ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ಸುಮಾರು ೩೦೦ ವರ್ಷಗಳ ಚರಿತ್ರೆಯಿದೆ. ‘ಗ್ರಂಥ ಸಂಪಾದನೆ’ ಎಂಬುದು ‘Textual Criticism’ ಎಂಬ ಆಂಗ್ಲ ಪದದ ಸಂವಾದಿ ರೂಪ. ಈ ಪ್ರಕ್ರಿಯೆ ಕನ್ನಡದಲ್ಲಿ ಆರಂಭವಾದದ್ದು ಪಾಶ್ಚಿಮಾತ್ಯ ವಿದ್ವಾಂಸರಿಂದ. ೧೯ನೆಯ ಶತಮಾನದಲ್ಲಿ ಕನ್ನಡ ಗ್ರಂಥ ಸಂಪಾದನೆಗೆ ಶ್ರಮಿಸಿದವರಲ್ಲಿ ಕರ್ನಲ್‌ಮೆಕೆಂಝಿ, ಹರ್ಮನ್‌ಪೊಗ್ಲಿಂಗ್‌, ‘ವರ್ಥ್‌’ ಸ್ಯಾಂಡರ್ಸನ್‌, ಜಿ. ಸ್ಟೀವನ್‌ಸನ್‌,ಎಫ್‌. ಕಿಟೆಲ್‌ಮತ್ತು ಬಿ. ಎಲ್‌. ರೈಸ್‌ಪ್ರಮುಖರಾಗಿದ್ದಾರೆ. ಇವರಲ್ಲಿ ಮೆಕೆಂಝಿಯವರು ಈ ಕ್ಷೇತ್ರದ ಆದ್ಯರು. ೧೭೮೩ರಲ್ಲಿ ಸ್ಕಾಟ್‌ಲ್ಯಾಂಡ್‌ನಿಂದ ಭಾರತಕ್ಕೆ ಬಂದ ಇವರು ಕನ್ನಡದ ಸುಮಾರು ೬೦೦ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳ ಸೂಚಿ ತಯಾರಿಸಿದರು.

೧೮೪೮ರಲ್ಲಿ ಮೊಗ್ಲಿಂಗ್‌ ಅವರು ‘ಬಿಬ್ಲಿಯೋಥಿಕಾ ಕರ್ನಾಟಕಾ’ ಮಾಲಿಕೆಯಲ್ಲಿ ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ಪಂಪ ರಾಮಾಯಣ, ಹರಿಭಕ್ತಸಾರ, ದಾಸರ ಕೀರ್ತನೆಗಳು ಮೊದಲಾದ ಕೃತಿಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ೧೮೬೮ ರಲ್ಲಿ ವರ್ಥ್‌ ‘ಪ್ರಾಕ್ಕಾವ್ಯಮಾಲಿಕೆ’ ಎಂಬ ಗ್ರಂಥವನ್ನು ಹೊರತಂದರು. ಜಾನ್‌ಗ್ಯಾರೆಟ್‌ ಶಬ್ದಮಣಿದರ್ಪಣವನ್ನು ಪ್ರಕಟಿಸಿದರು.

ಕನ್ನಡದಲ್ಲಿ ಶಾಸ್ತ್ರೀಯ ಗ್ರಂಥ ಸಂಪಾದನೆ ಆರಂಭವಾದದ್ದು ಕಿಟೆಲ್‌ಅವರಿಂದ. ೧೮೭೨ ರಲ್ಲಿ ಅವರು ಒಂಭತ್ತು ಹಸ್ತಪ್ರತಿಗಳ ನೆರವಿನಿಂದ ಶಬ್ದಮಣಿದರ್ಪಣವನ್ನು ಪ್ರಕಟಿಸಿದರು. ಹಾಗೆಯೇ ಹದಿನಾಲ್ಕು ಹಸ್ತಪ್ರತಿಗಳ ಸಹಾಯದಿಂದ ನಾಗವರ್ಮನ ಛಂದೋಬುಧಿಯನ್ನು ಪ್ರಕಟಿಸಿದರು. ಇಂದಿಗೂ ಕನ್ನಡ ಗ್ರಂಥ ಸಂಪಾದನಾ ಪ್ರಕ್ರಿಯೆಯು ಕಿಟೆಲ್‌ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುತ್ತಿದೆ. ಅಂತೆಯೇ ಅವರನ್ನು ಕನ್ನಡ ಗ್ರಂಥ ಸಂಪಾದನೆಯ ಪಿತಾಮಹ ಎಂದು ಗೌರವಿಸಲಾಗುತ್ತದೆ. ಬಿ. ಎಲ್‌. ರೈಸ್‌ಅವರೂ ಈ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಈ ವಿದೇಶೀ ವಿದ್ವಾಂಸರಿಂದ ಪ್ರೇರಿತರಾದ ಎಸ್‌. ಜಿ. ನರಸಿಂಹಾಚಾರ್ಯ, ಎಂ.ಎ. ರಾಮಾನುಜಯ್ಯಂಗಾರ್‌, ಎಂ. ವೆಂಕಟರಾವ್‌, ಹೆಚ್‌. ಶೇಷಯ್ಯಂಗಾರ್‌, ಚನ್ನಕೇಶವಯ್ಯಂಗಾರ್‌, ಫ. ಗು. ಹಳಕಟ್ಟಿ, ಶಿ. ಶಿ. ಬಸವನಾಳ, ಶಿ. ಚೆ. ನಂದಿಮಠ, ಎ. ಆರ್‌. ಕೃಷ್ಣಶಾಸ್ತ್ರಿ, ಟಿ. ಎಸ್‌. ವೆಂಕಣ್ಣಯ್ಯ, ಎಂ. ಆರ್‌. ಶ್ರೀ ಮೊದಲಾದ ವಿದ್ವಾಂಸರು ಈ ಕ್ಷೇತ್ರದಲ್ಲಿ ಧುಮುಕಿ ನೂರಾರು ಹಳೆಯ ಕೃತಿಗಳನ್ನು ಉಳಿಸಿಕೊಟ್ಟಿದ್ದಾರೆ.

ಈ ಪೀಳಿಗೆಯ ಸಮರ್ಥ ಮುಂದುವರಿಕೆ ಡಿ. ಎಲ್‌. ನರಸಿಂಹಾಚಾರ್‌ಅವರು. ಗ್ರಂಥ ಸಂಪಾದನೆಗೆ ವೈಜ್ಞಾನಿಕ ತಳಹದಿಯನ್ನು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಸಕಲ ವೈದ್ಯ ಸಂಹಿತ ಸಾರಾರ್ಣವ (೧೯೩೨), ಸಿದ್ಧರಾಮ ಚಾರಿತ್ರ (೧೯೪೧), ವಡ್ಡಾರಾಧನೆ (೧೯೪೯), ಭೀಷ್ಮಪರ್ವ (೧೯೫೦), ಸುಕುಮಾರ ಚರಿತಂ (೧೯೫೪), ಗೋವಿನ ಹಾಡು (೧೯೬೦), ಶಬ್ದಮಣಿದರ್ಪಣ (೧೯೬೪) ಎಂಬ ಏಳು ಗ್ರಂಥಗಳನ್ನು ಅವರು ಪರಿಷ್ಕರಿಸಿದ್ದಾರೆ. ಇವುಗಳಲ್ಲಿ ‘ವಡ್ಡಾರಾಧನೆ’ ಮತ್ತು ‘ಶಬ್ದಮಣಿದರ್ಪಣ’ ಕೃತಿಗಳು ಡಿ.ಎಲ್‌.ಎನ್‌. ಅವರ ಪ್ರತಿಭೆ ಪರಿಶ್ರಮಗಳನ್ನು ಕನ್ನಡ ವಿದ್ವತ್ಪ್ರಪಂಚಕ್ಕೆ ಪರಿಚಯಿಸಿ ಕೊಟ್ಟಿವೆ. ಪ್ರಸ್ತುತ ಡಿ.ಎಲ್‌.ಎನ್‌. ಸಂಪಾದಿತ ವಡ್ಡಾರಾಧನೆಯ ಮೂಲಕ ಅವರ ಸಂಪಾದನಾ ಕಾರ್ಯದ ವೈಶಿಷ್ಟ್ಯಗಳನ್ನು ಗುರುತಿಸುವುದು ಪ್ರಸ್ತುತ ಪ್ರಬಂಧದ ಮುಖ್ಯ ಆಶಯವಾಗಿದೆ.

