ಜ್ಞಾನಸಾಧನೆಯ ಪ್ರಮುಖ ಶಕ್ತಿಯೆಂದರೆ ಪ್ರತಿಭಾನ. ಪ್ರತಿಭೆ ಬಹುಪ್ರಕಾರವಾಗಿ ಪ್ರಕಟವಾಗಬಹುದು. ಕಲ್ಪನಾಪ್ರಧಾನವಾದ ‘ಕವಿ ಪ್ರತಿಭೆ,’ ತತ್ತ್ವನಿಷ್ಠವಾದ ‘ದರ್ಶನಾ ಪ್ರತಿಭೆ’, ಬುದ್ಧಿ ಪ್ರಧಾನವಾದ ‘ಸಂಶೋಧನಾ ಪ್ರತಿಭೆ’, ಸಂಗೀತ ಪ್ರಧಾನವಾದ ‘ನಾದ ಪ್ರತಿಭೆ’, ಇವು ಮಖ್ಯವಾಗಿ ವೈಶಿಷ್ಟ್ಯಪೂರ್ಣವಾದುವು. ಇವುಗಳನ್ನು ವಿಭಜನಾ ದೃಷ್ಟಿಯಿಂದ ಬೇರೆ ಬೇರೆಯಾಗಿ ವಿಂಗಡಿಸಿದರೂ ಆಂತರಿಕವಾದ ಸಂಬಂಧ ಇವುಗಳಿಗೆ ಇದ್ದೇ ಇರುತ್ತದೆ. ಈ ಎಲ್ಲ ಪ್ರತಿಭೆಗಳನ್ನು ಸಮಪ್ರಮಾಣದಲ್ಲಿ ಪಡೆದವರು ಲೋಕದಲ್ಲಿ ವಿರಳ. ‘ಕವಿ ಪ್ರತಿಭೆ’, ವಿಮಾನದಂತೆ ಬಹುಲೋಕ ವಿಹಾರಿ. ಅದರ ಗುರಿ ರಸಾನಂದ. ‘ದರ್ಶನಾ ಪ್ರತಿಭೆ’, ಬುದ್ಧಿಯ ಹೆಗಲೇರಿ ಸೃಷ್ಟಿಯ ನಿಗೂಢ ರಹಸ್ಯವನ್ನು ಅರಿಯುವ ಅನ್ವೇಷಣೆಯಲ್ಲಿ ತೊಡಗುತ್ತದೆ. ‘ಸಂಶೋಧನಾ ಪ್ರತಿಭೆ’, ಶಾಸ್ತ್ರ ಪಾಂಡಿತ್ಯದ ನೆರವಿನಿಂದ ಸತ್ಯವನ್ನು ಅರಸುತ್ತದೆ. ‘ನಾದ ಪ್ರತಿಭೆ’, ಗೀತಶೀಲವಾದ ಸೌಂದರ್ಯಮಯ ಶಾಂತಿಧಾಮವನ್ನು ಅರಸುತ್ತದೆ.

ಪ್ರೊ. ಡಿ.ಎಲ್. ನರಸಿಂಹಾಚಾರ್ಯರ ಸಂಶೋಧನಾಪ್ರತಿಭೆ ಪ್ರಧಾನವಾಗಿ ನಾಲ್ಕು ಮುಖಗಳಲ್ಲಿ ಪ್ರವಹಿಸಿದೆ, ೧. ಗ್ರಂಥ ಸಂಸ್ಕೃರಣ ಮತ್ತು ಸಂಪಾದನೆ ೨. ಕನ್ನಡ ಸಾಹಿತ್ಯ ಚರಿತ್ರೆಯ ನಿಷ್ಕೃಷ್ಟ ಪರಿಜ್ಞಾನ ೩. ಭಾಷಾಶಾಸ್ತ್ರ ಪಾಂಡಿತ್ಯ ೪. ವಿಮರ್ಶೆ.

ಗ್ರಂಥ ಸಂಸ್ಕೃರಣ ಮತ್ತು ಸಂಪಾದನಾ ಕಾರ್ಯಕ್ಕೆ ತುಂಬ ತಾಳ್ಮೆ ಬೇಕು. ಓಲೆಗರಿಗಳಲ್ಲಿರುವ ಹಳಗನ್ನಡ ಕಾವ್ಯಗಳನ್ನು ಓದುವ ಅಭ್ಯಾಸ ಬೇಕು. ಈ ಪ್ರಗತಿಗಳಲ್ಲಿ ಮೂಲಪ್ರತಿ, ಪ್ರಥಮ ಪ್ರತಿ, ಪ್ರತಿಲಿಪಿಗಳೆಂದು ಬೇರೆ ಬೇರೆಯ ಪ್ರತಿಗಳನ್ನು ನಿರ್ಧರಿಸುವ ಪಾಂಡಿತ್ಯವಿರಬೇಕು. ಅನೇಕ ವೇಳೆ ಮೂಲ ಪ್ರತಿಯೇ ಸಿಕ್ಕುವುದಿಲ್ಲ. ಪ್ರಥಮ ಪ್ರತಿಯೊ, ಪ್ರತಿಲಿಪಿಯೊ ದೊರಕಿದಾಗ ಅವುಗಳ ಸಹಾಯದಿಂದ ಪಾಠಗಳನ್ನು ನಿಷ್ಕರ್ಷಿಸಬೇಕಾಗುತ್ತದೆ. ಈ ಪ್ರತಿಗಳಲ್ಲಿ ಲಿಪಿಕಾರನ ಮಾನಸಿಕ ಅಥವಾ ದೃಷ್ಟಿ ದೋಷಗಳಿಂದ ಅಕ್ಷರಗಳು ವ್ಯಸ್ತವಾಗಬಹುದು. ಸಿಕ್ಕುವ ಎಲ್ಲ ಪ್ರಗತಿಗಳನ್ನೂ ನೋಡಿ ಉತ್ತಮ ಪಾಠವನ್ನು ನಿರ್ಧರಿಸಬೇಕಾಗುತ್ತದೆ. ಉಳಿದ ಪಾಠಾಂತರಗಳನ್ನು ಅಡಿಟಿಪ್ಪಣಿಗಳಲ್ಲಿ ಕೊಡಬೇಕಾಗುತ್ತದೆ.

