ಬಹುಮುಖ ವಿದ್ವತ್ತಿನಿಂದಲೂ ನಿರಂತರ ಸಾಹಿತ್ಯಾಭ್ಯಾಸ ಚಿಂತನೆಗಳಿಂದಲೂ ತಮ್ಮದೇ ಆದ ಸ್ಥಾನವನ್ನು ಗಳಿಸಿದ ಪರಮ ಪೂಜ್ಯರು. ನನ್ನ ವಿದ್ಯಾಗುರುಗಳೂ ವಿದ್ವನ್ಮಣಿಗಳೂ ಆದ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯರು (ಡಿ.ಎಲ್‌.ಎನ್‌.) ನನ್ನ ಸೋದರ ಮಾವನವರು, (ತಾಯಿಯ ತಮ್ಮ) ನಾನು ನನ್ನ ಅಣ್ಣ ತಮ್ಮಂದಿರೆಲ್ಲಾ ಅವರ ಕೈಯಲ್ಲೇ ಬೆಳೆದವರಾದರೂ ನಾನು ಮಾತ್ರ ಅಲ್ಲಿಯೇ ಅವರ ಮನೆಯಲ್ಲೇ ಇದ್ದು ಅವರಲ್ಲೇ ಒಬ್ಬನಾಗಿ ಬಿಟ್ಟಿದ್ದೆ. ನನ್ನ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್‌, ಕಾಲೇಜ್‌ ಶಿಕ್ಷಣಗಳೆಲ್ಲಾ ಅವರ ಮನೆಯಲ್ಲಿದ್ದಾಗಲೇ ಮುಗಿದು ನಾನು ಎಂ.ಎಸ್ಸಿ (ಸ್ಟಾಟಿಸ್ಟಿಕ್ಸ್‌) ಪದವಿ ಗಳಿಸಿದ ನಂತರ ನೆರೆಯ ಸಂಸ್ಥಾನವಾದ ಕೇರಳಕ್ಕೆ ಹೋಗುವವರೆಗೂ ಅವರ ಬಳಿಯಲ್ಲೆ ಇದ್ದೆನೆಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ.

ಡಿ.ಎಲ್‌.ಎನ್‌. ಅವರಿಗೆ ಮಕ್ಕಳನ್ನು ಕಂಡರೆ ಬಲು ಮಮತೆ. ಮಕ್ಕಳನ್ನು ಕಾಲುಗಳ ಮೇಲೆ ಕುಳ್ಳಿರಿಸಿಕೊಂಡು ಜೋಕಾಲಿ ಆಡಿಸುವುದೆಂದರೆ ಅವರಿಗೆ ಬಲು ಇಷ್ಟವಿರುತ್ತಿತ್ತು. ಮಕ್ಕಳನ್ನು ಯಾರಾದರೂ ಗದರಿಸಿದರೆ ಅವರಿಗದು ಇಷ್ಟವಾಗುತ್ತಿರಲಿಲ್ಲ. ತಮ್ಮ ಮಕ್ಕಳಿಗಾಗಲಿ ಬಂಧುಮಿತ್ರರ ಮಕ್ಕಳಿಗಾಗಲಿ ಇದು ಅನ್ವಯವಾಗುತ್ತಿತ್ತು. ಅವರಿಗೆ ತಿಂಡಿ ಕೊಡುವುದು, ಚಾಕ್ಲೆಟ್‌, ಪೆಪ್ಪರ್‌ಮೆಂಟ್‌ ಕೊಡಿಸುವುದು ಮುಂತಾದವನ್ನು ಮಾಡುತ್ತಿದ್ದರು. ಡಿ. ಎಲ್‌. ಎನ್‌.ರವರು ಆಗ ಕೃಷ್ಣಮೂರ್ತಿಪುರಂ (ಆಗ ಅದನ್ನು ವಿವರ್ಸ್‌ ಲೇನ್‌ಎನ್ನುತ್ತಿದ್ದರು)ನ ೬ನೆಯ ಕ್ರಾಸ್‌ನಲ್ಲಿನ ಒಂದು ನಾಡ ಹೆಂಚಿನ ಮನೆಯಲ್ಲಿ ಇದ್ದರು. ಅದು ಜಯನಗರದ ರೈಲ್ವೆ ಗೇಟಿಗೆ ಸಮೀಪವಾಗಿತ್ತು. ಮೈಸೂರಿನಿಂದ ನಂಜನಗೂಡು, ಚಾಮರಾಜನಗರಕ್ಕೆ ಹೋಗುವ ರೈಲುಗಳು (ಸುಮಾರು ಎಂಟು) ಆ ಗೇಟಿನ ಮೂಲಕ ಹೋಗುತ್ತವೆ. ರೈಲಿನ ಕೂಗು ಕೇಳುವ ವೇಳೆಗೆ ನಾನು ಕಿರುಚಿಕೊಂಡು ಕುಣಿಯತೊಡಗುತ್ತಿದ್ದೆ (ಆಗ ನನಗೆ ನಾಲ್ಕೈದು ವರ್ಷಗಳಿರಬಹುದು). ಏನೇ ಕೆಲಸದಲ್ಲಿದ್ದರೂ ಅವರು ನನ್ನನ್ನು ಎತ್ತಿಕೊಂಡು ಬಂದು ರೈಲನ್ನು ತೋರಿಸಿ ಆ ಇಂಜಿನ್‌ ಬಗ್ಗೆ ಕಲ್ಲಿದ್ದಲಿನ ಬಗ್ಗೆ (ಆಗ ಡೀಸೆಲ್‌ ರೈಲುಗಳಿರಲಿಲ್ಲ) ನನಗೆ ತಿಳಿಯ ಹೇಳುತ್ತಿದ್ದರು. ಅದೇ ಕ್ರಾಸಿನಲ್ಲಿ ಪ್ರೈಮರಿ ಸ್ಕೂಲೊಂದಿದೆ (ಗುಬ್ಬಚ್ಚಿ ಸ್ಕೂಲು ಎನ್ನುತ್ತಾರೆ). ಅಲ್ಲೇ ನನ್ನ ಪ್ರಾಥಮಿಕ ಶಿಕ್ಷಣವೆಲ್ಲಾ ನಡೆದದ್ದು. ಆಗ ಅವರಿಗಿನ್ನು ಮಕ್ಕಳಿರಲಿಲ್ಲ. ಅನಂತರವೇ ಸರಸ್ವತೀಪುರಂ (ಕೋರ್ಟ್‌ ಹಿಂದುಗಡೆ)ದಲ್ಲಿ ಈಗಿರುವ ಮನೆಗೆ ಬಂದದ್ದು. ಅನಂತರ ಅವರಿಗೆ ಮಕ್ಕಳಾಗಿದ್ದು. ಅಲ್ಲಿಂದಲೂ ರೈಲು ಹೋಗುವುದು ಕಾಣುತ್ತದೆ. ಅವರ ಎರಡನೆಯ ಮಗಳು ಪ್ರಭಳಿಗೆ ಮಗ ಹುಟ್ಟಿದ ಮೇಲೆ ಅವನಿಗೆ ಈ ರೈಲು ತೋರಿಸುವ ಕಾರ್ಯಕ್ರಮ ಬಿಡದೆ ನಡೆಯುತ್ತಿತ್ತು.

