ಬಹುಮುಖ ಪ್ರತಿಭೆಯ ಡಿ.ಎಲ್‌. ನರಸಿಂಹಾಚಾರ್ಯರು ಹಳಗನ್ನಡ ಸಾಹಿತ್ಯದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಹಳಗನ್ನಡ ಸಾಹಿತ್ಯ ಮತ್ತು ಅದನ್ನು ಕೇಂದ್ರವಾಗಿಟ್ಟುಕೊಂಡು ನಿರ್ವಚನಗೊಳ್ಳುವ ಗ್ರಂಥಸಂಪಾದನೆ, ಗ್ರಂಥ ವಿಮರ್ಶೆ, ಕವಿ-ಕಾಲ-ಕೃತಿ ವಿಚಾರದಂತಹ ಕ್ಷೇತ್ರದಲ್ಲಿ ಪ್ರಧಾನ ಒಲವುಳ್ಳ ಗಂಭೀರ ವಿದ್ವಾಂಸರು. ಈ ಲೇಖನದಲ್ಲಿ ಬಹುಮುಖ್ಯವಾಗಿ ಡಿ.ಎಲ್‌.ಎನ್. ಅವರ ಚಿಂತನೆಯ ಮತ್ತೊಂದು ಮಜಲಾದ ಮುನ್ನುಡಿಗಳ ಕುರಿತು ಚರ್ಚಿಸಲು ಪ್ರಯತ್ನಿಸಲಾಗಿದೆ.

ಡಿ.ಎಲ್‌.ಎನ್.ಅವರು ಸಮಕಾಲೀನ ಹಿರಿಯ ಕಿರಿಯ ವಿದ್ವಾಂಸರನ್ನು ಪ್ರೋತ್ಸಾಹಿಸಿ, ಚಿಂತನೆಗೆಳಸಿ ಬರೆದ ಲಭ್ಯ ಮುನ್ನುಡಿಗಳ ಸಂಖ್ಯೆ ಒಟ್ಟು ಹತ್ತು.

೧. ಕನ್ನಡದಲ್ಲಿ ವಿಡಂಬನ ಸಾಹಿತ್ಯ (ಲೇ. ಎಚ್‌. ಎಸ್ಕೆ, ೧೯೪೭)

೨. ಸಿದ್ಧರಾಮನ ಬಸವಸ್ತೋತ್ರಗಿಂತ (ಸಂ. ಶಿವಬಸವಸ್ವಾಮಿ, ೧೯೫೪)

೩. ಸಾಹಿತ್ಯದ ಹಿನ್ನೆಲೆ (ಕೆ. ವೆಂಕಟರಾಯಾಚಾರ್ಯ, ೧೯೫೭)

೪. ಶಿಲಾಲತೆ, (ಲೇ. ಕೆ. ಎಸ್‌. ನರಸಿಂಹಸ್ವಾಮಿ, ೧೯೫೮)

೫. ಶಿವದಾಸ ಗೀತಾಂಜಲಿ, (ಡಾ. ಎಲ್‌. ಬಸವರಾಜು, ೧೯೬೩)

೬. ಶರಣ ಚರಿತ ಮಾನಸಂ, (ಸಂ. ಹೆಚ್‌. ದೇವೀರಪ್ಪ, ೧೯೬೮)

೭. ಸಂಶೋಧನತರಂಗ ಸಂಪುಟ ೨, (ಡಾ. ಎಂ. ಚಿದಾನಂದಮೂರ್ತಿ, ೧೯೭೦)

೮. ಕನ್ನಡ ಛಂದ ಸ್ವರೂಪ, (ಲೇ. ಟಿ. ವಿ. ವೆಂಕಟಾಚಲಶಾಸ್ತ್ರೀ, ೧೯೭೮)

೯. ಭಾಷಾವಿಜ್ಞಾನ, (ಲೇ. ಹಂಪ ನಾಗರಾಜಯ್ಯ, ೧೯೬೮)

೧೦. ಭಾರತೀಯ ಗ್ರಂಥಸಂಪಾದನ ಪರಿಚಯ, (ಅನು. ಡಾ. ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್‌. ೨೦೦೩)

ಮೇಲಿನ ಹತ್ತು ಮುನ್ನುಡಿಗಳಲ್ಲಿ ಒಂದೊಂದು ಮುನ್ನುಡಿಯೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿರುವುದು ವಿಶೇಷವಾಗಿದೆ. ಈ ಮುನ್ನುಡಿಗಳು ಸ್ನೇಹಭಾವ ಮತ್ತು ಪರಿಚಯಗಳ ಜೊತೆಗೆ ವಿಷಯವನ್ನು ಸೂಕ್ಷ್ಮವಾಗಿ ಮತ್ತು ವಸ್ತುನಿಷ್ಠವಾಗಿ ಗ್ರಹಿಸಿ ವಿಸ್ತರಿಸುತ್ತದೆ.

ಡಿ.ಎಲ್‌.ಎನ್. ಅವರ ಮುನ್ನುಡಿಗಳಲ್ಲಿ ಎರಡು ಸಂಗತಿಗಳು ಪ್ರಧಾನವಾಗಿ ಕಾಣುತ್ತವೆ. ಒಂದು, ಕೃತಿಯನ್ನು ವಸ್ತುನಿಷ್ಠವಾಗಿ ಅವಲೋಕಿಸುತ್ತ ಅದರ ಗುಣದೋಷಗಳೊಂದಿಗೆ ಅದರ ಚರ್ಚೆಯನ್ನು ಗಂಭೀರ ಸಂಶೋಧನೆಯತ್ತ ಕೊಂಡೊಯ್ಯುವುದು. ಎರಡು, ತೌಲನಿಕವಾದ ವಿವೇಚನೆಯೊಂದಿಗೆ ಬಹುಶಿಸ್ತೀಯ ಆಯಾಮವನ್ನು ನೀಡುವುದು. ಕೃತಿಯ ಗುಣದೋಷಗಳನ್ನು ಹೇಳುವಾಗಿನ ಅವರ ವಿನಯ ಮತ್ತು ಸಂಶೋಧನ ಜವಾಬ್ದಾರಿ ದಾರಿದೀಪವಾದಂತವು. ದೋಷಗಳನ್ನು ಬರೀ ದೋಷಗಳೆಂದೂ ಕೊರತೆಯೆಂದೂ ಹಂಗಿಸದೇ ಅದಕ್ಕೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೊಂದು ಹೊಸ ಆಯಾಮವನ್ನು ನೀಡುವುದು. ಮುನ್ನುಡಿ ಬರೆಯುವ ಕೃತಿ ಬರೆದ ವ್ಯಕ್ತಿ ಮತ್ತು ಅದರ ತಲೆಬರಹಕ್ಕೆ ಸೀಮಿತವಾಗದೆ ಅದೊಂದು ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರಜ್ಞಾಪಾತಾಳಿಯ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಒಂದು ಚಾರಿತ್ರಿಕ ಸಂಕಥನವಾಗಿ ಡಿ.ಎಲ್‌.ನರಸಿಂಹಾಚಾರ್‌ ಅವರ ಮುನ್ನುಡಿಗಳು ಬೆಳೆದು ನಿಲ್ಲುತ್ತವೆ. ಉದಾಹರಣೆಗೆ ಹಂಪನಾ ಅವರ ‘ಭಾಷಾವಿಜ್ಞಾನ’ ಮತ್ತು ಡಾ. ಎಚ್‌. ದೇವೀರಪ್ಪನವರ ಸಂಪಾದನೆಯ ‘ಶರಣ ಚರಿತ ಮಾನಸಂ’, ಕೃತಿಗೆ ಬರೆದ ಮುನ್ನುಡಿಗಳು ಇಂಥ ಒಂದು ಚಾರಿತ್ರಿಕ ಸಂಕಥನದ ನಡೆಗೆ ಉತ್ತಮ ಉದಾಹರಣೆಗಳು. ಇದೂ ಅಲ್ಲದೆ ಪುಷ್ಟದಂತ ಪುರಾಣವನ್ನು ಪ್ರತಿ ಮಾಡಿದ ನವಿಲ್ಗುಂದದ ಮಾದಿರಾಜನ ಕುರಿತು ಚರ್ಚೆ ಮಾಡುವಾಗ ಬರೀ ಕವಿ ಕಾಲವನ್ನಲ್ಲದೆ ಅಲ್ಲಿನ ಱಕಾರ ೞಕಾರ ಬಳಕೆಯ ಔಚಿತ್ಯ-ಅನೌಚಿತ್ಯ ಕುರಿತು ತುಂಬಾ ವಿದ್ವತ್‌ಪೂರ್ಣ ಚರ್ಚೆ ಮಾಡುತ್ತಾರೆ.

