ಪ್ರಾಚೀನ ಗ್ರಂಥಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಉಂಟಾಗಬಹುದಾದ ಅಪಪಾಠಗಳನ್ನು ವಿವಿಧ ಪರಂಪರೆಯ ಹಸ್ತಪ್ರತಿಗಳ ಸಹಾಯದಿಂದ ಮೂಲಪಾಠಕ್ಕೆ ಸಮಾನವಾಗುವಂತೆ ಪರಿಷ್ಕರಿಸಿ ಓದುಗರಿಗೆ ಒದಗಿಸುವುದು ಗ್ರಂಥಸಂಪಾದನೆಯ ಉದ್ದೇಶವಾಗಿದೆ. ಗ್ರಂಥಸಂಪಾದನೆಯನ್ನು ವೈಜ್ಞಾನಿಕ ರೀತಿಯಲ್ಲಿ ಪ್ರಾರಂಭಿಸಿದವರಲ್ಲಿ ಡಿ.ಎಲ್‌.ಎನ್‌. ಪ್ರಮುಖರಾಗಿದ್ದಾರೆ. ಇವರ ಸಂಪಾದನ ಕಾರ್ಯ ಉತ್ತಮ ಮಟ್ಟದ್ದಾಗಿದೆ. ಆಧುನಿಕ ಗ್ರಂಥಸಂಪಾದನಾ ಕಾರ್ಯದ ವಿಧಿ ವಿಧಾನಗಳನ್ನೆಲ್ಲಾ ಬಹುಶಾಸ್ತ್ರೀಯವಾಗಿ ಅಳವಡಿಸಿಕೊಂಡಿದ್ದು ನಂತರದವರಿಗೆ ಮಾದರಿಯಾಗಿದ್ದಾರೆ. ಇವರ ಗ್ರಂಥಸಂಪಾದನೆಯ ವೈಶಿಷ್ಟ್ಯವೆಂದರೆ ಸಂಪಾದನಾ ಕಾರ್ಯದಲ್ಲಿ ಉಪಲಬ್ಧವಿರುವ ಎಲ್ಲಾ ಪ್ರತಿಗಳನ್ನು ಉಪಯೋಗಿಸಿಕೊಂಡಿರುವುದು, ಅವುಗಳ ಸ್ವರೂಪ ವೈಶಿಷ್ಟ್ಯಗಳನ್ನು ತಿಳಿಸಿರುವುದು ಆಯಾ ಪುಟದಲ್ಲಿಯೇ ಸೂಕ್ತವಾದೆಡೆ ಆ ಕೃತಿಯ ಪಾಠಾಂತರಗಳನ್ನು ಕೊಟ್ಟಿರುವುದು. ಗ್ರಂಥದ ಆರಂಭದಲ್ಲಿ ವಿದ್ವತ್ಪೂರ್ಣ ಪ್ರಸ್ತಾವನೆಯನ್ನು ನೀಡಿರುವುದು. ಇವರ ಗ್ರಂಥ ಸಂಪಾದನೆಯಲ್ಲಿ ಪ್ರಮುಖವಾಗಿ ಕಾಣುವಂತಹದ್ದು ಪಾಠ ನಿಷ್ಕರ್ಷೆ, ಕವಿ ಕಾವ್ಯ ವಿಚಾರಗಳನ್ನೊಳಗೊಂಡ ಸುದೀರ್ಘವಾದ ಪ್ರಸ್ತಾವನೆ ಮತ್ತು ನಾನಾ ದೃಷ್ಟಿಯಿಂದ ಉಪಯುಕ್ತವಾದ ಅನುಬಂಧಗಳು, ಗ್ರಂಥಪಾಠದ ವಿವರಣೆಯಲ್ಲಿ ತಮಗೆ ಯಾರಿಂದ ಪ್ರತಿಗಳು ದೊರೆಯಿತೆಂಬುದು, ಪ್ರತಿಗಳ ಪ್ರಾಚೀನತೆ, ಸ್ಥಿತಿ ಮತ್ತು ಸ್ವರೂಪ, ಪೀಳಿಗೆಯ ವಿಷಯ, ಪರಸ್ಪರ ಸಂಬಂಧ, ಆಧಾರ ಪ್ರತಿ ನಿರ್ಣಯ ಮುಂತಾದ ಮಹತ್ತರ ಸಂಗತಿಗಳನ್ನು ಚರ್ಚಿಸಿರುವುದು.

ಸುಕುಮಾರ ಚರಿತಂ

ಡಿ.ಎಲ್‌.ಎನ್‌.ರು ತ.ಸು. ಶಾಮರಾವ್‌ ಅವರ ಜೊತೆಗೂಡಿ ಸಂಪಾದಿಸಿರುವ ಶಾಂತಿನಾಥ ಕವಿಯ ಸುಕುಮಾರ ಚರಿತೆಯು ೧೯೫೪ರಲ್ಲಿ ಶಿವಮೊಗ್ಗದ ಕರ್ನಾಟಕ ಸಂಘದಿಂದ ಪ್ರಕಟವಾಗಿದೆ.

ಕವಿಕೃತಿಯ ಮೂಲ ಪಾಠದ ಅನ್ವೇಷಕನಾದ ಗ್ರಂಥಸಂಪಾದಕನಿಗೆ ಪ್ರತಿಭೆ, ಪೂರ್ವ ಕವಿಗಳ ಪರಿಚಯ, ಸಕಲ ಕಲೆ ಮತ್ತು ಶಾಸ್ತ್ರಗಳಲ್ಲಿ ನಿರಂತರವಾದ ಅಭ್ಯಾಸ ಪ್ರಯತ್ನ ಇವುಗಳು ಇರಬೇಕು. ಗ್ರಂಥಸಂಪಾದನೆಯ ವಿಧಾನದಲ್ಲಿ ಕವಿಯ ಸ್ವಹಸ್ತಾಕ್ಷರ ಪ್ರತಿಯಿಲ್ಲದಿರುವಾಗ ಕವಿ ಪಾಠಕ್ಕೆ ಸಮೀಪವಾದ ಮೂಲಮಾತೃಕೆಯನ್ನು ಪಾಠಾಂತರಗಳ ಸಹಾಯದಿಂದ ಪುನರ್‌ ನಿರ್ಮಾಣ ಮಾಡಬಹುದು. ಪಾಠಾಂತರಗಳೇ ಇಲ್ಲದೆ ಪಾಠದೋಷವಿದೆಯೆಂದು ಮನವರಿಕೆಯಾದಾಗ ಆ ದೋಷ ಲಿಪಿಕಾರರ ಕೈ ತಪ್ಪುಗಳಿಂದ ಆದದ್ದು ಎಂದು ನಿರ್ಧರಿಸಿ ಪ್ರಕರಣ ಬಲದಿಂದಲೂ, ವ್ಯಾಕರಣ, ಛಂದಸ್ಸು, ಮುಂತಾದ ಶಾಸ್ತ್ರಗಳ ಜ್ಞಾನದ ಸಹಾಯದಿಂದ ಸರಿಯಾಗುವ ಊಹಾತ್ಮಕ ಪಾಠವನ್ನು ಕಂಡುಹಿಡಿಯಬಹುದು. ಆ ಅಂಶವನ್ನು ಡಿ.ಎಲ್‌.ಎನ್‌.ರ ಸುಕುಮಾರಚರಿತೆಯ ಸಂಪಾದನೆಯಲ್ಲಿ ಹಲವೆಡೆ ಕಾಣಬಹುದು.

ಸುಕುಮಾರ ಚರಿತದ ಸಂಗ್ರಹದ ಸಂಪಾದನೆಗೆ ಎರಡು ಕೈ ಬರಹ ಮಾತೃಕೆಗಳನ್ನು ಬಳಸಿದ್ದಾರೆ. ದೊರೆತ ಕೈಬರಹದ ಎರಡು ಹಸ್ತಪ್ರತಿಗಳನ್ನು ಆಂತರಿಕ ಪ್ರಮಾಣಗಳಿಂದ ಪರಿಶೀಲನೆ ಮಾಡಿ, ಅವುಗಳ ಪರಸ್ಪರ ಸಂಬಂಧವನ್ನು ನಿರ್ಧರಿಸಿದ್ದಾರೆ. ಹಸ್ತಪ್ರತಿಗಳಿಗೆ ಉಪಯೋಗಿಸುವ ಸಾಮಗ್ರಿ, ಅವುಗಳ ಸ್ವರೂಪ, ಲಿಪಿಕಾರರ ಸ್ವಂತ ಬರಹದ ಪೀಠಿಕಾ ವಾಕ್ಯಗಳು ಸಮಾಪ್ತಿ ವಾಕ್ಯಗಳು, ಹಸ್ತಪ್ರತಿಗಳ ಸುಸ್ಥಿತಿ ಅಥವಾ ದುಸ್ಥಿತಿ ಅಕ್ಷರಗಳ ಸ್ವರೂಪ, ಬರವಣಿಗೆಯ ಪಾಠದ ಶುದ್ಧತೆ ಅಥವಾ ಅಶುದ್ಧತೆಯ ಮಟ್ಟ ಇವುಗಳನ್ನು ಗುರುತಿಸಿದ್ದಾರೆ. ಮೂಡಬಿದರೆಯ ಕೆ. ಭುಜಬಲಿಶಾಸ್ತ್ರಿಗಳ ಕೃಪೆಯಿಂದ ದೊರೆತ ಓಲೆಯ ಪ್ರತಿಯ (ಕ.ಪ್ರತಿ) ಕೊನೆಯಲ್ಲಿ ಬಹುಗ್ರಂಥ ಪಾಠವಿದ್ದರೂ ನಡುವೆ ಅಲ್ಲಲ್ಲಿ ಸಣ್ಣ ಸಣ್ಣ ಭಾಗಗಳು ನಷ್ಟವಾಗಿದ್ದರೂ ಱ ಕಾರವನ್ನು ಸರಿಯಾಗಿ ಬಳಸಿರುವ ಹಿನ್ನೆಲೆಯಲ್ಲಿ ಕವಿಯ ಪಾಠಕ್ಕೆ ಹತ್ತಿರವಾದುದೆಂದು ನಿರ್ಧರಿಸಿ ಅದನ್ನು ಆಧಾರ ಪ್ರತಿಯಾಗಿ ಇಟ್ಟುಕೊಂಡು ಎರಡನೆಯದಾದ ಕಾಗದ ಪ್ರತಿಯಲ್ಲಿಯ (ಇದು ಮೈಸೂರಿನ ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿದ ೨೫೨ ಸಂಖ್ಯೆಯದ್ದು) ಮುಖ್ಯ ಪಾಠ ಭೇದಗಳನ್ನು ಗುರುತಿಸಿದ್ದಾರೆ. ಕಾಗದ ಪ್ರತಿಯಲ್ಲಿ ಲಿಪಿ ಓದಲು ಕಷ್ಟವಾಗಿದ್ದರೂ ಮಿಕ್ಕ ಆಶ್ವಾಸಗಳಲ್ಲಿ ಒಟ್ಟೊಟ್ಟಿಗೆ ಬಹುಭಾಗ ಲುಪ್ತವಾಗಿದ್ದರೂ ಅದನ್ನು ಬಳಸಿಕೊಂಡು ಅಲ್ಲಲ್ಲಿ ಮೊದಲ ಪ್ರತಿಯಲ್ಲಿ ನಷ್ಟವಾಗಿರುವುದನ್ನು ತುಂಬಲು ಸಾಧ್ಯವಾಗದೆ ಅಪೂರ್ಣವಾಗಿಯೇ ಉಳಿದಿದೆ. ಇವೆರಡು ಪ್ರತಿಗಳ ಆಧಾರದ ಮೇಲೆ ಸಂಪಾದಿಸಿ ಮುದ್ರಿಸಿರುವ ಗ್ರಂಥ ಪಾಠಗಳಲ್ಲಿ ಕ್ಲೇಶಗಳಿವೆ ಎಂಬುದನ್ನು ಸಂಪಾದಕರು ಸೂಚಿಸಿದ್ದು ಬೇರೆ ಪ್ರತಿಗಳು ಲಭ್ಯವಾದರೆ ಪರಿಹಾರ ಸಾಧ್ಯ ಎಂಬುದನ್ನು ತಿಳಿಯಬಯಸಿದ್ದಾರೆ. ಅಲ್ಲದೆ ಸಂಪಾದನೆಯ ವೇಳೆಗೆ ಬೀರಾರಿನ ಅಕೋಲ ಜಿಲ್ಲೆಯ ಕಾರಂಜ ಊರಿನಲ್ಲಿರುವ ಬಲತ್ಕಾರ ಗಣದ ಜೈನ ಬಸದಿಯಲ್ಲಿ ‘ಸುಕುಮಾರ ಚರಿತ್ರೆ’ ಎಂಬೊಂದು ಓಲೆಯ ಗ್ರಂಥವಿರುವುದೆಂದು ತಿಳಿದು ಬಂದಿದ್ದು ಅದು ಶಾಂತಿನಾಥನ ಗ್ರಂಥವಾಗಿರಬಹುದು. ಅದು ದುರ್ಲಭವಾಗಿರುವುದರಿಂದ ನೋಡಲು ಸಾಧ್ಯವಿಲ್ಲವಾಗಿದೆ ಎಂಬುದನ್ನು ನಮ್ರತೆಯಿಂದ ಸೂಚಿಸಿದ್ದಾರೆ. ಇದು ಆದರ್ಶ ಗ್ರಂಥಸಂಪಾದಕನ ಲಕ್ಷಣವನ್ನು ಸೂಚಿಸುತ್ತದೆ.

