ಕನ್ನಡ ಸಂಶೋಧನ ಕ್ಷೇತ್ರದಲ್ಲಿ ೨೦೦೫-೦೬ ಮಹತ್ವದ ವರ್ಷ. ಆ.ನೆ. ಉಪಾಧ್ಯೆ, ತ.ಸು. ಶಾಮರಾಯ, ತೀ.ನಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್, ರಂ.ಶ್ರೀ. ಮುಗಳಿ, ಎಂ.ಮರಿಯಪ್ಪ ಭಟ್ಟ ಅವರು ಜನಿಸಿ ಒಂದು ಶತಮಾನಗಳಾಗುತ್ತಲಿದೆ. ವಿದ್ವತ್ ಲೋಕದಲ್ಲಿ ಡಿ.ಎಲ್.ಎನ್. ಎಂದೇ ಹೆಸರಾದ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ ಅವರು ವಿಶೇಷವಾಗಿ ಹಸ್ತಪ್ರತಿ, ಗ್ರಂಥಸಂಪಾದನೆ, ವ್ಯಾಕರಣ, ಛಂದಸ್ಸು, ನಿಘಂಟು ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದವರು. ಈ ಸಾಧನೆಗೆ ಅವರ ವಡ್ಡಾರಾಧನೆ, ಪಂಪರಾಮಾಯಣ, ಕನ್ನಡ ಗ್ರಂಥಸಂಪಾದನೆ, ಪೀಠಿಕೆಗಳು ಲೇಖನಗಳು, ಪಂಪಭಾರತ ದೀಪಿಕೆ, ಶಬ್ದವಿಹಾರ ಇತ್ಯಾದಿ ಗ್ರಂಥಗಳು ನಿದರ್ಶನವಾಗಿವೆ.

ಗ್ರಂಥ ಸಂಪಾದನೆ, ಡಿ.ಎಲ್.ಎನ್. ಅವರ ವಿಶೇಷ ಆಸಕ್ತಿಯ ಕ್ಷೇತ್ರ. ಕನ್ನಡ ಪ್ರಾಚೀನ ಗದ್ಯಕೃತಿಯಾದ ವಡ್ಡಾರಾಧನೆಯ ಶೋಧ ಮತ್ತು ಪರಿಷ್ಕರಣೆ, ಡಿ.ಎಲ್.ಎನ್. ಅವರ ಮಹತ್ವದ ಸಾಧನೆಗಳಲ್ಲಿ ಒಂದು. ಅವರು ೧೯೩೦ರಲ್ಲಿ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ನೇಮಕಗೊಂಡ ಸಂದರ್ಭವದು. ಕರ್ನಾಟಕ ಕವಿಚರಿತೆಯಲ್ಲಿ ಉಕ್ತವಾಗದ ಯಾವುದಾದರೂ ಕೃತಿಗಳು ಇವೆಯೇ ಎಂದು ತಿಳಿಯುವ ಕುತೂಹಲದಿಂದ ಆ ಸಂಶೋಧನಾಲಯದ ಕನ್ನಡ ಹಸ್ತಪ್ರತಿಗಳ ಪಟ್ಟಿಯನ್ನು ತಿರುವಿ ಹಾಕತೊಡಗಿದರು. ಆ ಪಟ್ಟಿಯಲ್ಲಿ ವೊಡ್ಡಾರಾಧನಂ ಎಂಬ ಪುಸ್ತಕದ ಹೆಸರು ಕಣ್ಣಿಗೆ ಬಿತ್ತು. ಆ ಪುಸ್ತಕವನ್ನು ತರಿಸಿ ನೋಡಿದಾಗ ಮೇಲ್ಭಾಗದಲ್ಲಿ ಕವಿಯ ಹೆಸರು ಉಲ್ಲೇಖವಾಗಿರಲಿಲ್ಲ. ಅಲ್ಲದೇ ವಾರ್ಧಕ ಷಟ್ಪದಿಯಲ್ಲಿದೆಯೆಂದು ಬರೆಯಲಾಗಿತ್ತು. ಕುತೂಹಲದಿಂದ ಸಮಗ್ರವಾಗಿ ಪರಿಶೀಲಿಸಿದಾಗ ಅದೊಂದು ೧೯ ಕಥೆಗಳನ್ನೊಳಗೊಂಡ ಪ್ರಾಚೀನ ಗದ್ಯಕೃತಿಯೆಂದು ಗೊತ್ತಾಯಿತು. ಈ ಪುಸ್ತಕವನ್ನು ನೋಡಿ ಡಿ.ಎಲ್.