ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ವಿದ್ವನ್ಮಣಿಗಳ ಪೈಕಿ ಈ ಮಣ್ಣಿಗೆ ಬಹಳ ದೊಡ್ಡ ಕೀರ್ತಿ ತಂದು ಕೊಟ್ಟವರು ಡಿ.ಎಲ್‌.ಎನ್‌ಎಂದು ಪ್ರಸಿದ್ಧರಾದ “ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್‌ರವರ”. ದೊಡ್ಡಬೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ಇದೆ. ಬೆಂಗಳೂರು-ತುಮಕೂರು ರೈಲ್ವೇ ಹಾದಿಯಲ್ಲಿ ದೊಡ್ಡಬೆಲೆ ರೈಲು ನಿಲ್ದಾಣವನ್ನು ನೋಡಬಹುದು. ಇಷ್ಟು ಸಣ್ಣ ಗ್ರಾಮ ನೂರು ವರ್ಷಗಳ ಹಿಂದೆ ಬಹುದೊಡ್ಡ ವಿದ್ಯಾಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಶಕ್ತಿ ವಿಶಿಷ್ಟಾದ್ವೈತ, ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಜೈನ ವಿದ್ವಾಂಸರು ನೆಲೆಸಿದ್ದರು, ಜೈನ ಸಾಹಿತ್ಯದ ಸಿರಿಭೂವಲಯದ ಹಸ್ತಪ್ರತಿ ಇದದ್ದೆ ಈ ಗ್ರಾಮದಲ್ಲಿ ಇಲ್ಲಿ ನೆಲೆಸಿದ್ದ ಜೈನ ವಿದ್ವಾಂಸರ ಮನೆಯಲ್ಲಿ ನೂರಾರು ಜೈನ ಸಾಹಿತ್ಯದ ಹಸ್ತಪ್ರತಿಗಳ ಸಂಗ್ರಹ ಇತ್ತು. ಸಿರಿಭೂವಲಯದ ಸಂಪಾದಕರಾದ ಪಂಡಿತ್‌ಎಲ್ಲಪ್ಪಶಾಸ್ತ್ರಿಗಳು, ಈ ಮನೆತನದ ಅಳಿಯನಾದರು. ಮಾವನವರಿಂದ ಬೇಕಾದ ಹಸ್ತಪ್ರತಿಗಳನ್ನು ಪಡೆದು ಸಂಪಾದಿಸಿ ಪ್ರಕಟಪಡಿಸಿದರು. ದೊಡ್ಡಬೆಲೆ ಗ್ರಾಮದಲ್ಲಿ ಮುರಿಗಾ ಪರಂಪರೆಗೆ ಸೇರಿದ ಸಣ್ಣ ಬರಹದ ಬುಡಕಟ್ಟಿನ ದೊಡ್ಡ ಮಠವಿದೆ. ಈ ಮಠದ ಸ್ವಾಮಿಗಳು ವಿದ್ಯಾದಾನ, ಅನ್ನದಾನಕ್ಕೆ ಪ್ರಸಿದ್ಧರಾದವರು. ವೀರಶೈವ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ದೊಡ್ಡಬೆಲೆ ದೊಡ್ಡಮಠದ ರುದ್ರದೇವರು ಭಾಷಣಕಾರರಾಗಿ, ಚಿತ್ರಗಾರರಾಗಿ ಪ್ರಸಿದ್ಧಿ ಹೊಂದಿದವರು. ಅವರು ಲಿಖಿಸಿದ ಸಾಹಿತ್ಯ ಮತ್ತು ಚಿತ್ರಗಳನ್ನು ಸಂಪಾದಿಸಿ ಡಾ. ಎಂ. ಚಿದಾನಂದಮೂರ್ತಿಯವರ ವಚನ ಶೋಧ-೧ (೧೯೯೮ರಲ್ಲಿ) ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. ಪು. ೧೦೫-೧೨೯ರಲ್ಲಿ ಚಿತ್ರ ಸಮೇತ ದೊಡ್ಡಬೆಲೆ ಗ್ರಾಮದ ಸಾಹಿತ್ಯ ಸೇವೆಯನ್ನು ಕುರಿತು ಒಂದು ಸಂಶೋಧನಾತ್ಮಕ ಲೇಖನ ಬರೆಯುವಷ್ಟು ವಿಷಯವಿದೆ. ಯುವ ವಿದ್ವಾಂಸರು ಅತ್ತಗಡೆ ಗಮನ ಕೊಟ್ಟು ಸಂಶೋಧನೆ ಮಾಡಬೇಕು. ಐತಿಹಾಸಿಕ, ಸಾಂಸ್ಕೃತಿಕ ಇತಿಹಾಸ ಇರುವ ಗ್ರಾಮದ ಹಿನ್ನೆಲೆಯವರು ಡಿ.ಎಲ್‌.ಎನ್‌. ಇವರ ಪೂರ್ವಿಕರು ಸೇಲಂ ಜಿಲ್ಲೆಯಿಂದ ಬಂದವರು. ಗಂಡಿಕೋಟ ಅವರ ನೆಲೆಯಾಗಿತ್ತು. ವಿಜಯನಗರದ ತಾತಾಚಾರ್ಯರ ಕಾಲದಲ್ಲಿ ಅವರು ಈ ಕಡೆಗೆ ವಲಸೆ ಬಂದು ನೆಲೆಸಿದರು. ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಲಕ್ಷ್ಮೀನರಸಿಂಹಸ್ವಾಮಿ ಇವರ ಮನೆಯ ದೇವರು. ತುಮಕೂರು ಜಿಲ್ಲೆಯ ಪಾವಗಡ, ಮದ್ದಗಿರಿ ಮಧುಗಿರಿ, ಶಿರಾಗಳಲ್ಲಿ ಬಾಲ್ಯ ವಿದ್ಯಾಭ್ಯಾಸ ಮಾಡಿದರು. ಹನ್ನೆರಡನೇ ವಯಸ್ಸಿನಲ್ಲಿ ಜೈಮಿನಿ ಭಾರತವನ್ನು ಓದಿದ್ದು ಮಾತ್ರವಲ್ಲದೆ ಜೈಮಿನಿಭಾರತದ ೧೭೦೦ ಪದ್ಯಗಳು ಬಾಯಿಗೆ ಬರುತ್ತಿದ್ದುವಂತೆ. ಹೈಸ್ಕೂಲು ಬರುವ ಹೊತ್ತಿಗೆ ಗದಾಯುದ್ಧ, ಛಂದೋಬುಧಿ ಮತ್ತು ಪದ್ಯಸಾರದ ಎರಡನೆಯ ಸಂಪುಟಗಳನ್ನು ಚೆನ್ನಾಗಿ ಓದಿಕೊಂಡಿದ್ದರು. ತುಮಕೂರಿನ ಅಗ್ರಹಾರದಲ್ಲಿ ಕರುಣಿಕ ನಲ್ಲಪ್ಪನವರ ವಂಶಸ್ಥರ ಮನೆಯಲ್ಲಿ ಕಾಗದದ ಹಸ್ತಪ್ರತಿ ರಾಶಿಯಲ್ಲಿ ಹೈದರ್‌ನಾಮಾ ಹಸ್ತಪ್ರತಿಯನ್ನು ಹುಡುಕಿದರು. ವಿದ್ಯಾರ್ಥಿ ಜೀವನದಲ್ಲೆ ಅದನ್ನು ಇಂಗ್ಲಿಷ್‌ಭಾಷೆಗೆ ಭಾಷಾಂತರಿಸಿದ್ದರು. ಮುಂದೆ ಮೂಲ ಮತ್ತು ಇಂಗ್ಲಿಷ್‌ಭಾಷಾಂತರವನ್ನು ಪ್ರೊ.ಎಂ.ಎಚ್‌. ಕೃಷ್ಣರವರ ಕೈಸೇರಿತ್ತು. ಇಂದು ಆ ಮೂಲ ಹಸ್ತಪ್ರತಿ ವಿವರ ಲಭ್ಯವಿಲ್ಲ.

