ದೇವಾಲಯಗಳನ್ನು ರಕ್ಷಿಸಿಕೊಂಡು ಬರಲು ಯಾವ ರೀತಿಯಿಂದ ನೆರವಾದರೂ ದೇವಾಲಯ ನಿರ್ಮಾಣ ಮಾಡಿದಷ್ಟೆ ಪುಣ್ಯ ಬರುತ್ತದೆಂದು ನಮ್ಮ ಪ್ರಾಚೀನರು ಸಾರತೊಡಗಿದರು. ನಮ್ಮ ಜನ ಒಂದು ಕಾಲದಲ್ಲಿ ದೇವಾಲಯಗಳನ್ನು ಕಟ್ಟುವ ಕಡೆ ಗಮನ ಹರಿಸಿದಂತೆ ಹಿಂದಿನವರು ಕಟ್ಟಿಹೋದ ಭವ್ಯದೇವಾಲಯಗಳನ್ನು ರಕ್ಷಿಸಿಕೊಂಡು ಬರುವುದಕ್ಕೆ ಲಕ್ಷಿಸಲಿಲ್ಲವೆಂಬಂತೆ ಕಾಣುತ್ತೆ. ನಾಲ್ಕು ಕಂಬ ನಿಲ್ಲಿಸಿ ಒಂದು ಮುರುಕು ಕಲ್ಲಿಟ್ಟು ದೇವಾಲಯ ಕಟ್ಟಿಸಿದೆ ಎಂಬ ಭ್ರಾಂತಿಸುಖದಲ್ಲಿ ಹೆಚ್ಚು ಪ್ರೀತಿ ಹರಿಯಿತೆ ಹೊರತು ಯುಗಸೃಷ್ಟಿಗಳಾದ ಹಾಗೂ ಪ್ರಾಚೀನ ಧಾರ್ಮಿಕ ಕಲಾಸ್ಮಾರಕಗಳಾದ ಪ್ರಾಚೀನ ದೇವಮಂದಿರಗಳನ್ನು ಉಳಿಸಿಕೊಂಡು ಬರುವ ಕರ್ತವ್ಯ ಶ್ರದ್ಧೆಯಲ್ಲಿ ಉತ್ಸಾಹ ತೋರಿಬರಲಿಲ್ಲವೆಂಬಂತೆ ಕಾಣುತ್ತೆ. ಅಂತಹ ಕಾಲದಲ್ಲಿ ವಿವೇಕಿಗಳಾದ ಕೆಲವರು ಮೇಲಿನಂತೆ ಎಚ್ಚರಿಸಬೇಕಾಯಿತು. ದೇವಾಲಯ ಸೃಷ್ಟಿ ಸಂರಕ್ಷಣೆಯ ವಿಚಾರವಾಗಿ ಹೇಳಿದ ಮಾತೆ ಕಾವ್ಯ ದೇವಾಲಯ ಸೃಷ್ಟಿಯ ವಿಷಯದಲ್ಲೂ ವಿವೇಕ ಯುಕ್ತವಾಗಿದೆ. ನವೋನವ ದೇವಾಲಯ ಸೃಷ್ಟಿ ಆಗಬೇಕು; ಅದು ಶಕ್ತಿಯಿದ್ದವರ ಕಾರ್ಯ; ಉಳ್ಳವರು ಶಿವಾಲಯವ ಕಟ್ಟಿಸುವರಯ್ಯಾ! ಆದರೆ ಅವುಗಳ ರಕ್ಷಣೆಯ ಕಾರ್ಯವೂ ಪವಿತ್ರ ಕರ್ತವ್ಯ ಎಂಬ ಭಾವನೆ ಬಾರದಿದ್ದರೇನು ಮಾಡುವುದು? ಕವಿ ಲುಪ್ತವಾಗದಂತೆ ಎಚ್ಚರವಹಿಸಿ ರಕ್ಷಿಸಿಕೊಂಡು ಬರುವ ಮೂಲಕ ನವ್ಯವಾದುದಕ್ಕೆ ಪ್ರಾಚೀನ ಸ್ಮರಣೆಯನ್ನುಂಟು ಮಾಡಿಕೊಡುತ್ತಾ ಹಾಗೂ ಸ್ಫೂರ್ತಿದಾಯಕವಾಗುತ್ತ ಹೋಗುತ್ತದೆ.

೨೦ನೆಯ ಶತಮಾನದ ಆದಿಯಲ್ಲಿ ಮಾನ್ಯಶ್ರೀ ಆರ್. ನರಸಿಂಹಾಚಾರ್ಯರೆ ಮುಂತಾದವರು ಕನ್ನಡ ಪ್ರಾಚೀನ ದೇವಾಲಯಗಳ ವೈಭವ ಸ್ಮರಣೆಯನ್ನು ಹೀಗೆ ಮಾಡಿಕೊಟ್ಟರು. ಹಾಗೂ ಕಾಲವಿಸ್ಮೃತಿಯ ತಲಕಾಡಿನ ಮರಳನ್ನು ಅಗೆದು ಪಂಪಭಾರತ, ರನ್ನನ ಸಾಹಸಭೀಮ ವಿಜಯ, ಕರ್ನಾಟಕ ಕಾದಂಬರಿಗಳಂತಹ ದೇವಾಲಯಗಳನ್ನು ಹೊರ ತೋರಿದರು. ಅಂದವರು ಮಾಡಿದ ಕಾರ್ಯ ಪ್ರಾಚೀನ ಸಂರಕ್ಷಣೆ ಮಾತ್ರವೆ ಆಗಿರದೆ ಮುಂದಿನ ನವಸೃಷ್ಟಿಗೆ ಸ್ಫೂರ್ತಿದಾಯಕವೂ ಆಯಿತು.[1] ಆಧುನಿಕ ಕನ್ನಡ ಸಾಹಿತ್ಯದ ಮಂಗಳ ಪ್ರಭಾತದಲ್ಲಿ ಎಚ್ಚರಗೊಂಡು ಗಾಯತ್ರಿಯನ್ನು ಪುನಸ್ಮರಣೆ ಮಾಡಿ ಹಾಡಿದ ಶ್ರೀಯವರೇ ಮೊದಲಾದವರಿಗೆ ಪ್ರಾಚೀನ ಸ್ಮರಣೆಯಿಂದ ಸ್ಫೂರ್ತಿ ಹಾಗೆ ದೊರೆಯಿತು. ಮತ್ತೆ ದೇವಾಲಯ ಸೃಷ್ಟಿ ಕಾರ್ಯ ಪ್ರಾರಂಭವಾಯಿತು. ಗೊಮ್ಮಟ ಶಿಲ್ಪ, ಹೊಯ್ಸಳ ಶಿಲ್ಪ, ಗೋಳಗೊಮ್ಮಟ ಶಿಲ್ಪ, ವರ್ಣಶಿಲ್ಪಗಳಂತೆಯೆ ಮಾರಿಗುಡಿ ಕೇರಿಗುಡಿಗಳ ಹುಟ್ಟೂ ನಡೆದಿದೆ. ಈಗ ಮತ್ತೆ ಪ್ರಾಚೀನ ಶಿಲ್ಪದ ಸ್ಮರಣೆ ಮಾಡಿಕೊಟ್ಟು ನಮ್ಮ ಸ್ಫೂರ್ತಿಯನ್ನು ಕೆರಳಿಸಿರುವುದರ ಜತೆಗೆ ನಮ್ಮ ವಿವೇಕ ಬುದ್ಧಿಯನ್ನೂ ಅರಳಿಸುವ ವಿದ್ವದ್ವಿವೇಕವಿಂದು ಬೇಕಾಗಿದೆ. ಅಂತಹ ಶಕ್ತಿ ಪಡೆದ ಕೆಲವೆ ಕೆಲವರಲ್ಲಿ ಆಚಾರ್ಯ ಶ್ರೀ ಡಿ.ಎಲ್. ನರಸಿಂಹಾಚಾರ್ಯರು ಒಬ್ಬರಾಗಿದ್ದಾರೆ.

ಕಾವ್ಯಕ್ಕೆಂತೊ ಅಂತೆಯೆ ವಿದ್ವತ್ತಿಗೂ ಒಂದು ಯೋಗ್ಯ ಆವರಣ ಬೇಕು. ಒಳ್ಳೆಯ ಪ್ರಚೋದನೆ ಪ್ರತಿಸ್ಪಂದವನ್ನು ನೀಡದ ಸಮಾಜದಲ್ಲಿ ಕವಿತೆಯ ಹುಟ್ಟು ಸ್ವಲ್ಪ ಕಷ್ಟವಾಗುತ್ತದೆ. ಆದಾದರೂ ಎಷ್ಟೋ ವಾಸಿ; ವಿದ್ವತ್ತಿಗೆ ಪ್ರಚೋದನೆ, ಪ್ರತಿಸ್ಪಂದ ಇಲ್ಲದಿದ್ದರೆ ಆಗುವುದು ಇಲ್ಲ. ಕವಿತೆ ಬುಗ್ಗೆಯಿದ್ದಂತೆ; ಒಳಗೆ ನೀರಿದ್ದು ನೆಲದ ಒತ್ತಡವಿದ್ದರೆ ಸಾಕು ಚಿಮ್ಮಿ ಹೊರಬರುತ್ತೆ. ವಿದ್ವತ್ತು ಬಾವಿಯಂತೆ. ಅದೂ ನೆಲದೊಳಗಿನ ನೀರಾದರು ಅದನ್ನು ಜನತೆ ಪಡೆದುಕೊಳ್ಳಲು ಹೊರಕ್ಕೆ ಸೇದಿಕೊಳ್ಳಬೇಕು. ಇಲ್ಲದಿದ್ದರೆ ಆ ನೀರು ಹಿಂಗಬಹುದು; ಇಲ್ಲ ಪಾಚಿಗಟ್ಟಬಹುದು “ಬಾವಿಯಲ್ಲೇನೊ ನೀರಿದೆ; ಸೇದಿಕೊಳ್ಳುವರು ಬೇಕು” ಎಂದು ವಿದ್ವಾಂಸರನ್ನು ಕುರಿತು ಮಾತನಾಡುವಾಗ ಒಮ್ಮೆ ಹಿರಿಯ ವಿದ್ವಾಂಸರಾದ ಶ್ರೀ ಡಿ.ವಿ.ಜಿ. ಅವರು ನುಡಿದರು. ಆ ಮಾತು ಎಷ್ಟು ಸತ್ಯಯೆಂಬುದು ನಮಗೆಲ್ಲ ಇನ್ನೂ ಗೊತ್ತಾಗಬೇಕಾಗಿದೆ. ಶ್ರೀ ನರಸಿಂಹಾಚಾರ್ಯರ ಗಂಭೀರ ವಿದ್ವತ್ತಿನ ಅರಿವೆ ಆಗಬೇಕಾದ ಪ್ರಮಾಣದಲ್ಲಿ ಕನ್ನಡ ಜನತೆಗಿನ್ನೂ ಆಗಿಲ್ಲ. ಇಂಥ ಸಮ್ಮೇಳನ ಸನ್ನಿವೇಶಗಳು ಅದಕ್ಕೆ ನೆರವಾಗುವುದಾದರೆ ಉದ್ದೇಶ ಸಾರ್ಥಕವಾದಂತಾಗುತ್ತದೆ.

