ಕನ್ನಡ ಎಂ.ಎ. ತರಗತಿಗಳು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ವರ್ಷವೆ ನಾನು ಅದಕ್ಕೆ ಸೇರಿದಂತೆಯೆ ಡಿ.ಎಲ್. ನರಸಿಂಹಾಚಾರ್ಯರು ಸೇರಿದ್ದರು. ನಾನು ಬಿ.ಎ.ಗೆ ತತ್ತ್ವಶಾಸ್ತ್ರವನ್ನು ವಿಶೇಷ ವಿಷಯವಾಗಿ ಅಭ್ಯಸಿಸಿದ್ದು ಎಂ.ಎ.ಗೂ ಆ ವಿಷಯವನ್ನೆ ಆರಿಸಿಕೊಂಡಿದ್ದೆ. ಆದರೆ ಪ್ರೊ. ಕೃಷ್ಣಶಾಸ್ತ್ರಿಗಳ ಪ್ರೇರಣೆಯಿಂದ ಕನ್ನಡ ಎಂ.ಎ.ಗೆ ಸೇರಿದ್ದೆ (ಆ ವಿಷಯವಾಗಿ ನನ್ನ ಲೇಖನ ‘ಆ ಅಮೃತ ಕ್ಷಣ’ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿದ್ದು, ಈಗ ‘ಉದಯರವಿ ಪ್ರಕಾಶನ’ದವರು ಪ್ರಕಟಿಸಿರುವ ‘ಮನುಜಮತ ವಿಶ್ವಪಥ’ದಲ್ಲಿ ಅಚ್ಚಾಗಿದೆ). ನರಸಿಂಹಾಚಾರ್ಯರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ತೇರ್ಗಡೆಯಾಗಿದ್ದರೂ ಅವರ ಒಲವು ಕನ್ನಡ ಸಾಹಿತ್ಯದ ಕಡೆ ಇದ್ದುದರಿಂದ ಮೈಸೂರಿಗೆ ಬಂದು ಕನ್ನಡ ಎಂ.ಎ.ಗೆ ಸೇರಿದ್ದರು. ಆ ದೃಷ್ಟಿಯಿಂದ ನಮ್ಮಿಬ್ಬರಿಗೂ ಸಾದೃಶ್ಯವಿತ್ತು. ಬಹುಶಃ ಆ ಸಾದೃಶ್ಯವೇ ಸಾಮಿಪ್ಯಕ್ಕೂ ದಾರಿಯಾಯಿತೋ ಏನೋ

