ಪ್ರಿಯ ಗುರುಗಳಾದ ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಇಹಲೋಕ ಯಾತ್ರೆಯನ್ನು ಮುಗಿಸದರೆಂಬ ವಿಷಯವನ್ನು ನನ್ನ ಮನಸ್ಸು ನಂಬುತ್ತಿಲ್ಲ. ಆದರೂ ಅದು ಸತ್ಯವಾದ ಸಂಗತಿ. ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ, ಶ್ರದ್ಧಾಂಜಲಿಯ ರೂಪದಲ್ಲಿ ಇಲ್ಲಿ ಎರಡು ಮಾತುಗಳನ್ನು ಬರೆಯುತ್ತಿದ್ದೇನೆ.

೧೯೩೫ನೆಯ ವರುಷ ಫೆಬ್ರವರಿ ತಿಂಗಳಲ್ಲಿ (ಹಾಗೆಂದು ನನ್ನ ನೆನಪು. ತಿಂಗಳಲ್ಲಿ ವ್ಯತ್ಯಾಸವಿರಬಹುದು) ನಡೆದ ಮೈಸೂರಿನ ಮಹಾರಾಜರವರ ಕರ್ಣಾಟಕ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಲು, ಮಹಾಮಹೋಪಾಧ್ಯಾಯ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರು ಆಹ್ವಾನಿತರಾಗಿ ಬಂದಿದ್ದರು. ಸಂಜೆ ಛಾಯಾ ಚಿತ್ರಗ್ರಹಣ ಕಾಲದಲ್ಲಿ ಸಂಘದ ಅಧ್ಯಕ್ಷರಾಗಿದ್ದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ತಮ್ಮ ಗುರುಗಳನ್ನು ನಿರ್ದೇಶಿಸಿ ಮುಖ್ಯ ಅತಿಥಿಗಳ ಕಡೆಗೆ ಕೈ ತೋರಿಸುತ್ತ ‘Mr. Narisimhachar, you must ectipse this Narasimhachar’ ಎಂದು ಹೇಳಿ ಇಬ್ಬರನ್ನೂ ನೋಡಿ ಮುಗುಳುನಗೆ ನಕ್ಕರು. ಈ ವೇಳೆಗಾಗಲೇ ನರಸಿಂಹಾಚಾರ್ಯರಿಂದ ಸಂಪಾದಿತವಾದ ಕುಮಾರವ್ಯಾಸ ಭಾರತದ ಭೀಷ್ಮ ಪರ್ವ ಹೊರಬಂದಿತ್ತು. ಕವಿಕಾಲ ವಿಚಾರವಾದ ಮತ್ತು ಇತರ ವಿಷಯಗಳ ಮೇಲಿನ ಲೇಖನಗಳು ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ವೀರಶೈವ ಸಾಹಿತ್ಯಕ್ಕೆ ಸಂಬಂಧಪಟ್ಟ ತಮ್ಮ ಸಂಶೋಧನಾತ್ಮಕ ಪ್ರಬಂಧವನ್ನು ಕಾಲಕ್ಕೆ ಮುಂಚೆಯೇ ಅವರು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಎಲ್ಲಕ್ಕೂ ಮಿಗಿಲಾಗಿ ಆಚಾರ್ಯರು ಕವಿ ಚರಿತ್ರೆಯ ಸಂಪುಟಗಳಲ್ಲಿ ಇದ್ದ ಕೆಲವು ನ್ಯೂನತೆಗಳನ್ನು ಲೇಖಕರ ಗಮನಕ್ಕೆ ತಂದು, ಅವರ ಮೆಚ್ಚಿಗೆ ಹಾಗೂ ಕತೃಜ್ಞತೆಯ ಕುರುಹಾಗಿ ಅವರಿಂದ ಕವಿಚರಿತ್ರೆಯ ಮೂರು ಸಂಪುಟಗಳನ್ನು ಬಹುಮಾನವಾಗಿ ಪಡೆದಿದ್ದರು. ಹೀಗಿರುವಲ್ಲಿ ನನ್ನ ಕೆಲಸವನ್ನು ಮುಂದುವರಿಸಲು ಸಮರ್ಥನಾಗಿ ವ್ಯಕ್ತಿ ಇಲ್ಲಿರುವನೆಂಬಂತೆ ಶ್ರೀಯವರ ಮಾತನ್ನು ಅನುಮೋದಿಸಿ, ಮಹಾಮಹೋಪಾಧ್ಯಾಯರೂ ನಕ್ಕರು. ಕವಿಗಳ ಕಾಲ ನಿರ್ಣಯದಲ್ಲಿ, ಗ್ರಂಥ ಸಂಪಾದನೆಯಲ್ಲಿ, ಪದಗಳ ಅರ್ಥವನ್ನು ಬುಡಮಟ್ಟ ಶೋಧಿಸಿ, ಕೊನೆಯ ನಿರ್ಣಯವನ್ನು ಹೇಳುವುದರಲ್ಲಿ, ಉದ್ಗಂಥಗಳಿಗೆ ರಸಸ್ಯಂದಿಯಾದ ಪೀಠಿಕೆಗಳನ್ನು ಬರೆವುದರಲ್ಲಿ, ಹೆಚ್ಚೇನು ಕನ್ನಡದಲ್ಲಿ ಪಾಂಡಿತ್ಯದ ಬೆಳವಣಿಗೆಗೆ ಬೇಕಾದ ಸಮಸ್ತ ವಿಷಯಗಳನ್ನು ಸಂಗ್ರಹಿಸಿ ಅದಕ್ಕೆ ರೂಪು ಕೊಡುವುದರಲ್ಲಿ ನರಸಿಂಹಾಚಾರ್ಯರು ಅಂದು ತಮ್ಮ ಗುರುಗಳು ಆಡಿದ ಮಾತನ್ನು ಎಷ್ಟರ ಮಟ್ಟಿಗೆ ಪೂರ್ಣಗೊಳಿಸಿದರು ಎಂಬುದನ್ನು ಕನ್ನಡ ಲೋಕವೇ ಬಲ್ಲುದು. ಮಹನೀಯರ ಭವಿಷ್ಯ ಹೇಗೆತಾನೆ ಸುಳ್ಳಾದೀತು?

