ನನ್ನ ಶ್ರೀಗುರು ಪ್ರೊ. ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್‌ ಅವರಿಗೂ ನನಗೂ ಹುಟ್ಟೂರಿನ ಸಂಬಂಧ. ಏಕೆಂದರೆ ಅವರು ಜನ್ಮ ತಳೆದ ಊರಿನಲ್ಲೇ ನಾನೂ ಸಹ ಹುಟ್ಟಿದ್ದು. ಅದು ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ. ಈ ಮಾತು ಆಶ್ಚರ್ಯವೆನಿಸಿದರೂ ವಾಸ್ತವ. ಶ್ರೀ ನರಸಿಂಹಾಚಾರ್‌ ಅವರ ಪೂರ್ವಿಕರು ಮತ್ತು ತೀರ್ಥರೂಪು ತಂದೆಯವರದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಲೆ ಗ್ರಾಮ. ನಾನಂತೂ ಚಿಕ್ಕನಾಯ್ಕನಹಳ್ಳಿಯವನೆ. ಅದು ಆದದ್ದು ಹೀಗೆ. ಡಿ.ಎಲ್‌.ಎನ್‌. ಅವರ ತಂದೆಯವರು ಚಿಕ್ಕನಾಯ್ಕನಹಳ್ಳಿಯಲ್ಲಿ ಸರ್ಕಾರಿ ನೌಕರರಾಗಿದ್ದಾಗ ಅವರ ಧರ್ಮಪತ್ನಿ ತುಂಬು ಗರ್ಭೀಣಿಯಂತೆ. ಹಾಗಾಗಿ ಆ ಪ್ರತಿಭಾವಂತ ಶಿಶು ಚಿಕ್ಕನಾಯ್ಕನಹಳ್ಳಿಯಲ್ಲಿ ಜನ್ಮ ತಳೆದುದರಿಂದ ಶ್ರೀ ನರಸಿಂಹಾಚಾರ್‌ ಅವರು ನಮ್ಮೂರಿನ ಕುಡಿ ಎಂಬುದು ನಾವು ಹೆಮ್ಮೆಪಡುವಂತಹ ಸಂಗತಿಯಾಗಿದೆ.

ಮೈಸೂರು ವಿಶ್ವವಿದ್ಯಾನಿಲಯವು ೧೯೫೮ರಲ್ಲಿ ಎರಡು ವರ್ಷಗಳ ಪದವಿ ಮತ್ತು ಒಂದು ವರ್ಷದ ಸ್ನಾತಕೋತ್ತರ ಪದವಿ ಹಾಗೂ ಆನರ್ಸ್‌ಪದವಿ ಶಿಕ್ಷಣ ಪದ್ಧತಿಯನ್ನು ರದ್ದುಗೊಳಿಸಿ ಮೂರು ವರ್ಷಗಳ ಪದವಿ ಮತ್ತು ಎರಡು ವರ್ಷಗಳ ಸ್ನಾತಕೋತ್ತರ ಪದವಿ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿತು. ಆ ಹಿಂದಿನ ವರ್ಷ ಎರಡು ವರ್ಷಗಳ ಇಂಟರ್‌ ಮೀಡಿಯೆಟ್‌ ಶಿಕ್ಷಣವನ್ನು ರದ್ದುಗೊಳಿಸಿ, ಒಂದು ವರ್ಷದ ಪದವಿ ಪೂರ್ವ ಶಿಕ್ಷಣವನ್ನು ಜಾರಿಗೆ ತಂದಿತ್ತು. ನಾನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಒಂದು ವರ್ಷದ ಪದವಿಪೂರ್ವ ಶಿಕ್ಷಣದ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಶಿಕ್ಷಣವನ್ನು ಮುಗಿಸಿ, ಮೈಸೂರ ಮಹಾರಾಜ ಕಾಲೇಜಿನಲ್ಲಿ ಮೂರು ವರ್ಷದ ಬಿ.ಎ. ಶಿಕ್ಷಣಕ್ಕೆ ಸೇರಿದೆನು. ಹೊಸ ಪಠ್ಯಕ್ರಮದಂತೆ ಬಿ.ಎ. ವಿದ್ಯಾಭ್ಯಾಸಕ್ಕೆ ಐಚ್ಛಿಕ ವಿಭಾಗದಲ್ಲಿ ಎರಡು ಪ್ರಧಾನ ವಿಷಯಗಳು ಮತ್ತು ಒಂದು ಪೂರಕ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ನಾನು ಕನ್ನಡ ಮತ್ತು ಅರ್ಥಶಾಸ್ತ್ರವನ್ನು ಪ್ರಧಾನ ವಿಷಯಗಳನ್ನಾಗಿಯೂ ಇತಿಹಾಸವನ್ನು ಪೂರಕ ವಿಷಯವಾಗಿಯೂ ಆಯ್ಕೆ ಮಾಡಿಕೊಂಡಿದ್ದೆನು.

೧೯೫೦ ಮತ್ತು ೧೯೬೦ರ ದಶಕಗಳಲ್ಲಿ ಮೈಸೂರಿನ ಮಹಾರಾಜ ಕಾಲೇಜು ವಿದ್ವನ್ಮಣಿಗಳು, ಪಂಡಿತೋತ್ತಮರು ಮತ್ತು ಸಂಶೋಧನಾಸಕ್ತ ಪ್ರಾಧ್ಯಾಪಕರುಗಳಿಂದ ತುಂಬಿತ್ತು. ಅವರೆಲ್ಲರೂ ಸಂಬಂಧಪಟ್ಟ ವಿಷಯಗಳಲ್ಲಿ ಪರಿಣತ ಪ್ರಾಧ್ಯಾಪಕರುಗಳಾಗಿದ್ದ ಶಿಕ್ಷಣ ತಜ್ಞರಾಗಿದ್ದರು.

ಕನ್ನಡದ ಪ್ರೊ. ಡಿ.ಎಲ್‌.ನರಸಿಂಹಾಚಾರ್‌ಮತ್ತು ಪ್ರೊ. ತೀ.ನಂ.ಶ್ರೀಕಂಠಯ್ಯ, ಇಂಗ್ಲಿಷ್‌ನ ಪ್ರೊ. ಸಿ. ಡಿ. ನರಸಿಂಹಯ್ಯ, ಇತಿಹಾಸದ ಡಾ. ಎಸ್‌. ನೀಲಕಂಠಶಾಸ್ತ್ರಿ, ತತ್ವಶಾಸ್ತ್ರದ ಪ್ರೊ. ಎನ್‌. ಎ. ನಿಕ್ಷಂ, ಪ್ರೊ. ಎಂ. ಯಾಮುನಾಚಾರ್ಯ, ಮನಃಶಾಸ್ತ್ರದ ಪ್ರೊ. ಕುಪ್ಪುಸ್ವಾಮಿ, ಅರ್ಥಶಾಸ್ತ್ರದ ಡಾ. ಜಿ. ಟಿ. ಹುಚ್ಚಪತ, ಡಾ. ವೆಂಕಟಗಿರಿಗೌಡ, ರಾಜ್ಯಶಾಸ್ತ್ರದ ಡಾ. ಕೆ. ಬಿ. ವೈತೋಟಪುರ ಸಂಖ್ಯಾಶಾಸ್ತ್ರದ ಪ್ರೊ. ಏಕಾಂಬರಂ, ಭೂಗೋಳಶಾಸ್ತ್ರದ ಡಾ. ಗೌಸ್‌ಖಾನ್‌ ಘೋರಿ, ಸಮಾಜಶಾಸ್ತ್ರದ ಡಾ. ಕೆ. ಎನ್‌. ವೆಂಕಟರಾಯಪ್ಪ, ಉರ್ದು ಅರೇಬಿಕ್‌ ಪರ್ಶಿಯನ್‌ಗೆ ಡಾ. ಖಿಜರ್‌ ಅಲಿಖಾನ್‌, ಪತ್ರಿಕೋದ್ಯಮದ ಡಾ. ನಾಡಿಗ ಕೃಷ್ಣಮೂರ್ತಿ, ತೆಲುಗಿನ ಪ್ರೊ. ಎಂ. ಸುಬ್ಬರಾಮಪ್ಪ ಈ ಕೆಲವರನ್ನು ಇಲ್ಲಿ ಸ್ಮರಿಸಬಹುದು. ಇವರು ಆಯಾಯ ವಿಭಾಗಗಳ ಪ್ರಾಧ್ಯಾಪಕರು ಮುಖ್ಯಸ್ಥರಾದರೆ ಅವರ ಜೊತೆ ಉತ್ಸಾಹಿ ಹಿರಿಕಿರಿಯ ಉಪನ್ಯಾಸಕರು, ಉಪಪ್ರಾಧ್ಯಾಪಕರು ಬೋಧನೆ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಇಂತಹ ಪರಿಣತರುಗಳಿದ್ದ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲರಾಗಿ ಅದನ್ನು ಒಂದು ಶಿಸ್ತುಬದ್ಧ ಶಿಕ್ಷಣ ಸಂಸ್ಥೆಯಾಗಿ ರೂಪಿಸಿ ನಡೆಸುತ್ತಿದ್ದವರು ಇತ್ತೀಚೆಗೆ ದೈವಾಧೀನರಾದ ಇಂಗ್ಲಿಷ್‌ ಪ್ರಾಧ್ಯಾಪಕ, ಮೈಸೂರಿನ ‘`ಧ್ಯನ್ಯಾಲೋಕ’’ ಜ್ಞಾನ ದೇಗುಲದ ನಿವೃತ್ತ ಪ್ರೊ. ಸಿ. ಡಿ. ನರಸಿಂಹಯ್ಯನವರು. ಅವರು ಮಹಾರಾಜ ಕಾಲೇಜಿನ ಖ್ಯಾತಿಯನ್ನು ವಿಖ್ಯಾತಿಗೊಳಿಸಿದ ಶಿಕ್ಷಣತಜ್ಞರು.