ಅವರು ಅಧ್ಯಾಪಕ ವೃತ್ತಿಯಲ್ಲಿ ಸೇರಿದಾಗ ಆಟಗಳಲ್ಲಿ ಬಹಳ ಆಸಕ್ತಿ ಬೆಳೆಸಿಕೊಂಡರು. ಅವರು ಟೆನ್ನಿಸ್‌ನಲ್ಲಿ ಪ್ರವೀಣರಾಗಿದ್ದರು. ಅವರು ಉಪಯೋಗಿಸುತ್ತಿದ್ದ ಟೆನ್ನಿಸ್‌ ಬ್ಯಾಟ್‌ ಅನ್ನು ಪ್ರೇಮ್‌ನಲ್ಲಿ ಹಾಕಿ ರೂಮ್‌ನಲ್ಲಿ ಗೋಡೆಗೆ ತಗುಲಿ ಹಾಕಿದ್ದನ್ನು ನೋಡಿದ ನೆನಪು ನನಗೆ ಈಗಲೂ ಮಾಸಿಲ್ಲ. ಚಿಕ್ಕಂದಿನಲ್ಲಿ ನನ್ನೊಂದಿಗೆ ಆಟವಾಡಬೇಕೆಂದು ಅವರನ್ನೆ ನಾನು ಪೀಡಿಸುತ್ತಿದ್ದಾಗ ಬಲು ಆನಂದದಿಂದ ಬರುವರು. ಆಡುತ್ತಿದ್ದುದೋ ಗೋಲಿಯಾಟ. ಅವರದರಲ್ಲಿ ಪ್ರವೀಣರೂ ಆಗಿದ್ದರು. ದೂರದಿಂದ ತಮ್ಮ ಬಲಗೈ ಹೆಬ್ಬೆರಳು ತೋರುಬೆರಳಿನಿಂದ ಗೋಲಿಯನ್ನೆ ಹಿಡಿದು ಗುರಿಯಿಟ್ಟು ಗೋಲಿಗೆ ಹೊಡೆಯುವಾಗ ಒಂದೊಂದು ಸಲ ಆ ಗೋಲಿ ಒಡೆದೇ ಹೋಗುತ್ತಿತ್ತು. ನನ್ನೊಂದಿಗೆ ಮನೆಯ ವಿಶಾಲವಾದ ವರಾಂಡದಲ್ಲಿ ಮಾತ್ರವಲ್ಲ ಕಾಂಪೌಂಡ್‌ನಲ್ಲೂ ಆಟವಾಡಿರುವುದುಂಟು. ನಾನು ಸೋತಾಗ ನಿರ್ದಕ್ಷಿಣ್ಯವಾಗಿ ದೂರದಲ್ಲಿ ಬಿದ್ದಿದ್ದ ಗೋಲಿಯನ್ನು ವಾಪಸ್‌ ಗುಳಿಯವರೆಗೂ ತೀಡಿಸಿ ಗುಳಿಯೊಳಗೆ ತಳ್ಳುವಂತೆ ಮಾಡುತ್ತಿದ್ದರು. ಆಗ ನನ್ನ ಕೈ ಬೆರಳಿನ ಚರ್ಮಕಿತ್ತು ಹೋಗಿ ರಕ್ತ ಬರುತ್ತಿತ್ತು. ಆ ನನ್ನ ಅಜ್ಜಿ ‘‘ಲೇಯ್‌ ನರಸಿಂಹ, ಏನೋ ಇದು’’ ಅಂತ ರೇಗಿ ನನ್ನನ್ನು ಕರೆದುಕೊಂಡು ಹೋಗಿ ಗಾಯ ತೊಳೆದು ಒರೆಸಿ ಔಷಧಿ ಹಾಕುತ್ತಿದ್ದರು. ನನ್ನನ್ನು ಮುದ್ದುಮಾಡಿ ಚಾಕೊಲೇಟ್‌ ಕೊಡುತ್ತಿದ್ದರು.

ನನ್ನನ್ನು ಮುದ್ದಿನಿಂದ ಬೆಳೆಸಿದರೂ ನಾನು ತಪ್ಪು ಮಾಡಿದರೆ ಖಂಡಿಸದೇ ಇರುತ್ತಿರಲಿಲ್ಲ. ನನ್ನ ಸ್ಕೂಲ್‌ ವಿದ್ಯಾಭ್ಯಾಸದ ಕಾಲದಲ್ಲಿ ನಾನು ಓದಿನ ಮೇಲಿಗಿಂತ ಆಟಪಾಠಗಳ ಮೇಲೆ ಆಸಕ್ತಿ ಹೆಚ್ಚು ತೋರುತ್ತಿದ್ದೆ. ಆಗೆಲ್ಲಾ ಅವರು ಬೈದು ಓದಿನ ಕಡೆ ನನ್ನ ಗಮನ ಹರಿಯುವಂತೆ ಮಾಡುತ್ತಿದ್ದರೇ ವಿನಾ ಎಂದೂ ಹೊಡೆದಿಲ್ಲ. ನಾನು ಮಿಡಲ್‌ ಸ್ಕೂಲಿನಲ್ಲಿದ್ದಾಗ (೧೯೪೫) ಅವರಿಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿಗೆ ವರ್ಗವಾಯಿತು. ಆ ಸಮಯದಲ್ಲಿ ನಾನು ನನ್ನ ತಂದೆಯವರು ಮಿಡಲ್ ಸ್ಕೂಲ್‌ ಹೆಡ್‌ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿನ ‘‘ಸಿಂಧು ಘಟ್ಟ’’ಕ್ಕೆ ಹೋಗಿ ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದೆ. ಎರಡು ವರ್ಷಗಳ ನಂತರ ಪುನಃ ಮೈಸೂರಿಗೆ ಬಂದು ಶಾರದಾ ವಿಲಾಸ ಹೈಸ್ಕೂಲಿಗೆ ಸೇರಿದೆ. ಆಗಲೂ ನನ್ನ ಗಮನ ವಿದ್ಯಾಭ್ಯಾಸದತ್ತ ಪೂರ್ಣವಾಗಿ ಹರಿದಿರಲಿಲ್ಲ. ಆಗ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದು ನಾನು ಅದರಲ್ಲಿ ಎಲ್ಲಿ ಸೇರುತ್ತೇನೋ ಎಂದು ನಮ್ಮ ಅಜ್ಜಿ (ಡಿ.ಎಲ್‌.ಎನ್‌. ರವರ ಮತ್ತು ನಮ್ಮ ತಾಯಿಯವರ ತಾಯಿ) ಹೆದರುತ್ತಿದ್ದರು. ಅವರಿಗೆ ತಿಳಿಯದಂತೆ ಜಾಥಾದಲ್ಲಿ ಭಾಗವಹಿಸಿ ಜೈ ಎಂದು ಕೂಗಿ ಬಿಡುತ್ತಿದ್ದೆ. ಆಮೇಲೆ ಸದ್ದಿಲ್ಲದೆ ಮನೆಗೆ ಬಂದು ಬಿಡುತ್ತಿದ್ದೆ. ತರಗತಿಯಲ್ಲಿ ನನ್ನ ವಿದ್ಯಾಭ್ಯಾಸದ ಮೇಲಿನ ನಿರಾಸಕ್ತಿಯನ್ನು ಗಮನಿಸಿದ್ದ ಶಾರದಾ ವಿಲಾಸ ಹೈಸ್ಕೂಲ್‌ನ ಹೆಡ್‌ಮಾಸ್ಟರ್‌ ಬಿ. ರಾಮಣ್ಣ ಮತ್ತು ಹಿರಿಯ ಅಧ್ಯಾಪಕರಾದ ಕೆ. ವಿ. ನಾರಾಯಣ (ಇವರಿಬ್ಬರೂ ಡಿ.ಎಲ್‌.ಎನ್‌.ರವರಿಗೆ ಪರಿಚಿತರು) ಇವರಿಬ್ಬರೂ “ನಿನ್ನ ಮಾವನಿಗೆ ಬಂದು ಹೇಳ್ತೀವಿ” ಎಂದು ಬೆದರಿಸಿದರು. ಆದರೆ ನಾನು ಶೇಕಡ ನಲವತ್ತಕ್ಕಿಂತ ಹೆಚ್ಚು ಅಂಕಗಳಿಸುವ ಸಾಮರ್ಥ್ಯ ತೋರಲೇ ಇಲ್ಲ. “ಮಾವ ಮುದ್ದು ಮಾಡಿ ನಿನ್ನನ್ನು ಹಾಳು ಮಾಡುತ್ತಾರೆ” ಎಂದು ರೇಗುತ್ತಾ ನನ್ನ ದೊಡ್ಡಣ್ಣ ಎಂ. ಎಸ್‌. ವೆಂಕಟಾಚಾರ್‌ ಅವರು ಕ್ಲೋಸ್‌ಪೇಟೆ (ಇಂದಿನ ರಾಮನಗರ) ಮುನಿಸಿಪಲ್‌ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರು ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿ ಸೇರಿಸಿದರು. ಅವರ ಕಟ್ಟುಪಾಡಿನಲ್ಲಿ ನನ್ನನ್ನೆ ಕಟ್ಟಿ ಹಾಕಿದ್ದರಿಂದ ನಾನು ಉತ್ತಮ ಮಾರ್ಕ್‌ಗಳೊಂದಿಗೆ ಎಸ್‌.ಎಸ್‌.ಎಲ್‌.ಸಿ.ಯನ್ನು ಫಸ್ಟ್‌ ಕ್ಲಾಸಿನಲ್ಲಿ ಪಾಸ್‌ ಮಾಡಿದೆ. ಅನಂತರ ಮತ್ತೆ ಮೈಸೂರಿಗೇ ಬಂದು ಯುವರಾಜ ಕಾಲೇಜಿಗೆ ಸೇರಿದೆ. ಅಲ್ಲಿಂದ ನಾನು ಬಲು ಬುದ್ಧಿವಂತನಾಗಿ ಬಿಟ್ಟೆ. ಇಂಟರ್‌ನಲ್ಲಿ ನಾನು ತೆಗೆದ ಮಾರ್ಕ್‌ಗಳನ್ನೇ ನೋಡಿ ಡಿ.ಎಲ್‌.