ಕನ್ನಡ ಗ್ರಂಥ ಸಂಪಾದನೆಗೆ ಘನತೆ ಗೌರವಗಳನ್ನು ತಂದುಕೊಟ್ಟವರು ಡಿ.ಎಲ್‌.ನರಸಿಂಹಾಚಾರ್ಯರು. ಇವರು ಈ ಕ್ಷೇತ್ರಕ್ಕೆ ಆಗಮಿಸುವ ವೇಳೆಗಾಗಲೇ ಕನ್ನಡ ಗ್ರಂಥ ಸಂಪಾದನೆ ಸುಮಾರು ಒಂದು ಶತಮಾನ ಪ್ರಯಾಣ ಮಾಡಿ ಬಂದಿತ್ತು. ಡಿ.ಎಲ್‌.ಎನ್‌. ಅವರ ಗ್ರಂಥಸಂಪಾದನೆಯ ಮಹತ್ವ, ಆಳ, ಅಗಲ, ಪ್ರಭಾವ ಪರಿಣಾಮಗಳನ್ನು ಅರಿಯಬೇಕಾದರೆ ಅವರಿಗಿಂತ ಪೂರ್ವದಲ್ಲಿದ್ದ ಗ್ರಂಥಸಂಪಾದನೆಯ ಸ್ಥಿತಿಗತಿಗಳನ್ನು ಗಮನಿಸಬೇಕಾಗುತ್ತದೆ. ಈ ನೆಲೆಯಿಂದ ಕನ್ನಡ ಗ್ರಂಥಸಂಪಾದನೆಯಲ್ಲಿ ಸ್ಥೂಲವಾಗಿ ನಾಲ್ಕು ನೆಲೆಗಳನ್ನು ಗುರುತಿಸಬಹುದು.

೧. ಮಿಶನರಿಗಳ ಗ್ರಂಥಸಂಪಾದನೆ

೨. ದೇಶೀ ವಿದ್ವಾಂಸರ ಗ್ರಂಥಸಂಪಾದನೆ

೩. ಡಿ. ಎಲ್‌. ನರಸಿಂಹಾಚಾರ್ಯರ ಗ್ರಂಥಸಂಪಾದನೆ

೪. ಡಿ. ಎಲ್‌. ನರಸಿಂಹಾಚಾರ್ಯರ ತರುವಾಯದ ಗ್ರಂಥಸಂಪಾದನೆ

೧. ಮಿಶನರಿಗಳ ಗ್ರಂಥಸಂಪಾದನೆ

ಕನ್ನಡದ ಅನ್ಯಶಿಸ್ತುಗಳಂತೆ ಈ ಶಿಸ್ತಿನ ಆರಂಭದ ಬೇಸಾಯಗಾರರು ಕೂಡ ವಿದೇಶಿಯರೆ. ಕರ್ನಲ್‌ ಮೆಕೆಂಜಿ ಕ್ರಿ. ಶ. ೧೭೮೩ರಲ್ಲಿ ಭಾರತಕ್ಕೆ ಆಗಮಿಸಿ ೩೮ ವರ್ಷಗಳ ಕಾಲ ಭಾರತದಲ್ಲಿದ್ದಾಗ ಆ ಕಾಲದ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ನಿರೂಪಿಸುವ ೨೦೭೦ಕ್ಕೂ ಹೆಚ್ಚು ಕೈಫಿಯತ್ತುಗಳನ್ನು ಬರೆಸಿದರು, ೧೫೬೮ ಹಸ್ತಪ್ರತಿಗಳನ್ನು ಸಂಗ್ರಹಿಸಿದರು.[1] ಅನಂತರ ೧೮೩೬ರಲ್ಲಿ ಕರ್ನಾಟಕಕ್ಕೆ ಬಂದ ಹರ್ಮನ್‌ ಮೋಗ್ಲಿಂಗ್ ಬಿಬ್ಲಿಯಾಥಿಕಾ ಕರ್ನಾಟಿಕ ಮಾಲಿಕೆಯಲ್ಲಿ ಜೈಮಿನಿ ಭಾರತ (೧೮೪೮), ತೊರವೆರಾಮಾಯಣ (೧೮೪೯), ದಾಸರ ಪದಗಳು (೧೮೫೦) ಮೊದಲಾದ ಗ್ರಂಥಗಳನ್ನು ಪ್ರಕಟಿಸಿದರು. ಗ್ಯಾರೆಟ್‌ ಶಬ್ದಮಣಿದರ್ಪಣದ ಸಂಪಾದನೆ ಕೈಗೊಂಡು ಶಾಸ್ತ್ರ ಗ್ರಂಥದತ್ತ ಗಮನ ಸೆಳೆದರು. ಇದರ ಸಂಪಾದನೆಯ ಪರಿಮಿತಿಗಳನ್ನು ಗ್ರಹಿಸಿದ ಎಫ್‌. ಕಿಟ್ಟೆಲ್‌ಅವರು ವಿವಿಧ ಹಸ್ತಪ್ರತಿಗಳನ್ನಿಟ್ಟುಕೊಂಡು ೧೮೭೨ರಲ್ಲಿ ಶಬ್ದಮಣಿದರ್ಪಣವನ್ನು, ೧೮೭೫ರಲ್ಲಿ ಛಂದೋಬುಧಿಯನ್ನು ಪರಿಷ್ಕರಿಸುವ ಮೂಲಕ ಶಾಸ್ತ್ರೀಯ ಸಂಪಾದನೆಗೆ ಅಂಕುರಾರ್ಪಣ ಮಾಡಿದರು. ಬಿ. ಎಲ್‌. ರೈಸ್‌ಅವರು ಪ್ರಾಚ್ಯವಸ್ತು ಇಲಾಖೆಯ ಪ್ರಥಮ ನಿರ್ದೇಶಕರಾಗಿ ಸಂಗ್ರಹ, ಸಂಪಾದನೆ, ಪ್ರಕಟಣೆಗೆ ಚಾಲನೆ ನೀಡಿ ಅಮರಕೋಶ (೧೮೮೩), ಪಂಪರಾಮಾಯಣ (೧೮೮೨), ಕರ್ನಾಟಕ ಭಾಷಾಭೂಷಣ (೧೮೮೪), ಶಬ್ದಾನುಶಾಸನ (೧೮೯೦), ಪಂಪಭಾರತ (೧೮೯೮) ಈ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ವಿದೇಶೀ ವಿದ್ವಾಂಸರು ಶಾಸ್ತ್ರ ಗ್ರಂಥಗಳಿಗೆ ಆದ್ಯತೆ ನೀಡಿದರು.

