ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ ವರ್ಗದಲ್ಲಿ ಕನ್ನಡದ ವಿದ್ಯಾರ್ಥಿಗಳ ಪ್ರೀತಿ ಗೌರವಗಳಿಗೆ ಪಾತ್ರರಾಗಿ ಕನ್ನಡದ ಎರಡು ಕಣ್ಣುಗಳೂ ಎಂಬಂತಿರುವ ಸುಮನಸರಾದ ಇಬ್ಬರು ವಿದ್ವನ್ಮಣಿಗಳಿದ್ದಾರೆ. ಇಬ್ಬರ ವಯಸ್ಸೂ ಒಂದೆ, ಆಲ್ತನ ಒಂದೆ, ಎತ್ತರ ಒಂದೆ, ಒಂದೆ ರೀತಿಯ ಕಾಯಕ, ಒಂದೆ ರೀತಿಯ ದೃಷ್ಟಿ, ಒಂದೆ ರೀತಿಯ ಜೀವ. ಇವರಲ್ಲಿ ಒಬ್ಬರು “ಅಯ್ಯನವರು” ಇನ್ನೊಬ್ಬರು “ಆಚಾರ್ಯರು”. ಈಗ “ಆಚಾರ್ಯ”ರ ವಿಷಯದಲ್ಲಿ ಕೆಲವು ಮಾತುಗಳನ್ನು ಮನಬಿಚ್ಚಿ ಹೇಳಬೇಕೆಂದಿದೆ. ‘ಅಯ್ಯ’ನವರ ವಿಷಯವಾಗಿ ಈಗ ಬರೆದಿಲ್ಲ. ಆ ಕಾಲವು ಬೇಗ ಬರಲಿ.

ಶಿವಕೋಟಾಚಾರ್ಯನ “ವಡ್ಡಾರಾಧನೆ” ಎಂಬ ಹಳಗನ್ನಡ ಗದ್ಯ-ಕಥಾ ಸಂಗ್ರಹವನ್ನು ಸಂಪಾದಿಸಿ, ಶೋಧಿಸಿ, ಪರಿಷ್ಕರಿಸಿ ಬೆಳಕಿಗೆ ತಂದವರು, ನಾಗಚಂದ್ರನ “ರಾಮಚಂದ್ರ ಚರಿತ” ವನ್ನು ವಿದ್ವಜನರೂ, ರಸಿಕರೂ ಮೆಚ್ಚುವಂತೆ ಸಂಗ್ರಹಿಸಿ ವಿದ್ವತ್‌ ಪರಿಪೂರ್ಣವಾದ ಪೀಠಿಕೆಯನ್ನು ಬರೆದು ಖ್ಯಾತಿ ಪಡೆದವರು, ರಾಘವಾಂಕನ “ಸಿದ್ಧರಾಮ ಚಾರಿತ್ರ” ವನ್ನು ‘ಸುಳಿವ ಶಾಸನ’ ಎನಿಸಿದವರು, “ಹಂಪೆಯ ಹರಿಹರ”ನನ್ನು ಕಂಡವರು, ಶಾಂತಿನಾಥನ “ಸುಕುಮಾರ ಚರಿತೆ”ಯನ್ನು ಹೊರಗೆತಂದವರು, “ಶಬ್ದ ವಿಹಾರ”ದಲ್ಲಿ ಮೈಮರೆತಿರುವವರು ಕೇಶರಾಜನ “ಶಬ್ದಮಣಿ ದರ್ಪಣ”ವನ್ನು ಬೆಳಗುವವರು ಇನ್ನೂ ಏನೇನೋ, ಎಷ್ಟೆಷ್ಟೋ ಕಡೆ ಬರೆದವರು, ಭಾಷಣ ಮಾಡಿದವರು –ಇವರೇ ನಮ್ಮ ಶ್ರೀ ಡಿ.ಎಲ್‌. ನರಸಿಂಹಾಚಾರ್‌. ವಿದ್ವಾಂಸರೊಬ್ಬರು ಇವರಿಗೆ “ಓಡಾಡುವ ಕನ್ನಡ ನಿಘಂಟು” ಎಂದು ಕರೆದಿದ್ದಾರೆ. ಇನ್ನೊಬ್ಬರು “ಓಡಾಡುವ ವಿಶ್ವಕೋಶ” ಎಂದಿರುವುದೂ ಉಂಟು. ಮೊದಲನೆಯ ಮಾತು ಸುಳ್ಳಲ್ಲ. ಎರಡನೆಯದು ಅಭಿಮಾನದಿಂದಾಡಿದ ಮಾತಾದರೂ ಅದರಲ್ಲಿ ಸತ್ಯದ ಮೂರು ಅಂಶವಾದರೂ ಉಂಟು. ಇವರು “ಕೇಶಿರಾಜನ ಜಾತಿ” ಎಂಬುದಂತೂ ನೂರಕ್ಕೆ ನೂರು ಸತ್ಯ. ಅಷ್ಟಿಷ್ಟಲ್ಲದೆ ಇವರನ್ನು “ಕನ್ನಡ-ಕನ್ನಡ ಕೋಶ”ದ ಸಂಪಾದಕರಾಗಿ ನೇಮಿಸಿದ್ದರೆ?