ಎನ್‌. ರವರಿಗೆ ಬಲು ಸಂತೋಷವಾಯಿತು. ನನ್ನ ಬೆನ್ನು ತಟ್ಟಿ “ಮ್ಯಾಥಮೆಟಿಕ್ಸ್‌ನಲ್ಲಿ ೨೦೦ಕ್ಕೆ ೧೯೭ ತೆಗೆದಿದ್ದೀಯಲ್ಲೋ, ನನಗೆಷ್ಟು ಸಂತೋಷವಾಗಿದೆ ಗೊತ್ತಾ?” ಎಂದಾಗ ನಾನೂ ಸಂತೋಷಪಟ್ಟಿದ್ದೆ. ಆಗಿನ ಕಾಲದಲ್ಲಿ ಹಾಗೆ ಮಾರ್ಕ್ಸ ತೆಗೆದುಕೊಂಡ ವಿದ್ಯಾರ್ಥಿಗಳು ಬೆರಳೆಣಿಕೆಯಲ್ಲಿದ್ದರಷ್ಟೇ ಪಾಸ್‌ ಮಾಡುವವರೇ ಕಡಿಮೆ. ಪಾಸ್‌ ಮಾಡಿದವರು ೩೫-೪೦% ತೆಗೆದಿರುತ್ತಿದ್ದರು. ಅಂಥವರನ್ನು ಕಂಡರೆ ಡಿ.ಎಲ್‌.ಎನ್‌. ರವರಿಗೆ ಅಷ್ಟಕ್ಕಷ್ಟೆ. ನಂತರ ನಾನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎಸ್ಸಿ ಆನರ್ಸ್‌ (ಸ್ಟಾಟಿಸ್ಟಿಕ್ಸ್‌)ಗೆ ಸೇರಿದೆ. ಆಗ ಬಿಎಸ್‌ಸಿ ಪಾಸ್‌ ಕೋರ್ಸ್‌, ಆನರ್ಸ್‌ ಕೋರ್ಸ್‌ ಎಂದು ಎರಡು ಕೋರ್ಸ್‌ಗಳಿದ್ದವು. ಎರಡೂ ಬ್ಯಾಚ್‌ನವರು ಕನ್ನಡ ಪಿರಿಯಡ್‌ನಲ್ಲಿ ಒಂದೇ ಕ್ಲಾಸ್‌ನಲ್ಲಿ ಸೇರುತ್ತಿದ್ದೆವು. ಅದು ಡಿ.ಎಲ್‌.ಎನ್‌. ರವರ ಕ್ಲಾಸ್‌. ಅಜಾನುಬಾಹುವಾಗಿದ್ದ ಅವರು ಸಣ್ಣ ಜರತಾರಿ ಅಂಚಿನ ಪೇಟ ಧರಿಸಿ, ಬಿಳಿ (ಕೊಕ್ಕರೆ ಗರಿಯಂತೆ ಬಿಳುಪಾಗಿರುತ್ತಿತ್ತು) ಪಂಚೆಯನ್ನು ಕಚ್ಚೆ ಹಾಕಿ ಉಟ್ಟು, ವಿಶಾಲವಾದ ಹಣೆಯಲ್ಲಿ ಎದ್ದು ಕಾಣುವ ಕೆಂಪು ನಾಮ, ಕ್ಲೋಸ್‌ ಕಾಲರ್‌ ಕೋಟ್‌ ಧರಿಸಿ ಸ್ಟೇಜ್‌ ಮೇಲೆ ಹತ್ತಿ ನಿಂತರೆ ಸ್ಟೇಜ ತುಂಬಿದಂತಿರುತ್ತಿತ್ತು. ಕ್ಲಾಸ್‌ಗೆ ತಡವಾಗಿ ಬಂದರೆ ಅವರಿಗೆ ಹಿಡಿಸುತ್ತಿರಲಿಲ್ಲ. “ಏನಯ್ಯೋ ಕ್ರಿಕೆಟ್‌ ಸ್ಕೋರ್‌ ಕೇಳುತ್ತಿದ್ದೀರಾ, ಹರಟೆ ಕೊಚ್ಚುತ್ತಿದ್ದಿರಾ” ಎಂದು ರೇಗಿ ಬಿಡುತ್ತಿದ್ದರು. ನಮಗೆ ಬೇಜಾರಾಗುತ್ತಿರಲಿಲ್ಲ. ಬದಲಿಗೆ ಐದು ನಿಮಿಷ ಅವರ ಪಾಠ ಕೇಳಲಾಗಲಿಲ್ಲವಲ್ಲಾ ಎಂಬ ಸಂಕಟ ತೋರುತ್ತಿತ್ತು. ಅವರು ಉಪಯೋಗಿಸುತ್ತಿದ್ದ ಒಂದೊಂದು ಪದವೂ ತೂಕವಿರುತ್ತಿತ್ತು, ಸತ್ವವಿರುತ್ತಿತ್ತು. ನಿರೂಪಣೆ ಸ್ಪಷ್ಟವಾಗುತ್ತಿತ್ತು. ತಾವು ಮಾಡುವ ಪಠ್ಯಪುಸ್ತಕ ಅಥವಾ ಅದರ ಕರ್ತೃ ಅಥವಾ ಕರ್ತೃವಿನ ಮನೋಭಾವವನ್ನು ಮಾತ್ರ ಅವರು ಕೇಂದ್ರವಾಗಿಟ್ಟುಕೊಳ್ಳದೆ, ಶಿಷ್ಯರಾದ ನಮ್ಮ ಯಾವುದೇ ಸಂದೇಹಗಳಿಗೂ ಅವರು ನಿಧಾನವಾಗಿ ಬೇಸರವಿಲ್ಲದೆ ಉತ್ತರವೀಯುತ್ತಿದ್ದರು. ಅವರು ತಮ್ಮ ವಿದ್ವತ್ತನ್ನು ಬಹುಮಟ್ಟಿಗೆ ವೃದ್ಧಿಪಡಿಸಿಟ್ಟುಕೊಂಡದ್ದೇ ಇದಕ್ಕೆ ಕಾರಣವಾಗಿರಬೇಕು.

ಕಾಲೇಜಿನಲ್ಲಿ ಮಾತ್ರ ಅವರಿಗೆ ಸಾಹಿತ್ಯ ನೆನಪಿರುತ್ತಿರಲಿಲ್ಲ. ಮನೆಗೆ ಬಂದರೂ ಸಹ ತಮ್ಮ ಕೊಠಡಿ (ಲೈಬ್ರರಿ ರೂಮ್‌ ಎಂದು ನಾವು ಕರೆಯುತ್ತಿದ್ದೆವು)ಯೊಳ ಹೊಕ್ಕು ಪುಸ್ತಕವೊಂದನ್ನು ತೆರೆದು ಆರಾಮ ಕುರ್ಚಿಯಲ್ಲಿ ಕುಳಿತರೆಂದರೆ ಅವರು ಸಾಹಿತ್ಯ ಲೋಕದ ವಿಹಾರದಲ್ಲಿ ಮುಳುಗಿದರೆಂದೇ ಅರ್ಥ. ಅದರಲ್ಲೂ ತಾಳೆಗರಿ ಗ್ರಂಥಗಳೆಂದರೆ ಮುಗಿಯಿತು. ಹೀಗಾಗಿಯೇ ಅವರು ತಮ್ಮ ಗ್ರಂಥ ಸಂಪಾದನಾ ಶಾಸ್ತ್ರವನ್ನು ಕರತಲಾ ಮಲಕಗೊಳಿಸಿಕೊಂಡಿದ್ದರೆಂದು ಕಾಣುತ್ತದೆ.

ಡಿ.ಎಲ್‌.ಎನ್‌. ರವರು ಮಹಾ ತಿಂಡಿಪೋತರೂ ಆಗಿದ್ದರು. ಪುಷ್ಕಳವಾದ ಊಟ ಮಾಡಿ ಮನೆಯಿಂದ ಹೊರಟರೂ, ಹೊರಗೆಲ್ಲಾದರೂ ಹೋಟಲ್‌ ಕಂಡರೆ ನುಗ್ಗದೆ ಇರುತ್ತಿರಲಿಲ್ಲ. ಮನೆಗೆ ಸಾಮಾನುಗಳನ್ನು ತರಲು ನಾನೂ ಅವರ ಜೊತೆ ಹೋಗುತ್ತಿದ್ದೆ. ಆಗೆಲ್ಲಾ ನೂರಡಿ ರಸ್ತೆಯಲ್ಲಿ (ಈಗಿನ ಚಾಮರಾಜ ಡಬಲ್‌ ರೋಡ್‌)ದ್ದ ಅಂಗಡಿಯೊಂದರ ತಿಂಗಳ ದಿನಸಿ ತರುತ್ತಿದ್ದೆವು. ಆಗೆಲ್ಲಾ ಆಟೋ ರಿಕ್ಷಾಗಳಿರಲಿಲ್ಲ. ಕುದುರೆ ಗಾಡಿಗಳು ಇದ್ದಿದ್ದು. ಆದ್ದರಿಂದ ನಾವು ಸಾಮಾನು ಹೊತ್ತುಕೊಂಡು ಬರುತ್ತಿದ್ದೆವು. ಮನೆಯಿಂದ ಹೊರಟ ನಾವು ಮನುವನ ಪಾರ್ಕ್‌ನ ಬಳಿಯ ಹೋಟೆಲ್ಲೊಂದರಲ್ಲಿ ಇಡ್ಲಿ, ವಡೆ, ಸಾಂಬಾರ್‌ ಕಂಠಪೂರ್ತಿ ತಿಂದು ಅನಂತರ ಅಂಗಡಿಗೆ ಹೋಗಿ ಅಲ್ಲಿ ನನ್ನನ್ನು ಬಿಟ್ಟು ಅಲ್ಲಿದ್ದ ಕೃಷ್ಣ ಅಂಡ್‌ ಕೋ ಪುಸ್ತಕಾಲಯಕ್ಕೆ ಹೋಗುತ್ತಿದ್ದರು. ನಾವು ಸಾಮಾನುಗಳನ್ನು ಕಟ್ಟಿಸಿಟ್ಟು ಅವರನ್ನು ಕರೆಯಲು ಅಲ್ಲಿಗೆ ಹೋದರೆ ಅಲ್ಲಿ ಅವರು ತಮ್ಮ ಮುಖ್ಯ ಮಿತ್ರ ಕೆ. ವಿ. ರಾಘವಚಾರ್‌ರವರೊಂದಿಗೆ ವಾದ, ಚರ್ಚೆ, ತರ್ಕದಲ್ಲಿ ಮುಳುಗಿರುತ್ತಿದ್ದರು. ನಾನು ಬೇಕೆಂದೇ ಪಕ್ಕಕ್ಕೆ ನಿಂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಅವರ ಸ್ಫೂರ್ತಿ ತುಂಬಿದ ಚರ್ಚೆ ಕೇಳಲು ತರುಣರು ನಾಚಬೇಕು. ಸ್ವಲ್ಪ ಹೊತ್ತಿನ ನಂತರ ಸದ್ದು ಮಾಡಿದರೆ ಅವರೆದ್ದು “ಬುಲಾವ್‌ ಬಂತಯ್ಯಾ ಬರುತ್ತೇನೆ” ಎಂದು ಚಿಟಿಕೆ ನಶ್ಯ ಏರಿಸಿ ಮೂಗು ಒರೆಸಿಕೊಂಡು ಬರುತ್ತಿದ್ದರು. ಅಷ್ಟು ಸಾಮಾನುಗಳನ್ನು ಹೊತ್ತುಕೊಂಡು ಬರುವ ವೇಳೆಗೆ ತಿಂದ ತಿಂಡಿಯೆಲ್ಲಾ ಕರಗಿ ಹೋಗುತ್ತಿತ್ತಾದ್ದರಿಂದ ಅದರ ವಿಷಯ ಮನೆಯಲ್ಲಿ ಗೊತ್ತಾಗುತ್ತಿರಲಿಲ್ಲ.

