ಕೆಲವರನ್ನು ಗುರುಗಳನ್ನಾಗಿ ಪಡೆಯಬೇಕಾದರೆ ಪುಣ್ಯ ಮಾಡಿರಬೇಕು. ಅದಕ್ಕೆ ಕಾರಣ ಬೋಧನೆ ಮಾಡುವುದಷ್ಟೇ ಅಲ್ಲ. ಅವರು ನಮ್ಮ ಮೇಲೆ ಬೀರುವ ಪ್ರಭಾವ ಕೂಡ ಕಾರಣವಾಗುತ್ತದೆ. ಅದಕ್ಕಿಂತ ಮಿಗಿಲಾದ್ದು ನಮ್ಮ ಮತ್ತು ಅವರ ಸಂಬಂಧಕ್ಕಿಂತ ಮಿಗಿಲಾದ ಅವರ ವ್ಯಕ್ತಿತ್ವ; ಅವರ ವಿದ್ವತ್ತು ಅಥವಾ ಪ್ರತಿಭೆ.

ಒಂದರ್ಥದಲ್ಲಿ ನಾವು ಆನರ್ಸ ತರಗತಿಯಲ್ಲಿ ಓದುತ್ತಿದ್ದಾಗ ಅನೇಕರು ಗುರುಗಳಾಗಿದ್ದರು. ಕೆಲವರು ಪಾಠ ಮಾಡದೆ ಪಕ್ಕದ ಅಯ್ಯರ್ ಹೋಟೆಲ್‌ನಲ್ಲಿ ಕುಳಿತು ದೋಸೆ ತಿನ್ನುತ್ತಿದ್ದರು. ಇನ್ನು ಕೆಲವರು ನನಗೆ ಇಂದು ಆರೋಗ್ಯ ಸರಿಯಿಲ್ಲ ಎಂದು ಬೋಧನೆಯನ್ನೇ ತಪ್ಪಿಸುತ್ತಿದ್ದರು. ಇನ್ನು ಕೆಲವರಿದ್ದರು ತಮ್ಮ ಕರ್ತವ್ಯವನ್ನು ಚಾಚು ತಪ್ಪದಂತೆ ನಿರ್ವಹಿಸುತ್ತಿದ್ದರು. ಆದರೆ ಅವರಲ್ಲಿ ಒಂದಷ್ಟು ಜನ ಇಡೀ ಕರ್ನಾಟಕಕ್ಕೆ ಗೌರವ ತರುವಂಥ ವ್ಯಕ್ತಿತ್ವ ಇದ್ದವರು.

ಅವರಲ್ಲಿ ಒಬ್ಬರು ಪ್ರತಿಭೆಯ ಮೇರು ಕುವೆಂಪು ಅವರು, ಇನ್ನೊಬ್ಬರು ವಿದ್ವತ್ತಿನ ಮೇರು ಡಿ.ಎಲ್‌.ಎನ್‌. ಅವರು ಮತ್ತು ಒಬ್ಬರಿದ್ದರು, ಅವರು ನಮಗೆ ಪಾಠವನ್ನೇನೂ ಹೇಳುತ್ತಿರಲಿಲ್ಲ. ಆದರೆ ಅಂದಿನ ಮಹಾರಾಜ ಕಾಲೇಜಿನ ಜೂನಿಯರ್‌ಬಿ.ಎ ಹಾಲ್‌ನಲ್ಲಿ ಯಾವುದಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣಕ್ಕೆ ನಿಂತರೆಂದರೆ ಮೋಡಿ ಮಾಡಿದ ಹಾಗೆ. ಮಂತ್ರ ಮುಗ್ಧಗೊಳಿಸುವಂಥ ಅಪೂರ್ವ ವಾಗ್ಮಿತೆಯ ಡಾ. ಪುರುಷೋತ್ತಮ್‌.

ಪ್ರೊ. ಡಿ.ಎಲ್‌.ಎನ್‌ ಅವರ ನೆನಪೆಂದರೆ ರೋಮಾಂಚನವಾಗುತ್ತದೆ. ಅವರನ್ನು ಕನ್ನಡದ ವಿದ್ಯಾರ್ಥಿಗಳಾದ ನಾವುಗಳಷ್ಟೇ ಅಲ್ಲ. ಮಹಾರಾಜ ಕಾಲೇಜನಲ್ಲಿ ಓದುತ್ತಿದ್ದವರು ಮತ್ತು ಬೋಧಿಸುತ್ತಿದ್ದವರು ‘ಎಲ್ಲರೂ ನಡೆದಾಡುವ ವಿಶ್ವಕೋಶವೆಂದೇ ಕರೆಯುತ್ತಿದ್ದರು.