೧೯೪೭ರಲ್ಲಿರಬೇಕು; ನಾನಂದು ಬೆಂಗಳೂರು ವಿಜಯಾ ಕಾಲೇಜಿನಲ್ಲಿ ಇಂಟರ್ ವಿದ್ಯಾಭ್ಯಾಸ ಮಾಡುತ್ತಿದ್ದೆ. ಆಗೊಮ್ಮೆ ನಮ್ಮ ಕಾಲೇಜಿನಲ್ಲಿ ಶ್ರೀ ಡಿ.ಎಲ್. ನರಸಿಂಹಾಚಾರ್ಯರ ಭಾಷಣವನ್ನು ಕೇಳುವ ಸದವಕಾಶವೊದಗಿತ್ತು. ಸಾಹಿತ್ಯ ಕುತೂಹಲಿಗಳಾದ ಕೆಲವು ಮಿತ್ರರೊಡನೆ ನಾನೂ ಕೂಡ ಶ್ರೀ ಡಿ.ಎಲ್.ಎನ್. ಅವರನ್ನು ಸಮೀಪದಿಂದಲೆ ಕೇಳಿದೆ. ಅಂದು ಅವರು ಕನ್ನಡ ಸಾಹಿತ್ಯವನ್ನು ಕುರಿತು ಮಾತನಾಡುತ್ತಾ ಇದ್ದಂತೆಯೆ ಶ್ರೀ ರಾ. ನರಸಿಂಹಾಚಾರ್ಯರ ಮಾತು ಬಂದಿತು. ಆಗ ಅವರೊಂದು ಮಾತನ್ನು ಹೇಳಿದರು. “ಕನ್ನಡದಲ್ಲಿ ನರಸಿಂಹಾಚಾರ್ಯರು ಒಬ್ಬರು ಅಲ್ಲ, ಇಬ್ಬರೂ ಅಲ್ಲ, ಮೂವರಿದ್ದಾರೆ ಶ್ರೀ ರಾ. ನರಸಿಂಹಾಚಾರ್ಯರು, ಶ್ರೀ ಎಸ್.ಜಿ. ನರಸಿಂಹಾಚಾರ್ಯರು; ನಮ್ಮ ಕಾಲದವರೆ ಆದ, ಕವಿಗಳಾದ ಶ್ರೀ ಪು.ತಿ. ನರಸಿಂಹಾಚಾರ್ಯರು” ಎಂದು. ಆಗ ಭಾಷಣಕಾರರಲ್ಲಿ ಒಬ್ಬರಾಗಿದ್ದ ಶ್ರೀ ಜಿ.ಪಿ. ರಾಜರತ್ನಂರವರೊ ಏನೊ ಹೇಳಿದರು. ಮೂವರೆ ಏಕೆ ನಾಲ್ವರು ಎನ್ನಿ ಎಂದು. ಅದನ್ನು ಕೇಳಿ ಶ್ರೀ ಡಿ.ಎಲ್.ಎನ್. ನಕ್ಕರು. ಸಭಿಕರಿಗೂ ಅರ್ಥವಾಯಿತು. ಚಪ್ಪಾಳೆ ಮಳೆಗರೆದರು. ಈ ನರಸಿಂಹಾಚಾರ್ಯ ಚತುಷ್ಟಯವು ಕನ್ನಡಕ್ಕೆ ಮಾಡಿರುವ ಸೇವೆ ಅಪಾರ, ವಿದ್ವತ್ತಾಗಿ, ಕವಿಚರಿತ್ರೆಯಾಗಿ, ಸಂಶೋಧನೆಯಾಗಿ, ಭಾಷಾಂತರವಾಗಿ, ನವ್ಯಕಾವ್ಯಸೃಷ್ಟಿಯಾಗಿ ಕನ್ನಡಕ್ಕೆ ಪುಷ್ಟಿಯಿತ್ತಿದೆ, ನೀಡುತ್ತಿದೆ. ಕನ್ನಡದ ಪ್ರೌಢವಿದ್ಯಾರ್ಥಿ ಈ ಆಚಾರ್ಯ ಚತುರ್ಮುಖವನ್ನು ಕಾಣದೆ, ಗೌರವ ಸಲ್ಲಿಸದೆ ಮುಂದಡಿಯಿಡುವುದಿಲ್ಲ.

ಅದೇ ೧೯೪೮ನೆ ಇಸವಿಯಲ್ಲಿರಬೇಕು; ಒಂದು ಸಂಜೆ ನಾನೂ ನನ್ನ ಮಿತ್ರ ಸುಬ್ಬು ಇಬ್ಬರೂ ಶ್ರೀ ಡಿ.ಎಲ್.ಎನ್. ಅವರನ್ನು ಸಾಹಿತ್ಯ ಪರಿಷತ್ ಬಳಿ ಸಂಧಿಸಿದೆವು. ಆ ವೇಳೆಗೆ ಅವರ ದೂರ ಪರಿಚಯ ನಮಗಿದ್ದುದರಿಂದ ಅವರ ಕೂಡ ಮಾತನಾಡಿ ನಾವು ದೊಡ್ಡವರೆನಿಸಿಕೊಳ್ಳಬೇಕೆಂಬ ತರುಣ ಭಾವದಿಂದ ಅವರಿಗೆ ನಮಸ್ಕಾರ ಮಾಡಿ ಆ ಮಾತು ಆಡತೊಡಗಿದೊ. ಅಲ್ಲೆ ಪಕ್ಕದ ಕಾಂಪೌಂಡ್ ಮೇಲೆ ಮೂವರೂ ಕುಳಿತುಕೊಂಡು ಅವರನ್ನು ಕೇಳತೊಡಗಿದೊ, ನಮ್ಮನ್ನವರು ಕೇಳಿದರು: “ಏನೇನು ಓದಿದ್ದೀರಯ್ಯ ನೀವು?” ಎಂದು. ನಮ್ಮ ವಿದ್ವತ್ ಪ್ರದರ್ಶನಕ್ಕೆ ಅವಕಾಶ ಸಿಕ್ಕೀತೆ ಎಂದು ಕಾದಿದ್ದ ನಾವು ನಮಗೆ ಗೊತ್ತಿದುದನ್ನೆಲ್ಲಾ ಒದರಿಕೊಂಡೊ, ಅವರಿಂದ ಶಹಬಾಸ್‌ಗಿರಿ ಬಂದೇ ಬರುತ್ತೆಂಬ ಧೈರ್ಯದಿಂದ ಅವರು ಹೇಳಿದರು. “ಈ ವಯಸ್ಸಿನಲ್ಲಿ ಓದದಿದ್ದರೆ ಹೇಗೆ” ಆ ಜನಪ್ರಿಯರಾದವರನ್ನೂ ಓದಿಲ್ಲಾಂತೀರಲ್ಲ. ಚಾರಲ್ಸ್ ಡಿಕನ್ಸ್, ಲ್ಯಾಂಬ್ಸ್ ಮುಂತಾದವರ ಕೃತಿಯನ್ನು ನಾನು ಎಸ್.ಎಸ್.ಎಲ್.ಸಿ.ಯಲ್ಲೆ ಓದಿದ ಹಾಗೆ ನೆನಪು; ಸಿಕ್ಕ ಸಿಕ್ಕದ್ದನ್ನು ಓದಿ ಆಮೇಲೆ ವಿವೇಚನೆ ತಾನಾಗೆ ಬರುತ್ತೆ ಎಂದರು. ಆ ಮಾತಿನಿಂದ ನಮ್ಮ ವಿದ್ವದ್ಬ್ರಾಂತಿ ತಕ್ಕ ಮಟ್ಟಿಗೆ ನಿರಸನವಾದಂತೆ ತೋರಿತು. “ಇವರಿಷ್ಟೆಲ್ಲಾ ಹೇಗೆ ಓದ್ತಾರೆ? ಅದು ಹೇಗೆ ಸಾಧ್ಯ?” ಎಂಬ ಪ್ರಶ್ನೆ ಪ್ರಶ್ನೆಯಾಗಿಯೆ ಉಳಿಯಬೇಕಾಯಿತು ಇಂದಿಗೂ.

