ಸೃಜನಶೀಲ ಸಾಹಿತ್ಯ ರಚನೆಯ ನಂತರದಲ್ಲಿ ವಿಮರ್ಶನ ಸಾಹಿತ್ಯ ಹುಟ್ಟುತ್ತದೆ. ಈ ವಿಮರ್ಶನ ಸಾಹಿತ್ಯದಲ್ಲಿ ಪ್ರಮುಖವಾದುದು, ಟೀಕಾ ಸಾಹಿತ್ಯ. ಒಂದು ಕೃತಿಯ ಅರ್ಥ, ಭಾವ, ಉದ್ದೇಶ ಮತ್ತು ಸ್ವರೂಪಗಳನ್ನು ತಿಳಿಸುವುದಕ್ಕೆ ಟೀಕು ಎಂದು ಕರೆಯುತ್ತೇವೆ. ಇದಕ್ಕೆ ಪರ್ಯಾಯವಾಗಿ ವ್ಯಾಖ್ಯಾನ, ಭಾಷ್ಯ, ಟಿಪ್ಪಣಿ, ವಿವರಣೆ, ಸಾರಾರ್ಥ, ವಾಚ್ಯ ಎಂದು ಇತ್ಯಾದಿ ಪದಗಳನ್ನು ಬಳಸಲಾಗುತ್ತಿದೆ. ಕನ್ನಡದಲ್ಲಿ ಟೀಕು, ವ್ಯಾಖ್ಯಾನ ಎಂಬೆರಡು ಪದಗಳು ಹೆಚ್ಚಾಗಿ ಬಳಕೆಗೊಂಡಿರುವುದನ್ನು ಕಾಣಬಹುದು. ಸೃಜನ ಸಾಹಿತ್ಯದ ಜೊತೆಜೊತೆಗೆ ಕನ್ನಡದಲ್ಲಿ ಟೀಕಾಸಾಹಿತ್ಯವೂ ವಿಪುಲವಾಗಿ ಬೆಳೆದು ಬಂದಿದೆ. ಕನ್ನಡದಲ್ಲಿ ಸಂಸ್ಕೃತ ಗ್ರಂಥಗಳಿಗೆ ಕನ್ನಡದಲ್ಲಿ ಟೀಕು, ಕನ್ನಡ ಕೃತಿಗಳಿಗೆ ಕನ್ನಡದಲ್ಲಿ ಟೀಕು ಎಂದು ಎರಡು ರೀತಿಯಾಗಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಆಧುನಿಕ ಪೂರ್ವದಲ್ಲಿಯೇ ಅಮರಕೋಶ, ಬಸವಣ್ಣನವರ ಟೀಕಿನ ವಚನಗಳು, ಶಬ್ದಮಣಿದರ್ಪಣ, ಭಾವಚಿಂತಾರತ್ನ, ನಾಗವರ್ಮನ ಅಭಿದಾನ ವಸ್ತುಕೋಶ ಮೊದಲಾದ ಕೃತಿಗಳಿಗೆ ವ್ಯಾಖ್ಯಾನ ರೂಪದಲ್ಲಿ ಟೀಕುಗಳು ರಚನೆಗೊಂಡಿವೆ, ಈ ಪರಂಪರೆಯ ಮುಂದುವರಿಕೆಯಾಗಿ ಆಧುನಿಕ ಕಾಲದ ಅನೇಕ ವಿದ್ವಾಂಸರು, ಪಂಡಿತರು ಹಳೆಗನ್ನಡ ಕಾವ್ಯ, ಪುರಾಣಗಳಿಗೆ ಟೀಕುಗಳನ್ನು ಬರೆದಿದ್ದಾರೆ. ಅಂಥವುಗಳಲ್ಲಿ ಡಿ.ಎಲ್.ನರಸಿಂಹಾಚಾರ್‌ ಅವರ ಪಂಪಭಾರತ ದೀಪಿಕೆಗೆ ವಿಶೇಷ ಮಹತ್ವ ಪ್ರಾಪ್ತವಾಗಿದೆ. ಒಂದರ್ಥದಲ್ಲಿ ವ್ಯಾಖ್ಯಾನ ಗ್ರಂಥಗಳ ಪ್ರಾಚೀನ ಪರಂಪರೆಯನ್ನು ಸಮರ್ಥ ರೀತಿಯಲ್ಲಿ ಮುಂದುವರಿಸಿದ ಕೀರ್ತಿಯೂ ಅವರದಾಗಿದೆ.

