ಜನಾನುರಾಗ, ಕತೆಗಾರನಿಗೆ ಕಾದಂಬರಿಕಾರನಿಗೆ ದೊರೆತಷ್ಟು ಬೇಗ ಕವಿ ಎನಿಸಿಕೊಂಡು ಕವನ ಕಟ್ಟುವವನಿಗೆ ದೊರೆಯುವುದಿಲ್ಲ. ಅದು ಸಹಜವೂ ಹೌದು. ಕವಿ ಜನರ ಕಣ್ಣಿಗೆ ಬೀಳುವುದು, ಅವನ ಕವನಗಳನ್ನು ಗಮಕಿಗಳು ರಸವತ್ತಾಗಿ ಹಾಡಿದಾಗ; ನಾಟಕಕಾರನು ಜನಪ್ರಿಯನಾಗುವುದು, ನಟರು ಅವನ ನಾಟಕಗಳನ್ನು ಚೆನ್ನಾಗಿ ಆಡಿ ತೋರಿಸಿದಾಗ ಆದರೆ ವಿದ್ವಾಂಸರೆನ್ನಿಸಿಕೊಂಡ ಜನ ಪ್ರಪಂಚದ ದೃಷ್ಟಿಗೆ ಗೋಚರವಾಗುವುದು ಮಾತ್ರ ಬಹು ಅಪರೂಪ.

ಏಕೆಂದರೆ ವಿದ್ವಾಂಸ ಮಾಡುವ ಕೆಲಸವೆಲ್ಲ ಸರಸ್ವತೀ ಮಂದಿರದ ಒಳಕೋಣೆಯಲ್ಲಿ ವ್ಯಾಸಂಗವೇ ಅವನ ಧ್ಯೇಯವಾಗಿರುತ್ತದೆ. ಇಪ್ಪತ್ತೈದು ಮೂವತ್ತು ವರ್ಷಗಳವರೆಗೆ ಅವನು ನಿರಂತರ ಅಭ್ಯಾಸದಲ್ಲಿಯೇ ಕಾಲವನ್ನು ಕಳೆದುಬಿಡುತ್ತಾನೆ. ಆಳವಾಗಿ ವ್ಯಾಸಂಗ ಮಾಡಿದಷ್ಟು ಅವನ ಜ್ಞಾನದಾಹ ಹೆಚ್ಚಾಗುತ್ತದೆ. ಅವನ ಜ್ಞಾನಗಾಂಭೀರ್ಯವನ್ನು ಕಂಡು ಜನ ಬೆರಗಾಗುತ್ತಿದ್ದರೂ ಅವನು ಮಾತ್ರ ತನ್ನ ಮಿತಿಯನ್ನರಿತವನಾಗಿ ನಮ್ರವಾಗಿ ಕೆಲಸ ಮಾಡುತ್ತಿರುತ್ತಾನೆ. ಆತ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಂಥ ತೂಕವಾದ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿದ್ದಿರಬಹುದು. ವಡ್ಡಾರಾಧನೆಯಂಥ ಒಳ್ಳೆಯ ಗ್ರಂಥವೊಂದನ್ನು ಬಹು ಶ್ರಮಿಸಿ ಸಂಪಾದಿಸಿರಬಹುದು. ಕನ್ನಡ-ಕನ್ನಡ ನಿಘಂಟು ಒಂದನ್ನು ಸಂಪಾದಿಸುವ ಬೃಹದ್‌ ಭಾರವನ್ನು ಹೊತ್ತು ನಡೆಸುತ್ತಿರಬಹುದು. ಅಲ್ಲೊಂದು ಇಲ್ಲೊಂದು ಯಾರೂ ಓದದ-ಲೇಖನಗಳನ್ನು ಬರೆದಿರಬಹುದು. ಅಂಥವನ ಮೇಲೆ ಜನತೆಯ ದೃಷ್ಟಿ ಬೀಳುವುದಾದರೂ ಹೇಗೆ ಸಾಧ್ಯ!

