ನನ್ನ ಓರಗೆಯ ಮತ್ತು ನನಗಿಂತ ತುಸು ಹಿಂದಿನ ಕನ್ನಡ ಆನರ್ಸ್‌ ಮತ್ತು ಎಂ.ಎ. ತರಗತಿಗಳ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ನಿಜಕ್ಕೂ ಪುಣ್ಯವಂತರು. ಬಿ.ಎಂ.ಶ್ರೀ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರೀ, ಕುವೆಂಪು, ತೀ.ನಂ.ಶ್ರೀ ಮತ್ತು ಡಿ.ಎಲ್‌. ನರಸಿಂಹಾಚಾರ್ಯರ ನೇತೃತ್ವದಲ್ಲಿ ಕುಳಿತು ಕನ್ನಡ ಕಲಿಯುವ ಸುವರ್ಣಾವಕಾಶ ಅವರಿಗಿತ್ತು. ನವೋದಯ ಸಾಹಿತ್ಯದ ಹರಿಕಾರರಾಗಿ, ವಿದ್ವತ್‌ ಕ್ಷೇತ್ರದ ಕೊಲಂಬಸ್‌ರಾಗಿ, ಜಾಗತಿಕ ಮಟ್ಟದ ಸಾರಸ್ವತ ತಪಸ್ವಿಗಳು. ಅಂಥ ತಪಸ್ವಿಗಳು ಏಕಕಾಲದಲ್ಲಿ ಏಕತ್ರ ಒಟ್ಟುಮಾಡುವುದು, ಏಕಕಾಲದಲ್ಲಿ ಅಂಥವರ ಶಿಷ್ಯರಾಗುವುದು ಸಾಮಾನ್ಯ ಸಂಗತಿಯಲ್ಲ. ಬ್ರಾಹ್ಮೀ ಘಟನೆಯೆಂದೇ ತಿಳಿಯಬಹುದುದಾಗಿದೆ. ೧೯೨೭ರಲ್ಲಿ ಬಿ.ಎಂ.ಶ್ರೀ. ಕರ್ಣಧಾರತ್ವದಲ್ಲಿ ಕನ್ನಡ ಎಂ.ಎ. ತರಗತಿಗಳು ಪ್ರಾರಂಭವಾದಾಗ ವೆಂಕಣ್ಣಯ್ಯ ಕೃಷ್ಣಶಾಸ್ತ್ರಿಗಳು ಗುರುವೃಂದದಲ್ಲಿದ್ದರೆ ಕುವೆಂಪು ದೊ.ಲ.ನ. ಸಹಪಾಠಿಗಳು. ತೀ.ನಂ.ಶ್ರೀ. ಮೂರನೆಯ ವರ್ಷ ಆ ತರಗತಿಗೆ ಸೇರಿಕೊಂಡವರು.

ಮೇಲಣ ಅರುವರು ಗುರುಗಳ ಪೈಕಿ ವೆಂಕಣ್ಣಯ್ಯ ಕೃಷ್ಣಶಾಸ್ತ್ರಿಗಳು ಕನ್ನಡ ಸಾಹಿತ್ಯದ ಅಶ್ವಿನೀ ದೇವತೆಗಳೆಂದು, ತೀ.ನಂ.ಶ್ರೀ. ದೊ.ಲ.ನ. ಯಮಳರೆಂದು ನಾನು ಅನರ್ಸ್‌ ತರಗತಿ ಸೇರುವ ಹೊತ್ತಿಗೆ ಪ್ರಖ್ಯಾತರಾಗಿದ್ದರು. ಕುವೆಂಪು ಅವರ ನಡುವೆ ಇದ್ದರೂ ಅವರ ಜೀವನ ಶೈಲಿ ಕಾವ್ಯಪ್ರತಿಭೆಗಳಿಂದಾಗಿ ಅವರೆಲ್ಲರಿಗಿಂತ ಭಿನ್ನರಾಗಿ ಆಕರ್ಷಣೀಯರಾಗಿ ಕಾಣುತ್ತಿದ್ದರು.

ತೀ.ನಂ.ಶ್ರೀ. ದೊ.ಲ.ನ. ಅವರು ಸಾಹಿತ್ಯಕ್ಷೇತ್ರದ ಯಮಳ ವಿದ್ವಾಂಸರಾಗಿದ್ದರೂ, ತೀ.ನಂ.ಶ್ರೀ. ಯವರು ಪ್ರಥಮ ಸಮಾಗಮದಲ್ಲಿಯೇ ತೀರ ಹತ್ತಿರದವರೆಂಬಂತೆ ನನ್ನನ್ನು ಆಕರ್ಷಿಸುತ್ತಾರೆ; ಪ್ರಗತಿಪರ ವಿಶಾಲ ಭಾವನೆಯೊಡಗೂಡಿದ ಸರಸ ಶಿಷ್ಯವಾತ್ಸಲ್ಯ ಹಿಂದಿನ ಜನ್ಮದಿಂದ ಹರಿದು ಬಂದಿದೆಯೆಂಬಂತೆ ನನಗೆ ಮನವರಿಕೆಯಾಗುತ್ತದೆ.