ಡಿ.ಎಲ್‌.ಎನ್. ಅವರು ಮೊದಲ ಮುನ್ನುಡಿ ಹೆಚ್‌. ಎಸ್‌. ಕೃಷ್ಣಸ್ವಾಮಿಯವರ ‘ಕನ್ನಡದಲ್ಲಿ ವಿಡಂಬನ ಸಾಹಿತ್ಯ’ (೧೯೪೭) ಕೃತಿಗೆ ಬರೆದದ್ದು ಎಂದು ಗುರುತಿಸಲಾಗುತ್ತದೆ. ಇದೊಂದು ತುಂಬ ಔಪಚಾರಿಕ ಮುನ್ನುಡಿಯಾಗಿದೆ. ಇದರ ನಂತರ ಬರೆದ ಶಿವಬಸವಸ್ವಾಮಿಯವರ (ಸಂ.) ಸಿದ್ಧರಾಮನ ಬಸವಸ್ತೋತ್ರಗಿಂತ ಬರೆದ ಮುನ್ನುಡಿ ಸ್ವಲ್ಪ ಭಿನ್ನವಾಗಿದೆ. ವಿದ್ವತ್ಪ್ರಧಾನ ಚರ್ಚೆಯೊಂದಿಗೆ ವಿಮರ್ಶಾತ್ಮಕವಾಗಿ ಕೃತಿಯ ನ್ಯೂನತೆಗಳನ್ನು ಗುರುತಿಸಿದ್ದಾರೆ. ಇಲ್ಲಿ ಕಾಣುವ ಪ್ರಮುಖ ಸಂಗತಿಯೆಂದರೆ ಬಸವಸ್ತೋತ್ರ ಕೃತಿಯ ಸಂಪಾದಕರು ಇಲ್ಲಿನ ಛಂದಸ್ಸನ್ನು ‘ಆಟಗೀತೆ’ ಎಂದು ಗುರುತಿಸುತ್ತಾರೆ. ಇದನ್ನು ಡಿ.ಎಲ್‌.ಎನ್. ಅವರು ಹೀಗೆ ಗುರುತಿಸುತ್ತಾರೆ. “ಇಲ್ಲಿರುವ ಪದ್ಯಗಳ ಛಂದಸ್ಸು ಕುರಿತು ಒಂದು ಮಾತು. ಮಾನ್ಯ ಸಂಪಾದಕರು ಈ ಪದ್ಯಗಳನ್ನು ‘ಆಟಗೀತೆ’ ಎಂದು ಕರೆದಿದ್ದಾರೆ……ತೆಲುಗಿನ ‘ಆಟಲವೆದಿ’ ಎಂಬ ಹೆಸರನ್ನು ಹೋಲುವ ಅಟಗೀತೆ ಎನ್ನುವ ಹೆಸರನ್ನು ಇಲ್ಲಿನ ತ್ರಿಪದಿಗಳಿಗೆ ಅನ್ವಯಿಸಿರುವುದು ಹೆಚ್ಚಿನ ವಿಚಾರಕ್ಕೆ ದಾರಿದೀಪವಾಗಬೇಕಿದೆ” ಎನ್ನುತ್ತಾರೆ. ಹೀಗೆ ಸಂದೇಹಗಳನ್ನು, ಅನುಮಾನಗಳನ್ನು ಕೊರತೆಗಳನ್ನು ಶುಷ್ಕವಾಗಿಸದೆ ಅವುಗಳನ್ನು ಹೊಸ ಅಭಿಪ್ರಾಯ ಸೂಚನೆಯೊಂದಿಗೆ ಅರ್ಥಪೂರ್ಣವಾಗಿರುವ ಕ್ರಮ ತುಂಬ ಕುತೂಹಲದಾಯಕವಾದದ್ದು.

ಕೆ. ಎಸ್‌. ನರಸಿಂಹಸ್ವಾಮಿಯವರ ಶಿಲಾಲತೆಗೆ ಬರೆದ ಮುನ್ನುಡಿ ಆ ಕಾಲದಲ್ಲಿ ಬಹಳ ಪ್ರಸಿದ್ಧವಾದುದು. ಭಾವಗೀತೆಯನ್ನು ಪರಿಪೂರ್ಣವಾದುದು ಎಂದು ತಿಳಿಯುತ್ತಿದ್ದ ಹೊತ್ತಿನಲ್ಲಿ ಡಿ.ಎಲ್‌.ಎನ್. ಅವರು “ಭಾವಗೀತೆ ಎಷ್ಟೇ ಲೋಕೋತ್ತರವಾದರೂ ಕವಿಶಕ್ತಿಯ ಪೂರ್ಣಾವಿಷ್ಕರಣಕ್ಕೆ ಅಲ್ಲಿ ಅವಕಾಶ ಸಾಲದು” ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅಂದರೆ ಒಂದು ವಸ್ತುವಿಷಯ ವ್ಯಕ್ತಿ ಅಥವಾ ಭಾವನೆಗಳು ತನ್ನಷ್ಟಕ್ಕೆ ತಾನೇ ಸ್ವತಂತ್ರವೂ ಪರಿಪೂರ್ಣವೂ ಅಲ್ಲ ಎಂಬುವುದನ್ನು ಡಿ.ಎಲ್‌.ಎನ್. ಪ್ರತಿಪಾದಿಸುತ್ತಾರೆ. “ಸಂಸಾರದ ಒಲವು-ನಲಿವುಗಳ ನೋವು-ನಗೆಗಳ ಸುಂದರ ಚಿತ್ರಗಳನ್ನು ಎಲ್ಲರ ಅನುಭವಕ್ಕೆ ತಂದುಕೊಟ್ಟು ಜನಮನದ ಸಿರಿಯ ಭಂಡಾರವನ್ನು ತುಂಬಿಸಿದ್ದಾರೆ. ಅವರು. ….ನಮ್ಮ ಜನ ಮೆಚ್ಚಿ ಹಾಡುತ್ತಾರೆ. ಹಾಡಿಸಿಕೊಳ್ಳುತ್ತಾರೆ ಕೇಳಿ ನಲಿಯುತ್ತಾರೆ, ಅಂಥದ್ದೇ ಹಾಡುಗಳನ್ನು ಕಟ್ಟಲು ಹವಣಿಸುತ್ತಾರೆ. ಇಷ್ಟು ಜನಪ್ರಿಯತೆಯನ್ನು ತಾನು ಬದುಕಿರುವಾಗಲೇ ಪಡೆಯುವುದು ಕವಿಯ ಪುಣ್ಯ ವಿಶೇಷ. ಜನ ಮೆಚ್ಚಿಕೆಯೇ ಯಾರೂ ಬರೆಯಲಾರದಂಥ ಮುನ್ನುಡಿಯನ್ನು ಇವರ ಕಾವ್ಯಕ್ಕೆ ಆಗಲೇ ಬರೆದುಬಿಟ್ಟಿದೆ. ಇದರೆದುರಿಗೆ ಈ ಮುನ್ನುಡಿ ಉಪಚಾರವಾಗಬಾರದು.” ಡಿ.ಎಲ್‌.ಎನ್. ಅವರ ಶಕ್ತಿ ಇರುವುದೇ ಇಲ್ಲಿ.

