ಆಧುನಿಕ ಯುಗದ ಅಂದರೆ ಈ ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯ ದೃಷ್ಟಿ, ವಿಸ್ತಾರದಲ್ಲಿ ವೈವಿಧ್ಯದಲ್ಲಿ, ವ್ಯಾಪ್ತಿಯಲ್ಲಿ ಬಹುಮುಖವಾಗಿ ಬೆಳೆಯುತ್ತಿದೆ. ಇದಕ್ಕೆ ಇಂಗ್ಲಿಷ್‌ಸಾಹಿತ್ಯದ ಪ್ರಭಾವವೇ ಬಹುಮಟ್ಟಿಗೆ ಕಾರಣವೆನ್ನಬೇಕು. ಆ ಸಾಹಿತ್ಯವಾಚನ ನಮ್ಮಲ್ಲಿ ಪ್ರಚೋದಿಸಿಸ ಶಕ್ತಿಯಿಂದ ಭಾರತೀಯ ಸಾಹಿತ್ಯ ರಂಗದಲ್ಲಿ ಒಂದು ನವೋದಯವೇ ಪ್ರಾರಂಭವಾಯಿತು. ಆದರೆ ಆ ಅರುಣೋದಯಕ್ಕೆ ಮೊದಲು ರಾಜಕೀಯ ರಂಗದಲ್ಲಿದ್ದಂತೆ ಒಂದು ರೀತಿಯ ಕತ್ತಲು ಕನ್ನಡ ಸಾಹಿತ್ಯವನ್ನು ಮುಸುಗಿದ್ದದು ಕಂಡು ಬಂದರೂ ಅದರೊಳಗಿನಿಂದಲೇ ನವಮನ್ವಂತರದ ಹೊಸ ಬೆಳಗಿನ ದುಂದುಭಿ ಧ್ವನಿ ಕೇಳಿಬರುತ್ತದೆ. ಶಾಖೋಪಶಾಖೆಯಾಗಿ ಸಾಹಿತ್ಯ ಕುಡಿಯೊಡೆದು ಬೆಳೆಯುವ ಸುಂದರ ದೃಶ್ಯ ಕಂಡುಬರುತ್ತದೆ.

ಈ ಸಾಹಿತ್ಯದ ವೃಕ್ಷದ ಬಾಹ್ಯ ಪ್ರಚೋದನೆ ಆಂಗ್ಲ ಸಾಹಿತ್ಯದಿಂದ ಬಂದಿದೆ, ನಿಜ ಆದರೂ ಅದರ ಚಿರಂತನವಾದ ಬೆಳವಣಿಗೆಗೆ ಒದಗಬೇಕಾದ ಚೈತನ್ಯ ರಸ ಕನ್ನಡದ ತಾಯಿ ಬೇರಿನದೆಂಬುದನ್ನು ಮರೆಯಲಾಗದು. ಆದ್ದರಿಂದಲೇ ಸಾವಿರಾರು ವರ್ಷಗಳಿಂದ ಆಳವಾಗಿ ಬೇರು ಬಿಟ್ಟಿರುವ ಕನ್ನಡ ಸಾಹಿತ್ಯ ಪರಂಪರೆಯ ಶಕ್ತಿ ಪರಿಚಯವನ್ನು ಈಗಿನ ನಮ್ಮ ಹೊಸ ಹೊಸ ಅನುಭವಗಳ ಬೆಳಕಿನಲ್ಲಿ ಮಾಡಿಕೊಳ್ಳುವ ಪ್ರಯತ್ನ ನಡೆಯ ಬೇಕಾಗುತ್ತದೆ. ಹಾಗೆಯೇ ಹೊಸ ಯುಗದ ಆರಂಭದ ಕಾಲದಲ್ಲಿ. ಹೊಸ ಸೃಷ್ಟಿಯ ಜೊತೆಗೆ ಹಳೆಯದರ ಪರಿಷ್ಕಾರವೂ ನಡೆದಿರುವುದನ್ನು ಕಾಣುತ್ತೇವೆ.

ಹಿಂದಿನ ಅನೇಕ ಕೃತಿಗಳಲ್ಲಿ ಪ್ರತಿಬಿಂಬಿತವಾಗಿರುವ “ಯುಗಧರ್ಮ” ಇಂದು ನಮ್ಮ ಆಧುನಿಕ ಪ್ರಪಂಚಕ್ಕೆ ಹೊಂದದಿರಬಹುದಾದರೂ ಆ ಯುಗ ಧರ್ಮವನ್ನು ಮೀರಿದ ಸನಾತನ ಸತ್ಯದ ಹೊಳಹನ್ನು ನಮ್ಮ ವಿದ್ವಾಂಸರು ಕಂಡರು. ಹಿಂದಿನ ಕೃತಿಗಳ ಶಕ್ತಿಯನ್ನು ಇಂದಿನ ಅನುಭವದ ಒರೆಗಲ್ಲಿನಲ್ಲಿ ಉಜ್ಜಿ ನೋಡಿದರು. ಅವುಗಳಲ್ಲಿರುವ ಎಂದೆಂದೂ ಕುಂದದ ಕಾಂತಿಯನ್ನು ಇಂದಿನ ಮಾತುಗಳಲ್ಲಿ ವಿಮರ್ಶಿಸಿದರು. ಅಂತಹ ಶಕ್ತರಾದ ಕೆಲವೇ ವಿಮರ್ಶಕರಲ್ಲಿ ಶ್ರೀಮಾನ್‌ ಡಿ.ಎಲ್‌. ನರಸಿಂಹಾಚಾರ್ಯರು ಒಬ್ಬರು ಅಂತಹ ನಿರ್ದಿಷ್ಟವಾದ ವಿಮರ್ಶೆಯ ಪ್ರತೀಕಗಳಲ್ಲಿ ‘ಸಿದ್ಧರಾಮ ಚರಿತೆಯ ಸಂಗ್ರಹ’ವೂ ಒಂದು.