ಆಗ ಪ್ರೊ. ತೀ.ನಂ.ಶ್ರೀಕಂಠಯ್ಯನವರು ಕನ್ನಡ ಇಲಾಖೆಯ ಮುಖ್ಯಸ್ಥರು. ಪ್ರೊ. ಡಿ. ಎಲ್‌. ನರಸಿಂಹಾಚಾರ್‌ ಅವರೂ ಸಹ ಅದೇ ದರ್ಜೆಯ ಪ್ರಾಧ್ಯಾಪಕರು. ಈ ಇಬ್ಬರು ಮತ್ತು ಆಗ ಉಪಕುಲಪತಿಗಳಾಗಿದ್ದ ಪ್ರೊ. ಕೆ. ವಿ. ಪುಟ್ಟಪ್ಪನವರು ಸಹಪಾಠಿಗಳಾಗಿ ಇದ್ದವರು. ಆ ಕಾಲದಲ್ಲಿ ಕನ್ನಡವನ್ನು ಪ್ರಧಾನವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ೮–೧೦ನ್ನು ಮೀರಿರುತ್ತಿರಲಿಲ್ಲ. ಪ್ರಾಧ್ಯಾಪಕರುಗಳ ಕೊಠಡಿಗಳಲ್ಲೇ ನಮ್ಮ ಪಾಠಗಳು ನಡೆಯುತ್ತಿದ್ದವು. ಮಿಕ್ಕ ಉಪಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ದೊಡ್ಡ ಉಪನ್ಯಾಸ ಕೊಠಡಿಗಳಲ್ಲಿ ಪಾಠ ಹೇಳುವಾಗ ಆ ೮-೧೦ ಜನ ವಿದ್ಯಾರ್ಥಿಗಳು ಮುಂದಿನ ಒಂದೆರಡು ಡೆಸ್ಕ ಬೆಂಚುಗಳಲ್ಲಿ ಅಧ್ಯಾಪಕರುಗಳಿಗೆ ಹತ್ತಿರವಾಗಿ ಕುಳಿತು ಪಾಠಗಳನ್ನು ಕೇಳುತ್ತಿದ್ದರು. ಒಮ್ಮೊಮ್ಮೆ ಉಪನ್ಯಾಸಕರು ವೇದಿಕೆಯಿಂದ ಇಳಿದು, ವಿದ್ಯಾರ್ಥಿಗಳಿಗೆ ಹತ್ತಿರವಾಗಿ ಕುರ್ಚಿ ಮೇಲೆ ಕುಳಿತು ಪಾಠ ಹೇಳುತ್ತಿದ್ದುದೂ ಉಂಟು.

ಹೊಸದಾಗಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳ ಊರು, ತಂದೆ ತಾಯಿ, ಅವರು ಕನ್ನಡ ಭಾಷಾ ಸಾಹಿತ್ಯವನ್ನು ಪ್ರಧಾನ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರ ಹಿನ್ನೆಲೆ ಮುಂತಾದ ವಿಷಯಗಳನ್ನು ಕೇಳುವುದು ಅಂದಿನ ಪ್ರಾಧ್ಯಾಪಕರುಗಳ ಸಂಪ್ರದಾಯವಾಗಿತ್ತು. ಇದರಿಂದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಸೌಹಾರ್ದವು ಬೆಳೆದು ಅಂಜಿಕೆ ಅಳುಕು ದೂರವಾಗುತ್ತಿತ್ತು. ಗುರುಗಳ ಬಗ್ಗೆ ಗೌರವ ಭಾವನೆ ಮೂಡುತ್ತಿತ್ತು. ಅದೇ ರೀತಿ ಮೂರು ವರ್ಷಗಳ ಬಿ.ಎ. ಶಿಕ್ಷಣದ ಪ್ರಥಮ ತಂಡದ ವಿದ್ಯಾರ್ಥಿಗಳಾಗಿದ್ದ ನಮ್ಮನ್ನು ನಾವು ತರಗತಿಗೆ ಹೋದ ದಿನವೇ ಪ್ರೊ. ಡಿ. ಎಲ್‌. ನರಸಿಂಹಾಚಾರ್‌ ಅವರು ವೈಯಕ್ತಿಕವಾಗಿ, ಆತ್ಮೀಯವಾಗಿ ವಿಚಾರಿಸುತ್ತ ಬಂದರು. ನನ್ನ ಸರದಿ ಬಂದಿತು. ನಾನು ಎದ್ದು ನಿಂತು, “ನನ್ನ ಊರು ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ. ಈ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ತೀ.ನಂ. ಶ್ರೀಕಂಠಯ್ಯನವರೂ ಸಹ ನಮ್ಮ ತಾಲ್ಲೂಕಿನ ತೀರ್ಥಪುರ ಗ್ರಾಮದವರು” ಎಂದು ಹೇಳುತ್ತಿದ್ದಂತೆಯೇ ಅವರು ಕುತೂಹಲದಿಂದ “ಓಹೋ! ನೀನು ಚಿಕ್ಕನಾಯ್ಕಹಳ್ಳಿಯವನೇನಯ್ಯ ನಾನೂ ಕೂಡ ಅದೇ ಊರಿನಲ್ಲಿ ಹುಟ್ಟಿದವನು. ಅಲ್ಲಿಗೆ ಹತ್ತಿರದ ಶೆಟ್ಟೀಕೆರೆ ಗ್ರಾಮವು ಗೊತ್ತೆ” ಎಂದರು. ಅದಕ್ಕೆ ನಾನು “ಗೊತ್ತು ಸಾರ್‌, ನಮ್ಮೂರಿನಿಂದ ತಿಪಟೂರಿಗೆ ಹೋಗುವ ದಾರಿಯಲ್ಲಿ ಆ ಗ್ರಾಮ ಸಿಗುತ್ತದೆ” ಎಂದೆನು. ಅವರು ಮುಂದುವರಿದು “ನಿಮ್ಮ ಈ ಶೆಟ್ಟಿಕೆರೆ ಒಂದು ಕಾಲಕ್ಕೆ ಪ್ರಾಚೀನ ವಿದ್ಯಾ ಕೇಂದ್ರವಾಗಿತ್ತು. ಅಲ್ಲಿಗೆ ಬೇರೆ ಬೇರೆ ಕಡೆಗಳಿಂದ ವಿದ್ವಾಂಸರು, ವಿದ್ಯಾರ್ಥಿಗಳು, ವೇದ, ಆಗಮ, ವೈದ್ಯ, ಜ್ಯೋತಿಷ್ಯ ವಿಷಯಗಳನ್ನು ಕುರಿತ ಚರ್ಚೆ ಮತ್ತು ಅಧ್ಯಯನಕ್ಕಾಗಿ ಬರುತ್ತಿದ್ದರು” ಎಂದು ಹೇಳಿದಾಗ ನನಗೆ ನಮ್ಮ ಊರು ಮತ್ತು ಆ ಸುತ್ತಲಿನ ಪರಿಸರದ ಬಗ್ಗೆ ಅಭಿಮಾನ ತುಂಬಿ ಬಂದಿತ್ತು. ಇಂತಹ ಅಪೂರ್ವವಾದ ಇತಿಹಾಸದ ಸಂಗತಿಗಳನ್ನು ತೆರೆದಿಡುವ ಪ್ರತಿಭಾ ಸಂಪನ್ನ ಶ್ರೀ ಡಿ.ಎಲ್‌.ಎನ್‌. ಅವರ ಸಾನ್ನಿಧ್ಯದಲ್ಲಿ ಸಾಹಿತ್ಯ ವಿಷಯವನ್ನು ಅಧ್ಯಯನ ಮಾಡುವ ಅವಕಾಶವು ದೊರೆತದ್ದು ನನ್ನ ಸೌಭಾಗ್ಯವೆಂದು ಸಂತೋಷಪಟ್ಟೆನು. ಆ ರಸ ಘಳಿಗೆಯು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಇದು ಆದದ್ದು ನಾಲ್ಕುವರೆ ದಶಕಗಳ ಹಿಂದೆ. ಕಾಲ ಗರ್ಭದಲ್ಲಿ ಹುದುಗಿರುವ ಸಾಹಿತ್ಯ, ಸಂಸ್ಕೃತಿ, ಜನಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹುಡುಕಿ ತೆಗೆದು ಅನೇಕ ಸಂಗತಿಗಳ ಮೇಲೆ ಹೊಸಬೆಳಕು ಚೆಲ್ಲುತ್ತಿದ್ದ ಡಿ.ಎಲ್‌.ಎನ್‌. ಅವರ ಪಾಂಡಿತ್ಯ ಅಗಾಧವಾದುದು. ಇದು ಅವರ ಸಂಶೋಧನಾಸಕ್ತಿಗೆ ಒಂದು ಚಿಕ್ಕ ನಿದರ್ಶನ ಮಾತ್ರ.

