ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಡಿ.ಎಲ್‌.ಎನ್‌ ಅವರು ಒಂದು ಪಥವನ್ನು ರೂಪಿಸಿದರು. ಸಾಮಗ್ರಿ ಸಂಗ್ರಹ, ವ್ಯಾಖ್ಯಾನ, ವಿಶ್ಲೇಷಣೆಯ ನೆಲೆಯಲ್ಲಿ ಕನ್ನಡ ಅಧ್ಯಯನಕ್ಕೆ ಅಡಿರಚನೆ ಹಾಕಿದರು, ಈ ಲೇಖನದಲ್ಲಿ ಡಿ.ಎಲ್‌.ಎನ್‌ರ ವ್ಯಕ್ತಿತ್ವ ಮತ್ತು ಸಾಹಿತ್ಯ ಸಾಧನೆಯನ್ನು ಕುರಿತು ನಡೆದ ಕಾರ್ಯವೈಖರಿಯನ್ನು ಸ್ಥೂಲವಾಗಿ ಪರಿಶೀಲಿಸಲಾಗಿದೆ.

೧೯೭೧ರಲ್ಲಿ ಡಿ.ಎಲ್‌.ಎನ್‌ರು ನಿಧನಹೊಂದಿದಾಗ ಅವರ ನೆನೆಪಿಗೆ ಅವರ ಶಿಷ್ಯರೂ ಮಿತ್ರರೂ ಸೇರಿ ಕ.ಸಾ.ಪದ ‘‘ಕನ್ನಡ ನುಡಿ’’ಯಲ್ಲಿ ವಿಶೇಷ ಸಂಚಿಕೆಯನ್ನು ಹೊರತಂದರು. ಅವರ ವಿದ್ವತ್ತು ಮತ್ತು ವ್ಯಕ್ತಿತ್ವದ ವಿವಿಧ ಮುಖಗಳನ್ನು ಹತ್ತಿರದಿಂದ ಕಂಡ ಒಡನಾಡಿಗಳು, ಮಿತ್ರರು, ಶಿಷ್ಯರು ಉಣಬಡಿಸಿರುವ ನೆನಪಿನ ಬುತ್ತಿ ಈ ಸ್ಮರಣ ಸಂಚಿಕೆ (೧೯೭೧, ಆಗಸ್ಟ್‌ ೧೬) ಇದರಲ್ಲಿ ೨೧ ಲೇಖನಗಳಿವೆ.

