ನನ್ನ ತಂದೆಯವರಾದ ಶ್ರೀ ಡಿ. ಎಲ್. ನರಸಿಂಹಾಚಾರ್ಯರ ವಿಷಯವಾಗಿ ಕೆಲವು ಮಾತುಗಳಲ್ಲಿ ಬರೆಯುವ ಸುಯೋಗ ಸಿಕ್ಕಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ. ಅವರು ಮಿತಭಾಷಿ, ಸಹೃದಯರು ಹಾಗೂ ಶಾಂತಚಿತ್ತರು. ಈಗಿನ ಕಾಲದ ತಂದೆಯವರಂತೆ ಮಕ್ಕಳೊಡನೆ ಧಾರಾಳವಾಗಿ ಮಾತನಾಡುವುದು, ವಿಷಯಗಳನ್ನು ಚರ್ಚಿಸುವುದು, ಅವೆಲ್ಲವೂ ಆಗಿನ ಕಾಲದಲ್ಲಿ ನಮ್ಮ ಮನೆಯಲ್ಲಂತೂ ಇರಲಿಲ್ಲ. ಆದರೆ ಅವರು ಆಡಿದ ಕೆಲವೇ ಮಾತುಗಳು, ಅವರ ಜೊತೆಯಲ್ಲಿ ಕಳೆದ ಕೆಲವೇ ನಿಮಿಷಗಳು, ನನ್ನ ಹೃದಯದಲ್ಲಿ ಸವಿನೆನಪಾಗಿ ಉಳಿದಿವೆ.

ಅವರಿಗೆ ನಾವು ಐದು ಜನ ಹೆಣ್ಣುಮಕ್ಕಳು. ನಮ್ಮ ಐವರ ಮೇಲೆಯೂ ಅವರು ಹೃದಯದಲ್ಲಿ ಅಪಾರವಾದ ಪ್ರೀತಿ, ವಿಶ್ವಾಸಗಳನ್ನು ಇಟ್ಟುಕೊಂಡಿದ್ದರು. ಆದರೆ ಅವರು ಅದನ್ನು ಧಾರಾಳವಾಗಿ ವ್ಯಕ್ತಪಡಿಸುತ್ತಿರಲಿಲ್ಲ. ಅಪರೂಪವಾಗಿ ಯಾವುದಾದರೂ ಒಂದೇ ಒಂದು ಶಬ್ದದಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು. ತಮ್ಮ ಮಕ್ಕಳನ್ನು ಮಾತು ಮಾತಿಗೆ ತಾವೇ ಹೊಗಳುತ್ತಾ ಕುಳಿತುಕೊಳ್ಳುವುದು ಅವರಿಗೆ ಅಷ್ಟು ಇಷ್ಟವಿರಲಿಲ್ಲ. ಅವರು ಯಾವಾಗಲೂ ತಮ್ಮ ಓದಾಯಿತು, ತಾವಾಯಿತು ಎನ್ನುವಂತೆ ಇರುತ್ತಿದ್ದರು. ಯಾವಾಗಲಾದರೂ ಮನೆಯಲ್ಲಿ ಓಡಾಡಿಕೊಳ್ಳುವಾಗ ನಮ್ಮೆಲ್ಲರನ್ನು ಒಮ್ಮೆ ಗಮನಿಸಿ ಹೋಗುತ್ತಿದ್ದರು. ಅವರಿಗೆ ನಾವು ಜಗಳವಾಡಿಕೊಂಡರೆ ಇಷ್ಟವಾಗುತ್ತಿರಲಿಲ್ಲ. ಅಂತೆಯೇ ನಾವು ಯಾರನ್ನಾದರೂ ಆಡಿಕೊಂಡು ನಕ್ಕರೂ ಇಷ್ಟವಾಗುತ್ತಿರಲಿಲ್ಲ. ಹಾಗೆಲ್ಲಾ ಮಾಡಬಾರದೆಂದು ನಮಗೆ ತಿಳುವಳಿಕೆ ಹೇಳುತ್ತಿದ್ದರು.