ಎನ್. ಅವರಿಗೆ ತುಂಬ ಸಂತೋಷವಾಯಿತು. ಅದರಲ್ಲಿ ಮೂರು ಕಥೆಗಳನ್ನಾಯ್ದುಕೊಂಡು ಪ್ರಕಟಣೆಗಾಗಿ ಸಿದ್ಧಪಡಿಸಿದರು. ಮುಂದೆ ತುಂಬ ಶ್ರಮವಹಿಸಿ ಬೇರೆ ಬೇರೆ ಭಾಗಗಳಲ್ಲಿ ವಡ್ಡಾರಾಧನೆಗೆ ಸಂಬಂಧಿಸಿದ ಹಸ್ತಪ್ರತಿಗಳನ್ನು ಶೋಧಿಸಿ ೧೯೪೯ರಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಕಟಿಸಿದರು. ಇದರಿಂದಾಗಿ ವಡ್ಡಾರಾಧನೆಯ ಶೋಧ ಡಿ.ಎಲ್.ಎನ್. ಅವರಿಗೆ ವಿಶೇಷವಾದ ಕೀರ್ತಿಯನ್ನು ತಂದಿತು. ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ ಚರಿತ್ರೆಗೆ ಈ ಕೃತಿ ಒಂದು ಹೊಸ ಸೇರ್ಪಡೆಯಾಯಿತು.

ಡಿ.ಎಲ್.ಎನ್. ಅವರು ಅಧ್ಯಾಪಕರಾಗುವ ಹೊತ್ತಿಗೆ ಕನ್ನಡದ ಅನೇಕ ಪ್ರಾಚೀನ ಕೃತಿಗಳು ಪರಿಷ್ಕಾರಗೊಂಡು ಪ್ರಕಟಗೊಂಡಿದ್ದವು. ಆದರೂ ಗ್ರಂಥಸಂಪಾದನೆ ಒಂದು ಅಧ್ಯಯನ ಶಿಸ್ತಾಗಿ, ಶಾಸ್ತ್ರವಾಗಿ ರೂಪುಗೊಂಡಿರಲಿಲ್ಲ. ಸ್ನಾತಕೋತ್ತರ ತರಗತಿಗೆ ಗ್ರಂಥಸಂಪಾದನೆ ವಿಷಯವನ್ನು ಪಠ್ಯವನ್ನಿಟ್ಟಾಗ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಗ್ರಂಥಗಳಿರಲಿಲ್ಲ. ಇದನ್ನು ಗಮನಿಸಿದ ಡಿ.ಎಲ್.ಎನ್. ತಮ್ಮ ಸಂಪಾದನೆಯ ಅನುಭವವನ್ನು ಹಿನ್ನೆಲೆಯಾಗಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಬೋಧಿಸಿದ ಕಾರಣವಾಗಿ ಕನ್ನಡ ಗ್ರಂಥಸಂಪಾದನೆ ಎಂಬ ವಿಶಿಷ್ಟವಾದ ಗ್ರಂಥವನ್ನು ರಚಿಸಿದರು. ಇಂದಿಗೂ ಈ ವಿಷಯವನ್ನು ಬೋಧಿಸುವವರಿಗೆ ಗ್ರಂಥ ಪರಿಷ್ಕರಣೆಗೆ ಇದು ಒಂದು ಪ್ರಮುಖ ಆಕರಗ್ರಂಥವಾಗಿ ಬಳಕೆಯಾಗುತ್ತಿದೆ. ಕನ್ನಡದ ಮಹಾಕವಿಯಾದ ಪಂಪನ ವಿಕ್ರಮಾರ್ಜುನ ವಿಜಯದ ಅಭ್ಯಾಸಕ್ಕೆ ಸುಲಭವಾಗಬೇಕೆಂಬ ಉದ್ದೇಶದಿಂದ ಪಂಪಭಾರತ ದೀಪಿಕೆ ಎಂಬ ಕೃತಿಯನ್ನು ಡಿ.ಎಲ್.ಎನ್. ಅವರು ತಮ್ಮ ಕೊನೆಯ ದಿನಗಳಲ್ಲಿ ಅನಾರೋಗ್ಯವನ್ನು ಲೆಕ್ಕಿಸದೇ ರಚಿಸಿರುವುದು ಗಮನಿಸಬೇಕಾದ ಸಂಗತಿ. ಅಲ್ಲದೇ ಪಂಪರಾಮಾಯಣ, ಸಿದ್ಧರಾಮ ಚರಿತೆ, ಸುಕುಮಾರ ಚರಿತಂ ಗ್ರಂಥಗಳಿಗೆ ಬರೆದ ಸುದೀರ್ಘ ಪ್ರಸ್ತಾವನೆಗಳು ಅವರ ವಿದ್ವತ್ತಿಗೆ ಹಿಡಿದ ಕನ್ನಡಿಯಂತಿವೆ.