ವಡ್ಡಾರಾಧನೆಯ ಹೆಸರನ್ನೆತ್ತಿದ ತಕ್ಷಣ ನೆನಪಿಗೆ ಬರುವ ಇನ್ನೊಂದು ಹೆಸರು ಡಿ.ಎಲ್‌.ಎನ್‌. ಆ ಅಪರೂಪದ ಗ್ರಂಥವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ದೊರಕಿಸಿಕೊಟ್ಟ ಶ್ರೇಯಸ್ಸು ಡಿ.ಎಲ್‌.ಎನ್‌. ಅವರಿಗೆ ಸಲ್ಲಬೇಕು. ಇದೀಗ ಡಿ.ಎಲ್‌.ಎನ್‌. ಅವರ ಜನ್ಮ ಶತಮಾನೋತ್ಸವದ ಆಚರಣೆಯ ಸಂದರ್ಭವಾಗಿದ್ದು, ತನ್ನಿಮಿತ್ತ ಅವರ ಒಟ್ಟು ಸಾಹಿತ್ಯ ಸಾಧನೆಯ ಅವಲೋಕನಗೈಯ್ಯುವುದು ಅಗತ್ಯವೂ, ಔಚಿತ್ಯಪೂರ್ಣವೂ ಆಗಿದೆ.

೧೯೩೧, ವಾಸ್ತವವಾಗಿ ಡಿ.ಎಲ್‌.ಎನ್‌. ವಡ್ಡಾರಾಧನೆಯ ಗ್ರಂಥ ಸಂಪಾದನಾ ರಂಗವನ್ನು ಪ್ರವೇಶಿಸಿದ ವರ್ಷ. ಕರ್ನಾಟಕ ಸಾಹಿತ್ಯ ಪರಿಷತ್‌ ಪತ್ರಿಕೆಯಲ್ಲಿ ವಡ್ಡಾರಾಧನೆಯ ಗ್ರಂಥ ಸಂಪಾದನಾ ಪ್ರಕ್ರಿಯೆಯನ್ನು ಭಾಗಶಃ ಉದ್ಘಾಟಿಸಿದ್ದರು. ಬೆಳ್ಳಾವೆ ವೆಂಕಟ ನಾರಾಯಣಪ್ಪ ಆಗ ಆ ಪತ್ರಿಕೆಯ ಸಂಪಾದಕರಾಗಿದ್ದರು. ಡಿ.ಎಲ್‌.ಎನ್‌. ಆ ಸಂದರ್ಭದಲ್ಲಿ ಬಳಸಿದ್ದು ಒಂದೇ ಒಂದು ಪ್ರತಿ. ಕೇವಲ ಒಂದು ಪ್ರತಿಯ ಆಧಾರದಿಂದ ಗ್ರಂಥ ಸಂಪಾದನಾ ಕಾರ್ಯ ಪರಿಪೂರ್ಣವಾಗುವುದಿಲ್ಲವೆಂಬ ಪ್ರಜ್ಞೆಯೊಂದಿಗೇ ಅವರು ಮಾದರಿಗಾಗಿ ಮೂರು ಕಥೆಗಳನ್ನು ಮಾತ್ರ ಪರಿಷ್ಕರಿಸಿ ಪ್ರಕಟಿಸಿದ್ದರು. ಕಾಲಾನುಕ್ರಮದಲ್ಲಿ ವಡ್ಡಾರಾಧನೆಯ ಐದಾರು ಪ್ರತಿಗಳು ಲಭಿಸಿದ್ದು, ಅವುಗಳ ನೆರವಿನಿಂದ ಡಿ.ಎಲ್‌.ಎನ್‌. ಈ ಗ್ರಂಥವನ್ನು ೧೯೪೯ ರಲ್ಲಿ ಇಡಿಯಾಗಿ ಪ್ರಕಟಿಸಿದ್ದಾರೆ.

ವಡ್ಡಾರಾಧನೆಯ ಮೂಲ ಪ್ರತಿಗಳು, ಕರ್ತೃ, ಕಾಲ, ಕಥೆಗಳ ಮೂಲ ಮತ್ತು ಬೆಳವಣಿಗೆ, ಶೈಲಿ, ಭಾಷೆ, ಕಾವ್ಯವಿಮರ್ಶೆ, ಶಬ್ದಕೋಶ, ಟಿಪ್ಪಣಿ ಮೊದಲಾದ ವಿಷಯಗಳನ್ನೊಳಗೊಂಡ ವಿವರವಾದ ಪೀಠಿಕೆಯನ್ನು ಮೊದಲ ಮುದ್ರಣದಲ್ಲೇ ಕೊಡುವ ಸಂಕಲ್ಪ ತಮ್ಮದಾಗಿದ್ದರೂ ಅದು ಸಾಧ್ಯವಾಗಲಿಲ್ಲವೆಂಬುದನ್ನು ಡಿ.ಎಲ್‌.ಎನ್‌. ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. “…..ಆದರೂ ಪೀಠಿಕೆಯನ್ನು ಬರೆಯುವುದು ಇದುವರೆಗೆ ಸಾಧ್ಯವಾಗಿಲ್ಲ. ಮುಂದಿನ ಮುದ್ರಣದ ಹೊತ್ತಿಗೆ ಅದು ಸಿದ್ಧವಾಗುವುದೆಂಬ ಭರವಸೆ ಇದೆ. ಡಾ. ಎ. ಎನ್‌. ಉಪಾಧ್ಯೆ ಇವರು ತಮ್ಮಿಂದ ಸಂಪಾದಿತವಾದ ಹರಿಷೇಣ ಬೃಹತ್ಕಥಾಕೋಶಕ್ಕೆ ಬರೆದಿರುವ ಪ್ರೌಢವೂ, ಪರಿಪೂರ್ಣವೂ ಆದ ಪ್ರಸ್ತಾವನೆಯನ್ನು ಎಲ್ಲರೂ ಅವಲೋಕಿಸಬಹುದು”

[1] ಎಂಬ ಸೂಚನೆಯನ್ನು ಕೊಟ್ಟಿದ್ದಾರೆ.

ಕೃತಿ ಪ್ರಕಟಣೆಗಾಗಿ (ಮೊದಲ ಮುದ್ರಣ-೧೯೪೯) ತಮಗೆ ಮೂರು ಪ್ರತಿಗಳನ್ನು ದೊರಕಿಸಿಕೊಟ್ಟ ಸರಾಫ್‌ಪದ್ಮರಾಜಯ್ಯನವರನ್ನು, ಉಳಿದ ಪ್ರತಿಗಳನ್ನು ಬಳಸಿಕೊಳ್ಳಲು ಅವಕಾಶವನ್ನಿತ್ತ ಕನ್ನಡ ಸಾಹಿತ್ಯ ಪರಿಷತ್ತಿನವರನ್ನು ಅಚ್ಚಿನ ಕರುಡಗಳನ್ನು ತಿದ್ದಿದ ತಮ್ಮ ವಿದ್ಯಾಗುರುಗಳಾಗಿದ್ದ ಬಿ. ಎಂ. ಶ್ರೀ ಅವರನ್ನು, ಅನೇಕ ಸಲಹೆ-ಸೂಚನೆಗಳನ್ನು ನೀಡಿದ ಡಾ. ಆ. ನೇ. ಉಪಾಧ್ಯೆ ಅವರನ್ನು ಡಿ.ಎಲ್‌.ಎನ್‌. ಭಕ್ತಿ-ಗೌರವದೊಂದಿಗೆ ಸ್ಮರಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಗ್ರಂಥವನ್ನು ಎರಡು ಪದ್ಯಗಳ ಮೂಲಕ ಬಿ. ಎಂ. ಶ್ರೀ. ಅವರಿಗೆ ಅರ್ಪಿಸಿದ್ದಾರೆ. ತಮ್ಮ ಕೃತಿಗೆ ಕೊಟ್ಟಿರುವ ಹೆಸರು “ಶಿವಕೋಟ್ಯಚಾರ್ಯ ವಿರಚಿತ ವಡ್ಡಾರಾಧನೆ” ಎಂಬುದು.