ನಮ್ಮ ಅಜ್ಜಿ (ತಂದೆಯ ತಾಯಿ) ಅವರ ವಯಸ್ಸಿಗೆ ತಕ್ಕಂತೆ ಸ್ವಲ್ಪ ಮಡಿ, ಸ್ವಲ್ಪ ಕಟ್ಟುನಿಟ್ಟಾಗಿ ಇರುತ್ತಿದ್ದರು. ನಾನು ಚಿಕ್ಕವಳಿದ್ದಾಗ ಅವರಿಗೆ ಆಗಾಗ ಸ್ವಲ್ಪ ತ್ರಾಸ ಕೊಡುತ್ತಿದ್ದೆ. ಅವರು ತಮ್ಮ ಅಡಿಗೆ, ಪೂಜೆಯಾಗುವವರೆಗೆ ಯಾರನ್ನೂ ಅಡಿಗೆ ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಯಾರನ್ನೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ನಮಗೆ ಏನಾದರೂ ತಿನ್ನುವ ಚಪಲವಾದರೂ ಒಳಗೆ ಹೋಗುವಾಗ ಹಾಗಿಲ್ಲ. ಕೇಳುವ ಹಾಗಿಲ್ಲ. ಅದಕ್ಕೇ ನಾನು ಅವರಿಗೆ ಅಡಿಗೆ ಮನೆ ಬಾಗಿಲಿಗೆ ಅಡ್ಡ ಹಾಕಿ ನಿಂತು ಕೊ.ಬೆ.ಕ. (ಕೊಬ್ಬರಿ, ಬೆಲ್ಲ, ಕಡಲೇಕಾಯಿ) ಕೊಡಿ. ಇಲ್ಲದಿದ್ರೆ ಮುಟ್ಟಿಬಿಡುತ್ತೇನೆ ಎಂದು ಹೆದರಿಸಿ ತಿನ್ನುವುದಕ್ಕೆ ಗಿಟ್ಟಿಸಿಕೊಂಡೇ ಬರುತ್ತಿದ್ದೆ. ನಮ್ಮ ತಂದೆಯವರು ಮನೆಗೆ ಬಂದ ತಕ್ಷಣ, “ನೋಡೋ, ನಿನ್ನ ಮಗಳು ಹೀಗ್ಮಾಡ್ತಾಳೆ” ಎಂದು ನಮ್ಮಜ್ಜಿ ಹೇಳಿದಾಗ ಅವರು ನನ್ನ ಮೇಲೆ ಹುಸಿಮುನಿಸು ತೋರುತ್ತಿದ್ದರು. ಅದನ್ನು ನೆನಸಿಕೊಂಡಾಗ ಈಗಲೂ ನಗು ಬರುತ್ತದೆ.

ನಾವು ಒಮ್ಮೆ ಕೇರಂ ಬೋರ್ಡು ಬೇಕೆಂದು ಕೇಳಿದಾಗ ಅವರು ಮಾರನೆಯ ದಿನವೇ ತಂದರು. ಹೇಗೆಂದರೆ, ಆ ಬೋರ್ಡನ್ನು ಕೈಯಲ್ಲಿ ಹಿಡಿದು ಸಯ್ಯಾಜಿರಾವ್‌ ರೋಡಿನಿಂದ ಮನೆಯವರೆಗೆ ನಡೆದುಕೊಂಡು ಬಂದಿದ್ದರು. ನನಗೆ ಪಾಪ, ಯಾಕಾದರೂ ಕೇಳಿದೆನೋ, ಅನ್ನಿಸಿತ್ತು. ಅವರು ಯಾವಾಗಲೂ ನಡೆದುಕೊಂಡು ಹೋಗಿಯೇ ಎಲ್ಲಾ ಸಾಮಾನುಗಳನ್ನು ತರುತ್ತಿದ್ದರು. ಈಗ ಆ ಕೇರಂ ಬೋರ್ಡು ಹಳೆಯದಾಗಿ ಆಡಲು ಆಗದಂತೆ ಆಗಿದ್ದರೂ ಅದನ್ನು ಕಣ್ಣೆದುರಿಗೆ ಇಟ್ಟುಕೊಂಡಿದ್ದೇವೆ.

