ಡಿ.ಎಲ್‌.ಎನ್. ರವರ ಪೂರ್ಣ ಪ್ರೀತಿಗೆ ಪಾತ್ರವಾದುದು ಹಳೆಗನ್ನಡ ಕಾವ್ಯ. ಅವರಿಗೆ ಅಣ್ಣಾಸ್ವಾಮಿ ಅಯ್ಯಂಗಾರ್‌ರವರ (ತಾಯಿಯ ತಂದೆ) ಮೂಲಕ ಕನ್ನಡ ಕಾವ್ಯಗಳ ಬಗೆಗೆ ಒಲವು ಮೂಡಿತಂತೆ. ತಾತನವರು ಮಾಡುತ್ತಿದ್ದ ಭಾರತ ವಾಚನ ಮೊಮ್ಮಗನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಸಾಹಿತ್ಯ ಪರಿಸರದಲ್ಲಿ ಬೆಳೆದ ಅವರಿಗೆ ಹನ್ನೆರಡನೆಯ ವಯಸ್ಸಿಗಾಗಲೇ ಜೈಮಿನಿ ಭಾರತ ಕಂಠಪಾಠವಾಗಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಅವರು ರಾಜಶೇಖರ ವಿಳಾಸ, ಗದಾಯುದ್ಧ, ಛಂದೋಂಬುಧಿಗಳನ್ನು ಓದಿದ್ದರಂತೆ! ಇದು ಅವರ ಹಳಗನ್ನಡ ಸಾಹಿತ್ಯದ ಬಗೆಗಿನ ಒಲವು ಅಭಿರುಚಿಯನ್ನು ತಿಳಿಸುತ್ತದೆ. ಶಾಸನತಜ್ಞರಾದ ಶ್ರೀ. ಎನ್‌. ಲಕ್ಷ್ಮೀನಾರಾಯಣ ರಾವ್‌ರವರು ಹೇಳುವಂತೆ ಡಿ.ಎಲ್‌.ಎನ್.ರವರಿಗೆ ಇದ್ದಷ್ಟು ಶಾಸನ ಪರಿಚಯ ಮತ್ತಾವ ಕನ್ನಡ ವಿದ್ವಾಂಸರಿಗೂ ಇರಲಿಲ್ಲ. ಅವರ ನೆನಪಿನ ಶಕ್ತಿ ತೀಕ್ಷ್ಣವಾಗಿದ್ದುದರಿಂದ ಒಮ್ಮೆ ಓದಿದ ಕಾವ್ಯದ ಇಲ್ಲವೆ ಶಾಸನದ ಪದ್ಯಗಳು ಸುಲಭವಾಗಿ ನೆನಪಿಗೆ ಬರುತ್ತಿದ್ದವು. ಶ್ರೀಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಡಿ.ಎಲ್‌.ಎನ್.ರವರ ಆಪ್ತಮಿತ್ರರಲ್ಲಿ ಓರ್ವರು. ನರಸಿಂಹಾಚಾರ್ಯರ ಸ್ವಭಾವದಲ್ಲಿ ಅವರು ಕಂಡ ಅತ್ಯಂತ ಪ್ರಾಮುಖ್ಯವಾದ ಅಂಶ, ಹಳಗನ್ನಡ ಕಾವ್ಯಗಳಲ್ಲಿ ಅವರಿಗಿದ್ದ ಅಪಾರವಾದ ನಂಬಿಕೆ, ಪೂಜ್ಯತೆ ಮತ್ತು ಪ್ರೇಮ. ಕಾವ್ಯದ ಸಂಪರ್ಕ ಹೊಂದುವುದೆಂದರೆ, ಅವರಿಗೆ ಪ್ರಿಯನು ಪ್ರೇಯಸಿಯ ಸಹವಾಸವನ್ನು ಹೊಂದಿದಷ್ಟು ಉತ್ಸಾಹವೂ, ರೋಮಾಂಚನವೂ ಆಗುತ್ತಿತ್ತು. ಹಸಿವು, ಕಾವ್ಯ ಸಂಗೀತಗಳ ಆಸೆಯನ್ನು ಕೊನೆಗೆ ಸ್ತ್ರೀ ವಿಲಾಸಭೋಗಾಪೇಕ್ಷೆಯನ್ನೂ ಸಹ ಅಡಗಿಸಿಬಿಡುವುದೆಂದು ಸಂಸ್ಕೃತದಲ್ಲಿ ಒಂದು ಶ್ಲೋಕವುಂಟು. ಅನೇಕ ಸುಭಾಷಿತ ಶ್ಲೋಕಗಳೂ ಗಾದೆಯ ಮಾತುಗಳೂ ಸರ್ವಸಾಮಾನ್ಯರಿಗೆ ಅನ್ವಯಿಸುವ ಲೋಕರೂಢಿಯ ಮಾತುಗಳಾಗಿದ್ದು, ವಿಶೇಷ ಪ್ರಜ್ಞೆಯ ವಿದ್ವಾಂಸರೂ, ಕಾರ್ಯದಕ್ಷರೂ, ಸತತೋದ್ಯೋಗಿಗಳೂ, ಏಕಾಗ್ರಚಿತ್ತರೂ ಆದವರು. ಆ ಮಾತುಗಳು ತಮಗೆ ಅನ್ವಯಿಸದೆಂಬುದನ್ನು ಸ್ಥಾಪಿಸುತ್ತಾರೆ. ನರಸಿಂಹಾಚಾರ್ಯರ ಕಾವ್ಯ ಸಾಹಿತ್ಯದ ಹಸಿವು-ಗದ್ಯವಾಗಲೀ, ಹೊಸಗನ್ನಡವಾಗಲೀ, ಹಳಗನ್ನಡವಾಗಲೀ ಶಾಸನ ತಾಳೆಗರಿ, ಹಳೆಯ ಕರಡುಪ್ರತಿಗಳು ಇವುಗಳಲ್ಲಿ ಅವರಿಗಿದ್ದ ಅತ್ಯುತ್ಸಾಹ, ಸಂಭ್ರಮ ಅವರ ದೈಹಿಕ ಹಸಿವನ್ನೂ ಅಡಗಿಸಿಬಿಡುವಂತೆ ತೋರುತ್ತಿದ್ದಿತು.[1]

