ಪ್ರೊ. ನರಸಿಂಹಾಚಾರ್ಯರನ್ನು ಗೌರವಿಸಲು ಹೊರತಂದಿರುವ ಈ ಕೃತಿಯಲ್ಲಿ ಅವರ ವ್ಯಕ್ತಿತ್ವದ ನಾನಾ ಮುಖಗಳನ್ನು, ಅವರ ಸಾಧನೆ ಸಿದ್ಧಿಗಳನ್ನು ಕುರಿತು ಹಲವು ಲೇಖನಗಳು ಪ್ರಕಟವಾಗಿವೆ. ನಾನು ಈ ಲೇಖನದಲ್ಲಿ ಪ್ರೊ. ಡಿ.ಎಲ್‌.ಎನ್‌. ಅವರಲ್ಲಿನ ಉಪಾಧ್ಯಾಯನನ್ನು ಕುರಿತು ಕೆಲವು ಮಾತುಗಳನ್ನು ಹೇಳಬಯಸುತ್ತೇನೆ.

ಆನರ್ಸ್‌ ತರಗತಿಯಲ್ಲಿ ಮೂರು ವರ್ಷ, ಎಂ.ಎ. ತರಗತಿಯಲ್ಲಿ ಒಂದು ವರ್ಷ ಅವರ ಬಾಯಿಂದ ಪಾಠ ಕೇಳುವ ಸುಯೋಗ ನನಗೆ ದೊರಕಿತ್ತು. ಅವರ ವಿದ್ಯಾರ್ಥಿಗಳೆಲ್ಲರಿಗೂ ಅವರ ವಿಷಯದಲ್ಲಿ ಭಯಮಿಶ್ರಿತ ಗೌರವವಿದೆ. ಅವರು ಹಿರಿಯ ವಿದ್ವಾಂಸರು ಎಂಬ ಕಾರಣದಿಂದ ಗೌರವ; ನಮ್ಮ ಕಾಲ್ಪನಿಕ ಜ್ಞಾನ, ಆಧಾರವಿಲ್ಲದ ವಿಮರ್ಶೆ ಮುಂತಾದವುಗಳ ಆಟ ಅವರ ಮುಂದೆ ನಡೆಯುವುದಿಲ್ಲವೆಂದು ಭಯ. ಈ ಗೌರವ ಮಿಶ್ರಿತ ಭಯ-ಭಯಮಿಶ್ರಿತ ಗೌರವ ಎಂದು ಹೇಳುವುದೇ ಉಚಿತ. ಅವರನ್ನು ಸಮೀಪಿಸದಂತೆ, ದೂರದಿಂದಲೇ ನಮಸ್ಕಾರ ಹಾಕುವಂತೆ ಮಾಡುವ ಭಯವಲ್ಲ. ವಿದ್ಯಾರ್ಥಿಗಳನ್ನು ಅವರಿಗೆ ಹೆಚ್ಚು ಆತ್ಮೀಯರಾಗುವಂತೆ ಮಾಡುವ ಶಕ್ತಿಯುಳ್ಳದ್ದು: ತಾವು ಕಲಿಯಬೇಕಾದ ವಿಷಯಗಳ ವಿಪುಲತೆ ಮತ್ತು ಗಹನತೆಗಳನ್ನು, ಮಾತಿನ ಮೇಲೆ ಇರಬೇಕಾದ ಹಿಡಿತವನ್ನು ಕಲಿಸಿಕೊಡುವ ಸಾಮರ್ಥ್ಯವುಳ್ಳದ್ದು.

ನನಗೆ ಎಂ. ಎ ತರಗತಿಯಲ್ಲಿ ಪಂಪನನ್ನು ಪಾಠ ಹೇಳಿದರು. ಪಾಠವನ್ನು ಆಳಿದರು, ಬಾಳಿದರು. ಅವರು ಪಾಠ ಹೇಳುವಾಗ ಆಡುತ್ತಿದ್ದ ಒಳ್ಳೊಳ್ಳೆಯ ಮಾತುಗಳನ್ನು ಪದ್ಯದ ಪಕ್ಕದಲ್ಲಿಯೋ ಅಥವಾ ನೋಟ್‌ಪುಸ್ತಕದಲ್ಲಿಯೋ ಬರೆದುಕೊಂಡಿದ್ದೇನೆ. (ಉತ್ತಮ ವಿದ್ವಾಂಸರೂ ರಸಜ್ಞರೂ ಆದ ಉಪಾಧ್ಯಾಯರ ಇಂತಹ ಮಾತುಗಳನ್ನು ವಿದ್ಯಾರ್ಥಿಗಳು ಬರೆದಿಟ್ಟಿದ್ದರೆ ಒಳ್ಳೆಯದು. ಆ ವಾಕ್ಯಗಳು ತನ್ನ ಸ್ವಂತ ಮಾತುಗಳಿಂದ ಬೇರೆ ಎಂಬುದನ್ನು ಸೂಚಿಸಲು ಯಾವುದಾದರೂ ಚಿಹ್ನೆಯನ್ನು ಬಳಸಬಹುದು. ನಾನೇನೋ ಅವರ ಮಾತುಗಳ ಮುಂದೆ ಡಿ.ಎಲ್‌.ಎನ್‌. ಎಂಬ ಚಿಹ್ನೆಯನ್ನು ಬಳಸಿದ್ದೇನೆ.) ಈ ಮಾತುಗಳೇ ಈ ಲೇಖನಕ್ಕೆ ಮುಖ್ಯ ಆಧಾರ. ಪಂಪನ ನೆಪದಲ್ಲಿ ನಮಗೆ ಅನೇಕ ಭಾರತಗಳು, ಸಂಸ್ಕೃತ ನಾಟಕಗಳ ಪರಿಚಯವಾಯ್ತು. ಕಾವ್ಯದ ನೆಪದಲ್ಲಿ ಕಾವ್ಯಮಿಮಾಂಸೆಯಂತಹ ಅದಕ್ಕೇ ಸಂಬಂಧಿಸಿದ ಶಾಸ್ತ್ರದ ಮಾತಿರಲಿ, ಭಾಷಾವಿಜ್ಞಾನ ಮುಂತಾದ ಶಾಸ್ತ್ರಭಾಗಗಳ ಸ್ಥೂಲಪರಿಚಯವೂ ಆಯ್ತು. ಒಬ್ಬ ಕವಿಯನ್ನು ಅದರಲ್ಲೂ ಹಿರಿಯ ಕವಿಯನ್ನು ಕುರಿತು ಆಗಬೇಕಾದ ನಾನಾ ಮುಖವಾದ ವ್ಯವಸಾಯವನ್ನು ಪರಿಚಯ ಮಾಡಿಕೊಟ್ಟರು.

