ನಾನು ಡಿ.ಎಲ್‌.ಎನ್‌. ಅವರನ್ನು ಭೇಟಿ ಮಾಡಿದ್ದು ೧೯೬೬ ನೇ ಜೂನ್‌ ೧೪ ಅಥವಾ ೧೫ ರಂದು. ಬೆಳಿಗ್ಗೆ ಸುಮಾರು ೯ ರ ಸಮಯ. ಪ್ರಭಳನ್ನು ನೋಡಲು ಹೋದಾಗ. ನನ್ನ ಅಕ್ಕನ ಮಗಳ ಮದುವೆಗೆ ನಾವೆಲ್ಲಾ ಸೇರಿದ್ದು, ಮದುವೆ ಮುಗಿದಿತ್ತು. ಬೆಳಿಗ್ಗೆ ನಮ್ಮ ರಾಮ ಮಾಮ (ಸೋದರಮಾವ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌) ಅವರು ನನ್ನನ್ನು ಕರೆದು “ಬಾ ಇಲ್ಲೇ ಹೋಗಿ ಬರೋಣ” ಎಂದು ಕರೆದರು. ಎಲ್ಲಿಗೆ ಎಂದು ಕೇಳುವ ಧೈರ್ಯವಿಲ್ಲ. ರಮಾ ವಿಲಾಸ ರಸ್ತೆಯಿಂದ, ಮಹಾರಾಜ ಕಾಲೇಜು ಮಾರ್ಗವಾಗಿ, ಕೋರ್ಟ್‌ ಹಿಂಭಾಗದಲ್ಲಿರುವ, ಡಿ.ಎಲ್‌.ಎನ್‌. ಅವರ ಮನೆಗೆ ಕಾಲು ನಡಿಗೆಯಲ್ಲೇ ಬಂದೆವು. ಅವರು ರಾಮ ಮಾಮ ಅವರನ್ನು ತುಂಬಾ ಸಂತೋಷದಿಂದ ಬರಮಾಡಿಕೊಂಡರು. ಇಬ್ಬರಿಗೂ ಒಬ್ಬರನ್ನೊಬ್ಬರು ನೋಡಿದ ಸಂತೋಷ, ಮುಖದಲ್ಲಿ ಚೆನ್ನಾಗಿ ಗೊತ್ತಾಗಿತ್ತು. ಆಗ ತಾನೇ ಹೃದಯಾಘಾತದಿಂದ ಚೇತರಿಸಿಕೊಂಡಿದ್ದ ಡಿ.ಎಲ್‌.ಎನ್‌. ಅವರನ್ನು ವಿಚಾರಿಸಿಕೊಂಡು ನನ್ನನ್ನು ಪರಿಚಯ ಮಾಡಿಕೊಟ್ಟರು. ಅವರುಗಳು ಮಾತಾಡುತ್ತಿದ್ದ ರೀತಿಯಲ್ಲಿ, ನಾವು ಅನಿರೀಕ್ಷಿತವಾಗಿಯೇ ಬಂದಿದ್ದೇವೆ ಎನ್ನಿಸಿತು. ಇನ್ನೂ ೯ ಘಂಟೆ, ಸ್ವಲ್ಪ ಬೇಗವೇ ಇರಬಹುದು. ಬೇಕೆಂದೇ ರಾಮ ಮಾಮ ಹೀಗೆ ನನ್ನನ್ನು ಕರೆದುಕೊಂಡು ಬಂದಿದ್ದಾರೆ ಅನ್ನಿಸಿತು. ಹುಡುಗಿ ನೋಡಿ, ಕಾಫಿ ಕುಡಿದು ಎಲ್ಲಾ ಆಯಿತು. ಪಾಪ! ಪ್ರಭಳಿಗೆ ಸ್ವಲ್ಪ ತಯಾರಿ ಮಾಡಿಕೊಳ್ಳಲೂ ಟೈಂ ಇದ್ದಿರಲಾರದು! ಮಧ್ಯಾಹ್ನ ನಮ್ಮ ತಾಯಿ, ಅಣ್ಣ-ಅತ್ತಿಗೆ, ಅಕ್ಕ ಅವರುಗಳೂ ಹುಡುಗಿ ನೋಡಿ ಬಂದಾಯಿತು. ಮದುವೆಯೂ ಆಯಿತು.

ಹಿಂದೊಮ್ಮೆ ನಾನು ಬೆಂಗಳೂರಿನ ನ್ಯಾಷನಲ್‌ಕಾಲೇಜಿನಲ್ಲಿ ಓದುತ್ತಿದ್ದಾಗ, ರೀಡಿಂಗ್‌ ರೂಮಿನಲ್ಲಿ ಯಾರೋ ‘‘ಸಿದ್ಧರಾಮ ಚರಿತೆ’’ಯನ್ನು ಬಿಟ್ಟು ಹೋಗಿದ್ದರು. ಪಠ್ಯಪುಸ್ತಕವಾಗಿದ್ದಿರಬಹುದು. ವಾರಸುದಾರರಿಗೆ ಪುಸ್ತಕ ಹಿಂತಿರುಗಿಸುವವರೆಗೂ, ೨-೩ ದಿನ ನನ್ನಲ್ಲೇ ಇದ್ದ ಪುಸ್ತಕವನ್ನು ತಿಳಿದ ಮಟ್ಟಿಗೆ ಓದಿ, ಸಂಪಾದಕರ ಹೆಸರಿನಿಂದ (ಡಿ.ಎಲ್‌.ಎನ್‌.) ವಿದ್ವತ್ತಿನಿಂದ ಪ್ರಭಾವಿತನಾಗಿದ್ದೆ.