ನಾನು ನಮ್ಮ ತಂದೆಯವರಿಗೆ ನಾಲ್ಕನೆಯ ಮಗಳು. ನನ್ನ ಅಕ್ಕಂದಿರನ್ನು ಹಾಗೂ ತಂಗಿಯನ್ನು ಕೆಲವು ಕಾರಣಗಳಿಗೋಸ್ಕರ ಅವರು ತಮ್ಮದೇ ಆದ ರೀತಿಯಲ್ಲಿ ಮೆಚ್ಚುತ್ತಿದರು ಆದರೆ ಅವರು ನನ್ನನ್ನು ಮೆಚ್ಚಿದ್ದಾರೆಯೋ, ಇಲ್ಲವೋ ಎಂಬ ಅನುಮಾನ ನನ್ನನ್ನು ಕಾಡುತ್ತಿತ್ತು. ಹಾಗೆಯೇ ಅವರು ನನ್ನನ್ನೂ ಯಾವುದಕ್ಕಾದರೂ ಮೆಚ್ಚಿಕೊಂಡು ಒಂದು ಮಾತನ್ನಾಡಲಿ, ಎಂಬ ಹಂಬಲವೂ ನನಗೆ ಇತ್ತು.

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಆಗ ನಮ್ಮಗೆಲ್ಲರಿಗೂ ಅತ್ಯಂತ ಪ್ರಿಯರಾದ ನಮ್ಮ ಸೋದರತ್ತೆಯ ಮಗಳ ಮದುವೆ ನಿಶ್ಚಯವಾಯಿತು. ಅವಳ ಮದುವೆಗೆ ನಾನು ನನ್ನ ತಂದೆ ತಾಯಿಯ ಜೊತೆಯಲ್ಲಿ ಚಳ್ಳಕೆರೆಗೆ ಹೋಗಿದ್ದೆ. ಮದುವೆ ಚೆನ್ನಾಗಿ ನಡೆಯಿತು. ರಿಸೆಪ್ಷನ್‌ಗೆ ಎಲ್ಲವೂ ಸಜ್ಜಾಗುತ್ತಿತ್ತು. ಒಬ್ಬ ವಿದ್ವಾಂಸರ ಸಂಗೀತ ಕಛೇರಿ ಏರ್ಪಾಡಾಗಿತ್ತು. ಪಕ್ಕವಾದ್ಯದವರು ಬಂದರು. ಆದರೆ ಸಂಗೀತ ವಿದ್ವಾಂಸರಿಗೆ ಯಾವುದೋ ಕಾರಣದಿಂದ ಬರಲು ಆಗಲಿಲ್ಲ. ಜನರು ಬರಲು ಆರಂಭಿಸಿದರು. ನನಗೆ ಅಲ್ಪಸ್ವಲ್ಪ ಸಂಗೀತ ಶಿಕ್ಷಣ ಆಗಿದ್ದುದರಿಂದ ನಮ್ಮ ಸೋದರತ್ತೆಯ ಮಕ್ಕಳು, “‘ನೀನೇ ನಾಲ್ಕು ಹಾಡು ಹಾಡೇ”, ಎಂದರು. ಅದಕ್ಕೆ ನಾನು “““‘ನಾನು ಸ್ಟೇಜ್‌ ಗೀಜ್‌ ಹತ್ತುವುದಿಲ್ಲ. ನನಗೆ ತುಂಬಾ ಭಯ’’ ಎಂದೆ. ಬೇಕಾದರೆ ನಾನು ಯಾರಿಗೂ ಕಾಣದಂತೆ ಒಂದು ರೂಮಿನಲ್ಲಿ ಕುಳಿತು ಹಾಡುತ್ತೇನೆ, ಎಂದೆ. ಅಂತೆಯೇ ಒಂದು ರೂಮಿನಲ್ಲಿ ಪಕ್ಕವಾದ್ಯದವರ ಜೊತೆಯಲ್ಲಿ ಕೂರಿಸಿ, ಮೈಕು ಇಟ್ಟು ನನ್ನನ್ನು ಹಾಡಲು ಪ್ರೋತ್ಸಾಹಿಸಿದರು. ನನ್ನನ್ನು ಅವರು ಹಾಡಲು ಒಪ್ಪಿಸಿದ್ದುದು ನಮ್ಮ ತಂದೆಯವರಿಗೆ ಗೊತ್ತಿರಲಿಲ್ಲ. ನನಗೆ ಮೊದಲು ಹಾಡಲು ಹೆದರಿಕೆಯಾದರೂ, ಮೃದಂಗ ವಾದ್ಯ ಶುರುಮಾಡಿದಂತೆಯೇ ತಾನಾಗಿಯೇ ಧೈರ್ಯ ಬಂದಿತು. ನನಗೆ ತಿಳಿದ ಕೆಲವು ಕೀರ್ತನೆಗಳನ್ನೂ, ದೇವರ ನಾಮಗಳನ್ನೂ ಹಾಡಿದೆ. ರಿಸೆಪ್ಷನ್‌ ಮುಗಿದ ಮೇಲೆ ರೂಮಿನಿಂದ ಹೊರಗೆ ಬಂದೆ. ಎಲ್ಲರೂ ತಕ್ಕಮಟ್ಟಿಗೆ ಹಾಡು ಚೆನ್ನಾಗಿ ಬಂತು ಎಂದರು. ಮೈಕಿನಲ್ಲಿ ನನ್ನ ಧ್ವನಿ ಸ್ವಲ್ಪ ಬೇರೆಯ ತರಹವೇ ಕೇಳಿಸುತ್ತಿತ್ತೆಂದು ಹೇಳಿದರು. ನಮ್ಮ ತಾಯಿಗೆ ಅದು ನನ್ನದೇ ಧ್ವನಿ ಎಂದು ತಿಳಿದುಹೋಗಿತ್ತು. ಆದರೆ ನಮ್ಮ ತಂದೆಯವರಿಗೆ ತಿಳಿಯಲಿಲ್ಲವಂತೆ. “ಯಾರೋ ಪರವಾಗಿಲ್ಲ, ಚೆನ್ನಾಗೇ ಹಾಡಿದರು”, ಎಂದರು. ಆಗ ನಮ್ಮ ತಾಯಿ ಅವರಿಗೆ, “ಹಾಡಿದವಳು ಬೇರೆ ಯಾರೂ ಅಲ್ಲ, ಇವಳೇ”, ಎಂದು ನನ್ನನ್ನು ತೋರಿಸಿದಾಗ ಅವರಿಗೆ ಆಶ್ಚರ್ಯವೂ, ಸಂತೋಷವೂ ಏಕಕಾಲದಲ್ಲಿ ಆಯಿತು. ನನ್ನ ಬೆನ್ನು ತಟ್ಟಿ “ಶಹಭಾಶ” ಎಂದರು. ಆ ಸುಂದರ ನಿಮಿಷವನ್ನು ನಾನಿನ್ನೂ ಜ್ಞಾಪಿಸಿಕೊಳ್ಳುತ್ತಿರುತ್ತೇನೆ.

