ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಡಿ.ಎಲ್‌.ಎನ್‌. ಅವರೂ ಒಬ್ಬರು. ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಗಮನಾರ್ಹವಾದುದು. ಕನ್ನಡದ ಗಣ್ಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಹಳಗನ್ನಡ ಸಾಹಿತ್ಯ. ವ್ಯಾಕರಣ, ಶಬ್ದಶಾಸ್ತ್ರ ಹಾಗೂ ಸಂಪಾದನಾ ಕ್ಷೇತ್ರಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. ಸುಪ್ರಸಿದ್ಧ ಸಂಶೋಧಕರೂ, ಪಂಡಿತರೂ, ಅಧ್ಯಯನಶೀಲರೂ ಆದ ಡಿ.ಎಲ್‌.ಎನ್‌. ಅವರ ಸಾಹಿತ್ಯ ಸಾಧನೆ ಮಹತ್ವದ್ದಾಗಿದೆ. ಇಂದಿನ ಯುವ ವಿದ್ವಾಂಸರಿಗೆ ಅನುಕರಣೀಯವೂ, ಮಾರ್ಗದರ್ಶಿಯೂ ಆಗಿದೆ.

ಡಿ.ಎಲ್‌.ಎನ್‌. ಅವರನ್ನು ನಾವು ಹಳಗನ್ನಡದ ಸುಪ್ರಸಿದ್ಧ ಪಂಡಿತರೆಂದು, ಸಂಶೋಧಕರೆಂದು ಗುರುತಿಸುವೆವು. ಅವರು ಬರೆದ ಸಂಶೋಧನಾ ಲೇಖನಗಳು, ಪೀಠಿಕೆಗಳು, ಲೇಖನಗಳು ಎಂಬ ಹೆಬ್ಬೊತ್ತಿಗೆಯಲ್ಲಿ ಅಚ್ಚಾಗಿವೆ. ಆ ಲೇಖನಗಳು ಡಿ.ಎಲ್‌.ಎನ್‌. ಅವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿವೆ. ವಿಶೇಷವಾಗಿ ಅವರನ್ನು ಕೆಲವರು ಹಳಗನ್ನಡ ಕಾವ್ಯಗಳ ಸಂಪಾದಕರೆಂದು ಗುರುತಿಸುತ್ತಾರೆ. ಅವರು ಸಂಪಾದಿಸಿದ ‘‘ಶಬ್ದಮಣಿದರ್ಪಣಂ’’ ‘‘‘ವಡ್ಡಾರಾಧನೆ’’ ‘‘ಸಿದ್ಧರಾಮಚಾರಿತ್ರ’’ ಇವು ಅವರ ಶ್ರೇಷ್ಠ ಸಂಪಾದಿತ ಕೃತಿಗಳಾಗಿವೆ. ವೀರಶೈವ ಸಾಹಿತ್ಯ, ಸಂಸ್ಕೃತಿ ಹಾಗೂ ಹರಿಹರ ಕವಿಯ ಬಗೆಗೆ ಇವರು ನಡೆಸಿದ ಸಂಶೋಧನೆ ಹಾಗೂ ಬರೆದ ಸಂಶೋಧನಾ ಲೇಖನಗಳು ಇಂದಿಗೂ ಅಧಿಕೃತ ದಾಖಲೆಗಳಾಗಿ, ಸಂಶೋಧಕರಿಗೆ ದಾರಿದೀಪವಾಗಿ ಉಳಿದುಕೊಂಡಿವೆ.

ಹಳಗನ್ನಡ ಕಾವ್ಯ, ಪುರಾಣ ಹಾಗೂ ವ್ಯಾಕರಣ ಕೃತಿಗಳನ್ನು ಶೋಧಿಸಿ, ಸಂಪಾದಿಸಿ, ಪ್ರಕಟಿಸಿದ ಡಿ.ಎಲ್‌.ಎನ್‌. ಅವರು ಪ್ರಾಚೀನ ಕೃತಿಗಳನ್ನು ಕೃತಿಗಳನ್ನು ಹೇಗೆ ಸಂಪಾದಿಸಬೇಕು? ಸಂಪಾದನೆಯಲ್ಲಿ ಸಂಶೋಧಕನು ಅನುಸರಿಸಬೇಕಾದ ಮಾರ್ಗೋಪಾಯಗಳು ಯಾವುವು? ಸಂಶೋಧಕನ ವ್ಯಾಸಂಗ ವ್ಯಾಪ್ತಿ ಎಷ್ಟಿರಬೇಕು? ಇತ್ಯಾದಿ ಅಂಶಗಳನ್ನು ಕುರಿತಾಗಿ ಅವರು ‘‘ಕನ್ನಡ ಗ್ರಂಥ ಸಂಪಾದನೆ’’ ಎಂಬ ಕೃತಿಯಲ್ಲಿ ಬರೆದುದು ಕನ್ನಡ ಸಾಹಿತ್ಯೇತಿಹಾಸದಲ್ಲಿ ದಾಖಲಾಗಿ ಉಳಿಯುವಂಥದ್ದಾಗಿದೆ. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾಗ ಕನ್ನಡ ವಿದ್ಯಾರ್ಥಿಗಳಿಗೆ ಗ್ರಂಥ ಸಂಪಾದನಾಶಾಸ್ತ್ರ ಕುರಿತು ಪಾಠ ಮಾಡುವ ಸದಾವಕಾಶ ಲಭ್ಯವಾಗಿತ್ತು. ಆಗ ಈ ಶಾಸ್ತ್ರ ಕುರಿತಾಗಿ ಕನ್ನಡದಲ್ಲಿ ಯಾವುದೇ ಗ್ರಂಥಗಳಾಗಲೀ, ಪ್ರತ್ಯೇಕ ಲೇಖನಗಳಾಗಲೀ ಇರಲಿಲ್ಲ. ಆಗ ಡಿ.ಎಲ್‌.ಎನ್‌. ಅವರು ತುಂಬ ಪ್ರಯಾಸ ಪಟ್ಟು ಆಂಗ್ಲ ಭಾಷೆಯಲ್ಲಿರುವ ಗ್ರಂಥಗಳನ್ನು ಓದಿ ಹಾಗೂ ತಮ್ಮ ಗ್ರಂಥ ಸಂಪಾದನಾ ಕಾರ್ಯದ ಅನುಭವಗಳ ಬೆಳಕಿನಲ್ಲಿ ಪಾಠ ಮಾಡಿದರು. ಮುಂದೆ ಅವರಿಗೆ ಈ ವಿಷಯ ಕುರಿತಾಗಿ ಒಂದು ಉದ್ಗ್ರಂಥವನ್ನು ಬರೆಯಬೇಕೆನ್ನಿಸಿತು. ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ನೆರವು ಪಡೆದು ಸ್ವತಂತ್ರ ಅಧ್ಯಯನ ನಡೆಸಿ. ‘‘ಕನ್ನಡ ಗ್ರಂಥ ಸಂಪಾದನೆ’’ ಎಂಬ ಮಹತ್ವದ ಗ್ರಂಥವನ್ನು ಬರೆದರು.