ಪ್ರೊ. ಡಿ.ಎಲ್‌.ಎನ್‌. ಅವರು ನಮಗೆ ಆದಿಕವಿ ಪಂಪನ “ವಿಕ್ರಮಾರ್ಜುನ ವಿಜಯ”ದ ಕೆಲವು ಆಶ್ವಾಸಗಳನ್ನು ಬೋಧಿಸಿದರು. ಈ ಕಾವ್ಯದ ಕ್ಲಿಷ್ಟವಾದ ವೃತ್ತ, ಕಂದ ಪದ್ಯಗಳನ್ನು, ಅಲ್ಲಿ ಬರುವ ಗದ್ಯರೂಪದ ವಚನ ಭಾಗಗಳನ್ನು ಅರ್ಥಪೂರ್ಣವಾಗಿ ಓದಿ ಕವಿಯ ಭಾವವನ್ನು ತಿಳಿದುಕೊಳ್ಳುವುದು ಸುಲಭದ ವಿಷಯವಲ್ಲ. ಅದಕ್ಕೆ ಶ್ರದ್ಧೆಯ ಅಧ್ಯಯನ ಮತ್ತು ಆ ಕಾಲದ ಸಾಮಾಜಿಕ ಪರಿಸರದ ಕಲ್ಪನೆಯೂ ಇರಬೇಕಾಗುತ್ತದೆ. ಈ ಅಂಶವನ್ನು ಒತ್ತಿ ಒತ್ತಿ ಹೇಳುತ್ತಿದ್ದ ಡಿ.ಎಲ್‌.ಎನ್‌. ಅವರ ವಿಶಿಷ್ಟವಾದ ಮಾತುಗಾರಿಕೆ ತುಂಬ ಅರ್ಥಪೂರ್ಣವಾದುದಾಗಿತ್ತು. ಅವರು ಹೇಳುತ್ತಿದ್ದ ನಿರ್ದೇಶನದ ಮಾತುಗಳು ನನಗಿನ್ನೂ ಜ್ಞಾಪಕವಿದೆ. “ಪಂಪನ ಪದ್ಯಗಳು ಸುಲಭವಾಗಿ ಜೀರ್ಣವಾಗುವದಿಲ್ಲ ಕಣ್ರಯ್ಯ. ಅವುಗಳನ್ನು ನುಂಗಬಾರದು. ನಿಧಾನವಾಗಿ ಜಗಿಯಬೇಕು. ಆಗಲೇ ಪಂಪನ ಕಾವ್ಯದ ರಸಾಸ್ವಾದವಾಗುವುದು” ಈ ಮಾತುಗಳು ಡಿ.ಎಲ್‌.ಎನ್‌. ಅವರು ಪಂಪನ ಕೃತಿಗಳ ಪ್ರತಿ ಎಳೆಯನ್ನು ಹೇಗೆ ಬಿಡಿಸಿ ಅರಿಯುತ್ತಿದ್ದರು. ಸಾವಧಾನವಾಗಿ ಅವಲೋಕಿಸುತ್ತಿದ್ದರು ಎಂಬುದನ್ನು ವಿವರಿಸುತ್ತವೆ.

ಪಂಪಭಾರತದ ದ್ವಾದಶಾಸ್ವಾಸದಲ್ಲಿ ಬರುವ,

ಇದಱೊಳ್ ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದೞ್ಕೂಡಿತ್ತಡಂಗಿತ್ತಿದಱೊಳೆ ಕುರುರಾಜಾನ್ವಯಂ ಮತ್ಪ್ರತಾಪ
ಕ್ಕಿದಱಿಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು
ಬ್ಜ ದಳಾಕ್ಷೀ ಪೇೞ ಸಾಮಾನ್ಯಮೆ ಭವತ್ಕೇಶಪಾಶ ಪ್ರಪಂಚಂ [೧೨-೧೫೬]

ಎಂದು ಭೀಮನು ದ್ರೌಪದಿಯ ಮುಡಿಯನ್ನು ಬಣ್ಣಿಸಿದ ಈ ವೃತ್ತದ ಅಂತರಂಗವನ್ನು ಬಿಡಿಸಿ, ದ್ರೌಪದಿಯ ಬಿಚ್ಚಿದ ಮುಡಿಯೇ ಮಹಾಭಾರತಕ್ಕೆ ಮೂಲವಾಯಿತು, ಶ್ವೇತಪತ್ರ ಶೋಭಿತರಾದ ದಶದಿಕ್ಕುಗಳ ರಾಜಮಂಡಲ ಮತ್ತು ಕುರುವಂಶವು ಆ ಕೇಶದಲ್ಲಿ ಸಿಕ್ಕಿಕೊಂಡು ಹೊರಬರಲಾರದೆ ಒದ್ದಾಡಿತು ಮತ್ತು ಈ ಕೇಶಪಾಶ ಪ್ರಪಂಚ ಎಂತಹ ಅದ್ಭುತವಾದುದು ಎಂಬ ಮಹಾಕವಿ ಪಂಪನ ಅಪೂರ್ವವಾದ ಕಲ್ಪನೆಯನ್ನು ಮನದಟ್ಟಾಗುವಂತೆ ವಿವರಿಸುತ್ತಿದ್ದ ಡಿ.ಎಲ್‌.ಎನ್‌. ಅವರ ವಿದ್ವತ್‌ಪೂರ್ಣ ವಿವರಣೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿಬಿಡುತ್ತಿತ್ತು. ಆ ಸಂದರ್ಭದ ಮಟ್ಟಿಗೆ ಕುರುಕ್ಷೇತ್ರ ರಣರಂಗದ ವಿದ್ಯಮಾನಗಳು ವಾಸ್ತವವಾಗಿ ನಡೆಯುತ್ತಿವೆಯೋ ಎಂಬಂತೆ ನಮ್ಮ ಕಣ್ಣ ಮುಂದೆ ನಿಲ್ಲುತ್ತಿದ್ದವು.

ಇಂತಹ ಪದ್ಯಗಳನ್ನು ಬಿಡಿಸಿ ಓದುವ ಶೈಲಿ ನರಸಿಂಹಾಚಾರ್‌ ಅವರಿಗೇ ವಿಶಿಷ್ಟವಾದ ಕಲೆಯಾಗಿತ್ತು. ಮೇಲಿನ ಪದ್ಯವನ್ನು ಒಂದು ಸಾರಿ ಪೂರ್ತಿಯಾಗಿ ಪದವಿಭಾಗದೊಂದಿಗೆ ಓದುವಾಗ ಅವರ ಹೃದಯಗಹ್ವರದಿಂದ ಬರುತ್ತಿದ್ದುದು ಮೋಡದ ಮರೆಯ ಆರ್ಭಟವಿಲ್ಲದ ಮತ್ತು ಅಷ್ಟೇ ಪ್ರತಿಧ್ವನಿಸುವ. ಕಿವಿಗೆ ಹಿತವೆನಿಸುವ ಅಪರೂಪವಾದ ಶಬ್ದ ಮಾಧುರ್ಯ. ಪ್ರಾಚೀನ ಕಾವ್ಯಗಳ ಪದ್ಯಗಳನ್ನು ಹೇಗೆ ಓದಬೇಕು ಎಂಬುದಕ್ಕೆ ಡಿ.ಎಲ್‌.ಎನ್‌. ಅವರು ಒಂದು ಮಾದರಿಯಾಗಿದ್ದರು.

ಪಂಪನು ತನ್ನ ಕಾವ್ಯಗಳಲ್ಲಿ ಬಳಸಿರುವ ಪದಗಳ ದೇಸಿಗುಣವನ್ನು ನರಸಿಂಹಾಚಾರ್‌ ಅವರಂತೆ ತೆರೆದಿಡುವ ವಿದ್ವಾಂಸರು ತುಂಬ ಅಪರೂಪ. ಅವರ ಪಾಠವು ಒಂದು ಕಾವ್ಯದ ನಿಗದಿಪಡಿಸಿದ ಪಠ್ಯಭಾಗಕ್ಕೆ ಮಾತ್ರ ಸೀಮಿತವಾಗಿರುತ್ತಿರಲಿಲ್ಲ. ಆ ಕಾವ್ಯದ ಬೇರೆ ಒಂದು ಸಂದರ್ಭದಲ್ಲಿ ಕುತೂಹಲಕಾರಿಯಾದ ಒಂದು ಅಪರೂಪವಾದ ಪದದ ಪ್ರಯೋಗವಾಗಿದ್ದರೆ ಅದನ್ನು ವಿದ್ಯಾರ್ಥಿಗಳಿಗೆ ಓದಿ ಹೇಳಿ, ಸನ್ನಿವೇಶಕ್ಕೆ ಸಂಬಂಧಿಸಿದಂತೆ ಆ ಪದ ಪ್ರಯೋಗದ ಔಚಿತ್ಯವನ್ನು ತಿಳಿಸಿ ಹೇಳುತ್ತಿದ್ದರು. ಇದು ಅವರ ಬೋಧನಾಸಕ್ತಿ ಮತ್ತು ವಿದ್ಯಾರ್ಥಿ ಪ್ರೇಮಕ್ಕೆ ಸಾಕ್ಷಿ.

ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಪಂಪಭಾರತದ ಸಪ್ತಮಾಶ್ವಾಸದಲ್ಲಿ ಬರುವ ಒಂದು ವೃತ್ತ.

ಒದವಿದಕೆತ್ತ ಕಂಕಣದ ಪುರ್ವಿನ ಜರ್ವ ಲಯಕ್ಕೆ ಲಕ್ಕ ಲೇ |
ಕ್ಕದ [ಗ]ತಿ ನಾಟಕಾಭಿನಯ ಮಾಯ್ತೆನೆ ಗೇಯದೊಳೀಕೆ ಸೋರ್ಕನಿ ||
ಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ ಸಾಲ್ವ ಸ |
ಗ್ಗದ ಪೊಸದೇಸಿಯೋಳಿಗಳನೋರ್ವಳೊ ಱಲ್ತು ನೆಱಲ್ದು ಪಾಡಿದಳ್‌ [೭-೯೦]

ಡಿ.ಎಲ್‌.ಎನ್‌. ಅವರು ಇಲ್ಲಿನ ಬಳಸಿರುವ ಕಳ್ಗೆ ಚಕ್ಕಣಮೆನಿಪುದು ಎಂಬ ಪದದ ಜಾಡನ್ನು ಹಿಡಿದು ಅರ್ಥವನ್ನು ವಿವರಿಸಿದ ರೀತಿ ಅಪೂರ್ವವಾದುದುದಾಗಿತ್ತು. ಅರ್ಜುನನ ತಪೋಭಂಗ ಮಾಡಲು ಬಂದ ನರ್ತಕಿಯ ನಾಟಕದ ವರ್ಣನೆಯ ಸಂಬಂಧದಲ್ಲಿ ಬಳಸಿರುವ ಈ ಪದ ಆ ಸಂದರ್ಭದ ಆಶಯವನ್ನು ಎಷ್ಟೊಂದು ಸಮರ್ಥವಾಗಿ ಮತ್ತು ಸಮಂಜಸವಾಗಿ ಪ್ರತಿನಿಧಿಸಿದೆ ಎಂಬುದನ್ನು ಮೆಚ್ಚಿ, ಪಂಪ ಕವಿಯ ಲೋಕಾನುಭವವನ್ನು ಕೊಂಡಾಡಿದ ಆ ದಿನದ ಪಾಠದ ರೀತಿಯನ್ನು ನಾನೆಂದೂ ಮರೆಯಲಾರೆನು. ಅದು ನನ್ನ ಮನಸ್ಸಿನಿಂದ ಅಳಿಸಿ ಹೋಗಲೇ ಇಲ್ಲ. ಬೋಧನೆಯಲ್ಲಿ ಅಂತಹ ಗಾಢವಾದ ಪ್ರಭಾವವನ್ನು ಬೀರುವುದರಲ್ಲಿ ನರಸಿಂಹಾಚಾರ್ಯರದು ಅದ್ಭುತವಾದ ಯಶಸ್ಸು.