ತುಮಕೂರು ಹೈಸ್ಕೂಲಿನಿಂದ ಶಾಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೊರತರುತ್ತಾ ಇದ್ದ “School Folk” ಮಾಸಪತ್ರಿಕೆ ಬಹಳ ಮೇಲುಮಟ್ಟದ ಪತ್ರಿಕೆಯಾಗಿತ್ತು. ಲೇಖಕನಿಗೆ ಅವುಗಳ ಮರಾಳೆಗಳನ್ನು ನೋಡುವ ಭಾಗ್ಯ ಮಾತ್ರ ಲಭ್ಯವಾಗಿದೆ. ಮುದ್ರಿತ ಒಂದು ಪ್ರತಿಯನ್ನು ನೋಡುವ ಅವಕಾಶ ಲಭ್ಯವಾಗಿಲ್ಲ. ೧೯೨೨ರ ಸುಮಾರಿನಲ್ಲಿ ಜಿಲ್ಲಾ ಕೇಂದ್ರದ ಹೈಸ್ಕೂಲಿನಲ್ಲಿ ಇಂತಹ ಪತ್ರಿಕೆ ಬರುತ್ತಾ ಇತ್ತು. ಇಂಗ್ಲಿಷ್‌ ಭಾಷೆಯಲ್ಲಿ ವಿಶ್ವವಿದ್ಯಾಲಯದಲ್ಲೂ ಇಂತಹ ಪತ್ರಿಕೆ ಬರುತ್ತಾ ಇಲ್ಲಾ. ಪದ್ಮಶ್ರೀ ಪ್ರೊ. ದೇ.ಜ.ಗೌರವರು ಆಚಾರ್ಯರನ್ನು ಕುರಿತು ಅವರ ಜೊತೆ ಸಂವಾದ ಮಾಡಿ ಬರೆದ ಗಟ್ಟಿಯಾದ ಲೇಖನ ಸಂಭಾವನಾ ಗ್ರಂಥ ಉಪಾಯನ (೧೯೬೭ ಪುಟ. XVII) ತುಮಕೂರು ಹೈಸ್ಕೂಲಿಗೆ ಸಂಬಂಧಪಟ್ಟ ಭಾಗವನ್ನು ಉಲ್ಲೇಖಿಸಲಾಗಿದೆ.

ಆಗ ತುಮಕೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕೆ.ವಿ. ಕೃಷ್ಣಸ್ವಾಮಿ ಅಯ್ಯರ್ ದೊಡ್ಡ ವಿದ್ವಾಂಸರೆಂದು ಸಂಗೀತ ಶಾಸ್ತ್ರಜ್ಞರೆಂದು ಮತ್ತು ಶಿಷ್ಯ ವತ್ಸಲರೆಂದು ಖ್ಯಾತಿ ಪಡೆದಿದ್ದರು. ಗುರು ಶಿಷ್ಯ ವೃಂದದಲ್ಲಿ ಹುದಿಗಿದ್ದ ಶಕ್ತಿ ಸಾಮರ್ಥ್ಯಗಳನ್ನು ಹೊರಗೆಳೆಯುವ ಸಲುವಾಗಿ ಅವರು “ಸ್ಕೂಲುಪೋಕ್‌” ಎಂಬ ಇಂಗ್ಲಿಷ್‌ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿದರು. “ದೊಡ್ಡ ಮನುಷ್ಯನು ಯಾರು” ಎಂಬ ತಲೆ ಬರಹವುಳ್ಳ ಡಿ.ಎಲ್‌.