ನಿಘಂಟು, ಛಂದಸ್ಸು ಮತ್ತು ವ್ಯಾಕರಣ ಕ್ಷೇತ್ರಗಳಲ್ಲಿಯೂ ಡಿ.ಎಲ್.ಎನ್. ಅವರು ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. ಪ್ರಾಚೀನ ಕೃತಿಗಳಲ್ಲಿರುವ ಕೆಲವು ವಿಶಿಷ್ಟ ಶಬ್ದಗಳ ನಿಷ್ಪತ್ತಿಯನ್ನು ಹೇಳುವಲ್ಲಿ ಶ್ರೀಯುತರ ಅಪಾರ ವ್ಯಾಸಂಗ ನಮಗೆ ಮನದಟ್ಟಾಗುತ್ತದೆ. ಪೊರಸು, ಕಾಳಸೆ, ಒಲ್ಲಣಿಗೆ, ಬಾಚಣಿಗೆ, ಮೆರವಣಿಗೆ, ಬೀಸಣಿಗೆ, ಅಡ್ಡವಣಿಗೆ, ಅಗ್ರಹಾರ, ಡಂಗಹಾಕು, ರಪಣ, ಮದನಾವತಾರ, ಕಾರೋಹಣದ ಪಳಿಯ, ಬರಡಗೆ, ಪಳಂಗಾಸು ಮೇಕು, ಗುಯ್ಯಲ್ ಇತ್ಯಾದಿ ಶಬ್ದಗಳ ನಿಷ್ಪತ್ರಿಯನ್ನು ಶೋಧಿಸಿ ಅವುಗಳ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಿದ್ದಾರೆ. ಹೀಗೆಯೇ ಕನ್ನಡದಲ್ಲಿ ಶಬ್ದ ರಚನೆ, ನಿಘಂಟು ರಚನೆ, ಕನ್ನಡಕ್ಕೆ ಹೊಸ ನಿಘಂಟು, ತೋಮರರಗಳೆ, ಮಾನಸೋಲ್ಲಾಸದಲ್ಲಿ ಛಂದಸ್ಸು ಮುಂತಾದ ಸಂಪ್ರಬಂಧಗಳು ಡಿ.ಎಲ್.ಎನ್. ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಅವರು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿದ್ದ ಕನ್ನಡ- ಕನ್ನಡ ನಿಘಂಟು ರಚನಾ ಯೋಜನೆಯಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ್ದರೆ, ಆ ಯೋಜನೆಯ ಯಶಸ್ಸಿನಲ್ಲಿ ಅವರ ಪಾಲು ಸಾಕಷ್ಟಿದೆಯೆಂಬುದನ್ನು ನಾವು ಮರೆಯುವಂತಿಲ್ಲ.