ಆಗಸ್ಟ್‌ನಲ್ಲಿ ನಡೆದ ಲಗ್ನಪತ್ರಿಕೆ, ರಾತ್ರಿಯ ಭೋಜನಕ್ಕೆ ಬಂದಿದ್ದ ಮೂರ್ತಿರಾಯರು, ವೆಂಕಟರಾಮಪ್ಪ, ಎಸ್‌. ವಿ. ರಂಗಣ್ಣ, ಶಂಕರ ನಾರಾಯಣರಾವ್‌ ಅವರುಗಳನ್ನೆಲ್ಲಾ ನೋಡಿ ಕಣ್ಣು ಕಣ್ಣು ಬಿಡುತ್ತಾ ಇಂಥ ಪ್ರಸಿದ್ಧರನ್ನೆಲ್ಲಾ ಕಂಡು, ಅವರಿಗೆಲ್ಲಾ ಡಿ.ಎಲ್‌.ಎನ್‌. ಅವರ ಮೇಲಿನ ಅಭಿಮಾನ, ಸಲಿಗೆ, ಸ್ನೇಹ ನೋಡಿದ್ದೆ.

ಒಂದು ದಿನ ನಮ್ಮ ಮಾವನವರು ನಮ್ಮ ಆಫೀಸಿಗೆ – ಕೇಂದ್ರ ರೇಷ್ಮೆ ಸಂಶೋಧನಾಲಯಕ್ಕೆ ನಮ್ಮ ಚಟುವಟಿಕೆಗಳನ್ನು ನೋಡಲು ಬಯಸಿ ಬಂದರು. ನಾನು ಅವರಿಗೆ ನಮ್ಮ ಪ್ರಯೋಗಾಲಯಗಳನ್ನು, ವಿವಿಧ ರೀತಿಯ ರೇಷ್ಮೆ ಹುಳುಗಳನ್ನೂ, ಎಲ್ಲಾ ತೋರಿಸಿ ಕಡೆಗೆ ಸಂಗ್ರಹಾಲಯಕ್ಕೆ ಬಂದೆವು. ಅಲ್ಲಿ ನಮ್ಮ ದೇಶದ ಹೆಗ್ಗಳಿಕೆ, ನಾಲ್ಕು ರೇಷ್ಮೆ ಜಾತಿಯ ತವರು ಎಂದು ಹಿಪ್ಪುನೇರಳೆ, ಟಿಸ್ಸಾರ್‌, ಮೂಗ, ಈರಿ ಇವುಗಳನ್ನು ಪರಿಚಯಿಸುತ್ತಿದ್ದೆ. ಈರಿ ಹುಳು, ಹರಳಿನ ಸೊಪ್ಪು ಎಂದಾಕ್ಷಣ ಡಿ.ಎಲ್‌.ಎನ್‌. ಅವರ ಮುಖದಲ್ಲಿ ಎಂಥಾ ಸಂತೋಷ! ಈರಿ, ಈರಂಡಿ, ಏರಂಡಿ ಎಂದು ಹೇಳಿ, ಹರಳಿನ ಗಿಡದ ಸಂಸ್ಕೃತ ಹೆಸರು, ಏರಂಡಿ. ನಿರಸ್ತ ಪಾದಪೇ ದೇಶೇ ಏರಂಡೋಪಿದ್ರುಮಾಯತೆ ಎಂಬ ನೀತಿ ವಾಕ್ಯವನ್ನು (ಮರಗಳಿಲ್ಲದ ದೇಶದಲ್ಲಿ ಹರಳು ಗಿಡವೇ ಮರ!) ನಿರರ್ಗಳವಾಗಿ ವಿವರಿಸಿದರು. ಸುತ್ತಲಿದ್ದ ನಮ್ಮ ಸಹೋದ್ಯೋಗಿಗಳೆಲ್ಲಾ ಬೆರಗು! ಆ ಕ್ಷಣದಲ್ಲಿ ಅವರಿಗಾದ ಸಂತೋಷ, ಮುಖದಲ್ಲಿನ ಆನಂದ ಈಗಲೂ ನೆನಪಿದೆ.

ಇನ್ನೊಂದು ಸಲ, ಅವರ ರೂಮಿನಲ್ಲಿ ಕುಳಿತು ರೇಷ್ಮೆಯ ಇತಿಹಾಸದ ವಿಚಾರ ಮಾತಾಡುತ್ತಿದ್ದೆವು. ಸಾಮಾನ್ಯವಾಗಿ, ಚೀನ ರೇಷ್ಮೆಯ ತವರೆಂದು ಪ್ರಸಿದ್ಧವಾದರೂ, ಕೆಲವು ಸಂಶೋಧಕರು ಭಾರತ ಗಿಲ್ಲಿಟ್‌ ಭಾಗದಲ್ಲಿ ಸ್ವತಂತ್ರವಾಗಿ ರೇಷ್ಮೆಯ ಉಗಮ ಸ್ಥಾನವೆಂದು ಭಾವಿಸುತ್ತಾರೆ. ಜೊತೆಗೆ ನಮ್ಮ ಇತಿಹಾಸ ಪುರಾಣಗಳಲ್ಲಿ ರೇಷ್ಮೆಯ ಬಗ್ಗೆ ಬರುವ ಪದಗಳ ನಿಷ್ಪತ್ತಿಯ ಸಹಾಯವನ್ನೂ ಪಡೆಯುತ್ತಾರೆ. ಆಗ ಡಿ.ಎಲ್‌.ಎನ್‌. ಅವರ ಪುಸ್ತಕದ ಶೆಲ್ಪನಲ್ಲಿದ್ದ ಮೋನಿಯರ್‌ ವಿಲಿಯಮ್ಸ್‌ನ ನಿಘಂಟನ್ನು, ಮತ್ತೊಂದು ಪುಸ್ತಕವನ್ನೂ ತೆಗೆದು ಪುಂಡರೀಕ, ಕೋಶಜ ಮುಂತಾದ ಪದಗಳನ್ನು ಪರಿಚಯಿಸಿ ಅವುಗಳ ವ್ಯುತ್ಪತ್ತಿ ಬಗ್ಗೆ ಹೇಳಿದರು. ಪುಂಡರೀಕ, ರೇಷ್ಮೆ ಪಾಲಿಸುವವ ಎಂದಾಗಿ, ಬಹುಶಃ ಅದು ಟಿಸ್ಸಾರ್‌ ರೇಷ್ಮೆಯ ಪಾಲಕನನ್ನು ಹೇಳುತ್ತದೆ. ಇಂದಿಗೂ ಹೆಚ್ಚು ಕಡಿಮೆ ಅದೇ ಸ್ಥಿತಿಯಲ್ಲಿ ಮಧ್ಯಪ್ರದೇಶ, ಬಿಹಾರ, ಒರಿಸ್ಸಾಗಳಲ್ಲಿನ ಆದಿವಾಸಿಗಳು ರೇಷ್ಮೆ ಪಾಲಿಸುತ್ತಾರೆ. ತಮಗೆ ಏನಾದರೂ ಹುಡುಕಬೇಕಾದರೆ, ಖಚಿತವಾಗಿ ಅದೇ ಶೆಲ್ಪ್‌ನ ಮುಂದೆ ನಿಂತು, ತಡಕಾಡದೆ ತಮಗೆ ಬೇಕಾದ ಪುಸ್ತಕವನ್ನು ಹೊರಗೆಳೆದು, ಬೇಕಾದ ಪುಟಗಳನ್ನು ಹುಡುಕಾಡದೆ ತೆರೆಯುತ್ತಿದ್ದ ವೈಖರಿ ನೋಡುವುದೇ ನನಗೆ ಖುಷಿ.

