ಈಚಿನ ಎಂಟುಹತ್ತು ವರ್ಷಗಳಲ್ಲಿ ಆಚಾರ್ಯ ಡಿ.ಎಲ್‌.ಎನ್‌. ಅವರನ್ನು ಬಹು ಹತ್ತಿರದಿಂದ ಆತ್ಮೀಯವಾಗಿ ಅರಿಯುವ ಪುಣ್ಯ ವಿಶೇಷ ನನ್ನದಾಗಿತ್ತು.

ಆಚಾರ್ಯರು ಶಿಷ್ಯವತ್ಸಲರು, ಸಾಹಿತ್ಯ ಸಂಶೋಧನೆಯಲ್ಲಿ ಪಾಲುಗೊಂಡು ತಮ್ಮ ಜ್ಞಾನ ಸಂಪತ್ತನ್ನು ಮುಕ್ತ ಮನಸ್ಸಿನಿಂದ ವಿನಿಮಯ ಮಾಡಿಕೊಳ್ಳುತ್ತಿದ್ದ ಸಹೃದಯ ವಿದ್ವನ್ಮಣಿಗಳು. ನನ್ನಂಥ ಕಿರಿಯರಲ್ಲಿ ಅವರು ತೋರುತ್ತಿದ್ದ ಅಭಿಮಾನ ಆದರ ಪ್ರೀತಿ ವಿಶ್ವಾಸಗಳಿಗಂತೂ ಎಣೆಯಿಲ್ಲ.

ವಾರ ಎರಡು ವಾರಗಳಿಗೊಮ್ಮೆಯಾದರು ನಾನು ಆಚಾರ್ಯರನ್ನು ಭೇಟಿಮಾಡಿ ಗಂಟೆಗಟ್ಟಲೆ ಅನೇಕ ಸಾಹಿತ್ಯಕ ವಿಚಾರಗಳನ್ನು ಕುರಿತು ಅವರ ಅಮೂಲ್ಯ ವಿಚಾರಧಾರೆಯನ್ನರಿತು ಬೆಳಕು ಕಂಡಿದ್ದೇನೆ.

ನನಗೆ ಪ್ರಿಯವಾದ ಸೌಂದರ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆಗಳನ್ನು ಕುರಿತು ಎಷ್ಟೋ ಬಾರಿ ಆಚಾರ್ಯರೊಡನೆ ನಾನು ಮಾತನಾಡುತ್ತಿದ್ದುದುಂಟು. ಒಮ್ಮೆ ಅವರು, “ಈ ಸೌಂದರ್ಯ ಮೀಮಾಂಸೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದೇ ಇಲ್ಲವಯ್ಯ. ಅದೆಲ್ಲ ನಮ್ಮ ಶ್ರೀಕಂಠಯ್ಯ ಹನುಮಂತರಾಯರಿಗೇ ಸರಿ. ನನಗೆ ವಿಷಯ ಒಂದು ರೀತಿಯಲ್ಲಿ ಕಡ್ಡಿ ಮುರಿದಂತೆ ಇತ್ಯರ್ಥವಾಗಿ ಬಿಡಬೇಕು. ಬಗೆಹರಿಯದ ಸೌಂದರ್ಯ ಮೀಮಾಂಸೆಯ ಜಿಜ್ಞಾಸೆ ನನಗೆ ಹಿಡಿಯುವುದಿಲ್ಲ” ಎಂದರು.

ನಾನು ಪಟ್ಟುಹಿಡಿದು ನನ್ನ ವಯಸ್ಸಿನಲ್ಲಿನ ಕೆಲವು ವಿಚಾರಗಳನ್ನು ಆಚಾರ್ಯರ ಮುಂದಿಟ್ಟೆ.