ಶ್ರೀ ಡಿ.ಎಲ್‌.ಎನ್‌. ರವರು ಅಪೂರ್ವ ಶಕ್ತಿಗಳ ಸಂಗಮ. ಅದ್ಭುತವಾದ ಪಾಂಡಿತ್ಯ ಒಂದು ಕಡೆ, ಕವಿ ಪ್ರತಿಭಾ ನಿರ್ಮಿತವಾದ ಸರ ಸನ್ನಿವೇಶಗಳ ರಹಸ್ಯವನ್ನು ಕಾಣುವ “ರಸದೃಷ್ಟಿ” ಇನ್ನೊಂದು ಕಡೆ. ಇವೆರಡನ್ನೂ ಒಟ್ಟಿಗೇ ಅವರಲ್ಲಿ ಕಾಣುತ್ತೇವೆ. ಆದುದರಿಂದಲೇ ಅವರ ವಿಮರ್ಶೆ ಕೆವಲ ಭಾವಾವೇಶದಿಂದ ಕೂಡಿರದೆ ಸಮತೋಲನಾತ್ಮಕವಾದ ಮತ್ತು ತುಲನಾತ್ಮಕವಾದ ಬುದ್ಧಿಯ ಅಳತೆಗೋಲಿನಿಂದ ಮೂಡಿಬರುತ್ತದೆ.

ಅವರ ಪಾಂಡಿತ್ಯ ಆಳವಾದುದು, ವಿಸ್ತಾರವಾದುದು, ಬಹು ವಿಷಯ ವ್ಯಾಪಕವಾದುದು, ತೆರೆದ ಮನಸ್ಸಿನಿಂದ ಹೊಸದನ್ನು ಬರಮಾಡಿಕೊಳ್ಳುವಂತಹ ನಿತ್ಯನೂತನವಾದುದು, ಸೌಜನ್ಯಶೀಲವಾದುದು. ಅವರ ವಿದ್ವತ್ತಿನ ಸ್ವರೂಪವನ್ನು ಕಂಡು ಅವರ ವಿದ್ಯಾರ್ಥಿಗಳಾದ ನಾವು ಅನೇಕ ವೇಳೆ ವಿಸ್ಮಯ ಮೂಕರಾಗಿದ್ದೇವೆ. ಇಂತಹ ಪಾಂಡಿತ್ಯದ ಪೂರ್ಣ ಪ್ರಯೋಜನವನ್ನು ಕನ್ನಡ ಲೋಕ ಪಡೆಯುತ್ತಿಲ್ಲವಲ್ಲಾ ಎಂದು ಮರುಗಿಯೂ ಇದ್ದೇವೆ.

ಅವರಿಗಿರುವ ವಿದ್ವತ್ತಿನ ದೃಷ್ಟಿಯಿಂದ ನೋಡಿದಾಗ ಅವರು ಬರೆದುದು ಬಹಳ ಸ್ವಲ್ಪವೆಂದು ಅನಿಸದೇ ಇರಲಾರದು. ಆದರೂ ಅದು ಗಾತ್ರದ ದೃಷ್ಟಿಯಿಂದ ‘ಸ್ವಲ್ಪ’ವಾದರೂ ಮಹತ್ತಿನ ದೃಷ್ಟಿಯಿಂದ ಸ್ವಲ್ಪವೇನಲ್ಲ. ಏನನ್ನು ಮಾಡಿದರೂ ಅಚ್ಚಕಟ್ಟಾಗಿ ಮಾಡಬೇಕೆನ್ನುವುದೇ ಅವರ ಕಾರ್ಯವಿಧಾನದ ಮೂಲಮಂತ್ರ. ಅವಸರದ ಸಾರಥಿಯಾಗುವ ಖ್ಯಾತಿಯ ಬಯಕೆಯನ್ನೆಂದೂ ಅವರು ಬಳಿಗೆ ತಂದವರಲ್ಲ. ಅವರ ವಿದ್ಯಾರ್ಥಿಗಳಾಗಿದ್ದಾಗ ನಮಗೆ ಅವರು ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. “ಹತ್ತು ವರ್ಷಗಳ ಕಾಲ ಸಾಹಿತ್ಯವನ್ನು ಚೆನ್ನಾಗಿ ಜಾಲಾಡಿರಿ, ಆತುರಪಡಬೇಡಿ. ಏನನ್ನಾದರೂ ಗಟ್ಟಿ ಕೆಲಸವನ್ನು ಮಾಡಿ” ಎನ್ನುತ್ತಿದ್ದರು. “ಹತ್ತು ಕಟ್ಟುವ ಕಡೆ ಒಂದೂ ಮುತ್ತು ಕಟ್ಟು” ಎನ್ನುವ ಸ್ವಭಾವ ಅವರದು. ಅವರ ಒಂದೊಂದು ಕೃತಿಯಲ್ಲಿಯೂ ಇದನ್ನು ಚನ್ನಾಗಿ ಕಂಡುಕೊಳ್ಳುತ್ತೇವೆ. ಈಗ ಪ್ರಕೃತದಲ್ಲಿ ಸಿದ್ಧರಾಮ ಚರಿತೆಯ ಸಂಗ್ರಹವನ್ನು ಕುರಿತು ಹೇಳಬೇಕಾಗಿರುವುದರಿಂದ ಅದಕ್ಕೆ ಮಾತ್ರ ನನ್ನ ಮಾತುಗಳನ್ನು ಸೀಮಿತಗೊಳಿಸಿಕೊಳ್ಳುತ್ತೇನೆ.

ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರು ಸಂಕಲ್ಪಿಸಿದ ಕಾರ್ಯವನ್ನು ಮುಂದುವರೆಸಿ ಸಿದ್ಧರಾಮ ಚಾರಿತ್ರವನ್ನು ಮೊಟ್ಟಮೊದಲು ಬೆಳಕಿಗೆ ತರುವುದಕ್ಕೆ ಕಾರಣಕರ್ತರಾದವರು ಶ್ರೀಮಾನ್‌ಡಿ.ಎಲ್‌.ನರಸಿಂಹಾಚಾರ್ಯರವರೇ. ಹಲವಾರು ಓಲೆಗರಿಗಳ ಸಹಾಯದಿಂದ ನಿರ್ದೋಷವಾದ ರೀತಿಯಲ್ಲಿ ಪರಿಷ್ಕರಿಸಿ ಇಂತಹ ಗ್ರಂಥಗಳನ್ನು ಹೊರತರುವುದು ಸುಲಭವಾದ ಕೆಲಸವೇನಲ್ಲ. ಅದನ್ನು ಎಷ್ಟೊಂದು ದಕ್ಷತೆಯಿಂದ ವಹಿಸಿದ್ದಾರೆಂಬುದನ್ನು ಮನಗಾಣಬೇಕಾದರೆ ಸಿದ್ಧರಾಮ ಚಾರಿತ್ರವನ್ನೇ ನೋಡಬೇಕು. ಅನಂತರ ಅವರೇ ಸಿದ್ಧರಾಮ ಚಾರಿತ್ರವನ್ನು ಸಂಗ್ರಹಿಸಿ ಮೊದಲು ತಾನೇ ಬರೆದಿದ್ದ ಪೀಠಿಕೆಯನ್ನು ಅಲ್ಲಲ್ಲಿ ಪುನವಿಮರ್ಶಿಸಿ ಸುಂದರವಾದ “ಸಿದ್ಧರಾಮ ಚರಿತೆಯ ಸಂಗ್ರಹ’ವನ್ನು ಕೊಟ್ಟಿದ್ದಾರೆ.

ಸಂಗ್ರಹವೆನ್ನುವುದು ಒಂದು ರೀತಿಯಲ್ಲಿ ಕಾವ್ಯದ ವಿಮರ್ಶೆಗಿಂತ ಹೆಚ್ಚಿನ ಹೊಣೆಗಾರಿಕೆಯ ಕೆಲಸ. ಕವಿಯ ಉದ್ದೇಶಕ್ಕೆ, ಆತನ ಕಾವ್ಯ ಕಲ್ಪನೆಗೆ, ಪಾತ್ರ ದರ್ಶನಕ್ಕೆ ಭಂಗ ಬರದಂತೆ ಇದನ್ನು ನಿರ್ವಹಿಸಬೇಕಾಗುತ್ತದೆ. ಕವಿ ಶಕ್ತನಾದಷ್ಟು ಈ ಕೆಲಸದ ಕಷ್ಟ ಹೆಚ್ಚು. ನೀರಸವಾದ ಪದ್ಯಗಳನ್ನು ನೂರಾರುಗಟ್ಟಲೆ ಹೊಸೆಯುವ ಕವಿಗಳ ಕಾವ್ಯಗಳಲ್ಲಿ ಸಂಗ್ರಹ ಸುಲಭ. ಆದರೆ ರಾಘವಾಂಕನಂತಹ ಮಹಾಕವಿಯ, ಅದರಲ್ಲೂ ಸಿದ್ಧರಾಮ ಚರಿತ್ರದಂತಹ ಗ್ರಂಥವನ್ನು ಸಂಗ್ರಹಿಸುವುದು ಸುಲಭವಲ್ಲ.

ಸಿದ್ಧರಾಮಚಾರಿತ್ರ ಕೆಲವು ದೃಷ್ಟಿಗಳಿಂದ ಕನ್ನಡ ಸಾಹಿತ್ಯದಲ್ಲಿಯೇ ಅದ್ವಿತೀಯವಾದ ಕೃತಿ. ಐತಿಹಾಸಿಕ ಮಹಾಪುರುಷನೊಬ್ಬನ ಜೀವನವನ್ನು ಕಾವ್ಯರೂಪದಲ್ಲಿ ಚಿತ್ರಿಸುವ ಮಹತ್ತರವಾದ ಮಾರ್ಗವೊಂದನ್ನು ರಾಘವಾಂಕ ಇಲ್ಲಿ ಸಾಧಿಸಿದ್ದಾನೆ. ಚನ್ನಬಸವ ಪುರಾಣದ ವಿರೂಪಾಕ್ಷ ಪಂಡಿತನಾಗಲೀ, ಬಸವಪುರಾಣದ ಭೀಮ ಕವಿಯಾಗಲೀ ಮತ್ತು ಇತರ ಪುರಾಣ ಕರ್ತೃಗಳಾಗಲೀ ಈ ಮಾರ್ಗವನ್ನು ಅವಲಂಬಿಸದೇ ಹೋದುದು ಕನ್ನಡ ಸಾಹಿತ್ಯಕ್ಕೆ ಆದ ನಷ್ಟವೇ ಹೊರತು ರಾಘವಾಂಕನಿಗೆ ಆದ ನಷ್ಟವಲ್ಲ. ರಾಘವಾಂಕನಂತೂ ಆ ಕಾಲದಲ್ಲಿ ರೂಢವಾಗಿದ್ದ ಸಂಪ್ರದಾಯಗಳನ್ನು ಬದಿಗಿಟ್ಟು ಅಷ್ಟಾದಶವರ್ಣಗಳಿಗಾಗಿ ಅತ್ತಿತ್ತ ಹರಿದಾಡದೆ ಉಪಕಥೆಗಳ ತೊಡಕಿನ ಬಲೆಯನ್ನು ನೆಯ್ಯದೆ, ನೇರವಾಗಿ ಸಂಗ್ರಹವಾಗಿ ಹೇಳಿಕೊಂಡು ಹೋಗಿದ್ದಾನೆ. ಗಾತ್ರದ ದೃಷ್ಟಿಯಿಂದ ಹಿಂದಿನ ಪುರಾಣಗಳಲೆಲ್ಲ ಅತಿ ಚಿಕ್ಕದಾದುದೆಂದರೆ ಸಿದ್ಧರಾಮ ಚರಿತ್ರೆಯೇ. ಇಂತಹ ಗ್ರಂಥಗಳನ್ನು ಸಂಗ್ರಹಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಸಂಗ್ರಹಿಸಲೇಬೇಕೆಂದು ಅಲ್ಲೊಂದು ಇಲ್ಲೊಂದು ಪದ್ಯಗಳನ್ನು ಬಿಡುತ್ತಾ ಹೋದ ಮಾತ್ರಕ್ಕೆ ಸಂಗ್ರಹವಾಗುವುದಿಲ್ಲ. ಅದರಿಂದ ಕವಿಗೆ ಅನ್ಯಾಯವಾಗುತ್ತದೆ. ಕವಿಯ ಆಶಯಕ್ಕೆ ಭಂಗ ಬರದಂತೆ ಸಂಗ್ರಹಿಸುವುದು ಸಂಗ್ರಹಕಾರನ ಹೊಣೆ. ಆ ಹೊಣೆಯನ್ನು ಶ್ರೀ ಡಿ.ಎಲ್‌. ನರಸಿಂಹಚಾರ್ಯರಂತಹವರು ಮಾತ್ರ ಸಮರ್ಥ ರೀತಿಯಿಂದ ಹೇಗೆ ನಿರ್ವಹಿಸಬಲ್ಲರೆಂಬುದನ್ನು ಈ ಸಂಗ್ರಹವನ್ನು ನೋಡಿದ ಮೇಲೆ ಕಂಡುಕೊಳ್ಳುತ್ತೇವೆ.