ಕನ್ನಡ ದೇಶದಲ್ಲಿ ಇವತ್ತು ಹಿಂದಿನ ಮಾದರಿಯ ಪ್ರಚಾರಕ್ಕೆ ಸ್ಥಳವಿಲ್ಲ. ನಮ್ಮ ನಾಡು, ನುಡಿ, ಸಾಹಿತ್ಯಗಳ ವಿಚಾರದಲ್ಲಿ ಇದ್ದ ಅಶ್ರದ್ಧೆ, ಅಜ್ಞಾನ ಈಗ ಇಲ್ಲ, ಅಷ್ಟೇ ಅಲ್ಲ. ನಮ್ಮದು ಎಂಬ ಅಮಿತ ಪ್ರೇಮ, ಉತ್ಸಾಹ, ಸ್ಫೂರ್ತಿಗಳ ಪರಿಸ್ಥಿತಿಯೂ ಈಗ ಇಲ್ಲ. ಇದು ವಿಮರ್ಶೆಯ, ಲೆಕ್ಕಾಚಾರದ ಯುಗ. ಜನಮನ ಬಹುಮುಖದಲ್ಲಿ ಹದವಾಗುತ್ತಿದೆ. ಬೆಳೆ ಏನೋ ಬೇಕಾದಷ್ಟಿದೆ ಎಂಬ ಅರಿವು ಜನತೆಗೆ ಆಗಿದೆ. ಅದನ್ನು ಕೊಯ್ಯುವವರ ಅವಶ್ಯಕತೆ ಎಷ್ಟು ಎಂಬುದನ್ನು ಅದು ಅರಿಯತೊಡಗಿದೆ. ಜಳ್ಳನ್ನು ತೂರಿ ಕಾಳನ್ನು ಸಂಗ್ರಹಮಾಡುವ ಕೆಲಸಕ್ಕೆ ಈಗೀಗ ಹೆಚ್ಚಿನ ಬೆಲೆ ಬರತೊಡಗಿದೆ. ಆಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಕೆಲಸ ಬಹುದೊಡ್ಡ ಪ್ರಮಾಣದಲ್ಲಿ ಆದಷ್ಟು ಬೇಗ ನಡೆಯಬೇಕಾದುದು ಅಗತ್ಯ. ಇಂಥ ಕೆಲಸ ದೇವಲ ಮಾತಿನಿಂದ ಆಗದು. ಅದಕ್ಕೆ ಬಹು ವರ್ಷಗಳ ಆಳವಾದ, ಪಾಂಕ್ತವಾದ, ವ್ಯಾಸಂಗ ಅವಶ್ಯಕ. ಮೌನವಾಗಿ, ಅವಿಶ್ರಾಂತವಾಗಿ ಅಂಥಾ ಕೆಲಸ ನಡೆಯಲವಕಾಶ ದೊರೆಯಬೇಕು. ವಿದ್ವತ್ತು ಬೆಳೆಯಬೇಕು. ಹಾಸು ಹೊಕ್ಕಾಗಿ, ಎಳೆ ಎಳೆಯಾಗಿ, ಮೂಲೆಯಿಂದ ಮೂಲೆಗೆ, ಎಲ್ಲ ದೃಷ್ಟಿಕೋನದಿಂದಲೂ ವಿಷಯ ವಿಮರ್ಶೆ ನಡೆಯಬೇಕು. ಪ್ರಾಮಾಣಿಕತೆಯಿಂದ, ಪ್ರಶ್ನೆಗಳಿಗೆ ಉತ್ತರ ಹುಡುಕಬಲ್ಲ ಧೀರರು ಈಗ ಬೇಕಾಗಿದ್ದಾರೆ. ಕನ್ನಡ ಸಾಹಿತ್ಯ ಮಥನ ಮಾಡಿ, ತಳಮುಟ್ಟಿ, ತಾಯ್ಮಳಲನ್ನು ಶೋಧಿಸಿ, ಅಡ್ಡಗಾಲವಾಗಿ ಈಸಿ, ದಡಮುಟ್ಟಬಲ್ಲ ಶೂರರೀಗ ಬೇಕಾಗಿದ್ದಾರೆ. ಇದು ಇಂದು ನಾಳೆ ಅಗತಕ್ಕ ಕೆಲಸವಲ್ಲ. ಅಲ್ಪ ಶ್ರಮದಿಂದ ಯಾರು ಈ ಬೃಹತ್ ಕಾರ್ಯಕ್ಕಾಗಿ ಮುಡುಪಿಟ್ಟು ಕೆಲಸ ಮಾಡುತ್ತಿದ್ದಾರೋ ಅಂಥಾ ವಿದ್ವನ್ಮಣಿಗಳಿಂದ ಮಾತ್ರ ಅದು ಸಾಧ್ಯವಾಗಬಲ್ಲದು. ಅಂಥವರ ಸಂಖ್ಯೆ ಈಗ ಎಷ್ಟಿದ್ದೀತು?