ಹರಿಯುವ ನೀರು ತನ್ನ ದಾರಿಯನ್ನು ತಾನೇ ಕಂಡುಕೊಳ್ಳುವಂತೆ, ಬೀಸುವ ಗಾಳಿ ತನ್ನ ದಿಕ್ಕನ್ನು ತಾನೇ ನಿರ್ಧರಿಸುವಂತೆ ಡಿ.ಎಲ್‌.ಎನ್‌. ಅವರು ಕನ್ನಡ ಗ್ರಂಥ ಸಂಪಾದನೆ ಎಂಬ ಶಾಸ್ತ್ರ ಗ್ರಂಥವನ್ನು ತಮ್ಮದೇ ಆದ ರೀತಿಯಲ್ಲಿ ಬರೆದರು. ದಾರಿಯನ್ನು ಮೊದಲು ನಿರ್ಮಿಸುವುದು ಮುಖ್ಯ. ಆನಂತರ ಆ ದಾರಿಯಲ್ಲಿ ಎಷ್ಟೋ ಜನ ಹಾಯ್ದು ಹೋಗಬಹುದು. ಆದರೆ ಮೊದಲು ದಾರಿಯನ್ನು ಕಂಡು ಹಿಡಿದವನಿಗೆ, ನಿರ್ಮಿಸಿದವನಿಗೆ ಮಹತ್ವ ಇದ್ದೇ ಇರುತ್ತದೆ. ಈ ರೀತಿ ಡಾ. ಡಿ.ಎಲ್‌.ಎನ್‌. ಅವರು ಪ್ರಾಚೀನ ಗ್ರಂಥಗಳನ್ನು ಹೇಗೆ ಸಂಪಾದಿಸಬೇಕು, ಅವುಗಳನ್ನು ಹೇಗೆ ರಕ್ಷಿಸಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಈ ಮಹತ್ವಾಕಾಂಕ್ಷಿ ಗ್ರಂಥವನ್ನು ರಚಿಸಿದರು. ಬಹುಶಃ ಸಮಕಾಲೀನ ದೇಸೀ ಭಾಷೆಗಳಲ್ಲಿ ಇಂಥ ಗ್ರಂಥ ರಚನೆ ಇದೇ ಮೊದಲಿನದು ಎಂದರೆ ಅತಿಶಯೋಕ್ತಿಯೇನಲ್ಲ.

ಗ್ರಂಥ ಸಂಪಾದನೆ ಭಾರತೀಯರಿಗೆ ಹೊಸದೇನಲ್ಲ. ವೇದ, ಉಪನಿಷತ್ತುಗಳಲ್ಲಿನ ಮಂತ್ರಗಳನ್ನು, ವಾಕ್ಯಗಳನ್ನು ನಮ್ಮ ಜನ ಮೊದಲು ಕಂಠಪಾಠ ಮಾಡಿ ರಕ್ಷಿಸಿಕೊಂಡು ಬರುತ್ತಿದ್ದರು. ತಾಡೋಲೆಗಳಲ್ಲಿದ್ದ ಗ್ರಂಥಗಳನ್ನೂ ನಮ್ಮ ಜನ ಜೋಪಾನವಾಗಿಟ್ಟುಕೊಂಡು ಬಂದುದುಂಟು. ಆದರೆ ತಾಡೋಲೆಗಳಲ್ಲಿದ್ದ ಕಾವ್ಯ, ಪುರಾಣಗಳನ್ನು ಹೇಗೆ ಶಾಸ್ತ್ರಶುದ್ಧವಾಗಿ ಸಂಪಾದಿಸಬೇಕೆಂಬುದು ನಮ್ಮವರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ಗ್ರಂಥಸಂಪಾದನಾ ಶಾಸ್ತ್ರದ ಅಮೂಲ್ಯ ಮಾಹಿತಿ ಇರುವುದಾಗಿ ಡಿ.ಎಲ್‌.ಎನ್‌. ಅವರು ಹೇಳುವರು. ಅವರಿಗೆ ಆ ದೇಶದ ಭಾಷೆಗಳ ಪರಿಚಯವಿಲ್ಲದುದ್ದಕ್ಕಾಗಿ ಸಂಪೂರ್ಣವಾಗಿ ಆ ದೇಶದ ಜ್ಞಾನವನ್ನು ಗ್ರಹಿಸಿಕೊಳ್ಳಲಿಕ್ಕೆ ಆಗಲಿಲ್ಲವೆನ್ನುವ ಅವರು ಇಂಗ್ಲಿಷ್‌ ಭಾಷೆಯಲ್ಲಿರುವ ಈ ಶಾಸ್ತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿದ್ದಾರೆ. ಡಾ. ಎಸ್‌. ಎಂ. ಕತ್ರೆ ಅವರ ‘Introduction to Indian Texual Criticism’ ಹಾಗೂ ಡಾ. ಸುಕ್ತಣಕರ ಅವರ `Critical studies in the Mahabharata’ ಎಂಬ ಉದ್ಗ್ರಂಥಗಳನ್ನು ಅಮೂಲಾಗ್ರವಾಗಿ ಅಭ್ಯಸಿಸಿದ್ದಾರೆ. ಈ ಗ್ರಂಥಗಳ ಜೊತೆಗೆ ಸಮಗ್ರ ಕನ್ನಡ ಸಾಹಿತ್ಯದ ಅಧ್ಯಯನ ಅನುಸಂಧಾನ ನಡೆಸಿ ಉಚಿತವಾದ ಉದಾಹರಣೆಗಳನ್ನು ಈ ಗ್ರಂಥಗಳಲ್ಲಿ ನೀಡಿದುದು ಗ್ರಂಥದ ಮೌಲ್ಯವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ ಇಂಥ ವಿನೂತನವೂ, ಸಂಶೋಧನಾ ಶಿಸ್ತಿನಿಂದ ಕೂಡಿದ ಗ್ರಂಥವೂ ಕನ್ನಡದಲ್ಲಿ ಪ್ರಕಟಗೊಂಡದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಕನ್ನಡ ಗ್ರಂಥ ಸಂಪಾದನೆಯನ್ನು ಡಿ.ಎಲ್‌.ಎನ್‌. ಅವರು ಪ್ರಕಟಿಸುವುದರ ಮೂಲಕ ಸಂಪಾದನಾ ಶಾಸ್ತ್ರದ ಉದ್ಘಾಟನೆಯನ್ನು ಮಾಡಿದಂತಾಯಿತು. ಎಷ್ಟೋ ಜನರು ಈ ಗ್ರಂಥದಿಂದ ಹಳಗನ್ನಡ ಹಾಗೂ ನಡುಗನ್ನಡ ಕಾವ್ಯ ಪುರಾಣಗಳನ್ನು ಹೇಗೆ ಸಂಪಾದಿಸಬೇಕೆಂಬುದನ್ನು ಕಲಿತುಕೊಂಡರು. ಶಾಸ್ತ್ರ ಶುದ್ಧ ದೃಷ್ಟಿಯನ್ನು ಎಲ್ಲರಿಗೂ ಈ ಗ್ರಂಥ ನೀಡಿತೆನ್ನುವಲ್ಲಿ ಅತಿಶಯೋಕ್ತಿಯೇನಿಲ್ಲ.