ಒಮ್ಮೆ ನಾನು ನನ್ನ ಸ್ನೇಹಿತೆಯ ಜೊತೆಗೆ ಅವಳ ಯಾವುದೋ ಒಂದು ಅರ್ಜಿ ಫಾರಂಗೆ ಜಡ್ಜ್‌‌ರ ರುಜು ಬೇಕಾಗಿದ್ದುದರಿಂದ ಕೋರ್ಟಿಗೆ ಹೋಗಿದ್ದೆ. ಅಲ್ಲಿ ವಿಚಾರಣೆ ನಡೆಯುತ್ತಿದ್ದ ಕೊಠಡಿಗೆ ಹೋಗಬೇಕಾಯಿತು. ಅದೇ ಮೊದಲ ಬಾರಿ ನಾನು ಕೋರ್ಟ್‌ನೊಳಗೆ ಹೋಗಿದ್ದು. ವಾದ ವಿವಾದ ನಡೆಯುತ್ತಿದ್ದಾಗ ಕುತೂಹಲದಿಂದ ಅಲ್ಲೇ ಸ್ವಲ್ಪ ಹೊತ್ತು ನಿಂತಿದ್ದು ಆಮೇಲೆ ಮನೆಗೆ ಹೋದೆ. ಆ ಮೇಲೆ ನಮ್ಮ ತಂದೆಯವರ ಹತ್ತಿರ ಹೋಗಿ ನಾನೆಲ್ಲಿ ಹೋಗಿದ್ದೆ ಗೊತ್ತಾ? ಈವತ್ತು ಕೋರ್ಟಿನ ಒಳಗೆ ಹೋಗಿದ್ದೆ. ಅಲ್ಲಿ ವಿಚಾರಣೆ ನಡೆಯುತ್ತಿತ್ತು. ನೋಡಿದೆ ಎಂದು ಹೇಳಿದಾಗ ಅವರು ಪೂರ್ತಿ ಕೇಳಿಸಿಕೊಳ್ಳಲೇ ಇಲ್ಲ, ತಮಾಷೆಯಾಗಿ, “ಹೋಗೇ ಲೇ, ನೀನೆಲ್ಲಿ ಕೋರ್ಟ್‌ ನೋಡಿರ‍್ತಿಯಾ, ಎಲ್ಲೋ ಕೋರ್ಟ್‌ಷಿಪ್‌ ನೋಡಿರ್ತಿಯ ಅಷ್ಟೇ” ಎಂದು ನಕ್ಕುಬಿಟ್ಟರು.

