ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮೌಲಿಕ ಕೊಡುಗೆಗಳನ್ನು ಸಲ್ಲಿಸಿ ಕನ್ನಡಿಗರ ಗೌರವಕ್ಕೆ ಪಾತ್ರರಾದ ಕೆಲವೇ ಕೆಲವರಲ್ಲಿ ಡಿ.ಎಲ್‌. ನರಸಿಂಹಾಚಾರ್‌ ಅವರು ಒಬ್ಬರು. ನರಸಿಂಹಾಚಾರ್ಯರು ಸಾಹಿತ್ಯ, ಸಂಸ್ಕೃತಿ, ಭಾಷೆ, ವ್ಯಾಕರಣ, ಛಂದಸ್ಸು ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮ ನಿಚ್ಚಳವಾದ ಹೆಜ್ಜೆ ಗುರುತುಗಳನ್ನಿಟ್ಟಿದ್ದಾರೆ. ಆ ಶ್ರೇಷ್ಠರ ಭಾಷಾಧ್ಯಯನದ ಸಾಧನೆಯನ್ನು ಕುರಿತು ಒಂದು ಪುನರಾವಲೋಕನದ ಪ್ರಯತ್ನವನ್ನು ಈ ಸಂಪ್ರಬಂಧದಲ್ಲಿ ಕಾಣಬಹುದು.

I

ಶಬ್ದ ಪ್ರಪಂಚದ ಆಗು-ಹೋಗುಗಳನ್ನು ತಿಳಿಯಬೇಕೆನ್ನುವವರಿಗೆ ಡಿ.ಎಲ್‌.ಎನ್‌ರ ಶಬ್ದಾರ್ಥ ವಿವೇಚನೆಗೆ ಸಂಬಂಧಿಸಿದ ಲೇಖನಗಳು ಕುತೂಹಲಕಾರಿಯಾಗಿವೆ. ನರಸಿಂಹಾಚಾರ್ಯರು ಶಬ್ದಗಳ ಚರಿತ್ರೆಯನ್ನು ಬಹುಸ್ವಾರಸ್ಯವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಆಧುನಿಕ ಪದ್ಧತಿಗನ್ನನುಸರಿಸಿ ಶಬ್ದಗಳ ರೂಪ ನಿಷ್ಕರ್ಷೆಯನ್ನೂ ಅರ್ಥ ನಿಷ್ಕರ್ಷೆಯನ್ನೂ ಮಾಡಿರುತ್ತಾರೆ. ಅಲ್ಲಿ ಕಂಡುವರುವ ವಿಷಯ ಸ್ವಾರಸ್ಯ, ಸಂವಿಧಾನ ಮತ್ತು ಮಹತ್ವವನ್ನು ಗುರುತಿಸಿ ತೋರಿಸುವುದೇ ಈ ಭಾಗದ ಉದ್ದೇಶವಾಗಿದೆ.

ಅಚ್ಚಗನ್ನಡದ ಪೊಱಸು, ಕಾಳಸೆ ಈ ಶಬ್ದಗಳ ಚರಿತ್ರೆಯನ್ನು ತಿಳಿಯಲು ಪ್ರಾಚೀನ ಕವಿಗಳ ಪ್ರಯೋಗಗಳನ್ನು ಹೇಗೆ ಅವಲಂಬಿಸಿದ್ದಾರೆ ಎಂಬುದನ್ನು ನೋಡಬಹುದು. ಪ್ರಾಚೀನ ಗ್ರಂಥಗಳನ್ನು ಸಂಸ್ಕರಿಸಿ ಪ್ರಕಟಿಸುವಾಗ ಯಾವ ರೂಪವು ನಮಗೆ ಅತ್ಯಂತ ಕಠಿಣವೆನಿಸುತ್ತದೆಯೋ ಅದೇ ಮೂಲಪಾಠವಿರಬಹುದೆಂದು ಊಹಿಸಿರುವುದುಂಟು. ಈ ಮಾತಿಗೆ ‘ಕಾಳಸೆ’ ಎಂಬ ಶಬ್ದವೇ ಉದಾಹರಣೆ. ಕನ್ನಡ ನುಡಿಯಲ್ಲಿ ಕಂಡುಬಂದ ಸುಲಭ ಪಾಠವೊಂದು ಲೇಖಕರನ್ನು ಈ ವಿಚಾರದ ಕಡೆಗೆ ಸೆಳೆಯಿತು. ಅದರ ವಿವಿಧ ಪ್ರಯೋಗಗಳನ್ನು ಹೆಕ್ಕಿ, ಆಯ್ದು, ಕಲೆಹಾಕಿ ಕಡೆಗೆ ‘‘‘ಕಾಳಸೆ’’ ಎಂದರೆ ‘‘ಜೋಡಣೆ’’ ಎಂಬ ಅರ್ಥವನ್ನು ನಿಶ್ಚಯಿಸುತ್ತಾರೆ. ‘ಪೊರಸು-ಪೊಱಸು’ಗಳ ಬೇಧವನ್ನೂ ಆಧಾರ ಸಹಿತವಾಗಿ ಮಾಡಿಕೊಟ್ಟಿರುತ್ತಾರೆ. ‘ಪೊರಸು’ ಎಂದರೆ ಪಾರಿವಾಳ. ಅದು ಅಪಶಕುನದ ಹಕ್ಕಿಯೆಂದು ಆ ಕಾಲದ ಜನತೆಯ ನಂಬಿಕೆಯಾಗಿತ್ತು. ‘ಬಾದುಬೆ’ ಎಂಬುದು ದೇವತೆಯ ಹೆಸರಿರಬೇಕೆಂದು ಊಹಿಸಿದ್ದಾರೆ. ಇಂತಹ ಶಬ್ದಗಳ ಮಹತ್ವವನ್ನು ಕುರಿತು ಹೇಳುವಾಗ ಅವು ಹೇಗೆ ಕನ್ನಡಿಗರ ಆಚಾರ, ವಿಚಾರ, ನಂಬಿಕೆಗಳ ಮೇಲೆ ಬೆಳಕು ಬೀರುತ್ತವೆ ಎನ್ನುವುದನ್ನು ಮನಗಾಣಬಹುದು.

ಒಲ್ಲಣಿಗೆ ಎಂಬ ಶಬ್ದವನ್ನು ಕುರಿತು ಶ್ರೀಯುತರು ಮಾಡಿರುವ ವಿಚಾರವಂತೂ ಎಂತಹವರಿಗಾದರೂ ಕಣ್ಣು ತೆರೆಯಿಸುವಂತಹದು. ಪಿ.ಬಿ. ದೇಸಾಯಿ ಅವರ ಲೇಖನದಿಂದ ಪ್ರಚೋದಿತರಾಗಿ ಅದು ಅಚ್ಚಗನ್ನಡ ಶಬ್ದವಲ್ಲವೆಂದೂ “ಆರ್ದಪಟಿಕಾ” ಎಂಬ ಸಂಸ್ಕೃತ ಪದವೇ ಮಾರ್ಪಟ್ಟು ಆ ರೂಪ ತಾಳಿದೆಯೆಂದೂ ಆಧಾರ ಸಹಿತವಾಗಿ ಸಮರ್ಥಿಸುತ್ತಾರೆ. ಪ್ರಾಕೃತದ ಮೂಲಕ ಅದರ ರೂಪನಿಷ್ಪತ್ತಿಯ ರಹಸ್ಯವನ್ನು ಭೇದಿಸುತ್ತಾರೆ. ಆರ್ದ್ರಪಟಿಕಾ>ಒಲ್ಲವಡಿಗೆ>ಒಲ್ಲವೞಿಗೆ>ಒಲ್ಲಳಿಗೆ>ಒಲ್ಲಣಿಗೆ ಅದರಂತೆ ಡಿ.ಎಲ್‌.ಎನ್‌.ರು ಬಾಚಣಿಗೆ, ಮೆಱೆವಣಿಗೆ, ಬೀಸಣಿಗೆ, ಅಡ್ಡವಣಿಗೆ ಶಬ್ದಗಳ ಅರ್ಥ ಸ್ವರೂಪವನ್ನು ಖಚಿತವಾಗಿ ನಿರ್ಧರಿಸಿದ್ದಾರೆ. ಇಲ್ಲೆಲ್ಲ ನರಸಿಂಹಾಚಾರ್ಯರ ಆಳವಾದ ವಿದ್ವತ್ತು, ಸತ್ಯಾನ್ವೇಷಣ ದೃಷ್ಟಿ ಪ್ರಕಟವಾಗಿದೆ. ಕನ್ನಡದ ಕಾವ್ಯಗಳಲ್ಲಿ ಬಳಕೆಯಾದ ಫಾರಶಿ ಮೂಲದ ತ್ರಾಸ ಎಂಬ ಶಬ್ದ ತಕ್ಕಡಿ ಎಂಬರ್ಥ ಪಡೆದಿದೆ. ತರಾಜು>ತ್ರಾಸ ಆಗಿ ಮಾರ್ಪಟ್ಟಿದೆ. ಈ ಶಬ್ದ ಹರಿಹರನ ಕಾಲಕ್ಕೆ (೧೨೦೦) ಕರ್ನಾಟಕವನ್ನು ಪ್ರವೇಶ ಮಾಡಿರಬೇಕು. ಶಬ್ದಗಳ ರೂಪ ಮೇಲುನೋಟಕ್ಕೆ ಕಾಣುವಷ್ಟು ಸುಲಭವಲ್ಲವೆಂಬ ಅಂಶವನ್ನು ಡಿ.ಎಲ್‌.ಎನ್‌ರು ತಮ್ಮ ಲೇಖನಗಳಲ್ಲಿ ತುಂಬ ಸ್ವಾರಸ್ಯಕರವಾಗಿ ತೋರಿಸಿಕೊಟ್ಟಿದ್ದಾರೆ.