ಒಂದು ದಿನ ಡಿ.ಎಲ್‌.ಎನ್‌. ಅವರು ನನಗೋಸ್ಕರ ಓರಿಯಂಟಲ್‌ ಲೈಬ್ರರಿಯಿಂದ ಒಂದು ಪುಸ್ತಕವನ್ನು ತಂದಿದ್ದರು. ಸಾಯಂಕಾಲ ನಾನು ಹೋದಾಗ ಆ ಪುಸ್ತಕವನ್ನು ನನ್ನ ಕೈಗೆ ಕೊಟ್ಟು “ಇದನ್ನು ನೋಡಿದ್ದೀರಾ, ಸ್ವಾರಸ್ಯವಾಗಿದೆ, ನೋಡಿ” ಎಂದರು. ಪುಸ್ತಕ, ಲೋಕೋಪಕಾರ. ಮದ್ರಾಸ್‌ ಸರ್ಕಾರದ ಓರಿಯಂಟಲ್‌ ಸೀರಿಸ್‌ನಲ್ಲಿ, ಶ್ರೀ ಎಚ್‌. ಶೇಷಯ್ಯಂಗಾರ್‌ ಅವರಿಂದ ಸಂಪಾದಿತ. ಸುಮಾರು ೧೦೨೫ನೆಯ ಇಸವಿಯಲ್ಲಿ ಚಾವುಂಡರಾಯನಿಂದ ವಿರಚಿತವಾದುದು. ಅದರಲ್ಲಿದ್ದ ೧೨ ಅಧ್ಯಾಯಗಳಲ್ಲಿ (ಅಧಿಕಾರಿಗಳು), ಆರನೇ ಅಧ್ಯಾಯ ‘‘ವೃಕ್ಷಾಯುರ್ವೇದ’’, ಹೆಸರೇ ಹೇಳುವಂತೆ ಗಿಡ ಮರಗಳಿಗೆ ಆಯುರ್ವೇದ! ಅದರಲ್ಲಿದ್ದ ಬೀಜೋಪಚಾರ, ಗಿಡಗಳನ್ನು ಕಸಿ ಮಾಡುವಿಕೆ, ಕೀಟ ನಿಯಂತ್ರಣ, ರೋಗ ವಿಷಯಗಳು ಎಲ್ಲಾ ನನ್ನನ್ನು ದಿಙ್ಮೂಢನನ್ನಾಗಿಸಿತು. ಗಿಡಗಳ ಫಸಲನ್ನು ಹೆಚ್ಚಿಸುವುದು, ಯಾವಾಗ ನೀರನ್ನು ಕೊಡಬೇಕು, ಕೊಡಬಾರದು ಎಲ್ಲಾ ವಿಷದವಾಗಿದೆ. ಇಷ್ಟು ಹಿಂದೆಯೇ ಇವನ್ನೆಲ್ಲಾ ಹೇಗೆ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ, ಗುರುತಿಸಿದ್ದಾರೆ ಎನ್ನುವುದು ಆಶ್ಚರ್ಯ! ಇಂಗು, ಬಜೆ, ವಿಳಂಗ, ಮೆಣಸು, ಗೋಮೂತ್ರಗಳನ್ನು ಕೀಟನಾಶಕವಾಗಿ ಉಪಯೋಗಿಸುವುದನ್ನು ವಿವರಿಸಿದೆ. ಇವೆಲ್ಲಾ ಇಂದಿನ ಸಾವಯವ ಕೃಷಿಯ ಆಧಾರ. ಆದರೆ ಕೆಲವೊಂದು ತಮಾಷೆಯಾಗಿದೆ. (ಉತ್ತಮರಾದ ಸ್ತ್ರೀಯರ್‌ ತಮ್ಮ ಎಡಗಾಲಿಂದೆ ಅಲತೆಗೆ ಸಹಿತಂ ಅಶೋಕ ಮರನೊದೆಯುತ್ತಂಬರಲ್‌, ಅಮರಂ ತಳಿತು ಚೆನ್ನಾಗಿ ಫಲಗಳನಪ್ಪುವು). ಹಾಗೆಯೇ ‘‘ಉತ್ತಮರಾದ ಕನ್ನಿಕೆಯ ಕಡೆಗಣ್ಣ ನೋಟದಿಂದ ನಾಗಕೇಸರದ ಮರ ಚೆನ್ನಾಗಿ ಬೆಳೆಯುವುದು! ಕೆಲವೊಂದು ಅಸಂಭವನೀಯ. “ಕುಂಬಳದ ಬೀಜ ಮಂಬಿತ್ತಲ್‌ ಅದರಲ್ಲಿ ಬದನಕಾಯ್ಗಲಪ್ಪುವು”. ಲೋಕೋಪಕಾರವನ್ನು ಓದಿ, ಟಿಪ್ಪಣಿ ಮಾಡಿಕೊಂಡು ಕೃತಜ್ಞತೆಯಿಂದ ಹಿಂದಿರುಗಿಸಿದ್ದಾಗ ಸುಮಾರು ಅದರ ಮೇಲೆ ನಾವು ಚರ್ಚಿಸಿದ್ದು ನನಗೆ ಜ್ಞಾಪಕವಿದೆ. ಇತ್ತೀಚೆಗೆ ನಮ್ಮ ವಿಜ್ಞಾನ ಕೂಟದಲ್ಲಿ ‘‘ಲೋಕೋಪಕಾರಂ’ ವಿಚಾರವಾಗಿ ಮಾತಾಡಬೇಕಾಗಿ ಬಂದಾಗ, ಪುನಃ ಅದನ್ನು ಹುಡುಕಿಕೊಂಡು ಹೋಗಬೇಕಾಯಿತು. ಆಗ ಅದು ಓರಿಯಂಟಲ್‌ಲೈಬ್ರರಿಯಲ್ಲಿಲ್ಲ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿದೆ.