ಕನ್ನಡದ ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಎಂಬ ಪಂಪಭಾರತವೂ ಕನ್ನಡದ ಮಹತ್ವದ ಕೃತಿಗಳಲ್ಲಿಯೇ ಮೇರು ಕೃತಿಯೆಂಬುದು ಈಗಾಗಲೇ ರುಜುವಾತಾಗಿದೆ. ಲೂಯಿಸ್‌ರೈಸ್‌ಅವರಿಂದ ೧೮೯೮ರಲ್ಲಿ ಮೊದಲ ಬಾರಿಗೆ ಸಂಪಾದಿತವಾಗಿ ಪ್ರಕಟವಾಯಿತು. ನಂತರದಲ್ಲಿ ಟಿ.ಎಸ್‌. ವೆಂಕಣ್ಣಯ್ಯ ಮತ್ತು ಕಡಬದ ನಂಜುಂಡಶಾಸ್ತ್ರಿಗಳ ನೆರವಿನಿಂದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಪರಿಷ್ಕರಿಸಿದರು. ವಿಸ್ತಾರವಾದ ಉಪೋದ್ಘಾತ, ಸುದೀರ್ಘವಾದ ಕಥಾಸಾರ, ಅರ್ಥಕೋಶ, ಪದ್ಯಗಳ ಅಕಾರಾದಿಗಳೊಂದಿಗೆ ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇದು ಪ್ರಕಟವಾಯಿತು. ೧೯೭೩ರಲ್ಲಿ ಮತ್ತೇ ಇದನ್ನು ಮೈಸೂರು ವಿಶ್ವವಿದ್ಯಾಲಯವು ಮರುಮುದ್ರಣಗೊಳಿಸಿತು. ಇಂದಿಗೂ ಜನಪ್ರಿಯತೆಯನ್ನು ಗಳಿಸಿದೆ ಈ ಕಾವ್ಯ ಮರುಮುದ್ರಣಗೊಳ್ಳುತ್ತಿರುವುದು ಇದರ ಅನನ್ಯತೆಗೆ ನಿದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಈ ಕೃತಿಯನ್ನು ಕುರಿತಂತೆ ಕನ್ನಡದಲ್ಲಿ ಸಾಕಷ್ಟು ಚರ್ಚೆಗಳು, ಅಧ್ಯಯನಗಳು, ಸಂವಾದಗಳು ನಿರಂತರವಾಗಿ ಇಂದಿಗೂ ನಡೆಯುತ್ತಿರುವುದು ಗಮನಿಸಬಹುದಾದ ಸಂಗತಿಯಾಗಿದೆ. ಇಂಥ ಅಧ್ಯಯನಗಳಲ್ಲಿ ಬಹುಮುಖ್ಯವಾದುದಾಗಿದೆ, ಡಿ.ಎಲ್‌. ನರಸಿಂಹಾಚಾರ್‌ ಅವರ ಪಂಪಭಾರತ ದೀಪಿಕೆ.

