ಆಧುನಿಕಪೂರ್ವ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ಹಲವಾರು ಆಕರಗಳು ನೆರವಾಗುತ್ತವೆ. ಅಂಥವುಗಳಲ್ಲಿ ಭಾಷಾಸಾಮಗ್ರಿಗಳಾದ ಹಸ್ತಪ್ರತಿಗಳು ಪ್ರಮುಖವಾಗಿವೆ. ಇವುಗಳ ಸಂಗ್ರಹ, ಸೂಚೀಕರಣ, ಸಂಪಾದನೆ ಮತ್ತು ಅಧ್ಯಯನಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಹೀಗಿದ್ದರೂ ಇತ್ತೀಚಿನ ದಶಕಗಳಲ್ಲಿ ಇವುಗಳ ಅಧ್ಯಯನ ಕ್ರಮದಲ್ಲಿ ನೂತನ ಪ್ರಯೋಗಗಳು ನಡೆಯುತ್ತ ಬಂದಿರುವುದು ಗಮನಿಸತಕ್ಕ ಸಂಗತಿಯಾಗಿದೆ. ನಾಡಿನ ಮಠಮಾನ್ಯಗಳು, ಸಾರ್ವಜನಿಕ ಸಂಘಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಇವುಗಳ ಸಂಗ್ರಹಕ್ಕಾಗಿ ವ್ಯಾಪಕ ಯೋಜನೆಗಳನ್ನು ಹಾಕಿಕೊಂಡು ಕಾರ್ಯಗತಗೊಳಿಸಿವೆ. ವಿಶ್ವವಿದ್ಯಾಲಯಗಳಲ್ಲಿ ಇವುಗಳಿಗಾಗಿಯೇ ಸ್ವತಂತ್ರ ವಿಭಾಗಗಳನ್ನು ಸ್ಥಾಪಿಸಿದ ಉದಾಹರಣೆಗಳು ಭಾರತದಲ್ಲಿಯೇ ವಿರಳ. ಆದರೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಇದಕ್ಕಾಗಿಯೇ ಪ್ರತ್ಯೇಕವಾದ ವಿಭಾಗವೊಂದನ್ನು ಸ್ಥಾಪಿಸಿರುವುದು ಪ್ರಮುಖ ಅಂಶವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶೈಕ್ಷಣಿಕ ವಿಭಾಗಗಳಲ್ಲಿ ಒಂದಾದ “ಹಸ್ತಪ್ರತಿ ಶಾಸ್ತ್ರ ವಿಭಾಗ”ವು ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಹಸ್ತಪ್ರತಿ ಸವೇಕ್ಷಣೆ-ಸಂಗ್ರಹ, ಸೂಚೀಕರಣ, ಸಂಪಾದನೆ ಮತ್ತು ಅಧ್ಯಯನ- ಈ ನಾಲ್ಕು ನೆಲೆಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡುವುದರ ಮೂಲಕ ಕನ್ನಡಿಗರ ಪ್ರೀತಿಗೆ, ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿದೆ. ಹಸ್ತಪ್ರತಿಗಳ ಸರ್ವೇಕ್ಷಣೆ-ಸಂಗ್ರಹ ಎಂಬ ಸಾಂಸ್ಥಿಕ ಯೋಜನೆಯನ್ವಯ ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಬಾಗಲಕೋಟ ಮತ್ತು ಚಿತ್ರದುರ್ಗ ಜಿಲ್ಲೆಯಾದ್ಯಂತ ವ್ಯಾಪಕ ಕ್ಷೇತ್ರಕಾರ್ಯ ಕೈಕೊಂಡು ತಾಳೆಗರಿ, ಕೋರಿಕಾಗದ, ಕಡತ ಹಾಗೂ ಆಧುನಿಕ ಕಾಗದ ರೂಪದ ನಾಲ್ಕು ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿದುದು ಈ ವಿಭಾಗದ ಮಹತ್ವದ ಸಾಧನೆಯಾಗಿದೆ. ಸಂಗ್ರಹಿಸಿದ ಹಸ್ತಪ್ರತಿಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಶುದ್ಧೀಕರಿಸಿ ಸೂಚಿಯನ್ನು ಸಿದ್ಧಪಡಿಸುವುದು ಬಹುಮುಖ್ಯವಾದ ಕಾರ್ಯ. ಅಂಥ ಕಾರ್ಯವನ್ನು ಈ ವಿಭಾಗವು ಚಾಚುತಪ್ಪದೆ ಅನುಸರಿಸಿಕೊಂಡು ಬಂದಿದೆ. ಈಗಾಗಲೇ ಎರಡು ಸಂಪುಟಗಳಲ್ಲಿ ೮೦೦ ಕಟ್ಟುಗಳ ವಿವರಣಾತ್ಮಕ ಸೂಚಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಈ ಸಂಗ್ರಹದಿಂದಾಗಿ ವಚನ, ಸ್ವರವಚನ, ಸಾಂಗತ್ಯ, ಷಟ್ಪದಿ, ತಾರಾವಳಿ, ಲಾವಣಿ, ತತ್ವಪದ ಹೀಗೆ ಹಲವಾರು ರೂಪದ ಅಪ್ರಕಟಿತ ಕೃತಿಗಳು ಶೋಧಗೊಂಡಂತಾಗಿವೆ. ಅವುಗಳಲ್ಲಿ ಹೊಸಕುಮಾರನ ಸಾಂಗತ್ಯ, ಸಾಂಘಿಕಶಾಸ್ತ್ರ, ಹಿರಿಯಣ್ಣ ಕವಿಯ ಹಯರತ್ನಶ್ರೇಣಿ, ಚಿದಾನಂದಾವಧೂತ ಚಾರಿತ್ರ ಗಮನಾರ್ಹವಾದವುಗಳಾಗಿವೆ. ವಿಭಾಗದ ಸದಸ್ಯರು ವರ್ಷಕ್ಕೊಂದರಂತೆ ವೈಯಕ್ತಿಕ ಯೋಜನೆಯನ್ನು ಕೈಗೆತ್ತಿಕೊಂಡು ಪೂರೈಸುತ್ತಾರೆ. ಎಮ್ಮೆ ಬಸವನ ಕಾಲಜ್ಞಾನ ಸಾಹಿತ್ಯದ ಪರಿಷ್ಕರಣ, ಹಳೆಯ ಲಾವಣಿಗಳು, ಕನ್ನಡ ದಾಖಲು ಸಾಹಿತ್ಯ, ನಾಗಲಿಂಗನ ತತ್ವಪದಗಳು, ಕನ್ನಡ ಜೈನ ಹಾಡುಗಳು, ಕರಸ್ಥಲ ಸಾಹಿತ್ಯ, ಬಸವ ಯುಗದ ವಚನೇತರ ಸಾಹಿತ್ಯ, ಹಸ್ತಪ್ರತಿ ವ್ಯಾಸಂಗ ಸಂಪುಟಗಳಂಥ ವಿಶಿಷ್ಟ ಕೃತಿಗಳನ್ನು ಸಿದ್ಧಪಡಿಸಿ ಪ್ರಕಟಿಸಿರುವುದು ವಿಭಾಗದ ಮತ್ತೊಂದು ಸಾಧನೆಯಾಗಿದೆ. ಹಸ್ತಪ್ರತಿಗಳನ್ನು ಗಣಕೀಕರಣಗೊಳಿಸುವುದರ ಮೂಲಕ ಅವುಗಳ ಸಂರಕ್ಷಣೆಯಲ್ಲಿ ವಿನೂತನ ಕ್ರಮವನ್ನು ಅನುಸರಿಸಲಾಗಿತ್ತಿದೆ. ಅಲ್ಲದೆ ಒಂದು ಕೃತಿಗೆ ಸಂಬಂಧಿಸಿದ ಎಲ್ಲ ಹಸ್ತಪ್ರತಿಗಳ ಮಾಹಿತಿ ಒಂದೇ ಕಡೆಗೆ ಲಭ್ಯವಾಗುವಂತೆ ಹಸ್ತಪ್ರತಿ ಸೂಚಿಗಳ ಸೂಚಿಗಳು ಸಿದ್ಧಗೊಳ್ಳುತ್ತಿವೆ.