ಮೈಸೂರಿನಲ್ಲಿ ನಾನು ಚಾಮುಂಡಿಪುರದ ಬಸ್‌ ನಿಲ್ದಾಣದ ಸ್ವಲ್ಪ ಹತ್ತಿರದಲ್ಲಿ ಮನೆ ಮಾಡಿದ್ದೆ. ನಮ್ಮ ತಾಯಿಯೂ ಆಗ ನಮ್ಮೊಡನಿದ್ದರು. ಅವರನ್ನು ವಿಚಾರಿಸಲು, ಮೊಮ್ಮಗನನ್ನು ನೋಡಲು ನಮ್ಮ ಮಾವನವರು, ಅತ್ತೆಯವರೊಂದಿಗೆ ಬರುತ್ತಿದ್ದರು. ಒಮ್ಮೊಮ್ಮೆ ಡಾ. ಪಾರ್ಥಸಾರಥಿ (ನಮ್ಮ ಅತ್ತೆಯ ಅಣ್ಣ) ಅವರೊಂದಿಗೆ ಬರುವರು. ಚಾಮುಂಡಿಪುರಂ ಬಸ್‌ಸ್ಟ್ಯಾಂಡಿನಿಂದ, ಆ ಸ್ವಲ್ಪ ಇಳಿಜಾರಾದ ರಸ್ತೆಯಲ್ಲಿ ಅವರು ನಡೆದು ಬರುತ್ತಿದ್ದುದನ್ನು ನೋಡುವುದೇ ಸರಿ. ಪೂರ್ತಿ ತೋಳಿನ ಷರಟು, ಕಚ್ಚೆಪಂಚೆ, ಹೆಗಲ ಮೇಲೊಂದು ಉತ್ತರೀಯ, ಹಣೆಯಲ್ಲಿ ಒಂದು ಕಡ್ಡಿ ಕೆಂಪು ನಾಮ, ಕಾಲಲ್ಲಿ ಚಪ್ಪಲಿ, ದಾಪುಗಾಲು ಹಾಕಿ ಬರುಕಿದ್ದುದನ್ನು ಜ್ಞಾಪಿಸಿಕೊಂಡರೆ, ಎ. ಎನ್‌. ಮೂರ್ತಿ ರಾಯರು, ಡಿ.ಎಲ್‌.ಎನ್‌. ಅವರ ಬಗ್ಗೆ ಬರೆದಿರುವ “ಅವರು ತಮ್ಮ ನೆಲ ನಡುಗಿಸುವ ಹೆಜ್ಜೆ. ಗುಂಡಾದ ಹೆಗಲು. ಧಾಳಿ ಮಾಡುವ ಹಾಗೆ ಬಗ್ಗಿಸಿದ ತಲೆ, ನಿರ್ಧರಿಸಿದಂತೆ ಕೈ ಬೀಸು” (“He walks with his old earth-shaking tread, shoulders rounded, his head bent aggressively forward and his old purposeful suring’-ಚಿತ್ರಗಳು, ಪತ್ರಗಳು) ಸರಿಯಾದ ವಿವರಣೆ ಎನಿಸುತ್ತದೆ. ಅವರ scholarly stop ನಿಜವಾಗಿಯೂ ಅನ್ವರ್ಥ. ಅಯ್ಯಂಗಾರ್‌ ರೀತಿಯ ಕಚ್ಚೆ ಸೀರೆ ಉಟ್ಟ ಅತ್ತೆಯವರು ಇವರ ನಡಿಗೆಗೆ ಹೊಂದುಕೊಳ್ಳುವುದಕ್ಕೆ ಪಾಪ! ಓಡಿ ಓಡಿ ಬರುತ್ತಿದ್ದರು.

