ನನ್ನ ಪೂಜ್ಯ ತಂದೆಯವರಾದ ಶ್ರೀ. ಡಿ.ಎಲ್‌.ಎನ್‌. ಅವರ ವಿಷಯವಾಗಿ ಒಂದು ಲೇಖನವನ್ನು ಬರೆದು ಕೊಡುವಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಎಫ್‌. ಟಿ. ಹಳ್ಳಿಕೇರಿ ಅವರು ಕೇಳಿದಾಗ ನಾನು ಸಂತೋಷವಾಗಿ ಒಪ್ಪಿಕೊಂಡೆ. ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ವಿಷಯಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ. ನನ್ನ ತಂದೆಯವರು ಮಿತಭಾಷಿ. ಸಜ್ಜನರು. ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುತ್ತಿರಲಿಲ್ಲ. ಮಕ್ಕಳೊಡನೆ ಅವರು ಯಾವಾಗಲೂ ಧಾರಾಳವಾಗಿ ಮಾತನಾಡುತ್ತಿರಲಿಲ್ಲ. ವಿನಾಕಾರಣ ಹೊಗಳುತ್ತಿರಲಿಲ್ಲ. ಹಾಗೆಂದು ಅವರಿಗೆ ನಮ್ಮ ಮೇಲೆ ಅಭಿಮಾನವಿರಲಿಲ್ಲವೆಂದಲ್ಲ. ಅವರ ಸ್ವಭಾವವೇ ಹಾಗಿತ್ತು.

ಅವರಿಗೆ ನಾವು ಐದು ಜನ ಹೆಣ್ಣುಮಕ್ಕಳು. ಎಲ್ಲರೂ ಚೆನ್ನಾಗಿ ಓದಿ, ಸಮಯ ಬಂದರೆ ಹೊರಗಡೆ ಕೆಲಸ ಮಾಡುವಷ್ಟು ಧೈರ್ಯವಿರಬೇಕೆಂದು ಆಶಿಸುತ್ತಿದ್ದರು. ನಾವು ಜಗಳವಾಡಿಕೊಂಡು ಒಬ್ಬರ ಮೇಲೊಬ್ಬರು ದೂರು ಹೇಳುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.

ಚಿಕ್ಕಂದಿನಲ್ಲಿ ನನಗೆ ಗಂಟಲುನೋವು ಬಂದರೆ (ಆಗೆಲ್ಲಾ ಗಂಟಲಿಗೆ ಹಚ್ಚಲು ಟಿಂಚರ್‌ ಆಫ್‌ ಬೆನ್‌ಸಾಯಿನ್‌ ಕೊಡುತ್ತಿದ್ದರು). ಗಂಟಲಿಗೆ ‘‘ಟಚ್‌’’ ಮಾಡುತ್ತಿದ್ದ ರೀತಿಯನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಒಂದು ಹಂಚಿ ಕಡ್ಡಿಯನ್ನು ಸ್ವಲ್ಪ ಸೀಳಿ ಹತ್ತಿ ಸುತ್ತಿ ತಮ್ಮ ಪಾದದಲ್ಲಿ ನನ್ನ ಕಾಲಿನ ಬೆರಳನ್ನು ಒತ್ತಿ ಹಿಡಿದು (ನಾನು ಅಲ್ಲಾಡದ ಹಾಗೆ) ಹಚ್ಚುತ್ತಿದ್ದರು. ದೇವರಾಜ ಮಾರ್ಕೆಟ್‌ನಿಂದ ಹಣ್ಣು. ತರಕಾರಿ ತುಂಬಿಸಿಕೊಂಡು ಎರಡು ಕೈಯಲ್ಲೂ ಹಿಡಿದುಕೊಂಡು, ಉರಿಬಿಸಿಲಿನಲ್ಲಿ ನಡೆದುಕೊಂಡು ಬರುತ್ತಿದ್ದುದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅವರಿಗೆ ಇಷ್ಟವಾದ ತರಕಾರಿ ಬದನೇಕಾಯಿ ಮತ್ತು ಬೆಂಡೆಕಾಯಿ. ನನಗೆ, ಅವರಿಗೆ ಮಾತ್ರ ಬೆಂಡೆಕಾಯಿ ತರುತ್ತಿದ್ದರು. ಅವರ ಗೊಜ್ಜು ನಮಗೆ ಬಹಳ ಪ್ರಿಯ.