ನರಸಿಂಹಾಚಾರ್ಯರು ಭಾಷಾಶಾಸ್ತ್ರ ಮತ್ತು ವ್ಯಾಕರಣಗಳಲ್ಲಿ ಸಮರ್ಥ ವಿದ್ಯಾರ್ಥಿಯಾಗಿದ್ದರು. ನನಗೆ ಅವುಗಳಲ್ಲಿ ಅಭಿರುಚಿ ಅಷ್ಟಕಷ್ಟೆ: ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಆಸಕ್ತಿ! ನನಗೆ ಅವುಗಳನ್ನು ಓದಿಕೊಳ್ಳುವುದೆಂದರೂ ಬೇಜಾರು! ಆದ್ದರಿಂದ ನರಸಿಂಹಾಚಾರ್ಯರನ್ನು ನನ್ನಲ್ಲಿದ್ದ ಒಂದು ಹಳೆಯ ಓಲೆಗರಿಯ ಹಸ್ತಪ್ರತಿಯ ನೆವವೊಡ್ಡಿ ಆಶ್ರಮಕ್ಕೆ ಆಕರ್ಷಿಸಿದೆ. ಅದನ್ನು ತುಸುಹೊತ್ತು ಪರಿಶೀಲಿಸಿದ ತರುವಾಯ ಕೇಶಿರಾಜನ ಶಬ್ದಮಣಿದರ್ಪಣದ ಅಧ್ಯಯನಕ್ಕೆ ಅವರಿಂದ ನೆರವು ಪಡೆಯುತ್ತಿದ್ದೆ. ಹಾಗೆಯೆ ನನ್ನ ಹೊಸ ಕವನಗಳನ್ನೂ ಓದಿ ಸಂತೋಷಪಡಿಸುತ್ತಿದ್ದೆ. ಜೊತೆಗೆ, ನನಗೆ ಚಿಕ್ಕಂದಿನಿಂದಲೂ ಅಭ್ಯಾಸವಾಗಿದ್ದ ನಶ್ಯದ ಸ್ವಾರಸ್ಯವೂ ಕ್ರಮಕ್ರಮೇಣ ಅವರ ಮೂಗಿಗೂ ಹತ್ತುವಂತೆ ಮಾಡಿದೆ. ಅಂತೂ ಓಲೆಗರಿಯ ಹಸ್ತಪತ್ರಿಯ ಮತ್ತು ನಶ್ಯದ ಪಾಶಗಳಿಗೆ ವಶರಾಗಿ ಅವರು ದಿನವೂ ಆಶ್ರಮಕ್ಕೆ ಬಂದು ನನಗೆ ಶಬ್ದಮಣಿದರ್ಪಣದ ಖರ್ಪರ ಕಠಿನ ವಲಯಕ್ಕೆ ಪ್ರವೇಶ ಮಾಡಲು ತುಂಬ ಸಹಾಯ ಮಾಡಿದರು. ಆದರೂ (ನಾನು ನಶ್ಯದ ಪಾಶದಿಂದ ಕೆಲವರ್ಷಗಳಲ್ಲಿಯೆ ಪಾರಾದೆ. ಆದರೆ ನಶ್ಯ ಸೇಯುವುದರಲ್ಲಿ ನನ್ನಿಂದ ದೀಕ್ಷೆ ಪಡೆದಿದ್ದ ಅವರು ಬದುಕಿನ ತುದಿಯವರೆಗೂ ಅದಕ್ಕೆ ನಿಷ್ಠೆಯಿಂದ ನಡೆದುಕೊಂಡರು!) ನನ್ನ ನಶ್ಯ ಅವರಿಗೆ ದಕ್ಕಿದರೂ ಅವರ ವ್ಯಾಕರಣ ಅಷ್ಟೇನೂ ನನಗೆ ದಕ್ಕಲಿಲ್ಲ. ಕನ್ನಡ ಸಾಹಿತ್ಯಕ್ಕೆ ಅದರಿಂದಾದ ಪ್ರಯೋಜನವೆಂದರೆ ನನ್ನ ‘ಕೇಶಿರಾಜ’ ಎಂಬ ವಿಡಂಬ ಕವನ ರಚನೆ! ಅದು ‘ನವಿಲು’ ಕವನ ಸಂಗ್ರಹದಲ್ಲಿ ಅಚ್ಚಾಗಿದೆ. ನನಗಾಗಿಯೇ ಏರ್ಪಾಡಾಗುತ್ತಿದ್ದ ಅನೇಕ ಸಭೆಗಳಲ್ಲಿ ‘ಕೇಶಿರಾಜ’ ಕವನವನ್ನೋದಿ ಸಹೃದಯರನ್ನು ನಲವೇರಿಸುತ್ತಿದ್ದೆ. ನಗಿಸಿ, ನಗಿಸಿ, ನಕ್ಕೂ ನಕ್ಕೂ! ಕಡೆಗೂ ನರಸಿಂಹಾಚಾರ್ಯ ಮೇಷ್ಟ್ರಿಕೆಯಿಂದಾದ ಫಲ ಅವರ ವಿದ್ಯಾರ್ಥಿಯಿಂದ ರಚಿತವಾಗಿ ಸುಪ್ರಸಿದ್ಧವಾಗಿರುವ ಒಂದು ಸೂತ್ರಪ್ರಾಯದ ಸೂಕ್ತಿ :

ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು :
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!

ಈ ಸಂದರ್ಭದಲ್ಲಿ ನಡೆದ ಒಂದು ಆಶ್ಚರ್ಯಕರವೂ ಅವಿಸ್ಮರಣೀಯವೂ ಆದ ಘಟನೆ ನೆನಪಿಗೆ ಬರುತ್ತದೆ. ಅದನ್ನು ಇದುವರೆಗೂ ನಾನು ಯಾರೊಡನೆಯೂ ಹೇಳಿಲ್ಲ. ಬಹುಶಃ ಅವರೂ ಹೇಳಿರಲಿಕ್ಕಿಲ್ಲ ಅಥವಾ ಸಂಪೂರ್ಣವಾಗಿ ಮರೆತೂ ಬಿಟ್ಟಿದ್ದಿರಬಹುದು. ಏಕೆಂದರೆ ನಾನಾಗಲಿ ಅವರಾಗಲಿ ತರುವಾಯ ಪರಸ್ಪರವಾಗಿ ಎಂದೂ ಆ ವಿಚಾರವನ್ನು ಮತ್ತೆ ಎತ್ತಿರಲಿಲ್ಲ. ಈಗ ಎತ್ತುವುದೂ ಸಾಧ್ಯವಲ್ಲದ ಸ್ಥಿತಿಗೆ ಅವರ ಚೈತನ್ಯ ಏರಿಹೋಗಿದೆ (೧೬.೧.೧೯೭೪).

