“ಡಿ.ಎಲ್.ಎನ್.” ಅವರ ಪ್ರಥಮ ಪರಿಚಯ ನನಗಾದದ್ದು ೧೯೩೮ರಲ್ಲಿ. ಅದಕ್ಕೆ ನನಗೆ ಅವಕಾಶವನ್ನು ಒದಗಿಸಿಕೊಟ್ಟವರು ಪೂಜ್ಯರಾದ ದಿವಂಗತ ಟಿ.ಎಸ್.ವೆಂಕಣ್ಣಯ್ಯನವರು. ವೈದ್ಯರ ಸಲಹೆಯ ಮೇಲೆ ಹವಾ ಬದಲಾವಣೆಗಾಗಿ ನೀಲಗಿರಿಗೆ ವೆಂಕಣ್ಣಯ್ಯನವರು ಬರಬೇಕಾಯಿತು. ಆಗ (೧೯೩೮ರ ಏಪ್ರಿಲ್ ತಿಂಗಳು) ನಾನು ನೀಲಗಿರಿಯಲ್ಲೇ ನೌಕರಿಯಲ್ಲಿದ್ದುದರಿಂದ ನಮ್ಮ ಮನೆಯಲ್ಲೇ ಅವರು ಸುಮಾರು ಒಂದು ತಿಂಗಳು ಇದ್ದರು. ಅವರು ಅಲ್ಲಿದ್ದಾಗ ಅನೇಕ ವೇಳೆ ಡಿ.ಎಲ್.ಎನ್. ಅವರ ಗಾಢ ಪರಿಶ್ರಮವನ್ನೂ, ವಿದ್ವತ್ತನ್ನೂ ಪ್ರಶಂಸಿಸುತ್ತಿದ್ದರು. “ಇವರು ನಿಮಗೆ ಗೊತ್ತಿದೆಯೇ” ಎಂದು ನನ್ನನ್ನು ಕೇಳಿದ್ದಕ್ಕೆ “ಇಲ್ಲ, ಸಾರ್” ಎಂದು ನಾನು ಹೇಳಿದೆ. ಇದಾದ ಕೆಲವು ತಿಂಗಳಲ್ಲಿ ನಾನು ಮೈಸೂರಿಗೆ ಹೋಗಬೇಕಾದ ಸಂದರ್ಭ ಒದಗಿತು. ವೆಂಕಣ್ಣಯ್ಯನವರ ಮನೆಯಲ್ಲೇ ಎರಡು ದಿನ ಇಳಿದುಕೊಂಡಿದ್ದೆ. ಆಗ ಶ್ರೀ ಡಿ.ಎಲ್.ಎನ್., ಶ್ರೀ ತೀ.ನಂ.ಶ್ರೀಕಂಠಯ್ಯನವರು ಮೊದಲಾದ ಅವರ ಸಹೋದ್ಯೋಗಿಗಳ ಪರಿಚಯವನ್ನು ನನಗೆ ಮಾಡಿಕೊಡುವ ಉದ್ದೇಶದಿಂದಲೇ ಅವರು ತಮ್ಮ ಮನೆಯಲ್ಲಿ ಒಂದು ಚಿಕ್ಕ ಭೋಜನ ಕೂಟವನ್ನು ಏರ್ಪಡಿಸಿ ನರಸಿಂಹಾಚಾರ್ಯರನ್ನು ಗುರುತುಮಾಡಿಕೊಟ್ಟರು. ಅಲ್ಲಿಂದ ಮುಂದೆ ನಾನು ಮೈಸೂರು ಮಾರ್ಗವಾಗಿ ಯಾವಾಗ ಪ್ರಯಾಣ ಮಾಡಿದರೂ ಡಿ.ಎಲ್.ಎನ್. ಅವರನ್ನು ನೋಡದೇ ಹೋಗುತ್ತಿರಲಿಲ್ಲ. ಆಗ ಅವರೇ ರೈಲ್ವೇ ಸ್ಟೇಷನ್ನಿಗೆ ಬಂದು ರೈರು ಹೊರಡುವವರೆಗೂ ನನ್ನ ಜೊತೆಯಲ್ಲೆ ಇದ್ದು ಅವರ ಪ್ರೀತಿಯ ಗುರುತಾಗಿ ಒಂದು ಚಿಪ್ಪು ನಂಜನಗೂಡು ರಸಬಾಲೆಯ ಹಣ್ಣನ್ನು ತಂದು ಕೊಟ್ಟರು. ಇವರೊಡನೆ ಕನ್ನಡ ಭಾಷೆ ಮತ್ತು ಶಾಸನ ಸಂಶೋಧನೆಗೆ ಸಂಬಂಧಪಟ್ಟ ಪತ್ರವ್ಯವಹಾರವನ್ನು ನಾನು ಇಟ್ಟುಕೊಂಡೇ ಇದ್ದೆ. ನಾವಿಬ್ಬರೂ ಮಾತುಕಥೆಯಾಡುವಾಗಲೆಲ್ಲಾ ಯಾವುದಾದರೂ ಒಂದು ಸಂಶೋಧನಾತ್ಮಕವಾದ ವಿಷಯವನ್ನು ಚರ್ಚಿಸುತ್ತಿದ್ದೇವೆ ಹೊರತು ಒಂದು ಕ್ಷಣವೂ ಕಾಡುಹರಟೆಯಲ್ಲಿ ಕಾಲಕಳೆಯುತ್ತಿರಲಿಲ್ಲ.

