ಡಿ.ಎಲ್‌.ನರಸಿಂಹಾಚಾರ್ಯ ಅವರು ಹಳಗನ್ನಡ ವಿದ್ವತ್ತಿನ ಮಹಾಸಂಪುಟ. ಕಾವ್ಯಪೀಠಿಕೆಗಳು, ಕವಿಕಾವ್ಯ ವಿಚಾರಗಳು, ಛಂದಸ್ಸು-ನಿಘಂಟು, ಶಬ್ದಾರ್ಥ ವಿಚಾರ ಹಾಗೂ ಗ್ರಂಥಸಂಪಾದನೆ ನೆಲೆಗಳಿಂದ ಈ ಸಂಪುಟ ಪರಿಪೂರ್ಣಗೊಂಡಿದೆ. ಈ ನೆಲೆಗಳ ಹಿನ್ನೆಲೆಯಲ್ಲಿ ಅವರಿಗಿದ್ದ ಹಳಗನ್ನಡ ವಿದ್ವತ್ತಿನ ಸ್ಥೂಲ ಪರಿಚಯವನ್ನು ಮಾಡಿಕೊಡುವುದು ಈ ಲೇಖನದ ಉದ್ದೇಶವಾಗಿದೆ.

ಪಂಪರಾಮಾಯಣ ಸಂಗ್ರಹ, ಸಿದ್ಧರಾಮಚರಿತೆಯ ಸಂಗ್ರಹ, ಸುಕುಮಾರ ಚರಿತೆ, ಶಬ್ದಮಣಿದರ್ಪಣ ಇತ್ಯಾದಿ ಕೃತಿಗಳ ಪೀಠಿಕೆಗಳನ್ನು ಗಮನಿಸಬೇಕು. ಕವಿಯ ಇತಿವೃತ್ತ, ಪ್ರಭಾವ-ಪ್ರೇರಣೆ ಹಾಗೂ ತೌಲನಿಕ ವಿವೇಚನೆಗಳಿಂದ ಪರಿಪೂರ್ಣಗೊಂಡಿದ್ದು; ಹಳಗನ್ನಡ ವಿದ್ವತ್ತಿನಿಂದ ನಳನಳಿಸುತ್ತವೆ. ಪಂಪರಾಮಾಯಣದ ಕರ್ತೃ ನಾಗಚಂದ್ರನೇ ‘ಯೋಗಾಮೃತ’ ಕೃತಿಯನ್ನೂ ರಚಿಸಿರಬೇಕೆಂದು ದ. ರಾ. ಬೇಂದ್ರೆಯವರು ಅಭಿಪ್ರಾಯಪಡುತ್ತಾರೆ. ಇದನ್ನೊಪ್ಪದ ಡಿ.ಎಲ್‌.ಎನ್‌. ‘ಯೋಗಾಮೃತ’ ಮೂಲತಃ ಸ್ವತಂತ್ರ ಕೃತಿಯಲ್ಲ. ಅದು ಹಳಗನ್ನಡದ ಹಲವು ಕವಿಗಳ ಕಾವ್ಯಗಳಿಂದ ಆಯ್ದ ಪದ್ಯ ಭಾಗಗಳ ಸಂಕಲನವೆಂಬುದನ್ನು ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆಗೆ ಅವರು ಕೊಡುವ ನಿದರ್ಶನಗಳು ಹೀಗಿವೆ. ‘ಕಾಲನ ಬಾಲನ ನೀರಂ…’ (ಮಲ್ಲಿನಾಥ ಪುರಾಣ ೧೩-೧೬೩) , ‘ಸಂದ ಚಿದಾನಂದದೊಳಾನಂದದಿ…’ (ಜಿನ ಮುನಿತನಯ ೧೦೧), ‘ತನಿವುಂಟೆ ಪೆಱತೊಂದ ಪೂರ್ವ ರಸಮೇಂ’ (ಆದಿಪುರಾಣ೩-೬೯), ‘ಒಡಲಂ ಸಂಸ್ಕೃತಿ ಲತೆಕೆಯ ಮಡಲಂ…’ (ಪುಷ್ಪದಂತ ಪುರಾಣ ೯-೭ ಹಾಗೂ ೧೩-೩೩)-ಹೀಗೆ ಯೋಗಾಮೃತ ಕೃತಿಯಲ್ಲಿ ಉಲ್ಲೇಖಿತಗೊಂಡ ಪಧ್ಯಭಾಗಗಳು ಬೇರೆ ಬೇರೆ ಹಳಗನ್ನಡ ಕಾವ್ಯಗಳಲ್ಲಿರುವುದನ್ನು ಶೋಧಿಸುವಲ್ಲಿ ಇವರ ಓದಿನ ವಿಸ್ತಾರ ಪರಿಚಯವಾಗುತ್ತದೆ.