ಹಿಂದೆ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರು, ಬಿ.ಎಂ. ಶ್ರೀಕಂಠಯ್ಯನವರು, ಟಿ.ಎಸ್. ವೆಂಕಣ್ಣಯ್ಯನವರು ಇಂಥಾ ಕೆಲಸವನ್ನು ಬಹುಮಟ್ಟಿಗೆ ಮುಂದುವರಿಸಿದರು. ಕನ್ನಡ ಸಾಹಿತ್ಯದ ವಿಂಧ್ಯಾರಣ್ಯದಲ್ಲಿ ಅವರಿಟ್ಟ ದೀಪದಿಂದ ಬೆಳಕು ಬಿದ್ದು ದಾರಿ ಕಾಣುವಂತಾಯಿತು. ಈಗ ಅಂಥಾ ಪಟ್ಟಕ್ಕೆ ಏರಿರುವ ಜನ ಕೆಲವರಿದ್ದಾರೆ. ಅವರಲ್ಲಿ ಪ್ರೊಫೆಸರ್ ಡಿ.ಎಲ್. ನರಸಿಂಹಾಚಾರ್ಯರು ಮೊದಲಿಗರೆಂದು ಹೇಳಿದರೆ ಉತ್ಪೇಕ್ಷೆಯಾಗಲಾರದು. ಶ್ರೀಯುತರುಗಳಾದ ತೀ.ನಂ. ಶ್ರೀಕಂಠಯ್ಯ, ರಂ.ಶ್ರೀ. ಮುಗಳಿ, ಎ.ಆರ್. ಕೃಷ್ಣಶಾಸ್ತ್ರೀ, ಮಂಜೇಶ್ವರ ಗೋವಿಂದ ಪೈ, ಡಾ. ಕೆ.ವಿ. ಪುಟ್ಟಪ್ಪನವರು ಮೊದಲಾದ ಹಿರಿಯರು ನರಸಿಂಹಾಚಾರ್ಯರನ್ನು ಗೌರವಾದರಗಳಿಂದ ಕಂಡುಕೊಳ್ಳುತ್ತಿರುವರಲ್ಲದೆ, ಈ ಒಂದು ವಿದ್ವನ್ಮಂಡಳಿಯು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಮಾಡಿರುವ ಕೆಲಸ ಸ್ತೋತ್ರಾರ್ಹವಾದದು. ವಚನ ಸಾಹಿತ್ಯ ಹೋದರೂ ಚಿಂತೆ ಇಲ್ಲ, ನಮಗೆ ಎಂ.ಆರ್. ಶ್ರೀನಿವಾಸಮೂರ್ತಿಗಳು ಒಬ್ಬರಿದ್ದರೆ ಸಾಕು ಎಂದು ನರಸಿಂಹಾಚಾರ್ಯರು ಒಂದು ಸಾರಿ ಮುಕ್ತ ಕಂಠದಿಂದ ಅವರನ್ನು ಹೊಗಳಿದರಂತೆ. ಅದೇ ಧಾಟಿಯಲ್ಲಿ ನಾನು ಹೀಗೆ ಹೇಳಬಹುದು. ಕನ್ನಡ ಸಾಹಿತ್ಯ ಇಲ್ಲವಾದರೆ ಚಿಂತೆ ಇಲ್ಲ ನಮಗೆ ಡಿ.ಎಲ್.ಎನ್. ಇದ್ದರೆ ಸಾಕು.

ಪ್ರೊ. ನರಸಿಂಹಾಚಾರ್ಯರ ಶಿಷ್ಯನಾಗಿ ನಾನು ಪಂಪಭಾರತದ ಕೆಲವು ಅಶ್ವಾಸಗಳನ್ನು ಓದುವ ಸದವಕಾಶವನ್ನು ಪಡೆದಿದ್ದೆ. ಅದನ್ನವರು ಪಾಠ ಹೇಳುವಾಗ ಸಾಹಿತ್ಯಾಭ್ಯಾಸದ ಕ್ರಮವನ್ನೇ ನನಗೆ ಹೇಳಿಕೊಟ್ಟರು. ಪಂಪನನ್ನು ನೆಪಮಾಡಿಕೊಂಡು ಸಮಗ್ರ ಕನ್ನಡ ಸಾಹಿತ್ಯದ ಸಿಂಹಾವಲೋಕನ ಮಾಡುತ್ತಿದ್ದ ಅವರ ಶಕ್ತಿ ಅಮೋಘವಾದದ್ದು. ಸಾಹಿತ್ಯದ ರಸವತ್ತಾದ ಭಾಗಗಳೆಲ್ಲ ನನ್ನ ನಾಲಗೆಯ ತುದಿಯಲ್ಲಿರಲಿ ಎನ್ನುವುದು ವಿದ್ವಾಂಸರ ಪ್ರಥಮ ಲಕ್ಷಣ. ಕ್ಲಿಷ್ಟವಾದ ಒಂದು ಪದ, ರಸವತ್ತಾದ ಒಂದು ವಾಕ್ಯ ಬಂದಿತೆಂದರೆ ಗುರುಗಳು ಪಾಠವನ್ನು ಅಲ್ಲಿಗೆ ನಿಲ್ಲಿಸಿ ಅದರ ವಿವರಣೆಗಾಗಿ ಕನ್ನಡ ಸಾಹಿತ್ಯ ಸಾಗರವನ್ನೇ ಈಸಾಡಿ ಹತ್ತಾರು ಉದಾಹರಣೆಗಳನ್ನು ಕೊಡುತ್ತಿದ್ದರು. ಕೇವಲ ಪುಸ್ತಕಗಳಿದ್ದ ಮಾತ್ರಕ್ಕೇ ವಿಶ್ವವಿದ್ಯಾಲಯದ ಓದು ಪೂರ್ಣವಾಗುವುದಿಲ್ಲ. ಅದರ ಪೂರ್ಣತೆಗೆ ಇಂಥಾ ನುರಿತ ವಿದ್ವಾಂಸರ ಸಹವಾಸ ಅತ್ಯಗತ್ಯ.