ಕೆ. ವೆಂಕಟರಾಯಾಚಾರ್ಯರ ಸಾಹಿತ್ಯದ ಹಿನ್ನೆಲೆ ಕೃತಿಗೆ ಡಿ.ಎಲ್‌.ಎನ್. ಅವರು ಬರೆದ ಮುನ್ನುಡಿ ತುಂಬಾ ವಿಸ್ತಾರವಾಗಿದೆ. ಸಂಶೋಧಕನ ಅರ್ಹತೆಗಳು, ಇತಿಮಿತಿಗಳು ಓದುಗರ ಪ್ರಶಂಸೆಗಳು, ಸಂಶೋಧನ ಕಾರ್ಯದ ಕಷ್ಟಗಳನ್ನು ತುಂಬ ಮೌಲಿಕವಾಗಿ ಈ ಮುನ್ನುಡಿಯಲ್ಲಿ ಚರ್ಚಿಸಿದ್ದಾರೆ. ಸಂಶೋಧಕನ ಕೈಪಿಡಿಯನ್ನಾಗಿ ಈ ಮುನ್ನುಡಿಯನ್ನು ಪರಿಭಾವಿಸಬಹುದಾದಷ್ಟು ಸೂಕ್ಷ್ಮವಾಗಿ ಡಿ.ಎಲ್‌.ಎನ್. ಬರೆದಿದ್ದಾರೆ.

ಎಲ್‌. ಬಸವರಾಜು ಅವರ ಶಿವದಾಸ ಗೀತಾಂಜಲಿ ಕೃತಿಗೆ ಬರೆದ ಇಂಗ್ಲಿಷ್‌ ಮುನ್ನುಡಿ ಮತ್ತೊಂದು ಉಪಯುಕ್ತ ಲೇಖನವಾಗಿದೆ. ಜಕ್ಕಣನ ಏಕೋತ್ತರ ಶತಸ್ಥಲವನ್ನು ಎಲ್‌. ಬಸವರಾಜು ಅವರು ಶಾಸ್ತ್ರೀಯವಾಗಿ ಸಂಪಾದಿಸಿ ಶಿವದಾಸ ಗೀತಾಂಜಲಿ ಎಂದು ಹೆಸರಿಟ್ಟಿದ್ದಾರೆ. ಶಿವಶರಣರು ಕರ್ನಾಟಕ ಸಂಗೀತಕ್ಕೆ ನೀಡಿದ ಕಾಣಿಕೆಯಂಥ ಹೊಸ ಪ್ರಯತ್ನವನ್ನು, ಸಂಶೋಧಕರ ಆಳವೂ ವಿಸ್ತಾರವೂ ಆದ ಅಧ್ಯಯನಾಸಕ್ತಿಗಳನ್ನು ಈ ಮುನ್ನುಡಿಯಲ್ಲಿ ಡಿ.ಎಲ್‌.ಎನ್. ಗುರುತಿಸಿ ತುಂಬ ಮೆಚ್ಚಿಕೊಳ್ಳುತ್ತಾರೆ.