ಪಂಪರಾಮಾಯಣ ಸಂಗ್ರಹಕ್ಕೆ ಬರೆದ ೭೭ ಪುಟಗಳ ಪೀಠಿಕೆಯಲ್ಲಿ ವಿಮಲಸೂರಿ, ಗುಣಭದ್ರಚಾರ್ಯ ಹಾಗೂ ದೇವಚಂದ್ರನ ರಾಮಾಯಣಗಳ ಸಂಪ್ರದಾಯಗಳು ಪ್ರಾಕೃತ, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ಬೆಳೆದು ಬಂದ ಬಗೆಯನ್ನು ವಿಶ್ಲೇಷಿಸಿದ್ದಾರೆ. ವಿಮಲಸೂರಿಯ “ಪಉಮಚರಿಯ’ದಿಂದ ರಾವಣನ ಪಾತ್ರಕ್ಕೆ ಸಂಬಂಧಿಸಿದ ಕೆಲವು ಭಾಗಗಳನ್ನು ಪರಿಶಿಷ್ಟರಲ್ಲಿ ದಾಖಲಿಸಿರುವುದು ಇವರ ಬಹುಶಿಸ್ತೀಯ ವಿದ್ವತ್ತಿಗೆ ಸಾಕ್ಷಿಯಾಗಿದೆ.

ಸಿದ್ಧರಾಮಚರಿತೆಯನ್ನು ಸಂಗ್ರಹಿಸಿದ ಡಿ.ಎಲ್‌.ಎನ್‌. ಅವರು ಸಿದ್ಧರಾಮನು ಶೈವನೇ ವೀರಶೈವನೇ ಎಂಬ ಪ್ರಶ್ನೆಯನ್ನು ‘ಒಂದು ಸಮಸ್ಯೆ’ಯನ್ನಾಗಿ ಕೈಗೆತ್ತಿಕೊಳ್ಳುತ್ತಾರೆ. ವೀರಶೈವ ಗ್ರಂಥಗಳ ಅವಲೋಕನ ಮತ್ತು ವಿದ್ವಾಂಸರ ಅದುವರೆಗಿನ ಚರ್ಚೆಗಳನ್ನು ಮುಂದಿಟ್ಟುಕೊಂಡು ಸಿದ್ಧರಾಮ ಶೈವನಾಗಿದ್ದನೆಂದು ಬಲವಾದ ಪ್ರಮಾಣಗಳಿಂದ ಸಾಬೀತುಗೊಳಿಸುತ್ತಾರೆ. ಇದಕ್ಕೆ ಅವರ ವಚನಸಾಹಿತ್ಯ, ವೀರಶೈವ ಪುರಾಣಗಳು ಹಾಗೂ ಶೂನ್ಯಸಂಪಾದನೆಗಳ ಆಳವಾದ ಅಧ್ಯಯನದ ಹಿನ್ನೆಲೆಯಿರುವುದು ತಿಳಿದುಬರುತ್ತದೆ.

ಇದೇ ಸಂದರ್ಭದಲ್ಲಿ ಮೈಸೂರಿನ ಪ್ರಾಚ್ಯ ಸಂಶೋಧನ ಸಂಸ್ಥೆಯಲ್ಲಿರುವ ‘ಸಿದ್ಧರಾಮನ ಸಾಂಗತ್ಯ’ ಎಂಬ ಹಸ್ತಪ್ರತಿಯನ್ನು ಪರಿಶೀಲಿಸುತ್ತಾರೆ. ರಾಘವಾಂಕ ಕವಿಯ ಸಿದ್ಧರಾಮನ ಚರಿತೆ ಹಾಗೂ ಈ ಸಾಂಗತ್ಯ ಕೃತಿಗಳಲ್ಲಿಯ ಸಮಾನವಾದ ವಿಷಯ ಸಂದರ್ಭಗಳನ್ನು ತೂಕ ಮಾಡುತ್ತಾರೆ. ಉಳಿದಂತೆ ಸಾಂಗತ್ಯ ಪ್ರಕಾರದ ಈ ಕೃತಿ ‘ಹಾಲುಮತದ ಉತ್ಪತ್ತಿ ನಿರೂಪಣಾರ್ಥ’ವಾಗಿದ್ದು ಇದನ್ನು ಮಂಕಯ್ಯನ ಚರಿತೆಯೆಂದು ಕರೆಯಬಹುದಾಗಿದೆಂಬ ನಿರ್ಣಯವನ್ನು ಮಾಡುತ್ತಾರೆ. ಈ ಮರುಳ ಮಂಕಯ್ಯನೇ ಹಾಲುಮತ ಸಮುದಾಯದ ಗೌಡ ಕುಲಕ್ಕೆ ಆದ್ಯನೆಂಬುದು ಮತ್ತು ಇದೇ ಆ ಸಮುದಾಯದವರಿಗೆ ಹೆಮ್ಮೆಯ ಸಂಗತಿಯೆಂಬುದನ್ನು ೧೯೬೨ರಲ್ಲಿಯೇ ಡಿ.ಎಲ್‌.ಎನ್‌. ಪ್ರತಿಪಾದಿಸಿದ್ದಾರೆ. ಮುಂದೆ ಡಿ.ಎಲ್‌.