ಆದರೂ ಅಲ್ಲಿ ಇಲ್ಲಿ ಇನ್ನೂ ಒಂದೆರಡು ಪದ್ಯಗಳನ್ನು ಬಳಸಿಕೊಂಡರಾಗುತ್ತಿದ್ದಿತೇನೋ ಎನಿಸುತ್ತದೆ. ಉದಾಹರಣೆಗೆ ಕವಿ ಗ್ರಂಥ ಪ್ರಾರಂಭದಲ್ಲಿ ತನ್ನ ಕೃತಿಯನ್ನು ಕುರಿತು ಹೇಳುವ ಒಂದೆರಡು ಪದ್ಯಗಳನ್ನು ನೋಡಬಹುದು.

ಹದಿನೆಂಟು ವರ್ಣನೆಗಳು ತನ್ನ ಕಾವ್ಯಕ್ಕೆ ಬೇಕಾಗಿಲ್ಲವೆಂದು ಹೇಳುತ್ತಾ ರಾಘವಾಂಕ ಹೀಗೆ ಹೇಳಿದ್ದಾನೆ;

“ವರಸುಧಾರೋಗಣೆಗೆ ಮಾಧುರದ ಹಂಗೇಕೆ
ತರಣಿಯೋಲಗಕೆ ಸೊಡರಂ ಪಿಡಿವ ತೊಡಕೇಕ
ಪರುಷದಾಭರಣಗೆಲಸಕ್ಕೆ ಮಿಸುನಿಯನಱಸಿ ತೊಳಲುವಾಯಸವೇತಕೆ |
ನೆರೆದ ಸೊಗಸಿನ ಸುಗ್ಗಿ ರಸದ ಮಡು ಪುಣ್ಯದಾ
ಗರವೆನಿಪ ಸಿದ್ಧರಾಮನ ಕಥೆಗೆ ಕಾವ್ಯಮಂ
ವಿರಚಿಸುವಡಷ್ಟಾದಶಸ್ಥಲವ ಪೊಗಳಲೇ ಕಗ್ಗದ ಸಮರ್ಥ ಕವಿಗೆ ||

ಹಾಗೆಯೇ :

“ನಾರು ಬೇರಂಜನಂ ಘುಟಕೆ ಮೂಲಿಕೆ ಬಿಲ ದ್ವಾರ ರಸಸಿದ್ಧಿ ಧಾತೂವಾದ ವಶ್ಯ ಕುಟಿ
ಲಾರಾಧನಂ ವಲಿತ ಮಂತ್ರ ನಾಶಂ ಕಾಲಂವಚನಾಭ್ಯಾಸ ಯೋಗಂ |
ಮಾರಣಾದಿ ವಿಕ್ರಮ ಮಂತ್ರ ಯಂತ್ರಂ ತಂತ್ರ
ಸಾರ ಪರಕಾಯ ಪ್ರವೇಶಮಂ ಬಯಸುವ ವಿ
ಕಾರಿ ಸಿದ್ಧರು ಸರಿಯೆ ಸಿದ್ಧರಾಮಂಗೆ ಶಿವಸಿದ್ಧ ಕುಲ ಕಮಲರವಿಗೆ ||

ಎಂದು ಕುಟಲ ಸಿದ್ಧರನ್ನು ಟೀಕಿಸಿ ಸಿದ್ಧಿಯ ನಿಜಸ್ವರೂಪವನ್ನು ಸೂಚಿಸುವ ಪದ್ಯವನ್ನಾಗಲೀ ಮತ್ತು:

“ಭಸಿತವೇ ಘುಟಿಕೆ ರುದ್ರಾಕ್ಷೆ ಮೂಲಿಕೆ ಸಿದ್ಧ
ರಸ ಮೂಲಮಂತ್ರ ನಿಜಹಸ್ತ ಮೂಷಿಕೆ ನಿಯಾ
ಮಿಸುವಾಜ್ಞೆಯಿಂಧನಂ ಜ್ಞಾನಾಗ್ನಿಯಗ್ನಿಯುಪದೇಶ ಕಣ್ಣಿಡುವುದಾಗಿ
ಹೊಸ ಪಾಪ ಕಳೆದಾ ಗಂಧ ಕಾಳಿಕೆ ಕೆಡಲು ಭವಿಲೋಹ
ವಿಸರಮಂ ಕಳೆದಾ ಮಹಾಮಹೇಶ್ವರರೆನಿಪ
ಮಿಸುನಿಯಂ ಮಾಡಿ ರುದ್ರಂಗೆ ಮಾಱುವ ಸಿದ್ಧನಾ ಸಿದ್ಧರಾಮಯ್ಯನು ||