ಇಷ್ಟು ಕೆಲಸವನ್ನು ಮಾಡಿದಮೇಲೆ ಕವಿಯ ಕಾಲ, ದೇಶ, ಜೀವನ, ಇತರ ಕೃತಿಗಳು, ವಂಶಾವಳಿ ಇತ್ಯಾದಿ ವಿಚಾರಗಳನ್ನೂ ಹಸ್ತಪ್ರತಿಗಳ ಕಾಲ ವಿಚಾರವನ್ನೂ, ಕಾವ್ಯದ ವಿಮರ್ಶೆಯನ್ನೂ ಮುನ್ನುಡಿಯಲ್ಲಿ ನಿರೂಪಿಸಬೇಕು. ಇವುಗಳ ಜೊತೆಗೆ ಕಾವ್ಯದಲ್ಲಿ ಪ್ರಕ್ಷಿಪ್ತ ಭಾಗಗಳಿದ್ದರೆ ಅವುಗಳನ್ನು ಅನುಬಂಧದಲ್ಲಿ ಕೊಟ್ಟು ಪ್ರಕ್ಷಿಪ್ತವೆಂಬುದಕ್ಕೆ ಕಾರಣಗಳನ್ನು ಕೊಡಬೇಕಾಗುತ್ತದೆ. ಇಷ್ಟಕ್ಕೆ ನಿಲ್ಲುವುದಿಲ್ಲ. ಕೆಲಸ. ಪದಕೋಶವನ್ನೂ ಅದಕ್ಕೆ ಅರ್ಥವನ್ನೂ ಕೊಡಬೇಕು. ಪ್ರೊ. ನರಸಿಂಹಾಚಾರ್ಯರು ಪರಿಷ್ಕರಿಸಿ ಸಂಪಾದಿಸಿದ ‘ವಡ್ಡಾರಾಧನೆ’ ವಿದ್ವತ್ ಪ್ರಪಂಚದಲ್ಲಿ ತುಂಬ ಗೌರವವನ್ನು ಪಡೆದಿದೆ. ಅದಕ್ಕೆ ವಿಸ್ತಾರವಾದ ಮುನ್ನುಡಿಯನ್ನು ಅವರು ಬರೆಯಬೇಕೆಂದಿದ್ದಾರೆ. ಅವರು ಸಮರ್ಪಕವಾಗಿ ಬರೆದರೆ ಮಾತ್ರ ಅಚ್ಚುಮಾಡಿಸಿಯಾರು! ಇಲ್ಲದಿದ್ದರೆ ಹಲವು ವರ್ಷಗಳು ಹಾಗೆಯೇ ದಾಟಿ ಹೋಗುತ್ತವೆ. ಪಂಪ ರಾಮಾಯಣ ಸಂಗ್ರಹಕ್ಕೆ ಅವರು ಬರೆದಿರುವ ಮುನ್ನುಡಿ ಸ್ವತಂತ್ರ ಕೃತಿಯಂತೆ ಅಮೂಲ್ಯವಾಗಿದೆ. ಸಿದ್ಧರಾಮ ಚರಿತ್ರೆಯ ಸಂಗ್ರಹ ಪಠ್ಯಪುಸ್ತಕವಾದಾಗ ಅರ್ಥಕೋಶವನ್ನು ಕೊನೆಗೆ ಕೊಡದೆ ಪ್ರತಿ ಪುಟದಲ್ಲಿಯೂ ಅಡಿ ಟಿಪ್ಪಣಿಗಳಲ್ಲಿ ಕೊಟ್ಟು ವಿದ್ಯಾರ್ಥಿಗಳಿಗೆ ತುಂಬ ಸಹಾಯವಾಗುವಂತೆ ಮಾಡಿದ್ದಾರೆ. ಅವರ ನಿಷ್ಠೆ ಮತ್ತು ಕಾರ್ಯತತ್ಪರತೆ ತರುಣ ಜನಾಂಗಕ್ಕೆ ಮೇಲ್ಪಂಕ್ತಿಯಾಗಿವೆ.