ದೀಪಿಕೆಯ ರಚನಾ ವಿನ್ಯಾಸ

೧೯೩೧ರಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪ ಅವರಿಂದ ಪರಿಷ್ಕರಿಸಿದ ಪಂಪಭಾರತದ ಪಾಠವನ್ನು ಇಲ್ಲಿ ಅನುಸರಿಸಲಾಗಿದೆ. ಸರಿಯೆಂದು ಕಂಡುಬಂದ ಕಡೆಗಳಲ್ಲಿ ಅಡಿಟಿಪ್ಪಣಿಗಳಲ್ಲಿ ಕಾಣಿಸಿರುವ ಪಾಠಾಂತರಗಳನ್ನು ಪರಿಗ್ರಹಿಸಿದ್ದಾರೆ. ಸ್ವೀಕೃತ ಪಾಠಗಳನ್ನು ಕೈಬಿಡಲಾಗಿದೆ. ಕೆಲವೆಡೆ ಹೊಸಪಾಠಗಳನ್ನು ಚೌಕಾಕಂಸಿನಲ್ಲಿ ಅಳವಡಿಸಲಾಗಿದೆ. ಪಾಠಸಮಸ್ಯೆಗಳನ್ನು ಅಲ್ಲಲ್ಲಿ ಚರ್ಚಿಸಲಾಗಿದೆ. ಸಾಕಷ್ಟು ವಿಸ್ತಾರವಾಗಿ ಪ್ರತಿಪದಾರ್ಥ ಸಹಿತವಾಗಿ ಈ ಟೀಕೆಯನ್ನು ರಚಿಸಲಾಗಿದೆ. ವ್ಯಾಕರಣ, ಛಂದಸ್ಸು, ಪೂರ್ವಕಥೆ ವೃತ್ತಾಂತ ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು ಮುಂತಾದವುಗಳು ಇಲ್ಲಿ ನಿರೂಪಿತಗೊಂಡಿವೆ. ಪಾಠ ಪರಿಷ್ಕರಿಸುವಲ್ಲಿ, ಪದ್ಯಗಳನ್ನು ಅರ್ಥೈಸುವಲ್ಲಿ ವ್ಯಾಸಭಾರತ, ಗದಾಯುದ್ಧ, ಕುಮಾರವ್ಯಾಸ ಭಾರತ ಮುಂತಾದ ಪ್ರಾಚೀನ ಕಾವ್ಯಗಳನ್ನು ಸಂದರ್ಭಾನುಸಾರ ಬಳಸಿಕೊಳ್ಳಲಾಗಿದೆ. ಕೊನೆಯಲ್ಲಿ ವಿಶಿಷ್ಟ ಪದಸೂಚಿ, ಗ್ರಂಥಸೂಚಿ, ಸಂಕೇತಗಳ ವಿವರಗಳು ದೀಪಿಕೆಯ ಓದಿಗೆ ನೆರವಾಗುತ್ತವೆ. ವ್ಯಾಖ್ಯಾನದ ಜೊತೆಗೆ ಮೂಲ ಗ್ರಂಥವೂ ಸೇರಿದರೆ ಗಾತ್ರ ಅಧಿಕವಾಗಿ ಬೆಲೆ ಹೆಚ್ಚಾಗುತ್ತದೆಂಬ ಕಾರಣದಿಂದ ಅದನ್ನು ಕೈಬಿಟ್ಟಿರುವುದಾಗಿ ಅರಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದು ದೀಪಿಕೆಯ ಸ್ಥೂಲವಾದ ರಚನೆಯ ವಿನ್ಯಾಸ.

ಉದಾಹರಣೆಯಾಗಿ ಪಂಪಭಾರತದ ಮೊದಲ ಪದ್ಯಕ್ಕೆ ನೀಡಿದ ವ್ಯಾಖ್ಯಾನದ ವಿನ್ಯಾಸವನ್ನು ನೋಡಬಹುದು.