“ನೀವು ಹೊಸಗನ್ನಡದಲ್ಲಿ ಇನ್ನೂ ಕೆಲಸ ಮಾಡಬೇಕು” ಎಂದು ಡಿ.ಎಲ್‌.ಎನ್.ರವರ ಆತ್ಮೀಯ ಶಿಷ್ಯರೊಬ್ಬರು ಅವರನ್ನು ಕೇಳಿಕೊಂಡಾಗ “ಆ ಕೆಲಸ ಮಾಡುವವರು ಬೇಕಾದಷ್ಟಿದ್ದಾರೆ. ಆದರೆ ಈ ಕೆಲಸ (=ಹಳೆಗನ್ನಡ ಸಾಹಿತ್ಯ) ಮಾಡುವವರು ಎಷ್ಟು ಜನರಿದ್ದಾರೆ?” ಎಂದು ಡಿ.ಎಲ್‌.ಎನ್. ಕೇಳಿದರು. ಅವರು ಹೊಸಗನ್ನಡ ಸಾಹಿತ್ಯವನ್ನು ಕುರಿತು ಮಾತನಾಡುವಾಗ ಒಮ್ಮೊಮ್ಮೆ ನಿರಾಶೆ ತೋರಿರುವುದೂ ಉಂಟು. ಬಹುಶಃ ಪ್ರಾಚೀನ ಕವಿಗಳ ಕಾವ್ಯಗಳನ್ನು ಓದದೆ ಅಲ್ಲಗಳೆಯುವ ಕೆಲವರ ಉತ್ಸಾಹಾತಿರೇಕವನ್ನು ಕಂಡು ಹಾಗೆ ಆಗಿರಬಹುದು. ನಮ್ಮ ಪ್ರಾಚೀನ ಸಾಹಿತ್ಯವನ್ನು ನಮ್ಮ ತರುಣರು ಚೆನ್ನಾಗಿ ಓದಬೇಕು, ತಿಳಿಯಬೇಕು, ಹೆಚ್ಚಿನ ಅನುಭವ ಪಡೆದು ಬರೆಯುವುದಕ್ಕೆ ತೊಡಗಬೇಕು. ನಮ್ಮ ತರುಣರಿಂದ ಕೃತಿಗಳು ಹೊರಬರಬೇಕಾದರೆ ದೀರ್ಘಕಾಲದ ತಪಸ್ಸು, ನಿಷ್ಠೆ, ಸತತವಾದ ಕೃಷಿ ಇವು ಅಗತ್ಯ. ಸುಲಭ ಜನಪ್ರಿಯತೆ ನಮ್ಮ ಲೇಖಕರ ಗುರಿಯಾಗಬಾರದು. ಒಂದು ಬಗೆಯ ಸಾತ್ವಿಕ ಅತೃಪ್ತಿ ಅವರನ್ನು ಕಾಡಬೇಕು. ಆಗ ಪ್ರಗತಿ ಸಾಧ್ಯವೆಂದು ಅವರು ಆಗಾಗ ಹೇಳುತ್ತಿದ್ದರು. ಪರಂಪರೆ ಹಾಗೂ ಆಧುನಿಕತೆಯ ಬಗೆಗೆ ಅವರು ತುಲನೆ ಮಾಡುತ್ತಾ “ಪ್ರಾಚೀನ ಕವಿಗಳು ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿ, ಭಾಷಾ ಮರ್ಯಾದೆಗೆ ಕಟ್ಟುಬಿದ್ದು ಪ್ರತಿಯೊಂದು ಮಾತನ್ನು ಪೂರ್ಣವಾಗಿ ತೂಗಿ ಬಹುಕಾಲ ವ್ಯವಸಾಯ ಮಾಡಿ ಬರೆದಿದ್ದಾರೆ. ಆಧುನಿಕರು ಅಷ್ಟು ಶ್ರಮವನ್ನು ವಹಿಸುವುದಿಲ್ಲ. ಅವರಿಗೆ ಅಷ್ಟು ಸಹನೆ ಸಾವಧಾನಗಳಿಲ್ಲ. ಅನೇಕ ಹೊಸಭಾವನೆಗಳು ಆಧುನಿಕರಿಗೆ ಸ್ಫುರಿಸಿದರೂ, ಅದನ್ನು ಆಕರ್ಷಣೀಯವಾದ ರೀತಿಯಲ್ಲಿ ಹೇಳುವ ಶಬ್ದಸಂಪತ್ತು ಅವರಿಗೆ ಇಲ್ಲ. ತಾವು ಹೇಳಿದ್ದೇ ಕಾವ್ಯವೆಂಬ ಸ್ವಯಂ ಆಚಾರ್ಯಪಟ್ಟ ಅವರದು. ಯಾವುದೇ ವಿಷಯ ಹಳೆಯ ಕವಿ ಬರೆದಿರುವುದಕ್ಕೂ ತೂಗಿ ನೋಡಿ, ಅವರಲ್ಲಿ ಹೆಚ್ಚು ಅಚ್ಚುಕಟ್ಟು ಕಾಣುತ್ತೆ. ಇದರಲ್ಲಿ ಅಲಕ್ಷ್ಯ ಕಾಣುತ್ತದೆ. ಹೊಸಬರು ಕಾವ್ಯಮೀಮಾಂಸೆ ಕಾವ್ಯತತ್ವ ಇದನ್ನು ಇನ್ನೂ ಆಳವಾಗಿ ಹೆಚ್ಚಾಗಿ ಅಭ್ಯಾಸ ಮಾಡಬೇಕು. ತೀ.ನಂ.ಶ್ರೀ. ಬರೆದಿರುವ ಸರ್ವಸಾಮಾನ್ಯರಿಗೂ ಅರ್ಥವಾಗುವ ಕಾವ್ಯ ಮೀಮಾಂಸೆಯನ್ನು ಸಹ ಅನೇಕ ಆಧುನಿಕ ಕವಿಗಳು ಓದಿದ್ದಾರೆಂದು ನನಗೆ ಅನ್ನಿಸುವುದಿಲ್ಲ. ಆಧುನಿಕರಲ್ಲಿ ಭಾವನಾಶ್ರೀಮಂತಿಕೆ ಇದೆ. ಇವರು ಬರೆಯುತ್ತಿರುವುದು ಇಂದಿನವರಿಗಾಗಿ ಆದರೆ ಭಾಷೆಯ ಪುರುಳು ವ್ಯಾಕರಣ ಛಂದಸ್ಸಿನ ಕಟ್ಟುಪಾಡು ಯಾವುದೂ ಇಲ್ಲದೆ “ಸ್ವೇಚ್ಛಾಚಾರ”ದಿಂದ, ಸೊಗಸಾದ ಭಾವನೆಗಳನ್ನು ಜನ ಅರ್ಥ ಮಾಡಿಕೊಳ್ಳಲಾರದೆ ಅವು ವ್ಯರ್ಥವಾಗುತ್ತವೆ. ಹಿಂದಲವರು ಪ್ರಯತ್ನಿಸದ ಛಂದಸ್ಸೇ ಇಲ್ಲ. ಅವನ್ನು ಬಿಟ್ಟು ನಾವು ಹೋಗುವುದೂ ಕಷ್ಟ. ಅವುಗಳಲ್ಲಿಯೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ನಮ್ಮ ಕಾರ್ಯಕ್ಕೆ ಅಳವಡಿಸಿಕೊಳ್ಳಬಹುದು. ಅತ್ಯುತ್ತಮ ಆಧುನಿಕ ಕನ್ನಡ ಕವಿಗಳು ಹೀಗೆ ಮಾಡುತ್ತಲೇ ಇದ್ದಾರೆ.”[2] ಎಂದು ತಮ್ಮ ಆತ್ಮೀಯ ಮಿತ್ರರಾದ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರೊಡನೆ ಮಾತನಾಡುತ್ತಿದ್ದಾಗ ಹೀಗೆ ಹೇಳಿದ್ದರು.

