೧೯೪೮-೪೯ರಲ್ಲಿ ನಾನು ಬಿ.ಎ.(ಆನರ್ಸ್) ಕೊನೆಯ ತರಗತಿಯಲ್ಲಿದ್ದೆ. ಛಂದಸ್ಸು ನೆನಪಿಟ್ಟುಕೊಳ್ಳುವುದು ನನಗೆ ತಲೆನೋವಿನ ಕೆಲಸವಾಗಿತ್ತು. ಕನ್ನಡ ಕೈಪಿಡಿಯಲ್ಲಿ ಸಂಸ್ಕೃತ ವೃತ್ತಗಳ ಛಂಧೋವಿಲಾಸವನ್ನು ಯಾಂತ್ರಿಕವಾಗಿ ನಿರೂಪಿಸಿದೆ. ಉದಾಹರಣೆಗಾಗಿ ಚಂಪಕಮಾಲ ತೆಗೆದುಕೊಳ್ಳಿ. “ನಜಭಜಜಂಜರಂ ಚಂಪಕಮಾಲಂ” ಇದರಲ್ಲಿ ನೀರಸತೆ ಎದ್ದು ಕಾಣುವುದಿಲ್ಲವೆ? ಇಂಥದನ್ನು ಮರೆಯದಂತೆ ನೆನಪಿಟ್ಟುಕೊಳ್ಳುವುದು ಪಂಡಿತ ಬುದ್ಧಿಗೆ ಮಾತ್ರ ಸಾಧ್ಯ. ನನಗೂ ಶಾಸ್ತ್ರ ಭಾಗಕ್ಕೂ ಎಣ್ಣೆ ಸೀಗೆಕಾಯಿಯ ಸ್ನೇಹ. ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ ಇವು ಇಂದಿಗೂ ನನಗೆ ಹಿಡಿಸಲಿಲ್ಲ ಇಂದಿಗೂ ಹಿಡಿಸುವುದಿಲ್ಲ. ತವುಡು ಕುಟ್ಟುವ ಕಾರ್ಯವೆಂದು ನಾನೇ ತೀರ್ಮಾನಕ್ಕೆ ಬಂದಿದ್ದೆ. ವಿದ್ವಾಂಸರು ಒಪ್ಪಲಿ ಬಿಡಲಿ ಇಂದಿಗೂ ಅದೇ ನನ್ನ ತೀರ್ಮಾನ. ಆದರೂ ಹಾಳಾದ ಪರೀಕ್ಷೆ ಒಂದಿದೆಯಲ್ಲ. ಇವು ನನಗೆ ಒಪ್ಪಲಿ ಬಿಡಲಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾದರೆ ಇವನ್ನು ಒಗ್ಗಿಸಿಕೊಳ್ಳಲೇಬೇಕು. ಬಲವಂತಕ್ಕೆ ಮಕ್ಕಳು ಔಷಧಿ ಕುಡಿಯುವಂತೆ ನಾನೂ ಮುಖ ಸಿಂಡರಿಸಿಕೊಂಡು ಸಾಹಿತ್ಯದ ಈ ಶಾಸ್ತ್ರ ವಿಭಾಗಕ್ಕೆ ತಾಳ ಹಾಕಬೇಕಾಯಿತು.