ಇನ್ನೊಂದು ವಿಷಯ. ಕನ್ನಡದ ಕಣ್ವರೆಂದು ಪ್ರಖ್ಯಾತರಾದ ಆಚಾರ್ಯ ಶ್ರೀಯವರಿಗೆ ಅರ್ಪಿಸಿದ ಸಂಭಾವನಾ ಗ್ರಂಥದಲ್ಲಿ ‘ಕನ್ನಡಕ್ಕೆ ಹೊಸ ನಿಘಂಟು’ ಎಂಬ ನರಸಿಂಹಾಚಾರ್ಯರ ಲೇಖನವಿದೆ. ಅದರಲ್ಲಿ ಅವರು ಕನ್ನಡಕ್ಕೆ ಪ್ರಮಾಣಭೂತವಾದ ನಿಘಂಟಿನ ಅವಶ್ಯಕತೆ ಏಕೆ ಇದೆ, ಅದರ ರಚನೆಯಲ್ಲಿ ಇರುವ ತೊಡಕುಗಳೇನು, ಅನುಸರಿಸಬೇಕಾದ ಮಾರ್ಗ ಯಾವುದು ಎಂಬುದನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ಅಲ್ಲಿಗೆ ಆ ವಿಷಯ ಮುಗಿಯಿತು ಎಂದು ನಾವು ತಿಳಿದಿದ್ದೆವು. ದೈವನಿಯಮ ಅಚಿಂತನೀಯವಾದುದು. ಕನ್ನಡದ ಅಧಿದೈವ ಆಚಾರ್ಯರ ಕರೆಗೆ ಓಗೊಟ್ಟಿತೋ ಎಂಬಂತೆ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯವನ್ನು ಕೈಗೊಂಡಿತು. ನಿಘಂಟಿಗೆ ಒಂದು ಆಕಾರ ಬಂದಾಗ ಆಚಾರ್ಯರೇ ಅದರ ಸಂಪಾದಕರಾದರು. ಕೊನೆಗೆ ಅದರ ಅಧ್ಯಕ್ಷರಾದರು. ಅವರು ಕೊನೆಯ ಎಳೆಯುವವರೆಗೆ ಅವರಿಗೆ ನಿಘಂಟಿನದೇ ಚಿಂತೆ! ಅವರ ಪಕ್ವವಾದ ಹೋದದ್ದು ಕನ್ನಡಿಗರ ದೌರ್ಭಾಗ್ಯ!

ನಾಲ್ಕು ವರ್ಷಗಳ ಕಾಲ ಮೈಸೂರಿನ ಮಹಾರಾಜರವರ ಕಾಲೇಜಿನಲ್ಲಿ ಕನ್ನಡ ಆನರ್ಸ್, ಎಂ.ಎ. ತರಗತಿಗಳಲ್ಲಿ ಡಿ.ಎಲ್. ನರಸಿಂಹಾಚಾರ್ಯರು ನನಗೆ ಪಾಠ ಹೇಳಿದ ಗುರುಗಳು. ಅಲ್ಲದೆ ಅನ್ನವಿಟ್ಟ ದಾತೃ. ಅವರೊಡನೆ ಕೆಲಸ ಮಾಡುವ ಆ ಭಾಗ್ಯ ನನ್ನದಾಗಿರಲಿಲ್ಲವಾದ ಕಾರಣ, ಅವರ ಪಾಂಡಿತ್ಯವನ್ನು ಕುರಿತು ಮಾತನಾಡುವ ಅಧಿಕಾರ ನನಗಿಲ್ಲ. ಆದರೂ ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಬೇಕಾಗಿದೆ. ಈಗ ಕನ್ನಡ ಓದುವ, ಬೋಧಿಸುವ ವಿದ್ಯಾರ್ಥಿಗಳಿಗೆ ಉಪಾಧ್ಯಾಯರಿಗೆ ಹತ್ತಾರು ಕಡೆಯಿಂದ ನೆರವು ದೊರಕುತ್ತದೆ. ಈ ವಿಷಯದಲ್ಲಿ ಅವರು ಪುಣ್ಯವಂತರು. ಆದರೆ ನಾವು ಮಹಾರಾಜರವರ ಕಾಲೇಜನ್ನು ಸೇರಿದಾಗ ಪರಿಸ್ಥಿತಿ ಹೀಗಿರಲಿಲ್ಲ. ಹೊಸ ಸಾಹಿತ್ಯ, ಪಾಂಡಿತ್ಯ ರೂಪುಗೊಳ್ಳುತ್ತಿದ್ದ ಕಾಲ ಅದು. ಕನ್ನಡ ಆನರ್ಸ್ ಮತ್ತು ಎಂ.ಎ. ತರಗತಿಗಳು ಆಗ ತಾನೆ ಪ್ರಾರಂಭವಾಗಿದ್ದವು. ಕನ್ನಡ ಕೈಪಿಡಿಯನ್ನುಳಿದು ಭಾಷಾಶಾಸ್ತ್ರಗಳಿಗೆ ಬೇಕಾದ ಗ್ರಂಥಗಳೂ ಬಂದಿರಲಿಲ್ಲ. ಸಾಹಿತ್ಯ ಚರಿತ್ರೆಗೆ ಕವಿಚರಿತ್ರೆಯ ಸಂಪುಟಗಳೇ ಆಧಾರ. ಕನ್ನಡ ಛಂದಸ್ಸಿನ ವಿಷಯದಲ್ಲಿ ಶ್ರೀಯವರು ನೂತನ ಅಧ್ಯಾಯವನ್ನು ಆರಂಭ ಮಾಡಿದ್ದರೂ, ಅವರ ಉಪನ್ಯಾಸಗಳು ಬರವಣಿಗೆಯಲ್ಲಿ ಇನ್ನೂ ಇಳಿದು ಬಂದಿರಲಿಲ್ಲ. ಹಳಗನ್ನಡ ಕೃತಿಗಳನ್ನು ಪಾಠ ಹೇಳುವ ಮೊದಲು ಉಪಾಧ್ಯಾಯನು ಪಾಠವನ್ನು ಪರಿಷರಿಸಿಕೊಳ್ಳಬೇಕಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಹಳೆಯ ಕಾಲದ ಪಂಡಿತರು ಪ್ರಬಲವಾಗಿದ್ದ ಕಾಲ ಅದು. ಎಂ.