ಅಗ್ರಹಾರ ಎಂಬ ಶಬ್ದವನ್ನು ಕುರಿತು ವಿಚಾರಿಸುವಾಗ ಲೇಖಕರು ಅನೇಕ ಶಾಸನಗಳನ್ನು ಉದಾಹರಿಸಿರುವುದು ಗಮನಿಸಬೇಕಾದ ಅಂಶ. ಪ್ರಾಚೀನ ಗ್ರಂಥಗಳಲ್ಲಿ ಕಾಣದ ಅನೇಕ ರೂಪಗಳು ನಮಗೆ ಶಾಸನಗಳಲ್ಲಿ ದೊರೆಯುತ್ತವೆ. ಪ್ರಕೃತದಲ್ಲಿ ‘ಅಗ್ರಹಾರ’ ಎಂಬ ಪೂರ್ವರೂಪವೂ ‘ಅಘಾರ’ ಎಂಬ ಹ್ರಸ್ವ ರೂಪವೂ ಖಚಿತವಾಗಿ ಕಂಡುಬರುವುದು. ಅಗ್ರಹಾರ ಶಬ್ದವು ಅಗ್ರ+ಆಹಾರ ಎಂಬ ಎರಡು ಶಬ್ದಗಳಿಂದ ಕೂಡಿದ ಒಂದು ಸಮಸ್ತ ಪದವೆಂದೂ ‘ಆಹಾರ’ ಎಂಬುದು ವಿಷಯ ವಾಚಕವೆಂದೂ ‘ಆಹಾರ’ದ ಸವೆದ ರೂಪ ‘ಹಾರ’ವೆಂದೂ ಆ ಸಮಸ್ತ ರೂಪ ಸೌಲಭ್ಯಾಕಾಂಕ್ಷೆಯೂ ಮೂಲಕ ‘ಅಗ್ರಹಾರ’ ಎನ್ನುವುದು ‘ಅಗ್ರಹಾರ’ ಎಂಬ ರೂಪವನ್ನು ತಾಳಿದೆಯೆಂದೂ ಶ್ರೀಯುತರ ವಿಚಾರದ ಮೂಲಕ ವ್ಯಕ್ತವಾಗುತ್ತದೆ. ಆದರೆ ಈ ಕುರಿತು ಡಿ.ಎಲ್‌.ಎನ್‌ರ ಈ ವಾದ ಸೂಕ್ತವಾಗಿಲ್ಲ. ಅಗ್ರಹಾರ ಈ ಸಮಾಸವನ್ನು ಅಗ್ರ+ಹಾರ ಎಂದು ಬಿಡಿಸುವುದು ಉಚಿತ. (ಹಾರ < ಹೃ=ಕೊಡು, ತೆಗೆದುಕೊ) ಅಗ್ರಹಾರ, ಬ್ರಾಹ್ಮಣರಿಗೆ (ಅಗ್ರ) ಕೊಟ್ಟ ಕೊಡುಗೆಗಳನ್ನು (ಹಾರ) ಹೇಳುತ್ತದೆ. ಡಂಗಹಾಕು ಎಂಬ ಶಬ್ದದ ಬಗ್ಗೆ ಬರೆಯುತ್ತ ಸಂಸ್ಕೃತದ ‘ದ್ರಂಗ’ ಶಬ್ದವೇ ‘ಡಂಗ’ವೆಂದು ರೂಪತಾಳಿತು. ಅದು ‘ಸುಂಕವನ್ನು ವಸೂಲು ಮಾಡುವ ಕಟ್ಟೆ’ ಎಂಬರ್ಥವನ್ನು ವ್ಯಕ್ತಪಡಿಸುತ್ತದೆ.

ರಪಣ>ರವಣ ಎಂಬುದರ ಅರ್ಥ ಮತ್ತು ನಿಷ್ಪತ್ತಿಯನ್ನು ನಿರ್ಧರಿಸಲು ಲೇಖಕರು ಕನ್ನಡ ಕವಿಗಳ ಪ್ರಯೋಗಗಳನ್ನು ಹೇಗೆ ರಾಶಿ ಹಾಕಿದ್ದಾರೆ ಎಂಬುದನ್ನು ನೋಡಬೇಕು. ಶಬ್ದಾರ್ಥ ವಿವೇಚನೆಯಲ್ಲಿ ಪ್ರಯೋಗಗಳ ಸಂಗ್ರಹ ಬಹುಪ್ರಧಾನವಾದದ್ದು. ಪ್ರಾಚೀನ ಮತ್ತು ಅರ್ವಾಚೀನ ರೂಪಗಳಿಗೂ ಅರ್ಥ ವ್ಯತ್ಯಾಸಗಳಿಗೂ ವಿವಿಧ ಪ್ರಯೋಗಗಳೇ ನಮಗೆ ಕೈದೀವಿಗೆಗಳು. ಪ್ರಕೃತದಲ್ಲಿ ಡಿ.ಎಲ್‌.ಎನ್‌ರು ಪಂಪ, ಕುಮಾರವ್ಯಾಸರ ಪ್ರಯೋಗಗಳನ್ನು ಉಲ್ಲೇಖಿಸಿ ಆ ಶಬ್ದಕ್ಕೆ ಸಾಮರ್ಥ್ಯ, ಸಂಪತ್ತು ಎಂಬರ್ಥವಿದೆಯೆಂದು ತಿಳಿಸಿದ್ದಾರೆ. ಅದರ ರೂಪ ನಿಷ್ಪತ್ತಿ ಇನ್ನೂ ಸೊಗಸು, ರೈ+ಪಣ>ರಯ್ವಣ>ರಪಣ>ರವಣ ಸಂಸ್ಕೃತ ಕನ್ನಡ ಶಬ್ದಗಳೆರಡು ಹೆಣೆದುಕೊಂಡು ಸಿದ್ಧವಾಗಿರುವ ರಪಣವು ಯಮಳ ಶಬ್ದ’ವೆಂದು ಗುರುತಿಸಿದ್ದಾರೆ. ಮದನಾವತಾರ ಎಂಬ ಪದಕ್ಕೆ ಅರ್ಥವನ್ನು ನಿರ್ಧರಿಸುವಾಗ ಅದು ಒಂದು ಬಗೆಯ ‘ಛತ್ರಿ’ಯ ಹೆಸರೆಂದು ಸೂಚಿಸುತ್ತಾರೆ ಕರ್ನಾಟಕದ ದೊರೆಗಳು ತಮ್ಮ ಅಸ್ಥಾನ ಕವಿಗಳಿಗೆ ಗೌರವ ಸೂಚಕವಾಗಿ ಅದನ್ನು ಕೊಡುತ್ತಿದ್ದರೆಂದು ಹೇಳಿದ್ದಾರೆ. ಪ್ರಾಚೀನ ಕಾವ್ಯದಲ್ಲಿ ಬಳಕೆಯಾಗುವ ಕಾರೋಹಣದ ಪೞೆಯ ಬಗ್ಗೆ ವಿವೇಚಿಸುತ್ತ ಕಾರೋಹಣ ಎಂಬ ಊರಿನಲ್ಲಿ ತಯಾರಾದ ವಸ್ತ್ರವೆಂದು ಹೇಳಿದ್ದಾರೆ. ಪಂಪನ ಕಾಲದಲ್ಲಿ ಕಾರೋಹಣ ಎಂಬ ಊರಿನಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳು ತಯಾರಾಗುತ್ತಿದ್ದಿರಬೇಕು.

