ಕನ್ನಡ ವಿದ್ವತ್‌ ಪ್ರಪಂಚದಲ್ಲಿ ಪ್ರೊ. ಡಿ. ಎಲ್‌. ನರಸಿಂಹಾಚಾರ್‌ ಅವರದು ಬಹುದೊಡ್ಡ ಹೆಸರು. ಅವರು ಸಂಶೋಧಕರಾಗಿ ಭಾಷೆ, ವ್ಯಾಕರಣ, ನಿಘಂಟು, ಗ್ರಂಥ ಸಂಪಾದನೆ, ಛಂದಸ್ಸು, ಸಾಹಿತ್ಯ ಚರಿತ್ರೆ, ಶಬ್ದಾರ್ಥ ವಿಚಾರ ಮೊದಲಾದ ಕ್ಷೇತ್ರಗಳಲ್ಲಿ ಮಾಡಿರುವ ಕಾರ್ಯ ಅಮೋಘವಾದುದು. ಅಲ್ಲೆಲ್ಲ ಅವರ ವೈಜ್ಞಾನಿಕ ದೃಷ್ಟಿ, ವೈಚಾರಿಕ ಪ್ರಜ್ಞೆ ಎದ್ದು ಕಾಣುತ್ತದೆ.

ಇವರು ೧೯೩೦ರಲ್ಲಿ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ರೆಸಿಡೆಂಟ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. ಈ ಅವಧಿಯಲ್ಲಿ ಅವರು ‘‘ಸಕಲ ವೈದ್ಯ ಸಂಹಿತ ಸಾರಾರ್ಣವ’’ ಎಂಬ ವೈದ್ಯ ಗ್ರಂಥವನ್ನೂ, ಕುಮಾರವ್ಯಾಸ ಭಾರತದ ‘‘ಭೀಷ್ಮಪರ್ವ’’ವನ್ನು ಅಚ್ಚುಕಟ್ಟಾಗಿ ಸಂಪಾದಿಸಿ, ಪ್ರಕಟಿಸಿದರು. ೧೯೩೨ ರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ, ೧೯೩೯ರಲ್ಲಿ ಮೈಸೂರಿನ ಇಂಟರ್‌ ಮೀಡಿಯೇಟ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ೧೯೪೫ ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಕನ್ನಡ ಉಪ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೪೮ರಲ್ಲಿ ಮಹಾರಾಜ ಕಾಲೇಜಿಗೆ ಮರಳಿ ಬಂದು ಮಾನಸ ಗಂಗೋತ್ರಿಯಲ್ಲಿ ಕೆಲಸ ಮಾಡುತ್ತ ೧೯೬೩ರಲ್ಲಿ ನಿವೃತ್ತರಾದರು. ೧೯೬೩ರಿಂದ ಸುಮಾರು ಆರು ವರ್ಷ ಕಾಲ ವಿಶ್ವವಿದ್ಯಾನಿಲಯ ಆಯೋಗದ ಸಂಶೋಧಕ ವಿದ್ವಾಂಸರಾಗಿ, ‘‘ಕನ್ನಡ ಗ್ರಂಥ ಸಂಪಾದನೆ’’ (೧೯೬೪), ಹಾಗೂ ‘ಪಂಪ ಭಾರತ ದೀಪಿಕೆ’’ (೧೯೭೧) ಎಂಬ ಶ್ರೇಷ್ಠ ಗ್ರಂಥಗಳನ್ನು ರಚಿಸಿದರು. ಆ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನ ಸಂಪಾದಕತ್ವದ ಹೊಣೆಯನ್ನು ಸ್ವಲ್ಪ ಕಾಲ ನಿಭಾಯಿಸಿದರು. ಹೀಗೆ ಅರ್ಧ ಶತಮಾನಗಳ ಕಾಲ ಪಾಠ ಪ್ರವಚನ, ಸಂಶೋಧನಾ ಕಾರ್ಯದಲ್ಲಿ ತೊಡಗಿ, ಹಲವಾರು ಉದ್ಗ್ರಂಥಗಳನ್ನು ಹೊರತಂದರು. ಕವಿ ಕಾಲ ದೇಶ, ರೂಪ ನಿಷ್ಪತ್ತಿ ಮೊದಲಾದವುಗಳನ್ನು ಕುರಿತು ಹಲವಾರು ಲೇಖನಗಳಲ್ಲಿ ಬಹು ಗಂಭೀರವಾಗಿ ಚರ್ಚಿಸಿದರು. ತತ್ಫಲವಾಗಿ ಐದು ಸ್ವತಂತ್ರ ಕೃತಿಗಳು, ಒಂಭತ್ತು ಸಂಪಾದಿತ ಕೃತಿಗಳು, ೮೩ ಸಂಶೋಧನಾತ್ಮಕ ಲೇಖನಗಳು ಕನ್ನಡದಲ್ಲಿ ಹಾಗೂ ೭ ಲೇಖನಗಳು ಇಂಗ್ಲಿಷಿನಲ್ಲಿ ಬೆಳಕು ಕಂಡಿವೆ.

ಸ್ವತಂತ್ರ ಕೃತಿಗಳು

ಇದರಲ್ಲಿ ಹಂಪೆಯ ಹರಿಹರ (೧೯೩೯), ಶಬ್ದ ವಿಹಾರ (೧೦೫೬), ಪಂಪ ಭಾರತ ದೀಪಿಕೆ (೧೯೭೧), ಕನ್ನಡ ಗ್ರಂಥ ಸಂಪಾದನೆ (೧೯೬೪) ಮತ್ತು ಪೀಠಿಕೆಗಳು, ಲೇಖನಗಳು (೧೯೭೧) ಕೃತಿಗಳನ್ನು ಹೆಸರಿಸಬಹುದು.