“೧. ಶ್ರೀಯಂ – ಜಯಲಕ್ಷ್ಮೀಯನ್ನು (ಲಕ್ಷ್ಮಿಯನ್ನು), ಅರಾತಿ – ಶತ್ರುಗಳ, ಸಾಧನ-ಸೈನ್ಯವೆಂಬ, ಪಯೋನಿಧಿಯೊಳ್‌ಸಮುದ್ರದಲ್ಲಿ, ಪಡೆದುಂ – ಹೊಂದಿಯೂ ಧರಿತ್ರಿಯಂ – ಭೂಮಿಯನ್ನು, ಜೀಯನೇ – ಜೀಯ ಎಂದು ಬೇಡಿಕೊಳ್ಳದೇ – ಯಾಚಿಸಿಕೊಳ್ಳದೆ, ಸ್ವೀಕರಿಸದೆ ; ವಿರೋಧೀ ನರೇಂದ್ರರಂ – ಶತ್ರು ರಾಜರನ್ನು ಅಮುಕಿ, ಕೊಂಡುಂ ತೆಗೆದುಕೊಂಡೂ ಆತ್ಮೀಯ – ತನ್ನ ಸುಪುಷ್ಪ[ಪಟ್ಟ]ಮಂ – ಒಳ್ಳೆಯದಾದ ಪುಷ್ಪ ಪಟ್ಟವೆಂಬ ಕಿರೀಟವನ್ನೂ, ಒಡಂಬಡೆ – ಒಪ್ಪುವಂತೆ, ತಾಳ್ದಿಯುಂ – ಧರಿಸಿಯೂ, ಇಂತು ಹೀಗೆ, ಉದಾತ್ತ ನಾರಾಯಣನಾದ – ಉದಾತ್ತ ನಾರಾಯಣನೆಂಬ ಬಿರುದನ್ನುಳ್ಳ, ದೇವಂ – ಸ್ವಾಮಿಯಾದ, ಅರಿಕೇಸರಿ – ಅರಿಕೇಸರಿ ಎಂಬ ರಾಜನು, ಶತ್ರುಗಳಿಗೆ ಸಿಂಹವಾದವನ್ನು; ಎಮಗೆ – ನಮಗೆ ಸೌಖ್ಯಕೋಟಿಯಂ – ಸುಖದ ಪರಾಕಾಷ್ಠೆಯನ್ನು, ಕೋಟ್ಯಂತರ ಸೌಖ್ಯಗಳನ್ನು, ಈಗ – ಕೊಡಲಿ. ‘ಸುಪುಷ್ಪವೃಷ್ಟಿಯಂ ಇಲ್ಲಿ ಪಾಠಕ್ಲೇಶವಿದೆ, ಇದು ಸುಷುಷ್ಟ[ಪಟ್ಟ]ಮಂ ಎಂದಿರಬೇಕು.

ಈ ಪದ್ಯದಲ್ಲಿ ಕವಿ ತನ್ನ ಪೋಷಕನಾದ ಅರಿಕೇಸರಿ ರಾಜನನ್ನೂ ನಾರಾಯಣನನ್ನೂ ಒಟ್ಟಿಗೆ ಸ್ತುತಿಮಾಡಿ ತನ್ನ ದೊರೆ ದೇವನಾದ ನಾರಾಯಣನಿಗಿಂತ ಉತ್ತಮನೆಂದು ಹೇಳಿದ್ದಾನೆ. ಶತ್ರುಸೈನ್ಯಮಥನದಿಂದ ಅರಿಕೇಸರಿ ಜಯಲಕ್ಷ್ಮಿಯನ್ನು ಪಡೆದನು, ನಾರಾಯಣನಾದರೆ ದೇವದಾನವರು ಸೇರಿ ಸಮುದ್ರಮಥನ ಮಾಡಿದಾಗ ಹುಟ್ಟಿಬಂದ ಲಕ್ಷ್ಮಿಯನ್ನು ಏನೂ ಕಷ್ಟವಿಲ್ಲದೆ ಸ್ವೀಕರಿಸಿದನು. ಅರಿಕೇಸರಿ ವೈರಿಗಳನ್ನು ಮೆಟ್ಟಿ ಭೂಮಿಯನ್ನು ತೆಗೆದುಕೊಂಡನು, ನಾರಾಯಣನಾದರೆ ವಾಮನರೂಪದಲ್ಲಿ ಬಲಿ ಚಕ್ರವರ್ತಿಯಿಂದ ನೆಲವನ್ನು ಬೇಡಿ ಪಡೆದನು; ಅರಿಕೇಸರಿ ತನಗೆ ಮೀಸಲಾಗಿದ್ದ ಸುಪುಷ್ಪಪಟ್ಟವೆಂಬ ಕಿರೀಟವನ್ನು ಧರಿಸಿದ್ದರೆ ನಾರಾಯಣನು ಬರಿ ಪುಷ್ಪಪಟ್ಟವನ್ನು ತಾಳಿದನು. ಆದ್ದರಿಂದ ಅರಿಕೇಸರಿ ನಾರಾಯಣನಿಗಿಂತ ಉದಾತ್ತನಾದವನು.