ಅಪೂರ್ವವಾದ ಶಬ್ದಗಳ ರೂಪ ನಿರ್ಧಾರದ ಕೆಲಸ ಎಷ್ಟು ಕಷ್ಟವೆನಿಸುತ್ತದೆಯೋ ಅದಕ್ಕೂ ಮಿಗಿಲಾಗಿ ಅರ್ಥವನ್ನು ಇತ್ಯರ್ಥ ಮಾಡುವ ಕೆಲಸ ತುಂಬ ಪ್ರಯಾಸವೆನಿಸುತ್ತದೆ. ಪ್ರಕೃತದಲ್ಲಿ ಡಿ.ಎಲ್‌.ಎನ್‌ರು ಮಾಡಿರುವ ಒಂದೊಂದು ಪ್ರಯತ್ನವೂ ಈ ಅಂಶಗಳ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಬರಡಗೆ, ಪೞಂಗಾಸು ಶಬ್ದಗಳ ಚರಿತ್ರೆಯನ್ನು ಹೇಳುತ್ತ ‘ಬರಡಗೆ’ ಎಂದರೆ ಮರದ ದಿಮ್ಮಿಗಳಿಂದ ಕಟ್ಟಿದ ಕೋಟೆ. ‘ಪೞಂಗಾಸು’ ಎಂಬುದು ನಾಣ್ಯಕ್ಕೆ ಉಪಯೋಗಿಸುತ್ತಿದ್ದ ಚಿನ್ನ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಗುಯ್ಯಲ್‌ ಎಂಬ ಪದದ ಕುರಿತು ಹೇಳುವಾಗ ತೆಲುಗಿನ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಗುಯ್ಯಲ್‌ ಶಬ್ದ ತೆಲುಗು-ಕನ್ನಡ ಗಡಿನಾಡ ಶಬ್ದವೆಂದೂ ಕನ್ನಡಕ್ಕೆ ತೆಲುಗಿನಿಂದ ಎರವಲಾಗಿ ಬಂದ ಹಳೆಯ ಶಬ್ದಗಳಲ್ಲಿ ಅದು ಒಂದೆಂದೂ ‘ನೀರೊಸರುವ ಗುಣಿ’ ಅದರ ಅರ್ಥವೆಂದೂ ಹೇಳಬಹುದು. ಶಬ್ದದ ರೂಪವನ್ನು ನಿಷ್ಕರ್ಷಿಸುವಾಗ ವಿದ್ವಾಂಸನಾದವನಿಗೆ ಎಷ್ಟು ಭಾಷೆಗಳನ್ನು ತಿಳಿದಿದ್ದರೈ ಕಡಿಮೆಯೇ. ಮೇಕು ಪದದ ಅರ್ಥ ನಿಷ್ಪತ್ತಿ ನಿರ್ಧರಿಸುವಾಗಲೂ ತೆಲುಗಿನ ‘ಮ್ರೇಂಕು/ಮ್ರೇಂಗು’ ರೂಪಗಳ ಕಡೆಗೆ ಅಧ್ಯಯನಕಾರರ ಗಮನ ಸೆಳೆಯುತ್ತಾರೆ. ಅದರರ್ಥ ಬಳಿ, ಲೇಪಿಸು.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಬಳಕೆಯಾದ ‘ಈಱೆಲ್‌’ ಎಂಬುದರ ನಿಷ್ಪತ್ತಿ ಕುರಿತು ಹೇಳುವಾಗ ಈಱು>ಈಱಿಲ್+ಇಲ್‌=ಈಱೆಲ್‌ಎಂದಾಯಿತು ‘ಈಱು’ ಎಂದರೆ ಹೆರಿಗೆ, ಮರಿಹಾಕುವುದು. ‘ಇಲ್‌’ ಎಂದರೆ ಮನೆ. ಈಱೆಲ್‌ ಎಂದರೆ ಹೆರಿಗೆ ಮನೆಯೆಂದರ್ಥ. ಎಂತಹ ಕಠಿಣ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥನಿರ್ಧರಿಸುವ ಬಗೆ ಡಿ.ಎಲ್‌.ಎನ್‌ರಿಗೆ ಸಾಧಿಸಿದೆ. ಶನಿವಾರ ದಿನ ಭಿಕ್ಷೆ ಬೇಡಲು ಬಂದ ಹಳ್ಳಿಯ ಹೆಂಗಸರೊಬ್ಬಳು “ಬುದ್ಧಿ ಇವತ್ತು ವಡ್ಡವಾರ ಅಕ್ಕಿ ಕೋಡಿ” ಎಂದು ಕೇಳಿದ್ದು ಕನ್ನಡ ಕಾವ್ಯ, ಶಾಸನಗಳಲ್ಲಿ ಹಲವು ಸಲ ಬರುವ ‘ವಡ್ಡವಾರ’ ಪದದ ಅರ್ಥ ತಿಳಿಯಲು ಅವರಿಗೆ ಸಾಧ್ಯವಾಯಿತು. ತಕ್ಕೂರ್ಮೆ ಪದದ ನಿಷ್ಪತ್ತಿಯನ್ನು ತುಕ್ಕು+ಊರ್ಮೆ ಎಂದು ಬಿಡಿಸಿ ಸಂಧಿಯಾಗುವಾಗ ಪೂರ್ವ ಪದಾಂತ್ಯ ಸ್ವರಲೋಪವಾಗಿ ‘ತಕ್ಕೂರ್ಮೆ’ ಎಂದು ಸಹಜವಾಗಿಯೇ ರೂಪಸಿದ್ಧಿಯಾಗುತ್ತದೆ. ಅದು ‘ಅತಿಶಯವಾದ ಯೋಗ್ಯತೆ’ ಎಂಬರ್ಥ ಪಡೆದುಕೊಂಡಿದೆ. ದ್ರಾವಿಡ ಭಾಷೆಯಲ್ಲಿ ‘ಪುಳ್‌/ಪುಳು’ ಶಬ್ದ ‘ಪಕ್ಷಿ’ ಎಂಬರ್ಥದಲ್ಲಿ ದೊರೆಯುತ್ತದೆ. ಈಗ ಸಂಸ್ಕೃತ ಜನ್ಯ ‘ಹಕ್ಕಿ’ ಶಬ್ದ, ಒಂದು ದೇಶ್ಯ ಮೂಲದ ‘ಪುಳು’ ಲೋಪವಾಗಿದೆಯೆಂದು ಪಕ್ಷಿ<ಹಕ್ಕಿಗೆ ಸಮಾನ ಕನ್ನಡ ಶಬ್ದ ಎಂಬ ಲೇಖನದಲ್ಲಿ ವಿವೇಚಿಸಿದ್ದಾರೆ.

ನರಸಿಂಹಾಚಾರ್ಯರು ಶಬ್ದ ಮೂಲವನ್ನು ಕೆದಕಿ, ಬೆದಕಿ, ಸಿಕ್ಕು, ಬಿಡಿಸಿ ತಲಸ್ಪರ್ಶಿಯವಾಗಿ ಪರಿಶೀಲಿಸಿ, ಅವುಗಳ ಮೌಲ್ಯವನ್ನು ನಿರ್ಧರಿಸಿದ್ದಾರೆ. ಶಬ್ದಗಳ ಅರ್ಥಸೂಕ್ಷ್ಮತೆಯನ್ನು ಗ್ರಹಿಸುವಲ್ಲಿ ಡಿ.ಎಲ್‌.ಎನ್‌ರು ತೋರಿದ ವಿವೇಕ ಪ್ರಶಂಸನೀಯವಾದುದೇ ಸರಿ. ಅಲ್ಲೆಲ್ಲ ಅವರದ್ದೇ ಆದ ವಿಶಿಷ್ಟ ರೀತಿಯಿದೆ. ಶಬ್ದಾರ್ಥ ವಿವೇಚನೆಗೆ ಸಂಬಂಧಿಸಿದ ಅವರ ಲೇಖನಗಳು ಆ ಕೃತಿಯಲ್ಲಿ ಕಿರಿದಾದರೂ ಆಲೋಚನಾ ಸಂಪತ್ತಿನಲ್ಲಿ ಅತ್ಯಂತ ಹಿರಿದಾದವು. ಶಬ್ದಗಳನ್ನು ಕುರಿತು ವಿಚಾರ ಮಾಡುವವರೆಗೆ ಒಳ್ಳೆಯ ಮಾರ್ಗದರ್ಶಕವಾಗಿದೆ. ರೂಪ ಮತ್ತು ಅರ್ಥಗಳನ್ನು ನಿರ್ಣಯಿಸುವಾಗ ಭಾಷಾಶಾಸ್ತ್ರದ ಮುಖ್ಯ ಸೂತ್ರಗಳನ್ನು ಹೇಗೆ ಅನ್ವಯಿಸಬೇಕೆಂಬುದು ಅವರ ಬರೆಹಗಳಿಂದಲೇ ಕಲಿಯಬೇಕು. ಹೀಗೆ ಶಬ್ದಾರ್ಥ ವಿವೇಚನೆಗೆ ಅವರ ಕಾಣಿಕೆ ಮೌಲಿಕವಾಗಿದೆ.

ಕನ್ನಡ ಕಾವ್ಯಗಳಲ್ಲಿ ಅಧ್ಯಯನ ಮಾಡುವವರಿಗೆ ಕೋಶಗಳು ತುಂಬ ನೆರವಾಗುತ್ತವೆ. ಪ್ರಾಚೀನ ಕಾವ್ಯಗಳನ್ನು ಇಡೀಯಾಗಿ ಓದಿದವರಿಗೆ ಕನ್ನಡಕ್ಕೆ ಹೊಸ ನಿಘಂಟು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಬರದಿರದು. ಕಿಟೆಲ್‌ ಕೋಶದ ಮಿತಿಯನ್ನು ಹೇಳಿದ್ದಾರೆ. ಕಿಟೆಲ್‌ ಕೋಶ ತನ್ನ ಕಾಲದವರೆಗೆ ಪ್ರಕಟವಾಗಿದ್ದ ಎಲ್ಲ ಕಾವ್ಯ ಪ್ರಯೋಗಗಳನ್ನು ದಾಖಲಿಸಿಲ್ಲ. ಈ ಕಾರಣದಿಂದ ಅವನ ಕೋಶ ಕನ್ನಡ ಶಬ್ದ ಭಂಡಾರವನ್ನೆಲ್ಲ ತೆರೆದು ತೋರಿಸಲು ಅಸಮರ್ಥವಾಗಿದೆ. ಅವರು ಮಾಡಿದ ಕೆಲಸವನ್ನು ಮುಂದುವರಿಸುವುದು ಕನ್ನಡಿಗೆ ಮೇಲೆ ಬಿದ್ದಿರುವ ಹೊಣೆಯಾಗಿದೆ. ಪದಗಳ ಮೂಲವನ್ನು, ಚರಿತ್ರೆಯನ್ನು ಬೆದಕಿ ಕಂಡುಹಿಡಿಯುವ ಪ್ರಯತ್ನ ನಡೆಯಬೇಕು.