ಎನ್‌ ಅವರ ಪ್ರಥಮ ಲೇಖನ ಆ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿ ಪ್ರಕಟವಾದ ಮತ್ತೊಂದು ಇಂಗ್ಲಿಷ್‌ಲೇಖನ “The story of A cotton Seed’’ ಹೈಸ್ಕೂಲಿನಲ್ಲಿದ್ದಾಗಲೇ ಅವರು ಖಾಸಗಿಯಾಗಿ ಕುಂಟುಶಾಸ್ತ್ರಿಗಳೊಬ್ಬರಿಂದ ಸಂಸ್ಕೃತವನ್ನು ಕಲಿತು ರಘುವಂಶ ಮತ್ತು ಚಂಪು ರಾಮಾಯಣವನ್ನು ವ್ಯಾಸಂಗ ಮಾಡಿದರು. ಪ್ರತಿನಿತ್ಯ ಬೆಳಗಿನ ಜಾವ ನಾಲ್ಕು ಗಂಟೆಗೆ ಸಂಸ್ಕೃತದ ಕಸರತ್ತು ಪ್ರಾರಂಭವಾಗುತ್ತಿತ್ತು. ಇದೇ ಸಮಯದಲ್ಲಿಯೇ ಅವರ ಹೃದಯಕ್ಕೆ ಕೆಲವು ಮಿತ್ರರ ಮೂಲಕ ರೇನಾಲ್ಡನ ಕಾದಂಬರಿಗಳ ರುಚಿಯೂ ಒದಗಿ ಬಂದಿತ್ತು.

ಡಿ.ಎಲ್.ಎನ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ ಬಿ.ಎಂ. ಶ್ರೀಯವರ ಹೆಸರು ಕೇಳಿದ್ದರು. ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಶ್ರೀಯವರ ಒಲವು ಆಗ ತಾನೇ ಕನ್ನಡದ ಕಡೆಗೆ ಹರಿಯುತ್ತಿತ್ತು. ೧೯೨೪ರಲ್ಲಿ ಕೊಲಿಜಿಯೇಟ್‌ ತರಗತಿಯ ಇನ್‌ಸ್ಪೆಕ್ಷನ್‌ಗೆಂದು ಶ್ರೀಯವರು ತುಮಕೂರಿಗೆ ಹೋಗಿದ್ದರು. ಆಗ ಡಿ.ಎಲ್‌.ಎನ್‌ ಎಂಟ್ರೆನ್ಸ್‌ ತರಗತಿಯಲ್ಲಿದ್ದರು. ಆ ಸಮಯದಲ್ಲಿ Stories from Aeneid ಎಂಬ ಪಠ್ಯಪುಸ್ತಕದ ಮೇಲೆ ಉಪನ್ಯಾಸ ಮಾಡಿದರು. ಕಚ್ಚೆ ಪೇಟ, ಮುಚ್ಚು ಕೋಟುಗಳನ್ನು ಧರಿಸಿದ್ದ ಇಂಗ್ಲಿಷ್‌ ಪ್ರಾಧ್ಯಾಪಕರ ಮೂರ್ತಿಸ್ವರೂಪವನ್ನು ಡಿ.ಎಲ್‌.