ನಾಟಕ ಮತ್ತು ಸಂಗೀತದ ಸಂಯೋಜನೆ ಮತ್ತು ಸಮ್ಮಿಲನವು ಹೇಗಿದ್ದಿತೆಂದರೆ, ‘`ಕಳ್ಗೆ’’ ಎಂದರೆ `‘ಮದ್ಯಕ್ಕೆ’’ ‘‘ಚಕ್ಕಣಮೆನಿಪುದು’’ ಎಂದರೆ ‘‘ಚಾಕಣವೆನಿಸಿಕೊಳ್ವುದು’’ ಎನ್ನುತ, ಚಾಕಣ ಶಬ್ದದ ಅರ್ಥವನ್ನು ವಿವರಿಸಿದರು. ಮದ್ಯಪಾನ ಮಾಡುವಾಗ ನಂಜಿಕೆಯಾಗಿ ಜಗಿದು ಚಪ್ಪರಿಸುವ ಮಾಂಸದ ಖಾದ್ಯವೇ ಈ ಚಾಕಣ. ಒಲೆಯ ಮೇಲೆ ಕಾವಲಿಯನ್ನಿಟ್ಟು ಕಾಯಿಸಿ ಹಸಿ ಮಾಂಸದ ತುಂಡುಗಳಿಗೆ ಉಪ್ಪು, ಖಾರ, ಮೆಣಸಿನಪುಡಿಯನ್ನು ಸವರಿ ಚೆನ್ನಾಗಿ ಹುರಿದ ಈ ಚಾಕಣ, ಮದ್ಯ ಪ್ರಿಯರಿಗೆ ತುಂಬಾ ರುಚಿಕಟ್ಟಾದ ನಂಜಿಕೆ ಎಂದು ನರಸಿಂಹಾಚಾರ್ಯರು ವಿವರಿಸುತ್ತಿದ್ದಂತೆಯೇ ನನ್ನ ನೆನಪು ನನ್ನ ಬಾಲ್ಯದ ದಿನಗಳಿಗೆ ಹೋಯಿತು. ನಾನು ಹುಡುಗನಾಗಿದ್ದಾಗ ನಮ್ಮೂರಿನ ಹೆಂಡದ ಅಂಗಡಿಯಲ್ಲಿ ಒಲೆಯ ಮುಂದೆ ಕುಳಿತು ಚಾಕಣವನ್ನು ಹುರಿದು ಮಾರುತ್ತಿದ್ದ ಹೆಂಗಸರನ್ನು ನೋಡಿದ್ದೇನು. ನಾನೂ ಸಹ ಮಾಂಸಾಹಾರಿಯಾದುದರಿಂದ ಚಾಕಣದ ರುಚಿಯು ನನಗೆ ಗೊತ್ತಿತ್ತು. ಆದರೆ ಈ ಚಾಕಣ ಎಂಬ ಪದಕ್ಕೆ ಪಂಪನು ಬಳಸಿರುವ ಚಕ್ಕಣ ಎಂಬ ಪದವು ಮೂಲ ಎಂಬುದು ನನಗೆ ಗೊತ್ತಿರಲಿಲ್ಲ. ಆಗ ನಾನು ಎದ್ದು ನಿಂತು ಚಾಕಣ ಎಂಬ ಖಾದ್ಯವನ್ನು ಮಾಡುವ ಕ್ರಮವನ್ನು ಮತ್ತು ಅದರ ರುಚಿಯನ್ನು ವಿವರಿಸಿದಾಗ ಡಿ.ಎಲ್‌.ಎನ್‌. ಅವರು ನನ್ನ ವಿವರಣೆಯನ್ನು ನಗುತ್ತ ಸ್ವೀಕರಿಸಿದ ಅವರ ಔದಾರ್ಯವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೆ. ವಿದ್ಯಾರ್ಥಿಗಳಲ್ಲಿರುವ ಅಷ್ಟಿಷ್ಟು ಸಾಮರ್ಥ್ಯವನ್ನು ಮೆಚ್ಚುವುದು ಶ್ರೇಷ್ಠ ದೊಡ್ಡಗುಣ. ಅದಕ್ಕೆ ಹೆಸರಾಗಿದ್ದವರು ಶ್ರೀ ಡಿ.ಎಲ್‌.ಎನ್‌.

ಪ್ರಾಚೀನ ಕಾಲದ ಸಾಮಾಜಿಕ ವ್ಯವಹಾರಗಳಲ್ಲಿ ಬಳಕೆಯಲ್ಲಿದ್ದ ಇಂತಹ ಅಪರೂಪವಾದ ಪದಗಳ ನಿಷ್ಪತ್ತಿ, ಹಿನ್ನೆಲೆ ಮತ್ತು ಆ ಪದಗಳನ್ನು ಸಂದರ್ಭಕ್ಕೆ ಹೊಂದುವಂತೆ ಸಮಂಜಸವಾಗಿ ಬಳಸಿರುವ ಉದ್ದೇಶವನ್ನು ಕರಾರುವಕ್ಕಾಗಿ ಹೇಳುವುದರಲ್ಲಿ ನಿಷ್ಣಾತರಾಗಿದ್ದ ಪಂಡಿತರು ಡಿ.ಎಲ್‌.ಎನ್‌. ಒಂದು ಕ್ಲಿಷ್ಟವಾದ ಪದವು ಅವರ ತಲೆಯನ್ನು ಹೊಕ್ಕಿತೆಂದರೆ, ಆ ಪದ ತನ್ನ ಪೆಡಸು ಗಡಸು ಪರಿವೇಶವನ್ನು ಕಳಚಿ, ಸಹಜ ಸ್ವರೂಪದಲ್ಲಿ ಅರ್ಥವನ್ನು ಬಹಿರಂಗಗೊಳಿಸುವವರೆಗೆ ಅದನ್ನು ಹತ್ತಾರು ನಿಟ್ಟಿನಲ್ಲಿ ಒರೆಗೆ ಹಚ್ಚಿ ಬಿಡುತ್ತಿದ್ದರು. ಕನ್ನಡದ ಬೋಧಕ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು ತಮಗೆ ಅರ್ಥವಾಗದ ಪದ ಮತ್ತು ಪ್ರಯೋಗದ ಬಗ್ಗೆ ತಿಳಿದುಕೊಳ್ಳಲು ನರಸಿಂಹಾಚಾರ್‌ಅವರ ಬಳಿಗೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಅಂತಹ ಸಂದರ್ಭಗಳಲ್ಲೆಲ್ಲ ನಗುಮೊಗದಿಂದ ಸಂದೇಹಗಳನ್ನು ಪರಿಹರಿಸುತ್ತಿದ್ದ ಡಿ.ಎಲ್‌.ಎನ್‌. ಅವರ ದೊಡ್ಡತನದ ಪ್ರತೀಕವಾಗಿತ್ತು. ಕನ್ನಡ ಇಲಾಖೆಯ ಉಪನ್ಯಾಸಕರು, ವಿದ್ಯಾರ್ಥಿಗಳಲ್ಲದೆ ಬೇರೆ ಬೇರೆ ಇಲಾಖೆಗಳ ವಿದ್ಯಾರ್ಥಿಗಳು, ಉಪನ್ಯಾಸಕರೂ ಸಹ ಒಂದು ಪದದ ಅರ್ಥವು ಸಂದಿಗ್ಧವೆನಿಸಿದ ಸಂದರ್ಭಗಳಲ್ಲಿ ಡಿ.ಎಲ್‌.ಎನ್‌. ಅವರ ಬಳಿಗೆ ಬರುತ್ತಿದ್ದರು ಎಂದರೆ ಅವರ ಪದ ಸಂಪತ್ತು ಮತ್ತು ವಿವರಣ ಸಾಮರ್ಥ್ಯದ ವ್ಯಾಪ್ತಿ ಮತ್ತು ವೈವಿಧ್ಯತೆಯು ಅರ್ಥವಾಗುತ್ತದೆ. ಆದ್ದರಿಂದ ಡಿ.ಎಲ್‌.ಎನ್‌. ಅವರು ಕನ್ನಡ ಪ್ರಾಧ್ಯಾಪಕರಾಗಿದ್ದ ಅಂದಿನ ದಿನಗಳಲ್ಲಿ ವಿದ್ಯಾರ್ಥಿ ಅಧ್ಯಾಪಕರ ಒಳಗೆ ಮತ್ತು ವಿಶ್ವವಿದ್ಯಾನಿಲಯದ ಪರಿಸರದಲ್ಲಿ ಅವರು ಓಡಾಡುವ ನಿಘಂಟು ಎಂಬ ಅಭಿದಾನಕ್ಕೆ ಪಾತ್ರರಾಗಿದ್ದರು. ಅದು ಡಿ.ಎಲ್‌.ಎನ್‌. ಅವರ ಅಂತಃಸತ್ವವನ್ನು ಅರಿತಿದ್ದವರು ಆಡಿದ ಮೆಚ್ಚುಗೆಯ ನುಡಿಯಾಗಿತ್ತು. ಇದು ನರಸಿಂಹಾಚಾರ್‌ ಅವರ ಪಾಂಡಿತ್ಯದ ಹೆಗ್ಗಳಿಕೆ.

ನರಸಿಂಹಾಚಾರ್‌ ಅವರು ನಮಗೆ ಶಿವಕೋಟ್ಯಾಚಾರ್ಯ ವಿರಚಿತ ವಡ್ಡಾರಾಧನೆ ಗದ್ಯ ಕಥಾಗ್ರಂಥವನ್ನು ಬೋಧಿಸಿದರು. ಪೂರ್ವದ ಹಳಗನ್ನಡವನ್ನು ಅರ್ಥಮಾಡಿಕೊಳ್ಳುವುದು ಸುಲಭದ ವಿಷಯವಲ್ಲ. ಅವರು ಆ ಕಠಿಣವಾದ ಕೃತಿಯನ್ನು ಪದ ವಿಭಾಗದೊಂದಿಗೆ ಬಿಡಿಸಿ ಸಾವಧಾನವಾಗಿ ಓದಿ ಕಥೆಯು ಸಂದಿಗ್ಧತೆ ಇಲ್ಲದೆ ಅರ್ಥವಾಗುವಂತೆ ಮಾಡುತ್ತಿದ್ದ ಪಾಠದ ರೀತಿ ಅನನ್ಯವಾದುದಾಗಿತ್ತು.

ಇನ್ನು ಅವರು ತಮ್ಮ ಒಲವಿನ ವಿಷಯವಾಗಿದ್ದ ಕೇಶಿರಾಜನ ಶಬ್ದಮಣಿದರ್ಪಣವನ್ನು ಬೋಧಿಸುವಾಗ ತೋರಿಸುತ್ತಿದ್ದ ಆಸಕ್ತಿ ಅಪರೂಪವಾದುದು ಮತ್ತು ತುಂಬ ಮೌಲ್ಯಯುಕ್ತವಾದುದು. ಅಲ್ಲಿನ ಪ್ರತಿಯೊಂದು ವ್ಯಾಕರಣ ಸೂತ್ರಕ್ಕೂ ಕೇಶಿರಾಜನು ಕೊಟ್ಟಿರುವ ಕಾವ್ಯ ಪ್ರಯೋಗಗಳನ್ನು ಲೀಲಾಜಾಲವಾಗಿ ಅರ್ಥೈಸುವಾಗ ಡಿ.ಎಲ್‌.ಎನ್‌. ಅವರ ಹಳಗನ್ನಡ ಮತ್ತು ಪೂರ್ವದ ಹಳಗನ್ನಡ ಕಾವ್ಯಗಳ ಅಧ್ಯಯನದ ವ್ಯಾಪ್ತಿ ಪಾಂಡಿತ್ಯದ ಆಳ ಮತ್ತು ವಿಮರ್ಶೆಯ ವಿಸ್ತಾರ ಅಚ್ಚರಿಪಡುವಂತಹುದು. ಆ ಕಾಲಕ್ಕೆ ನಿಟ್ಟೂರು ನಂಜಯ್ಯನ ಟೀಕು ಸಹಿತವಾಗಿದ್ದ ಕೇಶಿರಾಜನ ಶಬ್ದಮಣಿದರ್ಪಣದ ಪ್ರತಿಗಳು ಲಭ್ಯವಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರತಿಗಳು ಪ್ರೊ. ಡಿ.ಎಲ್‌.ಎನ್‌. ಅವರಂತಹ ವಿದ್ವಾಂಸರ ಬಳಿ ಇರುತ್ತಿದ್ದವು. ಎಂ.ಪಿ. ಪೂಜಾರ ಅವರ ಕನ್ನಡದ ಕೆಲವು ವ್ಯಾಕರಣ ವಿಚಾರಗಳು ಎಂಬ ವಿದ್ವತ್‌ಪೂರ್ಣ ಲೇಖನ ಹಾಗೂ ಪ್ರೊ. ತೀ.ನಂ.ಶ್ರೀಕಂಠಯ್ಯನವರು ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಗೆ ಸಿದ್ಧಪಡಿಸಿಕೊಟ್ಟಿದ್ದ, ಹಲವಾರು ಮುದ್ರಣಗಳನ್ನು ಕಂಡಿದ್ದ ‘‘ಕನ್ನಡ ಮಧ್ಯಮ ವ್ಯಾಕರಣ’’ ಎಂಬ ಅಪೂರ್ವ ಗ್ರಂಥ (ಅದು ವ್ಯಾಕರಣದಂತಹ ಶುಷ್ಕ ವಿಷಯವನ್ನು ಇಷ್ಟು ಸ್ವಾರಸ್ಯವಾಗಿ ಮತ್ತು ಮನದಟ್ಟಾಗುವಂತೆ ಹೇಳಲು ಸಾಧ್ಯವೆ? ಎಂಬ ಆಶ್ಚರ್ಯವನ್ನುಂಟು ಮಾಡುವಂತಹ ವಿಶಿಷ್ಟ ಕೃತಿ). ಇವು ವ್ಯಾಕರಣ ವಿಷಯವನ್ನು ಓದಲು ಲಭ್ಯವಿದ್ದ ಸಾಮಗ್ರಿ. ಅದೇ ಸಂದರ್ಭದಲ್ಲಿ ಪ್ರೊ. ಡಿ.ಎಲ್‌.ಎನ್‌. ಅವರು ಶಾಸ್ತ್ರೀಯವಾಗಿ ಮತ್ತು ಪ್ರಮಾಣೀಭೂತವಾಗಿ ಸಂಪಾದಿಸಿ ಕೊಟ್ಟಿದ್ದ ಕೇಶಿರಾಜನ ಶಬ್ದಮಣಿದರ್ಪಣವನ್ನು ಮೈಸೂರಿನ ಖ್ಯಾತ ಪ್ರಕಾಶನ ಸಂಸ್ಥೆ, ಶಾರದಾ ಮಂದಿರದ ಪ್ರೊ. ಹೆಚ್‌. ಎಂ. ಶಂಕರನಾರಾಯಣರಾವ್‌ ಅವರು ಪ್ರಕಟಿಸಲು ಕೈಗೆತ್ತಿ ಕೊಂಡಿದ್ದರು. ಈಗಿನಂತೆ ಮುದ್ರಣ ತಂತ್ರಜ್ಞಾನವನ್ನು ಮುಂದುವರೆಯದಿದ್ದ ಅಂದಿನ ದಿನಗಳಲ್ಲಿ ಒಂದು ಗ್ರಂಥ ಅದರಲ್ಲೂ ಸೀಮಿತ ಓದುಗರಿಗೆ ಬೇಕಾಗುವ ಶಾಸ್ತ್ರ ಗ್ರಂಥವು ಪ್ರಕಟವಾಗಬೇಕಾದರೆ ವರ್ಷಗಳೇ ಹಿಡಿಯುತ್ತಿದ್ದವು. ಮುದ್ರಣ ಕೆಲಸವಂತೂ ಆರಂಭವಾಗಿತ್ತು. ನಾವು ೮-೧೦ ಜನ ಕನ್ನಡದ ವಿದ್ಯಾರ್ಥಿಗಳು ಪುಸ್ತಕದ ಒಟ್ಟು ಬೆಲೆಯನ್ನು ಪ್ರಕಾಶಕರಿಗೆ ಕೊಟ್ಟು ಅಚ್ಚಾದ ಫಾರಂಗಳನ್ನು ಪಡೆದುಕೊಂಡು ಡಿ.ಎಲ್‌.ಎನ್‌. ಅವರು ಹೇಳುತ್ತಿದ್ದ ವಿವರಣೆಗಳನ್ನು ಕೇಳುತ್ತಿದ್ದೆವು. ಅವರು ನೀಡುತ್ತಿದ್ದ ಪ್ರಮುಖವಾದ ಅಂಶಗಳನ್ನು ಓದಿಗೆ ಅನುಕೂಲವಾಗುವಂತೆ ಆ ಫಾರಂಗಳ ನಾಲ್ಕು ಜಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಬರೆದುಕೊಳ್ಳುತ್ತಿದ್ದೆವು. ಕಾಲಾನುಕ್ರಮದಲ್ಲಿ ಶಬ್ದಮಣಿದರ್ಪಣದ ಅಚ್ಚಿನ ಕೆಲಸ ಮುಗಿದ ಮೇಲೆ ನಮ್ಮಲ್ಲಿದ್ದ ಫಾರಂಗಳನ್ನೆಲ್ಲ ಮುದ್ರಕರಿಂದ ಪುಸ್ತಕ ರೂಪದಲ್ಲಿ ಬೈಂಡ್‌ಮಾಡಿಸಿಕೊಂಡೆವು. ನರಸಿಂಹಾಚಾರ್ಯರು ಹೇಳಿದ ಟಿಪ್ಪಣಿಗಳನ್ನು ಬರೆದುಕೊಂಡಿದ್ದ ಶಬ್ದಮಣಿದರ್ಪಣದ ಪ್ರತಿಯು ಇತ್ತೀಚಿನವರೆಗೂ ನನ್ನ ಬಳಿ ಇತ್ತು.