೨. ದೇಶೀ ವಿದ್ವಾಂಸರ ಗ್ರಂಥಸಂಪಾದನೆ

ಇಂಗ್ಲಿಷ್‌ಶಿಕ್ಷಣ ಪಡೆದು ವಿದೇಶಿ ವಿದ್ವಾಂಸರ ಕಾರ್ಯವನ್ನು ಗಮನಿಸಿದ್ದ ದೇಶೀಯ ವಿದ್ವಾಂಸರು ಗ್ರಂಥಸಂಪಾದನೆಯಲ್ಲಿ ತೊಡಗಿಕೊಂಡರು. ಕವಿಚರಿತೆಕಾರರೆಂದು ಪ್ರಸಿದ್ಧಿ ಪಡೆದ ಆರ್‌. ನರಸಿಂಹಾಚಾರ್ಯರು ಮೈಸೂರಿನಿಂದ ಕಾವ್ಯಾವಲೋಕನ (೧೯೦೩), ಕರ್ನಾಟಕ ಭಾಷಾಭೂಷಣಗಳನ್ನು (೧೯೨೩) ಕೆ. ಬಿ. ಪಾಠಕರು ಕವಿರಾಜ ಮಾರ್ಗವನ್ನು ಸಂಪಾದಿಸಿಕೊಟ್ಟರು. ಎಂ. ಎ. ರಾಮಾನುಜಯ್ಯಂಗಾರ್‌ ಮತ್ತು ಎಸ್‌. ಜಿ. ನರಸಿಂಹಾಚಾರ್ಯರು ಸಂಯುಕ್ತವಾಗಿ ‘‘ಕರ್ನಾಟಕ ಕಾವ್ಯಮಂಜರಿ’’ ಹಾಗೂ ‘‘ಕರ್ನಾಟಕ ಕಾವ್ಯ ಕಲಾನಿಧಿ’’ ಮಾಲಿಕೆಗಳ ಮೂಲಕ ಮಲ್ಲಿನಾಥ ಪುರಾಣ, ಕಬ್ಬಿಗರ ಕಾವ್ಯ, ಚಿಕ್ಕದೇವರಾಜ ವಿಜಯಂ, ಲೀಲಾವತಿ ಪ್ರಬಂಧ ಮೊದಲಾದ ೭೫ ಕಾವ್ಯಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯ ಸಂಪತ್ತಿನ ದರ್ಶನ ಮಾಡಿಸಿದರು. ಈ ಸಂಪಾದನೆಗಳಲ್ಲಿ ಬಹುಹಸ್ತಪ್ರತಿಗಳ ಬಳಕೆ, ಸಂಕ್ಷಿಪ್ತ ಪೀಠಿಕೆ, ವಿರಳವಾಗಿ ಪಾಠಾಂತರಗಳನ್ನು ಅಡಿಟಿಪ್ಪಣಿಯಲ್ಲಿ ಸೂಚಿಸಿರುವುದು ಕಂಡುಬಂದರೂ ಗ್ರಂಥಸಂಪಾದನೆಯನ್ನು ಕುರಿತು ವಿವರಗಳು ಅಷ್ಟಾಗಿ ದಾಖಲಾಗಲಿಲ್ಲ. ಎನ್‌. ಆರ್‌. ಕರಿಬಸವಶಾಸ್ತ್ರಿಗಳು (೧೮೭೨-೧೯೨೩) ಗ್ರಂಥ ಪ್ರಕಾಶಿಕೆಯ ಮೂಲಕ ಸಿದ್ಧಾಂತ ಶಿಖಾಮಣಿ, ಪಂಡಿತಾರಾಧ್ಯ ಚರಿತೆ, ಸೌಂದರ ಪುರಾಣದಂಥ ಕೃತಿಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಪಿ. ಆರ್‌. ಕರಿಬಸವಶಾಸ್ತ್ರಿಗಳು (೧೮೪೬-೧೯೨೧) ‘‘ವೀರಶೈವ ಮತ ಪ್ರಕಾಶಿಕೆ’’ಯ ಆಶ್ರಯದಲ್ಲಿ ಜೈಮಿನಿಭಾರತ, ರಾಜಶೇಖರ ವಿಳಾಸ, ಶಬರಶಂಕರ ವಿಳಾಸ ಇತ್ಯಾದಿ ಕಾವ್ಯಗಳನ್ನು ಪ್ರಕಟಿಸಿದರು. ಈ ಸಂಪಾದನೆಗಳಲ್ಲಿ ಅತ್ತ ಸಂಪೂರ್ಣ ಮಿಶನರಿಗಳ ಮಾದರಿಯನ್ನಾಗಲಿ ಇತ್ತ ಜನಪ್ರಿಯ ಆವೃತ್ತಿಗಳನ್ನಾಗಲಿ ಅನುಸರಿಸದೆ ತಮ್ಮದೇ ಅನುಭವಗಳ ಬೆಂಬಲದಿಂದ ಪರಿಷ್ಕರಿಸಿದರೂ ಉತ್ತಮ ಪಾಠಗಳನ್ನೇ ಕೊಡಲೆತ್ನಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಫ. ಗು. ಹಳಕಟ್ಟಿಯವರು ವಿಶೇಷವಾಗಿ ವಚನಸಾಹಿತ್ಯ ಶೋಧದ ಮೂಲಕ ಹಲವಾರು ಶರಣರ ವಚನಗಳನ್ನು ಬೆಳಕಿಗೆ ತಂದರು. ಇವರು ಮಾಡಿದ ಕಾರ್ಯ ಅಮೋಘವಾದರೂ ವಚನ ಸಾಹಿತ್ಯ ಸಂಪಾದನೆಯ ಸೈದ್ಧಾಂತಿಕತೆಯನ್ನು ಕುರಿತಂತೆ ಬರೆಯುವ ಉದ್ದೇಶ ಹೊಂದಿರಲಿಲ್ಲ. ಚನ್ನಪ್ಪ ಉತ್ತಂಗಿಯವರು ೧೯೨೪ರಲ್ಲಿ ಸರ್ವಜ್ಞನ ವಚನಗಳನ್ನು ಪರಿಷ್ಕರಿಸಿ ಅದರ ಸಾಧಕ ಬಾಧಕಗಳನ್ನು ನಿರೂಪಿಸಿದರು. ಶಿ. ಶಿ. ಬಸವನಾಳರು ೧೯೩೪ರಲ್ಲಿ ಚನ್ನಬಸವಪುರಾಣ, ಬಸವಣ್ಣನವರ ವಚನಗಳು ಎಂಬ ಕೃತಿಗಳನ್ನು ದೀರ್ಘ ಪೀಠಿಕೆಯೊಡನೆ, ಪರಿಷ್ಕರಣಕ್ಕೆ ಸಂಬಂಧಿಸಿದಂತೆ ವಿಚಾರಗಳೊಡನೆ ದಾಖಲಿಸುವುದರೊಂದಿಗೆ ಪ್ರಕಟಿಸಿದರು.

ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಎ. ವೆಂಕಟರಾವ್‌ ಮತ್ತು ಎಚ್‌. ಶೇಷಯ್ಯಂಗಾರ್ಯರು ೧೯೨೯-೧೯೪೦ರ ಅವಧಿಯಲ್ಲಿ ರಸರತ್ನಾಕರ, ಕವಿರಾಜಮಾರ್ಗ, ಪುಷ್ಪದಂತ ಪುರಾಣ, ಖಗೇಂದ್ರಮಣಿ ದರ್ಪಣ ಇತ್ಯಾದಿ ೯ ಗ್ರಂಥಗಳನ್ನು ಸಂಪಾದಿಸಿ ಅಪ್ರಕಟಿತ ಕೃತಿಗಳನ್ನು ಬೆಳಕಿಗೆ ತಂದರು. ಮದ್ರಾಸ್‌(ಚೆನ್ನೈ)ನಿಂದ ಎಂ. ಮರಿಯಪ್ಪ ಭಟ್ಟರು ಡಿ. ಎಲ್‌. ನರಸಿಂಹಾಚಾರ್ಯರ ಸಮಕಾಲೀನರಾಗಿಯೇ ಇದ್ದು ವರ್ಧಮಾನ ಪುರಾಣ, ಖಗೇಂದ್ರ ಮಣಿದರ್ಪಣ ಮುಂತಾದ ೧೦ ಗ್ರಂಥಗಳನ್ನು ಸಂಪಾದಿಸಿಕೊಟ್ಟರು. ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎ. ಶಾಂತಿರಾಜಶಾಸ್ತ್ರಿಗಳು ೭ಕ್ಕೂ ಹೆಚ್ಚು ತಾಳೆಗರಿಯಲ್ಲಿದ್ದ ಗ್ರಂಥಗಳನ್ನು ಪರಿಷ್ಕರಿಸಿದರು. ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಗೋರೆಬಾಳ ಹನುಮಂತರಾಯರು ೭೪ಕ್ಕೂ ಹೆಚ್ಚು ಗ್ರಂಥಗಳನ್ನು ಹೊರತಂದರು. ಇವರ ಸಂಪಾದನೆಯಲ್ಲಿ ಪ್ರಚಾರದ ಉದ್ದೇಶವಿದ್ದುದರಿಂದ ದಾಸಸಾಹಿತ್ಯದ ಶಾಸ್ತ್ರೀಯ ಸಂಪಾದನೆಯ ಕಡೆಗೆ ಅಷ್ಟಾಗಿ ಲಕ್ಷ್ಯ ನೀಡಲಿಲ್ಲ. ಹೀಗೆ ಇನ್ನೂ ಅನೇಕ ವಿದ್ವಾಂಸರು ಗ್ರಂಥ ಸಂಪಾದನೆಯಲ್ಲಿ ಉತ್ಸುಕತೆಯಿಂದ ಕಾರ್ಯಪ್ರವೃತ್ತರಾಗಿದ್ದರೂ ಈ ಕಾಲದಲ್ಲಿ ನಡೆದ ಪರಿಷ್ಕರಣದಲ್ಲಿ ಏಕಸೂತ್ರತೆಯಾಗಲಿ ಇದೊಂದು ಪ್ರತ್ಯೇಕ ಶಿಸ್ತು ಎಂಬುದನ್ನು ಪ್ರತಿಪಾದಿಸುವುದಾಗಲಿ ಕಂಡುಬರುವುದಿಲ್ಲ. ಇವರು ಮಾಡಿದ ಕಾರ್ಯ ಉನ್ನತವಾಗಿತ್ತಾದರೂ ಇದನ್ನು ಶಾಸ್ತ್ರವಾಗಿ ಬೆಳೆಸುವುದರ ಬಗೆ ಚಿಂತಿಸಲಿಲ್ಲ. ಕನ್ನಡ ಗ್ರಂಥ ಸಂಪಾದನೆಯ ಈ ಘಟ್ಟದಲ್ಲಿ ಹಳಗನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದವರು ಡಿ. ಎಲ್‌. ನರಸಿಂಹಾಚಾರ್ಯರು.