ಅದಕ್ಕೆ ಶಬ್ದಾರ್ಥಜ್ಞಾನ, ಶಾಸ್ತ್ರ ಪರಿಚಯ ಅವಶ್ಯವಾಗಿಬೇಕು. ಡಿ.ಎಲ್‌.ಎನ್‌ ಅವರು ಅದೇ ಕ್ರಮವನ್ನು ಹಿಡಿದು ಕನ್ನಡಕ್ಕೆ ಹೊಸ ನಿಘಂಟು ಎಂಬ ಲೇಖನದಲ್ಲಿ ಕೆಲವು ಪದಗಳ ಅರ್ಥವನ್ನು ನಿರ್ಣಯಿಸಿದ್ದಾರೆ.

ಹರಿಶ್ಚಂದ್ರ ಕಾವ್ಯದಲ್ಲಿ ಬಳಕೆಯಾದ ‘ಹುಡುಕು ನೀರು’ ಇದರ ಹಿಂದಿನ ರೂಪ ‘ಪುಡುಕು ನೀರು’, ಪುಡುಕು+ನೀರ್‌. ಪುಡುಕು ಶಬ್ದದ ಅರ್ಥ ಪುಡು+ಕು ಇಲ್ಲಿ ‘ಕು’ ಎಂಬುದು ಪ್ರತ್ಯಯ. ‘ಪುೞ್ಗು’ ಎಂಬ ಧಾತುವನ್ನು ಕೇಶಿರಾಜ ಕೊಟ್ಟು ಅದಕ್ಕೆ ‘ದಹನಕ್ರಿಯೆ’ ಎಂಬರ್ಥವನ್ನು ತಿಳಿಸಿದ್ದಾನೆ. ‘ಪುಡುಕು’ ಎಂಬುದು ಕುದಿ, ಬೇಯು ಎಂಬರ್ಥವನ್ನು ಪಡೆದಿದೆ. ‘ಪುಡುಕುನೀರು’ ಎಂದರೆ ಕುದಿಯುವ ನೀರು/ಬಿಸಿನೀರು ಎಂದರ್ಥವಾಗುತ್ತದೆ. ಇದರಂತೆ ಡಿ.ಎಲ್‌.ಎನ್‌ ಅವರು ಮೇಗಾಳಿ/ಕಿಗ್ಗಾಳಿ, ಬಡಪ ಓಹರಿ, ಸಾಹರಿ, ಒಲ್ಲಣಿಗೆ, ಮಾವಿಟ್ಟಿ ಇಂತಹ ರೂಪಗಳನ್ನು ಪ್ರಾಚೀನ ಸಾಹಿತ್ಯ ಮತ್ತು ಮೌಖಿಕ ಆಕರಗಳಿಂದ ಬಿಡಿಸಲು ಯತ್ನಿಸಿದ್ದಾರೆ. ಅವರ ಬಹುಶ್ರುತ ಪಾಂಡಿತ್ಯ ಇದರಿಂದ ವ್ಯಕ್ತವಾಗುತ್ತದೆ.

ಡಿ.ಎಲ್‌.ಎನ್‌ರು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿದ್ದ ಕನ್ನಡ-ಕನ್ನಡ ನಿಘಂಟುವಿನ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು (೧೯೪೬-೧೯೬೬). ಕನ್ನಡ ಭಾಷೆಯ ಚಾರಿತ್ರಿಕ ಬೆಳವಣಿಗೆಯನ್ನು ಸೂಚಿಸುವ ಈ ನಿಘಂಟುವಿನ ವೈಜ್ಞಾನಿಕ ಸ್ವರೂಪಕ್ಕೆ ಡಿ.ಎಲ್‌.ಎನ್‌ರೂ ಕಾರಣವಾಗಿದ್ದಾರೆ. ನಿಘಂಟುಕಾರನಿಗೆ ವಿವಿಧ ಶಾಸ್ತ್ರ ಪರಿಭಾಷೆಗಳ ಪರಿಚಯ, ಗ್ರಾಮಜೀವನದ ಅರಿವು ಮತ್ತು ತಾಳ್ಮೆ, ಸಹೃದಯತೆ ಇರಬೇಕೆಂದು ನಿಘಂಟು ರಚನೆ ಎಂಬ ಲೇಖನದಲ್ಲಿ ಹೇಳಿದ್ದಾರೆ. ಶಬ್ದ ಪ್ರಪಂಚದಲ್ಲಿ ಅನೇಕ ವಿಚಿತ್ರ ವ್ಯಾಪಾರಗಳು ನಡೆಯುತ್ತವೆ. ಸಾವಧಾನವಾಗಿ ಪರೀಕ್ಷಿಸಿ ನೋಡಿದರೆ ಅನೇಕ ಅದ್ಭುತ ಸಂಗತಿಗಳು ಬೆಳಕಿಗೆ ಬರುತ್ತದೆ. ಶಬ್ದಾರ್ಥದಲ್ಲಿ ಸಂಕುಚಿತತೆ, ವಿಸ್ತರಣೆ ಆಗುತ್ತದೆ. ಕನ್ನಡಕೋಶ ರಚನೆಗೆ ಡಿ.ಎಲ್‌.ಎನ್‌ ಕಾಣಿಕೆ ಅತ್ಯಮೂಲ್ಯವಾಗಿದೆ.

II

ನರಸಿಂಹಾಚಾರ್ಯರ ವ್ಯಾಕರಣ ಚಿಂತನೆಗಳು ಶಬ್ದಾರ್ಥ ವಿವೇಚನೆಯ ಕಡೆಗೆ ಹೆಚ್ಚು ಒಲವು ತೋರಿದರೂ ವ್ಯಾಕರಣಕ್ಕೇ ಸಂಬಂಧಿಸಿದ ಅವರ ಲೇಖನಗಳು ಗಮನಾರ್ಹವಾಗಿವೆ. ವ್ಯಾಕರಣವನ್ನು ನರಸಿಂಹಾಚಾರ್ಯರು ಮೀಮಾಂಸೆಯ ದೃಷ್ಟಿಯಿಂದ ನೋಡುತ್ತಾರೆಂಬುದಕ್ಕೆ ಅವರ ‘ಕನ್ನಡದಲ್ಲಿ ಶಬ್ದರಚನೆ’ ಎಂಬ ದೀರ್ಘ ಸಂಪ್ರಬಂಧವನ್ನು ಒಮ್ಮೆ ಪರಿಶೀಲಿಸಬೇಕು. ಅದೊಂದು ವಿದ್ವತ್‌ಯಾತ್ರೆ. ವಿಷಯವನ್ನು ಸಂಗ್ರಹ ಮಾಡುವಲ್ಲಿ ತರ್ಕಬದ್ಧವಾಗಿ ಅಳವಡಿಸಿ, ವ್ಯಾಖ್ಯಾನಿಸುವಲ್ಲಿ ಅವರದ್ದೇ ಆದ ಛಾಪುಯಿದೆ. ಆ ಸಂಪ್ರಬಂಧ ಅವರ ಆಳವಾದ ವ್ಯಾಸಂಗವನ್ನು ಎತ್ತಿ ಹೇಳುತ್ತದೆ.

ಸಾಮಾನ್ಯವಾಗಿ ಮಾತಿನಲ್ಲಿ ವ್ಯಕ್ತಪಡಿಸಬಹುದಾದ ಅತಿ ಕನಿಷ್ಠ ಅಲೋಚನಾಂಶವನ್ನು ಶಬ್ದವೆಂದು ಹೇಳಬಹುದು. ಮಾಡ್‌ (ಧಾತು)+ಉ+ಇ(ಎಂಬೆರಡು ಪ್ರತ್ಯಯಗಳು)+ದ+ಅನ್‌+ಉ=ಮಾಡಿದನು. ಕನ್ನಡದಲ್ಲಿ ಉಪಸರ್ಗಗಳಿಲ್ಲ. ಇಸ್ಕೂಲು, ಇಸ್ಲೇಟು ಮುಂತಾದವುಗಳಲ್ಲಿ ಉಚ್ಚಾರಣೆಯ ಸೌಲಭ್ಯಕ್ಕಾಗಿ ಶಬ್ದಾದಿಯಲ್ಲಿ ಸ್ವರಗಳನ್ನು ಸೇರಿಸಲಾಗಿದೆ. ಡಿ.ಎಲ್‌.ಎನ್‌ರು ಕನ್ನಡ ಶಬ್ದರಚನೆಯ ರೀತಿಯನ್ನು ಹಾಗೂ ಕನ್ನಡದಲ್ಲಿ ಅದರ ವೈಲಕ್ಷಣ್ಯಗಳನ್ನು ಕುರಿತು ವಿವರಿಸಿದ್ದಾರೆ. ಶಬ್ದಕ್ಕೆ ಬೀಜರೂಪವಾದ ಧಾತುವಿನ ಸ್ವರೂಪವನ್ನು ಖಚಿತವಾಗಿ ಹೇಳಿದ್ದಾರೆ.