ಎ. ಆದವರಿಗೆ ಏನು ಬರುತ್ತದೆ ಎಂದು ಅವರು ಮೂಗು ಮುರಿಯುತ್ತಿದ್ದರು. ಒಂದು ಕಡೆ ಉನ್ನತಾದರ್ಶಗಳನ್ನು ಎತ್ತಿ ಹಿಡಿದು ವಿಶ್ವವಿದ್ಯಾನಿಲಯಕ್ಕೆ ಗೌರವವನ್ನು ತಂದ ಪ್ರಾಧ್ಯಾಪಕ ವೃಂದ ಮತ್ತೊಂದು ಕಡೆ ಹೊಸ ಪದವೀಧರರನ್ನು ತಿರಸ್ಕಾರದಿಂದ ನೋಡುತ್ತಿದ್ದ ಪಂಡಿತ ವರ್ಗ ಮಗುದೊಂದು ಕಡೆ ಪಾಠ ಹೇಳಲು ಸಾಮಗ್ರಿಗಳ ಅಭಾವ ಇವೆಲ್ಲಕ್ಕೂ ಪುಟವಿಟ್ಟಂತೆ ಮಹಾರಾಜರವರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಳ್ಳಲು ನರಸಿಂಹಾಚಾರ್ಯರಿಗೆ ಇರುವ ವಿಶೇಷ ಅರ್ಹತೆ ಏನು ಎಂದು ಸೆನೆಟ್ಟಿನಲ್ಲಿ ಮೂದಲಿಕೆ. (ಇವರಲ್ಲಿ ವಿದ್ವತ್ತು ಪ್ರತಿಭೆ ಕೂಡಿದೆ ಎಂದು ಹೇಳಿ ಶ್ರೀಯವರು ಇವರ ನೇಮಕವನ್ನು ಸಮರ್ಥಿಸಬೇಕಾಯಿತು!) – ಈ ವಿಷಮ ಚಕ್ರದಲ್ಲಿ ಸಿಕ್ಕಿಕೊಂಡಿದ್ದ ಆಚಾರ್ಯರು ಕನ್ನಡ ಪ್ರೌಢ ತರಗತಿಗಳ ಪಾಠಕ್ಕೆ ಬೇಕಾದ ವ್ಯಾಕರಣ, ಛಂದಸ್ಸು, ಸಾಹಿತ್ಯ ಚರಿತ್ರೆ, ಪಾಠ ಸಂಸ್ಕರಣ ಇವೇ ಮೊದಲಾದ ವಿಷಯಗಳಲ್ಲಿ ಅಸಾಧಾರಣವಾದ ಪಾಂಡಿತ್ಯವನ್ನು ರೂಢಿಸಿಕೊಂಡಿದ್ದಲ್ಲದೆ, ಸಂಸ್ಕೃತ ಪ್ರಾಕೃತ ತೆಲುಗು ತಮಿಳು ಭಾಷೆಗಳಲ್ಲಿ ಸಲುಗೆಯನ್ನೂ, ಆ ಶಾಸನಗಳ ಆಳವಾದ ವಿದ್ವತ್ತನ್ನೂ ಗಳಿಸಿಕೊಂಡು, ಹಿರಿಯರ ಮೆಚ್ಚಿಗೆ, ಸ್ನೇಹಿತರ ಅಭಿಮಾನ, ವಿದ್ಯಾರ್ಥಿಗಳ ವಿಶ್ವಾಸವನ್ನು ಗಳಿಸಿಕೊಂಡರು. ವಿದ್ಯಾರ್ಥಿಗಳ ಹೃದಯದಲ್ಲಿ ನೆಲೆನಿಂತ ಉಪಾಧ್ಯಾಯನಿಗೆ ಅದಕ್ಕಿಂತ ಬೇರೆ ಏನು ಪ್ರಶಸ್ತಿಬೇಕು? ‘ವೀರಶೈವ ಸಾಹಿತ್ಯದಲ್ಲಿ ನೆರವು ಬೇಕಾದಾಗ ನರಸಿಂಹಾಚಾರ್ಯರನ್ನು ಕೇಳುತ್ತೇನೆ’ ಎಂದು ಎ.ಆರ್. ಕೃಷ್ಣಶಾಸ್ತ್ರಿಗಳು ನನ್ನೊಡನೆ ಹೇಳಿದ್ದುಂಟು. ಇವರಿಂದ ಕನ್ನಡ ಸಾಹಿತ್ಯ ಚರಿತ್ರೆ ರಚನೆಯಾಗಲಿಲ್ಲವಲ್ಲ ಎಂಬ ಕೊರಗು ಶಾಸ್ತ್ರಿಗಳ ಮನಸ್ಸಿನಲ್ಲಿ ಉಳಿಯಿತು. ಆಚಾರ್ಯರ ‘ಕನ್ನಡ ಗ್ರಂಥ ಸಂಪಾದನೆ’ಯನ್ನು ವಿಷಯ ನಿರೂಪಣೆ, ಸಾಮಗ್ರಿಗಳ ಸಂಗ್ರಹಕ್ಕಾಗಿ ಶಾಸ್ತ್ರಿಗಳು ಅವರನ್ನು ಬಾಯಿ ತುಂಬ ಹೊಗಳಿದ್ದಾರೆ. ಕೃಷ್ಣಶಾಸ್ತ್ರಿಗಳಂಥ ಪ್ರಾಚಾರ್ಯರಿಂದ ಅಗ್ಗಳಿಕೆಯನ್ನು ಪಡೆದ ನರಸಿಂಹಾಚಾರ್ಯರು ನಿಜವಾಗಿಯೂ ಧನ್ಯರು.

ಎಂ.ಎ. ಪರೀಕ್ಷೆಯ ವಾಚಾಪರೀಕ್ಷೆಯಲ್ಲಿ ನಾನು ಶ್ರೀಯವರನ್ನು ಎದುರಿಸಬೇಕಾಯಿತು. ಒಂದು ಗಂಟೆಯ ಕಾಲ ಪರೀಕ್ಷೆಯಾದ ಮೇಲೆ ಶ್ರೀಯವರು – ನಮ್ಮಲ್ಲಿ ಅದೇನು ಸಾಮರ್ಥ್ಯವನ್ನು ಕಂಡರೋ, ದೇವರೇ ಬಲ್ಲ – ‘ಕನ್ನಡವನ್ನು ನಿಮ್ಮ ಕೈಯ್ಯಲ್ಲಿಟ್ಟಿದ್ದೇವೆ. ಅದನ್ನು ಕಾಪಾಡಿಕೊಂಡು ಬನ್ನಿ’ ಎಂದು ಮನಕರಗುವಂತೆ ಹೇಳಿ ಕೈ ಮುಗಿದರು. ನಮ್ಮ ಗುರುಗಳು ಹೇಳಿಕೊಂಡಂತೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಕೆಲಸ ನನ್ನಿಂದ ನಡೆಯಲಿಲ್ಲ. ಆದರೆ ಒಂದು ಸಮಾಧಾನ. ನನಗೆ ಕನ್ನಡದಲ್ಲಿ ಪಾಠ ಹೇಳಿದ ಮಹನೀಯರೆ ಆಸೆ ಪೂರ್ಣಗೊಳ್ಳುವಂತೆ ಕನ್ನಡದಲ್ಲಿ ಪಾಂಡಿತ್ಯ ಸಂವರ್ಧನೆಗೊಳ್ಳುವಂತೆ ಕೆಲವು ಗ್ರಂಥಗಳನ್ನು ಪ್ರಕಟಿಸಿದ್ದೇನೆ. ಅಂಥ ಗ್ರಂಥಗಳಲ್ಲಿ ನನ್ನ ಪ್ರಿಯಗುರುಗಳಾದ ನರಸಿಂಹಾಚಾರ್ಯರ ‘ಶಬ್ದವಿಹಾರ’, ‘ಸಿದ್ಧರಾಮ ಚರಿತ್ರೆಯ ಸಂಗ್ರಹ’, ‘ಗೋವಿನ ಹಾಡು’, ‘ವಡ್ಡಾರಾಧನೆ’, ‘ಶಬ್ದಮಣಿ ದರ್ಪಣ್ಯ’, ‘ಕನ್ನಡಗ್ರಂಥ ಸಂಪಾದನೆ’ – ಇವು ಮುಖ್ಯವಾದವು. ತಪ್ಪಿಲ್ಲದ ಉತ್ತಮವಾದ ಪರಿಶೋಧಿತ ಪಾಠಗಳನ್ನೂ, ಪರಿಷ್ಕಾರವಾದ ಪೀಠಿಕೆ ಶಬ್ದಕೋಶಗಳನ್ನು ಕೊಡಬೇಕೆಂಬ ಹಂಬಲ ಅವರ ಸಂಪಾದಿತ ಗ್ರಂಥಗಳಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಶಿವಕೋಟಾಚಾರ್ಯ ವಿರಚಿತ ವಡ್ಡಾರಾಧನೆಯ ವಿಷಯದಲ್ಲಿ ಒಂದು ಮಾತನ್ನು ಹೇಳಬೇಕು. ಎಲ್ಲಿಯೋ ಮೂಲೆಯಲ್ಲಿ ಅಡಗಿದ್ದ ಸರಳ ಸುಂದರವಾದ, ಅತ್ಯಂತ ಪ್ರಾಚೀನವಾದ ಈ ಜೈನ ಗದ್ಯ ಗ್ರಂಥವನ್ನು ನಷ್ಟವಾಗಲು ಬಿಡದೆ, ತ್ರುಟಿತ ಪ್ರತಿಯೊಂದರಿಂದ ಮೂರು ಕಥೆಗಳನ್ನು ಸಂಪಾದಿಸಿ ಪರಿಷತ್ ಪತ್ರಿಕೆಯಲ್ಲಿ ಆಚಾರ್ಯರು ಅಚ್ಚು ಮಾಡಿಸಿದರು. ಅದರ ಮೇಲಚ್ಚುಗಳನ್ನು ತಂದು ತರಗತಿಗಳಲ್ಲಿ ಹಂಚಿ ಮೊದಲಬಾರಿಗೆ ನಮ್ಮ ಆನರ್ಸ್ ತರಗತಿಗೆ ಪಾಠ ಹೇಳಿದರು. ಮಹಾರಾಜರವರ ಕಾಲೇಜಿನಲ್ಲಿ ಕೆಲಸ ಮಾಡಿದಷ್ಟು ಕಾಲ ಅವರೇ ಈ ಗ್ರಂಥವನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳಿದರು. ಮೇಲು ನೋಟಕ್ಕೆ ಅದು ಒಂದು ಸರಳ ಗ್ರಂಥವಾಗಿ ಕಂಡುಬಂದರೂ, ಅದು ಅನೇಕ ಕ್ಲಿಷ್ಟ ಪದಗಳನ್ನೂ ಸಮಸ್ಯೆಗಳನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಕುಳಿತಿದೆ. ಆಚಾರ್ಯರು ಮುವ್ವತ್ತು ವರ್ಷಗಳ ಕಾಲ ಈ ಗ್ರಂಥದ ಸಮಸ್ಯೆಗಳನ್ನೆಲ್ಲ ಅರಿತುಕೊಂಡು ಬಲ್ಲವರೊಡನೆ ಅವುಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಶ್ರೀಯವರ ಪ್ರೋತ್ಸಾಹದಿಂದ, ಹೊಸ ಪ್ರತಿಗಳ ಸಹಾಯದಿಂದ ಗ್ರಂಥವನ್ನು ಸಂಪಾದಿಸಿ, ಸಂಶೋಧಿಸಿ ಅಚ್ಚಿಗೆ ಕೊಟ್ಟಿದ್ದರು. ಗ್ರಂಥದ ಮೂರು ಮುದ್ರಣಗಳು ಹೊರ ಬಂದರೂ, ಪೀಠಿಕೆ ಟಿಪ್ಪಣಿಗಳು ಅದರಲ್ಲಿ ಸೇರಿರಲಿಲ್ಲ. ಈ ಕೊರಗು ನನ್ನನ್ನು ಬಾಧಿಸುತ್ತಲೇ ಇತ್ತು. ನಾಲ್ಕನೆಯ ಮುದ್ರಣ ಪೀಠಿಕೆ ಟಿಪ್ಪಣಿಗಳಲ್ಲದೆ ಹೊರಬರಲಾಗದೆಂದು ನಾನು ಹಟ ಹಿಡಿದ ಕಾರಣ, ಅರ್ಧ ಪೀಠಿಕೆ, ಪೂರ್ತಿ ಟಿಪ್ಪಣಿಗಳನ್ನೊಳಗೊಂಡ ಗ್ರಂಥ ಕಳೆದವರ್ಷ ಹೊರಬಂತು. ಪೀಠಿಕೆ, ಟಿಪ್ಪಣಿಗಳಲ್ಲಿ ಅವರ ಪಾಂಡಿತ್ಯ ಘನೀಭೂತವಾಗಿ ಮಡುಕಟ್ಟಿ ನಿಂತಿದೆ. ‘ಕನ್ನಡ ಗ್ರಂಥ ಸಂಪಾದನೆ’ಯ ‘ವಡ್ಡಾರಾಧನ’ದ ಅಚ್ಚಿನ ಕರಡುಗಳನ್ನು ತಿದ್ದುವಾಗ ಈ ವಿಷಯದ ಅರಿವು ನನಗಾಯಿತು. ಇನ್ನೂ ಸ್ವಲ್ಪ ಹಟ ಮಾಡಿದ್ದರೆ ಪೀಠಿಕೆ ಪೂರ್ತಿಯಾಗುತ್ತಿತ್ತೇನೋ! ಆಚಾರ್ಯರ ಆರೋಗ್ಯದ ದೃಷ್ಟಿಯಿಂದ ಈ ಹಟ ನನಗೆ ಒಗ್ಗಲಿಲ್ಲ. ಅಲ್ಲದೆ ಇಷ್ಟು ಬೇಗ ಆಚಾರ್ಯರು ನಮ್ಮನ್ನು ಅಗಲುವರೆಂದು ಯಾರುತಾನೆ ನಂಬಿದ್ದರು? ಈ ಗ್ರಂಥದ ವಿಷಯದಲ್ಲಿ ಆಗಿರುವ ನಷ್ಟ ನಮ್ಮದು.