‘ಸುಕುಮಾರ ಚರಿತಂ’ ಸಂಪಾದನೆಯಲ್ಲಿ ಮೂಲಪಾಠ ನಿರ್ಣಯಕ್ಕೆ ಬಾಧಕವಾಗದಂತಹ ಪಾಠಬೇಧಗಳನ್ನು ಉಚಿತ ಪಾಠ ಸ್ವರೂಪ ಸೂಚಕ ಚಿಹ್ನೆಗಳೊಂದಿಗೆ ಅಡಿ ಟಿಪ್ಪಣಿಗಳಲ್ಲಿ ಕೃತಿಯುದ್ಧಕ್ಕೂ ಅಲ್ಲಲ್ಲಿ ಕಾಣಿಸಿದ್ದಾರೆ. ಈ ಪಾಠಭೇದಗಳು ಗ್ರಂಥವನ್ನು ವ್ಯಾಸಂಗ ಮಾಡುವವರಿಗೂ ಅದನ್ನು ಮುಂದೆ ಮತ್ತೆ ಬೇರೆಯವರು ಸಂಸ್ಕರಣ ಮಾಡಬೇಕೆಂದು ಬಯಸಿದಾಗ ಅವರಿಗೆ ಹಾಗೂ ಸಂಪಾದಕನು ಉಪಯೋಗಿಸಿಕೊಂಡ ಮಾತೃಕೆಗಳ ಸ್ವರೂಪಕ್ಕೆ ಕನ್ನಡಿಯಂತಿರಬೇಕು. ಸಂಪಾದನೆಯ ಮೂಲಪಾಠ ನಿರ್ಣಯವನ್ನು ಸಂದೇಹಿಸಿ ಭಿನ್ನ ಪಾಠವನ್ನು ಸ್ವೀಕರಿಸಬಹುದೆನ್ನುವ ಸಂದರ್ಭದಲ್ಲಿ ಈ ರೀತಿಯ ಪಾಠಭೇದಗಳನ್ನು ವಿರಳವಾಗಿ ಸೂಚಿಸಿದ್ದರೂ ಅವುಗಳನ್ನು ಪಾಠಾಂತರ ಸ್ವರೂಪ ನಿರ್ದೇಶಕ ಚಿಹ್ನೆಗಳ ಮೂಲಕ ಸೂಚಿಸಿದ್ದಾರೆ. ಪಾಠನಿರ್ಣಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಬಹುಮುಖ ಅಧ್ಯಯನವನ್ನು ಡಿ.ಎಲ್‌.ಎನ್‌. ನಡೆಸಿದ್ದಾರೆ. ವಡ್ಡಾರಾಧನೆಯಲ್ಲಿ ಬರುವ ಸುಕುಮಾರ ಚರಿತೆಯ ಕಥೆಯ ಆಧಾರದ ಮೇಲೆ ಕೆಲೆವೆಡೆ ಪಾಠ ನಿರ್ಣಯ ಮಾಡಿದ್ದಾರೆ.