ಡಿ.ಎಲ್‌.ಎನ್‌.ರವರಿಗೆ ಹಿರಿಯರಲ್ಲಿ ಬಹಳ ಭಕ್ತಿ, ಗೌರವವಿತ್ತು; ಅವರ ತಂದೆ ಮತ್ತು ತಂದೆಯ ತಂದೆಯವರೂ ಮೊದಲೇ ತೀರಿಹೋಗಿದ್ದರಿಂದ ತಾಯಿಯನ್ನು ಕಂಡರೆ ಅವರಿಗೆ ಬಹಳ ಭಕ್ತಿ, ಗೌರವವಿದ್ದವು. ಅವರ ಮಾತನ್ನು ಯಾರೂ ಮೀರುವಂತಿರಲಿಲ್ಲ. ಅವರ ಪತ್ನಿ ಮುತ್ತಮ್ಮರವರೂ ಸಹ ಇದಕ್ಕೆ ಅಪವಾದವಾಗಿರಲಿಲ್ಲ. ಅವರಿಗೆ ಮಕ್ಕಳಾಗಿದ್ದು ನಿಧಾನವಾಗಿ ಆಗ ನಾನು ಅವರ ಬಳಿಯೇ ಇದ್ದೆ. ಆಗಿನ ಕಾಲದಂತೆ ನನಗೆ ಉದ್ದವಾದ ಕೂದಲಿತ್ತು. ನನಗೆ ಜಡೆ ಹಾಕಿ ಬಟ್ಟೆ ಹಾಕಿ ಅವರೇ ಸ್ಕೂಲಿಗೆ ಕಳಿಸುತ್ತಿದ್ದರು. ಅನಂತರ ಅವರಿಗೆ ಮಕ್ಕಳಾದ ಮೇಲೂ (ಅವರಿಗೆ ಐದು ಜನ ಹೆಣ್ಣು ಮಕ್ಕಳು. ರಾಜಲಕ್ಷ್ಮೀ, ಪ್ರಭ, ಪದ್ಮಿನಿ, ಜಯಶ್ರೀ, ಮಾಧವಿ. ಮಧ್ಯೆ ಒಂದು ಗಂಡು ಮಗುವಾಗಿ ತೀರಿಹೋಗಿತ್ತು. ರಾಜಲಕ್ಷ್ಮೀ, ಪದ್ಮಿನಿ ಇಬ್ಬರೂ ಈಗಿಲ್ಲ). ನನ್ನ ಸ್ಥಾನವೇನು ಕಡಿಮೆಯಾಗಿರಲಿಲ್ಲ. ಅವರ ಸಮನಾಗಿ ನಾನು ಬೆಳೆದೆ. ಈಗಲೂ, ಅವರು ನನ್ನನ್ನು ಲಚ್ಚಣ್ಣ, ನನ್ನ ಹೆಂಡತಿಯನ್ನು ‘‘ವಸುಮತಿ ಮನ್ನಿ’’ (ಅತ್ತಿಗೆ) ಎಂದೇ ಕರೆಯುತ್ತಾರೆ. ಅವರ ಮಕ್ಕಳ ಮದುವೆಗಳಲ್ಲಿ ನಮಗಿದ್ದ ಪ್ರಾಶಸ್ತ್ಯವನ್ನು ಕಂಡು ಕರುಬಿದ ಕೆಲವರು (ಹತ್ತಿರದ ಬಂಧುಗಳೂ ಹೌದು) “ಡಿ.ಎಲ್‌.ಎನ್‌.ರಿಗೆ ಗಂಡು ಮಕ್ಕಳೇ ಇಲ್ಲ. ಇವರಿಬ್ಬರೂ ಎಲ್ಲಿಯ ಅಣ್ಣ ಅತ್ತಿಗೆ” ಅಂತ ಹಿಂದೆ ಆಡಿಕೊಂಡಿದ್ದೂ ಉಂಟು. ಅದೂ ಅಲ್ಲದೆ ೧೯೬೩ರಲ್ಲಿ ನನ್ನ ಮದುವೆ ನಡೆದಾಗ (ನನ್ನ ಹೆಂಡತಿಯ ತಂದೆಯವರು ಡಿ.ಎಲ್‌.ಎನ್‌.ರವರೂ ನೆಂಟರೂ, ಮಿತ್ರರೂ ಆಗಿದ್ದರಿಂದ ಅವರ ಮೂಲಕವೇ ಈ ಸಂಬಂಧ ಸ್ಥಿರವಾಯಿತು.) ಕನ್ಯಾದಾನ ತೆಗೆದುಕೊಂಡಿದ್ದೂ ಡಿ.ಎಲ್‌.ಎನ್‌.ರವರೇ. ಏಕೆಂದರೆ ನನ್ನ ತಾಯಿ ತೀರಿಕೊಂಡಿದ್ದರು. ೧೯೬೩ರಲ್ಲಿ ನನ್ನ ಇಬ್ಬರು ಅತ್ತಿಗೆಯರೂ ಒಬ್ಬರು ಬಸುರಿ, ಒಬ್ಬರು ಬಾಣಂತಿ ಇದ್ದರಿಂದ ನಾನು ಅವರಲ್ಲಿ ಪ್ರಾರ್ಥಿಸಿಕೊಂಡೆ. ಅದನ್ನು ಅವರು ನಡೆಸಿಕೊಟ್ಟರು. ಅದರಿಂದ ಇನ್ನೊಂದು ಕೆಲಸವೂ ಆಯಿತು. ಮದುವೆ ನಿಶ್ಚಯವಾದಾಗ ನಾನು ಕಾಸರಗೋಡಿನಲ್ಲಿ ಕೆಲಸದಲ್ಲಿದ್ದೆ. ಆ ಆಫೀಸಿನ ಹೆಸರಾಗಲೀ, ಹುದ್ದೆಯಾಗಲೀ, ಸಂದರ್ಭವಾಗಲೀ, ನಮ್ಮ ಮಾನವರಿಗೆ ಗೊತ್ತಿರಲಿಲ್ಲ. (ಆಗಿನ ಕಾಲದಲ್ಲಿ ಹಾಗೇ ನಡೆಯುತ್ತಿತ್ತು. ಹಿರಿಯರು ನಿಶ್ಚಯಿಸಿದರೆ ಮುಗಿಯಿತು. ಮದುವೆ ನಡೆಯುತ್ತಿತ್ತು. ಅದರ ಸಾಧಕ ಬಾಧಕಗಳನ್ನು ಬೀಗರಿಬ್ಬರೂ, ಹುಡುಗ ಹುಡುಗಿಯರೂ ಅನುಭವಿಸುತ್ತಿದ್ದರು. ಯಾರನ್ನೂ ದೂರುತ್ತಿರಲಿಲ್ಲ, ಪಶ್ಚಾತ್ತಾಪವೂ ಪಡುತ್ತಿರಲಿಲ್ಲ. ನನಗೂ ಈಗ ನಾಲ್ಕು ಹೆಣ್ಣು ಮಕ್ಕಳು. ಎಲ್ಲರನ್ನು ಓದಿಸಿದೆ. ಕೆಲಸಕ್ಕೂ ಸೇರಿದರು. ಮದುವೆ, ಮಕ್ಕಳೂ ಆದರು. ಮೊಮ್ಮಕ್ಕಳನ್ನು ಆಡಿಸುತ್ತಾ ನಾವಿಬ್ಬರೂ ಹಾಯಾಗಿದ್ದೇವೆ.) ಮಾವನವರು ಅದಕ್ಕೆಂದು ಕಾಗದವೊಂದನ್ನು ಬರೆದು ಅವರ ಮೊಮ್ಮಗನ ಕೈಯಲ್ಲಿ ಡಿ.ಎಲ್‌.ಎನ್‌. ರವರಿಗೆ ಕಳಿಸಿದರಂತೆ. ಅದನ್ನು ಬರೆದವಳು ನನ್ನ ಹೆಂಡತಿ. ಸೈನ್‌ ಮಾಡಿದ್ದು ಮಾವನವರು ಅಷ್ಟೇ. ಡಿ.ಎಲ್‌.ಎನ್‌.ರವರು ಅದನ್ನೋದಿ ಬೇಕಿದ್ದ ವಿವರಗಳನ್ನೆಲ್ಲ ನೀಡಿ, ಆ ಕೈಬರಹ ಯಾರದೆಂದು ತಿಳಿದುಕೊಂಡರಂತೆ. ಹಾಗೆಯೇ ನಮ್ಮ ಮನೆಯವರಿಗೆಲ್ಲಾ ಸ್ವಲ್ಪ ಮಟ್ಟಿಗೆ ಸಂಗೀತ ಜ್ಞಾನವುಂಟು. ನನ್ನ ಹೆಂಡತಿಯೂ ಚೆನ್ನಾಗಿ ಹಾಡುತ್ತಾಳೆ. ಈ ಎರಡು ಅಂಶಗಳನ್ನು ಎತ್ತಿ ಹಿಡಿದು ನನಗೆ “ನೋಡು ನಿನ್ನವಳ ಕೈ ಬರಹ ಚೆನ್ನಾಗಿದೆ. ಅವಳ ಕೈಯಲ್ಲಿ ಲೇಖನ (ಆ ವಿಷಯ ಮುಂದೆ ಹೇಳುತ್ತೇನೆ)ಗಳನ್ನು ಫೇರ್‌ ಮಾಡಿಸು. ಹಾಗೆಯೇ ಹಾಡಿಗೆ ಉತ್ತೇಜನ ನೀಡು. ಮುಂದೆ ರೇಡಿಯೋ ಆರ್ಟಿಸ್ಟ್‌ಆಗುವಂತೆ ಮಾಡು” ಅಂತ ಡಿ.ಎಲ್‌.ಎನ್‌. ಅಪ್ಪಣೆ ಕೊಡಿಸಿದರು.ನಾನು ಅದರಂತೆಯೇ ನಡೆದುಕೊಂಡಿದ್ದೆ. ನಾನು ಏನೇ ಬರೆದರೂ ಫೇರ್‌ ಕಾಪಿ (ಕಾರ್ಬನ್‌ ಕಾಪಿಗಳೂ) ಮಾಡುವುದೂ ಅವಳೇ. ಹಾಗೆಯೇ ಏಐಆರ್‌ನಲ್ಲಿ ಇಪ್ಪತ್ತು ವರ್ಷ (ಕೇರಳದ ಕೋಜಿಕೋಡ್‌ ಮತ್ತು ಮೈಸೂರಿನ ಆಕಾಶವಾಣಿಯಲ್ಲಿ) ಆರ್ಟಿಸ್ಟ್‌ಆಗಿದ್ದರು.