ನಾನು ಒಂದು ಸಲ ಬೆಳಗಾಗೆದ್ದು ಕಾಲಿನಿಂದ ಹಾಸಿಗೆ ಸುರುಳಿ ಸುತ್ತುತ್ತಿದ್ದೆ. ಆವಾಗ ನಮ್ಮ ತಂದೆ ನೋಡಿಬಿಟ್ಟರು. “ನೋಡು ಅವಳ ಧಿಮಾಕು, ಹಾಸಿಗೆ ಒದೆದು ಸುತ್ತುತ್ತಿದ್ದಾಳೆ” ಎಂದರು. ಈಗಲೂ ಅದನ್ನು ಜ್ಞಾಪಿಸಿಕೊಂಡರೆ ನಗು ಬರುತ್ತದೆ.

ಇನ್ನೂ ಅರವತ್ತು ವರ್ಷಗಳಾಗುತ್ತಿದ್ದಂತೆಯೇ ನಮ್ಮ ತಂದೆಯವರಿಗೆ ಒಮ್ಮೆ ಲಘುವಾದ ಹೃದಯಾಘಾತವಾಯಿತು. ಆಗಿನ್ನೂ ಅವರಿಗೆ ಒಬ್ಬ ಮಗಳ ಮದುವೆಯನ್ನು ಮಾಡಲು ಆಗಿರಲಿಲ್ಲ. ನನ್ನ ದೊಡ್ಡಕ್ಕ ಕೆಲಸಕ್ಕೆ ಸೇರಿಕೊಂಡು ನಮ್ಮ ತಂದೆಯ ಸಹಾಯಕ್ಕಾಗಿ ನಿಂತಳು ಅವಳ ಮೇಲೆ ಅವರಿಗೆ ಅಪಾರವಾದ ಭರವಸೆ, ಪ್ರೀತಿ ವಾತ್ಸಲ್ಯವಿತ್ತು. ಎರಡನೆಯ ಅಕ್ಕನ ಮದುವೆ ಅದೃಷ್ಟವಶಾತ್‌ ನಿಶ್ಚಯವಾಯಿತು. ಆಗ ತಾನೇ ಹೃದಯಾಘಾತವಾಗಿ ಚೇತರಿಸಿಕೊಂಡಿದ್ದ ಅವರು ಬಹಳ ಸಂತೋಷ, ಸಂಭ್ರಮಗಳಿಂದ ಮಗಳ ಮದುವೆಯನ್ನು ಮಾಡಿದರು. ಒಳ್ಳೆಯ ಅಳಿಯನನ್ನು ಪಡೆದು ಸಮಾಧಾನಪಟ್ಟರು. ಅವರು ಮದುವೆ ಮಂಟಪದಲ್ಲಿ ಇರುವ ಫೋಟೋಗಳನ್ನು ಈಗಲೂ ನೋಡುವ ಮನಸ್ಸಾಗುತ್ತಿರುತ್ತದೆ. ಅವರ ಇಷ್ಟಪ್ರಕಾರವೇ ಮೊಮ್ಮಗ ಹುಟ್ಟಿದಾಗ ಅವರು ಪಟ್ಟ ಸಂತೋಷ, ಸಂಭ್ರಮ ಅಷ್ಟಿಷ್ಟಲ್ಲ. ಕಣ್ಮನ ತಣಿಸುವಂತಹ ರೂಪವಿದ್ದ ಆ ಮಗುವಿನ ಆಟಪಾಟಗಳನ್ನು ನೋಡುತ್ತಾ ಅವರು ಜಗತ್ತನ್ನೇ ಮರೆಯುತ್ತಿದ್ದರು. ಆ ದೃಶ್ಯವನ್ನು ನೋಡಿ ನಾವೆಲ್ಲರೂ ಸಂತೋಷಪಡುತ್ತಿದ್ದೆವು.