ಎಂದು ಸಿದ್ಧರಾಮನ ರಸವಿದ್ಯೆಯ ವಿರಾಟ್‌ಸ್ವರೂಪವನ್ನು ಸೂಚಿಸುವ ಪದ್ಯವನ್ನಾಗಲೀ ಸೇರಿಸಬಹುದಾಗಿದ್ದಿತು ಎನ್ನಿಸುತ್ತದೆ. ಇದು ಅಭಿಪ್ರಾಯದ ಮಾತು ಅಷ್ಟೆ. ಒಟ್ಟಿನಲ್ಲಿ ರಾಘವಾಂಕನ ಕೃತಿರತ್ನವನ್ನು ಅದರ ರಹಸ್ಯವನ್ನರಿತು ಉಜ್ಜಿ ಉಜ್ವಲಗೊಳಿಸಿದ್ದಾರೆ ಶ್ರೀ ಡಿ.ಎಲ್‌.ಎನ್‌. ಅವರು ಈ ಸಂಗ್ರಹದಲ್ಲಿ.

ಈ ಸಂಗ್ರಹಕ್ಕೆ ಅವರು ಬರೆದ ವಿಸ್ತಾರವಾದ ಪೀಠಿಕೆ ಇದರ ಉಪಯುಕ್ತತೆಯನ್ನು ಇನ್ನೂ ಹೆಚ್ಚಿಸಿದೆ.ಕವಿ ಮತ್ತು ಅವನ ಕಾಲ, ಚಾರಿತ್ರಿಕ ವ್ಯಕ್ತಿ ಸಿದ್ಧರಾಮ, ಕವಿ ಅವನ ಮೂರ್ತಿ ಸ್ವರೂಪವನ್ನು ಚಿತ್ರಿಸಿರುವ ಬಗೆ, ಕಥೆಯ ಮೂಲ ಮತ್ತು ಬೆಳವಣಿಗೆ, ಕೃತಿ ವಿಮರ್ಶೆ ಇವೆಲ್ಲವುಗಳನ್ನು ಕುರಿತು ಇಲ್ಲಿ ವಿವೇಚಿಸಿದ್ದಾರೆ.

ವಿಷಯ ಜಿಜ್ಞಾಸೆಯಲ್ಲಿ ಯಾವ ಭಾವಾವೇಶಕ್ಕೂ ಒಳಗಾಗದೆ ಮಾತುಗಳನ್ನು ತೂಕ ಮಾಡಿ ಹಾಕುವುದು ಡಿ.ಎಲ್‌.ಎನ್‌. ರವರ ವಿಶಿಷ್ಟ ಗುಣ. ಅದು ಪಾಂಡಿತ್ಯಕ್ಕೆ ಭೂಷಣವೂ ಹೌದು. ಕವಿಯ ಕಾಲ ನಿರ್ಧಾರ ಮುಂತಾದ ಚರ್ಚಾಸ್ಪದವಾದ ವಿಚಾರಗಳನ್ನು ಚರ್ಚಿಸುವಾಗಲಂತೂ ಅವರು ಕೈಕೊಳ್ಳುವ ಮಾರ್ಗ ಸಾಹಿತ್ಯ ಸಂಶೋಧಕರಿಗೆ ಅನುಕರಣೀಯವಾದುದು. ಮೊದಲೇ ಯಾವುದೋ ಒಂದು ನಿರ್ಧಾರಕ್ಕೆ ಬಂದು ಬಿಟ್ಟು ಅನಂತರ ಆ ನಿರ್ಧಾರವನ್ನು ಸಮರ್ಥಿಸಿ ಕೊಳ್ಳುವುದಕ್ಕೆ ಮಾತ್ರ ವಾದ ಮಾಡುವುದು ಮತ್ತು ಸಿಕ್ಕ ಆಧಾರಗಳನ್ನು ಕಷ್ಟಪಟ್ಟು ತಮ್ಮ ಮೂಗಿನ ನೇರಕ್ಕೆ ತಿರಚಿಕೊಳ್ಳುವುದೂ ಸಾಹಿತ್ಯ ಸಂಶೋಧಕರ ನೇರವಾದ ಮಾರ್ಗಗಳಲ್ಲಿ. ಯಾವ ಪೂರ್ವಗ್ರಹ ದೂಷಿತವೂ ಅಲ್ಲದ ನಿಚ್ಚಳವಾದ ಮನಸ್ಸಿನಿಂದ ಸತ್ಯಾನ್ವೇಷಣೆಯಲ್ಲಿ ತೊಡಗಬೇಕಾಗುತ್ತದೆ. ಹೊಸ ಹೊಸ ಪ್ರಯೋಗಗಳಿಂದ, ಅವುಗಳ ಫಲಿತಾಂಶವನ್ನು ಕಂಡ ನಂತರವೇ ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸುವ ವಿಜ್ಞಾನಿಯ ಮನೋಧರ್ಮ ಸಂಶೋಧಕನದು. ಅದನ್ನು ಡಿ.ಎಲ್‌.ಎನ್‌. ರವರ ಅನೇಕ ಲೇಖನಗಳಲ್ಲಿ ಕಾಣುತ್ತೇವೆ. ಅಲ್ಲಿ ರಾಘವಾಂಕನ ಕಾಲವನ್ನು ಕುರಿತು ಅವರು ಚರ್ಚಿಸಿರುವುದರಲ್ಲಿಯೂ ಅದೇ ಮನೋಧರ್ಮ ಮೂರ್ತಗೊಂಡಿದೆ. ಈ ಎಲ್ಲ ಜಿಜ್ಞಾಸೆಯ ಫಲವಾಗಿ ಕೊನೆಗೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