ಡಿ.ಎಲ್‌.ಎನ್‌. ರವರು ತಮ್ಮ ತಾಯಿಗೆ ಹೇಗೆ ಗೌರವ ಕೊಡುತ್ತಿದ್ದರೋ, ಅಕ್ಕನ (ನಮ್ಮ ತಾಯಿ) ಬಳಿಯೂ ಹಾಗೆಯೇ ಇರುತ್ತಿದ್ದರು. ಅಕ್ಕನೆಂದರೆ ಬಲು ಪ್ರೀತಿ. ತಂದೆಯವರಿಗೆ ಆಗಾಗ ವರ್ಗ (ಅದೂ ಹಳ್ಳಿಗಳಿಗೆ)ವಾಗುತ್ತಿದ್ದುದರಿಂದ (ಅದೂ ಅಲ್ಲದೆ ನಾವು ಎಂಟು ಜನ ಗಂಡು ಮಕ್ಕಳು) ನಮಗೆ ಆರ್ಥಿಕವಾಗಿ ಬಹಳ ನೆರವನ್ನು ನೀಡಿದ್ದರು. ನಾವು ನಾಲ್ಕು ಜನ ಗಂಡು ಮಕ್ಕಳು. (ದೊಡ್ಡವರಿಬ್ಬರೂ ಹೈಸ್ಕೂಲ್‌ ಮೇಷ್ಟರುಗಳು. ನನ್ನ ತಮ್ಮ ರೈಲ್ವೆಯಲ್ಲಿ, ನಾನೊಬ್ಬ ಮಾತ್ರ ಕರ್ನಾಟಕವನ್ನೇ ಬಿಟ್ಟು ಹೊರಟು ಹೋಗಿದ್ದೆ). ಓದಿ ಒಂದು ನೆಲೆ ಕಂಡಿದ್ದು ಅವರ ನೆರವಿನಿಂದಲೇ. ನನ್ನ ನಾಲ್ಕು ಜನ ಅಕ್ಕತಂಗಿಯರ ಮದುವೆಯೂ ಅವರ ಬಲದಿಂದಲೇ ನಡೆಯಿತೆನ್ನಬಹುದು. ಅವರೆಲ್ಲರೂ ಬೆಂಗಳೂರಿನಲ್ಲಿಯೇ ಇದ್ದಾರೆ. (ನಾನು ಮಾತ್ರ ರಿಟೈರ್‌ ಆದ ನಂತರವೂ ಮೈಸೂರಿನ ಮೋಹ ಬಿಡದೆ ಇಲ್ಲೇ ಇದ್ದೇನೆ. ನನ್ನ ಮನೆಗೂ ಸರಸ್ವತಿಪುರಂನ ಅವರ ಮನೆಗೂ ಕಾಲ್ನಡಿಗೆಯ ದೂರವಷ್ಟೇ.) ಕಾಸರಗೋಡಿನಿಂದ ಬೆಂಗಳೂರಿಗೆ ಹೋಗುವಾಗ ಮತ್ತು ಅಲ್ಲಿಂದ ಹಿಂತಿರುಗುವಾಗ ಒಂದು ದಿನ ಇವರ ಮನೆಯಲ್ಲಿ ತಂಗಿಯೇ ಹೋಗುತ್ತಿದ್ದೆ. ನನ್ನ ತಾಯಿಯವರು ಅನಾರೋಗ್ಯದಿಂದ ನರಳುತ್ತಿದ್ದಾಗ ಡಿ.ಎಲ್‌.ಎನ್‌. ತಮ್ಮ ಬಳಿಯೇ ಕರೆಸಿ ಇಟ್ಟುಕೊಂಡು ಎಲ್ಲಾ ಬಗೆಯ ಚಿಕಿತ್ಸೆಗಳನ್ನು ಕೊಡಿಸಿದರು. ಆದರೂ ಫಲವುಂಟಾಗಲಿಲ್ಲ. ಆಗ ನಾನು ಎರ್ನಾಕುಳಂನಲ್ಲಿದ್ದೆ. ನನಗೆ ಬೇಗ ಬರಲಾಗಲಿಲ್ಲ. ನಾನು ಬಂದಾಗ ತಾಯಿಯವರ ಸ್ಥಿತಿ ಚೆನ್ನಾಗಿರಲಿಲ್ಲ. ನನ್ನ ಅಣ್ಣ ತಮ್ಮಂದಿರೆಲ್ಲಾ ಬಂದು ಸೇರಿದ್ದರು. ಅವರೆಲ್ಲಾ ಇದ್ದರೂ ನನ್ನ ಕೈಯಿಂದಲೇ ನನ್ನ ಅಜ್ಜಿ ನನ್ನ ತಾಯಿಯವರ ಬಾಯಿಗೆ ಗಂಗಾತೀರ್ಥ ಬಿಡಿಸಿದರು. ನಮ್ಮ ಜನದಲ್ಲಿ ‘‘ಮುದ್ರಾಧಾರಣಿ’’ ಎಂಬ ಒಂದು ಪದ್ಧತಿಯಿದೆ. ಅದು ಮಾಡಿಸಿ (ಹೆಣ್ಣಾಗಲೀ, ಗಂಡಾಗಲಿ) ಕೊಂಡರೆ ಅವರು ಮಡಿ ಎಂದರ್ಥ. ಅಂಥವರ ಕೈಯಿಂದ ಗಂಗಾತೀರ್ಥ ಕುಡಿದರೆ ವೈಕುಂಠ ಪ್ರಾಪ್ತಿಯಾಗುತ್ತದೆ. ಅಂತ ನಮ್ಮಜ್ಜಿ ಹೇಳುತ್ತಿದ್ದರು. ಅರ್ಧ ನೀರು ಕುಡಿದರು, ಮಿಕ್ಕಿದೆಲ್ಲಾ ಹೊರಗೆ ಬಂತು. ನಮ್ಮ ತಾಯಿ ತೀರಿಕೊಂಡಿದ್ದರು. ತಾಯಿ ಇಲ್ಲದಿದ್ದರೂ ಸೋದರ ಮಾವ ಇರಬೇಕು ಎನ್ನುತ್ತಾರೆ. ಹಾಗೆ ನಾನು ಡಿ.ಎಲ್‌.ಎನ್‌. ರವರಿಗೆ ಹತ್ತಿರವಾಗಿಯೇ ಇದ್ದೆ. ಇನ್ನೆರಡು ವರ್ಷಗಳಲ್ಲಿ ಅಜ್ಜಿಯೂ ತೀರಿಕೊಂಡಿದ್ದರಿಂದ ಡಿ.ಎಲ್‌.ಎನ್‌. ರವರಿಗೆ ಒಂದು ಬಗೆಯ ಮೌಢ್ಯ ಅವರಿಸಿದಂತಿತ್ತು. ಜೊತೆಗೆ ಅವರ ಆಗೋಗ್ಯದಲ್ಲಿ ಏರುಪೇರುಗಳುಂಟಾದವು. ಇದನ್ನೆಲ್ಲಾ ಕಂಡ ಹಿರಿಯ ಮಗಳು ಡಿ. ರಾಜಲಕ್ಷ್ಮಿ (CFTRI ನಲ್ಲಿ ಹಿರಿಯ ಅಧಿಕಾರಿಯಾಗಿದ್ದರು.) ‘‘ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನಿಮ್ಮನ್ನು ನನ್ನ ತಂಗಿಯರನ್ನು ನಾನೇ ನೋಡಿಕೊಳ್ಳುತ್ತೇನೆ’’ ಎಂದು ಅವಿವಾಹಿತರಾಗಿಯೇ ನಿಂತು ಬಿಟ್ಟರು. ಅದರಂತೆ ನಡೆದುಕೊಂಡರು. ಎರಡನೆಯವಳು ಪ್ರಭಳ ಮದುವೆ ಶ್ರೇಷ್ಠ ಸಾಹಿತಿ ಗೊರೂರ್ ರಾಮಸ್ವಾಮಿ ಅಯ್ಯಂಗಾರ್‌ರ ಬಂಧು ವರ್ಗಕ್ಕೆ ಸೇರಿದ ಕೇಂದ್ರ ಸಿಲ್ಕ್‌ಬೋರ್ಡ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎಂ.ಎನ್‌. ಸೀತಾರಾಮ್‌ ಅಯ್ಯಂಗಾರ್‌ರೊಂದಿಗೆ ನಡೆದಾಗ ಡಿ.ಎಲ್‌.ಎನ್‌.ರವರಿಗೆ ಹಸೇಮಣೆಯ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದೆ ಕುರ್ಚಿಯಲ್ಲಿ ಕುಳಿತೇ ಕನ್ಯಾದಾನ ಮಾಡಿಕೊಟ್ಟರು.