ಡಿ.ಎಲ್‌.ಎನ್. ಅವರಿಗೆ ಹೊಸಗನ್ನಡ ಸಾಹಿತ್ಯದ ಬಗೆಗೆ ಅನಾದರವೇನೂ ಇರಲಿಲ್ಲ. ಅವರ ಗುರುಗಳಾದ ಬಿ.ಎಂ.ಶ್ರೀ. ನವೋದಯದ ಹರಿಕಾರರಾಗಿ ಯುವಪೀಳಿಗೆಗೆ ಚೈತನ್ಯ ಸ್ವರೂಪಿಗಳಾದಾಗ ಅವರ ಪ್ರಭಾವಕ್ಕೆ ಒಳಗಾಗಿ ಅನೇಕರು ಬರೆಯತೊಡಗಿದರು. ಡಿ.ಎಲ್‌.ಎನ್. ಸಹಾ ಕವಿತೆ ಬರೆದರು. ೧೯೨೮ ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕರ್ನಾಟಕ ಸಂಘದವರು ಪ್ರಕಟಿಸಿದ ‘ಕಿರಿಯ ಕಾಣಿಕೆ’ಯಲ್ಲಿ ಅವರ ಎರಡು ಕವನಗಳಿವೆ. ಆಗ ಕುವೆಂಪು, ಪುತಿನ, ತೀ.ನಂ.ಶ್ರೀ, ಕವನಗಳನ್ನು ಬರೆಯುತ್ತಿದ್ದರು. ಕುವೆಂಪು, ಪುತಿನ, ಕಾವ್ಯರಚನೆಯನ್ನು ಮುಂದುವರಿಸಿದರು. ತೀ.ನಂ.ಶ್ರೀ. ಮಾತ್ರ ಆಗಾಗ ಕವನ ಬರೆಯುತ್ತಿದ್ದರು. “ಕವಿತೆ ನನ್ನ ಸ್ವಧರ್ಮ ಅಲ್ಲ ಎಂದು ಬಹಳ ಮುಂಚೆಯೇ ತಿಳಿದುಬಿಟ್ಟಿತು” ಎಂದು ಡಿ.ಎಲ್‌.ಎನ್. ಹೇಳಿ ಮುಗುಳ್ನಗುವುದುಂಟು. ಅವರು ಕವಿತೆ ಬರೆದರೂ ಕಂದ ವೃತ್ತಗಳಲ್ಲಿಯೇ ಬರೆಯುತ್ತಿದರೇನೋ! ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಮಗ ಚಿ. ಸೀತಾರಾಮನ ಬ್ರಹ್ಮೋಪದೇಶವಾದಾಗ ಡಿ.ಎಲ್‌.ಎನ್. ಕಂದದಲ್ಲಿಯೇ ಒಂದು ಆಶೀರ್ವಾದವನ್ನು ಬರೆದು ಕಳುಹಿಸಿದ್ದರಂತೆ! ಅದರಲ್ಲಿ ರಳವನ್ನು ಪ್ರಯೋಗಿಸಿರುವರು. ಸೀತಾರಾಮನ ಹೆಸರಿನಲ್ಲಿಯೇ ಒಂದು ಚಮತ್ಕಾರವನ್ನು ಮಾಡಿರುವರು. ಆ ಕಂದಪದ್ಯ ಹೀಗಿದೆ :

ಸೀತಾರಾಮಂ ನವವಟು
ಸೀತಾರಾಮಂಗೆ ಮಾೞ್ಕೆ ಶುಭಮಂ ನಲವಿಂ
ದಾತಂ ವರ್ಧಿಕೆ ಮಗನೆನ –
ಲೀತನೆ ಮಗನೆಂದು ಪೊಗೞ್ಗೆ ನೋೞ್ಪವರೆಲ್ಲಂ ||

ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ನ ರವರ ಮನೆಯಲ್ಲಿ ನಡೆದ ಇನ್ನೊಂದು ಮಂಗಳ ಮುಹೂರ್ತಕ್ಕೂ ಡಿ.ಎಲ್‌.ಎನ್. ಕಂದಪದ್ಯದಲ್ಲಿ ಸಂದೇಶ ಕಳುಹಿಸಿದ್ದರಂತೆ.[3] ಇದರಿಂದ ಅವರ ಒಲವು ಯಾವ ಕಡೆ ಎಂಬುದು ವಿದಿತವಾಗುತ್ತದೆ.