ಎನ್‌. ಅವರ ಈ ಪ್ರತಿಪಾದನೆ ಕಾರಣವಾಗಿ ಹಾಲುಮತ ಪುರಾಣಗಳಾದ ‘ಸಿದ್ಧಮಂಕ ಚರಿತೆ’ (ಸಂ: ಡಾ. ಎಂ. ಎ. ಕಲಬುರ್ಗಿ ಮತ್ತು ಡಾ. ವೈ. ಸಿ. ಭಾನುಮತಿ) ಮತ್ತು ‘ತಗರ ಪವಾಡ’ (ಸಂ: ಡಾ. ಎಂ. ಎಂ. ಕಲಬುರ್ಗಿ, ಸಿ. ಕೆ. ಪರಶುರಾಮಯ್ಯ, ಡಾ. ಎಫ್‌. ಟಿ. ಹಳ್ಳಿಕೇರಿ) ಕೃತಿಗಳ ಸಂಪಾದನೆಗಳಿಗೆ ಆದಿಯಾಯಿತು.

‘ಸುಕುಮಾರ ಚರಿತಂ’ ಸಂಗ್ರಹ ಮಾಡಿದ ಡಿ.ಎಲ್‌.ಎನ್‌. ಅವರು ಈ ಕಥೆಯ ಮೂಲವನ್ನು ಶೋಧಿಸುವಲ್ಲಿ ಪ್ರಾಕೃತ, ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯಾವಲೋಕನ ಮಾಡಿರುವುದು ಇವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ‘ಸಂಠಾರ ಪಞಣ್ಣ’, ‘ಭರತೇಶ್ವರ ಬಾಹುಬಲಿ ಸ್ವಾಧ್ಯಾಯ ಕಥಾಕೋಶ’, ದೇವಸೇನನ ‘ಆರಾಧನಾಸಾರ’, ಸಕಲಕೀರ್ತಿಯ ಹಾಗೂ ವಾದಿಚಂದ್ರರ ‘ಸುಕುಮಾಲ ಸ್ವಾಮಿ ಚರಿತ್ರೆ’, ಪೂರ್ಣಭದ್ರ ‘ಸುಕುಮಾಲ ಸ್ವಾಮಿ ಚರಿತವು’, ‘ಅವನ್ತಿ ಸುಕುಮಾಲ ಕಥಾ’, ಅವನ್ತಿ ಸುಕುಮಾಲ ಸಂಧಿ’, ಹರಿಸೇಣನ ‘ಬೃಹತ್ಕಕಥಾಕೋಶ’ ಕೃತಿಗಳನ್ನು ಉಲ್ಲೇಖಿಸುವುದರ ಮೂಲಕ ಜೈನ ಕವಿಗಳಲ್ಲಿ ‘ಸುಕುಮಾರನ ಕಥೆ’ಗೆ ಇರುವ ಪ್ರಾಧಾನ್ಯತೆಯನ್ನು ಗುರುತಿಸಿದ್ದಾರೆ. ವಿಶೇಷವಾಗಿ ಶಾಂತಿನಾಥ ಕವಿ ವಡ್ಡಾರಾಧನೆಯಿಂದ ಉಪಕೃತನಾಗಿರುವ ಸಂಗತಿಯನ್ನು ಎರಡು ಕಾವ್ಯಗಳ ತುಲನೆಯಿಂದ ಸ್ಪಷ್ಟಪಡಿಸುತ್ತಾರೆ. ವಡ್ಡಾರಾಧನೆಯ ಒಂದು ಕಥೆ, ಸಮಗ್ರಕಾವ್ಯ ವಿಸ್ತಾರವನ್ನು ಪಡೆಯುವಲ್ಲಿ ಶಾಂತಿನಾಥ ಕವಿಯ ಔಚಿತ್ಯಜ್ಞಾನ, ವಿಮರ್ಶಾಶಕ್ತಿ ಮತ್ತು ಇಂಗಿತಜ್ಞತೆಗಳಿಗೆ ಬೆಲೆ ಕಟ್ಟುತ್ತಾರೆ. ಕನ್ನಡದಲ್ಲಿ ಸುಕುಮಾರ ಚರಿತೆ ಕುರಿತು ರಚನೆಯಾದ ಬಂಧುವರ್ಮನ ‘ಜೀವ ಸಂಭೋಧನ’, ನಾಗರಾಜನ ‘ಪುಣ್ಯಾಸ್ರವ’, ಆದಿದೇವನ ‘ಸುಕುಮಾರ ಚರಿತೆ’ಗಳ ಜೊತೆಗೆ ಭಾರತೀಯ ಭಾಷೆಗಳಲ್ಲಿ ಈ ಕಥೆ ಅನೇಕ ಶಾಖೆಗಳಾಗಿ ವಿಂಗಡಣೆಗೊಂಡಿದೆ. ಅದರ ಒಂದು ಉಪಶಾಖೆ ಕನ್ನಡದ್ದು ಎಂಬ ಡಿ.ಎಲ್‌.ಎನ್‌.ರ ಅಭಿಪ್ರಾಯ ಅವರ ಅಧ್ಯಯನದ ಆಳವನ್ನು ನಿರ್ದೇಶಿಸುತ್ತದೆ.