ಇವುಗಳಲ್ಲಿ ‘‘ಹಂಪೆಯ ಹರಿಹರ’’ ಎಂಬ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚೋರೋಪನ್ಯಾಸ ಮಾಲೆಯಲ್ಲಿ ಪ್ರಕಟವಾಗಿದೆ. ಇಲ್ಲಿ ಕವಿಯ ಜೀವನ, ಕೃತಿಗಳನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಪ್ರಯತ್ನ ಇದೆಯಾದರೂ, ಆಚಾರ್ಯರ ವಿದ್ವತ್ತು ಕವಿಯ ಹಲವಾರು ವೈಶಿಷ್ಟ್ಯಗಳನ್ನು ಗುರತಿಸಿದೆ. ಹರಿಹರನ ಗದ್ಯದ ಉತ್ಕೃಷ್ಟತೆಯನ್ನು ಕುರಿತು ತೂಕ ಮಾಡಿ ಆರಿಸಿದ, ಉಚಿತ ಪದ ಪ್ರಯೋಗ. ಕಿವಿಗೆ ಇಂಪಾದ ಸರಣಿ, ಸರಳವಾದ ನಿರೂಪಣೆ. ಸಂದರ್ಭಕ್ಕೆ ತಕ್ಕಂತೆ ವಾಕ್ಯಗಳ ವೈವಿಧ್ಯ ಇವೆಲ್ಲ ಉತ್ತಮ ಗದ್ಯದಲ್ಲಿರಬೇಕಾದ ಲಕ್ಷಣಗಳು ಎಂದು ಹೇಳಿ, ಹರಿಹರನ ಶೈಲಿಯ ಮುಖ್ಯ ಲಕ್ಷಣ ಉತ್ಸಾಹ ಎಂದು ಗುರುತಿಸಿರುವರು. ಮುಂದುವರಿದು ಅದನ್ನು ಹೀಗೆ ವಿವರಿಸಿರುವರು. “ಅವನ ಗಮನಕ್ಕೆ ಬಂದ ಯಾವ ವಿಷಯವಾದರೂ ಅಡಗಿಸಲಸಾಧ್ಯವಾದ ಭಾವಗಳನ್ನು ಅವನಲ್ಲಿ ಉಂಟು ಮಾಡುತ್ತದೆ. ಅವು ನಾನು ಮುಂದೆ, ತಾನು ಮುಂದೆ ಎಂದು ತಮ್ಮೊಳಗೆ ಹೊಯ್ದಾಡುತ್ತ ಸ್ಪಂದಿಸುತ್ತವೆ. ಇದರಿಂದ ಅವನ ಮನಸ್ಸು, ಭಾವಗಳ ನೃತ್ಯಶಾಲೆಯಾಗುತ್ತದೆ. ಅವುಗಳನ್ನು ಎಷ್ಟು ವಿಧವಾಗಿ ಹೇಳಲು ಪ್ರಯತ್ನಿಸಿದರೂ ಅವನಿಗೆ ತೃಪ್ತಿಯಿಲ್ಲ. ಹೇಳಿದ್ದು ಸಾಲದು, ಇನ್ನೂ ಹೇಳಬೇಕು, ಇನ್ನೂ ಚೆನ್ನಾಗಿ ಹೇಳಬೇಕು ಎಂಬುದು ಅವನ ಮನಸ್ಸಿನ ಸ್ವಭಾವ. ಇದನ್ನೇ ಉತ್ಸಾಹ ಎಂದು ಅವನು ಕರೆದಿರುವುದು. ಅವನ ಕಾವ್ಯಗಳಲ್ಲೆಲ್ಲ ಪದಗಳ, ಚಿತ್ರಗಳ, ನಾದಗಳ, ಭಾವಗಳ ಚೆಂಡಾಟವು ಕಾಣುತ್ತದೆ. ಪುಟ ಹೊಡೆದ ಚೆಂಡು ಕೊಂಚ ಎತ್ತರ ಹೋದರೆ, ಅದು ಇನ್ನೂ ಮೇಲಕ್ಕೆ ನೆಗೆಯಲಿಲ್ಲವಲ್ಲಾ ಎಂದು ಮರಳಿ ಮರಳಿ ಹೊಡೆಯುವ ಹಾಗೆ ಹರಿಹರನ ಶೈಲಿ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ. ಹೀಗೆ ಹರಿಹರನ ಶೈಲಿಯ ವಿಶೇಷತೆಯನ್ನು ಕಂಡು, ಸವಿದು, ಸೊಗಸಾಗಿ ಶಬ್ದಗಳಲ್ಲಿ ಹಿಡಿದಿಟ್ಟಿರುವುದು ಡಿ.ಎಲ್‌.ಎನ್‌. ಅವರ ವಿಶೇಷತೆ ಎಂದು ಹೇಳಬಹುದಾಗಿದೆ.