[1] ಒಂದು ಗಂಟೆಯ ಪಾಠದಲ್ಲಿ ನುರಿತ ವಿದ್ವಾಂಸರು ಅದೆಷ್ಟು ವಿಷಯಗಳನ್ನು ಅಡಕಮಾಡಬಲ್ಲರೆಂಬುದಕ್ಕೆ ಶ್ರೀಯುತರ ತರಗತಿಗಳು ಉತ್ತಮ ನಿದರ್ಶನಗಳಾಗಿವೆ. ಚಿಕ್ಕದೇವರಾಜ ಒಡೆಯರ ಕಾಲದ ಸಾಹಿತ್ಯವನ್ನು ಪಾಠ ಹೇಳುವಾಗ ಅವರು ಮೈಸೂರಿನ ಪ್ರಾಚ್ಯಸಂಶೋಧನ ಮಂದಿರದಿಂದ ಓಲೆಗರಿಯ ಪ್ರತಿಗಳನ್ನು ತಂದು, ಓದಿ, ಟಿಪ್ಪಣಿ ಮಾಡಿಕೊಂಡು, ಅದರ ಆಧಾರಮೇಲೆ ಮಾತನಾಡುವಷ್ಟು ಖಚಿತವಾದ ವಿದ್ವತ್ತನ್ನು ಕಾಣುವುದು ಅಪರೂಪ; ವ್ಯಾಸಂಗವೇ ಅವರಿಗೊಂದು ಆನಂದದ ಕೆಲಸ. ಓದುವುದೇ ಅವರ ಕರ್ತವ್ಯ. ಓದಿ ತಿಳಿದುಕೊಳ್ಳದ ಯಾವದ ವಿಷಯದ ಮೇಲೂ ಏನೂ ಮಾತನಾಡದ ಅವರ ಸಂಯಮ ಅದ್ವಿತೀಯವಾದುದು. ನಾನು ಪದವೀಧರನಾಗಿ ವಿಶ್ವವಿದ್ಯಾನಿಲಯದಿಂದ ಹೊರಬಂದು ಉಪಾಧ್ಯಾಯ ವೃತ್ತಿಯಲ್ಲಿ ತೊಡಗಿದಾಗ ಗುರುಗಳು ನನಗೆ ಮಾಡಿದ ಉಪದೇಶ ಈ ರೀತಿಯಾಗಿದೆ. “ಹಳಗನ್ನಡದ ಪ್ರೌಢ ಗ್ರಂಥಗಳನ್ನು ಮರೆಯಬೇಡ. ಪಂಪರನ್ನಾದಿಗಳಿಂದ ದಿನಕ್ಕೆ ಹತ್ತುಪುಟದಷ್ಟನ್ನಾದರೂ ಓದದೇ ಮಲಗುವುದು ಮಹಾಪರಾಧ.”

ಉಪಾಧ್ಯಾಯ ವೃತ್ತಿ ಬಹು ಮುಖ್ಯವಾದದ್ದು. ಅದಕ್ಕೆ ಪಾಂಡಿತ್ಯ ಅತ್ಯವಶ್ಯಕವಾದ ಸಾಧನ. ಕಲಿತ ವಿದ್ಯೆಯನ್ನು ದಿನೇ ದಿನೇ ಬಲಪಡಿಸಿಕೊಂಡು, ಕುಂದದ ಆಸಕ್ತಿಯಿಂದ ಅದನ್ನು ಶಿಷ್ಯರಿಗೆ ಧಾರೆ ಎರೆಯುವ ಉಪಾಧ್ಯಾಯನು ನಿಜವಾಗಿ ಕೃತ್ಯಕೃತ್ಯ. ವಿದ್ಯಾದಾನದ ವಿಚಾರದಲ್ಲಿ ನರಸಿಂಹಾಚಾರ್ಯರಿಗೆ ಅಪರಿಮಿತ ಉತ್ಸಾಹ. ಅವರು ಅಲ್ಲಿ ನಡಿಸಿರುವ ಗೆಯ್ಮೆ ಅವರ ಶಿಷ್ಯಕೋಟಿಯಲ್ಲಿ ಜಗಜಗಿಸಿ ಬೆಳಗುತ್ತಿರುವುದೇ ಅದಕ್ಕೆ ಸಾಕ್ಷಿ.[2]

ಸಾಹಿತ್ಯಪಾಠ ಹೇಳುವ ಉಪಾಧ್ಯಾಯರಲ್ಲಿ ವಿದ್ವತ್ತು ಇರಬೇಕಾದುದು ಅತ್ಯಗತ್ಯವಾದರೂ ಅದೊಂದರಿಂದಲೇ ಪಾಠ ರುಚಿಯಾಗದು. ಅದಕ್ಕೆ ರಸಭಾವಗಳಲ್ಲಿ ತಲ್ಲೀನವಾಗಬಲ್ಲ ಹೃದಯ ಪರಿಪಾಠ ಅಷ್ಟೇ ಅವಶ್ಯಕ. ಪ್ರೊ. ಬಿ.ಎಂ.ಶ್ರೀ. ಅವರ ಪಾಠಪ್ರವಚನಗಳಲ್ಲಿ ಪಾಂಡಿತ್ಯ ಮತ್ತು ರಸಜ್ಞತೆಯ ಸಮ್ಮಿಳನವನ್ನು ನಾನು ಕಾಣಬಹುದಾಗಿತ್ತು. ಆ ಪರಂಪರೆಯನ್ನು ನರಸಿಂಹಾಚಾರ್ಯರು ಚೆನ್ನಾಗಿ ಉಳಿಸಿಕೊಂಡು ಬಂದಿದ್ದಾರೆ. ತೀವ್ರಾನುಭವವನ್ನೊಳಗೊಂಡ ಸಾಹಿತ್ಯಭಾಗಕ್ಕೆ ಬಂದಾಗ ಆಚಾರ್ಯರು ಅದರಲ್ಲಿ ತಲ್ಲೀನರಾಗಲಿ, ಮೈಮರೆತು, ಅದನ್ನು ಪುನಃ ಪುನಃ ಅಂದು ಸಂತೋಷ ಪಡುತ್ತಾರಲ್ಲದೆ ವಿದ್ಯಾರ್ಥಿಗಳಿಗೆ ಆ ರಸದ ರುಚಿ ನಿಲುಕುವಂತೆ ಮಾಡುತ್ತಾರೆ. ಅನೇಕ ವೇಳೆ ಕಾವ್ಯಪ್ರತಿಭೆಯ ಸಂದರ್ಶನ ಮಾಡಿದ ಅವರ ಮಾತು ದೂರಗಾಮಿಯಾಗುವಂತೆ ಕಾಣುತ್ತದೆ.[3]