ಓದು ಬಹುತೇಕರಲ್ಲಿ ಒಂದು ಕರ್ತವ್ಯವಾಗುತ್ತದೆ, ವೃತ್ತಿಗೌರವ ಪೋಷಕವಾಗುತ್ತದೆ; ಎಲ್ಲೊ ಕೆಲವರಿಗೆ ಪ್ರವೃತ್ತಿಯಾಗುತ್ತದೆ, ಆಮೋದವಾಗುತ್ತದೆ. ಆಚಾರ್ಯ ಶ್ರೀ ನರಸಿಂಹಾಚಾರ್ಯರಿಗೆ ವ್ಯಾಸಂಗ ‘ಹವ್ಯಾಸ’ ವಾಗಿದೆ. ಹಾಗೆಂದು ಮಾತ್ರದಿಂದಲೆ ಅವರ ಓದು ‘ಓದಿಗಾಗಿ ಓದು’ ಎಂದು ಭಾವಿಸಬಾರದು. “ಉದ್ದೇಶವಿಲ್ಲದ ವ್ಯಾಸಂಗದ ಹವ್ಯಾಸ ಅರ್ಥಹೀನವಾದುದು. ಕಲೆಗಾಗಿ ಕಲೆ, ವ್ಯಾಸಂಗಕ್ಕಾಗಿ ವ್ಯಾಸಂಗ ಎಂಬ ಸಿದ್ಧಾಂತಗಳಲ್ಲಿ ನನಗೆ ನಂಬಿಕೆ ಕಡಿಮೆ” ಎಂದು ಅವರೆ ‘ವ್ಯಾಸಂಗದ ಹವ್ಯಾಸ’ ಎನ್ನುವ ತಮ್ಮ ಬಹು ಮನೋಜ್ಞವಾದ ಪ್ರಬಂಧದಲ್ಲಿ ಹೇಳಿಕೊಂಡಿದ್ದಾರೆ. ಉದ್ದೇಶ, ಪ್ರಯೋಜನ ಎಂದರೆ ಅರ್ಥಸಂಬಂಧವಾದುದು ಎಂದಲ್ಲ; ಸಮಸ್ಯಾತ್ಮಕವಾದುದು ಎಂದಷ್ಟೆ. ವಿದ್ಯಾರ್ಥಿಯಾದವನು ವ್ಯಾಸಂಗ ಮಾಡುವ ಸಮಯದಲ್ಲಿ ನೂರಾರು ಸಮಸ್ಯೆಗಳು ಬರುತ್ತವೆ. ಅವುಗಳನ್ನು ಹೇಗೋ ದಾಟಿಕೊಂಡು, ಮರೆಯುವ ಮೂಲಕವಾದರೂ ಉತ್ತರಿಸಿಕೊಂಡು ಹೋಗಲು ಪ್ರಯತ್ನಿಸುತ್ತದೆ ಮೈಗಳ್ಳ ಮನಸ್ಸು. ಆದರೆ ಹಾಗಾಗಬಾರದು. ಮೈದೋರಿದ ಸಮಸ್ಯೆಯನ್ನೆ ಹಿಂಬಾಲಿಸಬೇಕು; ಆ ಕಷ್ಟವನ್ನೆ ಅಟ್ಟುಕೊಂಡು ಹೋಗಬೇಕು. ಅದು ಎಲ್ಲೆಲ್ಲಿಗೆ ಒಯ್ಯುತ್ತದೊ ಅಲ್ಲಲ್ಲಿ ವಿಹರಿಸಬೇಕು, ಅದರಲ್ಲೆ ಆನಂದವಿರುತ್ತೆ. ಸಮಸ್ಯೆ ಬಗೆಹರಿದಾಗಲಂತೂ ಹೇಳತೀರದ ಆನಂದವೊಂದುಂಟಾಗುತ್ತದೆ. ಇದನ್ನೆ ಶ್ರೀ ಡಿ.ಎಲ್.ಎನ್. ಅವರು ಮತ್ತೆ ಮತ್ತೆ ಹೇಳುತ್ತಿರುತ್ತಾರೆ. “ಪ್ರಕೃತಿ ರಹಸ್ಯವನ್ನು ಭೇದಿಸಲು ಬುದ್ಧಿ, ಬಂದೂಕದಿಂದ ಹೊರಚಿಮ್ಮುವ ಗುಂಡಿನಂತೆ ಮುನ್ನುಗ್ಗುತ್ತಿರುವಾ ತನ್ನ ಸಾಹಸದಲ್ಲಿ ಅದು ಆಗ ಸುಖಿಸುತ್ತದೆ. ರಹಸ್ಯವನ್ನು ಕಂಡು ಹಿಡಿದಾಗಲಂತೂ ಅದಕ್ಕೆ ಬರುವ ಆನಂದ ವರ್ಣಿಸಲಸದಳ.”

ವಿದ್ವತ್ತೆಂಬುದು ಮರಳುಗಾಡಿನ ಮರುಳಾಟಿವೆಂದಾಗಲಿ, ಒಂಟೆಯ ಯಾತ್ರೆಯೆಂದಾಗಲಿ ಭಾವಿಸಬೇಕಾಗಿಲ್ಲ. ಆ ಭಾವನೆ ಬರುವಂತೆ ಕೆಲವು ವಿದ್ವಾಂಸರು ಬದುಕಿರುವುದುಂಟು. ಆದರೆ ತನ್ನ ಕರ್ತವ್ಯ ವ್ಯಾಪ್ತಿಯನ್ನರಿತುಕೊಂಡ ರಸಜ್ಞ ವಿದ್ವಾಂಸನ ವಿದ್ವತ್ತು ರಸನಂದನ ವಿಹಾರವಾಗುತ್ತದೆ. ಎಂಬುದಕ್ಕೆ ಶ್ರೀ ನರಸಿಂಹಾಚಾರ್ಯ, ಶ್ರೀ ತೀ.ನಂ.ಶ್ರೀ ಅವರಂಥವರೆ ಸಾಕ್ಷಿ. ಅಂಥವರು ಕಾವ್ಯವನ್ನು ಮುಟ್ಟಲಿ ಶಾಸ್ತ್ರವನ್ನು ಮುಟ್ಟಲಿ ಆನಂದವನ್ನೆ ಕಾಣುತ್ತಾರೆ; ಕಾಣಿಸುತ್ತಾರೆ. “ಕಾವ್ಯ ಶಾಸ್ತ್ರಗಳೆರಡೂ, ಅವನ್ನು ವ್ಯಾಸಂಗ ಮಾಡುವವನಿಗೆ ಆನಂದವನ್ನು ದೊರಕಿಸಬಲ್ಲವು. ಕಾವ್ಯದಲ್ಲಿ ರಾಗಭಾವಗಳ ಮೂಲಕ ಆನಂದದ ನೆಲೆದೊರತರೆ ಶಾಸ್ತ್ರದಲ್ಲಿ ಅದೇ ನೆಲೆ ಸಿಕ್ಕುತ್ತದೆ. ಈ ಆನಂದದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಅದರ ಕಡೆಗೆ ಪ್ರಯಾಣ ಮಾಡಲು ಕಾವ್ಯಶಾಸ್ತ್ರಗಳು ಬೇರೆ ಬೇರೆ ಮಾರ್ಗಗಳು ವಿಜ್ಞಾನಿಯಾದವನು ಕಲಾಭ್ಯಾಸದ ಹವ್ಯಾಸವನ್ನೂ, ಕಲೆಗಾರನು ವಿಜ್ಞಾನಾಭ್ಯಾಸವನ್ನೂ, ಇಟ್ಟುಕೊಂಡರೆ ಬಹಳ ಒಳ್ಳೆಯದು” ಎಂದು ಅವರು ಸ್ಪಷ್ಟವಾಗಿ ಅಭಿಪ್ರಾಯಪಡುತ್ತಾರೆ.

ಕಾವ್ಯಪಾರಮ್ಯದ ಪ್ರತಿಪಾದನೆಯನ್ನು ಕಂಡೊ ಏನೊ ಒಮ್ಮೊಮ್ಮೆ ಶ್ರೀ ಡಿ.ಎಲ್.ಎನ್. ಅವರು ಉದ್ವಿಗ್ನಗೊಂಡಿರುವುದೂ ಉಂಟು. “ಒಂದು ಒಳ್ಳೆ ಕವಿತೆ ಬರೆದರೆ ಕವಿಗೆ ಹೇಗೆ ಆನಂದವಾಗುತ್ತೆ. ಸುಮ್ಮಸುಮ್ಮನೆ ಕಾವ್ಯವೊಂದೆ ಸರ್ವಸ್ವ ಎಂದೂ ಕೂಗಾಡ್ತಾರೆ. ಜೀವನ ದೊಡ್ಡದಯ್ಯ ಎಲ್ಲಕ್ಕಿಂತ್ಲೂ; ಅದಕ್ಕಿಂತಲೂ ಸೃಷ್ಟಿ ದೊಡ್ಡದು; ಸೃಷ್ಟಿ ಹಿಂದಿರೊ ಅಗೋಚರ ಶಕ್ತಿ ಅದಕ್ಕೂ ಹಿರಿಯದು ಎನ್ನೊ ಭಾವನೆ ಬೇಕಯ್ಯ” ಎಂದು ನುಡಿಯುವುದು ಉಂಟು. ಇದರಲ್ಲಿ ಒಪ್ಪದಿರುವ ಅಂಶವೇನಿದೆಯೊ ತಿಳಿಯೆ ನಾನು.