ಅವರ ‘‘ಶಬ್ದ ವಿಹಾರ’’ ಕೃತಿ ಈ ಬಗೆಯ ಪುಸ್ತಕಗಳಲ್ಲಿ ಇದೇ ಮೊದಲನೆಯದು ಎನ್ನುವ ಹಾಗೆ ಮೂಡಿ ಬಂದಿದೆ. ಇಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಕೆಲವು ಸಮಸ್ಯಾತ್ಮಕ ಶಬ್ದಗಳ ಅರ್ಥ ನಿಷ್ಪತ್ತಿಯನ್ನು ಚರ್ಚಿಸಲಾಗಿದೆ. ಒಂದೊಂದು ಪದದ ಅರ್ಥ ನಿರ್ಣಯಕ್ಕೆ ಶಾಸನ, ಪ್ರಾಚೀನ ಗ್ರಂಥಗಳು, ಸಂಸ್ಕೃತ, ಪ್ರಾಕೃತ, ತೆಲುಗು, ತಮಿಳು ಭಾಷೆಗಳಿಂದ ವಿಷಯ ಸಂಗ್ರಹಿಸಿರುವುದು ಆಚಾರ್ಯರು ಅವುಗಳ ಮೇಲಿನ ಪ್ರಭುತ್ವದ ಪ್ರತೀಕದಂತಿದೆ. “ಮೇಗಾಳಿ ಕಿಗ್ಗಾಳಿ, ಹುಡುಕು ನೀರು, ಒಲ್ಲಣಿಗೆ, ಕಾಳಸೆ, ಪೞಂಗಾಸು, ಕಾರೋಹಣದ ಪೞಿ ಮುಂತಾದ ಪದಗಳ ಪೂರ್ವ ಭವಾವಳಿಯನ್ನು ನಿರೂಪಿಸುವಾಗ, ಅವರು ಜೈನ ಪುರಾಣಗಳ ಚಾರಣ ಋಷಿಗಳಂತೆ ಗೋಚರಿಸುತ್ತಾರೆ. ಆದಿಪುರಾಣದ ೧೧ ನೆಯ ಸಂಧಿಯ ೪೨ನೆಯ ಕಂದಪದ್ಯಗಳಲ್ಲಿ ಬರುವ ಕೊಳತ ಎನ್ನುವ ಮಾತಿನ ಅರ್ಥ ಯಾವ ವಿದ್ವಾಂಸನಿಗೂ ತಿಳಿಯದೆ, ವಿದ್ವಜ್ಜನ ಪೇಚಾಟಕ್ಕೆ ಸಿಕ್ಕಿ, ಲಜ್ಜೆಗೊಂಡಿದ್ದಾಗ, ಪಂಪನೇ ಡಿ.ಎಲ್‌.ಎನ್‌. ಅವರ ಆತ್ಮವನ್ನು ಮಿಡಿದನೋ ಎನ್ನುವಂತೆ ಅವರು ಅದರ ಕುಲ ಗೋತ್ರಗಳನ್ನು ಕಂಡು ಹಿಡಿದು, ಅದರ ಅರ್ಥವನ್ನು ನಿಷ್ಕರ್ಷಿಸಿ, ಪ್ರಾಚೀನ ಮಹಾ ಕವಿಯೊಬ್ಬನನ್ನು ರಕ್ಷಿಸಿದ್ದಲ್ಲದೆ, ವಿದ್ವತ್ತಿನ ಕೋಡಿಗೆ ಚಿನ್ನದ ಅಣಸವಿಟ್ಟರು.” (ದೇ.ಜ.ಗೌ. ಉಪಾಯನ-ಶ್ರೀ ಆಚಾರ್ಯರೊಡನೆ ಪು.xxi). ಈ ಗ್ರಂಥದ ಮುಂದುವರೆದ ಭಾಗವಾಗಿ ಬಂದ ಅವರ ‘‘ಕನ್ನಡದಲ್ಲಿ ಶಬ್ದರಚನೆ’’ ಎಂಬ ಲೇಖನ ಕುರಿತು ಡಾ. ಎ. ಎನ್‌. ಉಪಾಧ್ಯೆ ಅವರು” is a study of Kannada vocabulary in terms of modern Linguistics: that only shows how he was annexing new realms of knowledge like a true scholar” ಎಂದು ಪ್ರಶಂಸಿದ್ದಾರೆ.

ಕನ್ನಡದಲ್ಲಿ ಗ್ರಂಥ ಸಂಪಾದನೆ ಅವ್ಯಾಹತವಾಗಿ ನಡೆದು ಬಂದರೂ, ಅದು ಒಂದು ಶಾಸ್ತ್ರವಾಗಿ ಬೆಳೆದು ನಿಂತಿದ್ದು ಡಿ.ಎಲ್‌.ಎನ್‌. ಅವರ ‘‘ಕನ್ನಡ ಗ್ರಂಥ ಸಂಪಾದನೆ’’ ಎಂಬ ಕೃತಿಯಿಂದ. ಈ ಕೃತಿಯನ್ನು ರಚಿಸಲು ಜರ್ಮನ್‌, ಫ್ರೆಂಚ್‌, ಇಂಗ್ಲಿಷ್‌ ಗ್ರಂಥಗಳನ್ನು ಅವಲಂಬಿಸಿದ್ದಾಗಿ ಹೇಳಿದ್ದಾರೆ. ಆದರೂ ಪಾಠಾಂತರ, ಸಂಕಲನ, ಅಕ್ಷರ ಸ್ಖಾಲಿತ್ಯ, ಇತರ ಸ್ಖಾಲಿತ್ಯ, ಪಾಠ ಪರಿಷ್ಕರಣ ಮೊದಲಾದವುಗಳನ್ನು ವಿವರಿಸುವಾಗ ಡಿ.ಎಲ್‌.ಎನ್‌. ಅವರ ಪ್ರಾಚೀನ ಕನ್ನಡ ಸಾಹಿತ್ಯದ ಮೇಲಿನ ಪ್ರಭುತ್ವ ಉಪಯೋಗಕ್ಕೆ ಬಂದಿದೆ. ಹೀಗಾಗಿ ಇದೊಂದು ಒಳ್ಳೆಯ ಮಾದರಿಯಾದ ಶಾಸ್ತ್ರ ಗ್ರಂಥವೆಂಬ ಮನ್ನಣೆಗೆ ಪಾತ್ರವಾಗಿದೆ.