ಕವಿತೆಗಳನ್ನು ಹಾಡಲಿಲ್ಲ, ಕಾದಂಬರಿಗಳನ್ನು ಬರೆಯಲಿಲ್ಲ. ಕಥೆ ಕಟ್ಟಲಿಲ್ಲ, ನಾಟಕ ರಚಿಸಲಿಲ್ಲ, ಹರಟೆ ಕೊಚ್ಚಲಿಲ್ಲ, ಸ್ವತಂತ್ರ ಪ್ರಬಂಧವನ್ನು ಬಹುಶಃ ಬರೆಯಲಿಲ್ಲ- ಈ ಓಜಯ್ಯಗಳು. ಕನ್ನಡ ನಾಡಿನ ಕಾಲೇಜುಗಳಲ್ಲಿ ಕಲಿತಿರುವ ಕಲಿಯುತ್ತಿರುವ ಕನ್ನಡಿಗ, ಕನ್ನಡಿತಿಯರಿಗೆಲ್ಲ ಇವರ ಹೆಸರು ಮಾತ್ರ ಗೊತ್ತಿರಲಿಕ್ಕೆ ಸಾಕು; ಇವರ ಪಾಂಡಿತ್ಯ, ಪ್ರತಿಭೆ, ಅತ್ಯದ್ಭುತವಾದ ಜ್ಞಾಪಕ ಶಕ್ತಿ, ಸರಸ ಸಜ್ಜನಿಕೆ, ಕೆಲವರಿಗೆ ಮಾತ್ರ ಪರಿಚಯ; ಇವರನ್ನು ಸ್ನೇಹಿತರೆಂದು ಸ್ವೀಕರಿಸಿ ತಮ್ಮ ಕೆಳೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ಕನ್ನಡಿಗರಂತೂ ಇನ್ನೂ ಕಡಿಮೆ. ಆದರೂ ಇವರು ಕನ್ನಡ ಸಾಹಿತ್ಯ ಸಮ್ಮೇಳನದಂಥ ಮಹಾ ಮಹಾ ಸಮಾರಂಭಕ್ಕೆ ಅಧ್ಯಕ್ಷರಾಗಿ ಆರಿಸಲ್ಪಟ್ಟರು. ಕನ್ನಡ ಸರಸ್ವತಿ ತನ್ನ ಹೆಮ್ಮೆಯ ಹಿರಿಮಗನೆಂದು ಆರಿಸಿ, ಆದರಿಸಿದಳು.

ಮೂರು ನಾಲ್ಕು ದಶಕಗಳವರೆಗೆ ಕನ್ನಡದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನೆರೆದು ಕನ್ನಡ ಕವಿಕಾವ್ಯಗಳ ವಿಚಾರಗಳ ವಿಚಾರವಾಗಿ ಹಲವಾರು ವಿಮರ್ಶಾತ್ಮಕ ಪ್ರಬಂಧಗಳನ್ನೂ, ಲೇಖನಗಳನ್ನು ಬರೆದು, ಕನ್ನಡ ಸಾಹಿತ್ಯ ಸಂಸ್ಕೃತಿಗಳ ವಿಷಯವಾಗಿ ನೂರಾರು ಕಡೆ ವಿದ್ವತ್‌ಪರಿಪೂರ್ಣವೂ, ವಿಚಾರ ಪ್ರಚೋದಕವೂ ಆದ ಉಪನ್ಯಾಸಗಳನ್ನು ಮಾಡಿ, ಕನ್ನಡದ ನಂದಾದೀವಿಗೆಯನ್ನು ಬೆಳೆಸುತ್ತಿರುವ ಇವರು ಅಧ್ಯಕ್ಷ ಸ್ಥಾನಕ್ಕೆ ಆರಿಸಿ ಬಂದಾಗ “ಇವರೇ ತಕ್ಕವರು” ಎಂದು ಎಲ್ಲರೂ ತಮ್ಮ ಸಂತೋಷವನ್ನು ವ್ಯಕ್ತ ಪಡಿಸುವವರೆ! ಇವರೇಕೆ? ಎಂಬ ವಕ್ರಪ್ರಶ್ನೆ ಬಹುಶಃ ಯಾವ ಒಂದು ಬಾಯಿಂದಲೂ ಬಂದಿರಲಾರದು.