ಪ್ರೊ. ನರಸಿಂಹಾಚಾರ್ಯರ ಪಾಂಡಿತ್ಯ ಕೆಲವು ವರ್ಷಗಳಲ್ಲಿ ಲಭಿಸಿದ್ದಲ್ಲ. ವಿದ್ಯಾರ್ಥಿ ದಶೆಯಿಂದಲೂ ಅವರು ಅದಕ್ಕಾಗಿ ಸಾಧನೆ ಮಾಡಿದ್ದಾರೆ. ಅವರು ಇನ್ನೂ ವಿದ್ಯಾರ್ಥಿಯಾಗಿದ್ದಾಗ ಜೈಮಿನಿ ಭಾರತದ ಸುಮಾರು ೧೭೦೦ ಪದ್ಯಗಳು ಬಾಯಿಗೆ ಬರುತ್ತಿದ್ದುವಂತೆ. ಈ ಒಂದು ಸಂದರ್ಭದಲ್ಲಿ ಅವರ ಅದ್ಭುತ ಜ್ಞಾಪಕಶಕ್ತಿ ನಮಗೆ ತಿಳಿಯುತ್ತದೆ. ಅವರ ವಿದ್ವತ್ತನ್ನು ಕುರಿತು ಮಾತನಾಡುತ್ತ ಒಮ್ಮೆ ಪ್ರೊ. ತೀ.ನಂ. ಶ್ರೀಕಂಠಯ್ಯನವರು “ಪ್ರೊ. ನರಸಿಂಹಾಚಾರ್ಯರು, ತಮ್ಮ ಪಾಂಡಿತ್ಯದ ಔನ್ನತ್ಯವೆಷ್ಟೆಂಬುದನ್ನು ಅವರೇ ತಿಳಿದಿಲ್ಲ” ಎಂದು ಹೇಳಿ ಅವರ ವಿದ್ವತ್ತಿನ ವೈಶಾಲ್ಯವನ್ನು ಕುರಿತು ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ಆಳವಾಗಿ ಅಭ್ಯಾಸ ಮಾಡಿದವರಲ್ಲಿ ಪ್ರೊ. ಡಿ.ಎಲ್. ನರಸಿಂಹಾಚಾರ್ಯ ಅಗ್ರಗಣ್ಯರೆಂದು ಬಹುಜನ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅವರ ಸಾನ್ನಿಧ್ಯದಲ್ಲಿ ಪಾಠ ಕಲಿತು ಸಾಹಿತ್ಯಚರಿತ್ರೆಯ ವಿಚಾರವಾಗಿ ಮಾಡಿಕೊಂಡ ಟಿಪ್ಪಣಿಗಳು ಇಂದಿಗೂ ವಿದ್ಯಾರ್ಥಿ ವೃಂದಕ್ಕೆ ಉಪಯುಕ್ತವಾಗಿದೆ. ಏಕೆಂದರೆ ಅವರಿಂದ ಪಾಠ ಕಲಿತ ವಿದ್ಯಾರ್ಥಿಗಳಲ್ಲಿ ಕೆಲವರು ಇಂದು ಅಧ್ಯಾಪಕರಾಗಿದ್ದಾರೆ. ಗುರುವಾಣಿ ಶಿಷ್ಯರ ಕಂಠದಿಂದ ಮತ್ತೆ ನೂರಾರು ವಿದ್ಯಾರ್ಥಿಗಳಿಗೆ ದೊರಕುವಂತಾಗಿದೆ. ಅನೇಕರು ಆಚಾರ್ಯರಿಂದ “ಕನ್ನಡ ಸಾಹಿತ್ಯ ಚರಿತ್ರೆ” ಬೇಗನೆ ಪ್ರಕಟವಾಗುವ ಸಮಯ ಬರಲೆಂದು ಹಾರೈಸುತ್ತಿದ್ದಾರೆ.

ಆಚಾರ್ಯರು ಸಾಹಿತ್ಯ ಚರಿತ್ರೆಯ ಕೆಲವು ಸಮಸ್ಯೆಗಳನ್ನು ಎಷ್ಟು ಸಮರ್ಪಕವಾಗಿ ಪರಿಹರಿಸುತ್ತಾರೆ ಎಂಬುದಕ್ಕೆ ಅವರ ಒಂದು ಲೇಖನದಿಂದ ಕೆಲವು ಅಂಶಗಳನ್ನು ಇಲ್ಲಿ ಹೀಗೆ ಸಂಗ್ರಹಿಸಬಹುದು:

ಪೊನ್ನನು ತನ್ನ ಶಾಂತಿಪುರಾಣದಲ್ಲಿ ‘ರಾಮಕಥೆ’ ಅಥವಾ ‘ಭುವನೈಕ ರಾಮಾಭ್ಯುದಯ’ ಎಂಬ ಹದಿನಾಲ್ಕು ಅಶ್ವಾಸಗಳ ಒಂದು ಗ್ರಂಥವನ್ನು ಬರೆದುದಾಗಿ ಹೇಳಿದ್ದಾನೆ. ಆದರೆ ಈ ಕಾವ್ಯದ ದೊರಕಿಲ್ಲ. ದೊರಕದ ಅ ಕಾವ್ಯವನ್ನು ಕುರಿತು ಸಾಮಾನ್ಯರು ಏನನ್ನೂ ಊಹಿಸುವುದು ಕಷ್ಟ. ಆದರೆ ಆಚಾರ್ಯರ ಸಂಶೋಧನಾ ಪ್ರತಿಭೆ ಅ ವಿಚಾರವಾಗಿ ಕೆಲವು ಅಮೂಲ್ಯ ಅಂಶಗಳನ್ನು ಸಂಗ್ರಹಿಸಿದೆ.

