ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಿಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಪ್ರೊ. ಡಿ.ಎಲ್. ಎನ್. ರೂಪಿಸಿದ ಶಿಷ್ಯ ಪರಂಪರೆ ಕನ್ನಡ ಸಂಶೋಧನೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿತು. ಪ್ರಾಚೀನ ಕಾವ್ಯ ಅಧ್ಯಯನ, ಗ್ರಂಥ ಸಂಪಾದನೆ, ಭಾಷಿಕ ಅಧ್ಯಯನ, ಛಂದಸ್ಸು ಮುಂತಾದ ಕ್ಷೇತ್ರಗಳ ಜೊತೆಗೆ ಹೊಸಗನ್ನಡ ಸಾಹಿತ್ಯ ಕೃತಿಗಳನ್ನು ಕುರಿತು ಕೂಡಾ ಡಿ. ಎಲ್. ಎನ್. ಸಮಾನ ಆಸಕ್ತಿಯನ್ನು ಇಟ್ಟುಕೊಂಡಿದ್ದು. ಆದ್ದರಿಂದಲೇ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಡಿ.ಎಲ್. ಎನ್. ಪರಂಪರೆಯ ಮಹಾಮಾರ್ಗವೊಂದು ನಿರ್ಮಾಣಗೊಂಡಿತು. ಸತತ ಅಭ್ಯಾಸದ ತಪಸ್ಸಿನಿಂದ ಬಹುಕ್ಷೇತ್ರಗಳ ಜ್ಞಾನವನ್ನು ಅರಗಿಸಿಕೊಂಡ ಡಿ.ಎಲ್. ಎನ್. ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಧ್ಯಯನದ ವೈಧಾನಿಕತೆಗಳನ್ನು ಸ್ವತಂತ್ರವಾಗಿ ರೂಪಿಸಿಕೊಟ್ಟರು. ಪಂಪಭಾರತ ದೀಪಿಕೆ, ಕನ್ನಡ ಗ್ರಂಥ ಸಂಪಾದನೆಯಂತಹ ಆಚಾರ್ಯ ಕೃತಿಗಳ ಜೊತೆಗೆ ಅವರು ಬರೆದ ಸಂಶೋಧನ ಲೇಖನಗಳ ಬೃಹತ್ ಕಣಜ ‘ಪೀಠಿಕೆಗಳು-ಲೇಖನಗಳು’ ನಮ್ಮನ್ನು ನಿರಂತರವಾಗಿ ಚಾಲನೆಗೊಳಿಸುವ ದಾರಿದೀಪಗಳಾಗಿವೆ. ಪ್ರಾಚೀನ ಕಾವ್ಯಗಳ ಸಂಪಾದನೆಗೆ ಸಂಬಂಧಿಸಿದ ಸೂಕ್ಷ್ಮಮತಿ ಮತ್ತು ವಿದ್ವತ್ತು ಶಬ್ದಮಣಿದರ್ಪಣ, ಪಂಪ ರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ಧರಾಮ ಚರಿತೆಗಳಂತಹ ಮಹತ್ವದ ಕೃತಿಗಳ ಸಂಪಾದನೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದೆ. ಕವಿಗಳ ದೇಶ ಕಾಲ ವಿಚಾರ, ಶಬ್ದಗಳ ವ್ಯುತ್ಪತ್ತಿ ಮತ್ತು ಅರ್ಥ ನಿಷ್ಕರ್ಷೆಗಳಿಂದ ತೊಡಗಿ ಕಾವ್ಯದ ಸಮಗ್ರ ತಿಳುವಳಿಕೆಯವರೆಗೆ ಡಿ.ಎಲ್. ಎನ್. ಅವರ ಸಂಶೋಧನೆಯ ಚಿತ್ತ ವ್ಯಾಪಿಸಿಕೊಂಡಿದೆ.