ದ್ವಿದೇಹ ಏಕಾತ್ಮನ್ಯಾಯದಂತಿದದ ಅವರಿಬ್ಬರಲ್ಲಿ ದೊಲನ ಅವರು ಕೊನೆಯತನಕ ನನಗೆ ಹತ್ತಿರವಾಗಲಿಲ್ಲ. ಅದಕ್ಕೆ ಕಾರಣ ಮತ್ತೊಬ್ಬ ಕನ್ನಡ ಅಧ್ಯಾಪಕರು ಅವರ ಬಳಿ ನನ್ನ ಬಗ್ಗೆ ಚಾಡಿ ಬೆಸೆಯುತ್ತಿದ್ದರೆಂದು ತೋರುತ್ತದೆ. “ಪುಟ್ಟಪ್ಪ ಅವನಿಗೆ ಲೇಖನ ಬರೆದುಕೊಡುತ್ತಾನಯ್ಯ ಅವನಿಗೇನು ಬರ್ತದೆ”? ಎಂದು ಕಂಡ ಕಂಡವರಿಗೆಲ್ಲ ಹೇಳುತ್ತಿದ್ದುದುಂಟು. ನಾನು ‘ಲೀಲಾವತಿ’ ಗ್ರಂಥಕ್ಕೆ ಪೀಠಿಕೆ ಬರೆದಾಗ ಅದನ್ನೋದಿ ಚೆನ್ನಾಗಿ ಬರೆದಿದ್ದೀಯಯ್ಯ ನಾನಾಗಿದ್ದರೂ ಇದಕ್ಕಿಂತ ಚೆನ್ನಾಗಿ ಬರೆಯುತ್ತಿರಲಿಲ್ಲ. ನಿಜ, ನಿನ್ನ ಬರವಣಿಗೆಯ ವಿರುದ್ಧವಾಗಿ ನನ್ನ ಮನಸ್ಸನ್ನು ಯಾರೋ ಕದಡಿದ್ದರು ಎಂದವರು ನುಡಿದಾಗ ನಾನು ಆನಂದೋತ್ತನಾದದ್ದುಂಟು. ನಾವು ಕೊನೆಯವರೆಗೆ ಚೆನ್ನಾಗಿದ್ದರೂ, ತೀ.ನಂ.ಶ್ರೀ.ಯವರೊಡನಿದ್ದಂತೆ ಅವರೊಡನೆ ಆತ್ಮೀಯತೆ ಬೆಳೆಯಲಿಲ್ಲ.

ಆದರೆ ನಾನೇನು ಹಳಗನ್ನಡ ಗ್ರಂಥಗಳನ್ನು ಸಂಪಾದಿಸಿದ್ದೇನೆ, ಅವುಗಳಿಗೆ ಪೀಠಿಕೆಗಳನ್ನು ಬರೆದಿದ್ದೇನೆ, ಅವುಗಳಿಗೆ ಮಾದರಿ ದೊ.ಲ.ನ. ಅವರ ಪೀಠಿಕೆಗಳೆಂಬುದರಲ್ಲಿ ಲವಲೇಶವೂ ಸಂದೇಹವಿಲ್ಲ. ಹಳಗನ್ನಡ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ ಗ್ರಂಥಗಳಿಗೆ ಅವರು ಬರೆದ ಸಂಶೋಧನಾತ್ಮಕವೂ ವಿದ್ವತ್ಸಂಪನ್ನವೂ ಆದ ಮುನ್ನುಡಿಗಳು ಅಂದಿನ ಅವರ ಶಿಷ್ಯರಿಗೆ ಮಾತ್ರವಲ್ಲ, ಇಂದಿನ ವಿದ್ಯಾರ್ಥಿ ವೃಂದಕ್ಕೂ ವಿಮರ್ಶಕರಿಗೂ ಆದರ್ಶಗಳೆಂದೇ ಹೇಳಬೇಕು.

ಬೋಧನ ಕರೆಯಲ್ಲವರು ಬಿ.ಎಂ.ಶ್ರೀ., ವೆಂಕಣ್ಣಯ್ಯ, ತೀ.ನಂ.ಶ್ರೀ., ಕುವೆಂಪು ಅತ್ಯಂತ ಆಕರ್ಷಣೀಯವಾಗಿದ್ದರೂ, ಅವರ ಆಳವಾದ ವಿಸ್ತಾರವಾದ ವ್ಯಾಪಕವಾದ ಸರ್ವಂಕಷವಾದ ಅಧ್ಯಯನಕ್ಕೆ ಹಾಗೂ ವಿದ್ವತ್ತಿಗೆ ಎಂಥವರೂ ಬೆರಗಾಗುತ್ತಿದ್ದುಂಟು. ಯಾವ ಪಾಶ್ಚಾತ್ಯ ವಿದ್ವಾಂಸರೂ ಅಚ್ಚರಿಗೊಳ್ಳುವಂಥ ವಿದ್ವತ್ತು ಅವರದು. ಕಿಟ್ಟೆಲ್‌ ನಂತರ ಕನ್ನಡ ಅಧ್ಯಯನಕ್ಕೂ ವಿದ್ವತ್ತಿಗೂ ಬುನಾದಿ ಹಾಕಿದವರೇ ಅವರು. ಹಳಗನ್ನಡ ಮತ್ತು ನಡುಗನ್ನಡದ ಪ್ರಕಟಿತ ಅಪ್ರಕಟಿತ ಗ್ರಂಥಗಳೆಲ್ಲ ಅವರಿಗೆ ಕರತಲಾಮಲಕವಾಗಿದ್ದವು. ಅವರ ವಿದ್ವದ್ದಾಹ ಎಷ್ಟಿತ್ತೆಂದರೆ ಅಪ್ರಕಟಿತ ಗ್ರಂಥಗಳನ್ನು ಹಸ್ತಪ್ರತಿ ಸ್ಥಿತಿಯಲ್ಲಿಯೇ ಓದುತ್ತಾರೆ. ಈಗಿನ ಕನ್ನಡ ವಿದ್ವಾಂಸರ ಉಪೇಕ್ಷೆಗೆ ಪಾತ್ರವಾಗಿರುವ ಎಲ್ಲ ಶಾಸನಗಳನ್ನವರು ವ್ಯಾಸಂಗಿಸುತ್ತಾರೆ. ಅವರ ಸ್ಮರಣ ಶಕ್ತಿ ಅದ್ಭುತ. ಅದೆಷ್ಟು ಕಂದ ವೃತ್ತಗಳು ಷಟ್ಪದಿಗಳು ಅವರ ಬಾಯಿಂದ ಲೀಲಾಜಾಲವಾಗಿ ಬರುತ್ತಿದ್ದವೆಂಬುದನ್ನು ತಿಳಿಸಿದರೆ, ಈಗಿನ ಕಾಲದ ಪಂಡಿತರು ನಂಬಲಾರರು. ಹಳಗನ್ನಡ ನಡುಗನ್ನಡ ಸಾಹಿತ್ಯದ ಪದ, ಪದ್ಯ, ವಾಕ್ಯಗಳ ಬಗ್ಗೆ ಡಿ.ವಿ.ಜಿ ಮೊದಲಾದ ವಿದ್ವಾಂಸರಿಗೆ ಏನಾದರೂ ಸಂಶಯವುಂಟಾದರೆ, ಕೂಡಲೇ ದೊಲನ ಕಡೆಗೆ ನೋಡುತ್ತಿದ್ದರು. ದೊಲನ ಮಂದಹಾಸ ಬೀರುತ್ತ, ತುಸು ತಲೆಯಲ್ಲಾಡಿಸಿ, ಸಂಬಂಧಪಟ್ಟ ಪದ, ಪದಗುಂಪಿನ ಮತ್ತು ಪದ್ಯಗಳನ್ನು ಸಲೀಸಾಗಿ, ಕೃಷ್ಣರಾಜಸಾಗರದ ತೂಬಿನ ಕದಗಳನ್ನು ತೆರೆದಾಗ ನುಗ್ಗುವ ನೀರಿನಂತೆ ಹರಿಸುತ್ತಿದ್ದರು.