ವಯಸ್ಸಿನ ದೆಶೆಯಿಂದಲ್ಲದೆ, ಪಾಂಡಿತ್ಯದ ಭಾರದಿಂದ ನಸುಬಾಗಿರುವ ಕೊಂಚ ಸ್ಥೂಲಕಾಯದ, ಎಣ್ಣೆ ಗೆಂಪಿನ ಕಟ್ಟಾಳು ಶುಭ್ರವಾದ ತೆಳ್ಳನೆಯ ಪಂಚೆ, ಕೊರಳು ಮುಚ್ಚಿದ ಕೋಟು (ನಾವು ಕಂಡಂತೆ ಮೊದಲು ಟೈಕಾಲರ್‌ ಧರಿಸುತ್ತಿದ್ದುದುಂಟು) ತಲೆಗೊಂದು ಟೋಪಿ, ಇಲ್ಲವೆ ಜರಿಯಂಚಿನ ಪೇಟ, ಬಲದ ಕೈಯಲ್ಲಿ ಛತ್ರಿ, ಎಡಗೈಯಲ್ಲಿ ನಾಲ್ಕಾರು ದಪ್ಪನೆಯ ಪುಸ್ತಕಗಳು, ಇಷ್ಟು ಭಾರವನ್ನೂ ತಡೆದುಕೊಳ್ಳಬಲ್ಲ ಮಜಭೂತಾದ ಎಕ್ಕಡಗಳು ಇವರೇ ನಮ್ಮ ದೊ.ಲ.ನ. ಅವರ ದೊಡ್ಡಂಗಿಯ ಬೊಕ್ಕಣದಲ್ಲಿ ಅವಿತುಕೊಂಡಿರುವ ಬಹುವರ್ಣರಂಜಿತ ಕರವಸ್ತ್ರದ ಮಾತು ಈಗೇಕೆ?

ಇವರ ಪಾಂಡಿತ್ಯ ಪ್ರತಿಭೆಗಳ ಬೀಸು ಬಿತ್ತರಗಳನ್ನು ಕುರಿತು ಸುದೀರ್ಘವಾಗಿ ಬರೆಯುವುದಕ್ಕೆ ಇದು ಸಮಯವಲ್ಲ; ಸ್ಥಳವೂ ಅಲ್ಲ. ಆದರೆ ದಿಕ್ಸೂಚಿಯಾಗಿ ಕೆಲವು ಮಾತುಗಳನ್ನು ಹೇಳಬಹುದು. ಮೈಸೂರು ಪ್ರಾಚ್ಯ ವಿದ್ಯಾ ಸಂಶೊಧನಾಲಯ (Oriental Research Institute, Mysore)ದಲ್ಲಿ ಸಂಗ್ರಹಿಸಿ ಸುರಕ್ಷಿತವಾಗಿಟ್ಟಿರುವ ಕನ್ನಡ ಹಸ್ತಪ್ರತಿಗಳನ್ನು ಒಂದೊಂದಾಗಿ ತೆಗೆದುಕೊಂಡು ಪರಿಶೀಲಿಸುತ್ತ ಈ ಗ್ರಂಥವನ್ನು ನಾನೇ ಮೊದಲ ಬಾರಿಗೆ ಕೂಲಂಕಷವಾಗಿ ಪರಿಶೀಲಿಸುತ್ತಿರುವವನು ಎಂಬ ಸ್ವಯಂ ಪ್ರತಿಷ್ಠೆಯ ಗರಿಗಳನ್ನು ಮುದುರಿಸಿಕೊಳ್ಳಬೇಕಾಗುತ್ತದೆ. ಕಾರಣವಿಷ್ಟೆ, ಆ ಗ್ರಂಥಗಳಲ್ಲಿ ಆ ಕಾಲದಲ್ಲಿ ಮಸಿಯಲ್ಲಿ ಕೆಳಗೆರೆ ಎಳೆದಿರುವುದೋ ಅಲ್ಲೊಂದು ಮಾತು ಇಲ್ಲೊಂದು ಮಾತು ಬರೆದಿರುವುದೋ ಆ ತರುಣ ವಿದ್ವಾಂಸನ ಕಣ್ಣಿಗೆ ಬೀಳುವುದು. ಇದನ್ನು ನೋಡಿದ ಆತ ಈ ಗವಿಗೂ ಬಂದು ಹೆಜ್ಜೆ ಮೂಡಿಸಿ ಹೋಗಿದೆಯಲ್ಲಪ್ಪಾ “ಆ ಸಿಂಹ” ಎನ್ನುತ್ತಾನೆ. ಆ ಸಿಂಹ ಇನ್ನಾರು? ಅವರೇ ಶ್ರೀ ನರಸಿಂಹ ಆಚಾರ್ಯ.
ಹಸ್ತ ಪ್ರತಿಗಳ ವಿದ್ಯಾರಣ್ಯದ ಮೂಲೆ ಮುಡಿಕೆಗಳಲ್ಲಿ, ಕಗ್ಗಾಡು ಸುಡುಗಾಡುಗಳಲ್ಲಿ ಬೇರೆಯ ವಿದ್ವಾಂಸರೂ ಸಂಚಾರ ಮಾಡಿದುದುಂಟು. ಅಲ್ಲೆಲ್ಲಾ ಈ ಆಚಾರ್ಯರು ಖಂಡಿತವಾಗಿಯೂ ಹೋಗಿ ಬಂದವರೆ. ಆದರೆ ಇವರ ಕಣ್ಣಿಗೆ ಬಿದ್ದಿರುವಷಟು ಬಗೆ ಬಗೆಯ ಮರ ಬಳ್ಳಿ ಪೊದರುಗಳು, ಮೃಗ ಪಕ್ಷಿ ಕ್ರಿಮಿಕೀಟಗಳು ಬೇರೆಯವರ ದೃಷ್ಟಿಗೆ ಬಿದ್ದಿರಲಿಕ್ಕಿಲ್ಲ. ಇವರು ತುಳಿದವರಷ್ಟು, ತಿಳಿದಿರುವಷ್ಟು ಹಾದಿಗಳನ್ನು ಬೇರೆಯವರಾರೂ ಸಂಪೂರ್ಣವಾಗಿ ಅರಿತಿರಲಾರರು. ಇವರು ಕಂಡಂಥ ದಿವ್ಯದರ್ಶನಗಳನ್ನು ಬೇರೆಯವರು ಬಹುಶಃ ಅದೇ ಮಟ್ಟದಿಮದ ಕಂಡಿರಲಾರರು. ಹಸ್ತಪ್ರತಿಗಲ ಪ್ರಪಂಚಕ್ಕೆ ಇವರಷ್ಟು ಪರಿಚಿತರು ಹಿಂದೆ ಆಗಿಲ್ಲ ಈಗ ಇಲ್ಲ. ಮುಂದಿನ ಮಾತು ಆ ಪರಶಿವನೆ ಬಲ್ಲ!