ಪರಮಪೂಜ್ಯ ದೊ.ಲ.ನ.ರವರು ಛಂದಸ್ಸಿಗೆ ಬರುತ್ತಿದ್ದರು. ಎಲ್ಲ ಛಂದೋ ವಿಧಾನಗಳೂ ಅವರ ತುಟಿ ನಾಲಗೆಯಲ್ಲಿ ನರ್ತಿಸುತ್ತಿದ್ದವು. ಆಗಾಗ ನಮ್ಮನ್ನು ಪ್ರಶ್ನೆ ಕೇಳಿ ಕೆಣಕುತ್ತಿದ್ದರು. ಛಂದಸ್ಸು ನನ್ನ ತಲೆಯಲ್ಲಿ ನಿಲ್ಲಲೊಲ್ಲದು. ನಾನು ಬಿಡಲೊಲ್ಲೆ. ಏನಾದರೂ ಮಾಡಿ ಹೊಸ ವಿಧಾನವನ್ನು ಕಂಡುಹಿಡಿಯಬೇಕೆಂದು ಹಟತೊಟ್ಟೆನು. ನನ್ನ ಹೆಸರೇ ಬ್ರಹ್ಮ! ಸೃಷ್ಟಿಕಾರ್ಯ ನನಗೆ ಹೊಸದೇನಲ್ಲ. ವಿನೋದವಾಗಿಯೂ ಇರಬೇಕು, ವಿಷಯ ಪೂರ್ಣವಾಗಿಯೂ ಇರಬೇಕು. ನನ್ನಲ್ಲೇ ಚಿಂತನ ಮಂಥನ ನಡೆಯಿತು. ನನ್ನ ಪ್ರತಿಭೆಯ ಸಂಪುಟ ಅರಳಿತು. ಕಲ್ಪನಾ ವಿಲಾಸ ಗರಿಗೆದರಿತು! ಸಂಸ್ಕೃತ ವೃತ್ತಗಳ ಛಂದೋವಿಲಾಸವನ್ನೆಲ್ಲ ಕರಾರುವಕ್ಕಾಗಿ, ರಸವತ್ತಾಗಿ ನಾನೇ ರಚಿಸಿದೆ. ತುಂಬ ರಹಸ್ಯವಾಗಿ ಈ ಸೃಷ್ಟಿಕಾರ್ಯ ನಡೆಯಿತು. ಒಮ್ಮೆ ಪೂಜ್ಯ ದೊ.ಲ.ನ.ರವರ ಗಮನಕ್ಕೆ ತಂದು ಭೇಷ್ ಎನ್ನಿಸಿಕೊಳ್ಳಬೇಕೆಂಬ ಚಪಲ ನನ್ನನ್ನು ಕಾಡಿತು. ಒಂದು ದಿನ ತಡೆದೆ. ಎರಡು ದಿನ ತಡೆದೆ. ಅನಂತರ ತಡೆಯದಾದೆ. ನನ್ನ ಸೃಷ್ಟಿ ಕಾರ್ಯವನ್ನು ಧೈರ್ಯಮಾಡಿ ಡಿ.ಎಲ್.ಎನ್.ರವರ ಮುಂದಿಟ್ಟೆ. ನೋಡುತ್ತಿದ್ದಂತೆ ಮೊಟ್ಟಮೊದಲು ಅವರ ಕಣ್ಣಿಗೆ ಬಿದ್ದ ಛಂದೋವಿಲಾಸವೆಂದರೆ “ಕುರಿಗೊಬ್ಬರ ತೋಟಕೆ ಜೀವರಸಂ!” ಈ ಮಹಾಕಾವ್ಯ. ಇದರಲ್ಲಿ ತೋಟಕ ವೃತ್ತದ ರಚನಾ ವೈಖರಿಯೆಲ್ಲ ಅಡಗಿದೆ. ನೆನಪೂ ಇಟ್ಟುಕೊಳ್ಳಬಹುದು. ಇಷ್ಟೇ ರಸಪೂರ್ಣವಾಗಿ ಉಳಿದ ಛಂದೋವಿಧಾನಗಳಿಗೂ ನನ್ನ ಬ್ರಹ್ಮ ಸೃಷ್ಟಿ ಪರಿಪೂರ್ಣವಾಗಿ ನಡೆದಿದ್ದಿತು.