ಸುಕುಮಾರ ಚರಿತ ಸಂಪಾದನಾ ಕೃತಿಯ ಆರಂಭದಲ್ಲಿ ಸಂಪಾದಕರು ವಿಸ್ತೃತವಾದ ಪೀಠಿಕೆಯನ್ನು ಬರೆದಿದ್ದಾರೆ. ಈ ಚಂಪೂ ಕಾವ್ಯದ ಜೊತೆಗೆ ಶಾಂತಿನಾಥ ಕವಿ ಬರೆದಿರುವ ಶಿಕಾರಿಪುರದ ೫೦ ಕಂದ ವೃತ್ತಗಳನ್ನೊಳಗೊಂಡ ೧೩೬ ನೆಯ ಶಾಸನವನ್ನು ಪರಿಶಿಷ್ಟ-೧ರಲ್ಲಿ ಕೊಟ್ಟಿದ್ದಾರೆ. ಶಾಂತಿನಾಥನು ತನ್ನ ಕೃತಿಯ ಆದಿ ಮತ್ತು ಅಂತ್ಯ ಭಾಗಗಳಲ್ಲಿ ಹಾಗೂ ಶಾಸನದಲ್ಲಿ ಕಾಲ, ಕವಿಯ ಪೋಷಕರು, ಕೃತಿಗಳಂತಹ ವೈಯಕ್ತಿಕ ಸಂಗತಿಗಳ ಪ್ರಸ್ತಾಪ ಇರುವುದರಿಂದ ಕ್ರಿ. ಶ. ೧೦೬೫ಕ್ಕಿಂತ ಪೂರ್ವದಲ್ಲಿಯೇ ಕವಿಯು ಕೃತಿಯನ್ನು ರಚಿಸಿದ್ದಾನೆಂದು ಡಿ.ಎಲ್‌.ಎನ್‌.ರವರು ನಿರ್ಧರಿಸಿದ್ದಾರೆ. ತನಗೆ ಆಶ್ರಯ ನೀಡಿದ ಮಹಾಮಂಡಲೇಶ್ವರ ಲಕ್ಷ್ಮಣ ರಾಜನ ಆಸ್ಥಾನಕ್ಕೆ ಬರುವ ಮೊದಲೇ ಸುಕುಮಾರ ಚರಿತವನ್ನು ರಚಿಸಿದ್ದಾನೆಂಬುದನ್ನು ಸಾಧಾರವಾಗಿ ಚರ್ಚಿಸಿದ್ದಾರೆ. ಪೀಠಿಕೆಯಲ್ಲಿ ವಿಸ್ತೃತವಾದ ಕಥಾಸಾರ ಕೊಟ್ಟಿದ್ದಾರೆ. ಜೈನ ಸಾಹಿತ್ಯದಲ್ಲಿ ಪ್ರಸಿದ್ಧವಾದದ್ದು ಹಾಗೂ ಜನಪ್ರಿಯವೂ ಆದ ಸುಕುಮಾರ ಕಥೆಯ ಮೂಲದ ಬಗ್ಗೆ ಚರ್ಚಿಸಿದ್ದಾರೆ. ಸುಕುಮಾರ ಸ್ವಾಮಿಯ ಕಥೆ ಸಂಸ್ಕೃತ, ಜೈನ ಸಂನ್ಯಾಸಿಗಳಿಗೆ ತಪೋವಿಘ್ನಕಾರಕವಾಗಿ ಒದಗುವ ಉಪಸರ್ಗಗಳಲ್ಲಿ ಒಂದಾದ ತಿರ್ಯಗುಪಸರ್ಗವನ್ನು ವಿವರಿಸುವ ಸಂದರ್ಭದಲ್ಲಿ ಈ ಕಥೆ ಅದಕ್ಕೆ ದೃಷ್ಟಾಂತವಾಗಿ ಬಂದಿದ್ದು ಅದು ಸುಮಾರು ಹದಿನೈದು ಪ್ರಾಕೃತ ಜೈನ ಕೃತಿಗಳಲ್ಲಿ ಕಾಣಿಸಿಕೊಂಡಿರುವುದನ್ನು ಗುರುತಿಸಿದ್ದಾರೆ. ಈ ಕೃತಿಯನ್ನು ರಚಿಸುವಾಗ ವಡ್ಡಾರಾಧನೆ ಗದ್ಯ ಕೃತಿಯಲ್ಲಿಯ ಸುಕುಮಾರಸ್ವಾಮಿ ಕಥೆಯಿಂದ ಯಾವ ಮಟ್ಟಿಗೆ ಉಪಕೃತವಾಗಿದ್ದಾನೆಂಬುದನ್ನು ಡಿ.ಎಲ್‌.ಎನ್‌. ತೋರಿಸಿಕೊಟ್ಟಿದ್ದಾರೆ. ವಡ್ಡಾರಾಧನೆಯ ಆ ಕಥೆಯಲ್ಲಿ ಬರುವ ಕೆಲವು ಶಬ್ದ ವಿನ್ಯಾಸಗಳೂ ಅಭಿಪ್ರಾಯಗಳೂ ಶಾಂತಿನಾಥನ ಕೃತಿಯಲ್ಲಿ ಕಂಡುಬಂದಿರುವುದನ್ನು ಉದಾಹರಣೆ ಸಹಿತ ತೋರಿಸಿ ಕೊಟ್ಟಿದ್ದಾರೆ. ವಡ್ಡಾರಾಧನೆಯಲ್ಲಿ ಅತಿಸಂಗ್ರಹವಾಗಿ ಸೂಚಿತವಾಗಿರುವ ಅಂಶಗಳು ಶಾಂತಿನಾಥನಲ್ಲಿ ವಿಸ್ತೃತ ರೂಪ ತಾಳಿರುವುದನ್ನು ಗುರುತಿಸಿದ್ದಾರೆ. ಅಗ್ನಿಭೂತಿ ವಾಯುಭೂತಿಗಳು ‘ತಾಯ್‌ ತಂದೆವಿರಕೇಳ್ಪಿಯಂಗೆಯ್ಯದಾ ವೇದಂ ಮೊದಲಾಗೊಡೆಯ ಶಾಸ್ತ್ರಗಳನೋದದೆ ತಂದೆ ಪಡೆದ ಕಡವರಮಂ ಬಿಯಂಗೆಯ್ಯತ್ತಂ ಸಪ್ತವ್ಯಸಭಿಭೂತರಾಗಿ ಕೆಟ್ಟುಹೋದರೆಂದು ವಡ್ಡಾರಾಧನೆಯಲ್ಲಿ ಸಂಕ್ಷಿಪ್ತ ಕಥಾಂಶವಿದ್ದರೆ ಇದನ್ನು ಶಾಂತಿನಾಥನು ಯಾವ ರೀತಿ ಒಂದು ವಚನ ಹಾಗೂ ಮೂರು ವೃತ್ತಗಳಲ್ಲಿ ಸವಿವರವಾಗಿ, ಸಹಜವಾಗಿ ನಿರೂಪಿಸಿರುವುದನ್ನು ಕಥೆಗೆ ವಾಸ್ತವಿಕತೆಯ ಅಧಿಕತೆಯನ್ನು ತಂದುಕೊಟ್ಟಿರುವುದನ್ನು ಗುರುತಿಸಿದ್ದಾರೆ. ವಡ್ಡಾರಾಧನೆ ಕೃತಿಯಿಂದ ಯಾವುದನ್ನು ಬಿಟ್ಟಿದ್ದಾನೆ, ಯಾವುದನ್ನು ಹೊಸದಾಗಿ ಸೇರಿಸಿದ್ದಾನೆ. ಯಾವುದನ್ನು ಮಾರ್ಪಡಿಸಿಕೊಂಡಿದ್ದಾನೆಂಬುದನ್ನು ಅವುಗಳಿಂದ ಆತನ ಕಾವ್ಯದ ಮೇಲಾಗಿರುವ ಪರಿಣಾಮವನ್ನು ವಿವರಣಾತ್ಮಕವಾಗಿ ನೀಡಿದ್ದಾರೆ. ಶಾಂತಿನಾಥನು ಸುಕುಮಾರನ ಇಡೀ ಕಥೆಯಲ್ಲಿ ಅವಕಾಶ ದೊರೆತಾಗಲೆಲ್ಲ ‘ವಡ್ಡಾರಾಧನೆಯಲ್ಲಿ ಕಾಣುವ ಸಣ್ಣ ಸಣ್ಣ ಸೂಚನೆಗಳನ್ನು ಅವಲಂಬಿಸಿ ಅವನ್ನು ಪರಿಷ್ಕರಿಸಿ ವಿಸ್ತರಿಸುತ್ತ ಮುಂದುವರಿದಂತೆ ಕಾಣುತ್ತದೆ ಎಂಬುದನ್ನು ಗುರುತಿಸಿದ್ದಾರೆ. ವಡ್ಡಾರಾಧನೆಯಲ್ಲಿ ಎಲ್ಲಿಯಾದರೂ ಸಂಗ್ರಹವಾದ ಜಿನತತ್ವೋಪದೇಶ ಬಂದಿದ್ದರೆ ಅಲ್ಲಿಯೂ ಶಾಂತಿನಾಥನು ವಿಸ್ತರಿಸಿ ಹೇಳಿರುವುದನ್ನು ಪೀಠಿಕೆಯಲ್ಲಿ ಸೂಚಿಸಿದ್ದಾರೆ. ಸುಕುಮಾರ ಚರಿತೆಗೆ ವಡ್ಡಾರಾಧನೆಯೇ ಮೂಲವಾಗಿದ್ದರೂ ಅಲ್ಲಲ್ಲಿ ಮೂಲದ ಕೆಲವು ಉಪಖ್ಯಾನಗಳನ್ನು ಕವಿಯು ಬಿಟ್ಟಿರುವುದನ್ನು ಗುರಿತಿಸಿರುವುದಲ್ಲದೇ ಕಥೆಯನ್ನು ಹೇಳುವಾಗ ಕೆಲವು ನವೀನ ಸನ್ನಿವೇಶಗಳನ್ನು ತಂದಿರುವುದನ್ನು ಸೂಚಿಸಿದ್ದಾರೆ. ಪಂಪ ಕವಿಗೆ ರನ್ನನು ಹೇಗೋ ಹಾಗೆ ವಡ್ಡಾರಾಧನೆಯಲ್ಲಿಯ ಸುಕುಮಾರ ಕಥೆಗೆ ಶಾಂತಿನಾಥನು ಬಹುಮಟ್ಟಿಗೆ ಕಾರಣ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಮೂಲವನ್ನು ಬಳಸಿಕೊಳ್ಳುವುದರಲ್ಲಿ ಸಾಧಾರಣವಾಗಿ ಅವನ ಔಚಿತ್ಯ ಜ್ಞಾನ, ವಿಮರ್ಶನ ಶಕ್ತಿ ಇಂಗಿತಜ್ಞತೆ, ಕಲ್ಪನಾ ಸಾಮರ್ಥ್ಯಗಳು ಮನೋಜ್ಞವಾಗಿ ವಿಕಾಸಗೊಂಡಂತೆ ಅವನು ಹೇಳುತ್ತಿರುವುದು ಹಳೆಯ ಕಥೆಯೇ ಆಗಿದ್ದರೂ ಅದೊಂದು ನೂತನ ರಚನೆಯೆಂಬಂತೆ ತೋರಿ ಅವನ ಕಾವ್ಯ ಭಾವಕರ ಚೇತೋಹಾರಿಯಾಗಿದೆಯೆಂಬುದು ಅನುಭವಕ್ಕೆ ಬರುವಂತಿದೆ. ವಡ್ಡಾರಾಧನೆಯ ಧ್ವನಿಪೂರ್ಣ ಸಂಕ್ಷಿಪ್ತತೆಯನ್ನು ಸಂಸಯಮ ವಿಸ್ತಾರಕ್ಕೆ ಸವಿಲಾಸದಿಂದ ಪರಿವರ್ತಿಸುವ ಶಾಂತಿನಾಥನ ಕವಿಕಾರ್ಯ ರನ್ನನ ಕವಿಕರ್ಮವನ್ನು ಹಲವು ಬಾರಿ ನೆನಪಿಗೆ ತರುತ್ತದೆ ಎಂಬುದನ್ನು ಸಾಧಾರಪೂರ್ವಕವಾಗಿ ತೋರಿಸಿದ್ದಾರೆ.

ಸುಕುಮಾರನ ಕಥೆ ಶಾಂತಿನಾಥನ ದೃಷ್ಟಿಯಲ್ಲಿ ಒಂದು ಧರ್ಮಕತೆ. ಅದರ ನಿರೂಪಣೆಯಲ್ಲಿ ತನ್ನ ಧರ್ಮಾನುರಾಗದಲ್ಲಿ ತನಗಿದ್ದ ಪ್ರೌಢಿಮೆಗಳನ್ನು ಪ್ರದರ್ಶಿಸಿದ್ದಾನೆ. ಮೂಲದಲ್ಲಿಯೂ ಈ ಲಕ್ಷಣವೂ ಹೆಚ್ಚಾಗಿಯೋ ಕಡಿಮೆಯಾಗಿಯೋ ಅಲ್ಲಲ್ಲಿ ಕಾಣುತ್ತದೆ. ಅಲ್ಲಿ ಅದು ಇರುವೆಡೆಯಲ್ಲಿ ಶಾಂತಿನಾಥನು ಮತತತ್ವ ಪ್ರತಿಪಾದನೆಯನ್ನು ಮಾಡಿರುವನಲ್ಲದೆ ಇಲ್ಲದಿರುವೆಡೆಯಲ್ಲಿಯೂ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದಾನೆ. ಇದರಿಂದ ಅವನ ಗ್ರಂಥ ಯಾವ ರೀತಿ ಜಿನಮತಾಚಾರದ ಸಣ್ಣ ಕೈಪಿಡಿಯಾಗಿದೆ ಎಂಬ ನಿರ್ಣಯವನ್ನು ತಾಳಿದ್ದಾರೆ. ಸುಕುಮಾರನ ಕಥೆ ಒಂದು ಕಥೆಯಲ್ಲ, ಒಂದು ಜೀವದ ಕಥೆ. ಒಂದು ಜನ್ಮದ ಕಥೆಯಲ್ಲ, ಜನ್ಮಾಂತರಗಳ ಕಥೆ. ಜನ್ಮಗಳಿಗೆ ಕಾರಣ ಪುಣ್ಯಪಾಪ ರೂಪವಾದ ಕರ್ಮ ಪರಂಪರೆ, ಪುಣ್ಯಾಧಿಕ್ಯದಿಂದ ಮರ್ತ್ಯನಾಕಗಳ ಭೋಗಭಾಗ್ಯಗಳ ಲಾಭ, ಪಾಪಾಧಿಕ್ಯದಿಂದ ತಿರ್ಯಕ್‌ ನರಕಗತಿಗಳ ದುಃಖಾನುಭವ ಎರಡರ ಪೂರ್ಣ ವಿನಾಶವಾಗಿ ಜನ್ಮ ಜನ್ಮಗಳ ಸಂಸಾರದಿಂದ ಜೀವನಿಗೆ ಬಿಡುಗಡೆ ಎಂಬುದು ಈ ಕಾವ್ಯದ ಜೀವಾಳ ಎಂಬ ನಿಲುವನ್ನು ತಾಳಿದ್ದಾರೆ. ಪೀಠಿಕೆಯಲ್ಲಿಯ ಕಾವ್ಯದ ಕುರಿತಾದ ವಿಮರ್ಶಾ ಭಾಗದಲ್ಲಿ ಕಾವ್ಯದಲ್ಲಿ ಕೆಲವೆಡೆ ಕಾವ್ಯಧರ್ಮವೂ ಧರ್ಮವೂ ಹೇಗೆ ನೆಲೆಸಿವೆಯೆಂಬುದನ್ನೂ ಜಿನಧರ್ಮದಲ್ಲಿರುವ ಸಮಸ್ತ ಮಾನವ ಸಾಧಾರಣಾಂಶಗಳು ಹೇಗೆ ಕಾವ್ಯ ಪ್ರೇರಕವಾಗಿವೆ ಎಂಬುದನ್ನು ಗುರುತಿಸಿದ್ದಾರೆ. ಕವಿಯ ಅಂತರಂಗವನ್ನು ಗ್ರಹಿಸುವಲ್ಲಿ ಸಾರ್ಥಕ್ಯವನ್ನು ಹೊಂದಿರುವುದನ್ನು ಹಾಗೂ ಕಥಾ ನಿರೂಪಣೆಯಲ್ಲಿ ಎಷ್ಟರ ಮಟ್ಟಿಗೆ ಕವಿಯ ಸಹಜಶಕ್ತಿ ಪ್ರಕಟಿತವಾಗಿದೆ ಎಂಬುದನ್ನು, ಉತ್ಕೃಷ್ಟ ಕಾವ್ಯಧರ್ಮ ಅಲ್ಲಿ ಹೇಗೆ ಒಡಮೂಡಿದೆ ಎಂಬುದನ್ನು ಸವಿವರವಾಗಿ ದಾಖಲಿಸಿ ಕೊಟ್ಟಿದ್ದಾರೆ. ಮೂಲವನ್ನು ಬಳಸಿಕೊಳ್ಳುವುದರಲ್ಲೂ ಪಾತ್ರದ ಸ್ವಭಾವ ಚಿತ್ರಣದ ಮಿತವೈವಿಧ್ಯದಲ್ಲೂ ಸನ್ನಿವೇಶ ನಿರ್ಮಾಣದಲ್ಲೂ ಪ್ರಕಟಿತವಾಗಿರುವ ಕವಿಶಕ್ತಿಯಲ್ಲಿ ಔಚಿತ್ಯ, ಸ್ವಾತಂತ್ರ್ಯ, ಸಹಜತೆ ರಸಿಕತೆಗಳು ಯಾವ ರೀತಿ ಮೈದೋರಿವೆ ಎಂಬುದನ್ನು ವಿವರಿಸಿದ್ದಾರೆ.