ಯಾವ ಭಾಷೆಯಲ್ಲಾದರೂ ಸಾಹಿತ್ಯ ರಚನೆ ಸೊಂಪಾಗಿ ಸಮೃದ್ಧವಾಗಿ ಸಾಗಬಹುದು. ಭಾವಪ್ರತಿಭೆ, ಅನುಭವ ವೈಭವ, ಕಲ್ಪನಾಸೌಂದರ್ಯದಿಂದ ಕೂಡಿರುವ ಸೃಜನ ಸಾಹಿತ್ಯವನ್ನು ಯಾರೂ ಬೇಕಾದರೂ ಓದಿ ಆನಂದಿಸಬಹುದು. ಆದರೆ ಆ ಸಾಹಿತ್ಯವನ್ನು ಮೆಚ್ಚಲು, ವಿಶ್ಲೇಷಿಸಲು ಸಾಹಿತ್ಯಾಭ್ಯಾಸಿಗಳಿಗೆ ರಚನಾಸಕ್ತ ಉಪಕ್ರಮಕರರಿಗೆ ಬೇಕಾದ ಅಧಿಷ್ಠಾನ ರೂಪದ ಶಾಸ್ತ್ರ ಸಾಹಿತ್ಯ ರಚನೆ ಸುಲಭವಲ್ಲ. ಸಂಬಂಧಪಟ್ಟ ಎಲ್ಲ ಸಾಹಿತ್ಯ ಕೃತಿಗಳ ತಲಸ್ಪರ್ಶಿ ಅಧ್ಯಯನದಿಂದ ಲಭ್ಯವಾದ ವಿದ್ವತ್ತು, ಅವುಗಳ ವಿಮರ್ಶೆ ವಿವೇಚನೆ, ಮಂಥನಗಳಿಂದ ಪ್ರಾಪ್ತವಾಗುವ ತಾತ್ವಿಕ ಸಿದ್ಧಾಂತಗಳು ಹಾಗೂ ಲಕ್ಷಣಗಳು ಶಾಸ್ತ್ರೀಯ ರೂಪವನ್ನು ಪಡೆಯುತ್ತವೆ. ಅವು ಛಂದಃಶಾಸ್ತ್ರವಾಗಿ, ಸಂಪಾದನಾ ಶಾಸ್ತ್ರವಾಗಿ, ನಿಘಂಟುಶಾಸ್ತ್ರವಾಗಿ ಮೊಳಕೆಯೊಡೆಯುತ್ತವೆ. ಗ್ರಂಥ ಸಂಪಾದನಾಶಾಸ್ತ್ರ ಹಾಗೂ ನಿಘಂಟು ಶಾಸ್ತ್ರವನ್ನು ಮೊಟ್ಟಮೊದಲು ಕನ್ನಡಕ್ಕೆ ಕೊಟ್ಟವರು ಡಿ.ಎಲ್‌. ನರಸಿಂಹಾಚಾರ್ಯರರು. ಈ ಎಲ್ಲ ದೃಷ್ಟಿಯಿಂದ ಅವರು ಕನ್ನಡ ಕುಲದ ಪುರುಷರಲ್ಲೊಬ್ಬರಾಗಿದ್ದಾರೆ. ಅವರು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕೃತಿಗಳ ವ್ಯಾಖ್ಯಾನಕ್ಕೆ ಮತ್ತು ವಿಮರ್ಶೆಗೆ ಬಳಸಿರುವ ಭಾಷೆ ಸುಭಗ ಸುಂದರ ಸುಸ್ಪಷ್ಟ ಅನನ್ಯ ಹಾಗೂ ಅನನುಕರಣೀಯ.

ಹೀಗೆ ವಿದ್ವತ್‌ಕ್ಷೇತ್ರದಲ್ಲಿ ಅನುಪಮವಾದ ಕೀರ್ತಿಯನ್ನು ಸಂಪಾದಿಸಿದ್ದ ದೊಲನ ಅವರು ತೀರ ಹತ್ತಿರದವರ ಚಾಡಿಮಾತುಗಳನ್ನು ನಂಬುತ್ತಿದ್ದರೆಂದು ತೋರುತ್ತದೆ. ಆದ್ದರಿಂದ ನಾನು ಅವರ ಒಳ ವರ್ತುಲದಿಂದ ಹೊರವಿದ್ದೆ. ಒಂದೆರಡು ಸಲ ಅವರು ನನ್ನ ಬಗ್ಗೆ ತಿರಸ್ಕಾರದಿಂದ ಮಾತಾಡಿದ್ದು ಉಂಟು. ಆದರೆ ಅವರು ತಮ್ಮ ಜೀವನದ ಅಂತಿಮ ಕಾಲದಲ್ಲಿ ನನ್ನನ್ನು ಕುರಿತು ಬರೆದ ಬಹುಮುಖ ಶಕ್ತಿಯ ಕುಲಪತಿ ಲೇಖನವನ್ನೋದಿದಾಗ, ಈಗಲೂ ನನ್ನ ಕಣ್ಣಲ್ಲಿ ನೀರು ಹರಿಯುತ್ತದೆ. ಅದೇ ಅವರ ಕೊನೆಯ ಲೇಖನವೆಂದು ತೋರುತ್ತದೆ. ಅದು ಆಲನಹಳ್ಳಿ ಕೃಷ್ಣ ಸಂಪಾದಿಸಿದ ‘ಅಂತಃಕರಣ’ ಎಂಬ ಗ್ರಂಥದಲ್ಲಿ ಅಚ್ಚಾಗಿದೆ. ಅವರ ಔದಾರ್ಯಕ್ಕೆ ಹಾಗೂ ಶಿಷ್ಯವಾತ್ಸಲ್ಯಕ್ಕೆ ಈ ಲೇಖನವೇ ನಿದರ್ಶನ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಎಂ.ಎ. ತರಗತಿಗಳು ಪ್ರಾರಂಭವಾದದ್ದು ತಡವಾಗಿ, ೧೯೨೭ರಲ್ಲಿ ಮೊದಲ ವರ್ಷವೇ ಎಂ.ಎ. ತರಗತಿಗೆ ಸೇರಿದವರಲ್ಲಿ ಕುವೆಂಪು. ದೊಲನ, ಡಿ.ಕೆ. ಭೀಮಸೇನರಾವ್‌ ಮುಖ್ಯರು. ಕುವೆಂಪು ತತ್ವಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದು ಬಂದಿದ್ದರೆ, ದೊಲನ ಸೆಂಟ್ರಲ್‌ ಕಾಲೇಜಿನಲ್ಲಿ ವಿಜ್ಞಾನ ಪದವಿ ಮುಗಿಸಿ, ಎಂ.ಎ. ತರಗತಿಗೆ ಸೇರಿದ್ದರು. ಆ ಹೊತ್ತಿಗಾಗಲೇ ಕುವೆಂಪು ಕವಿಯೆಂದು ಪ್ರಸಿದ್ಧಿ ಪಡೆದಿದ್ದರೆ, ನರಸಿಂಹಾಚಾರ್ಯರರು ವಿದ್ವಾಂಸರೆಂದು ಹೆಸರು ಪಡೆದಿದ್ದರು. ಹೀಗಾಗಿ ಅವರಿಬ್ಬರೂ ಪರಸ್ಪರ ಆಕರ್ಷಿತರಾಗಿದ್ದರು. ಕುವೆಂಪು ತಮ್ಮ ಆತ್ಮಕಥೆ ನೆನಪಿನ ದೋಣಿಯಲ್ಲಿ ತಮ್ಮ ಮತ್ತು ದೊಲನ ಅವರ ಅಪೂರ್ವ ಸ್ನೇಹಸಂಬಂಧವನ್ನು ಅತ್ಯಂತ ಸ್ವಾರಸ್ಯವಾಗಿ ಹೃದಯಸ್ಪರ್ಶಿಯಾಗುವಂತೆ ವರ್ಣಿಸಿದ್ದಾರೆ. ಕುವೆಂಪು ಅವರಿಗೆ ಭಾಷಾಶಾಸ್ತ್ರ ಶಬ್ದಮಣಿದರ್ಪಣವೆಂದರೆ ತುಂಬ ಬೇಸರ. ದೊಲನ ಅವುಗಳಲ್ಲಿ ಸಮರ್ಥರು. ಹಳೆಯ ಓಲೆಯಗರಿಯ ಹಸ್ತಪ್ರತಿಯ ನೆವದಿಂದ ಕುವೆಂಪು ಪರೀಕ್ಷೆಗೆ ಸಾಕಾಗುವಷ್ಟು ಶಬ್ದಮಣಿದರ್ಪಣವನ್ನು ಕಲಿಯುತ್ತಾರೆ. ಕಡೆಗೂ ನರಸಿಂಹಾಚಾರ್ಯರ ಮೇಷ್ಟ್ರಿಕೆಯಿಂದಾದ ಫಲ ‘ಕೇಶಿರಾಜ’ ಎಂಬ ವಿಡಂಬ ಕವನ ರಚನೆ ಮತ್ತು ಕವಿಗೆ ಕರ್ಣಂ ಪ್ರಮಾಣಂ ಎಂದು ಮೊದಲಾಗುವ ಸೂತ್ರಪ್ರಾಯದ ಸೂಕ್ತಿಯ ರಚನೆ.