ಸಹೃಯದ ಸಂಶೋಧಕ ಮಿತ್ರರು (ಆ.ನೇ.ಉಪಾಧ್ಯೆ), ಡಿ.ಎಲ್‌.ಎನ್‌. ನರಸಿಂಹಾಚಾರ್ಯರು (ಎನ್‌. ಲಕ್ಷ್ಮೀನಾರಾಯಣರಾವ್‌), ಶ್ರೀ ಗುರುವೇ ನಮಃ (ಓ. ಎನ್‌. ಲಿಂಗಯ್ಯ), ಆಚಾರ್ಯರ ಸೌಂದರ್ಯ ಮೀಮಾಂಸೆಯ ದಿವ್ಯದೃಷ್ಟಿಗೆ (ಡಿ.ವಿ.ಕೆ. ಮೂರ್ತಿ), ಗುರುಸ್ಮರಣೆ (ಹಂಪನಾಗರಾಜಯ್ಯ), ತುಮಕೂರಿನವರ ಗುತ್ತಿಗೆ (ಕ.ವೆಂ. ರಾಘವಾಚಾರ್‌), ಪ್ರಾಚಾರ್ಯ ಡಿ.ಎಲ್‌.ಎನ್‌ ಅವರು (ಎಚ್‌.ಎಂ ಶಂಕರನಾಯಾಣರಾವ್‌), ಪ್ರಿಯಮಿತ್ರ ಡಿ.ಎಲ್‌.ನರಸಿಂಹಾಚಾರ್‌ (ಟಿ.ಪಿ. ಕೃಷ್ಣಚಾರ್‌), ಶಾಸನಗಳ ಪರಿಣತರು (ಜಿ.ಎಸ್‌.ಗಾಯಿ), ಜೀವಂತ ಜ್ಞಾನಭಂಡಾರ ಪ್ರೊ.ಡಿ.ಎಲ್‌. ನರಸಿಂಹಾಚಾರ್‌ (ಬಿ. ಶಿವಮೂರ್ತಿ ಶಾಸ್ತ್ರಿ), ನೀನು ಯಾವ ಘನವಿದ್ವಾಂಸ! (ಜಿ. ಬ್ರಹ್ಮಪ್ಪ), ನನ್ನ ಜೀವನದಲ್ಲಿ ಡಿ.ಎಲ್‌.ಎನ್ (ಎಂ.ಎಸ್‌. ಲಕ್ಷ್ಮಚಾರ್‌), ಪಾಂಡಿತ್ಯ ಪ್ರತಿನಿಧಿ (ಡಿ. ಪದ್ಮನಾಭ ಶರ್ಮ). ವಿದ್ಯಾ ವಿನಯ ಸಂಪನ್ನತೆಯ ಪ್ರತೀಕ (ಎಂ. ಮರಿಯಪ್ಪಭಟ್ಟ), ಪುಣ್ಯಸ್ಮರಣೆ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌), ಕನ್ನಡಮ್ಮನ ಸುಪುತ್ರ ಡಿ.ಎಲ್‌.ಎನ್‌ (ಕಾ.ಸ. ಧರಣೇಂದ್ರಯ್ಯ), ಪವಾಡಪುರುಷ ಪ್ರಾಧ್ಯಾಪಕ ದೊ.ಲ.ನ (ಕಮಲಾ ಹಂಪನಾ), ಮೌಲ್ಯಾರಾಧಕ (ಸ.ಸ. ಮಾಳವಾಡ). ಆಚಾರ್ಯ ದೇವೋಭವ (ಎನ್‌. ಬಸವಾರಾಧ್ಯ), ಶ್ರೀನಂಶ್ರೀ ಮತ್ತು ಡಿ.ಎಲ್‌.ಎನ್‌ ಕೆಲವು ನೆನೆಪುಗಳು (ಎಂ. ಚಿದಾನಂದಮೂರ್ತಿ), ಕವಿವಾಕ್ಯ ಪಂಡಿತ (ಕೆ. ವೆಂಕಟೇಶಯ್ಯ ಇವು ಉಲ್ಲಾಖಾರ್ಹವಾಗಿವೆ. ಡಿ.ಎಲ್‌.ಎನ್‌ರ ಸಾಹಿತ್ಯ ಕುರಿತು ಅಧ್ಯಯನ ಮಾಡುವವರಿಗೆ ಇವು ತುಂಬ ನೆರವಾಗುತ್ತವೆ.

ಡಿ.ಎಲ್‌.ನರಸಿಂಹಾಚಾರ್‌ ಅವರ ಬಗೆಗೆ ಮೊದಲು ಪುಸ್ತಕ ಬರೆದವರು ಬಿ.ಎ ವೈಕುಂಠರಾಜು ಅವರು. ಆ ಕೃತಿಯ ಶೀರ್ಷಿಕೆ ಪ್ರೊ. ಡಿ.ಎಲ್‌. ನರಸಿಂಹಾಚಾರ್‌ (ಐ.ಬಿ.ಎಚ್‌. ಪ್ರಕಾಶನ ) ಇದರಲ್ಲಿ ಡಿ.ಎಲ್‌.ಎನ್‌ರ ಬದುಕು ಹಾಗೂ ಸಾಧನೆಗಳ ಸ್ಥೂಲ ವಿವರಣೆಯಿದೆ. ಡಿ.ಎಲ್‌.ಎನ್‌ ವ್ಯಕ್ತಿಯಾಗಿ ಮತ್ತು ಕೃತಿಕಾರರಾಗಿ ಅವರ ಬದುಕು ಮತ್ತು ಸಾಹಿತ್ಯದ ಹಲವು ಮಜಲುಗಳನ್ನು ಕುರಿತು ಆಪ್ತವಾದ ಶೈಲಿಯಲ್ಲಿ ಕೃತಿರಚನೆಯಾಗಿದೆ. ಸೂಕ್ಷ್ಮಸಂವೇದನೆ ಹಾಗೂ ಸಾಹಿತ್ಯಪ್ರಜ್ಞೆಯ ಈ ಪುಸ್ತಕ ಕನ್ನಡದಲ್ಲಿ ಬಂದಿರುವ ಜೀವನ ಚರಿತ್ರೆಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ “ಹೊಸಗನ್ನಡ ಸಾಹಿತ್ಯ ನಿರ್ಮಾಪಕರು” ಮಾಲಿಕೆಯಲ್ಲಿ ಡಿ.ಎಲ್‌.ನರಸಿಂಹಾಚಾರ್ಯರ ಬದುಕು ಮತ್ತು ಸಾಹಿತ್ಯ ಸಾಧನೆಯನ್ನು ಎಸ್‌. ವಿದ್ಯಾಶಂಕರ ಅವರು ಡಿ.ಎಲ್‌. ನರಸಿಂಹಾಚಾರ್‌ (೧೯೯೨) ಎಂಬ ಕೃತಿಯಲ್ಲಿ ಪರಿಚಯಿಸಿದ್ದಾರೆ.