ಇಷ್ಟೆಲ್ಲಾ ಪಾಂಡಿತ್ಯ ಪ್ರೌಢಿಮೆಗಳಿದ್ದರೂ ಇವರದು ತುಂಬ ಸಂಕೋಚ ಪ್ರಕೃತಿ. ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗಲೋ, ದೊಡ್ಡ ದೊಡ್ಡ ಸಭೆಗಳ ಮುಂದೆ ಭಾಷಣ ಮಾಡುವಾಗಲೋ ಇವರು ಮುಖ ಕೊಟ್ಟು ಮಾತನಾಡುವುದು ಕಡಿಮೆ. ತಲೆ ತಗ್ಗಿಸಿ ವಾಗ್ಬಾಣಗಳನ್ನು ಬಿಡಬೇಕು, ಇಲ್ಲವೆ ಇನ್ನೆತ್ತಲೊ ದೃಷ್ಟಿಯಿಟ್ಟು, ಪ್ರಕೃತ ವಿಷಯದ ಮೇಲೆ ಲಕ್ಷ್ಯವಿಟ್ಟು ವಿಚಾರ ಮಾಡುತ್ತಿರಬೇಕು. ಯಾರಾದರೂ ಉಡಾಳರು ಇವರ ಆತಿನ ಮಧ್ಯೆ ಪ್ರವೇಶಿಸಿ ಏನಾದರೊಂದು ಸೊಟ್ಟ ಪ್ರಶ್ನೆ ಹಾಕಿದರೆಂದರೆ ತುಂಬ ಹಿಂಸೆಯಾಗುವಂತೆ ತೋರುತ್ತದೆ. ಕೇಳಬೇಕಾದವರು ಕಣ್ಣು ಮನ ಬಿಚ್ಚಿ ಕಿವಿಗೊಟ್ಟು ಕೇಳಿದರೆ ದೊರೆಯುವುದು ಶುಚಿ, ರುಚಿಯಾದ ರಸಕವಳ. ಒಂದೊಂದು ವೇಳೆ ಇವರ ಅಂತರಂಗದ ಆವೇಗಗಳಿಗೆ ತಕ್ಕಂತೆ ಅಷ್ಟೇ ಬೇಗ ಬೇಗ ಮಾತಿನ ಮಾಲೆ ದೊರೆಯುವುದಿಲ್ಲ. ಅಂಥ ಸಂದರ್ಭದಲ್ಲಿ ಕೊಂಚ ಕಷ್ಟಪಡುತ್ತಿರುತ್ತಾರೆ. ಆಗ ಇವರ ಪಾಂಡಿತ್ಯ ಪ್ರತಿಭೆ ಬಹುಶ್ರುತತ್ವ ಅರಿತು ಮೆಚ್ಚಿಕೊಂಡವರು, ಇವರಲ್ಲಿರುವ ನ್ಯೂನತೆಯನ್ನು ಕಂಡಿರುವವರು ಒಳಗೊಳಗೇ ನಗುತ್ತಿರುತ್ತಾರೆ. ಅವರು ನಗುತ್ತಿರುವರೆಂಬುದು ಇವರಿಗೂ ಗೊತ್ತಿರುತ್ತದೆ. ಇದನ್ನೆಲ್ಲ ಬಲ್ಲವರೆ ಬಲ್ಲರು. ಆದರೆ ಈ ಯಾವ ನ್ಯೂನತೆಯೂ ಬೇರೆಯವರಿಗೆ ಕಾಣಿಸುವುದಿಲ್ಲ. ಏಕೆಂದರೆ ಇವರು ಕೇಳುವವರನ್ನು ತುಂಬ ಗಹನವಾದ ವಿಚಾರಗಳ ಲಹರಿಗಳ ಕುದುರೆಗಳ ಮೇಲೆ ಕೂರಿಸಿ ಕರೆದೊಯ್ಯುತ್ತಿರುತ್ತಾರೆ.