ಆ ಕಾಲದಲ್ಲಿ ತಾವು ದೊಲನ ಅವರ ರೂಮಿಗೆ ಹೋಗಿದ್ದಾಗ ನಡೆದೊಂದು ಘಟನೆಯನ್ನು ಕುವೆಂಪು ಅತ್ಯಂತಹ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಅವರ ಮಾತುಗಳಲ್ಲಿ ಆ ಘಟನೆಯ ಮಹತ್ವನ್ನು ಗ್ರಹಿಸಬಲ್ಲದು. ಅವರು ಪುಸ್ತಕಮಯವಾಗಿದ್ದ ಮೇಜಿನ ಎದುರು ಕುರ್ಚಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿದ್ದರು. ಅವರು ಏನನ್ನು ಓದುತ್ತಿದ್ದರೋ ನನಗೆ ತಿಳಿಯದು. ಮುಂದೆ ನಡೆದ ಘಟನೆಯ ಸ್ವರೂಪದ ಮೇಲೆ ಊಹಿಸುವುದಾದರೆ, ಅದು ಯಾವುದೋ ಧಾರ್ಮಿಕ ಅಧ್ಯಾತ್ಮಿಕ ಅಥವಾ ಅನುಭಾವಿಕ ವಿಷಯವನ್ನೋ ವ್ಯಕ್ತಿಯನ್ನೋ ವಸ್ತುವಾಗಿ ಉಳ್ಳ ಗ್ರಂಥವಾಗಿದ್ದಿರಬಹುದು. ನನ್ನನ್ನು ಕಂಡವರೇ ಎದ್ದು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ಬಹುಶಃ ತುಸು ಭಾವಸ್ಥಿತಿಯಲ್ಲಿದ್ದರೆಂದು ತಟಕ್ಕನೆ ತಿರುಗಿ ನನ್ನನ್ನು ಮುಖಾಮುಖಿ ನೋಡುತ್ತಾ, ಗದ್ದದ ಧ್ವನಿಯಿಂದ “I say! You are my Guru !” ಎಂದರು.

ನಾನು ದಿಗ್‌ಭ್ರಾಂತನಾದಂತೆ ಬೆಚ್ಚಿಬಿದ್ದೆ! ನನಗೇನೂ ಅರ್ಥವಾಗಲಿಲ್ಲ. ನಾನು ಅವರಿಗೆ ಗುರುವಾಗತಕ್ಕಂತಹ ಕೆಲಸ ಏನನ್ನೂ ಮಾಡಿರಲಿಲ್ಲ. ಅದಕ್ಕೆ ಬದಲಾಗಿ ಅವರೇ ಗುರುಸ್ಥಾನದಲ್ಲಿದ್ದರೆಂದು ಹೇಳಬಹುದಾಗಿತ್ತು. ಪಠ್ಯ ವಿಷಯಗಳಲ್ಲಿ ವ್ಯಾಕರಣ ಭಾಷಾಶಾಸ್ತ್ರಾದಿಗಳಲ್ಲಿ ನನಗೆ ಸಹಾಯ ಮಾಡಿ, ನಾನು ನನಗೆ ಸಹಜವಾಗಿದ್ದ ರೀತಿಯಲ್ಲಿ ಅವರೊಡನೆ ತತ್ವಶಾಸ್ತ್ರದ ವಿಷಯಗಳನ್ನು ಕುರಿತು ಮಾತನಾಡುತ್ತಿದ್ದುದೇನೋ ಉಂಟು. ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣರ ವಿಚಾರವಾಗಿಯೂ ಅವರ ಬೋಧನೆ ಸಾಧನೆಗಳನ್ನು ಕುರಿತೂ ಅವರೊಡನೆ, ಇತರರೊಡನೆ ಎಂತೂ ಅಂತೆ ಸಂಭಾಷಿಸುತ್ತಿದ್ದುದುಂಟು. ಅಲ್ಲದೆ ನಾನು ಬಿ.ಎ.ಗೆ ತತ್ವಶಾಸ್ತ್ರವನ್ನೇ ಮುಖ್ಯ ವಿಷಯವನ್ನಾಗಿ ಆರಿಸಿಕೊಂಡಿದ್ದರಿಮದ ಉಪನಿಷತ್ತು ದರ್ಶನಗಳು ಇತ್ಯಾದಿ ಭಾರತೀಯ ತತ್ವಶಾಸ್ತ್ರಗಳನ್ನು ಪಶ್ಚಾತ್ಯ ದಾರ್ಶನಿಕರ ತತ್ವಶಾಸ್ತ್ರಗಳನ್ನು ಕುರಿತು ತುಸು ಆವೇಶಪೂರ್ವಕವಾಗಿ ಸಂವಾದಿಸುತ್ತಿದ್ದುದೂ ಉಂಟು. ಅಲ್ಲದೆ ನನ್ನ ಕವನಗಳಲ್ಲಿಯೂ ಆಧ್ಯಾತ್ಮವೇ ತುಸು ಮೇಲುಗೈಯಾಗಿದ್ದು ಅವುಗಳನ್ನು ನಾನು ಭಾವಪೂರ್ಣವಾಗಿ ನಮಿಸುತ್ತಿದ್ದುದೂ ಉಂಟು. ಅದರಲ್ಲಿ ತೀ.ನಂ.ಶ್ರೀಕಂಠಯ್ಯ, ಪು.ತಿ. ನರಸಿಂಹಾಚಾರ್ಯರ, ನಂ. ಶಿವರಾಮಶಾಸ್ತ್ರ ಮೊದಲಾದವರೂ ಭಾಗಿಗಳಾಗಿದ್ದರು. ಅವರು ಯಾರಿಗೂ ಗೋಚರಕ್ಕೆ ಬಾರದ ನನ್ನ ಗುರುತ್ವ ನರಸಿಂಹಾಚಾರ್ಯರರೊಬ್ಬರಿಗೆ ಬಂದುದೆಂತು? ಅಂತು ನಾನು ಕಕ್ಕಾಬಿಕ್ಕಿಯಾದಂತೆ ತುಸು ಮಂದಸ್ಮಿತನಾಗಿ ಮಿತ್ರ ಮಹಾಶಯನ ಮುಖವನ್ನೆ ನೋಡುತ್ತಾ ಶ್ರೀಮನ್ಮೂಕವಾಗಿದ್ದೆ!