ಈ ಕೃತಿಯಲ್ಲಿ ಡಿ.ಎಲ್‌.ಎನ್‌ ಒಂದು ವ್ಯಕ್ತಿ ಚಿತ್ರ, ಬೋಧನ ಕ್ರಮ, ಶಿಷ್ಯ-ಮಿತ್ರ ವಾತ್ಸಲ್ಯ, ನಿಘಂಟು ಸೇವೆ, ಸ್ವತಂತ್ರ ಕೃತಿಗಳು, ಸಂಪಾದಿತ ಕೃತಿಗಳು, ಮುನ್ನುಡಿಗಳು, ಗ್ರಂಥವಿಮರ್ಶೆ, ಆಧುನಿಕ ಮುಖ್ಯಘಟನೆಗಳು ಮತ್ತು ಡಿ.ಎಲ್‌.ಎನ್‌ ಅವರ ಬದುಕಿನ ಮುಖ್ಯ ಘಟನೆಗಳು ಮತ್ತು ಡಿ.ಎಲ್‌.ಎನ್‌ ಅವರ ಕೃತಿಗಳು ಎಂಬ ೧೧ ಅಧ್ಯಾಯಗಳಿವೆ. ವಿದ್ಯಾಶಂಕರ ಅವರು ಅನೇಕ ಮೂಲಗಳಿಂದ ಸಂಗ್ರಹಿಸಿದ ಆಕರಗಳನ್ನು ಹಾಗೆಯೇ ಇಡಿಯಾಗಿ ಈ ಕೃತಿಯಲ್ಲಿ ಕೊಟ್ಟಿದ್ದಾರೆ. ಅಲ್ಲಲ್ಲಿ ಆ ಕುರಿತು ವ್ಯಾಖ್ಯಾನಿಸಿದ್ದಾರೆ. ಡಿ.ಎಲ್‌.ಎನ್‌ರು ಕನ್ನಡ, ತೆಲುಗು, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಅಧ್ಯಯನ ಮಾಡಿ ಉಜ್ವಲ ಅಧ್ಯಾಪಕರಾಗಿ, ವ್ಯಾಕರಣಕಾರರಾಗಿ, ಗ್ರಂಥಸಂಪಾದಕರಾಗಿ ಮಾನವತಾವಾದಿಯಾಗಿ ಸತ್ವಪೂರ್ಣ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ್ದಾರೆ. ಇಂತಹ ವ್ಯಕ್ತಿಯ ಜೀವನ ಚಿತ್ರಣ ಮತ್ತು ಸಾಹಿತ್ಯ ನಿರ್ಮಾಣವನ್ನು ಕುರಿತಂತೆ ಲೇಖಕರು ಪರಿಣಾಮಕಾರಿಯಾದ ರೀತಿಯಲ್ಲಿ ರೂಪಿಸಿದ್ದಾರೆ.