ಆಧುನಿಕ ಸಾಹಿತ್ಯವನ್ನು ಸಾರಾಸಗಟವಾಗಿ ತಿರಸ್ಕರಿಸುವ ಮನೋಭಾವ ಡಿ.ಎಲ್‌.ಎನ್. ಅವರದ್ದಲ್ಲ. ನರಸಿಂಹ್ವಾಮಿಯವರ ‘ಮೈಸೂರು ಮಲ್ಲಿಗೆ’, ‘ಶಿಲಾಲತೆ’, ಬೇಂದ್ರೆ, ಪುತಿನ, ಪುಟ್ಟಪ್ಪ –ಇವರೇ ಮೊದಲಾದ ಕವಿಗಳ ಬಿಡಿ ಕವನಗಳು ಅವರ ಮೆಚ್ಚುಗೆಗೆ ಪಾತ್ರವಾಗಿದ್ದವು. ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಬಗೆಗೆ ಅವರು ಬರೆದಿರುವ ವಿಮರ್ಶೆ ಅವರೆಂತಹ ಸಹೃದಯಿಗಳು ಎಂಬುದನ್ನು ತಿಳಿಯ ಹೇಳುತ್ತದೆ. ಗೊರೂರರ ‘ಊರ್ವಶಿ’ ಕಾದಂಬರಿ ಓದಿ ಸೊಗಸಾದ ಕಾದಂಬರಿ. ಪಾತ್ರಗಳ ನಿರೂಪಣೆ ಬೆಳವಣಿಗೆ ಚೆನ್ನಾಗಿದೆ. ಇದರಲ್ಲಿ ಬರುವ ಕನ್ಯಾಕುಮಾರಿ ವರ್ಣನೆ ಶುದ್ಧಕಾವ್ಯ…” ಎಂದು ಬರೆದರಂತೆ. ಅವರಿಗೆ ಕಾದಂಬರಿ ದುಃಖಾಂತವಾಗಿದ್ದುದು ತುಂಬ ಕೆಡಕಾಗಿ ಕಂಡಿತು. ಅದರಲ್ಲೂ ಹೆಣ್ನು ಹೆತ್ತ ಹೃದಯ “ಅಯ್ಯಾ ನೀನು ಶುದ್ಧ ನಿರ್ಘೃಣರಯ್ಯ ಇದನ್ನು ದುಃಖದಲ್ಲಿ ಮುಗಿಸಿಬಿಟ್ಟಿರಿ. ಸಹಿಸುವುದು ಕಷ್ಟ. ಇಬ್ಬರಿಗೂ ಮದುವೆ ಮಾಡಿಸಿಬಿಟ್ಟಿದ್ದರೆ ನಿಮ್ಮ ಗಂಟು ಏನು ಹೋಗುತ್ತಿತ್ತು” ಎಂದು ಅವರು ಬರೆದರಂತೆ.[4] ಗೊರೂರರ ‘ಬಿಂದಿಗಮ್ಮನ ಜಾತ್ರೆ’ ಎಂಬ ಪ್ರಬಂಧ ‘ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟವಾದಾಗ ಅದನ್ನು ಓದಿ ಮೆಚ್ಚಿದ ಡಿ.ಎಲ್‌. ಎನ್‌. ಗೋರೂರರಿಗೆ ಹೀಗೆ ಪತ್ರ ಬರೆದರು, “ನಿಮ್ಮ ಲೇಖನವನ್ನು ಓದಿದೆ. ತುಂಬಾ ಚೆನ್ನಾಗಿದೆ. ಅಂಥ ಲೇಖನವನ್ನು ಓದಿ ಬಹಳ ದಿನಗಳಾದವು. ನನಗಾದ ಸಂತೋಷವನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ. ಬಿಂದಿಗಮ್ಮನ ಕರಗ ಹೊರುವವನ ದಿವ್ಯಾವೇಶ ಬಹು ಹೃದಯಂಗಮವಾಗಿ ನಿರೂಪಿತವಾಗಿದೆ. ನಿಮ್ಮ ಭಕ್ತಿ ಶ್ರದ್ಧೆಗಳ ಅನುಕಂಪ ಆದರಗಳ ಲೇಪನದಿಂದ ಲೇಖನ ಬಹು ರಮ್ಯವಾಗಿದೆ. ನನ್ನ ಧನ್ಯವಾದಗಳು. ಬಿಂದಿಗಮ್ಮನ ಪೂಜೆ, ನಮ್ಮ ನಾಡ ಸಂಸ್ಕೃತಿಯಲ್ಲಿ ಬಹಳ ಹಿಂದಲ ಕಾಲಕ್ಕೆ ಸೇರಿದ್ದೆಂದು ತೋರುತ್ತದೆ ‘ಬಿಂದಿಗರ್ಕಳ್‌’ ಎಂದು ಹಳೆಯ ಸಾಹಿತ್ಯದಲ್ಲಿ ೧೨ನೇ ಶತಮಾನದ – ಸಾಹಿತ್ಯದಲ್ಲಿ ಸಿಕ್ಕುತ್ತದೆ. ಬಿಂದಿಗ ದೇವತೆಯನ್ನು ಪೂಜಿಸುವವರು ಎಂದು ಇದರಿಂದ ಅರ್ಥವಾಗಬಹುದು. ಈ ದಿಕ್ಕಿನಲ್ಲಿ ಕೊಂಚ ಕೆಲಸ ನಡೆಯಬೇಕಾಗಿದೆ. ವಿರಾಮವಿದ್ದರೆ ಮಾಡಬಹುದು.’[5] ಪ್ರತಿಭೆಯನ್ನು ಗುರುತಿಸಿ ಮೆಚ್ಚುವ, ತಮಗೆ ಮೆಚ್ಚುಗೆಯಾದುದನ್ನು ಬರೆದು ತಿಳಿಸುವ ಅಪರೂಪದ ಗುಣ ಡಿ.ಎಲ್‌.ಎನ್‌. ಅವರದ್ದು. ಕೃಷ್ಣ ಅವರು ಬರೆದಿದ್ದ ‘ಮುಗುದೆಯರ ಪತ್ರ’ಗಳನ್ನು ಅಕಸ್ಮಾತ್ತಾಗಿ ನೋಡುವ ಪ್ರಸಂಗ ಬಂದಾಗ ಅದನ್ನು ಓದಿ ಮೆಚ್ಚಿದ ಡಿ.ಎಲ್‌.ಎನ್‌. ತೆಗೆದುಕೊಂಡು ಹೋಗಿ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅಚ್ಚು ಹಾಕಿಸಿದರು. ಕೃಷ್ಣರ ಸಾಹಿತ್ಯ ರಚನೆಗೆ ಅದೇ ಪ್ರೋತ್ಸಾಹವಾಗಿ, ಅನಂತರ ‘ನನ್ನ ಅಪ್ಸರೆ’, ‘ಗೌರಿ ಮದುವೆ’ ಮುಂತಾದುವನ್ನು ಬರೆದರು.