ವಚನ ಮೊದಲಾದ ಗ್ರಂಥಗಳಿಗೆ ಟೀಕೆ ಬರೆಯುವ ಪ್ರವೃತ್ತಿ ಪ್ರಾಚೀನ ಕಾಲದಿಂದ ರೂಢಿಯಲ್ಲಿರುವುದಾದರೂ ಪ್ರಾಚೀನ ಕೃತಿಗಳಿಗೆ ಟೀಕೆ ಬರೆಯುವ ರೂಢಿ ಇತ್ತೀಚೆಗೆ ಪ್ರಾರಂಭವಾಗಿ, ರಾಜಶೇಖರ ವಿಳಾಸ, ಭಿಕ್ಷಾಟನಲೀಲೆ ಮೊದಲಾದ ಕೃತಿಗಳಿಗೆಲ್ಲ ಟೀಕೆ ಬಂದಿವೆ. ಆದರೆ ಇವಕ್ಕೂ ಪ್ರಾಚೀನವಾದ ಪಂಪ ಭಾರತ, ಗದಾಯುದ್ಧ ಮೊದಲಾದ ಕೃತಿಗಳಿಗೆ ಟೀಕೆಗಳೇ ಇರಲಿಲ್ಲ. ಹೀಗಾಗಿ ಅಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು, ತಮ್ಮ ಹಲವಾರು ವರ್ಷದ ಪಾಠ ಪ್ರವಚನದ ಅನುಭವದ ಹಿನ್ನೆಲೆಯಲ್ಲಿ ಡಿ.ಎಲ್‌.ಎನ್‌. ಅವರು ಪಂಪ ಭಾರತ ದೀಪಿಕೆಯ ರಚನೆಗೆ ತೊಡಗಿದ್ದಾರೆ. ವ್ಯಾಕರಣ, ಛಂದಸ್ಸು, ಪೂರ್ವಕಥಾ ವೃತ್ತಾಂತ, ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು ಮೊದಲಾದವುಗಳ ಹಿನ್ನೆಲೆಯಲ್ಲಿ ಪ್ರತಿಪದಾರ್ಥ ನಿರೂಪಿತವಾಗಿದೆ. ಇಲ್ಲೆಲ್ಲ ಡಿ.ಎಲ್‌.ಎನ್‌. ಅವರ ಓದಿನ ಹರವು, ಸಂಶೋಧನ ಬುದ್ಧಿ, ತರ್ಕ ತೀಕ್ಷ್ಣತೆ ಕೆಲಸ ಮಾಡಿವೆ. ಹಲವಾರು ಶಬ್ದಗಳ ಸರಿಯಾದ ಪಾಠ ಗುರುತಿಸಿ, ಅವಕ್ಕೆ ಯೋಗ್ಯವಾದ ಅರ್ಥ ಹೇಳಿದ್ದಾರೆ. ಸಂದೇಹವೆಂದು ತೋರಿದೆಡೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಅದನ್ನು ಡಿ.ಎಲ್‌.ಎನ್‌. ಅವರು ಈ ರೀತಿ ಹೇಳಿಕೊಂಡಿದ್ದಾರೆ, “ಈ ಕೃತಿಯ ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ನನ್ನದೆ ಸರಿಯೆಂಬ ಹಠವೇನೂ ಇಲ್ಲ. ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಾಳವಾಗಿ ಬಳಸಿದ್ದೇನೆ. ತಿಳಿಯದ ಅಂಶಗಳಿಗೂ ಇದೇ ಚಿಹ್ನೆಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಯನ್ನು ತೆಗೆದು ಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರೆದು, ಹೊಸ ಆಧಾರಗಳು ತಲೆದೋರುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಾಗಬಹುದು. ಇವನ್ನೆಲ್ಲ ಸಹಾನುಭೂತಿಯಿಂದ ನೋಡಬೇಕೆಂದು ನನ್ನ ನಮ್ರ ವಿನಂತಿ” ಎಂದು ಕೋರುವ ಮೂಲಕ ಒಳ್ಳೆಯ ಸಂಶೋಧಕನ ಗುಣಲಕ್ಷಣಗಳಿಗೆ ಮಾದರಿಯಾಗಿ ನಿಂತಿದ್ದಾರೆ.

ಡಿ.ಎಲ್‌.ಎನ್‌. ಅವರ ೯೧ ಲೇಖನಗಳನ್ನೋಳಗೊಂಡಿರುವ ‘‘ಪೀಠಿಕೆಗಳು ಲೇಖನಗಳು’’ ಕೃತಿ ಅವರ ವಿದ್ವತ್ತಿನ ವಿವಿಧ ಮುಖಗಳನ್ನು ತೋರುತ್ತಿದೆ. ಅಲ್ಲಿಯ ಪೀಠಿಕೆಗಳು ಭಾಗದಲ್ಲಿ ಡಿ.ಎಲ್‌.ಎನ್‌. ಅವರ ಪ್ರಸಿದ್ಧ ಸಂಪಾದಿತ ಕೃತಿಗಳಾದ ಪಂಪ ರಾಮಾಯಣ, ಸಿದ್ಧರಾಮ ಚರಿತೆ, ಸುಕುಮಾರ ಚರಿತೆ, ಶಬ್ದ ಮಣಿದರ್ಪಣ, ಸಕಲವೈದ್ಯ ಸಂಹಿತಾಸಾರಾರ್ಣವಗಳ ಪೀಠಿಕೆಗಳು ಪ್ರಕಟವಾಗಿವೆ. ಕವಿಕಾವ್ಯ ವಿಚಾರದಲ್ಲಿ ಹಂಪೆಯ ಹರಿಹರ, ಅಗ್ಗಳದೇವ, ಪೊನ್ನನೂ, ಕಾಳಿದಾಸನೂ ಪೊನ್ನನ ಭುವನೈಕ ರಾಮಾಭ್ಯುದಯ, ಗಜಾಂಕುಶ, ರುದ್ರಭಟ್ಟ, ವಡ್ಡಾರಾಧನೆ, ಜಟಾಸಿಂಹನಂದಿಯ ವರಾಂಗಚರಿತೆ ಮೊದಲಾದ ೩೫ ಲೇಖನಗಳಿವೆ. ಇನ್ನು ಛಂದಸ್ಸನ್ನು ಕುರಿತು ತೋಮರ ರಗಳೆ, ಧವಳ ಎಂಬ ಹಾಡಿನ ಸ್ವರೂಪ, ಮಾನಸೋಲ್ಲಾಸದಲ್ಲಿ ಛಂದಸ್ಸು ಎಂಬ ಲೇಖನಗಳಿವೆ. ಗ್ರಂಥ ಸಂಪಾದನೆ ವಿಭಾಗದಲ್ಲಿ ಗ್ರಂಥ ಸಂಪಾದನೆ, ಗುಣವರ್ಮಕೃತಮಪ್ಪ ಪುಷ್ಪದಂತ ಪುರಾಣ ಮೊದಲಾದ ಆರು ಲೇಖನಗಳಿವೆ. ಹಾಗೆಯೇ ಕನ್ನಡ ನಿರುಕ್ತಿಗಳಿಗೆ ಸಂಬಂಧಿಸಿ, ಕನ್ನಡದಲ್ಲಿ ಶಬ್ದ ರಚನೆ, ಕನ್ನಡಕ್ಕೆ ಹೊಸ ನಿಘಂಟು, ಪೊರಸು ಒಂದು ವಿಚಾರ, ಬಾದುಬೆ ಮೊದಲಾದ ೨೩ ಲೇಖನಗಳಿವೆ. ಸಂಕೀರ್ಣದಲ್ಲಿ ಲಕ್ಷ್ಮೀಶನ ಕಾಲ, ಅಭಿನವ ಪಂಪ, ಮೂರು ಷಟ್ಪದಿಗಳು ಮೊದಲಾದ ೧೫ ಲೇಖನಗಳಿವೆ.