ಕನ್ನಡ ಗ್ರಂಥಸಂಪಾದನೆಯ ದೃಷ್ಟಿಯಿಂದ ಡಿ.ಎಲ್‌.ಎನ್‌. ಅವರಿಗೆ ಶಾಸ್ತ್ರೀಯ ಗ್ರಂಥ ಸಂಪಾದಕತ್ವದ ನೆಲೆ-ಬೆಲೆಯನ್ನು ತಂದು ಕೊಟ್ಟ ಕೃತಿ ‘ಶಬ್ದಮಣಿದರ್ಪಣ’.ಎರಡು ತಾಡೋಲೆ, ಎರಡು ಮುದ್ರಿತ ಪ್ರತಿಗಳ ಸಹಾಯದಿಂದ ಇದನ್ನು ಸಂಪಾದಿಸಿದ್ದಾರೆ. ಡಿ.ಎಲ್‌.ಎನ್‌. ಅವರ ಹಳಗನ್ನಡ ವಿದ್ವತ್ತು ಊರ್ಧ್ವಮುಖಿಯಾಗಿರುವುದು ಶಬ್ದಮಣಿದರ್ಪಣದಲ್ಲಿಯ ಪಾಠ ಸಮಸ್ಯೆಗಳನ್ನು ನಿರ್ಣಯಿಸುವ ಹಂತದಲ್ಲಿ. ಇಲ್ಲಿ ಕವಿ ಲಿಖಿತ ಪ್ರತಿಯ ಪಾಠವನ್ನು ದೊರಕುವ ಸಾಮಾಗ್ರಿಮುಖಿ ಸಹಾಯದಿಂದ, ಸಾಧ್ಯವಾಗದಿದ್ದಾಗ ಮೂಲಪ್ರತಿಗೆ ಹತ್ತಿರವಾದ ಪಾಠಗಳ ನಿರ್ದೇಶನದ ಸಹಾಯದಿಂದ, ಸಾಧ್ಯವಾಗದಿದ್ದಾಗ ಮೂಲಪ್ರತಿಗೆ ಹತ್ತಿರವಾದ ಪಾಠಗಳ ನಿರ್ದೇಶನದ ಸಹಾಯದಿಂದ ಇಲ್ಲವೇ ಅರ್ಥದ ದೃಷ್ಟಿಯಿಂದ ಸ್ಪಷ್ಟತೆ ಮತ್ತು ಸ್ಖಾಲಿತ್ಯ ಮುಕ್ತತೆಯಿಂದ ಪಾಠ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರಾಯಶಃ ಈ ಮೂರು ಮಗ್ಗಲುಗಳಿಂದ ಕೃತಿಯ ಪಾಠ ನಿರ್ಣಯ ಮಾಡುವುದೆಂದರೆ ಶಬ್ದಮಣಿದರ್ಪಣಕ್ಕೆ ಲಕ್ಷ್ಯ ಹಾಗೂ ಲಕ್ಷಣ ಸಾಮಗ್ರಿಗಳಾಗಿ ನಿಂತುಕೊಂಡ ಹತ್ತನೇ ಶತಮಾನದ ಹಳಗನ್ನಡ ಕೃತಿಗಳ ಸಮಗ್ರ ಅಧ್ಯಯನವೇ ಬೇಕಾಗುತ್ತದೆ. ಇದನ್ನು ‘ಪ್ರಯೋಗಗಳ ಆಕರ’ದ ಹಂತದಲ್ಲಿ ಡಿ.ಎಲ್‌.ಎನ್‌. ಸಮರ್ಥವಾಗಿ ಪೂರೈಸಿದ್ದಾರೆ.