“ಈ ಸಾರಿಯ ‘ಪ್ರಾಚೀನ ಕರ್ಣಾಟಕ’ದಲ್ಲಿ (ಸಂ. ೧, ಸಂ.೨, ಪು. ೪೦) ರಾಷ್ಟ್ರಕೂಟ ರಾಜನಾದ ಮೂರನೆಯ ಕನ್ನರನ ಶಾಸನವೊಂದು ಪ್ರಕಟವಾಗಿದೆ. ಅದರ ಕಾಲ ಕ್ರಿ.ಶ. ೯೬೫. ಅದರಲ್ಲಿ ‘ಭುವನೈಕ ರಾಮ’ ಎಂಬ ಬಿರುದುಳ್ಳ ಒಬ್ಬ ಶಂಕರಗಂಡರಸನು ಕೃಷ್ಣನ ಸಾಮಂತನೆಂದು ಹೇಳಿದೆ. ….ಸಾಮಂತಾಧಿಪತಿಯಾದ ಶಂಕರಗಂಡನಿಗೆ ಭುವನೈಕ ರಾಮ, ಅಭಿಮಾನ ಧವಳ, ಸತ್ಯಾರ್ಣವ, ಧರ್ಮರತ್ನಾಕರ ಇವೇ ಮೊದಲಾದ ಬಿರುದುಗಳಿದ್ದುವೆಂದು ಸ್ಪಷ್ಟವಾಗಿದೆ…… ಈ ಶಂಕರಗಂಡನನ್ನು ರಾಮನೊಡನೆ ಹೋಲಿಸಿ, ಪಂಪ ರನ್ನರು ತಮ್ಮ ತಮ್ಮ ಪೋಷಕರಾದ ಅರಿಕೇಸರಿ ಇಱಿವಬೆಡಂಗರನ್ನು ಅರ್ಜುನ ಭೀಮರಿಗೆ ಹೋಲಿಸಿ ಕಾವ್ಯರಚನೆ ಮಾಡಿರುವಂತೆಯೇ ತನ್ನ ರಾಮಕಥೆಯನ್ನು ಬರೆದನೆಂದು ತೋರುತ್ತದೆ” ಎಂದು ಒಂದು ಶಾಸನದ ಆಧಾರದಿಂದ ಆಚಾರ್ಯರು ಭುವನೈಕ ರಾಮನೆಂಬ ಬಿರುದುಳ್ಳ ಶಂಕರಗಂಡನನ್ನು ಗುರುತಿಸಿದ್ದಾರೆ. ಆದರೆ ಆ ಶಂಕರಗಂಡನು ಜೈನನೊ ವೈದಿಕ ಮತಾನುಯಾಯಿಯೊ ಎಂಬುದು ಸ್ಪಷ್ಟವಾಗಿಲ್ಲದುದರಿಂದ ಹೀಗೆ ಹೇಳಿದ್ದಾರೆ.

“….ಶಂಕರಗಂಡನಾದರೆ ಕುಪ್ಪಣ (ಕೊಪ್ಪಳ)ದಲ್ಲಿ ಜಯಧೀರ ಜಿನಾಲಯವನ್ನು ಮಾಡಿಸಿದ್ದರಿಂದಲೂ ಚಾವುಂಡರಾಯ, ಅತ್ತಿಮಬ್ಬೆ ಮೊದಲಾದ ಸಜ್ಜೈನರ ಶ್ರೇಣಿಯಲ್ಲಿ ರನ್ನನು ಅವನನ್ನು ಸೇರಿಸಿರುವುದರಿಂದಲೂ, ಅವನು ಜೈನನೆಂದು ತೋರಬಹುದು. ಹೀಗಿದ್ದರೆ ‘ಧರ್ಮರತ್ನಾಕರನಾದ ಅ ಶಂಕರಗಂಡನಿಗೆ ಅಂಕಿತ ಮಾಡಿ ಲೌಕಿಕ ಗ್ರಂಥವನ್ನು ಪೊನ್ನನು ಬರೆಯುವುದು ಸಂಭವವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಜೈನಳಾದ ಅತ್ತಿಮಬ್ಬೆಗೆ ರನ್ನನು ಧಾರ್ಮಿಕ ಕಾವ್ಯವನ್ನು ಅರ್ಪಣೆ ಮಾಡಿದ್ದಾನೆ. ಪೊನ್ನನು ಹೀಗೆ ಮಾಡದೆ ಏತಕ್ಕೆ ಕ್ರಮವಿಪರ್ಯಯವನ್ನು ಮಾಡಿದುದು? ಶಂಕರಗಂಡನೇನಾದರೂ ಅನ್ಯಮತೀಯನಿರಬಹುದೆ? ಅಥವಾ ಆ ಕಾಲದ ಪ್ರಭುಗಳಿಗೆ ಸಹಜವಾದ ದೃಷ್ಟಿಯಿಂದ ಎಲ್ಲ ಧರ್ಮಗಳಿಗೂ ಸಮಾನವಾದ ಪ್ರೋತ್ಸಾಹವನ್ನು ಕೊಡುತ್ತಿದ್ದವನಾಗಿರಬಹುದೆ? ಹೀಗಿದ್ದ ಪಕ್ಷದಲ್ಲಿ ಪೊನ್ನನು ಲೌಕಿಕ ಕಾವ್ಯವನ್ನು ಅರ್ಪಿಸಿರುವುದು ಉಚಿತವೆಂದು ತೋರದಿರಲಾರದು.” ಹೀಗೆ ವಿಚಾರಮಾಡಿ ಲೇಖನವನ್ನು ಮುಕ್ತಾಯ ಮಾಡುತ್ತ “ಶಂಕರಗಂಡನು ಜೈನನಾಗಿದ್ದರೆ ಪೊನ್ನನು ಹೀಗೆ ಲೌಕಿಕ ಕಾವ್ಯವನ್ನೇ ಪ್ರಧಾನವಾಗಿಟ್ಟುಕೊಂಡು ತನ್ನ ‘ಭುವನೈಕ ರಾಮಾಭ್ಯುದಯ’ವನ್ನು ರಚಿಸುತ್ತಿದ್ದನೆ? ಇದು ವಿಚಾರಾರ್ಹವಾದ ಸಂಗತಿ” ಎಂದು ಹೇಳಿದ್ದಾರೆ. ಇಲ್ಲಿ ಉದ್ಧರಿಸಿರುವ ಅವರ ಲೇಖನದ ಸ್ವಲ್ಪ ಭಾಗದಿಂದ ಅವರ ವಿಚಾರ ಸರಣಿಯನ್ನೂ ಪ್ರಾಮಾಣಿಕತೆಯನ್ನೂ ಕಾಣಬಹುದು.

ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಬೆಂಗಳೂರಿನ ಸಾಹಿತ್ಯ ಪರಿಷತ್ತಿನವರು ಕೈಗೊಂಡಿರುವ ಕನ್ನಡ-ಕನ್ನಡ ನಿಘಂಟಿನ ಕಾರ್ಯ ಪ್ರಾರಂಭವಾದಾಗ ಸಂಪಾದಕರಾಗಿ ಅದಕ್ಕೆ ಅಸ್ತಿಭಾರ ಹಾಕುವ ಕೆಲಸವನ್ನು ಮಾಡಿದುದು ಕನ್ನಡ ನಾಡಿಗೆ ಹೆಮ್ಮೆ ತರುವಂತಹುದು. ಪದಗಳಿಗೆ ಭಾವಕೋಶವಿರುವಂತೆ ಅರ್ಥಕೋಶವಿರುತ್ತದೆ. ಸಂಶೋಧಕರ ಬಳಿ ಅನೇಕ ಪದಗಳು ತಮ್ಮ ಅರ್ಥದ ರಹಸ್ಯವನ್ನು ಹೇಳಿ ಬಿಡುತ್ತವೆ. ಬಹುಕಾಲ ಅರ್ಥವಾಗದ ಪದಗಳು ಸಂಶೋಧಕರ ಬಳಿ ಶರಣಾಗುತ್ತವೆ. ಆಚಾರ್ಯರ ‘ಕನ್ನಡಕ್ಕೆ ಹೊಸನಿಘಂಟು’ ಎಂಬ ಲೇಖನದಲ್ಲಿ ಅರ್ಥವಾಗದ ಕೆಲವು ಪದಗಳಿಗೆ ಅವರು ಅರ್ಥವನ್ನು ಸೂಚಿಸಿದ್ದಾರೆ. ಆ ಭಾಗದಿಂದ ಇಲ್ಲಿ ಕೆಲವು ಅಂಶಗಳನ್ನು ಸಂಗ್ರಹಿಸಲಾಗಿದೆ.

“ಮೇಗಾಳಿ, ಕಿಗ್ಗಾಳಿ-ಎರಡು ಮೂರು ವರ್ಷಗಳ ಹಿಂದೆ ಬೇಸಿಗೆ ರಜದಲ್ಲಿ ಪಟ್ಟಣ ಬಿಟ್ಟು, ಹಳ್ಳಿಗೆ ಹೋಗಬೇಕಾದ ಅವಕಾಶ ಒದಗಿತು. (೧೯೪೧ಕ್ಕಿಂತ ಎರಡು ಮೂರು ವರ್ಷಗಳ ಹಿಂದೆ.) ಆ ಹಳ್ಳಿಯ ಸುತ್ತಲೂ ಬೆಟ್ಟಗಳ ಸಾಲು, ಕಣಿವೆಗಳಲ್ಲಿ ದಟ್ಟವಾದ ಕಾಡು. ಸಂಜೆ ಕಾಲಾಡಿಸಿಕೊಂಡು ಬರೋಣವೆಂದು ನಾಲ್ಕಾರು ಜನ ಆ ಊರಿನ ನಂಟರೊಡನೆ ಬೆಟ್ಟಗಳನ್ನು ಹತ್ತಿ ಇಳಿದು ಅಲೆದಾಡುತ್ತ ಕಾಡಿನ ನಡುವೆ ದಣಿವಾರಿಸಿಕೊಳ್ಳಲು ನಿಲ್ಲಬೇಕಾಯಿತು. ಆಗ ನಂಟರೊಬ್ಬರು ತಮ್ಮ ಬೇಟೆಯ ಅನುಭವವನ್ನು ಹೇಳಲು ಮೊದಲು ಮಾಡಿದರು. ಹುಲಿ ಹೊಂಚುಕಾದು ಹಸುವನ್ನು ಹೇಗೆ ಹಿಡಿದು ಕೊಲ್ಲುತ್ತದೆಂಬುದನ್ನು ಅವರು ಮೈತುಂಬಿ ಹೇಳುತ್ತಿರುವಾಗ ಆಶ್ಚರ್ಯದಿಂದಲೂ ಭಯದಿಂದಲೂ ಮೂಕರಾಗಿ ಬಾಯಿಬಿಟ್ಟುಕೊಂಡು ಉಳಿದ ನಾವೆಲ್ಲರೂ ಕೇಳುತ್ತಿದ್ದೇವು. ಹೇಳುತ್ತ ಹೇಳುತ್ತ ಅವರು ಹುಲಿ ಕಿಗ್ಗಾಳಿಗೆ ಬಂತು’ ಎಂದು ಅಭಿನಯಿಸಿ ತೋರಿಸಿದರು. ಆ ಕೂಡಲೆ ನಾನು ಎದ್ದುನಿಂತು ಕುಣಿದಾಡುತ್ತ ಅವರನ್ನು ತಬ್ಬುವ ಹಾಗೆ ಕೈ ಹಿಡಿದು, “ಸ್ವಾಮಿ, ಕೊಂಚ ತಾಳಿ, ಕಿಗ್ಗಾಳಿ ಎಂದರೆ ಏನು?” ಎಂದು ಕೇಳಿದನು…… ಅವರು ನಕ್ಷೆ ಬರೆದು ಅದನ್ನು ವಿವರಿಸಿದರು.”

ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಮೇಗಾಳಿ, ಕಿಗ್ಗಾಳಿ ಎಂಬ ಪದ ಪ್ರಯೋಗಗಳಿವೆ. ಈ ಪದಗಳಿಗೆ ಯಾವ ನಿಘಂಟಿನಲ್ಲಿಯೂ ಅರ್ಥವಿಲ್ಲ. ಈ ಪದಗಳು ಒಂದು ಕಾಲದಲ್ಲಿ ಬಳಕೆಯಲ್ಲಿದ್ದು ಕ್ರಮೇಣ ಅದೃಶ್ಯವಾಗಿದ್ದವು. ಬಹುಕಾಲದಿಂದಲೂ ಆಚಾರ್ಯರನ್ನು ಪೀಡಿಸುತ್ತಿದ್ದ ಈ ಪದಗಳು ಅವರ ಚೇತನದಲ್ಲಿ ವಿಸ್ಮೃತಿಯನ್ನು ಪಡೆಯದೆ ಸುಪ್ತವಾಗಿದ್ದವು. ಬಹುಕಾಲದಿಂದಲೂ ‘ಅರ್ಥ ತಿಳಿದಿಲ್ಲ’ ಎಂದು ಹೇಳುತ್ತಿದ್ದ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಆಚಾರ್ಯರ ಸಹಾಯದಿಂದ ಕಷ್ಟ ತಪ್ಪಿತು. ಆಚಾರ್ಯರು ಈ ಪದಗಳಿಗೆ ಅರ್ಥವನ್ನು ಈ ರೀತಿ ವಿವರಿಸಿದ್ದಾರೆ. “ಬೇಟೆಯಾಡುವ ಮೃಗದ ಮೇಲಿಂದ ಬೇಟೆಗೆ ಗುರಿಯಾದ ಪ್ರಾಣಿಯ ಕಡೆಗೆ ಬೀಸುವ ಗಾಳಿಗೆ ಮೇಗಾಳಿಯೆಂದೂ ಪ್ರಾಣಿಯ ಕಡೆಯಿಂದ ಆ ಮೃಗದ ಕಡೆ ಬೀಸುವ ಗಾಳಿಗೆ ಕಿಗ್ಗಾಳಿಯೆಂದೂ ಹೆಸರು.” ಈ ಪದಗಳ ನಿಷ್ಪತ್ತಿಯನ್ನು ಕುರಿತು ಮೇಲ್ಗಾಳಿ > ಮೇಗಾಳಿ; ಕಿಲ್ಗಾಳಿ > ಕಿರ್ಗಾಳಿ > ಎಂದು ವಿವರಿಸಿ ಈ ಪದಗಳ ಅರ್ಥಕ್ಕಾಗಿ ಯಾರೂ ಕಷ್ಟಪಡದಿರುವಂತೆ ಮಾಡಿದ್ದಾರೆ.

ಒಲ್ಲಣಿಗೆ : ಈಗ ತಿಳಿದಮಟ್ಟಿಗೆ ಈ ಪದವನ್ನು ಮೊದಲು ಬಳಸಿರುವುದು ಶಿವಕೋಟ್ಯಾಚಾರ್ಯನ ‘ವಡ್ಡಾರಾಧನೆ’ಯೆಂಬ ಗ್ರಂಥದಲ್ಲಿ ಪಂಪನೂ ಈ ಪದವನ್ನು ಬಳಸಿದ್ದಾನೆ. ಬ್ರಹ್ಮಶಿವನೂ ಬಳಸಿದ್ದಾನೆ. ಈ ಪ್ರಯೋಗಗಳನ್ನೆಲ್ಲಾ ಆಚಾರ್ಯರು ಪರಿಶೀಲಿಸಿದ್ದಾರೆ. ಪಂಪಭಾರತದ ಸಂಪಾದಕರು ಈ ಪದಕ್ಕೆ ‘ಗಾಣ’ ಎಂದು ಅರ್ಥ ಹೇಳಿದುದನ್ನೂ ಗಮನಿಸಿ ಇನ್ನೊಬ್ಬ ವಿದ್ವಾಂಸರು ‘ಅರ್ದ್ರವಸ್ತ್ರ’ ಎಂದು ಊಹಿಸಿದುದನ್ನು ಪರಿಶೀಲಿಸಿದ್ದಾರೆ. ಇಷ್ಟು ಪರಿಶೀಲನೆ ಮಾಡಿದ ಮೇಲೆ ತುಳು ಭಾಷೆಯ ನಿಘಂಟಿನ ಸಹಾಯವನ್ನು ಪಡೆದು ‘ಮೀಯುವಾಗ ಉಡುವ ಜಾಳು ಜಾಳಾದ ಬಟ್ಟೆ’ ಎಂಬ ಅರ್ಥವನ್ನು ಸೂಚಿಸಿದ್ದಾರೆ. ಇಷ್ಟು ಹೇಳಿದ ಮೇಲೆ ಆ ಪದದ ರೂಪ ನಿಷ್ಪತ್ತಿ ಸಾಧ್ಯವೇ? ಎಂಬುದನ್ನು ಗಮನಿಸಿ, ಇದು ಯಾವ ಭಾಷೆಯದೊ? ಕನ್ನಡಕ್ಕೆ ಹೇಗೆ ಬಂತೋ?” ಎಂದು ಹೇಳಿ ಇದರ ನಿಷ್ಪತ್ತಿಯನ್ನು ಸಧ್ಯದಲ್ಲಿ ವಿವರಿಸಲು ಅವಕಾಶವಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ. ಆದರೆ ೧೯೫೬ರಲ್ಲಿ ಪ್ರಕಟವಾದ ಅವರ ಶಬ್ದವಿಹಾರ ಪುಸ್ತಕದಲ್ಲಿ ಈ ‘ಒಲ್ಲಣಿಗೆ’ಯ ರೂಪ ನಿಷ್ಪತ್ತಿಯನ್ನು ವಿವರವಾಗಿ ಕೊಟ್ಟಿದ್ದಾರೆ. ಬಹುಕಾಲ ಆಚಾರ್ಯರಿಗೆ ತನ್ನ ರಹಸ್ಯವನ್ನು ಬಚ್ಚಿಟ್ಟಿದ್ದ ಈ ಪದ ಕೊನೆಗೆ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿತು. ಆರ್ದ್ರಪಟಿಕಾ>ಒಲ್ಲವಡಿಗೆ>ಒಲ್ಲವೞಿಗೆ>ಒಲ್ಲಳಿಗೆ> ಒಲ್ಲಣಿಗೆ. ಅರ್ಥವೇನೋ ಆರ್ದ್ರವಸ್ತ್ರ.