೧೯೬೮ರ ಫೆಬ್ರವರಿ ಕೊನೆಯಲ್ಲಿ ಅವರ ಮೊಮ್ಮಗ ಹುಟ್ಟಿದಾಗ ಅವರ ಸಂತೋಷ, ಸಡಗರ ಹೇಳತೀರದು. ಬೆಳಿಗ್ಗೆ ಪ್ರಭ ಆಸ್ಪತ್ರೆಗೆ ದಾಖಲಾಗಿದಾಗಿನಿಂದ ಮಧ್ಯಾಹ್ನ ಪ್ರಸವವಾಗುವರೆಗೂ ಅವರು ಯೋಚನೆಯಲ್ಲಿದ್ದರು. ಊಟ ತಿಂಡಿಯ ಮೇಲೆ ಗಮನವಿರಲಿಲ್ಲ. ಸಾಯಂಕಾಲ ಮಗುವನ್ನು ನೋಡಲು, ಕೃಷ್ಣಮೂರ್ತಿಪುರದ ನರ್ಸಿಂಗ್‌ ಹೋಂಗೆ ಹೋಗಿ ಮಗುವಿಗೆಲ್ಲ ಜೇನುತುಪ್ಪ ತಿನ್ನಿಸಿದಾಗ, ಆಸ್ಪತ್ರೆಯ ಸಿಬ್ಬಂದಿಗೆಲ್ಲಾ ಕೊಬ್ಬರಿ ಸಕ್ಕರೆ ಹಂಚಿದಾಗ ಅವರ ಸಡಗರ ಹೇಳತೀರದು. ನಮ್ಮ ತಂದೆಯ ಹೆಸರೂ ನರಸಿಂಹಾಚಾರ್‌, ಅವರ ಹೆಸರೂ ಅದೇ! ಹೀಗಾಗಿ ಮಗುವಿಗೆ ನರಸಿಂಹ ಪದದ ಪರ್ಯಾಯ, ಜಯಸಿಂಹ ಎಂದು ಹೆಸರು ಇಟ್ಟಾಗ ಹಿಗ್ಗಿದರು. ಮಗು ಒಂದು ಸ್ವಲ್ಪ ಅತ್ತರೂ “‘ಪಾಪು ಅಳ್ತಾನೆ, ನೋಡ್ರೇ!” ಎಂದು ಕೂಗುತ್ತಾ ರೂಮಿನಿಂದ ಬಂದೇ ಬಿಡುತ್ತಿದ್ದರು.

ಹಾಗೆಯೇ ನಾವು ಮಗುವನ್ನು ಕರೆದುಕೊಂಡು ಶನಿವಾರ/ಭಾನುವಾರ ಅವರ ಮನೆಗೆ ಹೋದಾಗ, ಅವರು ಮೊಮ್ಮಗನಿಗಾಗಿ ಕಾಯುತ್ತಾ ಗೇಟಿನ ಬಳಿಯೇ ನಿಂತಿರುತ್ತಿದ್ದರು. ಅಲ್ಲಿಯೇ ಜಯಸಿಂಹನನ್ನು ಎತ್ತಿಕೊಂಡು, ಚಿಮ್ಮಿ, ಚಿಮ್ಮಣಿ ಎಂದು ಮುದ್ದಾಡುತ್ತಾ ಅವನನ್ನು ಅಲ್ಲಿಯೇ ಗೇಟಿನ ಕಂಬದ ಮೇಲೆ ನಿಲ್ಲಿಕೊಂಡು ಆಡಿಸುತ್ತಿದ್ದರು. ಜಯಸಿಂಹ ಚೆನ್ನಾಗಿ ಬೆಳೆದಿದ್ದ. ಸ್ವಲ್ಪ ತೂಕವಾಗಿಯೂ ಇದ್ದ. ತಾತ ಎತ್ತಿಕೊಂಡು ಮಂಚದ ಮೇಲೆ ಅವನನ್ನು ಹೊಟ್ಟೆಯ ಮೇಲೆ ನಿಲ್ಲಿಸಿಕೊಂಡರೆ, ಮನೆಯವರಿಗೆ ಸ್ವಲ್ಪ ಆತಂಕ, ಬೇಡ ಎಂದು ಹೇಳಲು ಹೆದರಿಕೆ. ಡಾ ಪಾರ್ಥಸಾರಥಿಯವರು ಒಮ್ಮೊಮ್ಮೆ ಹುಷಾರು ಎನ್ನುತ್ತಿದ್ದರು. ನೆಲದಿಂದ ಬಗ್ಗಿ ಎತ್ತಿಕೊಳ್ಳಬೇಡಿ ಎನ್ನುತ್ತಿದ್ದರು. ಮನೆಯವರು, ಡಾ. ಪಾರ್ಥಸಾರಥಿಯವರ ಮೂಲಕ ಹೇಳಿಸುತ್ತಿದ್ದರು.

ಈಗ ೨೧-೧೫ ವರ್ಷದ ಹಿಂದೆ, ನಮ್ಮ ಕೇಂದ್ರ ರೇಷ್ಮೆ ಮಂಡಳಿಯ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಸಮಾರಂಭ ಏರ್ಪಟ್ಟಿತ್ತು. ನಾಡಿನ ಹೆಸರಾದ ಕವಿಗಳೊಬ್ಬರು ಮುಖ್ಯ ಅತಿಥಿ. ಸಮಿತಿಯ ಪದಾಧಿಕಾರಿಗಳೊಬ್ಬರು ಅತಿಥಿಗಳಿಗೆ, ನನ್ನನ್ನು ಡಿ.ಎಲ್‌.ಎನ್‌. ಅವರ ಅಳಿಯ ಎಂದು ಪರಿಚಯಿಸಿದರು. ಆಗ ಕವಿಗಳು, ಪ್ರೀತಿ, ಗೌರವದಿಂದ ಮಾತಾಡಿಸಿ ತಮ್ಮ ಗುರುಗಳನ್ನು ನೆನಸಿಕೊಂಡರು. ತಮ್ಮ ಭಾಷಣದಲ್ಲಿ ಡಿ.ಎಲ್‌.ಎನ್‌. ಅವರನ್ನು ನೆನಸಿಕೊಂಡು ತಮಗೆ ಪರೀಕ್ಷೆಗೆ ಹಣ ಕಟ್ಟಬೇಕಾದ ಸಮಯದಲ್ಲಿ ಹಣದ ಕೊರತೆಯಾಗಿದ್ದು, ಗುರುಗಳು ಸಹಾಯ ಮಾಡಿದ್ದನ್ನು ನೆನಸಿಕೊಂಡು ಗದ್ಗದಿತರಾದರು. ಇಂತಹ ಕೆಲವು ನಿದರ್ಶನಗಳನ್ನು ನಮ್ಮ ಅತ್ತೆ, ಪ್ರಭ, ರಾಜಲಕ್ಷ್ಮಿ ಅವರಿಂದಲೂ ಕೇಳಿದ್ದೇನೆ. ಆದರೆ ಇವರಿಗೆ ತಿಳಿದಿರುವುದು ನೂರಲ್ಲಿ ಒಂದೋ, ಎರಡೋ, ಅದೂ ಸಹಾಯ ಪಡೆದವರು ಹೇಳಿದ್ದು. ಬಾಕಿ ಎಲ್ಲಾ ಗೋಪ್ಯ. ಡಿ.ಎಲ್‌.ಎನ್‌. ಅವರಾಗಿ ಏನೂ ಮನೆಯಲ್ಲಿ ಹೇಳಿಲ್ಲ. ಯಾರೂ ಕೇಳಲೂ ಕೂಡದು. ನನಗನ್ನಿಸುತ್ತದೆ. ಇದು ಅವರ ಗುರುಗಳಾದ ವೆಂಕಣ್ಣಯ್ಯ, ಎಆರ್‌ಕೃ ಅವರೆಲ್ಲರ ಸಂಪ್ರದಾಯವೇ ತಾನೇ.