ಉತ್ತಮ ಉಪಾಧ್ಯಾಯನಿಗೆ ಇರಬೇಕಾದ ಗುಣಗಳಲ್ಲಿ ಮೊದಲನೆಯದು ರಸಾಭಿಜ್ಞತೆ ಪದ್ಯಗಳನ್ನು ಅನುಭವಿಸಿ ವಿವರಿಸುವುದು, ವಿವರಿಸುತ್ತ ಅನುಭವಿಸುವುದು. ವಾಗ್ರೂಪವಾದ ವಿವರಣೆಯಷ್ಟೇ ಆಂಗಿಕ ಅನುಭಾವವೂ ಅವಶ್ಯಕ. ಓದುತ್ತಿರುವಾಗಲೇ ಮುಖದ ವರ್ಣವೈರೂಪ್ಯದಿಂದ ಧ್ವನಿಯ ಏರಿಳಿತ ಪ್ರಮಾಣವ್ಯತ್ಯಾಸ ಸ್ವರೂಪವ್ಯತ್ಯಸಗಳಿಂದಲೇ ವಿದ್ಯಾರ್ಥಿಗೆ ಆ ಪದ್ಯದ ಭಾವ ತಕ್ಕಮಟ್ಟಿಗಾದರೂ ಗೋಚರಿಸಬೇಕು. ‘‘ನಾಲಗೆ ಉಪಾಧ್ಯಾಯ’’ ಎಂದಿಗೂ ಉತ್ತಮ ಉಪಾಧ್ಯಾಯ ಎನ್ನಿಸಿಕೊಳ್ಳಲಾರ. ಆದಿಪುರಾಣದ ೧.೬೧ನೆ ಪದ್ಯದಲ್ಲಿ ಊರ್ಮಿಮಾಲಿನಿಯ ಹೆಸರೇ ಅತ್ಯಂತ ಮನೋಹರವಾಗಿದೆ ವರ್ಣನೆ ಬಂದಿದೆ. ಅದನ್ನು ಅವರು ಅನುಭವಿಸಿ ವಿವರಿಸಿದ ಬಗೆ ನನ್ನ ಕಣ್ಣಿಗೆ ಇನ್ನೂ ಕಟ್ಟಿದಂತಿದೆ. “ಪಂಪ ಎಲ್ಲಿಯೋ ಕಂಡು ಆನಂದಿಸಿದ ಯಾವುದೋ ನದಿಯ ಒಂದು ಭಂಗಿಯನ್ನು ಇಲ್ಲಿ ಚಿತ್ರಿಸಿದ್ದಾನೆ. ನನಗಂತೂ ಈ ಪದ್ಯ ದಿನದಿನಕ್ಕೆ ಹೊಸದು. ಎಷ್ಟು ಸುಕುಮಾರ ವಾದ ಚಿತ್ರ!” ಎಂದು ಅವರು ಹೇಳಿದರು. ಅವರು ಓದುವ ರೀತಿಯೇ ವಿಶಿಷ್ಟವಾದುದು. ಕೈಯನ್ನು ಅತ್ತ ಇತ್ತ ಆಡಿಸುತ್ತ ತಲೆಯನ್ನು ತೂಗುತ್ತ ಓದಿ ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಆಸ್ವಾದಿಸಿ ನಗುಮೊಗದಿಂದ ವಿವರಿಸುತ್ತಾರೆ. ಅದೇ ಆ.ಪು.ದ ೩.೫೩ರಲ್ಲಿ ಜಿನಧರ್ಮದ ಸಾರರೂಪವಾದ ಮಾತುಗಳು ಬಂದಿವೆ. ಜೀವನ ಅಸಾರವಾದುದು, ವೈರಾಗ್ಯವೇ ಶ್ರೇಷ್ಠವಾದುದು; ಸಾವು ಎಲ್ಲರಿಗೂ ಸಮಾನ, ಅದಕ್ಕಾಗಿ ಏಕೆ ಗೋಳಿಡಬೇಕು, ಚಿಂತಿಸಬೇಕು, ನೋಯಬೇಕು, ಹಲಬುಬೇಕು? – ಈ ಪದ್ಯವನ್ನು ಓದುವಾಗ ಕಣ್ಣು ಹನಿತಿತ್ತು, ಧ್ವನಿಮಾರ್ದವವಾಗಿತ್ತು. ಬಹುಶಃ ಅವರ ಜೀವನದ ಕಹಿಯೆಲ್ಲಾ ಕಲಕಿ ಮೇಲೆ ಬಂದಿತೋ ಏನೋ ಅದರ ಜೊತೆಗೇ ಏನೋ ಸಮಾಧಾನ, ತೃಪ್ತಿ! “One of the loveliest in Pampa’’ ಎಂದು ವ್ಯಾಖ್ಯಾನಿಸಿದರು. ವ್ಯಕ್ತಿ ವಿದ್ವತ್ತಿಗೆ ಮನಸೋತರೆ ಆತನಲ್ಲಿ ಭಾವುಕತೆ ಬತ್ತಿ ಹೋಗುತ್ತದೆ ಎಂಬ ಮಾತು ಅಷ್ಟು ನಿಜವಲ್ಲ. ಪ್ರೊ.ಡಿ.ಎಲ್‌.ಎನ್‌. ಅವರ ವಿಷಯದಲ್ಲಂತೂ ಈ ಮಾತು ಹೊಂದದು ಎಂಬುದಂತೂ ಸ್ಪಷ್ಟ.

ಎಷ್ಟೋ ಸಾರಿ ಪದ್ಯದ ನಾದಮಾಧ್ಯುರ್ಯಕ್ಕೆ ಮನಸೋತು ಮಾರು ಹೋಗುತ್ತಿದ್ದುದುಂಟು. “ಭಾವಕ್ಕಿಂತಲೂ ಭಾಷೆಯ ಮೇಲಿನ ಪ್ರಭುತ್ವವನ್ನು ಗಮನಿಸಿ” “This is mastery of language’’ – ಈ ಮಾತುಗಳನ್ನು ಆಡುತ್ತಿದ್ದರೂ, “ಮಂದಮಂದಂ ತೀಡಿತ್ತಾಲೋಲಗಂಗಾ ಲಲಿತ ಲಹರಿಕಾಸಾರಸಾರಂ ಸಮೀರಂ” “ಪ್ರಿಯಹಂಸೀಯುತನಾದೆಯ ತೀರಸ್ಥಲವಂಗಚೂತಲವಲೀಪುಷ್ಪಾಸವಾಸ್ವಾದಿತಾಲಿ ಯುತನ್ಮಾದೆಯ ಸೀತೋದೆಯ ಪೋಲ್ವೆಗಿಲ್ಲ ತೊರೆಗಳ್‌” – ಇಂತಹ ಕಡೆಗಳಲ್ಲಿ ಬರುವ ಭಾವವನ್ನು ಹೊರಲು ಸಮರ್ಥವಾದ ಬಂಧವನ್ನು ಬಹುವಾಗಿ ಮೆಚ್ಚುತ್ತಿದ್ದರು. ಪದ್ಯವನ್ನು ಓದುವ ರೀತಿಯಿಂದಲೇ ಅದರ ಸ್ವಾರಸ್ಯ ಹೆಚ್ಚುವಂತೆ ಮಾಡುತ್ತಿದ್ದರು. “ಮೊಗಂ ಉತ್ಫುಲಸರೋಜಹಾಸಿ” ಎಂದು ನಾವು ಓದಿದರೆ ಅದನ್ನೇ ಅವರು “ಮೊಗಂ? ಉತ್ಫುಲ್ಲಸರೋಜಹಾಸಿ” ಎಂದು ಪ್ರಶ್ನೋತ್ತರ ರೂಪಕ್ಕೆ ತಿರುಗಿಸುತ್ತಿದ್ದರು. ಈ ಒಂದು ಸಣ್ಣ ಮಾರ್ಪಾಟಿನಿಂದ ಪದ್ಯದ ಸೊಗಸು ಬಹುವಾಗಿ ಹೆಚ್ಚುವುದನ್ನು ಗಮನಿಸಬಹುದು.