ಒಂದು ದಿನ ಬೆಳಿಗ್ಗೆ, (ಮರಿಮಲ್ಲಪ್ಪ ಹೈಸ್ಕೂಲಿನ ಪಕ್ಕದ ‘ದಿವಾನರ ರಸ್ತೆ’ಯ ಮನೆಯಿಂದ ಕೃಷ್ಣಮೂರ್ತಿಪುರದ ಮತ್ತೊಂದು ಬಾಡಿಗೆ ಮನೆಗೆ ಆಶ್ರಮ ವರ್ಗವಾಗಿತ್ತು) ಕಾರ್ಯಾರ್ಥವಾಗಿ ಕಾಲೇಜಿಗೆ ಹೋಗುವಾಗ ಕೃಷ್ಣಮೂರ್ತಿಪುರದಲ್ಲಿದ್ದ ಆಶ್ರಮದಿಂದ ಹೊರಟಿದ್ದ ನಾನು ಅಲ್ಲೆಲ್ಲಿಯೊ ಮಧ್ಯೆ ಇರುತ್ತಿದ್ದ ನರಸಿಂಹಾಚಾರ್ಯರ ರೂಮಿಗೆ ಹೋದೆ. ಅವರು ಪುಸ್ತಕಮಯವಾಗಿದ್ದ ಮೇಜಿನ ಎದುರು ಕುರ್ಚಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿದ್ದರು. ಅವರು ಏನನ್ನು ಓದುತ್ತಿದ್ದರೋ ನನಗೆ ಕುಳಿತು ಅಧ್ಯಯನದಲ್ಲಿ ತೊಡಗಿದ್ದರು. ಅವರು ಏನನ್ನು ಓದುತ್ತಿದ್ದರೋ ನನಗೆ ತಿಳಿಯದು. ಮುಂದೆ ನಡೆದ ಘಟನೆಯ ಸ್ವರೂಪದ ಮೇಲೆ ಊಹಿಸುವುದಾದರೆ, ಅದು ಯಾವುದೋ ಧಾರ್ಮಿಕ, ಆಧ್ಯಾತ್ಮಿಕ ಅಥವಾ ಅನುಭಾವಿಕ ವಿಷಯವನ್ನೋ ವ್ಯಕ್ತಿಯನ್ನೋ ವಸ್ತುವಾಗಿ ಉಳ್ಳ ಗ್ರಂಥವಾಗಿದ್ದಿರಬಹುದು! ನನ್ನನ್ನು ಕಂಡವರೇ ಎದ್ದು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ಬಹುಶಃ ತುಸು ಭಾವಸ್ಥಿತಿಯಲ್ಲಿದ್ದರೆಂದು ತೋರುತ್ತದೆ. ತಟಕ್ಕನೆ ತಿರುಗಿ ನನ್ನನ್ನು ಮುಖಾಮುಖಿ ನೋಡುತ್ತಾ ಗದ್ಗದ ಧ್ವನಿಯಿಂದ “I Say! You are my Guru!” ಎಂದರು.