‘`ಕನ್ನಡ ಗ್ರಂಥ ಸಂಪಾದನೆ’’ ಪ್ರಕಟಗೊಳ್ಳುವುದಕ್ಕಿಂತ ಮೊದಲು ಕನ್ನಡದಲ್ಲಿ ಯಾರೂ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿರಲಿಲ್ಲವೆಂದಲ್ಲ. ಟಿ. ಎಸ್‌. ವೆಂಕಣ್ಣಯ್ಯ, ಎಲ್‌. ಬಸವರಾಜು, ಡಾ. ಆರ್‌. ಸಿ. ಹಿರೇಮಠ, ಕಿಟೆಲ್‌, ಶಿ. ಶಿ. ಬಸವನಾಳ, ಗೋರೆಬಾಳ ಹನುಮಂತರಾಯ, ಫ. ಗು. ಹಳಕಟ್ಟಿ ಮುಂತಾದ ವಿದ್ವಾಂಸರು ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿದ್ದರು. ತಕ್ಕಮಟ್ಟಿಗೆ ಇವರು ತಂತಮ್ಮ ಕೃತಿಗಳಲ್ಲಿ ಶಾಸ್ತ್ರ ಶುದ್ಧ ದೃಷ್ಟಿಯನ್ನು ವ್ಯಕ್ತಪಡಿಸಿದ್ದುಂಟು. ಪ್ರಾಚೀನ ಕಾಲದಲ್ಲೂ ಗ್ರಂಥಗಳ ರಕ್ಷಣೆ, ಪಾಠ ಸಂರಕ್ಷಣೆ, ತಾಡೋಲೆ ಪ್ರತಿಗಳ ಬಗ್ಗೆ ಕಾಳಜಿ ಇವೆಲ್ಲ ತಕ್ಕಮಟ್ಟಿಗೆ ಇದ್ದವು. ಆದರೆ ನಮ್ಮ ಜನ ಹೆಚ್ಚು ಭಾವುಕರಾಗಿ ತಾಡೋಲೆ ಪ್ರತಿಗಳನ್ನು ದೈವೀ ಸ್ವರೂಪದಲ್ಲಿ ಕಂಡು, ದೇವರ ಜಗಲಿಯ ಮೇಲೆ ಇಟ್ಟು ಪೂಜಿಸುತ್ತಾ ಬಂದರು. ಇನ್ನು ಕೆಲವೊಮ್ಮೆ ಅಣ್ಣ ತಮ್ಮಂದಿರು ಬೇರೆಯಾಗುವಾಗ ಅವುಗಳನ್ನು ಹಂಚಿಕೊಂಡರು. ಮತ್ತೆ ಕೆಲವರು ಅವನ್ನು ಮುಟ್ಟಬಾರದು. ಇನ್ನೊಬ್ಬರಿಗೆ ಕೊಡಬಾರದು ಎಂದೂ ನಂಬಿಕೊಂಡು ಬಂದರು. ಇವೆಲ್ಲ ಹೀಗೆ ತಪ್ಪು ಮಾಡಿದ್ದರಿಂದ ಎಷ್ಟೋ ಹಸ್ತಪ್ರತಿಗಳು, ತಾಡೋಲೆ ಕಟ್ಟುಗಳು ಹುಳು-ಹುಪ್ಪಡಿಗಳಿಗೆ ಆಹಾರವಾಗಿ ಕೊಳೆತು ಗೊಬ್ಬರವಾಗಿ ಹೋದವು. ಇಂಥದನ್ನು ಗ್ರಂಥ ಸಂಪಾದನಾಶಾಸ್ತ್ರ ಬಲ್ಲವರಿಂದ ತಡೆಗಟ್ಟಬಹುದಾಗಿದೆ. ಪ್ರಾಚೀನ ಕಾಲದಲ್ಲೂ ಇಂಥ ಜ್ಞಾನ ಪಡೆದ ಕೆಲವಾದರೂ ವಿದ್ವಾಂಸರು ಇದ್ದರೆಂದು ತೋರುತ್ತದೆ. ಇಂಥ ವಿದ್ವಾಂಸರು ಹಸ್ತಪ್ರತಿ ಬಾಯಿಂದ ಹೀಗೆ ಹೇಳಿಸಿದ್ದಾರೆ. “ನನ್ನನ್ನು ತೈಲದಿಂದ, ನೀರಿನಿಂದ, ಸಡಿಲಾಗಿ ಕಟ್ಟುವಿಕೆಯಿಂದ, ಮೂರ್ಖರ ಕೈಗೆ ಕೊಡದೇ ರಕ್ಷಿಸಬೇಕೆಂದು ಹಸ್ತಪ್ರತಿ ವಿನಂತಿಸುತ್ತದೆ”. ಹಸ್ತಪ್ರತಿ ಹೇಳುತ್ತದೆಂದರೆ ಹಸ್ತಪ್ರತಿಗಳ ರಕ್ಷಣೆ ಮಾಡುವಲ್ಲಿ ಕಾಳಜಿಯುಳ್ಳವರೇ ಹೀಗೆ ಹೇಳಿರುವರು. ಹಸ್ತಪ್ರತಿಗಳನ್ನು ಪುಸ್ತಕಗಳನ್ನು ಬೇರೆಯವರಿಗೆ ಕೊಟ್ಟರೆ ಅವು ಹಾಗೇ ಸುಸ್ಥಿತಿಯಲ್ಲಿ ಬರುವವೆಂಬ ಖಾತ್ರಿಯಿಲ್ಲ. ಹೇಗೆ ಹಣ, ಹೆಣ್ಣು, ಭಾಗಶಃ ಭ್ರಷ್ಟತೆಯ ರೂಪದಲ್ಲಿ ಬರುವವೋ, ಹಾಗೆಯೇ ಪುಸ್ತಕಗಳೂ ಮುದ್ದಿಯಾಗಿಯೋ, ಹರಿದೋ ಬರುವವೆಂದು ಹೇಳಲಾಗಿದೆ. ಇದೂ ಕೂಡ ನಮ್ಮ ಪೂರ್ವಜರು ಗ್ರಂಥಗಳ ರಕ್ಷಣೆಯಲ್ಲಿ ಕಾಳಜಿ ಹೊಂದಿದ್ದರೆಂಬುದನ್ನು ತಿಳಿಸುತ್ತದೆ. ಡಿ.ಎಲ್‌.ಎನ್‌. ಅವರು ಗ್ರಂಥ ಸಂಪಾದನಾ ಶಾಸ್ತ್ರದ ನಿಯಮಗಳನ್ನು, ಪಠ ಪರಿಷ್ಕರಣದ ವಿಧಿ-ವಿಧಾನಗಳನ್ನು ಮೊದಲ ಬಾರಿಗೆ ಈ ಗ್ರಂಥದಲ್ಲಿ ಕನ್ನಡಿಗರಿಗೆ ತಿಳಿಸುವುದರೊಂದಿಗೆ ಈ ಶಾಸ್ತ್ರವನ್ನು ಸಮಗ್ರವಾಗಿ ಪರಿಚಯಿಸಿಕೊಟ್ಟದ್ದು ಈ ಗ್ರಂಥದ ಮೇಲ್ಮೆಯಾಗಿದೆ.