ಪ್ರೊ. ನರಸಿಂಹಾಚಾರ್ಯರು ಸಾಮಾನ್ಯವಾಗಿ ಎಲ್ಲಿಯಾದರೂ ಬಂದ ಸಮಸ್ಯೆಯನ್ನಾಗಲಿ ಸಂದೇಹವನ್ನಾಗಲಿ ಮರೆಯುವವರಲ್ಲ. ಇವೆಲ್ಲ ಅವರ ಚಿತ್ರದಲ್ಲಿ ಸುಪ್ತವಾಗಿದ್ದು ಅವುಗಳ ಪರಿಹಾರಕ್ಕಾಗಿ ಕಾದಿರುತ್ತವೆ. ಬೇಸಿಗೆಯಲ್ಲಿ ಒಣಗಿನಿಂತ ಹುಲ್ಲಿನ ಬೇರುಗಳು ಮಳೆ ಬಂದೊಡನೆ ಚಿಗುರಿ ಹಸುರಾಗುವಂತೆ ಈ ಸಮಸ್ಯೆಗಳೂ ಸಂದೇಹಗಳೂ ಅವಕಾಶ ದೊರಕಿದಾಗ ಪೂರ್ಣ ಪ್ರಯೋಜನವನ್ನು ಪಡೆಯುತ್ತವೆ. ಈ ಸಂದೇಹ ನಿವಾರಣೆ ಬೇಗನೆ ಆಗಬಹುದು ಅಥವಾ ಹತ್ತು ಹದಿನೈದು ವರ್ಷಗಳಾದರೂ ಮೇಲೆಯೂ ಆಗಬಹುದು. ಸಮಯ ಒದಗಿದಾಗ ಸಂಶೋಧನಾಪ್ರತಿಭೆ ಮಿಂಚಿನಂತೆ ಬೆಳಗಿ ಸಮಸ್ಯೆಯನ್ನೊ ಸಂದೇಹವನ್ನೊ ನಿವಾರಿಸುತ್ತದೆ. ಸಂಶೋಧಕರಿಗೆ ಸಂಶೋಧನೆ ಕ್ಲೇಶಕಾರಿಯಾದುದಲ್ಲ. ಅದು ಅವರಿಗೆ ಸಂತೋಷವನ್ನುಂಟು ಮಾಡುತ್ತದೆ. ಸಾಮಾನ್ಯರ ದೃಷ್ಟಿಯಲ್ಲಿ ಮರುಭೂಮಿಯಾಗಿ ಕಾಣುವ ಸಂಶೋಧನೆಯಲ್ಲಿ ‘ಓಯಸಿಸ್‌’ಗಳನ್ನು ಕಾಣುತ್ತಾರೆ ಸಂಶೋಧಕರು.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ವ್ಯಾಕರಣದಲ್ಲಿ ಆಸಕ್ತಿ ಕಡಿಮೆ. ಕೇಶಿರಾಜನ ಶಬ್ದಮಣಿದರ್ಪಣವನ್ನು ಭಾಷಾಶಾಸ್ತ್ರದ ದೃಷ್ಟಿಯಿಂದ ವಿವರಿಸಿ ಆಚಾರ್ಯರು ರಸವತ್ತಾಗಿ ಪಾಠ ಹೇಳುವುದನ್ನು ಕೇಳಿದ ವಿದ್ಯಾರ್ಥಿಗಳು ಭಯವಿಸ್ಮಿತರಾಗಿದ್ದಾರೆ. ಅವರ ಭಾಷಾಜ್ಞಾನ ಎಂತಹವರಿಗಾದರೂ ವಿಸ್ಮಯವನ್ನೂ ಗೌರವವನ್ನೂ ತರುವಂತಹದು. ಅವರು ಧಾರವಾಡದಲ್ಲಿ ಭಾಷಾಶಾಸ್ತ್ರವನ್ನು ಕುರಿತು ಹಿಂದೆ ಮಾಡಿದ ಮೂರು ಉಪನ್ಯಾಸಗಳು ಇನ್ನೂ ಅಚ್ಚಾಗಿಲ್ಲ. ಆ ಪುಸ್ತಕ ಬೇಗನೆ ಪ್ರಕಟವಾದರೆ ವಿದ್ಯಾರ್ಥಿ ವೃಂದಕ್ಕೆ ಬಹಳ ಪ್ರಯೋಜನವಾಗುತ್ತದೆ.

ಪ್ರೊ. ನರಸಿಂಹಾಚಾರ್ಯರನ್ನು ಬಹುಜನರು ಶ್ರೇಷ್ಠ ಸಂಶೋಧಕರು, ವಿದ್ವಾಂಸರು ಎಂದು ಮಾತ್ರ ತಿಳಿದಿದ್ದಾರೆ. ಅವರ ಹೃದಯಾಂತರಾಳದಲ್ಲಿ ಅಂತರ್ಗತವಾಗಿ ಹರಿಯುವ ಆಧ್ಯಾತ್ಮಿಕ ಪ್ರವೃತ್ತಿ ಕಾಣಿಸುವುದಿಲ್ಲ. ಆತ್ಮದೇವರು, ಯೋಗ ಇತ್ಯಾದಿ ವಿಚಾರಗಳನ್ನು ಕುರಿತು ಅವರು ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ಒಮ್ಮೆ ಅವರು ಹೀಗೆ ಹೇಳಿದುದು ನನಗೆ ಜ್ಞಾಪಕವಿದೆ.