ನರಸಿಂಹಾಚಾರ್ಯರಂತಹ ವ್ಯಾಕರಣ ವಿಶಾರದಿಂದ ವ್ಯಾಕರಣವನ್ನು ಕಲಿತರೂ ಸಹ ಅದು ಪರಿಣಾಮಕಾರಿಯಾಗಿ ನನ್ನ ತಲೆಗೆ ಹತ್ತಲಿಲ್ಲ. ಗುರು ಕೃಪೆಯಿಂದ ವ್ಯಾಕರಣ ವಿಷಯದಲ್ಲಿ ತೇರ್ಗಡೆಯಾದೆನು. ಅದು ನನ್ನ ಪುಣ್ಯ. ನಾನು ಅಧ್ಯಾಪಕ ವೃತ್ತಿಗೆ ಹೋಗಲಿಲ್ಲವಾದುದರಿಂದ, ‘‘ವ್ಯಾಕರಣವೇಕೆಂಬೆಯೇನ್‌? ಕಲ್ತು ಮರೆವುದಕೆ’ ’ಎಂಬ ಕವಿಸೂಕ್ತಿ ನನ್ನ ಮಟ್ಟಿಗೂ ಅನ್ವರ್ಥವಾಯಿತು.

ಗ್ರಂಥಸಂಪಾದನಾಶಾಸ್ತ್ರ ವಿಷಯದಲ್ಲಿ ಡಿ.ಎಲ್‌.ಎನ್‌. ಅವರದು ತಪಸ್ಸಿನಂತಹ ತಾದಾತ್ಮಾತೆ. ಆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಅವರು ಒಬ್ಬ ಪ್ರಾಮಾಣಿಕ ಸಂಪಾದಕರಾಗಿದ್ದರು. ಪ್ರಾಚೀನ ಕೃತಿಯೊಂದನ್ನು ಸಂಪಾದಿಸುವಾಗ ಪ್ರಾಮಾಣಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. “ಏಕ ಪ್ರತಿಯನ್ನು ಆಧಾರವಾಗಿಟ್ಟುಕೊಂಡು ಕೃತಿಯೊಂದನ್ನು ಸಂಪಾದಿಸುವಾಗ ಯಾವುದೇ ಕಾರಣಕ್ಕೂ ಕರ್ತೃವಿನ ಆಶಯಕ್ಕೆ ಧಕ್ಕೆಯನ್ನುಂಟು ಮಾಡಬಾರದು. ಸಂಶಯಕ್ಕೆ ಎಡೆಯಾದ ಅರ್ಥವಾಗದ ಭಾಗಗಳಿದ್ದರೆ ಅವನ್ನು ಹಾಗೆಯೇ ಬಿಟ್ಟಿರಬೇಕು. ಮುಂದೆ ದೊರೆಯಬಹುದಾದ ಆಧಾರಗಳಿಂದ ಯಾರಾದರೂ ಮೂಲ ಆಶಯವನ್ನು ತೆರೆದಿಡಬಹುದು. ಒಂದು ಕೃತಿಯನ್ನು ಲಭ್ಯವಿರುವ ಹಸ್ತಪ್ರತಿಗಳು ಮತ್ತು ಆ ಹಿಂದೆ ಪ್ರಕಟವಾದ ಮುದ್ರಿತ ಪ್ರತಿಗಳನ್ನು ಆಧಾರವಾಗಿಟ್ಟುಕೊಂಡು ಸಂಪಾದಿಸಿದ ನಂತರವೂ ಆ ಎಲ್ಲ ಆಕರ ಸಾಮಗ್ರಿಯನ್ನು ಜೋಪಾನವಾಗಿ ಕಾಯ್ದಿರಿಸಬೇಕು. ಮುಂದೊಂದು ದಿನ ಆ ಕೃತಿಯ ಬಗ್ಗೆ ಹೊಸ ಬೆಳಕನ್ನು ಚೆಲ್ಲುವಂತಹ ಅಪರೂಪದ ಹಸ್ತಪ್ರತಿಯು ದೊರೆತಲ್ಲಿ ಸಂಬಂಧಪಟ್ಟ ಕೃತಿಯ ಸಂಪಾದನಾ ಕಾರ್ಯದಲ್ಲಿ ಆ ಹಿಂದೆ ಅವಲೋಕಿಸಿದ ಎಲ್ಲ ಕೃತಿಗಳು ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರಬಹುದು” ಎಂಬುದು ಅವರ ನಂಬಿಕೆಯಾಗಿತ್ತು. ಇವು ನರಸಿಂಹಾಚಾರ್ಯರು ಹೊಣೆಯರಿತ ಸಂಪಾದಕರಿಗೆ ನೀಡುತ್ತಿದ್ದ ಕೆಲವು ಎಚ್ಚರಿಕೆಯ ಮಾತುಗಳು. ಇನ್ನು ಲಿಪಿಕಾರರು, ಪ್ರತಿಕಾರರು ಗಮನಿಸಬೇಕಾದ ವಿಚಾರವೆಂದರೆ, ಲಿಪಿಕಾರ, ಪ್ರತಿಕಾರರು ಯಾವುದೇ ಕಾರಣಕ್ಕೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಪ್ರಯತ್ನವನ್ನು ಮೂಲಕರ್ತೃವಿನ ಆಶಯವನ್ನು ಬದಲಿಸುವ ಕಾರ್ಯವನ್ನು ಮಾಡಬಾರದು. ಅದರಂತಹ ದೊಡ್ಡ ಅಪಚಾರವು ಬೇರೆ ಇಲ್ಲ ಎನ್ನುತ್ತಿದ್ದ ಡಿ.ಎಲ್‌.ಎನ್‌. ಅವರು ಮಕ್ಕಿಕಾಮಕ್ಕಿ ಸ್ವಭಾವದ ಪ್ರತಿಕಾರರೇ ಯೋಗ್ಯರಾದ ಮತ್ತು ಪ್ರಾಮಾಣಿಕರಾದ ಪ್ರತಿಕಾರರು ಎಂದು ಮೆಚ್ಚಿಕೊಳ್ಳುತ್ತಿದ್ದರು. ಏಕೆಂದರೆ ಅದರಿಂದ ಮೂಲಕರ್ತೃವಿಗೆ ಎಂದೂ ಅಪಚಾರವಾಗುವುದಿಲ್ಲ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ಮಕ್ಕಿಕಾಮಕ್ಕಿ ಎನ್ನುವ ಪದದ ವಿವರಣೆಯನ್ನು ‘ಮಕ್ಷಿಕಾಃ ಮಕ್ಷಿಃ’’ ಎಂದು ಪ್ರಥಮವಾಗಿ ತಿಳಿದುಕೊಂಡದ್ದು ಡಿ.ಎಲ್‌.ಎನ್‌. ಅವರಿಂದಲೆ.

೧೯೬೨ರಷ್ಟು ಹಿಂದೆ ನನ್ನ ಬಳಿ ಇದ್ದ ತಗರಪವಾಡ ಎಂಬ ಸಾಂಗತ್ಯ ಕೃತಿಯ ಹಸ್ತಪ್ರತಿಯನ್ನು ಡಿ.ಎಲ್‌.ಎನ್‌. ಅವರ ಗಮನಕ್ಕೆ ತಂದೆನು. ಆ ಕೃತಿಯನ್ನು ತಾಳ್ಮೆಯಿಂದ ಅವಲೋಕಿಸಿ, ಇದೊಂದು ಒಳ್ಳೆಯ ಕೃತಿ, ಸಾಧ್ಯವಾದರೆ ಪ್ರಕಟ ಮಾಡಿ, ಸಾಧ್ಯವಾಗದಿದ್ದರೆ ಕೃತಿಯ ಸಂಗ್ರಹವಾದ ಗದ್ಯನುವಾದವನ್ನು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಣೆಗೆ ಕಳುಹಿಸಿ, ಮೂಲ ಪ್ರತಿಯನ್ನು ಇಟ್ಟುಕೊಂಡಿರಿ. ಮುಂದೆ ಯಾರಾದರೂ ಸಂಪಾದಿಸಿ ಪ್ರಕಟಿಸಬಹುದು ಎಂದು ತಿಳಿಸಿದರು. ಗುರುವಿನ ಮುಕ್ತ ಮನಸ್ಸಿನ ಸಲಹೆ ಸುಳ್ಳಾಗಲಿಲ್ಲ. ಕೃತಿಯ ಗದ್ಯಾನುವಾದ ಮೈಸೂರು ವಿಶ್ವವಿದ್ಯಾನಿಲಯ ಪ್ರತಿಷ್ಠಿತ ಪ್ರಕಟಣೆ, ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಪ್ರೊ. ಎಂ. ಎಂ. ಕಲಬುರ್ಗಿ, ಡಾ. ಎಫ್‌. ಟಿ. ಹಳ್ಳಿಕೇರಿ ಹಾಗೂ ನಾನು ಕೂಡಿ ಸಂಪಾದಿಸಿದ ತಗರ ಪವಾಡ ಕೃತಿಯು ಕಳೆದ ವರ್ಷ ೨೦೦೪ ಗದಗಿನ ವಿದ್ಯಾನಿಧಿ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತು. ಪ್ರಾಚೀನ ಗ್ರಂಥಗಳು ಅಚ್ಚಾಗಿ ಹೊರಬರಬೇಕು ಎಂಬ ಅವರ ಕಳಕಳಿಗೆ ಇದು ಒಂದು ನಿದರ್ಶನ.