ಪ್ರೊ. ಡಿ.ಎಲ್‌.ಎನ್‌. ಅವರು ವಿದ್ವಾಂಸರಾದರೂ ವಿದ್ವತ್ತು ಅವರ ಮೇಲೆ ಭಾರವಾಗಿ ಕುಳಿತಿಲ್ಲ. ಅವರ ಪಾಠ ವಿದ್ವತ್ತಿನ ಭಾರದಿಂದ ಕುಗ್ಗುವುದಿಲ್ಲ. ಅವರು ಎಂತಹ ವಿದ್ವಾಂಸರೋ ಅಷ್ಟೇ ಸೂಕ್ಷ್ಮ ವಿಮರ್ಶಕರೂ ಹೌದು. ಅವರು ಆಡುವ ಮಾತಿಗೆ ಬೆಲೆಯಿದೆ, ಕಾರಣ ಆ ಮಾತಿಗೆ ಹಿನ್ನಲೆಯಾಗಿ ದೀರ್ಘವಾದ ಅಭ್ಯಾಸ ಪರಿಶ್ರಮವುಂಟು, ಆಲೋಚನೆಯುಂಟು. ತಟಕ್ಕನೆ ಯಾವುದೇ ತೀರ್ಮಾನಕ್ಕೆ ಬಂದು ಅದೇ ಸರಿ ಎಂದು ಹಠಹಿಡಿಯುವ ಬದಲು, ಆಲೋಚಿಸಿ ಒಂದು ತೀರ್ಮಾನಕ್ಕೆ ಬರುವುದು ಅವರ ಮಾರ್ಗ. ಅವರ ತೀರ್ಮಾನಗಳನ್ನು ಬದಲಾಯಿಸುವುದು ಕಷ್ಟವೇ ಸರಿ. “ಇಲ್ಲಿ ಅರ್ಥವಿಲ್ಲ, ಆದರೆ ಬಂಧ?” ಎಂದು ಪದ್ಯವನ್ನು ಮೆಚ್ಚಿಕೊಂಡರೆ, ಬರಿಯ ವಿದ್ವತ್ಪ್ರದರ್ಶನಕ್ಕಾಗಿ ರಚಿತವಾಗಿರುವ ಪದ್ಯವನ್ನು Scholastic ಎಂದು ತಳ್ಳಿ ಹಾಕುತ್ತಾರೆ. ಆ.,ಪು.ದ ೧. ೬೬ನೆಯ ಪದ್ಯದ ಕೊನೆಯಲ್ಲಿ ಬರುವ ‘ಬಸಂತದೊಳ್‌ ಬಸದಿಯ ಬಾಗಿಲಂ ತೆಱೆದ ಮಾೞ್ಕಿಯೊಳಿದ್ದುವು ಬಂದು ಮಾವುಗಳ್‌” ಎಂಬ ಮಾತನ್ನು ವಿವರಿಸುತ್ತ, “ಪಂಪ ಕವಿಯಲ್ಲಿ ಎಷ್ಟೋ ಸಾರಿ ಮೊದಲು ಒಂದು ಹೊಳವು, ನಂತರ ಅದರ ಸಮರ್ಥನೆ, ವಿವರಣೆ” ಎಂದು ವಿಮರ್ಶಿಸಿ ಕವಿಯ ಮನಸ್ಸಿನಲ್ಲಿ ನಡೆದಿರಬಹುದಾದ ವ್ಯಾಪಾರವನ್ನು ಅನುಮಾನಿಸುತ್ತಿದ್ದರು. “ವರ್ಣನೆಯಲ್ಲಿ ಕಥೆ ಎಲ್ಲಿಯೋ ಹೋಯ್ತು” ೧೪ನೇ ಅಶ್ವಾಸದ ಕೊನೆಯನ್ನು ಕುರಿತು “That finishes the real poetry pampa.’’ “ಸಂಪ್ರದಾಯ ಪಂಪನನ್ನೂ ಬಿಟ್ಟಿಲ್ಲ”, ಪಂಪನಿಗೆ ಹಾಸ್ಯದಲ್ಲಿ ಅಭಿರುಚಿಯಿಲ್ಲ. ಕನ್ನಡ ಕವಿಗಳಲ್ಲಿ ಯಾರಿಗಾದರೂ ಹಾಸ್ಯದೃಷ್ಟಿಯಿದ್ದರೆ ಅದು ಕುಮಾರವ್ಯಾಸನಿಗೆ, ಪಂಪ ನಕ್ಕದ್ದನ್ನು ಕಾಣುವುದೇ ಅಪೂರ್ವ, ಗಾಂಭೀರ್ಯದ ಎತ್ತರದಲ್ಲಿ ಪರಿಹಾಸದ ನೆರಳೂ ಇಲ್ಲ”. “ಬೇಟೆ ವರ್ಣನೆಯಲ್ಲಿ ಪಂಪ ಹರಟೆಮಲ್ಲ”, The usual way in which pampa wants the sun to set’’ (ಪಂ.ಭಾ.ದ. ೧೩. ೩೩ ಕುರಿತು) “ಪಂಪನಿಗೆ ಎಷ್ಟೋ ಸಾರಿ ಇರುವ ನೂಲು sfಸ್ವಲ್ಪ, ಮಗ ದೊಡ್ಡದು; ಆದ್ದರಿಂದ ಅನಾವಶ್ಯಕವಾದುದನ್ನು ಸೇರಿಸುತ್ತಾನೆ” – ಹೀಗೆ ನಿರ್ದಾಕ್ಷಿಣ್ಯವಾಗಿ ಪಂಪನನ್ನು ಖಂಡಿಸುತ್ತಿದ್ದರು. ಅವರ ಖಂಡನೆಯಲ್ಲಿ ಸಹಾನುಭೂತಿ ಇರುತ್ತಿತ್ತು. ಸಂಯಮವಿರುತ್ತಿತ್ತು. ಆದರೆ ಅವರಿಗೆ ಖಂಡನೆಯೇ ವಿಮರ್ಶೆಯಲ್ಲ.