೧೯೫೨ರಲ್ಲಿ ಅಂದಿನ ಅವರು ನನ್ನ ಆಹ್ವಾನವನ್ನು ಮನ್ನಿಸಿ ನೀಲಗಿರಿಗೆ ಬಂದ ನಮ್ಮ ಮನೆಯಲ್ಲಿ ಐದು ಆರು ದಿನಗಳಿದ್ದರು. ಈ ಸಮಯದಲ್ಲಿ ಆಗತಾನೇ ನಾನು ಪಡಿಯಚ್ಚು ಮಾಡಿಕೊಂಡು ಬಂದಿದ್ದ ಹತ್ತನೆಯ ಶತಮಾನದ ಒಂದು ಕನ್ನಡ ಶಾಸನವನ್ನು ಪರೀಕ್ಷಿಸುತ್ತಿದ್ದೆ. ಅದರ ಪಾಠವನ್ನು ಅವರ ಕೈಗೆ ಕೊಟ್ಟು ಅದರಲ್ಲಿ ಉತ್ಸಾಹವೆಂಬ ಛಂದಸ್ಸಿನಲ್ಲಿ ರಚಿತವಾದ ಪದ್ಯವೊಂದನ್ನು ಅವರಿಗೆ ತೋರಿಸಿ, ಈ ಛಂದಸ್ಸಿನ ವಿಷಯದಲ್ಲಿ ಅವರಿಗೆ ಗೊತ್ತಿರುವ ಅಂಶಗಳನೆಲ್ಲಾ ನನಗೆ ತಿಳಿಸಬೇಕೆಂದು ಕೇಳಿಕೊಂಡೆ. ಆಗ ಅವರು ಸಂಪೂರ್ಣವಾಗಿ ಶಾಸನ ಪಾಠವನ್ನು ಪರಿಶೀಲಿಸಿ ಇದು ಅನೇಕ ದೃಷ್ಟಿಗಳಿಂದ ಬಹು ಮಹತ್ವವಾದ ಶಾಸನವೆಂದೂ ಆದಷ್ಟು ಬೇಗ ಅದನ್ನು ಪ್ರಕಟಿಸಬೇಕೆಂದೂ ಹೇಳಿದರು. ಈ ಕೆಲಸವನ್ನು ಅವರೇ ಒಪ್ಪಿಕೊಂಡರೆ ಬಹಳ ಚೆನ್ನಾಗಿರುವುದೆಂದು ನಾನು ಸೂಚಿಸಿದೆ. ಅದಕ್ಕೆ ಅವರು ಸಮ್ಮತಿಯನ್ನು ಕೊಟ್ಟರೂ ಆ ಶಾಸನದ ಮೇಲಿನ ಲೇಖನವು ನಮ್ಮಿಬ್ಬರ ಹೆಸರಿನಲ್ಲಿ ಇರಬೇಕೆಂದು ಅಭಿಪ್ರಾಯಪಟ್ಟರು. ಹಾಗಾದರೆ ಅವರ ಹೆಸರೇ ಮೊದಲನೆಯದಾಗಿರಬೇಕೆಂದು ಸಲಹೆಕೊಟ್ಟೆ. ಆದರೆ ಇದಕ್ಕೆ ಅವರು ಒಪ್ಪದೆ ನನ್ನ ಹೆಸೆರೇ ಮೊದಲು ಇರಬೇಕೆಂದು ಒತ್ತಾಯಿಸಿದರು. ನನ್ನ ಮೇಲೆ ಅವರಿಗಿದ್ದ ಪ್ರೀತಿ ಗೌರವಗಳಿಗೆ ಒಂದೇ ಒಂದು ನಿದರ್ಶನ. Epigraphia Incica (Vol. XXIX- pages 