ಎನ್‌ಅವರು ವಿಸ್ಮಯಭೂತರಾಗಿ ನೋಡಿ ಕುತುಹಲಾಸಕ್ತಿಗಳಿಂದ ಅವರ ಭಾಷಣವನ್ನು ಕೇಳಿ ಹರ್ಷಿಸಿದರು. ಸುಮಾರು ೧೯೨೨ರ ಹೊತ್ತಿಗೆ ಅವರ ಕೈಗೆ ಸಿಕ್ಕಿದ ಕಾವ್ಯಾವಲೋಕನದ ಪ್ರತಿ ಅಲ್ಲಿಂದ ಇಲ್ಲಿಯವರೆಗೆ ಅವರ ಪ್ರೇಮಾದಾರಗಳಿಗೆ ಪಾತ್ರವಾಗುಳಿದಿದೆ ಎಂದಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಅಂದಿನ ಮೈಸೂರು ಅರಸರ ಆಳ್ವಿಕೆಯಲ್ಲಿ ಪ್ರಾರಂಭವಾದ ‘ವಯಸ್ಕರ ಶಿಕ್ಷಣದ ಪುಸ್ತಕ ಮಾಲೆ”ಯಲ್ಲಿ ೪೬ನೇ ಪ್ರಕಟಣೆಗಾಗಿ ೧೯೪೫ರಲ್ಲಿ ಒಂದೂವರೆ ಆಣೆ ಗ್ರಂಥಮಾಲೆಯಲ್ಲಿ iii+೩೩ ಪುಟದ ಪುಟ್ಟ ಕೃತಿ ಪ್ರಕಟವಾಗಿದೆ. ಮೈಸೂರು ಪ್ರಿಟಿಂಗ್‌ ಮತ್ತು ಪಬ್ಲಿಕೇಷನ್‌ ಹೌಸ್‌ ಮುದ್ರಣಾಲಯದಲ್ಲಿ ಮುದ್ರಣವಾಗಿದೆ. ಮುನ್ನುಡಿಯಲ್ಲಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ‘ಗೋವಿನ ಕಥೆ’ಯೆಂದರೆ ನಮ್ಮ ಜನರಿಗೆ ಬಲು ಅಕ್ಕರೆ. ಅದನ್ನು ಓದಿದ. ಹಾಡಿ ಕುಣಿಯದ ಕನ್ನಡದ ಮಕ್ಕಳಿಲ್ಲ. ಅವರ ಮನಸ್ಸನ್ನು ಅದು ಮುಟ್ಟಿ ಕರಗಿಸಿದೆ. ದೊಡ್ಡವರಿಗೆ ಕೂಡ ಮರಳಿ ಓದಿದಾಗ ಹೊಸ ಅರ್ಥ ಹೊಳೆಯುತ್ತದೆ. ಚಿಕ್ಕತನದಲ್ಲಿ ಕಥೆಯ ಸ್ವರಸ್ಯಕ್ಕೆ ಮಾತ್ರ ಮೆಚ್ಚಿದ್ದರೆ ಈಗ ಆದರ ಒಳಗಡೆ ಅಡಗಿರುವ ತತ್ವ ಸುಂದರವಾಗಿರುವಂತೆ ಕಂಡುಬಂದು ಕವಿತೆಯಲ್ಲಿ ಹೆಚ್ಚು ಆದರ ಉಂಟಾಗುತ್ತದೆ. ಎಲ್ಲ ತಿಳಿವಿನ ಎಲ್ಲ ಮಟ್ಟದ ಜನರಿಗೂ ಈ ಕವಿತೆ ಸಕ್ಕರೆಯಾಗಿದೆ.

ಈ ಹಾಡನ್ನು ಕಟ್ಟಿದ ಕವಿ ಯಾರೆಂಬುದು ತಿಳಿಯದು. ಅವನು ಯಾವಾಗ ಇದ್ದನೋ ಅದು ಗೊತ್ತಿಲ್ಲ. ಹಾಡಿನ ಕೊನೆಯಲ್ಲಿ ಮದ್ದೂರಿನ ನರಸಿಂಹದೇವರ ಹೆಸರು ಇರುವುದರಿಂದ ಅದನ್ನು ಬರೆದಾತ ಆ ಊರಿಗೆ ಸೇರಿದವನೋ ಇಲ್ಲವೇ ಆ ದೇವರ ಒಕ್ಕಲಿನವನೋ ಆಗಿರಬೇಕೆಂದು ತೋರುತ್ತದೆ.