ಇಲ್ಲೆಲ್ಲ ಡಿ.ಎಲ್‌.ಎನ್‌. ಅವರು ಒಬ್ಬ ಒಳ್ಳೆಯ ನಿಷ್ಠಾವಂತ ಸಂಶೋಧಕನಾಗಿ ವಿಷಯದ ಆಳಕ್ಕೆ ಇಳಿದು, ಅದಕ್ಕೆ ಬೇಕಾದ ಪೂರಕ ಆಕರಗಳನ್ನು ಒದಗಿಸಿ, ಅವನ್ನು ಪ್ರತಿಪಾದಿಸಲು ಪ್ರಯತ್ನಿಸಿರುವುದಕ್ಕೆ ಹಲವಾರು ನಿದರ್ಶನಗಳು ನಮಗೆ ದೊರೆಯುತ್ತವೆ. ಇವುಗಳಲ್ಲಿ ಕೆಲವೊಂದು ಆಚಾರ್ಯಯರೇ ಮುಂದುವರೆಸಿದ ಸಂಶೋಧನೆಯ ದೃಷ್ಟಿಯಿಂದ ಪರಿಷ್ಕರಿಸಿ, ಅಗತ್ಯವಾದೆಡೆ ವಿಸ್ತರಿಸಿ, ಹೊಸ ಟಿಪ್ಪಣಿಗಳನ್ನು ಸೇರಿಸಿದವುಗಳಾಗಿವೆ. ಇದರಿಂದ ಸಂಶೋಧನೆ ನಿಂತ ನೀರಲ್ಲ, ಸದಾ ಹರಿಯುವ ಪ್ರವಾಹ ಎಂಬುದು ಸ್ಪಷ್ಟವಾಗುತ್ತಿದೆ. ಇನ್ನು ಕೆಲವು ಲೇಖನಗಳ ಕೊನೆಯಲ್ಲಿ (ಉದಾಹರಣೆಗೆ ಗಜಾಂಕುಶ ಲಕ್ಷ್ಮೀಶನ ಕಾಲ ವಿಚಾರ) ತಮ್ಮ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಯನ್ನು ಪರಿಶಿಷ್ಟ ಎಂಬ ಹೆಸರಿನಲ್ಲಿ ಕೊಟ್ಟು ಅವಕ್ಕೆ ಸಮಂಜಸ ಪರಿಹಾರವನ್ನು ಸೂಚಿಸುವುದು ಡಿ.ಎಲ್‌.ಎನ್‌. ಅವರ ಅಪ್ಪಟ ಪ್ರಾಮಾಣಿಕತೆಯನ್ನು ಎತ್ತಿ ತೋರುತ್ತಿದೆ. ಅಲ್ಲಿ ಅವರು ಕೈಗೊಂಡಿರುವ ನಿರ್ಧಾರಗಳು ಸಾಹಿತ್ಯ ಚರಿತ್ರೆಯಲ್ಲಿ ತಮ್ಮದೇ ಆದ ಹೆಜ್ಜೆಗಳನ್ನು ಮೂಡಿಸಿವೆ.

ಸಂಪಾದಿತ ಗ್ರಂಥಗಳು

ಡಿ.ಎಲ್‌.ಎನ್‌. ಅವರ ಹೆಸರು ಸಂಶೋಧನ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿದಿರುವುದು ಅವರು ಸಂಪಾದಿಸಿರುವ ಗ್ರಂಥಗಳ ಮೇಲಿಂದ. ಅವರು ಆಯಾ ಗ್ರಂಥಗಳಿಗೆ ಬರೆದಿರುವ ಒಂದೊಂದು ದೀರ್ಘ ಪೀಠಿಕೆಯೂ ಸ್ವಸಂಪೂರ್ಣವಾದ ಉದ್ವ ಕೃತಿಯಾಗುತ್ತಿದೆ. ಒಂದೊಂದು ಕೃತಿಯ ಮೂಲವನ್ನೂ ಶೋಧಿಸಿ, ಆಕರ ಗ್ರಂಥಗಳನ್ನು ಪರೀಕ್ಷಿಸಿ, ತುಲನಾತ್ಮಕವಾಗಿ ವಿಮರ್ಶಿಸಿ, ಆ ಕೃತಿಯನ್ನು ರೂಪಿಸಿದ ಪ್ರಭಾವ ಪ್ರೇರಣೆಗಳನ್ನು ತುಲನಾತ್ಮಕವಾಗಿ ವಿವೇಚಿಸುವುದು ಇವುಗಳ ವೈಶಿಷ್ಟ್ಯವಾಗಿದೆ.