“ಸೃಷ್ಟ್ಯಾತ್ಮಕ ಸಾಹಿತ್ಯ ವಾಸ್ತವಿಕವಾಗಿರಬೇಕೆಂದು ಹೇಳುವುದು ರೂಢಿಯಾಗಿ ಬಿಟ್ಟಿದೆ. ಆದರೆ ವಾಸ್ತವಿಕತೆ ಕಣ್ಣಿಗೆ, ಮೇಲು ನೋಟಕ್ಕೆ ಕಾಣುವಂಥದಲ್ಲ; ತಲೆಮರೆಸಿಕೊಂಡು ಬಗೆಬಗೆಯ ತೋರ್ಕೆಯ ಸ್ವರೂಪ ತಳೆದು ಕಣ್ಣಿಗೆ ಮಂಕುಬೂದಿ ಎರಚುವಂಥದು. ಕಣ್ಣಿಗೆ ಕಾಣುವ ತೋರ್ಕೆಯ ಸತ್ಯವನ್ನು ಐತಿಹಾಸಿಕವಾಗಿ, ತಾರ್ಕಿಕವಾಗಿ ವಿಶ್ಲೇಷಿಸಿ ಮೂಲಭೂತ ಸತ್ಯದರ್ಶನ ಮಾಡುವಂಥ ಲೋಕದೃಷ್ಟಿ ಇದ್ದರೆ ತಾನೆ ವಾಸ್ತವಿಕ ಸಾಹಿತ್ಯ ಸೃಷ್ಟಿಯಾದೀತು? ಒಂದು ಕಾಲಕ್ಕೆ ಜೀವನಕ್ರಮ ಸರಳವಾಗಿ ನೇರವಾಗಿತ್ತು. ವ್ಯಕ್ತಿ ವ್ಯಕ್ತಿಯ ನಡುವೆ ಸಮಾಜ ವ್ಯವಸ್ಥೆಯಲ್ಲಿ ನೇರವಾಗಿ ಮಾನವೀಯ ಸಂಬಂಧವಿತ್ತು. ಒಳಿತು-ಕೆಡಕು, ಧರ್ಮ-ಕರ್ಮ ಇವುಗಳ ಸಮನ್ವಯ ಜೀವನದಲ್ಲಿ ನೇರವಾಗಿ ಏರ್ಪಟ್ಟಿತ್ತು. ಯಂತ್ರಯುಗಕ್ಕೆ ಬಹುಹಿಂದೆ ಇದ್ದ ಈ ವ್ಯವಸ್ಥೆಯಲ್ಲಿ ಮಾನವನು ನೀತಿಯ ಪ್ರಶ್ನೆಯನ್ನು ಸಹಜವಾಗಿಯೇ ಬಿಡಿಸಬಲ್ಲವನಾಗಿದ್ದ. ಸಾಮೂಹಿಕ ಭಾವನೆಗಳು ಸಹಜವಾಗಿಯೆ ಪ್ರಚಲಿತಗೊಳ್ಳುವಂಥ ಸನ್ನಿವೇಶ ಆಗ ಸಾಧ್ಯವಿತ್ತು. ಇಂಥ ಐತಿಹಾಸಿಕ ಹಿನ್ನೆಲೆಯಲ್ಲಿ ಮಹಾಕಾವ್ಯ ಸೃಷ್ಟಿಯಾಯಿತು. ಉದಾತ್ತ ಭವ್ಯಜೀವನದ ಅಭಿವ್ಯಕ್ತಿ ಭಾವಪ್ರಧಾನವಾಗಿ ಕವಿಯ, ರಸಋಷಿಯ ಸೃಷ್ಟಿಯಲ್ಲಿ ಮಹಾಕಾವ್ಯಗಳಾಗಿ ಮೆರೆಯಿತು. ಆದರೆ ಯಂತ್ರಯುಗ, ಬಂಡವಾಳಷಾಹಿ ಬೆಳೆದಂತೆ ವ್ಯಕ್ತಿ ವ್ಯಕ್ತಿಯ ನಡುವನ ಸಂಬಂಧ ಸಂಕೀರ್ಣಗೊಂಡು ಮನುಷ್ಯನೊಂದಿಗೆ ಮನುಷ್ಯನ ನೇರವಾದ ಮಾನವೀಯ ಸಂಬಂಧವೇ ಕಳಚಿಹೋಯಿತು. ಮನುಷ್ಯನ ಮುಖ್ಯ ಸಂಬಂಧ ನಿರ್ಜೀವ ವಸ್ತುವಾದ ಬಂಡವಾಳ, ಖಾಸಗಿ ಲಾಭಗಳೊಡನೆ ಏರ್ಪಟ್ಟಿತು. ಅದನ್ನವಲಂಬಿಸಿ ಉಳಿದೆಲ್ಲ ಮೌಲ್ಯಗಳೂ ಸಂಬಂಧಗಳೂ ನಿರ್ಣಯವಾಗುವಂಥ ಜಟಿಲವಾದ ಘಟ್ಟ ತಲುಪಿತು. ಇಂಥ ಪರಿಸ್ಥಿತಿಯಲ್ಲಿ ಅನೇಕ ತಾಕಲಾಟಗಳೂ ವಿರೋಧಾಭಾಸಗಳೂ ಉದ್ಭವಿಸಿ ಒಂದೊಂದು ಸ್ವತಂತ್ರ ಸಮಸ್ಯೆಯೆಂಬಂತೆ ಕಾಣಿಸಿಕೊಳ್ಳುವಂತಾಯಿತು. ಆದರೂ, ಈ ಸಮಸ್ಯೆಗಳ ಜೀವನಾಡಿಯಿದ್ದುದು ಇತಿಹಾಸದ ಗತಿಯಲ್ಲಿ. ಈ ವಿಚಾರವನ್ನು ತಾರ್ಕಿಕವಾಗಿ ಐತಿಹಾಸಿಕವಾಗಿ ವೈಜ್ಞಾನಿಕವಾಗಿ ಅರಿತುಕೊಳ್ಳದೆ ತೋರ್ಕೆಯ ಸಮಸ್ಯೆಗಳನ್ನು ಕೇವಲ ಭಾವುಕತೆಯಿಂದ ಸ್ವತಂತ್ರವಾಗಿ ಪರಿಗ್ರಹಿಸುವುದು ಸತ್ಯಕ್ಕೆ ಅಪಚಾರ ಮಾಡಿದಂತಾಗುವ ಸನ್ನಿವೇಶ ಒದಗಿತು. ಈ ಹಿನ್ನೆಲೆಯಲ್ಲಿ ಕಾದಂಬರಿಯ ಉಗಮವಾಯಿತು. ಹಿಂದೆ ಮಹಾಕಾವ್ಯ ಮಾತ್ರ ನೀಡುತ್ತಿದ್ದ ಅಭಿವ್ಯಕ್ತಿ ಕಾದಂಬರಿಯ ಪಾಲಿಗೆ ಬಂತು. ಇಂದಿನ ಜಟಿಲವಾದ ಸಮಸ್ಯೆಗಳನ್ನು ಸಮರ್ಥವಾಗಿ ಚಿತ್ರಿಸುವ ಸಾಹಿತ್ಯ ಮಾಧ್ಯಮ ಕಾದಂಬರಿಯಾಯಿತು. ಹಿಂದೆ ಕಾವ್ಯಗಳನ್ನು ಕುರಿತು ನಡೆದ ವಿಸ್ತಾರವಾದ ವಿಮರ್ಶೆ ಕನ್ನಡ ಕಾದಂಬರಿಗಲ ಸಲುವಾಗಿಯೂ ನಡೆಯಬೇಕು. ಇದಕ್ಕೆ ತಮ್ಮಂಥ ಹಿರಿಯರು ಮಾರ್ಗದರ್ಶನ ಮಾಡಬೇಕು.”