ಇಲ್ಲಿ ಕಾಣುವ ಪುಷ್ಪಪಟ್ಟವೆಂಬ ಶಬ್ದ ಶಿಲ್ಪಶಾಸ್ತ್ರಕ್ಕೆ ಸೇರಿದ್ದು. ರಾಜರೂ ದೇವತೆಗಳೂ ಧರಿಸುವ ಸೀರೋವೇಷ್ಠನಗಳಲ್ಲಿ ಜಟಾ. ಮೌಳಿ, ಕಿರೀಟ, ಕರಂಡ, ಶಿರಸ್ತ್ರಕ, ಕುಂಡಲ ಕೇಶಬಂಧ, ಧಮ್ಮಿಲ್ಲ, ಅಲಕ, ಚೂಡ, ಮುಕುಟ, ಪಟ್ಟ – ಎಂಬ ಹನ್ನೆರಡು ವಿಧಾನಗಳಿವೆ. ಇವುಗಳಲ್ಲಿ ಪಟ್ಟವೆಂಬುದು ಪತ್ರಪಟ್ಟ, ರತ್ನ ಪಟ್ಟ, ಪುಷ್ಪಪಟ್ಟ ಎಂದು ಮೂರು ಬಗೆಯಾಗಿದೆ. ಪಟ್ಟಭಾಜ್‌ವರ್ಗದರಾಜನು ಈ ಕಿರೀಟಗಳನ್ನು ಧರಿಸುವ ಅಧಿಕಾರವನ್ನು ಹೊಂದಿದ್ದನು. ಅರಿಕೇಸರಿ ರಾಷ್ಟ್ರಕೂಟರ ಸಾಮಂತ ರಾಜನಾಗಿದ್ದರೂ ಪುಷ್ಪಪಟ್ಟ ಧಾರಣೆಯನ್ನು ಮಾಡಿಕೊಂಡು ಪಟ್ಟಾಭಿಷಿಕ್ತನಾಗುವ ಅಂತಸ್ತಿಗೆ ಸೇರಿದ್ದನು. ಇತರರಂತೆ ಅವನು ಬರಿ ಸಾಮಂತನಾಗಿರಲಿಲ್ಲ ಎಂಬುದು ಸೂಚಿತವಾಗಿದೆ. ಅರಿಕೇಸರಿ ಎಂಬ ಶಬ್ದದಲ್ಲೂ ನರಸಿಂಹಾವತಾರದ ಸೂಚನೆಯಿದೆ. ದೇವಾತಾವಿಗ್ರಹಗಳಿಗೆ ಪುಷ್ಪಪಟ್ಟವೆಂಬ ಕಿರೀಟವನ್ನು ಶಿಲ್ಪಿಗಳು ಕೆತ್ತುತ್ತಿದ್ದರು”[1]

ಹೀಗೆ ಪಂಪಭಾರತದ ಎಲ್ಲ ಪದ್ಯಗಳಿಗೆ ಅರ್ಥವನ್ನು ಪಾಠಾಂತರಗಳನ್ನೂ ನೀಡಿರುವುದನ್ನು ದೀಪಿಕೆಯುದ್ದಕ್ಕೂ ಕಾಣುತ್ತೇವೆ. “ದೊ.ಲ.ನ. ಅವರ ಆಶ್ಚರ್ಯಕರವಾದ ಸ್ಮರಣಶಕ್ತಿ ಖಚಿತವಾದ ಪಾಂಡಿತ್ಯ, ಶಬ್ದಾರ್ಥವನ್ನು ಕಂಡುಹಿಡಿಯುವ ಸರ್ವಂಕಶ ಸಾಮರ್ಥ್ಯ ಮತ್ತು ವಿವರಣ ನೈಪುಣ್ಯ ಇವು ನಮಗೆ ಅಚ್ಚರಿಯನ್ನು ಆನಂದವನ್ನೂ ಉಂಟುಮಾಡುತ್ತವೆ. ಪಾಠಾಂತರಗಳನ್ನು ವಿಶ್ಲೇಷಿಸಿ ಸರಿಯಾದ ಪಾಠವನ್ನು ಊಹಿಸುವಲ್ಲಿ ಅವರು ಸಾಧಾರವಾದ, ವಸ್ತುನಿಷ್ಠವಾದ ನಿಲುಮೆಯನ್ನು ತಳೆದಿದ್ದಾರೆ. ಪಾಠಾಂತರ ಅನ್ವಯ, ಅರ್ಥ ಈ ವಿಷಯಗಳಲ್ಲಿ ಪ್ರಮಾಣಿಕವಾಗಿ ಕ್ಲಿಷ್ಟವಾದ ಸಂದರ್ಭಗಳಲ್ಲಿ ತಮಗೆ ತಿಳಿಯದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ವಿವರಣಕಾರರಿಗೆ ದಾರಿಯನ್ನು ತೆರೆದುಕೊಟ್ಟಿದ್ದಾರೆ”[2] ಎಂದು ರಂ.ಶ್ರಿ. ಮುಗಳಿ ಅವರು ದೀಪಿಕೆಯ ವಿಶೇಷತೆಯನ್ನು ಒಂದೆಡೆ ಗುರುತಿಸಿದ್ದಾರೆ.