ಇಲ್ಲಿ ಹೇಳಿರುವ ಕಥೆ ಬಹಳ ಹಳೆಯದು ‘ಇತಿಹಾಸ ಸಮುಚ್ಚಯ’ ಎಂಬ ಪುರಾಣ ಕಥೆಗಳ ಪುಸ್ತಕದಲ್ಲಿ ಈ ಕಥೆ ಬರುತ್ತದೆ. ಈ ಗ್ರಂಥ ಸಂಸ್ಕೃತ ಭಾಷೆಯಲ್ಲಿದೆ …. ಬಾಲಪಾಠದ ಪುಸ್ತಕಗಳಲ್ಲಿ ಈ ಹಾಡಿನ ಸಂಗ್ರಹ ಮಾತ್ರ ಸಿಕ್ಕುತ್ತದೆ. ಇದನ್ನು ಮೆಚ್ಚಿರುವವರಿಗೆ ಇದರ ಮೂಲವನ್ನು ನೋಡಬೇಕೆಂಬ ಅಪೇಕ್ಷೆ ಬರುವುದು ಸಹಜ. ಪೇಟೆಯಲ್ಲಿ ಮಾರುವ ‘ಗೋವಿನ ಹಾಡು’ ಎಂಬ ಪುಸ್ತಕವನ್ನು ಅನೇಕರು ನೋಡಿರಬಹುದು. ಅದರಲ್ಲಿರುವ ತಪ್ಪುಗಳನ್ನು ಬೇರೆ ಎರಡು ಕೈಬರಹದ ಪ್ರತಿಗಳ ಸಹಾಯದಿಂದ ತಿದ್ದಿ ಮುದ್ರಿಸಿದೆ. ಇದನ್ನು ಮೊದಲು ಹೇಳಿದ ಕವಿ ಇದರಲ್ಲಿ ಎಷ್ಟು ಪದ್ಯಗಳನ್ನು ಬಳಸಿದ್ದನೋ ತಿಳಿಯದು. ಈಚಿನವರು ಅದೇ ದಾಟಿಯಲ್ಲಿ ಪದ್ಯಗಳನ್ನು ಕಟ್ಟಿ ನಡುನಡುವೆ ಸೇರಿಸಿದ್ದಾರೆ. ಹೀಗೆ ಸೇರಿರುವ ಪದ್ಯಗಳು ಯಾವುವು ಎಂದು ಬೆರಳಿಟ್ಟು ತೋರಿಸುವುದಕ್ಕಾಗುವದಿಲ್ಲವಾದರೂ ಅವು ಇಂಥವೇ ಇರಬೇಕೆಂದು ಊಹಿಸಬಹುದು. ಎಲ್ಲಾ ಸೇರಿ ಈಗ ಒಟ್ಟು ೧೩೭ ಪದ್ಯಗಳು ಹಾಡಿನಲ್ಲಿವೆ. ಇತರರು ಸೇರಿಸಿರುವುದನ್ನು ಬಿಟ್ಟು ೧೭೭ ಪದ್ಯಗಳು ಈ ಹಾಡಿನಲ್ಲಿವೆ. ಇತರರು ಸೇರಿಸಿರುವುದನ್ನು ಬಿಟ್ಟು೧೧೪ ಪದ್ಯಗಳನ್ನು ಇಲ್ಲಿ ಅಚ್ಚು ಮಾಡಿದೆ. ಬಿಟ್ಟಿರುವ ಪದ್ಯಗಳನ್ನು ಬೇರೆ ಮುದ್ರಿಸಿದೆ. ಈ ಪುಸ್ತಕವನ್ನು ಮುದ್ರಿಸಿರುವ ಮೈಸೂರು ಸಂಸ್ಥಾನದ ಅಕ್ಷರ ಪ್ರಚಾರ ಸಮಿತಿಗೆ ತುಂಬ ಕೃತಜ್ಞತೆನಾಗಿದ್ದೇನೆ ಎಂದಿದ್ದಾರೆ.

ಹಸ್ತಪ್ರತಿ ಬಗ್ಗೆ ಯಾವ ವಿವರವೂ ಇಲ್ಲ .ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಗೋವಿನಹಾಡು’ ಕೆ.ಎ. ೧೯೦/೬ (೧೧-೧೩) ಪತ್ರ ಹಸ್ತಪ್ರತಿಯ ಆದಿಯಲ್ಲಿ ಗೋವಿನಹಾಡು ಬರೆಯುವದಕ್ಕೆ ಶುಭಮಸ್ತು ಎಂದಿದೆ. ೧೩೭ ಪದ್ಯಗಳಿವೆ.