ದೋಷವನ್ನು ಹೇಗೆ ಎತ್ತಿ ತೋರಿಸುತ್ತಿದ್ದರೋ ಹಾಗೆಯೇ ಉತ್ತಮವಾದುದನ್ನೂ ಗುರುತಿಸುತ್ತಿದ್ದರು. ಅದೇ ಅವರಿಗೆ ಪ್ರಧಾನ ಎಂದರೂ ಸರಿಯೆ. ದೋಷವನ್ನು ಗುರುತಿಸುತ್ತಿದ್ದುದು ಉತ್ತಮವಾದವರ ರಸಾಸ್ವಾದನೆಯನ್ನು ಹೆಚ್ಚಿಸಲಿಕ್ಕಾಗಿಯೇ. ಅವರ ಕೆಲವು ಮಾತುಗಳನ್ನು ಆರಿಸಿ ಕೊಡುತ್ತೇನೆ. ಪಂ.ಭಾ.ದ ೧.೭೬ನ್ನು ಕುರಿತು “Compact but never abrupt brevity’’ ; ೭. ೬೪ರ ಭಾಷೆ “telegraphic langauges’’; ೮. ೨೪ರ ಕುರಿತು “a lovely stanza- The mere quickness of it!’’ ಅರ್ಜುನ ಕಿರಾತನ ಗಂಟಲನ್ನು ಮೆಟ್ಟುವ ವಿಷಯವನ್ನು ಕುರಿತು ಅವರ ಟೀಕೆ “rather a funny thing’’ (ಪಂಪ ಆ ಸನ್ನಿವೇಶದಲ್ಲಿ ಮಾಡಿರುವ ಅಭಾಸವನ್ನು ಕುರಿತು ಇದಕ್ಕಿಂತ ಹೆಚ್ಚು ಟೀಕೆ ಅನವಶ್ಯಕ); ೯ನೇ ಆಶ್ವಾಸದಲ್ಲಿ ಕೃಷ್ಣ ವಿದುರನ ಮನೆಗೆ ಹೋದ ಪ್ರಸಂಗವನ್ನು ಕುರಿತು ಹೀಗೆ ಹೇಳುತ್ತಾರೆ. “ಕೃಷ್ಣ ವಿದುರನ ಮನೆಗೆ ಹೋದ ಸನ್ನಿವೇಶವನ್ನು ಕುಮಾರವ್ಯಾಸನಿಗೆ ಗಣಿ ಸಿಕ್ಕಂತೆ ಆಗಿದೆ. ಪಂಪ ವಿಸ್ತರಿಸದಿದ್ದುದನ್ನು ಕುಮಾರವ್ಯಾಸ ಎತ್ತಿಕೊಳ್ಳುತ್ತಾನೆ. ಉದ್ಯೋಗ ಪರ್ವದಲ್ಲಿ ಕೃಷ್ಣ ಸಂಧಿಗೆ ಹೋದ ಪ್ರಸಂಗ ಕುಮಾರವ್ಯಾಸದಲ್ಲಿ ಜಾಳವಾಳ, ಸಾಂದ್ರತೆ ಇಲ್ಲ. ಪಂಪ ಮಾತ್ರ ಇಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾನೆ, ಸಿದ್ಧಿ ಪಡೆದಿದ್ದಾನೆ” ೯. ೮೫ನು ಕುರಿತು ಪ್ರತಿಮೆಗೆ ಕಣ್ಣು ಬಿಡಿಸಿದಂತಿದೆ ಈ ಪದ್ಯ”; ೧೦. ೨೩ನ್ನು ಕುರಿತು “ವಾಚ್ಯಾರ್ಥದ ಸುತ್ತ ಹಾರಾಡುವ ಅರ್ಥಪಕ್ಷಿಗಳನ್ನು ಗಮನಿಸಿ”, ೧೨. ೧೩೯ನ್ನು ಕುರಿತು “ಕಾಸಿನಗಲ್ಲದ ದಂತದಲ್ಲಿ ಚಿತ್ರ ಕೊರೆದಂತೆ” – ಇಲ್ಲೆಲ್ಲಾ ಸಂಗ್ರಹವಾಗಿ ವಿಮರ್ಶೆ ಮಾಡುವ ಅವರ ಶಕ್ತಿ ಗೋಚರಿಸುತ್ತದೆ. ಅವರಿಗೆ ಕರ್ಣನ ಪಾತ್ರವೆಂದರೆ ತುಂಬಾ ಪ್ರಿಯ, ಏಕೆಂದರೆ ಅವರೇ ಹೇಳಿದಂತೆ ಕರ್ಣನಿಗೆ ಒಂದು ಸಹಜ ವ್ಯಕ್ತಿತ್ವ ಉಂಟು, ಪಂಪ ಅರ್ಜುನನಲ್ಲಿ ವ್ಯಕ್ತಿತ್ವವನ್ನು ತುಂಬಲು ಪ್ರಯತ್ನ ಪಟ್ಟಿದ್ದಾನೆ. ಕರ್ಣನ ಜೀವನ “a tragedy of ideals’’ ಎಂದು ಅವನಿಗೆ ಮರುಗುತ್ತಿದ್ದರು. ಅವರ ವಿಮರ್ಶನಶಕ್ತಿಗೆ ಮತ್ತೊಂದು ಉದಾಹರಣೆಯನ್ನು ಕೊಡಬಹುದು. ಒಂದು ಸಾರಿ ಹೇಳಿದರು –“ಪಂಪನಿಗೆ ಸಂಯಮ ಉಂಟು. ಅವನು ಭಾವವನ್ನು ಸಂಯಮಗೊಳಿಸಿ intellectualise ಮಾಡಬಲ್ಲ. ಪಂಪನಿಗೆ ಬುದ್ಧಿಬಲ ಮನೋಬಲ ಎರಡೂ ಉಂಟು. ಕುಮಾರವ್ಯಾಸನಿಗೆ ಭಾವಬಲವುಂಟು, ಬುದ್ಧಿಬಲ ಕಡಿಮೆ. (ಕು.ವ್ಯಾ.ನ ವಿಷಯದಲ್ಲಿ ಈ ಮಾತು ಹೇಳುವುದು ಕಷ್ಟ ಎನ್ನುತ್ತಾರೆ ಒಮ್ಮೊಮ್ಮೆ) ಪಂಪ ಒಂದು ತಲೆಮಾರಿನ ಸಮಸ್ತ ಅನುಭವವನ್ನು ಒಂದು ಪದ್ಯದಲ್ಲಿ ಹೇಳಬಲ್ಲ.

ಮೇಲ್ಕಂಡ ಮಾತುಗಳು ಅವರ ವಿಮರ್ಶೆಯ ವಿಪುಲತೆಗೆ ಒಂದು ತೋರ್ಬೆರಳು ಮಾತು. ಅಂತಹ ವಿಮರ್ಶೆಯಲ್ಲಿ ಅವರ ರಸಜ್ಞತೆ ಆಲೋಚನೆಯ ತೀಕ್ಷ್ಣತೆಗಳು ಗೋಚರವಾಗುತ್ತಿದ್ದವು. ಈ ರೀತಿಯ ವಿಮರ್ಶೆಗಿಂತ ಅವರಿಗೆ ಪ್ರಿಯವಾದ ಮತ್ತೊಂದು ರೀತಿಯ ವಿಮರ್ಶೆ ಇದೆ – ಅದೇ ತೌಲನ ವಿಮರ್ಶೆ (Comparative critism). ಅವರ ಬಹುಜ್ಞತೆ ಗೋಚರವಾಗುತ್ತಿದ್ದುದು ಇಲ್ಲಿ. ಒಂದು ಕೃತಿಯನ್ನು ಓದಿ ಅದರ ಯೋಗ್ಯಾಯೋಗ್ಯತೆಗಳನ್ನು ನಿರ್ಧರಿಸುವುದಕ್ಕಿಂತ. ಆ ಕೃತಿಯ ಆಕರ, ಅಲ್ಲಿ ಬರುವ ಸನ್ನಿವೇಶಗಳ ಆಕರಗಳು, ಕವಿಯ ಮೇಲೆ ಪ್ರಭಾವ ಬೀರಿರುವ ಕೃತಿಗಳು, ಇವುಗಳನ್ನು ಬಳಸಿಕೊಂಡಿರುವ ರೀತಿ; ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಒಂದಕ್ಕೊಂದನ್ನು ಹೋಲಿಸಿ ವಿಮರ್ಶಿಸುವ ತೌಲನ ವಿಧಾನದಿಂದ ಕವಿಯ ಯೋಗ್ಯತೆಯನ್ನು ಹೆಚ್ಚು ಖಚಿತವಾಗಿ ತಿಳಿಯಬಹುದು ಎಂಬುದು ಅವರ ಮತ, ಇದು ಸರಿಯೆಂದು ಕಾಣುತ್ತದೆ. ಸ್ವತಂತ್ರ ವಿಮರ್ಶೆಗೆ ಮೂಲಭೂತವಾದ ಪ್ರತ್ಯೇಕ ನಿಯಮಗಳನ್ನು ಹಾಕುವುದು ಅಸಾಧ್ಯವಲ್ಲವಾದರೂ ಪ್ರಯಾಸಕರವೆಂಬುದೇನೋ ನಿಜ. ಅಂತಹ ವಿಮರ್ಶೆಗಿಂತ ಇದು ಹೆಚ್ಚು ನಿರ್ದಿಷ್ಟ ಹಿಡಿತಕ್ಕೆ ಸಿಗತಕ್ಕದ್ದು, ಸಾಧಿಸಿ ತೋರಲು ಹೆಚ್ಚು ಸುಲಭವಾದದ್ದು.