ಇದ್ದಕ್ಕಿದಂತೆ ದೊ.ಲ.ನ.ರವರ ಮುಖ ಕೆಂಪಿಟ್ಟಿತು. ಕಣ್ಣು ಕೆಂಡವಾಯಿತು. ತುಟಿ ನಡುಗಿದವು. ಗದೆಯೆತ್ತುವ ಠೀವಿಯಲ್ಲಿ ಮೈ ತೂಗಾಡಿತು. ನೀನು ಮಹಾ ವಿದ್ವಾಂಸನೇನಯ್ಯ ಎಂಬ ನಾಂದಿಯೊಡನೆ ನನ್ನ ಮೇಲೆ ಕನ್ನಡದ, ಇಂಗ್ಲಿಷಿನ ಹಾಗೆ ಸಂಸ್ಕೃತದ ಬೈಗಳ ಸುರಿಮಳೆಯಾಯಿತು. ನನ್ನ ಸೃಷ್ಟಿಯಲ್ಲೇ ಭೂಕಂಪವಾದಂತೆ ನಾನು ಬೆವತುಹೋದೆನು. ನನ್ನ ಮಹಾ ಯೋಜನೆಯೆಲ್ಲ ಆಭಾಸಕ್ಕೆ ಗುರಿಯಾಯಿತು. ಆಗಾಗ ನನ್ನನ್ನು ನಿಲ್ಲಿಸಿ ದೊ.ಲ.ನ.ರವರು ಮುಖದ ಮೇಲೆ ನೀರಿಳಿಸಿದರು. ಕಾಲಭೈರವನಂತೆ ಕೂಗಾಡಿದರು. ನಾನು ತುಟಿಪಿಟಿಕ್ಕೆನ್ನಲಿಲ್ಲ. ತರಗತಿಯಲ್ಲಿ ಉಳಿದವರಿಗಾರಿಗೂ ದೊ.ಲ.ನ. ರವರ ಭಾರ್ಗವಾವೇಶಕ್ಕೆ ಕಾರಣ ತಿಳಿಯದು. ಆ ಘಂಟೆಯೆಲ್ಲ ನನ್ನ ಮೇಲೆ ರೇಗಾಡುವುದರಲ್ಲೇ ಕಳೆದುಹೋಯಿತು. ಅವರು ರೇಗುವುದು ನಾನು ಸತ್ತ ಶವದಂತೆ ತೆಪ್ಪಗಿರುವುದು! ಎರಡೂ ಎರಡು ಪರಮಾವಧಿಯನ್ನು ಮುಟ್ಟದ್ದವು.

ತರಗತಿ ಮುಗಿಯಿತು. ಉಳಿದವರು ಕಾರಣವನ್ನು ಕೇಳಿದರು. ನಾನು ವಿವರಿಸಿದೆ. ತಮ್ಮ ಸಂತಾಪವನ್ನು ಸಹಪಾಠಿಗಳು ವ್ಯಕ್ತಪಡಿಸಿದರು. ಒಬ್ಬಿಬ್ಬರು “ನೀನು ತಿರುಗಿ ಬೀಳಬೇಕಾಗಿತ್ತು. ನಿನ್ನ ಹೇಡಿತನ ವಿದ್ಯಾರ್ಥಿ ಸಮುದಾಯಕ್ಕೇನೆ ಅಪಮಾನಕರವಾದುದು” ಎಂದು ನನ್ನನ್ನು ಹೀಯಾಳಿಸಿದರು.