ನಾನು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ಯಾಂಟಿನ್‌ನಲ್ಲಿ ದೋಸೆ ತಿನ್ನಲು ನನಗೆ ದಿನವೂ ಒಂದು ರೂ. ಕೊಡುತ್ತಿದ್ದರು. (ಆಗ ದೋಸೆಯ ಬೆಲೆ ಅಷ್ಟೇ ಇತ್ತು). ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಅಂತಿಮ ವರ್ಷದ ಬಿ.ಎಸ್.ಸಿ ಪರೀಕ್ಷೆಗೆ ಹಣ ಕಟ್ಟಬೇಕಾಗಿತ್ತು. ಬೆಳಗಿನಿಂದ ಕ್ಯೂನಲ್ಲಿ ನಿಂತಿದ್ದರೂ ಕಟ್ಟಲು ಆಗಿರಲಿಲ್ಲ. ಆಗ ನನ್ನ ತಂದೆಯವರು ಬಂದು ಹಣ ಕಟ್ಟಿ ನನ್ನ ಕಡೆ ನೋಡದೆಯೇ ಮನೆಗೆ ಬಂದರು. ನಾನೂ ಮನೆಗೆ ಬಂದು “ನಾನು ಕ್ಯೂನಲ್ಲಿ ನಿಂತ ವಿಷಯ ನಿಮಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದಾಗ ನನಗೆ ಸಿಕ್ಕ ಉತ್ತರ ಅವರ ಮುಗುಳ್ನಗೆ.

ಪದವೀಧರೆಯಾದ ಮೇಲೆ ನನಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಸೆಯಿತ್ತು. ಆದರೆ ನಮ್ಮ ತಂದೆಯವರು ಒಂದೇ ಒಂದು ಮಾತು ಹೇಳಿದರು. “ನೀನು ಓದಿದ್ದು ಸಾಕು. ಮದುವೆ ಮಾಡಿಕೊಂಡು ನನಗೆ ಮೊಮ್ಮಗನನ್ನು ಕೊಡು” ಎಂದರು. ಆ ವೇಳೆಗಾಗಲೇ ಅವರಿಗೆ ಲಘು ಹೃದಯಾಘಾತವಾಗಿತ್ತು. ನನ್ನ ಅಕ್ಕ ಕೆಲಸಕ್ಕೆ ಸೇರಿ ಅವರ ಸಹಾಯಕ್ಕೆ ನಿಂತಳು. ನಮ್ಮ ತಂದೆಯವರಿಗೆ ಅವಳ ಮೇಲೆ ಅಪಾರವಾದ ಪ್ರೀತಿ, ಭರವಸೆ ಇತ್ತು.