ಪುಟ್ಟಪ್ಪನವರು ಹಾಗೂ ಡಿ.ಎಲ್‌.ಎನ್‌. ಸಹಪಾಠಿಗಳು. ಡಿ.ಎಲ್‌.ಎನ್‌. ಅವರಿಗೆ ನಶ್ಯದ ಚಟ ಹತ್ತಿಸಿದವರು ಪುಟ್ಟಪ್ಪನವರು! ವಿಚಿತ್ರವೆಂದರೆ ಕಲಿಸಿದ ಗುರು ಆ ಚಟ ಬಿಟ್ಟುಬಿಟ್ಟ, ಕಲಿತ ಶಿಷ್ಯ ಉಳಿಸಿಕೊಂಡ. ಪುಟ್ಟಪ್ಪನವರ ‘ರಾಮಾಯಣ ದರ್ಶನ’ವನ್ನು ಮೆಚ್ಚಿಕೊಂಡಿದ್ದ ಡಿ.ಎಲ್‌.ಎನ್‌. ಆ ಬಗ್ಗೆ ಮಿತ್ರರಾದ ಗೊರೂರು ಅವರ ಜೊತೆ ಮಾತನಾಡುತ್ತಾ, “ಆ ಮನುಷ್ಯ ಗಟ್ಟಗನಯ್ಯ, ತನ್ನ ಮಹತ್‌ಗೆ ಅನುಗುಣವಾದ ವಿಷಯವನ್ನೇ ಎತ್ತಿಕೊಂಡು ರಾಮಾಯಣವನ್ನೆ ಬರೆದು. ಶ್ರೀ ರಾಮಚರಿತ್ರೆಯಿಂದ ಅವನ ಕಾವ್ಯಕ್ಕೆ ಸಹ ಒಂದು ಅಪೂರ್ವ ಶೋಭೆ ಬಂದಿತು. ಅವನ ಕಾವ್ಯದ ಕಲಶವೇ ಅದಾಯಿತು. ರಾಮಾಯಣ ಧ್ಯಾನ ಶ್ಲೋಕದಲ್ಲಿ ಹೇಳಿರುವಂತೆ ಶ್ರೀರಾಮ ನಾಮವೇ ವರಕವಿಗಳ ಮಾತಿಗೆ ವಿಶ್ರಾಮಸ್ಥಾನ. (‘ವಿಶ್ರಾಮಸ್ಥಾನಮೇಕಂ ಕವಿವರ ವಚಸಾಂ’). ಅಂದರೆ ಅದನ್ನು ಹೇಳಿದ ಮೇಲೆ ಮಾತು ತನ್ನ ಕಾರ್ಯವನ್ನು ಸಾಧಿಸಿತು” ಎಂಬ ಧನ್ಯತೆ ಕವಿಗೆ ಉಂಟಾಗುತ್ತದೆ. ನಮ್ಮ ದೇಶದ ಇಂದಿನ ಸಾಮಾಜಿಕ ಪರಿಸರದಲ್ಲಿ ಒಂದು ಹಳ್ಳಿಯ ವ್ಯವಸಾಯ ಕುಟುಂಬದಲ್ಲಿ ಇಂಥವನು ಜನಿಸುವುದೆಂದರೆ ಅದು ಪರಮಾತ್ಮನ ಕರುಣೆಯೋ ಹೊರತು ಬೇರೆ ಅಲ್ಲ. ವಾಲ್ಮೀಕಿ ರಾಮಾಯಣ ಎಷ್ಟೇ ಸುಲಭವಾಗಿದೆ ಎಂದರೂ ಅದನ್ನು ಎಲ್ಲ ಕನ್ನಡಿಗರೂ ಓದಲಾರರು. ಆದರೆ ಕನ್ನಡ ಕಾವ್ಯ ಎಷ್ಟೇ ಕಷ್ಟವಾದರೂ, ಸಂಸ್ಕೃತದಷ್ಟು ಕಷ್ಟವಲ್ಲ. ರಾಮಾಯಣ ದರ್ಶನವನ್ನು ಕನ್ನಡಿಗರೆಲ್ಲ ತೆಗೆದುಕೊಂಡು ಓದುತ್ತಾರೆ. ಇದೇ ಕನ್ನಡನಾಡಿನ ವೇದವಾದರೂ ಆಶ್ಚರ್ಯವಿಲ್ಲ. ಆದರೆ ನಮ್ಮ ಜನದ ಯೋಗ್ಯತೆಗೆ ಗ್ರಂಥದ ಬೆಲೆ ಹೆಚ್ಚು” ಎಂದರು.[6]