ನರಸಿಂಹಾಚಾರ್ಯರು ದೊಡ್ಡ ವಿದ್ವಾಂಸರಾಗಿದ್ದರೆಂಬುದನ್ನು ಈಗ ನಾವು ಪುನರುಚ್ಚರಿಸಬೇಕಾಗಿಲ್ಲ. ಹಾಗೆಯೇ ಅವರು ಕವಿಗಳೇ, ಹಾಗಾದರೆ ಅವರು ಕವನಗಳನ್ನೇಕೆ ಕಟ್ಟಲಿಲ್ಲ, ವಿದ್ವತ್ತಿನ ಕಡೆಗೆ ಏಕೆ ಅವರ ಮನಸ್ಸು, ಒಲಿಯಿತು ಎಂಬ ಪ್ರಶ್ನೆಗಳನ್ನು ಈಗ ಕೇಳಿ ಉಪಯೋಗವಿಲ್ಲ. ಮುಖ್ಯವಾಗಿ ನರಸಿಂಹಾಚಾರ್ಯರದು ಕವಿ ಹೃದಯ; ಅವರದು ಪ್ರಧಾನವಾಗಿ ಭಾವಯತ್ರೀ ಪ್ರತಿಭೆ. ಶ್ರೇಷ್ಠ ವಿಮರ್ಶಕರು ಉತ್ತಮ ಕವಿಯೂ ಆಗಿರುವನೆಂದು ಬಲ್ಲವರ ಹೇಳಿಕೆ. ಕವಿ ಹೃದಯ, ವಿಮರ್ಶಕನ ನಿಷ್ಪಕ್ಷಪಾತ ದೃಷ್ಟಿ ಭಾವುಕತೆ ಇವೆರಡೂ ಇವರಲ್ಲಿ ಅಪೂರ್ವವಾಗಿ ಮೇಳವಿಸಿದ್ದವು. ಕವಿತೆ ಛಂದಸ್ಸಿನಲ್ಲೇ ಇರಬೇಕೆಂಬ ನಿಯಮವಿಲ್ಲವಷ್ಟೆ, ಗದ್ಯವೂ ಪದ್ಯದ ರೂಪವನ್ನು ತಾಳಬಹುದು. ಆಚಾರ್ಯರು ‘ಪಂಪರಾಮಾಯಣ ಸಂಗ್ರಹ’ಕ್ಕೆ ಬರೆದಿರುವ ಪೀಠಿಕೆಯ ಅನೇಕ ಭಾಗಗಳು. ಗದ್ಯಭಾವ ಗೀತೆಗಳಂತಿವೆ. ಹರಿಹರನ ವ್ಯಕ್ತಿತ್ವವನ್ನು ಚಿತ್ರಿಸುವ ಭಾಗ ಗದ್ಯಕಾವ್ಯವಲ್ಲದೆ ಮತ್ತೇನು? ತಮ್ಮ ಗುರುಗಳಾದ ಶ್ರೀಯವರ ಪಾಂಡಿತ್ಯಕ್ಕೂ ವಾಗ್ಮಿತೆಗೂ ಆಚಾರ್ಯರು ಮಾರುಹೋಗಿದ್ದರು. ರೋಮಾಂಚನವನ್ನೂ ಸ್ಪೂರ್ತಿಯನ್ನೂ ನೀಡುತ್ತಿದ್ದ ಶ್ರೀಯವರ ಭಾಷಣಗಳು ಭಾಷಣಗಳಾಗಿರಲಿಲ್ಲ; ಕಾವ್ಯವಾಗುತ್ತಿದ್ದವು. ನವಿಲಿನ ನೃತ್ಯದಂತೆ ಅವು ಕೇಳುವವರ ಕಿವಿಗೆ ನೋಡುವವರ ಕಣ್ಣಿಗೆ ಬಣ್ಣ ಬಣ್ಣದ ರೂಪವನ್ನು ತಾಳಿ ಆಕರ್ಷಕವಾಗಿದ್ದವು. ಈ ಭಾವವನ್ನು ಅವರು ಸುಂದರವಾದ ಬಿಗಿಯಾದ ಒಂದು ಕಂದ, ಒಂದು ವೃತ್ತದಲ್ಲಿ ವಡ್ಡಾರಾಧನೆಯ ‘ಅರ್ಪಣೆ’ಯಲ್ಲಿ ಹಿಡಿದಿಟ್ಟಿದ್ದಾರೆ. ಅವರ ನಿರ್ಮಲವಾದ ಅವ್ಯಾಜವಾದ ಗುರುಭಕ್ತಿ ಈ ಪದ್ಯಗಳಲ್ಲಿ ಪ್ರತಿಫಲಿಸಿದೆ. ಅವುಗಳನ್ನು ಓದಿ ನಾನು ಏಕಸಂಧಿಗ್ರಾಹಿಯಾದೆ.