೧೯೭೯ ರಲ್ಲಿ ಪ್ರಸ್ತುತ ಗ್ರಂಥವು ನಾಲ್ಕನೆಯ ಮುದ್ರಣವನ್ನು ಕಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾಭ್ಯಾಸ ಇಲಾಖೆ, ಕನ್ನಡ ನಾಡಿನ ವಿಶ್ವವಿದ್ಯಾಲಯಗಳು ಈ ಗ್ರಂಥವನ್ನು ವಿವಿಧ ಪರೀಕ್ಷೆಗಳಿಗೆ ಪಠ್ಯ ಪುಸ್ತಕವನ್ನಾಗಿ ಗೊತ್ತು ಮಾಡಿದ ಕಾರಣ ಇದು ಮತ್ತೆ ಮತ್ತೆ ಮರು ಮುದ್ರಣಗಳನ್ನು ಕಂಡಿತು. ನಾಲ್ಕನೆಯ ಮುದ್ರಣದಲ್ಲೂ ಕೃತಿಗೆ ಪೀಠಿಕೆ ಬರೆಯುವುದು ಡಿ.ಎಲ್‌.ಎನ್‌. ಅವರಿಗೆ ಸಾಧ್ಯವಾಗಿಲ್ಲ. ಆ ಬಗ್ಗೆ ಅವರು ಹೀಗೆ ತಿಳಿಸಿದ್ದಾರೆ. “ಗ್ರಂಥ ಪುನರ್ಮುದ್ರಣದ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಇದಕ್ಕೆ ವಿಸ್ತಾರವಾದ ಟಿಪ್ಪಣಿಗಳನ್ನು ಉಪಯುಕ್ತವಾದ ಅನುಬಂಧಗಳನ್ನು ಸೇರಿಸಿದೆ. ಪೀಠಿಕೆ ಮಾತ್ರ ಅಸಂಪೂರ್ಣವಾಗಿಯೇ ಉಳಿದಿದೆ. ಗ್ರಂಥ ವಿಮರ್ಶೆ, ವಡ್ಡಾರಾಧನೆಯ ಶೈಲಿಯ ಸ್ವರೂಪ, ಗ್ರಂಥದಲ್ಲಿ ಕಂಡುಬರುವ ಸಾಮಾಜಿಕ ಜೀವನ ಇವೇ ಮೊದಲಾದ ವಿಷಯಗಳನ್ನು ಪೀಠಿಕೆಯಲ್ಲಿ ಸೇರಿಸಬೇಕೆಂಬ ಆಸೆ ಕೈಗೂಡಲಿಲ್ಲ. ಗ್ರಂಥಕ್ಕೆ ಇನ್ನೊಂದು ಮುದ್ರಣದ ಅವಕಾಶ ದೊರಕಿದರೆ ಮೇಲೆ ಹೇಳಿದ ಅಂಶಗಳನ್ನು ಸೇರಿಸಿ ಗ್ರಂಥವನ್ನು ಸಮಗ್ರಗೊಳಿಸುವ ಭರವಸೆ ಇದೆ.”[2]

೧೯೭೮ ರಲ್ಲಿ ಹೊರಬಂದ ಆರನೆಯ ಮುದ್ರಣ ಈ ಕೊರತೆಯನ್ನು ನೀಗಿಸಿದೆ. ೩೫ ಪುಟಗಳಷ್ಟು ಸುದೀರ್ಘವಾದ ಪೀಠಿಕಾ ಭಾಗವು ಅದರಲ್ಲಿ ಸೇರಿಕೊಂಡಿದೆ. ಹಸ್ತಪ್ರತಿಗಳು, ಹಸ್ತಪ್ರತಿಗಳ ಪರಸ್ಪರ ಸಂಬಂಧ, ಗ್ರಂಥದ ಹೆಸರು, ಕರ್ತೃತ್ವ ವಿಚಾರ, ಕಾಲ, ದೇಶ, ಹಿನ್ನಲೆ ಮೊದಲಾದ ವಿಷಯಗಳನ್ನು ಆರನೆಯ ಮುದ್ರಣದಲ್ಲಿ ಅಳವಡಿಸಿಕೊಳ್ಳಲಾಗಿದೆ.

ವಾಸ್ತವವಾಗಿ ಒಂದು ಸಂಪಾದಿತ ಕೃತಿಗೆ ಪೀಠಿಕೆಗಳೇ ಕೀಲಿ ಕೈಗಳಾಗಿರುತ್ತವೆ. ಸಂಪಾದಿತ ಕೃತಿಯ ಯಶಸ್ಸನ್ನು ನಿರ್ಧರಿಸುವಲ್ಲಿ ಪೀಠಿಕಾ ಭಾಗವು ತುಂಬ ಮಹತ್ವದ ಪಾತ್ರವಹಿಸುತ್ತದೆ. ಈ ದೃಷ್ಟಿಯಿಂದ ವಡ್ಡಾರಾಧನೆಗೆ ಬರೆದಿರುವ ಡಿ.ಎಲ್‌.ಎನ್‌. ಲೇಖನವು ಪೀಠಿಕೆಗಳ ಪೀಠಿಕೆಯಾಗಿದೆಯೆನ್ನಬಹುದು. ತರುವಾಯದ ಗ್ರಂಥ ಸಂಪಾದನಕಾರರಿಗೆ ಇಂದಿಗೂ ಅದೇ ಒಂದು ಮಾದರಿಯಾಗಿದೆ. ಆ ಪೀಠಿಕೆಯ ಮೂಲಕ ಗ್ರಂಥ ಸಂಪಾದನಾ ಕಾರ್ಯದ ವಿಧಿ-ವಿಧಾನಗಳೆಲ್ಲವೂ ಪ್ರಕಟವಾಗಿವೆ. ಗ್ರಂಥ ಸಂಪಾದನೆಯೆಂಬುದು ಒಂದು ಬೌದ್ಧಿಕ ಸಮರವಿದ್ಧ ಹಾಗೆ. ಅದಕ್ಕೆ ಸಾಕಷ್ಟು ಆತ್ಮಸ್ಥೈರ್ಯ, ತರಬೇತಿ, ಸಿದ್ಧತೆ ಬೇಕಾಗುತ್ತದೆ. ಡಿ.ಎಲ್‌.ಎನ್‌. ಅವರ ವಡ್ಡಾರಾಧನೆಯ ಪೀಠಿಕೆಯಲ್ಲಿ ಸಮರ ಪೂರ್ವದ ಸಿದ್ಧತೆಯ ಸೂಚನೆಗಳೂ ಇವೆ! ಸಮರೋತ್ತರ ವಿಜಯೋತ್ಸವದ ಸೂಚನೆಗಳೂ ಇವೆ. ಪೀಠಿಕೆಯಲ್ಲಿ ಬಂದಿರುವ ಕೆಲವು ಮಹತ್ವದ ಅಂಶಗಳ ಹಿನ್ನೆಲೆಯಲ್ಲಿ ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ವಡ್ಡಾರಾಧನೆ ಕೃತಿಯ ಗ್ರಂಥ ಸಂಪಾದನಾ ಕಾರ್ಯಕ್ಕೆ ತಾವು ಅಣಿಯಾದ ಬಗೆಯನ್ನು ತಿಳಿಸುವುದರೊಂದಿಗೆ ಡಿ.ಎಲ್‌.ಎನ್‌. ತಮ್ಮ ಕೃತಿಯ ಪೀಠಿಕೆಯನ್ನು ಆರಂಭಿಸಿದ್ದಾರೆ. ಆ ವಿವರ ತುಂಬ ಕುತೂಹಲಕಾರಿಯಾಗಿದೆ. ಒಂದು ಗ್ರಂಥದ ಚರಿತ್ರೆ ಎಲ್ಲಿಂದ ಆರಂಭವಾಗಿ ಎಲ್ಲಿಗೆ ಬಂದು ನಿಲ್ಲುತ್ತದೆಯೆಂಬುದನ್ನು ತಿಳಿಯುವಲ್ಲಿ ಅದು ಸಹಕಾರಿಯಾಗಿದೆ.