೩. ಡಿ. ಎಲ್‌. ನರಸಿಂಹಾಚಾರ್ಯರ ಗ್ರಂಥಸಂಪಾದನೆ

ಡಿ.ಎಲ್‌.ಎನ್‌. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ನೇಮಕಗೊಳ್ಳುವ ಮೊದಲು ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ರೆಸಿಡೆಂಟ್‌ ಕನ್ನಡ ಪಂಡಿತರಾಗಿ ೧೯೩೦ರಲ್ಲಿ ನೇಮಕಗೊಂಡಿದ್ದರು. ಪ್ರಾಚೀನ ಕನ್ನಡ ಸಾಹಿತ್ಯದ ಮೇಲೆ ಅಪಾರ ಕಾಳಜಿ ಹೊಂದಿದ್ದ ಅವರಿಗೆ ಅಲ್ಲಿ ಕನ್ನಡ ಸಾಹಿತ್ಯವನ್ನು ಹುದುಗಿಸಿಕೊಂಡಿದ್ದ ಹಸ್ತಪ್ರತಿಗಳೊಂದಿಗೆ ಒಡನಾಟ ಇನ್ನೂ ನಿಟಕವಾಯಿತು. ಮುಂದೆ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿದ ಸಂದರ್ಭದಲ್ಲಿಯೂ ಗ್ರಂಥಸಂಪಾದನೆ, ಸಂಶೋಧನೆಯಲ್ಲಿ ಆಸಕ್ತಿ ಕಳೆದುಕೊಳ್ಳಲಿಲ್ಲ. ಟಿ. ಎಸ್‌. ವೆಂಕಣ್ಣಯ್ಯ, ಎ. ಆರ್‌. ಕೃಷ್ಣಶಾಸ್ತ್ರಿ, ಬಿ. ಎಂ. ಶ್ರೀಯವರಂಥ ಗುರುವೃಂದದವರು ಇವರ ಸಂಶೋಧನ ಆಸಕ್ತಿಯನ್ನು ಪೋಷಿಸಿ ಬೆಳೆಸಿದರು. ಹಾಗಾಗಿ ಅಧ್ಯಯನ ಅಧ್ಯಾಪನದ ಜೊತೆಗೆ ಗ್ರಂಥಸಂಪಾದನೆಯಲ್ಲಿಯೂ ಗಂಭೀರವಾಗಿ ತೊಡಗಿಸಿಕೊಂಡರು. ಇವರು ಸಂಪಾದಿಸಿದ ಗ್ರಂಥಗಳು ಹೀಗಿವೆ. ಸಕಲ ವೈದ್ಯಸಂಹಿತಾಸಾರಾರ್ಣವಂ ಸಂಪುಟ-೧ (೧೯೩೨), ಕರ್ನಾಟಕ ಮಹಾಭಾರತ ಭೀಷ್ಮಪರ್ವ (೧೯೩೩), ಪಂಪ ರಾಮಾಯಣ ಸಂಗ್ರಹ (೧೯೩೬), ಸಿದ್ಧರಾಮ ಚಾರಿತ್ರ (೧೯೪೧), ವಡ್ಡಾರಾಧನೆ (೧೯೪೯), ಸಿದ್ಧರಾಮ ಚರಿತೆಯ ಸಂಗ್ರಹ (೧೯೫೧), ಸುಕುಮಾರ ಚರಿತಂ (೧೯೫೪), ಶಬ್ದಮಣಿದರ್ಪಣಂ (೧೯೫೯), ಗೋವಿನ ಹಾಡು (೧೯೬೦) ಈ ಗ್ರಂಥಗಳನ್ನು ಸಂಪಾದಿಸಿದ ಬಳಿಕ ಈ ಶಾಸ್ತ್ರವನ್ನು ಕುರಿತು ಕನ್ನಡ ಗ್ರಂಥಸಂಪಾದನೆ ಕೃತಿಯನ್ನು ೧೯೬೪ರಲ್ಲಿ ರಚಿಸಿ ಹೊಸ ಶಕೆಗೆ ನಾಂದಿ ಹಾಡಿದರು.

ಸಕಲವೈದ್ಯ ಸಂಹಿತಾಸಾರಾರ್ಣವಂ ಮತ್ತು ಕರ್ನಾಟಕ ಮಹಾಭಾರತ ಭೀಷ್ಮ ಪರ್ವ ಗ್ರಂಥಗಳನ್ನು ಡಿ.ಎಲ್‌.ಎನ್‌. ಅವರು ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿದ್ದಾಗ ಪ್ರಕಟಿಸಿದರು. ಇವು ಅವರ ಆರಂಭದ ಕೃತಿಗಳಾದ ಕಾರಣವೊ ಏನೋ ಪಾಠಪರಿಷ್ಕರಣದಲ್ಲಿ ಉತ್ತಮಿಕೆ ಕಂಡುಬಂದರೂ ಸಂಕ್ಷಿಪ್ತ ಪೀಠಿಕೆಯನ್ನು ಬರೆದಿದ್ದಾರೆ. ಭೀಷ್ಮ ಪರ್ವದ ಸಂಪಾದನೆಯು ಕುಮಾರವ್ಯಾಸ ಭಾರತದ ಇತರ ಪರ್ವಗಳ ಸಂದರ್ಭದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಯಾವ ಮಾದರಿಯನ್ನು ಅಳವಡಿಸಲಾಗಿತ್ತೋ ಅದೇ ಮಾದರಿಯ ಪ್ರತಿರೂಪವಾಗಿದೆ.

ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್‌ ಅವರ ಸಹ ಸಂಪಾದಕತ್ವದಲ್ಲಿ ಡಿ.ಎಲ್‌.ಎನ್‌. ಅವರು ಪಂಪರಾಮಾಯಣ ಸಂಗ್ರಹವನ್ನು ತಂದರು. ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೂ ಪಾಠಪರಿಷ್ಕರಣೆ, ಪೀಠಿಕೆಗಳು ವಿದ್ವತ್ಪೂರ್ಣವಾಗಿದ್ದವು. ಈ ಕೃತಿಯನ್ನು ಕುರಿತು ಮೌಲಿಕ ವಿಮರ್ಶೆಯಾಗಿಯೂ ಪೀಠಿಕಾಭಾಗ ಹೊರಹೊಮ್ಮಿತ್ತು.

ಸಿದ್ಧರಾಮ ಚಾರಿತ್ರವನ್ನು ಟಿ. ಎಸ್‌. ವೆಂಕಣ್ಣಯ್ಯನವರ ಜೊತೆಗೂಡಿ ಸಂಪಾದಿಸಲಾಗಿದೆ. ನಾಲ್ಕು ಪ್ರತಿಗಳನ್ನು ಆಧರಿಸಿದ ಈ ಪರಿಷ್ಕರಣದಲ್ಲಿ ಪ್ರತಿಗಳ ಸ್ವರೂಪ ಮತ್ತು ಪಾಠ ಶೋಧದ ವಿಚಾರ ದೀರ್ಘವಾಗಿಯೇ ಮಂಡಿತವಾಗಿದೆ. ಇದು ಆ ಕಾಲಕ್ಕೆ ವಿರಳವಾದ ವಿಚಾರ. ಸುದೀರ್ಘವಾದ ಪೀಠಿಕೆಯಲ್ಲಿ ಸಿದ್ಧರಾಮನ ವ್ಯಕ್ತಿತ್ವ ಮತ್ತು ಆತನನ್ನು ಕುರಿತ ಸಾಹಿತ್ಯದ ಬಗ್ಗೆ ವಿಪುಲವಾದ ಮಾಹಿತಿಯಿದೆ. ಈ ಭಾಗದಲ್ಲಿ ಚರ್ಚಿತವಾದ ಸಿದ್ಧರಾಮನ ದೀಕ್ಷಾ ಪ್ರಸಂಗದ ಅಂಶಗಳು ವಾದ ವಿವಾದಕ್ಕೆ ಗ್ರಾಸವಾಗಿತ್ತು.

ಡಿ.ಎಲ್‌.ಎನ್‌. ಅವರಿಗೆ ಅಪಾರವಾದ ಕೀರ್ತಿ ತಂದುಕೊಟ್ಟ ಸಂಪಾದಿತ ಕೃತಿಗಳಲ್ಲಿ ವಡ್ಡಾರಾಧನೆಯೂ ಒಂದು. ಕಥಾ ಸಾಹಿತ್ಯವಾದುದರಿಂದ ಹೇರಳ ಪಾಠಾಂತರಕ್ಕೆ ಅವಕಾಶವಾದ ಈ ಕೃತಿಯ ಸಂಪಾದನೆ ವಿದ್ವತ್ತಿಗೊಂಡು ಸವಾಲು. ಸೂಕ್ತಪಾಠಗಳ ಆಯ್ಕೆ, ಪಾಂಡಿತ್ಯಪೂರ್ಣವಾದ ಪೀಠಿಕೆ, ವಿಸ್ತೃತವಾದ ಟಿಪ್ಪಣಿ ಶಬ್ದಕೋಶಗಳು ಈ ಕೃತಿಗೆ ಆದರ್ಶ ಗ್ರಂಥಸಂಪಾದನೆಯ ಘನತೆ ನೀಡಿವೆ. ಹಸ್ತಪ್ರತಿಗಳ ಸ್ವರೂಪವನ್ನು ದೀರ್ಘವಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ. ಗ್ರಂಥಸಂಪಾದನ ಶಾಸ್ತ್ರಕಾರನೊಬ್ಬ ಡಿ.ಎಲ್‌.ಎನ್‌. ಅವರಲ್ಲಿ ರೂಪುತಳೆಯುತ್ತಿರುವ ಸೂಚನೆ ಪೀಠಿಕೆಯಲ್ಲಿ ದೊರೆಯುತ್ತದೆ.