ಹಳಗನ್ನಡ ಸಾಹಿತ್ಯವಿರಲಿ, ಹೊಸಗನ್ನಡ ಸಾಹಿತ್ಯವಿರಲಿ, ಡಿ.ಎಲ್.ಎನ್. ಅವರ ವಿಮರ್ಶಾ ದೃಷ್ಟಿಕೋನ ವಸ್ತುನಿಷ್ಠವಾದುದು. ಇದಕ್ಕೆ ಅವರ ಹಲವಾರು ಲೇಖನಗಳು, ಮುನ್ನುಡಿಗಳು, ಪುಸ್ತಕ ವಿಮರ್ಶೆಗಳು ಪುರಾವೆಯನ್ನು ಒದಗಿಸುತ್ತವೆ. ಗುಣವರ್ಮನ ಪುಷ್ಪದಂತ ಪುರಾಣ, ಕರ್ಣಪಾರ್ಯನ ನೇಮಿನಾಥ ಪುರಾಣ, ಕುಮುದೇಂದುವಿನ ರಾಮಾಯಣ, ಯಳಂದೂರ ಹರೀಶ್ವರನ ಪ್ರಭುದೇವರ ಪುರಾಣ ಇತ್ಯಾದಿ ಕೃತಿಗಳ ಕವಿ ಕಾಲ, ಸ್ಥಳ, ಭಾಷೆ, ಛಂದಸ್ಸು, ಶಬ್ದ ನಿಷ್ಪತ್ತಿಗಳ ಬಗ್ಗೆ ಮಾಡಿರುವ ವಿಮರ್ಶೆಯಲ್ಲಿ ಸಾಕಷ್ಟು ಒಳನೋಟಗಳಿವೆ. ವಿಮರ್ಶೆಯೂ ಒಂದು ರೀತಿಯಲ್ಲಿ ಸಂಶೋಧನೆ ಎಂಬುದು ಅವರ ಸ್ಪಷ್ಟವಾದ ನಿಲುವು. ಆಧುನಿಕ ಸಾಹಿತ್ಯದ ಬಗೆಗೂ ಡಿ.ಎಲ್.ಎನ್. ಒಲವು ಹೊಂದಿದ್ದರು. ಬಿ.ಎಂ.ಶ್ರೀ, ಬೇಂದ್ರೆ, ಪುತಿನ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಶಿವರಾಮ ಕಾರಂತ, ಗೆರೂರು ಮುಂತಾದ ಸಾಹಿತಿಗಳ ಕವನ, ಕಥೆ, ಕಾದಂಬರಿ, ನಾಟಕಗಳ ಕುರಿತು ಬರೆದಿರುವ ಅವರ ವಸ್ತುನಿಷ್ಠ ವಿಮರ್ಶೆ ಓದುಗರ ಗಮನವನ್ನು ಸೆಳೆದಿವೆ. ಕಾರಂತರ ಮರಳಿ ಮಣ್ಣಿಗೆ ಕಾದಂಬರಿ ಡಿ.ಎಲ್.ಎನ್. ಅವರ ದೃಷ್ಟಿಯಲ್ಲಿ ಕನ್ನಡದ ಎರಡನೆಯ ಮಹಾಕಾದಂಬರಿ. ಇಲ್ಲಿನ ವಸ್ತುವೈವಿಧ್ಯ, ಪಾತ್ರಗಳು, ವರ್ಣನೆಗಳನ್ನು ತುಲನಾತ್ಮಕವಾಗಿ ವಿಮರ್ಶೆಗೊಳಪಡಿಸಿ ಟಾಲ್‌ಸ್ಟಾಯ್, ಹಾರ್ಡಿ, ಗಾಲ್ಸ್‌ವರ್ದಿ, ರೋರ್ಮೆರೋಲ ಮುಂತಾದ ಪಾಶ್ಚಾತ್ಯ ಲೇಖಕರ ಮಹಾಕಾದಂಬರಿಗಳಿಗೆ ಸಮನಾಗಿದೆ ಎಂದು ಸಕಾರಾತ್ಮಕವಾಗಿ ಅಭಿಪ್ರಾಯಪಟ್ಟಿದ್ದಾರೆ. ರಾಮಾಯಣದರ್ಶನಂ ಮಹಾಕಾವ್ಯವನ್ನು ಓದಿ “ಆ ಮನುಷ್ಯ ಗಟ್ಟಿಗನಯ್ಯ, ತನ್ನ ಮಹತ್ತಿಗೆ ಅನುಗುಣವಾದ ವಿಷಯವನ್ನೇ ಎತ್ತಿಕೊಂಡು ರಾಮಾಯಣವನ್ನೇ ಬರೆದ. ಶ್ರೀರಾಮಚರಿತೆಯಿಂದ ಅವನ ಕಾವ್ಯಕ್ಕೆ ಸಹ ಒಂದು ಅಪೂರ್ವಶೋಭೆ ಬಂದಿತು. ಅವನ ಕಾವ್ಯದ ಕಲಶವೇ ಅದಾಯಿತು” ಎಂದು ಕುವೆಂಪು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿಯವರ ಶಿಲಾಲತೆ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಮಾತುಗಳಲ್ಲಿ ನವೋದಯ ಕಾವ್ಯದ ಬಗೆಗಿದ್ದ ಅವರ ಒಲವನ್ನು ಗುರುತಿಸಬಹುದು.

ಹೊಸ ಆಕರಗಳು ಲಭ್ಯವಾದಂತೆ ಅಭಿಪ್ರಾಯಗಳು ಬದಲಾಗುತ್ತ ಹೋಗುತ್ತವೆ. ಇದು ಸಂಶೋಧನೆಯಲ್ಲಿ ಸಹಜವಾದ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಸಂಶೋಧಕ ಮುಖ್ಯವಾಗುವುದಿಲ್ಲ, ಬದಲಾಗಿ ಆತನ ಸಂಶೋಧನೆಯ ಫಲಿತಗಳು ಬಹುಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿ ಅವರು ಡಿ.ಎಲ್.ಎನ್. ಅವರು ಸಂಪಾದಿಸಿದ ಶಬ್ದಮಣಿದರ್ಪಣದ ದೋಷಗಳನ್ನು ವಿಮರ್ಶೆ ಗೊಳಪಡಿಸಿ ಎರಡು ಲೇಖನಗಳನ್ನು ಪ್ರಕಟಿಸಿದರು. ಈ ಲೇಖನಗಳ ನೆರವಿನಿಂದ ಡಿ.ಎಲ್.ಎನ್. ಅವರು ಮುಂದಿನ ಆವೃತ್ತಿಯಲ್ಲಿ ದೋಷಗಳನ್ನು ಸರಿಪಡಿಸಿ ಪ್ರಸ್ತಾವನೆಯಲ್ಲಿ “ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಮಲ್ಲಿನಾಥ ಕಲಬುರ್ಗಿ ಎಂ.ಎ. ಅವರು ದರ್ಪಣಾವಲೋಕನ ಎಂಬ ಹೆಸರಿನಲ್ಲಿ ಎರಡು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಸೂತ್ರವೃತ್ತಿ ಟೀಕೆಗಳಲ್ಲಿ ಹಂಚಿಹೋಗಿರುವ ಸ್ಕಾಲಿತ್ಯಗಳನ್ನೆಲ್ಲ ಅವರು ತುಂಬ ಶ್ರಮವಹಿಸಿ ಕಂಡುಹಿಡಿದಿದ್ದಾರೆ. ಇಷ್ಟೇ ಅಲ್ಲದೇ ಮುಂದಿನ ಪ್ರಕರಣಗಳಲ್ಲಿ ಅಡಗಿರುವ ತಪ್ಪುಗಳನ್ನು ಹುಸಿತಪ್ಪುಗಳನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಿ, ಅವುಗಳನ್ನೆಲ್ಲ ಪಟ್ಟಿಮಾಡಿ ನನಗೆ ಕಳಿಸಿಕೊಡುವ ಉಪಕಾರ ಮಾಡಿದ್ದಾರೆ. ಇವರ ಈ ಲೇಖನಗಳೇ ಕಾರಣವಾಗಿ ಶಬ್ದಮಣಿದರ್ಪಣದ ಈ ಮುದ್ರಣ ಅದು ಹಿಂದಣ ಮುದ್ರಣಕ್ಕಿಂತ ಹೆಚ್ಚು ಸಮರ್ಪಕವಾಗಿದೆಯೆಂದು ಭಾವಿಸುತ್ತೇನೆ” ಎಂಬ ಮಾತುಗಳು ಅವರ ಸಂಶೋಧನ ನಿಷ್ಠೆಗೆ, ಪ್ರಾಮಾಣಿಕತೆಗೆ ನಿದರ್ಶನವಾಗಿದೆ.

* * *

ಡಿ.ಎಲ್. ನರಸಿಂಹಾಚಾರ್ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯವನ್ನು ತಿಳಿದುಕೊಳ್ಳುವಲ್ಲಿ ಜ್ಞಾನೋಪಾಸಕ (೧೯೬೦), ಉಪಾಯನ (೧೯೬೭), ಕನ್ನಡ ನುಡಿ ವಿಶೇಷ ಸಂಚಿಕೆ (೧೯೭೧), ಪ್ರೊ. ಡಿ.ಎಲ್. ನರಸಿಂಹಾಚಾರ್ (ಬಿ.ವಿ.ವೈಕುಂಠರಾಜು, ೧೯೭೧), ಡಿ.ಎಲ್. ನರಸಿಂಹಾಚಾರ್ (ವಿದ್ಯಾಶಂಕರ, ೧೯೯೨) – ಹೀಗೆ ನಾಲ್ಕು ದಶಕಗಳಿಂದ ಕೆಲವು ಗ್ರಂಥಗಳು, ವಿಶೇಷ ಸಂಚಿಕೆಗಳು ಪ್ರಕಟಗೊಳ್ಳುತ್ತ ಬಂದಿವೆ. ಈಗ ಜನ್ಮಶತಮಾನೋತ್ಸವದ ನೆಪವಾಗಿಟ್ಟುಕೊಂಡು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಡಿ.ಎಲ್.ನರಸಿಂಹಾಚಾರ್ ಶತಮಾನ ಸ್ಮರಣೆ ಎಂಬ ವಿಶಿಷ್ಟ ಸಂಪುಟವನ್ನು ಲೋಕಾರ್ಪಣೆ ಮಾಡುತ್ತಿದೆ.