೧೯೩೦, ಡಿ.ಎಲ್‌.ಎನ್‌. ಮೈಸೂರಿನ ಓರಿಯಂಟಲ್‌ಲೈಬ್ರರಿಯಲ್ಲಿ ಸೇವೆಗೆ ಸೇರಿದ ಕಾಲ. ಒಂದು ವೈದ್ಯಗ್ರಂಥವನ್ನು ಸಂಪಾದಿಸುವ ಕೆಲಸ ಡಿ.ಎಲ್‌.ಎನ್‌. ಅವರದಾಗಿದ್ದಿತು. ವಿರಾಮಕಾಲದಲ್ಲಿ ಕರ್ನಾಟಕ ಕವಿಚರಿತೆಯಲ್ಲಿ ಉಕ್ತವಾಗದಿರುವ ಗ್ರಂಥಗಳು ಯಾವುದಾದರೂ ಇವೆಯೇ ಎಂಬ ಕುತೂಹಲದೊಂದಿಗೆ ಆ ಲೈಬ್ರರಿಯ ಕನ್ನಡ ಹಸ್ತಪ್ರತಿಗಳ ಪಟ್ಟಿಯನ್ನು ನೋಡುತ್ತಿರುವಾಗ ೧೯೨೨ ರಿಂದ ೧೯೨೯ ರವರೆಗೆ ಸಂಗ್ರಹಿಸಲಾದ ಕೈ ಬರಹದ ಕನ್ನಡ ಪುಸ್ತಕಗಳ ಪಟ್ಟಿಯೊಂದು (೧೯೩೦ರಲ್ಲಿ ಅಚ್ಚಾದುದು) ಡಿ.ಎಲ್‌.ಎನ್‌. ಅವರ ಕಣ್ಣಿಗೆ ಬಿದ್ದಿತಂತೆ. ತೆರೆದು ನೋಡಿದಾಗ ಅದರ ೨೦ನೆಯ ಪುಟದಲ್ಲಿ “ವೊಡ್ಡಾರಾಧಣಂ” ಎಂಬ ಗ್ರಂಥದ ವಿವರಗಳಿದ್ದವು. ಅದನ್ನು ಡಿ.ಎಲ್‌.ಎನ್‌. ಹೀಗೆ ತಿಳಿಸಿದ್ದಾರೆ, “ಇದರ ನಂಬರು ಕೆ-೪೧೫. ಇದರ ಕವಿಯ ಹೆಸರು ಉಕ್ತವಾಗಿಲ್ಲ. ಇದು ವಾ. ಷ. ಎಂದರೆ ವಾರ್ಧಕ ಷಟ್ಪದಿಯಲ್ಲಿ ರಚಿತವಾದುದೆಂದು ಅಲ್ಲಿ ಹೇಳಿದೆ. ಗ್ರಂಥದ ಹೆಸರು ವಿಚಿತ್ರವಾಗಿ ಕಂಡಿತು. ಇದು ಯಾವುದೋ ಸ್ತೋತ್ರ ಗ್ರಂಥವಿರಬಹುದೆಂದು ಮನದಲ್ಲಿ ಒಂದು ತೆರನಾದ ಔದಾಸೀನ್ಯ ತಲೆದೋರಿದರೂ ನೋಡಿಯೇ ಬಿಡೋಣವೆಂದು ಆ ಗ್ರಂಥವನ್ನು ತರಿಸಿ ಅದರ ಓಲೆಗಳನ್ನು ತಿರುವಿ ಹಾಕಿದಾಗ ಅಲ್ಲಿನ ಗದ್ಯಶೈಲಿ ನನ್ನನ್ನು ಆಕರ್ಷಿಸಿತು. ಇಷ್ಟು ಒಳ್ಳೆಯ ಗದ್ಯ ಹಳೆಗನ್ನಡದಲ್ಲಿ ರಚಿತವಾಗಿರುವುದನ್ನು ಕಂಡು ನನಗೆ ಮಿಗಿಲಾದ ಸಂತೋಷವೂ. ಆಶ್ಚರ್ಯವೂ ಉಂಟಾದವು. ಕೂಡಲೇ ಆ ಗ್ರಂಥವನ್ನು ಓದಿ ನನಗೆ ಬೇಕಾದ ಟಿಪ್ಪಣಿಗಳನ್ನು ಬರೆದುಕೊಂಡೆ. ಆಮೇಲೆ ಅದರಲ್ಲಿರುವ ೧೯ ಕಥೆಗಳಲ್ಲಿ ಮೂರನ್ನು ಮಾತ್ರ ಆರಿಸಿಕೊಂಡು, ಅಚ್ಚಿಗಾಗಿ ಅವುಗಳ ಒಂದು ಪ್ರತಿಯನ್ನು ಸಿದ್ಧಪಡಿಸಿ ಅದನ್ನು ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕರಿಗೆ ಈಗ ದಿವಂಗತರಾಗಿರುವ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ಕಳಿಸಿಕೊಡಲಾಯಿತು. ಅದು ಆ ಪತ್ರಿಕೆಯ ೧೯೩೧ ನೆಯ ಅಕ್ಟೋಬರ್‌ಸಂಚಿಕೆಯಲ್ಲಿ ಅಚ್ಚಾಗಿ ಪ್ರಕಟವಾಯಿತು (ಪುಟ ೧೭೩-೨೩೧). ಗ್ರಂಥದ ಮತ್ತು ಅದರ ಕರ್ತೃವಿನ ವಿಷಯವಾಗಿ ನನಗೆ ಆಗ ತಿಳಿದು ಬಂದಷ್ಟು ವಿಷಯಗಳನ್ನು ಒಳಗೊಂಡ ಒಂದು ಸಣ್ಣ ಮುನ್ನುಡಿಯೂ ಇದರಲ್ಲಿದೆ. (ಪುಟ ೧೭೩-೧೭೮). ಲಭ್ಯವಾಗಿದ್ದ ಒಂದೇ ಹಸ್ತಪ್ರತಿಯ ಸಹಾಯದಿಂದ ಗ್ರಂಥ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯಲು ಸಾಧ್ಯವಿಲ್ಲವೆಂದು ಇಡೀ ಗ್ರಂಥವನ್ನು ಮುದ್ರಿಸದೆ ಇಷ್ಟರಿಂದಲೇ ತೃಪ್ತಿಪಡಬೇಕಾಯಿತು. ಇನ್ನೂ ಒಂದೆರಡಾದರೂ ಹಸ್ತಪ್ರತಿಗಳು ದೊರೆತರೆ ಒಳ್ಳೆಯದೆಂಬ ನಿರೀಕ್ಷೆ ಇತ್ತು.”[3]

ಹೀಗೆ ನಿರೀಕ್ಷೆಯಲ್ಲಿದ್ದಾಗ ಸುಮಾರು ಎಂಟು ವರ್ಷಗಳ ತರುವಾಯ ೧೯೩೯ರಲ್ಲಿ ಎನ್‌. ಅನಂತರಂಗಾಚಾರ್‌ ಅವರ ನೆರವಿನಿಂದ ಮೂಡಬಿದಿರೆಯ ಲೋಕನಾಥ ಶಾಸ್ತ್ರಿಗಳಿಂದ ವಡ್ಡಾರಾಧನೆಯ ಒಂದು ಓಲೆಯ ಪ್ರತಿ ದೊರೆಯಿತಂತೆ. ಜೊತೆಗೆ ಸಾಲಿಗ್ರಾಮದ ಸರಾಫ್‌ ಪದ್ಮರಾಜಯ್ಯನವರಲ್ಲಿದ್ದ ಮತ್ತೊಂದು ಪ್ರತಿಯೂ ದೊರಕಿತಂತೆ. ಈ ಎರಡು ಪ್ರತಿಗಳ ನೆರವಿನಿಂದ ವಡ್ಡಾರಾಧನೆಯ ಮೊದಲನೆಯ ಕಥೆ ಸುಕುಮಾರ ಸ್ವಾಮಿಯ ಕಥೆಯನ್ನು ಸಂಪಾದಿಸಿ ಪರಿಷತ್ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. (೧೯೩೯, ಸಂಪುಟ ೨೪, ಸಂಚಿಕೆ ೪).

ಮುಂದೆ ಕೆಲವೇ ದಿನಗಳಲ್ಲಿ ವಡ್ಡಾರಾಧನೆಯ ಮೂರು ಬೆಲೆ ಹಸ್ತಪ್ರತಿಗಳು ಡಿ.ಎಲ್‌.ಎನ್‌. ಅವರಿಗೆ ದೊರೆತವು. ನಂತರ ಆರಾದ ಸೆಂಟ್ರಲ್‌ ಜೈನ್‌ ಲೈಬ್ರರಿಯಲ್ಲಿದ್ದ ಇನ್ನೊಂದು ಪ್ರತಿಯೂ ದೊರಕಿತು. ಆಗ ಡಿ.ಎಲ್‌.ಎನ್‌. ಅವರಿಗೆ ಆನೆಯ ಬಲ ಬಂದಂತಾಯಿತು. ಈ ಆರು ಪ್ರತಿಗಳ ಸಹಾಯದಿಂದ ಗ್ರಂಥವನ್ನು ಸಂಸ್ಕರಣ ಮಾಡಿ ಪರಿಷತ್ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಭಾಗಶಃ ಮುದ್ರಿಸುವ ಮೂಲಕ ೧೯೪೯ ರಲ್ಲಿ ಇಡೀ ಗ್ರಂಥವನ್ನು ಪ್ರಕಟಿಸಲಾಯಿತು.

ಇದಿಷ್ಟು ಡಿ.ಎಲ್‌.ಎನ್‌. ಸಂಪಾದಿತ ವಡ್ಡಾರಾಧನೆಯ ಪೂರ್ವ ಚರಿತ್ರೆ. ಯಾವುದೇ ಸಂಪಾದಿತ ಕೃತಿಯನ್ನು ಓದಲು ತೊಡಗುವ ಮೊದಲು ಸಂಪಾದಕರು ನೀಡಿದ ಇಂಥ ವಿವರಗಳನ್ನು ತಪ್ಪದೆ ತಿಳಿದುಕೊಳ್ಳಬೇಕು. ಇದು ತರುವಾಯದ ಕೃತಿಯ ಬಗ್ಗೆ ಓದಿಗೆ ಪೂರ್ವ ಭೂಮಿಕೆಯನ್ನು ಒದಗಿಸುತ್ತದೆ.

ಮೊದಲು ಒಂದೇ ಒಂದು ಹಸ್ತಪ್ರತಿಯ ನೆರವಿನಿಂದ ಆರಂಭವಾದ ವಡ್ಡಾರಾಧನೆಯ ಗ್ರಂಥ ಸಂಪಾದನಾ ಸಾಹಸ ಯಾತ್ರೆ ಕೊನೆಗೆ ಆರು ಹಸ್ತಪ್ರತಿಗಳ ಬೆಳಕಿನಲ್ಲಿ ಯಶಸ್ವಿಯಾಗಿ ಪೂರೈಕೆಯಾಗಿದೆ. ಡಿ.ಎಲ್‌.ಎನ್‌. ಈ ಸಾಹಸ ಯಾತ್ರೆಯ ನೇತಾರರಾಗಿದ್ದರೂ, ಕವಿ, ಲಿಪಿಕಾರರು, ಹಸ್ತಪ್ರತಿ ದಾನಿಗಳು, ಪ್ರಕಾಶಕರು, ಮುದ್ರಕರು ಮೊದಲಾಗಿ ಅವರೊಂದಿಗೆ ಸಹಕರಿಸಿದ ಇತರ ವಿದ್ವಾಂಸ ಮಹನೀಯರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ಅಗತ್ಯವಾಗಿದೆ.

ಡಿ.ಎಲ್‌.ಎನ್‌. ತಾವು ಬಳಸಿದ ಹಸ್ತಪ್ರತಿಗಳ ವಿವರಗಳನ್ನು ಒದಗಿಸಿದ್ದು ಅದರ ಸಾರ ಹೀಗಿದೆ:

೧. ‘‘ಕ’’ ಪ್ರತಿ – ಮೈಸೂರಿನ ಓರಿಯಂಟಲ್‌ ಲೈಬ್ರರಿಯಲ್ಲಿರುವ ಕೆ-೪೧೫ ನಂಬರಿನ ಓಲೆಯ ಪ್ರತಿ. (ಕಾಲ ಬಹುಶಃ ೧೪೩೪). (ಇದು ಮೊದಲು ಸರಾಫ್‌ ಪದ್ಮ ರಾಜಯ್ಯನವರಲ್ಲಿದ್ದಿತು. ಮುಂದೆ ೧೯೨೦ ರಲ್ಲಿ ಅವರು ಅದನ್ನು ಓರಿಯಂಟಲ್‌ ಲೈಬ್ರರಿಗೆ ಕೊಟ್ಟರೆಂದು ತಿಳಿದು ಬರುತ್ತದೆ.)

೨. ‘ಖ’ ಪ್ರತಿ – ಇದು ಓಲೆಯ ಪ್ರತಿ. ಈ ಪ್ರತಿ ಮೂಡಬಿದಿರೆಯ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯರ ಮಠಕ್ಕೆ ಸೇರಿದ್ದು. ಅದೇ ಊರಿನ ಲೋಕನಾಥ ಶಾಸ್ತ್ರಿಗಳಿಂದ ಎನ್‌. ಅನಂತರಂಗಾಚಾರ್‌ ಅವರ ಮೂಲಕ ಡಿ.ಎಲ್‌.ಎನ್‌.ರಿಗೆ ದೊರೆಯಿತು. (ಇದರ ಕಾಲ ೧೪೦೩).

೩. ‘ಗ’ ಪ್ರತಿ-ಸಾಲಿಗ್ರಾಮದ ಸರಾಫ್‌ ಪದ್ಮರಾಜಯ್ಯನವರ ಭಂಡಾರದ್ದು. (ಇದರ ಕಾಲ ೧೮೯೮).

೪. ‘ಘ’ ಪ್ರತಿ – ಇದು ಸರಾಫ್‌ ಅವರ ಭಂಡಾರಕ್ಕೆ ಸೇರಿದ್ದು. (ಇದರ ಕಾಲ ಸುಮಾರು ೧೭ನೆಯ ಶತಮಾನದ ಕೊನೆಯ ಘಟ್ಟ).

೫. ‘ಚ’ ಪ್ರತಿ- ಇದು ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರಿಗೆ ಸೇರಿದ ಪ್ರತಿ. ಇದೂ ಸರಾಫ್‌ ಪದ್ಮ ರಾಜಯ್ಯನವರಿಂದಲೇ ದೊರೆತದ್ದು. (ಇದು ಸುಮಾರು ೧೭ನೆಯ ಶತಮಾನದ ಆರಂಭದ ಕಾಲದ್ದು).

೬. ‘ಛ’ ಪ್ರತಿ – ಇದು ಆರಾದ ಸೆಂಟ್ರಲ್‌ ಜೈನ್‌ ಓರಿಯಂಟಲ್‌ ಲೈಬ್ರರಿಗೆ ಸೇರಿದ್ದು. (ಇದರ ಕಾಲ ಸು. ೧೭ನೆಯ ಶತಮಾನ).

ಡಿ.ಎಲ್‌.ಎನ್‌. ಅವರು ಮೇಲೆ ತಿಳಿಸಿದ ಈ ಆರು ಪ್ರತಿಗಳ ನೆರವಿನಿಂದ ಪಾಠ ಸಂಕಲನ ಮಾಡಿದ ನಂತರ ಡಾ. ಎ. ಎನ್‌. ಉಪಾಧ್ಯೆ ಅವರಿಂದ ಮತ್ತೊಂದು ಓಲೆಯ ಪ್ರತಿ ದೊರಕಿತು. ಇದು ಕೊಲ್ಲಾಪುರದ ಲಕ್ಷ್ಮಿ ಸೇನ ಭಟ್ಟಾರಕರ ಜೈನ ಮಠಕಕ್ಕೆ ಸೇರಿದ್ದು. (ಕಾಲ ೧೭ ಶತಮಾನ). ಆದರೆ ಅದು ಘ, ಚ, ಛ-ಪ್ರತಿಗಳ ಸಂಪ್ರದಾಯಕ್ಕೆ ಸೇರಿದ್ದಾದ ಕಾರಣ ಡಿ.ಎಲ್‌.ಎನ್‌. ಅದನ್ನು ಕೆಲವು ಕತೆಗಳ ಪರಿಷ್ಕರಣಕ್ಕೆ ಮಾತ್ರ ಬಳಸಿದ್ದಾರೆ.