ಸಂಶೋಧನ ಯೋಜನೆಗಳ ಜೊತೆಗೆ ಹಸ್ತಪ್ರತಿಗಳ ಸ್ವರೂಪ, ಸಂರಕ್ಷಣೆ, ಅಧ್ಯಯನ ಮತ್ತು ಅವುಗಳನ್ನು ಓದುವ ಕ್ರಮದ ಬಗೆಗೆ ಪ್ರಾಯೋಗಿಕ ನೆಲೆಯಲ್ಲಿ ತರಬೇತಿ ನೀಡುವುದಕ್ಕಾಗಿ ನಾಡಿನ ಬೇರೆಬೇರೆ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಜನರಲ್ಲಿ ಇವುಗಳ ಬಗೆಗೆ ಜಾಗೃತಿಯನ್ನು ಮೂಡಿಸುವುದು, ಹಸ್ತಪ್ರತಿ ಗ್ರಂಥಸಂಪಾದನೆ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವುದು, ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಅಂಗವಾಗಿ ಹಸ್ತಪ್ರತಿಗಳ ಬಗೆಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ನೀಡಲು ಗ್ರಾಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಜೊತೆಗೆ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನವನ್ನು ಪ್ರತಿ ವರ್ಷ ಏರ್ಪಡಿಸಲಾಗುತ್ತದೆ. ತಜ್ಞರನ್ನು ಆಹ್ವಾನಿಸಿ ಹಸ್ತಪ್ರತಿ ಗ್ರಂಥಸಂಪಾದನೆಗೆ ಸಂಬಂಧಿಸಿದಂತೆ ಚರ್ಚೆ ಸಂವಾದಗಳ ಮೂಲಕ ಈ ಕ್ಷೇತ್ರವನ್ನು ವಿಸ್ತರಿಸುವುದು ಈ ಸಮ್ಮೇಳನದ ಬಹುಮುಖ್ಯ ಉದ್ದೇಶವಾಗಿದೆ. ಈಗಾಗಲೇ ಮಂಗಳೂರು, ಸಂಕೇಶ್ವರ, ಬಿಜಾಪುರಗಳಲ್ಲಿ ಇಂಥ ಸಮ್ಮೇಳನಗಳು ಯಶಸ್ವಿಯಾಗಿ ಜರುಗಿವೆ. ಹೀಗೆ ವಿಭಾಗವು ತನ್ನ ರಚನಾತ್ಮಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ಪತ್ರಾಗಾರ ಇಲಾಖೆ, ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಮೊದಲಾದ ಸಂಸ್ಥೆಗಳ ಮನ್ನಣೆಗೆ ಪಾತ್ರವಾಗಿದೆ. ವಿಶ್ವವಿದ್ಯಾಲಯ ಧನಸಾಹಯ ಆಯೋಗವು ಈ ವಿಭಾಗದ ಸಾಧನೆಯನ್ನು ಪರಿಗಣಿಸಿ ಹಸ್ತಪ್ರತಿ ಸಂರಕ್ಷಣೆಗಾಗಿ ಐದು ವರ್ಷಗಳಿಗೆ ಹತ್ತು ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿರುವುದು, ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಈ ವಿಭಾಗವನ್ನು “ಹಸ್ತಪ್ರತಿ ಸಂಪನ್ಮೂಲ ಕೇಂದ್ರ” ಎಂದು ಘೋಷಿಸಿ, ಉತ್ತರ ಕರ್ನಾಟಕದ ಹಸ್ತಪ್ರತಿಗಳ ಸಂಗ್ರಹ ಸಂರಕ್ಷಣೆ ಹಾಗೂ ಸೂಚಿರಚನೆ ಯೋಜನೆಗಾಗಿ ಮೂರು ವರ್ಷಗಳಿಗೆ ಹತ್ತು ಲಕ್ಷ ರೂಪಾಯಿಗಳ ಧನಸಹಾಯವನ್ನು ಮಂಜೂರು ಮಾಡಿರುವುದು ಹೆಮ್ಮೆಯ ಸಂಗತಿಗಳಾಗಿವೆ.