ಟಿ. ವಿ. ವೆಂಕಟಾಚಲಶಾಸ್ತ್ರೀಯವರ ‘ಕನ್ನಡ ಛಂದಸ್ಸು’ ಕೃತಿಗೆ ಬರೆದ ಮುನ್ನುಡಿ ಕನ್ನಡ ಛಂದಸ್ಸಿನ ಪರಿಚಯದ ದೃಷ್ಟಿಯಿಂದ ತುಂಬ ಮಹತ್ವದ್ದಾಗಿದೆ. ರಗಳೆಯ ರಹಸ್ಯವನ್ನು ಭೇದಿಸುವ ಅವರ ಕ್ರಮ ಕುತೂಹಲವಾದದ್ದು. ಅದೇ ರೀತಿ ಡಾ. ಎಂ. ಚಿದಾನಂದಮೂರ್ತಿಯವರ ‘ಸಂಶೋಧನ ತರಂಗ ಸಂ.೨’ಕ್ಕೆ ಬರೆದ ಮುನ್ನುಡಿ ವಿಶೇಷವಾಗಿದೆ. ಈ ಮುನ್ನುಡಿಯಲ್ಲಿ ಡಿ.ಎಲ್‌.ಎನ್. ಅವರು ಕೃತಿ ಅರ್ಪಿತವಾದ ಡಾ. ಎ. ವೆಂಕಟಸುಬ್ಬಯ್ಯನವರ ವಿದ್ವತ್‌ ಸಂವೇದನೆಗಳ ಬಗ್ಗೆ, ಕೃತಿಯ ಔಚಿತ್ಯದ ಬಗ್ಗೆ ಮಾರ್ಗದರ್ಶಿಯಾದ ಮಾತುಗಳನ್ನಾಡುತ್ತಾರೆ. ಡಾ. ಎಂ. ಚಿದಾನಂದಮೂರ್ತಿಯವರ ಬಹುಕೇಂದ್ರಿತ ಚಿಂತನೆಯ ಮರ್ಮಗಳನ್ನು ಅಂಥ ಚಿಂತನೆಗಳಿಂದ ಹುಟ್ಟುವ ಸಾಂಸ್ಕೃತಿಕ ಸಂಚಲನೆಗಳನ್ನು ಎತ್ತಿ ತೋರಿಸುತ್ತಾರೆ. ಹಂಪನಾ ಅವರ ‘ಭಾಷಾ ವಿಜ್ಞಾನ’ ಕೃತಿಗೆ ಬರೆದ ಮುನ್ನುಡಿ ಭಾಷಾ ಅಧ್ಯಯನ ದೃಷ್ಟಿಯಿಂದು ಹೊಸ ರೀತಿಯ ಸಂಗತಿಗಳನ್ನು ಬಿಚ್ಚಿಕೊಡುವಂತಹದಾಗಿದೆ. ಸಾಹಿತ್ಯಾಭ್ಯಾಸಿಯ ಬುದ್ಧಿ ವಿಕಾಸಕ್ಕೆ ವ್ಯವಸ್ಥಿತ ಆಲೋಚನಕ್ರಮಕ್ಕೆ ಇರುವ ಏಕೈಕ ಸಾಧನ ಭಾಷಾವಿಜ್ಞಾನ (ಪು. xiii) ಎನ್ನುವ ಡಿ.ಎಲ್‌.ಎನ್. ಅವರ ಮಾತು ಗಮನಾರ್ಹವಾದುದು. ಭಾಷಾವಿಜ್ಞಾನ ಮತ್ತು ಅದರಿಂದ ಸಂಜನಿತವಾಗುವ ಭಾಷಾಪ್ರಜ್ಞೆ ಪ್ರಾದೇಶಿಕ ಭಾಷೆಗಳ ನೆರವನ್ನು ಬಳಲಿದ ಗ್ರಾಂಥಿಕ ಭಾಷೆಗೆ ನೀಡುವ ಕಾರ್ಯವನ್ನು ಮಾಡುವುದಾಗಿದೆ. ಇದು ಆಗಾಗ ಅಗತ್ಯ (ಪು. xivi) ಪ್ರಾದೇಶಿಕ ಅಥವಾ ಗ್ರಾಮ್ಯ ಭಾಷೆಗಳ ಬಹುಸಾಧ್ಯತೆಗಳನ್ನು ನಿರಾಕರಿಸಿ ಶಾಸ್ತ್ರೀಯತೆ ಮತ್ತು ಪ್ರಮಾಣೀಕರಣದ ಹೆಸರಿನಲ್ಲಿ ಭಾಷೆಯ ಬಹು ಆಯಾಮಗಳನ್ನು ಸಂಹರಿಸುವ ನೆಲೆಗೆ ಚಿಕಿತ್ಸೆ ಮಾಡುವಂತೆ ಕಾಣುವ ಡಿ.ಎಲ್‌.ಎನ್. ಅವರ ಈ ಮಾತು ಗಮನಾರ್ಹವಾದುದು. ಇಡೀ ಲೇಖನದಲ್ಲಿ ಪ್ರಪಂಚದ ಭಾಷಾ ಅಧ್ಯಯನದ ಜೊತೆಗೆ ಕನ್ನಡದಲ್ಲಿ ಪಂಪ, ವಚನಕಾರರು, ಕುಮಾರವ್ಯಾಸ, ಬೇಂದ್ರೆಯಂಥ ಕವಿಗಳು ಹುಟ್ಟುಹಾಕಿದ ಹೊಸ ಭಾಷೆಯ ವಿನ್ಯಾಸಗಳು ಅವು ಮಾಡಿದ ಪರಿಣಾಮಗಳನ್ನು ಕುರಿತು ಕುತೂಹಲವಾದ ಚರ್ಚೆ ಬೆಳೆಸುತ್ತಾರೆ. ಭಾಷೆ ಶಾಸ್ತ್ರೀಯವಾದಷ್ಟು, ಗ್ರಾಂಥಿಕವಾದಷ್ಟು ಅದು ಪಡೆದುಕೊಳ್ಳುವ ಶುಷ್ಕತೆ ಮತ್ತು ನಿಶ್ಚಲತೆಯನ್ನು ತುಂಬಾ ಅಭ್ಯಾಸಪೂರ್ಣವಾಗಿ ಕಟ್ಟಿಕೊಡುತ್ತಾರೆ. ಈ ನಿಶ್ಚಲತೆಯನ್ನು ನೀಗುವ ಮಾರ್ಗವನ್ನಾಗಿ ಕನ್ನಡ ಪ್ರಾದೇಶಿಕ ಭಾಷೆಗಳ ನೆರವಿನ ಅಗತ್ಯತೆಯನ್ನು ಸೂಚಿಸುತ್ತಾರೆ. ಶಿಲಾಲತೆ ಕೃತಿಗೆ ಬರೆದ ಮುನ್ನುಡಿಯಲ್ಲಿ ಇಂಥ ಪೂರಕ ಸಂಗತಿಗಳನ್ನು ಕಾಣಬಹುದು. ‘ಜನ ಮೆಚ್ಚಿಕೆಯೇ ಯಾರೂ ಬರೆಯಲಾರದಂಥ ಮುನ್ನುಡಿ’ ಎನ್ನುವ ಡಿ.ಎಲ್‌.ಎನ್. ಅವರ ಮಾತುಗಳು ಭಾಷೆ ಮತ್ತು ಜನ ಬದುಕಿನ ಸಾಂಸ್ಕೃತಿಕವಾದ ಸಹಜ ವಿನ್ಯಾಸಗಳ ಮಹತ್ವವನ್ನು ಹೇಳುವಂಥವಾಗಿವೆ.

ಹೆಚ್‌. ದೇವೀರಪ್ಪನವರು ಸಂಪಾದಿಸಿದ ‘ಶರಣ ಚರಿತ ಮಾನಸಂ’ ಕೃತಿಗೆ ಬರೆದ ಮುನ್ನುಡಿ ಡಿ.ಎಲ್‌.ಎನ್. ಅವರ ಸೂಕ್ಷ್ಮ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ. ಹರಿಹರನನ್ನು ಬಹುವಾಗಿ ಮೆಚ್ಚಿಕೊಳ್ಳುವ ಶ್ರೀಯುತರು ರಗಳೆಗಳ ಸಂಖ್ಯಾನಿರ್ಣಯ, ಕವಿ ಕೃತಿ ಕುರಿತು ನಡೆಸುವ ಜಿಜ್ಞಾಸೆ ಅದಕ್ಕಾಗಿ ಅನುಸರಿಸುವ ತೌಲನಿಕ ಮೀಮಾಂಸೆಯ ನೆಲೆಗಳು ಸಂಶೋಧನಾತ್ಮಕವಾದಂಥವು. ಇಲ್ಲಿ ಕೂಡ ಅವರ ಅಂತರ್‌ಶಿಸ್ತ್ರೀಯ ಅಧ್ಯಯನದ ಧೋರಣೆಗಳು ದೂರಗಾಮಿಯಾದ ಗುಣಾತ್ಮಕ ಆಲೋಚನೆಗಳು ಅಭ್ಯಾಸಪೂರ್ಣವಾಗಿ ಮೂಡಿಬಂದಿವೆ. ರಗಳೆಗಳ ಬಗ್ಗೆ ಮಾತನಾಡುತ್ತಾ ಅವರು ಹೇಳುವ ಮಾತೊಂದು ಕನ್ನಡ ಸಾಹಿತ್ಯದ ಓದಿನ ಕ್ರಮಗಳನ್ನು ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಬಹುಮುಖ್ಯವಾದುದು. “ಮಾತುಗಳಿಗೂ ಮೀರಿದ ಅನುಭಾವಕ್ಕೆ ವೇದ್ಯವಾದ ಚಿತ್ತ ಸಂಸ್ಕಾರ ಗೋಚರವಾದ, ಒಂದು ಅನಂತತೆ ಈ ರಗಳೆಗಳಲ್ಲಿ ಇರುವುದು ಇವುಗಳ ಅತಿಶಯತೆಗೆ ಕಾರಣ. ವಾಚಕರೂ, ವಿಮರ್ಶಕರೂ, ತಂತಮ್ಮ ಶಕ್ತಿಗನುಗುಣವಾಗಿ ಈ ಅನಂತತೆಯನ್ನು ಪಾಲ್ಗೊಳ್ಳಬಹುದು. ವಿಮರ್ಶೆಯಷ್ಟನ್ನೇ ಓದಿ ಸಂತಸ ಪಡದೆ ರಗಳೆಗಳನ್ನು ಒಂದು ಸಲವಲ್ಲ ಹತ್ತು ಸಲವಾದರೂ ಓದಬೇಕಾದ ಇನಿಯ ಕರ್ತವ್ಯ” ಎನ್ನುವ ಮಾತು ಅರ್ಥಪೂರ್ಣವಾದುದು. ಮತ್ತು ಕನ್ನಡ ಸಾಹಿತ್ಯದ ಓದಿನಲ್ಲಾದ ಪಲ್ಲಟವನ್ನು ಹೇಳುವಂಥದ್ದು.