ಡಿ.ಎಲ್‌.ಎನ್‌. ೧೯೨೭ ರಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದಾಗ, ‘ಕರ್ನಾಟಕ ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ’ ಎಂಬ ವಿದ್ವತ್ತು ಪ್ರೌಢ ಪ್ರಬಂಧವೊಂದನ್ನು ಬರೆದಿದ್ದರು. ಅದರ ಮುಕ್ತಾಯ ಭಾಗ ಹೀಗಿದೆ: “ಈಗಿನ ಸಾಹಿತ್ಯದ ಪ್ರಕೃತಿ ವರ್ಣನೆಯ ಧ್ಯೇಯವು ಎಷ್ಟೋ ಉಚ್ಚತರವಾದುದಾಗಿದೆ. ಅವುಗಳ ರೀತಿಯೇ ಬೇರೆ, ದೃಷ್ಟಯೇ ಬೇರೆ, ಪರಿಪಾಕವೂ ಬೇರೆ, ಆವೇಶವೂ ಬೇರೆ, ಶುದ್ಧವಾದ ಹೃದಯದಿಂದಲೇ ಅರಿಯಬಹುದಾದ ಆಧ್ಯಾತ್ಮಿಕ ತತ್ತ್ವಗಳನ್ನು ಈಗಿನ ಕವಿಗಳು ಪ್ರಕೃತಿ ಸೌಂದರ್ಯದಲ್ಲಿ ಮನಗಾಣುತ್ತಿರುವರು. ಹಿಂದೆ ಕಳೆದುಹೋದ ಪಂಪ ರನ್ನರ ಕಾಲವು ಹೇಗೆ ಸಾಹಿತ್ಯದ ಪರಮಸೀಮೆಯನ್ನ್ಯದಿದ್ದಿತೋ ಹಾಗೆಯೇ ಇನ್ನು ಮುಂದೆ ಬರುವ ಕಾಲವು ಪಂಪ ರನ್ನರ ಕಾಲಕ್ಕಿಂತ ನೂರ್ಮಡಿಯಷ್ಟು ಉಚ್ಚತರವಾಗುವುದೆಂಬುದನ್ನು ಯಾರಾದರೂ ಒಪ್ಪಲೇಬೇಕು. ಷೇಕ್ಸ್‌ಪಿಯರನಂತಹ ಕವಿಗಳು ಇನ್ನು ಮುಂದೆ ಹುಟ್ಟಬೇಕು. ಹುಟ್ಟಿಯೇ ಇದ್ದಾರೆಯೋ ಏನೋ ಯಾರಿಗೆ ಗೋತ್ತು! ಅದಕ್ಕೆ ತನ್ನ ವಾತಾವರಣವೇನೋ ದಿನದಿನಕ್ಕೂ ಪರಿಶುದ್ಧವಾಗುತ್ತ ಬರುತ್ತಿರುವುದು. ಶುಭ ಚಿಹ್ನೆಗಳು ಎಲ್ಲೆಲ್ಲಿಯೂ ತಲೆದೋರಿವೆ. ಇನ್ನು ಮುಂದೆ, ಯಾರು ಎಷ್ಟು ಪ್ರಯತ್ನಪಟ್ಟರೂ, ತಡೆಯಲಾಗದ ಕಾವ್ಯ ಜೀವಜ್ಯೋತಿಯ ಹೊನಲು ನಮ್ಮೆಲ್ಲರನ್ನು ಮುಳುಗಿಸಿ ಆನಂದ ತಾಂಡವದಲ್ಲಿ ಮನವನ್ನು ಮೋಹಿಸುವ ಗಾನದಲ್ಲಿ ಲೀನರನ್ನಾಗಿ ಮಾಡುವುದು. ಬರುವುದು ಬೇಗ ಬರುವುದು. ಅಂತಹ ಸುದಿನವು ನಮ್ಮ ಜೀವನವನ್ನು ಆ ವಿಮಲ ಗಂಗಾ ತಟಿನಿಯಲ್ಲಿ ತೊಳೆಯೋಣ. ಅಲ್ಲಿಯವರೆಗೆ ಅಂತಃಕರಣಗಳನ್ನು ಶುದ್ಧಿಗೊಳಿಸುತ್ತ, ಮಧುಮಾಸದ ಬರವನ್ನು ಬಯಸುತ್ತ, ಪರಿಮಳವನ್ನು ಎಲ್ಲ ಕಡೆಯಲ್ಲಿಯೂ ಚೆಲ್ಲಲು ತವಕಿಸುತ್ತಿರುವ ಅಡವಿಯ ಹೂಗಳಂತೆ ಧ್ಯಾನಾಸಕ್ತರಾಗೋಣ. ದಯಾಮಯವಾದ ಪರಂಜ್ಯೋತಿಯು ಎಲ್ಲೆಲ್ಲಿಯೂ ತುಂಬಿ ಹೊರಹೊಮ್ಮುವುದು.”[7] ಡಿ.ಎಲ್‌.ಎನ್‌. ಭಾವುಕರಾಗಿ ನುಡಿದದ್ದು ‘‘ನವೋದಯದ ಮುಂಜಾವಿನಲ್ಲಿ ಕೋಳಿ ಕೂಗುವ ಮೊದಲಲ್ಲಿ. ಅವರ ಮೇಲಿನ ಮಾತಿನಲ್ಲಿ ಆಶಾವಾದಿಯೊಬ್ಬನ ತೀವ್ರತರವಾದ ಜೀವನೋತ್ಸಾಹವಿದೆ. ಭವ್ಯ ಭವಿಷ್ಯದ ಬಗೆಗೆ ಹೊಂಗನಸುಗಳಿವೆ. ಮಂಗಳದ ಭವಿಷ್ಯವಾಣಿಯಿದೆ. ಅವರ ಭವಿಷ್ಯವಾಣಿಯನ್ನು ಕೇಳಿದ ಯಾರಿಗೇ ಆಗಲಿ ಅವರು ಆಧುನಿಕ ಸಾಹಿತ್ಯದ ಏರೋಧಿಗಳೆಂದು ಹೇಳುವುದು ಸಾಧ್ಯವಿಲ್ಲ.”