ಈ ಕೃತಿಯನ್ನು ಓದುವಾಗ ಯಾವುದೋ ಜೀವನ ಚರಿತ್ರೆಯನ್ನು ಓದುತ್ತಿರುವೆವೆಂಬ ಭಾವನೆ ಓದುಗರಿಗೆ ಎಲ್ಲಿಯೂ ಬಾರದೆ ತುಂಬ ರಸಾರ್ದ್ರವಾದ ಕಾದಂಬರಿಯನ್ನು ಓದುತ್ತಿರುವ ಅನುಭವವಾಗುತ್ತದೆ. ಒಟ್ಟಾರೆ ಸಾಹಿತ್ಯಾಭ್ಯಾಸಿಗಳಿಗೆ ಈ ಗ್ರಂಥ ಪಠಣಯೋಗ್ಯವಾಗಿದೆ.

ಡಿ.ಎಲ್‌.ನರಸಿಂಹಾಚಾರ್ಯರು ಬೀದರನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತರಾದಾಗ (೧೯೬೦) ಅವರ ವಿದ್ಯಾರ್ಥಿಗಳು, ಮಿತ್ರರು ಸೇರಿ ಡಿ.ಎಲ್‌.ಎನ್‌ ಅವರ ವ್ಯಕ್ತಿತ್ವ ಮತ್ತು ಕೃತಿಗಳನ್ನು ಕುರಿತು ‘ಜ್ಞಾನೋಪಾಸಕ’ ಎಂಬ ಸಂಕಲನ ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಒಟ್ಟು ೨೪ ಲೇಖನಗಳಿವೆ.

ನರಸಿಂಹಾಚಾರ್ಯ ಶ್ರೀಃ (ಸಿ.ಜಿ ಪುರುಷೋತ್ತಮ), ದೊ.ಲ.ನ.ರ ದೊಡ್ಡಿತೆ (ರಂಶ್ರೀ ಮುಗಳಿ), ಪ್ರೊ. ಡಿ.ಎಲ್‌. ನರಸಿಂಹಾಚಾರ್‌ (ಎಸ್‌.ವಿ. ಪರಮೇಶ್ವರ ಭಟ್‌), ನಮ್ಮ ಮೇಸ್ಟ್ರು (ಎಚ್‌. ದೇವಿರಪ್ಪ), ನಾನು ಕಂಡ ಡಿ.ಎಲ್‌.ಎನ್‌ (ಎಂ. ಯಮುನಾಚಾರ್‌), ಸಂಶೋಧಕರಾಗಿ), ಪ್ರೊ. ಡಿ.ಎಲ್‌. ನರಸಿಂಹಾಚಾರ್‌ (ಉ.ಕಾ. ಸುಬ್ಬರಾಯಾಚಾರ್‌), ವಿದ್ವತ್ತಿನ ನಿಧಿ (ಸುಜನಾ), ಪ್ರೊ. ನರಸಿಂಹಾಚಾರ್ಯರ ವ್ಯಕ್ತಿತ್ವ (ಬಿ.ಎಚ್‌. ಶ್ರೀಧರ), ಗುರುಸನ್ನಿಯಲ್ಲಿ (ಹಾ.ಮಾ.ನಾಯಕ), ನಮ್ಮ ಗುರುಗಳು (ಪ.ವಿ. ಚಂದ್ರಶೇಖರ), ಪ್ರೊ ಡಿ.ಎಲ್‌.ಎನ್‌ ಅವರ ಬೋಧನ ಕ್ರಮ (ಎಂ. ಚಿದಾನಂದಮೂರ್ತಿ), ವಿದ್ವತ್ತಿಗೊಂದು ಸಾಕ್ಷಿ (ಎನ್‌. ಪ್ರಹ್ಲಾದರಾವ್‌), ಶಬ್ದ ವಿಹಾರ (ಜಿ. ವರದರಾಜ ರಾವ್‌), ಸಿದ್ಧರಾಮ ಚರಿತೆಯ ಸಂಗ್ರಹ (ಎಚ್‌. ತಿಪ್ಪೇರುದ್ರಸ್ವಾಮಿ), ಡಿ.ಎಲ್‌.ಎನ್‌ ಅವರ ಹಂಪೆಯ ಹರಿಹರ (ಪರಮೇಶ್ವರಪ್ಪ), ಪಂಪ ರಾಮಾಯಣದ ಪೀಠಿಕೆ (ಕೆ. ಕೃಷ್ಣಮೂರ್ತಿ), ವಿಮರ್ಶಕ ಡಿ.ಎಲ್‌.ಎನ್‌(ಎಸ್‌. ಅನಂತನಾರಾಯಣ), ಡಿ.ಎಲ್‌.ಎನ್‌ ಅವರ ಹೊಸಗನ್ನಡ ಸಾಹಿತ್ಯಾ ವಿಮರ್ಶೆ (ಎಚ್ಚೆಸ್ಕೆ), ಮುನ್ನುಡಿಕಾರ ಡಿ.ಎಲ್‌.ಎನ್‌ (ವಿ. ಪುಟ್ಟಮಾದಪ್ಪ), ಡಿ.ಎಲ್‌.ಎನ್‌ ಅವರ ಲೇಖನಗಳು (ಜಿ. ವೆಂಕಟಸುಬ್ಬಯ್ಯ). ವಡ್ಡಾರಾಧನೆಯ ದೇಸಿ (ಟಿ.ವಿ. ವೆಂಕಟಾಚಲಶಾಸ್ತ್ರೀ), ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಕೃತಿಗಳು (ಎನ್‌. ಬಸವಾರಾಧ್ಯ) ಡಿ.ಎಲ್‌.ಎನ್‌ ಅವರ ಲೇಖನಗಳು (ಹಂ.ಪ. ನಾಗರಾಜಯ್ಯ), ಡಿ.ಎಲ್‌.ಎನ್‌ಒಂದು ನೆನಪು (ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು) ಇವು ಹೆಸರಿಸಬೇಕಾದುವುಗಳು.