ಪಂಪ ತನ್ನ ಪ್ರಥಮ ಕೃತಿ ಆದಿಪುರಾಣದಲ್ಲಿ ಹೆಜ್ಜೆ ಹೆಜ್ಜೆಗೆ ಜಿನಸೇನಾಚಾರ‍್ಯರ ಪೂರ್ವಪುರಾಣವನ್ನು ಅನುಸರಿದ್ದಾನೆ. ಪಂಪ ಕೇವಲ ಅನುವಾದಕನಾಗಿದ್ದರೆ ಅವನ ಕೃತಿಯಿಂದ ಅವನಿಗೆ ಸಂದಿರುವ ಗೌರವದಲ್ಲಿ ಬಹುಪಾಲು ಜಿನಸೇನಾಚಾರ್ಯರಿಗೆ ಸಲ್ಲಬೇಕಾಗುತ್ತಿತ್ತು. ಅದೊಂದು ಉತ್ತಮ ಕೃತಿ, ಕನ್ನಡಕ್ಕೆ ಭಾಷಾಂತರಿಸಲು ಯೋಗ್ಯವಾದುದು ಎಂದು ಗುರುತಿಸಿ ಅದನ್ನು ಅನುವಾದಿಸಿದುದರ ಗೌರವ ಮಾತ್ರ ಪಂಪನಿಗೆ ದೊರಕುತ್ತಿತ್ತು. ಪಂಪನ ಕೃತಿ ಕಥಾನಿರೂಪಣೆಯಲ್ಲಿ ಜಿನಸೇನಾಚಾರ್ಯರನ್ನು ಬಹುಪಾಲು ಅನುಸರಿಸಿದ್ದರೂ ಪ್ರತಿಭೆಯ ಸ್ವತಂತ್ರ ಮಿಂಚು ಹೆಜ್ಜೆಹೆಜ್ಜೆಗೆ ಹೊಳೆಯುವುದನ್ನು ಕಂಡಾಗ ಆದಿಪುರಾಣಕ್ಕೆ ಉತ್ಕೃಷ್ಟ ಸ್ವತಂತ್ರ ಕೃತಿಯ ಸ್ಥಾನ ದೊರಕಬೇಕಾಗುತ್ತದೆ. ಇದು ಸಿದ್ಧವಾಗುವುದು ತೌಲನ ವಿಮರ್ಶೆಯಿಂದ. “ಪೂರ್ವ ಪುರಾಣದಲ್ಲಿ ಈ ವರ್ಣನೆ ಇಲ್ಲ” ಈ ಭಾಗ ಮೂಲದಲ್ಲಿ ಇಷ್ಟು ಹೃದಯಸ್ಪರ್ಶಿಯಾಗಿಲ್ಲ ಎಂದೋ ಎರಡು ಕೃತಿಗಳನ್ನೂ ಹೋಲಿಸಿ ತೂಗಿ ಅಳೆಯುತ್ತಿದ್ದರು. ಮೂಲದಲ್ಲಿ ಭರತನು ತನ್ನ ಐಶ್ವರ್ಯವು ಕ್ಷಣಿಕವೆಂದು ತಿಳಿದೂ ವೃಷಭಾದ್ರಿಯಲ್ಲಿ ಶಾಸನವನ್ನು ಬರೆಯಿಸುತ್ತಾನೆ, ಆಗ ದೇವತೆಗಳು ಜಯಧ್ವನಿ ಮಾಡುತ್ತಾರೆ. ಇದಕ್ಕಿಂತ ಪಂಪನ ನಿರೂಪಣೆ ಸೊಗಸಾದುದು. ಭರತ ವೃಷಭಾದ್ರಿಗೆ ಹೋಗಿ ನೋಡಿದಾಗ ಅಲ್ಲಿ ಅವನಿಗೆ ಮುನ್ನ ಅನೇಕ ಸಹಸ್ರ ಚಕ್ರವರ್ತಿಗಳು ಬೆಟ್ಟದ ತುಂಬಾ ಶಾಸನ ಬರೆಯಿಸಿರುತ್ತಾರೆ. ಭರತನ ಗರ್ವರಸ ಸೋರುತ್ತದೆ; ಒಂದು ಶಾಸನವನ್ನು ಅಳಿಸಿ ‘ನೆಲಂ ನಿಲ್ವಿನೆಗಂ’ ಇರತಕ್ಕಂತಹ ಶಾಸನ ಬರಸುತ್ತಾನೆ. ಪಂಪನ ಸೃಷ್ಟಿ ಅದ್ಭುತವಾದುದು.

ಪಂಪನ ಮೇಲೆ ವಾಲ್ಮೀಕಿ ವ್ಯಾಸ ಭಾಸ ಕಾಳಿದಾಸ ಬಾಣ ಮುಂತಾದ ಸಂಸ್ಕೃತ ಕವಿಗಳ ಪ್ರಭಾವ ಹೇರಳವಾಗಿರುವುದನ್ನು ಎತ್ತಿ ತೋರಿಸುತ್ತಿದ್ದರು. “ಪಂ.ಭಾ.ದ ೩.೨೩ರಲ್ಲಿ ವಾಲ್ಮೀಕಿಯ ಪ್ರಭಾವವಿದೆ. ಆದರೆ ವಾಲ್ಮೀಕಿಯ ವರ್ಣನೆಯೇ ಸೊಗಸಾದುದು.” “ಭಟಖಡ್ಗಮಂಡಲೋತ್ಪಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ (ಆ.ಪು.೧೪.೩೦) ಎಂಬಲ್ಲಿನ ಸಮಾಸ ಬಾಣನದು. ಈ ಸುಂದರೋಕ್ತಿ ಪೂರ್ವಪುರಾಣದಲ್ಲಿಲ್ಲ. ಪಂಪನ ವೈಶಿಷ್ಟ್ಯವೇನೆಂದರೆ ಬಾಣನ ಗದ್ಯಕೃತಿಯಲ್ಲಿ ಲಯದ ಚೆಲುವನ್ನು (rhythamic beauty) ಕಂಡುಹಿಡಿದು ಅದೇ ಸಮಾಸ ವಾಕ್ಯವನ್ನು ವೃತ್ತದಲ್ಲಿ ಬಳಸಿಕೊಂಡದ್ದು. ಸಂಸ್ಕೃತ ಬಳಸಿದರೆ ಹೀಗೆ ಬಳಸಬೇಕು. ಪಂಪನ ಛಂದೋಪ್ರಜ್ಞೆಗೆ ಇದು ಉಜ್ವಲ ಸಾಕ್ಷಿ”. ಪಂಪನ ಮಾರ್ಪಾಟುಗಳ ಸಾರ್ಥಕತೆಗೆ ಮತ್ತೊಂದು ಉದಾಹರಣೆ” ಬಾಣನ ಲಕ್ಷ್ಮೀವಿಡಂಬನೆ ಪ್ರಸಿದ್ಧವಾದುದು, ಸುಂದರವಾದುದು. ಆದರೆ ಅದು ಮಂತ್ರಿ ಶುಕನಾಸನು ರಾಜಕುಮಾರ ಚಂದ್ರಾಪೀಡನಿಗೆ, ಯೌವನದ ಹೊಸಿಲಲ್ಲಿ ಕಾಲಿಡುತ್ತಿರುವವನಿಗೆ, ನೀತಿಬೋಧೆ ಮಾಡುವ ಸಂದರ್ಭದಲ್ಲಿ ಬರುತ್ತದೆ. ಪಂಪನು ೧೩ನೆಯ ಆಶ್ವಾಸದಲ್ಲಿ ಬೇರೊಂದು ಸಂದರ್ಭದಲ್ಲಿ ತಂದಿರುವುದು ಅವನ ಔಚಿತ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆ. ಭರತ ಬಾಹುಬಲಿಗಳ ಪ್ರಸಂಗವನ್ನು ವಿವರಿಸುತ್ತಿರುವಾಗ ಅದರ ಕಟ್ಟಡವನ್ನು ಪ್ರಶಂಸಿಸಿ ಅದೇ ಸನ್ನಿವೇಶವನ್ನು ರತ್ನಾಕರ ನೀರಸವಾಗಿ ಮಾಡಿದುದಾಗಿ ನೆನಪಿಗೆ ತಂದುಕೊಟ್ಟರು. ಒಮ್ಮೊಮ್ಮೆ ಕವಿಗಳಿಗೆ ಅದೃಷ್ಟವಶಾತ್‌ ಅವರ ಯೋಗ್ಯತೆಗೆ ಮೀರಿ ಪ್ರಶಂಸೆ ಸಿಗುವುದುಂಟು. ರತ್ನಾಕರ ಅಂಥ ಕವಿಗಳಲ್ಲಿ ಒಬ್ಬ. ಅದೇ ಸನ್ನಿವೇಶವನ್ನು ವಿಮರ್ಶಿಸುವಾಗ ಪ್ರೊ. ಡಿ. ಎಲ್‌. ಎನ್‌. ಹೇಳಿದರು. “Ratnakara is unnecessarily made much of” ಎಂದು.