ಪಾಠ ಹೇಳುವುದಕ್ಕೆ ವಿದ್ಯಾರ್ಥಿಗಳ ಕೊಠಡಿಗೆ ಬರುವಾಗಲೆಲ್ಲ ತುಂಬಿದ ಬಂಡಿಯೆ. ಕಾವ್ಯವಾದರೇನು? ವ್ಯಾಕರಣವಾದರೇನು? ಅಲಂಕಾರವಾದರೇನು? ಛಂದಸ್ಸಾದರೇನು? ಯಾವುದಾದರೇನು? ಅಧಿಕಾರವಾಣಿಯಿಂದ ಆಯಾ ವಿದ್ಯಾರ್ಥಿಗಳ ಯೋಗ್ಯತೆ ಅಂತಸ್ತುಗಳನ್ನು ಅರಿತು ಹೇಳಿಕೊಡುವರು. ಒಮ್ಮೊಮ್ಮೆ ಇವರಿಗೂ ಸಕಾರಣವಾಗಿ ಕೋಪ ಉಕ್ಕಿರುವುದೂ ಉಂಟು. ಆದರೆ ಇವರೇ ಮರುಗಳಿಗೆಯಲ್ಲಿಯೆ ಮಿಡುಕುವರು. ಇವರ ಕೋಪಕ್ಕೆ ಗುರಿಯಾದವರು ಮಾರನೇ ದಿನ ಹೋಗಿ ನೋಡಿ ‘ನಮಸ್ಕಾರ ಸಾರ್‌’ ಎಂದು ಕೈ ಮುಗಿದರೆ ಆಗ ಕಾಣುವುದು-ಹಸುಮಗುವಿನ ಹದುಳ ಮನಸ್ಸು. ತಮ್ಮ ಜೇಬಿನಿಂದ ನಶ್ಯದ ಡಬ್ಬಿಯನ್ನು ಹೊರ ತೆಗೆದು ಅದರ ತಲೆಯನ್ನು ಮೆಲ್ಲಗೆ ತಟ್ಟಿ ಮುಚ್ಚಳ ತೆಗೆಯುತ್ತಾ “ಚೆನ್ನಾಗಿ ಓದುತ್ತಿದ್ದೀಯೇನಯ್ಯ?” ಎಂದು ವಾತ್ಸಲ್ಯದಿಂದ ಕೇಳುವರು. ಇದೆಲ್ಲ ಶಿಷ್ಯರ ಪುಣ್ಯ! ಇವರಲ್ಲಿಯೆ ಕಲಿತು, ಇವರ ಕೈಕೆಳಗೆ ಅಧ್ಯಾಪಕರಾಗಿರುವವರಿಗೆಲ್ಲ ಇವರು ಇಂದಿಗೂ ಮೇಷ್ಟರು. ಯಾರಾದರೂ ಕಿರಿಯ ಅಧ್ಯಾಪಕರು “ಸಾರ್‌ ಈ ಪದ್ಯದ ಅರ್ಥ ಏಕೋ ಸ್ಪಷ್ಟವಾಗಲಿಲ್ಲ” ಎಂದರೆ ಇವರದೇ ಆದ ದಪ್ಪ ದನಿಯಲ್ಲಿ ನಗು ನಗುತ್ತ “ಕೊಂಚ ಆಲೋಚನೆ ಮಾಡಿ ನೋಡಯ್ಯ” ಎಂದು ಬಿಡುವರು. ಹೇಳಿಕೊಡಬಾರದು ಎಂಬ ಉದ್ದೇಶವಲ್ಲ; ಹುಡಗರು ಓದಲಿ, ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲಿ ಎಂದು. ಆದರೂ ಕೊಂಚ ಹೊತ್ತಿನ ಮೇಲೆ ತಾವೇನೇ ಮೆಲ್ಲ ಮೆಲ್ಲನೆ ಪರ್ಯಾಯವಾಗಿ ಹೇಳಿಬಿಡುವರು. ಯಾವುದಾದರೊಂದು ಅಪೂರ್ವ ಪ್ರಯೋಗವನ್ನು ಹೇಳಿ “ ಈ ಮಾತು ಮತ್ತೆಲ್ಲಾದರೂ ಬಂದಿದೆಯೇ?” ಎಂದು ಕೇಳಿದರೆ “ನಿನಗೇ ಸಿಕ್ಕಬಹುದು. ಹುಡುಕಿ ನೋಡಯ್ಯ” ಎಂಬುದೆ ಮೊದಲ ಉತ್ತರ. ಅನಂತರ ತಡೆಯಲಾರದೆ “ಅದು……..ಜಿಲ್ಲೆಯ……. ತಾಲ್ಲೂಕಿನ……ನೆಯ ಶಾಸನದಲ್ಲಿ ಬಂದ ಜ್ಞಾಪಕವಪ್ಪ” ಎಂದೋ ಪ್ರಸ್ತುತ ಪ್ರಯೋಗ ಕಾವ್ಯದಲ್ಲಿರುವುದಾದರೆ ಆ ಕಾವ್ಯದ ಹೆಸರನ್ನೂ, ಆ ಮಾತು ಬರುವ ಸಂದರ್ಭವನ್ನೂ ಸರಿಯಾಗಿಯೆ ಹೇಳುವರು. ಅಂಥ ಅದ್ಭುತ ಜ್ಞಾಪಕಶಕ್ತಿ. ಪಂಪ, ರನ್ನ, ಹರಿಹರ, ಕುಮಾರವ್ಯಾಸ, ರಾಘವಾಂಕ, ನಂಜುಂಡ ಮುಂತಾದ ಸುಪ್ರಸಿದ್ಧರ ರಸಭರಿತ ಕಾವ್ಯಗಳು ಇವರಿಗೆ ಕರತಲಾಮಲಕ. ಇವರು ಓದದೆ ಇರುವ ಕನ್ನಡ ಶಾಸನಗಳು ಒಂದೂ ಇಲ್ಲವೆಮದು ಹೇಳುವುದು ಅತಿಶಯೋಕ್ತಿಯಲ್ಲ.