203-209)ದಲ್ಲಿ ಪ್ರಕಟವಾಗಿರುವ ಈ ಲೇಖನದ ಪೀಠಿಕೆಯು ಅವರ ಅಸಾಮಾನ್ಯ ಪಾಂಡಿತ್ಯವನ್ನು ವ್ಯಕ್ತಪಡಿಸುತ್ತದೆ. ನರಸಿಂಹಾಚಾರ್ಯರಿಗೆ ಇದ್ದಷ್ಟು ಶಾಸನ ಪರಿಚಯ ಮತ್ತಾವ ಕನ್ನಡ ವಿದ್ವಾಂಸರಿಗೂ ಇಲ್ಲವೆಂದೇ ನನ್ನ ಖಚಿತವಾದ ಅಭಿಪ್ರಾಯ. ಉಳಿದ ವಿಷಯಗಳಲ್ಲಿ ಅವರ ಬುದ್ಧಿ ಕೌಶಲವನ್ನೂ ಪಾಂಡಿತ್ಯವನ್ನೂ ಶ್ಲಾಘಿಸಲು ನನಗೆ ಅರ್ಹತೆ ಇಲ್ಲ. ಆದರೆ ಕೆಲವು ವಿಷಯಗಳನ್ನು ನಾವು ಚರ್ಚಿಸುತ್ತಿದ್ದಾಗ ಇವರ ಪ್ರತಿಭೆಯನ್ನೂ, ಇವರ ವಾದದ ಶೈಲಿಯನ್ನೂ, ಇವರ ಅಪರಿಮಿತವಾದ ಭಾಷಾ ಜ್ಞಾನವನ್ನೂ, ಇವರ ಆಡಂಬರವಿಲ್ಲದ ಪ್ರಾವೀಣ್ಯವನ್ನೂ ಕಂಡು ಎಷ್ಟೋ ಸಲ ಚಕಿತನಾಗಿದ್ದೇನೆ.

ಈ ವರ್ಷ (೧೯೭೧) ಕನ್ನಡ ನಿಘಂಟುವಿನ ಕೆಲಸಕ್ಕಾಗಿ ಮೈಸೂರಿಗೆ ಏಪ್ರಿಲ್ ತಿಂಗಳಲ್ಲಿ ಹೋಗಿದ್ದಾಗ ಇವರನ್ನು ಕೊನೆಯ ಬಾರಿಗೆ ಕಂಡದ್ದು ೧೬ನೆಯ ತಾರೀಖು. ಈ ಸಲ ಅನೇಕ ಕಾರಣಗಳಿಂದ ಅವರ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಅವರ ಮನೆಯ ಬಳಿ ಮೈಸೂರು ವಿಶ್ವವಿದ್ಯಾನಿಲಯದ Van ಇಂದ ಅವತ್ತು ಅವರು ಇಳಿದಾಗ “ಈ ಸಲ ನಮ್ಮ ಮನೆಗೆ ಬರಲೇ ಇಲ್ಲವಲ್ಲ, ಸಾರ್” ಎಂದು ಪೇಚಾಡಿದರು. “ಕ್ಷಮಿಸಿ, ಮುಂದಿನ ಸಲ ಖಂಡಿತ ತಪ್ಪುವುದಿಲ್ಲ”, ಎಂದು ಹೇಳಿದೆ. ಆದರೆ ಆ ಪುಣ್ಯ ನನಗೆ ಲಭಿಸಲಿಲ್ಲ!

* ಕನ್ನಡನುಡಿ ಸಂ. ೩೬ (ಸಂ. ೧೫, ೧೬) ಪು.೩