‘‘ಕನ್ನಡ ಗ್ರಂಥ ಸಂಪಾದನೆ’’ ಗ್ರಂಥವು ಹನ್ನೆರಡು ಅಧ್ಯಾಯಗಳಲ್ಲಿ ವಿನ್ಯಾಸಗೊಂಡಿದೆ. ಮೊದಲನೇ ಅಧ್ಯಾಯದಲ್ಲಿ ಗ್ರಂಥ ಸಂಪಾದನಾ ಶಾಸ್ತ್ರ, ಪಾಶ್ಚಾತ್ಯ ದೇಶದಲ್ಲಿ ಬೆಳೆದು ಬಂದುದನ್ನು, ಭಾರತೀಯರಲ್ಲಿ ಗ್ರಂಥ ಸಂಪಾದನಾ ಕುರಿತಿದ್ದ ವಿಷಯಗಳನ್ನು ಸಮಗ್ರವಾಗಿ ನಿರೂಪಿಸಿದ್ದಾರೆ. ಜರ್ಮನ್‌, ಇಟಲಿ, ಗ್ರೀಕ್‌, ಫ್ರಾನ್ಸ್‌, ಹಾಲೆಂಡ್‌, ಇಂಗ್ಲೆಂಡ್‌ ಮುಂತಾದ ದೇಶಗಳ ಮಹಾಕಾವ್ಯ ಹಾಗೂ ನಾಟಕ ಕೃತಿಗಳ ಸಂಪಾದನಾ ಕಾರ್ಯ ಕುರಿತು ನೀಡಿದ ವಿವರಣೆ ತುಂಬ ಮೌಲಿಕವಾದುದಾಗಿದೆ. ಈಸ್ಕಿಲರ್‌, ಸೊಪೊಕ್ಲಿಸ್‌, ಯೂರಿಪೀಡಸ್‌, ನಾಟಕಕಾರರೂ, ಅದ್ವಿತೀಯ ಕವಿಗಳೂ ಆದ ಇವರು ಕೃತಿಗಳ ಪಾಠಗಳು ಕೆಟ್ಟು ಹೋದುದನ್ನು, ಕಾಲಕಾಲಕ್ಕೆ ನಟರು ಹಾಗೂ ಸಹೃದಯರು ತಮತಮಗೆ ತೋರಿದಂತೆ ಭಿನ್ನ ಪಾಠಗಳನ್ನು ಸೇರಿಸುತ್ತ ಹೋದುದನ್ನು ತೋರಿದುದು ತುಂಬ ಗಮನಾರ್ಹವಾದುದಾಗಿದೆ. ಜಗತ್ತಿನ ಯಾವೊಂದು ಸಾಹಿತ್ಯದಲ್ಲಿಯೂ ಕಾಲಾಂತರದಲ್ಲಿ ಭಿನ್ನ ಪಾಠಗಳು ತಲೆದೋರುತ್ತವೆಂದು ಹೇಳಿದುದು ಔಚಿತ್ಯಪೂರ್ಣವಾಗಿದೆ. ಕನ್ನಡ ಸಾಹಿತ್ಯದಲ್ಲೂ ಕಾಲಕಾಲಕ್ಕೆ ಭಿನ್ನ ಪಾಠಗಳು ತಲೆದೊರುತ್ತ ಬಂದುದನ್ನು ಕಾಣುವೆವು. ಈ ಕುರಿತಾಗಿ ಡಿ.ಎಲ್‌.ಎನ್.‌ಅವರು ಅನೇಕ ನಿದರ್ಶನಗಳನ್ನು ನೀಡಿದುದು ಕೃತಿಯ ಮೌಲ್ಯವನ್ನು ಇಮ್ಮಡಿಗೊಳಿಸಿದೆ.

ಲೇಖನ ಸಾಮಗ್ರಿಗಳನ್ನು ಕುರಿತು ಎರಡನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿದ್ದಾರೆ. ಕಬ್ಬಿಣ, ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು, ತಾಮ್ರ, ಮಣ್ಣು, ಸ್ಪಟಿಕ, ಚರ್ಮ, ಮರ, ಭೂರ್ಜಪತ್ರ, ತಾಳೆಪತ್ರ, ಕಡತ, ಶಿಲೆ, ಕಾಗದ, ಮಸಿ, ಲೇಖನಿ ಮುಂತಾದ ಲೇಖನ ಸಾಮಗ್ರಿಗಳನ್ನು ಕುರಿತಾಗಿ ನೀಡಿದ ವಿವರಣೆ ತುಂಬ ಮೌಲಿಕವಾದುದಾಗಿದೆ. ಪ್ರಾಚೀನ ಕಾಲದಲ್ಲಿ ಅವರಿಗೆ ಸಿಗುವ ವಸ್ತುಗಳ ಮೇಲೆ ಜನ ಬರೀತಾ ಇದ್ದರು. ವಿಶೇಷವಾಗಿ ರಾಜರು ಕಲ್ಲಿನ ಮೇಲೆ, ತಾಮ್ರ, ಹಿತ್ತಾಳೆಯ ಮೇಲೆ ಶಾಸನಗಳನ್ನು ಬರೆಸ್ತಾ ಇದ್ದರು. ಕವಿಗಳು ತಾಳೆ ಮರದೆಲೆ, ಕಡತ, ಕಾಗದಗಳ ಮೇಲೆ ಕಾವ್ಯ ಬರೀತಾ ಇದ್ದರು. ತಾಳೆಮರದ ಎಲೆಗಳ ಮೇಲೆ ಬರೆಯುದಕ್ಕಿಂತ ಮುನ್ನ ಆ ಎಲೆಗಳನ್ನು ಹರಿದು ತಂದು ನೀರಿನಲ್ಲಿ ಕುದಿಸಿ, ನೆರಳಲ್ಲಿ ಒಣಗಿಸಿ, ಗಾರೆಕಲ್ಲಿನಿಂದ ಎರಡೂ ಬಾಜೂ ಉಜ್ಜಿ ಸಮತಲಗೊಳಿಸಿ ಬರೀತಾ ಇದ್ದರೆಂದು ಹೇಳುದುದು ತುಂಬಾ ಸೊಗಸಾಗಿದೆ. ‘‘ಕಡತ’’ ಅರಿವೆಗೆ ಹುಣಸೇ ಜರಿ ಮೆತ್ತಿ ಮೇಲೆ ಕಾಡಿಗೆ ಲೇಪಿಸಿ ಒಣಗಿಸುವವರು. ಆನಂತರ ಅದು ಕಪ್ಪು ಹಲಗೆ ತೆರನಾಗುವುದು. ಅದರ ಮೇಲೆ ಕವಿಗಳು ತಾತ್ಪೂರ್ತಿಕವಾಗಿ ಪದ್ಯ ಬರೆದು ಆನಂತರ ಆ ಪದ್ಯಗಳನ್ನು ತಾಡೋಲೆ ಗರಿಗಳ ಮೇಲೆ ಬರೀತಾ ಇದ್ದರು. ಆಗ ಕಡತಗಳ ಮೇಲೆ ಬರೆದುದನ್ನು ಅಳಸಿ ಹಾಕ್ತಾ ಇದ್ದರು. ‘‘ಕಡತ’’ ತಾತ್ಪೂರ್ತಿಕ ಬರವಣಿಗೆಗೆ ಮಾತ್ರ ಬಳಸ್ತಾ ಇದ್ದರು. ಪ್ರಾಚೀನ ಕಾಲದಲ್ಲಿದ್ದ ಲಿಪಿಕಾರರ ಕುರಿತೂ ಡಿ.ಎಲ್‌.ಎನ್‌ ಅವರು ಪ್ರಸ್ತಾಪಿಸಿದ್ದಾರೆ. ಹವ್ಯಾಸಿ, ವೃತ್ತಿ ಲಿಪಿಕಾರರು ಪ್ರಾಚೀನ ಕಾಲದಲ್ಲಿದ್ದರು. ಕಾವ್ಯ ಬರೆಯುವುದನ್ನೇ ಜೀವನದ ವೃತ್ತಿಯಾಗಿಸಿಕೊಂಡವರು ಕೆಲವರು ಇದ್ದರೆ, ಇನ್ನು ಕೆಲವರು ಬೇರೆ ವೃತ್ತಿ ಮಾಡಿಕೊಂಡಿದ್ದು ಹವ್ಯಾಸಕ್ಕಾಗಿ ಬರೆಯುತ್ತಾ ಇರುವವರು ಹವ್ಯಾಸಿ ಲಿಪಿಕಾರರು. ಲಿಪಿಕಾರರಲ್ಲಿ ಹೊಣೆಗೇಡಿ ಹಾಗೂ ಕಿಡಿಗೇಡಿ ಸ್ವಭಾವದವರೂ ಇರುವುದುಂಟು. ಕರ್ತವ್ಯ ನಿರ್ವಹಣೆಯನ್ನು ಸರಿಯಾಗಿ ಮಾಡದೇ ಇರುವವರು ಹೊಣೆಗೇಡಿಗಾದರೆ, ಬರವಣಿಗೆಯಲ್ಲಿ ತಪ್ಪು ಹಾಗೂ ಕುಚ್ಚೋದ್ಯಕ್ಕಾಗಿ ಬೇರೆ ಬೇರೆ ವಿಷಯ ಸೇರ್ಪಡೆಗೋಳಿಸಿ ಬರೆಯುವವರು ಕಿಡಿಗೇಡಿ ಲಿಪಿಕಾರರು. ಈ ಎಲ್ಲ ಲಿಪಿಕಾರರು ಪ್ರಾಚೀನ ಕಾಲದಲ್ಲಿದ್ದರೆಂಬುದನ್ನು ಡಿ.ಎಲ್‌.ಎನ್‌ ಅವರು ಪ್ರಾಚೀನ ಕಾವ್ಯಗಳ ಆಧಾರದಿಂದ ನಿರೂಪಿಸಲೆತ್ನಿಸಿದುದು ಸ್ವಾಗತಾರ್ಹವಾದುದುಗಿದೆ. ಹಸ್ತಪ್ರತಿಗಳ ಸ್ವರೂಪ ಮತ್ತು ಅವುಗಳನ್ನು ವಿಂಗಡಿಸುವ ಬಗೆಯನ್ನು ನಾಲ್ಕನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿದ್ದಾರೆ. ಕವಿಯ ಸ್ವಹಸ್ತಾಕ್ಷರ ಪ್ರತಿ, ಏಕೈಕ ಹಸ್ತಪ್ರತಿ, ಪರಂಪರಾಗತಪ್ರತಿ, ಮಿಶ್ರ ಪ್ರತಿಗಳು ಇಷ್ಟು ಬಗೆಯ ಹಸ್ತಪ್ರತಿಗಳು ಗುರುತಿಸಬೇಕೆಂಬುದನ್ನು ಇಲ್ಲಿ ವಿವರಿಸಿದ್ದು, ಮೌಲಿಕ ಸಂಶೋಧನೆಯೇ ಆಗಿದೆ. ಕವಿಯೇ ಬರೆದ ಹಸ್ತಪ್ರತಿಗಳು ಇಂದು ಸಿಗುವುದು ದುರ್ಲಭ. ಒಂದೇ ಹಸ್ತಪ್ರತಿ ಸಿಗುವುದು ವಿರಳ. ಪರಂಪರಾಗತ ಹಸ್ತಪ್ರತಿಗಳೇ ಈಗ ಹೆಚ್ಚಾಗಿ ಲಭ್ಯವಾಗುವವು. ಒಬ್ಬರಿಂದ ಒಬ್ಬರು ನೋಡಿ ಬರೀತಾ ಬರುವುದು. ಹೀಗೆ ಬರೀತಾ ನಕಲು ಮಾಡಿಕೊಳ್ಳುತ್ತಾ ಬರುವಾಗ ಅನೇಕ ದೋಷಗಳು. ಸ್ಖಾಲಿತ್ಯಗಳು ಆಗುತ್ತ ಬರುವುದು ಸಹಜ. ಹೀಗೆ ಗ್ರಂಥದ ಒಡಲಲ್ಲಿ ಕಾಲಕಾಲಕ್ಕೆ ಸ್ಖಾಲಿತ್ಯಗಳು ಸೇರ್ಪಡೆಯಾಗುತ್ತ ಬಂದುದನ್ನು ಗ್ರಂಥ ಸಂಪಾದಕ ನೋಡಿ ಅಧ್ಯಯನ ನಡೆಸಿ ಪರಿಷ್ಕರಣ ಮಾಡಬೇಕಾಗುವುದು. ಪರಿಷ್ಕರಣ ಎಂದರೆ ಒಮ್ಮೆಲೇ ಪಾಠವನ್ನು ತಿದ್ದುವುದಲ್ಲ. ಪ್ರಾದೇಶಿಕತೆ, ಕಾಲ ಭಾಷೆ, ಬರವಣಿಗೆಯ ರೀತಿ, ಕಾರಣವಾಗಿ ಕೃತಿಯಲ್ಲಿ ಉಂಟಾದ ಸ್ಖಾಲಿತ್ಯಗಳನ್ನು ಹೆಕ್ಕಿ ತೆಗೆಯಬೇಕಾಗುವುದು.ಕನ್ನಡ ಕಾವ್ಯಗಳಲ್ಲಿ ಉಂಟಾದ ಅಕ್ಷರ ಸ್ಖಾಲಿತ್ಯಗಳನ್ನು ಶ್ರಮವಹಿಸಿ ಡಿ.ಎಲ್‌.ಎನ್‌. ಅವರು ಇಲ್ಲಿ ನೀಡುರುವರು. ಕೇವಲ ಸ್ಖಾಲಿತ್ಯಗಳನ್ನು ಅಕ್ಷರಗಳಲ್ಲಿ ಅಷ್ಟೇ ಆಗದೆ, ಶಬ್ದ, ಪದ, ಪದ್ಯಗಳಲ್ಲೂ ಉಂಟಾದುದನ್ನು ಇಲ್ಲಿ ಸೋದಾಹರಣವಾಗಿ ನಿರೂಪಿಸಿದ್ದಾರೆ. ಇದರ ಜೊತೆಗೆ ಒಬ್ಬ ಕವಿಯ ಕಾವ್ಯದಲ್ಲಿ ಒಯ್ದು ಸೇರಿಸಿದ್ದು ಉಂಟು. ಕೆಲವು ಪದ್ಯಗಳ, ಕೀರ್ತನೆಗಳ, ವಚನಗಳ ಅಂಕಿತಗಳನ್ನು ಲಿಪಿಕಾರರು ಬದಲಿಸಿ ತಮಗೆ ಪ್ರಿಯರಾದವರ ಅಂಕಿತದಲ್ಲಿ ಸೇರಿಸಿದ್ದುಂಟು. ‘‘ಅಂಬಿಗ ನಾನಿನ್ನ ನಂಬಿದೆ’’ ಎಂಬ ಸ್ವರವಚನ ಮಹಾದೇವಿಯಕ್ಕನದು. ಅದು ಈಗ ಪರಂದರರ ಕೀರ್ತನೆಗಳಲ್ಲಿ ಸೇರಿ ಹೋಗಿ ‘‘ಪುರಂದರ ವಿಠ್ಠಲ”’ ಅಂಕಿತದಲ್ಲಿ ಪ್ರಚಲಿತದಲ್ಲಿರುವುದನ್ನು ಕಾಣುವೆವು.

ಇಂಥ ಪ್ರಕ್ಷೇಪಗಳು ಪ್ರಾಚೀನ ಸಾಹಿತ್ಯದಲ್ಲಿ ಹೆಚ್ಚಾಗಿ ನಡೆದಿರುವದನ್ನಿಲ್ಲಿ ದಾಖಲಿಸಲಾಗಿದೆ. ಜೊತೆಗೆ ಲಿಪಿಕಾರರು ತಮ್ಮ ಬರವಣಿಗೆಯ ರೀತಿ ದೋಷದಿಂದಾಗಿ ವಿಧವಿಧದ ತಪ್ಪುಗಳನ್ನು ಸ್ಖಾಲಿತ್ಯಗಳನ್ನು ಮಾಡುವುದುಂಟು. ಈ ಸಂಬಂಧದಲ್ಲಿ ಅವರು ಅನೇಕ ಉದಾಹರಣೆಗಳನ್ನು ಕನ್ನಡ ಕಾವ್ಯಗಳಿಂದ ಶ್ರಮವಹಿಸಿ ಆಯ್ದು ಕೊಟ್ಟಿದ್ದು ಗ್ರಂಥದ ಮೌಲ್ಯವನ್ನು ಹೆಚ್ಚಿಸಿದೆ.

ಎಂಟನೆಯ ಅಧ್ಯಾಯದಲ್ಲಿ ಹಸ್ತಪ್ರತಿಗಳ ಪರಸ್ಪರ ಸಂಬಂಧ ಮತ್ತು ಪೀಳಿಗೆ ಕುರಿತಾಗಿ ವಿವರಿಸಿದ್ದಾರೆ. ಹಸ್ತಪ್ರತಿಗಳಲ್ಲಿ ಆದ ಸ್ಖಾಲಿತ್ಯಗಳ ಆಧಾರದ ಮೇಲೆ ಹಸ್ತಪ್ರತಿಗಳ ವಂಶ ಸಂಬಂಧವನ್ನು, ವ್ಯತ್ಯಾಸವನ್ನು ಗುರುತಿಸಬಹುದೆಂಬುದನ್ನಿಲ್ಲಿ ನಿರೂಪಿಸಿದ್ದಾರೆ. ಹಸ್ತಪ್ರತಿಗಳ ವಂಶ ಸಂಬಂಧವನ್ನು ಹೇಗೆ ಕಂಡು ಹಿಡಿಯವಹುದೆಂಬುದನ್ನಿಲ್ಲಿ ಸೋದಾರಣವಾಗಿ ನಿರೂಪಿಸಿದ್ದು ಶ್ರೇಷ್ಠ ಮಟ್ಟದ ಸಂಶೋಧನೆಯೇ ಆಗಿದೆ. ಈ ರೀತಿ ವಂಶ ಸಂಬಂಧವನ್ನು ಕಂಡು ಹಿಡಿಯುವಲ್ಲಿ ಸಂಪಾದಕನು ತುಂಬಾ ಸಹನೆ, ತಾಳ್ಮೆ ಹಾಗೂ ಸಮಚಿತ್ತದಿಂದ ಇರುವುದು ಮುಖ್ಯವೆಂಬುದನ್ನು ಡಿ.ಎಲ್‌.ಎನ್‌. ಹೇಳಲು ಮರೆಯುವುದಿಲ್ಲ.