ಡಿ.ಎಲ್‌.ಎನ್‌. ಅವರು ಸುಕುಮಾರ ಚರಿತಂ ಪರಿಷ್ಕರಣದಲ್ಲಿಯೂ ಹಿಂದಿನ ಕೃತಿಗಳ ಸಂಪಾದನ ವಿಧಿ ವಿಧಾನವನ್ನು ಅನುಸರಿಸಿದ್ದಾರೆ. ಎರಡು ಹಸ್ತಪ್ರತಿಗಳನ್ನು ಆಧರಿಸಿ, ಭಿನ್ನ ಪಾಠಗಳನ್ನು ಗುರುತಿಸಿ, ಪಾಠಾಂತರಗಳನ್ನು ನೀಡಿ, ಸೂಕ್ತ ಪಾಠಗಳನ್ನು ಸ್ವೀಕರಿಸಿ, ಅಭ್ಯಾಸಪೂರ್ಣ ಪೀಠಿಕೆಯನ್ನು ಒದಗಿಸಲಾಗಿದೆ. ಶಬ್ದಮಣಿದರ್ಪಣಂ ಸಂಪಾದನೆಯಲ್ಲಿಯೂ ಡಿ.ಎಲ್‌.ಎನ್‌. ಪೂರ್ವದ ಪರಿಷ್ಕರಣಗಳಿಗಿಂತ ಉತ್ತಮಿಕೆಯನ್ನು ಸಾಧಿಸಿದರು. ಇದು ವಿದ್ವತ್‌ ವಲಯದ ಮನ್ನಣೆಗೆ ಪಾತ್ರವಾಗಿ, ಹಲವು ವರ್ಷಗಳವರೆಗೆ ಪಠ್ಯವಾಗಿ, ಅನೇಕ ಪೀಳಿಗೆಯವರು ಓದಲು ಸಾಧ್ಯವಾಯಿತು. ಡಿ.ಎಲ್‌.ಎನ್‌. ಗಂಭೀರ ಕೃತಿಗಳನ್ನಲ್ಲದೆ ಗೋವಿನ ಹಾಡಿನಂಥ ಜನಪ್ರಿಯ ಹಾಡನ್ನೂ ಸಂಪಾದಿಸಿರುವುದು ಕೌತುಕದ ಸಂಗತಿಯಾಗಿದೆ. ಇಲ್ಲಿಯೂ ಇವರು ತೋರಿರುವ ವಿಚಕ್ಷಣೆಗೆ ಒಂದು ಉದಾಹರಣೆ- ‘‘“ಮುದದಿ ತಿಲಕವ ಪಣೆಯೊಳಿಟ್ಟು ಚದುರಶಿಖೆಯನು ಹಾಕಿದ” ಎಂಬ ಪಾಠ ಚಲಾವಣೆಯಲ್ಲಿತ್ತು. ಇದರಲ್ಲಿ ಬರುವ ‘‘ಚದುರಶಿಖೆ’’ ಎಂಬ ಪಾಠದಲ್ಲಿ ಸಮಸ್ಯೆ ಇರುವುದನ್ನು ಕಂಡುಕೊಂಡ ಡಿ.ಎಲ್‌.ಎನ್‌. ಅವರು ಸಂಸ್ಕೃತದ ‘‘ಚತುರಶ್ರಕ’’ ಎಂಬ ಶಬ್ದವನ್ನಾಧರಿಸಿ ಚೌಕ, ವಲ್ಲಿ ಎಂದು ಅರ್ಥೈಸಿದರು. ಚದುರಸಿಕೆ ಎಂಬುದು ಚತುರಶ್ರಕದ ರೂಪಾಂತರವೆಂದು ಗ್ರಹಿಸಿ “ಮದನತಿಲಕವನಿಟ್ಟು ಪಣೆಯೊಳು ಚದುರಸಿಕೆಯನು ಹಾಕಿದ” ಎಂದು ಪರಿಷ್ಕರಿಸಿದರು. ಹೀಗೆ ತಮ್ಮ ಕೃತಿಗಳಲ್ಲಿ ಉತ್ಕೃಷ್ಟ ಸಂಪಾದನೆಯ ಮಾದರಿಗಳನ್ನು ನೀಡಿದರು.

ಈ ಎಲ್ಲ ಸಂಪಾದಿತ ಕೃತಿಗಳಿಗೆ ಕಲಶವಿಟ್ಟಂತೆ ೧೯೬೪ರಲ್ಲಿ ‘‘ಕನ್ನಡ ಗ್ರಂಥಸಂಪಾದನೆ’’ ಹೊತ್ತಿಗೆಯನ್ನು ರಚಿಸಿದ್ದು ಒಂದು ಅನುಪಮ ಘಟನೆ. ತೀ.ನಂ.ಶ್ರೀ ಮತ್ತು ಡಿ.ಎಲ್‌.ಎನ್‌. ಅವರ ಪ್ರಯತ್ನದಿಂದ ೧೯೬೨ರಲ್ಲಿ ಗ್ರಂಥಸಂಪಾದನೆಯು ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ ಬೋಧನ ವಿಷಯವಾದದ್ದು ಕೂಡ ಮಹತ್ವದ ಅಂಶವಾಯಿತು. ಈ ಅಂಶ ಕೃತಿ ರಚನೆಗೆ ಪ್ರೇರಣೆ ನೀಡಿತು. ಹನ್ನೆರಡು ಅಧ್ಯಾಯಗಳಲ್ಲಿ ತೆರೆದುಕೊಳ್ಳುವ ಪ್ರಸ್ತುತ ಕೃತಿ ಗ್ರಂಥಸಂಪಾದನ ಚರಿತ್ರೆ. ಲೇಖನ ಸಾಮಗ್ರಿ, ಲಿಪಿಕಾರರು, ಪಾಠಾಂತರ – ಸಂಕಲನ, ಸ್ಖಾಲಿತ್ಯಗಳು, ಹಸ್ತಪ್ರತಿ ಸಂಬಂಧಗಳು, ಪಾಠ ಪರಿಷ್ಕರಣ, ಮುದ್ರಿತ ಗ್ರಂಥಗಳ ಸ್ವರೂಪ ಇವೇ ಮುಂತಾದ ವಿಷಯಗಳನ್ನು ವ್ಯವಸ್ಥಿತವಾಗಿ, ನೇರವಾಗಿ, ಖಚಿತವಾಗಿ ನಿರೂಪಿಸುತ್ತ ಗ್ರಂಥಸಂಪಾದನ ಶಾಸ್ತ್ರವನ್ನು ಕನ್ನಡಿಗರಿಗೆ ಮನಗಾಣಿಸಿತು. ಇದು ಕನ್ನಡ ಗ್ರಂಥಸಂಪಾದನೆಗೆ ಸೈದ್ಧಾಂತಿಕ ಚೌಕಟ್ಟು ಒದಗಿಸಿತು. ಮುಂದಿನ ದಿಕ್ಕು ದಿಸೆಗಳನ್ನು ತೋರಿಸಿಕೊಟ್ಟಿತು. ಇವರ ಸಹೋದ್ಯೋಗಿಯಾಗಿದ್ದ ತೀನಂಶ್ರೀಯವರು ನಂಬಿಯಣ್ಣನ ರಗಳೆಯನ್ನು ಉಪಲಬ್ಧ ಪ್ರತಿಗಳೆಲ್ಲವನ್ನು ಆಧಾರವಾಗಿಟ್ಟುಕೊಂಡು ಪರಿಷ್ಕರಿಸಿದರು. ಇದರ ಪೀಠಿಕೆಯಲ್ಲಿ ಸಂಪಾದಕರು- “ಗ್ರಂಥಸಂಪಾದನ ಕಾರ್ಯವು ಈಗ ಒಂದು ಖಚಿತವಾದ ಶಾಸ್ತ್ರವಾಗಿ ಪರಿಣಮಿಸಿದೆ. ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ ಮೂಲಪಾಠವನ್ನು ಬಲುಮಟ್ಟಿಗೆ ಶುದ್ಧವಾಗಿ ನಿರ್ಣಯಿಸುವುದು ಸಾಧ್ಯ. ನಂಬಿಯಣ್ಣನ ರಗಳೆಯಂತೂ ಈ ಶಾಸ್ತ್ರ ಪದ್ಧತಿಯ ಅನೇಕ ಸೂಕ್ಷಾಂಶಗಳಿಗೆ ಒಳ್ಳೆಯ ನಿದರ್ಶನಗಳನ್ನು ಒದಗಿಸಿಕೊಡುತ್ತದೆ” ಎಂದಿದ್ದಾರೆ. ಎ. ಆರ್‌. ಕೃಷ್ಣಶಾಸ್ತ್ರಿಗಳು, ಎನ್‌. ಅನಂತರಂಗಾಚಾರ್‌, ಎಂ. ಆರ್‌. ಶ್ರೀ ಮೊದಲಾದವರು ಕೆಳದಿನೃಪವಿಜಯ, ಧರ್ಮಾಮೃತ, ಕವಿಜಿಹ್ವಾಬಂಧನ, ಸೂಕ್ತಿ ಸುಧಾರ್ಣವ, ಪ್ರಭುಲಿಂಗಲೀಲೆ ಮೊದಲಾದ ಕೃತಿಗಳನ್ನು ಪರಿಷ್ಕರಿಸಿದರು. ಮೈಸೂರು ಭಾಗದಲ್ಲಿ ಡಿ.ಎಲ್‌.ಎನ್‌. ಶಿಷ್ಯ ವೃಂದವು ಅತ್ಯಂತ ಉಮೇದಿನಿಂದ ಕೆಲಸ ಮಾಡಿತು. ಇಂದಿಗೂ ಈ ಭಾಗದಲ್ಲಿ ಡಿ.ಎಲ್.ಎನ್‌ ಅವರ ಸಿದ್ಧಾಂತಗಳೇ ಚಾಲ್ತಿಯಲ್ಲಿವೆ.