ಈ ಸಂಪುಟದಲ್ಲಿ ಪ್ರಮುಖವಾಗಿ ಎರಡು ಭಾಗಗಳಿವೆ. ಒಂದು, ಡಿ.ಎಲ್.ಎನ್. ಅವರ ವ್ಯಕ್ತಿತ್ವ, ಇದರಲ್ಲಿ ಡಿ.ಎಲ್.ಎನ್. ಅವರ ಸಹೋದ್ಯೋಗಿಗಳು, ಸಮಕಾಲೀನ ಸ್ನೇಹಿತರು, ವಿದ್ಯಾರ್ಥಿಗಳು ಹಾಗೂ ಶಿಷ್ಯರು ಡಿ.ಎಲ್.ಎನ್. ಅವರ ವೈವಿಧ್ಯಮಯ ವ್ಯಕ್ತಿತ್ವನ್ನು ಕುರಿತು ಮಾತನಾಡಿದ್ದಾರೆ. ಸಹೃದಯ ಸಂಶೋಧಕ ಮಿತ್ರ, ದೊಡ್ಡ ಮನಸ್ಸಿನ ಪ್ರಿಯ ಮಿತ್ರ, ಮಿತ್ರ ಮಹಾಶಯ, ಮೌಲ್ಯಾರಾಧಕ, ವಿದ್ಯಾವಿನಯ ಸಂಪನ್ನತೆಯ ಪ್ರತೀಕ, ಪಾಂಡಿತ್ಯ ಪ್ರತಿನಿಧಿ, ಪಾಂಡಿತ್ಯದ ಪಟ್ಟಗಜ, ಧೀಮಂತ ವ್ಯಕ್ತಿತ್ವ, ವಿದ್ವತ್ತಿನ ನಿಧಿ, ಕನ್ನಡದ ಪಾಣಿನಿ, ನಡೆದಾಡುವ ವಿಶ್ವಕೋಶ, ದೇವಮಾನವ, ಪವಾಡಪುರುಷ ಪ್ರಾಧ್ಯಾಪಕ, ಮರೆಯಲಾಗದ ಶ್ರೀಗುರು ಹೀಗೆ ನಾನಾ ರೀತಿಯಾಗಿ ಗುರುತಿಸಿದ್ದಾರೆ. ತೀ.ನಂ.ಶ್ರೀಕಂಠಯ್ಯನವರಂತೂ ಡಿ.ಎಲ್.ಎನ್. ಎಂದರೆ ಪಾಂಡಿತ್ಯ, ಪಾಂಡಿತ್ಯ ಎಂದರೆ ಡಿ.ಎಲ್.ಎನ್. ಎಂದು ಕರೆದಿರುವುದು ಔಚಿತ್ಯಪೂರ್ಣವಾಗಿದೆ. ಆ ಕಾಲಕ್ಕೆ ಪಾಂಡಿತ್ಯದಲ್ಲಿ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವೆಂಬುದು ಗಮನಿಸಬಹುದಾದ ಸಂಗತಿ.

ಡಿ.ಎಲ್.ಎನ್. ಸಾಹಿತ್ಯ ಕುರಿತು ಎರಡನೆಯ ಭಾಗದಲ್ಲಿ ಚರ್ಚಿಸಲಾಗಿದೆ. ಡಿ.ಎಲ್.ಎನ್. ಅವರು ಸಂಶೋಧನೆ, ಗ್ರಂಥಸಂಪಾದನೆ, ವ್ಯಾಕರಣ, ಛಂದಸ್ಸು, ನಿಘಂಟು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಇಲ್ಲಿನ ಸಂಪ್ರಬಂಧಗಳಲ್ಲಿ ವಿಶ್ಲೇಷಿಸಲಾಗಿದೆ. ಕನ್ನಡ ಗ್ರಂಥಸಂಪಾದನೆ, ವಡ್ಡಾರಾಧನೆ, ಸುಕುಮಾರ ಚರಿತಂ, ಪಂಪರಾಮಾಯಣ ಸಂಗ್ರಹ, ಸಿದ್ಧರಾಮ ಚರಿತ ಸಂಗ್ರಹ, ಪಂಪಭಾರತ ದೀಪಿಕೆ, ಗೋವಿನ ಹಾಡು ಮುಂತಾದ ಕೃತಿಗಳ ರೂಪಸ್ವರೂಪ ಹಾಗೂ ವೈಶಿಷ್ಟಗಳನ್ನು ಇಲ್ಲಿ ಗುರುತಿಸಲಾಗಿದೆ. ಅನುಬಂಧದಲ್ಲಿ ಡಿ.ಎಲ್.ಎನ್. ಹಸ್ತಾಕ್ಷರ, ಬದುಕಿನ ಮಹತ್ವದ ಹೆಜ್ಜೆಗಳು, ಕೃತಿ ಹಾಗೂ ಲೇಖನಗಳ ಸೂಚಿ, ಕೆಲವು ಆಯ್ದ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಹೀಗೆ ಈ ಸಂಪುಟ ಡಿ.ಎಲ್.ಎನ್. ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯದ ವಿವಿಧ ಮುಖಗಳನ್ನು ತಿಳಿಸಿಕೊಡುವಲ್ಲಿ ಸಹಾಯಕಾರಿಯಾಗುತ್ತದೆ.

* * *

ಹಸ್ತಪ್ರತಿಶಾಸ್ತ್ರ ವಿಭಾಗಕ್ಕೆ ಈಗ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮವನ್ನು ಪುಸ್ತಕ ಪ್ರಕಟಣೆ, ಭಾರತೀಯ ಗ್ರಂಥಸಂಪಾದನೆ ನಡೆದ ಬಂದ ದಾರಿ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ, ದಶಮಾನೋತ್ಸವ ಸ್ಮರಣ ಸಂಪುಟ, ಹಸ್ತಪ್ರತಿ ತಜ್ಞರ ಭಾವಚಿತ್ರ ಅನಾವರಣ ಇತ್ಯಾದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಔಚಿತ್ಯಪೂರ್ಣವಾಗಿ ಆಚರಿಸಬೇಕೆಂಬುದು ನಮ್ಮ ಆಶಯ. ಈ ಆಶಯಕ್ಕೆ ಮತ್ತೊಂದು ಸೇರ್ಪಡೆ, ಡಿ.ಎಲ್.ಎನ್. ಶತಮಾನ ಸ್ಮರಣೆ ವಿಚಾರ ಸಂಕಿರಣ ಮತ್ತು ಪುಸ್ತಕ ಪ್ರಕಟಣೆ ಯೋಜನೆ. ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕೆನ್ನುವ ನನ್ನ ಆಶಯವನ್ನು ವಿಭಾಗದ ಸಭೆಯ ಮುಂದೆ ಮಂಡಿಸಿದಾಗ ಸದಸ್ಯರೆಲ್ಲರೂ ಅತ್ಯಂತ ಸಂತೋಷದಿಂದ ಅನುಮೋದನೆ ನೀಡಿದರು. ಈ ಅನುಮೋದನೆಯನ್ನು ಮಾನ್ಯ ಕುಲಪತಿಯವರು ಹಾಗೂ ಮಾನ್ಯ ಕುಲಸಚಿವರ ಗಮನಕ್ಕೆ ತಂದೆನು. ಅವರೂ ಸಹಿತ “ಡಿ.ಎಲ್.ಎನ್. ಅವರ ಜನ್ಮಶತಮಾನೋತ್ಸವನ್ನು ಔಚಿತ್ರಯಪೂರ್ಣವಾಗಿ ಆಚರಿಸಬೇಕಾದುದು ವಿಶ್ವವಿದ್ಯಾಲಯದ ಕರ್ತವ್ಯವೂ ಕೂಡಾ. ಈ ಹಿನ್ನೆಲೆಯಲ್ಲಿ ನೀವು ಮುಂದುವರೆಯಿತು” ಎಂದು ಹೇಳಿ ಸಂಪೂರ್ಣ ಸಲಹೆ ಸಹಕಾರ ನೀಡಿದ್ದಾರೆ. ಮಾನ್ಯ ಕುಲಪತಿಗಳಾದ ಡಾ. ಬಿ.ಎ.ವಿವೇಕ ರೈ ಅವರು ವಿಚಾರ ಸಂಕಿರಣ ಹಾಗೂ ಪುಸ್ತಕ ಪ್ರಕಟಣೆಯ ಸಂದರ್ಭದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರು ಆಡಳಿತಾತ್ಮಕವಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಭಾಷಾನಿಕಾಯದ ಡೀನ್‌ರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಈ ಸಂಪುಟವನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ಸಂಪುಟದ ಪ್ರಕಟಣೆಯಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ ವಹಿಸಿದ್ದಾರೆ. ವಿಭಾಗದ ಎಲ್ಲ ಸದಸ್ಯರು ಸರ್ವರೀತಿಯಲ್ಲಿ ಸಹಕಾರ ನೀಡಿದ್ದಾರೆ. ಇವರೆಲ್ಲರಿಗೂ ನನ್ನ ಅನಂತ ಕೃತಜ್ಞತೆಗಳು.