‘‘ಪಾಠ ಪರಿಷ್ಕರಣ’’ವನ್ನು ಒಂಬತ್ತನೆಯ ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ. ಪಾಠ ಪರಿಷ್ಕರಣ ಎಂದರೆ ಸಂಪಾದಕ ಒಮ್ಮೆಲೇ ಗ್ರಂಥದಲ್ಲಿ ಉಂಟಾದ ಸ್ಖಾಲಿತ್ಯಗಳನ್ನು ತಿದ್ದುವುದಲ್ಲ ಮತ್ತು ತನಗೆ ಸರಿ ಬಂದಂತ ಬರೆದು ಸೇರಿಸುವುದೂ ಅಲ್ಲ. ಸಂಪಾದಕ ತಾನು ಪಡೆದ ವ್ಯಾಸಂಗದ ಬೆಂಬಲ, ವಿದ್ವತ್ತುಗಳ ಬೆಳಕಿನಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತೂಗಿ ನೋಡುವುದಾಗಿದೆ. ಭಾಷೆಯ ದೃಷ್ಟಿಯಿಂದ ಯಾವುದು ಸರಿ, ಕಾಲದ ದೃಷ್ಟಿಯಿಂದ ಯಾವುದು ಖಚಿತ. ವಸ್ತು ಭಾಷೆ ಶೈಲಿಗಳ ದೃಷ್ಟಿಯಿಂದ ಯಾವುದು ಹೊಂದುವುದು, ಕವಿಯ ಮನೋಭಾವನೆ ಎಂಥದ್ದು ಎಂಬಿತ್ಯಾದಿ ಅಂಶಗಳ ಬೆಳಕಿನಲ್ಲಿ ಪಾಠ ಪರಿಷ್ಕರಣ ಮಾಡಬೇಕಾಗುವುದು. ಹೀಗೆ ಮಾಡಲು ಸಂಪಾದಕ ತುಂಬಾ ವ್ಯಾಸಂಗ ಮಾಡಿರಬೇಕು. ಕೃತಿಯ ಕಾಲ ಹಾಗೂ ಕೃತಿಕಾರನ ಬಗೆಗೆ ತುಂಬಾ ತಿಳುವಳಿಕೆ ಇರಬೇಕು. ಒಂದು ದೃಷ್ಟಿಯಿಂದ ಸಂಪಾದಕ ತಾನು ಬದುಕಿರುವ ಕಾಲ, ದೇಶಗಳನ್ನು ತ್ಯಜಿಸಿ ಕವಿಯ ಕಾಲ, ದೇಶಕ್ಕೆ ಹೆಜ್ಜೆ ಇಟ್ಟು ಆತನ ಅಂತರಂಗವನ್ನು ಪ್ರವೇಶಿಸಬೇಕು. ಅಂದಾಗ ಸರಿಯಾದ ಪಾಠವನ್ನು ನಿರ್ಣಯಿಸಲು ಸಾಧ್ಯವಾಗುವುದು.

‘‘ಅಬ್ದಿಗಡಿ ಮಿತಿಯುಂಟು, ಬುದ್ಧಿಗಡಿ ಮಿತಿಯಿಲ್ಲ’’ ಎನ್ನುವಂತೆ ಸಂಪಾದಕ ಅನೇಕ ಗ್ರಂಥಗಳನ್ನು ಓದಿ ತನ್ನ ಬುದ್ಧಿಯನ್ನು ವಿಸ್ತರಿಸಿಕೊಳ್ಳಬೇಕು. ತಾನು ಮಾಡಲಿರುವ ಗ್ರಂಥದ ಸಂಪಾದನಾ ಕಾರ್ಯವನ್ನು ಮನಮುಟ್ಟಿ ಮಾಡಬೇಕು. ಆ ಕಾರ್ಯದಲ್ಲೇ ತನ್ಮಯನಾಗಬೇಕು. ಒಮ್ಮೆ ಡಿ.ಎಲ್‌.ಎನ್‌ ಅವರು ಹಳಗನ್ನಡ ಕಾವ್ಯವೊಂದನ್ನು ಸಂಪಾದಿಸುವ ಸಂದರ್ಭದಲ್ಲಿ ಅವರಿಗೆ ‘‘ಕಡ್ಡವಾರ’’ ಎಂಬ ಶಬ್ದ ಎದುರಾಯಿತು. ಇದರ ಅರ್ಥ ಶಬ್ದಕೋಶದಲ್ಲೂ ಸಿಗಲಿಲ್ಲ. ಬೇರೆ ಕಾವ್ಯಗಳಿಂದಲೂ ಇದರ ಸುಳಿವು ಸಿಗಲಿಲ್ಲ. ಆಗ ಅವರು ಚಿಂತಿಸುತ್ತ ಕುಳಿತರು. ಹೀಗೆ ಕುಳಿತಾಗ ಒಬ್ಬ ಭಿಕ್ಷುಕಿ ಬಂದು ಎಪ್ಪಾ ಭಿಕ್ಷಾ ನೀಡ್ರಿ ಇವತ್ತ ‘‘ಕಡ್ಡವಾರ’’ ಅದ ಅಂದಳು. ಆಗ ಒಮ್ಮೆಲೇ ಡಿ.ಎಲ್‌. ಎನ್. ಅವರು ಹೊರಗೆ ಓಡಿ ಬಂದು ಏನಮ್ಮ ಇವತ್ತು ಕಡ್ಡವಾರವೇ? ಎಂದರು. ಆಗ ಆ ಭಿಕ್ಷುಕಿ ಹೌದು ಇಷ್ಟು ಗೊತ್ತಿಲ್ಲವೇ? ಇಂದು ಶನಿವಾರ ಈ ವಾರ ಕಡ್ಡವಾರ ಎಂದಳು. ತೋಂಡಿ ಸಂಪ್ರದಾಯದಿಂದ ಇಂಥ ಎಷ್ಟೋ ಸಮಸ್ಯೆಗಳಿಗೆ ಉತ್ತರ ದೊರಕುವುದು. ಗ್ರಂಥ ಸಂಪಾದನೆಗೆ ಕೇವಲ ಪಾಂಡಿತ್ಯ ಇದ್ದರೆ ಸಾಲದು. ಎಲ್ಲಾ ಮಗ್ಗುಲಗಳಿಂದಲೂ ಮಾಹಿತಿ ಪಡೆಯಬೇಕಾಗುವುದು. ಅದು ಶಾಸನವೇ ಇರಬಹುದು, ಜನಪದ ಹೇಳಿಕೆಗಳೇ ಇರಬಹುದು, ಕಾವ್ಯಾಧಾರೆಗಳೇ ಇರಬಹುದು ಎಲ್ಲವನ್ನು ಗ್ರಂಥ ಸಂಪಾದಕ ಬಳಸಿಕೊಳ್ಳಬೇಕಾಗುವುದು. ಹೀಗೆ ಬಳಸಿಕೊಂಡಲ್ಲಿ ಆತನ ಸಂಪಾದನಾ ಕಾರ್ಯಕ್ಕೆ ಅಧಿಕೃತತೆ ಪ್ರಾಪ್ತವಾಗುವುದು.