‘ಅವರು ನನ್ನ ಸಂದೇಹಾತ್ಮಕ ಮತ್ತು ಪ್ರಶ್ನಾಥಕ ಮುಖಮುದ್ರೆಯನ್ನು ಕಂಡು ಮುಂದುವರಿದರು.ಮೊದಲಿನಂತೆ ಇಂಗ್ಲೀಷ್‌ನಲ್ಲಿಯೆ ! I saw you radiant face with a divine halo, just infront of me! With eyes and complete awareness ! I was reading and lifted hand and saw!………

“ನಾನು ಆಶ್ಚರ್ಯ ವ್ಯಕ್ತಪಡಿಸಿದೇನೆ ಹೊರತು ಆ ವಿಚಾರವಾಗಿ ಮಾತನಾಡುವ ಅಥವಾ ಅವರ ಕಾಣುವಿಕೆಯ ಅನುಭವವನ್ನು ಕುರಿತು ಚರ್ಚಿಸುವ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಅಂತಹದ್ದೇನೂ ನಡೆಯದಿದ್ದರೆ ಹೇಗೂ ಹಾಗೆ ವರ್ತಿಸಿ, ಬೇರೆ ನಮ್ಮ ಅಧ್ಯಯನದ ವಿಷಯದತ್ತ ಗಮನಸೆಳೆದು ಮಾತಾಡ ತೊಡಗಿದೆ…….” (ನೆನಪಿನ ದೋಣಿಯಲ್ಲಿ, ಪು. ೮೨೨-೮೨೪)

ಮಹಿಮೆ ಮಹಿಮೆಗೆ ಅರ್ಥವಾಗುತ್ತದೆಯೆ ಹೊರತು ಸಾಮಾನ್ಯರಿಗರ್ಥವಾಗುವುದಿಲ್ಲ. ಕಾಡಿನಲ್ಲಿ ಸಮಾಧಿಸ್ಥಿತಿಯಲ್ಲಿದ್ದ ತಪಸ್ವಿಯ ಬಳಿಬಂದ ಮೂವರು ಕುಡುಕರು ಅವನನ್ನು ಕುಡುಕ, ಭಂಗಿ, ಹುಚ್ಚ, ಮೂರ್ಛೆ ರೋಗಿ ಎಂದೆಲ್ಲ ನಿಂದಿಸುತ್ತಾರಂತೆ. ಆಮೇಲೆ ಬಂದ ಸಾಧಕನೊಬ್ಬ ತಪಸ್ವಿಯ ಮಹಿಮೆಗೆ ಬೆರಗಾಗಿ, ಅವನಿಗೆ ಭಕ್ತಿಯಿಂದ ನಮಸ್ಕರಿಸುತ್ತಾನೆ. ಸಾಹಿತ್ಯ ಕ್ಷೇತ್ರದಲ್ಲಿಯೂ ವಿಮರ್ಶಕರು ಬೆಲೆ ಕಟ್ಟುವ ಪರಿಯಿದು. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಪ್ರಕಟಗೊಂಡ ಸಂದರ್ಭದಲ್ಲಿ ವಿಮರ್ಶಕರು ಟೀಕೆಗಳ ವಿಷರ್ವಷವನ್ನೆ ಕರೆದುದ್ದುಂಟು. ಮಾತ್ಸರ್ಯರಹಿತರೂ, ಗುಣೈಕ ಪಕ್ಷಪಾತಿಗಳೂ, ಸದ್ವಿದ್ವಾಪಾರಂಗತರೂ ಆದ ನರಸಿಂಚಾಚಾರ್ಯರಂಥ ಶ್ರೇಷ್ಠ ವಿಮರ್ಶಕರು ಆ ಕೃತಿಯನ್ನೋದಿ, ಹಣೆಗೊತ್ತಿಕೊಳ್ಳುತ್ತಾರೆ, ಆರಾಧಿಸುತ್ತಾರೆ. ಒಂದು ದಿನ ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಆಚಾರ್ಯರು ಉದಯ ರವಿಗೆ ಬರುತ್ತಾರೆ. ಮುಂಚೆಯೇ ನಾನಲ್ಲಿಗೆ ಹೋಗಿದ್ದೆ. ಅವರು ಬರುತ್ತಿದ್ದಂತೆಯೇ ನಾನೆದ್ದು ನಿಂತೆ. ಕುವೆಂಪು ಕೈಮುಗಿದೊಡನೆ ಹಸನ್ಮುಖಿರಾಗಿ ಅವರನ್ನು ಬರಮಾಡಿಕೊಳ್ಳುತ್ತಾರೆ. ಕೃಷ್ಣಹಾರ ತಂದಿದ್ದ ಆಚಾರ್ಯರು ಭಾವಾತ್ಮಕರಾಗಿ ಕವಿಗಳ ಕೊರಳಿಗೆ ಅದನ್ನು ತೊಡಿಸಿ, ನಮಸ್ಕರಿಸುತ್ತಾರೆ. ‘ಇದೆಲ್ಲ ಏನು? ನರಸಿಂಹಾಚಾರೆ, ಬೇಡಿ, ಬೇಡಿ’’ ಎಂದು ಕುವೆಂಪು ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ.