೧೯೬೬ರಲ್ಲಿ ನನ್ನ ಮದುವೆಯಾದ ಮೇಲೆ ೧೯೭೦ರ ಕೊನೆಯವರೆಗೆ ನಾನು ಮೈಸೂರಿನಲ್ಲಿಯೇ ಇದ್ದೆ. ಮಾವನವರಿಗೆ ಕಾಗದ ಬರೆಯುವ ಸಂದರ್ಭ ಬರಲಿಲ್ಲ. ಕೆಲಸದ ಮೇಲೆ, ದೀರ್ಘ ಪ್ರವಾಸ ಹೋದರೂ ಕಾಗದ ಪ್ರಭಳಿಗೆ ಬರೆಯುತ್ತಿದ್ದದ್ದು ಸ್ವಾಭಾವಿಕ. ಮಾವನವರೇ ಮದುವೆಗೆ ಮುಂಚೆ “ಲಗ್ನದ ದಿನ. ಒಂದು ದಿನ ಮುಂದೆ ಹಾಕಬೇಕಾಗಿದೆ, ಜೋಯಿಸರ ಸೂಚನೆ ಮೇಲೆ” ಎಂದು ಒಂದು ಕಾಗದ ಬರೆದಿದ್ದರು. ಇನ್‌ಲ್ಯಾಂಡ್‌ ಲೆಟರ್‌. ಡಿಯರ್‌ ಶ್ರೀಸೀತಾರಾಂ ಎಂದೇ ಸಂಬೋಧಿಸಿದ್ದರು. ಆದರೆ ೧೯೭೦ರ ಕೊನೆಯಲ್ಲಿ ನಾನು ತಾತ್ಕಾಲಿಕ ವರ್ಗಾವಣೆ ಮೇಲೆ ಕೂನೂರಿಗೆ ಹೋಗಬೇಕಾಗಿ ಬಂತು. ಸಂಸಾರ ಮೈಸೂರಲ್ಲೇ ಇತ್ತು. ತಾಯಿಯ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಆಗ ಮಾವನವರಿಗೆ ಒಂದು ಕಾಗದ ಬರೆಯಲು ತೀರ್ಮಾನಿಸಿದೆ. ಆದರೆ ಹೇಗೆ ಸಂಬೋಧಿಸುವುದು? Dear Father-in-law ಎಂದೇ?, ಸರಿಯೆನಿಸಲಿಲ್ಲ. ಕನ್ನಡದಲ್ಲಾದರೆ, ತೀ. ಮಾವನವರಿಗೆ ಎನ್ನಬಹುದಾಗಿತ್ತೇನೋ! ಹೀಗಾಗಿ, ಯೋಚಿಸಿ ಕೊನೆಗೆ Dear Father ಎಂದೇ ಕಾಗದ ಬರೆದೆ. ಎರಡೇ ದಿನಗಳಲ್ಲಿ ಉತ್ತರ ಬರೆದರು. ‘‘ಪ್ರಭ ಡಾಕ್ಟರ ಹತ್ತಿರ ಹೋಗಿದ್ದಳು. ಡಾಕ್ಟರು ಅವಳು ಗರ್ಭಿಣಿಯಾಗಿದ್ದಾಳೆ ಎಂದರು’ ’ಇತ್ಯಾದಿ. ಅವರು ಬರೆದ She is in the family way ಪದ ಪ್ರಯೋಗ ನನಗೆ ತುಂಬಾ ಮೆಚ್ಚುಗೆಯಾಯಿತು. ಅದಕ್ಕಿಂತ ಹೆಚ್ಚಾಗಿ ಕಾಗದ ಶುರುವಾಗಿದ್ದು My dear son, ಎಂದು! ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ನನ್ನನ್ನು ಅದು ಭಾವಪರವಶವಾಗಿಸಿತು. ಇಂದಿಗೂ ಆ ಇನ್‌ಲ್ಯಾಂಡ್‌ ಲೆಟರ್‌ ನನ್ನಲ್ಲಿದೆ.