ಕನ್ನಡ ಧಾತುಗಳ (ದ್ರಾವಿಡ ಭಾಷಾ ಧಾತುಗಳ) ಮೂಲತಃ ಏಕಾಕ್ಷರಯುಕ್ತವಾಗಿದ್ದುವು. ಹೃಸ್ವ+ವ್ಯಂಜನ, ದೀರ್ಘ+ವ್ಯಂಜನ ಒಂದೇ ಧಾತು ನಾಮಪದ, ಕ್ರಿಯಾಪದ ಮತ್ತು ಗುಣವಚನಾರ್ಥದಲ್ಲಿ ಬಳಕೆಯಾಗುತ್ತದೆ. ಕಲ್‌(ಧಾತು), ಶಿಲೆ (ನಾಮರೂಪ), ಕಲ್ಲೆರ್ದೆ (ಗುಣವಚನ). ಶಬ್ದದ ಅರ್ಥದಲ್ಲಿ ಒಂದಕ್ಕೊಂದು ಸಂಬಂಧವಿಲ್ಲ. ಧಾತುಗಳಿಗೆ ಪ್ರತ್ಯಯಗಳು ಸೇರಿ ಬೇರೆ ಬೇರೆ ಪದರಚನೆಗಳು ನಿರ್ಮಾಣವಾಗುತ್ತವೆ. ಅಣ್‌+ಎ=ಆಣೆ (ಸೋಕು, ಕೆರೆಯಕಟ್ಟೆ), ಅಣ್‌+ಕೆ=ಅಣ್ಕೆ (ಲೇಪನ) ಧಾತುಗಳ ದೀರ್ಘಿಕರಣದಿಂದ ಹೊಸಪದಗಳನ್ನು ನಿರ್ಮಿಸಿಕೊಳ್ಳಬಹುದು. ಉದಾಹರಣೆಗೆ ಪಟು-ಪಾಡು ಎರಡು ಧಾತುಗಳ ಸಂಯೋಗದಿಂದ ಹೊಸ ರೂಪಗಳು ಪ್ರಯೋಗವಾಗುತ್ತವೆ. ಕ್ರಿಯಾಧಾತು+ಕ್ರಿಯಾಧಾತು (ಈಸು+ಆಡು>ಈಸಾಡು), ನಾಮಧಾತು+ಕ್ರಿಯಾಧಾತು (ಕೈ+ಮಾಡು>ಕೈಮಾಡು) ಒಂದು ಧಾತು ಪುನರುಕ್ತವಾಗಿ ನಾಮವಾಚಕವಾಗಿಯೋ, ಕ್ರಿಯಾವಾಚಕವಾಗಿಯೋ ಆಗುತ್ತದೆ. ತಿಣಿ+ತಿಣಿ=ತಿಂತಣಿ ಒರಸು+ಒರಸು=ಒರಸೊರಸು ಕ್ರಿಯಾಪದರಚನೆ ಕನ್ನಡದಲ್ಲಿ ಹೇಗಾಗುತ್ತದೆಂಬುದನ್ನು ಸುದೀರ್ಘವಾಗಿ ಹೇಳಿದ್ದಾರೆ.

ಕೇಶಿರಾಜ, ಭಟ್ಟಾಕಳಂಕ ಹೇಳಿರುವ ಕೃತ್‌ಪ್ರತ್ಯಯಗಳ ಸ್ವರೂಪವನ್ನು ಹೇಳಿದ್ದಾರೆ. ಅ (ಗೆಲ್ಲ, ಸೊಲ್ಲ), ಆಮೆ (ತೀರಮೆ), ಆವಿ (ಬಳವಿ) ಭಾಷೆಯನ್ನು ಬೆದಕುತ್ತ ಹೋದಂತೆ ಇನ್ನೂ ಹಲವು ಪ್ರತ್ಯಯಗಳು ದಲ್‌, ದಲೆ (ತವುದಲೆ, ಅಗುಂದಲೇ), ದಿ (ಕೆಡುದಿ, ಉರುದಿ) ದೊರೆಯುತ್ತವೆ. ಕನ್ನಡದಲ್ಲಿ ‘ಡ’ ಕಾರಕ್ಕೆ ‘ಟ’ ಕಾರವಾಗುತ್ತದೆ. (ಆಡು-ಆಟ, ಪಾಡು-ಪಾಟ) ಒಂದೇ ಧಾತುವಿಗೆ ಬೇರೆ ಬೇರೆ ಪ್ರತ್ಯಯಗಳು ಸೇರಿ ಅನೇಕ ಭಾವನಾಮಗಳಾಗುತ್ತದೆ. ‘ತವು’ ಎಂಬುದರಿಂದ ತವಿಲ್‌, ತವುದಲೆ ಡಿ.ಎಲ್‌.ಎನ್‌ ಅವರು ಕ್ರಿಯಾಧಾತುಗಳಿಂದ ಅವುಗಳಿಗೆ ಸೇರುವ ಪ್ರತ್ಯಯಗಳಿಂದಲೂ ಬೇರೆ ಬೇರೆ ಶಬ್ದಗಳ ನಿಷ್ಪತ್ತಿಯನ್ನು ಗಮನಿಸಿದ್ದಾರೆ. ನಾಮಧಾತುಗಳಿಂದಲೂ ಅವಕ್ಕೆ ಸೇರುವ ಪ್ರತ್ಯಯಗಳಿಂದಲೂ ಶಬ್ದ ಸೃಷ್ಟಿ ಆಗುವ ವಿಧಾನವನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ನಾಮರೂಪಕ್ಕೆ ಸಾಧಾರಣವಾಗಿ ಸೇರುವ ಪ್ರತ್ಯಯಗಳು (ಲಿಂಗ, ವಚನ ಸೂಚಕ ಪ್ರತ್ಯಯಗಳು, ವಿಭಕ್ತಿ, ಆಖ್ಯಾತ, ತದ್ಧಿತ ಪ್ರತ್ಯಯಗಳೆಂದು ವಿಂಗಡಿಸಲಾಗಿದೆ).

ಕನ್ನಡದಲ್ಲಿ ಕೃತ್‌ ಪ್ರತ್ಯಯಗಳಂತೆ ತದ್ಧಿತ ಪ್ರತ್ಯಯಗಳು ಹೇರಳವಾಗಿವೆ. ಕೇಶಿರಾಜ ಮತ್ತು ಭಟ್ಟಾಕಳಂಕರು ಈ ಪ್ರತ್ಯಯಗಳನ್ನು ಕುರಿತು ವಿವೇಚಿಸಿದ್ದಾರೆ. ಆದರೆ ಅವರು ಈ ಪ್ರತ್ಯಗಳ ಮೂಲಗಳೇನಿರಬಹುದೆಂಬ ವಿಚಾರವನ್ನು ಮಾಡಿಲ್ಲ. ಡಿ.ಎಲ್‌.ಎನ್‌ರು ಆ ಕುರಿತು ಚರ್ಚೆ ಬೆಳೆಸಿದ್ದಾರೆ. ತನ ಎಂಬುದು ವಸ್ತುವಿನ ಭಾವವನ್ನು ನಿರ್ದೇಶಿಸುವ ಪ್ರತ್ಯಯ. ಇದರ ಮೂಲ ಸಂಸ್ಕೃತ ತ್ವ, ತ್ವನ, ಅಥವಾ ಅಪಭ್ರಂಶದ ತ್ತಣ ಆಗಿರಬಹುದು. ವಳ, ವಳ್ಳ ಎಂಬುದಕ್ಕೆ ಸಂಸ್ಕೃತದ ‘ಪಾಲ’ ಶಬ್ದ ಆ ಪ್ರತ್ಯಯಗಳಿಗೆ ಮೂಲ ಆಗಿರಬಹುದು. ಇತಿ/ತಿಗಳು ಸಂಸ್ಕೃತದ ‘ಸ್ತ್ರೀ’ ರೂಪದ ಸವಳಿಕೆಯಾಗಿರಬಹುದು. ಡಿ.ಎಲ್‌.ಎನ್‌ ಅವರ ಈ ವಿಚಾರ ಸರಣಿಯನ್ನು ಒಪ್ಪಬಹುದಾಗಿದೆ. ಕೆಲವು ತದ್ಧಿತ ಪ್ರತ್ಯಯಗಳು ಕನ್ನಡ ಧಾತುಗಳಿಂದ ನಿಷ್ಟನ್ನವಾಗಿವೆ. ‘ಉಳ್‌’ ಎಂಬುದರಿಂದ ಉಳ್ಳ, ಉಳಿಗ ಎಂಬುದು, ಉಣ್‌ ಎಂಬುದರಿಂದ ಉಣಿ ಎಂಬುದು ಸಿದ್ಧಿಯಾಗಿದೆ. ಕನ್ನಡ ವ್ಯಾಕರಣಗಳಲ್ಲಿ ಹೇಳಿರುವ ತದ್ಧಿತ ಪ್ರತ್ಯಯಗಳನ್ನು ಇಲ್ಲಿ ಸಂಗ್ರಹವಾಗಿ ವಿಮರ್ಶಿಸಿದ್ದಾರೆ. ಈವರೆಗೂ ದಾಖಲಾಗದೆ ಕೆಲವು ಪ್ರತ್ಯಯಗಳನ್ನು ಡಿ.ಎಲ್‌.ಎನ್‌ರು ಶೋಧಿಸಿದ್ದಾರೆ. ಅಸಿಗ (ಕಳ್ಳಸಿಗಂ), ತಿನಿತೀನಿ (ಪಿಱಿತಿನಿ), ಪಣ (ಶೌರ್ಯಪಣ).