ಇಂತಹ ತೌಲನ ವಿಮರ್ಶೆ ಮೂಲದ ಉತ್ಕೃಷ್ಟತೆಯನ್ನು ಬಿಚ್ಚಿ ತೋರಿಸಲೂ ಸಹಾಯಕವಾಗುತ್ತದೆ. ಪಂಪ ವ್ಯಾಸಭಾರತದಿಂದ ಕೆಲವು ಸನ್ನಿವೇಶಗಳನ್ನು ಆರಿಸಿಕೊಳ್ಳದೆ ಬಿಟ್ಟದ್ದನ್ನು ಕಟುವಾಗಿ ಟೀಕಿಸಿದ್ದುಂಟು. ವ್ಯಾಸಭಾರತದಲ್ಲಿ ಧರ್ಮರಾಜ ದ್ಯೂತದಲ್ಲಿ ಸೋತನಂತರ ಕುಪಿತನಾದ ಭೀಮ ಅರ್ಜುನನಿಗೆ ಬೆಂಕಿ ತಾ, ಧರ್ಮಜನ ಕೈ ಸುಡುತ್ತೇನೆ ಎಂದು ಕೂಗುತ್ತಾನೆ. ಪಂಪ ಇದನ್ನು ಕೈಬಿಟ್ಟಿರುವುದು ದೊಡ್ಡ ದೋಷ. ವ್ಯಾಸನಲ್ಲಿ – What a stroke of genius!” ಸೌಪ್ತಿಕ ಪರ್ವದಲ್ಲಿ ಬರುವ ಕಾಗೆ ಗೂಬೆಗಳ ವೃತ್ತಾಂತ ಅಶ್ವತ್ಥಾಮ ಅದನ್ನು ಕಂಡು ಪಾಂಡವರನ್ನು ಮೋಸದಿಂದಲೇ ಕೊಲ್ಲಬೇಕೆಂದು ನಿಶ್ಚಯಿಸಿದ್ದು – ಪಂಪ ಈ ಸನ್ನಿವೇಶವನ್ನು ಬಿಟ್ಟುಬಿಟ್ಟಿದ್ದಾನೆ. ಈ ಸನ್ನಿವೇಶವನ್ನು ಕುರಿತು ಅವರು ಆಡಿದ ಮಾತುಗಳಿವು “It is the most terrible thing; Titanic imagination-not possible to go beyond Vyasa here, ಎಡ್ಗಾರ್‌ಆಲನ್‌ಪೋನಂಥವರೇ ಬರಬೇಕೇನೋ! ವ್ಯಾಸರಿಗೆ ಅತ್ಯುಜ್ವಲವಾದ ಕಾಣಿಕೆ ಇದು. ಹಾಗೆಯೆ ಏಕಲವ್ಯನ ಕತೆಯನ್ನು ಸದ್ದಿಲ್ಲದೆ ಕೈಬಿಟ್ಟಿದ್ದಾನೆ; ಕಾರಣ, ಮೊದಲನೆಯದಾಗಿ ಅದು ನೇರವಾಗಿ ಕತೆಗೆ ಸಂಬಂಧಿಸಿಲ್ಲ, ಎರಡನೆಯದಾಗಿ ಅದರಿಂದ ಅರ್ಜುನನ ಪಾತ್ರ ಕೆಳಗಿಳಿಯುತ್ತದೆ. ಆದರೂ ಏಕಲವ್ಯನದು ಎಂತಹ ಮಹಾಪಾತ್ರ! ಹೀಗೆ ತೌಲನ ವಿಮರ್ಶೆ ಒಬ್ಬ ಕವಿಯ ಸ್ಥಾನ ನಿರ್ದೇಶನಕ್ಕೆ ತುಂಬಾ ಸಹಾಯಕಾರಿಯಾಗುತ್ತದೆ.