ಸುಕರ ರಸಭಾವದಿಂದ ವರ್ಣದಿಂ ತತ್ವಾರ್ಥ ನಿಚಯದಿಂ ಸೂಕ್ತಮೆನಲ್‌ ಸುಕುಮಾರ ಚರಿತಮಂ ಪೇಳ್ದ ಕವೀಂದ್ರನು ಶಾಂತಿನಾಥನು ಎಂಬ ಮಾತು ಆತನಿಗೆ ಯಾವ ರೀತಿ ಒಪ್ಪುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪೀಠಿಕೆಯಲ್ಲಿ ಶಾಂತಿನಾಥನ ನಂತರ ಸುಕುಮಾರಚರಿತೆ ಕಥೆಯನ್ನು ಹೇಳಿರುವ ಕನ್ನಡ ಕವಿಗಳ ವಿವರವನ್ನು ಸಂಕ್ಷಿಪ್ತವಾಗಿ ನೀಡಿದ್ದಾರೆ. ಕೊನೆಯಲ್ಲಿ ಕಾವ್ಯದಲ್ಲಿ ಕಂಡುಬಂದಿರುವ ಭಾಷೆ ಮತ್ತು ಛಂದಸ್ಸನ್ನು ಕುರಿತು ವಿವೇಚಿಸಿದ್ದಾರೆ. ಪಂಪಾದಿಗಳ ಹಾಗೆ ಸುಮಾರ್ಗ ಭಾಷೆಯನ್ನು ಬಳಸಿರುವುದನ್ನು ತೋರಿಸಿಕೊಟ್ಟಿದ್ದಾರೆ. ಛಂದಸ್ಸಿನ ಬಗೆಗೆ ಪ್ರಸ್ತಾಪಿಸುವಾಗ ಕಾವ್ಯದಲ್ಲಿ ಕಂಡುಬರುವ ಅಮೂಲ್ಯವಾದ ಎರಡು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ರಗಳೆಯ ಬಗೆಗೆ ಪ್ರಸ್ತಾಪಿಸುವಾಗ ಪದ್ಧಳಿಯಂತಹ ಅಮೂಲ್ಯ ಸಂಗತಿಯ ಬಗೆಗೆ ಪ್ರಸ್ತಾಪಿಸಿದ್ದಾರೆ. ಪದ್ಧಳಿಯು ಸಂಸ್ಕೃತದ ಪದ್ಧತಿಯಿಂದ ಬಂದಿದೆ. ಪ್ರಾಕೃತದಲ್ಲಿ ‘ಪದ್ಧತಿ’ ಎಂಬ ರೂಪವಾಗಿ ಅದರ ವಿಕಾರವೇ ಪದ್ಧಳಿ. ಪ್ರಾಕೃತದಲ್ಲಿ ಮಾತ್ರವೃತ್ತ ‘ಪಜ್ಝಟಿಕಾ’ ಎಂಬುದಕ್ಕೂ ಪದ್ಧತಿಕಾ ಎಂಬುದೇ ಮೂಲ ಎಂದು ಹೇಳುತ್ತಾ ಪಜ್ಝಟಿಕೆಯ ಲಕ್ಷಣವನ್ನು ಹೋಲುವ ಪದ್ಯಗಳು ಸುಕುಮಾರ ಚರಿತೆಯಲ್ಲಿದ್ದು ರಗಳೆಯ ಪದ್ಯವೊಂದನ್ನು ಪದ್ಧಳಿ ಎಂದು ಕರೆದಿರುವುದನ್ನು ಗುರುತಿಸಿ ಪದ್ಧತಿಯ ಲಕ್ಷಣದ ಬಗೆಗೆ ಛಂದೋಲಾಕ್ಷಣಿಕ ಕೃತಿಗಳಲ್ಲಿ ಇರುವ ಮಾಹಿತಿಯನ್ನು ಪೂರಕವಾಗಿ ಪೀಠಿಕೆಯ ಕೊನೆಯ ಭಾಗದಲ್ಲಿ ನೀಡಿದ್ದಾರೆ. ಶಾಂತಿನಾಥನು ತನ್ನ ಕಾವ್ಯದಲ್ಲಿ ಪದ್ಧಳಿ ಹೆಸರನ್ನು ಪ್ರಸ್ತಾಪಿಸಿರುವುದು ಮಹತ್ತರವಾದ ಸಂಗತಿ. ಈ ಕೃತಿಯ ಛಂದಸ್ಸಿನಲ್ಲಿ ಪ್ರಸ್ತಾಪಿಸಿರುವ ಮತ್ತೊಂದು ಮಹತ್ತರ ಸಂಗತಿ ಎಂದರೆ ಅಂಶಷಟ್ಪದಿ ಕುರಿತಾದದ್ದು. ನಾಗವರ್ಮ ಜಯಕೀರ್ತಿಗಳು ನಿರೂಪಿಸಿರುವ ಅಂಶಷಟ್ಪದಿ ಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವ ಪದ್ಯವು ಸುಕುಮಾರ ಚರಿತೆಯಲ್ಲಿರುವುದನ್ನು ಪ್ರಪ್ರಥಮವಾಗಿ ಸಂಪಾದಕರು ಗುರುತಿಸಿದ್ದಾರೆ. ಕನ್ನಡ ಷಟ್ಪದಿ ಚರಿತ್ರೆಯಲ್ಲಿ ಸುಕುಮಾರ ಚರಿತದಲ್ಲಿ ಕಂಡುಬಂದಿರುವ ಅಂಶ ಷಟ್ಪದಿಯ ಪದ್ಯಕ್ಕೆ ಮಹತ್ತರ ಸ್ಥಾನವಿರುವುದನ್ನು ಎಲ್ಲರೂ ಗಮನಿಸತಕ್ಕ ಸಂಗತಿಯಾಗಿದೆ. ಕಾವ್ಯದ ಕೊನೆಯ ಭಾಗದಲ್ಲಿ ಈಗಾಗಲೇ ಸೂಚಿಸಿದಂತೆ ಶಾಂತಿನಾಥನು ಬರೆದಿರುವ ಶಿಕಾರಿಪುರದ ೧೩೬ನೇ ಸಂಖ್ಯೆಯ ಶಾಸನವನ್ನು ಪರಿಶಿಷ್ಟ ಭಾಗದಲ್ಲಿ ಕೊಟ್ಟಿದ್ದಾರೆ. ಜೊತೆಗೆ ಶಾಸನದಲ್ಲಿ ಕಂಡುಬರುವ ೭ ಪದ್ಯಗಳು ಸುಕುಮಾರ ಚರಿತದಲ್ಲಿ ಕಂಡುಬಂದಿರುವುದನ್ನು ಗುರುತಿಸಿದ್ದಾರೆ. ಶಬ್ದಕೋಶ ಹಾಗೂ ತಿದ್ದುಪಡಿಗಳನ್ನು ಕೊಟ್ಟಿದ್ದಾರೆ. ಗ್ರಂಥದ ಕೊನೆಯಲ್ಲಿ ಕೊಟ್ಟಿರುವ ಈ ಪರಿಶಿಷ್ಟಗಳು ಗ್ರಂಥ ಸಂಪಾದನೆಯ ದೃಷ್ಟಿಯಿಂದ ಬಹುಉಪಯುಕ್ತವಾಗಿವೆ.

ಸುಕುಮಾರ ಚರಿತ ಕೃತಿಯ ಸಂಪಾದನೆಯ ಬಗೆಗೆ ಡಿ.ಎಲ್‌.ಎನ್‌. ಹಾಗೂ ತ. ಸು. ಶಾಮರಾಯರು ಅಪಾರ ಶ್ರಮಪಟ್ಟಿದ್ದಾರೆ. ಹಸ್ತಪ್ರತಿಗಳ ಸಂಕಲನ, ಪಾಠಾಂತರ ಸಂಕಲನ, ಪಾಠಯೋಜನೆ, ಪ್ರಾಕೃತ ಭಾಷೆಯ ಉಲ್ಲೇಖಗಳು ಇತ್ಯಾದಿ ಕುರಿತು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದಾರೆ. ಡಿ.ಎಲ್‌.ಎನ್‌. ಅವರ ವಡ್ಡಾರಾಧನೆಯ ಕೃತಿಯ ಸಂಪಾದನೆ ಕುರಿತು ಎಂ. ಚಿದಾನಂದಮೂರ್ತಿ ಅವರು ಹೇಳಿರುವ ‘ಬಹುಶಃ ಈಗಿರುವ ಸಾಮಗ್ರಿಯ ಸಹಾಯದಿಂದ ಅದಕ್ಕಿಂತ ಉತ್ತಮ ಪಾಠವನ್ನು ನಾವು ಕೊಡಲಾರೆವು’ ಎಂಬ ಮಾತು ಸುಕುಮಾರ ಚರಿತದ ಸಂಪಾದನೆಗೂ ಅನ್ವಯಿಸುತ್ತದೆ.

ಪಂಪರಾಮಾಯಣ ಸಂಗ್ರಹ

ತಿರುವಳ್ಳೂರ್‌ ಶ್ರೀನಿವಾಸ ರಾಘವಾಚಾರ್ಯರೊಡಗೂಡಿ ಸಂಪಾದಿಸಿರುವ ಪಂಪ ರಾಮಾಯಣ ಸಂಗ್ರಹ ಕೃತಿಯು ಮೈಸೂರು ವಿಶ್ವವಿದ್ಯಾಲಯದಿಂದ ೧೯೩೧ರಲ್ಲಿ ಪ್ರಕಟವಾಗಿದ್ದು ಇಲ್ಲಿಯವರೆಗೂ ಐದು ಮುದ್ರಣಗಳನ್ನು ಕಂಡಿದೆ. ಪಂಪರಾಮಾಯಣ ಸಂಗ್ರಹ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್‌ ಪ್ರಕಟಿಸಿರುವ ಪಂಪ ರಾಮಾಯಣವನ್ನಿಟ್ಟುಕೊಂಡು ಸಂಗ್ರಹ ಕಾರ್ಯ ಮಾಡಿದ್ದಾರೆ. ಮೂಲ ಕಾವ್ಯದಲ್ಲಿ ಕೊಟ್ಟಿರುವ ಪಾಠಾಂತರಗಳು ಸಮರ್ಪಕವಾಗಿದ್ದರಿಂದ ಅವುಗಳನ್ನು ಈ ಸಂಗ್ರಹದಲ್ಲಿ ಮೂಲ ಪಾಠವನ್ನಾಧರಿಸಿ ಬಳಸಿಕೊಂಡಿದ್ದಾರೆ.