ಭಾಷೆಯಲ್ಲಿಯ ಮೂಲ ಸಾಮಗ್ರಿಗಳಿಂದ ಹೊಸರೂಪಣಗಳು ಸಿದ್ಧವಾಗುತ್ತವೆ. ದ್ವಿಗು ಸಮಾಸದ ವಿಶೇಷತೆಯನ್ನು ಹೇಳಿದ್ದಾರೆ. ಒಂಬೈನೂರು ಈ ಶಬ್ದದ ಮಾದರಿಯಲ್ಲಿ ಯಾವ ಭಿನ್ನಾಂಕವನ್ನಾದರೂ ನಿರ್ದೇಶಿಸುವ ಶಬ್ದವನ್ನು ರಚಿಸಬಹುದು. ನೂರೊಂದಿ ೧/೧೦೦, ನೂರುಮೂರಿ ೩/೧೦೦ ಇಂತಹ ನೂತನ ರಚನೆ ಎಂದರೆ ಒಂದು ಕಾಲದಲ್ಲಿ ಕಣ್ಮರೆಯಾಗಿ ತಿರುಗಿ ಕಣ್ಣಿಗೆ ಬಿದ್ದಿರುವ ಸಂಕ್ಷಿಪ್ತತೆಯನ್ನು, ಶಕ್ತಿಯನ್ನು ತರುವ ವಿಧಾನವಾಗಿದೆ. ಡಿ.ಎಲ್‌.ಎನ್‌ ಅವರು ಕೂಡುನುಡಿಗಳ/ಯಮಳ ಶಬ್ದಗಳ (ಗೆಡ್ಡೆ-ಗೆಣಸು ಹುಳು-ಹುಪ್ಪಟೆ) ಸ್ವರೂಪವನ್ನು ಹೇಳಿದ್ದಾರೆ. ‘ಮನೆಗಿನೆ’ಯನ್ನು ಯಮಳ ಶಬ್ದಗಳೆಂದು ಕರೆದಿರುವುದು ಸರಿಯಲ್ಲ. ಅದು ಪ್ರತಿಧ್ವನಿರೂಪ. ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ರೂಪಗಳ ಆಧಾರದ ಮೇಲೆ ಅವಕ್ಕೆ ಸದೃಶ್ಯವಾದ ಹೊಸರೂಪಗಳ ಸೃಷ್ಟಿ. ಸಾದೃಶ್ಯ ಮೂಲ ರಚನೆ. ಇದು ಹೊಸಶಬ್ದ ನಿರ್ಮಾಣಕ್ಕೆ ಕಾರಣವಾಗಿದೆ. ಸಹಕರಿಸು ಶಬ್ದದಂತೆ ಚಹಕರಿಸು (ಚಹೋಪಚಾರ ಏರ್ಪಡಿಸುವುದು)

ಭಾಷೆಯಲ್ಲಿ ಹೊಸಪದಗಳು ಬೆಳೆದು ಬಂದಿರುವ ವಿಧಾನಗಳನ್ನು ಡಿ.ಎಲ್‌.ಎನ್‌ ವಿಸ್ತಾರವಾಗಿ ವಿವೇಚಿಸಿದ್ದಾರೆ. ೧ . ಒಂದು ರೂಪ ಬೇರೊಂದು ಸಂದರ್ಭದಲ್ಲಿ ಪ್ರಯೋಗವಾಗುವುದರಿಂದ ಹೊಸರೂಪ ನಿರ್ಮಾಣವಾಗುತ್ತದೆ. ಪಾದಪೂಜೆ: ೧. ಪೂಜ್ಯ ವ್ಯಕ್ತಿಗಳಿಗೆ ತೋರಿಸುವ ಭಕ್ತಿ, ಗೌರವ. ೨ ಒದೆತ ಎಂಬರ್ಥವೂ ಇದೆ. ೩. ಸೌಲಭ್ಯಾಕ್ಷಾಂಕ್ಷೆ ಉದಾ- Examination-exam. ೪ ಕೆಲವು ಶಬ್ದಗಳ ಆದ್ಯ ಅಕ್ಷರಗಳನ್ನು ಒಟ್ಟಿಗೆ ಸೇರಿ ಹೊಸಶಬ್ದ ನಿರ್ಮಿಸುವುದು. ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ). ಒಂದು ಭಾಷೆಯಲಿಲ್ಲದ ವಸ್ತು, ವಿಷಯ ಅನ್ಯ ಭಾಷೆಯಲ್ಲಿದ್ದರೆ ಆ ವಿಷಯವನ್ನು ನಿರ್ದೇಶಿಸುವ ಶಬ್ದವನ್ನು ಆ ಭಾಷೆಯ ಜಾಯಮಾನಕ್ಕೆ ತಕ್ಕಂತೆ ತೆಗೆದುಕೊಳ್ಳುವುದೇ ಸ್ವೀಕರಣ. ಪಾರಸಿ, ಮರಾಠಿ, ಇಂಗ್ಲಿಷ್‌ ಭಾಷೆಯ ಅನೇಕ ರೂಪಗಳು (ಬ್ಯಾಂಕ್‌ ಬಸ್‌, ಕಾಗದ, ಮುಂ) ತೆಗೆದುಕೊಳ್ಳುವ ಭಾಷೆಗೆ ಸೇರುತ್ತವೆ. ‘ರಾಗಿ’, ‘ಮೆಣಸಿನಕಾಯಿ’ ಈ ಪದಗಳ ಪ್ರಾಚೀನತೆಯನ್ನು ಹೇಳುತ್ತ ಇವು ಯಾವ ರೀತಿಯಾಗಿ ಕನ್ನಡಕ್ಕೆ ಬಂದವು ಎಂಬುದನ್ನು ತುಂಬಾ ಸ್ವರಸ್ಯಕರವಾಗಿ ಹೇಳಿದ್ದಾರೆ. ಯಾವುದೇ ಭಾಷೆ ತನಗೆ ಅವಶ್ಯವಿದ್ದಾಗ ಅನ್ಯಭಾಷೆಯ ರೂಪಗಳನ್ನು ಸ್ವೀಕರಿಸಬೇಕು. ಅದು ಒಂದು ಭಾಷೆ ಬೆಳೆಯುವ ವಿಧಾನವಾಗಿದೆ.

ಕನ್ನಡ ಧಾತುಗಳ ಸ್ವರೂಪವನ್ನು ಡಿ.ಎಲ್‌.ಎನ್‌ರು ಹೇಳಿದ್ದಾರೆ. ೧. ಒಂದಕ್ಷರ ಧಾತುಗಳು. ಆ, ಈ, ಓ ಮುಂತಾದವು ೨. ಎರಡಕ್ಷರ ಧಾತುಗಳು VCV (ಅಗಿ), VCC (ಆಳ್‌), CVCV (ನೇರೆ), CVC (ನಿಲ್‌), VNCVC (ಇಂಗು), CVNCV (ತಂಗ), CVCCVC (ನಕ್ಕು), VCCVC (ಇಕ್ಕು) ೩. ಮೂಲಕ್ಷರದ ಧಾತುಗಳು CVCVCV (ತುಱುಗು). VCVC (ಅಡರ್‌). VCVCV (ಅಡಕು) ಈ ಮಾದರಿಗಳಿಗೆ ಅನುಸಾರವಾಗಿ ಹೊಸಧಾತುಗಳು ನಿರ್ಮಾಣವಾಗುತ್ತವೆ. ಕನ್ನಡ ಪದರಚನೆಯ ಜಾಯಮಾನವನ್ನು ಅವರು ಸರಿಯಾಗಿ ಗುರುತಿಸಿದ್ದಾರೆ.

ಡಿ.ಎಲ್‌.ಎನ್‌ ಅವರು ಈ ಲೇಖನದಲ್ಲಿ ಕನ್ನಡ ಶಬ್ದಶಿಲ್ಪದ ಸ್ವರೂಪವನ್ನು ವಿಸ್ತಾರವಾಗಿ ವಿವೇಚಿಸಿದ್ದಾರೆ. ಇತರ ದ್ರಾವಿಡ ಭಾಷೆಗಳಲ್ಲಿರುವಂತೆ ಕನ್ನಡದಲ್ಲಿ ಅಂತ್ಯ ಪ್ರತ್ಯಯಗಳು ಪ್ರಯೋಗದಿಂದ ನೂತನ ಶಬ್ದ ನಿರ್ಮಾಣದ ಸಾದ್ಯತೆಯನ್ನು ಹೇಳಿದ್ದಾರೆ. ಡಿ.ಎಲ್‌.ಎನ್‌ರು ಈ ಎಲ್ಲ ವಿಚಾರಗಳನ್ನು ಈಗ ಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿರುವ ಡಿ.ಎನ್‌. ಶಂಕರಭಟ್‌ರ ವಿಚಾರಗಳ ಹಿನ್ನೆಲೆಯಲ್ಲಿ ಮತ್ತೆ ಪರಿಶೀಲಿಸಬೇಕಾಗಿದೆ.