“ಹರಿಹರನು ಒಂದನೆ ನರಸಿಂಹನ ಆಳಿಕೆಯಲ್ಲಿಯೋ, ಅವನ ಮಗನಾದ ಎರಡನೆಯ ವೀರಬಲ್ಲಾಳನಲ್ಲಿಯೋ ಕೆಲವು ವರ್ಷ ಕರಣಿಕನಾಗಿದ್ದು ಹಂಪೆಗೆ ಬಂದು ಅಲ್ಲಿ ನೆಲಸಿ ೧೨೦೦ ರ ಸುಮಾರಿಗೆ ಪಂಪಶತಕ, ಗಿರಿಜಾಕಲ್ಯಾಣಗಳನ್ನು ರಚಿಸಿ ಆಮೇಲೆ ರಗಳೆಗಳನ್ನು ಬರೆದು ಎರಡನೆ ನರಸಿಂಹನ ಆಳಿಕೆಯ ಪ್ರಾರಂಭದಲ್ಲಿ ಎಂದರೆ ಸು. ೧೨೨೫ರಲ್ಲಿ ವಿರೂಪಾಕ್ಷನಲ್ಲಿ ಐಕ್ಯವಾದಂತೆ ಊಹಿಸಬಹುದು. ಕೆರೆಯ ಪದ್ಮರಸನೂ ಮೇಲೆ ಹೇಳಿದ ರಾಜರ ಆಳಿಕೆಗಳಲ್ಲಿ ಬಾಳಿದ್ದು ಹರಿಹರನು ಲಿಂಗೈಕ್ಯನಾದ ಸುಮಾರಿನಲ್ಲಿ ಗತಿಸಿರಬೇಕು. ಇವರಿಬ್ಬರಿಗಿಂತಲೂ ೧೫-೨೦ ವರ್ಷಗಳು ಕಿರಿಯವರಾಗಿದ್ದ ರಾಘವಾಂಕ ಕುಮಾರ ಪದ್ಮರಸರು ೧೨೫೬ ರವರೆಗೂ ಆಳಿದ ವೀರ ಸೋಮೇಶ್ವರನ ಆಳಿಕೆಯಲ್ಲಿ ಕೆಲವು ವರ್ಷಗಳವರೆಗೂ ಇದ್ದು ಸು. ೧೨೪೦ ರಲ್ಲಿ ಗತಿಸಿರಬೇಕು. ಈ ವಿಷಯವನ್ನು ಖಚಿತವಾಗಿ ಹೇಳಲು ತಕ್ಕ ಆಧಾರಗಳು ಸಾಲವಾದರೂ ವಸ್ತುಸ್ಥಿತಿಗೆ ಇದು ಅವಿರೋಧವಾಗಿರುವಂತೆ ಕಾಣುತ್ತದೆ. ರಾಘವಾಂಕನು ತನ್ನ ‘ವೀರೇಶ ಚರಿತೆ’ ಹೊರತಾದ ಇತರ ಕಾವ್ಯಗಳನ್ನು ೧೨೦೦ರಿಂದ ಈಚೆಗೆ ರಚಿಸಿರಬೇಕೆಂಬ ಪಕ್ಷ ವಿಶ್ವಸನೀಯವೆಂದು ಹೇಳಬಹುದು”.

ಮುಂದೆ ಚಾರಿತ್ರಿಕ ವ್ಯಕ್ತಿ ಸಿದ್ಧರಾಮನನ್ನು ಕುರಿತ ವಿವೇಚನೆ ಸಂಕ್ಷೇಪವಾಗಿ ಬರುತ್ತದೆ. ಸಿದ್ಧರಾಮನು ಚಾರಿತ್ರಿಕ ವ್ಯಕ್ತಿಯೆಂದೂ ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ ಮಾಡಿದವನೆಂದೂ, ಮತ್ತು ಅವನು ವಚನಕಾರನೂ ಆಗಿದ್ದನೆಂಬುದನ್ನೂ ಶಾಸನದ ಆಧಾರದಿಂದಲೇ ಶ್ರೀ ಡಿ.ಎಲ್‌.ಎನ್‌. ಒಪ್ಪಿದ್ದಾರೆ. ಮತ್ತು ಅವನ ವಚನಗಳಿಂದಲೇ ತಿಳಿದು ಬರುವ ಅವನ ವಿಷಯವನ್ನು ಕುರಿತು ಕೆಲವು ಸಂಗತಿಗಳನ್ನು ಹೇಳಿದ್ದಾರೆ. ಆದರೆ ಕೊನೆಯಲ್ಲಿ “ಈ ವಚನಗಳನ್ನು ನಂಬಬಹುದಾದರೆ ಹೀಗೆ ಹೇಳಬಹುದು” ಎಂಬ ಮಾತನ್ನು ಸೇರಿಸಿದ್ದಾರೆ. ಇದು ವಿಷಯವನ್ನು ಅನಿಶ್ಚಯತೆಯ ಕಡೆಗೆ ತಿರುಗಿಸುತ್ತದೆ. ಇನ್ನೊಂದು ಕಡೆ “ಈ ವಚನಗಳೆಲ್ಲ, ಸಿದ್ಧರಾಮನವೇ ಆಗಿದ್ದ ಪಕ್ಷದಲ್ಲಿ …….” ಎಂಬ ಮಾತು ಬರುತ್ತದೆ. ಹೀಗೆ ಅವನ ವಚನಗಳನ್ನು ನಂಬಲು ಇರಬಹುದಾದ ಪ್ರಬಲ ಆತಂಕಗಳೇನೆಂಬುದನ್ನು ಸೂಚಿಸಿದ್ದರೆ ಓದುಗರಿಗೆ ಹೆಚ್ಚು ಸಹಾಯವಾಗುತ್ತಿದ್ದಿತೆಂದು ಅನಿಸುತ್ತದೆ.