ಒಂದು ಕನ್ನಡ ಕಾವ್ಯವನ್ನು ಹಲವುಬಾರಿ ಓದಿ, ಮನನಮಾಡಿ ಅರ್ಥವನ್ನು ಪರಿಭಾವಿಸಿ ಆ ಬಳಿಕ ಅದನ್ನು ಉತ್ಸಾಹದಿಂದ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುವುದು ಆಚಾರ್ಯರ ಪದ್ಧತಿ. ಅವರ ಸಾಮಾನ್ಯ ತರಗತಿಗಳು ಹಿತಕರವಾಗುತ್ತಿರಲಿಲ್ಲ. ಪ್ರೌಢತರಗತಿಗಳು ಉದ್ಭೋಧಕವಾಗಿರುತ್ತಿದ್ದವು. ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಭಾಷೆಯ ಕ್ಲೇಶವಿಲ್ಲದೆ ಮೊದಲೇ ವಿದ್ಯಾರ್ಥಿಗಳು ಓದಿಕೊಂಡು ಬರುವ ಕನ್ನಡ ಕಾದಂಬರಿಗಳನ್ನು ವರ್ಷದ ಉದ್ದಕ್ಕೂ ಪಾಠ ಮಾಡುವುದು ಎಂಥ ಕ್ಲಿಷ್ಟಕರವಾದ ವಿಷಯವೆಂಬುದನ್ನು ಕನ್ನಡದ ಉಪಾಧ್ಯಾಯರೆಲ್ಲ ಬಲ್ಲರು. ಆದರೆ ಅದೇ ಪ್ರೌಢಕೃತಿಗಳ ಪಾಠದ ಮಾತು ಬೇರೆ. ಈ ವಿಷಯ ಹಾಗಿರಲಿ. ಆಚಾರ್ಯರ ಮಾತಿನ ಮೋಡಿಯ ವಿಷಯವನ್ನು ಕುರಿತು ಎರಡು ಮಾತು. ಆನರ್ಸ್ ತರಗತಿಗೆ ಅವರು ನಮಗೆ ಪಂಪಭಾರತವನ್ನು ಪಾಠ ಮಾಡಿದರು. ಒಮ್ಮೆ ಸುರಹೊನ್ನೆ ಹೂವಿನ ಮೇಲೆ ಪಂಪನು ರಚಿಸಿದ ಪದ್ಯವನ್ನು ಓದಿದಾಗ ಆ ಹೂವು ನಮ್ಮ ಕಣ್ಣ ಮುಂದೆ ಬಂದು ನಿಂತಂತಾಯಿತು. ಹಾಗೆಯೇ ಶಿಶುಪಾಲವಧೆ, ದ್ಯೂತಪ್ರಕರಣ, ಇಂದ್ರಕೀಲ ಪ್ರಕರಣಗಳು ಸಹ. ಒಮ್ಮೆ ಬನುಮಯ್ಯನವರ ಹೈಸ್ಕೂಲಿನಲ್ಲಿ ಪಂಚ ಸಹಸ್ರ ವಾರ್ಷಿಕ ಸಂದರ್ಭದಲ್ಲಿ ಪಂಪಭಾರತದ ಮೇಲೆ ಅವರು ಎರಡೂವರೆ ಗಂಟೆಗಳ ಕಾಲ ಮಾಡಿದ ಭಾಷಣ ಅದ್ಭುತವಾಗಿತ್ತು. ಕೃಷ್ಣಸಂಧಾನ ಸಂದರ್ಭದಲ್ಲಿ ಕರ್ಣನ ಮನಸ್ಸಿನಲ್ಲಾದ ಹೋರಾಟವನ್ನೂ, ದುಶ್ಯಾಸನ ವಧೆಯ ಸಂದರ್ಭದಲ್ಲಿ ಭೀಮನ ಕೋಪದ ತೀವ್ರತೆಯನ್ನು ಅವರು ಉಜ್ವಲವಾಗಿ ವರ್ಣಿಸಿದರು. ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ ಶ್ರೀಯವರು ಪಂಪಭಾರತದ ಮೇಲೆ ಮಾಡಿದ ಅಮೋಘವಾದ ಭಾಷಣ, ಆಚಾರ್ಯರ ಈ ಭಾಷಣಗಳ ಹೊರತಾಗಿ ಪಂಪನ ಮೇಲೆ ಪರಿಣಾಮಕಾರಿಯಾದ ಪ್ರಭಾವಶಾಲಿಯಾದ ಭಾಷಣಗಳನ್ನು ಇದುವರೆಗೆ ನಾನು ಎಲ್ಲಿಯೂ ಕೇಳಿಲ್ಲ.

ಮೇಲೆ ನಿರೂಪಿಸಿದ್ದೆಲ್ಲ ಆಚಾರ್ಯರ ಪಾಂಡಿತ್ಯಕ್ಕೆ ವಾಗ್ಮಿತೆಗೆ ಸಂಬಂಧಿಸಿದ ಮಾತಾಯಿತು. ಈ ಅಂಶವನ್ನೇ ವಿವರಿಸುತ್ತ ಹೋದರೆ, ಸಂಬಂಧಪಟ್ಟ ಎಷ್ಟೋ ವಿಷಯಗಳು ನೆನಪಿಗೆ ಬಂದು, ಹೇಳಲು ಹೊರಟ ಪ್ರಕರಣಕ್ಕೆ ನಿಲುಗಡೆಯೇ ಇಲ್ಲದಂತಾಗುತ್ತದೆ. ಈ ವಿಷಯಕ್ಕೆ ಬದಲಾಗಿ ವೈಯಕ್ತಿಕವಾದ ಒಂದೆರಡು ಅಂಶಗಳನ್ನು ನಿರೂಪಿಸುತ್ತೇನೆ. ಈ ಶತಮಾನದ ನಾಲ್ಕನೆಯ ದಶಕ ನನಗೆ ತಿಳಿದಂತೆ ಆಚಾರ್ಯರ ಬದುಕಿನಲ್ಲಿ ಸುಖದ ದಿನಗಳಾಗಿದ್ದವೆಂದು ಹೇಳಬಹುದು. ಯೌವ್ವನ, ಮನಸ್ಸಿಗೊಪ್ಪಿದ ಕೆಲಸ, ಹಾಗೂ ಆವರಣ, ಆತ್ಮೀಯರಾದ ಗೆಳೆಯರು ಇವುಗಳಿಂದ ಅವರು ಸುಖ ಸಂತೋಷಗಳಲ್ಲಿ ತೇಲುತ್ತಿದ್ದರು. “ನನಗೆ ಬರುವ ಸಂಬಳ ಸಾಕಾಗಿ, ಒಮ್ಮೊಮ್ಮೆ ವೆಂಕಣ್ಣಯ್ಯನವರಿಗೂ ಸಾಲ ಕೊಡುವಷ್ಟು ಹಣ ಮಿಗುತ್ತಿತ್ತು’ ಎಂದು ಅವರು ನನ್ನೊಡನೆ ಹೇಳಿದ್ದುಂಟು. ನಾನು ಮಹಾರಾಜರವರ ಕಾಲೇಜಿಗೆ ಸೇರಿದ ಹೊಸದು. ಆಚಾರ್ಯರಿಗೆ ಸೈಕಲ್ ಸವಾರಿ ಕಲಿಸಲು ನಾನೂ ನನ್ನ ಒಬ್ಬ ಸ್ನೇಹಿತರೂ ಶಾರದಾ ವಿಲಾಸ ಹೈಸ್ಕೂಲಿನ ಮೈದಾನದಲ್ಲಿ ತುಂಬ ಯತ್ನಿಸಿದೆವು. ಸ್ಥೂಲದೇಹಿಗಳಾಗಿದ್ದ ಅವರನ್ನು ಸೈಕಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಮಾಡುವುದೇ ನಮಗೊಂದು ವಿನೋದವಾಗಿತ್ತು. ಕೃಷ್ಣಮೂರ್ತಿಪುರದ ಬೀದಿಗಳಲ್ಲಿ ಅವರು ಸೈಕಲ್ಲನ್ನು ಬಿಟ್ಟಾಗ ನಮಗೆ ಆನಂದವೋ ಆನಂದ! ಈ ಗುರುಶಿಷ್ಯ ಬಾಂಧವ್ಯದ ನೆನಪಿಗಾಗಿ ಅವರೂ ನನಗೂ ಪರಮೇಶ್ವರಭಟ್ಟರಿಗೂ ಒಂದು ಸೊಗಸಾದ ಊಟವನ್ನು ಹಾಕಿದರು. ಪಂಚೆಯುಟ್ಟು ಟೈ ಕಟ್ಟಿಕೊಂಡು ಬರುತ್ತಿದ್ದ ಇವರನ್ನು ವಿದ್ಯಾರ್ಥಿಗಳು ಟೈ ಪಂಡಿತರೆಂದು ಹಾಸ್ಯ ಮಾಡುತ್ತಿದ್ದರು. ಇದನ್ನು ಇವರ ಗಮನಕ್ಕೆ ತಂದಾಗ ಮುಗುಳು ನಗೆಯೊಂದು ಅವರ ಮುಖದ ಮೇಲೆ ಮಿಂಚಿ ಮಾಯವಾಗುತ್ತಿತ್ತು. ಆಚಾರ್ಯರಿಗೆ ಮಸಾಲೆ ದೋಸೆಗಳನ್ನು ತಿಂದು ಸುಖಿಸುವುದು, ಟೆನ್ನಿಸ್ ಆಡುವುದು ಪ್ರಿಯವೆನಿಸಿದ್ದವು.