೧೯೪೩ ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ‘`ಇಂದಿನ ಕನ್ನಡ ಕವಿತೆ’’ ಎಂಬ ವಿಷಯ ಕುರಿತು ಡಿ.ಎಲ್‌.ಎನ್‌. ಭಾಷಣ ಮಾಡಿರುವರು. ನವೋದಯ ಸಾಹಿತ್ಯಕ್ಕೆ ಒದಗಿ ಬಂದ ಪ್ರೇರಣೆಗಳ ಬಗೆಗೆ ಅವರು ಮಾಡಿರುವ ಆಲೋಚನೆಗಳು ಸಾಹಿತ್ಯದ ಬಗೆಗೆ ಅವರಿಗಿದ್ದ ಆಸಕ್ತಿಯನ್ನು ತಿಳಿಯಪಡಿಸುತ್ತವೆ. ಕೆ.ಎಸ್‌. ನರಸಿಂಹಸ್ವಾಮಿಯವರ ‘`ಶಿಲಾಲತೆ’’ಗೆ ಅವರು ಬರೆದಿರುವ ಮುನ್ನುಡಿ ನವೋದಯ ಕಾಲದ ಕಾವ್ಯದ ಬಗೆಗೆ ಅವರಿಗಿದ್ದ ಒಲವನ್ನು ಸ್ಪಷ್ಟವಾಗಿ ಹೇಳುತ್ತದೆ. ಹಾಗೆಯೇ, ವಸ್ತುನಿಷ್ಠವಾಗಿ ಸಹೃಯದನೊಬ್ಬ ಹೇಗೆ ಒಬ್ಬ ಕವಿಯ ಕಾವ್ಯವನ್ನು ವಿಮರ್ಶೆಯ ಒರೆಗೆ ಹಚ್ಚಬಲ್ಲ, ಕಾವ್ಯದ ಗುಣದೋಷಗಳೆರಡನ್ನೂ ಸಮತೂಕವಾಗಿ ಹೇಗೆ ಹೇಳಬಲ್ಲನೆಂಬುದಕ್ಕೆ ಇದು ಸೊಗಸಾದ ಉದಾಹರಣೆಯಾಗುತ್ತದೆ. ‘`ಮೈಸೂರು ಮಲ್ಲಿಗೆ’’ಯ ಬಗೆಗೆ ಡಿ.ಎಲ್‌.ಎನ್‌. ಮೆಚ್ಚುಗೆ ಮಾತು ಹೇಳುವರು. ಹಾಗೆಯೇ ಅವರ ಕವಿಮಾರ್ಗ ಹೊರಳು ದಾರಿಯಲ್ಲಿ ನಡೆದುದನ್ನೂ ಹೇಳುವರು. `ಮೈಸೂರು ಮಲ್ಲಿಗೆ’’ ಕಸ್ತೂರಿಯ ನೆಲದಲ್ಲಿ ಕಾಮನ ಬಿಲ್ಲನ್ನು ಬಿತ್ತಿ ಬೆಳೆಯಿಸಿರುವ ಹೂದೋಟ, ಏನು ಬಣ್ಣ, ಏನು ಕಂಪು, ಎಂಥ ಸೊಗಸು! ಈ ಕ್ಷೇತ್ರದಲ್ಲಿ ಇವರಷ್ಟು ಸಿದ್ಧಿಯನ್ನು ಸಂಪಾದಿಸಿರುವವರು ತೀರ ವಿರಳ, ಹೊಸಗನ್ನಡ ಕವಿತೆಯ ಸುಗ್ಗಿಯಲ್ಲಿ ಮೇಲುನೋಟಕ್ಕೆ ಸಂಸಾರದ ಒಲವಿನ ನಗೆಯ ಹೊಸ ವಿಸ್ತಾರಹೀನವೆಂದು ತೋರಬಹುದು. ಆದರೆ ಅಲ್ಲಿನ ವೈವಿಧ್ಯ ಅಪಾರ. ಕವಿದೃಷ್ಟಿ ಸೂಕ್ಷ್ಮವಾದ ಹಾಗೆಲ್ಲಾ ಇದರ ಮೇರೆ ಹಿಗ್ಗುತ್ತ ಹೋಗುತ್ತದೆ. ಈ ನೆಲವನ್ನೇ ಮತ್ತಷ್ಟು ಹಸನಾಗಿ ಉತ್ತು ಇನ್ನೂ ಅಪೂರ್ವವಾದ ಕುಸುಮಶ್ರೀಯನ್ನು ಇವರು ಕಾಣಿಸಬಲ್ಲರೆಂಬ ನಿರೀಕ್ಷೆ ಕೆಲವರಲ್ಲಿತ್ತು. ಈ ಕ್ಷೇತ್ರ ಮುಗಿಯಿತು, ಇಲ್ಲಿ ಅವರ ಪ್ರತಿಭೆ ಎಷ್ಟು ಮಾಡಬಹುದೋ ಅಷ್ಟನ್ನು ಮಾಡಿಯಾಯಿತು, ಬೇರೆ ಬಯಲಿಗೆ ಇದು ಹೋಗಲೇಬೇಕು, ಇಲ್ಲದಿದ್ದರೆ ಇವರ ಕವಿತೆಯ ಊಟೆ ಬತ್ತಿದಂತೆಯೇ – ಎಂದು ಮತ್ತೆ ಕೆಲವರಿಗೆ ತೋರಿತ್ತು. ‘`ಐರಾವತ’’, ‘`ದೀಪದಮಲ್ಲಿ’,’`‘ಉಂಗುರ’’ ಮುಂತಾದ ಇವರ ಈಚಿನ ಕಾವ್ಯಗುಚ್ಛಗಳು ಈ ಎರಡನೆಯ ನಿರೀಕ್ಷೆಗೆ ಹೆಚ್ಚು ಸಮರ್ಥನೆ ಕೊಡುವಂತಿವೆ. ಇಲ್ಲಿಯೂ ಒಲವಿನ ಗೀತೆಗಳು ಇವೆ. ಆದರೆ ಅವು ‘`ಮೈಸೂರು ಮಲ್ಲಿಗೆ’’ಯ ಗ್ರಂಥವಲಯದ ಕೇಂದ್ರದಿಂದ ದೂರ ಸರಿದು ಅಂಚಿನಲ್ಲೆ ಸಂಚರಿಸುತ್ತಿರುವಂತೆ ಕಾಣುತ್ತವೆ. ಮೊದಲನೆ ಸ್ವಚ್ಛತೆ, ಸ್ಫುಟತೆ, ತೀವ್ರತೆ, ಸಹಜತೆ, ಚಾರುತ್ವಗಳು ಅವುಗಳಲ್ಲಿ ಕಡಿಮೆಯಾಗುತ್ತ ಬಂದಿವೆ. ಹೊಸ ಕಾಣ್ಕೆ ಹಿಂಜರಿಯುತ್ತ ಸಾಗಿದೆ. ಇದರಿಂದ ಮೊದಲಿನ ನಿರೀಕ್ಷೆ ಸಫಲವಾದಂತಿಲ್ಲ. ಈ ನಿರಾಶೆಯನ್ನು ಹೋಗಲಾಡಿಸುವಂತಿವೆ. ಇತರ ಕ್ಷೇತ್ರಗಳಲ್ಲಿ ಓಡಾಡಿ ಕಂಡುಂಡ ಸೊಬಗಿನ ಕವಿತೆಗಳು. ವಸ್ತು ವೈವಿಧ್ಯವೂ ಅದರಿಂದ ಪ್ರಚೋದಿತವಾಗಿರುವ ಭಾವಬಾಹುಳ್ಯವೂ, ಸ್ವಲ್ಪ ಮಟ್ಟಿಗೆ ನವೀನ ರಚನಾತ್ಮಕವೂ ಈಚಿನ ಕಾವ್ಯಗುಚ್ಛಗಳಲ್ಲಿ ಬೆಳೆಯುತ್ತ ಬಂದು ಈ ‘ಶಿಲಾಲತೆ’ಯಲ್ಲಿ ಒಂದು ಹಂತವನ್ನು ಮುಟ್ಟಿದೆ. ಆದರೂ ಕೆಲವರಿಗೆ ಕೊರಗು, ‘ಮೈಸೂರು ಮಲ್ಲಿಗೆ’ಯ ಸುಕುಮಾರ ಪ್ರಪಂಚ ಕವಿಗಳ ಕೈ ನುಣುಚಿಕೊಂಡು ಹೋಯಿತಲ್ಲಾ ಎಂದು ….. ಮೇಲಿನ ಮಾತುಗಳಲ್ಲಿ ಕೆ.ಎಸ್‌.ನ.ರವರ ಮೊದಲಿನ ಕಾವ್ಯದ ಬಗೆಗೆ ಮೆಚ್ಚುಗೆಯಿದೆ. ನಂತರ ಅವರ ಕಾವ್ಯ ಮಾರ್ಗ ಹೊರಳಿದ್ದರ ಸೂಚನೆಯಿದೆ, ಕೊನೆಯಲ್ಲಿ ಶಿಲಾಲತೆಯ ಘಟ್ಟದಲ್ಲಿ ಕವಿ ಬೆಳೆಯುವುದರ ಬಗೆಗೆ ಮೆಚ್ಚುಗೆಯಿದ್ದರೂ ಮೈಸೂರು ಮಲ್ಲಿಗೆಯ ಸುಕುಮಾರ ಪ್ರಪಂಚ ಮರೆಯಾದದ್ದರ ಬಗೆಗೆ ಅತೃಪ್ತಿಯಿದೆ. ಬಹಳ ಸೊಗಸಾಗಿ ಶಿಲಾಲತೆಯ ವಿಮರ್ಶೆ ಮಾಡುವ ಡಿ.ಎಲ್‌.ಎನ್‌. ಕಾವ್ಯದ ವಿಶೇಷಾಂಶಗಳನ್ನು ಚೆನ್ನಾಗಿಯೇ ಗುರುತಿಸುವವರು. ಅವರಿಗೆ ಭಾವಗೀತೆಗಳಿರಬಹುದಾದ ಇತಿಮಿತಿಗಳ ಅರಿವಿದೆ. ಅವರು ವಿನಮ್ರರಾಗಿ ಸ್ವಲ್ಪ ನಿಷ್ಠುರವೆನ್ನಬಹುದಾದ ತಮ್ಮ ಅನಿಸಿಕೆಯನ್ನು ಹೇಳುವರು. ಸತ್ಯವನ್ನು ಮರೆಮಾಡುವ ಸಂಕೋಚಪ್ರವೃತ್ತಿ ಅವರದ್ದಲ್ಲ. ಅವರು ಹೇಳುವರು. “ಭಾವಗೀತೆ ಎಷ್ಟೇ ಲೋಕೋತ್ತರವಾಗಿದ್ದರೂ, ಕವಿಶಕ್ತಿಯ ಪೂರ್ಣಾವಿಷ್ಕರಣಕ್ಕೆ ಅಲ್ಲ ಅವಕಾಶ ಸಾಲದು – ಮಾನವ ಜೀವನ ನಾಟಕದ ಹತ್ತಾರು ದೃಶ್ಯಗಳು ಒಟ್ಟಿಗೆ ಸೇರಿ ಹತ್ತಾರು ವ್ಯಕ್ತಿಗಳ ಹೃದಯ ಮಥನದಿಂದ ಕ್ರಿಯಾಮಯವಾಗಿ ಭಿನ್ನ ಆಧರ್ಶಗಳ ತುಮುಲದಿಂದ ರಮಣೀಯವಾಗಿ ಉನ್ನತಿಯ ನೆಲೆಗೆ ಕವಿಮನವನ್ನು ಕೊಂಡೊಯ್ಯುವ ರಚನೆಗಳಲ್ಲಿ, ಕವಿಶಕ್ತಿ ಧೀರವೂ, ಗಂಭೀರವೂ ಆದ ಸಿಂಹಗಮನದಿಂದ ಭವ್ಯಾನುಭೂತಿಯನ್ನುಂಟು ಮಾಡಬಲ್ಲದು. ಆ ದಿಕ್ಕಿನಲ್ಲಿ ಈ ಕವಿಗಳ ಶಕ್ತಿ ಹರಿಯಲಿ, ದೊಡ್ಡದನ್ನು ಹಿಡಿಯಲಿ, ಸಾಧಿಸಲಿ. ‘ಯೋ ವೈ ಭೂಮಾ ತತ್ಸುಖಂ?’

 

[1] ಗೊರೂರುರಾಮಸ್ವಾಮಿಅಯ್ಯಂಗಾರ್‌, ರಸಫಲ, ಪುಟ. ೧೬೯

[2] ಅದೇ, ಪು. ೧೭೫

[3] ಅದೇ, ಪು. ೧೭೯

[4] ಅದೇ, ಪು. ೧೭೯

[5] ಅದೇ, ಪು. ೧೮೧

[6] ಅದೇ, ಪು. ೧೭೬

[7] ಡಿ.ಎಲ್‌. ನರಸಿಂಹಾಚಾರ್‌  ಪೀಠಿಕೆಗಳು, ಲೇಖನಗಳುಪು. ೫೯೮