೧೯೬೬ನೇ ಅಕ್ಟೋಬರ್‌ನಲ್ಲಿ ನನ್ನ ಮದುವೆಯಾಯಿತು. ನನ್ನ ತಂದೆಯವರಿಗೆ ಆಗಸ್ಟೇ ಹೃದಯಾಘಾತವಾಗಿದ್ದರಿಂದ ಕೆಳಗೆ ಕೂರುವ ಹಾಗಿರಲಿಲ್ಲ. ಕುರ್ಚಿಯ ಮೇಲೆ ಕುಳಿತೇ ಧಾರೆಯೆರೆದು ಕೊಟ್ಟರು. ಆಗ ಅವರ ಕಣ್ಣು ತುಂಬಿ ಬಂದಿತ್ತು. ಅದನ್ನು ಮರೆಯುವ ಹಾಗೇ ಇಲ್ಲ. ನಮ್ಮ ಯಜಮಾನರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಕ್ಕನ ಮಗ. ನನ್ನ ತಂದೆಯವರಿಗೆ ಅಳಿಯನಿಗಿಂತ ಮಗನ ಹಾಗೇ ಇದ್ದರು. ಅವರ ಇಷ್ಟದಂತೆಯೇ ಮೊಮ್ಮಗ ಹುಟ್ಟಿದಾಗ ಅವರು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಆಸ್ಪತ್ರೆಯಲ್ಲಿ ಎಲ್ಲರಿಗೂ ಕೊಬ್ಬರಿ ಸಕ್ಕರೆ ಹಂಚಿದ್ದರು. ಅವನಿಗೆ ‘‘ಜಯಸಿಂಹ’’ನೆಂದು ನಾಮಕರಣ ಮಾಡಿದ್ದು ಅವರೇ. ಅವರ ಕಣ್ಮಣಿಯಾಗಿದ್ದ. ಅವನ ಆಟಪಾಟಗಳನ್ನು ನೋಡುತ್ತಾ ಜಗತ್ತನ್ನೇ ಮರೆಯುತ್ತಿದ್ದರು. ನನ್ನ ಅತ್ತೆಯವರ ಮನೆ ವಿದ್ಯಾರಣ್ಯಪುರದಲ್ಲಿತ್ತು. ವಾರದ ಕೊನೆಯಲ್ಲಿ ಜಯಸಿಂಹನನ್ನು ಕರೆದುಕೊಂಡು ಈ ಮನೆಗೆ ಬರುತ್ತಿದ್ದೆವು. ನಮ್ಮ ತಂದೆಯವರು ಮೊಮ್ಮಗನಿಗೋಸ್ಕರ ಬಾಗಿಲಿನಲ್ಲೇ ಕಾಯುತ್ತಿದ್ದರು. ಈಗ ಅವನು, ಅವನ ಹೆಂಡತಿ ನಮ್ರತ ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

೧೯೭೧ರಲ್ಲಿ ಅವರಿಗೆ ತೀವ್ರ ಹೃದಯಾಘಾತವಾದಾಗ ನಾನು ನನ್ನ ಯಜಮಾನರ ಜೊತೆ ಊಟಿಯ ಹತ್ತಿರ ಕೂನೂರಿನಲ್ಲಿದ್ದೆ. ಮೈಸೂರಿಗೆ ಬಂದಾಗ ನನ್ನ ತಂದೆಯವರು ಹತ್ತಿರ ಕರೆದು ಭಗವದ್ಗೀತೆಯನ್ನು ಓದಲು ಹೇಳಿದರು. ಎರಡು ಪುಟ ಓದುವ ವೇಳೆಗೆ ಸಾಕು ನನಗೆ ನನ್ನ ನಶ್ಯದ ಡಬ್ಬಿಯನ್ನು ಕೊಡೆಂದು ಕೇಳಿದರು. ತುಂಬಾ ಆಯಾಸ ಪಡುತ್ತಿದ್ದರು. ಸ್ವಲ್ಪ ಹೊತ್ತಿಗೆಲ್ಲಾ ಅವರಿಗೆ ಜ್ಞಾನ ತಪ್ಪಿತ್ತು. ಅಂದೇ ರಾತ್ರಿ ಅವರು ದೇವರ ಸಾನಿಧ್ಯವನ್ನು ಸೇರಿದರು.

ಈಗಲೂ ಅವರು ನಮ್ಮೊಡನೆ, ಮೊಮ್ಮಕ್ಕಳು, ಮರಿಮಕ್ಕಳೊಂದಿಗೆ ಇರಬೇಕಾಗಿತ್ತೆಂದು ಅನ್ನಿಸುತ್ತಿರುತ್ತದೆ. ಆದರೆ ದೈವೇಚ್ಛೆ ನಮಗೆ ಇಷ್ಟೇ ಲಭ್ಯ ಎಂದು ಸಮಾಧಾನ ಪಡಬೇಕಾಗಿದೆ.