ಕೆ. ೧೭೬೮/೩ (೪೮-೬೮) ಪತ್ರ ಹಸ್ತಪ್ರತಿಯ ಆದಿಯಲ್ಲಿ ಶ್ರೀ ಗಣಾಧಿಪತಿಯೇ ನಮಃ ಶ್ರೀ ಶಾರದಾಂಬಾಯೇ ನಮಃ ಗೋವಿನ ಕಥೆ ಬರೆವದಕ್ಕೆ ಶುಭಮಸ್ತು. ಹಸ್ತಪ್ರತಿಯ ಕಡೆಯಲ್ಲಿ ಎಷ್ಟು ಪದ್ಯ ಇದೆ ಎಂದು ವಿವರ ದಾಖಲಿಸಿಲ್ಲ.

..ನೆನೆ ವರಪು ಕೊಂದು
ಶಂಕರಾತ್ರಿಯ ಹಬ್ಬ….
ಕೇಳಿದವರಿಗೆ ಹರಮ ಕೊಡುವನು ಇಷ್ಟರ್ಥವರಗಳನೆಲ್ಲಂ
ಗೋವಿನ ಕಥೆ ಸಂಪೂರ್ಣ ಮುಗಳಂ ಶ್ರೀ ಶ್ರೀ ಶ್ರೀ

ಕೆ ೧೧೭೫/೧ (೧-೧೬) ಪತ್ರ ಹಸ್ತಪ್ರತಿಯ ಆದಿಯಲ್ಲಿ ಶ್ರೀ ಗುರುವೇ ಗತಿ ಗೋವಿನ ಪದ ಬರಹುದಕ್ಕೆ ಶುಭಮಸ್ತು ಅಂತ್ಯದಲ್ಲಿ ಗೋವಿನ ಪದ ಸಂಪೂರ್ಣ ಮಂಗಳ ಮಹಾಶ್ರೀ ಎಂದಿದೆ. ಈ ಹಸ್ತಪ್ರತಿಯಲ್ಲಿ ಕೃತಿ ಸಂಪೂರ್ಣವಾಗಿಲ್ಲ ಅಸಮಗ್ರ.

ಡಿ.ಎಲ್‌.ಎನ್. ರವರು ಗೋವಿನ ಹಾಡು ಕೃತಿ ಸಂಪಾದನೆಗೆ ಮೈಸೂರು ಸರಸ್ವತೀ ಭಂಡಾರದ ಓಲೆಯ ಪ್ರತಿ, ಮೈಸೂರು ಓರಿಯಂಟಲ್‌ ಲೈಬ್ರರಿಯ ಕಾಗದ ಪ್ರತಿ ಕೆ.ಎ.೧೯೦, ೧೮೮೯ರಲ್ಲಿ ಮದ್ರಾಸಿನಲ್ಲಿ ಅಚ್ಚಾದ ಪ್ರತಿ, ಮೈಸೂರಿನಲ್ಲಿ ಮುದ್ರಿತವಾದ ಸಚಿತ್ರ ಪ್ರತಿಯನ್ನು ಉಪಯೋಗಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮುದ್ರಿತವಾದ ಸಚಿತ್ರ ಪ್ರತಿ, ಮುಮ್ಮಡಿಯವರ ಕಾಲದಲ್ಲಿ ಅಚ್ಚಾದ ಕಲ್ಲಚ್ಚು ಪ್ರತಿ ಇರಬಹುದೆ ವಿವರ ಲಭ್ಯವಿಲ್ಲ.