ವಿದ್ವತ್ತು ವಿಮರ್ಶೆ ಇವು ಜೊತೆ ಜೊತೆಯಾಗಿ ಹೋಗಬೇಕಾದ ಗುಣಗಳು. ಎಷ್ಟನ್ನು ಹೇಳಬೇಕು, ಯಾವಾಗ ಹೇಳಬೇಕು, ಹೋಲಿಸಿ ನೋಡಿದಾಗ ಆಯಾ ವಿಷಯದ ಸ್ಥಾನಮಾನಗಳೇನು? ಎಲ್ಲಿ ವಿಸ್ತಾರ? ಎಲ್ಲಿ ಸಂಗ್ರಹ? ವಿಷಯದ ವ್ಯಾಪ್ತಿ ಮೌಲ್ಯಗಳೇನು? ಇಷ್ಟನ್ನೂ ಗಮನದಲ್ಲಿ ಇಟ್ಟುಕೊಂಡು ಪಾಠ ಹೇಳುವುದು ಸುಲಭವಲ್ಲ. ಇದಿಲ್ಲದಲ್ಲಿ ದುರಹಂಕಾರ, ವಾಚಾಳಿತನ, ಪಕ್ಷಪಾತ ಇವು ತಪ್ಪಿದ್ದಲ್ಲ.[4] ಮಾತಿನ ಕುದುರೆಗೆ ಔಚಿತ್ಯದ ಮತ್ತು ವಿಮರ್ಶೆಯ ಕಡಿವಾಣವನ್ನು ಹಾಕಿ ನಡೆಸಬಲ್ಲ ಜಾಣ್ಮೆ ನರಸಿಂಹಾಚಾರ್ಯರ ಪಾಠಪ್ರವಚನಗಳಿಗೂ ಬರವಣಿಗೆಗೂ ಮೆರಗುಕೊಟ್ಟಿದೆ. ಸಾಹಿತ್ಯ ಚರಿತ್ರೆಯ ಪಾಠ ಹೇಳುವಾಗ ಅವರು ವಿದ್ಯಾರ್ಥಿಗಳಿಗೆ ಬರೆಸಿದ ನೋಟ್ಸು ಇಂದಿಗೂ ಒಂದು ಆಧಾರ ಗ್ರಂಥದಂತಿರುವುದು ಈ ಗುಣದಿಂದಲೇ. ಅವರ ಕವಿಕಾವ್ಯವಿಮರ್ಶೆ, ರಸದೃಷ್ಟಿ, ಖಚಿತ ಪಾಂಡಿತ್ಯ ಇವುಗಳಿಗೆ ಆ ನೋಟ್ಸು ಉತ್ತಮ ಉದಾಹರಣೆಯಾಗಿದೆ.