‘ಸಾಹಿತ್ಯದ ಹಿನ್ನೆಲೆ’ ಮುನ್ನುಡಿಯಲ್ಲಿ ‘ಇಂದು ಶಾಸ್ತ್ರದಂತಹ ಗಂಭೀರ ವಿಚಾರಗಳನ್ನು ಓದಬೇಕೆನ್ನುವ ಹಂಬಲಗಳಿಗಿಂತ ಕತೆ, ಕಾದಂಬರಿ, ಕವನ, ನಾಟಕಗಳಂತಹ ಆಧುನಿಕ ಸಾಹಿತ್ಯ ಪ್ರಕಾರಗಳನ್ನು ಓದುವ ಸಂಗತಿ ಹೆಚ್ಚಾಗುತ್ತಿದ್ದು ಹಳಗನ್ನಡ ಸಾಹಿತ್ಯ ಸಂಶೋಧನೆ ಕ್ಷೇತ್ರ ಉಪೇಕ್ಷೆಗೆ ಒಳಗಾಗುತ್ತಿದೆ’ ಎನ್ನುವಾಗ ಶಾಸ್ತ್ರದ ಓದು ಕಳೆಗುಂದುತ್ತಿರುವ ಕುರಿತ ಭಾವನೆ ಎದ್ದು ಕಾಣುತ್ತಿದೆ. ಕನ್ನಡ ಸಾಹಿತ್ಯವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಬೇಕಾದರೆ ಶಬ್ದನಿಷ್ಪತ್ತಿಯಲ್ಲಿ ತೊಡಗುವ, ಒಂದು ಜನಾಂಗ ಹಾಗೂ ಭಾಷೆಯನ್ನು ಪರಿಶೀಲಿಸುವ ಆ ಮೂಲಕ ಪುನರ್‌ನಿರ್ಮಿಸುವ, ಒಬ್ಬ ಕವಿಯ ಅಥವಾ ಒಂದು ಸಾಹಿತ್ಯ ನಿರ್ಮಿತಿಯನ್ನು ಸ್ವತಃ ಮುಟ್ಟಿ, ಓದಿ ವಿವೇಚಿಸಿ ನೋಡುವ ವಿವಿಧ ಬೌದ್ಧಿಕ ಸಾಹಸಗಳು ಅಗತ್ಯ ಎನ್ನುವ ಮಾತನ್ನು ಒತ್ತಿ ಹೇಳುತ್ತಾರೆ. ಕೃತಿ ಸೀಮಿತ ಓದು ಮತ್ತು ವಿಮರ್ಶೆಗಳು ಹೃದಯ ಸ್ಪಂದನವಾದಂತ ಕಾವ್ಯಾನುಭವ ನೀಡಬಹುದು. ಆದರೆ ಕವಿಯ ಬುದ್ಧಿ ಭಾವ ಪ್ರತಿಭಾ ವಿಲಾಸವನ್ನು ದಕ್ಕಿಸಲಾರವು. ಅದಕ್ಕೆ ತುಲನಾತ್ಮಕ ಓದು ಮತ್ತು ನೇರ ಪಠ್ಯದ ಓದು ಅಗತ್ಯವಾಗಿದೆ ಎನ್ನುತ್ತಾರೆ. ಹರಿಹರನ ರಗಳೆಗಳ ಕಥಾಮೂಲವನ್ನು ಶೋಧಿಸುತ್ತಾ ತಮಿಳಿನ ಶೆಕ್ಕಿಳಾರ ಕವಿಯ ಪೆರಿಯ ಪುರಾಣದ ಮೂಲಕ ಹಾಯ್ದು ತಿರುಗಿ ಜನಸಾಮಾನ್ಯರ ಬಾಯಲ್ಲಿ ಚಾಲ್ತಿಯಲ್ಲಿದ್ದ ಕಥಾಮೂಲಕ್ಕೆ ಬಂದುನಿಂತು ಅದರಿಂದ ಹರಿಹರ ಬದಲಾವಣೆ ಮಾಡಿಕೊಂಡು ವಿಧಾನಗಳ ಬಗ್ಗೆ ಚರ್ಚಿಸುತ್ತಾರೆ. ಡಿ.ಎಲ್‌.ಎನ್. ಮುಖ್ಯವಾಗುವುದು ಇಂಥ ಪರಿಸರವಾಚಿ ಮತ್ತು ಬಹುಶಿಸ್ತೀಯ ಸಂವೇದನೆಗಳಿಂದಾಗಿ.

