯನ್ನು ದುಡಿಸಿಕೊಳ್ಳೋದಾದ್ರೆ ಹೊಸದೊಂದು ಶಬ್ದಾರ್ಥವನ್ನೇ ಸೃಷ್ಟಿಸು. ಕ್ರಾಸ್‌ರೆಫರೆನ್ಸ ಬಹಳ ಮುಖ್ಯ. ನಾಳಿನ ಪಾಠಕ್ಕೆ ಈ ದಿನವೇ ಯುದ್ಧ ಸಿದ್ಧತೆ ಮಾಡಿಕೊಂಡು ಹೋಗು.

ಎರಡನೆಯದಾಗಿ, ತಡವಾಗಿ ತರಗತಿಗೆ ಕಾಲಿಡಬೇಡ. ಮುಂಚೆಯೂ ಕ್ಲಾಸ್‌ಬಿಟ್ಟು ಬರಬೇಡ. ಸಮಯ ಪಾಲನೆ, ಸಮಯ ಪ್ರಜ್ಞೆ ಅಧ್ಯಾಪಕನಾದವನಿಗೆ ಬಹಳ ಮುಖ್ಯ ನಿನ್ನ ಚಲನವಲನಗಳು ಮಕ್ಕಳಲ್ಲಿ ಶಿಸ್ತು ಕಲಿಸೋದಷ್ಟೇ ಅಲ್ಲ, ನಿನ್ನ ಬಗ್ಗೆ ವಿಶೇಷ ಗೌರವ ಮೂಡಿಸುತ್ತವೆ.

ಮೂರನೆಯದಾಗಿ, ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹೆಚ್ಚು ಹಚ್ಕೊಬೇಡ. ನಿಜಗುಣರು ಹೇಳಿದ ಹಾಗೆ ಬಳಸದಿರು ಬಾಹ್ಯದೊಳಗೆ ಅದ್ವೈತವನ್ನು ಒಳಗೇ ಪ್ರೀತಿ ಇರಲಿ, ಹೊರಗೆ ಸ್ವಲ್ಪ ದೂರದಲ್ಲಿಟ್ಟಿರು. ಅವರ ಹೆಗಲ ಮೇಲೆ ಕೈ ಹಾಕೋದು ಬ್ಯಾಡ. ಇದು ನಿನ್ನ ಹಿತ ದೃಷ್ಟಿಯಿಂದ ಒಳ್ಳೇಯದು.!;

ಪೂಜ್ಯರ ಈ ಉಪದೇಶ ನನಗಷ್ಟೇ ಅಲ್ಲ, ಯಾವ ಅಧ್ಯಾಪಕನಿಗೂ ದಾರಿದೀಪ.