ನಮ್ಮೆಲ್ಲ ಸಾಧನೆಯ ಗುರಿಯಾದರೂ ಏನು, ಅಹಂಮಿತಿಯಿಂದ ನಮ್ಮನ್ನು ನಾವು ಬಿಡಿಸಿಕೊಳ್ಳುವುದು ತಾನೆ? ಬಿಡಿಸಿಕೊಂಡ ಕ್ಷಣದಲ್ಲಿ ಅಷ್ಟರಮಟ್ಟಿಗೆ ನಮಗೆ ಆನಂದವಾಗುತ್ತದೆ. ವ್ಯಕ್ತಿಮಿತಿಯಿಂದ ನಿರ್ಮಿತಿಗೆ ಹಾರಲು, ಕರಗಲು, ಒಬ್ಬೊಬ್ಬರಿಗೆ ಒಂದೊಂದು ನೆರವಾಗುತ್ತದೆ. ಕಾವ್ಯ, ಸಂಗೀತ, ನೃತ್ಯ, ಧ್ಯಾನ, ವ್ಯಾಸಂಗ, ಕರ್ಮಯೋಗ, ವಿಜ್ಞಾನ ಮುಂತಾದುವೆಲ್ಲ ತಾರಕಶಕ್ತಿಗಳಾಗುತ್ತವೆ. ಉಮರನಂಥವರಿಗೆ ಮಧೃವೆ ಅಂಥ ಶಕ್ತಿಯಾಯಿತು. ಶ್ರೀ ನರಸಿಂಹಾಚಾರ್ಯರಿಗೆ ಸಂಶೋಧನಾತ್ಮಕ ವ್ಯಾಸಂಗ ಅಂತುದಾಗಿದೆ. ಹೃದಯ ಪ್ರಧಾನವಾದ ಕಾವ್ಯ. ಮಾತ್ರವಲ್ಲದೆ ಬುದ್ಧಿಪ್ರಧಾನವಾದ ಶಾಸ್ತ್ರವೂ ಅವರ ವಸ್ತುವಾಗಿದೆ. ಆದ್ದರಿಂದಲೆ ಅವರ ವಿದ್ವದ್ವ್ಯಾಸಂಗ ಒಂದು ವಿಹಾರ. ಕಾವ್ಯ ವಿಹಾರದಲ್ಲಿ ಆನಂದವಿರುವಂತೆಯೆ ಶಬ್ದವಿಹಾರದಲ್ಲೂ ಅವರಿಗೆ ಆನಂದವಿದೆ. “ನನ್ನ ವ್ಯಾಸಂಗದ ಹವ್ಯಾಸವು ಒಂದು ವಿಹಾರ. ಕೈಗೆ ಸಿಕ್ಕಿದ ಪುಸ್ತಕವನ್ನು ತಾತ್ಕಾಲಿಕ ಕುತೂಹಲದಿಂದ ಪ್ರೇರಿತನಾಗಿ ಓದುತ್ತಾ, ಓದುವಾಗ ಅದರ ಸವಿಯೊಳಗೆ ಮುಳುಗುತ್ತ, ಆಮೇಲೆ ಮರೆತು ಬಿಡುವುದೆಂದರೆ ನನಗೆ ಬಲು ಪ್ರಿಯವಾದದ್ದು. ಓದಿದ್ದನ್ನೆಲ್ಲ ಮರೆಯದ ಜಿಗುಟಾದ ಸ್ಮರಣಶಕ್ತಿ ನನಗಿಲ್ಲ. ಅದು ಅವಶ್ಯಕವೂ ಇಲ್ಲ. ಅದರಿಂದ ಮನೋಬುದ್ಧಿಗಳಿಗೆ ಭಾರವಾಗಿ ಬಳಲಿಕೆಯುಂಟಾಗುತ್ತದೆ. ಓದಿದ ಹಲವು ವಿಷಯಗಳಲ್ಲಿ ಕೆಲವಾದರೂ ನನ್ನ ಸುಪ್ತಜೀವನದೊಳ ಹೊಕ್ಕು ಅಲ್ಲಿ ನಿಕ್ಷಿಪ್ತವಾಗಿದ್ದು ಅನಿರೀಕ್ಷಿತವಾಗಿ ನೀರ್ಗುಳ್ಳೆಯಂತೆ ಮೇಲಕ್ಕೆ ತೇಲಿಬರುವುದಷ್ಟೆ ನನಗೆ ಸಾಕು. ಇಷ್ಟು ಸ್ಮರಣೆಯಿಂದಲೆ ಮಿಗಿಲಾದ ಹರ್ಷ ಮೂಡುತ್ತದೆ. ಹಚ್ಚನೆಯ ಹುಲ್ಲುಗಾವಲ ಹರವಿನಲ್ಲಿ ಸ್ವೇಚ್ಛೆಯಾಗಿ ತಿರುಗಾಡುತ್ತ ಸೊಂಪಾಗಿ ಕಾಣುವೆಡೆಗಳಲ್ಲಿ ತಂಗಿ ಹಿಡಿ ಹುಲ್ಲನ್ನು ಕಬಳಿಸುವ ಹಸುವಿನಂತೆ ಇದೆ ನನ್ನ ವ್ಯಾಸಂಗದ ಹವ್ಯಾಸ. ನನ್ನ ಕೊಠಡಿಯ ಆರಾಮ ಕುರ್ಚಿಯ ಮೇಲೆ ಮಲಗಿ ಕೈಗೆ ಎಟುಕಿದ ಪುಸ್ತಕವನ್ನು ತೆರೆದು ಓದುತ್ತ ಓದುತ್ತ ಇಹದ ತಾಪತ್ರಯ ದೂರ ಸರಿದಂತೆಲ್ಲ, ತನ್ಮಯತೆಯ ಮಡುವಿನಲ್ಲಿ ಮೆಲ್ಲ ಮೆಲ್ಲಗೆ ಮುಳುಗಿಬಿಡುತ್ತೇನೆ. ಪಕ್ಕದ ಮೇಜಿನ ಮೇಲೆ ಇರುವ ಗಂಧದ ಕಡ್ಡಿಗಳು ಉಗುಳುವ ಹೊಗೆ ಸುರುಳಿ ಸುರುಳಿಯಾಗಿ ಅಂಕುಡೊಂಕಾಗಿ ಮೇಲೇರಿ ಹರಡು ಕೊಠಡಿಯ ಪರಿಮಿತಾಕಾಶದಲ್ಲಿ ಕರಗಿಹೋಗುವಂತೆ ನಾನೂ ಬಾರಿ ಬಾರಿಗೆ ಕರಗಿ ಬಿಡಬೇಕೆಂಬ ಹಂಬಲ ನನಗೆ ಹಿರಿದಾಗಿದೆ.”

ಈ ಭಾವುಕ ವಿದ್ವಾಂಸರ ಈ ಹೃದಯವಾಣಿ ಕವಿತೆಯಾಗಿ ಮೊರೆದಿದೆ. ಇಲ್ಲಿ. ಇದನ್ನು ಓದುವಾಗ ಇದರ ಭಾವಸೌಂದರ್ಯ ನನ್ನನ್ನು ಮೋಹಗೊಳಿಸಿರುವುದಕ್ಕಿಂತಲೂ ಅತಿಶಯವಾಗಿ ಒಂದು ಜೀವದ ಆಭೀಪ್ಸೆಯ ಹೃದಯ ಸೌಂದರ್ಯವು ನನ್ನ ಹೃದಯವನ್ನು ಮತ್ತೆ ಮತ್ತೆ ಮುಗ್ಧಗೊಳಿಸುತ್ತಿದೆ. ಇವರ ಹೃದಯ ವಿದ್ವದ್‌ರಸಾತ್ಮಕವಾದುದು ಎಂಬುದಕ್ಕೆ ಇದೊಂದೆ ಉದಾಹರಣೆ ಸಾಕು. ಒಂದಿನಿಂತು ಮುಟ್ಟಿದರೆ ನೀರೊಸರುವ ಅಂತರ್ ಜಲ ಸಹಿತವಾದ ಗಂಗಾತಟಿಯಂತೆ, ಸೈಕತ ತಟಿಯಂತೆ ಆಚಾರ್ಯರ ಹೃದಯ. ಆದ್ದರಿಂದಲೆ ಇವರ ವಿದ್ವತ್ತು ಆನೆ ನುಂಗಿ ಉಗಿದ ಬೇಲದಂತಿಲ್ಲ. ಅದರಲ್ಲಿ ಸತ್ವವಿದೆ, ಶಕ್ತಿಯಿದೆ, ಹೊಸದನ್ನು ಕಾಣುವ ಛಲವಿದೆ. ಸಂಶೋಧನೆಯಲ್ಲಾಗಲಿ, ಗ್ರಂಥಪಾಠ ನಿರ್ಣಯದಲ್ಲಾಗಲಿ ತಾವು ಕಂಡ ನೆಲೆ ಅಮೋಘವಾದುದಾಗಿರಬೇಕೆಂಬ ಕಚ್ಚಿದೆ, ಅದರಲ್ಲಿ ಸಿದ್ಧಿಯೂ ದೊರೆತಿದೆ. ಅದರ ಮೌಲ್ಯನಿರ್ಣಯವಂತೂ ನನ್ನ ಸದ್ಯಸ್ಥಿತಿಯಲ್ಲಿ ಸಾಧ್ಯವೆ ಇಲ್ಲ. ಅವರ ವಿದ್ವತ್ತಿನ ಅಮೋಘತೆಯನ್ನು ಅನರ್ಘ್ಯತೆಯನ್ನು ಪರೀಕ್ಷಿಸುವ ಕಾಲಕ್ಕೆ ಕಾಣುವ ಕಾಲಕ್ಕೆ ನಾನೆ ಅವರಂತಹ ವಿದ್ವಾಂಸನಾಗಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು. ಅವರ ಸಮಾನಸ್ಕಂಧರಾದ ಶ್ರೀ ತೀ.ನಂ.ಶ್ರೀ ಅವರು ಮತ್ತೆ ಮತ್ತೆ ಹೇಳುವ ಮಾತನ್ನಿಲ್ಲಿ ಮಾತ್ರ ಹೇಳಬಹುದಷ್ಟೆ: “ಕನ್ನಡ ಸಾಹಿತ್ಯದ, ಭಾಷೆಯ ವಿದ್ವಾಂಸರಾಗಿ He is unrivalled.”ಆನೆಯ ಬಲವನ್ನು ಆನೆಯೆ ನಿರ್ಧರಿಸುವುದು ಕ್ಷೇಮ!