ಮೂಲವನ್ನು ಸಂಶೋಧಿಸಿ ಸರಿಪಾಠಗಳನ್ನು ನಿಷ್ಕರ್ಷಿಸಿ ಓದುಗರ ಅಭೀಪ್ಸೆಗೆ ತಕ್ಕಂತೆ ವಿಸ್ತಾರವಾದ ಮೂಲಗ್ರಂಥವನ್ನು ಸಂಗ್ರಹಿಸುವುದು ಗ್ರಂಥಸಂಪಾದನೆಯ ಒಂದು ವಿಧಾನವೇ ಆಗಿದೆ. ಡಿ.ಎಲ್‌.ಎನ್‌.ರ ಪಂಪರಾಮಾಯಣಸಂಗ್ರಹ ಈ ರೀತಯ ಸಂಪಾದನಾವಿಧಾನವನ್ನು ಅನುಸರಿಸಿದೆ. ಸಂಗ್ರಹ ಕಾರ್ಯವೆಂದರೆ ಕೇವಲ ಹಲವು ಪದ್ಯಗಳನ್ನು ಕುತ್ತುಹಾಕಿ ಕೆಲವು ಪದ್ಯಗಳನ್ನು ಉಳಿಸಿಕೊಳ್ಳುವುದಲ್ಲ. ಸಂಗ್ರಹ ಕಾರ್ಯದಲ್ಲಿ ಮೂಲ ಮುಖ್ಯ ಕಥೆಗೆ ಯಾವ ಊನವೂ ಉಂಟಾಗದಂತೆ ಅಲ್ಲಿನ ಸೊಗಸಾದ ಭಾಗಗಳಾವುವು ಬಿಟ್ಟು ಹೋಗದಂತೆ ಕವಿ ಪ್ರತಿಭೆಯ ದ್ಯೋತಕವಾಗಿ ಚಿತ್ರಿತವಾಗಿರುವ ಕಾವ್ಯ ಸೌಂದರ್ಯ ಕಿಂಚಿತ್ತು ಕೆಡದಂತೆ ಸಂಗ್ರಹಿಸುವುದೂ ಪ್ರಧಾನವಾದ ಅಂಶವಾಗಿದೆ. ಅಲ್ಲದೆ ಆಯ್ದುಕೊಂಡ ಭಾಗಗಳಲ್ಲಿ ಬರುವ ವಿವಿಧ ಪಾಠಾಂತರಗಳಲ್ಲಿ ಉತ್ತಮ ಪಾಠವನ್ನು ಸ್ವೀಕರಿಸುವುದು ಮುಖ್ಯ ಜವಾಬ್ದಾರಿಯುಳ್ಳದ್ದು. ಸಂಪಾದನಾ ಕಾರ್ಯಕ್ಕೆ ಬೇಕಾದ ಪ್ರತಿಭೆ, ವ್ಯುತ್ಪತ್ತಿ ಸಂಗ್ರಹಕಾರ್ಯಕ್ಕೂ ಅವಶ್ಯಕ. ಈ ನಿಟ್ಟಿನಲ್ಲಿ ಡಿ.ಎಲ್‌.ಎನ್‌. ಪಂಪರಾಮಾಯಣ ಸಂಗ್ರಹ ಅತ್ಯುತ್ತಮ ನಿದರ್ಶನವಾಗಿದೆ.

ಮೂಲಕೃತಿಯನ್ನು ಓದಿ ಮನನ ಮಾಡಿ ಪ್ರಕ್ಷಿಪ್ತ ಭಾಗಗಳನ್ನು ಮೊದಲು ಗುರುತಿಸ ಅನಂತರ ಮೂಲ ಕೃತಿಯಲ್ಲಿ ಬಿಡಬಹುದಾದ ಭಾಗಗಳನ್ನು ಬಿಟ್ಟು ಉಳಿದುದರಲ್ಲಿ ಸೂಕ್ತ ಪಾಠಗಳನ್ನು ಆಯ್ದು ಸಂಪಾದಿಸುವ ಕಾರ್ಯ ಎಲ್ಲರಿಗೂ ಸಾಧ್ಯವಾಗದು. ಇಂತಹ ಕಾರ್ಯವನ್ನು ಡಿ.ಎಲ್‌.ಎನ್‌. ಅವರು ಪಂಪರಾಮಾಯಣದ ಸಂಗ್ರಹದಲ್ಲಿ ಮಾಡಿದ್ದಾರೆ. ಪಂಪರಾಮಾಯಣದ ಮೂಲದಲ್ಲಿಯ ವಿಸ್ತೃತವಾದ ಕಾವ್ಯವನ್ನು ಓದಬೇಕೆನ್ನುವವರು ವಿರಳವೆಂದೇ ಹೇಳಬೇಕು. ಏಕೆಂದರೆ ಅದನ್ನು ಪೂರ್ಣವಾಗಿ ಓದಿಯು ಮುಗಿಸುವುದು ಒಂದು ಸಾಹಸಯಾತ್ರೆಯನ್ನು ಕೈಗೊಂಡಂತಾಗುತ್ತದೆ. ಇದರ ಸಂಗ್ರಹ ಕಾರ್ಯವು ಅಷ್ಟೇ ಸುಸಲಿತವಲ್ಲ. ಇಂತಹ ಕಠಿಣ ಕಾರ್ಯವನ್ನು ಕೈಗೊಂಡ ಡಿ.ಎಲ್‌.ಎನ್‌. ರವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೂಲದ ಸಮಸ್ತ ಪದ್ಯಗಳನ್ನು ಓದಿ ಮನನ ಮಾಡಿ ಕಥೆ ಸರಾಗವಾಗಿ ಸಾಗಲು ಯಾವ ವ್ಯತ್ಯಯವೂ ಉಂಟಾಗದಂತೆ ಉತ್ತಮ ವರ್ಣನಾ ಭಾಗಗಳನ್ನು ಬಿಡದಂತೆ ಸಂಗ್ರಹಿಸಿ ಕೊಟ್ಟಿರುವುದು ಸಂಪಾದಕರ ತಾಳ್ಮೆಯ ಪ್ರತೀಕವಾಗಿದೆ.

ಪಂಪರಾಮಾಯಣ ಸಂಗ್ರಹದ ಪೀಠಿಕಾ ಭಾಗದಲ್ಲಿ ನೀಡಿರುವ ಕವಿಯ ಬಗ್ಗೆ ಸಂಬಂಧಿಸಿದ ಮಾಹಿತಿಗಳು ಒಂದು ಪ್ರತ್ಯೇಕ ಪುಸ್ತಕವಾಗುವಷ್ಟರ ಮಟ್ಟಿಗೆ ಸುದೀರ್ಘವಾಗಿವೆ. ಪಂಪರಾಮಾಯಣ ಸಂಗ್ರಹದಲ್ಲಿ ಮುಖ್ಯವಾದ ಭಾಗ ಎಂದರೆ ಅದರ ಪೀಠಿಕೆ. ಕನ್ನಡ ವಿದ್ವತ್‌ ಪರಂಪರೆಯಲ್ಲಿ ಇಂದಿಗೂ ಡಿ.ಎಲ್‌.ಎನ್‌. ಬರೆದಿರುವ ವಿದ್ವತಪೂರ್ಣವಾದ ಪೀಠಿಕೆ ಮಾನ್ಯತೆ ಪಡೆದಿದೆ.

ಪೀಠಿಕೆಯಲ್ಲಿ ಕವಿಯ ಬಗೆಗೆ ಚರ್ಚೆ ಮಾಡಿದ್ದಾರೆ. ಕಾಲದ ಬಗೆಗೆ ಚರ್ಚೆ ಮಾಡಿದ್ದಾರೆ. ಕಾಲದ ಚರ್ಚೆಯಲ್ಲಿ ಕವಿಯ ಕಾಲದ ವಿಚಾರವಾಗಿ ಗೋವಿಂದಪೈಗಳು ಬರೆದಿರುವ ಲೇಖನದ ನೆರವನ್ನು ಪಡೆದಿದ್ದಾರೆ. ಕಾಲದ ಮೇಲಿನ ಸಂಪಾದಕರ ನಿರ್ಣಯ ಇಂದಿಗೂ ಜ್ಞಾತವಾಗಿದೆ. ಜೈನರಾಮಾಯಣದ ವಿಸ್ತೃತ ಚರ್ಚೆಯನ್ನು ಕೊಟ್ಟಿದ್ದಾರೆ. ವೈದಿಕ ರಾಮಾಯಣದಂತೆ ಬೌದ್ಧ ಜೈನ ರಾಮಾಯಣಗಳು ಹುಟ್ಟಿಕೊಳ್ಳಲು ಮತರ್ಧಮವೇ ಪ್ರೇರಣೆ ಎಂಬುದನ್ನು ಚರ್ಚಿಸಿದ್ದಾರೆ. ಮತಾನುಸಾರಿಯಾಗಿ ಜೈನರಾಮಾಯಣದಲ್ಲಿ ಉಂಟಾದ ಮಾರ್ಪಾಡುಗಳ ಬಗೆಗೆ ಚರ್ಚಿಸಿದ್ದಾರೆ.