ಡಿ.ಎಲ್‌.ಎನ್‌ ಅವರು ತಾವು ಸಂಪಾದಿಸಿದ ಶಬ್ದಮಣಿದರ್ಪಣಕ್ಕೆ ಬರೆದ ಪ್ರಸ್ತಾವನೆ ತುಂಬ ಮೌಲಿಕವಾಗಿದೆ. ತಮಗಿಂತ ಹಿಂದಿನ ಆವೃತ್ತಿಗಳ (ಗ್ಯಾರೆಟ್‌, ಕಿಟಲ್‌,ಕನ್ನಡ ಸಾಹಿತ್ಯ ಪರಿಷತ್ತು ಆವೃತ್ತಿ. ಮದ್ರಾಸ್‌ ವಿಶ್ವವಿದ್ಯಾಲಯ ಆವೃತ್ತಿ) ಸ್ವರೂಪವನ್ನು ಪರಿಶೀಲಿಸಿದ್ದಾರೆ. ತಮ್ಮ ಆವೃತ್ತಿಗೆ ೨ ಓಲೆಯ ಹಾಗೂ ೨ ಮುದ್ರಿತ ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಸೂತ್ರ, ವೃತ್ತಿ, ಪ್ರಯೋಗ ಈ ಮೂರಕ್ಕೆ ಸಂಬಂಧಿಸಿದ ಪಾಠ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ಶಬ್ದಮಣಿದರ್ಪಣದ ಸಶಾಸ್ತ್ರೀಯ ಸವಿಮರ್ಶೆ ಪರಿಷ್ಕರಣದ ಅಗತ್ಯವನ್ನು ಡಿ.ಎಲ್‌.ಎನ್‌ರು ಸಕಾರಣವಾಗಿಯೇ ಹೇಳಿದ್ದಾರೆ. ಕೇಶಿರಾಜ ತನಗಿಂತ ಹಿಂದಿನ ಕಾವ್ಯಗಳಿಂದ ಹಾಗೂ ಸೂಕ್ತಿ ಸುಧಾರ್ಣವದಿಂದ ಆತ ಬಳಸಿಕೊಂಡ ಆಕರಗಳ ಸ್ವರೂಪವನ್ನು ಹೇಳಿದ್ದಾರೆ. ಕೇಶಿರಾಜನ ವ್ಯಕ್ತಿತ್ವ ರೂಪುಗೊಳ್ಳಲಿಕ್ಕೆ ಅವರು ಬೆಳೆದು ಬಂದ ಪರಿಸರ ಮತ್ತು ಪರಿಕರಗಳು ಹೇಗೆ ಪ್ರಭಾವ ಬೀರಿದವು ಎಂಬುದನ್ನು ವಿವೇಚಿಸಿದ್ದಾರೆ. ಶಬ್ದಮಣಿದರ್ಪಣ ಕಾವ್ಯಲೇಪನ ಪಡೆದಿರುವ ಶಾಸ್ತ್ರವಾಗಿದೆ. ಡಿ.ಎಲ್‌.ಎನ್‌ ಅವರು ಹಂಪನಾ ಅವರ ‘ಭಾಷಾವಿಜ್ಞಾನ’ ಕೃತಿಗೆ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ. ಸಾಹಿತ್ಯಾಭ್ಯಾಸಿಗಳಿಗೆ ಭಾಷಾವಿಜ್ಞಾನದ ಆಳವಾದ ಪರಿಚಯ ಎಷ್ಟು ಅಗತ್ಯವೆಂಬುದನ್ನು ತುಂಬ ಅರ್ಥಪೂರ್ಣವಾಗಿ ಹೇಳಿದ್ದಾರೆ.

ಡಿ.ಎಲ್‌.ಎನ್‌ರ ವ್ಯಾಕರಣ ಅಧ್ಯಯನದಲ್ಲಿ ಕಾಣುವ ಮಹತ್ವದ ಅಂಶವೆಂದರೆ ತೌಲನಿಕ ದೃಷ್ಟಿ. ಬಹುಜ್ಞತೆಯ ಮುಖ್ಯ ಗುಣವಾಗಿರುವ ಅವರ ಬರಹಗಳು ಈ ತೌಲನಿಕ ದೃಷ್ಟಿಗೆ ಸೂಚಕಗಳಾಗಿವೆ. ಅವರ ‘ಕನ್ನಡದಲ್ಲಿ ಶಬ್ದರಚನೆ’ ಕನ್ನಡ ವ್ಯಾಕರಣದ ಹೊಸಸಾಧ್ಯತೆಗಳನ್ನು ಕುರಿತು ವಿಚಾರ ಮಾಡುವವರಿಗೆ ಉತ್ತಮ ಮಾರ್ಗದರ್ಶಕವಾಗಿದೆ.

III

ಕನ್ನಡ ಛಂದಸ್ಸಿನ ಸಂವರ್ಧನೆಗೆ ನಿರಂತರವಾಗಿ ದುಡಿದವರಲ್ಲಿ ಡಿ.ಎಲ್‌.ಎನ್‌ಅವರು ಮುಖ್ಯರು. ಪ್ರಾಚೀನ ಕಾವ್ಯ, ಶಾಸನಗಳಲ್ಲಿರುವ ಛಂಧೋರೂಪಗಳನ್ನು ಶೋಧಿಸಿದ್ದಾರೆ; ವಿಶ್ಲೇಷಿಸಿದ್ದಾರೆ. ಛಂದಸ್ಸಿಗೆ ಸಂಬಂಧಿಸಿದ ಅವರ ಸಂಪ್ರಬಂಧಗಳು ತುಂಬ ಮೌಲಿಕವಾಗಿವೆ. ತೋಮರ ರಗಳೆ ಈ ಹೆಸರಿನ ರಗಳೆ ದಕ್ಷಿಣ ಭಾರತದ ಶಾಸನವೊಂದರಲ್ಲಿ ದೊರೆಯುತ್ತದೆ. ಆ ರಗಳೆಯು ೫ ಮಾತ್ರೆಗಳ ೪ ಗಣಗಳಿರುವ ಹಾಗೂ ಎರಡೆರಡು ಪಾದಗಳಿಗೆ ಆದಿ ಮತ್ತು ಅಂತ್ಯ ಪ್ರಾಸಗಳಿಂದ ಕೂಡಿದೆ. ಇದು ಸ್ಥೂಲವಾಗಿ ಲಲಿತ ರಗಳೆಯ ಲಕ್ಷಣದ ವಿನ್ಯಾಸದಲ್ಲಿದೆ. ಆದರೆ ಶಾಸನದಲ್ಲಿ ‘ತೋಮರ ರಗಳೆ’ ಎಂದು ಏಕೆ ಕರೆದರು? ಈ ಕುರಿತು ಡಿ.ಎಲ್‌.ಎನ್‌ ಅವರು ಬಹುಶಃ ಈಗ ಲಲಿತ ರಗಳೆಯೆಂದು ಕರೆಯಿಸಿ ಕೊಂಡಿರುವ ಪದ್ಯ ಜಾತಿಗೆ ಆ ಹೆಸರು ಆ ಶಾಸನ ಕಾಲದಲ್ಲಿ (೧೦೫೫) ಇದ್ದಿರಿಲಾರದು? ಅದರ ವಿನ್ಯಾಸದಿಂದಾದ ಈ ರಗಳೆಗೆ ‘ತೋಮರ ರಗಳೆ’ ಎಂಬ ಹೆಸರು ಬಂದಿದೆ.

‘ಧವಳ’ ಎಂದರೆ ಮದುವೆ ಮುಂತಾದ ಮಂಗಳ ಸಮಯದಲ್ಲಿ ಹೇಳುವ ಒಂದು ಬಗೆಯ ಹಾಡು. ಈ ಜಾತಿಯ ಹಾಡು ೧೦ನೇ ಶತಮಾನದಲ್ಲಿ ಕನ್ನಡ ಜನತೆಯಲ್ಲಿ ಪ್ರಚುರವಾಗಿತ್ತೆಂಬುದಕ್ಕೆ ರನ್ನನೇ ಸಾಕ್ಷಿ. ಕನ್ನಡದಲ್ಲಿ ಹಿಂದಿನ ಕಾಲದಿಂದಲೂ ಜನಪ್ರಿಯವಾಗಿರುವ ಈ ಹಾಡಿನ ಸ್ವರೂಪವನ್ನು ತಿಳಿಯಲಿಕ್ಕೆ ‘ಧವಳ’ವೆಂಬ ಹಾಡಿನ ಸ್ವರೂಪ ಎಂಬ ಲೇಖನದಲ್ಲಿ ವಿವರಿಸಿದ್ದಾರೆ. ಕನ್ನಡ ಜಾನಪದ ಸಾಹಿತ್ಯದಲ್ಲಿಯೂ (ಸೀಮಂತ, ಉಪನಯನ ಇಂತಹ ಸಂದರ್ಭಗಳಲ್ಲಿ) ಹೆಂಗಳೆಯರು ಹಾಡುತ್ತಾರೆ.

೧                      ೨
ತನ್ನ ಕುಲದ | ಹಿರಿಯರನು
೩                      ೪
ಮನ್ನಿಸಿಕರೆ | ಯಿಸಿಮನೆಗೆ
೧                      ೨
ಭಿನ್ನವಿಸಿದ | ನವರಿಗೆ
೩                      ೪
ತನ್ನಂತ | ಸ್ಥವನು

ಇಲ್ಲಿಯ ನಾಲ್ಕು ಪಾದಗಳಲ್ಲಿ ಆದಿಪ್ರಾಸವಿದೆ. ಪಾದವೊಂದಕ್ಕೆ ಎರಡೆರಡಂತೆ ೬ ಮಾತ್ರೆಗಳ ಗಣವಿನ್ಯಾಸವಿದೆ. ತೆಲುಗು ಸಾಹಿತ್ಯದಲ್ಲಿಯೂ ಈ ಹಾಡಿನ ಉಲ್ಲೇಖವಿದೆ. ತೆಲುಗಿನ ಧವಳದ ಜೊತೆಗೆ ಕನ್ನಡದ ಧವಳಗಳನ್ನು ತೌಲನಿಕವಾಗಿ ವಿವೇಚಿಸಿದ್ದಾರೆ. ೫ ಮತ್ತು ೬ ಮಾತ್ರೆಗಳ ಗಣದ ವಿನ್ಯಾಸದಲ್ಲಿ ಆಧುನಿಕ ಕನ್ನಡ ಕವಿಗಳು (ಬಿ.ಎಂ.ಶ್ರೀ, ಕುವೆಂಪು, ಪುತಿನ) ಸುಂದರವಾದ ಪದ್ಯಗಳನ್ನು ರಚಿಸಿದ್ದಾರೆ.