ರಾತ್ರಿ ಶ್ರೀರಾಮಾಯಣ ದರ್ಶನಂ ಓದಿ ಮುಗಿಸಿದೆ. ಬಹು ಹೊತ್ತು ನಿದ್ದೆ ಬರಲಿಲ್ಲ. ಮನಸ್ಸನ್ನೆಲ್ಲ ನೀವೇ ತುಂಬಿಕೊಂಡಿದ್ದಿರಿ. ನಿಮ್ಮಲ್ಲಿ ನಾನು ಶ್ರೀರಾಮಚಂದ್ರನನ್ನು ಕಂಡೆ. ಅನಂತರ ಕಂಡ ಕನಸಿನಲ್ಲಿಯು ನೀವೇ ರಾಮನ ರೂಪದಲ್ಲಿ ಕಾಣಿಸಿಕೊಂಡಿರಿ. ಆ ರಾಮನ ಪ್ರತಿರೂಪವೇ ನೀವು ಎಂಬುದಾಗಿ ಆಚಾರ್ಯರರು ತಮ್ಮ ಕೃತ್ಯಕ್ಕೆ ವಿವರಣೆ ನೀಡುತ್ತಾರೆ.

‘‘ಬೆರಳ್‌ಗೆ ಕೊರಳ್‌’’ ನಾಟಕ ಪ್ರಕಟವಾದಾಗ, ಅದನ್ನೋದಿ, ಉಪಾಧ್ಯಾಯರ ಕೊಠಡಿಯಲ್ಲಿ ಎಲ್ಲ ಉಪನ್ಯಾಸಕರ ಮುಂದೆ ಅದನ್ನು ಪ್ರಶಂಸಿಸುತ್ತಾರೆ. ‘ಇದರಲ್ಲಿ ಲೌಕಿಕಾಲೌಕಿಕಗಳೆರಡೂ ಸಮ್ಮಿಲನಗೊಂಡಿವೆ. ಇಂತಹ ಈ ಜಗತ್ತಿನಲ್ಲಿ ಬರೆಯಬಲ್ಲ ಸಮರ್ಥರಿದ್ದಾರೆಯೆ?’ ಎಂದವರು ಪ್ರಶ್ನಿಸುತ್ತಾರೆ.

ವಿಮರ್ಶಾಕ್ಷೇತ್ರದಲ್ಲಿಯೂ ಡಿ.ಎಲ್‌. ನರಸಿಂಹಾಚಾರ್ಯರು ಮುಂದಿನವರಿಗೆ ದಾರಿ ಬೆಳಕಾಗಿದ್ದಾರೆ. ಪಂಪ ರಾಮಾಯಣ ಸಿದ್ಧರಾಮ ಚರಿತೆಗಳಿಗೆ ಬರೆದ ಪೀಠಿಕೆಗಳು ಮೌಲಿಕ ಮಾತ್ರವಲ್ಲ, ಅನ್ಯಾದೃಶ್ಯವಾದುವು. ಈ ಹೊತ್ತಿನವರೆಗೂ ಅಂಥ ವಿಮರ್ಶೆಗಳನ್ನು ನಾನು ಕಂಡಿಲ್ಲ. ನನ್ನಂಥವನಿಗಂತು ಅವರ ಪೀಠಿಕೆಗಳೇ ಮಾದರಿ. ಕನ್ನಡ ಸಾಹಿತ್ಯ ಚರಿತ್ರೆಗೆ, ಕವಿಕಾಲ ನಿರ್ಣಯದ ಬಗ್ಗೆ ಅವರು ನೀಡಿರುವ ಕೊಡುಗೆ ಅತ್ಯಮೂಲ್ಯವಾದವು. ಶಬ್ದಮಣಿದರ್ಪಣದ ಪೀಠಿಕೆಯ ಕೆಲವು ಸಮಸ್ಯೆಗಳ ಬಗ್ಗೆ ಡಾ. ಎಂ.ಎಂ. ಕಲಬುರ್ಗಿಯವರು ಪ್ರಶ್ನೆ ಎತ್ತಿದ್ದುಂಟು. ಹರಿಹರ, ಅಗ್ಗಳ, ಪೊನ್ನ ಮೊದಲಾದ ಹಳಗನ್ನಡದ ಮಹಾಕವಿಗಳ ಬಗೆಗಿನ ಮೌಲ್ಯಮಾಪನದ ಬಗ್ಗೆ ಎರಡು ಮಾತಿಲ್ಲ. ಒಂದು ರೀತಿಯಲ್ಲಿ ತೌಲನಿಕ ವಿಮರ್ಶೆಗೂ ಅವರು ನಾಂದಿಹಾಡಿದ್ದಾರೆಂದೇ ಹೇಳಬಹುದು. ಹೊಸಗನ್ನಡ ಕಾದಂಬರಿಗಳನ್ನು ವಿಮರ್ಶಿಸುವವರು ಮರಳಿ ಮಣ್ಣಗೆಯಂಥ ಶ್ರೇಷ್ಠ ಕಾದಂಬರಿಗೆ ದೊ.ಲ.ನ. ಅವರು ಬರೆದಿರುವ ವಿಮರ್ಶೆಯನ್ನು ಶ್ರದ್ಧೆಯಿಂದ ಅಧ್ಯಯನಿಸಬೇಕು.