ಗ್ರಂಥ ಸಂಪಾದನೆ ಎಂದರೆ ಹಳೆಯ ಕಾವ್ಯಗಳಲ್ಲಿ ಉಂಟಾದ ಸ್ಖಾಲಿತ್ಯಗಳನ್ನು ಹೆಕ್ಕಿ ತೆಗೆದು ಶುದ್ಧ ಮಾಡುವುದು, ಪರಿಷ್ಕರಣ ಮಾಡುವುದು ಆಗಿದೆ. ದೀಪಕ್ಕೆ ಕುಡಿ ಬಂದಾಗ ಅದನ್ನು ಕೊಡವಿದರೆ ಹೇಗೆ ದೀಪ ಉಜ್ವಲವಾಗಿ ಬೆಳಗುವುದೋ ಹಾಗೆ ಪ್ರಾಚೀನ ಗ್ರಂಥಗಳಲ್ಲಾದ ದೋಷಗಳನ್ನು ಹೆಕ್ಕಿ ತೆಗೆದು ಕವಿಯ ಧ್ಯೇಯ ಧೋರಣೆಗಳನ್ನು ಜನತೆಗೆ ತಲುಪಿಸುವುದೇ ಆಗಿದೆ. ಒಂದರ್ಥದಲ್ಲಿ ಸಂಪಾದಕನು ಕವಿಗೂ-ಸಹೃದಯನಿಗೂ ನಡುವೆ ಮುಸುಕಿ ಮುತ್ತಿದ ಕಪ್ಪು ಪರದೆಯನ್ನು ಸರಿಸಿ ಕೃತಿ ದರ್ಶನ ಮಾಡಿಸುವುದೇ ಆಗಿದೆ. ಈತ, ಯಾವಾಗಲೂ ಎಲೆಯ ಮರೆಯ ಕಾಯಿಯಂತೆಯೇ ಇರುವನು. ತಾನು ಗಳಿಸಿದ ವಿದ್ವತ್ತನ್ನು ಗ್ರಂಥ ಸಂಪಾದನಾ ಕಾರ್ಯದಲ್ಲಿ ಎರಕೆ ಹೊಯ್ಯುವನು. ಆದರೆ ಎಂದೂ ಆತ ಪರದೆ ಮೇಲೆ ಬರನು ಮತ್ತು ಕಾವ್ಯದಲ್ಲಿ ತನ್ನ ವಿದ್ವತ್ತನ್ನು ಪ್ರದರ್ಶಿಸಿ ಕೊಳ್ಳಲಾರ ಎಂಬಿತ್ಯಾದಿ ವಿವರಗಳನ್ನು ಇಲ್ಲಿ ಡಿ.ಎಲ್‌.ಎನ್‌. ಅವರು ನಿರೂಪಿಸಿದುದು ತುಂಬ ಔಚವಿತ್ಯವಾದುದಾಗಿದೆ. ‘‘ಪಂಪಭಾರತ’, ’‘ಆದಿಪುರಾಣ’,’ ‘ಪಂಪರಾಮಾಯಣ’, ‘ಹರಿಶ್ಚಂದ್ರ ಕಾವ್ಯ’, ‘ಕರ್ಣಾಟಕ ಭಾರತ ಕಥಾಮಂಜರಿ’ ಮುಂತಾದ ಕಾವ್ಯಗಳಿಂದ ಪಾಠ ಪರಿಷ್ಕರಣಕ್ಕೆ ಸಂಬಂಧಿಸಿದಂತೆ ಪದ್ಯಗಳನ್ನು ಉದಾಹರಿಸಿದುದು ತುಂಬಾ ಪ್ರಯೋಜನಕಾರಿಯಾಗಿದೆ. ಪರಿಷ್ಕರಣ ಮಾಡುವ ವಿಧಾನಗಳನ್ನು ನಿರೂಪಿಸಿದ್ದು ನೂತನವಾಗಿದೆ. ಮುಂದೆ ಅವರು ಹತ್ತನೇ ಅಧ್ಯಾಯದಲ್ಲಿ ಗ್ರಂಥ ಸಂಪಾದಕನಿಗೆ ಕೆಲವು ಸೂಚನೆಗಳನ್ನು ನೀಡಿದರೆ ಹನ್ನೊಂದನೆ ಅಧ್ಯಾಯದಲ್ಲಿ ಗ್ರಂಥಗಳನ್ನು ಹೇಗೆ ಸಂಪಾದಿಸಬೇಕೆಂಬುದನ್ನು ತಿಳಿಸಿದ್ದಾರೆ. ಕೊನೆಯ ಅಧ್ಯಾಯದಲ್ಲಿ ಗ್ರಂಥ ಸಂಪಾದನೆಗೆ ಸಂಬಂಧಿಸಿದ ಇನ್ನೀತರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೊನೆಗೆ ಅನುಬಂಧದಲ್ಲಿ ನೀಡಿದ ಆಕಾರಾದಿ ಸೂಚಿ, ಉದಾಹರಣೆಗಳ ಅಕಾರಾದಿ, ಸಹಾಯಕ ಗ್ರಂಥ ಸೂಚಿ ಓದಬಹುದಾದ ಪುಸ್ತಕಗಳು. ಕನ್ನಡ ಹಸ್ತಪ್ರತಿ ಭಂಡಾರಗಳು ಈ ಎಲ್ಲ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡಿದ್ದಾರೆ. ಈ ಮಾಹಿತಿ ಗ್ರಂಥ ಸಂಪಾದನಾ ಕಾರ್ಯಕ್ಕೆ ತುಂಬ ಪ್ರಯೋಜನಕಾರಿಯಾದುದಾಗಿದೆ.

ಒಟ್ಟಿನಲ್ಲಿ ಡಿ.ಎಲ್‌.ಎಲ್‌. ಅವರು ‘ಕನ್ನಡ ಗ್ರಂಥ ಸಂಪಾದನೆ’ ಕನ್ನಡದ ಅಮೂಲ್ಯ ಸಂಶೋಧನ ಗ್ರಂಥಗಳಲ್ಲಿ ಒಂದಾಗಿದೆ. ಇಂಥ ಶಾಸ್ತ್ರಗ್ರಂಥ ಕನ್ನಡದಲ್ಲಿ ಪ್ರಕಟವಾದುದೂ ಮೊದಲನೆಯದಾಗಿದೆ ಪ್ರಾಚೀನ ಗ್ರಂಥಗಳನ್ನು, ತಾಡೋಲೆ ಗರಿಗಳಲ್ಲಿ ಬರೆದ ಹಸ್ತಪ್ರತಿಗಳನ್ನು ಹೇಗೆ ಶಾಸ್ತ್ರ ಶುದ್ಧವಾಗಿ ಸಂಪಾದಿಸಬೇಕು ಎಂಬುದನ್ನು ಈ ಗ್ರಂಥ ಸಮಗ್ರವಾಗಿ ತಿಳಿಸಿಕೊಡುವಲ್ಲಿ ಯಶಶ್ವಿಯಾಗಿದೆ. ಈ ಗ್ರಂಥದ ತರುವಾಯ ಡಾ. ಎಂ.ಎಂ. ಕಲಬುರ್ಗಿ ಅವರು ‘ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರ’ವೆಂಬ ಗ್ರಂಥ ಬರೆದರು. ಅವರು ತಮ್ಮ ಗ್ರಂಥ ಮೊದಲನೆಯದಲ್ಲವಾದರೂ ವಿನೂತನ ರೀತಿಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಏನಿದ್ದರೂ ಮೊದಲ ಬಾರಿಗೆ ಗ್ರಂಥ ಬರೆದವರಿಗೇ ಹೆಚ್ಚಿನ ಮೌಲ್ಯವಿದೆಯೆನ್ನುವುದನ್ನು ಅಲ್ಲಗಳೆಯಲಾಗದು. ಈ ಗ್ರಂಥ ಕನ್ನಡ ಶಾಸ್ತ್ರ ಸಾಹಿತ್ಯಕ್ಕೆ ಅದರಲ್ಲೂ ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ಒಂದು ಅಮೂಲ್ಯವಾದ ಕೊಡುಗೆಯಾಗಿದೆ.