ರನ್ನನ ಕಾಲದಿಂದಲೂ ರೂಢಿಯಲ್ಲಿದ್ದ ಧವಳವು ಕಾಲಸಾಗರದಲ್ಲಿ ಕಣ್ಮರೆಯಾಗಿದ್ದು ನಮ್ಮ ಕಾಲದ ಕವಿದೃಷ್ಟಿಗೆ ಹೇಗೋ ಗೋಚರವಾಗಿ ಕೊಂಚ ರೂಪಾಂತರಗೊಂಡಿದ್ದರೂ ಮೂಲ ಸ್ವಭಾವವನ್ನು ನೀಗಿಕೊಳ್ಳದೆ ಪುನರುಜ್ಜೀವನಗೊಂಡು ಶ್ರವಣ ಸುಖದಾಯಿಯಾಗಿ ರಾರಾಜಿಸುತ್ತದೆ.

ಕಲ್ಯಾಣ ಚಾಲುಕ್ಯರ ಮೂರನೆಯ ಸೋಮೇಶ್ವರನ ‘ಮಾನಸೊಲ್ಲಾಸ’ ಎಂಬುದು ಲೌಕಿಕ ಶಾಸ್ತ್ರ ಕೃತಿ. ಕಾವ್ಯದ ದೃಷ್ಟಿಯಿಂದ ಹೇಗೋ ಛಂದಸ್ಸಿನ ದೃಷ್ಟಿಯಿಂದಲೂ ಮುಖ್ಯವಾದುದು. ಅದರಲ್ಲಿಯ ೧೬ನೇ ಅಧ್ಯಾಯ ಛಂದಸ್ಸಿನಗೆ ಮೀಸಲಾಗಿದೆ. ಡಿ.ಎಲ್‌.ಎನ್.ರು ಮಾನಸೊಲ್ಲಾಸದಲ್ಲಿ ಛಂದಸ್ಸು ಎಂಬ ಲೇಖನದಲ್ಲಿ ನಿರೂಪಿತವಾಗಿರುವ ಸಂಸ್ಕೃತ/ಪ್ರಾಕೃತ ವೃತ್ತ ವಿವರಗಳಾದ ಚರ್ಚರೀ, ಏಲಾ, ಜಯಮಾಲಿಕಾ, ಮಾಲತೀ, ಲಲಿತಾ, ಭೋಗವತೀ ಈ ವೃತ್ತಗಳನ್ನು ದೀರ್ಘವಾಗಿ ಹೇಳಲಾಗಿದೆ. ಕನ್ನಡ ಮೆಟ್ಟುಗಳಾದ ಕಂದ, ತ್ರಿಪದಿ, ಷಟ್ಪದಿ ಇವುಗಳ ಸ್ವರೂಪವನ್ನು ಸ್ಥೂಲವಾಗಿ ಹೇಳಲಾಗಿದೆ. ಡಿ.ಎಲ್‌.ಎನ್. ಆ ಕೃತಿಯಲ್ಲಿ ನಿರೂಪಿಸಲಾದ ಛಂದಸ್ಸಿನ ಇತರ ಕೆಲವು ಸಾಮಾನ್ಯ ಅಂಶಗಳನ್ನು ಸಂಗ್ರಹವಾಗಿ ಹೇಳಿದ್ದಾರೆ. ಅಂಶಗಣಾನ್ವಿತವಾದ ಷಟ್ಪದದ ಕೆಲವು ಪದ್ಯಗಳು ಇದುವರೆಗೆ ದೊರೆತಿವೆ. (ಚಂದ್ರರಾಜನ ಮದನತಿಲಕ, ಶಾಂತಿನಾಥನ ಸುಕುಮಾರ ಚರಿತ್ರೆ ಮುಂತಾದ ಕಾವ್ಯಗಳಲ್ಲಿ ಮತ್ತು ಕೆಲವು ಶಾಸನಗಳಲ್ಲಿ) ಈಗ ಅಂತಹ ಷಟ್ಪದಗಳು ವಿಜಾಪುರ ಜಿಲ್ಲೆಯ ಚಡಚಣ ಗ್ರಾಮದ ಶಾಸನದಲ್ಲಿಯೂ ದೊರಕಿವೆ. ಡಿ.ಎಲ್‌.ಎನ್.ರು ಆ ಷಟ್ಪದಗಳ ಲಕ್ಷಣವನ್ನು ಕುರಿತು ಮೂರು ಷಟ್ಪದಗಳು ಎಂಬ ಲೇಖನದಲ್ಲಿ ಹೇಳಿದ್ದಾರೆ. ಈ ಷಟ್ಪದಗಳ ೧೧ನೇ ಶತಮಾನದಲ್ಲಿ ರಚಿತವಾಗಿರುವುದನ್ನು ನೋಡಿದರೆ ಆ ಕಾಲದಲ್ಲಿ ಅಂತಹ ಷಟ್ಪದಿಗಳನ್ನು ಬರೆಯುವ ವಾಡಿಕೆ ಅಧಿಕವಾಗಿದ್ದಿತೆಂದು ಊಹಿಸಬಹುದಾಗಿದೆ.

ಡಿ.ಎಲ್‌.ಎನ್. ಅವರು ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ‘ಕನ್ನಡ ಛಂದಸ್ಸು’ ಕೃತಿಗೆ ಅಭ್ಯಾಸ ಸಂಪೂರ್ಣವಾದ ಮುನ್ನುಡಿ ಬರೆದಿದ್ದಾರೆ. ಪ್ರಾಸರಹಿತವಾದ ಸಂಸ್ಕೃತ ವರ್ಣವೃತ್ತಗಳನ್ನು ಕನ್ನಡಕ್ಕೆ ತರುವಾಗ ದ್ವಿತೀಯಾಕ್ಷರ ಪ್ರಾಸವನ್ನು ಸೇರಿಸಿದ್ದೂ ಯತಿಯನ್ನು ಉಲ್ಲಂಘಿಸಿದ್ದೂ ಅರ್ಥಯತಿಗೆ ಪ್ರಾಧ್ಯಾನ್ಯತೆಯನ್ನು ಕೊಟ್ಟಿದ್ದು ಇವೆಲ್ಲವನ್ನು ಕಾಣುತ್ತೇವೆ. ಇಂತಹ ಬೆಲೆಯುಳ್ಳ ಸಲಹೆಗಳನ್ನು ಕೊಟ್ಟಿದ್ದಾರೆ. ರಗಳೆ ಅಂಶ ವೃತ್ತವೇ, ಪ್ರಾಕೃತಜನ್ಯವೇ ಎಂಬ ಸಮಸ್ಯೆಯನ್ನು ಎತ್ತಿಕೊಂಡು ರಗಳೆಯ ರಹಸ್ಯವನ್ನು ಬಿಡಿಸಲು ಯತ್ನಿಸಿದ್ದಾರೆ.

ಅರ್ಧಶತಮಾನ ಕನ್ನಡ ಭಾಷೆಯ ಆಳ ಅಗಲಗಳನ್ನು ವಿಸ್ತರಿಸಿ, ಕನ್ನಡ ಅಧ್ಯಯನಕ್ಕೆ ನೆರವಾಗುವ ಆಚಾರ್ಯ ಗ್ರಂಥಗಳನ್ನು, ತೂಕವುಳ್ಳ ಸಂಪ್ರಬಂಧಗಳನ್ನು ರಚಿಸಿದ ಡಿ. ಎಲ್‌. ನರಸಿಂಹಾಚಾರ್ಯರು ಕನ್ನಡ ಭಾಷಾಧ್ಯಯನ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು. ಹೊಸ ವಾಗ್ವಾದಕ್ಕೆ ಹುಟ್ಟುಹಾಕಿದ ಅವರ ಒಂದೊಂದು ಬರಹಗಳೂ ಅವರ ಅಪಾರ ವಿದ್ವತ್ತಿಗೆ ಸಾಕ್ಷೀಭೂತವಾಗಿ ನಿಂತಿವೆ. ಡಿ.ಎಲ್‌.ಎನ್.ರು ಕನ್ನಡ ಭಾಷಾಧ್ಯಯನಕ್ಕೆ ಸಲ್ಲಿಸಿರುವ ಸೇವೆಯಿಂದ ಅವರ ಹೆಸರು ಆ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಹದ್ದಾಗಿದೆ.

* ‘ವ್ಯಾಕರಣ’ ಎಂಬ ಪದವನ್ನು ‘ಭಾಷಾಜ್ಞಾನ’ ಎಂಬರ್ಥದಲ್ಲಿ ಬಳಸಲಾಗಿದೆ.