ತೀರ ಅಪೂರ್ವವಾಗಿ ಶಿವರಾಮ ಕಾರಂತರ ಮರಳಿಮಣ್ಣಿಗೆ ಮತ್ತು ಕನ್ಯಾಬಲಿ ಕಾದಂಬರಿಗಳ ಕುರಿತು ಡಿ.ಎಲ್. ಎನ್. ಬರೆದ ವಿಮರ್ಶೆ ಆಧುನಿಕ ಸಾಹಿತ್ಯ ಕುರಿತು ಅವರ ಒಳನೋಟಗಳ ಕನ್ನಡಿಯಾಗಿದೆ. ಪೂರ್ಣದೃಷ್ಟಿಯ ಪ್ರಾಧ್ಯಾಪಕ ಡಾ. ಎಲ್. ನರಸಿಂಹಾಚಾರ್ ಅವರ ಶಿಷ್ಯ ಪರಂಪರೆ ಕನ್ನಡ ಸಂಶೋಧನ ಕ್ಷೇತ್ರವನ್ನು ವಿಸ್ತರಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಹೀಗೆ ಒಂದರ್ಥದಲ್ಲಿ ಇಪ್ಪತ್ತನೆಯ ಶತಮಾನದ ಸಂಶೋಧನ ಅಂಕಣವನ್ನು ಸಮಗ್ರವಾಗಿ ವ್ಯಾಪಿಸಿದ ಡಿ.ಎಲ್. ಎನ್. ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ‘ಡಿ.ಎಲ್. ನರಸಿಂಹಾಚಾರ್ ಶತಮಾನ ಸ್ಮರಣೆ’ ಎನ್ನುವ ಈ ಸಂಪುಟವನ್ನು ಹೊರತರಲು ಕನ್ನಡ ವಿಶ್ವವಿದ್ಯಾಲಯ ಅಭಿಮಾನ ಪಡುತ್ತದೆ. ಡಿ.ಎಲ್. ಎನ್. ಅವರನ್ನು ಕಂಡ ಸಾಹಚರ್ಯದ ಸುಖವನ್ನು ಅನುಭವಿಸಿದ, ಅವರ ಶಿಷ್ಯರಾಗುವ ಭಾಗ್ಯವನ್ನು ಪಡೆದ ಹಿರಿಯರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಡಿ.ಎಲ್. ಎನ್. ಕುಟುಂಬದ ಸದಸ್ಯರು ತಮ್ಮ ಬಾಂಧವ್ಯದ ನೋಟದಲ್ಲಿ ಡಿ.ಎಲ್. ಎನ್. ಅವರನ್ನು ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಡಿ.ಎಲ್. ಎನ್. ಅವರ ಸಾಹಿತ್ಯವನ್ನು ಕುರಿತು ಕನ್ನಡದ ಹಿರಿಯ ಮತ್ತು ಕಿರಿಯ ಸಂಶೋಧಕರು ಸೂಕ್ಷ್ಮ ಅವಲೋಕನದ ಲೇಖನಗಳನ್ನು ಬರೆದಿದ್ದಾರೆ. ಈ ಸಂಪುಟವನ್ನು ತಮ್ಮ ವಿಶಿಷ್ಟ ಲೇಖನಗಳ ಮೂಲಕ ಶ್ರೀಮಂತಗೊಳಿಸಿದ ಎಲ್ಲ ಲೇಖಕರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಹಿಂದೆ ಪ್ರಕಟವಾಗಿರುವ ಬೇರೆ ಬೇರೆ ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ಕೊಟ್ಟ ಎಲ್ಲರಿಗೂ ವಂದನೆಗಳು. ಈ ಸಂಪುಟವನ್ನು ಪರಿಶ್ರಮದ ಮತ್ತು ಪ್ರೀತಿಯಿಂದ ಸಂಪಾದನೆ ಮಾಡಿದ ನಮ್ಮ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮಖ್ಯಸ್ಥರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರ ಕಾಯಕವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಈ ಪುಸ್ತಕವನ್ನು ಅಚ್ಚುಕಟ್ಟಾಗಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕ ಡಾ. ಹಿ.ಚಿ. ಬೋರಲಿಂಗಯ್ಯ, ಸಹಾಯಕ ನಿರ್ದೇಶಕ ಬಿ. ಸುಜ್ಞಾನಮೂರ್ತಿ ಅವರಿಗೆ ಮತ್ತು ಕಲಾವಿದ ಕೆ.ಕೆ. ಮಕಾಳಿ ಅವರಿಗೆ ಅಭಿನಂದನೆಗಳು.

ಬಿ.ಎ.ವಿವೇಕ ರೈ
ಕುಲಪತಿ