ನಾನು ದಿಗ್‌ಭ್ರಾಂತನಾದಂತೆ ಬೆಚ್ಚಿಬಿದ್ದೆ! ನನಗೇನೂ ಅರ್ಥವಾಗಲಿಲ್ಲ. ನಾನು ಅವರಿಗೆ ಗುರುವಾಗತಕ್ಕಂತಹ ಕೆಲಸ ಏನನ್ನೂ ಮಾಡಿರಲಿಲ್ಲ. ಅದಕ್ಕೆ ಬದಲಾಗಿ ಅವರೇ ಗುರುಸ್ಥಾನದಲ್ಲಿದ್ದರೆಂದು ಹೇಳಬಹುದಾಗಿತ್ತು, ಪಠ್ಯವಿಷಯಗಳಲ್ಲಿ ವ್ಯಾಕರಣ ಭಾಷಾಶಾಸ್ತ್ರಾದಿಗಳಲ್ಲಿ ನನಗೆ ಸಹಾಯ ಮಾಡಿ. ನಾನು ನನಗೆ ಸಹಜವಾಗಿದ್ದ ರೀತಿಯಲ್ಲಿ ಅವರೊಡನೆ ತತ್ತ್ವಶಾಸ್ತ್ರಾದಿ ವಿಷಯಗಳನ್ನು ಕುರಿತು ಮಾತಾಡುತ್ತಿದ್ದುದೇನೋ ಉಂಟು. ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸರ ವಿಚಾರವಾಗಿಯೂ ಅವರ ಬೋಧನೆ ಸಾಧನೆಗಳನ್ನು ಕುರಿತೂ ಅವರೊಡನೆ, ಇತರರೊಡನೆ ಎಂತೊ ಅಂತೆ ಸಂಭಾಷಿಸುತ್ತಿದ್ದುದುಂಟು, ಅಲ್ಲದೆ ನಾನು ಬಿ.ಎ.ಗೆ ತತ್ತ್ವಶಾಸ್ತ್ರಗಳನ್ನೂ ಕುರಿತು ತುಸು ಆವೇಶಪೂರ್ವಕವಾಗಿ ಸಂವಾದಿಸುತ್ತಿದ್ದುದೂ ಉಂಟು. ಅಲ್ಲದೆ ನನ್ನ ಕವನಗಳಲ್ಲಿಯೂ ಆಧ್ಯಾತ್ಮವೇ ತುಸು ಮೇಲುಗೈಯಾಗಿದ್ದು ಅವುಗಳನ್ನು ನಾನು ಭಾವಪೂರ್ಣವಾಗಿ ವಾಚಿಸುತ್ತಿದ್ದುದೂ ಉಂಟು. ಅದರಲ್ಲಿ ತೀ.ನಂ. ಶ್ರೀಕಂಠಯ್ಯ, ಪು.ತಿ. ನರಸಿಂಹಾಚಾರ್ಯ, ನಂ. ಶಿವರಾಮಶಾಸ್ತ್ರಿ ಮೊದಲಾದವರೂ ಭಾಗಿಗಳಾಗಿದ್ದರು. ಅವರು ಯಾರಿಗೂ ಗೋಚರಕ್ಕೆ ಬಾರದ ನನ್ನ ಗುರುತ್ವ, ನರಸಿಂಹಾಚಾರ್ಯರೊಬ್ಬರಿಗೇ ಬಂದುದೆಂತು? ಅಂತೂ ನಾನು ಕಕ್ಕಾಬಿಕ್ಕಿಯಾದಂತೆ ತುಸು ಮಂದಸ್ಮಿತನಾಗಿ ಮಿತ್ರ ಮಹಾಶಯನ ಮುಖವನ್ನೆ ನೋಡುತ್ತಾ ಶ್ರೀಮನ್ಮೂಕವಾಗಿದ್ದೆ!

ಅವರು ನನ್ನ ಸಂದೇಹಾತ್ಮಕ ಮತ್ತು ಪ್ರಶ್ನಾರ್ಥಕ ಮುಖಮುದ್ರೆಯನ್ನು ಕಂಡು ಮುಂದುವರಿದರು, ಮೊದಲಿನಂತೆ ಇಂಗ್ಲಿಷಿನಲ್ಲಿಯೇ.

I Saw your radiant face with a divine halo, just infront of me! With open eyes and complete awareness! I was reading and lifted my head and saw!…

ನಾನು ಆಶ್ಚರ್ಯ ವ್ಯಕ್ತಪಡಿಸಿದೆನೇ ಹೊರತು ಆ ವಿಚಾರವಾಗಿ ಮಾತನಾಡುವ ಅಥವಾ ಅವರ ಕಾಣುವಿಕೆಯ ಅನುಭವವನ್ನು ಕುರಿತು ಚರ್ಚಿಸುವ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಅಂತಹದ್ದೇನೂ ನಡೆಯದಿದ್ದಿದ್ದರೆ ಹೇಗೊ ಹಾಗೆ ವರ್ತಿಸಿ, ಬೇರೆ ನಮ್ಮ ಅಧ್ಯಯನ ವಿಷಯದತ್ತ ಗಮನ ಸೆಳೆದು ಮಾತಾಡತೊಡಗಿದೆ. ಅವರೂ ನಡೆದದ್ದನ್ನು ಮರೆತಂತೆ ಮನದ ಹಿಂದಿಕ್ಕಿ, ತಮ್ಮ ಪ್ರಜ್ಞೆಯನ್ನು ಸದ್ಯಃಪ್ರಕೃತ ವಿಷಯ ದತ್ತ ಹೊರಳಿಸಿದರು. ಮುಂದೆ ನಮ್ಮಿಬ್ಬರ ದೀರ್ಘಕಾಲದ ಸಹಜೀವನದಲ್ಲಿ ಒಮ್ಮೆಯಾದರೂ ನನ್ನೊಡನೆ ಅವರು ತಮ್ಮ ಅಂದಿನ ಅನುಭವದ ಮಾತೆತ್ತಲಿಲ್ಲ, ನಾನು ಎಂದೂ ಅದರ ಪ್ರಸ್ತಾಪ ಮಾಡಲಿಲ್ಲ, ನನಗೆ ಒಮ್ಮೊಮ್ಮೆ ಅಂದು ನಡೆದ ಘಟನೆಯ ನೆನಪು ಮರುಕೊಳಿಸುತ್ತಿತ್ತಾದರೂ !