ಪ್ರೊ. ಡಿ.ಎಲ್‌.ಎನ್‌. ಅವರು ವಿದ್ಯಾರ್ಥಿಗಳಿಗೆ ಅಧ್ಯಯನದ ಬಗ್ಗೆ ಕೊಡುತ್ತಿದ್ದ ಸಲಹೆಗಳು ತುಂಬ ಅರ್ಥಪೂರ್ಣವಾಗಿರುತ್ತಿದ್ದವು. ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಶ್ರದ್ಧೆ ಮತ್ತು ತಾಳ್ಮೆಯ ಬಗ್ಗೆ ಅವರು ಸದಾ ಮನದಟ್ಟು ಮಾಡುತ್ತಿದ್ದರು. ಅಂತಹ ಒಂದೆರಡು ವಿಚಾರಗಳನ್ನು ಹೇಳುವುದಾದರೆ, ಒಂದು ಓದಿಗೆ ಸಂಬಂಧಪಟ್ಟ ಸಲಹೆ “ಹೇಗೆ ಓದ್ಬೇಕು ಗೊತ್ತೇನ್ರಯ್ಯ; ತೊಂಡುಗೂಳಿ ನೋಡಿದ್ದೀರಾ? ಅದು ಸಮೃದ್ಧವಾದ ಬೆಳೆ ಇರೋ ಹೊಲ ನೋಡಿ, ನುಗ್ಗಿ, ಕತ್ತು ಬಗ್ಗಿಸಿಕೊಂಡು ಹೊಟ್ಟೆ ತುಂಬುವ ತನಕ ಸುಮ್ಮನೆ ಪುಷ್ಕಳವಾಗಿ ಮೇಯುತ್ತದೆ. ಆ ಮೇಲೆ ಒಂದು ಮರದ ನೆರಳಲ್ಲಿ ಹಾಯಾಗಿ ಮಲಗಿಕೊಂಡು ಮೆಯ್ದ ಮೇವನ್ನು ನಿಧಾನವಾಗಿ ಮೆಲುಕು ಹಾಕುತ್ತದೆ. ಹಾಗಿರಬೇಕು ಓದು. ಲೈಬ್ರರಿಯ ಒಂದು ಮೂಲೆಯಲ್ಲಿ ಕುಳಿತುಕೊಂಡು ಸಾವಧಾನವಾಗಿ ಓದಿ ಅಗತ್ಯವಾದ ಟಿಪ್ಪಣಿಗಳನ್ನು ಮಾಡಿಕೊಳ್ಳಬೇಕು. ನಂತರ ಮನೆಯಲ್ಲೊ ಹಾಸ್ಟೆಲಿನಲ್ಲೋ ನಿಧಾನವಾಗಿ ಅವಲೋಕಿಸಿ, ಸಂದಿಗ್ಧತೆಯು ಕಂಡುಬಂದಲ್ಲಿ ಅಧ್ಯಾಪಕರ ಜೊತೆ ಚರ್ಚಿಸಿ ಸಂಗ್ರಹಿಸಿದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಆಗ ಅದು ನಿಮ್ಮದಾಗಿರುತ್ತದೆ. ಓದಿದ್ದು ಉಪಯುಕ್ತವಾಗುತ್ತದೆ.” ಇದು ಓದುವ ಕಲೆಯ ಬಗ್ಗೆ ನೀಡಿದ ಅಮೂಲ್ಯವಾದ ಸಲಹೆಯಾಗಿತ್ತು. ಮತ್ತೊಂದು ಡಿ.ಎಲ್‌.ಎನ್‌. ಅವರು ನಿಘಂಟಿನ ಅವಲೋಕನದ ಬಗ್ಗೆ ನೀಡಿದ ವಿಶಿಷ್ಟವಾದ ನಿರ್ದೇಶನವಾಗಿದೆ. “ಒಂದು ನಿಘಂಟಿನಲ್ಲಿ ಒಂದು ನಿರ್ದಿಷ್ಟವಾದ ಪದಕ್ಕೆ ನಿಖರವಾದ ಅರ್ಥವು ದೊರೆಯದಿದ್ದಾಗ ಆ ನಿಘಂಟಿನಲ್ಲಿ ಆ ನಿಮ್ಮ ಪದಕ್ಕೆ ಕೊಟ್ಟಿರುವ ಅರ್ಥದ ಪದಕ್ಕೆ ಮತ್ತೊಂದು ನಿಘಂಟಿನಲ್ಲಿ ಕೊಟ್ಟಿರುವ ಅರ್ಥದೊಂದಿಗೆ ಹೋಲಿಸಿ ನೋಡಿದಾಗ ಬಹುತೇಕ ಸಂದರ್ಭದಲ್ಲಿ ನಿಮಗೆ ಬೇಕಾದ ಅರ್ಥವು ಸಿಗುವ ಸಾಧ್ಯತೆಯು ಇರುತ್ತದೆ. ಅಥವಾ ಅದಕ್ಕೆ ಹತ್ತಿರವಾದ ಅರ್ಥವಾದರೂ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಆ ಪದವು ಕಾವ್ಯದಲ್ಲಿ ಬಳಕೆಯಾಗಿರುವ ಉದ್ದೇಶವನ್ನು ಊಹಿಸಬಹುದು” ನಿಘಂಟಿನ ಅವಲೋಕನದ ಈ ಕ್ರಮವನ್ನು ಅವರು ‘Cross verification of Dictionary’ ಎನ್ನುತ್ತಿದ್ದರು. ನಾನು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಕೆಲಸಕ್ಕೆ ಸೇರಿದ ಮೇಲೆ ನಮ್ಮ ಇಲಾಖೆಯ ಮಾಧ್ಯಮ ಬರವಣಿಗೆಯ ಅದರಲ್ಲೂ ಭಾಷಾಂತರ ಕೆಲಸದ ಸಂದರ್ಭದಲ್ಲಿ ಡಿ.ಎಲ್‌.ಎನ್‌. ಅವರ ಈ ನಿರ್ದೇಶನವು ಉಪಯೋಗಕ್ಕೆ ಬಂದಿತು.

ನಾವು ಮೂರು ವರ್ಷಗಳ ಬಿ.ಎ. ಮಗಿಸಿ, ಎರಡು ವರ್ಷಗಳ ಎಂ.ಎ.ಗೆ ಸೇರುವ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯದ ಕೆಲವು ಸ್ನಾತಕೋತ್ತರ ಇಲಾಖೆಗಳು ಕವಿ ಕುವೆಂಪು ಅವರ ಕಲ್ಪನೆಯ ಮಾನಸ ಗಂಗೋತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆಗೆ ಸ್ಥಳಾಂತರಗೊಂಡವು. ಹಾಗೆ ಬಂದ ಪ್ರಥಮ ತಂಡದ ಇಲಾಖೆಗಳಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗವೂ ಒಂದು. ಇನ್ನೊಬ್ಬ ಪ್ರತಿಭಾನ್ವಿತ ಪ್ರಾಧ್ಯಾಪಕರಾಗಿದ್ದ ನಮ್ಮ ಗೌರವಾನ್ವಿತ ಶ್ರೀ ಗುರು ಪ್ರೊ. ತೀ.ನಂ. ಶ್ರೀಕಂಠಯ್ಯನವರು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಮಾನಸಗಂಗೋತ್ರಿಗೆ ಬಂದರು. ಪ್ರೊ. ಡಿ.ಎಲ್‌.ಎನ್‌. ಅವರು ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಲ್ಲಿಯೇ ಉಳಿದರು. ಆಗ ನಾವು ಎರಡು ವರ್ಷಗಳ ಎಂ.ಎ. ಅಧ್ಯಯನದ ಪ್ರಥಮ ತಂಡದ ವಿದ್ಯಾರ್ಥಿಗಳು. ಹಾಗಾಗಿ ನಾವು ಪ್ರೊ. ಡಿ.ಎಲ್‌.ಎನ್‌. ಅವರ ಪಾಠಪ್ರವಚನಗಳನ್ನು ಕೇಳಿದುದು ನಮ್ಮ ಬಿ. ಎ. ಓದಿನ ಮೂರು ವರ್ಷಗಳು ಮಾತ್ರ. ಎಂ.ಎ. ಓದುವಾಗ ಪ್ರಥಮ ವರ್ಷ ಕೆಲವು ವಿಷಯಗಳ ತರಗತಿಗಳಿಗೆ ಮಹಾರಾಜ ಕಾಲೇಜಿಗೂ ಬರುತ್ತಿದ್ದೆವಾದರೂ ನಮ್ಮ ಪೂರ್ಣಾವಧಿಯ ಅಧ್ಯಯನವು ಮಾನಸಗಂಗೋತ್ರಿಯಲ್ಲೇ ನಡೆಯಿತು. ಆ ಸಂದರ್ಭದಲ್ಲಿ ಪ್ರೊ. ತೀ.ನಂ.ಶ್ರೀ.ಯವರು ನಮಗೆ ರನ್ನ ಕವಿಯ ಗದಾಯುದ್ಧ ಕಾವ್ಯವನ್ನು ಬೋಧಿಸಿದರು. ಅದು ನನ್ನ ಜೀವನದಲ್ಲಿ ನಾನು ಕೇಳಿದ ಅತ್ಯಂತ ವಿದ್ವತ್‌ಪೂರ್ಣವಾದ ಮತ್ತು ರಸವತ್ತಾದ ಪಾಠವಾಗಿದೆ. ತೀ.ನಂ.ಶ್ರೀಯವರ ಬೋಧನೆಯ ಕಲೆ ಮತ್ತು ಕೌಶಲ್ಯ, ಪ್ರಬುದ್ಧತೆ ಮತ್ತು ಪಾಂಡಿತ್ಯವನ್ನು ಹೇಳುತ್ತಾ ಹೋದರೆ ಅದು ಒಂದು ದೊಡ್ಡ ಪ್ರಬಂಧವಾಗುತ್ತದೆ. ಆ ಬೋಧನೆಯ ಶಿಸ್ತು ಮತ್ತು ಕ್ರಮ ತೀ.ನಂ.ಶ್ರೀಯವರಿಗೆ ಸಿದ್ಧಿಸಿದ್ದ ರಸಪಾಕವಾಗಿದ್ದಿತು.

ಡಿ. ಎಲ್‌. ನರಸಿಂಹಾಚಾರ್‌ಅವರಿಗೆ ಪಾಳಿ ಮತ್ತು ಪ್ರಾಕೃತ ಭಾಷೆಗಳ ಪರಿಚಯವಿತ್ತು. ಸಂಸ್ಕೃತವನ್ನಂತೂ ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು. ಖ್ಯಾತ ಇಂಗ್ಲಿಷ ಕವಿಗಳ ಕಾವ್ಯ ನಾಟಕಗಳನ್ನು ಓದಿದ್ದ ಅವರಿಗೆ ಅಲ್ಲಿನ ರಸಭಾವಗಳನ್ನು ಗ್ರಹಿಸಿ, ವಿವರಿಸುವ ಸಾಮರ್ಥ್ಯವೂ ಇತ್ತು.