ಪ್ರತಿಭಾವಂತ ಉಪಾಧ್ಯಾಯರ ಪ್ರವಚನಗಳು ಒಂದು ರೀತಿಯಿಂದ ವಿದ್ಯಾರ್ಥಿಯು ಮನದ ಮೊನೆಯನ್ನು ಮೊಟಕು ಮಾಡುತ್ತವೆ ಎಂದು ಕೆಲವರ ಅಭಿಪ್ರಾಯ. ಇದು ಕೆಲವರ ವಿಷಯದಲ್ಲಿ ನಿಜವೂ ಅಹುದು. ಉಪಾಧ್ಯಾಯನ ದೈತ್ಯಪಾಂಡಿತ್ಯದೆದುರು ವಿದ್ಯಾರ್ಥಿ ನಿಶ್ಚೇಷ್ಟಿತನಾಗುತ್ತಾನೆ. ಅಪ್ರತಿಭನಾಗುತ್ತಾನೆ. ಮೂಢನಾಗುತ್ತಾನೆ. ಅಳುಕುತ್ತಾನೆ, ಭಕ್ತಸ್ಥಲದಿಂದ ಅವನ ಮನಸ್ಸು ಮೇಲಕ್ಕೆ ಏರುವುದೇ ಇಲ್ಲ. ತಮ್ಮ ಜ್ಞಾನದ ಮಿತಿ ಇವನ್ನು ತಿಳಿಯಬಲ್ಲ ಸೂಕ್ಷ್ಮಮತಿಗಳಿಗೆ ಮಾತ್ರ ಸಹಾನುಭೂತಿ ಸಾಧ್ಯ. ಅದನ್ನು ತಿಳಿಯುವುದೇ ವಿವೇಕ.[5] ನರಸಿಂಹಾಚಾರ್ಯರು ಪಾಂಡಿತ್ಯ ಪ್ರದರ್ಶನಕ್ಕಾಗಿ ಎಂದೂ ಮಾತನಾಡಿದವರಲ್ಲ. ಸ್ವಚ್ಛವಾದ ಅಚ್ಛೋದ ಸರಸ್ಸಿನಂತೆ ಅವರ ಮಾತು ಯಾವಾಗಲೂ ತಿಳಿಯಾದದ್ದು, ನೇರವಾದದ್ದು. ಸಂಭಾಷಣೆಯ ಭಾಷೆಯೇ ಪಾಠ ಹೇಳುವ ಭಾಷೆ, ಅದೇ ಆತ್ಮೀಯತೆ, ಅದೇ ಸೌಹಾರ್ದಭಾವ. ಪಾಠ ಕೇಳುವ ವಿದ್ಯಾರ್ಥಿಯಲ್ಲಿ ಹೊಸ ಚೈತನ್ಯವನ್ನು ತುಂಬುವ ಅವರ ರೀತಿ ಅನುಕರಣ ಯೋಗ್ಯವಾದದ್ದು. ಆಲೋಚನೆಮಾಡಲು, ಉತ್ತರ ಕೊಡಲು, ವಿದ್ಯಾರ್ಥಿಗೆ ಸಾಕಷ್ಟು ಅವಕಾಶವಿತ್ತು. ಅವನು ಹೇಳುವ ದಡ್ಡ ಉತ್ತರವನ್ನು ಕಂಡು ನಕ್ಕರೂ ಅವನ ಮುಖಭಂಗಮಾಡದೆ, ಲೀಲಾಜಾಲವಾಗಿ ಸರಿಯಾದ ಉತ್ತರವನ್ನು ಮನಮುಟ್ಟುವಂತೆ ಹೇಳಬಲ್ಲ ಉಪಾಧ್ಯಾಯರ ಶಿಷ್ಯರಾಗುವುದು ಒಂದು ಸುಯೋಗವಲ್ಲವೆ?[6]

‘ಬುರಾಂಡಿ’ ಹೊಡೆಯುವವರನ್ನು ಕಂಡರೆ ನರಸಿಂಹಾಚಾರ್ಯರಿಗೆ ಸಹಿಸದು. ವಿದ್ವತ್‌ ಕ್ಷೇತ್ರದಲ್ಲಿ ಉಡಾಫೆಯ ಮಾತನಾಡುವ ಮನೋವೃತ್ತಿಯನ್ನು ಅವರೇ ‘ಬುರಾಂಡಿ’ ಎಂಬ ಪದದಿಂದ ವರ್ಣಿಸಿದ್ದಾರೆ. ಅಂಥಾ ಸನ್ನಿವೇಶದಲ್ಲಿ ಅವರು ಕಡ್ಡಿಯನ್ನು ಎರಡು ತುಂಡು ಮಾಡಿದಂತೆ ಅಂದೋ ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಹೇಳಿಬಿಡುತ್ತಾರೆ. ಹಾಗೆಯೇ ತಾವು ಹೇಳಿದ್ದನ್ನು, ಬರೆದುದನ್ನು ಇತರರು ಸಕಾರಣವಾಗಿ ಖಂಡಿಸಿದಾಗ, ಯಾವ ಮನಃಕ್ಲೇಶವೂ ಇಲ್ಲದಂತೆ ಅದನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಅವರಲ್ಲಿದೆ. ತಮಗೆ ತಿಳಿಯದುದನ್ನು ತಿಳಿಯದು ಎನ್ನುವುದು, ಸಂದೇಹವಿದ್ದಲ್ಲಿ ಸಂದೇಹವಿದೆ ಎಂದು ಹೇಳುವುದು, ತಪ್ಪಾದಲ್ಲಿ ಗೌರವದಿಂದ ತಪ್ಪನ್ನು ಒಪ್ಪಿಕೊಳ್ಳುವುದು ವಿದ್ವಾಂಸರ ಲಕ್ಷಣ. ಇದು ನರಸಿಂಹಾಚಾರ್ಯರಲ್ಲಿ ನಾವು ಕಾಣಬಹುದಾದ ಅತಿ ದೊಡ್ಡ ಗುಣ.