ಡಿ.ಎಲ್‌.ಎನ್‌. ಸ್ನೇಹಪರರು. ಉದ್ಧಾಮ ಪಂಡಿತರಾಗಿದ್ದರೂ, ಅಹಂಕಾರ ಎನ್ನುವುದು ಅವರ ಬಳಿ ಸುಳಿಯುತ್ತಿರಲಿಲ್ಲ. ಎಲೆ ಮರೆಯ ಕಾಯಿಯಂತೆಯೇ ಅವರು ಜೀವನ ನಡೆಸಿದರು. ಸರಿಯೆನ್ನಿಸಿದ್ದನ್ನು ಮುಕ್ತಕಂಠದಿಂದ ಶ್ಲಾಘಿಸಿದರೂ ಸರಿಯಲ್ಲದ್ದನ್ನು ನಿರ್ಭಯದಿಂದ ಖಂಡಿಸುತ್ತಿದ್ದರು. ಆದರೆ ‘‘ನ ಬ್ರೂಯಾತ್‌ ಸತ್ಯಂ ಅಪ್ರಿಯಂ’’ ಎನ್ನುವಂತೆ ಯಾರನ್ನೂ ಅವರು ನೋಯಿಸಿ ಮಾತನಾಡುತ್ತಿರಲಿಲ್ಲ. ಅವರು ಸ್ನೇಹಿತರನ್ನು ಹುಡುಕಿಕೊಂಡೇನೂ ಹೋಗುತ್ತಿರಲಿಲ್ಲವಾದರೂ ಅವರು ಎಂದಿಗೂ ಒಂಟಿತನವನ್ನು ಅನುಭವಿಸುತ್ತಿರಲಿಲ್ಲ. ಅದವರಿಗೆ ಇಷ್ಟವೂ ಆಗುತ್ತಿರಲಿಲ್ಲ. ಅವರ ಪಾಂಡಿತ್ಯ, ಪ್ರತಿಭೆಗೆ ಮನಸೋತು ಮುಗ್ಧರಾದ ಜನರು ಅವರ ಬಳಿ ಸಾರಿ ಮಿತ್ರರಾಗುತ್ತಿದ್ದರು. ಅವರ ಶಿಷ್ಯವರ್ಗವಿದ್ದಂತೆಯೇ ಅವರ ಮಿತ್ರವರ್ಗವೂ ಬಹು ದೊಡ್ಡದಿತ್ತು. ಅವರು ತುಂಬ ಸಲುಗೆಯಿಂದ ಏಕವಚನದಲ್ಲೇ ಕೆಲವರನ್ನು ಮಾತನಾಡಿಸುತ್ತಿದ್ದರೂ ಅದರಲ್ಲಿ ಸಲುಗೆ ವಾತ್ಸಲ್ಯಗಳು ತುಂಬಿ ತುಳುಕಾಡುತ್ತಿದ್ದವು. ವಿನಯ, ಅಧಿಕಾರ, ಗಾಂಭಿರ್ಯ, ಸಹನೆಗಳೂ ಸಹ ಅವರ ಮಾತಿನಲ್ಲಿ ತುಂಬಿರುತ್ತಿದ್ದವು.

ಡಿ.ಎಲ್‌.ಎನ್‌. ರವರ ಮನೆ ಹೊಕ್ಕರೆ ಬಲಗಡೆ ಅವರ ಲೈಬ್ರರಿ ರೂಮ್‌. ನನ್ನ ಕೊಠಡಿ ಅದಕ್ಕೆ ಎದುರಾಗಿತ್ತು. ಹಾಗಾಗಿ ಅವರನ್ನು ಹುಡುಕಿಕೊಂಡು ಯಾರೇ ಬಂದರೂ ನಾನು ಮನೆಯಲ್ಲಿದ್ದರೆ ನಾನೇ ಬಾಗಿಲು ತೆರೆದು ಅವರನ್ನು ಸ್ವೀಕರಿಸುತ್ತಿದ್ದೆ. ಹಾಗಾಗಿ ಬರುವವರಲ್ಲಿ ತೀ.ನಂ. ಶ್ರೀಕಂಠಯ್ಯ, ಕೆ. ವಿ. ರಾಘವಾಚಾರ್‌, ಟಿ. ಪಿ. ಕೃಷ್ಣಮಾಚಾರ್‌, ಡಿ.ವಿ.ಕೆ. ಮೂರ್ತಿ, ಎಚ್‌. ಎಂ. ಶಂಕರನಾರಾಯಣರಾವ್‌, ಎನ್‌. ಅನಂತರಂಗಾಚಾರ್‌, ಬಿ. ವಿ. ವೈಕುಂಠರಾಜು ಮೊದಲಾದವರು. ಇವರ ಪೈಕಿ ಡಿ.ಎಲ್‌.ಎನ್‌. ಮತ್ತು ತೀ.ನಂ. ಶ್ರೀಕಂಠಯ್ಯ ಇವರ ಮಧ್ಯೆ ನಡೆಯುತ್ತಿದ್ದ ಮಾತು ಕತೆಗಳು ಬಲು ಸ್ವಾರಸ್ಯಕರವಾಗಿರುತ್ತಿದ್ದವು. ಇಬ್ಬರೂ ಒಂದೇ ಜಿಲ್ಲೆಗೆ (ತುಮಕೂರು) ಸೇರಿದವರು. ಡಿ.ಎಲ್‌.ಎನ್‌. ರವರಿಗೆ ತೀ.ನಂ.ಶ್ರೀಯವರಲ್ಲಿ ಅಪಾರ ಪ್ರೀತಿ ಗೌರವಗಳಿದ್ದವು. ಕನ್ನಡಕ್ಕಾಗಿಯೇ ಮೀಸಲಾಗಿದ್ದ ಅವರ ದುಡಿಮೆಯು ಅವರ ನರನಾಡಿಗಳಲ್ಲಿ ಹರಿಯುತ್ತಿದ್ದ ರಕ್ತಕಣಗಳಲ್ಲಿ ಮಿಳಿತವಾಗಿತ್ತು. ಈ ಇಬ್ಬರು ದಿಗ್ಗಜಗಳ ಸೇವೆ ಇನ್ನೂ ಅಗತ್ಯವಾಗಿತ್ತು. ಆದರೆ ತೀ.ನಂ.ಶ್ರೀಯವರು ೧೯೬೬ರಲ್ಲಿ ನಿಧನರಾದರು. ಇದು ಡಿ.ಎಲ್‌.ಎನ್‌. ರವರಿಗೆ ದೊಡ್ಡ ಆಘಾತವಾಯಿತು. ಅವರು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿದರು. ಅಷ್ಟೇ ಅಲ್ಲ ಮುಂದಿನ ಐದು ವರ್ಷಗಳಲ್ಲಿ ೧೯೭೧ರಲ್ಲಿ ಡಿ.ಎಲ್‌.ಎನ್‌. ರ ಜೀವನ ಕೊನೆಗೊಂಡಿತು. ಇದರ ಬಗ್ಗೆ ಹಿರಿಯ ಸಾಹಿತಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ರವರು ಎಲ್ಲೋ ಹೇಳಿರುವುದು ನನ್ನ ನೆನಪಿಗೆ ಬರುತ್ತದೆ. ಡಿ.ಎಲ್‌.ಎನ್‌. ರವರದು ಆಳವಾದ ಪಾಂಡಿತ್ಯವಾದರೆ ತೀ.ನಂ. ಶ್ರೀ.ಯವರದು ಸರ್ವವ್ಯಾಪ್ತಿ ವಿಶಾಲ ಪಾಂಡಿತ್ಯ.