ನಾವು ಎಂ. ಎ. ಓದುತ್ತಿರುವಾಗಲೇ ಪ್ರೊ. ಡಿ. ಎಲ್‌. ನರಸಿಂಹಾಚಾರ್‌ ಮತ್ತು ಪ್ರೊ. ತೀ.ನಂ.ಶ್ರೀಕಂಠಯ್ಯನವರು ಒಂದೇ ದಿನ ನಿವೃತ್ತರಾದರು. ಆಗಿನ ನನ್ನಂತಹ ಅಪಾರ ಶಿಷ್ಯರಿಗೆ ಅತೀವ ನಿರಾಶೆಯಾಯಿತು. ಆದರೆ ಆ ಇಬ್ಬರು ಮಹನೀಯರ ಪಾಠಗಳನ್ನು ಮೆಲುಕು ಹಾಕುತ್ತ ವಿಶ್ವವಿದ್ಯಾನಿಲಯದಲ್ಲಿ ಅವರ ಗರಡಿಯಲ್ಲೇ ತಯಾರಾಗಿದ್ದ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರ ನಿರ್ದೇಶನದಲ್ಲಿ ಎಂ. ಎ. ಮುಗಿಸಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರತರಾದೆವು.

ಮೈಸೂರು ವಿಶ್ವವಿದ್ಯಾನಿಲಯವು ಕಂಡ ಪ್ರಕಾಂಡ ಪಂಡಿತ, ಪ್ರಬುದ್ಧ ವಿದ್ವಂಸ, ಶ್ರೇಷ್ಠ ಸಂಶೋಧಕ, ಪ್ರೊ. ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್‌ ಅವರು ಕನ್ನಡ ವಿದ್ವತ್‌ ಕ್ಷೇತ್ರವು ಸದಾ ಸ್ಮರಿಸುವಂತಹ ನಿಗರ್ವಿ ಪ್ರಾಧ್ಯಾಪಕರು. ವ್ಯಾಕರಣ, ಛಂದಸ್ಸು, ಗ್ರಂಥಸಂಪಾದನೆ, ಶಾಸನಾಧ್ಯಯನ ಮೊದಲಾದ ಶಾಸ್ತ್ರ ವಿಷಯಗಳಲ್ಲಿ ಡಿ.ಎಲ್‌.ಎನ್‌. ಅವರದು ಮಡುಗಟ್ಟಿದ ಪಾಂಡಿತ್ಯ, ಹಳಗನ್ನಡ ಕಾವ್ಯಗಳ ಅಧ್ಯಾಪನದಲ್ಲಿ ಬೇರೆಯವರಿಗೆ ಸರಿಗಟ್ಟಲಾಗದಂತಹ ಪಾಠ ಪ್ರಾವೀಣ್ಯತೆ.

ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಿ.ಎಲ್‌.ಎನ್‌. ಅವರು ಆಯ್ಕೆಯಾದ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ಆವರಣದಲ್ಲಿ ಶಿಷ್ಯರು, ಮಿತ್ರರು, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವು ಒಂದು ಹೃದಯಸ್ಪರ್ಶಿ ಸನ್ನಿವೇಶವಾಗಿತ್ತು. ಬೀದರ್‌ನಲ್ಲಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು ನುಡಿದ “ಸರಸ್ವತೀ ಸಾಮ್ರಾಜ್ಯದಲ್ಲಿ ಜಾತೀಯತೆ ಇರಬಾರದು” ಎಂಬ ಅಮೂಲ್ಯವಾದ ಸಂದೇಶವು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿತ್ತು. ಇದು ಅವರು ತಮ್ಮ ವೃತ್ತಿ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದ ಆದರ್ಶವಾಗಿತ್ತು. ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾದ ಪ್ರೀತಿ ಮತ್ತು ವಿಶ್ವಾಸದಿಂದ ಕಾಣುತ್ತಿದ್ದ ಡಿ.ಎಲ್‌.ಎನ್‌. ತಾವು ತಿಳಿದುಕೊಂಡಿದ್ದ ವಿಷಯವು ಎಷ್ಟೇ ಅಪರೂಪ ಮತ್ತು ಅಮೂಲ್ಯವಾದುದಾಗಿದ್ದರೂ ಅದನ್ನು ಅತ್ಯಂತ ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಮನಬಿಚ್ಚಿ ಹೇಳುತ್ತಿದ್ದರು. ಇಂದಿನ ದಿನಗಳಲ್ಲಿ ಇಂತಹ ಪ್ರಾಮಾಣಿಕತೆ ತುಂಬ ಅಪರೂಪವೆಂದೇ ಹೇಳಬೇಕು.

ಕ್ಲೋಸ್‌ ಕಾಲರ್‌ ಕೋಟು, ಕಚ್ಚೆ ಪಂಚೆ, ಕಲಾಪತ್ತಿನಪೇಟ ಹಣೆಯಲ್ಲಿ ಶೋಭಿಸುವ ಕೆಂಪು ಏಕನಾಮ, ಸದಾ ಚಪ್ಪಲಿ ಧರಿಸಿ ತುಂಬ ಗಾಂಭೀರ್ಯದ ಮುಗುಳ್ನಗೆ ತುಂಬಿದ ದುಂಡು ಮುಖದ ಲಕ್ಷ್ಮೀನರಸಿಂಹಾಚಾರ್ಯರು ಮಹಾರಾಜಾ ಕಾಲೇಜಿನ ಕಾರಿಡಾರ್‌ಗಳಲ್ಲಿ ನಡೆದುಬರುತ್ತಿದ್ದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಡಿ.ಎಲ್‌.ಎನ್‌. ಅವರು ಅಧ್ಯಯನ ಮತ್ತು ಅಧ್ಯಾಪನದಲ್ಲಿ ಎಷ್ಟು ಪ್ರವೀಣರೋ ಊಟ ತಿಂಡಿಯ ಆಯ್ಕೆಯ ವಿಚಾರದಲ್ಲೂ ಅಷ್ಟೇ ಸದಭಿರುಚಿಯನ್ನು ಹೊಂದಿದ್ದವರು. ರುಚಿ ಶುದ್ಧ ಜೀವನವನ್ನು ನಡೆಸಿ ಸುಸಂಸ್ಕೃತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದವರು ಎಂದೂ ಯಾರೊಡನೆಯೂ ವಿರೋಧ ವಿರಸವನ್ನು ಕಟ್ಟಿಕೊಳ್ಳದ ಅವರು ಸಿಟ್ಟು ಮಾಡಿಕೊಂಡ ಸನ್ನಿವೇಶವಿಲ್ಲ. ಅವರ ಗುರಿ ಒಂದೇ ಅದು ಅಧ್ಯಯನ-ಆಳವಾದ ಅಧ್ಯಯನ, ಸಂಶೋಧನೆ-ತಲಸ್ಪರ್ಶಿಯಾದ ಸಂಶೋಧನೆ, ಅಧ್ಯಾಪನ-ಪ್ರಾಮಾಣಿಕವಾದ ಅಧ್ಯಾಪನ, ವಿದ್ಯಾರ್ಥಿ ಪ್ರೇಮ-ಎರಡರಿಯದ ನಿಷ್ಕಳಂಕ ಪ್ರೇಮ. ಇಂತಹ ಗುಣಾಗ್ರಣಿ ಪಂಡಿತ ಶಿರೋಮಣಿಯ ವಿದ್ಯಾರ್ಥಿಗಳಾಗಿ ಕಲಿತವರೆಲ್ಲ ಪುಣ್ಯವಂತರು.

ನಾನು ಇಂದು ಕನ್ನಡದಲ್ಲಿ ಅಸ್ಖಲಿತವಾಗಿ ಹತ್ತು ಮಾತುಗಳನ್ನು ಆಡುತ್ತಿದ್ದರೆ, ಒಪ್ಪವಾಗಿ ಕೆಲವು ಪಂಕ್ತಿಗಳನ್ನು ಬರೆಯುತ್ತಿದ್ದರೆ ಅದಕ್ಕೆ ಕಾರಣ ನಾಲ್ಕೂವರೆ ದಶಕಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಮತ್ತು ಎಂ.ಎ. ವ್ಯಾಸಂಗ ಮಾಡುತ್ತಿದ್ದಾಗ ಗುರುಗಳಾಗಿ ದೊರೆತ ಪ್ರೊ. ದೊಡ್ಡಬೆಲೆ ನರಸಿಂಹಾಚಾರ್‌ ಮತ್ತು ಪ್ರೊ. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರಂತಹ ಪರಿಣಿತ ಪ್ರಾಧ್ಯಾಪಕರುಗಳ ಪಾಠ ಪ್ರವಚನಗಳ ಪ್ರಭಾವ ಎನ್ನುವುದು ನನ್ನ ಪ್ರಾಮಾಣಿಕವಾದ ಅನಿಸಿಕೆ. ಕನ್ನಡ ಭಾಷಾ ಸಾಹಿತ್ಯದಲ್ಲಿ ಎಂ.ಎ., ಪದವಿಯ ನಂತರ ನಾನು ವಿಶ್ವವಿದ್ಯಾನಿಲಯದಲ್ಲಿ ವೃತ್ತಿ ಜೀವನವನ್ನು ನಡೆಸಲಿಲ್ಲ. ಆದರೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ವಿವಿಧ ಹುದ್ದೆಗಳಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸಲು ಶ್ರೀಗುರುಗಳ ಕೃಪೆ ಶ್ರೀರಕ್ಷೆಯಾಯಿತು. ನನ್ನ ಕೆಲಸಕ್ಕೆ ಹದ-ಅಚ್ಚುಕಟ್ಟನ್ನು ಕೊಟ್ಟಿತು. ಇದು ನನ್ನ ಪುಣ್ಯ.