ನರಸಿಂಹಾಚಾರ್ಯರು ಹೆಚ್ಚಾಗಿ ಬರೆದಿಲ್ಲವೆಂದು ಬಹುಜನರ ಅಭಿಪ್ರಾಯ. ಬಹುಜನ ಬಹುವಾಗಿ ಬರೆಯುತ್ತಿರುವ ಈ ಕಾಲದಲ್ಲಿ ಆಚಾರ್ಯರ ಬರವಣಿಗೆ ಅಂಥದೇನೂ ದೊಡ್ಡ ಪ್ರಮಾಣದಲ್ಲವೆಂದು ಒಪ್ಪಬೇಕಾಗುತ್ತದೆ. ಆದರೆ ಆ ರಂಗದಲ್ಲಿ ಅವರು ಮಾಡಿರುವಷ್ಟು ಸಾಧನೆ ಮಹತ್ವದ್ದೇ ಸರಿ. … ಕನ್ನಡ ಸಾಹಿತ್ಯದ ಕನ್ನೆನೆಲವನ್ನು ಸಂಶೋಧನೆಯ ನೇಗಿಲಿನಿಂದ ಉಳುವ ಕೆಲಸ ಸಾಮಾನ್ಯವಾದುದೇನೂ ಅಲ್ಲ. ಅವರ ಲೇಖನಗಳತ್ತ ಮೊತ್ತ ಎಷ್ಟು ಎಂದು ತಿಳಿಯಬೇಕಾದರೆ ರಂ.ಶ್ರೀ. ಮುಗಳಿಯವರ ಸಾಹಿತ್ಯ ಚರಿತ್ರೆಯನ್ನೊಮ್ಮೆ ನೋಡಬೇಕು. ಕನ್ನಡನುಡಿ, ಪ್ರಬುದ್ಧ ಕರ್ಣಾಟಕ, ಶರಣ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಇಂಡಿಯನ್ ಹಿಸ್ಟಾರಿಕಲ್ ಕ್ವಾರ್ಟರ್ಲಿ, ಜಯ ಕರ್ಣಾಟಕ ಈ ಮುಂತಾದ ಪತ್ರಿಕೆಗಳಲ್ಲಿ ಅವರ ವಿಮರ್ಶಾತ್ಮಕ ಲೇಖನಗಳು ಬೇಕಾದಷ್ಟು ಪ್ರಕಟವಾಗಿವೆ. ಆ ಲೇಖನಗಳ ವಸ್ತು ಬಹು ತೂಕವಾದದ್ದು, ಪಂಪ, ಪೊನ್ನನೂ ಕಾಳಿದಾಸನೂ, ಭುವನೈಕ ರಾಮಾಭ್ಯುದಯ, ಅಭಿನವ ಪಂಪ, ಬಸವಣ್ಣನವರ ಕೆಲವು ವಚನಗಳ ಪಾಠ, ರುದ್ರಭಟ್ಟ, ಜನ್ನನೂ ವಾದಿರಾಜನೂ, ಲಕ್ಷ್ಮೀಶನ ಕಾಲವಿಚಾರ, ಜೈನ ರಾಮಾಯಣಗಳು, ಕರ್ಣಾಟಕ ಸಾಹಿತ್ಯದಲ್ಲಿ ಪ್ರಕೃತಿವರ್ಣನೆ, ಸಾಹಿತ್ಯ ಚರಿತ್ರೆಯ ಸ್ವರೂಪ, ಕೆಲವು ಅಜ್ಞಾತ ಕವಿಗಳೂ ಕಾವ್ಯಗಳೂ, ಗಜಾಂಕುಶ, ರೇವಕೋಟ್ಯಾಚಾರ್ಯ, ಕೆಲವು ರಗಳೆಯ ಕವಿಗಳು, ಕೆಲವು ವಚನಕಾರರು, ರೆವರೆಂಡ್ ಎಫ್. ಕಿಟ್ಟಲ್, ಕುಮಾರವ್ಯಾಸನ ಕರ್ಣ ಹೀಗೆ ಅವೆಷ್ಟೊ ಘನವಾದ ವಿಷಯಗಳನ್ನು ಕುರಿತು ಅವರು ಬರೆದಿದ್ದಾರೆ. ಬರೆಯಲು ಏನಾದರೂ ಹೊಸ ವಿಷಯ ಇದ್ದರೆ ಮಾತ್ರ ಬರೆಯಬೇಕು ಎನ್ನುವುದು ಅವರ ಧ್ಯೇಯ. ಅವರ ಈ ಲೇಖನಗಳಲ್ಲಿ ವಿದ್ವತ್ತು ಮತ್ತು ರಸಿಕತೆ ಎರಡೂ ಸಮರಸವಾಗಿ ಬೆರೆತಿರುವುದನ್ನು ಕಂಡಾಗಲಂತೂ ತಮ್ಮ ಮನಸ್ಸು ಉಬ್ಬುತ್ತದೆ.