ಕಾವ್ಯವನ್ನು, ಪಾಠ ಹೇಳುವಾಗ ಕಾವ್ಯಮೀಮಾಂಸೆಯಲ್ಲಿ ತಮಗೆ ಒಪ್ಪಿಗೆಯಾದ ಕೆಲವು ಸಾರಿ ತಮ್ಮದೇ ಆದ ಹಲವಾರು ಗಹನ ವಿಷಯಗಳನ್ನು ಚರ್ಚಿಸುತ್ತಿದ್ದರು. ಅವರ ಪ್ರಕಾರ ಕಾವ್ಯವು ಶಾಂತಿ ಸಮಾಧಾನಗಳನ್ನು ಪಡೆಯಲು, ಆತ್ಮಸಾಕ್ಷಾತ್ಕಾರ ಹೊಂದಲು ಒಂದು ಮಾರ್ಗ – ಈ ದೃಷ್ಟಿಯಿಂದ ಆದಿಪುರಾಣ ಉತ್ತಮ ಕಾವ್ಯವೆಂದು ಒಪ್ಪಿಕೊಳ್ಳಬೇಕು. ಕವಿ ಸಂಪ್ರದಾಯದಿಂದ ತಪ್ಪಿಸಿಕೊಂಡು ಸ್ವಂತವಾಗಿ ಎಷ್ಟರಮಟ್ಟಿಗೆ ವರ್ಣಿಸುವನೋ ಅಷ್ಟು ಶಕ್ತ ಕವಿ. ಕಲೆ ಹೊಸ ಹೊಸ ವಿಷಯಗಳನ್ನು ತುಂಬುತ್ತಿದ್ದರೆ ಶಕ್ತಿಯುತವಾಗುತ್ತದೆ. ಭಾವಗುಣದಷ್ಟೇ ಪ್ರಧಾನವಾದುದು ಬುದ್ಧಿಗುಣ. ಕವಿ ಸಮಕಾಲೀನ ಶಾಸ್ತ್ರಗಳನ್ನು ಬಳಸಿಕೊಳ್ಳಬೇಕು, ಅವು ಕಾವ್ಯದಲ್ಲಿ ಹಾಸುಹೊಕ್ಕಾಗಿ ಸೇರಬೇಕು. ಇವು ಅವರ ಮಾತುಗಳು “ಪಂಪ ತನ್ನ ಕೃತಿಗಳಲ್ಲಿ ತನ್ನ ಕಾಲದ ಕಾಮಶಾಸ್ತ್ರ ಗಜಶಾಸ್ತ್ರ ವಿಷವೈದ್ಯಾದಿಗಳಿಂದ ಪ್ರತಿಮೆಗಳನ್ನು ಎತ್ತಿಕೊಂಡಿದ್ದಾನೆ. ಅವನ ಗುರಿ ಭಾವವನ್ನು ಸಾಂದ್ರವಾಗಿಡುವುದೇ ಹೊರತು ನೀರಾಗಿಸುವುದಲ್ಲ. Dilution is the tragedy of modern poets, ಭೀಮನ ಕೋಪ ನೋಡಿ –We want such passion in poetry, ಕತ್ತಲಲ್ಲಿ ಚಿಮ್ಮುವ ರೈಲ್‌ಎಂಜಿನ್ನಿನ ಕಿಡಿಗಳಂತೆ ಭೀಮನ ಕೋಪದ ಕಿಡಿಗಳು ನಾನಾವಿಲಾಸದಲ್ಲಿ ಮಗ್ನವಾಗಿ ಭೀಮಪ್ರತಿಜ್ಞೆಯ ವ್ಯಾವರ್ಣನೆಯಲ್ಲಿ ಪಂಪ ವ್ಯಾಸರಿಗಿಂತ ಮುಂದೆ ಹೋಗಿದ್ದಾನೆ.” ಆಧುನಿಕ ಕವಿಗಳ ಮೇಲಿನ ಆಕ್ಷೇಪಣೆಯನ್ನು ಮೇಲ್ಕಂಡಂತೆ ಆಗಾಗ್ಗೆ ಮಾಡುತ್ತಿದ್ದುದುಂಟು. ಅದೇ ಹಿಂದಿನ ಪ್ರತಿಮೆಗಳನ್ನು ಬಳಸುವುದನ್ನು ಬಿಟ್ಟು ಬಿಟ್ಟು ಅತ್ಯಾಧುನಿಕವಾದ ವಿಜ್ಞಾನದಿಂದ ಏಕೆ ಪ್ರತಿಮೆಗಳನ್ನು ತೆಗೆದುಕೊಳ್ಳಬಾರದು? ಎಂದು ಪ್ರಶ್ನಿಸುತ್ತಿದ್ದರು. ಹಿಂದಿನವರು ಆಸ್ತಿಕರಾಗಿದ್ದುಕೊಂಡು ಕಾವ್ಯ ಬರೆದರು. ಈಗಿನವರು ದೇವರು ಇಲ್ಲ ಎಂಬ ನಾಸ್ತಿಕ್ಯವನ್ನು ಮುಂದಿಟ್ಟುಕೊಂಡು ಕಾವ್ಯ ಬರೆಯಲಿ, ಒಟ್ಟಿನಲ್ಲಿ ಹೊಸ ರೀತಿಯ ವೈವಿಧ್ಯದ ಕಾವ್ಯ ಬಂದರಾಯಿತು ಎಂದು ವಾದಿಸುತ್ತಿದ್ದರು. ಇಂತಹ ಮಾತುಗಳನ್ನು ಕೇಳಿದಾಗ ಅವರ ವಿಷಯದಲ್ಲಿ ಸ್ವಲ್ಪ ತಪ್ಪು ಭಾವನೆ ಬರಲೂ ಸಾಧ್ಯ. ಮೊದಲನೆಯದಾಗಿ ಅವರು ನಾಸ್ತಿಕರೂ ಅಲ್ಲ, ನಂತರ ಕಾವ್ಯದ್ವೇಷಿಯೂ ಅಲ್ಲ. ಕನ್ನಡ ಸಾಹಿತ್ಯ ಪ್ರಪಂಚದ ರಿಕ್ತತೆ ದಾರಿದ್ರಗಳನ್ನು ಕಂಡು ಉದ್ವಿಗ್ನರಾಗಿ ಆಡುತ್ತಿದ್ದ ಮಾತುಗಳು ಅವು. ಆ ಮಾತುಗಳಲ್ಲಿಯೂ ಸ್ವಲ್ಪಮಟ್ಟಿಗೆ ಸತ್ಯಾಂಶ ಇರುವುದನ್ನು ಕಾಣಬಹುದು. ಅವರ ಪ್ರಕಾರ ವಿದ್ವಾಂಸನೂ ಸಂಶೋಧನೆಯಲ್ಲಿ ರಸಾನುಭವವನ್ನೇ ಅನುಭವಿಸುತ್ತಾನೆ. ಬೇಕಾದರೆ ಕುತೂಹಲವನ್ನು ಸ್ಥಾಯಿಯಾಗಿ ಉಳ್ಳ ಪಾಂಡಿತ್ಯರಸವೆಂದು ಕರೆದುಕೊಳ್ಳಲಿ ಎಂದಿದ್ದಾನೆ (ಇದು ಅವರು ಹಾಸ್ಯಕ್ಕೆ ಹೇಳಿದ ಮಾತು). ವಿದ್ವತ್ತು, ವಿದ್ವಾಂಸರನ್ನು ಕಂಡರೆ ಅಲಕ್ಷ್ಯ ತೋರಿಸುವವರನ್ನು, ಕುರಿತು ಅವರ ನೀರಸರು ಅವರ ಕೆಲಸ ಕೆಲಸಕ್ಕೆ ಬಾರದು, ಎಂದು ಭಾವಿಸುವವರ ವಿಷಯದಲ್ಲಿ ಸ್ವಲ್ಪ ಕಟುವಾಗಿಯೇ ಮಾತನಾಡಿದ್ದಾರೆ. ಹೀಗೆ ಮಾತನಾಡಿ ಅವರಿಗೆ ಕಾವ್ಯದ ವಿಷಯದಲ್ಲಿಯೇ ಅಷ್ಟು ಆದರ ಇಲ್ಲ ಎಂಬ ಆಕ್ಷೇಪಣೆಗೂ ಗುರಿಯಾಗಿದ್ದಾರೆ. ಅವರ ಕಾವ್ಯಾರಾಧನೆ ಕಾವ್ಯ ಪ್ರೇಮಗಳು ಈ ಬರಹದಲ್ಲಿ ಸಾಕಷ್ಟು ಪ್ರತಿಪಾದಿತವಾಗಿರುವುದರಿಂದ ಈ ಆಕ್ಷೇಪಣೆ ಆಧಾರರಹಿತವಾದುದು ಎಂದು ಮತ್ತೆ ಸ್ಥಾಪಿಸಬೇಕಿಲ್ಲ.

“ಇನ್ನೂ ಬಾಣಗಳನ್ನು ಇಟ್ಟಿದೀನಿ ಕಾಣಯ್ಯ”-ಇದು ಅವರು ಆತ್ಮೀಯರಿಗೆ ತುಂಬಾ ಲಘುವಾಗಿರುವ ಸನ್ನಿವೇಶಗಳನ್ನು ನಗುನಗುತ್ತಾ ಹೇಳುವ ಮಾತು. ಪಾಠ ಹೇಳುವಾಗ ಎಲ್ಲಿಯಾದರೂ ಅಪೂರ್ವಪದವೊಂದು ಬಂದರೆ ಪದ್ಯವನ್ನು ವಿವರಿಸಿಯಾದ ಮೇಲೆ ಕುರ್ಚಿಯಿಂದ ಮೆಲ್ಲಗೆ ಎದ್ದು ಕಪ್ಪುಹಲಗೆಯ ಮೇಲೆ ಆ ಪದದ ನಿಷ್ಪತ್ತಿಯನ್ನು ಬರೆದು ವಿವರಿಸುವ ರೀತಿಯನ್ನು ಅವರ ವಿದ್ಯಾರ್ಥಿಗಳೆಲ್ಲರೂ ಬಲ್ಲರು. ನಿರ್ದುಷ್ಟತೆ ಮತ್ತು ಪ್ರಾಮಾಣಿಕತೆ ಅವರ ರಕ್ತದಲ್ಲಿ ಸೇರಿಹೋಗಿರುವ ಗುಣಗಳು. ಮೇಲ್ನೋಟಕ್ಕೆ ಕೆಲವು ಪದಗಳ ವಿವರಣೆ ಸುಲಭವೆಂದು ತೋರಿದರೂ ಆ ಪದಗಳ ಇತಿಹಾಸವನ್ನು ಕುರಿತು ಜಿಜ್ಞಾಸೆ ಮಾಡುವಾಗ ಏಳುವ ತೊಡಕುಗಳನ್ನು ಅವರ ಕೃತಿ ‘ಶಬ್ದವಿಹಾರ’ದ ವಾಚಕರು ಬಲ್ಲರು. ಕೆಲವು ಪದಗಳಿಗೆ ನಿಷ್ಪತ್ತಿ ಹೇಳಲು ಸಾಧ್ಯವಿಲ್ಲದಿದ್ದಾಗ ಅದರ ಆಕರಗಳನ್ನು ಸೂಚಿಸಿ ನಿಷ್ಪತ್ತಿ ನನಗೆ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರು. ನಾವು ಆಗಾಗ ಬೇಕೆಂದೇ ‘ಕೆರಳಿಸುತ್ತಿದ್ದುದುಂಟು. ಎಂದರೆ ಯಾವುದೋ ಪದಕ್ಕೆ ನಮಗೆ ತೋಚಿದ ನಿಷ್ಪತ್ತಿಯನ್ನು ಹೇಳಿದಾಗ ಅವರು ‘ಇಲ್ಲೆಲ್ಲಾ ಊಹೆಯ ಆಟ ನಡೆಯೋದಿಲ್ಲ’ ಎಂದು ಹೇಳಿ ಅದಕ್ಕೆ ಸಂಬಂಧಿಸಿದಂತೆ ನಾಲ್ಕಾರು ಕಡೆಗಳಿಂದ ವಿಷಯ ಸಂಗ್ರಹಣೆ ಮಾಡಿ ಹೇಳುತ್ತಿದ್ದರು. ದ್ರಾವಿಡ ಪದವೊಂದರ ವಿವರಣೆಗೆ ಮಧ್ಯಭಾರತದ ದ್ರಾವಿಡ ಭಾಷೆಗಳಲ್ಲಿ ಬರುವ ಸಮಾನ ಪದಗಳನ್ನು ಬಳಸಿಕೊಳ್ಳುತ್ತಿದ್ದರು. ಅವರ ಬಹುಜ್ಞತೆಯನ್ನು ಕಂಡು ನಾವು ಸ್ನೇಹಿತರು ಪರಸ್ಪರರ ಮುಖಗಳನ್ನು ನೋಡಿಕೊಳ್ಳುತ್ತಿದ್ದುದುಂಟು.