ಆಚಾರ್ಯರ ಪ್ರಸಿದ್ಧ ಸಂಪಾದಿತ ಕೃತಿ ವಡ್ಡಾರಾಧನೆ. ಅದಕ್ಕೆ ಅವರು ಒಳ್ಳೆಯ ಪಾಠಾಂತರಗಳನ್ನು ಗುರುತಿಸಿ ಒಳ್ಳೆಯ ಸಂಪಾದಕರಾಗಿ ತೋರಿದ್ದಾರೆ. ಅದಕ್ಕೆ ಬರೆದಿರುವ ಪೀಠಿಕೆಯಿಂದ ಅವರೊಬ್ಬ ಒಳ್ಳೆಯ ಸಂಶೋಧಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆ ಕೃತಿಯ ಹೆಸರು, ಕರ್ತೃ, ಕಾಲ ಮೊದಲಾದವು ಸಮಸ್ಯೆಯಾಗಿದ್ದಾಗ, ಡಿ.ಎಲ್‌.ಎನ್‌. ಅವರು ದೊರೆತ ಆಕರಗಳ ಆಧಾರಗಳ ಹಿನ್ನೆಲೆಯಲ್ಲಿ ಕೃತಿಯ ಹೆಸರು ವಡ್ಡಾರಾಧನೆ ಎಂದೂ ಕರ್ತೃ ಶಿವಕೋಟಿಯೆಂದೂ, ಕಾಲ ೮೯೨ ರಿಂದ ೯೪೧ ಎಂದೂ, ಸ್ಥಳ ಬಳ್ಳಾರಿ ಜಿಲ್ಲೆಯ ಕೋಗಳಿ ಎಂದೂ ನಿರ್ಧರಿಸಿದರು. ಆದರೆ ಇತ್ತೀಚೆಗೆ ಡಾ. ಹಂಪನಾ ಈ ಕೃತಿಯನ್ನು ಮತ್ತೆ ಸಂಪಾದಿಸಿ. ಪ್ರಸ್ತಾವನೆಯಲ್ಲಿ ಕೃತಿಯ ಹೆಸರು ‘‘ಆರಾಧನಾ ಕರ್ಣಾಟಟೀಕಾ’’ ಎಂದೂ, ಕರ್ತೃ ಬ್ರಾಜಿಷ್ಣು ಎಂದು, ಇವನು ಬೀದರ್‌ ಜಿಲ್ಲೆಯ ಮಳಖೇಡದವನಂದೂ ಕಾಲ ೮೫೦ ಎಂದೂ ನಿರ್ಧಾರಕ್ಕೆ ಬಂದಿದ್ದಾರೆ. ವಡ್ಡಾರಾಧನೆ ಕೃತಿ ಕುರಿತು ಪಿಎಚ್‌ಡಿ ಮಾಡಿರುವ ಡಾ. ಖಚಬಡಿ ಅವರು ಡಾ. ಹಂಪನಾ ಅವರ ವಾದವನ್ನು ಒಪ್ಪದೆ, ಡಿ.ಎಲ್‌.ಎನ್‌. ವಾದಕ್ಕೆ ಹೆಚ್ಚಿನ ಬೆಲೆಯನ್ನಿತ್ತಿರುವುದು, ಡಿ.ಎಲ್‌.ಎನ್‌. ಅವರ ಸಂಶೋಧನೆ ಮಹತ್ವವನ್ನು ಸಾರುತ್ತಿದೆ.