ಜಾಗತೀಕರಣದ ಈ ಹೊತ್ತಿನಲ್ಲಿ ಹಸ್ತಪ್ರತಿಗಳಂಥ ಪ್ರಾಚೀನ ಆಕರ ಸಾಮಗ್ರಿಗಳನ್ನು ಸಂಗ್ರಹಿಸುವ ಅಧ್ಯಯನಕ್ಕೊಳಪಡಿಸುವ ಅಗತ್ಯತೆ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಅಕಾಡೆಮಿಕ್ ವಲಯದಲ್ಲಿ ಎದ್ದಿದೆ. ಈ ಪ್ರಶ್ನೆಗೆ ಉತ್ತರವೆಂಬಂತೆ ಹಸ್ತಪ್ರತಿಶಾಸ್ತ್ರ ವಿಭಾಗವು ವೈಚಾರಿಕ ನೆಲೆಯಲ್ಲಿ ತನ್ನದೇ ವಿಧಾನಗಳನ್ನು ರೂಪಿಸಿಕೊಂಡು ಮುನ್ನಡೆದಿದೆ. ಈ ವಿಧಾನಗಳ ಅಡಿಯಲ್ಲಿ ಹಸ್ತಪ್ರತಿಗಳನ್ನು ಆಂತರಿಕ ಮತ್ತು ಬಾಹ್ಯ ನೆಲೆಯಲ್ಲಿ ಚರ್ಚಿಸಲಾಗುತ್ತದೆ. ಇಂಥ ಚರ್ಚೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಜವಾಬ್ದಾರಿಯನ್ನೂ ಈ ವಿಭಾಗವು ನಿರ್ವಹಿಸುತ್ತಿದೆ. ಈಗಾಗಲೇ “ಹಸ್ತಪ್ರತಿಶಾಸ್ತ್ರ ವಿಭಾಗ ಮಾಲೆ”ಯ ಮೂಲಕ ವೈವಿಧ್ಯಮಯವಾದ ಹತ್ತೊಂಬತ್ತು ಪುಸ್ತಕಗಳನ್ನು ಹೊರತರಲಾಗಿದೆ. ಈಗ ಈ ಮಾಲೆಯ ಇಪ್ಪತ್ತನೆಯ ಪುಸ್ತಕವಾಗಿ ಪ್ರಕಟಗೊಳ್ಳುತ್ತಿದೆ. “ಡಿ.ಎಲ್. ನರಸಿಂಹಾಚಾರ್ ಶತಮಾನ ಸ್ಮರಣೆ”.

ಕನ್ನಡ ವಿದ್ವತ್ ಲೋಕದಲ್ಲಿ ಡಿ.ಎಲ್. ನರಸಿಂಹಾಚಾರ್ ಹೆಸರು ತುಂಬ ಪರಿಚಿತ. ಗ್ರಂಥ ಸಂಪಾದನೆ, ವ್ಯಾಕರಣ, ಛಂದಸ್ಸು, ನಿಘಂಟು ಮುಂತಾದ ಸಂಶೋಧನ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಗೆ ಕನ್ನಡ ಗ್ರಂಥ ಸಂಪಾದನೆ, ಪೀಠಿಕೆಗಳು ಲೇಖನಗಳು, ಹಂಪೆಯ ಹರಿಹರ, ವಡ್ಡಾರಾಧನೆ, ಪಂಪರಾಮಾಯಣ ಕೃತಿಗಳು ನಿದರ್ಶನವಾಗಿವೆ. ಇಂಥ ಅಪರೂಪದ ವಿದ್ವಾಂಸರಾಗಿದ್ದ ಡಿ.ಎಲ್.ಎನ್. ಅವರು ಜನಿಸಿ ಒಂದು ಶತಮಾನಗಳಾಗುತ್ತಲಿದೆ. ಈ ಜನ್ಮಶತಮಾನೋತ್ಸವವನ್ನು ‘ಡಿ.ಎಲ್. ನರಸಿಂಹಾಚಾರ್ ಶತಮಾನ ಸ್ಮರಣೆ’ ಹೆಸರಿನ ವಿಶಿಷ್ಟ ಸಂಪುಟವನ್ನು ಪ್ರಕಟಿಸುವುದರ ಮೂಲಕ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ತನ್ನ ಗೌರವವನ್ನು ಸಲ್ಲಿಸುತ್ತದೆ.

ಡಾ. ಎಫ್.ಟಿ. ಹಳ್ಳಿಕೇರಿ
ಮುಖ್ಯಸ್ಥರು