ಕನ್ನಡವೆ, ಸಂಸ್ಕೃತವೆ, ಪ್ರಾಕೃತವೆ, ತಮಿಳೆ, ತೆಲುಗೆ, ಇಂಗ್ಲಿಷೆ? ಆರೆಂಟು ಭಾಷೆಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದು ಆಂಗ್ಲ ಸಾಹಿತ್ಯದ ಹಲವಾರು ಭಾರತೀಯ ಸಾಹಿತ್ಯಗಳ ಪರಿಚಯ ಪಡೆದು ವಿಜ್ಞಾನ, ಸಾಹಿತ್ಯ, ವಿಚಾರ ಸಾಹಿತ್ಯಗಳ ತಕ್ಕಮಟ್ಟಿನ ಪರಿಚಯವಿರುವ ಕೆಲವೇ ಕೆಲವು ಕನ್ನಡಿಗರಲ್ಲಿ ಇವರೊಬ್ಬರು. ಒಂದು ಸಲ ಸಂಸ್ಕೃತದ “ಗಜಶಾಸ್ತ್ರ” ವನ್ನು ಭಂಡಾರದಿಂದ ಮನೆಗೊಯ್ಯುತ್ತಿದ್ದರು. ಈ “ಗಜವೈದ್ಯ ಏಕೆ ಸಾರ್‌?” ಎಂದೆ. ಇವರು ತಮ್ಮದೇ ಆದ ಶೈಲಿಯಲ್ಲಿ “ನೋಡಬೇಕಾಗಿದೆ. ಕಣಯ್ಯ” ಎಂದರು. ನನಗೆನ್ನಿಸಿತು- ಯಾವ ಕಾವ್ಯದಲ್ಲಿಯೋ ಗಜಶಾಸ್ತ್ರಕ್ಕೆ ಸಂಬಂಧಿಸಿದ ಮಾತು ಕಾಣಿಸಿಕೊಂಡಿರಬೇಕು, ಅದರ ಅರ್ಥವೇನೆಂಬುದು ಇವರಿಗೆ ಸ್ಪಷ್ಟವಾಗಬೇಕಾಗಿದೆ, ಅದಕ್ಕಾಗಿ ಗಜಶಾಸ್ತ್ರವನ್ನೆ ತಿರುವಿ ಹಾಕುತ್ತಿದ್ದಾರೆ. ನಾಟ್ಯಶಾಸ್ತ್ರದ ಮಾತು ತಲೆಹಾಕಿತು ಎನ್ನಿ. ಆಗ ನಾಟ್ಯಶಾಸ್ತ್ರವನ್ನೆಲ್ಲಾ ನೋಡಬೇಕು ಇವರು. ಸಂಗೀತಶಾಸ್ತ್ರ, ಕಾಮಶಾಸ್ತ್ರ, ಅವೂ ಇವರಿಗೆ ಬೇಕಾಗುತ್ತವೆ. ಮೃಗಪಕ್ಷಿ ಕ್ರಿಮಿಕೀಟಗಳ ಹೆಸರು ಬಂದು ಒಂದೊ ಎರಡೊ ಮಾತು ಮುರಾಡ ಹಾಕಿದುವೆನ್ನಿ. ಮೈಸೂರಿನಲ್ಲಿರುವ ಕೋಶವನ್ನೆಲ್ಲ ತಿರುವಿ ಹಾಕುವವರೆ!

ಶಾಸ್ತ್ರಗಳ ಮಾತು ಒತ್ತಟ್ಟಿಗಿರಲಿ, ಕ್ರಿಕೆಟ್‌ ಫುಟ್‌ಬಾಲ್‌ ಮುಂತಾದ ಕ್ರೀಡೆಗಳಲ್ಲಿಯೂ ಇವರಿಗೆ ಕನ್ನಡ ಕಾವ್ಯಗಳಲ್ಲಿರುವಷ್ಟೆ ಆಸಕ್ತಿ ಇದೆಯೆಂದು ನಂಬುತ್ತೀರಾ?