ಗಾಢಚಿಂತನೆಯಲ್ಲಿ ತನ್ಮಯರಾದಂತೆ ಕಾಣುತ್ತಿದ್ದ ಆಚಾರ್ಯರರು ಗಂಭೀರವದನರಾಗಿ ನುಡಿದರು;

“ಸಾಹಿತ್ಯ ಸೃಷ್ಟಿಗೆ ಸಂಬಂಧಿಸಿದ ಕೆಲವು ಮೂಲಭೂತ ವಿಷಯಗಳನ್ನೆ ನೀನು ಎತ್ತಿದ್ದಿ. ಸಮಸ್ಯೆಗಳು ಎಲ್ಲ ಕಾಲದಲ್ಲೂ ಇದ್ದುವು. ರಾಮಾಯಣ ಮಹಾಭಾರತಗಳಲ್ಲಿ ಕಾಣದ ಸಮಸ್ಯೆಗಳು ಬೇರೇನು ತಾನೆ ಇವೆ. ಕಾಲಕಾಲಕ್ಕೆ ಸಾಹಿತ್ಯದ ಪ್ರಕಾರ ಬದಲಾಗುವುದೆಂಬುದನ್ನು ಒಪ್ಪಬಹುದು. ಆದರೆ ಒಂದು ಕಾಲಕ್ಕೆ ಆಗಿಹೋದ ಉತ್ಕೃಷ್ಟ ಸಾಹಿತ್ಯ ಕೃತಿ ಎಂದಿಗೂ ಕಾಲಮಾನದಿಂದ ಕುಂದುವುದಿಲ್ಲ. ನೂರಾರು ಸಾವಿರಾರು ವರ್ಷಗಳಾದರೂ ಅದರ ವ್ಯಾಸಂಗದಿಂದ ಲೋಕಕಲ್ಯಾಣ ಸಾಗುತ್ತದೆ. ಪುನಃ ಪುನಃ ಅದನ್ನು ಮನನ ಮಾಡುವುದರಿಂದ ಉತ್ಕೃಷ್ಟ ಸಂಸ್ಕಾರವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಸಾಹಿತಿ ಪ್ರಧಾನವಾಗಿ ಸಮಾಜ ಸುಧಾರಕನೂ ಅಲ್ಲ ಪ್ರಚಾರಕನೂ ಅಲ್ಲ. ಜೀವನ ಪ್ರವಾಹ ನಿರಂತರವಾಗಿ ಸಾಗುವಂಥ ವ್ಯಾಪಾರ. ಜೀವಕ್ಕೆ ಎಂದೂ ಸೋಲಿಲ್ಲ. ಸಾವಿಲ್ಲ. ಮನುಷ್ಯನ ಆರೋಗ್ಯ ಕೆಟ್ಟಿತೆಂದರೆ ಅವರು ತನ್ನ ದಿನನಿತ್ಯದ ವ್ಯಾಪಾರದಿಂದ ವಿರಮಿಸಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾನೆ, ವಿಶ್ರಾಂತಿ ಹೊಂದುತ್ತಾನೆ. ಆದರೆ ಆ ನಂತರ ಜೀವನಪ್ರವಾಹ ಯಾವೊಂದು ಸಮಸ್ಯೆಯಿಂದಲೂ ರಾಗಭಾವಗಳಿಂದಲೂ ವಿಚಲಿತವಾಗುವುದಿಲ್ಲ, ಕುಂಠಿತವಾಗುವುದಿಲ್ಲ. ನದಿ ಹರಿದಂತೆ ಅದು ಒಂದು ಕ್ಷಣವು ನಿಲ್ಲದೆ ನಿತ್ಯನೂತನವಾಗಿ ನಿರರ್ಗಳವಾಗಿ ಪೂರ್ಣಾರೋಗ್ಯದಿಂದ ಚಲಿಸುತ್ತಿರುತ್ತದೆ. ಸುಖ ದುಃಖ, ಸಾವು ನೋವು, ಆಸೆ ಆಕಾಂಕ್ಷೆ, ನಿರಾಸೆ ನಿಟ್ಟುಸಿರು ಈ ಎಲ್ಲ ತುಯ್ದಾಟ ತೊಳಲಾಟ ತುಮುಲ ಸಂಕಿರ್ಣಗಳನ್ನು ಮೈಗೂಡಿಸಿಕೊಂಡೇ ಈ ಮಹಾಚಲನೆ ನಿರ್ವಿಕಾರವಾಗಿ ತಿಳಿಯಾಗಿ ಮುಂದೆ ಮುಂದೆ ನಡೆಯುತ್ತಿರುತ್ತದೆ. ಜ್ಞಾತೃಜ್ಞೇಯಗಳೆರಡೂ ಒಂದೇ ಆಗಿ, ತನಗೆ ತಾನೇ ದೃಷ್ಟಾಂತವಾಗಿ, ಕಾಲವೇ ನೆರಳಾಗಿ ನಡೆವಂಥ ಸೃಷ್ಟಿಯ ವ್ಯಾಪಾರಕ್ಕಿಂತ ರೋಮಾಂಚಕಾರಿಯಾದ ಸಂಘಟನೆ ಮತ್ತೊಂದಿಲ್ಲ. ಇದನ್ನು ಕಾಣಲು ಪೂರ್ಣದೃಷ್ಟಿ ಬೇಕು. ಯಾವೊಂದು ರಾಗಭಾವಕ್ಕೂ ಸಮಸ್ಯೆಗೂ ಅಂಟದೆ ಈ ಇಡೀ ಜೀವನ ಪ್ರವಾಹವನ್ನು, ಇದರಲ್ಲಿ ಸಾಮರಸ್ಯ ಸಮನ್ವಯಗಳನ್ನು ಕಂಡುಕೊಳ್ಳಲು ಒಂದು ಅತೀಂದ್ರಿಯ ಶಕ್ತಿ ಸಿದ್ಧಿಸಬೇಕು. ಅದನ್ನು ಪ್ರತಿಭೆ insight, imagination, sixth sense, superior intellect ಎಂದು ಬೇರೆ ಬೇರೆ ಹೆಸರುಗಳಿಂದ ಕರೆದಿದ್ದಾರೆ. ಇಂಥ ಪೂರ್ಣ ದೃಷ್ದಟಿಗೆ ಗೋಚರಿಸುವುದು ಸಾರ್ವಕಾಲಿಕ ಸತ್ಯ. ಸೃಷ್ಟಿಯ ಜೀವಂತ ಸತ್ಯದೊಡನೆ ಸಾಹಿತಿಯ ಕಲಾಚೇತನ ತಾದಾತ್ಮ್ಯಗೊಂಡಾಗ ವಿಶ್ವಸಾಹಿತ್ಯವೇ ಸೃಷ್ಟಿಯಾಗುತ್ತದೆ. ಅದೊಂದು ಮಹಾಕಾವ್ಯವೇ ಆಗಬಹುದು. ಆದರೆ, ಈ ಪೂರ್ಣದೃಷ್ಟಿಯ ಸಾಕ್ಷಾತ್ಕಾರ ಸಾಹಿತಿಗೆ ಸಂಪೂರ್ಣವಾಗಿ ಸಿದ್ದಿಸುವುದು ಅಪರೂಪ, ಶತಮಾನಗಳಿಗೊಮ್ಮೆಮ್ಮೆ ಮಾತ್ರ. ವಿವಿಧ ಹಂತಗಳಲ್ಲಿ ಇದನ್ನು ಪಡೆಯುವ ಸಾಹಿತಿ ತಾನು ಏರಿದ ಎತ್ತರಕ್ಕನುಗುಣವಾಗಿ ಸಾಹಿತ್ಯ ಸೃಷ್ಟಿ ಮಾಡುತ್ತಾನೆ. ಈ ದಿಸೆಯಲ್ಲಿ ನಡೆಯುವ ಸಾಹಿತ್ಯಸೃಷ್ಟಿ ಒಂದೊಂದೂ ಅಲೌಕಿಕ ನಿತ್ಯಸತ್ಯದ ಪರಿಸರದಲ್ಲಿ ಲೌಕಿಕ ಸತ್ಯವನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಎತ್ತಿತೋರುತ್ತದೆ. ಇದಕ್ಕಾಗಿಯೆ ನಮ್ಮ ಪೂರ್ವಿಕರು ಕವಿಯನ್ನು ರಸಋಷಿ ಎಂದುದು. ತರ್ಕದಿಂದ ಅನುಭಾವದಿಂದ ದಾರ್ಶನಿಕ ಕಾಣುವ ಸತ್ಯವನ್ನು ಕವಿ ತನ್ನ ಪ್ರತಿಭೆಯಿಂದ ಪ್ರಕಟಿಸುತ್ತಾನೆ. ಮಹಾಕಾವ್ಯದಿಂದ ಹಿಡಿದು ಭಾವಗೀತೆ, ಸಣ್ಣಕತೆ, ನಾಟಕ, ಕಾದಂಬರಿ ಮುಂತಾದ ಎಲ್ಲ ಸಾಹಿತ್ಯ ಪ್ರಕಾರಗಳಿಗು ಈ ಸೂತ್ರ ಅನ್ವಯವಾಗುತ್ತದೆ. ಮನಸ್ಸಿನ ವಿಕಾರಗಳನ್ನು ದೂರಮಾಡಿ ಭಾವ ಶುದ್ಧಿಗೈದು ಶಾಂತತೆಯತ್ತ ಕೊಂಡೊಯ್ಯುವಂಥ ಯಾವುದೇ ಸಾಹಿತ್ಯ ಕೃತಿಯೂ ಶ್ರೇಷ್ಠವಾದುದು. ನಿತ್ಯಚಲನೆಯಲ್ಲಿರುವ ಸೃಷ್ಟಿಯನ್ನು ಅರ್ಥಪೂರ್ಣವಾಗಿ ಪ್ರತಿಫಲಿಸುವಂಥ ಸಾಹಿತ್ಯ ಬಹು ಮಹತ್ವದ್ದು. ತಾಕಲಾಟ ವಿರೋಧಾಭಾಸಗಳಿಂದ ವಿಕೃತವಾಗಿ ಕಾಣುವ ಲೌಕಿಕ ಸಂಗತಿಗಳನ್ನು ಸಾಮರಸ್ಯ ಸಮನ್ವಯದ ಜೀವನದೊಂದಿಗೆ ಕೊಂಡೊಯ್ದು ಪೂರ್ಣಸತ್ಯದ ಬೆಳಕಿನಲ್ಲಿ ತಾನೇತಾನಾಗಿ ತೋರಿ ಕೊಡುವಂಥ ಸಾಹಿತ್ಯ ನಿಜಕ್ಕೂ ಸತ್ಯಸೌಂದರ್ಯಗಳ ಸಂಗಮವೇ ಆಗುತ್ತದೆ.