ನರಸಿಂಹಾಚಾರ್ಯರು ಅನೇಕ ಹಳಗನ್ನಡ ಗ್ರಂಥಗಳನ್ನು ಸಂಪಾದನೆ ಮಾಡಿದ್ದಾರೆ. ಪ್ರಾಚೀನ ಗ್ರಂಥಗಳನ್ನು ಶೋಧಿಸಿ ಸಂಪಾದಿಸುವುದು ಒಂದು ಹೊಸ ಕೆಲಸ, ಬಹು ತೂಕದ ಕೆಲಸ. ಅದಕ್ಕೆ ಶಾಸ್ತ್ರೀಯವಾದ, ವೈಜ್ಞಾನಿಕವಾದ ಒಂದು ಕ್ರಮವಿದೆ, ಕೈ ಬರಹದ ಹಲವಾರು ಪ್ರತಿಗಳನ್ನು ಸಾವಧಾನವಾಗಿ ಪರಿಶೀಲಿಸಿ, ಮೂಲ ಪ್ರತಿಯನ್ನು ಗುರುತಿಸಿ, ಶುದ್ಧ ಪಾಠಗಳನ್ನು ಕಂಡುಹಿಡಿದು, ಪಾಠಾಂತರಗಳನ್ನು ಕೊಟ್ಟು, ಅಭ್ಯಾಸಕ್ಕೆ ಸಹಾಯವಾಗುವಂತೆ ಕವಿಕಾವ್ಯ ವಿಮರ್ಶೆ, ಟಿಪ್ಪಣಿಗಳು, ಅರ್ಥಕೋಶ ಇವನ್ನು ಒದಗಿಸಿ ಒಂದು ಗ್ರಂಥವನ್ನು ಪ್ರಕಟಿಸಬೇಕೆಂದರೆ ಬಹುಸಾಹಸದ ಕೆಲಸ. ಶ್ರೀಯುತರ ಪಂಪರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ಧರಾಮಚರಿತ್ರೆ, ಇತ್ತೀಚೆಗೆ ಪ್ರಕಟವಾಗಿರುವ ಶಬ್ದಮಣಿದರ್ಪಣ ಇವು ಆ ಹೊಲದಲ್ಲಿ ಕಾಣಬರುವ ರಸವತ್ತಾದ ಬೆಳಸು. ಅವರ ‘ಶಬ್ದವಿಹಾರ’ ಎಂಬ ಪದಗಳ ಅರ್ಥ ನಿರ್ಣಯಕ್ಕೆ ಸಂಬಂಧಪಟ್ಟ ಲೇಖನ ಸಂಗ್ರಹವು ಸಾಮಾನ್ಯರಿಗೆ ‘ಅರಣ್ಯ ಯಾತ್ರೆ’ಯ ಅಥವಾ ‘ಹುಲಿಯಬೇಟೆ’ಯ ನೆನಪನ್ನು ತಾರದಿರದು. ವಿಷಯವನ್ನು ಸಂಗ್ರಹ ಮಾಡುವಲ್ಲಿ, ತರ್ಕಬದ್ಧವಾಗಿ ಅವನ್ನು ಅಳವಡಿಸುವಲ್ಲಿ, ಸನ್ನಿವೇಶದಿಂದ ಅರ್ಥಸೂಕ್ಷ್ಮವನ್ನು ಗ್ರಹಿಸುವಲ್ಲಿ ಆಚಾರ್ಯರು ಅಲ್ಲಿ ತೋರಿರುವ ವಿವೇಕ ಪ್ರಶಂಸನೀಯವಾದುದೇ ಸರಿ.

ಕನ್ನಡದಲ್ಲಿ ಈಗ ಆಗಬೇಕಾಗಿರುವ ಕೆಲಸದ ಮಹತ್ವವನ್ನು ನೆನಸಿಕೊಂಡಾಗಲೆಲ್ಲ ಪ್ರೊ. ಡಿ.ಎಲ್.ಎನ್. ಅವರ ಮತ್ತು ಅಂಥಾ ವಿದ್ಯಾವಂತರ ಚಿತ್ರ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ವಿದ್ವಾಂಸರಾಗಿ ಸಾಹಿತ್ಯ ಕ್ಷೇತ್ರದಲ್ಲೂ, ಉಪಾಧ್ಯಾಯರಾಗಿ ವ್ಯಾಸಂಗ ಕ್ಷೇತ್ರದಲ್ಲೂ ಅವರು ಮಾಡುತ್ತಿರುವ ಕೆಲಸ ಅಮೋಘವಾದುದು. ಅವರು ತಮ್ಮ ಶಿಷ್ಯವರ್ಗದಲ್ಲಿ ಹತ್ತಿಕ್ಕಿದ ಜ್ಞಾನದಾಹದ ಕಿಡಿ,[7] ಜ್ಞಾನೋಪಾಸನೆಯ ಅಂಕುರ ನನ್ನಲ್ಲಿದೆಯಾಗಿ ಕೇವಲ ಕೃತಜ್ಞತಾರೂಪವಾಗಿ, ಶಿಷ್ಯವಾತ್ಸಲ್ಯದಿಂದ, ಅವರ ಮತ್ತು ಅವರಂಥ ದೊಡ್ಡವರ ವಿಷಯವಾಗಿ ನಾಲ್ಕು ಮಾತನ್ನು ಇಲ್ಲಿ ಹೇಳಿ ಮುಗಿಸಿದ್ದೇನೆ.

* ಜ್ಞಾನೋಪಾಸಕ, ಪು. ೯೪

 

[1] I am not willing, that this discussion should close, without mention of the value of true teacher. give me a log hut, with only a simple bench, Mark Hopkins on end and I on the other, and you may have all the buildings, apparatus and libraries without him. – James Abraham Garfield.

[2] A teacher affects enternity; He can never tell where his influence stops. – -Henry Brooks adams.

[3] Beyond the book his teaching spread.
He left on whom he taught, the trace,
of kingship with the deathless dead.

-Sir Henry New bolt.

[4] Arrogance, pedantry, and dogmatism are the occupational diseases of those who spend their lives directing the intellects of the young. -Henry scidal Canby

[5] Knowledge is proud that he has learned so much;
Wisdom is humble that he knows no more.

-William Comper.

[6] The True teacher defends his pupils against his own personal influence. He inspires self-distrust. He guides their eyes from him-self to the spirit that quickens him. He will have no disciple. -A.B. Alcott

[7] A professor can never better distinguish himself in his work than by encouraging a clever pupil, for the discoverers are among them, as comets amongst stars. -Carl Linnaeus