ಜೈನ ರಾಮಾಯಣಗಳಲ್ಲಿಯೇ ಪ್ರಾಚೀನವಾದ ‘ಪಉಚರಿಯ’ದಲ್ಲಿ ವಿಮ ಸೂರಿಯು, ವಾಲ್ಮೀಕಿ ರಾಮಾಯಣದಲ್ಲಿರುವುದೆಲ್ಲವನ್ನು ಒಪ್ಪಿಕೊಳ್ಳದೆ ಜೈನ ಧರ್ಮಕ್ಕನುಗುಣವಾಗಿ ಅದನ್ನು ಯಾವ ರೀತಿ ಪ್ರಯತ್ನಿಸಿದ್ದಾನೆಂಬುದನ್ನು ವಿವರವಾಗಿ ದಾಖಲಿಸಿದ್ದಾರೆ. ಜೈನರಾಮಾಯಣದಲ್ಲಿ ವಿಮಸೂರಿ ಹಾಗೂ ಗುಣಭದ್ರಚಾರ್ಯರ ಕಥಾ ಸಂಪ್ರದಾಯಗಳಿರುವುದನ್ನು ಗುರುತಿಸಿದ್ದಲ್ಲದೇ ಗುಣಭದ್ರನ ಸಂಪ್ರದಾಯವನ್ನು ಹೇಳುವಲ್ಲಿ ಉತ್ತರ ಪುರಾಣದ ಮುನಿರುದ್ರನ ಜನನ ಕಥೆಯಲ್ಲಿ ಬರುವ ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಆದರೆ ವಿಸ್ತೃತವಾದ ವಿವರಣೆಯನ್ನು ವಿಮಲಸೂರಿ ಪರಂಪರೆಯ ರಾಮಾಯಣದಲ್ಲಿ ನೀಡಿದ್ದಾರೆ. ವಿಮಲ ಸೂರಿತ ಕಥೆ ಅನೇಕ ಸುಂದರ ಸನ್ನಿವೇಶಗಳಿಂದ ಕೂಡಿರುವುದರಿಂದ ಕವಿಗಳ ಮೆಚ್ಚಿಗೆಗೆ ಅದು ಹೆಚ್ಚು ಪಾತ್ರವಾಗಿದೆ. ಜನಪ್ರಿಯವಾಗಿದೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಪಂಪರಾಮಾಯಣವು ವಿಮಸೂರಿಯ ಸಂಪ್ರದಾಯಕ್ಕೆ ಸೇರಿದೆಯೆಂಬ ನಿಲುವನ್ನು ತಾಳಿದ್ದಾರೆ. ನಾಗಚಂದ್ರನಲ್ಲಿಯ ದುರಂತ ರಾವಣನ ಕಲ್ಪನೆಯ ಸೃಷ್ಟಿಗೆ ವಿಮಲ ಸೂರಿಯ ಪ್ರಭಾವ ಸಾಕಷ್ಟು ಆಗಿದೆಯೆಂಬುದನ್ನು ಮನಗಂಡ ಡಿ.ಎಲ್‌.ಎನ್‌. ಅವರು ಪ್ರಸ್ತಾವನೆಯಲ್ಲಿ ವಿಮಲ ಸೂರಿಯ ರಾವಣನ ಪಾತ್ರದ ವಿವರವನ್ನು ವಿಸ್ತೃತವಾಗಿ ಕೊಟ್ಟಿದ್ದಾರೆ. ವಿಮಲ ಸೂರಿಯ ರಾವಣನ ಪಾತ್ರ ನಾಗಚಂದ್ರನಿಗೆ ಮಾದರಿ ಎಂಬುದನ್ನು ಸಾಬೀತು. ಪಡಿಸಿದ್ದಾರೆ. ಇದಕ್ಕಾಗಿ ‘ನಾಗಚಂದ್ರನ ರಾವಣ’ ಎನ್ನುವ ಪ್ರತ್ಯೇಕ ಭಾಗವನ್ನೇ ಪ್ರಸ್ತಾವನೆಯಲ್ಲಿ ಸುಮಾರು ೫ ಪುಟಗಳಲ್ಲಿ ವಿವರಿಸಿದ್ದಾರೆ. ಇಲ್ಲೆಲ್ಲಾ ಸಂಶೋಧಕ ಡಿ.ಎಲ್‌.ಎನ್‌ರಲ್ಲಿಯ ವಿಮರ್ಶಕ ಗುಣವನ್ನು ಕಾಣಬಹುದಾಗಿದೆ. ವಿಮಲಸೂರಿ ತನ್ನ ಅದ್ಭುತ ಕುಂಚಿಕೆಯಿಂದ ಬರೆದ ರಾವಣನ ವರ್ಣಚಿತ್ರವನ್ನು ಪ್ರತಿಭೆಯಲ್ಲಿ ನಕಲು ಮಾಡಿಕೊಳ್ಳುವಾಗ ನಾಗಚಂದ್ರನು ಕೆಲವು ಛಾಯೆಗಳನ್ನು ತೋರಿಸಿ ಕೆಲವನ್ನು ಗಟ್ಟಿಮಾಡಿಕೊಂಡಿರುವನು. ಇವನ ಚಿತ್ರ ಮೂಲ ಕೃತಿಯನ್ನು ಬಲುಮಟ್ಟಿಗೆ ಹೋಲುತ್ತದೆ. ಆದರೆ ಅದರಲ್ಲಿ ಮೂಲದಲ್ಲಿರುವಷ್ಟು ಅಲ್ಲಲ್ಲಿ ಹತ್ತಿದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಆ ಚಿತ್ರವಿದೆ. ಆದರೂ ಮನೋಹರವಾಗಿದೆ ಎನ್ನುವ ನಾಗಚಂದ್ರನ ಕಥಾಸರಣಿಯಲ್ಲಿ ಮಾಡಿಕೊಂಡಿರುವ ಮಾರ್ಪಾಡುಗಳು ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ.

ನಾಗಚಂದ್ರನದು ಸಂಗ್ರಹ ದೃಷ್ಟಿ ಎಂಬ ಹಿನ್ನೆಲೆಯಲ್ಲಿ ಕವಿಯು ಪಿರಿದೆನಿಸಿರ್ದ ರಾಮಕಥೆಯಂ ಕಿರಿದಾಗಿಸಿ ವಿಮಲಸೂರಿಯಲ್ಲಿಯ ನೀರಸವಾದ ಭಾಗಗಳನ್ನು ಕೈಬಿಟ್ಟು ರಸವತ್ತಾಗಿ ಹೇಳಲು ಪ್ರಯತ್ನಿಸಿದ್ದಾನೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಕೃತ ಮೂಲದೊಡನೆ ಹೋಲಿಸಿ ನೋಡಿದರೆ ನಾಗಚಂದ್ರನು ಕೊಟ್ಟಿರುವ ಸಂಗ್ರಹ ಹತ್ತರಲ್ಲಿ ಒಂದು ಪಾಲು ಕೂಡಾ ಆಗಿಲ್ಲ. ಅವನ ಮನವೆಲ್ಲ ರಾಮಾಯಣದ ಕಥೆಯ ಕಡೆಗೆ ಹರಿದಿದೆ, ಅವನು ಹೇಳುತ್ತಿರುವುದು ರಾಮಕಥೆ. ಆದ್ದರಿಂದ ಅವನು ವಂಶೇತಿಹಾಸಗಳನ್ನು ಧರ್ಮೋಪಖ್ಯಾನಗಳನ್ನು ಆದಷ್ಟು ಕಡಿಮೆ ಮಾಡಿ ರಾಮಕಥೆಯ ಕೆಲವು ಸನ್ನಿವೇಶಗಳನ್ನು ವಿಸ್ತಾರವಾಗಿ ಪ್ರತಿಪಾದಿಸಿದ್ದಾನೆ. ಯಾವುದನ್ನು ಬಿಡಬೇಕು ಯಾವುದನ್ನು ಮಿತವಾಗಿ ಹೇಳಬೇಕು, ಯಾವುದನ್ನು ವಿಸ್ತರಿಸಬೇಕು ಎಂಬ ಗುಣವು ನಾಗಚಂದ್ರನಲ್ಲಿ ಯಾವರೀತಿ ಇತ್ತು ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ನಾಗಚಂದ್ರನ ಸಂಗ್ರಹ ಕಾರ್ಯದಲ್ಲಿ ಅದರಲ್ಲಿ ಅವನ ವಿಮರ್ಶನ ಶಕ್ತಿಯನ್ನು ಹಿತವಾಗಿಯೇ ಉಪಯೋಗಿಸಿದ್ದರೂ ಮೂಲ ಕಥೆಗೆ ಅನಾವಶ್ಯಕವಾದ ಭಾಗಗಳನ್ನು ನಿರ್ದಾಕ್ಷಿಣ್ಯವಾಗಿ ಕೈಬಿಟ್ಟಿರುವಂತೆಯೇ ಬಿಡಬಾರದ ಕೆಲವು ಸನ್ನಿವೇಶಗಳನ್ನು ಚಿತ್ರಿಸಿದ್ದಾನೆ ಎಂಬುದನ್ನು ಗುರುತಿಸಿರುವುದು ಗಮನಾರ್ಹವಾದುದು.

ಮೂಲದಲ್ಲಿ ಇಲ್ಲದ ರಾಮಾಯಣ ಕಥೆಗೆ ಸಂಬಂಧಪಟ್ಟ ಕೆಲವು ದೃಶ್ಯಗಳಿಗೆ ನಾಗಚಂದ್ರನು ತನ್ನ ಕಾವ್ಯದಲ್ಲಿ ಬಣ್ಣ ತುಂಬಿ ಹೆಚ್ಚು ಸುಂದರಗೊಳಿಸಿರುವ ಪ್ರಸಂಗಗಳನ್ನು ನಿದರ್ಶನ ಪ್ರಸ್ತುತ ಪಡಿಸಿದ್ದಾರೆ. ಅಲ್ಲದೆ ಮೂಲ ಕಾವ್ಯಗಳಲ್ಲಿ ಶುಷ್ಕ ರೀತಿಯಿಂದ ಪ್ರತಿಪಾದಿತವಾಗಿರುವ ಕೆಲವು ವಿಷಯಗಳಲ್ಲಿ ನಾಗಚಂದ್ರನು ಜೀವ ತುಂಬಿರುವುದನ್ನು ಖರನು ಚಂದ್ರನಖಿಯನ್ನು ಕದ್ದೊಯ್ದಾಗ ರಾವಣನ ಕೋಪತಾಪವನ್ನು ಸಂತೈಸಿದ ಮಂಡೋದರಿ ಪಾತ್ರ ಚಿತ್ರಣದಲ್ಲಿ ವ್ಯಕ್ತಗೊಂಡಿರುವುದನ್ನು ಡಿ.ಎಲ್‌.ಎನ್‌.ರವರು ತೋರಿಸಿ ಕೊಟ್ಟಿದ್ದಾರೆ.

ನಾಗಚಂದ್ರನು ಎಷ್ಟೇ ಪರಾನುಕರಣೆ ಮಾಡಿರಲಿ, ಕೆಲವು ಸನ್ನಿವೇಶಗಳಲ್ಲಿ ಆತನ ಸೋಪಜ್ಞತೆ ಸಾಕಷ್ಟು ಕಂಡುಬಂದಿರುವುದನ್ನು ಗುರುತಿಸಿದ್ದಾರೆ.

ಪಂಪರಾಮಾಯಣ ಸಂಗ್ರಹ ಸಂಪಾದನಾ ಕೃತಿಯ ಉನ್ನತ ವಿಮರ್ಶೆಗೆ ಮಾದರಿಯಾಗಿದೆ. ಡಿ.ಎಲ್‌.ಎನ್‌ ಹೇಳುವಂತೆ ಉನ್ನತ ವಿಮರ್ಶೆಯಲ್ಲಿ ಒಂದು ಕೃತಿಗೆ ಮೂಲ ಗುಣಗಳು ಯಾವುವೆಂಬುದನ್ನು ವಿಶ್ಲೇಷಣೆ ಮಾಡಿ ಅದರ ಶೈಲಿ ಕಾವ್ಯಗುಣಗಳನ್ನು ಆಶ್ರಯಿಸಿ ಅದರ ಮೌಲ್ಯವನ್ನು ಕಂಡುಹಿಡಿಯುವ ವಿಧಾನವಾಗಿದೆ. ಉನ್ನತ ವಿಮರ್ಶೆಯು ವಾಸ್ತವವಾಗಿ ಸಂಶೋಧನೆಯೇ. ಅದು ಕೃತಿಯ ಕರ್ತೃತ್ವ, ಕವಿಯ ಕಾಲ, ದೇಶ, ಕೃತಿಯ ಆಕರಗಳು, ಶೈಲಿ, ಕಾವ್ಯೋದ್ದೇಶಗಳಿಗೆ ಮೀಸಲಾದದ್ದು.