ಆಚಾರ್ಯರು ಸೌಂದರ್ಯ ಮೀಮಾಂಸೆಯನ್ನು ಕುರಿತು ತಮ್ಮ ನಿಲುವನ್ನು ನಿಷ್ಕೃಷ್ಟವಾಗಿ ತಿಳಿಯಾಗಿ ಕಡ್ಡಿಮುರಿದಂತೆ ನಿರೂಪಿಸಿ ಬಿಟ್ಟರು. ಅವರ ಅಮೃತವಾಣಿಯನ್ನು ಕೇಳುತ್ತ ನಾನು ಪುಲಕಿತನಾಗಿ ಒಂದು ಅಪೂರ್ವ ಆನಂದವನ್ನನುಭವಿಸಿದೆ. ಕನ್ನಡ ಕಾವ್ಯಪರಂಪರೆಯ ಮೌಲ್ಯಮಾಪನ ಕುರಿತು ಆಚಾರ್ಯರು ಶಿಷ್ಯರಿಗೆ ಹೇಗೆ ಪಾಠ ಹೇಳಿರಬೇಕೆಂಬುದರ ಕಲ್ಪನೆ ಅಂದು ಆ ಗಳಿಗೆಯಲ್ಲಿ ನನ್ನ ಅನುಭವಕ್ಕೆ ಬಂತು.

ಆಚಾರ್ಯರ ಕಣ್ಣುಗಳಲ್ಲಿ ಅಪೂರ್ವ ಕಾಂತಿ ಶೋಭಿಸಿತು. ಅವರ ಪ್ರಸನ್ನವದನದಲ್ಲಿ ಅಲೌಕಿಕ ತೃಪ್ತಿಯೊಂದು ಲಾಸ್ಯವಾಡುತ್ತಿತ್ತು.

ಸತ್ಯಸೌಂದರ್ಯಗಳ ಜೀವನಾಡಿಯನ್ನೆ ಮೀಂಟಿ ತಮ್ಮ ಅಂತರಂಗದ ಬಾಗಿಲನ್ನು ಮುಕ್ತಮನಸ್ಸಿನಿಂದ ತೆರೆದು ಕಾವ್ಯತತ್ವದ ವಿಶ್ವರೂಪವನ್ನೆ ಆಚಾರ್ಯರು ಅಂದು ತೋರಿಕೊಟ್ಟರು.

* ಕನ್ನಡನುಡಿ (ಸಂ. ೩೪, ಸಂ.೧೫, ೧೬) ಪು.೬