ಇಷ್ಟೆಲ್ಲ ವಿದ್ವನ್ನಿಧಿಯಾದರೂ ಅವರಿಂದ ಕನ್ನಡ ನಾಡು ತಾನು ಪಡೆದುಕೊಳ್ಳಬೇಕಾದಷ್ಟನ್ನು ಪಡೆದುಕೊಂಡಿಲ್ಲ. ಕಾರಣ ಸ್ಪಷ್ಟವಾಗಿಯೆ ಇದೆ. ನಮ್ಮಲ್ಲಿನ್ನೂ ಸೂಕ್ತ ಆವರಣ, ವಿದ್ವದಾವರಣ ಬೆಳೆದುಬಂದಿಲ್ಲ. “ಇದು ಬೇಕು, ಇದು ಸತ್ವಯುತವಾದ ವಿದ್ವತ್ತು” ಎಂಬ ಅರಿವು ಬಂದಿಲ್ಲ. ಹೀಗಿರುವಾಗ ಬರಹ ಕುಂಟುವುದು ಸಹಜ. ಇದರ ಜತೆಗೆ ಮತ್ತೂ ಒಂದು ಕಾರಣವುಂಟು. “ಓದು ಬರಹದ ಶತ್ರು” ಎಂದು ಶ್ರೀ ತೀ.ನಂ.ಶ್ರೀ ಅವರು ವಿನೋದವಾಗಿ ಹೇಳುವುದುಂಟು. ಆ ಮಾತನ್ನು ಉದಾಹರಿಸಿ ಶ್ರೀ ಎಸ್.ವಿ. ಪರಮೇಶ್ವರ ಭಟ್ಟರು “ಬರೆಹ ಓದಿಗೆ ಶತ್ರು” ಎಂದು ಮತ್ತೊಂದು ಯೋಗ್ಯಪಾಠಾಂತರವನ್ನು ಕೊಡುವುದುಂಟು. ಇವೆರಡರಲ್ಲಿ ಯಾವುದು ಸರಿಯಾದ ಪಾಠ? ಎರಡೂ ಸರಿಯಾದಲ್ಲಿ ಯಾವುದನ್ನು ಸ್ವೀಕರಿಸಬೇಕು? ಎಂಬ ಪ್ರಶ್ನೆ ನನಗೆ. ಶ್ರೀ ತೀ.ನಂ.ಶ್ರೀ ಅವರ ಮಾತು ಅವರಂತಹವರ, ಶ್ರೀ ಡಿ.ಎಲ್.ಎನ್. ಅಂಥವರ ವಿಚಾರದಲ್ಲಂತೂ ಸತ್ಯವೇ ಆಗಿದೆ. ವಿದ್ವತ್ತಿನ ಅಮೋಘತೆಗೆ ಗಮನವಿತ್ತ ಅವರು ಯಾವೊಂದು ಕೃತಿಯನ್ನೂ ಮತ್ತೆ ಮತ್ತೆ ಓದುವಾಗಲೂ ಹೆಚ್ಚು ಹೆಚ್ಚು ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕುತ್ತ ಹೋಗುವುದೆ ಪರಿಪಾಠವಾಗಿದೆ:

The old questionmark margins each finished page ಎಂದು ಶ್ರೀ ಅರವಿಂದರು ಅನ್ಯಭೂಮಿಕೆಯನ್ನು ಕುರಿತು ಹೇಳಿದ ಮಾತನ್ನು ಇಲ್ಲಿಗೆ ಬಳಸಿಕೊಳ್ಳಬಹುದು ಎನಿಸುತ್ತಿದೆ. ಹೀಗಾಗಿ ಕನ್ನಡ ನಾಡು ಅವರಿಂದ ಪಡೆದುಕೊಳ್ಳಬೇಕಾದುದು ಬಹಳವಾಗಿಯೆ ಉಳಿದಿದೆ. ಉತ್ತರವೆ ಬೇಕೆಂದಲ್ಲ, ಪ್ರಶ್ನೆಗಳೆ ಸಾಕು. ಯಾವ ಯಾವ ಘಟ್ಟದಲ್ಲಿ ಅವರಿಗೆ ಯಾವ ಯಾವ ಪ್ರಶ್ನೆ ಬಂದಿತು. ಏನೇನು ಉತ್ತರ – ಅದು ಎಷ್ಟೆ ಅಸಮರ್ಪಕವಾಗಿದ್ದರೂ ಸರಿ – ದೊರಕಿತು ಎಂಬುದನ್ನು ಈ ವಿದ್ವಾಂಸರುಗಳಿಂದ ನಾವು ತಿಳಿದುಕೊಳ್ಳಬೇಕಾಗಿದೆ. ಎಷ್ಟೊ ವೇಳೆ ಪ್ರಶ್ನೆಗಳನ್ನು ಕಾಣುವುದೇ ಸೃಷ್ಟಿಕಾರ್ಯವಾಗುವುದುಂಟು. ಅಂತಹ ಪ್ರಶ್ನೆಗಳು ನಿರ್ಣಾಯಕವಾದ ಉತ್ತರಗಳಿಗಿಂತಲೂ ಯಾವ ರೀತಿಯಲ್ಲೂ ಕಡಿಮೆಯಲ್ಲ. ಈ ವಿದ್ವಾಂಸ ವರಿಷ್ಠರು ಇನ್ನುಮೇಲೆ ಅಂಥ ಪ್ರಶ್ನೆಪತ್ರಿಕೆಗಳನ್ನಾದರೂ ವಿದ್ವದ್ಸಮಾಜದ ಮುಂದೆ ಇಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಮತ್ತೆ ಕೆಲವು ವೇಳೆ ಎಷ್ಟೊ ವಿಚಾರಗಳು ಸ್ಪಷ್ಟವಾಗಿ, ಖಚಿತವಾಗಿ ಅವರಿಗೆ ಗೊತ್ತಾಗಿರುತ್ತೆ. ಅಂಥವನ್ನೂ ಅವರು ಬರೆಯುವುದು ವಿರಳ. ರಗಳೆಯ ವಿಷಯವಾಗಲಿ, ಸಾಹಿತ್ಯ ಚರಿತ್ರೆಯ ವಿಷಯವಾಗಲಿ, ಅಷ್ಟೇಕೆ ಮೊನ್ನೆ ತಾನೆ ವಿದ್ವಾಂಸರ ಮುಂದೆ ಉಪನ್ಯಾಸವಿತ್ತ ಕನ್ನಡದ ಅತ್ಯಂತ ಪ್ರಾಚೀನ ಶಬ್ದದ ವಿಚಾರವಾಗಿಯಾಗಲಿ ಖಚಿತವಾಗಿ ತಿಳಿದುಕೊಂಡಿದ್ದರೂ ಏನು ಕಾರಣವೊ ಬರೆಯುವುದು ಇಲ್ಲ. ಕೇಳಿದರೆ ಹೇಳುತ್ತಾರೆ: “ಒಮ್ಮೆ ಭಾಷಣಮಾಡಿದ ಮೇಲೆ ಆಯಿತಯ್ಯ, ಬರೆಯೋ ಉತ್ಸಾಹವೆಲ್ಲ ಹೋಗಿ ಬಿಡುತ್ತೆ. ಮೇಸ್ಟ್ರಾದರೆ ಇದೊಂದು ಕಷ್ಟನೋಡು” ಎಂದು ಈ ಮಾತಿನಲ್ಲಿ ಬಹಳ ಸತ್ಯವಿದೆ. ಆದರೂ ಕೆಲವರು ಈ ಮಾತಿಗೆ ಹೊರತಾಗಿದಾರಲ್ಲ ಎಂದೆ ವಿಸ್ಮಯವಾಗುತ್ತದೆ ನನಗೆ. ಶ್ರೀ ಡಿ.ಎಲ್.ಎನ್. ಅವರೆ ಹೇಳುವುದುಂಟು: “ನೋಡಯ್ಯ, ನೂರಾರು ಪುಟ ಕಾದಂಬರಿ ಬರೀತಾರಲ್ಲ, ಅವರು ಏನಾದ್ರು ಬರೆಯಲಿ, ಅಷ್ಟನ್ನು ಕುಳಿತು ಬರಿತಾರಲ್ಲ. ಅದೇ ಮೆಚ್ಚಬೇಕಾದದ್ದು. ನನಗೆ ಕುಳಿತು ಬರೆಯುವುದೆಂದ್ರೆ ಆಗೋದಿಲ್ಲ ನೋಡು ಎಂದು ಒಮ್ಮೊಮ್ಮೆ ಹೇಳುವುದುಂಟು: “ಬೆರಣಿಯ ನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ” ಎಂದು. ಹಾಗೆನ್ನುವಾಗಲೆಲ್ಲ ಅವರ ದನಿಯಲ್ಲಿ ವಿಷಾದವೂ ಬೆರೆತಿರುವುದುಂಟು. ಅವರು ನಲವತ್ತರ ಹತ್ತಿರ ಬಂದಾಗ ಈ ವಿಷಾದವೆ ಪ್ರಬಲಿಸಿತಂತೆ. ಆಗ ಶ್ರೀ ರಾಮಕೃಷ್ಣರ ವಚನಾಮೃತ ಮನಸ್ಸಿಗೆ ಪ್ರಸಾದ ನೀಡಿತಂತೆ. ಇತ್ತೀಚಿನ ದಿನಗಳಲ್ಲಿ, ಗಂಧದಕಡ್ಡಿಯ ಧೂಮದಂತೆ ವಾಸನೆಯಾಗಿ ಕರಗಬೇಕೆನ್ನುವ ಬಯಕೆಯೆ ಅದರಲ್ಲಿ ಬೇರೂರುತ್ತಿರುವಂತೆ ತೋರುತ್ತದೆ. “ಒಂದೆಂಟು ಹತ್ತು ತಿಂಗಳು ಎಲ್ಲಾದರೂ ಹೋಗಿಬಿಡಬೇಕಯ್ಯ ಯಾವುದಕ್ಕೂ ಅಂಟುಕೊಳ್ಳದಂತೆ…..” ಎಂದು ಅನ್ನುವುದನ್ನು ಕೇಳಿದ್ದೆ. ಗಂಧದಕಡ್ಡಿ ಸುಡದಿದ್ದರೆಲ್ಲಿ ದೂಪಧೂಮಮುಕ್ತಿ ದೊರಕೀತು?