ಹತ್ತೊಂಬತ್ತನೆಯ ಶತಮಾನ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಉನ್ನತ ವಿಮರ್ಶೆ ಪರಿಭಾಷೆಯಾಗಿ ರೂಪುಗೊಂಡಿತು. ಪೂರ್ಣ ಪ್ರಮಾಣದ ಉನ್ನತ ವಿಮರ್ಶೆಯಲ್ಲಿ ಕಂಡುಬರುವ ಪ್ರಮುಖ ವಿಷಯಗಳೆಂದರೆ ಕೃತಿಕಾರನ ಕಾಲ, ದೇಶ ಇತ್ಯಾದಿ ವೈಯಕ್ತಿಕ ವಿಚಾರಗಳು, ಕೃತಿಯ ಆಕರಗಳು, ಕೃತಿ ಕೃತಿಕಾರ ಇವುಗಳ ಚಾರಿತ್ರಿಕ ಹಿನ್ನೆಲೆ, ಕೃತಿಕಾರನ ಮೇಲೆ ಆಗಿರುವ ಪ್ರಭಾವಗಳು, ಅನಂತರದ ಕವಿಗಳ ಮೇಲೆ ಈತ ಬೀರಿರುವ ಪ್ರಭಾವ. ಕೃತಿಯ ಸಾಂಸ್ಕೃತಿಕ ಸಾಹಿತ್ಯಕ ವಿಶ್ಲೇಷಣೆ ಇವುಗಳನ್ನು ಕಾಣುತ್ತೇವೆ. ಈ ಎಲ್ಲಾ ಅಂಶಗಳನ್ನು ಪಂಪರಾಮಾಯಣ ಸಂಗ್ರಹ ಕೃತಿಯಲ್ಲಿ ಕಾಣಬಹುದಾಗಿದೆ.

ಶೈಲಿಯ ಬಗೆಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ನಾಗಚಂದ್ರನ ಪಂಪರಾಮಾಯಣದ ಶೈಲಿಯನ್ನು ಕುರಿತು ಈತನ ಶೈಲಿಯ ಮುಖ್ಯಗುಣ ಅದರ ಅರ್ಥವ್ಯಕ್ತಿ. ಅವನ ಪದ್ಯಗಳ ಅರ್ಥವನ್ನಾಗಲಿ, ಭಾವವನ್ನಾಗಲಿ ಗ್ರಹಿಸುವುದಕ್ಕೆ ಕ್ಲೇಶಪಡಬೇಕಾಗಿಲ್ಲ. ಒಂದು ಸಲ ಓದಿದರೆ ಸಾಕು ಅವನ ಸಂಪೂರ್ಣ ಅಭಿಪ್ರಾಯವು ಋಜುವಾಗಿ ಭ್ರಾಂತಿಗೆ ಅವಕಾಶವಿಲ್ಲದಂತೆ ಮನಸ್ಸನ್ನು ಮುಟ್ಟುತ್ತದೆ, ಅವನ ಪದ ಚಿತ್ರಗಳ ಸೊಗಸು ಚಿತ್ತ ಮೋಹಕವಾದದ್ದು. ಶೈಲಿಯಲ್ಲಿ ಮೃದುತ್ವ ಲಾಲಿತ್ಯ ಮಾಧುರ್ಯಗಳನ್ನು ಅನುಭವಿಸಿ ಆನಂದ ಪಡಬೇಕಾದರೆ ನಾಗಚಂದ್ರನ ಕಾವ್ಯಾರಾಮದಲ್ಲಿ ಒಂದು ಸಲ ನಡೆದು ನೋಡಬೇಕು. ಮಾಧುರ್ಯ, ಸೌಕುಮಾರ್ಯಗಳು ಅವನ ಇಂಪಾದ ಬಿಡಿಬಿಡಿಯಾದ ಪದಪ್ರಯೋಗಗಳಲ್ಲಿ ಅಧಿಕವಾಗಿದ್ದು ಇವೆ ಕವಿಯ ಶೈಲಿ ಸ್ಥಾಯಿ ಎಂಬುದನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಅಲಂಕಾರಗಳ ಬಳಕೆಯಲ್ಲಿ ಅರ್ಥಾಂತರ ನ್ಯಾಸವನ್ನು ಹೆಚ್ಚು ಇಷ್ಟಪಟ್ಟಿದ್ದಾನೆ. ಅವನಷ್ಟು ಧಾರಾಳವಾಗಿ ಇದನ್ನು ಬಳಸಿಕೊಂಡಿರುವ ಕನ್ನಡ ಕವಿಗಳು ಕಡಿಮೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಶೇಷ ವಿಷಯದಿಂದ ಸಾಮಾನ್ಯ ವಿಷಯಕ್ಕೆ ಬೇಗನೆ ನೆಗೆಯುವ ಸ್ವಭಾವ ಸಿದ್ಧವಾದ ಪ್ರವೃತ್ತಿ ಅರ್ಥಾಂತರ ನ್ಯಾಸಕ್ಕಿರುವುದರಿಂದ ಅದನ್ನು ಹೆಚ್ಚಾಗಿ ಬಳಸಿದ್ದಾನೆ ಎಂಬುದನ್ನು ಸೂಚಿಸಿದ್ದಾರೆ. ನಾಗಚಂದ್ರನ ಶೈಲಿಯ ವೈಶಿಷ್ಟ್ಯವನ್ನು ಅದರ ಮೂಲಕ ಕವಿಯ ವ್ಯಕ್ತಿತ್ವವನ್ನು ಈ ಕೆಳಕಂಡ ರೀತಿಯಲ್ಲಿ ಗುರುತಿಸಿದ್ದಾರೆ. ನಾಗಚಂದ್ರನದು ಕೋಮಲವಾದ, ಮೃದುವಾದ, ಸರಳವಾದ, ಸ್ಫುಟವಾದ ಮನೋಧರ್ಮ. ಅದರಲ್ಲಿ ಮುಚ್ಚು ಮರೆಯಿಲ್ಲ. ಕುಟಿಲತೆಯಿಲ್ಲ. ಪರಮತದ್ವೇಷವಿಲ್ಲದ ಧರ್ಮಾನುರಾಗದಿಂದ ಕೂಡಿದ ಅವನ ಮನಸ್ಸು ಶಾಂತಿ, ಸಂತುಷ್ಟಿಗಳಿಂದ ತುಂಬಿದ ಆ ಚಿತ್ತವೃತ್ತಿಗೆ ವೀರ, ರೌದ್ರ ಭಯಾನಕಗಳ ಅನುಭವ ಕಡಿಮೆ. ಮಧುರ ಭಾವಗಳ ಅನುಭವ ಅದಕ್ಕಿಂತ ಹೆಚ್ಚು ಗಾನಚಿತ್ರ ಕಲೆಗಳಲ್ಲಿ ಒಲವು ಹಿರಿದು. ವಿಶೇಷ ವಿಷಯದಲ್ಲಿ ಸಾಮಾನ್ಯದ ಕಡೆಗೆ ಹಾಯುವುದು ಅವನ ಮನಸ್ಸಿನ ಶೀಲ. ರಸಿಕತೆಯೆಂದರೆ ಬೇರೊಂದು ಪ್ರಪಂಚವನ್ನು ಸೃಷ್ಟಿಸಿ ಅದರಲ್ಲಿ ವಿಹರಿಸುವ ಶಕ್ತಿ, ಅದಕ್ಕೆ ಸ್ವಾಭಾವಿಕವಾದದ್ದು. ಪ್ರಸನ್ನತೆ, ಸ್ನೇಹ, ಪರತೆ, ದಯೆ, ಸಹೃಯತೆ ಮುಂತಾದ ಸದ್ಗುಣಗಳಿಂದ ಕೂಡಿದ ಆರ್ಯನಂತೆ, ಸಾಧುವಿನಂತೆ ನಾಗಚಂದ್ರನು ಕಾಣುವನು. ಅವನ ಕಾಲದ ಉತ್ತಮ ಸಂಸ್ಕೃತಿಗೆ ಅವನು ಕೈಗನ್ನಡಿಯಾಗಿದ್ದಾನೆಂದು ಸಂದೇಹವಿಲ್ಲದೇ ಹೇಳಬಹುದು.

ನಾಗಚಂದ್ರ ಕವಿಯ ಬಗೆಗೆ, ನಾಗಚಂದ್ರನದೇನು ಹಿರಿಮೆ? ಸ್ವತಂತ್ರ ಪ್ರತಿಭೆಯಿಂದ ಅವನೇನಾದರೂ ದುರಂತ ರಾವಣನನ್ನು ಸೃಷ್ಟಿಮಾಡಿದನೆ? ಹಿಂದಿನವರು ಬರೆದದ್ದನ್ನೇ ಅವನು ಹೇಳಿದ್ದಾನೆಯೇ, ಅದನ್ನಾದರೂ ಹೆಚ್ಚು ಉತ್ತಮಗೊಳಿಸಿದ್ದಾನೆಯೇ? ಜೀವನದ ನಿಗೂಢ ಸಮಸ್ಯೆಗಳನ್ನೇನಾದರೂ ಬಿಡಿಸಿದ್ದಾನೆಯೇ? ಜನಜೀವನವು ಅವನ ಕಾವ್ಯ ರಚನೆಯಿಂದ ಉತ್ತಮಗೊಂಡಿತೆ? ಎಂಬ ಕೆಲವು ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಲ್ಲಿ ಕೆಲವಕ್ಕೆ ಸಮಂಜಸವಾದ ಉತ್ತರವನ್ನು ಕಂಡುಕೊಂಡಿರುವ ಪ್ರಯತ್ನವನ್ನು ಪ್ರಸ್ತಾವನೆಯ ಕೊನೆಯ ಭಾಗದಲ್ಲಿ ಕಾಣಬಹುದಾಗಿದೆ. ಕನ್ನಡದ ಮಟ್ಟಿಗೆ ಪಂಪರಾಮಾಯಣದಂತಹ ಕಾವ್ಯವನ್ನು. ದುರಂತ ರಾವಣನ ಪರಿಚಯವನ್ನು ಮಾಡಿಕೊಟ್ಟ ಕೀರ್ತಿ ನಾಗಚಂದ್ರನದು. ಹೊಸ ಸಂಪ್ರದಾಯವೊಂದನ್ನು ರೂಢಿಗೆ ತಂದು ಇತರೇ ಕವಿಗಳಿಗೆ ಮಾರ್ಗದರ್ಶಕ ನಾದವನು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ಮೂಲವನ್ನು ಸ್ವಾರಸ್ಯ ಕೆಡದಂತೆ, ಅರ್ಥಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಂಗ್ರಹಿಸಿರುವುದು ಸಂಪಾದಕರ ಸಂಗ್ರಹ ಗುಣಕ್ಕೆ ಸಾಕ್ಷಿಯಾಗಿದೆ. ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಸಂಗತಿಗಳಉ ಇಂದಿಗೂ ವಿದ್ವಾಂಸರ ಮನ್ನಣೆಗಳಿಸಿವೆ. ಒಂದೂ ಬಿಡದಂತೆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ನಾಗಚಂದ್ರನ ಕೃತಿಗೆ ಮೂಲಗಳಾದ ವಿಮಲ ಸೂರಿಯ ಪಉಮ ಚರಿತೆ ಹಾಗೂ ರವಿಶೇಷನ ಸಂಸ್ಕೃತ ರಾಮಾಯಣ ಕೃತಿಗಳ ಜೊತೆಗೆ ಪಂಪ ರಾಮಾಯಣವನ್ನು ತೌಲನಿಕ ವಿಮರ್ಶೆಯ ಮೂಲಕ ತುಲನೆಮಾಡಿ ಪೂರ್ವ ಕವಿಗಳಿಂದ ಎಲ್ಲಿ ಪ್ರಭಾವಿತನಾಗಿದ್ದಾನೆ. ಎಲ್ಲೆಲ್ಲಿ ಬದಲಾವಣೆ ಮಾಡಿಕೊಂಡಿದ್ದಾನೆ. ಎಲ್ಲೆಲ್ಲಿ ಸ್ವಾತಂತ್ರ್ಯವಹಿಸಿದ್ದಾನೆ. ಸೋಪಜ್ಞತೆಯನ್ನು ಎಲ್ಲಿ ವ್ಯಕ್ತಪಡಿಸಿದ್ದಾನೆ ಮುಂತಾದ ಅಂಶಗಳನ್ನು ವಿಸ್ತೃತವಾಗಿ ಕೊಟ್ಟಿದ್ದಾರೆ. ಪರಿಶಿಷ್ಟದಲ್ಲಿ ಪುಉಮಚರಿತದಿಂದ ರಾವಣನ ಪಾತ್ರಕ್ಕೆ ಸಂಬಂಧಪಟ್ಟ ಕೆಲವು ಭಾಗಗಳನ್ನು ಓದುಗರಿಗೆ ಕೊಟ್ಟಿದ್ದಾರೆ. ಗ್ರಂಥದ ಕೊನೆಯಲ್ಲಿ ಟಿಪ್ಪಣಿ ರೂಪದಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ವಿವರಣೆ ಕೊಟ್ಟಿದ್ದು ಅಭ್ಯಾಸಿಗಳಿಗೆ ಉಪಯುಕ್ತ ಎನಿಸಿದೆ. ವಿಸ್ತೃತವಾದ ಶಬ್ದಕೋಶವನ್ನು ಅಕಾರಾದಿಯಲ್ಲಿ ಕೊಟ್ಟಿದ್ದಾರೆ.