ಕವಿಕಾವ್ಯ ವಿಚಾರ ಸಂಬಂಧಿಸಿದಂತೆ ಸುಮಾರು ೨೦ ಲೇಖನಗಳು ಅವರ ಹಳಗನ್ನಡ ವಿದ್ವತ್ತಿನ ಪ್ರಾತಿನಿಧಿಕ ಭಾಗಗಳೇ ಆಗಿವೆ. ಕವಿಯ ಜೀವನದ ಕಾಲ ನಿರ್ಣಯವನ್ನು ನಿರ್ಧರಿಸುವಲ್ಲಿ ಕಾವ್ಯಗಳ ಜೊತೆಗೆ ಶಾಸನೋಕ್ತ ಉಲ್ಲೇಖಗಳನ್ನು ನೀಡಿರುವುದು, ಕಾವ್ಯಕ್ಕೆ ಪ್ರೇರಣೆಯಾದ ಇತರ ಕೃತಿಗಳನ್ನು ಸೈದ್ಧಾಂತಿಕವಾಗಿ ಅಧ್ಯಯನ ಮಾಡಿರುವುದು, ಇವರ ವಿದ್ವತ್ತಿಗೆ ನಿದರ್ಶನಗಳಾಗಿವೆ. ಪೊನ್ನನೂ – ಕಾಳಿದಾಸನೂ, ಜನ್ನನೂ -ವಾದಿರಾಜನೂ ಎಂಬಂಥ ಲೇಖನಗಳು ಡಿ.ಎಲ್‌.ಎನ್‌. ಅವರಿಗಿದ್ದ ಸಂಸ್ಕೃತ ಹಾಗೂ ಕನ್ನಡ ಭಾಷೆಗಳ ಸವ್ಯಸಾಚಿ ಗುಣವನ್ನು ಪರಿಚಯಿಸುತ್ತವೆ. ಬಹುಶಃ ಇವರಿಂದ ಚರ್ಚೆಗೊಳಗಾದ ವಡ್ಡಾರಾಧನೆ, ಸಿದ್ಧರಾಮ, ಕುಮಾರರಾಮ ಸಾಂಗತ್ಯ, ದಾಸಿಮಯ್ಯನ ಪುರಾಣಗಳು ಮುಂದಿನವರೆಗೆ ಸಂಶೋಧನ ವಸ್ತುಗಳಾಗಿವೆ. ವಚನಕಾರರು, ರಗಳೆ ಕವಿಗಳ ಲೇಖನಗಳು ಆರಂಭಿಕ ಸಾಹಿತ್ಯ ಚರಿತ್ರೆಯ ಜಿಜ್ಞಾಸೆಯ ಒಳನೋಟವಾಗಿವೆ. ಈ ಮೂಲಕ ಡಿ.ಎಲ್‌.ಎನ್‌. ಅವರು ಕನ್ನಡ ವಿದ್ವತ್ತಕ್ಕೆ ಕಾಲಾನುಕ್ರಮಣಿಕೆಯ ಗಟ್ಟಿ ಬುನಾದಿ ಹಾಕಿದರು (ಈ ಸಂದರ್ಭದಲ್ಲಿ ಗೋವಿಂದ ಪೈ, ಆರ್‌. ನರಸಿಂಹಾಚಾರ್ಯ ಜ್ಞಾಪಕಕ್ಕೆ ಬರುತ್ತಾರೆ).

ಭಾಷೆಯ ಮೂಲ ದ್ರವ್ಯವಾದ ‘ಶಬ್ದ’ ಕುರಿತು ಪಂಡಿತ ಸೂರಿಗಳು ಹೆಚ್ಚು ಚಿಂತಿಸಿದ್ದಾರೆ. ರಾಚನಿಕ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಮೂಲಕ ಶಬ್ದಾರ್ಥ ಶೋಧನೆಗೆ ತೊಡಗಿದ್ದಾರೆ. ಅಂದರೆ ಒಂದು ಶಬ್ದದ ಹೊರಮೈ (ಶಬ್ದಾರ್ಥ) ಹಾಗೂ ಒಳಮೈ (ಭಾವರ್ಥ) ಕುರಿತು ಡಿ.ಎಲ್‌.ಎನ್‌. ಅವರ ಆಲೋಚನೆ ಪಾಂಡಿತ್ಯ ಪೂರ್ಣವಾದದ್ದು. ಅವರ ‘ಕನ್ನಡ ನಿರುಕ್ತ’ ಕುರಿತ ೨೪ ಲೇಖನಗಳು ಶಬ್ದಾರ್ಥ ನಿಷ್ಕರ್ಷೆಯಲ್ಲಿ ಅವರಿಗಿದ್ದ ಹಳಗನ್ನಡ ಸಾಹಿತ್ಯದ ಪ್ರಭುತ್ವವನ್ನು ಪರಿಚಯಿಸುತ್ತವೆ. ಉದಾಹರಣೆಗಾಗಿ ಕೆಲವನ್ನು ಇಲ್ಲಿ ನೋಡಬಹುದು.