ರಾಘವಾಂಕನ ಸಿದ್ಧರಾಮ ಚರಿತ್ರೆಯಿಂದ ಉದ್ಭವಿಸುವ ಇನ್ನೊಂದು ಸಮಸ್ಯೆಯೆಂದರೆ, ಬಸವೇಶ್ವರನ ಸಮಕಾಲೀನನಾದ ಮತ್ತು ತಾನೇ ಸ್ವತಃ ವಚನಕಾರನೂ ಆದ ಸಿದ್ಧರಾಮ ಬಸವೇಶ್ವರನನ್ನು ಮತ್ತು ಅವನ ಕಾರ್ಯಕ್ಷೇತ್ರವಾದ ಕಲ್ಯಾಣವನ್ನು ಒಮ್ಮೆಯೂ ಸಂದರ್ಶಿಸಲಿಲ್ಲವೇ? ರಾಘವಾಂಕ ಈ ವಿಷಯದಲ್ಲಿ ಅದೇಕೋ ಮೌನವಾಗಿದ್ದಾನೆ. ಶ್ರೀ ಡಿ.ಎಲ್‌.ಎನ್‌. ರವರೂ ಸ್ವಲ್ಪಮಟ್ಟಿಗೆ ರಾಘವಾಂಕನ ಮೌನವನ್ನೇ ಉಪಯೋಗಿಸಿಕೊಂಡು ಸಿದ್ಧರಾಮ ಅನುಭವ ಮಂಟಪಕ್ಕೆ ಹೋಗಿರಲಾರನೆಂಬ ಧ್ವನಿಯನ್ನೇ ಸೂಚಿಸುತ್ತಾರೆ. “ಚಾಮರಸನು ಹಿಂದಿನವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ಧರಾಮನನ್ನು ಕಲ್ಯಾಣದ ಶಿವಾನುಭವ ಮಂಟಪಕ್ಕೆ ಕರೆದು ತಂದಿದ್ದಾನೆ” ಎನ್ನುವ ಅವರ ಮಾತಿನಲ್ಲಿ ಆ ಧ್ವನಿಯಿದೆ. ಅದೇನಾದರೂ ಇರಲಿ ಅದು ಕವಿಯ ಕಾವ್ಯದ ವಲಯಕ್ಕೆ ಮೀರಿದ ಮಾತು. ಆದುದರಿಂದ ಅದನ್ನು ಹೆಚ್ಚು ಬೆಳೆಸದೆ ಕವಿಯು ಚಿತ್ರಿಸಿರುವ ಸಿದ್ಧರಾಮನ ಮೂರ್ತಿ ಸ್ವರೂಪದ ಕಡೆಗೆ ಹೆಚ್ಚಾಗಿ ತಮ್ಮ ಗಮನವನ್ನು ಹರಿಸಿದ್ದಾರೆ. ಅದು ಯುಕ್ತವೂ ಹೌದು.

ರಾಘವಾಂಕನು ಚಿತ್ರಿಸಿರುವ ಸಿದ್ಧರಾಮನ ಮೂರ್ತಿ ಸ್ವರೂಪ, ರಾಘವಾಂಕನ ಸಂದೇಶ ಮತ್ತು ಕಾವ್ಯ ವಿಮರ್ಶೆಗಳಲ್ಲಿ ಶ್ರೀ ಡಿ.ಎಲ್‌.ಎನ್‌. ರವರ ನಿಜವಾದ ಶಕ್ತಿ ಗೋಚರವಾಗುತ್ತದೆ. ಕವಿಯ ಕಾಲ ನಿರ್ಧಾರದ ಸಂದರ್ಭದಲ್ಲಿ ಕಾಣುವ ಅವರ ವಿಷಯ ಸಂಗ್ರಹಣೆ ವಿವರಣೆ, ಪ್ರತಿಪಾದನೆ ಮತ್ತು ಸಮರ್ಥನೆಗಳಂತೆಯೇ ಇಲ್ಲಿ ಕವಿಯ ಹೃದಯವನ್ನು ಹೊಕ್ಕು, ಕವಿಯ ಕಾಣ್ಕೆಯನ್ನು ಕಂಡು, ಅನುಭವಿಸಬಲ್ಲ ಸಹೃದಯತೆಯನ್ನೂ ಮತ್ತು ಅದನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವನ್ನು ಕಾಣುತ್ತೇವೆ.

ಇಲ್ಲಿಯೂ ಸಹ ಹೊಸ ಹೊಸ ಅನುಭವಗಳು ಬಂದಂತೆ ತಮ್ಮ ಮುನ್ನಿನ ಅನುಭವದಲ್ಲಿ ಕಂಡ ಅರಕೆಯನ್ನು ತುಂಬಿಕೊಳ್ಳುವ ಮಹತ್ತರ ಔದಾರ್ಯವೂ ಕಂಡುಬರುತ್ತದೆ. ಅದಕ್ಕೆ ಒಂದು ಸ್ಪಷ್ಟವಾದ ಉದಾಹರಣೆಯನ್ನು ಇಲ್ಲಿ ನೋಡಬಹುದು.