ಮನೆಯಲ್ಲಿ ವರಾಂಡದ ಇಕ್ಕೆಲಗಳಲ್ಲಿಯೂ ಒಂದೊಂದು ರೂಮು. ಬಲಗಡೆಯದರಲ್ಲಿ ಪುಸ್ತಕಗಳನ್ನು ಇಟ್ಟಿದ್ದು. ಸುತ್ತಲೂ ಶೆಲ್ಫ್‌ಗಳು., ಅದರ ತುಂಬಾ ಪುಸ್ತಕಗಳು. ಗೋಡೆಯ ಮೇಲೆ ಎತ್ತರದಲ್ಲಿ ಬಿಎಂಶ್ರೀ ಮತ್ತು ಎಆರ್‌ಕೃ ಅವರ ಫೋಟೋ, ಸುಮಾರು ೧೦ ಇಂಚು ಚದುರದಷ್ಟು, ನೀಲಿ ಕಟ್ಟಿನಲ್ಲಿ. ಇದಕ್ಕೆ ಸ್ವಲ್ಪ ಕಿರಿದಾದ ರಾಮಕೃಷ್ಣ ಪರಮಹಂಸ, ಶಾರದಾದೇವಿ ವರಾಂಡಾದ ಬಲಗಡೆ ರೂಮೇ ಮಾವನವರ ಸ್ಟಡಿ. ಒಂದು ಪಾರ್ಶ್ವಕ್ಕೆ ಕಿಟಕಿಯ ಹತ್ತಿರ ಮಂಚ. ಎರಡು ಗೋಡೆಗೂ ಸೇರಿದಂತೆ ಪುಸ್ತಕದ ಶೆಲ್ಫ್‌, ನಡುಮಟ್ಟದ್ದು. ಇದರಲ್ಲಿ ಪದೇ ಪದೇ ಬೇಕಾಗುವ ಆಕರ ಗ್ರಂಥಗಳು. ಹಾಲಿ ಬರವಣಿಗೆಯ ಕಾಗದ, ಟಿಪ್ಪಣಿಗಳು, ಪ್ರೂಫ್‌ ನೋಡಬೇಕಾದ ಫಾರಂಗಳು. ಬಾಗಿಲ ಮೇಲೆ ಗೋಡೆಯಲ್ಲಿ, ಪಿ. ಆರ್‌. ತಿಪ್ಪೇಸ್ವಾಮಿ ರಚಿಸಿದ್ದ ಜಲವರ್ಣ ಚಿತ್ರ, ಬೀದರ್‌ನ ಸ್ಮಾರಕ, ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದಾಗ ಕೊಟ್ಟಿದ್ದು. ಕೊಠಡಿಯ ಮಧ್ಯೆ ಈಸೀಚೇರ್‌. ಇವೆರಡು ಕೊಠಡಿಗಳೆ ಅವರ ಕಾರ್ಯಕ್ಷೇತ್ರ. ಸ್ನಾನ, ಊಟ, ತಿಂಡಿ, ವಗೈರೆ ಬಿಟ್ಟರೆ ಎಲ್ಲಾ ಕಾಲ ಇಲ್ಲೇ. ಮನೆಯವರೂ ಜಾಸ್ತಿ ಅನವಶ್ಯಕವಾಗಿ ರೂಮಿಗೆ ಬರುತ್ತಿರಲಿಲ್ಲ. ಕೊನೆಯ ಮಗಳು ಮಾಧವಿ, ಆಗ ೧೦-೧೧ ವರ್ಷ. ಅವಳು ಮಾತ್ರ ಯಾವಾಗಲಾದರೂ ರೂಮಿಗೆ ಓಡಿಕೊಂಡು ಬಂದು ಕೈಯಲ್ಲಿ ಸ್ಲೇಟಿನಲ್ಲಿ ಬರೆದಿದ್ದ ಹುಲಿ, ಕುರಿ, ಆಟಕ್ಕೆ ಬಲವಂತ ಮಾಡಿದಾಗ, ಮಾವನವರು ನಗುತ್ತಾ ಒಂದು ಆಟವನ್ನು ಆಡುವರು. ಹುಸಿ ಜಗಳ.

ಡಿ.ಎಲ್‌.ಎನ್‌. ಅವರು ದಿನಾ ಸಾಯಂಕಾಲ ಮಂಚದ ಮೇಲೆ ಕುಳಿತು ಒರಗಿಕೊಂಡು, ಸ್ತೋತ್ರ ಓದಿಕೊಳ್ಳುತ್ತಿದ್ದರು. ರಾಮಕೃಷ್ಣಾಶ್ರಮದ ‘‘ಸ್ತವಕುಸುಮಾಂಜಲಿ’’ ಪುಸ್ತಕದಿಂದ. ಆ ನೀಲಿ ಕ್ಯಾಲಿಕೋ ರಟ್ಟಿನ ಪುಸ್ತಕವನ್ನು ರಾಮಕೃಷ್ಣಾಶ್ರಮದ ಸ್ವಾಮಿಗಳೊಬ್ಬರು ಮಂಗಳೂರಿನಲ್ಲಿ ೧.೧.೧೯೬೨, ಹೊಸ ವರುಷದಲ್ಲಿ ಅವರಿಗೆ To, Sri D.L. Narasimhachar, with Best wishes ಎಂದು ಬರೆದುಕೊಟ್ಟಿದ್ದರು. ಶಂಕರಾಚಾರ್ಯರ ‘‘ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ’’ ಅವರ ಮೆಚ್ಚಿನ ಸ್ತೋತ್ರ. ಆ ಪುಸ್ತಕದಲ್ಲಿನ ಪುಟಗಳು ಇಂದಿಗೂ “ಡಿ.ಎಲ್‌.ಎನ್‌. ನನ್ನನ್ನು ಇಲ್ಲಿ ಹಿಡಿದುಕೊಳ್ಳುತ್ತಿದ್ದರು” ಎಂದು ಹೇಳುವ ಹಾಗೆ ಪುಟಗಳ ಇಕ್ಕೆಲಗಳಲ್ಲೂ ಗುರುತು ಇದೆ. ಸುಮಾರು ೧೯೭೯-೮೦ ರ ಸುಮಾರಿನಲ್ಲಿ ಒಂದು ಸಂಜೆ ಹೊಸದಾಗಿ ಕೊಂಡಿದ್ದ ಟೇಪ್‌ರಿಕಾರ್ಡ್‌ನಲ್ಲಿ, ಪಿ. ಬಿ. ಶ್ರೀನಿವಾಸ್‌ ಹೇಳಿದ್ದ ಒಂದು ಸ್ತೋತ್ರದ ಕ್ಯಾಸೆಟ್‌ನ್ನು ಹಾಕಿದ್ದೆವು. ಲಕ್ಷ್ಮೀನರಸಿಂಹ ಸ್ತೋತ್ರ ಆರಂಭವಾಯಿತು. ಹಿಂದಿನ ರೂಮಿನಲ್ಲಿ ಅತ್ತೆಯವರಿದ್ದರು. ಇದಕ್ಕಿದ್ದ ಹಾಗೆ ಪ್ರಭ ಓಡಿ ಬಂದು “ಕ್ಯಾಸೆಟ್‌ ನಿಲ್ಲಿಸಿ, ಆಫ್‌ಮಾಡಿ” ಎಂದಳು. ನಮ್ಮ ಮಾವನವರ ಮೆಚ್ಚಿನ ಸ್ತೋತ್ರವನ್ನು ಕೇಳಿ ಅತ್ತೆಗೆ ಮಾವನವರ ನೆನಪು ಮರುಕಳಿಸಿ, ದುಃಖ ತಡೆಯಲಾರದೆ ಜೋರಾಗಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ್ದರು.