ಹೀಗೆ ವಡ್ಡಾರಾಧನೆಯ ಸಂಪಾದನೆಗೆ ಡಿ.ಎಲ್‌.ಎನ್‌. ಬಳಸಿರುವುದು ಒಟ್ಟು ಏಳು ಪ್ರತಿಗಳನ್ನು. ಈ ಏಳೂ ಪ್ರತಿಗಳಲ್ಲಿನ ಸಾಮ್ಯ-ವೈಷಮ್ಯಗಳ ಆಧಾರದಿಂದ ಡಿ.ಎಲ್‌.ಎನ್‌. ಅವುಗಳ ಪರಸ್ಪರ ಸಂಬಂಧವನ್ನು ಗುರುತಿಸಿದ್ದಾರೆ. ಅವರ ಪ್ರಕಾರ ಕ ಖ ಗ ಪ್ರತಿಗಳದು ಒಂದು ಗುಂಪು. ಉಳಿದ ನಾಲ್ಕು ಪ್ರತಿಗಳದು ಇನ್ನೊಂದು ಗುಂಪು. (ಘ ಚ ಛ ಮತ್ತು ಕೊಲ್ಲಾಪುರದ ಪ್ರತಿ). ‘ಗ’ ಪ್ರತಿಯು ‘ಕ’ ಪ್ರತಿಯ ನಕಲು. ಎರಡನೆಯ ಗುಂಪಿನ ನಾಲ್ಕು ಪ್ರತಿಗಳಲ್ಲೂ ಸಮಾನ ಸ್ಖಾಲಿತ್ಯಗಳಿರುವುದನ್ನು ಸಂಪಾದಕರು ಗುರುತಿಸಿದ್ದಾರೆ.

ಗ್ರಂಥದ ಹೆಸರಿನ ಬಗ್ಗೆ ಅವರು ನಡೆಸಿರುವ ಚರ್ಚೆ ಸಾಕಷ್ಟು ವಿವರವಾಗಿದೆ. ಐದು ಪ್ರತಿಗಳಲ್ಲಿ ಗ್ರಂಥದ ಹೆಸರು ‘ವಡ್ಡಾರಾಧನೆ’ ಅಥವಾ ಅದರ ಇತರ ರೂಪಗಳಲ್ಲಿ ಲಿಖಿತವಾಗಿರುವುದನ್ನು ಡಿ.ಎಲ್‌.ಎನ್‌. ಗುರುತಿಸಿದ್ದಾರೆ. ಅದರ ಕಾರಣಗಳನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. ಬೇರೆ ಬೇರೆ ಹಸ್ತಪ್ರತಿಗಳಲ್ಲಿ ಬಂದ ಕೃತಿಯ ಹೆಸರನ್ನು ಈ ಕೆಳಗಿನಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಿದ್ದಾರೆ.

ವೃದ್ಧಾರಾಧನಂ ವ(ವು)ಡ್ಡಾರಾಧಣಂ ವೊಡ್ಡಾರಾಧಣಂ ಒಡ್ಡಾರಾಧಣಂ
ವೃದ್ಧಾರಾಧನಾ ವ(ವು)ಡ್ಡರಾಧನೆ ವೊಡ್ಡಾರಾಧನೆ ಒಡ್ಡಾರಾಧನೆ

ಈ ಹೆಸರುಗಳ ಮೂಲದ ಬಗ್ಗೆ ಚರ್ಚಿಸಿ ‘ವಡ್ಡಾರಾಧನೆ’ ಎಂಬುದೇ ಅಂಗೀಕಾರಾರ್ಹವಾದ ರೂಪ ಎಂದು ನಿರ್ಣಯಿಸಿದ್ದಾರೆ. ಕೃತಿಯ ಹೆಸರಿನ ಬಗ್ಗೆ ಡಾ. ಉಪಾಧ್ಯೆ ಅವರು ಮಂಡಿಸಿದ ವಿಚಾರಗಳ ಬಗ್ಗೆ ಎರಡು ಶಂಕೆಗಳನ್ನು ಎತ್ತಿದ ಡಿ.ಎಲ್‌.ಎನ್‌. ಅವರು ಆ ಶಂಕೆಗಳು ಪರಿಹಾರವಾಗುವವರೆಗೆ ಕೃತಿಯನ್ನು ‘ವಡ್ಡಾರಾಧನೆ’ ಎಂದು ಕರೆಯುವುದೇ ಸೂಕ್ತ ಎಂಬ ನಿಲುವನ್ನು ತಳೆದಿದ್ದಾರೆ.

ವಡ್ಡಾರಾಧನೆಯ ಕರ್ತೃವಿನ ಬಗೆಗೂ ಡಿ.ಎಲ್‌.ಎನ್‌. ಸಾಕಷ್ಟು ಮೌಲಿಕ ಚರ್ಚೆ ನಡೆಸಿದ್ದಾರೆ. ವಡ್ಡಾರಾಧನೆ ಗ್ರಂಥ ಪರಿಸಮಾಪ್ತಿ ವಾಕ್ಯದಲ್ಲಿ “ಈ ಪೇೞ್ದ ಪತ್ತೊಂಬತ್ತು ಕಥೆಗಳಂ ಶಿವಕೋಟ್ಯಾಚಾರ್ಯರ್‌ಪೇೞ್ಪೂರ್‌” ಎಂಬ ವಾಕ್ಯವಿರುವುದನ್ನಾಧರಿಸಿ, ಶಿವಕೋಟ್ಯಾಚಾರ್ಯ ಎಂಬ ಹೆಸರು ಕನ್ನಡ ಗ್ರಂಥಕರ್ತನ ಹೆಸರಲ್ಲವೆಂದೂ ಪ್ರಾಕೃತ ಗ್ರಂಥವಾದ ‘ಭಗವತೀ ಆರಾಧನಾ’ದ ಕರ್ತೃ ಶಿವಾರ್ಯ ಅಥವಾ ಶಿವಕೋಟಿಯನ್ನು ನಿರ್ದೇಶಿಸುತ್ತದೆಯೆಂದೂ ಡಾ. ಉಪಾಧ್ಯೆ ಅವರು ಮಾಡಿದ್ದ ವಾದವನ್ನು ಡಿ.ಎಲ್‌.ಎನ್‌. ಒಪ್ಪಿಲ್ಲ. ಕನ್ನಡ ಕಥೆಗಾರನೊಬ್ಬ ತಾನು ಬರೆದ ಕೃತಿಗೆ ಬೇರೊಬ್ಬ ಪ್ರಾಕೃತ ಕಥೆಗಾರನ ಹೆಸರನ್ನು ಆರೋಪಿಸಿದ್ದಾನೆಂದು ಭಾವಿಸುವುದು ಸರಿಯೇ? ಕೃತಿಯ ಕರ್ತೃ ಹಾಗೆ ಮಾಡಿರುವುದು ಸಾಧ್ಯವೇ? ಅಲ್ಲದೆ ಶಿವಕೋಟ್ಯಾಚಾರ್ಯನೆಂಬ ಒಂದೇ ಹೆಸರಿನ ಬೇರೆ ಕವಿಗಳು ಕನ್ನಡದಲ್ಲಿ ಏಕೆ ಇದ್ದಿರಬಾರದು? ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಡಿ.ಎಲ್‌.ಎನ್‌. ಆ ಕುರಿತು ಚರ್ಚೆ ಮಾಡಿದ್ದಾರೆ. ಏಳು ಪ್ರತ್ಯೇಕ ಉಲ್ಲೇಖಗಳನ್ನು ಸಂಗ್ರಹಿಸಿ ಅವುಗಳಲ್ಲಿ ಪ್ರಸ್ತಾಪಿತವಾದ ಶಿವಕೋಟಿ ಎಂಬುವನ ವಿವರಗಳನ್ನು ಕ್ರೋಢೀಕರಿಸಿದ್ದಾರೆ. ಇಲ್ಲಿ ಸಂಗ್ರಹಿತವಾದ ವಿಷಯಗಳು ಸಮಾನ್ಯ ಓದುಗರ ಗ್ರಹಿಕೆಗೆ ನಿಲುಕುವುದು ಕೊಂಚ ಕಷ್ಟವೆನ್ನಿಸುತ್ತದೆ. ಆದರೆ ಗ್ರಂಥ ಸಂಪಾದಕರಿಗೆ ಮತ್ತು ಸಂಶೋಧಕರಿಗೆ ಇದು ತುಂಬ ಉಪಯುಕ್ತ ಮಾಹಿತಿಯೆನ್ನಿಸುತ್ತದೆ. ಒಂದನ್ನು ಹುಡುಕುವ ನೆಪದಲ್ಲಿ ಹತ್ತನ್ನು ಹುಡುಕುವ ಮಹತ್ವಾಕಾಂಕ್ಷೆಯ ಕೆಲಸವನ್ನಿಲ್ಲಿ ಸಂಪಾದಕರು ಮಾಡಿದ್ದಾರೆ. ವಾಸ್ತವವಾಗಿ ಉತ್ತಮ ಸಂಪಾದಕ ಮತ್ತು ಸಂಶೋಧಕನ ಪ್ರಮುಖ ಗುಣ ಇದೆ ಆಗಿರುತ್ತದೆ. ಉಪಾಧ್ಯೆ, ಪಾಠಕ್‌, ಡಿ.ಎಲ್‌.ಎನ್‌. ಮುಂತಾದವರಿಂದ ಸುಮಾರು ೧೯೩೦ ರ ಸುಮಾರಿಗೆ ಆರಂಭವಾದ ವಡ್ಡಾರಾಧನೆಯ ಕರ್ತೃವಿನ ಕುರಿತಾದ ಚರ್ಚೆ ಕಲಬುರ್ಗಿ, ಜಾಗೀರದಾರ್‌, ಹಂಪನಾ ಅವರವರೆಗೆ ಜೀವಂತವಾಗಿ ಸಾಗಿ ಬಂದುದು ಕುತೂಹಲದ ಸಂಗತಿಯೆ ಸರಿ. ಇದು ಕೃತಿಯ ಜನಪ್ರಿಯತೆಗೆ ಸಾಕ್ಷಿಯಾಗಿರುವುದರ ಜೊತೆಗೆ ಈ ಕಾರ್ಯದ ಜಟಿಲತೆಗೂ ಸಾಕ್ಷಿಯಾಗಿದೆ.