ಡಿ. ಎಲ್‌. ನರಸಿಂಹಾಚಾರ್ಯರ ತರುವಾಯದ ಗ್ರಂಥಸಂಪಾದನೆ

ಡಿ.ಎಲ್‌.ಎನ್‌. ತರುವಾಯದಲ್ಲಿ ವಚನ ಸಾಹಿತ್ಯ ಸಂಪಾದನೆ ಅದ್ವಿತೀಯವಾಗಿ ಜರುಗಿತು. ಇವರು ತಮ್ಮ ಕೃತಿಯನ್ನು ವಚನ ಸಾಹಿತ್ಯ ಪರಿಷ್ಕರಣ ಕುರಿತು ಹೆಚ್ಚು ಚರ್ಚಿಸಲಿಲ್ಲ ಹಾಗೂ ವಚನ ಗ್ರಂಥಗಳನ್ನು ಸಂಪಾದನೆಗೂ ತೆಗೆದುಕೊಳ್ಳಲಿಲ್ಲ. ಇದಕ್ಕೆ ಒಂದು ಕಾರಣ ಕರ್ನಾಟಕವು ಉತ್ತರ ಮತ್ತು ದಕ್ಷಿಣ ಎಂದು ಸಾಂಸ್ಕೃತಿಕವಾಗಿ ಎರಡು ಭಾಗವಾಗಿದ್ದುದು. ಮತ್ತೊಂದು ನಮ್ಮ ಹಿರಿಯ ವಿದ್ವಾಂಸರು ವಚನಗಳನ್ನು ಒಂದು ಸಾಹಿತ್ಯ ಪ್ರಕಾರವಾಗಿ ತಡವಾಗಿ ಗುರುತಿಸಿದ್ದು. ರಸ ಮತ್ತು ವರ್ಣನೆಗಳಿಲ್ಲದ ಆಶ್ವಾಸ ಅಧ್ಯಾಯಗಳಿಲ್ಲದ ಸ್ವತಂತ್ರ ಘಟಕಗಳಾದ ವಚನಗಳನ್ನು ರಸಸಿದ್ಧಾಂತದ ನೆಲೆಯಿಂದಲೇ ಪರಿಭಾವಿಸ ಹೊರಟ ಗೊಂದಲಗಳಿದ್ದವು. ಹೀಗಾಗಿ ಮೈಸೂರು ಭಾಗದಲ್ಲಿ ಡಿ.ಎಲ್‌.ಎನ್‌. ಅವರ ಕಾಲದಲ್ಲಿ ವಚನ ಸಾಹಿತ್ಯ ಶೋಧ ಹಿನ್ನಡೆಯಲ್ಲಿತ್ತು. ಆದರೆ ಅನಂತರದಲ್ಲಿ ಅಲ್ಲಮನ ವಚನ ಚಂದ್ರಿಕೆ, ಬಸವಣ್ಣನವರ ವಚನಗಳು, ಅಕ್ಕಮಹಾದೇವಿಯವರ ವಚನಗಳು ಮೊದಲಾದ ಕೃತಿಗಳು ಬಹು ಹಸ್ತಪ್ರತಿಗಳನ್ನಾಧರಿಸಿ ಪರಿಷ್ಕಾರಗೊಂಡು ಹೊರಬಂದವು. ಈ ಕೃತಿಗಳಿಗೆ ನೀಡಿರುವ ಟಿಪ್ಪಣಿಗಳು ಸೂಚಿಗಳು ಬಹುಮೌಲ್ಯಯುತವಾಗಿವೆ. ದೇವರ ದಾಸಿಮಯ್ಯನ ವಚನಗಳಲ್ಲಿ ಜೇಡರ ದಾಸಿಮಯ್ಯ, ಮುದನೂರು ದಾಸಿಮಯ್ಯ, ದೇವರ ದಾಸಿಮಯ್ಯ ಮೂವರೂ ಅಭಿನ್ನರೆಂಬ ಅಂಶ ಹೊರಬಂದಿತು.

ಉತ್ತರ ಕರ್ನಾಟಕದಲ್ಲಿ ಹಳಕಟ್ಟಿಯವರ ಬಳಿಕ ವಚನ ಗ್ರಂಥಗಳ ಸಂಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಕೀರ್ತಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಚನ್ನಬಸವಣ್ಣನವರ ವಚನಗಳು, ಶಿವಶರಣೆಯರ ವಚನಗಳು, ಸಕಲ ಪುರಾತನರ ವಚನಗಳು, ಸಕಲ ಪುರಾತನರ ಬೆಡಗಿನ ವಚನಗಳು ಮೊದಲಾದ ಗ್ರಂಥಗಳು ಸಾಕಷ್ಟು ಪರಿಶ್ರಮದಿಂದ ಸಂಪಾದಿಸಿದವು. ಇಲ್ಲಿಯ ಗ್ರಂಥಸಂಪಾದನೆಯ ವೈಧಾನಿಕತೆ ವಿಭಿನ್ನವಾಗಿತ್ತು. ಆಕರಗಳ ದೀರ್ಘವಿವರಗಳು ದೊರೆಯುತ್ತವೆ. ಲಿಂಗಚಿದಮೃತಬೋಧೆ, ವಿಶೇಷಾನುಭವ ಷಟ್ಸ್ಥಲ ಮೊದಲಾದ ಸಂಕಲನ ಗ್ರಂಥಗಳು ಪ್ರಕಟಗೊಂಡವು. ಪೇಟೆ ಆವೃತ್ತಿಗಳನ್ನು ಕಂಡಿದ್ದ ಅನೇಕ ವೀರಶೈವ ಕಾವ್ಯಗಳು ಶಾಸ್ತ್ರೀಯವಾಗಿ ಮರುಪರಿಷ್ಕರಣಕ್ಕೊಳಗಾದವು. ಈ ನಿಟ್ಟಿನಲ್ಲಿ ರಾಜಶೇಖರವಿಳಾಸ, ಬಸವರಾಜವಿಜಯಂ, ಪದ್ಮರಾಜ ಪುರಾಣ, ಸೋಮನಾಥ ಚಾರಿತ್ರ ಮುಂತಾದ ಕೃತಿಗಳ ದೊಡ್ಡಪಟ್ಟಿಯೇ ಇದೆ. ಪಾಠಾಂತರ ಸಂಕಲನ, ಸುದೀರ್ಘ ಪೀಠಿಕೆ ಈ ಆವೃತ್ತಿಗಳ ವಿಶೇಷ.

ಶೂನ್ಯ ಸಂಪಾದನೆಗಳೆಲ್ಲವೂ ಪರಿಷ್ಕಾರಗೊಂಡು ಪ್ರಕಟವಾಗಿದ್ದು ಉಲ್ಲೇಖಾರ್ಹ. ಇವು ವೀರಶೈವ ಸಂಶೋಧನೆಗೆ ಅಮೂಲ್ಯ ಆಕರ ನೀಡಿದವು. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಬಸವೇಶ್ವರ ಪುರಾಣದ ಕಥಾಸಾಗರ ಪರಿಷ್ಕರಣೆಗಳು ವೀರಶೈವ ಗದ್ಯಕ್ಕೆ, ಚಾವುಂಡರಾಯ ಪುರಾಣ ರಾಜಾವಳಿ ಕಥಾಸಾರಗಳು ಜೈನಗದ್ಯಕ್ಕೆ, ಕರ್ನಾಟಕದ ಕೈಫಿಯತ್ತುಗಳು ಚಾರಿತ್ರಿಕ ಗದ್ಯಗ್ರಂಥಕ್ಕೆ ನಿದರ್ಶನವಾಗಿದ್ದು ವಿದ್ವಾಂಸರ ಪರಿಶ್ರಮದಿಂದ ಬೆಳಕು ಕಂಡವು.

ಡಿ.ಎಲ್‌.ಎನ್‌. ಪರಂಪರೆಯಲ್ಲಿ ಬಂದ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಪಾದನ ವಿಭಾಗದಿಂದ ಸೂಪಶಾಸ್ತ್ರ, ಜಾತಕ ತಿಲಕ, ನೇಮಿನಾಥ ಪುರಾಣ, ವರ್ಧಮಾನಪುರಾಣ, ಹಾಲಾಸ್ಯಪುರಾಣ, ಜೀವಂಧರ ಚರಿತೆ, ಸಹ್ಯಾದ್ರಿಖಂಡ, ಬತ್ತೀಸಪುತ್ತಳಿ ಕಥೆ, ಶಿವತತ್ತ್ವ ಚಿಂತಾಮಣಿ, ಆದಿಪರ್ವ, ಸೌಂದರ್ಯಕಾವ್ಯ ಇತ್ಯಾದಿ ಸುಮಾರು ೧೩೦ ವೈವಿಧ್ಯಮಯವಾದ ಗ್ರಂಥಗಳು ಶಾಸ್ತ್ರೀಯ ರೀತಿಯಲ್ಲಿ ಸಂಪಾದಿತವಾಗಿ ಪ್ರಕಟಗೊಂಡವು. ಕಾವ್ಯ ಗ್ರಂಥಗಳ ಸಂಪಾದನೆಗೆ ಉತ್ತಮ ಕೊಡುಗೆಗಳಾದವು. ದಾಸಸಾಹಿತ್ಯ ಸಂಪಾದನೆ ಶಾಸ್ತ್ರೀಯತೆಯನ್ನು ಪಡೆದುಕೊಂಡಿತು. ಬಹು ಆಕರಗಳನ್ನು ಬಳಸಿಕೊಂಡು ಶ್ರೀಪಾದರಾಜರು, ಜಗನ್ನಾಥದಾಸರು, ವಾದಿರಾಜರು, ಗೋಪಾಲದಾಸರು, ವ್ಯಾಸರಾಯರು, ಹರಪನಹಳ್ಳಿ ಭೀಮವ್ವ, ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರ ಕೀರ್ತನೆಗಳು ಪ್ರತ್ಯೇಕ ಸಂಪುಟಗಳಲ್ಲಿ ಶಾಸ್ತ್ರೀಯವಾಗಿ ಪರಿಷ್ಕಾರಗೊಂಡು ಹೊರಬಂದವು. ಇವುಗಳ ಪ್ರಕಟಣೆಯಿಂದ ಕೀರ್ತನೆಗಳ ಕರ್ತೃತ್ವ ನಿರ್ದಿಷ್ಟವಾಯಿತು.

ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಧಾರವಾಡ ವಚನ ಸಂಪಾದನೆಗೆ ‘‘ಕಲ್ಯಾಣ’’ವೆನಿಸಿತು. ವಚನ ಸಂಪಾದನೆಯಲ್ಲಿ ಬಹುಹಸ್ತಪ್ರತಿಗಳನ್ನು ಬಳಸಿಕೊಂಡು ನಡೆಸುವ ಸಂಪಾದನ ಕಾರ್ಯದ ತೊಡಕುಗಳನ್ನು ಕಂಡುಕೊಂಡು ಭಿನ್ನವಾದ ವೈಧಾನಿಕತೆಯನ್ನು ಕ್ರಮೇಣ ರೂಪಿಸಿಕೊಳ್ಳಲಾಯಿತು. ಶುದ್ಧ, ಪ್ರಾಚೀನ ಮತ್ತು ಒಂದೇ ಪೀಳಿಗೆಗೆ ಸೇರಿದ ಕೆಲವೇ ಪ್ರತಿಗಳ ಬಳಕೆ ವಚನ ಸಂಪಾದನೆಗೆ ಸೂಕ್ತವಾದುದೆಂಬ ಅಂಶವನ್ನು ಕಂಡುಕೊಂಡಿದ್ದು ಮಹತ್ವದ್ದು. ಸಮಗ್ರ ವಚನ ಸಾಹಿತ್ಯವು ೧೫ ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೂಲಕ ೧೯೯೩ರಲ್ಲಿ ಪ್ರಕಟವಾದ ಸಂದರ್ಭ ಕೂಡ ವಚನ ಸಂಪಾದನೆಯಲ್ಲಿ ರೋಮಾಂಚನಕಾರಿಯಾದುದು. ಇವು ಜನಪ್ರಿಯ ಆವೃತ್ತಿಗಳಾದರೂ ಶರಣರ ವಚನಗಳನ್ನು ಪ್ರಾಚೀನ ಆಕರಗಳಿಂದ ಸಂಗ್ರಹಿಸಿದ್ದು ಪ್ರಕ್ಷಿಪ್ತಗಳನ್ನು ನಿವಾರಿಸಿದ್ದು ನಿಜವಚನಗಳ ಪಾಠವನ್ನು ಪರಿಷ್ಕರಿಸಿದ್ದು ಈ ಸಂಪುಟಗಳ ವೈಶಿಷ್ಟ್ಯ.

ಗದಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಲಿಂಗಾಯತ ಅಧ್ಯಯನ ಸಂಸ್ಥೆಯು ವೀರಶೈವ ಸಾಹಿತ್ಯದ ನಿರ್ಲಕ್ಷಿತ ಪ್ರಕಾರಗಳನ್ನು ಪ್ರಕಾಶಪಡಿಸಿತು. ಕೆಸ್ತೂರ ದೇವರು, ಕಡಕೋಳ ಮಡಿವಾಳೇಶ್ವರ, ಕವಿಲಿಂಗ, ಕೂಡಲೂರು ಬಸವಲಿಂಗ ಶರಣ, ಮುದ್ವೀರಸ್ವಾಮಿಗಳು ಮುಂತಾದವರ ಸ್ವರವಚನಗಳು ಪ್ರಥಮ ಬಾರಿಗೆ ಸಾಹಿತ್ಯ ಲೋಕದಲ್ಲಿ ಪರಿಚಯವಾದವು. ಶಿವರಾತ್ರೀಶ್ವರ ಗ್ರಂಥಮಾಲೆಯ ೧೦ ಸ್ವರವಚನ ಸಂಪುಟಗಳು ಈ ಪ್ರಕಾರದ ವೈಶಾಲ್ಯವನ್ನು ಎತ್ತಿಹಿಡಿದವು. ಈ ಸಂಪುಟಗಳು ಬಹುತೇಕ ಏಕೈಕ ಪ್ರತಿಯನ್ನು ಆಧರಿಸಿವೆ. ಆದರೂ ಮಾಹಿತಿ ಪೂರ್ಣ ಪೀಠಿಕೆಗಳು ಸಮರ್ಪಕಪಾಠಗಳಿಂದ ಉಪಯುಕ್ತವೆನಿಸಿವೆ. ಗದಗಿನ ಶ್ರೀಮಠದ ವಚನ ಸಂಕಲನ ಪರಿಷ್ಕರಣಗಳು ವೈಶಿಷ್ಟ್ಯ, ಸುಖಸಂಪಾದನೆಯ ವಚನಗಳು, ಶರಣ ಮುಖಮಂಡನ, ಶೀಲಸಂಪಾದನೆ ಇತ್ಯಾದಿ ಒಂದು ನಿರ್ದಿಷ್ಟ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಂಕಲಿಸಿದಂಥವು. ಇಲ್ಲಿನ ಸಂಕಲನಕಾರರು ವಚನಗಳನ್ನು ಗ್ರಹಿಸಿದ ರೀತಿಗೂ ಇವು ನಿದರ್ಶನಗಳಾಗಿವೆ. ವೀರಶೈವ ಶತಕ ಸಂಪುಟ, ವೀರಶೈವ ಅಷ್ಟಕ ಸಂಪುಟಗಳು ಶ್ರೀಮಠದ ಘನತೆವೆತ್ತ ಪ್ರಕಟಣೆಗಳಾಗಿವೆ.

ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದ ಸ್ಥಾಪನೆ, ಸಂಗ್ರಹಗಳು, ಹಸ್ತಪ್ರತಿ ವರ್ಣನಾತ್ಮಕ ಸೂಚಿ ಮೊದಲಾದ ಪ್ರಕಟಣೆಗಳು ಅನೇಕ ಕೃತಿಗಳನ್ನು ಬೆಳಕಿಗೆ ತಂದವು. ಕನ್ನಡ ಸಾಹಿತ್ಯ ಪರಿಷತ್ತು ಪಂಪಭಾರತವನ್ನು ವಿದ್ವಾಂಸರ ಸಮಿತಿಯನ್ನಿಟ್ಟುಕೊಂಡು ಪರಿಷ್ಕರಿಸಿ ಸುದೀರ್ಘ ಪೀಠಿಕೆಯೊಡನೆ ಬಹಲ ಹಿಂದೆಯೇ ಪ್ರಕಟಿಸಿತ್ತು. ಅನೇಕ ಹಳಗನ್ನಡ ಕಾವ್ಯಗಳು ಪರಿಷತ್ತಿನ ಮೂಲಕ ಮರುಮುದ್ರಣ, ಪುನರ್‌ ಪರಿಷ್ಕರಣಗಳು ಬಂದಿವೆ. ಸಂಸ್ಕೃತಿ ನಿರ್ದೇಶನಾಲಯದ ಪ್ರಕಟಣೆಗಳಲ್ಲಿ ಸಮಗ್ರ ವಚನಗಳಂತೆ, ಸಮಗ್ರ ಹರಿದಾಸ ಸಾಹಿತ್ಯ ಕೂಡ ೪೦ ಸಂಪುಟಗಳಲ್ಲಿ ಪ್ರಕಟವಾಗಿದ್ದು ಸಾಧನೆಯಾಗಿದೆ. ಇವು ಜನಪ್ರಿಯ ಆವೃತ್ತಿಗಳಾದರೂ ಕವಿಕೃತಿಗಳನ್ನೊಳಗೊಂಡ ಪೀಠಿಕೆಗಳು ಮಾಹಿತಿಯುಕ್ತವಾಗಿವೆ.

ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗವು ತುಂಬ ಕ್ರಿಯಾಶೀಲವಾಗಿದ್ದು ಪತ್ರಿಕೆ, ಸಮ್ಮೇಳನ, ಪ್ರಕಟಣೆ ಹೀಗೆ ನಾನಾ ಮುಖಗಳಿಂದ ಗ್ರಂಥಸಂಪಾದನೆಗೆ ಚಾಲನೆ ನೀಡುತ್ತಿದೆ. ಬಸವಯುಗದ ವಚನೇತರ ಸಾಹಿತ್ಯ, ಕರಸ್ಥಲಸಾಹಿತ್ಯ, ಕಾಲಜ್ಞಾನ ಸಾಹಿತ್ಯ ಮುಂತಾದ ಆಕರವೆನಿಸುವ ಕೃತಿಗಳನ್ನು ಪ್ರಕಟಸಿದೆ. ಹಸ್ತಪ್ರತಿ ಅಧ್ಯಯನ ಎಂಬ ಷಣ್ಮಾಸಿಕ ಪತ್ರಿಕೆ, ಹಸ್ತಪ್ರತಿ ವ್ಯಾಸಂಗ ಎಂಬ ವಿಚಾರ ಸಂಕಿರಣದ ಪ್ರಕಟಣೆಗಳು ಪ್ರಬುದ್ಧವಾದ ಬರಹಗಳಿಂದ ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಅಧ್ಯಯನದ ಪರಿಧಿಯನ್ನು ವಿಸ್ತರಿಸುತ್ತದೆ. ವಿವಿಧ ಮಠಗಳು, ಸಂಘ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಗ್ರಂಥಸಂಪಾದನೆಯ ಕೈಂಕರ್ಯ ನಡೆಸಿವೆ.

ಡಿ.ಎಲ್‌.ಎನ್‌. ಅವರ ಬಳಿಕದಲ್ಲಿ ಕನ್ನಡ ಗ್ರಂಥಸಂಪಾದನೆ, ಹಸ್ತಪ್ರತಿಗಳನ್ನು ಕುರಿತು ಅನೇಕ ಗ್ರಂಥಗಳು ರಚಿತವಾಗಿವೆ. ಕನ್ನಡ ಗ್ರಂಥಸಂಪಾದನ ಶಾಸ್ತ್ರ, ಕನ್ನಡ ಗ್ರಂಥಸಂಪಾದನ ಪರಿಚಯ, ಗ್ರಂಥಸಂರಕ್ಷಣೆ, ಕನ್ನಡ ಗ್ರಂಥ ಸಂಪಾದನೆಯ ಇತಿಹಾಸ, ಹಸ್ತಪ್ರತಿ ವಿವೇಚನೆ, ಹಸ್ತಪ್ರತಿಶಾಸ್ತ್ರ, ಕನ್ನಡ ಹಸ್ತಪ್ರತಿಶಾಸ್ತ್ರ, ಕನ್ನಡ ಹಸ್ತಪ್ರತಿಗಳು ಒಂದು ಅಧ್ಯಯನ, ಗ್ರಂಥಸಂಪಾದನೆ ಕೆಲವು ಅಧ್ಯಯನ, ಗ್ರಂಥಸಂಪಾದನೆ ವಿವಕ್ಷೆ, ಹಸ್ತಪ್ರತಿ ಕ್ಷೇತ್ರಕಾರ್ಯ, ಕನ್ನಡ ಹಸ್ತಪ್ರತಿಗಳು ಮತ್ತು ಸಾಫ್ಟ್‌‌ವೇರ್‌ ತಂತ್ರಜ್ಞಾನ, ಕಂಠಪತ್ರ ೦೧, ೨ ಸಂಪುಟಗಳು ಮೊದಲಾದವು ಈ ಪ್ರಕಾರದ ಬೆಳವಣಿಗೆಯ ದ್ಯೋತಕ.

ಕನ್ನಡ ಸಾಹಿತ್ಯ ಸಂಶೋಧನೆಗಳು ಬದಲಾವಣೆಗೆ ಹಂಬಲಿಸುತ್ತಿರುವಾಗ ಕನ್ನಡ ಗ್ರಂಥಸಂಪಾದನೆ ಕೂಡ ಡಿ.ಎಲ್‌.ಎನ್‌. ಅವರಿದ್ದ ಸ್ಥಿತಿಯಲ್ಲಿಲ್ಲ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೊಸ ಪೀಳಿಗೆಯ ಸಂಶೋಧಕರು ಗ್ರಂಥಸಂಪಾದನೆಯನ್ನು ವರ್ತಮಾನಕ್ಕೆ ತರುವ ಆಶಯ ಹೊಂದಿದ್ದಾರೆ. ಅದಕ್ಕಾಗಿ ಹೊಸಸಾಧ್ಯತೆಗಳ ಅನ್ವೇಷಣೆಯಲ್ಲಿದ್ದಾರೆ. ಇಂಥ ಹುಡುಕಾಟಗಳು ಪ್ರತಿ ತಲೆಮಾರಿನಲ್ಲಿಯೂ ಸಹಜ. ‘‘ಮೂಲಪಾಠ’’ “‘ಕವಿಪಾಠ’ ‘‘ಶುದ್ಧಪಾಠ’’ ಪರಿಕಲ್ಪನೆಯನ್ನು ಈಗಿನ ತಲೆಮಾರಿನ ಗ್ರಂಥ ಸಂಪಾದಕರು ಪ್ರಶ್ನಿಸುತ್ತಿದ್ದಾರೆ. ಇದು ವಸಾಹತು ಅಥವಾ ಓರಿಯಂಟಲಿಸ್ಟ್‌ಗಳ ಮನೋಧರ್ಮವಾಗಿ ಅವರಿಗೆ ಕಾಣತೊಡಗಿದೆ. ‘‘ಶುದ್ಧಪಾಠ’’ದ ಪರಿಕಲ್ಪನೆ ‘‘ಒಪ್ಪಿತಪಾಠ’’ವೆಂಬ ಹೊಸ ಪರಿಕಲ್ಪನೆಗೆ ಮುಖಾಮುಖಿಯಾಗಿದೆ. ಯಾವುದೇ ಒಂದು ಸಿದ್ಧಾಂತ ಸಾರ್ವಕಾಲಿಕವಲ್ಲ ಎಂಬುದನ್ನು ಹಿರಿಯರೂ ಬಲ್ಲವರಾಗಿದ್ದಾರೆ. ಆದುದರಿಂದ ಅವರನ್ನು ಸಂಸ್ಕೃತಿಗಿಂತ ಶಾಸ್ತ್ರಕ್ಕೆ ಮನ್ನಣೆ ಕೊಡುವವರೆಂದು ತಿಳಿಯಬೇಕಾಗಿಲ್ಲ. ಕವಿಪಠ್ಯಕ್ಕಿಂತ ಲಿಪಿಕಾರ ಪಠ್ಯವನ್ನೇ ಒಪ್ಪಿಕೊಳ್ಳುವುದರಲ್ಲಿ ತೊಡಕುಗಳಿವೆ. ಶಿಷ್ಟ ಸಾಹಿತ್ಯ ಸಂಪಾದನೆಯಲ್ಲಿ ಪಠ್ಯವೊಂದು ಏಕಕವಿ ಸೃಷ್ಟಿಯೇ ಹೊರತು ಮೌಖಿಕ ಸಾಹಿತ್ಯದಂತೆ ಸಮಷ್ಟಿ ಸೃಷ್ಟಿಯಲ್ಲ. ಹಸ್ತಪ್ರತಿಗಳು ಬೇರೆ ಬೇರೆ ಕಾಲಮಾನದ ಲಿಪಿಕಾರರಿಂದ ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಯಾಗುವ ಭಿನ್ನಪಾಠಗಳು ಉದ್ಭವಿಸುತ್ತವೆ. ಬಹುಪ್ರತಿಗಳು ಬಹುಪಠ್ಯಗಳಿರುವಾಗ ಒಬ್ಬ ಲಿಪಿಕಾರನ ಪಠ್ಯವನ್ನು ಮಾತ್ರ ಸ್ವೀಕರಿಸಿ ಅದನ್ನೇ ಕವಿ ನಿರ್ಮಿತವೆಂದು ಭಾವಿಸುವುದು ಎಷ್ಟು ಸರಿ? ಲಿಪಿಕಾರನ ಅಜ್ಞಾನದಿಂದ ಉಂಟಾದ ಭಾಷಾದೋಷವು ಸಾಂಸ್ಕೃತಿಕ ಪಠ್ಯವಾಗುವ ಅಪಾಯವಿದೆ. ಪ್ರಾದೇಶಿಕವಾಗಿ ನಡೆಯುವ ಧ್ವನಿ ವ್ಯತ್ಯಾಸಗಳನ್ನು ಭಾಷಾ ಸ್ಥಿತ್ಯಂತರಗಳನ್ನು ದಾಖಲಿಸುವುದು ಅಗತ್ಯವೆಂಬುದರಲ್ಲಿ ಎರಡು ಮಾತಿಲ್ಲ. ಈ ವ್ಯತ್ಯಾಸಗಳನ್ನು ಪ್ರಸ್ತಾವನೆಯಲ್ಲಿ ದೀರ್ಘವಾಗಿಯೇ ದಾಖಲಿಸಬೇಕಾಗುತ್ತದೆ. ಇಂಥ ಸಂವಾದ, ಚರ್ಚೆಗಳು ಕನ್ನಡ ಗ್ರಂಥಸಂಪಾದನೆಗೆ ಅರ್ಥಪೂರ್ಣ ತಿರುವನ್ನು ನೀಡಬಲ್ಲವು.

