ದಿವಂಗತ ಡಾ. ಡಿ.ಎಲ್. ನರಸಿಂಹಾಚಾರ್ಯರನ್ನು ನಾನು ಮೊದಲ ಬಾರಿ ಕಂಡದ್ದು ೧೯೪೧ರಲ್ಲಿ ಕನ್ನಡ ಭಾಷೆಯ ಐತಿಹಾಸಿಕ ವ್ಯಾಕರಣವನ್ನು ಕುರಿತು ನಾನು ಬರೆಯುತ್ತಿದ್ದ ಪ್ರಬಂಧದ ಬಗ್ಗೆ ಪುಣೆಯಿಂದ ಮೈಸೂರಿಗೆ ಬಂದಾಗ ನಾನು ಆಚಾರ್ಯರ ಮತ್ತು ದಿವಂಗತ ಪ್ರೊ. ತೀ.ನಂ.ಶ್ರೀಕಂಠಯ್ಯನವರ ಪರಿಚಯವನ್ನು ಮಾಡಿಕೊಂಡೆ. ಆಗ ಈ ಇಬ್ಬರು ವಿದ್ವಾಂಸರು ಕನ್ನಡ ಭಾಷಾಶಾಸ್ತ್ರದ ಕೆಲವು ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸಿದ್ದರು. ಅವುಗಳಲ್ಲಿ ಉತ್ತರ ಕರ್ನಾಟಕದ ಜನರು ‘ಚ’ ಕಾರವನ್ನು ಎರಡು ಬಗೆಯಾಗಿ – ಪದಾದಿಯಲ್ಲಿ ಹಾಗೂ ಪದಮಧ್ಯದಲ್ಲಿ – ಉಚ್ಚರಿಸುವ ಬಗ್ಗೆ ನನ್ನೊಡನೆ ಚರ್ಚಿಸಿದ್ದುದು ಜ್ಞಾಪಕವುಂಟು. ಆಗಲೇ ಸಂಶೋಧನಾತ್ಮಕ ವಿಷಯಗಳನ್ನು ಆಚಾರ್ಯರು ಎಷ್ಟು ಕೂಲಂಕಷವಾಗಿ ಚರ್ಚಿಸುತ್ತಾರೆಂಬುದನ್ನು ತಿಳಿದು ನಾನು ಬಹಳ ಮೆಚ್ಚಿಕೊಂಡಿದ್ದೆ. ಮುಂದೆ ೧೯೫೧ರಲ್ಲಿ ನಾನು ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯಲ್ಲಿದ್ದಾಗ ಡಾ. ನರಸಿಂಹಾಚಾರ್ಯರು ಅಲ್ಲಿಗೆ ಕನ್ನಡ ಶಬ್ದರಚನೆ ಎಂಬ ವಿಷಯದ ಮೇಲೆ ಮೂರು ಉಪನ್ಯಾಸಗಳನ್ನು ಕೊಡಲು ಬಂದಾಗ ಅವರ ವೈಯಕ್ತಿಕ ಪರಿಚಯವು ಹೆಚ್ಚಾಯಿತು. ಅವರ ವಿಶಿಷ್ಟ ವೈಕರಿಯಿಂದೊಡಗೂಡಿದ ಆ ಉಪನ್ಯಾಸಗಳು ವಿದ್ವತ್ಪೂರ್ಣವೂ ಉದ್ಬೋಧಕವೂ ಆಗಿದ್ದುವೆಂದು ಬೇರೆ ಹೇಳಬೇಕಾಗಿಲ್ಲ. ಅವರ ಆಳವಾದ ಪಾಂಡಿತ್ಯವನ್ನು ಕಂಡು ಶ್ರೋತೃವೃಂದವು ತಲೆದೂಗಿತು. ಕನ್ನಡ ಸಾಹಿತ್ಯ, ಸಂಶೋಧನೆ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಪಂಡಿತರಾಗಿದ್ದ ಡಾ. ನರಸಿಂಹಾಚಾರ್ಯರು ಕರ್ನಾಟಕ ಶಾಸನಗಳ ಅಧ್ಯಯನದಲ್ಲಿಯೂ ವಿಶೇಷ ಪರಿಣಿತಿಯನ್ನು ಪಡೆದಿದ್ದರು. ಸಹಸ್ರಾರು ಶಾಸನಗಳನ್ನು ಅಭ್ಯಸಿಸಿ ಅವುಗಳ ಮಹತ್ವವನ್ನು ಅರಿತುಕೊಂಡಿದ್ದರು. ಇತ್ತೀಚೆಗೆ ಪುನರ್ಮುದ್ರಿತವಾದ ಅವರ ವಡ್ಡಾರಾಧನೆಯ ಪೀಠಿಕೆಯಲ್ಲಿ ಮತ್ತು ಅನೇಕ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸುವಾಗ ಹಾಗೂ ಲೇಖನಗಳನ್ನು ಬರೆಯುವಾದ ಆಚಾರ್ಯರು ಬಳಸಿಕೊಂಡಿರುವ ಶಾಸನ ಸಾಮಗ್ರಿಗಳು ವಿಪುಲವಾಗಿವೆ. ಸಾಹಿತ್ಯ ಪರಷಿತ್ತಿನ ಕನ್ನಡ ನಿಘಂಟಿಗಾಗಿ ಅನೇಕ ಶಾಸನಗಳ ಶಬ್ದಸಂಗ್ರಹವನ್ನು ಅವರು ಮಾಡಿದ್ದಾರೆ. ಕ್ರಿ.ಶ. ೧೦ನೆಯ ಶತಮಾನದ ತಳಂಗೆರೆ ಶಾಸನದ ಭಾಷೆ, ವ್ಯಾಕರಣ ಮತ್ತು ಛಂದಸ್ಸಿನ ಮಹತ್ವದ ಬಗ್ಗೆ ವಿದ್ವತ್ಪೂರ್ಣವಾದ ಲೇಖನವನ್ನು ಅವರು ಶ್ರೀ ಎನ್. ಲಕ್ಷ್ಮೀನಾರಾಯಣರಾವ್ ಅವರ ಜೊತೆ ಬರೆದು ‘ಎಫಿಗ್ರಾಫಿಯಾ ಇಂಡಿಕಾ’ ಪತ್ರಿಕೆಯಲ್ಲಿ ಪ್ರಕಟಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ಶಾಸನ ಇಲಾಖೆಯು ಮೈಸೂರಿಗೆ ವರ್ಗವಾದ ನಂತರ ನನಗೆ ಡಾ. ನರಸಿಂಹಾಚಾರ್ಯರ ನಿಕಟ ಸಂಪರ್ಕವುಂಟಾಗಿತ್ತು. ಅನೇಕ ಸಲ ಅವರು ನಮ್ಮ ಕಾರ್ಯಾಲಯಕ್ಕೆ ಆಗಮಿಸಿ ಶಾಸನಗಳ ಮೂಲ ಪಡಿಯಚ್ಚುಗಳನ್ನು ನೋಡುವುದರಲ್ಲಿ ವಿಶೇಷ ಆಸ್ಥೆಯನ್ನು ವಹಿಸುತ್ತಿದ್ದರು. ಪಂಪನ ತಮ್ಮ ಜಿನವಲ್ಲಭನ ಶಾಸನದ ಬಗ್ಗೆ ಅವರು ವಿಶೇಷ ಗಮನವನ್ನಿರಿಸಿದ ಕನ್ನಡದ ಘನ ವಿದ್ವಾಂಸರನ್ನು ಕಳೆದುಕೊಂಡಂತಾಗಿದೆ.

* ಕನ್ನಡನುಡಿ (ಸಂ. ೩೪, ಸಂ. ೧೫, ೧೬) ಪು. ೨೨