ಡಿ.ಎಲ್‌.ಎನ್‌. ಅವರ ಇನ್ನೊಂದು ಮಹತ್ವಪೂರ್ಣ ಸಂಪಾದಿತ ಕೃತಿ ‘‘ಶಬ್ದಮಣಿ ದರ್ಪಣ’’, ಇಲ್ಲಿಯೂ ಕೂಡ ಡಿ.ಎಲ್‌.ಎನ್‌. ಅವರು ಆ ಪೂರ್ವದಲ್ಲಿ ಶಬ್ದಮಣಿ ದರ್ಪಣವನ್ನು ಸಂಪಾದಿಸಿದ ಗ್ಯಾರೆಟ್‌, ಕಿಟೆಲ್, ಎ. ವೆಂಕಟರಾಮ್‌, ಎಚ್‌. ಶೇಷಯ್ಯಂಗಾರ್‌ ಮೊದಲಾದವರು ಪ್ರಕಟಿಸಿದ ಕೃತಿಗಳಲ್ಲಿ ಹಲವಾರು ದೋಷಗಳಿರುವುದನ್ನು ಗಮನಿಸಿ, ಸ್ಖಾಲಿತ್ಯ ದೋಷಗಳಿಂದ ಆದಷ್ಟೂ ಮುಕ್ತವಾದ ಪಾಠವೊಂದನ್ನು ಕೊಡುವ ದೃಷ್ಟಿಯಿಂದ ಈ ಕೃತಿಯ ಸಂಪಾದನೆಗೆ ತೊಡಗಿದರು. ಹೀಗೆ ಸಂಪಾದಿಸಲ್ಪಟ್ಟ ಕೃತಿಯ ಎರಡನೆಯ ಮುದ್ರಣದಲ್ಲಿ ಹಲವು ತಪ್ಪುಗಳನ್ನು ಡಾ. ಎಂ. ಎಂ. ಕಲಬುರ್ಗಿ ಅವರು ಎತ್ತಿ ತೋರಿಸಿ ಎರಡು ಲೇಖನ ಬರೆದರು (J. of the K.25, Humanities Vol.IXX). ಅದನ್ನೇ ಕುರಿತು ಡಿ.ಎಲ್‌.ಎನ್‌. ಅವರು “ಶಬ್ದಮಣಿದರ್ಪಣದ ಮೊದಲಿನ ಎರಡು ಪ್ರಕರಣಗಳಲ್ಲಿರುವ ವಾಸ್ತವಿಕ ಸ್ಖಾಲಿತ್ಯಗಳನ್ನು ತಮಗೆ ಸ್ಖಾಲಿತ್ಯಗಳೆಂದು ತೋರಿ ಬಂದವುಗಳನ್ನು ಈ ಎರಡು ಲೇಖನಗಳಲ್ಲಿ ಅವರು ಪ್ರತಿಪಾದಿಸಿದ್ದಾರೆ. ಸೂತ್ರ ವೃತ್ತಿ ಟೀಕುಗಳಲ್ಲಿ ಹಂಚಿ ಹೋಗಿರುವ ಸ್ಖಾಲಿತ್ಯಗಳನ್ನೆಲ್ಲ ಅವರು ತುಂಬ ಶ್ರಮವಹಿಸಿ ಕಂಡುಹಿಡಿದಿದ್ದಾರೆ. ಇಷ್ಟೇ ಅಲ್ಲದೆ ಮುಂದಿನ ಪ್ರಕರಣದಲ್ಲಿ ಅಡಗಿರುವ ತಪ್ಪುಗಳನ್ನು ಹುಸಿತಪ್ಪುಗಳನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಿ ಅವುಗಳನ್ನೆಲ್ಲಾ ಪಟ್ಟಿ ಮಾಡಿ ನನಗೆ ಕಳಿಸಿಕೊಡುವ ಉಪಕಾರವನ್ನು ಮಾಡಿದ್ದಾರೆ. ಅವರು ಬರೆದಿರುವ ಲೇಖನಗಳಲ್ಲೂ ಕಳಿಸಿದ ಪಟ್ಟಿಯಲ್ಲೂ ಅಚ್ಚಿನ ತಪ್ಪುಗಳೇ ಬಹು ಸಂಖ್ಯಾಕವಾಗಿವೆ. ಇವುಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ….. ಇವರ ಲೇಖನಗಳು ಕಾರಣವಾಗಿ ಶಬ್ದಮಣಿದರ್ಪಣದ ಈ ಮುದ್ರಣಿ ಅದರ ಹಿಂದಿನ ಮುದ್ರಣಕ್ಕಿಂತ ಹೆಚ್ಚು ಸಮರ್ಪಕವಾಗಿದೆಯೆಂದು ಭಾವಿಸುತ್ತೇನೆ” ಎಂದಿರುವುದು ಅವರ ದೊಡ್ಡ ಗುಣವನ್ನು ತೋರುತ್ತದೆ. ಮುಂದೆ ಡಾ. ಕಲಬುರ್ಗಿ ಅವರ ಆಕ್ಷೇಪಗಳಿಗೆ ಉತ್ತರವಾಗಿ ಡಾ. ಹಂಪನಾ ಅವರು ಒಂದು ಲೇಖನ ಬರೆಯಲು (ಕನ್ನಡನುಡಿ, ನವೆಂಬರ್‌, ೧೯೬೭) ‘‘ಈ ಇಬ್ಬರು ಮಿತ್ರರು ಮಾಡಿರುವ ಸಹಾಯಕ್ಕಾಗಿ ನಾನು ತುಂಬ ಕೃತಜ್ಞನಾಗಿದ್ದೇನೆ’’ ಎಂದು ಆ ಇಬ್ಬರ ಅನ್ವೇಷಕ ಚಿಕಿತ್ಸಕ ಬುದ್ಧಿಯನ್ನು ಕೊಂಡಾಡಿದರು. ಹೀಗೆ ತಮ್ಮ ದೋಷಗಳನ್ನು ಎತ್ತಿ ಹೇಳಿದವರನ್ನೂ ಕೊಂಡಾಡುವ ಸಾಮರ್ಥ್ಯ ಒಬ್ಬ ಪರಿಪೂರ್ಣ ಸಂಶೋಧಕನಿಗೆ ಮಾತ್ರ ಸಾಧ್ಯ.

ಆದರೆ ಈ ಕೃತಿಗೆ ಉಚಿತ ಪ್ರಸ್ತಾವನೆ ಇಲ್ಲದೆ ಇರುವುದು ಬಹುದೊಡ್ಡ ಕೊರತೆ ಎನ್ನಿಸಿದೆ. ಅದಕ್ಕೆ ಅವರು ಕೊಟ್ಟಿರುವ ಕಾರಣ, ‘‘ಈಗಾಗಲೇ ಮದ್ರಾಸ್‌ ಪ್ರತಿಯಲ್ಲಿ ಹೇಳಬೇಕಾದುದನ್ನೆಲ್ಲ ಹೇಳಿ ಆಗಿದೆ’’ ಎಂಬದು. ಡಿ.ಎಲ್‌.ಎನ್‌. ಅವರ ಪಾಂಡಿತ್ಯ ಒರೆಗೆ ಹತ್ತಿದ್ದರೆ, ಅದರಿಂದ ಭಿನ್ನವಾದ ಇನ್ನೂ ಹಲವಾರು ಹೊಸ ವಿಚಾರಗಳು ಹೊರಬರಬಹುದಿತ್ತೇನೋ!