‘ಭಾರತೀಯ ಗ್ರಂಥ ಸಂಪಾದನ ಪರಿಚಯ’ ಕೃತಿಗೆ ವಿದ್ವತ್‌ಪೂರ್ಣ ಮುನ್ನುಡಿ ಬರೆಯುತ್ತ ಡಿ.ಎಲ್‌.ಎನ್. ಅವರು “ಪರಂಪರಾಗತವಾಗಿ ಬಂದಿರುವ ಲಭ್ಯ ಹಸ್ತಪ್ರತಿಗಳ ಆಧಾರದಿಂದ ಮೂಲಗ್ರಂಥದ ಎಂದರೆ ಕವಿಯ ಸ್ವಹಸ್ತಾಕ್ಷರದ ಪ್ರತಿಯ ಸ್ವರೂಪವೇನಿರಬಹುದೆಂಬುದನ್ನು ನಿರ್ಣಯಿಸಿ ಪರಿಷ್ಕಾರ ಮಾಡುವ ಕೆಲಸ ಗ್ರಂಥ ಸಂಪಾದನೆ” ಎನ್ನುತ್ತಾರೆ. ಮುಂದುವರೆದು ಅವರು “ಈ ಶಾಸ್ತ್ರದ ಮೂಲ ರೇಖೆಗಳನ್ನು ಪಾಶ್ಚಾತ್ಯ ವಿದ್ವಾಂಸರು ಗ್ರೀಕ್‌, ಲ್ಯಾಟಿನ್‌ ಭಾಷೆಗಳ ಮತ್ತು ಪುರಾತನ ಗ್ರಂಥಗಳ ಹಸ್ತಪ್ರತಿಗಳ ಸಹಾಯದಿಂದ ನಿರೂಪಿಸಿದ್ದಾರೆ. ಅವರ ಗ್ರಂಥಗಳ ಸಹಾಯವನ್ನು ಪಡೆದು ಡಾ. ಕತ್ರೆಯವರು ಭಾರತೀಯ ಪ್ರಾಚೀನ ಗ್ರಂಥಗಳಿಗೆ, ಎಂದರೆ ಮುಖ್ಯವಾಗಿ ಸಂಸ್ಕೃತ ಗ್ರಂಥಗಳಿಗೆ ಈ ಶಾಸ್ತ್ರದ ಅನ್ವಯ ಹೇಗೆ ಎಂಬುದನ್ನು ಪರಿಭಾವಿಸಿ ಈ ಗ್ರಂಥವನ್ನು ಬರೆದರು. ಅಲ್ಲಿ ನಿರೂಪಿತವಾಗಿರುವ ತತ್ವಗಳು ಎಲ್ಲ ಭಾರತೀಯ ಭಾಷೆಗಳ ಪುರಾತನ ಗ್ರಂಥಸಂಪಾದನ ಕಾರ್ಯಕ್ಕೂ ಅನ್ವಯವಾಗುತ್ತವೆ”. ಆದ್ದರಿಂದ ಈ ಸಂಪಾದನಾಶಾಸ್ತ್ರ ಮಹತ್ವದ್ದು. ಡಿ.ಎಲ್‌.ಎನ್. ಅವರ ಇಲ್ಲಿನ ಮಾತುಗಳು ತುಂಬ ಕುತೂಹಲಭರಿತವಾದ ಚರ್ಚೆಗಳಿಗೆ ನಮ್ಮನ್ನು ಪ್ರೇರೇಪಿಸುತ್ತವೆ.

ಭಾರತೀಯ ಎನ್ನುವ ಚಿಂತನೆಯಡಿಯಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಪುರಾತನ ಗ್ರಂಥಗಳ ಸಂಪಾದನೆಗೆ ಗ್ರೀಕ್‌ ಮತ್ತು ಲ್ಯಾಟಿನ್‌ ಮೂಲದಿಂದ ದತ್ತವಾದ, ಮುಖ್ಯವಾಗಿ ಸಂಸ್ಕೃತ ಗ್ರಂಥಗಳ ಸಂಪಾದನೆಗಾಗಿ ಅನ್ವಯ ಮಾಡಿದ ಸಂಪಾದನಾ ಮಾದರಿಯೊಂದನ್ನು ಅಳವಡಿಸಬೇಕೆನ್ನುವ ಮಾತು. ಇದು ಇಂದೂ ಕೂಡ ಚಾಲ್ತಿಯಲ್ಲಿದೆ. ಇದು ಒಂದು ಕಾಲದ ಅಗತ್ಯ ಕೂಡ ಆಗಿರಬಹುದು. ಆದರೆ ಇಂದು ಪಾಶ್ಚಾತ್ಯ ಮತ್ತು ಸಂಸ್ಕೃತ ಮೂಲಕ್ಕಿಂತ ಭಿನ್ನವಾದ ಆಯಾ ಪ್ರಾದೇಶಿಕ ದೇಶ ಭಾಷೆಗಳ ಜಾಯಮಾನವನ್ನನುಸರಿಸಿದ, ಸಂಪಾದನಾ ಶಾಸ್ತ್ರದ ಅಗತ್ಯವಿದೆ ಎಂಬುದು ಗಮನಾರ್ಹ.

ಇದೇ ಮುನ್ನುಡಿಯಲ್ಲಿ ಡಿ.ಎಲ್‌.ಎನ್. ಅವರು ಇನ್ನೊಂದು ಸ್ತುತ್ಯಾರ್ಹ ಕಾರ್ಯ ಮಾಡುತ್ತಾರೆ. ಲೂಯಿ ರೈಸ್‌ರಿಂದ ಜೆ. ಎಫ್‌. ಪ್ಲೀಟ್‌, ೧೮೮೦ರಲ್ಲಿ ಸ್ಥಾಪಿಸಿದ ಪ್ರಾಚ್ಯವಿದ್ಯಾ ಸಂಶೋಧನಾ ಇಲಾಖೆ, ಮದ್ರಾಸ್‌ ಸರ್ಕಾರ್‌, ಮುಂಬೈ ಸರಕಾರ, ಹೈದ್ರಾಬಾದ್‌ ಸಂಸ್ಥಾನಕ್ಕೆ ಸೇರಿದ ಪ್ರದೇಶಗಳಲ್ಲಿ ನಡೆದ ಹಸ್ತಪ್ರತಿ ಸಂಗ್ರಹ ಸಂರಕ್ಷಣೆ ಸೂಚೀಕರಣದ ಸೂಕ್ಷ್ಮ ವಿವರಗಳನ್ನು ವಿಮರ್ಶಾತ್ಮಕವಾಗಿ ನೀಡುತ್ತಾರೆ. ಇಷ್ಟೆ ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತುಗಳಂತಹ ಸಾಂಸ್ಕೃತಿಕ ಸಂಸ್ಥೆಗಳು ಅದರಲ್ಲಿ ದುಡಿದ ಹಿರಿಯ ವಿದ್ವಾಂಸರು ಕನ್ನಡ ಹಸ್ತಪ್ರತಿ ಮತ್ತು ಸಂಪಾದನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ವಿವರಿಸುತ್ತಾರೆ. ಬಹುಮುಖ್ಯವಾಗಿ ಕರ್ನಾಟಕದಲ್ಲಿ ನಡೆದ ಹಸ್ತಪ್ರತಿ ಮತ್ತು ಗ್ರಂಥಸಂಪಾದನಾಶಾಸ್ತ್ರದ ಚಾರಿತ್ರಿಕ ಅವಲೋಕನದ ಜೊತೆಗೆ ಕನ್ನಡದ ಮುದ್ರಣದ ಕಲೆ (೧೮೨೦) ಬೇರುಬಿಟ್ಟು ಬೆಳೆದ ಮಹತ್ವದ ಸಂಗತಿಗಳನ್ನು ಎತ್ತಿ ತೋರಿಸುತ್ತಾರೆ.