ಈ ಚರ್ಚೆಯ ಕೊನೆಗೆ ಡಿ.ಎಲ್‌.ಎನ್‌. ಹೇಳಿರುವುದಿಷ್ಟು, “ಒಟ್ಟಿನಲ್ಲಿ ಕನ್ನಡ ಗ್ರಂಥದ ಹೆಸರು ವಡ್ಡಾರಾಧನೆಯೆಂದೂ, ಅದನ್ನು ಹೇಳಿದವನು ಒಬ್ಬ ಶಿವಕೋಟಿಯೆಂದೂ ಸಧ್ಯಕ್ಕೆ ನಿರ್ಣಯಿಸಬಹುದು. ಖಚಿತವಾದ ನೂತನಾಧಾರಗಳು ದೊರೆಯುವವರೆಗೆ ಬೇರೆ ಯಾವ ನಿರ್ಣಯಕ್ಕೂ ಅವಕಾಶವಿದೆಯೆಂದು ತೋರುವುದಿಲ್ಲ. ಗ್ರಂಥ ಸಮಾಪ್ತಿಯಲ್ಲಿರುವ ಗದ್ಯವನ್ನು ಎರಡು ವಾಕ್ಯಗಳಾಗಿ ಭಾವಿಸಿ ಮೊದಲನೆಯದು ಕವಿಯ ಹೆಸರನ್ನು ಹೇಳುವುದೆಂದೂ, ಎರಡನೆಯದು ಗ್ರಂಥದ ಹೆಸರನ್ನು ಸೂಚಿಸುವದೆಂದೂ ಸ್ವಾಭಾವಿಕವಾದ ಅರ್ಥವನ್ನು ಗ್ರಹಿಸಬೇಕಾಗಿದೆ.”[4] ಇಲ್ಲಿಯ ತಮ್ಮ ನಿರ್ಣಯಗಳು ‘ಸಧ್ಯದ ನಿರ್ಣಯಗಳು’ ಎಂಬ ಮಾತನ್ನು ಡಿ.ಎಲ್.ಎನ್‌. ತಿಳಿಸಿರುವುದನ್ನು ಗಮನಾರ್ಹವಾಗಿದೆ.

ಕವಿಯ ಕಾಲದ ಕುರಿತಾದ ಕೆ.ಬಿ. ಪಾಠಕ, ಆರ್‌ ನರಸಿಂಹಾಚಾರ್ಯ, ಗೋವಿಂದ ಪೈ ಎಸ್‌. ಶ್ರೀಕಂಠಶಾಸ್ತ್ರಿ, ಉಪಾಧ್ಯೆ ಮೊದಲಾದವರ ಅಭಿಪ್ರಾಯಗಳನ್ನು ವಿಮರ್ಶಿಸಿ ಕವಿಯ ಕಾಲವು ಸುಮಾರು ಕ್ರಿ.ಶ. ೯೨೦ ಆಗಿರಬೇಕೆಂಬ ಅಭಿಪ್ರಾಯಕ್ಕೆ ಡಿ.ಎಲ್‌.ಎನ್‌. ಬಂದಿದ್ದಾರೆ.

ಕವಿಯ ದೇಶದ ಕುರಿತಾಗಿಯೂ ಸವಿಸ್ತಾರವಾಗಿ ಚರ್ಚಿಸಿದ್ದಾರಲ್ಲದೆ, ಮೂಲಾರಾಧನಾ ಕೃತಿಯ ಕರ್ತೃ ಒಬ್ಬ ಶಿವಕೋಟಿ, ಕನ್ನಡದ ವಡ್ಡಾರಾಧನೆಯ ಕರ್ತೃ ಇನ್ನೊಬ್ಬ ಶಿವಕೋಟಿ, ಕನ್ನಡದ ಕೋಗಳಿಯ ಶಿವಕೋಟಿ ಎಂದು ಕರೆಯಬಹುದು ಎಂದಿದ್ದಾರೆ.

‘ಹಿನ್ನೆಲೆ’ ಎಂಬ ಘಟಕದಲ್ಲಿ ವಡ್ಡಾರಾಧನೆಯ ಕಥೆಗಳ ವಸ್ತು, ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಹರಿಷೇಣನ ಕೃತಿಯಿಂದ ನೆರವು ಪಡೆದ ಕನ್ನಡದ ಶಿವಕೋಟಿ ಹರಿಷೇಣನಿಗಿಂತ ಹೇಗೆ ಭಿನ್ನನಾಗುತ್ತಾನೆಂಬುದನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊನೆಗೆ “ಹರಿಷೇಣನ ಕಥೆಗಳನ್ನು ವಡ್ಡಾರಾಧನೆಯ ಕಥೆಗಳನ್ನು ತೋಲನಾತ್ಮಕವಾಗಿ ನಿರೂಪಣೆ, ಸಂನಿವೇಶ ನಿರ್ಮಾಣ, ಪಾತ್ರ ರಚನೆ, ರಸಾವಿಷ್ಕರಣ, ಗದ್ಯದ ಕೃತಿಯಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲೂ, ಗುಣದಲ್ಲೂ ವಡ್ಡಾರಾಧನೆಯಲ್ಲಿ ಇವೆಯೆಂದು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ತೋಲನಾತ್ಮಕ ದೃಷ್ಟಿಯಿಂದಲೇ ಈ ಕೃತಿಯ ಮೌಲ್ಯ ವಿಚಾರ ನಡೆಯಬೇಕಾಗಿದೆ”[5] ಎಂದಿದ್ದಾರೆ.

ಸಂಪಾದನೆಯ ತಾಂತ್ರಿಕತೆಯ ದೃಷ್ಟಿಯಿಂದಲೂ ಡಿ.ಎಲ್‌.ಎನ್‌. ಅವರ ವಡ್ಡಾರಾಧನೆ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತದೆ.