ತರಗತಿಗೆ ಪಾಠ ಮಾಡಲು ಹೊರಡಬೇಕಾದರೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವಲ್ಲಿ ಅವರು ತೋರುವ ನಿಷ್ಠಾವಂತಿಕೆಯನ್ನು ನೋಡಬೇಕು. ಒಂದು ಬಾರಿ ಎಂ.ಎ. ತರಗತಿಗೆ ಹರಿಹರನನ್ನು ಅವರು ಪಾಠ ಹೇಳಬೇಕಾಗಿತ್ತು. ಹರಿಹರ ಅವರ ಪ್ರಿಯ ಕವಿ. ಅಧಿಕಾರಯುತವಾಗಿ ಮಾತನಾಡಬಲ್ಲ ಶಕ್ತರು ಅವರು. ಆದರೆ ಒಂದು ದಿನ, ಯಾವುದೊ ಒಂದು ಓಲೆಗರಿಯನ್ನು ನೋಡಿ ಅದರ ಪಾಠದ ಪ್ರತಿ ಮಾಡಿಕೊಂಡು ಬಂದಿಲ್ಲವಾದ್ದರಿಂದ ಆ ದಿನದ ತರಗತಿಯನ್ನೆ ತೆಗೆದುಕೊಳ್ಳಲಿಲ್ಲ: “ಈ ದಿನ ನಾನು Prepare ಆಗಿಲ್ರಯ್ಯ” ಎಂದು ಅವಶ್ಯವಾದ ಓಲೆಗರಿ ಪುಸ್ತಕಗಳನ್ನು ಬೇಸರಪಡದೆ ಶ್ರಮವಹಿಸಿ ನೋಡಿ ಪ್ರತಿಮಾಡಿಕೊಂಡು ಬಂದು ಪಾಠ ಹೇಳುವ ವಿರಳ ಪರಂಪರೆಯಲ್ಲಿ ಸೇರಿದ ಶ್ರೀ ಡಿ.ಎಲ್.ಎನ್. ಅವರ ಈ ಪ್ರಾಮಾಣಿಕತೆ ನನ್ನಂತಹ ಕಿರಿಯರಿಗೆ ಮಾರ್ಗದರ್ಶಕವಾಗಿದೆ.

ತಮ್ಮ ಗುರುಪರಂಪರೆಯನ್ನು ನೆನೆಸಿಕೊಳ್ಳುವಾಗಲೆಲ್ಲ, ಅದರಲ್ಲೂ ಶ್ರೀ ಅವರನ್ನು ಸ್ಮರಿಸಿಕೊಳ್ಳುವಾಗಲಂತೂ ಇವರು ಎಷ್ಟು ಗೌರವ ತೋರುತ್ತಾರೆ! ಅವರಾಗಲಿ ಶ್ರೀ ತೀ.ನಂ.ಶ್ರೀ. ಅವರಾಗಲಿ ಎಷ್ಟೋ ವೇಳೆ ಲಘುವಾಗಿ ಮಾತನಾಡಬೇಕಾದ ಸನ್ನಿವೇಶದಲ್ಲೂ ತಮ್ಮ ಗುರುಗಳ ವಿಷಯ ಬಂದರೆ ಎಷ್ಟು ಗೌರವ ಗಾಂಭೀರ್ಯವನ್ನು ವ್ಯಕ್ತಪಡಿಸುತ್ತಾರೆ. ಈ ಗುಣವೂ ನನ್ನಂಥವನಿಗೆ ದಾರಿದೀಪವಾಗಿದೆ.

ಶ್ರೀ ನರಸಿಂಹಾಚಾರ್ಯರು ಕವಿತೆಯನ್ನೂ ಬರೆದಿದ್ದಾರೆ ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಕಿರಿಯ ಕಾಣಿಕೆಯನ್ನು, ವಡ್ಡಾರಾಧನೆಯ ಮೊದಲ ಮುದ್ರಣವನ್ನು ಬೇಕಾದರೆ ನೋಡಿ, ತಿಳಿಯುತ್ತೆ. “ಕವಿತೆ ನನ್ನ ಸ್ವಧರ್ಮ ಅಲ್ಲ ಎಂದು ನನಗೆ ಬಹಳ ಮುಂಚೆಯೆ ತಿಳಿದುಬಿಟ್ಟಿತು” ಎಂದು ಹೇಳಿ ಮುಗುಳ್ನಗುವುದುಂಟು. ಇಂದಿನ ನಮ್ಮ ಮಾತಿರಲಿ, ನಮ್ಮ ಹಳೆಯ ಎಷ್ಟೋ ವಿದ್ವಾಂಸ ಕವಿಗಳಿಗೆ ತಮ್ಮ ತಮ್ಮ ಸ್ವಧರ್ಮದ ಮರ್ಮ ಗೊತ್ತಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಕವಿತೆಯನ್ನು ಬರೆಯಲಿಲ್ಲ ಎಂದ ಮಾತ್ರದಿಂದಲೆ ಕವಿ ಹೃದಯವೆ ಇಲ್ಲ ಎಂದು ಹೇಳುವಹಾಗಿಲ್ಲ. ಭಾವುಕರಾಗಿ ಅವರಾಡುವ ಮಾತಿನಲ್ಲಿ ಆ ಕಾವ್ಯಸತ್ವವಿದೆ. ಅವರ ಪ್ರಬಂಧಶೈಲಿ, ಹಿಂದೆ ಉದಾಹರಿಸಿದ ಪಂಕ್ತಿಗಳೆ ಸಾಕು ಅದಕ್ಕೆ ಸಾಕ್ಷಿಯಾಗಿ. ಒಮ್ಮೊಮ್ಮೆ ಪಾಠ ಮಾಡುವಾಗ ಅವರು ತೀವ್ರ ಭಾವುಕರಾಗುವುದುಂಟು. ಒಮ್ಮೆ ಶಾಕುಂತಲಾ ನಾಟಕದ ಕೊನೆಯ ಅಂಕದಲ್ಲಿ ಬರುವ

“ಮೊಳೆವಲ್ ಶೋಭಿಸೆ ನಿರ್ನಿಮಿತ್ತಹಸಿತಂ ಚೆಲ್ವಾಗೆ ಲಾಲಾಜಲಂ
ತುಳುಕಲ್ ಬರ್ಪ ತೊದಳ್ ಮನಂಗೊಳಿಸಲಂಕಾರೋಹಕಿಚ್ಚೈಪ
ಮಕ್ಕಳನಿರ್ಕ್ಕೈಗಳಿನೆತ್ತಿಕೊಂಡು ನಲವಿಂ ತದ್ದೇಹ ಚಂಚದ್ರಜೋ
ಮಳಿನಾಂಗರ್ಕ್ಕಳೆನಿಪ್ಪ ಮಾನವರೆ ತಾಂ ಧನ್ಯರ್ ವಲಂ ಧಾತ್ರಿಯೊಳ್”

ಎಂಬ ಪದ್ಯವನ್ನು, ಮತ್ತೊಮ್ಮೆ King Lear ನಾಟಕದ ಕೊನೆಯಲ್ಲಿ ವೃದ್ಧ ಲಿಯರ್ ನಿಷ್ಕಾರಣವಾಗಿ ಸೆರೆ ಬಿದ್ದಿದ್ದ ತನ್ನ ಮುಗ್ಧ ಕುಮಾರಿ ಕಾರ್ಡೀಲಿಯಳ ಕೂಡೆ ಸೆರೆಮನೆಗೆ ಹೋಗುವಾಗ ಆಡುವ

“No, no, no, no! Come let’s away to prision:
We two alone will sing like bireds in the cage
When thou dost ask me blessing I’ll kneel down,
And ask of thee forgivencess: So we’ll live,
And pray and sing and tell old tales and laugh
At gilded butterflies and hear poor rogues
Talk of court news; and we’ll talk with them too. –
Who loses and who wins; Who’s in, who is out, –
And take upon’s the mystery of things,
As if we were God’s spies: and we’lt wear out,
In a wall’d prison. Packs and sects of great bnes,
That ebb and flow by the moom.”