ತುಂಬು ದೇಹದ, ವಿದ್ವತ್ತಿನ ಮಾಗುವಿಕೆಯಿಂದ ತುಸುವೇ ಬಾಗಿದ ತಲೆಯ ಮೇಲೊಂದು ಜರಿಯ ಪೇಟ; ಮುಚ್ಚಿದ ಕೋಟು-ವಿದ್ವತ್ತನ್ನೇ ತುಂಬಿಕೊಂಡಿರುವಂತೆ, ಮತ್ತೆ ಕಚ್ಚೆಪಂಚೆಯ ಅವರು ನಡೆದು ಬರುತ್ತಿದ್ದರೆ – ವಿದ್ಯೆಯ ಪರ್ವತವೆ ಚಲಿಸಿದಂತಾಗುತ್ತಿತ್ತು.

ಅವರು ಮೊದಲನೆಯ ದಿನ ನಮಗೆ ತರಗತಿ ತೆಗೆದುಕೊಂಡಾಗ ಮೊದಲ ಪ್ರಶ್ನೆ ಒಬ್ಬೊಬ್ಬರನ್ನು ಕುರಿತು – “ನೀವೀಗಾಗಲೆ ಏನೇನು ಓದಿದ್ದೀರಿ?”. ಕಾದಂಬರಿ ಕತೆ ಕವಿತೆ ಅಲ್ಲದೆ ಹಳಗನ್ನಡ ಕಾವ್ಯ ಕೂಡ ಓದಿದ ವಿದ್ಯಾರ್ಥಿಗಳನ್ನು ಕುರಿತು ಅವರಿಗೆ ವಿಶೇಷ ಹೆಮ್ಮೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಜ್ಞಾನದ ದಾಹ ಅಗಸ್ತ್ಯನಿಗಿದ್ದಂತೆ ಇರಬೇಕು ಎಂಬುದು ಅವರ ಭಾವನೆ.

ಎರಡನೆಯ ಪ್ರಶ್ನೆ ಕೇಶಿರಾಜನ ಶಬ್ದಮಣಿದರ್ಪಣದ ಒಂದು ಪ್ರಯೋಗವನ್ನು ನಮ್ಮ ಮುಂದಿರಿಸಿ ಉತ್ತರ ಬಯಸಿದರು. ‘‘ಕವಿಕೇಶವೇನೆಂ’’ ಎಂಬುದೇ ಆ ಉಕ್ತಿ. ಬಹುಶಃ ನಮ್ಮಲ್ಲಿ ಆಗ ನಾವಾರೂ ಅದಕ್ಕೆ ಸರಿ ಉತ್ತರ ಕೊಟ್ಟಂತೆ ನೆನಪಿಲ್ಲ. ಮಾನಪ್ಪ ನಾಯಕ, ಮರುಳಯ್ಯ, ನಾಗೇಂದ್ರಪ್ಪ, ಸೀತಾರಾಮಯ್ಯ ಹೀಗೆ ನಾವೆಲ್ಲ ಉತ್ತರಿಸಲಾಗದಿದ್ದಾಗ ಅವರೇ ಆ ಪ್ರಯೋಗವನ್ನು ಬಿಡಿಸಿ ಹೇಳಿದರು. ನಾನು, ಕವಿ ಕೇಶವನಾಗಿದ್ದೇನೆ ಎಂಬುದು ಅದರರ್ಥ. ಕವಿ ಕೇಶವನ್‌+ಎಂ ಎಂಬುದು ಆ ವಾಕ್ಯದ ವಿಸ್ತರಣೆ. ಎಂ ಎಂದರೆ ಎಂಬ ಆಖ್ಯಾತ ಪ್ರತ್ಯಯ ಕವಿ ಕೇಶವನ್‌ಶಬ್ದ ಸಮುಚ್ಛಯಕ್ಕೆ ಸೇರಿ ಕ್ರಿಯಾರ್ಥವನ್ನು ಕೊಡುತ್ತಿದೆ ಎಂದು ವಿವರಿಸಿದರು. ಜೊತೆಗೆ ಇಂಥ ಒಂದಲ್ಲ ಹತ್ತಾರು ಪ್ರಯೋಗಗಳನ್ನು ನಮ್ಮ ಮುಂದಿರಿಸಿದರು. ಅವರು ನಮಗೆ ವಡ್ಡಾರಾಧನೆ, ಅಶ್ವತ್ಥಾಮನ್‌, ರೂಪದರ್ಶಿ ಕೃತಿಗಳನ್ನು ಪಾಠ ಮಾಡಿದಂತೆ ನೆನಪು.