ಕನ್ನಡ ನುಡಿಯಲ್ಲಿ ಪ್ರಕಟವಾದ ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಚಂದ್ರಶೇಖರ ಪಾಟೀಲ. ಪ್ರಕಟಿತ ಲೇಖನಗಳನ್ನು ಈ ಸಂಪುಟಕ್ಕೆ ಬಳಸಿಕೊಳ್ಳಲು ಅನುಮತಿ ನೀಡಿದವರು, ಎಲ್ಲ ಹಿರಿಯ ವಿದ್ವಾಂಸರು. ನಮ್ಮ ಕೋರಿಕೆಯನ್ನು ಸ್ವೀಕರಿಸಿ ಸಕಾಲಕ್ಕೆ ಲೇಖನವನ್ನು ಸಿದ್ಧಪಡಿಸಿಕೊಟ್ಟವರು, ಎಲ್ಲ ಲೇಖಕರು. ಡಿ.ಎಲ್.ಎನ್ ಅವರ ಕುಟುಂಬ ಪರಿವಾರದವರನ್ನು ಪರಿಚಯಿಸಿದವರು, ಹಸ್ತಪ್ರತಿ ತಜ್ಞರಾದ ಶ್ರೀ ಜಿ.ಜಿ.ಮಂಜುನಾಥನ್. ನಾನು ಕೇಳಿದ ಮಾಹಿತಿಯನ್ನು ಸಕಾಲಕ್ಕೆ ಪೂರೈಸಿದ್ದಲ್ಲದೇ ಸುಂದರವಾದ ಛಾಯಾಚಿತ್ರಗಳನ್ನು ಒದಗಿಸಿದವರು, ಡಿ.ಎಲ್.ಎನ್. ಅವರ ಅಳಿಯ ಶ್ರೀ ಎಂ.ಎನ್. ಸೀತಾರಾಮ ಅಯ್ಯಂಗಾರ್. ಪ್ರಕಟಣೆಯ ಎಲ್ಲ ಹಂತಗಳಲ್ಲಿ ನನಗಿಂತಲೂ ಹೆಚ್ಚು ಮುತುವರ್ಜಿ ವಹಿಸಿದವರು, ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ. ಸುಂದರವಾದ ಮುಖಪುಟ ಸಿದ್ಧಪಡಿಸಿದವರು ಕಲಾವಿದ ಕೆ.ಕೆ.ಮಕಾಳಿ. ತಾಳ್ಮೆಯಿಂದ ಅಚ್ಚುಕಟ್ಟಾಗಿ ಡಿ.ಟಿ.ಪಿ. ಕಾರ್ಯ ಪೂರೈಸಿದವರು ಶ್ರೀ ವೈ.ಎಂ. ಶರಣಬಸವ ಮತ್ತು ಅವರ ಸ್ನೇಹಿತರು, ಇವರೆಲ್ಲರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ.

ವಿವಿಧ ವಿದ್ವಾಂಸರು ಡಿ.ಎಲ್.ಎನ್. ಅವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರಿಂದ ಸಹಜವಾಗಿ ಕೆಲವು ಸಂದರ್ಭಗಳಲ್ಲಿ ವಿಷಯ ಪುನರಾವರ್ತನೆಯಾಗಿದೆ. ಇಲ್ಲಿನ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಜವಾಬ್ದಾರರು. ಒಟ್ಟಿನಲ್ಲಿ ಡಿ.ಎಲ್.ನರಸಿಂಹಾಚಾರ್ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯವನ್ನು ಅರಿತುಕೊಳ್ಳುವವರಿಗೆ, ಅಧ್ಯಯನ ಮಾಡುವವರಿಗೆ ಈ ಸಂಪುಟ ಉಪಯುಕ್ತವಾಗುತ್ತದೆಂದು ಭಾವಿಸಿದ್ದೇನೆ.

ಎಫ್.ಟಿ. ಹಳ್ಳಿಕೇರಿ