ಎನ್ನುವ ಮಾತುಗಳನ್ನು ಅವರು ಓದುವಾಗ ಅವರ ಕೊರಳು ಹಿಡಿದು ಕೊಂಡುದನ್ನು, ಕಣ್ಣಂಚಿನಲ್ಲಿ ಹನಿ ಮಿಂಚಿದುದನ್ನು ಕಾಣಬೇಕಿತ್ತು, ಅವರ ಭಾವುಕತೆ ತಿಳಿಯಲು. ತಂದೆ ಮಕ್ಕಳ ಪ್ರೀತಿಯ ಸನ್ನಿವೇಶವನ್ನು ಕಂಡಾಗಲೆಲ್ಲ ಅವರು ಹಾಗೆ ಅತ್ಯಂತ ಆರ್ದ್ರರಾಗುತ್ತಾರೆ ಎಂದು ಇತ್ತೀಚಿನ ನನ್ನ ಅನುಭವದಿಂದ ಅನ್ನಿಸಿದೆ.

ತಮ್ಮ ಮೆಚ್ಚಿನ ಕವಿಗಳನ್ನು ಕುರಿತು ಮಾತನಾಡುವಾಗ ಕನ್ನಡದಲ್ಲಿ ಪಂಪ, ಕುಮಾರವ್ಯಾಸ, ಹರಿಹರ ಮುಂತಾದವರನ್ನು ಕುರಿತು ಮಾತನಾಡುವಾಗ ಹಾಗೆಯ ಭಾವಪರವಶರಾಗುತ್ತಾರೆ. ಹರಿಹರನ ಮಾತು ಬಂದರಂತೂ ಭಾವುಕರೆ ಆಗಿಬಿಡುತ್ತಾರೆ. ಒಂದು ಬಾರಿ ತರಗತಿಯಲ್ಲಿ (೧೯೫೨-೫೩) ‘ಬಸವಣ್ಣನವರ ಜೀವನಚಿತ್ರದ ಸಮಗ್ರ ದರ್ಶನವನ್ನು ಹರಿಹನಿಗೂ ಮಾಡಲಾಗಿಲ್ಲ ಎಂದು ಉತ್ಸಾಹದಿಂದ ನಾನು ಹೇಳಿದಾಗ ನೋಡಬೇಕಿತ್ತು ಅವರನ್ನು ಅವರು ನರಸಿಂಹಾಚಾರ್ಯರು ಎಂಬುದು ಅಂದು ನೆನಪಾಯಿತು. ಹರಿಹರ ಬಸವಣ್ಣನವರ ಪ್ರತಿಭೆಯಲ್ಲಿ ಯಾರ ಪ್ರತಿಭೆ ಶಕ್ತಿಯುತ, ಯಾವುದು ಬಹುಮುಖಿ ಎಂಬುದರ ವಿಷಯವಾಗಿ ಅವರು ನಾನು ಸ್ವಲ್ಪ ಭಿನ್ನಾಭಿಪ್ರಾಯವನ್ನೆ ಇಂದಿಗೂ ತಾಳಿಕೊಂಡಿರುವಂತೆ ತೋರುತ್ತೆ. ಕುಮಾರವ್ಯಾಸನ ಮಾತು ಬಂದರಂತೂ ಕೇಳಬೇಕು. “ಕುಮಾರವ್ಯಾಸ ಒಬ್ಬ Prodigyಕಣಯ್ಯ. ಅವನ ಊರ್ವರ್ಶೀ ಪ್ರಸಂಗವಿದೆಯಲ್ಲ ಅದು White-hot point. ಶ್ರೀ ಕೃಷ್ಣ ಭೀಷ್ಮ ಪ್ರಸಂಗ ಓದಿದಾಗಲಂತೂ ಇಂದಿಗೂ ನನಗಾಗುವ ಅನುಭವವನ್ನು ಹೇಳಲೆ ಅರೆ”. “ರನ್ನ ನನ್ನನ್ನೀಗ ಮೊದಲಿನ ಹಾಗೆ ವಶಗೊಳಿಸಿಕೊಳ್ಳಲಾರನಯ್ಯ.” ‘ಪಂಪನಿಗೆ ನಾಲಗೆಯಿಲ್ಲ, ರನ್ನನಿಗೆ ನಾಲಿಗೆ ಇದೆ’ ಅಂತಾ ಶ್ರೀ ವೆಂಕಣ್ಣಯ್ಯನವರು ಹೇಳ್ತಿದ್ರಯ್ಯ, ಅದು ಸತ್ಯಾನ್ನೋ ಹಾಗೆ ತೋರುತ್ತೆ. ಅವನು ಮಹಾಕವಿ ಅನ್ನೋದಕ್ಕಿಂತ ಮಹಾಸಹೃದಯ ಎನ್ನಬಹುದು.” “….ಷಡಕ್ಷರಿ ಇವರ್ಯಾರ ಮಟ್ಟಕ್ಕೆ ಬಾರದಿದ್ದರೂ ಆ ಕಾಲಕ್ಕೆ ಅವನೆ ಆದರ್ಶ, Water-mark, ಆದ್ದರಿಂದ ಕಾಲದ ದೃಷ್ಟಿಯಿಂದ ಅವನನ್ನು ನೋಡುವುದೊಳ್ಳೆಯದು” “…ಕಾವ್ಯದಲ್ಲಿ ತತ್ವ ಹೇಗಿರಬೇಕು ಹೂವಿನಲ್ಲಿ ಸೌರಭವಿದ್ದ ಹಾಗೆ. ಅದಿಲ್ಲದ ಹೂವುಗಳೂ ಉಂಟು! ಸೌರಭ ಇದ್ದರೆ ಅದು ಹೂವಿನಲ್ಲಿ ಯಾವೆಡೆಯಿರುತ್ತೆ? ಕಾವ್ಯದಲ್ಲಿ ತತ್ವ ಹಾಗಿರಬೇಕು.” “Essay ಎನ್ನುವ ಪ್ರಬಂಧಕ್ಕೆ ವಸ್ತು ಬೇಕು ಸರಿ ಆದರೆ ಅದು ಹೇಗಿರಬೇಕು? ರೇಷ್ಮೆ ಗೂಡಿನಲ್ಲಿ ರೇಷ್ಮೆ ಹುಳು ಇದ್ದಂತೆ ರೇಷ್ಮೆ ಹುಳು ಮೊದಲು ಪ್ರಧಾನ: ಕೊನೆಯಲ್ಲಿ ನಿಃಕೃಷ್ಟ”

ಇತ್ತೀಚಿನ ದಿನಗಳಲ್ಲಿ ಕವಿ ಕಾವ್ಯವನ್ನು ಕುರಿತು ಮಾತನಾಡುವಾಗ ಆಚಾರ್ಯರು ಒಮ್ಮೊಮ್ಮೆ ಬಹಳ ವಿಸ್ಮಯಕರವಾದ ಮಾತನ್ನಾಡುತ್ತಾರೆ, ಒಮ್ಮೊಮ್ಮೆ ವಿಲಕ್ಷಣವಾದ ಮಾತನ್ನು ಆಡುತ್ತಾರೆ. “ಕವಿ ಹೀಗೇಕೆ ಬರೆಯಲಿಲ್ಲ. ಹಾಗೇಕೆ ಬರೆಯಬೇಕಾಗಿತ್ತು, ಎನ್ನುವ ಪ್ರಶ್ನೆ ಹಾಕುವುದರಿಂದೇನು ಪ್ರಯೋಜನ ಅವನು ಬರೆದ, ತನ್ನ ಸ್ವಯಂ ಪ್ರೇರಣೆಯಿಂದ ಹಾಗೆ ಬರೆದ; ಚೆನ್ನಾಗಿದ್ದರೆ ಚೆನ್ನಾಗಿದೆ ಎನ್ನಿ, ಇಲ್ಲದಿದ್ರೆ ಇಲ್ಲಾನ್ನಿ, ಸುಮ್ನೆಲ್ಲಾ ಈ ಕಾಡುಮೇಯೊ ಮಾತೆಲ್ಲಾ ಏಕೆ?” ಎಂದು ಖಂಡಿತವಾಗಿ ಮಾತನಾಡುವುದುಂಟು. “ಏನಯ್ಯ ಇದೆ, ಬರ್ದದನ್ನೆ ಬರೆಯೊದ್ರಲ್ಲಿ; Explore ಮಾಡಬೇಕಯ್ಯ Explore ಮಾಡಬೇಕು! ಹೊಸ ಹೊಸ ದಿಗಂತಗಳನ್ನೆಲ್ಲ ಸೂರೆ ಮಾಡಬೇಕು. ವಿಜ್ಞಾನ ದಿನ ದಿನವೂ ಹೇಗೆ ಹೊಸ ಹೊಸಲೋಕದ ಕಡೆ ಧಾವಿಸುತ್ತಿದೆಯೊ ಹಾಗೆ. Tooth-Pastc ಕವಿತೆಯಿಂದೇನು ಪ್ರಯೋಜನ? Tooth-Paste ಕವಿಗಳಿಂದೇಣು ಸಾಧ್ಯ? ಎಂಥ ಪ್ರಸಂಗನಾದ್ರೂ, ಎಂಥ ಸಮಸ್ಯೆನಾದ್ರೂ ಕೊರದ್ಕೊಂಡ್ಹೋಗೊ ಕೆಚ್ಚಿರಬೇಕಯ್ಯ ಕವಿಗೆ:

“ಕೆದಱುತ್ತುಂ ಮಣಲಂ ತೆಮಱ್ದಿಕೊಳುತುಂ ಭೂರೇಣುವಂ ಸೂಸುತಂ
ನದನದ್ಯಚ್ಛ ಜಲಂಗಳಂ ಕೆದಱುತುಂ ಭೂಜಂಗಳಂ ನುಗುರ್ತುಂ
ಪೊದಱಂ ಸೀಳುತುಮೆಯ್ದೆ ವಂಶವನಮು ಕಾಡಾನೆಯಂ ಪೋಲ್ತು ಪೊ
ಕ್ಕುದು ಬೀಡಂ ಲಯಕಾಲ ಕಾಲ ವಿಚಲಿದ್ಭೀಮಾರುತಂ ಮಾರುತಂ.”
(ಕಾವ್ಯಾವಲೋಕನಂ.)