ಇವರಷ್ಟು ಅಚ್ಚುಕಟ್ಟಾಗಿ ಗ್ರಂಥ ಸಂಪಾದನೆ (ಗಂಟು ಸಂಪಾದನೆ ಅಲ್ಲ) ಗ್ರಂಥ ವಿಮರ್ಶೆ, ಶಬ್ದಾರ್ಥ, ವಿಮರ್ಶೆ, ನಿಬಂಧ ರಚನೆ ಮಾಡಬಲ್ಲ ವಿದ್ವನ್ಮಣಿಗಳು ಈಗಿನ ಕಾಲದಲ್ಲಿ ವಿರಳವೆಂದೇ ಹೇಳಬೇಕು. ತಾವು ಕೈ ಹಾಕಿದ ಕಾರ್ಯದಲ್ಲಿ ಮತ್ತೊಬ್ಬರು ಪ್ರವೇಶಮಾಡಲು ಸಾಧ್ಯವಾಗಲೇಬಾರದು. ಅಷ್ಟು ತೃಪ್ತಿಕರವಾಗಿ ನಡೆದಿರುತ್ತದೆ ಆ ಕೆಲಸ.

ಶ್ರೀ ಡಿ.ಎಲ್‌.ಎನ್‌. ಅವರು ಗ್ರಂಥಪಾಠವನ್ನೂ ಗೊತ್ತುಮಾಡುವ ರೀತಿಯನ್ನೂ ನೋಡಿಕೊಂಡು ಅನೇಕ ವಿದ್ವಾಂಸರು ತಮ್ಮ ಸಂಪಾದನಾ ಕಾರ್ಯವನ್ನು ಮಾಡುವರು. ಸಂಬಂಧಪಟ್ಟ ಗ್ರಂಥದ ಕರ್ತೃವಿನ ಕಾಲ ದೇಶ ನಿರ್ದೇಶನ, ಆತನ ವ್ಯಕ್ತಿತ್ವ ವೈಶಿಷ್ಟ್ಯ, ಆ ಗ್ರಂಥದ ಬಗ್ಗೆ ವಿಚಾರ ಪರಿಪೂರ್ಣವಾದ ತುಲನಾತ್ಮಕವಾದ ಕೂಲಂಕಷ ವಿಮರ್ಶೆ, ಟಿಪ್ಪಣಿ, ಶಬ್ದಕೋಶ, ಇವೆಲ್ಲ ಸೇರಿ ಆ ಗ್ರಂಥವು ಪುನರ್ಜನ್ಮವನ್ನು ಪಡೆಯುವುದಲ್ಲದೆ ಹೊಸ ಹೊಳಪನ್ನೂ ಪಡೆಯುತ್ತದೆ. ಇಂಥಾ ಮೇಧಾವಿ ಕ್ರಿಯಾಶೀಲರು “ಮುಟ್ಟಿದ್ದೆಲ್ಲ ಚಿನ್ನ”. ಸಂಶೋಧಾನಾತ್ಮಕ, ವಿಮರ್ಶಾತ್ಮಕ ಲೇಖನಗಳಲ್ಲಿಯೂ ನಿಬಂಧಗಳಲ್ಲಿಯೂ ಇದೇ ಪರಿಪೂರ್ಣತೆಯನ್ನೂ ಕಾಣಬಹುದು. ಹತ್ತಿಪ್ಪತ್ತು ವರ್ಷಗಳಿಂದಲೂ ಮೈಸೂರಿನಲ್ಲಿ ಪ್ರಕಟವಾಗುತ್ತಿರುವ ಸಂಶೋಧನಾತ್ಮಕ ಲೇಖನಗಳಲ್ಲಿ ಇವರ ಕೈವಾಡ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇದ್ದೇ ಇರುತ್ತದೆ ಎಂದರೆ ತಪ್ಪಾಗಲಾರದು. ಶಿಷ್ಯರು ಬರೆದು ಒಪ್ಪಿಸಿದ ಲೇಖನವನ್ನೊ, ಪುಸ್ತಕವನ್ನೊ ಈ ಗುರುಗಳು ಭಲೆ ಎಂದರೆ ಆ ಶಿಷ್ಯನಿಗೆ ‘ಕೈಲಾಸ ಕಂಡಷ್ಟು ಆನಂದ’. ಚೆನ್ನಾಗಿಲ್ಲದ ಕೃತಿ, ಯಾರದಾದರೇನು ಅಂಥವರನ್ನು ಮೆದು ಮಾತಿನಲ್ಲಿಯೆ ಮೆತ್ತಗೆ ಮಾಡಬಲ್ಲವರಿವರು.

ಶ್ರೀ ಆಚಾರ್ಯರ ಅಭಿಪ್ರಾಯಗಳನ್ನು ಒಪ್ಪದೆ ಇರುವ ವಿದ್ವಾಂಸರೂ ಉಂಟು. ಆದರೆ ಇವರಿಗೆ ಸೂಕ್ತಮರ್ಯಾದೆ ತೋರಿಸಿಯೇ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿರುವುದುಂಟು. ಬೇರೆಯವರ ಅಭಿಪ್ರಾಯ ತಪ್ಪು, ತಾವು ಹೇಳುವುದೇ ಒಪ್ಪು ಎಂಬ ಹಠವಂತೂ ಇವರಲ್ಲಿ ಲವಲೇಶವೂ ಕಾಣದು.