ನನ್ನ ಬಿಎಸ್.ಸಿ ಪರೀಕ್ಷೆಗಳು ನಡೆಯುತ್ತಿದ್ದಾಗ ಅವರಿಗೆ ತೀವ್ರವಾದ ಹೃದಯಾಘಾತವುಂಟಾಯಿತು. ಈಗ ಇರುವ ಔಷಧೋಪಚಾರಗಳು ಆಗಿನ ಕಾಲದಲ್ಲಿ ಇರಲಿಲ್ಲ. ಅವರು ಅರ್ಧಪ್ರಜ್ಞಾವಸ್ಥೆಗೆ ಹೋಗಿಬಿಟ್ಟರು. ಆಗಲೂ ಅವರ ಹತ್ತಿರ ಹೋಗಿ ನಾನು ನಿಂತರೆ, “ಕನ್ನಡ ಪದ್ಯ ಹೇಳು” ಎಂದು ಕೇಳುತ್ತಿದ್ದರು. ನನಗೆ ದುಃಖದಿಂದ ಮಾತೇ ಹೊರಡುತ್ತಿರಲಿಲ್ಲ. ನಮ್ಮ ದೊಡ್ಡಕ್ಕ ಹತ್ತಿರ ಹೋದಾಗ “ನಿನ್ನ ಮೇಲೆ ಎಲ್ಲಾ ಭಾರವನ್ನು ಹಾಕುತ್ತಿದ್ದೇನೆ” ಎಂದು ಹೇಳುತ್ತಿದ್ದರು. ಇನ್ನೂ ಏನನ್ನೋ ಹೇಳುವ ತವಕ, ಆದರೆ ಹೇಳಲು ಆಗುತ್ತಿರಲಿಲ್ಲ. ಅವಳು ಅವರಿಗೆ ಸಮಾಧಾನ ಹೇಳುತ್ತಿದ್ದಳು. ಅದಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅವರು ನಮ್ಮನ್ನೆಲ್ಲಾ ಬಿಟ್ಟು ಅಗಲಿದರು.

ಅವರು ಇನ್ನೂ ಬಹಳ ಕಾಲ ಬದುಕಬೇಕಾಗಿತ್ತೆಂದು ಯಾವಾಗಲೂ ಅನ್ನಿಸುತ್ತಿರುತ್ತದೆ. ನನಗೆ ಮದುವೆಯಾದ ಮೇಲೆ ಇನ್ನೂ ಎರಡು ಭಾಷೆಗಳನ್ನು ಸ್ವಲ್ಪ ದೂರದವರೆಗೆ ಕಲಿಯಬೇಕಾಯಿತು. ಒಂದೊಂದು ಹೊಸ ಪದವನ್ನು ಕಲಿತಾಗಲೂ ಅವರ ನೆನಪು ಬಾರದಿರುತ್ತಿರಲಿಲ್ಲ. ಅವರು ಇದ್ದಿದ್ದರೆ ಬಹಳಷ್ಟು ವಿಷಯಗಳನ್ನು ಕೇಳಿ ತಿಳಿದುಕೊಳ್ಳಬಹುದಾಗಿತ್ತು ಎಂದು ಅನ್ನಿಸುತ್ತಿರುತ್ತದೆ. ಆದರೆ ದೈವೇಚ್ಛೆ ಅವರು ಬಹಳ ಬೇಗ ನಮ್ಮನ್ನು ಬಿಟ್ಟು ಅಗಲಿದರು. ಅವರು ಒಬ್ಬ ಮೊಮ್ಮಗನನ್ನಾದರೂ ನೋಡಿದರಲ್ಲಾ ಎಂದು ಸಮಾಧಾನ ಮಾಡಿಕೊಳ್ಳಬೇಕಾಗಿದೆ.

ನಮ್ಮ ಮನೆಯಲ್ಲಿನ ಒಂದು ಭಾವಚಿತ್ರದಲ್ಲಿರುವ ಅವರು ನಾನೆಲ್ಲಿ ನಿಂತರೂ ನನ್ನನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಅವರು ನನ್ನನ್ನು ಸನ್ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸುತ್ತಿರುವಂತೆ ಅನ್ನಿಸುತ್ತದೆ.