ಎನ್ನೊ ಹಾಗೆ ಧಾವಿಸಬೇಕಯ್ಯ ಕವಿ. … ವಿಜ್ಞಾನ ಕಂಡ ಬೆಳಕನ್ನು ತಾವೂ ಕಂಡು ಅದರಿಂದ ಪುಷ್ಟರಾಗಿ ಕಾವ್ಯ ಬರೆಯಬೇಕಯ್ಯ ನಮ್ಮ ಕವಿಗಳು, ನಮ್ಮ ಪುಟ್ಟಪ್ಪ ಹಾಗೆ ಹೋಗ್ತಾರಯ್ಯ ಯಾವುದಕ್ಕೂ ಲೆಕ್ಕಿಸದೆ…. ಅವರ ‘ಬೆರಳ್ಗೆ ಕೊರಳ್’ ‘Perhaps it is the most powerful play of our time.”

ಇತ್ತೀಚಿನ ದಿನಗಳಲ್ಲಿ ಹೊಸಗನ್ನಡ ಸಾಹಿತ್ಯವನ್ನು ಕುರಿತು ಮಾತನಾಡುವಾಗ ಒಮ್ಮೊಮ್ಮೆ ನಿರಾಶೆ ತೋರಿರುವುದೂ ಉಂಟು. ಪ್ರಾಚೀನವನ್ನು ಓದದೆ ಅಲ್ಲಗಳೆಯುವ ಕೆಲವರ ಉತ್ಸಾಹಾತಿರೇಕವನ್ನು ಕಂಡು ಹಾಗಾಗಿರಬಹುದು. ಅವರೆ ಒಮ್ಮೊಮ್ಮೆ ಹೇಳುತ್ತಾರೆ. ಕನ್ನಡ ಸಾಹಿತ್ಯ ಹಾಗೆ ನೋಡೋದಾದ್ರೆ ಉಳಿದ ಭಾರತೀಯ ಸಾಹಿತ್ಯಕ್ಕಿಂತಲೂ ಎಷ್ಟೋ ವಾಸಿ. ಬಹುಶಃ ಬಂಗಾಳಿ ಸಾಹಿತ್ಯವನ್ನೊಂದನ್ನು ಬಿಟ್ಟುಬಿಟ್ಟರೆ ಅದೇ ಶ್ರೇಷ್ಠವಾದುದೆನ್ನೊ ಹಾಗೆ ಕಾಣುತ್ತೆ.

ಮೂವತ್ತು ಎರಡು ವರ್ಷಗಳ ಹಿಂದೆ, (೧೯೨೭ರಲ್ಲ) ಕನ್ನಡ ನವೋದಯದ ಪೂರ್ವಸಿದ್ಧತೆಯನ್ನು ಕಾಣುತ್ತಿದ್ದ ಆ ಕಾಲದಲ್ಲಿ ಇದೇ ಶ್ರೀ ನರಸಿಂಹಾಚಾರ್ಯರು ಬಿ.ಎ. ವಿದ್ಯಾರ್ಥಿಯಾಗಿದ್ದಾಗ ಆಡಿದ ಮಾತನ್ನು ಕೇಳಿ “ಈಗಿನ ಸಾಹಿತ್ಯದ ಪ್ರಕೃತಿ ವರ್ಣನೆಯ ಧ್ಯೇಯವು ಎಷ್ಟೋ ಉಚ್ಚತರವಾದುದಾಗಿದೆ. ಅವುಗಳ ರೀತಿಯೇ ಬೇರೆ, ದೃಷ್ಟಿಯ ಬೇರೆ, ಪರಿಪಾಕಪೂ ಬೇರೆ, ಆವೇಶವೂ ಬೇರೆ. ಶುದ್ಧವಾದ ಹೃದಯದಿಂದಲೆ ಅರಿಯಬಹುದಾದ ಆಧ್ಯಾತ್ಮಿಕ ತತ್ವಗಳನ್ನು ಈಗಿನ ಕವಿಗಳು ಪ್ರಕೃತಿ ಸೌಂದರ್ಯದಲ್ಲಿ ಮನಗಾಣುತ್ತಿರುವರು. ಹಿಂದೆ ಕಳೆದುಹೋದ ಪಂಪ ರನ್ನರ ಕಾಲವು ಹೇಗೆ ಸಾಹಿತ್ಯದ ಚರಮಸೀಮೆಯನ್ನೈದಿದ್ದಿತೋ. ಹಾಗೆಯೇ ಇನ್ನು ಮುಂದೆ ಬರುವ ಕಾಲವು ಪಂಪರನ್ನರ ಕಾಲಕ್ಕಿಂತ ನೂರ್ಮಡಿಯಷ್ಟು ಉಚ್ಚತರವಾಗುವುದೆಂಬುದನ್ನು ಯಾರಾದರೂ ಒಪ್ಪಲೇ ಬೇಕು. ಷೇಕ್ಸ್‌ಪಿಯರಿನಂತರ ಕವಿಗಳು ಇನ್ನು ಮುಂದೆ ಹುಟ್ಟಬೇಕು; ಹುಟ್ಟಿಯೇ ಇದ್ದಾರೆಯೋ ಏನೋ ಯಾರಿಗೆ ಗೊತ್ತು ಅದಕ್ಕೆ ತಕ್ಕ ವಾತಾವರಣವೇನೊ ದಿನ ದಿನವೂ ಪರಿಶುದ್ಧವಾಗುತ್ತ ಬರುತ್ತಿರುವುದು ಶುಭ ಚಿಹ್ನೆಗಳು ಎಲ್ಲೆಲ್ಲಿಯೂ ತಲೆದೋರಿವೆ. ಇನ್ನು ಮುಂದೆ, ಯಾರು ಎಷ್ಟು ಪ್ರಯತ್ನಪಟ್ಟರೂ ತಡೆಯಲಾಗದೆ ಕಾವ್ಯಜೀವಜ್ಯೋತಿಯ ಹೊನಲು ನಮ್ಮೆಲ್ಲರನ್ನು ಮುಳುಗಿಸಿ ಆನಂದತಾಂಡವದಲ್ಲಿ, ಮನವನ್ನು ಮೋಹಿಸುವ ಗಾನದಲ್ಲಿ, ಲೀನರನ್ನಾಗಿ ಮಾಡುವುದು. ಬರುವುದು, ಬೇಗ ಬರುವುದು, ಅಂತಹ ಸುದಿನದ ನಮ್ಮ ಜೀವನವನ್ನು ವಿಮಲಗಂಗಾತಟಿನಿಯಲ್ಲಿ ತೋಯಿಸೋಣ. ಅಲ್ಲಿಯವರೆಗೆ ಅಂತಃಕರಣವನ್ನು ಶುದ್ಧಿಗೊಳಿಸುತ್ತ, ಮಧುಮಾಸದ ಬರವನ್ನು ಬಯಸುತ್ತ, ಪರಿಮಳವನ್ನು ಎಲ್ಲ ಕಡೆಯಲ್ಲಿಯೂ ಚೆಲ್ಲಲು ತವಕಿಸುತ್ತಿರುವ ಅಡವಿಯ ಹೂಗಳಂತೆ ಧ್ಯಾನಾಸಕ್ತ ರಾಗೋಣ. ದಯಾಮಯನಾದ ಪರಂಜ್ಯೋತಿಯು ಎಲ್ಲೆಲ್ಲಿಯೂ ತುಂಬಿ ಹೊರ ಹೊಮ್ಮುವುದು.”

ಈ ಮಾತುಗಳಲ್ಲಿ ಭಾವುಕತೆಯಿದೆ; ಉತ್ಸಾಹವಿದೆ ದಿಟ. ಆದರೆ ಹಾರೈಕೆಯೂ ಇದೆ, ಭವಿಷ್ಯವಾಣಿಯೂ ಇದೆ ಎಂಬುದು ಸುಳ್ಳಲ್ಲ. ಆ ಹಾರೈಕೆಯ, ಅಭೀಪ್ಸೆಯ ಭವಿಷ್ಯ ವಾಣಿಯ ಮಾತು ಎಷ್ಟು ಸತ್ಯವಾಗಿದೆ. ಇಲ್ಲ ಎನ್ನುವುದನ್ನಿಂದೆ ನಿರ್ಧಾರ ಮಾಡುವುದು ಕಷ್ಟ. ಅದು ಹಾಗಿರಲಿ, ಮತ್ತೊಮ್ಮೆ ಅಂಥದೆ ಒಂದು ವಾಣಿ ಆಚಾರ್ಯರ ಬಾಯಿಂದ ಬರುವುದೆ?

* ಜ್ಞಾನೋಪಾಸಕ, ಪು. ೪೬

 

[1] ಹತ್ತುಹದಿನೈದುಶತಮಾನಗಳಕತ್ತಲಲ್ಲಿ–ಹೂತುಕೊಂಡಿದ್ದಗ್ರೀಕ್ಮಹಾನಾಟಕಕಾರರನ್ನುಮೊದಲುಹೊರತೆರೆದುತೋರಿದಾಗಪಾಶ್ಚಾತ್ಯಸಾಹಿತ್ಯಪ್ರಪಂಚಲ್ಲೂ, ಇನ್ನೂಬೃಹಪ್ರಮಾಣದಲ್ಲಾದರೂ, ಇಂತದೆಪರಿಣಾಮವಾಯಿತೆನ್ನಬೇಕು.