ಗ್ರಂಥಸಂಪಾದನೆ ಕುರಿತು ಡಿ.ಎಲ್‌.ಎನ್. ನಡೆಸುವ ಚರ್ಚೆಗಳು ತುಂಬಾ ಕ್ರಿಯಾಶೀಲವಾದಂಥವು. ಅದನ್ನೊಂದು ಜಡಶಾಸ್ತ್ರವೆಂದೂ ಶುಷ್ಕಪಠ್ಯವೆಂದೂ ಪರಿಭಾವಿಸುವ ಚಿಂತನೆಗಳಿಗಿಂತ ಭಿನ್ನವಾಗಿ ಗ್ರಹಿಸುತ್ತಾರೆ. ತಮ್ಮ ಗ್ರಂಥ ವಿಮರ್ಶೆ ಎನ್ನುವ ಲೇಖನದಲ್ಲಿ ಅವರೇ ಹೇಳುವಂತೆ “ದೊರೆಯುವ ಹಸ್ತಪ್ರತಿಗಳಲ್ಲಿನ ಪಾಠಗಳನ್ನೆಲ್ಲ ಮುಂದಿಟ್ಟುಕೊಂಡು ಅವುಗಳ ಬಲಾಬಲಗಳನ್ನು ವಿಚಾರ ಮಾಡಿ ಕವಿಯ ಆಶಯಗಳನ್ನು ಸಂದರ್ಭವನ್ನು ಮೆಲುಕುಹಾಕಿ ಪಾಠಗಳನ್ನು ತೂಕ ಮಾಡಿ ಯಾವುದು ನಿರ್ದುಷ್ಟವೆಂದು ಕಂಡುಬರುತ್ತದೋ ಅದನ್ನು ಒಪ್ಪಿಕೊಳ್ಳುವುದು ಹಿತವಾಗಿದೆ. ಹೀಗೆ ಅಂಗೀಕಾರ ಮಾಡುವುದರಲ್ಲಿ ಅವಕಾಶ ಇದ್ದೇ ಇರುತ್ತದೆ. ಅದಕ್ಕಾಗಿ ಉಳಿದ ಪಾಠಗಳ ಸಹಾಯವಿರುತ್ತದೆ. ಯಾರಿಗೆ ಯಾವುದು ಇಷ್ಟವೋ ಅದನ್ನು ಇಟ್ಟುಕೊಳ್ಳಬಹುದು. ಸಂಪಾದಕರು ಇಷ್ಟು ಅನುಕೂಲಗಳನ್ನು ವಾಚಕರಿಗೆ ಕಲ್ಪಿಸಿಕೊಟ್ಟರೆ ಲೇಸು” ಎಂದು ಸಂಪಾದಕರು ವಹಿಸಬೇಕಾದ ಎಚ್ಚರವನ್ನು ನೆನಪಿಸುತ್ತಾರೆ. ಇನ್ನೂ ಮುಂದುವರಿದು “ಹಳೆಯ ಪ್ರೌಢ ಗ್ರಂಥಗಳನ್ನು ಪರಿಷ್ಕರಿಸುವಾಗಲಂತೂ ಎರಡು ಕಣ್ಣಿಗಿಂತ ನಾಲ್ಕು ಕಣ್ಣು ಉತ್ತಮ. ಸಂಪಾದನೆಯ ಕೆಲಸ ಸರ್ವ ಸಮರ್ಪಕವಾಗಿ ಆದರ್ಶಪ್ರಾಯವಾಗುವುದು ಬಹು ಕಷ್ಟ. ಆ ಸೌಭಾಗ್ಯ ಕನ್ನಡ ಗ್ರಂಥಗಳಿಗೆ ಇನ್ನೂ ಬಂದಿಲ್ಲ. ಆದರೂ ಆದಷ್ಟು ಮಟ್ಟಿಗೆ ಮೂಲ ಪ್ರತಿಗಳಿಂದ ಬರಬಹುದಾದಷ್ಟು ಹಾಲನ್ನು ಒಂದು ತೊಟ್ಟು ಉಳಿಯದ ಹಾಗೆ ಕರೆದುಕೊಂಡು ಅಳತೆ ಮೀರದಂತೆ ವಿಮರ್ಶೆ ಎಂಬ ಸಕ್ಕರೆ ಇಟ್ಟು ನೊರೆಹಾಲನ್ನು ತಯಾರು ಮಾಡಬೇಕು. ಆಗ ಪರಿಷ್ಕರಣ ಕಾರ್ಯ ಸೊಗಸಾಗುವುದು (ಪು. ೧೦೯)

ಹಳಗನ್ನಡ ಕಾವ್ಯಾಧ್ಯಯನ ಮತ್ತು ಗ್ರಂಥಸಂಪಾದನೆಯಂತಹ ಕ್ಷೇತ್ರಗಳನ್ನು ಕುರಿತು ಡಿ. ಎಲ್‌. ನರಸಿಂಹಾಚಾರ್ಯರು ಆಡಿರುವ ಮಾತುಗಳನ್ನು ನಡೆಸಿರುವ ಶೋಧಗಳನ್ನು ತೀರ ಸಾಂಪ್ರದಾಯಿಕ ಎನ್ನುವ ನೆಲೆಗಳಲ್ಲಿಯೇ ಚೆನ್ನಾಗಿ ಪರಿಭಾವಿಸುತ್ತಾ ಬರಲಾಗಿದೆ. ಉಪೇಕ್ಷೆಗೆ ಒಳಗಾಗುತ್ತಿರುವ ಇಂಥ ಜ್ಞಾನಕ್ಷೇತ್ರಗಳ ಬಗ್ಗೆ ಡಿ.ಎಲ್‌.ಎನ್. ಅವರು ನಡೆಸಿದ ಚಿಂತನೆಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು ಅಂತಃ ಶಕ್ತಿಯನ್ನು ಶೋಧಿಸುವಂತವು. ಅವರ ಈ ಶೋಧ ಬರೀ ತಾರ್ಕಿಕವಾಗದೇ ಒಂದು ಸಾಂಸ್ಕೃತಿಕ ಜಿಜ್ಞಾಸೆಯಿಂದ ಕೂಡಿರುವಂಥದ್ದು. ಅದು ಮುಖ್ಯವಾಗಿ ಎರವಲು ಎನ್ನುವ ಅನ್ಯ ನೆಲೆಗಳಿಂದ ವಿನ್ಯಾಸಗೊಳ್ಳದೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಒಡಲೊಳಗಿಂದಲೇ ರೂಪಗೊಳ್ಳುವಂಥದ್ದು. ಇದಕ್ಕೆ ಅವರ ಇಲ್ಲಿನ ಬಹಳಷ್ಟು ಮುನ್ನುಡಿಗಳು ಸಾಕ್ಷ್ಯ ಒದಗಿಸುತ್ತವೆ. ಹರಿಹರನನ್ನು ಕುರಿತು ನಡೆಸುವ ಚರ್ಚೆಯಾಗಲೀ ಶಿಲಾಲತರಯಲ್ಲಿ ಹೇಳುವ ಮಾತುಗಳಾಗಲಿ ಗ್ರಂಥಸಂಪಾದನೆ ಬಗ್ಗೆ ಎತ್ತು ಪ್ರಶ್ನೆಗಳಾಗಲೀ ಇವೆಲ್ಲ ಕನ್ನಡದ್ದೇ ಆದಂಥ ಓದಿನ ಪರಿಕಲ್ಪನೆಯೊಂದನ್ನು ಚಿಂತನಾ ಕ್ರಮವೊಂದನ್ನು ಕಟ್ಟಿಕೊಡುತ್ತವೆ.