ಡಿ.ಎಲ್‌.ಎನ್‌. ಅವರು ದೀಪಿಕೆಯನ್ನು ಪ್ರಕಟಿಸಿದ ನಂತರದಲ್ಲಿ ಪಂಪಭಾರತದ ಹಲವು ಪದ್ಯಗಳು, ಶಬ್ದಗಳು ವಿದ್ವಾಂಸರ ವಲಯದಲ್ಲಿ ತುಂಬ ಚರ್ಚೆಯಾಗಿವೆ. ಅಂಥವುಗಳಲ್ಲಿ ಸುಪುಷ್ಟವೃಷ್ಟಿಯಂ ಎಂಬ ಶಬ್ದ ಪ್ರಮುಖವಾದುದು. ಸುಪುಷ್ಟವೃಷ್ಟಿ, ಸುಪುಷ್ಟದೃಷ್ಟಿ ಈ ಎರಡೂ ಪಾಠಗಳು ಸರಿಯಾಗುವುದಿಲ್ಲವೆಂದು ಭಾವಿಸಿ ಡಿ.ಎಲ್‌.ಎನ್‌. ಅವರು ಸುಪುಷ್ಟಪಟ್ಟ ಎಂಬ ಕಲ್ಪಿತ ಪಾಠವನ್ನು ಸ್ವೀಕರಿಸಿದ್ದಾರೆ. ಆದರೆ ಮುಳಿಯ ತಿಮ್ಮಪ್ಪಯ್ಯ,[3] ರಂ.ಶ್ರೀ ಮುಗಳಿ,[4] ಎಂ. ಎಂ. ಕಲಬುರ್ಗಿ,[5] ಸೀತಾರಾಮ ಜಾಗೀರದಾರ,[6] ಹೇಮಲತಾ ಪದಕಿ,[7] ಎಂ. ಮಾಧವ ಪೈ,[8] ಟಿ. ವಿ. ವೆಂಕಟಾಚಲಶಾಸ್ತ್ರಿ[9] ಇನ್ನೂ ಅನೇಕ ವಿದ್ವಾಂಸರು ಡಿ.ಎಲ್‌.ಎನ್‌. ಅವರ ಕಲ್ಪಿತ ಪಾಠವನ್ನು ಅಲ್ಲಗಳೆದು ಸುಪುಷ್ಟದೃಷ್ಟಿ ಅಥವಾ ಸುಪುಷ್ಟವೃಷ್ಟಿ ಸರಿಯಾದ ಪಾಠವೆಂದು ನಿರ್ಧರಿಸಿ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನವನ್ನು ನೀಡಿರುವರು. ಹೀಗೆ ಪಂಪಭಾರತದ ಇನ್ನೂ ಅನೇಕ ಪಾಠ ಪರಿಷ್ಕರಣಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯಲು ಡಿ.ಎಲ್‌.ಎನ್‌. ಅವರು ದಾರಿ ಮಾಡಿಕೊಟ್ಟಿದ್ದಾರೆ.