ಡಿ.ಎಲ್‌.ಎನ್‌ರು ಪಂಪರಾಮಾಯಣ ಸಂಗ್ರಹಕ್ಕೆ ಬರೆದ ಮುನ್ನುಡಿ ಹೋಲುವಂತಹದು ಕನ್ನಡದಲ್ಲಿ ಮತ್ತೊಂದು ದೊರಕುವುದು ಅಸಂಬವ ಎಂಬ ಎಂ. ಚಿದಾನಂದಮೂರ್ತಿಗಳ ಮಾತು ಅಕ್ಷರ ಸಹ ಸತ್ಯ. ಕೃತಿಯ ಪ್ರಸ್ತಾವನೆಯ ಆರಂಭದಲ್ಲಿ ನಾಗಚಂದ್ರನ ಕಾಲವನ್ನು ಚರ್ಚಿಸಿ ಸು.ಕ್ರಿ.ಶ.೧೧೪೦ ಎಂದು ತೀರ್ಮಾನಿಸಿದ್ದಾರೆ. ಈಗಲೂ ಅದೇ ಅಭಿಪ್ರಾಯವೇ ಮಾನ್ಯಗೊಂಡಿದೆ. ಜೈನ ರಾಮಾಯಣ ಪರಂಪರೆಗಳಲ್ಲೂ ಪಉಮ ಚರಿತದ ಪರಂಪರೆಯನ್ನು ಪ್ರಸ್ತಾಪಿಸಿದ್ದಾರೆ. ವಿಮಲಸೂರಿಯ ರಾವಣನ ಬಗ್ಗೆ ಬರೆದಿರುವ ಭಾಗವು ಪ್ರತ್ಯೇಕವಾಗಿ ಕೊಡುವಷ್ಟರ ಮಟ್ಟಿಗೆ ಸಾಹಿತ್ಯಕ ಲಕ್ಷಣಗಳನ್ನು ಒಳಗೊಂಡಿದೆ. ಡಿ.ಎಲ್‌.ಎನ್‌ ಸಂಪಾದಿತ ಕೃತಿಗಳ ಪೀಠಿಕೆಗಳು ಸಂಶೋಧನಾತ್ಮಕವಾದ ಸಾಮಗ್ರಿ ಚರ್ಚೆಗಳಿಂದ ಕೂಡಿರುವುದರ ಜೊತೆಗೆ ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿವೆ. ಸಂಪಾದಿತ ಕಾವ್ಯದಲ್ಲಿಯ ರಸಜ್ಞತೆಯನ್ನು ಪ್ರಸ್ತಾವನೆಯಲ್ಲಿ ಕಾಣಬಹುದಾಗಿದೆ.

ಆಧುನಿಕ ಗ್ರಂಥಸಂಪಾದನಾ ತತ್ವಗಳೆಲ್ಲದರ ಹಿನ್ನೆಲೆಯಲ್ಲಿ ಈ ಎರಡು ಪ್ರತಿಗಳನ್ನು ಸಂಪಾದಿಸಲಾಗಿದೆ. ಹಸ್ತಪ್ರತಿಗಳ ಸ್ವರೂಪವನ್ನು, ಅವುಗಳ ಶುದ್ಧಾಶುದ್ಧತೆಗಳನ್ನು ಪ್ರಾಚೀನತೆಯನ್ನು ಅವುಗಳ ಸಂಬಂಧ, ಅವು ಯಾರಿಂದ ದೊರೆತವು ಎಂಬುದನ್ನು ಅವುಗಳ ಲಿಪಿ ವೈಲಕ್ಷಣಗಳನ್ನು ಸೂಚಿಸುವುದರೊಂದಿಗೆ ಅವನ್ನು ಗುರುತಿಸಿ ಬಳಸಿಕೊಳ್ಳಲಾಗಿದೆ. ಗ್ರಂಥವನ್ನು ಸಂಪಾದಿಸುವಾಗ ಒಂದನ್ನು ಆಧಾರ ಪ್ರತಿಯಾಗಿ ತೆಗೆದುಕೊಂಡು ಉಳಿದ ಪ್ರತಿಗಳ ಶುದ್ಧಪಾಠಗಳನ್ನು ಬಳಸಿಕೊಳ್ಳಲಾಗಿದೆ. ಪ್ರತಿಗಳಲ್ಲಿ ಪಾಠಾಂತರವನ್ನು ಗ್ರಂಥದುದ್ದಕ್ಕೂ ಅಲ್ಲಲ್ಲಿ ನಮೂದಿಸಲಾಗಿದೆ.

ಒಟ್ಟಾರೆ ಇವರು ಸಂಪಾದಿಸಿರುವ ಸುಕುಮಾರ ಚರಿತಂ ಹಾಗೂ ಪಂಪರಾಮಾಯಣ ಸಂಗ್ರಹಗಳು ಪ್ರಾಚೀನ ಜೈನ ಚಂಪೂಕವಿಗಳ ಕೃತಿಗಳಾಗಿದೆ. ಹಳಗನ್ನಡ ಭಾಷಾ ಸಂಪ್ರದಾಯಕ್ಕೆ ಸೇರಿದವುಗಳಾಗಿವೆ. ಈ ಎರಡು ಕೃತಿಗಳ ಆರಂಭದಲ್ಲಿ ಕವಿಕಾವ್ಯ ವಿಷಯಗಳಿಗೆ ಸಂಬಂಧಿಸಿದಂತೆ ವ್ಯಾಪಕವೂ ಆಳವೂ ವಿದ್ವತ್‌ಪೂರ್ಣವೂ ಆದ ಪ್ರಸ್ತಾವನೆಯು ಹೆಗ್ಗಳಿಕೆಯಾಗಿದೆ.

ಗ್ರಂಥಾಂತ್ಯದ ಅನುಬಂಧಗಳು ವೈವಿಧ್ಯಪೂರ್ಣವೂ, ಮಾಹಿತಿ ಭರಿತವೂ ಅತ್ಯಂತ ಉಪಯುಕ್ತವೂ ಆಗಿದ್ದು ಗಮನಾರ್ಹವಾಗಿವೆ. ಪದ್ಯಗಳು ಅಕಾರಾದಿ, ಮುಖ್ಯಪದಗಳ ಅಥವಾ ವಿಶಿಷ್ಟ ಪದಗಳ ಸೂಚಿ ಗ್ರಂಥದಲ್ಲಿ ಬಳಕೆಯಾಗಿರುವ ವೃತ್ತಸೂಚಿ ಮುಂತಾದವು ಕಂಡುಬರುತ್ತವೆ. ಈ ಗ್ರಂಥಗಳಲ್ಲಿಯ ಅನುಭಂದ ಅಥವಾ ಉಪೋದ್ಘಾತ ಬರಹಗಳೇ ಜೀವಾಳ ಎನಿಸಿವೆ. ವೈಜ್ಞಾನಿಕವಾದ ಗ್ರಂಥಸಂಪಾದನೆಯ ತತ್ವಗಳನ್ನು ಬಳಸಿಕೊಂಡಿದ್ದಾರೆ.

ಗ್ರಂಥಋಣ

೧. ಶಾಂತಿನಾಥ ಕವಿಯ ಸುಕುಮಾರ ಚರಿತಂ, ಸಂ. ತ.ಸು. ಶಾಮರಾಯರು, ಡಿ.ಎಲ್‌. ನರಸಿಂಹಾಚಾರ್‌, ಕರ್ನಾಟಕ ಸಂಘ, ಶಿವಮೊಗ್ಗ, ೧೯೫೪.

೨. ಪಂಪರಾಮಾಯಣ ಸಂಗ್ರಹ, (ಸಂ. ತಿರುವಳ್ಳೂರ್‌ ಶ್ರೀವಾಸರಾಘವಾಚಾರ್‌, ಡಿ.ಎಲ್‌.ನರಸಿಂಹಾಚಾರ್‌), ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೮೦, (ಐದನೆಯ ಮುದ್ರಣ).

೩. ಮಣಿಹ, (ಫ.ಗು. ಹಳಕಟ್ಟಿ ಸಂಸ್ಕರಣ ಸಂಪುಟ) ಬಿ.ಎಂ.ಶ್ರೀ ಪ್ರತಿಷ್ಠಾನ, ಬೆಂಗಳೂರು, ೧೯೮೨

೪. ಸಿರಿಸಂಪದ (ಬಿ.ವಿ. ಶಿರೂರ ಅಭಿನಂದನ ಗ್ರಂಥ) (ಸಂ.) ಎಫ್‌.ಟಿ. ಹಳ್ಳಿಕೇರಿ, ಕೆ, ರವೀಂದ್ರನಾಥ, ಬಿ.ವಿ. ಶಿರೂರ ಅಭಿನಂದನ ಸಮಿತಿ, ಯಲಬುರ್ಗ ೨೦೦೨

೫. ಹಸ್ತಪ್ರತಿಶಾಸ್ತ್ರ, ಸಂ,ಎಂ.ವಿ ಸೀತಾರಾಮಯ್ಯ ಮತ್ತು ಎಂ. ಚಿದಾನಂದಮೂರ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನ, ಬೆಂಗಳೂರು, ೧೯೮೩