ತಮ್ಮ ಮನವೊಪ್ಪದ ಕೆಲಸವನ್ನು ಇವರು ಮಾಡುವವರೆ ಅಲ್ಲ. ಯಾರ ದಾಕ್ಷಿಣ್ಯಕ್ಕೂ ಸಿಕ್ಕಿ ತಮ್ಮ ತತ್ವಕ್ಕೇ ತಿಲಾಂಜಲಿ ಕೊಡುವ ಸಮಯ ಬಂದಿತೆಂದರೆ ಆ ಕಡೆಗೆ ತಲೆಯಿಕ್ಕುವುದೇ ಇಲ್ಲ. ತಮಗೆ ಸರಿಕಂಡುದುದನ್ನು ನಿರ್ಭಯವಾಗಿ, ನಿರ್ದಾಕ್ಷಿಣವಾಗಿ ಆಡುವುದರಿಂದ ಕೆಲವರಿಗೆ ಇವರ ಸಹವಾಸ “ತಾಪತ್ರಯ”. ಆಧುನಿಕ ಮತ್ತು ನವ್ಯ ಕವಿತೆಗಳ ವಿಷಯದಲ್ಲಿ ಇವರಿಗೆ ಸಾಕಷ್ಟು ತೃಪ್ತಿಯಾಗಲಿಲ್ಲವೆಂದು ತೋರುತ್ತಿದೆ. ಈಗ ಬಂದಿರುವ ಕೃತಿಗಳಿಗಿಂತ ಉತ್ತಮ ಕೃತಿಗಳು ಬರಲಿಲ್ಲವಲ್ಲಾ ಎಂಬ ಕೊರಗು ಅವರಲ್ಲಿ ಮನೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಎಲ್ಲರೂ ಕವಿತೆ, ಕಥೆ, ಕಾದಂಬರಿಗಳನ್ನು ರಚಿಸಿ ಅಗ್ಗದ ಅಗ್ಗಳಿಕೆಗೆ ಮಾರಿಕೊಂಡರೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಅಭ್ಯಾಸಮಾಡಿ, ಅದರಲ್ಲಿರುವ ಮುತ್ತುರತ್ನಗಳನ್ನು ಹೊರಗೆ ತಂದು ಜನತೆಗೆ ನೀಡುವುದು ಯಾವಾಗ? ಪ್ರಾಚೀನ ಕಾವ್ಯಗಳೂ ಪ್ರಾಚೀನ ಕನ್ನಡ ಶಾಸನಗಳೂ, ಸಾಂಪ್ರದಾಯಿಕವಾಗಿ ಬಂದಿರುವ ಇತರ ವಿವಿಧ ರೂಪದ ಸಾಹಿತ್ಯವೂ ಕಾಲನ ದವಡೆಗೆ ಸೇರುವುದಕ್ಕೆ ಮುನ್ನವೆ ರಕ್ಷಿಸುವುದು ಅತ್ಯವಸರದ ಸತ್ಕಾರ್ಯವಲ್ಲವೆ? ಸಾಧಾರಣ ಕಾದಂಬರಿಕಾರನಿಗೂ, ಕತೆಗಾರನಿಗೂ, ಕವಿಗೂ, ನಾಟಕಕಾರನಿಗೂ ಇರುವ ಬೆಲೆ ವಿಚಾರ ಸಾಹಿತ್ಯವನ್ನು ಸೃಷ್ಟಿಸುವವನಿಗೂ, ಗದ್ಯಲೇಖಕನಿಗೂ, ವಿಮರ್ಶಕನಿಗೂ, ವಿದ್ವಾಂಸನಿಗೂ ಇರಬಾರದೇಕೆ? ಈ ವಿಚಾರಗಳೆಲ್ಲಾ ಶ್ರೀ ಡಿ.ಎಲ್.ಎನ್. ಮನಸ್ಸಿನಲ್ಲಿದ್ದಿರಬಹುದೆಂದು ಕಾಣುತ್ತದೆ.

ಎಲ್ಲರಿಗೂ ಒಳ್ಳೆಯದನ್ನೆ ಹಾರೈಸುತ್ತ ಸತತವೂ ವಿದ್ಯಾರ್ಥಿಗಳ ಮತ್ತು ನಾಡಿಗರ ಕ್ಷೇಮ ಚಿಂತನೆಯನ್ನು ಮಾಡುತ್ತಿರುವ ಸತ್ಪುರುಷ ಶ್ರೀ ಡಿ.ಎಲ್.ಎನ್. ಇಂಥ ರಸಋಷಿಗಳು ಬಹುಕಾಲ ಬಾಳಿ ನಾಡುನುಡಿಗಳ ಸೇವೆ ಇನ್ನೂ ಹೆಚ್ಚಾಗಿ ನಡೆಯಲೆಂಬುದೆ ಕನ್ನಡಿಗರೆಲ್ಲರ ಬಲ್ಬಯಕೆ.

* ಜ್ಞಾನೋಪಾಸಕ, ಪು. ೨೬