ಅಜ್ಜನ ಹೆಗೆಲ ಮೇಲೆ ಕುಳಿತು ಮೊಮ್ಮಗನಿಗೆ ತಾನು ನಿಂತ ನೆಲ ಕಾಣಿಸುವುದಿಲ್ಲ. ನಮ್ಮ ಸಮಾಜ ಸಾಹಿತ್ಯ ಸಂಸ್ಕೃತಿಗಳು ಹೊರಳು ದಾರಿಯಲ್ಲಿರುವ ಈ ಹೊತ್ತಿನಲ್ಲಿ ಕನ್ನಡ ಗ್ರಂಥಸಂಪಾದನೆಗೆ ಡಿ.ಎಲ್‌.ಎನ್‌. ಕೊಟ್ಟ ಕೊಡುಗೆ ಗೋಚರಿಸದೆ ಹೋಗುತ್ತಿರಬಹುದು. ಆದರೆ ಅವರು ಮಾಡಿದಂಥ ಕಾರ್ಯಗಳು ಗುಪ್ತಗಾಮಿನಿಯಾಗಿ ಪ್ರಭಾವ ಬೀರುತ್ತಿವೆ. ಕನ್ನಡ ಗ್ರಂಥಸಂಪಾದನೆಯನ್ನು ವಿವರಿಸಲು ಕನ್ನಡದಲ್ಲಿ ಪಾರಿಭಾಷಿಕ ಶಬ್ದಗಳಿರಲಿಲ್ಲ. ಡಿ.ಎಲ್‌.ಎನ್‌. ಅವುಗಳನ್ನು ಸೃಷ್ಟಿಸಿಕೊಟ್ಟರು. ಇವರು ಕನ್ನಡ ಗ್ರಂಥ ಸಂಪಾದನೆ ರಚಿಸಿದ ಬಳಿಕ ಮುಂದಿನವರ ಸಂಪಾದನ ಕಾರ್ಯಗಳಲ್ಲಿ ಏಕಸೂತ್ರತೆ, ಶಾಸ್ತ್ರೀಯ ದೃಷ್ಟಿಯಿಂದ ಮೌಲಿಕ ಅಂಶಗಳು ಸೇರಿಕೊಂಡವು. ಪ್ರಸ್ತುತ ಅಧ್ಯಯನದಿಂದ ವ್ಯಕ್ತವಾಗುವ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.

“ಲೇಖಪ್ರಮಾದ ಜನಿತ ದೋಷಂಗಳಂ ಪರಿಹರಿಸಿ ಛಂದಶ್ಶಾಸ್ತ್ರಾನುಗುಣವಾಗಿ ಪರಿಷ್ಕರಿಸಿ ಬೆಂಗಳೂರು ವಿಚಾರ ದರ್ಪಣ ಮುದ್ರಾಕ್ಷರ ಮಾಲೆಯಲ್ಲಿ ಮುದ್ರಿಸಲ್ಪಟ್ಟಿತು.[2] ಎಂಬ ಹಂತದಲ್ಲಿದ್ದ ಕನ್ನಡ ಗ್ರಂಥಸಂಪಾದನೆ ಒಂದು ಪ್ರತ್ಯೇಕ ಶಿಸ್ತಾಗಿ ಇಂದು ಬೆಳೆದಿದೆ.

ಡಿ.ಎಲ್‌.ಎನ್‌. ಬಳಿಕದಲ್ಲಿ ವಿಪುಲವಾದ ಕೃತಿಗಳು ಪರಿಷ್ಕರಣ ಕಂಡಿವೆ. ಮಠಗಳು ತೋರಿದ ಆಸಕ್ತಿಯ ಕಾರಣವಾಗಿ ವೀರಶೈವ ಕೃತಿಗಳು ಅಧಿಕವಾಗಿವೆ. ಕವಿಚರಿತೆಕಾರರ ಗಮನಕ್ಕೂ ಬಾರದ ಕೃತಿಗಳು ಪ್ರಕಟಗೊಂಡಿವೆ. ವಿಶ್ವವಿದ್ಯಾಲಯಗಳಲ್ಲಿ ಬೋಧನ ವಿಷಯವಾಗಿದ್ದ ಗ್ರಂಥಸಂಪಾದನೆಯು ಇಂದು ಅನೇಕ ವಿಶ್ವವಿದ್ಯಾಲಯಗಳಿಂದ ನಿರ್ಗಮಿಸಿದೆ. ಆದರೆ ವಿರಳವಾಗಿ ಎಂ. ಫಿಲ್‌ ಮತ್ತು ಪಿಎಚ್‌.ಡಿ ಅಧ್ಯಯನಗಳು ಈ ವಿಷಯದಲ್ಲಿ ನಡೆಯುತ್ತಿವೆ. ಗ್ರಂಥಸಂಪಾದನೆಯು ಇಂದಿನ ವಿದ್ವಾಂಸರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎಂಬ ಮಾತು ಕೇಳಿ ಬರುತ್ತಿದೆ.

ಕಾವ್ಯಗ್ರಂಥಗಳಷ್ಟೇ ಸಂಪಾದನೆಗೆ ಅರ್ಹವೆಂಬ ಭಾವನೆ ಅಳಿಸಿ ಹೋಗಿ ಲಘುಸಾಹಿತ್ಯ ಕೃತಿಗಳೂ ಗಣನೀಯವಾಗಿ ಪ್ರಕಟವಾಗಿವೆ. ಶಾಸ್ತ್ರಗ್ರಂಥಗಳು, ಚಾರಿತ್ರಿಕ ಕಾವ್ಯಗಳೂ ತಕ್ಕಮಟ್ಟಿಗೆ ಹೊರಬಂದಿವೆ.

ಆದಿಪುರಾಣ, ಶಬ್ದಮಣಿದರ್ಪಣ, ಗದಾಯುದ್ಧ ಇಂಥ ಕೆಲವು ಕೃತಿಗಳು ಅನೇಕ ಪರಿಷ್ಕರಣಗಳನ್ನು ಕಂಡಿವೆ. ಡಿ.ಎಲ್‌.ಎನ್‌. ಅವರ ತರುವಾಯದಲ್ಲಿ ೯೦ಕ್ಕೂ ಹೆಚ್ಚು ಹಸ್ತಪ್ರತಿ ಸೂಚಿಗಳು ಹೊರಬಂದಿವೆ. ಗ್ರಂಥಸಂಪಾದನೆಯಿಂದ ಸಿಡಿದ ಹಸ್ತ್ರಪ್ರತಿ ಶಾಸ್ತ್ರವು ಪ್ರತ್ಯೇಕವಾಗಿ ಬೆಳೆಯುತ್ತಿದೆ. ಹಸ್ತಪ್ರತಿಗಳನ್ನು ಚಾರಿತ್ರಿಕೆ ಮತ್ತು ಸಾಂಸ್ಕೃತಿಕ ಆಕರಗಳಾಗಿ ಅಭ್ಯಾಸ ಮಾಡಬೇಕಾದ ಮಹತ್ವವನ್ನು ತಿಳಿಯಲಾಗಿದೆ.

ಎಲ್ಲ ಬಗೆಯ ಗ್ರಂಥಗಳಿಗೂ ಏಕ ಪ್ರಕಾರದ ಸಿದ್ಧಾಂತ ಅನ್ವಯವಾಗುವುದಿಲ್ಲವೆಂಬ ಅರಿವು ಮೂಡಿದ್ದು ಮಾರ್ಗಸಾಹಿತ್ಯ ಸಂಪಾದನೆ, ದೇಸೀ ಸಾಹಿತ್ಯ ಸಂಪಾದನೆ, ವಚನಸಾಹಿತ್ಯ ಸಂಪಾದನೆ ಎಂಬ ವಿಂಗಡಣೆಗಳು ‘ಸ್ಥಿರಪಠ್ಯ’’, ‘‘ಚರಪಠ್ಯ’’ ಎಂಬ ಪಾರಿಭಾಷಿಕಗಳು ಹೊಸದಾಗಿ ಸೇರಿವೆ.

ಶಬ್ದ ಸಂಸ್ಕರಿತ ಸಂಪಾದನೆಗಿಂತ ಸಂಸ್ಕೃತಿಮುಖಿ ಸಂಪಾದನೆಗೆ ಒತ್ತು ಬೀಳುತ್ತಿದೆ. ಕೃತಿನಿಷ್ಠ ಪೀಠಿಕೆಗಳಿರುತ್ತಿದ್ದು ಸಂಪಾದಿತ ಕೃತಿಗಳಲ್ಲಿ ಸಂಸ್ಕೃತಿ ನಿಷ್ಠ ಅಂಶಗಳು ತಾವು ಪಡೆಯುತ್ತಿವೆ. ಕವಿ ನಿಷ್ಠವಾಗಿದ್ದ ಗ್ರಂಥಸಂಪಾದನೆ ಲಿಪಿಕಾರನಿಷ್ಟ ನೆಲೆಗೆ ಪಲ್ಲಟಗೊಳ್ಳುವ ಸೂಚನೆಗಳು ಕಂಡುಬರುತ್ತಿವೆ.

 

[1] ಇವರುಸಂಗ್ರಹಿಸಿದಹಸ್ತಪ್ರತಿಗಳಸೂಚಿಮದ್ರಾಸ್‌ಗೌರ್ನಮೆಂಟ್‌ ಓರಿಯಂಟಲ್‌ಮ್ಯಾನುಸ್ಕ್ರಿಫ್ಟ್‌ ಲೈಬ್ರರಿಯಿಂದಪ್ರಕಟವಾಯಿತು.

[2] ಜಿನಿಮುನಿತನಯ (ಸಂ), ತೋವಿನಕೆರಾಯಂಣ (೧೮೮೪)