ಏಕವ್ಯಕ್ತಿ ಮತ್ತು ಏಕತ್ವ ಕೇಂದ್ರೀತ ಮಾದರಿಗಳನ್ನು ನಿರಾಕರಿಸುವ ರೀತಿ ಡಿ.ಎಲ್‌.ಎನ್. ಅವರ ಮುನ್ನುಡಿ ಬರಹಗಳಲ್ಲಿ ಎದ್ದುಕಾಣುವ ನೆಲೆಯಾಗಿದೆ. ಕೃತಿ ಕೃತಿಕಾರನ ಸ್ವತ್ತು ಎನ್ನುವ ನಂಬಿಕೆ ಬ್ರಿಟಿಷರೊಡನೆ ನಮ್ಮನ್ನು ಆಳತೊಡಗಿತು. ಸಮೂಹ ಪ್ರಜ್ಞೆಯಿಂದ ಸಡಿಲಿ ಅಹಂಪ್ರಜ್ಞೆಗೆ ಸಾಹಿತ್ಯ ಬಂದಿಯಾದ ಕ್ಷಣವದು. ಯಾರೋ ಬರೆದ ಸಾಹಿತ್ಯವನ್ನು ಸಂಪಾದಿಸಿ ಅವುಗಳ ಮೇಲೆ ತಮ್ಮ ಹಕ್ಕಿನ ಕಾಪಿರೈಟ್‌ ಮುದ್ರಿಸಿ ಕೃತಿಯ ಹಕ್ಕನ್ನು ತಾವು ಉಳಿಸಿಕೊಂಡರು. ಆ ಮೂಲಕ ತಾವು ಸಂಪಾದಿಸಿದ ಕೃತಿಯ ಪ್ರಾಚೀನ ಕೃತಿ ಹಾಗೂ ತಾವು ರಚಿಸಿದ ಕೃತಿಗಳ ಮೇಲೆಯೇ ತಮ್ಮ ಹಕ್ಕನ್ನು ಉಳಿಸಿಕೊಂಡರು. ಈ ಘಟ್ಟ ಮೂಲಪಾಠ, ಕವಿಪಾಠ, ಪಾಠಶುದ್ಧತೆಯ ಕಡೆಗೆ ಹೆಚ್ಚಿನ ಒಲುಮೆ ಹರಿಸಿತು. ಒಂದು ಅಚ್ಚಾದ ಪಠ್ಯವನ್ನು ಮುಂದಿಟ್ಟುಕೊಂಡು ಅದರೊಂದಿಗೆ ಸಂವಾದ ಬೆಳೆಸುವ ಬಹುಮುಖ್ಯ ಕ್ರಮ ೬೦ರ ದಶಕದಲ್ಲಿ ಚಾಲ್ತಿಯಿತ್ತು. ಈ ಎಲ್ಲ ಪ್ರಯತ್ನಗಳ ಹಿಂದೆ ಒಟ್ಟು ಸಾಹಿತ್ಯ ಹಾಗೂ ಗ್ರಂಥಸಂಪಾದನಾ ಪ್ರಕ್ರಿಯೆಯ ಆಯಾ ಕಾಲದ ಪ್ರಮುಖ ತಾತ್ವಿಕ ನಿಲುವುಗಳನ್ನು ಏಕಕೇಂದ್ರಿತ ನೆಲೆಯಲ್ಲಿ ಸಮರಸಗೊಳಿಸಲು ನಡೆಸಿದ ಒತ್ತಾಯವಿತ್ತು. ಇಂಥ ಸಂದರ್ಭದಲ್ಲಿ ಬಹಳ ಮುಖ್ಯ ಲೇಖಕರಾಗಿ ಬರೆಯುತ್ತಿದ್ದ ಮತ್ತು ಚರ್ಚೆಗೆ ಒಳಗಾಗುತ್ತಿದ್ದ ಡಿ.ಎಲ್‌.ಎನ್. ಅವರ ಬರಹಗಳು ತುಂಬ ಭಿನ್ನವಾದಂಥ ಬಹುಮುಖಿಯಾದಂಥ ವಿಚಾರಗಳನ್ನು ಒಳಗೊಂಡಿದ್ದು ವಿಶೇಷವಾಗಿದೆ. ಚಲನಶೀಲ ಸಾಹಿತ್ಯ ಸಂಸ್ಕೃತಿಯ ಸಂಕಥನದ ಮಾದರಿಯೊಂದನ್ನು ಮಂಡಿಸುವ ಡಿ.ಎಲ್‌.ಎನ್. ಅವರ ಆಲೋಚನಾಕ್ರಮ ಒಂದು ವಿಕಾಸಶೀಲ ಮತ್ತು ಅಂತಃಪ್ರಜ್ಞೆಯಿಂದೊಡಗೂಡಿದ್ದು ಎನ್ನುವುದು ಪ್ರಮುಖವಾಗಿದೆ. ಇಲ್ಲಿನ ಎಲ್ಲ ಮುನ್ನುಡಿ ಬರಹಗಳು ಇಂಥ ಬಹು ಸಾಂಸ್ಕೃತಿಕ ವಿನ್ಯಾಸಗಳನ್ನು ಗರ್ಭೀಕರಿಸಿಕೊಂಡಿರುವುದು ಎದ್ದು ಕಾಣುತ್ತದೆ.

ಪರಾಮರ್ಶನ ಗ್ರಂಥಗಳು

೧. ದೇವೀರಪ್ಪ ಎಚ್‌. (ಸಂ.), ೧೯೯೫, ಶರಣ ಚರಿತ ಮಾನಸಂ, ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೨. ಕೆ. ಎಸ್‌. ನರಸಿಂಹಸ್ವಾಮಿ, ೨೦೦೪, ಮಲ್ಲಿಗೆಯ ಮಾಲೆ ಕೆ. ಎಸ್‌. ಎನ್‌. ಅವರ ಸಮಗ್ರ ಕವನ ಸಂಕಲನ, ಲಿಪಿ ಪ್ರಕಾಶನ, ಬೆಂಗಳೂರು ೪, ೨೦೦೪

೩. ಎಂ. ಚಿದಾನಂದಮೂರ್ತಿ, ೧೯೭೦, ಸಂಶೋಧನ ತರಂಗ ೨, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

೪. ಪಂಪ ನಾಗರಾಜಯ್ಯ, ೧೯೬೮, ಭಾಷಾವಿಜ್ಞಾನ, ಡಿ.ವಿ.ಕೆ. ಮೂರ್ತಿ ಪ್ರಾಕಾಶನ, ಮೈಸೂರು ೪

೫. ಎಸ್‌. ವಿದ್ಯಾಶಂಕರ, ೧೯೯೭, ಪ್ರೊ. ಡಿ. ಎಲ್‌. ನರಸಿಂಹಾಚಾರ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೬. ಎಲ್‌. ಬಸವರಾಜು, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲಾ, ಮೈಸೂರು ಶಿವದಾಸ ಗೀತಾಂಜಲಿ

೭. ಎನ್‌. ಎಸ್‌. ಲಕ್ಷ್ಮೀನಾರಾಯಣಭಟ್‌ (ಅನು), ೨೦೦೩, ಭಾರತೀಯ ಗ್ರಂಥ ಸಂಪಾದನಾ ಪರಿಚಯ, ವಸಂತ ಪ್ರಕಾಶನ, ಬೆಂಗಳೂರು