ಇನ್ನು ಅವರ ಹಾಸ್ಯಪ್ರವೃತ್ತಿಯನ್ನು ಕುರಿತು ಒಂದೆರಡು ಮಾತು. ಅವರ ಸ್ವಭಾವ ಸಾಮಾನ್ಯವಾಗಿ ಗಂಭೀರವಾದುದು. ಆ ಗಂಭೀರ ವ್ಯಕ್ತಿತ್ವದಲ್ಲಿ, ಅವರ ಬೋಧನ ಕ್ರಮದಲ್ಲಿ ಹಾಸ್ಯಕ್ಕೂ ಸ್ಥಾನವುಂಟು. ತೆಳುವಾದ ಮುಗುಳ್ನಗೆಯನ್ನೂ ಮೂಡಿಸಬಲ್ಲರು, ನಗುವಿನ ಬುಗ್ಗೆಯನ್ನೇ ಉಕ್ಕಿಸಬಲ್ಲರು. ನನಗೆ ತಿಳಿದಮಟ್ಟಿಗೆ ಅವರು ವಿದ್ಯಾರ್ಥಿಗಳನ್ನು ನಗಿಸಲು ವಿಕೃತ ಮಾರ್ಗವನ್ನು ಎಂದೂ ಅನುಸರಿಸಲಿಲ್ಲ. ನಗಿಸುವ ‘ಪ್ರಯತ್ನ’ವಂತೂ ಅವರಲ್ಲಿಲ್ಲ. ಒಮ್ಮೊಮ್ಮೆ ಅವರು ಓದುವ ರೀತಿಯೇ ನಗುವನ್ನು ತಂದರೆ ಮಗುದೊಮ್ಮೆ ಪೌರಾಣಿಕ ಅಂಶಗಳಿಗೆ ಸಮಕಾಲೀನ ಅಂಶಗಳನ್ನು ಜೋಡಿಸುವುದರ ಮೂಲಕ ಹಾಸ್ಯವನ್ನು ಉಕ್ಕಿಸುತ್ತಿದ್ದರು. ಪಂ. ಭಾ. ದ. ಕರ್ಣಾರ್ಜುನರ ಯುದ್ಧದ ಸನ್ನಿವೇಶದಲ್ಲಿ ಮೇಲೆ ನಿಂತು ನೋಡುತ್ತಿದ್ದ ದೇವತೆಗಳಿಗೆ ಬಾಣಗಳ ಹಂದರದಿಂದ ಕರ್ಣಾರ್ಜುನರು ಮರೆಯಾದಾಗ ನಾರದ ಹಾರಿ ಇಳಿದುಬಂದು ಬಾಣಗಳನ್ನು ಬಗಿದು ಅವರನ್ನು ಕಂಡು ಮೇಲೆ ಹಾರಿದನಂತೆ. ‘ಇದು ತಡಿಕೆ ಕಿತ್ತು ಕ್ರಿಕೆಟ್‌ಮ್ಯಾಚ್‌ನೋಡುವಂತೆ ಎಂದಾಗ ಯಾರಿಗೆ ತಾನೇ ನಗು ಬರದು? ಒಟ್ಟಿನಲ್ಲಿ ಹಾಸ್ಯ ಅಪ್ರಯತ್ನ ಪೂರ್ವಕವಾಗಿದ್ದು, ವಿವರಿಸಲಿರುವ ವಿಷಯದ ಸ್ವಾರಸ್ಯವನ್ನು ಹೆಚ್ಚಿಸುವಂತಿದ್ದರೆ ಮಾತ್ರ ಅದಕ್ಕೆ ಸ್ಥಾನ, ಮೆರೆಯಿಸುವಂತಿದ್ದರೆ ಅದರ ತಳ್ಳಿಗೇ ಹೋಗುವುದಿಲ್ಲ.

“ನಿಡಿಯರ್ಗಂ ನಿಡಿಯರೊಳರ್‌”-ಅವರು ಬಹುವಾಗಿ ಮೆಚ್ಚಿರುವ ಪಂಪನ ಮಾತುಗಳಲ್ಲಿ ಇದೂ ಒಂದು. ಇದು ಎಲ್ಲರಿಗೂ ಎಲ್ಲಾಕಾಲಕ್ಕೂ ಅನ್ವಯಿಸುತ್ತದೆ. ಜ್ಞಾನಪ್ರಪಂಚದಲ್ಲಿ ನಾವು ಅದರ ಸಾಧನೆಯನ್ನು ಕಂಡು ಆಶ್ಚರ್ಯಪಟ್ಟರೆ ಅವರಿಗೆ ಅವರ ವಿಷಯದಲ್ಲೇ ಅಸಾಧ್ಯ ಅತೃಪ್ತಿ ಇದೆ. ಉತ್ತಮ ಮನಸ್ಸಿನ ಲಕ್ಷಣ ಇದು. “ನೀವು ಸಾಕಷ್ಟು ಬರೆದಿಲ್ಲ, ಕನ್ನಡದಲ್ಲಿ ತೂಕವುಳ್ಳ ಲೇಖನಗಳನ್ನು ನೀವು ಬರೆಯದಿದ್ದರೆ ಇನ್ನು ಯಾರು ಬರೆಯಬೇಕು” ಎಂದು ನಾವು ವಿನಯದಿಂದ ಆಕ್ಷೇಪಿಸಿದಾಗಲೆಲ್ಲ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಬರೆಯುವ ಆಸೆ ಅವರಿಗೆ ಇಲ್ಲವೆಂದಲ್ಲ. ಆದರೆ ಏನನ್ನು ಬರೆದರೂ ಅದು ಸಂಪೂರ್ಣ ಸಮರ್ಪಕವಾಗಿರಬೇಕು, ಅದರ ವಿಷಯದಲ್ಲಿ ಯಾರೂ ಆಕ್ಷೇಪಣೆ ಎತ್ತದ ಹಾಗಿರಬೇಕು ಎಂಬ ಅವರ ಆಕಾಂಕ್ಷೆಯೂ ಅವರ ಲೇಖನ ವ್ಯವಸಾಯಕ್ಕೆ ಸ್ವಲ್ಪ ಅಡ್ಡಿ ತರುತ್ತದೆ. ಬಹುಶಃ ಪ್ರೊ. ಹಿರಿಯಣ್ಣನವರನ್ನು ಲೇಖನ ವ್ಯವಸಾಯಕ್ಕೆ ಆದರ್ಶವಾಗಿ ಇಟ್ಟುಕೊಂಡಿದಾರೋ ಏನೋ! ಈ ಆದರ್ಶ ಫಲಿಸಲಿ ಎಂದು ಅವರ ವಿದ್ಯಾರ್ಥಿಗಳಾದ ನಾವು ಹಾರೈಸುತ್ತೇವೆ.

* ಜ್ಞಾನೋಪಾಸಕ, ಪು. ೮೨