ವಡ್ಡಾರಾಧನೆ ಪಾಠ ಮಾಡುವಾಗ ಕನ್ನಡ ಭಾಷೆಯ ಸೂಕ್ಷ್ಮಗಳನ್ನು ಅವರು ಕಾಣುತ್ತಿದ್ದ ಕಾಣಿಸುತ್ತಿದ್ದ ರೀತಿ ಅನ್ಯಾದೃಶವಾದುದು. ಅಂಥ ಒಂದೆರಡು ಉದಾಹರಣೆಗಳ ನೆನಪನ್ನಷ್ಟೆ ನಿಮ್ಮ ಮುಂದಿಡುತ್ತೇನೆ.

ಅಶ್ರಕ ಎಂಬ ಶಬ್ದ ಎದುರಾಯಿತು. ತಟ್ಟನೆ ಅವರು ಗೋವಿನ ಹಾಡಿನ ಪದ್ಯಭಾಗವನ್ನು ಉದ್ಧರಿಸಿದರು.

ಉದಯ ಕಾಲದೊಳೆದ್ದು ಗೊಲ್ಲನು
ಮುದದಿ ತಿಲಕವ ಹಣೆಯೊಳಿಟ್ಟು
ಚದುರಶಿಖೆಯನು ಹಾಕಿದ

ನಮಗೆಲ್ಲ ಪರಿಚಿತವಾದ ಭಾಗವೇ ಅದು. ಆದರೆ ಡಿ.ಎಲ್‌.ಎನ್‌. ಅದರ ಇನ್ನೊಂದು ಪಾಠವನ್ನು ನಮ್ಮೆದುರು ತೆರೆದಿಟ್ಟರು. ಅದು ಹೀಗಿತ್ತು.

ಉದಯ ಕಾಲದೊಳೆದ್ದು ಗೊಲ್ಲನು
ಮುದದಿ ತಿಲಕವ ಹಣೆಯೊಳಿಟ್ಟು
ಚದುರಸಿಗೆಯನು ಹಾಸಿದ

ಅಂದರೆ ಜನಪದ ಕಾವ್ಯವಾದ ಗೋವಿನ ಹಾಡಿನ ‘‘ಚದುರಸಿಗೆ’’ ಪದ ಅರ್ಥವಾಗದೆ ಚದುರ ಶಿಖೆಯನು ಹಾಕಿದ ಎಂದು ಪಾಠ ಬದಲಿಸಿದ್ದಾರೆ. ವಾಸ್ತವವಾಗಿ ಉದಯ ಕಾಲದಲ್ಲೆದ್ದ ಗೊಲ್ಲ ಹಣೆಗೆ ತಿಲಕವನ್ನಿಟ್ಟುಕೊಂಡು ಗೋವುಗಳನ್ನು ಮೇಯುವುದಕ್ಕೆ ಬಿಟ್ಟು ತಾನು ನಾಲ್ಕು ಮೂಲೆಗಳನ್ನುಳ್ಳದ್ದು ಅಂದರೆ ಚೌಕವಾದ ವಸ್ತ್ರವೊಂದನ್ನು ನೆಲದ ಮೇಲೆ ಹಾಸಿ ತಾನು ಕುಳಿತುಕೊಂಡ ಎಂದು ಅದರ ಅರ್ಥ.

ಇನ್ನೊಮ್ಮೆ

ಮೂರಿ ಶಬ್ದ ಎದುರಾಯಿತು. ಕೋಣ ಎಂದು ಒಬ್ಬರು ಅದಕ್ಕೆ ಅರ್ಥ ಕೊಟ್ಟಿದ್ದರು. ಡಿ.ಎಲ್‌.ಎನ್‌.ಗೆ ಆ ಶಬ್ದ ಎದುರಾಗುತ್ತಿದ್ದಂತೆ ಸ್ಮೃತಿಶಕ್ತಿ ಸುರುಳಿ ಬಿಚ್ಚತೊಡಗಿತು ಸುಸಂಬಂದ್ಧವಾಗಿ. ಆ ಶಬ್ದ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ನೆನಪುಗಳುಕ್ಕಿದವು.