ಅವರ ಮನೆದೇವರು ದೇವರಾಯನ ದುರ್ಗದ ಲಕ್ಷ್ಮೀನರಸಿಂಹ. ಅಲ್ಲಿ ರಥೋತ್ಸವ ವಾಗುವ ದಿನ ಮನೆಯಲ್ಲಿ ಪೂಜೆ, ಕೋಸಂಬರಿ, ಪಾನಕ ನೈವೇದ್ಯ, ಪಾಯಸದ ಅಡುಗೆ. ೧೯೭೦ ರಲ್ಲಿ ಒಂದು ಬಾರಿ ದೇವರಾಯನ ದುರ್ಗದಲ್ಲಿ ಕಲ್ಯಾಣೋತ್ಸವ ಮಾಡಿಸಲು ಮಾವನವರು ನಿರ್ಧರಿಸಿ, ಎಲ್ಲಾ ಎರಡು ಕಾರಿನಲ್ಲಿ ಹೊರಟೆವು. ಮಾವನವರು ಅಷ್ಟು ದೀರ್ಘ ರಸ್ತೆ ಪ್ರಯಾಣ ಮಾಡಿ ಸುಮಾರು ದಿನವಾಗಿತ್ತು. ಜೊತೆಗೆ ಡಾ. ಪಾರ್ಥಸಾರಥಿ ಇದ್ದಿದ್ದರಿಂದ ಧೈರ್ಯ. ಡಿ.ಎಲ್‌.ಎನ್‌. ಅವರ ಪತ್ನಿ, ಐದು ಜನ ಹೆಣ್ಣು ಮಕ್ಕಳು, ಡಾ. ಪಾರ್ಥಸಾರಥಿ, ಅವರ ಪತ್ನಿ ತಂಗಮ್ಮ, ನಾನು, ಮಗು ಜಯಸಿಂಹ. ಮಧ್ಯಾಹ್ನ ಹೊರಟು, ದಾರಿಯಲ್ಲಿ ತುಮಕೂರಿನಲ್ಲಿ ಅವರ ಆಪ್ತಮಿತ್ರರಾದ ಟಿ. ಪಿ. ಕೃಷ್ಣಾಚಾರ್‌ಅವರ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ಕಾಫಿ ಕುಡಿದು ಹೊರಟೆವು. ಡಿ.ಎಲ್‌.ಎನ್‌. ಮತ್ತು ಕೃಷ್ಣಚಾರ್‌ ಅವರ ಸಮಾಗಮ ಚೆನ್ನಾಗಿತ್ತು. ಹಿಂದಿನದೆಲ್ಲಾ ನೆನಸುತ್ತಾ, ಸ್ನೇಹಿತರ ವಿಚಾರವೆಲ್ಲ ವಿನಿಮಯವಾಯಿತು. ರಾತ್ರಿ ದೇವರಾಯನ ದುರ್ಗದಲ್ಲಿ ತಂಗಿದ್ದು ಮಾರನೆಯ ದಿನ ಉತ್ಸವ ನಡೆಯಿತು. ದೇವಸ್ಥಾನದ ಪ್ರಕಾರದ ಸುತ್ತ ವಿಗ್ರಹದ ಮೆರವಣಿಗೆಯಲ್ಲಿ, ಮಾವನವರು ದೇವರ ಮುಂದೆ “ಬೆಳ್ಳಿಕಡಿ” ಹಿಡಿದು, ಪಾರ್ಥಸಾರಥಿಯವರು ಚಾಮರ ಬೀಸುತ್ತಿದ್ದ ಕೆಲವು ಛಾಯಾಚಿತ್ರಗಳು ನನ್ನಲ್ಲಿವೆ. ಆಗ್ಫಾ ಪೆಟ್ಟಿಗೆ ಕ್ಯಾಮರಾದಲ್ಲಿ ತೆಗೆದಿದ್ದು.

ಆಗಲೇ ಹೇಳಿದ ಹಾಗೆ, ಲಕ್ಷ್ಮೀನರಸಿಂಹ ಅವರ ಆರಾಧ್ಯ ದೈವ. ಅತ್ಯಂತ ಸೋಜಿಗದ ಸಂಗತಿ ಎಂದರೆ, ಡಿ.ಎಲ್‌.ಎನ್‌. ನಿಧನ ಹೊಂದಿದ್ದು ನರಸಿಂಹ ಜಯಂತಿಯ ಹಿಂದಿನ ದಿನ! ಅವರ ಪತ್ನಿ ನಮ್ಮ ಅತ್ತೆ ಮುತ್ತಮ್ಮ ದೇವರ ಪಾದ ಸೇರಿದ್ದು ದೇವರರಾಯನ ದುರ್ಗದ ತೇರಿನ ದಿನ!! ಇಂದಿಗೂ ಅವರಿಬ್ಬರ ಪುಣ್ಯತಿಥಿಗಳು ಹಾಗೆಯೇ ಬರುತ್ತವೆ.