ನಮಗೆ ಮುಪ್ಪು, ಸಂಸಾರಕ್ಕೆ ಯೌವನ ಎಂಬ ಮಾತು ನಮ್ಮ ಗುರುಗಳ ವಿಷಯದಲ್ಲಿ ನಿಜವೆನಿಸಿತು. ದಿನ ಕಳೆದಂತೆ ವರ್ಷಗಳು ಉರುಳಿದಂತೆ ಅಧಿಕಾರದಲ್ಲಿ ಕ್ಲೇಶ, ಸಂಸಾರದಲ್ಲಿ ತೊಂದರೆಗಳು ಕಾಣಿಸಿಕೊಂಡವು. ಆಚಾರ್ಯರ ಕೊನೆಯ ವರ್ಷಗಳಲ್ಲಿ ಆಪ್ತ ಮಿತ್ರರು ಕಳಚಿಕೊಂಡುದರ ಜೊತೆಗೆ ಇತರ ಅತಿಬಾಧೆಗಳು ಅವರನ್ನು ಸುತ್ತುವರಿದವು. ಇವುಗಳಿಂದ ಅವರೇನೂ ಅಧೀರರಾಗಲಿಲ್ಲ. ತಮ್ಮ ಅಖಂಡವಾದ ವ್ಯಾಸಂಗವನ್ನಾಗಲೀ ಪ್ರವಚನವನ್ನಾಗಲೀ ಅವರು ಎಂದೂ ಕೈಬಿಡಲಿಲ್ಲ. ತರಗತಿಗಳಿಗೆ ಆಚಾರ್ಯರು ಎಂದೂ ತಡವಾಗಿ ಬಂದಿದ್ದಿಲ್ಲ. ಅವರ ಪಾಠವೆಂದರೆ ಗಂಟೆಗೆ ಅರವತ್ತು ನಿಮಿಷ.

ಆಚಾರ್ಯರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋತ್ಸಾಹ ದೊರಕುತ್ತಿತ್ತು. ನನ್ನ ವಿಷಯವನ್ನೇ ಹೇಳುವುದಾದರೆ ‘ಆತ್ಮಾರಾಮದಾಸ’ ಎಂಬ ಹೊಸ ಕವಿಯನ್ನು ಕುರಿತು ಪರಿಷತ್ಪತ್ರಿಕೆಯಲ್ಲಿ ನಾನು ನಾನು ಲೇಖನವೊಂದನ್ನು ಬರೆದಾಗ, ಅದನ್ನು ಓದಿದ ಗುರುಗಳು ‘ಸರಿಯಾದ ದಾರಿಯಲ್ಲಿ ಹೋಗಿದ್ದೀಯೆ’ ಎಂದು ಬೆನ್ನು ತಟ್ಟಿದ್ದರು. ೧೯೪೧ರಲ್ಲಿ ಪಂಪಭಾರತದ ಹದಿಮೂರನೆಯ ಆಶ್ವಾಸಕ್ಕೆ ನಾನು ಬರೆದ ಟೀಕೆಯನ್ನು ಸರಿನೋಡಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಕಾವ್ಯಪಠ ಮಾಡುವಾಗ ಅಡ್ಡಗಟ್ಟುವ ಕ್ಲಿಷ್ಟ ಪದಗಳಿಗೆ ನಮಗಂತೂ ಆಚಾರ್ಯರೇ ಶರಣು; ಅನ್ಯಥಾ ಶರಣಂನಾಸ್ತಿ. ಅವರ ಮನೆಗೆ ಹೋದವರಿಗೆ ಎಲ್ಲ ಕಾಲಗಳಲ್ಲಿಯೂ ಕಾಫಿ ಸಿದ್ಧವಾಗಿರುತ್ತಿದ್ದಿತೆಂಬುದು ಎಲ್ಲರಿಗೂ ತಿಳಿದ ವಿಷಯ. ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕೆಲಸ ಸಿಗದೆ ಇನ್ನಾವುದೋ ಕ್ಲೇಶದಲ್ಲಿದ್ದಾಗ, ನನ್ನ ಮಡದಿ ತೀರಿಕೊಂಡಾಗ ಅವರು ಹೇಳಿದ ಧೈರ್ಯ; ನನ್ನ ಮನೆಯ ಸಮಸ್ಯೆಗಳನ್ನು ಬಿಡಸಲು ಅವರು ತೋರಿಸಿದ ಸಹಾನುಭೂತಿ, ಮಾಡಿದ ಸಹಾಯಗಳನ್ನು ನಾನು ಎಂದೂ ಮರೆಯಲಾರೆ. ಆಚಾರ್ಯರ ಒಂದು ದೊಡ್ಡ ಗುಣ, ಅವರು ನಮಗಿಂತ ಹಿರಿಯರೂ ವಿದ್ವಾಂಸರೂ ಆಗಿದ್ದರೂ ಹಸುಮಗುವಿನಂತೆ ಯಾವ ಆಡಂಬರವೂ ಇಲ್ಲದೆ ಮನೆಯವರೆಗೆ ಬಂದು ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗುತ್ತಿದ್ದುದು. ಈ ಅಂಶವನ್ನು ಎಷ್ಟು ಹೊಗಳಿದರೂ ಅಲ್ಪವೇ!