ಒಂದು ಶಬ್ದದ ಅರ್ಥವನ್ನು ಕೊಡುವಲ್ಲಿ ಡಿ.ಎಲ್‌.ಎನ್‌. ಅವರು ಸಾಕಷ್ಟು ಪರಿಶ್ರಮವಹಿಸಿದ್ದಾರೆ. ಕನ್ನಡದ ಅನೇಕ ಪ್ರಾಚೀನ ಕಾವ್ಯಗಳಲ್ಲಿ ಬಳಕೆಯಾದ ಪದಪ್ರಯೋಗಗಳು, ಅನ್ಯಭಾಷೆಯಲ್ಲಿ ಪರ್ಯಾಯವಾಗಿ ಬಳಸುತ್ತಿರುವ ಪದಗಳನ್ನು ಗುರುತಿಸಿ ಅವುಗಳ ಸಾಮ್ಯತೆ ಭಿನ್ನತೆಗಳನ್ನು ಚರ್ಚೆಗೆ ಎತ್ತಿಕೊಂಡಿರುವುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಉದಾಹರಣೆಗಾಗಿ ತಡಮಾಡೆ-ತಡಂ (ಸಾವಕಾಶವಾಗಿ, ನಿಧಾನವಾಗಿ)+ ಅಡೆ, ಅಳುಕೆ> ಅಳುರ್‌+ ಕೆ, ವ್ಯಾಪ್ತಿ, ಅತಿಶಯ (ಪಂಪಭಾರತ ದೀಪಿಕೆ, ಪು. ೬೨)

‘ಮತ್ತಲತ್ತ ರಥಮನೆಂದು” ಎಂಬುದಕ್ಕೆ ಪ್ರತಿಯಾಗಿ “ಮತ್ತಲತ್ತರ[ದ]ಮನೆಂದು” ಎಂಬ ಪಾಠವಿದ್ದರೆ ಪದ್ಯದ ಓಟ ಚೆಲುವಾಗುತ್ತದೆ; ರಾಜ ಎಂಬುದು ಅರಸ ಆದಂತೆ ರಥ ಎಂಬುದು ಅರದವಾಗುತ್ತದೆ; ಸಂಸ್ಕೃತದ ರಕಾರ ಲಕಾರಾದಿ ಶಬ್ದಗಳಿಗೆ ತಮಿಳಿನಲ್ಲಿ ಆದಿಯಲ್ಲಿ ಆಕಾರ, ಉಕಾರ, ಇಕಾರಗಳು ಸೇರಿ ತದ್ಭವಗಳಾಗುತ್ತವೆ; ಲೋಕ > ಉಲಗಂ; ಲಕ್ಷಣ > ಇಲಕ್ಕಣಂ; ರೂಪಂ > ಉರುವಂ ಇತ್ಯಾದಿ; ಇದರಂತೆ ರಥ ತಮಿಳಿನಲ್ಲಿ ಅರದವಾಗುತ್ತದೆ; ಅದು ಕನ್ನಡಕ್ಕೆ ಬಂದಿದೆ, ತಮಿಳಿನ ಮೂಲಕ; ಪೊನ್ನ ಕರ್ಣಪಾರ್ಯರು ಈ ಶಬ್ದವನ್ನು ಪ್ರಯೋಗಿಸಿದ್ದಾರೆ (ಪಂಪಭಾರತ ದೀಪಿಕೆ, ಪುಟ.೩೮೬)

ದೀಪಿಕೆಯ ಮಾದರಿಯನ್ನು ಅನುಸರಿಸಿ ಪಂಪನ ಇನ್ನೊಂದು ಕಾವ್ಯ ಆದಿಪುರಾಣಕ್ಕೆ ತ. ಸು. ಶಾಮರಾಯ ಹಾಗೂ ಪ. ನಾಗರಾಜಯ್ಯ ಅವರು ದೀಪಿಕೆಯನ್ನು ರಚಿಸಿದ್ದಾರೆ. ಇದನ್ನು ರಚಿಸುವಲ್ಲಿ ಡಿ.ಎಲ್‌.ಎನ್‌. ಅವರ ಪಂಪಭಾರತ ದೀಪಿಕೆಯ ಪ್ರಭಾವ ಪ್ರೇರಣೆ ಸಾಕಷ್ಟಾಗಿದೆ.[10] ಪಂಪಭಾರತ ದೀಪಿಕೆಗೂ ಆದಿಪುರಾಣ ದೀಪಿಕೆಗೂ ಮುಖ್ಯವಾದ ಕೆಲವು ವ್ಯತ್ಯಾಸಗಳಿವೆ. ಪಂಪಭಾರತದ ಮೂಲಕಾವ್ಯದ ಪಾಠವನ್ನು ಕೈಬಿಟ್ಟಿರುವುದು, ಆದಿಪುರಾಣದ ಮೂಲಕಾವ್ಯದ ಪಾಠವನ್ನು ಕೊಟ್ಟಿರುವುದು. ಹೀಗಾಗಿ ಆದಿಪುರಾಣ ದೀಪಿಕೆಯ ಗಾತ್ರ ಸಹಜವಾಗಿ ಅಧಿಕವಾಗಿದೆ.