ಡಿ.ಎಲ್‌.ಎನ್‌ ಅವರು ತಮ್ಮ ವ್ಯಕ್ತಿತ್ವದಿಂದಲೂ ವಿದ್ವತ್ಪೂರ್ಣವಾದ ಲೇಖನಗಳಿಂದಲೂ, ಭಾಷಣಗಳಿಂದಲೂ ಖ್ಯಾತಿ ಗಳಿಸಿದ್ದಾರೆ. ಶ್ರೇಷ್ಠ ವರ್ಗದ ಪ್ರಾಧ್ಯಾಪಕರೆನಿಸಿದ ಅವರು ವಿದ್ಯಾರ್ಥಿಗಳ ಪ್ರತಿ ಗೌರವಗಳನ್ನು ಸಂಪಾದಿಸಿದ್ದಾರೆ. ಅವರ ವ್ಯಕ್ತಿತ್ವದ ವಿವಿಧ ಮುಖಗಳನ್ನು ಅವರ ಕಾರ್ಯಕ್ಷೇತ್ರದ ಹಲವು ಸಾಧನೆಗಳನ್ನು ಕುರಿತು ಅವರ ಶಿಷ್ಯರೂ ಮಿತ್ರರೂ ನಿಕಟ ಪರಿಚಯದಿಂದ ಬರೆದಿರುವ ಈ ಲೇಖನಗಳು ತುಂಬ ಮೌಲಿಕವಾಗಿವೆ. ಒಂದು ಕಾಲ ಘಟ್ಟದ ಸಂಶೋಧನೆಯ ಸ್ಥಿತಿಯನ್ನು ಸ್ವರೂಪವನ್ನು ತಿಳಿದುಕೊಳ್ಳಲಿಕ್ಕೆ ಈ ಗ್ರಂಥ ತುಂಬ ನೆರವಾಗುತ್ತದೆ. ಕನ್ನಡ ಪ್ರಾಧ್ಯಾಪಕರಾಗಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಕನ್ನಡಕ್ಕೆ ಕೀರ್ತಿ ತಂದ ಡಿ.ಎಲ್‌. ನರಸಿಂಹಾಚಾರ್ಯರಿಗೆ ಅರವತ್ತು ವರ್ಷಗಳು ತುಂಬಿದಾಗ ನಾಡಿನ ವಿದ್ವಾಂಸರು ಉಪಾಯನ (೧೯೬೭) ಎಂಬ ವಿದ್ವತ್‌ಪ್ರಬಂಧಗಳ ಸಂಪುಟವನ್ನು ಅರ್ಪಿಸುವುದರ ಮೂಲಕ ಗೌರವ ತೋರಿಸಿದ್ದಾರೆ. ‘ಉಪಾಯನ’ದಲ್ಲಿ ಡಿ.ಎಲ್‌.ಎನ್‌ರಿಗೆ ಪ್ರಿಯವಾದ ವ್ಯಾಕರಣ, ನಿಘಂಟು, ಛಂದಸ್ಸು, ಪ್ರಾಚೀನ ಸಾಹಿತ್ಯ ಈ ವಿಷಯಗಳನ್ನು ಕುರಿತು ಮೌಲಿಕ ಸಂಪ್ರಬಂಧಗಳಿವೆ. ಪ್ರತಿಯೊಂದು ಸಂಪ್ರಬಂಧವೂ ಅನೇಕ ವಿವರಗಳನ್ನು ಒಳಗೊಂಡಿದೆ. ಸಾಂಸ್ಕೃತಿಕವಾಗಿ ಮಹತ್ವದ ಈ ವಿವರಗಳನ್ನು ಒಂದೆಡೆಗೆ ತಂದು ಒಟ್ಟು ಕನ್ನಡ ಸಂಶೋಧನೆಯ ಸ್ಥಿತಿ-ಗತಿಯನ್ನು ಪರಿಚಯಮಾಡಿಕೊಡುತ್ತವೆ. ಕನ್ನಡದಲ್ಲಿ ಬಂದಂತಹ ಮೌಲಿಕ ಸಂಭಾವನಾ ಗ್ರಂಥಗಳಲ್ಲಿ ಉಪಾಯನ ತುಂಬ ಪ್ರಮುಖವಾಗಿದೆ.