ಕೆ.ಎ. ೧೯೦/೬ ಕಾಗದ ಹಸ್ತಪ್ರತಿಯ ಕಡೆಯಲ್ಲಿ

ಪರಂಧಾಮನೇ ಪದ್ಮನಾಭನೆ
ಮದ್ದೂರು ಶ್ರೀನಾರಸಿಂಹ್ವನೆ
ಮುದ್ದವರಗಳ ಕೊಡುವ ನಿಮಗೆಯು
ನಮೋ ನಮೋ ಮಂಗಳಂ ||೧೩೭||
ಗೋವಿನ ಹಾಡು ಸಂಪೂರ್ಣ ಜಯಮಂಗಳ ಮಹಾಶ್ರೀ ||

ಕನ್ನಡ ನಾಡಿನ ಮಕ್ಕಳು ಹೆಮ್ಮಿಯಿಂದ ಗರ್ವದಿಂದ ಹಾಡುತ್ತಾ ಇದ್ದ ನೀತಿ ಬೋಧಕ ಸಾಂಗತ್ಯ ಪದ್ಯವನ್ನು ತಲಸ್ಪರ್ಶಿಯಾಗಿ ಶೋಧಿಸಿ ಕನ್ನಡಮ್ಮನ ಪಾದ ಕಮಲಗಳಿಗೆ ಅರ್ಪಿಸಿದರು. ತಮ್ಮ ಸೂಕ್ಷ್ಮ ಚಕ್ಷುವಿನಿಂದ ಹೊಸದಾಗಿ ಬರೆದು ಸೇರಿಸಿರುವ ಪದ್ಯಗಳು ಇವು ಇರಬಹುದೆಂದು ಗುರುತಿಸಿದ್ದಾರೆ. ಈ ಕೃತಿ ಮತ್ತೆ ಮೈಸೂರಿನ ಶಾರದಾ ಮಂದಿರದಿಂದ ೧೯೬೦ರಲ್ಲಿ ಪ್ರಕಟವಾಗಿದೆ.

೨೩೭ ಪದ್ಯಗಳು ಇರುವ ಹಸ್ತಪ್ರತಿಯನ್ನು ಡಿ.ಎಲ್‌.ಎನ್‌ರವರಿಗೆ ವಿದ್ವಾನ್‌ ಟಿ. ಕೇಶವಭಟ್ಟ ತೋರಿಸಿದರಂತೆ. ಅದನ್ನು ನೋಡಿ ಅಚ್ಚರಿಪಟ್ಟರಲ್ಲದೆ, ಅದನ್ನು ಶಾಸ್ತ್ರೀಯವಾಗಿ ಸಂಪಾದಿಸಲು ಸೂಚಿಸಿದರಂತೆ ಅವರ ಸೂಚನೆಯಂತೆ ಸಂಪಾದಿತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಸಾ.ಶಿ. ಮರುಳಯ್ಯನವರ ಕಾಲದಲ್ಲಿ ೧೯೯೮ರಲ್ಲಿ Viii+೨೩೧ ಪುಟದ ಗೋವಿನ ಸಾಹಿತ್ಯ ಸಂಪೂರ್ಣವಾಗಿ ಅಚ್ಚು ಮಾಡಲಾಗಿದೆ. ೧. ಗೋವಿನ ಕತೆ ಹಾಡು ೨. ಗೋವಿಜಯ ೩. ಯಕ್ಷಗಾನ ಗೋವಿನ ಕಥೆ ೪. ಆಕಳ ಹಾಡು ೫. ಕವುಲಿ ಹಾಡು ೬. ಕೌಲೆ ಹಾಡು ೭. ಕಾಮಧೇನು ಗೋವಿನ ಕಥೆ ೮. ಗೋವಿನ ಹಾಡು, ಸಂಸ್ಕೃತದಲ್ಲಿ ೯. ಬಹಲೋಪಾಖ್ಯಾನ ೧೦. ನಂದೋಪಾಖ್ಯಾನ ೧೧. ಗೋಸಾವಿತ್ರಿ ಸ್ತೋತ್ರಂ ಇದೆ. ಗೋ ಸಾಹಿತ್ಯ ಅಧ್ಯಯನಕ್ಕೆ ಶ್ರೀಕಾರ ಹಾಕಿದ ಡಿ.ಎಲ್‌.ಎನ್‌ರವರಿಗೆ ಈ ಎಲ್ಲಾ ಕೀರ್ತಿ ಸಲ್ಲಬೇಕು.