ಇತ್ತೀಚೆ ಎಲ್‌. ಬಸವರಾಜು ಅವರು ಪಂಪಭಾರತವನ್ನು ಶ್ರೀಸಾಮಾನ್ಯನು ಸುಲಭವಾಗಿ ಅರ್ಥೈಸಿಕೊಳ್ಳಬೇಕೆಂಬ ಸದುದ್ದೇಶದಿಂದ ಸರಳ ಪಂಪಭಾರತ ಹೆಸರಿನ ಕೃತಿಯನ್ನು ಸಂಪಾದಿಸಿದ್ದಾರೆ. ಇಲ್ಲಿ ಯಾವುದೇ ಅರ್ಥ ಕೊಡದೇ ಸರಳವಾಗಿ ಓದಿಕೊಳ್ಳಲು ಪದ್ಯಗಳನ್ನು ವಿಭಜಿಸಿದ್ದಾರೆ. ಇದು ಒಂದು ದೃಷ್ಟಿಯಿಂದ ಪಂಪಭಾರತ ದೀಪಿಕೆಗೆ ಸಾಕಷ್ಟು ಋಣಿಯಾಗಿದೆಯೆಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಡಿ.ಎಲ್‌.ಎನ್‌. ಅವರ ದೀಪಿಕೆ ಪಂಪಭಾರತವನ್ನು ಅರ್ಥೈಸುವಲ್ಲಿ, ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ, ಪಾಠಾಂತರಗಳನ್ನು ನಿರ್ಣಯಿಸುವಲ್ಲಿ ತುಂಬ ನೆರವಾಗುತ್ತದೆ.

 

[1] ಡಿ. ಎಲ್‌. ನರಸಿಂಹಾಚಾರ್‌. ಪಂಪಭಾರತದೀಪಿಕೆಪುಟ.೧

[2] ರಂ. ಶ್ರೀ. ಮುಗಳಿ, ದೀಪಿಕೆಯಬೆಳಕಿನಲ್ಲಿ, ಸಾಧನೆ, ೩-೨ಪುಟ೨

[3] ಮುಳಿಯತಿಮ್ಮಪ್ಪಯ್ಯ, ನಾಡೋಜಪಂಪ, ಪುಟ. ೧೯೯

[4] ರಂಶ್ರೀ. ಮುಗಳಿ, ದೀಪಿಕೆಯಬೆಳಕಿನಲ್ಲಿ, ಸಾಧನೆ, ೩-೨ಪುಟ೨

[5] ಎಂ. ಎಂ. ಕಲಬುರ್ಗಿ, ಪಂಪಭಾರತದಮಂಗಲಪದ್ಯ, ಕರ್ನಾಟಕಭಾರತಿ, ೩-೨ಪುಟ೬೮

[6] ಸೀತಾರಾಮಜಾಗೀರದಾರ್‌, ಗ್ರಂಥಸಂಪಾದನಾಶಾಸ್ತ್ರಪರಿಚಯ, ಪುಟ. ೧೬೩

[7] ಹೇಮಲತಾಪದಕಿ. ಪಂಪಭಾರತದಪಾಠಾಂತರಗಳು, ಕರ್ನಾಟಕಭಾರತಿ೬-೨ಪುಟ೧೦೬

[8] ಎಂ. ಮಾಧವಪೈ, ಶಬ್ದಾರ್ಥಗೌರವ, ಪು. ೧

[9] ಟಿ. ವಿ. ವೆಂಕಟಾಚಲಶಾಸ್ತ್ರಿ, ಹಸ್ತಪ್ರತಿಅಧ್ಯಯನ೧-೨ಪುಟ. ೬೭

[10] ತ. ಸು. ಶಾಮರಾಯ. ಪ. ನಾಗರಾಜಯ್ಯ, ಆದಿಪುರಾಣದೀಪಿಕೆ, ಚಂದ್ರಗುಪ್ತಗ್ರಂಥಮಾಲೆ, ಶ್ರವಣಬೆಳ್ಗೊಳ, ೧೯೯೧