‘ಪೊರಸು’ ಎಂಬ ಶಬ್ದದ ವಿಚಾರವಾಗಿ ಡಿ.ಎಲ್‌.ಎನ್‌. ಅವರು ವಡ್ಡಾರಾಧನೆ, ಸೂಕ್ತಿಸುದಾರ್ಣವ, ಪಂಪಭಾರತ, ಶಾಂತಿಪುರಾಣ, ಗದಾಯುದ್ಧ, ಪಂಚತಂತ್ರ, ಧರ್ಮಾಮೃತ, ಜಗನ್ನಾಥ ವಿಜಯ, ಯಶೋಧರ ಚರಿತೆ, ಸಮಯ ಪರೀಕ್ಷೆ, ಇತ್ಯಾದಿ ಹಳಗನ್ನಡ ಕಾವ್ಯಗಳಲ್ಲಿ ಈ ಪದ ಪ್ರಯೋಗವಾಗಿರುವುದನ್ನು ಕಲೆ ಹಾಕಿದ್ದಾರೆ. ರೇಫೆಯುಕ್ತವಾದ ‘ಪೊರಸು’ ಪದ ಪಾರಿವಾಳ ಎಂಬರ್ಥವನ್ನು, ಶಕಟರೇಫೆಯುಕ್ತವಾದ ‘ಪೊಱಸು’ ಪದ ಹಗ್ಗದಿಂದ ಮಾಡಿದ ಮಂಚ (ಹೊರಸು) ಎಂಬರ್ಥವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಪಾರಿವಾಳ ಹತ್ತನೇ ಶತಮಾನದಲ್ಲಿ ಅಪಶಕುನದ ಹಕ್ಕಿಯೆಂಬ ಜನ ನಂಬಿಕೆಗೆ ಕಾರಣವಾಗಿತ್ತೆಂದು ತಿಳಿಸುತ್ತಾರೆ.

‘ಬಾದುಬೆ’ ಎಂಬ ಶಬ್ದರ್ಥ ಕುರಿತಂತೆ ಕ್ರಿ. ಶ. ೮೭೨ರ ಅಮೋಘವರ್ಷನ ಖಾಜಿಪೇಟೆಯ ಶಾಸನದ ‘ಬಾದುಬ್ಬೆಯ ಪರ್ವ’ ಎಂಬ ಉಲ್ಲೇಖನವನ್ನೂ, ಕ್ರಿ. ಶ. ೧೦೧೯ರ ಕಂದಮರಸನ ಬಳ್ಳಿಗಾವೆಯ ಶಾಸನದ ‘ಬಾದುಂಬೆಯ ನಿಂ ಬಡಗಲ್‌’ ಕ್ರಿ. ಶ. ೧೦೮೫ರ ಕುರುಗೋಡು ಶಾಸನದ ‘….ಬಾದುಂಬೆಯ ನಿಂ ಬಡಗಣ’ ಎಂಬ ಉಲ್ಲೇಖಗಳ ಜೊತೆಗೆ ಸಮಯ ಪರೀಕ್ಷೆಯ‘….ಬಾದುಂಬೆಗೆ ಸಾವಿರವಂ’, ಶಾಸ್ತ್ರಸಾರ ಸಮುಚ್ಚಯದ ‘ಬನದಬ್ಬೆ ಬಳರಿ ಬಾದು ಮೆರೆನಿಸಂಬಲಿ….’ ಎಂಬ ಹೇಳಿಕೆಗಳನ್ನು ಆಧರಿಸಿ ‘ಬಾದುಬೆ’ ದೇವತೆಯ ಹೆಸರು. ಆ ದೇವತೆಗಾಗಿ ಬಿಟ್ಟು ಭೂದಾನಗಳು ‘ಬಾದುಂಬೆಯ ಪಾಳು’ ಎಂದು ಊಹಿಸುತ್ತಾರೆ. ಬದಾಮಿಯ ಬನಶಂಕರಿಯನ್ನು ಬನದಬ್ಬೆಯೆಂದು ಕರೆಯಲಾಗ್ತದೆ. ಬಾದುಬ್ಬೆ>ಬಾದುಂಬೆ>ಬಾದುಬೆ>ಬಾದುಮೆ>ಬಾದಾಮಿ ಎಂದು ಈ ಪದದ ಬೆಳವಣಿಗೆಯನ್ನು ವಿವೇಚಿಸುತ್ತಾರೆ. ಕರ್ನಾಟಕದಲ್ಲಿ ಕಾಳಿ, ಬಳಾರಿ, ಮಾರಿ, ಜಲದೇವತೆ ಇತ್ಯಾದಿ ದೇವತೆಗಳು ಇರುವುದನ್ನು ಮತ್ತು ಅವುಗಳ ಪೂಜಾ ಕ್ರಮವನ್ನು ಧರ್ಮಾಮೃತ ಕೃತಿಯಿಂದ ವಿಶ್ಲೇಷಿಸುತ್ತಾರೆ.