ಮೇ ತಿಂಗಳು ಎರಡನೆಯ ತಾರೀಖು ನಾನು ಬೆಂಗಳೂರಿನಿಂದ ಸಂಜೆ ಹಿಂದುರಿಗಿದಾಗ ನನ್ನ ಹಿರಿಯ ಮಗ ‘ನರಸಿಂಹಾಚಾರ್ಯರಿಗೆ ಮತ್ತೆ ಹೃದಯಾಘಾತವಾಗಿದೆ. ಅವರು ಅಪಾಯದ ಅಂಚಿನಲ್ಲಿದ್ದಾರೆ’ ಎಂದು ತಿಳಿಸಿದಾಗ ನನ್ನ ಮನಸ್ಸು ಅಳುಕಿತು. ಮೂರನೆಯ ದಿನ ಅವರನ್ನು ದರ್ಶನ ಮಾಡಿದಾಗ ಅವರು ತಮ್ಮ ಹಿರಿಯ ಮಗಳಿಗೆ ನನಗೆ ಕಾಫಿ ಕೊಡುವಂತೆ ಅಸ್ಪಷ್ಟವಾಗಿ ನುಡಿದರು. ಅದೇ ನಾನು ಕೇಳಿದ ಅವರ ಕಡೆಯ ಮಾತು. ಶನಿವಾರ ಬೆಳಿಗ್ಗೆ ಏಳುವುದಕ್ಕೆ ಮುನ್ನ ಕಳೆದ ರಾತ್ರಿ ಅವರು ನಿಧನರಾದ ವಾರ್ತೆ ಬರಸಿಡಿಲಿನಂತೆ ಎರಗಿ ನನ್ನನ್ನು ಶೋಕತಪ್ತನನ್ನಾಗಿ ಮಾಡಿತು. ಮುವ್ವತ್ತೇಳು ವರ್ಷಗಳ ಕಾಲ ಅವರೊಡನೆ ಬೆಳೆದುಬಂದ ಸಂಬಂಧಕ್ಕೆ ಪೂರ್ಣ ವಿರಾಮ ದೊರಕಿತು. ಅಂದು ಅವರ ಅಂತ್ಯ ದರ್ಶನ ಪಡೆದು, ‘ಸ್ಮಶಾನೇ ಮಿತ್ರ ಬಾಂಧವಾಃ’ ಎಂಬ ಲೋಕೋಕ್ತಿಯಂತೆ, ಸ್ಮಶಾನದವರೆಗೂ ನಡೆದು ಅಲ್ಲಿ ಅವರನ್ನು ಬೀಳ್ಕೊಟ್ಟದ್ದಾಯಿತು. ಮುವತ್ತೆರಡು ವರ್ಷಗಳ ಹಿಂದೆ ಯಾವ ಸ್ಥಳದಲ್ಲಿ ವೆಂಕಣ್ಣಯ್ಯನವರ ದೇಹ ಪಂಚಭೂತಗಳನ್ನು ಸೇರಿತೋ, ಅದೇ ಸ್ಥಳದಲ್ಲಿ ಆಚಾರ್ಯರ ದೇಹ ಪಂಚಭೂತಗಳನ್ನು ಸೇರಿ, ಹಿಡಿ ಬೂದಿಯಾಯಿತು. ದೈವಸಂಕಲ್ಪಕ್ಕೆ ಇದಿರುಂಟೇ ‘ಕಾಲಾಯ ತಸ್ಮೈನಮಃ’.

ಐವತ್ತು ವರ್ಷಗಳ ಕಾಲ ಕನ್ನಡದಲ್ಲಿ ಪಾಂಡಿತ್ಯ ಸಂವರ್ಧನೆಗೆ ಆಚಾರ್ಯರು ನಿರಂತರ ಶ್ರಮಿಸಿದರು. ಅವರು ಕನ್ನಡದ ಅಧ್ಯಯನವನ್ನು ಒಲಿದಾಗ ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ಕಾಲ; ಪ್ರೋತ್ಸಾಹವಿಲ್ಲದಿದ್ದ ಕಾಲ; ವಿಜ್ಞಾನವನ್ನು ಅವರು ಒಲಿದಿದ್ದರೆ ಅನುಕೂಲ ಒದಗಬಹುದಾಗಿದ್ದ ಕಾಲ. ಆದರೆ ಅವರು ವಿಜ್ಞಾನವನ್ನು ಒಲಿಯದೆ ಕನ್ನಡವನ್ನು ಒಲಿದಿದ್ದು ನಮ್ಮ ಪುಣ್ಯ. ಅವರ ಪಾಠಪ್ರವಚನಗಳಿಂದ ಸಂಶೋಧನೆಗಳಿಂದ ನೂರಾರು ಜನ ವಿದ್ಯಾರ್ಥಿಗಳೂ ವಿದ್ವಾಂಸರೂ ಉಪಕೃತರಾಗಿದ್ದಾರೆ. ಅವರು ಇನ್ನೂ ಬರೆಯಬೇಕಾಗಿತ್ತು. ಕನ್ನಡ ನಿಘಂಟಿಗೆ ಅವರ ಸೇವೆ ಇನ್ನೂ ದೊರಕಬೇಕಾಗಿತ್ತು ಎಂಬ ಆ ಭಾವನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಈ ಭಾವನೆಗಳಿಗೆ ನಿಲುಗಡೆ ಎಲ್ಲಿ? ‘ದೈವದ ಮುಂದೆನಾವಲ್ತು’ ಎಂಬ ಮಾತೇ ನಮಗೆ ಉಳಿದಿರುವ ಸಮಾಧಾನ. ಇಷ್ಟಕ್ಕೂ ಆಚಾರ್ಯರ ವಿದ್ವತ್ತು ನಷ್ಟವಾಗಿಲ್ಲವೆಂದೇ ನನ್ನ ಭಾವನೆ. ಆ ವಿದ್ವತ್ತು ಅವರ ಪರಿಷ್ಕೃತ ‘ಪೀಠಿಕೆಗಳು ಮತ್ತು ಲೇಖನಗಳು’ ಎಂಬ ಬರವಣಿಗೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಂಚಿಹೋಗಿದೆ. ತಮ್ಮ ಕೆಲಸವನ್ನು ಮುಂದುವರಿಸಲು ಸುಸಮರ್ಥರಾದ ಶಿಷ್ಯರನ್ನು ಅವರು ನಿರ್ಮಿಸಿದ್ದಾರೆ. ಕನ್ನಡದ ಕೆಲಸವನ್ನು ಮಾಡುವ ಮುನ್ನ ಆಚಾರ್ಯರ ಮುಗುಳು ನಗೆಯಿಂದ ಕೂಡಿದ ದುಂಡುಮುಖ ವಿದ್ಯಾರ್ಥಿ ಮಿಗಿಲಾದ ಕೀರ್ತಿಯನ್ನು ಯಾವ ಪ್ರಾಧ್ಯಾಪಕನು ತಾನೆ ಬಯಸುತ್ತಾನೆ? ಕಸ್ತೂರಿ ಕರಗಿಹೋಯಿತು; ನಿಜ. ಆದರೆ ಅದರ ಪರಿಮಳ ಮಾಯವಾದಂತಾಗಲಿಲ್ಲವಷ್ಟೆ!

* ಕನ್ನಡನುಡಿ (ಸಂ. ೩, ಅ.ಸಂ. ೧೫, ೧೬) ಪು. ೧೩