ಭಾಷೆ, ವ್ಯಾಕರಣ ಮತ್ತು ನಿಘಂಟು ಕ್ಷೇತ್ರಕ್ಕೆ ಡಿ.ಎಲ್‌.ಎನ್‌ರ ಕೊಡುಗೆಯನ್ನು ಕುರಿತು ಎಸ್‌. ವಿದ್ಯಾಶಂಕರ್‌ ಅವರು ‘ಭಾಷಾಧ್ಯಯನ ಕ್ಷೇತ್ರಕ್ಕೆ ಆಚಾರ್ಯ ಡಿ.ಎಲ್‌.ಎನ್‌ರ ಕೊಡುಗೆ’ (೨೦೦೩) ಎಂಬ ಲೇಖನದಲ್ಲಿ ಸೋದಾಹರಣವಾಗಿ ವಿವೇಚಿಸಿದ್ದಾರೆ. ಗ್ರಂಥಸಂಪಾದನೆಗೆ ಡಿ.ಎಲ್‌.ಎನ್‌ರ ಕೊಡುಗೆಯನ್ನು ಕುರಿತು ಎಂ. ಚಿದಾನಂದ ಮೂರ್ತಿ ಅವರು (೧೯೮೨), ಎಸ್‌. ವಿದ್ಯಾಶಂಕರ ಅವರು (೨೦೦೨) ಪ್ರತ್ಯೇಕವಾಗಿ ಸಂಪ್ರಬಂಧಗಳನ್ನು ರಚಿಸಿದ್ದಾರೆ. ‘ಡಿ.ಎಲ್‌. ನರಸಿಂಹಾಚಾರ್‌’ ಎಂಬ ಶೀರ್ಷಿಕೆಯಲ್ಲಿ ಎಂ. ಚಿದಾನಂದಮೂರ್ತಿ ಅವರು (ಪ್ರಬುದ್ಧ ಕರ್ನಾಟಕ ೫೩-೨) ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು (ಮಾರ್ಗದರ್ಶಕ ಮಹನೀಯರು), ತುಂಬ ಆಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ಲೇಖಿಸಿದ್ದಾರೆ. ಎಸ್‌.ಎಸ್‌. ಅಂಗಡಿ ಅವರು ‘ಡಿ.ಎಲ್‌.ನರಸಿಂಹಾಚಾರ್ಯರ ಕನ್ನಡ ಗ್ರಂಥಸಂಪಾದನೆ’ ಎಂಬ ಲೇಖನದಲ್ಲಿ (೨೦೦೪) ಡಿ.ಎಲ್‌.ಎನ್‌ರ ‘ಕನ್ನಡ ಗ್ರಂಥಸಂಪಾದನೆ’ ಕೃತಿಯನ್ನು ಇಂದಿನ ಗ್ರಂಥಸಂಪಾದನೆಯ ಹೊಸ ಸಾಧ್ಯತೆಗಳನ್ನು ಆ ಮೂಲಕ ಪರಿಶೀಲಿಸಿದ್ದಾರೆ. ಈ ಎಲ್ಲ ಲೇಖನಗಳು ಡಿ.ಎಲ್‌.ಎನ್‌ರ ವಿದ್ವತ್ತು ಮತ್ತು ಸಂಶೋಧನ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ತುಂಬ ನೆರವಾಗುತ್ತವೆ.