ಎಂ.ಎಸ್‌.ಸಿ. (ಸ್ಟಾಟಿಸ್ಟಿಕ್ಸ್‌) ಪಾಸಾದ ಕೆಲವೇ ತಿಂಗಳಲ್ಲಿ ನನಗೆ ಕೇಂದ್ರ ಸರ್ಕಾರದ ಆಫೀಸೊಂದರಲ್ಲಿ ಕೆಲಸ ಸಿಕ್ಕಿ ನಾನು ಮೈಸೂರು ಬಿಟ್ಟು ಕೇರಳಕ್ಕೆ ಹೋದೆ. ನನ್ನ ಮೊದಲನೆಯ ಪೋಸ್ಟಿಂಗ್‌ ಕಾಸರಗೋಡಾಗಿತ್ತು. ಆಗಿನ ಕಾಲದಲ್ಲಿ ಅಲ್ಲಿಗೆ ಹೋಗಲು ಮೈಸೂರು ರೈಲ್ವೆ ಸ್ಟೇಷನ್‌ಗೆ ಹೋಗಿ ಅದರ ಬಳಿಯಿಂದ ಹೊರಡುವ ಗಣೇಶ ಮೋಟಾರ್‌ ಸರ್ವೀಸ್‌ ಬಸ್‌ ಅನ್ನು ಹಿಡಿಯಬೇಕಾಗಿತ್ತು. ಮೈಸೂರು ರೈಲ್ವೆ ಸ್ಟೇಷನ್‌ಗೆ ಡಿ.ಎಲ್‌.ಎನ್‌.ರವರ ಮನೆಯ ಬಳಿ ಇದ್ದ ಚಾಮರಾಜಪುರಂ ರೈಲ್ವೆ ಸ್ಟೇಷನ್‌ನಿಂದ ಟ್ರೈನ್‌ನಲ್ಲಿ ಹೋಗಬೇಕು. ಉದ್ಯೋಗಕ್ಕೆ ಸೇರಲೆಂದು ಹೊರಟ ನನ್ನನ್ನು ರೈಲ್ವೆ ಸ್ಟೇಷನ್‌ವರೆಗೆ ಕರೆ ತಂದು ಬಿಟ್ಟಾಗ ಅವರು ನನ್ನ ಹಾಸಿಗೆಯನ್ನು ಹೊತ್ತುಕೊಂಡು ಬಂದರು. ನನ್ನ ಕೈಯಲ್ಲಿ ಒಂದು ಕಬ್ಬಿಣದ ಟ್ರಂಕ್‌ ಇತ್ತು. ನನ್ನನ್ನು ಟ್ರೈನ್‌ ಹತ್ತಿಸಿ ಕೈ ಬೀಸಿ ಟಾಟಾ ಮಾಡಿದ ಅವರ ರೂಪ ನಾನು ಇಂದಿಗೂ ಮರೆಯಲಾರೆ.

ಕಾಲೇಜ್‌ ವಿದ್ಯಾಭ್ಯಾಸದ ಸಮಯದಲ್ಲಿ ನಾನು ಒಂದು ಪುಟ್ಟ ಕಥೆ ಬರೆದಿದ್ದೆ ‘‘ನಾಯಿ ಮರಿಗಳು’’, ಆಗ ನನ್ನ ಕನ್ನಡ ಅಧ್ಯಾಪಕರಾಗಿದ್ದ ಯು. ಕೆ. ಸುಬ್ಬರಾಯಾಚಾರ್‌ ನನ್ನ ಈ ಹವ್ಯಾಸವನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಆ ಕತೆ ಒಂದು ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಐವತ್ತು ವರ್ಷದ ಹಿಂದಿನ ಮಾತು. ಪತ್ರಿಕೆಯ ಹೆಸರು ಕತೆಗಾರ ಅಂತ ಇರಬೇಕು. ಕತೆ ಹೇಗಿತ್ತೋ ಏನೋ ಆದರೆ ಅದು ನನ್ನ ಮೊದಲ ಹೆಜ್ಜೆಯಾಗಿತ್ತು. ಈ ಬರೆಯುವ ಹವ್ಯಾಸವನ್ನು ಕೇರಳಕ್ಕೆ ಹೋದ ಮೇಲೆ ನಾನು ಬೆಳೆಸಿಕೊಳ್ಳತೊಡಗಿದೆ. ಇದಕ್ಕೆ ಡಿ.ಎಲ್‌.ಎನ್‌.ರವರು ಬಹುಮಟ್ಟಿಗೆ ಕಾರಣರು. ಮಲಯಾಳ ಭಾಷೆ ಕಲಿಯಲು ಅವರು ಸಲಹೆ ನೀಡಿದರು. ಮಲಯಾಳ ಅನ್ನುವುದು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಇದರಲ್ಲಿ ಸಂಸ್ಕೃತ ಪದಗಳೇ ತುಂಬಿದ್ದು ಮಣಿ ಪ್ರವಾಳ ಶೈಲಿ ಬಹಳ ಗಂಭೀರವಾಗಿರುತ್ತದೆ. ಭಾಷಣ ಮಾಡುವವರು ಕತೆ ಬರೆಯುವವರು ಉಪಯೋಗಿಸುವ ಭಾಷೆ ಸುಲಲಿತವಾಗಿರುತ್ತದೆ. ನಮಗೆ ಸುಮಾರಾಗಿ ಅರ್ಥವಾಗುತ್ತದೆ. ಹಾಗೆ ನಾನು ಆ ಭಾಷೆ ಕಲಿಯತೊಡಗಿದೆ. ಎಂದರೆ ಓದಲು ಕಲಿತೆ. ಬರೆಯಲು ಕಲಿತೆ. ಮುಂದಿನ ಹೆಜ್ಜೆಯಾಗಿ ಮಲಯಾಳದಿಂದ ಕತೆಗಳು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸುವ ಮಟ್ಟಿಗೆ ಕಲಿತೆ. ಆಗ ಭಾಷಾಂತರ ಮಾಡಿದ ‘‘ಗೌರಿ’’(ಕಾದಂಬರಿ)ಯನ್ನು ಡಿ.ವಿ.ಕೆ. ಮೂರ್ತಿಯವರು ಪ್ರಕಟಪಡಿಸಿದರು. ‘‘ಪರೀಕ್ಷೆ’’ ನಾಟಕವನ್ನು ಶಾರದಾ ಮಂದಿರದ ಹೆಚ್‌. ಎಂ. ಶಂಕರನಾರಾಯಣರಾಯರು ಪ್ರಕಟಿಸಿದರು. ಹಾಗೇ ನಾನು ತಮಿಳು ಬಲ್ಲ ಸಹೋದ್ಯೋಗಿಗಳಿಂದ ತಮಿಳೂ ಕಲಿತೆ. ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ ನಿರಪರಾಧಿ ಹಾಗೂ ‘‘ವಿಶೇಷ ಅತಿಥಿ’’ (ನಾಟಕ)ಯನ್ನು ಸಿಂಧುವಳ್ಳಿ ಅನಂತಮೂರ್ತಿ (ಸುರುಚಿ ಪ್ರಕಾಶನ)ಯವರು ಪ್ರಕಟಿಸಿದರು. ಈ ಪ್ರಕಟಣೆಗಳ ಹಿಂದೆ ಡಿ.ಎಲ್‌.ಎನ್‌.ರವರ ಪ್ರೋತ್ಸಾಹ ಬೆಂಬಲಗಳಿದ್ದವು. ಅನಂತರದ ವರ್ಷಗಳಲ್ಲಿ ನಾನು ನ್ಯಾಷನಲ್‌ ಬುಕ್‌ ಟ್ರಸ್ಟ್‌, ಕೇಂದ್ರ ಸಾಹಿತ್ಯ ಅಕಾಡೆಮಿಯವರ ನಿರ್ದೇಶನದಂತೆ ಕೆಲವು ಮಲೆಯಾಳ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಇಂದಿಗೂ ಅದು ಮುಂದುವರೆಯುತ್ತಿದೆ. ಆಗೆಲ್ಲಾ ಡಿ.ಎಲ್‌.ಎನ್‌.