ಒಂದು ವಾರ ನಾನು ದೊ.ಲ.ನ.ರವರ ತರಗತಿಗೆ ಚಕ್ಕರ್ ಹೊಡೆದೆ. ಅವರಲ್ಲಿ ಹೋಗಿ ಕ್ಷಮೆ ಕೇಳಲಿಲ್ಲ. ಕೇಳಬಾರದೆಂಬ ಹಟವೇನೂ ಇರಲಿಲ್ಲ, ಅವರನ್ನು ನೆನೆದರೆ ನಡುಕಬರುವಾಗ ಪ್ರತ್ಯಕ್ಷವಾಗಿ ದರ್ಶನ ಮಾಡುವ ಧೈರ್ಯವೆಲ್ಲಿ? ಒಂದು ವಾರ ಕಳೆದ ಮೇಲೆ ದೊ.ಲ.ನ.ರವರೇ ಪ್ರಯಾಸಪಟ್ಟು ನನ್ನನ್ನು ಹುಡುಕಿಕೊಂಡು ಬಂದರು. “ರೀ ಬ್ರಹ್ಮಪ್ಪ!” ಎಂದು ಕೂಗಿದರು. ತಿರುಗಿ ನೋಡಿದೆ. ಅನಿರೀಕ್ಷಿತವಾಗಿ ದೊ.ಲ.ನ.ರವರ ದರ್ಶನ! ಜಂಘಾಬಲವೇ ಉಡುಗಿದಂತಾಯಿತು! “ಇಲ್ಲ ಬನ್ರಿ” ಎಂದು ಕರೆದರು. ವಿಧಿಯಿಲ್ಲ, ಪುಣ್ಯಕೋಟಿ ಹಸುವಿನಂತೆ ಅವರ ಬಳಿ ಹೋಗಿ ತಲೆ ತಗ್ಗಿಸಿಕೊಂಡು ನಿಂತೆನು. ನನ್ನ ಬ್ರಹ್ಮಸೃಷ್ಟಿಯ ಛಂದೋವಿಲಾಸದ ಲೇಖನವನ್ನು ಹಿಡಿದುಕೊಂಡು “ಇದನ್ನು ಯಾವ ಉದ್ದೇಶದಿಂದ ನೀವು ಬರೆದಿರಿ” ಎಂದು ದೊ.ಲ.ನ.ರವರು ಮೃದವಾಗಿ ಕೇಳಿದರು. ನನಗೂ ತುಸು ಧೈರ್ಯ ಬಂದಿತು. “ನೆನಪಿಟ್ಟುಕೊಳ್ಳಲು ಈ ರೀತಿ ಮಾಡಿದೆ ಸಾರ್” ಎಂದು ಗೊಣಗಿದೆನು. “ಹಾಗೋ? ನಡಿಯಿರಿ ಹೊಟೇಲಿನಲ್ಲಿ ಮಾತಾಡೋಣ” ಎಂದು ಕೈ ಹಿಡಿದು ಕರೆದುಕೊಂಡು ಬಾದಾಮಿ ಹಲ್ವ, ತರಿಸಿದರು, ಮಸಾಲೆ ದೋಸೆ ತರಿಸಿದರು. ನನಗೂ ಬಲವಂತವಾಗಿ ತಿನ್ನಿಸಿ ಅವರೂ ತಿಂದರು. “ಬ್ರಹ್ಮಪ್ಪ, ನಾನೇ ದುಡುಕಿದೆ. ಕ್ಷಮಿಸು” ಎನ್ನುತ್ತ ಎರಡು ತೊಟ್ಟು ಕಂಬನಿ ಮಿಡಿದರು. ನಾನು ಹರಶಿವ ಎನ್ನಲಿಲ್ಲ. “ನಡಿ ಕ್ಲಾಸಿಗೆ ಹೋಗೋಣ” ಎಂದು ಕರೆದುಕೊಂಡು ಹೋದರು. ಕ್ಲಾಸಿನಲ್ಲಿ ನಿಂತು ಮತ್ತೊಮ್ಮೆ ನನ್ನನ್ನು ವೃಥಾ ಬೈದುದಕ್ಕಾಗಿ ಕ್ಷಮೆ ಕೇಳಿದರು. ಅಂದಿನಿಂದ ನನಗೂ ಅವರಿಗೂ ತುಂಬ ಹತ್ತಿರವಾಯಿತು.

ತಾ. ೨೪.೫.೭೧ರಂದು ನಾನು ಅವರ ಮನೆಗೆ ಹೋಗಿದ್ದೆ. “ದಿವಂಗತ ಲೂಯಿಸ್‌ರೈಸ್ ಹಾಗೂ ದಿವಂಗತ ಆರ್. ನರಸಿಂಹಾಚಾರ್ಯರ ಜೀವನ ಪರಿಚಯ ಬೇಕಾಗಿದೆ. ಸಾರ್. ತಮ್ಮಂಥವರು ಅದನ್ನು ಕೊಡಬೇಕು” ಎಂದು ಪ್ರಾರ್ಥಿಸಿದ್ದೆ. “ಬರಿಯಬೇಕಾದುದು ಎಷ್ಟೋ ಇದೆಯಪ್ಪ!” ಎಂದು ಉತ್ತರಿಸಿ ಕಾಫಿ ಕೊಟ್ಟಿದ್ದರು. ಕನ್ನಡ ನಿಘಂಟಿನ ಬಗ್ಗೆ ಮಾತಾಡಿದರು. ಅನಂತರ ನನ್ನನ್ನು ಬೀಳ್ಕೊಡಲು ಕಾಂಪೊಂಡ್ ಬಾಗಲಿತನಕ ಬಂದರು! ಅದೇ ಕೊನೆಯ ದರ್ಶನವಾಯಿತು.

ಅವರು ತೋರುವಂಥ ಕೋಪವನ್ನೂ ನಾನು ಕಾಣೆ, ಅವರು ತೋರುವಂಥ ಪ್ರೀತಿಯನ್ನೂ ಕಾಣೆ, ಅವರ ಕೋಪ ನಿರಮೇಲಣ ಬರಹವಾದರೆ ಅವರ ಪ್ರೀತಿ ಶಿಲಾ ಶಾಸನಾಕ್ಷರಗಳಂತೆ.

* ಕನ್ನಡನುಡಿ (ಸಂ. ೩೪, ಸಂ. ೧೫, ೧೬) ಪು. ೨೧