೧. ನೆಲು ಮೂರಿವಿಟ್ಟಂತೆ ಸಭಾಕ್ಲೋಭಮಾಗೆ

೨. ಭೈರವನ ಜನನ ಮಾರಿಯ ಮೂರಿಯವೊಲ್‌

ತಾರಗೆಯೆನೆ ತೊನೆದೊಟ್ಟಿದ ಮೂರಿಯ ರೋಮಂತಫೇನ ಮಂಜರಿನಿಕರಂ ಮೂರಿಯ ರೋಮಂತ ಫೇನ ಮಂಜರಿನಿ ಕರಂ ಎಂಬುದು ಖಚಿತ. ತಾರಗೆಮೆನೆ ಆದ ಮೇಲಿನ ಪದ ಅಸ್ಪಷ್ಟ ನೆನಪು. ಹೀಗೆ ಒಂದಾದ ಮೇಲೊಂದು ಉದಾಹರಣೆಗಳನ್ನುದ್ಧರಿಸಿದರು. ನನಗೆ ನೆನಪಿರುವುದು ಇವು ಮೂರು.

ಮೂರನೆಯ ಉದಾಹರಣೆ

ಕಾರಿರುಳತಿರುಳಿದ್ದಂತಿದ್ದ ಮದಸೈರಿಭಗಳ ಒಂದು ಚಿತ್ರ. ಮಲಗಿರುವ ಕೋಣಗಳ ಚಿತ್ರ ಅದು. ಅವು ಮಲಗಿ ಮೆಲುಕು ಹಾಕುತ್ತಿವೆ. ಅವುಗಳ ಕಟಪಾಟು ಕೂದಲ ತುದಿಗೆ ನಕ್ಷತ್ರಗಳ ಪುಂಜದಂತೆ ಮೆಲುಕಿನ ನೊರಗಟ್ಟಿದೆ. ಅಂದರೆ ಇಲ್ಲಿ ಉಲಾಯಗಳ ಶಬ್ದವಿರುವುದರಿಂದ ಕೋಣ ಎಂಬರ್ಥ ಸಾಧು ಅಲ್ಲ. ಇಲ್ಲಿ ಮೂರಿ ಎಂದರೆ ಬಾಯಿ. ಈಗ ಮೊದಲ ಉದಾಹರಣೆಗೆ ಹೋದರೆ ನೆಲಂ ಮೂರಿ ವಿಟ್ಟಂತೆ ಎದ್ದರೆ ನೆಲವೇ ಬಾಯಿ ಬಿಟ್ಟಂತೆ-ಎರಡನೆಯ ಉದಾಹರಣೆ ತಳಾರನ ಚಿರ ನೀಡುತ್ತದೆ. ಅವನು ಹೇಗೆ ನಿಂತಿದ್ದಾನೆ ಎಂದರೆ ಭೈರವ, ಯಮ ಮತ್ತೆ ಮೂರಿಯ ಬಾಯಿ ಇದ್ದ ಹಾಗೆ ಎಂದು ಅಲ್ಲಿ ಅರ್ಥ.

ಅಂದರೆ ಡಿ.ಎಲ್‌.ಎನ್‌. ವಿಧಾನ ಕಾವ್ಯಲೋಕದಲ್ಲಿ ವಿಹರಿಸಿ ಸರಿಯಾದ ಅರ್ಥವನ್ನು ಹುಡುಕುವುದು. ಅವರ ಶಬ್ದವಿಹಾರ ಪ್ರತಿಯೊಂದು ತರಗತಿಯಲ್ಲೂ ಇದ್ದದ್ದೇ. ಬಹುಶಃ ಅವರ ಅನೇಕ ಶಿಷ್ಯರು ಅವರು ಹಾಗೆ ತರಗತಿಗಳಲ್ಲಿ ತೇಲಿಬಿಟ್ಟ ಎಷ್ಟೋ ಶಬ್ಧ ವಿಚಾರ ವಿಹಾರಗಳನ್ನು ತಮ್ಮದಾಗಿಯೂ ಮಾಡಿಕೊಂಡದ್ದುಂಟು. ಡಿ.ಎಲ್‌.ಎನ್‌. ಅವರ ವಿದ್ವತ್ತು ತುಂಬಿ ತುಳುಕುವ ವಿದ್ವತ್ತು. ಅದು ಕೃಪಣನ ಆಸ್ತಿಯಾಗಿರಲಿಲ್ಲ. ತನ್ನ ವಿದ್ಯಾರ್ಥಿಗಳ ಹಾಗೂ ನಾಡವರ ಆಸ್ತಿ ಆಗುವಂಥದ್ದು.