ಅದೇ ರೀತಿ ತ್ರಾಸು, ಅಗ್ರಹಾರ, ಕಾಳಸೆ, ರಪಣ>ರವಣ, ಗುಯ್ಯಲ್‌, ಮೇಕು, ತರ್ಕ್ಕೂಮೆ, ಇತ್ಯಾದಿ ಶಬ್ದಾರ್ಥ ವಿವೇಚನೆಯಲ್ಲಿ ಹಳಗನ್ನಡ ಕೃತಿಗಳ ಸಾದಾರಪೂರ್ವಕ ನಿದರ್ಶನಗಳಿಂದ ಅವುಗಳ ನಿಜದ ನೆಲೆಯನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ.

ಛಂದಸ್ಸು-ನಿಘಂಟು ಕ್ಷೇತ್ರದಲ್ಲಿ ಇವರ ವಿದ್ವತ್ತು ಅಸಾಧಾರಣವಾದದ್ದು, ಕೋಗಳಿನಾಡಿನ ಇಂದ್ರಕೀರ್ತಿ ಮುನೀಂದ್ರನೆಂಬ ಜೈನಮುನಿಯ ಪ್ರಶಂಸೆಯನ್ನು ಹೊತ್ತ ಕ್ರಿ. ಶ. ೧೦೫೫ರ ಶಾಸನದಲ್ಲಿ ‘ತೋಮರ ರಗಳೆ’ಯ ಉಲ್ಲೇಖವಿರುವುದು ತಿಳಿದು ಬರುತ್ತದೆ. ಅದರ ಲಕ್ಷಣ ಹಾಗೂ ಹೆಸರನ್ನು ಕುರಿತು ವಿವರಣೆಗೆ ತೊಡಗುವ ಡಿ.ಎಲ್‌.ಎನ್‌. ಅವರು ಇದು ಲಲಿತ ರಗಳೆಯ ಲಕ್ಷಣಕ್ಕನುಸಾರವಾಗಿದೆಂಬುದನ್ನು ಹೇಳುತ್ತಾ, ಪ್ರತಿಪಾದದ ೫ ಮಾತ್ರೆಗಳ ೪ ಗುಣಗಳೂ, ಎರಡೆರಡು ಪಾದಗಳಲ್ಲಿ ಆದಿ, ಅಂತ್ಯ ಪ್ರಾಸಗಳು ಇದೆ. ಆದರೆ ಶಾಸನದಲ್ಲಿ ಲಲಿತ ರಗಳೆಯ ಬದಲಿಗೆ ತೋಮರ ರಗಳೆ ಎಂದು ಕರೆದ ಉದ್ದೇಶವೇನೆಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಆ ಕುರಿತು ಈ ಶಾಸನದ ಕಾಲದಲ್ಲಿ ಲಲಿತ ರಗಳೆಯೆಂಬ ಪದ್ಯಜಾತಿ ಹೆಸರು ಇರಲಿಕ್ಕಿಲ್ಲವೆ? ಎಂದು ಯೋಚಿಸಿ, ತೋಮರ ರಗಳೆಯ ಅಸ್ತಿತ್ವ ಕುರಿತು ಚಿಂತಿಸುತ್ತಾರೆ. ಪ್ರಸ್ತುತ ತೋಮರ ರಗಳೆ ೫ ಮಾತ್ರೆಗಳಿಂದ ಕೂಡಿದೆ. ಛಂದೋ ಗ್ರಂಥಗಳಲ್ಲಿ ೩, ೪, ೫ ಇತ್ಯಾದಿ ಮಾತ್ರಾ ಗಣಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿದೆ. ವಿರಹಾಂತನ ‘ವೃತ್ತಿ ಜಾತಿ ಸಮುಚ್ಛಯ’ದಲ್ಲಿ ಪಂಚಕಲದ ನಾಮಾಂತರಗಳಾದ ಅಸಿ, ಅಶನಿ, ತೋಮರ, ಕನಕ, ಕರಪಾಲ, ಕ್ಷುರಪ್ರ, ಬಾಣ, ಚಾಣಾಸನ, ಧನಸ್‌, ಇತ್ಯಾದಿ ಆಯುಧಗಳ ಹೆಸರುಗಳು ಪಂಚ ಮಾತ್ರಾಗಣ ನಿರ್ದೇಶನಕ್ಕೆ ಪ್ರಯೋಗಗೊಂಡಿರುವುದನ್ನು ತಿಳಿಸಿ ‘ತೋಮರ’ವೆಂಬುದಕ್ಕೆ ಪಂಚ ಮಾತ್ರಾಗಣವೆಂತಲೂ, ಅದರ ವಿನ್ಯಾಸದಿಂದ ಕೂಡಿದ ರಗಳೆ ಪ್ರಕಾರಕ್ಕೆ ‘ತೋಮರ ರಗಳೆ’ ಎಂತಲೂ ಕರೆದಿರುವುದು ಉಚಿತವಾಗಿದೆ. ತೋಮರ ಎಂಬುವುದು ಒಂದು ವಾದ್ಯ ಪ್ರಕಾರವೆಂಬುದರ ಕಡೆಗೆ ವಿದ್ವಾಂಸರ ಗಮನವನ್ನು ಸೆಳೆದ ಮೊದಲಿಗರು.

ಇಷ್ಟೆಲ್ಲ ಹಳಗನ್ನಡ ವಿದ್ವತ್ತು ಇದ್ದಾಗಲೂ ಸಹಿತ ಅವರ ಬರಹಗಳಲ್ಲಿ ಕೆಲವು ಇತಿಮಿತಿಗಳಿವೆ. ಉದಾ: ಪಂಪರಾಮಾಯಣಕ್ಕೆ ಮೂಲ ವಿಮಲಸೂರಿಯ ರಾಮಾಯಣವೆಂದು ಅವರು ಹೇಳಿರುವುದು ಪುನರ್‌ಪರಿಶೀಲನೆಗೆ ಒಳಗಾಗಬೇಕಾಗಿದೆ. ಶಬ್ದಮಣಿ ದರ್ಪಣದ ಅವರ ಆವೃತ್ತಿಯು ಸಾಕಷ್ಟು ಪಾಠ ದೋಷಗಳಿಂದ ಕೂಡಿದೆ. ಉದಾಹರಣೆಗೆ ಗಮಕ ಸಮಾಸ, ಶಿಥಿದಿತ್ವ, ಕುರಿತ ಅವರು ಕೊಟ್ಟಿರುವ ಪಾಠಗಳು ತೃಪ್ತಿಕರವಾಗಿಲ್ಲ. ಏನಿದ್ದರೂ ನರಸಿಂಹಾಚಾರ್ಯರ ವಿದ್ವತ್ತು ಶಬ್ದಾರ್ಥ ವಿವೇಚನೆಗೆ ಮಾತ್ರ ಒಂದು ಖಚಿತ ರೂಪವನ್ನು ತಂದುಕೊಟ್ಟಿದೆ.

ಒಟ್ಟಿನಲ್ಲಿ ಡಿ.ಎಲ್‌.ಎನ್‌. ನರಸಿಂಹಾಚಾರ್ಯರ ಬರಹಗಳು ಪ್ರಾಚೀನ ಕನ್ನಡ ಸಾಹಿತ್ಯದ ಹಲವಾರು ಜಟಿಲ ಶಾಬ್ದಿಕ ಸಮಸ್ಯೆಗಳನ್ನು, ಕವಿಕಾವ್ಯ ವಿಚಾರಗಳನ್ನುತಲಸ್ಪರ್ಶಿಯಾಗಿ ವ್ಯಾಸಂಗ ಮಾಡಿ ಆ ಕ್ಷೇತ್ರದ ಎಲ್ಲೆಯನ್ನು ವಿಸ್ತರಿಸಿವೆ. ಈ ಮೂಲಕ ಡಿ.ಎಲ್‌.ಎನ್‌. ಅವರು ಹಳಗನ್ನಡ ಅಧ್ಯಯನಕ್ಕೆ ಹಲವು ಮಾದರಿಗಳನ್ನು ರೂಪಿಸಿದ್ದಾರೆ.