ಕನ್ನಡ ಗಟ್ಟಿಮುಟ್ಟಾಗಿ, ಕಸುಬಾಗಿ, ಉಜ್ವಲವಾಗಿ ಬೆಳೆಯಬೇಕೆನ್ನುವವರು ಕನ್ನಡ ನಿರುಕ್ತವನ್ನು ಕುರಿತು ಅವರು ಬರೆದಿರುವ ಹಲವಾರು ಲೇಖನಗಳನ್ನೋದಬೇಕು. ಭಾಷೆಯ ಶ್ರೀಮಂತಿಕೆಯ ಬಗ್ಗೆ ದೊಲನ ಅವರಿಗೆ ಅಪಾರ ಕಳಕಳಿಯುಂಟು. ಒಮದು ಹೊಸ ಪದ ಕಣ್ಣಿಗೆ ಬಿದ್ದಾಗ ಪುಳಕಾಂಕುರವಾಗುತ್ತಿತ್ತು. ಅದಕ್ಕೆ ಬೆಲೆ ಕಟ್ಟಬಲ್ಲವರು ಯಾರು ಎನ್ನುತ್ತಿದ್ದರು. ಆದರೆ ಶಬ್ದಶುದ್ಧಿಯ ಬಗ್ಗೆ ಅವರು ಸದಾ ಜಾಗೃತರಾಗುತ್ತಿದ್ದರು. ಆ ವಿಷಯದಲ್ಲವರು ಸಂಪ್ರದಾಯವಾದಿಗಳೆಂದೇ ಹೇಳಬೇಕಾಗುತ್ತದೆ. ಗ್ರಾಮೀಣ ಶಬ್ದಗಳನ್ನವರು ಸಲೀಸಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಕನ್ನಡಕೋಶ ಸಮಿತಿಯ ಚರ್ಚೆಗಳಲ್ಲಿ ಅವರ ಇತಿಮಿತಿಗಳನ್ನು ಗಮನಿಸಬಹುದಿತ್ತು. ಸಮಿತಿಯ ಅಧ್ಯಕ್ಷರಾದ ತೀನಂಶ್ರೀಯವರು ಈ ವಿಷಯದಲ್ಲಿ ಉದಾರವಾದಗಳೆಂಬುದನ್ನು ನಾನು ಮರೆಯಲಾರೆ.

೧೯೪೭-೪೮ ರ ಅವಧಿಯಲ್ಲಿ ಸೆಂಟ್ರಲ್‌ ಕಾಲೇಜಿನ ಕನ್ನಡ ಇಲಾಖೆಯಲ್ಲಿ ಅವರು ಉಪಪ್ರಾಧ್ಯಾಪಕರಾಗಿಯೂ ನಾನು ಉಪನ್ಯಾಸಕನಾಗಿಯೂ ಕೆಲಸ ಮಾಡುತ್ತಿದ್ದೆವು. ಒಮ್ಮೊಮ್ಮೆ ಅವರ ಜತೆಯಲ್ಲಿ ಅವರ ಮನೆಯ ಕಡೆಗೆ ನಡೆದುಹೋಗುತ್ತಿದ್ದೆ. ಸಮಕಾಲೀನ ಸಾಹಿತಿಗಳ ಬಗ್ಗೆ ಮುಖ್ಯವಾಗಿ ಡಿವಿಜಿ ಮಾಸ್ತಿಯವರನ್ನು ಕುರಿತು ಆ ಸಮಯದಲ್ಲಿ ಅವರು ನನಗೆ ಬೋಧಿಸುತ್ತಿದ್ದ ಸಂಗತಿಗಳನ್ನು ಮರೆಯಲಾರೆ. ಆಗವರು ಹೇಳುತ್ತಿದ್ದ ಮಾತೊಂದು ಈಗಲೂ ನನ್ನ ಮನಸ್ಸಿನ ಮೂಲೆಯಲ್ಲಿ ಪಿಸುಗುಟ್ಟುತ್ತಿದೆ. ‘ನೋಡಯ್ಯ, ಸಾಹಿತ್ಯ ಭಾವೋಪಭಾವಗಳ ಜ್ವಾಲಾಮುಖಿ. ಅದರಲ್ಲಿ ವ್ಯವಹರಿಸುವವರು ಜ್ವಾಲಾಮುಖಿಯ ಅಂಚಿನಲ್ಲಿದ್ದು, ಭಾವೋದ್ರೇಕ ಭಾವೋತ್ಕಟತೆಗೊಳಗಾಗುತ್ತಾರೆ. ಆ ಭಾವತೀವ್ರತೆ ಹೃದಯದ ಮೇಲೆ ಒತ್ತಡವನ್ನು ಹೇರುತ್ತದೆ.””’ ದೊ.ಲ.ನ ಅವರ ಈ ಮಾತು ಎಷ್ಟರಮಟ್ಟಿಗೆ ನಿಜವೊ, ನನಗೆ ಗೊತ್ತಿಲ್ಲ. ೧೯೭೧ರಲ್ಲಿ ಅವರು ತೀರಿಕೊಂಡಾಗ, ಅವರ ಈ ಮಾತನ್ನು ನೆನೆದು ನಾನು ತುಂಬ ವ್ಯಾಕುಲಗೊಂಡೆ.

ಬೋಧನೆ ಸಾಧನೆ ಸಂಶೋಧನೆ ಲೇಖನ ಕಾಯಕದಲ್ಲಿಯೇ ತಮ್ಮ ಬದುಕನ್ನು ಸವೆಸಿ, ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅಪಾರ ಅಮೂಲ್ಯ ಸಾರಸ್ವತ ಆಸ್ತಿಯನ್ನು ಬಿಟ್ಟುಹೋಗಿರುವ ನರಸಿಂಹಾಚಾರ್ಯರರು ತಾವು ಹುಟ್ಟಿದ ಊರಿಗೆ, ಕರ್ನಾಟಕಕ್ಕೆ ‘ದೊಡ್ಡ ಬೆಲೆ’ಯನ್ನು ಸಂಪಾದಿಸಿಕೊಟ್ಟಿದ್ದಾರೆಂಬುದು ಹೆಮ್ಮೆಯ ಸಂಗತಿ.