ಹೀಗೆ ಡಿ.ಎಲ್‌.ಎನ್‌. ಅವರು ವ್ಯಕ್ತಿಯಾಗಿ, ವಿದ್ವಾಂಸರಾಗಿ ಸಮದಂಡಿಯಂತೆ ಬದುಕಿದರು. ಅವರ ಸಂಶೋಧನೆಗಳನ್ನು ಸಮನ್ವಯಿಸಿ ಕನ್ನಡ ಭಾಷೆ ಗ್ರಂಥಸಂಪಾದನೆಯ ಇತಿಹಾಸವನ್ನು ಪುನರ್‌ರಚಿಸಬೇಕಾಗಿದೆ. ಅದುವೇ ನಾವು ಡಿ.ಎಲ್‌.ಎನ್‌ರಿಗೆ ಕೊಡುವ ಗೌರವವಾಗಿದೆ.

 

ಹೆಚ್ಚಿನ ಓದಿಗೆ

೧. ಪೀಠೀಕೆಗಳು ಲೇಖನಗಳು : ಡಿ. ಎಲ್‌.ನರಸಿಂಹಾಚಾರ್‌

೨.ಜ್ಞಾನೋಪಾಸಕ : (ಸಂ) ಜೀ.ಶಂ ಪರಮಶಿವಯ್ಯ

೩. ಉಪಾಯನ (ಸಂಭಾವನಾ ಗ್ರಂಥ)

೪. ಕನ್ನಡ ನುಡಿ (ಡಿ.ಎಲ್‌.ಎನ್‌. ಸ್ಮರಣ ಸಂಚಿಕೆ) ೩೪-೧೫, ೧೬ (ಆಗಸ್ಟ್‌ ೧೯೭೧)

೫. ಪ್ರಬುದ್ಧ ಕರ್ಣಾಟಕ ೫೩-೨

೬. ರಸಫಲ; (ಲೇ) ಗೊರೂರು ರಾಮಸ್ವಾಮಿ ಅಯ್ಯಂಗಾರ್‌ (ಐ.ಬಿ.ಎಚ್‌ಪ್ರಕಾಶನ)

೭. ಪ್ರೊ. ಡಿ.ಎಲ್‌. ನರಸಿಂಹಾಚಾರ್‌ (ಲೇ) ಬಿ.ವಿ. ವೈಕುಂಠರಾಜು (ಐ.ಬಿ.ಎಚ್‌ಪ್ರಕಾಶನ)

೮. ಸಪ್ತಶೃಂಗ; (ಲೇ) ಬಿ.ವಿ. ವೈಕುಂಠರಾಜು (ಅಕ್ಷರ ಪ್ರಕಾಶನ, ಸಾಗರ)