ಇಸಿಲ ಎಂಬ ಕನ್ನಡ ಶಬ್ದ ಅಶೋಕನ ಶಾಸನದಲ್ಲಿದ್ದನ್ನು ನಿರೂಪಿಸಿದಾಗ ಕೂಡ ಅವರ ಶಬ್ದ ವಿಹಾರ ಎಂಥ ಒಂದು ಅಮೋಘ ಲೋಕ ಎಂಬುದರ ಅರಿವಾಗುತ್ತದೆ.

ಇಷ್ಟು ನೆನಪಾಗುವ ಡಿ.ಎಲ್‌.ಎನ್‌. ಅವರ ವಿದ್ವತ್ಪ್ರತಿಭೆಯನ್ನು ಇಷ್ಟಕ್ಕೆ ಸೀಮಿತಗೊಳಿಸುವುದು ಅವರಿಗೆ ಅಪಚಾರ ಮಾಡಿದಂತೆ. ಅಡಿಗರು ಬರೆಯುತ್ತಿದ್ದ ನವ್ಯಕವಿತೆಗಳನ್ನು ಓದಿ ಆನಂದಿಸಿ ಎಂಥ Adventurous Poet ಎಂದು ಶ್ಲಾಘಿಸಿ ಗುಣಪಕ್ಷಪಾತಿಯಾದವರು. ಕೆ. ಎಸ್‌. ನರಸಿಂಹಸ್ವಾಮಿ ಅವರ ಶಿಲಾಲತೆಗೆ ಮುನ್ನುಡಿ ಬರೆದು ಹರಸಿದವರು. ಅಶ್ವತ್ಥಾಮನ್‌ನಾಟಕ ಪಾಠ ಮಾಡುತ್ತ ಗ್ರೀಕ್‌ಮೂಲದ ಟ್ರಾಜಿಡಿ ನಾಟಕಗಳ ಅರ್ಥವನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದೇ ಅಲ್ಲದೇ ಮೂಲ Ajax ನಾಟಕಕ್ಕೂ ಅಶ್ವತ್ಥಾಮನ್‌ನಾಟಕಕ್ಕೂ ಇರುವ ಸಂಬಂಧ, ವೈಶಿಷ್ಟ್ಯಗಳನ್ನು ಹೃದಯಂಗಮವಾಗಿ ಹೃದ್ಗತವಾಗುವಂತೆ ವಿವರಿಸಿದವರು.

ಸದಾ ತಮ್ಮ ಜ್ಞಾನದ ಭಂಡಾರವನ್ನು ಹಂಚುತ್ತಲೇ ಹೋದವರು. ಒಮ್ಮೆ ನನ್ನ ಇನ್ನೊಬ್ಬ ಗುರು ಎಸ್‌. ವಿ. ಪರಮೇಶ್ವರಭಟ್ಟರು ಕುಮಾರವ್ಯಾಸನ ಶಲ್ಯಗಧಾ ಪರ್ವವನ್ನು ನಮಗೆ ಬೋಧಿಸುತ್ತಿದ್ದರು. ಒಂದು ದಿನ ಅವರು ತಾವು ಬೋಧನೆಗೆ ಸಿದ್ಧವಾಗಿಲ್ಲ ಎಂದವರು ಹೇಳಿದ್ದೇನು ಗೊತ್ತೆ? “ನಿನ್ನೆ ನನಗೆ ಡಿ.ಎಲ್‌.ಎನ್‌. ಸಿಕ್ಕಲಿಲ್ಲ. ಅವರಿಂದ ಪಾಠ ನನಗೆ ಆಗಲಿಲ್ಲ. ಆದ್ದರಿಂದ ನಾನು ನಿಮಗೆ ಇಂದು ಬೋಧಿಸಲಾರೆ”. ಅಂದರೆ ಡಿ.ಎಲ್‌.ಎನ್‌. ತಮ್ಮ ಸಹೋದ್ಯೋಗಿಗಳಿಗೂ ಒಂದರ್ಥದಲ್ಲಿ ಗುರುಗಳೇ. ಅಷ್ಟೇ ಏಕೆ ಅವರ ಸಹಪಾಠಿ ಕುವೆಂಪು ಅವರಿಗೆ ಶಬ್ದಮಣಿದರ್ಪಣದ ಪಾಠ ಹೇಳಿಕೊಟ್ಟವರೂ ಅವರೇ ಅಲ್ಲವೇ!

ಅವರ ವಿದ್ವತ್ತು ನಾಯ ಮೊಲೆಯ ಹಾಲಲ್ಲ; ಕನ್ನಡ ಜನತೆಗೆ ಕಾಮಧೇನು ಆದದ್ದು!