ರವರು “ವ್ಯಾಸಂಗದಿಂದ ನಮ್ಮ ವಿಜ್ಞಾನವನ್ನು ವೃದ್ಧಿಪಡಿಸಿಕೊಳ್ಳಬೇಕು. ಉಪಯುಕ್ತವಾದ ಏನನ್ನಾದರೂ ಬರೆಯುತ್ತಿರಬೇಕು (ಬರೆದ ನಂತರ ಅದು ಪ್ರಕಟವಾಗಲೇ ಬೇಕೆಲ್ಲವೇ?) ಮಲೆಯಾಳ ಭಾಷೆಯನ್ನು ನಿನ್ನ ಶಕ್ತ್ಯಾನುಸಾರ ಕಲಿತು ಅದರ ಸಾಹಿತ್ಯದ ವಿಷಯವಾಗಿ ಆತ್ಮ ವಿಶ್ವಾಸದಿಂದ ಲೇಖನಗಳನ್ನು ಬರೆದು ಆ ಭಾಷೆಯಲ್ಲಿನ ಕಥೆ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡಿಗರಿಗೆ ಪರಿಚಯ ಮಾಡಿಕೊಳ್ಳಲು ಶ್ರಮಿಸುವುದೇ ಆದರೆ ಅದು ಒಂದು ಅಭಿನಂದನಾರ್ಹವಾದ ಕೆಲಸವೇ, ತಿಳಿಯಿತೇ” ಎಂದು ನನಗೆ ತಿಳಿಯ ಹೇಳಿದ್ದರು. ಆ ಸೂಕ್ತ ಸಲಹೆಗಳನ್ನು ನಾನು ಶಿರಸಾವಹಿಸಿ ಪಾಲಿಸಿದೆನಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದುವರೆದೆ. ಕೇರಳದ ಅತಿ ಪುರಾತನ ದಿನಪತ್ರಿಕೆ (ಸ್ವಾತಂತ್ರ್ಯ ಪೂರ್ವದ್ದು). ‘‘ಮಾತೃಭೂಮಿ’’ ದಿನಪತ್ರಿಕೆಯ ಸಂಪಾದಕ ಮಂಡಲಿಯಲ್ಲೊಬ್ಬರು ಅದರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿಸಲು ಮಹಿಳೆಯರಿಗೆ ರುಚಿಸುವಂಥ ಕನ್ನಡ ಕಾದಂಬರಿಯೊಂದನ್ನು ಅನುವಾದಿಸಿ ಕೊಡಬೇಕೆಂದು ಕೇಳಿಕೊಂಡರು. ನಾನು ಹರ ಸಾಹಸ ಮಾಡಿ ಅನುಪಮಾ ನಿರಂಜನರವರ ‘‘ಋಣ’’ ಎಂಬ ಕಾದಂಬರಿಯನ್ನು ಕನ್ನಡದಿಂದ ಮಲೆಯಾಳಕ್ಕೆ ಅನುವಾದ ಮಾಡಿಕೊಟ್ಟೆ. ಅದನ್ನೆ ಸ್ವಲ್ಪ ಮಟ್ಟಿಗೆ ನನ್ನ ಮಕ್ಕಳು (ಅವರೆಲ್ಲಾ ಅಲ್ಲೇ ಓದು ಬರಹ ಕಲಿತದ್ದರಿಂದ ನನಗಿಂತ ಚೆನ್ನಾಗಿ ಮಲೆಯಾಳ ಬಲ್ಲವರಾಗಿದ್ದರು). ಅದರಲ್ಲಿನ ಕೆಲ ಸಣ್ಣಪುಟ್ಟ ದೋಷಗಳನ್ನು ತಿದ್ದಿಕೊಟ್ಟರು. ಹಾಗೆ ಅದು ಆ ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾಯಿತು. ಓದುಗರು ನಿಜವಾಗಿಯೂ ಅದನ್ನೆ ಇಷ್ಟಪಟ್ಟರು. ಅದು ಪುಸ್ತಕದಲ್ಲಿಯೂ ಬಂತು.

ಡಿ.ಎಲ್‌.ಎನ್‌. ರವರು ಕನ್ನಡ, ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರೂ, ಸಂಪಾದಕ ಮಂಡಲಿಯ ಅಧ್ಯಕ್ಷರೂ, ಕನ್ನಡ ಪ್ರಾಧ್ಯಾಪಕರೂ ಆಗಿದ್ದರು. ೧೯೩೨ ರಿಂದ ೧೯೬೨ರವರೆಗೆ ೩೦ ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ನಿವೃತ್ತಿಯಾದ ನಂತರವೂ ತಮ್ಮ ದುಡಿಮೆಯನ್ನು ಮುಂದುವರಿಸುತ್ತಿದ್ದರು. ಆದರೆ ಅವರ ಆರೋಗ್ಯ ಕ್ರಮೇಣ ಕ್ಷೀಣಿಸತೊಡಗಿದ್ದು, ೧೯೭೧ರ ಮೇ ಒಂದರಂದು ಹೃದಯಾಘಾತಕ್ಕೆ ಒಳಗಾದರು. ಒಂದು ವಾರ ಅವರು ದೈಹಿಕವಾಗಿ ಅಬೋಧಾವಸ್ಥೆಯಲ್ಲಿದ್ದರೂ ಅಸ್ಪಷ್ಟವಾಗಿ ಅವರ ಬಾಯಿಯಿಂದ ಕನ್ನಡ ನಿಘಂಟಿನ ಕೆಲವಾರು ಶಬ್ದಗಳು ಹೊರಡುತ್ತಲೇ ಇದ್ದವು. ಅಷ್ಟರಮಟ್ಟಿಗೆ ಅವರ ಮನಸ್ಸು ಕನ್ನಡಮಯವಾಗಿ, ನರನಾಡಿಗಳಲ್ಲಿ ಕನ್ನಡ ಸ್ವರಗಳು ಸ್ಪಂದಿತವಾಗುತ್ತಿದ್ದವೋ ಏನೋ. ಒಂದು ವಾರದ ನಂತರ ಅವರ ಸ್ಥಿತಿ ವಿಷಮಿಸಿದಾಗ ಅವರ ಹಾಸಿಗೆಯ ಬಳಿ ಅವರ ಧರ್ಮಪತ್ನಿ ಮುತ್ತಮ್ಮಾಳ್‌, ಅವರ ಭಾವ ಮೈದುನ ಡಾ. ಎಸ್‌. ಟಿ. ಪಾರ್ಥಸಾರಥಿ, ಇವರ ಧರ್ಮಪತ್ನಿ ತಂಗಮ್ಮ, ಡಿ.ಎಲ್‌.ಎನ್‌.ರ ಎಲ್ಲಾ ಮಕ್ಕಳು ಅವರ ಅಳಿಯಂದಿರು ಮತ್ತು ನಾನು ಇದ್ದೆವು. ನಾನು ಅಲ್ಲೇ ಇದ್ದೆನಾದರೂ ನನ್ನ ಮನಸ್ಸಿನ ಚಡಪಡಿಕೆ ಬಹು ತೀವ್ರವಾಗಿತ್ತು. ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು. ಅವರ ಉಸಿರಾಟವು ನಿಂತು ಆ ಕೊನೆಯ ಉಸಿರು ಅನಂತವಾಯುವಿನಲ್ಲಿ ಲೀನವಾದದ್ದು ನನಗೆ ಗೋಚರವಾದಂತಾಯಿತು. ಅವರ ದೇಹವು ಸ್ತಬ್ಧವಾಯಿತು. ದೇಹ ಮುಟ್ಟಿ ನೋಡಿದೆ. ನನ್ನ ಚರ್ಯೆಯನ್ನೇ ಗಮನಿಸುತ್ತಿದ್ದ ಎಲ್ಲರಿಗೂ ವಿಷಯ ಸ್ಪಷ್ಟವಾಯಿತು. ಆ ಸಮಯದಲ್ಲಿ ಆ ತಾಯಿ ಮಕ್ಕಳು ತೋರಿದ ಮನೋಧೈರ್ಯ ಮೆಚ್ಚಬೇಕಾಗಿದ್ದೇ. ಗಂಡಸಾಗಿ ನಾನೇ ಉಡುಗಿದ್ದೆ. ಕನ್ನಡಕ್ಕಾಗಿ ದುಡಿದು ಬಳಲಿದ್ದ ಸಾರಸ್ವತ ಲೋಕದ ಪಟ್ಟದಾನೆಯ ಅಂತ್ಯವನ್ನು ಕಣ್ಣಾರೆ ಕಂಡ ದೌರ್ಭಾಗ್ಯ ನನ್ನದಾಗಿತ್ತು.