ಆಚಾರ್ಯರಿಗೆ ಸುಮಾರು ನಲವತ್ತನೆಯ ವರ್ಷದಲ್ಲಿ ಒಂದು ನೋವು ಅವರ ಹೃದಯವನ್ನು ನೋಯಿಸುತ್ತಿತ್ತಂತೆ! ಆ ವಯಸ್ಸಿಗೆ ಎಷ್ಟು ಕೃತಿಗಳನ್ನು ರಚನೆ ಮಾಡಬೇಕೆಂದು ಸಂಕಲ್ಪವಿತ್ತೊ ಅದು ಕಾರ್ಯರೂಪಕ್ಕೆ ಬಾರದಿದ್ದುದೇ ಆ ನೋವು. ಆ ಕೊರಗು ಸುಮಾರು ಒಂದು ವರ್ಷಕಾಲ ಪೀಡಿಸಲಾರಂಭಿಸಿತು. ಆ ಸಮಯದಲ್ಲಿ ಅವರಿಗೆ ಶಾಂತಿಯನ್ನು ನೀಡಿದ ಪುಸ್ತಕ “The Gospel of Sri Ramakrishna”. ಈ ಒಂದು ಸಂದರ್ಭ ಅವರ ಆಧ್ಯಾತ್ಮಿಕ ಅಭೀಪ್ಸೆಯನ್ನು ತೋರುವ ಒಂದು ನಿದರ್ಶನ.

ಆಚಾರ್ಯರು ಕೇವಲ ಬುದ್ಧಿಯ ಶಿಖರದಲ್ಲಿಯೆ ನಿಂತವರೆಂದು ಭಾವಿಸಬಾರದು. ಏಕೆಂದರೆ ಅವರ ವಿಮರ್ಶೆಯನ್ನು ಓದಿದವರು ಅವರ ರಸಹೃದಯವನ್ನು ಅರ್ಥಮಾಡಿಕೊಳ್ಳಬಹುದು. ಶ್ರೀ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಕುರಿತು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅವರು ಬರೆದ ವಿಸ್ತಾರವಾದ ವಿಮರ್ಶೆ ಸ್ವತಂತ್ರ ಕೃತಿಯಂತೆ ಅಮೂಲ್ಯವಾಗಿದೆ. ಈ ಕಲೆಯನ್ನು ಅವರು ಬೆಳೆಸಿದ್ದರೆ ಕನ್ನಡ ವಿಮರ್ಶಾ ಸಾಹಿತ್ಯವನ್ನು ಸಮೃದ್ಧವಾಗಿ ಮಾಡಬಹುದಿತ್ತು.

ಆಚಾರ್ಯರಿಗೆ ಇಂಗ್ಲಿಷ್ ಭಾಷೆಯಲ್ಲಿಯೂ ಉತ್ತಮ ಪ್ರಭುತ್ವವಿದೆ. ಅವರು ಇಂಗ್ಲಿಷಿನಲ್ಲಿ ಬರೆದ ಸಂಶೋಧನಾತ್ಮಕವಾದ ಲೇಖನಗಳನ್ನೂ ವಿದ್ವಾಂಸರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರಿಗೆ ಇಂಗ್ಲಿಷಿನಲ್ಲಿ ಶ್ರೇಷ್ಠ ರೀತಿಯಲ್ಲಿ ಉಪನ್ಯಾಸ ಮಾಡುವ ಅದ್ಭುತ ಶಕ್ತಿಯೂ ಇದೆ. ಭಾರತದ ಬೇರೆ ಬೇರೆ ಪ್ರಾಂತಗಳಿಂದ ಬಂದ ಸಾಹಿತಿಗಳು ಅವರು ಇಂಗ್ಲಿಷಿನಲ್ಲಿ ಮಾಡಿದ ಉಪನ್ಯಾಸವನ್ನು ಕೇಳಿ ಗೌರವವನ್ನು ಸೂಚಿಸಿದರು. ಈ ಸಂದರ್ಭ ಹಿಂದೆ “Literary workshop” ಮೈಸೂರಿನಲ್ಲಿ ನಡೆದಾಗ ಒದಗಿ ಬಂತು. ಆಗ ಅವರ ಸದಸ್ಯರನ್ನು ಕುರಿತು ಆಚಾರ್ಯರು ಉಪನ್ಯಾಸ ಮಾಡಿದ್ದರು.

ಪ್ರಪಂಚದ ಶ್ರೇಷ್ಠ ಸಂಶೋಧಕರ ವಿರಳ ಪಂಕ್ತಿಗೆ ಸೇರಿದ ಪ್ರೊ. ಡಿ.ಎಲ್. ನರಸಿಂಹಾಚಾರ್ಯರ ಪಾಂಡಿತ್ಯ, ವಿದ್ವತ್ತು, ಸಂಶೋಧನಾ ಪ್ರತಿಭೆ ಇವೆಲ್ಲ ಪಕ್ವವಾಗಿವೆ. ಇವುಗಳ ಪೂರ್ಣ ಪ್ರಯೋಜನ ಕನ್ನಡ ನಾಡಿನ ವಿದ್ಯಾರ್ಥಿ ವೃಂದಕ್ಕೂ ವಿದ್ವಾಂಸರಿಗೂ ಜನತೆಗೂ ಬಹುಕಾಲ ಲಭಿಸುವಂತಾಗಲಿ. ಅದಕ್ಕಾಗಿ ಅವರಿಗೆ ಸಕಲ ಸೌಲಭ್ಯಗಳೂ ದೊರಕುವಂತಾಗಲೆಂದು ಪ್ರಾರ್ಥಿಸೋಣ.

* ಜ್ಞಾನೋಪಾಸಕ, ಪು. ೩೭