ಡಿ.ಎಲ್‌.ಎನ್‌. ಅವರು ಸಂಪಾದಿಸಿದ ಇನ್ನೊಂದು ಮಹತ್ವಪೂರ್ಣ ಕೃತಿ ‘‘ಸಿದ್ಧರಾಮ ಚಾರಿತ್ರ ಸಂಗ್ರಹ’’. ಆ ಪೂರ್ವದಲ್ಲಿ (೧೯೪೧) ವೆಂಕಣ್ಣಯ್ಯನವರೊಂದಿಗೆ ಸಿದ್ಧರಾಮ ಚರಿತ್ರೆ ಸಂಪಾದಿಸಿದ್ದ ಡಿ.ಎಲ್‌.ಎನ್‌. ಅವರು ಈಗ (೧೯೫೧) ಅದರ ಸಂಗ್ರಹವನ್ನು ಹೊರತಂದರು. ಇಲ್ಲಿ ಪಠ್ಯಕ್ಕಿಂತ ಅವರು ಬರೆದ ಪೀಠಿಕೆ ದೊಡ್ಡ ಕೋಲಾಹಲವನ್ನೆಬ್ಬಿಸಿತು. ಇಲ್ಲಿಯ ಸಿದ್ಧರಾಮ ಶೈವನೆಂಬ ಅವರ ವಾದವನ್ನು ಖಂಡಿಸಿ ಡಾ. ಆರ್‌. ಸಿ. ಹಿರೇಮಠ್‌ ಮೊದಲಾದವರು ಎಷ್ಟೇ ಪ್ರಯತ್ನಿಸಿದರೂ ಡಿ.ಎಲ್‌.ಎನ್‌. ಅವರು ಒಪ್ಪದೆ, ಕೊನೆಗೆ ಸುಜನಾ (ನಾರಾಯಣಶೆಟ್ಟಿ) ಅವರು ಸಕಲೇಶ ಮಾದರಸನ “ಪರುಷ ಮೃಗ…….” ಎಂಬ ವಚನ ತೋರಲು ಅವನ ವೀರಶೈವತ್ವವನ್ನು ಒಪ್ಪಿದರು. ಹೀಗೆ ತಮಗೆ ಮನದಟ್ಟಾಗುವವರೆಗೂ, ಸಾಕಷ್ಟು ಆಕರಗಳು ದೊರೆಯುವವರೆಗೂ ಅವರೆಂದೂ ತಮ್ಮ ಅಭಿಪ್ರಾಯವನ್ನು ಬದಲಿಸುತ್ತಿರಲಿಲ್ಲ.

ಡಿ.ಎಲ್‌.ಎನ್‌. ಅವರು ಸಂಗ್ರಹಿಸಿದ ಪಂಪ ರಾಮಾಯಣ ಸಂಗ್ರಹವು ಮೂಲಕೃತಿಯನ್ನು ಮರೆಯಿಸುವಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಆಗಿನ ಕಾಲದಲ್ಲಿ ಬಂದ ಆದಿಪುರಾಣ ಸಂಗ್ರಹ (ಎಲ್‌. ಗುಂಡಪ್ಪ), ಹರಿಶ್ಚಂದ್ರ ಕಾವ್ಯ ಸಂಗ್ರಹ (ಎ. ಆರ್‌. ಕೃಷ್ಣಶಾಸ್ತ್ರಿ), ಪ್ರಭುಲಿಂಗಲೀಲೆಯ ಸಂಗ್ರಹ (ಎಂ. ಆರ್‌. ಶ್ರೀನಿವಾಸಮೂರ್ತಿ), ಗದಾಯುದ್ಧ ಸಂಗ್ರಹ (ತೀ.ನಂ.ಶ್ರೀ) ಮೊದಲಾದ ಮಹತ್ವಪೂರ್ಣ ಸಂಗ್ರಹ ಕೃತಿಗಳಲ್ಲಿ ಇದೂ ಒಂದು. ಈ ಎಲ್ಲ ಕೃತಿಗಳ ವೈಶಿಷ್ಟ್ಯ ನಿಂತಿರುವುದು ಅವುಗಳಿಗೆ ಬರೆಯಲಾದ ವಿಸ್ತೃತ ಪೀಠಿಕೆಯ ಮೇಲೆಯೇ.

ಇಲ್ಲಿ ಡಿ.ಎಲ್‌.ಎನ್‌. ಅವರು ಪಂಪ ರಾಮಾಯಣವು ಕ್ರಿ. ಶ. ೧೧೪೦ ರಲ್ಲಿ ರಚನೆಗೊಂಡಿರಬೇಕೆಂದೂ, ನಾಗಚಂದ್ರ ೧೨ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಸಿದ್ಧನಾಗಿ ಬಾಳಿದನೆಂದೂ ಅಭಿಪ್ರಾಯಪಟ್ಟಿದ್ದಾರೆ. ಇವನ ಮೇಲೆ ವಿಮಲಸೂರಿ, ರವಿಶೇಣರ ಪ್ರಭಾವವಾಗಿರುವುದನ್ನು ಎತ್ತಿ ತೋರಿರುವರು. ಇವೆಲ್ಲವುಗಳಿಂದ ಇದೊಂದು ಮಾದರಿ ಗ್ರಂಥವಾಗಿದೆಯೆಂದು ಹೇಳಬಹುದು.

ಹಾಗೆಯೇ ಅವರು ಶಾಂತಿನಾಥನ ಸುಕುಮಾರ ಚರಿತೆ, ಕುಮಾರವ್ಯಾಸನ ಭೀಷ್ಮಪರ್ವ, ಗೋವಿನ ಹಾಡು ಎಂಬ ಕೃತಿಗಳನ್ನೂ ಸಂಪಾದಿಸಿ ಅಲ್ಲಿಯೂ ತಮ್ಮ ವಿಶೇಷತೆಯನ್ನು ತೋರಿದ್ದಾರೆ.

ಸಮಕಾಲೀನರಿಂದ “ಜಂಗಮ ವಿಶ್ವಕೋಶ”ವೆಂದೇ ಕರೆಯಲ್ಪಡುತ್ತಿದ್ದ ಈ ದಿವ್ಯ ಚೇತನವು ಅಂತ್ಯಕಾಲದಲ್ಲಿ ಕನ್ನಡ ನಿಘಂಟಿನ ಜವಾಬ್ದಾರಿಯನ್ನು ವಹಿಸಿಕೊಂಡು, ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಿದ್ದಂತೆಯೇ ೧೯೭೧ರ ಮೇ ೭ ರ ರಾತ್ರಿ ಕಣ್ಣು ಮುಚ್ಚಿತು. ಇದರಿಂದ ಕನ್ನಡ ವಿದ್ವತ್‌ ಪ್ರಪಂಚದ ಒಂದು ಅಧ್ಯಾಯ ಮುಗಿದಂತಾಯಿತು.