ಕವಿಯ ಮೂಲಪಾಠವನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ಸಂಪಾದಕನ ಮುಂದಿರುತ್ತದೆ. ಒಬ್ಬ ಸಮರ್ಥ ಸಂಪಾದಕ ಆ ಮೂಲಕವೇ ತಾನು ಬಳಸಿದ ಎಲ್ಲ ಪ್ರತಿಗಳ ಪಾಠಾಂತರಗಳನ್ನು ಓದುಗರ ಮುಂದಿಡುತ್ತ ತೌಲನಿಕ ದೃಷ್ಟಿಯಿಂದ ಮೂಲ ಪಾಠವನ್ನು ನಿರ್ಣಯಿಸುತ್ತ ಹೋಗುತ್ತಾನೆ. ಇದು ಹಂಸಕ್ಷೀರ ನ್ಯಾಯದಂಥ ಕುಸುರಿಯ ಕೆಲಸ. ಆದರೆ ಎಷ್ಟು ಜಟಿಲವೋ ಅಷ್ಟೇ ಆನಂದದಾಯಕ. ಒಂದು ಕೃತಿಯ ಇಡೀ ಸ್ವರೂಪ ಮತ್ತು ಪ್ರಸಾರದ ಪರಿಯನ್ನು ಓದುಗರಿಗೆ ಪರಿಚಯಿಸಿಕೊಡುವ ನಿರ್ಣಾಯಕ ಬೌದ್ಧಿಕ ಕ್ರಿಯೆ ಇದಾಗಿರುತ್ತದೆ. ಸಂಪಾದನೆ ಒಂದು ವಿಜ್ಞಾನವಾಗಿ, ಒಂದು ಕಾವ್ಯದ ಚಿಕಿತ್ಸಾ ಕ್ರಮವಾಗಿ ಕಂಡು ಬರುವುದು ಇದೇ ಹಂತದಲ್ಲಿ. ಸಂಪಾದಕ ಹೆಚ್ಚು ತಾಂತ್ರಿಕ ನಾದಷ್ಟೂ ಕೃತಿಗೆ ಹೆಚ್ಚಿನ ಪರಿಪೂರ್ಣತೆ ಪ್ರಾಪ್ತವಾಗುತ್ತದೆ. ಈ ದೃಷ್ಟಿಯಿಂದ ಡಿ.ಎಲ್.ಎನ್‌ವಡ್ಡಾರಾಧನೆಯ ಸಾಧನೆ ಮಹತ್ತರವಾದುದೆಂದೇ ಹೇಳಬೇಕಾಗುತ್ತದೆ.

ತಮಗೆ ಸರಿಯೆನ್ನಿಸಿದ ಪಾಠವನ್ನು ಪಠ್ಯವನ್ನು ಬಳಸಿಕೊಂಡು ಇತರ ಪ್ರತಿಗಳಲ್ಲಿ ಅದಕ್ಕಿರುವ ಪಾಠಾಂತರಗಳನ್ನು ತುಂಬ ಎಚ್ಚರಿಕೆಯಿಂದ ಸಂಗ್ರಹಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ಬಳಸಿಕೊಂಡ ಪಾಠದ ಎಡಬಲದಲ್ಲಿ ಒಂದೊಂದು ಕ್ರಮಸಂಖ್ಯೆಯನ್ನು ಕೊಟ್ಟು ಮತ್ತೆ ಅದೇ ಅಂಕಿಯ ಮೂಲಕ ಅಡಿಟಿಪ್ಪಣಿಯಲ್ಲಿ ಪಾಠಾಂತರಗಳ ವಿವರಣೆ ಕೊಟ್ಟಿದ್ದಾರೆ.

ಉದಾ. ೧. ‘ಶ್ರೀ ವೀರ ವರ್ಧಮಾನ ಭಟ್ಟಾರಕರರ್ಗೆ’5 – ಎಂದು ಮೂಲಪಾಠಕ್ಕಿರುವ ಪಾಠಾಂತರಗಳನ್ನು ಆಯಾ ಪುಟದ ಕೊನೆಗೆ ಅಡಿಟಿಪ್ಪಣಿಯಲ್ಲಿ ೧ ಎಂದಿಂತು ಶ್ರೀ ವೀರವರ್ಧಮಾನ ಭಟ್ಟಾರಕರ್ಗೆ (ಸ್ವಾಮಿಗಳ್ಗೆ-ಛ) ತ್ರಿಕರಣ ಶುದ್ಧಿಯಿಂದಂ’ (ಘಚಛಜ) ಎಂದು ಸಂಗ್ರಹಿಸಿ ಕೊಟ್ಟಿದ್ದಾರೆ. ಇದರಿಂದ ಓದುಗರು ನೋಡಿರಲಾರದ ಹಸ್ತಪ್ರತಿಗಳೆಲ್ಲವನ್ನು ಅವನ ಮುಂದೆ ತೆರೆದಿರುವುದು ಸಾಧ್ಯವಾಗುತ್ತದೆ. ಕೆಲವೊಮ್ಮೆ ತರುವಾಯದ ಸಂಪಾದಕರು ಈಗಿನ ಸಂಪಾದಕರಿಗಿಂತ ಭಿನ್ನ ಪಾಠವನ್ನು ಸ್ವೀಕರಿಸಲೂ ಇದು ಸಹಕಾರಿಯಾಗುತ್ತದೆ.

ಅಲ್ಲಲ್ಲಿ *,[,],+ ಮೊದಲಾದ ಚಿಹ್ನೆಗಳನ್ನು ಬಳಸಲಾಗಿದೆ. ೧೦ ಸಾಲುಗಳಿಗೊಮ್ಮೆ ೧೦, ೨೦, ೩೦ ಎಂಬ ಪಂಕ್ತಿ ಸಂಖ್ಯೆಗಳನ್ನು ಕೊಡಲಾಗಿದೆ. ಱೞ, ಕುಳ, ಶಕಟ ರೇಫೆಗಳ ಬಳಕೆಯ ವಿಷಯದಲ್ಲಿ ಮೂಲಕ್ಕೆ ಸಂಪೂರ್ಣ ಬದ್ಧತೆಯನ್ನು ಉಳಿಸಿಕೊಳ್ಳಲಾಗಿದೆ. ಒಟ್ಟಾರೆ ಡಿ.ಎಲ್‌.ಎನ್‌. ಅವರ ನಿಜವಾದ ವಿದ್ವತ್ತು, ತಾಳ್ಮೆ, ಪರಿಶ್ರಮಗಳನ್ನು ಪ್ರಸ್ತುತ ಕೃತಿಯಲ್ಲಿ ಧಾರಾಳವಾಗಿ ಗುರುತಿಸಬಹುದು. ಸಾಂಸ್ಕೃತಿಕ ಮಹತ್ವದ ಒಂದು ಪ್ರಾಚೀನ ಕನ್ನಡ ಕೃತಿಯನ್ನು ಉಳಿಸಿಕೊಟ್ಟ ಮಹತ್ಸಾಧನೆಗಾಗಿ ಕನ್ನಡಿಗರು ಡಿ.ಎಲ್‌.ಎನ್‌. ಅವರಿಗೆ ಋಣಿಗಳಾಗಿದ್ದಾರೆ.[6]

 

[1] ಶಿವಕೋಟಾಚಾರ್ಯವಿರಚಿತವಡ್ಡಾರಾಧನೆ (ಮೊದಲಮುದ್ರಣಕ್ಕೆಬರೆದ‘ಮೊದಲಮಾತು’) ಪ್ರ.ಡಿ.ವಿ.ಕೆ. ಮೂರ್ತಿ, ಮೈಸೂರು, ೧೯೭೮ (ಆರನೆಯಮುದ್ರಣ).

[2] ಶಿವಕೋಟಾಚಾರ್ಯವಿರಚಿತವಡ್ಡಾರಾಧನೆ (ನಾಲ್ಕನೆಯಮುದ್ರಣದಅರಿಕೆ).

[3] ಅದೇ, ಪೀಠಿಕೆಪು. IX

[4] ಅದೇ, ಪೀಠಿಕೆಪು.XXIV

[5] ಅದೇ, ಪೀಠಿಕೆಪು. Xiii

5 “

[6] ಬೃಹತ್ಕಥಾಕೋಶಮತ್ತುವಡ್ಡಾರಾಧನೆಗೆಸಂಬಂಧಿಸಿದಡಾ. ಆ.ನೇಉಪಾಧ್ಯಅವರಟಿಪ್ಪಣಿಗಳುಪ್ರಕೃತಲೇಖಕನಿಗೆಸಕಾಲದಲ್ಲಿದೊರೆತಿಲ್ಲ. ದೊರೆತಿದ್ದರೆಅವುಗಳಬೆಳಕಿನಲ್ಲಿಡಿ.ಎಲ್‌.ಎನ್‌. ಅವರಅಭಿಪ್ರಾಯಮತ್ತುಸಾಧನೆಗಳನ್ನುಇನ್ನಷ್ಟುವಿಮರ್ಶಾತ್ಮಕವಾಗಿತೂಗಿನೋಡಬಹುದಿತ್ತು. ಸಧ್ಯಕ್ಕೆಇದುಈಪ್ರಬಂಧದಮಿತಿಯೇಸರಿ.