ಮೊದಲನೆಯ ಸಾರಿ ಅಚ್ಚಾದ ಸಿದ್ಧರಾಮಚಾರಿತ್ರದ ಮುನ್ನುಡಿಯಲ್ಲಿ ಈ ಕಾವ್ಯದಲ್ಲಿ ಬರುವ ಅಲ್ಲಮನ ಪಾತ್ರವನ್ನು ಕುರಿತು ಬರೆಯುತ್ತಾ ಹೀಗೆ ಬರೆದರು. “ಅವನು (ಅಲ್ಲಮನು) ವ್ಯಕ್ತಿವಾದಿ; ತನ್ನ ಸುಖವನ್ನು ತಾನು ಗಳಿಸಿಕೊಂಡರೆ ಸಾಕೆಂಬುದು ಅವನ ಸಿದ್ಧಾಂತ. ಸಿದ್ಧನು ಸಮಾಜವಾದಿ, ಸಮಾಜದ ಯೋಗಕ್ಷೇಮದಲ್ಲಿ ವ್ಯಕ್ತಿ ಭಾಗವಹಿಸಬೇಕೆಂಬುದು ಅವನ ದೃಷ್ಟಿ. ಅಲ್ಲಮನು ತನ್ನ ಸಂಕುಚಿತವಾದ ಮನಸ್ಸನ್ನು ತಿಳಿದು ಸಿದ್ಧನನ್ನು ಶ್ಲಾಘಿಸಿ ತೆರಳುತ್ತಾನೆ”.

ಆದರೆ ಇದೇ ಸನ್ನಿವೇಶವನ್ನು ತೆಗೆದುಕೊಂಡು ಶ್ರೀ ಎಂ. ಆರ್‌. ಶ್ರೀನಿವಾಸಮೂರ್ತಿಗಳವರು ಬಹಳ ಸುಂದರವಾಗಿ ವಿಮರ್ಶಸಿದರು. ಅಲ್ಲಮನ ವಚನಗಳಲ್ಲಿ ಕಾಣುವ ವ್ಯಕ್ತಿತ್ವವಾಗಲೀ, ಅಥವಾ ರಾಘವಾಂಕನು ಅವನನ್ನು ಚಿತ್ರಿಸಿರುವ ರೀತಿಯಲ್ಲಿಯೇ ಆಗಲಿ ಅಲ್ಲಮನು ವ್ಯಕ್ತಿವಾದಿಯಲ್ಲ. ಸಿದ್ಧರಾಮನ ಸಮಾಜವಾದವನ್ನು ಒಳಗೊಂಡು ಅದನ್ನೂ ಮೀರುವ ಮಹಾಂತನಾತ ಎಂದು ಎಂ. ಆರ್‌. ಶ್ರೀಗಳವರು ರಾಘವಾಂಕನ ಮಾತುಗಳಿಂದಲೇ ಸ್ಪಷ್ಟವಾಗಿ ತೋರಿಸಿದರು. ಸಿದ್ಧರಾಮನನ್ನು ಶ್ಲಾಘಿಸಿ ತೆರಳುವುದಕ್ಕಾಗಿ ಆತ ಬಂದವನಲ್ಲ ಸಿದ್ಧನ ಜೀವನದ ಅರಕೆಯನ್ನು ಪೂರ್ಣಗೊಳಿಸಲು ಬಂದ ಜ್ಞಾನವಾರಿಧಿ ಎಂದು ಪ್ರತಿಪಾದಿಸಿದರು. ಶ್ರೀ ಡಿ.ಎಲ್‌.ಎನ್‌.ರು ಅದನ್ನು ಮುಕ್ತ ಕಂಠದಿಂದ ಒಪ್ಪಿಕೊಂಡು ತಮ್ಮ ಸಂಗ್ರಹದ ಮುನ್ನುಡಿಯಲ್ಲಿ ಎಂ. ಆರ್‌. ಶ್ರೀಯವರ ಆ ಲೇಖನವನ್ನು ನಿರ್ದೇಶಿಸಿ “ಸಿದ್ಧರಾಮನ ಬಾಳಿಗೆ ತಕ್ಕುದಾದ ಮುಕ್ತಾಯವನ್ನು ಅಲ್ಲಮ ಕರುಣೆಯಿಂದ ತೋರಿಸಿದ್ದಾನೆ” ಎಂದು ತಮ್ಮ ಅಭಿಪ್ರಾಯವನ್ನು ತಿದ್ದಿಕೊಂಡಿದ್ದಾರೆ. ಇಂತಹ ಬಿಚ್ಚು ಮನಸ್ಸಿನ ಔದಾರ್ಯ, ಪಾಂಡಿತ್ಯಕ್ಕೆ ಕಿರೀಟ ಪ್ರಾಯವಾದ ಕಾಂತಿಯನ್ನು ಕೊಡುತ್ತದೆ.

ಇನ್ನು ರಾಘವಾಂಕನು ಸಿದ್ಧನ ಮೂಲಕ ಜಗತ್ತಿಗೆ ಸಾರಿಗೆ ಸಂದೇಶ ಇಂದಿಗೂ ಹೇಗೆ ಸಮಾಜಕ್ಕೆ ಮಾರ್ಗದರ್ಶಕವಾಗಿ ನಿಲ್ಲಬಲ್ಲದೆಂಬುದನ್ನು ಶ್ರೀ ಡಿ.ಎಲ್‌.ಎನ್‌. ರವರು ಅರ್ಥವತ್ತಾಗಿ ಸಾರಿರುವುದನ್ನಾಗಲೀ, ಅವರು ಕಾವ್ಯವನ್ನು ಕುರಿತು ಮಾಡಿರುವ ವಿಮರ್ಶೆಯನ್ನಾಗಲೀ ಇಲ್ಲಿ ವಿವರವಾಗಿ ನೋಡುವ ಅವಶ್ಯಕತೆಯಿಲ್ಲ. ಅವರ ಆ ಬರವಣಿಗೆಯ ಸೌಂದರ್ಯವನ್ನು ಇಲ್ಲದೆ ಹಿತವಾದ ಮಿತವಾದ ಮಾತಿನಲ್ಲಿ, ನೇರವಾಗಿ ಆದರೂ ಸುಂದರವಾಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಈ ಶಕ್ತಿಗಳ ಪೂರ್ಣ ಪ್ರಯೋಜನ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಲೋಕಕ್ಕೆ ಲಭಿಸುವಂತಾಗಲೀ ಎಂದು ಹಾರೈಸೋಣ.